ಹಾನಗಲ್ ಗೆಲ್ಲಲು ಚೀಲಗಳನ್ನು ತಂದಿದ್ದಾರೆ: ಡಿಕೆ ಶಿವಕುಮಾರ್

ಹುಬ್ಬಳ್ಳಿ: ಬಹಳ ಬಲಿಷ್ಠವಾದ ಸರ್ಕಾರ ಇದ್ದರೂ ಹಾನಗಲ್ ನಲ್ಲಿ ಮುಖ್ಯಮಂತ್ರಿಗಳು ಬೀಡು ಬಿಟ್ಟಿದ್ದಾರೆ. ಮಂತ್ರಿಗಳೆಲ್ಲಾ ಬಂದಿದ್ದಾರೆ, ಚೀಲಗಳನ್ನು ತಂದಿದ್ದಾರೆ. ಇದನ್ನು ನೋಡಿದರೆ ಸೋಲಿನ ಭೀತಿ ಕಾಡುತ್ತಿರುವುದು ಸ್ಪಷ್ಟವಲ್ಲವೇ?ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಕೊಟ್ಟ ಪ್ರತಿಕ್ರಿಯೆ ವೇಳೆ ಬಿಜೆಪಿ ಹಣ ಹಂಚುತ್ತಿರುವ ವಿಚಾರವಾಗಿ ಕಾಂಗ್ರೆಸ್ ಕೇವಲ ಆರೋಪ ಮಾಡುತ್ತಿದ್ದೆಯೇ ಹೊರತು, ಅದಕ್ಕೆ ಸಾಕ್ಷಿ ನೀಡುತ್ತಿಲ್ಲ ಎಂಬ ಬಿಜೆಪಿಯ ನಾಯಕರ ಹೇಳಿಕೆಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ‘ಅವರಿಗೆ ವಿಡಿಯೋ ಸಾಕ್ಷಿ ಬಿಡಬೇಕಾ? ಹಾಗಿದ್ದರೆ, ಅವರು ದುಡ್ಡು ಹಂಚುತ್ತಿರುವ ವಿಡಿಯೋ ಮಾಡಿ ಅದನ್ನು ಪ್ರಕಟಿಸುವಂತೆ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ. ಹಿಂದೆ ನಾವು ಈ ರೀತಿ ಸಾಕಷ್ಟು ಸಾಕ್ಷಿಗಳನ್ನು ಬಹಿರಂಗಪಡಿಸಿದ್ದರೂ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈಗ ಮತ್ತೊಮ್ಮೆ ಬಹಿರಂಗ ಮಾಡುತ್ತೇವೆ. ಅದು ದೊಡ್ಡ ವಿಚಾರವಲ್ಲ’ ಎಂದರು.

‘ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿಚಾರ ಏನೆಂದರೆ, ಈ ಹಿಂದೆ ಬಿಜೆಪಿ ನಾಯಕರು ಜನರಿಗೆ ಕೊಟ್ಟಿದ್ದ ಮಾತು ಏನು? ಅಧಿಕಾರಕ್ಕೆ ಬಂದ ನಂತರ ಅವರು ಉಳಿಸಿಕೊಂಡಿದ್ದಾರಾ? ಇಲ್ಲವಾ? ಎಂಬುದಷ್ಟೇ. ಕೋವಿಡ್ ಸಂದರ್ಭದಲ್ಲಿ ಜನರಿಗೆ ಕೊಟ್ಟ ಮಾತು ಉಳಿಸಿಕೊಂಡರಾ? ಡಬಲ್ ಇಂಜಿನ್ ಸರ್ಕಾರ ಕೊಡಿ ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದರು. ಈಗ ಎಲ್ಲ ರೈತರ ಆದಾಯ ಡಬಲ್ ಆಗಿದೆಯಾ ಎಂದು ರೈತರನ್ನು ಕೇಳಿದರೆ, ಎಲ್ಲರೂ ಆಗಿಲ್ಲ ಅಂತಲೇ ಹೇಳುತ್ತಿದ್ದಾರೆ. ಬದಲಿಗೆ ರಸಗೊಬ್ಬರ ಬೆಲೆ ಏರಿಕೆ ಹಾಗೂ ಮಾರುಕಟ್ಟೆ ಇಲ್ಲದೇ ಅವರ ಜೀವನ ದುಸ್ಥಿತಿಗೆ ಸಾಗಿದೆ. ಇನ್ನು ಕಾರ್ಮಿಕರಿಗೆ ಸರ್ಕಾರ ಘೋಷಿಸಿದ ಪರಿಹಾರ ಸಿಕ್ಕಿಲ್ಲ. ಈ ಸರ್ಕಾರದಿಂದ ಯಾರೊಬ್ಬರಿಗೂ ಸಹಾಯವಾಗಿಲ್ಲ. ನಾನು ಕೇಳಿದ ರೈತ, ಕಾರ್ಮಿಕ, ಚಾಲಕ, ವರ್ತಕ, ಬೀದಿ ವ್ಯಾಪಾರಿಗಳು ಎಲ್ಲರೂ ಈ ಸರ್ಕಾರದಿಂದ ನಮಗೆ ಸಹಾಯವಾಗಿಲ್ಲ ಎಂದೇ ಹೇಳುತ್ತಿದ್ದಾರೆ. ಇಷ್ಟಾದರೂ ಬಿಜೆಪಿಯವರು ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಿದ್ದಾರೆ? ಜನ ಅವರಿಗೆ ಮತ ಯಾಕೆ ನೀಡಬೇಕು?’ ಎಂದು ಪ್ರಶ್ನಿಸಿದರು.

ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ,ಇಂಥಾ ಸ್ಥಿತಿ ಸ್ವಾತಂತ್ರ್ಯ ಬಂದಮೇಲೆ ಯಾವತ್ತೂ ಬಂದಿರಲಿಲ್ಲ: ಸಿದ್ದರಾಮಯ್ಯ

ಶಿವಮೊಗ್ಗ: ಕೊರೊನಾ ಬಂದಿರುವುದು ಕೇಂದ್ರ ಸರ್ಕಾರಕ್ಕೆ ವರದಾನವಾಗಿದೆ. ಮಾಧ್ಯಮಗಳು ಸರ್ಕಾರದ ವಿರುದ್ಧ ಮಾತನಾಡಿದ್ರೆ ನೋಟಿಸ್ ಬರುತ್ತೆ. ಪರೀಕ್ಷೆ ಮಾಡಿ ಬೇಕಿದ್ದರೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಇಂಥಾ ಸ್ಥಿತಿ ಸ್ವಾತಂತ್ರ್ಯ ಬಂದಮೇಲೆ ಯಾವತ್ತೂ ಬಂದಿರಲಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ರು.

ಶಿವಮೊಗ್ಗ ಜಿಲ್ಲೆಯ ಸೊರಬ ವಿಧಾನಸಭೆ ಕ್ಷೇತ್ರದ ಕುಬಟೂರಿನಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ,
ಸಿ.ಎಂ ಉದಾಸಿ ಮತ್ತು ಎಂ.ಸಿ ಮನಗೂಳಿ ಅವರ ನಿಧನದ ಕಾರಣದಿಂದ ಹಾನಗಲ್ ಮತ್ತು ಸಿಂಧಗಿಯಲ್ಲಿ ಉಪಚುನಾವಣೆಗಳು ಬಂದಿವೆ. ಎರಡೂ ಕಡೆ ನಮ್ಮ ನಿರೀಕ್ಷೆಗೂ ಮೀರಿದ ಜನಸ್ಪಂದನೆ ವ್ಯಕ್ತವಾಗುತ್ತಿದೆ. ಇದನ್ನು ನೋಡಿದಾಗ ಕಾಂಗ್ರೆಸ್ ಪರವಾದ ವಾತಾವರಣ ಇದೆ ಎಂಬುದು ಗೊತ್ತಾಗುತ್ತಿದೆ. ಕಾರಣ ನಮ್ಮ ಸರ್ಕಾರ ಮತ್ತು ಕೇಂದ್ರದ ಮನಮೋಹನ್ ಸಿಂಗ್ ಅವರ ಸರ್ಕಾರ ಅಧಿಕಾರದಲ್ಲಿ ಇದ್ದಾಗ ನೀಡಿದ್ದ ಕಾರ್ಯಕ್ರಮಗಳನ್ನು ಜನ ನೆನಪು ಮಾಡಿಕೊಳ್ಳುತ್ತಿದ್ದಾರೆ. ಕಳೆದ ಎರಡೂಕಾಲು ವರ್ಷಗಳಲ್ಲಿ ರಾಜ್ಯ ಸರ್ಕಾರದ ಮತ್ತು ಏಳು ವರ್ಷಗಳ ನರೇಂದ್ರ ಮೋದಿ ಸರ್ಕಾರದ ವೈಫಲ್ಯಗಳು ಜನರನ್ನು ಭ್ರಮನಿರಸನಗೊಳಿಸಿದೆ. 2014 ರಲ್ಲಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮೊದಲು ನೀಡಿದ್ದ ಯಾವುದೇ ಭರವಸೆಯನ್ನು ಈಡೇರಿಸಿಲ್ಲ. ಇದರಿಂದ ಜನ ನೊಂದಿದ್ದಾರೆ. ಜೊತೆಗೆ ಬೆಲೆಯೇರಿಕೆ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ ಎಂದ್ರು.

ಪೆಟ್ರೋಲ್, ಡೀಸೆಲ್, ಗ್ಯಾಸ್ ಮತ್ತು ಅಗತ್ಯ ವಸ್ತುಗಳ ಬೆಲೆಯೇರಿಕೆಗೆ ಕೇಂದ್ರ ಸರ್ಕಾರ ಎರಡು ಕಾರಣ ನೀಡುತ್ತಿದೆ. ಒಂದು ಹಿಂದಿನ ಯು.ಪಿ.ಎ ಸರ್ಕಾರ ಕಚ್ಚಾತೈಲದ ಮೇಲೆ ಸಾಲ ಮಾಡಿತ್ತು. ಎರಡನೆಯದು ಬೆಲೆಯೇರಿಕೆ ಇಂದ ಬಂದ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಖರ್ಚು ಮಾಡುತ್ತಿದ್ದೇವೆ. ಇದನ್ನು ಮನ್ ಕೀ ಬಾತ್ ನಲ್ಲಿ ಮೋದಿಯವರು ಹೇಳಿದ್ದಾರೆ. ತೈಲಬಾಂಡ್ ಖರೀದಿ ಆರಂಭ ಮಾಡಿದ್ದು ವಾಜಪೇಯಿ ಸರ್ಕಾರ, 1 ಲಕ್ಷದ 40 ಸಾವಿರ ತೈಲಬಾಂಡ್ ಖರೀದಿ ಮಾಡಲಾಗಿದೆ. ಈವರೆಗೆ ತೀರಿಸಿರುವ ಸಾಲ 3500 ಕೋಟಿ. ವಾರ್ಷಿಕ 10,000 ಕೋಟಿ ಬಡ್ಡಿ ಕಟ್ಟಲಾಗಿದೆ. 2014 ರಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 9 ರೂಪಾಯಿ 21 ಪೈಸೆ ಡೀಸೆಲ್ 3 ರೂಪಾಯಿ 45 ಪೈಸೆ ಇತ್ತು, ಈಗ ಡೀಸೆಲ್ ಮೇಲೆ 31 ರೂಪಾಯಿ 84 ಪೈಸೆ, ಪೆಟ್ರೋಲ್ ಮೇಲೆ 32 ರೂಪಾಯಿ 98 ಪೈಸೆ ಗೆ ಹೆಚ್ಚಾಗಿದೆ ಎಂದು ಕಿಡಿಕಾರಿದ್ರು.

ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಡೀಸೆಲ್ ಬೆಲೆ 47 ರೂಪಾಯಿ ಇತ್ತು, ಇಂದು 100 ರೂಪಾಯಿ ಆಗಿದೆ. ಪೆಟ್ರೋಲ್ ಬೆಲೆ 70 ಇತ್ತು ಇಂದು 112 ರೂಪಾಯಿ ಆಗಿದೆ. ಏಳು ವರ್ಷಗಳಲ್ಲಿ ಡೀಸೆಲ್ ಪೆಟ್ರೋಲ್ ಮೇಲೆ ಸಂಗ್ರಹವಾಗಿರುವ ತೆರಿಗೆ 23 ಲಕ್ಷ ಕೋಟಿ. ಒಟ್ಟು ಸಾಲ ಇರುವುದೇ 1‌ ಲಕ್ಷದ 40 ಸಾವಿರ ಕೋಟಿ. ನರೇಂದ್ರ ಮೋದಿ ಅವರೇ ಜನರಿಗೇಕೆ ಸುಳ್ಳು ಹೇಳ್ತೀರ? ಸತ್ಯ ಹೇಳಿ.
ಯು.ಪಿ.ಎ ಅವಧಿಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್ ವೊಂದಕ್ಕೆ 120- 125 ಡಾಲರ್ ಇತ್ತು. ಈಗ 70-80 ಡಾಲರ್ ಇದೆ. ಇದು 2013 ರಿಂದ 16 ರ ವರೆಗೆ 45, 46, 49 ಡಾಲರ್ ಆಗಿತ್ತು. ಆಗ ಪೆಟ್ರೋಲ್ ಬೆಲೆ ಇಳಿಕೆ ಮಾಡಿದ್ರಾ? ಇದಕ್ಕೆ ಮೋದಿಯವರ ಬಳಿ ಉತ್ತರವಿದೆಯೇ ಎಂದ್ರು.

2013 ರಲ್ಲಿ ಒಂದು ಸಿಲಿಂಡರ್ ಬೆಲೆ 414 ರೂಪಾಯಿ ಇತ್ತು. ಇವತ್ತು 980 ರೂಪಾಯಿ ಆಗಿದೆ. ಮೋದಿ ಹೇಳಿದ ಅಚ್ಚೇ ದಿನ್ ಎಲ್ಲಿದೆ? ಡೀಸೆಲ್ ಬೆಲೆ ಹೆಚ್ಚಾದರೆ ಸಾಗಾಣಿಕೆ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತೆ. ಡೀಸೆಲ್ ಪೆಟ್ರೋಲ್ ಬೆಲೆ ಹೆಚ್ಚಾದರೆ ರೈತರಿಗೇನು ಸಮಸ್ಯೆ ಆಗಲ್ಲ ಎಂದು ಕೇಂದ್ರ ಸಚಿವರೊಬ್ಬರು ದಡ್ಡನಂತೆ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡೂಕಾಲು ವರ್ಷ ಆಗಿದೆ. ಈ ಅವಧಿಯಲ್ಲಿ ಸೂರಿಲ್ಲದ ಬಡವರಿಗೆ ಒಂದೇ ಒಂದು ಮನೆಯನ್ನು ಕಟ್ಟಿಸಿಕೊಟ್ಟಿಲ್ಲ. ಅದಕ್ಕಾಗಿಯೇ ನಿನ್ನೆ ನಾನು ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಬನ್ನಿ ಎಂದು ಬಸವರಾಜ ಬೊಮ್ಮಾಯಿಯವರಿಗೆ ಸವಾಲು ಹಾಕಿದ್ದೆ. ಇದಕ್ಕೆ ಉತ್ತರವಿಲ್ಲ. ಅಭಿವೃದ್ಧಿ ಮೇಲೆ ಓಟು ಕೇಳೋರು ಅಭಿವೃದ್ಧಿ ಕೆಲಸ ಮಾಡಿದ್ದಾರ ಹೇಳಲಿ ಎಂದು ಆಗ್ರಹಿಸಿದ್ರು.

ಸಿ.ಎಂ ಉದಾಸಿ ಅವರು ನಿಧನರಾದ ಮೇಲೆ ಬಿಜೆಪಿ ಅಭ್ಯರ್ಥಿ ಚುನಾವಣೆ ಘೋಷಣೆ ಆಗುವ ವರೆಗೆ ಹಾನಗಲ್ ಬಂದಿರಲಿಲ್ಲ. ಆದರೆ ನಮ್ಮ ಅಭ್ಯರ್ಥಿ ಶ್ರೀನಿವಾಸ್ ಮಾನೆ ಕೊರೊನಾ ಸಂದರ್ಭದಲ್ಲಿ ಮನೆಗೆ ಹೋಗಿರಲಿಲ್ಲ. ಹಾನಗಲ್ ಜನರ ಕಷ್ಟ ಸುಖಗಳನ್ನು ಆಲಿಸಿ, ಕೈಲಾದ ಸಹಾಯ ಮಾಡಿದ್ದಾರೆ. ಇದಕ್ಕಾಗಿ ಜನ ಕಾಂಗ್ರೆಸ್ ಕಡೆ ಒಲವು ಹೊಂದಿದ್ದಾರೆ. ನಾವು ಇಲ್ಲಿ ನೂರಕ್ಕೆ ನೂರು ಗೆಲ್ಲುವುದು ಖಚಿತ. ಈ ಚುನಾವಣೆಯಲ್ಲಿ ಸ್ಪರ್ಧೆಯಿರುವುದು ನಮಗೆ ಮತ್ತು ಬಿಜೆಪಿಗೆ, ಜೆಡಿಎಸ್ ಸ್ಪರ್ಧಾ ಚಿತ್ರಣದಲ್ಲೇ ಇಲ್ಲ. ಜೆಡಿಎಸ್ ನವರು ಬಿಜೆಪಿಗೆ ಸಹಾಯವಾಗಲಿ ಎಂದು ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ದಾರೆ. ಬಿಜೆಪಿಯವರು ಅಧಿಕಾರ ಮತ್ತು ಹಣದ ದುರುಪಯೋಗ ಮಾಡುತ್ತಿದ್ದಾರೆ, ಇಷ್ಟೆಲ್ಲಾ ಸವಾಲುಗಳಿದ್ದರೂ ನಾವೇ ಎರಡೂ ಕಡೆಗಳಲ್ಲಿ ಗೆಲ್ಲುತ್ತೇವೆ ಎಂದ್ರು.

ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಸೇರಿ ಸೂಕ್ತ ನಿರ್ಧಾರ ಕೈಗೊಂಡಿದ್ದಾರೆ. ಈಗ ಸರಿಯಾದ ವ್ಯಕ್ತಿ ಸರಿಯಾದ ಪಕ್ಷ ಸೇರಿದ್ದಾರೆ. ಬಂಗಾರಪ್ಪ ಅವರು ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಆದವರು. ನಾನು ಕಾಂಗ್ರೆಸ್ ಸೇರುವಾಗಲೂ ಇದೇ ಪ್ರಶ್ನೆ ಕೇಳಿದ್ದೆ, ಕೊನೆಗೆ ನಾನು ಮುಖ್ಯಮಂತ್ರಿ ಆಗಿಲ್ಲವೇ? ಕಾಂಗ್ರೆಸ್ ಪಕ್ಷ ಭವಿಷ್ಯ ರೂಪಿಸುತ್ತೆ, ಪಕ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ರೆ ಉತ್ತಮ ಅವಕಾಶಗಳು ತಾನಾಗಿಯೇ ಸಿಗುತ್ತವೆ ಎಂದ್ರು.

ಮೊದಲು ಅಂಬೇಡ್ಕರ್ ಅಭಿವೃದ್ಧಿ ನಿಗಮ, ದೇವರಾಜ ಅರಸು ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ ಇತ್ತು, ಈಗ ಬೇರೆ ಬೇರೆ ಜಾತಿಗಳಿಗೆ ಒಂದೊಂದು ಅಭಿವೃದ್ಧಿ ನಿಗಮ ಆಗಿದೆ. ಯಾವುದೇ ಅಭಿವೃದ್ಧಿ ನಿಗಮ ಮಾಡೋದು ದೊಡ್ಡ ವಿಚಾರವಲ್ಲ, ಆ ಸಮುದಾಯದ ಅಭಿವೃದ್ಧಿಗೆ ಸಾಕಾಗುವಷ್ಟು ಅನುದಾನ ಕೊಡಬೇಕು. ಲಿಂಗಾಯತ ಮತ್ತು ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ರು, ಇದಕ್ಕೆ ನನ್ನ ವಿರೋಧವಿಲ್ಲ ಆದರೆ ಈ ಎರಡು ನಿಗಮಗಳಿಗೆ ತಲಾ 500 ಕೋಟಿ ರೂಪಾಯಿ ನೀಡಿದರು, ಉಳಿದ ಎಲ್ಲಾ ನಿಗಮಗಳಿಗೆ ಸೇರಿ 500 ಕೋಟಿ ಅನುದಾನ ನೀಡಿಲ್ಲ. ಹೀಗಾದ್ರೆ ನಿಗಮ ಸ್ಥಾಪನೆಯಾಗಿಯೂ ಉಪಯೋಗವಿಲ್ಲ ಎಂದ್ರು.

ಮೊದಲು ಮೀಸಲಾತಿ ವಿರೋಧ ಮಾಡುತ್ತಿದ್ದವರೇ ಇಂದು ನಮಗೂ ಮೀಸಲಾತಿ ಕೊಡಿ ಎಂದು ಕೇಳುತ್ತಿದ್ದಾರೆ. ಮೀಸಲಾತಿ ಇಂದ ಪ್ರತಿಭೆಗಳಿಗೆ ಅನ್ಯಾಯ ಆಗುತ್ತೆ ಎನ್ನುತ್ತಿದ್ದವರು ಇವರೇ ಅಲ್ಲವೇ? ನರೇಂದ್ರ ಮೋದಿ ಅವರು ಸಂವಿಧಾನ ತಿದ್ದುಪಡಿ ಮಾಡಿ ಮೇಲ್ವರ್ಗದ ಜನರಿಗೂ ಮೀಸಲಾತಿ ನೀಡಿದ್ದಾರೆ. ಈಗ ಮೀಸಲಾತಿ ಬಗ್ಗೆ ವಿರೋಧ ಮಾಡುವ ಹಾಗಿಲ್ವ? ಯಾವುದೇ ಸಮುದಾಯ ಮೀಸಲಾತಿ ಕೇಳೋದು ತಪ್ಪಲ್ಲ. ಅರ್ಹರಿಗೆ ಮೀಸಲಾತಿ ನೀಡುವುದಕ್ಕೆ ನನ್ನ ವಿರೋಧವಿಲ್ಲ. ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಏನು ಹೇಳಿದೆ ಗೊತ್ತಾ, ಪ್ರತೀ ರಾಜ್ಯದಲ್ಲಿ ಒಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಇರಬೇಕು, ಆ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಲು ಬಯಸುವವರು ಆಯೋಗಕ್ಕೆ ಮನವಿ ನೀಡಬೇಕು. ಮನವಿ ಪರಿಶೀಲನೆ ನಡೆಸಿ, ಆ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸುವುದು ಬಿಡುವುದು ಆಯೋಗದ ಕೆಲಸ ಎಂದ್ರು.

ಕೊರೊನಾ ಕಾಲದಲ್ಲೂ ನಮ್ಮ ಇತಿಮಿತಿಯೊಳಗೆ ಬೆಲೆಯೇರಿಕೆ ವಿರುದ್ಧ ಹೋರಾಟ ಮಾಡಿದ್ದಾವೆ. ಪ್ರತಿಭಟನೆ ಮಾಡಲು ಹೊರಟ್ರೆ ಬಂಧಿಸುತ್ತಾರೆ, ನಮಗೆ ಮಾತನಾಡಲು ಅವಕಾಶವನ್ನೇ ಕೊಡಲ್ಲ. ಮೋದಿ ಸರ್ಕಾರ ವಿರುದ್ಧ ಮಾತನಾಡಿದ್ರೆ ಭಯೋತ್ಪಾದಕ ಅಂತಾರೆ, ದೇಶದ್ರೋಹಿ ಎನ್ನುತ್ತಾರೆ, ಇ.ಡಿ ಅಥವಾ ಐ.ಟಿ ಯವರನ್ನು ಚೂ ಬಿಡ್ತಾರೆ. ಇಂತಹಾ ಸ್ಥಿತಿಯಲ್ಲಿ ಏನು ಮಾಡಬೇಕು? ಇಂದಿರಾಗಾಂಧಿ ಯವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕೂಡ ಹೀಗೆ ಮಾಡಿರಲಿಲ್ಲ. ಕೊರೊನಾ ಬಂದಿರುವುದು ಕೇಂದ್ರ ಸರ್ಕಾರಕ್ಕೆ ವರದಾನವಾಗಿದೆ. ಮಾಧ್ಯಮಗಳು ಸರ್ಕಾರದ ವಿರುದ್ಧ ಮಾತನಾಡಿದ್ರೆ ನೋಟಿಸ್ ಬರುತ್ತೆ. ಪರೀಕ್ಷೆ ಮಾಡಿ ಬೇಕಿದ್ದರೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಇಂಥಾ ಸ್ಥಿತಿ ಸ್ವಾತಂತ್ರ್ಯ ಬಂದಮೇಲೆ ಯಾವತ್ತೂ ಬಂದಿರಲಿಲ್ಲ ಎಂದ್ರು.

ಪ್ಯಾರಿಸ್ ಒಲಂಪಿಕ್ಸ್‌ಗೆ ಕಳುಹಿಸಲು ಅಮೃತ ಕ್ರೀಡಾ ದತ್ತು ಯೋಜನೆಯಡಿಯಲ್ಲಿ 75 ಕ್ರೀಡಾಪಟುಗಳ ಆಯ್ಕೆ: ಸಚಿವ ಡಾ.ನಾರಾಯಣ ಗೌಡ

ಬೆಂಗಳೂರು: ಮುಖ್ಯಮಂತ್ರಿಗಳು ಸ್ವಾತಂತ್ರ್ಯ ಭಾಷಣದಲ್ಲಿ ಘೋಷಿಸಿದಂತೆ `ಅಮೃತ ಕ್ರೀಡಾ ದತ್ತು ಯೋಜನೆ’ ಗೆ 75 ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಮುಂದಿನ ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಭಾಗವಹಿಸಿ ಹೆಚ್ಚಿನ ಪದಕ ಗೆಲ್ಲಲು ಅನುವಾಗುವ ನಿಟ್ಟಿನಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಅಮೃತ ಕ್ರೀಡಾದತ್ತು ಯೋಜನೆಯನ್ನು ಘೋಷಿಸಿದ್ದರು.

ಅದರಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣ ಗೌಡ ಅವರ ಅಧ್ಯಕ್ಷತೆಯ ಉನ್ನಾತಾಧಿಕಾರ ಸಮಿತಿಯು, ವಿಸ್ತೃತವಾಗಿ ಚರ್ಚಿಸಿ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಪ್ರತಿಭಾನ್ವಿತ 75 ಕ್ರೀಡಾಪಟುಗಳನ್ನು ಆಯ್ಕೆ ಮಾಡಿದೆ. ಜೊತೆಗೆ 20 ಕಾಯ್ದಿರಿಸಿದ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಕೂಡ ಆಯ್ಕೆ ಮಾಡಲಾಗಿದೆ.

ಟೋಕಿಯೋ ಒಲಂಪಿಕ್, ಕಾಮನ್‌ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್ ಸೇರಿದಂತೆ ರಾಷ್ಟ್ರೀಯ, ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ 75 ಕ್ರೀಡಾಪಟುಗಳನ್ನು ಅಮೃತ ಕ್ರೀಡಾ ದತ್ತು ಯೋಜನೆಗೆ ಆಯ್ಕೆ ಮಾಡಲಾಗಿದೆ.

ಟೋಕಿಯೋ ಒಲಂಪಿಕ್‌ನಲ್ಲಿ ಭಾಗವಹಿಸಿದ್ದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್, ಈಜುಪಟು ಶ್ರೀಹರಿ ನಟರಾಜ್, ಪ್ಯಾರಾ ಈಜುಪಟು ನಿರಂಜನ್, ಫೌದಾ ಮಿರ್ಜಾ, ಷಕೀನಾ ಖಾತೂನ್ ಸೇರಿದಂತೆ ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ 75 ಕ್ರೀಡಾಪಟುಗಳನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ.

ಅಮೃತ ಕ್ರೀಡಾದತ್ತು ಯೋಜನೆಯಲ್ಲಿ ವಾರ್ಷಿಕ ಐದು ಲಕ್ಷ ರೂಪಾಯಿ ನೀಡಲಾಗುತ್ತದೆ. ಅಗತ್ಯ ತರಬೇತಿ ಹಾಗೂ ಪ್ರೋತ್ಸಾಹ ನೀಡುವ ಮೂಲಕ ಮುಂದಿನ ಒಲಂಪಿಕ್‌ನಲ್ಲಿ ಹೆಚ್ಚಿನ ಪದಕಗಳನ್ನು ಗೆಲ್ಲುವ ನಿಟ್ಟಿನಲ್ಲಿ ಕ್ರೀಡಾಪಟುಗಳನ್ನ ಸಜ್ಜುಗೊಳಿಸಲಾಗುತ್ತದೆ. ಇದರ ಜೊತೆಗೆ ಕ್ರೀಡಾಪಟುಗಳಿಗೆ ಮತ್ತಷ್ಟು ಹೆಚ್ಚಿನ ಪ್ರೋತ್ಸಾಹ ನೀಡುವ ಸಲುವಾಗಿ ಸಿಎಸ್‌ಆರ್ ಅಡಿಯಲ್ಲಿ ದತ್ತು ತೆಗೆದುಕೊಳ್ಳಲು 150ಕ್ಕೂ ಕಂಪನಿಗಳಿಗೆ ಪತ್ರ ಬರೆದು ಚರ್ಚಿಸಲಾಗಿದೆ. ಈಗಾಗಲೇ 50 ಕ್ಕೂ ಹೆಚ್ಚು ಕಂಪನಿಗಳು ಮುಂದೆ ಬಂದಿವೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣ ಗೌಡ ಅವರು ತಿಳಿಸಿದ್ದಾರೆ.

ನವೆಂಬರ್ ಮೊದಲನೇ ವಾರದಲ್ಲಿ ಮುಖ್ಯಮಂತ್ರಿಗಳು ಕ್ರೀಡಾದತ್ತು ಯೋಜನೆಯಲ್ಲಿ ಆಯ್ಕೆ ಆಗಿರುವ ಎಲ್ಲಾ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ ವಿತರಿಸಲಿದ್ದಾರೆ ಎಂದು ಸಚಿವ ನಾರಾಯಣ ಗೌಡ ಅವರು ತಿಳಿಸಿದ್ದಾರೆ.

ಗಾಲ್ಫ್ – 1, ಸ್ವಿಮ್ಮಿಂಗ್ -5, ಅಥ್ಲೆಟಿಕ್ಸ್- 12, ಪ್ಯಾರಾ ಅಥ್ಲೆಟಿಕ್ಸ್- 3, ಸೈಕ್ಲಿಂಗ್- 8, ಬ್ಯಾಸ್ಕೆಟ್‌ಬಾಲ್‌- 7, ಕುಸ್ತಿ- 4, ಟೆನ್ನಿಸ್-3, ಟೇಬಲ್ ಟೆನ್ನಿಸ್-2, ಹಾಕಿ- 5, ಬ್ಯಾಡ್ಮಿಂಟನ್- 9 ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸುವ 75 ಪ್ರತಿಭಾವಂತ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ.

ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂ.ಗಳ ಅನುದಾನ- ಸಿ.ಎಂ

ಹುಬ್ಬಳ್ಳಿ ಅಕ್ಟೋಬರ್ 23:ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಸ್ತುತ ವರ್ಷದಲ್ಲಿ 50 ಕೋಟಿ ರೂ.ಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಹುಬ್ಬಳ್ಳಿಯಲ್ಲಿ ಇಂದು ಕಿತ್ತೂರು ಚನ್ನಮ್ಮ ವೃತ್ತದಲ್ಲಿ ರಾಣಿ ಚನ್ನಮ್ಮನ ಜಯಂತಿ ಅಂಗವಾಗಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡುತ್ತಿದ್ದರು.

ಕಿತ್ತೂರು ಅಭಿವೃದ್ಧಿ ಪ್ರಾಧಿಕಾರವನ್ನು 2011 ರಲ್ಲಿ 8 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಪ್ರಾರಂಭಿಸಲಾಯಿತು. ಕಿತ್ತೂರು ಚನ್ನಮ್ಮ ಪ್ರತಿಮೆಯನ್ನು ಬೆಳಗಾವಿಯ ನಗರದ ಕೇಂದ್ರ ಭಾಗದಲ್ಲಿ ಸ್ಥಾಪಿಸುವಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಪಾತ್ರವನ್ನು ಸ್ಮರಿಸಿದರು.

ಕಿತ್ತೂರು ರಾಣಿ ಚೆನ್ನಮ್ಮ ನಾಡು ಕಂಡ ದಿಟ್ಟ ಧೀಮಂತ, ಶ್ರೇಷ್ಠ ಸ್ವತಂತ್ರ ಹೋರಾಟಗಾರರಲ್ಲಿ ಒಬ್ಬರು. ಚನ್ನಮ್ಮ ಬ್ರಿಟಿಷರ ವಿರುದ್ಧ ರಣಕಹಳೆ ಊದಿದ ಕರ್ನಾಟಕದ ಹೆಮ್ಮೆಯ ಮಹಿಳೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಕಿತ್ತೂರು ರಾಣಿ ಚೆನ್ನಮ್ಮ ಬೆಳಗಾವಿಗೆ ಮಾತ್ರ ಸೀಮಿತವಾಗಿರದೆ ಇಡೀ ರಾಜ್ಯಕ್ಕೆ ಸೇರಿದವರಾಗಿದ್ದಾರೆ. ಅವರ ಜ್ಯೋತಿಯನ್ನು ಬೆಂಗಳೂರಿನವರೆಗೆ ಕೊಂಡೊಯ್ಯಲಾಗಿದೆ. ಕಿತ್ತೂರು ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ನವರ ಕೊಡುಗೆಯನ್ನು ಸ್ಮರಿಸಿ , ಅವರ ಆಶೋತ್ತರಗಳನ್ನು ಈಡೇರಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಭರವಸೆ ನೀಡಿದರು.

ಸಚಿವರಾದ ಮುರುಗೇಶ್ ನಿರಾಣಿ, ಶಂಕರ ಪಾಟೀಲ ಮುನೇನಕೊಪ್ಪ ಶಾಸಕ ರಾಜೂಗೌಡ ಮತ್ತು ಇತರರು ಉಪಸ್ಥಿತರಿದ್ದರು.

ತ್ಯಾಜ್ಯ ವಿಲೇವಾರಿಯಲ್ಲಿ ಜಾಗೃತಿ ಅಗತ್ಯ- ಕ್ಲೀನ್ ಕರ್ನಾಟಕಕ್ಕೆ ಸಚಿವ ಡಾ.ನಾರಾಯಣಗೌಡ ಕರೆ

ಬೆಂಗಳೂರು, ಅ.22: ಬೆಂಗಳೂರಿನ ಅರಮನೆ ಆವರಣದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಕ್ಲೀನ್ ಇಂಡಿಯಾ ಕಾರ್ಯಕ್ರಮಕ್ಕೆ ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಡಾ.ನಾರಾಯಣ ಗೌಡ ಅವರು ಚಾಲನೆ ನೀಡಿದರು.

ಬೆಂಗಳೂರು ಅರಮನೆ, ಮೈಸೂರು ಅರಮನೆ, ಹಂಪಿ, ಶ್ರೀರಂಗಪಟ್ಟಣ, ಮಡಿಕೇರಿ ಕೋಟೆ,ಗೋಳಗುಮ್ಮಟ ಸೇರಿದಂತೆ ಕರ್ನಾಟಕದ ಪ್ರಸಿದ್ದ, ಐತಿಹಾಸಿಕ ಸ್ಥಳಗಳಲ್ಲಿ ಕ್ಲೀನ್ ಇಂಡಿಯಾ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.

ದೇಶದಲ್ಲಿ ಅಕ್ಟೋಬರ್ 1 ರಿಂದ 31 ರವರೆಗೂ 75 ಲಕ್ಷ ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹದ ಗುರಿ ಹೊಂದಲಾಗಿದೆ. ಕರ್ನಾಟಕದಲ್ಲಿ ಐದೂವರೆ ಲಕ್ಷ ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹದ ಗುರಿ ಹೊಂದಲಾಗಿದೆ.

ಕ್ಲೀನ್ ಇಂಡಿಯಾ ಅಭಿಯಾನದಲ್ಲಿ NYK, NSS ಹಾಗೂ ಕ್ರೀಡಾ ಇಲಾಖೆಯ 1,57, 814 ಸ್ವಯಂ ಸೇವಕರು ಪಾಲ್ಗೊಂಡಿದ್ದಾರೆ.

ಕ್ಲೀನ್ ಇಂಡಿಯಾ ಅಭಿಯಾನಕ್ಕೆ ರಾಜ್ಯದಲ್ಲಿ ಉತ್ತಮ ಸ್ಪಂದನೆ ಸಿಗುತ್ತಿದೆ. ಕರ್ನಾಟಕದಲ್ಲಿ ಇದುವರೆಗೂ 4,65,000 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಲಾಗಿದೆ. ಕರ್ನಾಟಕದಿಂದ 6 ಲಕ್ಷ ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸುವ ಮೂಲಕ ನಿರೀಕ್ಷಿತ ಗುರಿಯನ್ನೂ ಮೀರಿ ಸಾಧನೆ ಮಾಡಲಿದ್ದೇವೆ ಎಂದು ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣ ಗೌಡ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಶ್ವದಲ್ಲೇ ಸ್ವಚ್ಛ ಭಾರತ ಮಾಡಲು ನಾವೆಲ್ಲರೂ ಪಣ ತೋಡೋಣ‌. ಸ್ವಚ್ಛ ಭಾರತವಾದರೇ ದೇಶ ಮತ್ತಷ್ಟು ಪ್ರಗತಿ ಕಾಣಲಿದೆ ಎಂದು ಸಚಿವ ಡಾ.ನಾರಾಯಣ ಗೌಡ ಅವರು ಕರೆ ನೀಡಿದರು.

ನಮ್ಮ ಕಸವನ್ನು ನಾವೇ ಕ್ಲೀನ್ ಮಾಡಬೇಕು. ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಕಸವನ್ನು ಎಸೆಯಬಾರದು. ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಈ ಬಗ್ಗೆ ಜಾಗೃತಿ ನೀಡಬೇಕು. ಸರಿಯಾದ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದರಿಂದ ದೇಶ ಮತ್ತಷ್ಟು ಪ್ರಗತಿ ಕಾಣಲಿದೆ ಎಂದು ಸಚಿವ ಡಾ.ನಾರಾಯಣ ಗೌಡ ಅವರು ಹೇಳಿದರು.

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸ್ವಚ್ಚತಾ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.

ಕಾರ್ಯಕ್ರಮದಲ್ಲಿ ಯುವ ಸಬಲೀಕರಣ, ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಯುಕ್ತ ಗೋಪಾಲಕೃಷ್ಣ, ಕೇಂದ್ರ ಕ್ರೀಡಾ ಇಲಾಖೆ ಪ್ರತಿನಿಧಿ ಡಾ.ರವಿ ಕುಮಾರ್ ಸಿನ್ಹಾ, ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಡಿಸೆಂಬರ್ ಅಂತ್ಯದೊಳಗೆ ರಾಜ್ಯದಲ್ಲಿಯೂ ಶೇ.90 ರಷ್ಟು ಲಸಿಕಾಕರಣ ಗುರಿ-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯ

ಹುಬ್ಬಳ್ಳಿ, ಅ.22:ಬರುವ ಡಿಸೆಂಬರ್ ಅಂತ್ಯದೊಳಗೆ ರಾಜ್ಯದ ಅರ್ಹರೆಲ್ಲರಿಗೂ ಶೇ.90 ರಷ್ಟು ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿಯ ಕಿಮ್ಸ್ ಆವರಣದ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾಪಂಚಾಯತ್,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ “100 ಕೋಟಿ ಲಸಿಕಾಕರಣ- ಭಾರತ ದೇಶದ ಪಯಣ” ಕಾರ್ಯಕ್ರಮ ಉದ್ಘಾಟನೆ ಹಾಗೂ ಮಕ್ಕಳಲ್ಲಿ ನ್ಯುಮೋನಿಯಾ ತಡೆಯುವ ನ್ಯುಮೋಕಾಕಲ್ ಕಾಂಜುಗೇಟ್ ಲಸಿಕೆ ಸಮರ್ಪಣೆ ಮಾಡಿ ಅವರು ಮಾತನಾಡಿದರು.

ಕೋವಿಡ್ ಅಲೆಗಳು ರಾಜ್ಯ ಮತ್ತು ದೇಶದ ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯ ಮತ್ತು ಕೊರತೆಗಳೆರಡನ್ನೂ ಪರಿಚಯಿಸಿವೆ. ಜೊತೆಗೆ ಆರೋಗ್ಯ ಕ್ಷೇತ್ರದ ಮೂಲಭೂತ ಸೌಕರ್ಯಗಳಲ್ಲಿ ಗುಣಾತ್ಮಕ ಮತ್ತು ಗಮನಾರ್ಹ ಅಭಿವೃದ್ಧಿ ತರಲು ಕಾರಣವಾಗಿವೆ. ಭಾರತ ದೇಶದಲ್ಲಿ ಕಳೆದ 10 ತಿಂಗಳ ಅವಧಿಯಲ್ಲಿ 100 ಕೋಟಿ ಕೋವಿಡ್ ಲಸಿಕೆ ನೀಡಿರುವುದು ಸಾಮಾನ್ಯ ಸಾಧನೆಯಲ್ಲ. ಇದಕ್ಕಾಗಿ ಹೆಮ್ಮೆ ಪಡೋಣ; ಆದರೆ ವಿಶ್ರಮಿಸುವುದು ಬೇಡ ಎಂದು ಅವರು ತಿಳಿಸಿದರು.

ವಿಪತ್ತನ್ನು ಕೂಡ ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳಬೇಕು (Convert calamity into opportunity) ಎಂಬ ಮಾತನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ನಿಜ ಮಾಡಿ ತೋರಿಸಿದೆ.ಕೋವಿಡ್ ವೈರಾಣು ಕಾಲಿಟ್ಟಾಗ ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪಿಪಿಇ ಕಿಟ್,ಮಾಸ್ಕ್, ಕೈಗವಸುಗಳಿರಲಿಲ್ಲ. ಇಂದು ಈ ಉತ್ಪನ್ನಗಳನ್ನಷ್ಟೇ ಅಲ್ಲ, ಕೋವಿಡ್ ಲಸಿಕೆಯನ್ನು ಕೂಡ ರಫ್ತು ಮಾಡುವ ಸಾಮರ್ಥ್ಯ ಗಳಿಸಿಕೊಂಡಿದ್ದೇವೆ. ಭಾರತದ ಈ ಸಾಧನೆಗೆ ವಿಶ್ವವೇ ಬೆರಗಾಗಿದೆ ಎಂದು ನುಡಿದರು.

ಕಳೆದ ಜನವರಿ 16 ರಿಂದ ದೇಶದಲ್ಲಿ ಕೋವಿಡ್ ಲಸಿಕೆ ನೀಡಲು ಪ್ರಾರಂಭಿಸಲಾಯಿತು. ಹಂತ ಹಂತವಾಗಿ ಹೆಚ್ಚಳ ಮಾಡುತ್ತ ಇದೀಗ ಕೇವಲ ಹತ್ತು ತಿಂಗಳ ಅವಧಿಯಲ್ಲಿ 100 ಕೋಟಿ ಲಸಿಕೆ ನೀಡಿರುವುದು ಸಾಮಾನ್ಯ ಸಾಧನೆಯಲ್ಲ. ಇದರ ಹಿಂದೆ ವೈದ್ಯರು, ಅರೆವೈದ್ಯಕೀಯ, ಆರೋಗ್ಯ ಕಾರ್ಯಕರ್ತರ, ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಯ ಶ್ರಮವಿದೆ.ಈ ಸಂದರ್ಭದಲ್ಲಿ ಅವರೆಲ್ಲರನ್ನೂ ಅಭಿನಂದಿಸುವುದಾಗಿ ತಿಳಿಸಿದರು.

ಇನ್ನು 3-4 ತಿಂಗಳ ಅವಧಿಯಲ್ಲಿ ಮತ್ತೆ ನೂರು ಕೋಟಿ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ರಾಜ್ಯದಲ್ಲಿಯೂ ಡಿಸೆಂಬರ್ ಅಂತ್ಯದ ವೇಳೆಗೆ ಶೇ. 90 ರಷ್ಟು ಜನರಿಗೆ ಮೊದಲ ಡೋಸ್ ಹಾಗೂ ಶೇ. 70 ರಷ್ಟು ಎರಡನೇ ಡೋಸ್ ಲಸಿಕೆ ನೀಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದರು.

ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುವಾಗ ಲಸಿಕಾಕರಣವೇ ಮದ್ದು ಎಂಬುದು ನೂರು ವರ್ಷಗಳ ಹಿಂದೆಯೇ ಸಾಬೀತಾಗಿದೆ. ಪೆನ್ಸಿಲಿನ್‌ಲಿಂದ ಪೊಲಿಯೋವರೆಗೆ ಅನೇಕ ಲಸಿಕೆಗಳು ಮನುಷ್ಯನಿಗೆ ಬಾಹ್ಯವಾಗಿ ಶಕ್ತಿ ತುಂಬಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲಾಗಿದೆ. ವೈರಾಣುಗಳಿಗೆ ಭೌಗೋಳಿಕ ಗಡಿಗಳು ಇರುವುದಿಲ್ಲ. ಅಣುಸ್ಫೋಟದಂತೆ ಅದು ವೇಗವಾಗಿ ಹರಡಬಲ್ಲದು. ವೈರಾಣು ರೂಪಾಂತರಗೊಳ್ಳುವುದು ನಮ್ಮ ಮುಂದಿರುವ ಸವಾಲಾಗಿದೆ. ವಿಜ್ಞಾನಿಗಳು ಈ ನಿಟ್ಟಿನಲ್ಲಿ ಸಂಶೋಧನೆಗಳಲ್ಲಿ ಕಾರ್ಯತತ್ಪರರಾಗಿದ್ದಾರೆ ಎಂದು ನುಡಿದರು.

ಕೋವಿಡ್‌ನಿಂದಾಗಿ ದೇಶ ಮಾತ್ರವಲ್ಲ ಇಡೀ ವಿಶ್ವ ಸಮುದಾಯದ ಒಟ್ಟು ಆರೋಗ್ಯ ಸದೃಢವಾಗಿರಬೇಕು ಎಂಬ ಪಾಠ ಕಲಿತಿದ್ದೇವೆ. ಆರೋಗ್ಯ ಕ್ಷೇತ್ರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗಿದೆ. ನಮ್ಮ ರಾಜ್ಯದ ಆಸ್ಪತ್ರೆಗಳಲ್ಲಿ ಒಂದೇ ವರ್ಷದಲ್ಲಿ 1 ಲಕ್ಷ 25 ಸಾವಿರ ಹಾಸಿಗೆಗಳ ಸಾಮರ್ಥ್ಯ ಹೆಚ್ಚಾಗಿದೆ. 4 ಸಾವಿರ ವೈದ್ಯಾಧಿಕಾರಿಗಳ ನೇಮಕ ಮಾಡಿಕೊಳ್ಳಲಾಗಿದೆ. ತಾಲೂಕು ಆಸ್ಪತ್ರೆಗಳಲ್ಲಿಯೂ ಕೂಡ ಆಕ್ಸಿಜನ್ ಬೆಡ್‌ಗಳ ಸೌಲಭ್ಯ ಸ್ಥಾಪನೆಯಾಗಿವೆ. ವೈದ್ಯಕೀಯ ಆಮ್ಲಜನಕ ಉತ್ಪಾದನೆ ಹಾಗೂ ಪೂರೈಕೆ ಸಮರ್ಪಕ ಮತ್ತು ಸಶಕ್ತವಾಗಿದೆ ಎಂದು ವಿವರಿಸಿದರು.

ಕಿಮ್ಸ್ ಸೇವೆ ಶ್ಲಾಘನೆ:

ಉತ್ತರ ಕರ್ನಾಟಕದ ಹೆಮ್ಮೆಯ ಹಾಗೂ ಬಡವರ ಪಾಲಿನ ಸಂಜೀವಿನಿ ಎಂದೇ ಹೆಸರಾಗಿರುವ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಯನ್ನು ಈ ಪ್ರದೇಶದ 6 ರಿಂದ 7 ಜಿಲ್ಲೆಗಳು ಅವಲಂಬಿಸಿವೆ. ಕೋವಿಡ್ ಮೊದಲ ಮತ್ತು ಎರಡನೇ ಅವಧಿಯಲ್ಲಿ ಕಿಮ್ಸ್ ನೀಡಿದ ಸೇವೆ ಶ್ಲಾಘನೀಯವಾಗಿದೆ. ಈ ಸಂಸ್ಥೆ ತನ್ನ ಒಟ್ಟು ಸಾಮರ್ಥ್ಯವನ್ನು ಕ್ರೋಢೀಕರಿಸಿ ಸೇವೆ ನೀಡಿದ ಪರಿಣಾಮ ಸಾವಿರಾರು ಜನರ ಪ್ರಾಣ ಉಳಿದಿದೆ. ಬ್ಲ್ಯಾಕ್ ಫಂಗಸ್ ಖಾಯಿಲೆಗೂ ಕೂಡ ಕಿಮ್ಸ್‌ನಲ್ಲಿ ಪರಿಣಾಮಕಾರಿ ಚಿಕಿತ್ಸೆ ದೊರೆತಿರುವುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಕ್ತಕಂಠದಿಂದ ಶ್ಲಾಘನೆ ಮಾಡಿದರು.

ಆರೋಗ್ಯ ,ಕುಟುಂಬ ಕಲ್ಯಾಣ ಹಾಗೂ ವೈದ್ಯ ಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ದೇಶದಲ್ಲಿ ನೂರು ಕೋಟಿ ಕೋವಿಡ್ ಲಸಿಕೆ ನೀಡಲಾಗಿದೆ. ವೈದ್ಯರು, ದಾದಿಯರು, ನರ್ಸ್, ಅರೆವೈದ್ಯಕೀಯ ಸಿಬ್ಬಂದಿ ಇದಕ್ಕಾಗಿ ಕಳೆದ ಒಂದೂವರೆ ವರ್ಷದಿಂದ ಹಗಲಿರುಳು ಶ್ರಮಿಸಿದ್ದಾರೆ. ರಾಜ್ಯದ ಜನತೆ ಸಹಕಾರ ನೀಡಿದ್ದಾರೆ. ಅತಿಹೆಚ್ಚು ಲಸಿಕೆ ನೀಡಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಮಕ್ಕಳಿಗೆ ನೀಡುತ್ತಿರುವ ಲಸಿಕೆಗಳ ಜೊತೆಗೆ ನ್ಯುಮೋನಿಯಾ ತಡೆಯಲು ನ್ಯುಮೋಕಾಕಲ್ ಕಾಂಜುಗೇಟ್ ಲಸಿಕೆಯನ್ನು ಮಗುವಿನ ಒಂದೂವರೆ, ಮೂರುವರೆ ಹಾಗೂ ಒಂಬತ್ತನೇ ತಿಂಗಳ ವಯಸ್ಸಿನಲ್ಲಿ ಈ ಲಸಿಕೆ ಹಾಕಿಸಬೇಕು ಎಂದರು.

ಲಸಿಕಾಕರಣಕ್ಕೆ ಶ್ರಮಿಸಿದ ವೈದ್ಯರು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಹಂತಗಳ ಅಧಿಕಾರಿಗಳು,ಸಿಬ್ಬಂದಿಯನ್ನು ಪ್ರಾತಿನಿಧಿಕವಾಗಿ ಮುಖ್ಯಮಂತ್ರಿಗಳು ಸನ್ಮಾನಿಸಿ, ಗೌರವಿಸಿದರು.

ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ , ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ರಾಜ್ಯ ರೇಷ್ಮೇ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ, ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ನವೀನರಾಜ್‌ ಸಿಂಗ್, ಆರೋಗ್ಯ ಇಲಾಖೆಯ ಆಯುಕ್ತ ಡಾ.ರಂದೀಪ್ , ರಾಷ್ಟ್ರೀಯ ಆರೋಗ್ಯ ಮಿಷನ್‌ ನಿರ್ದೇಶಕರಾದ ಡಾ.ಅರುಂಧತಿ, ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸುಶೀಲ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.