ಗೋಹತ್ಯೆ ಮಹಾಪಾಪ, ಗೋಹತ್ಯೆ ವಿರುದ್ಧ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಾಗೃತಿ ಆಂದೋಲನ : ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರ, ಆಗಸ್ಟ್ 30:ಮನೆ ಸದಸ್ಯನಂತಿರುವ ಗೋವನ್ನು ಹತ್ಯೆ ಮಾಡುವುದು ಮಹಾಪಾಪ. ಗೋಹತ್ಯೆ ನಿಷೇಧಿಸಲು ಮುಖ್ಯಮಂತ್ರಿಯವರಿಗೆ ಮನವಿ ಮಾಡುತ್ತೇನೆ. ಜೊತೆಗೆ ಜಿಲ್ಲೆಯಲ್ಲಿ ಜಾಗೃತಿ ಆಂದೋಲನವನ್ನು ಕೂಡ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ವೆಂಕಟೇಶ್ವರ ಗೋಶಾಲೆ ಉದ್ಘಾಟಿಸಿ ಮಾತನಾಡಿದ ಅವರು, “ಗೋಹತ್ಯೆಯನ್ನು ಎಲ್ಲ ಸರ್ಕಾರಗಳು ನಿಷೇಧಿಸಬೇಕು. ಗೋಮಾಂಸದ ರಫ್ತನ್ನು ಕೂಡ ನಿಷೇಧಿಸಬೇಕು. ಪಶ್ಚಿಮದ ದೇಶಗಳಲ್ಲಿ ನಾಲಿಗೆ ಚಪಲಕ್ಕೆ ಏನು ಬೇಕಾದರೂ ತಿನ್ನುತ್ತಾರೆ. ಆದರೆ ಭಾರತೀಯರಾಗಿ ನಾವು ಗೋಹತ್ಯೆ ಮಾಡಬಾರದು. ಇದನ್ನು ನಾನು ಬಲವಾಗಿ ವಿರೋಧಿಸುತ್ತೇನೆ” ಎಂದರು.

“ಭಾರತೀಯ ಸಂಪ್ರದಾಯದಲ್ಲಿ ಗೋವಿಗೆ ವಿಶೇಷ ಸ್ಥಾನಮಾನವಿದೆ. ವಯಸ್ಸಾಗಿದೆ ಎಂಬ ಕಾರಣಕ್ಕೆ ಹಸುವನ್ನು ಮಾರಾಟ ಮಾಡಬಾರದು. ಹಸು ಮನುಷ್ಯನಿಗೆ ಎಲ್ಲವನ್ನೂ ನೀಡುವ ಕಾಮಧೇನುವಾಗಿದೆ. ಆದ್ದರಿಂದ ಗೋಹತ್ಯೆ ಮಾಡಬಾರದು” ಎಂದರು.

“ಗೋಮಾಂಸ ರಫ್ತು ನಿಷೇಧಕ್ಕೆ ಎರಡೂ ಸದನಗಳಲ್ಲಿ ಸಾಕಷ್ಟು ಚರ್ಚೆಯಾಗಬೇಕಿದೆ. ನಮ್ಮ ಪಕ್ಷ ಈ ವಿಚಾರದಲ್ಲಿ ದೃಢ ಸಂಕಲ್ಪ ಹೊಂದಿದೆ. ಶೀಘ್ರದಲ್ಲೇ ರಫ್ತು ನಿಷೇಧ ಆಗಲಿದೆ” ಎಂದರು.

“ನಮ್ಮ ಮನೆಯಲ್ಲೂ ಸುಮಾರು 50 ಹಸುಗಳಿದ್ದವು. ಆಗ ನಮ್ಮ ಅಜ್ಜ ರಾತ್ರಿಯಲ್ಲೂ ಹಸುಗಳಿಗೆ ಮೇವು ಹಾಕುತ್ತಿದ್ದರು. ಹಸುವಿನ ಸಗಣಿ ಸ್ಯಾನಿಟೈಜರ್ ನಂತೆ ಸೂಕ್ಷ್ಮ ರೋಗನುಗಳನ್ನೂ ನಾಶಪಡಿಸುವ ಶಕ್ತಿ ಹೊಂದಿದೆ. ಆದ್ದರಿಂದ ಸಗಣಿಯಲ್ಲಿ ನೆಲ ಸಾರಿಸುತ್ತಾರೆ” ಎಂದರು.

ಜಿಲ್ಲಾಧಿಕಾರಿ ಲತಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚಿಕ್ಕನರಸಿಂಹಯ್ಯ ಉಪಸ್ಥಿತರಿದ್ದರು.

ಭೂಮಿ ಪೂಜೆ:

ಜಿಲ್ಲಾ ಪಂಚಾಯಿತಿ ಮತ್ತು ಶಿಕ್ಷಣ ಇಲಾಖೆ ವತಿಯಿಂದ ನಡೆದ ಜಿಲ್ಲಾ ಗುರುಭವನ ನಿರ್ಮಾಣದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಸಚಿವ ಡಾ.ಕೆ.ಸುಧಾಕರ್ ಪಾಲ್ಗೊಂಡರು. ನಂತರ ಮಾತನಾಡಿ, “ಗುರುಭವನ ನಿರ್ಮಾಣಕ್ಕೆ ಅನೇಕ ಬಾರಿ ಗುದ್ದಲಿ ಪೂಜೆ ನೇರವೇರಿಸಿದರೂ ಕಾಮಗಾರಿ ಆರಂಭವಾಗಿರಲಿಲ್ಲ. ಬಹಳ ವರ್ಷಗಳ ಶಿಕ್ಷಕರ ಕನಸು ನನಸಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ತಂದ ರಾಷ್ಟ್ರೀಯ ಶಿಕ್ಷಣ ನೀತಿ ದೂರದೃಷ್ಟಿ ಹೊಂದಿದೆ. ಎಲ್ಲ ವರ್ಗದ ಜನರ ಮಕ್ಕಳಿಗೆ ಸಮಾನ ಅವಕಾಶ ಸಿಗಲಿದೆ” ಎಂದರು.

ಸಚಿವರು ಹೇಳಿದ ಇತರೆ ಅಂಶಗಳು:

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್‍ಟಿ ಪಾಲನ್ನು ನಮ್ಮ ಮುಖಂಡರು ತರುವ ವಿಶ್ವಾಸವಿದೆ. ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸಲು ಇದು ಅವಶ್ಯಕ.

ಡ್ರಗ್ಸ್ ಮಾಫಿಯಾ ಬೆಂಗಳೂರಿನಲ್ಲಿ ವ್ಯಾಪಕವಾಗುತ್ತಿರುವುದು ಆತಂಕಕಾರಿ. ಇದು ಸಮಾಜಕ್ಕೆ ಮಾರಕವಾಗಿದ್ದು, ಆರಂಭದಲ್ಲೇ ಕಿತ್ತುಹಾಕಬೇಕು. ಇಲ್ಲವಾದರೆ ಇದು ಅಪಾಯಕಾರಿಯಾಗಲಿದೆ. ಪೊಲೀಸರು ಮಾಫಿಯಾವನ್ನು ಸಮಾಜದಿಂದ ತೆಗೆದುಹಾಕಬೇಕು.

ಆವಲಗುರ್ಕಿ ಪಂಚಾಯ್ತಿ ಗೇರಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ಈರಣ್ಣ ಸ್ವಾಮಿ ದೇವಾಲಯ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್ ರವರು ಭಾಗವಹಿಸಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕೋಚಿಮುಲ್ ಮಾಜಿ ಅಧ್ಯಕ್ಷರಾದ ಕೆ.ವಿ.ನಾಗರಾಜ್, ಗ್ರಾಮಾಂತರ ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೃಷ್ಣಾರೆಡ್ಡಿ, ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಅಭಿಷೇಕ್, ಮುಖಂಡರಾದ ಜಯರಾಮರೆಡ್ಡಿ, ರಾಜಣ್ಣ, ಎಸ್ಟೇಟ್ ಪಾಪಣ್ಣ, ಮಂಜುನಾಥ್, ಎಂ.ಎಫ್.ಸಿ ನಾರಾಯಣಸ್ವಾಮಿ ಇನ್ನಿತರರು ಹಾಜರಿದ್ದರು.

ಪರಿಶಿಷ್ಟ ಜಾತಿ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಳಮೀಸಲಾತಿ ಜಾರಿಗೊಳಿಸಿ;ಎಚ್ಡಿಕೆ

ಬೆಂಗಳೂರು: ಒಳಮೀಸಲಾತಿ “ಸರ್ವರಿಗೂ ಸಮಪಾಲು ಸಮಬಾಳು” ಎಂಬ ಸಂವಿಧಾನಿಕ ಮೂಲ ಧಾತುವೇ ಆಗಿದ್ದು, ಅದನ್ನು ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾರಿಗೊಳಿಸಬೇಕು ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ತುಳಿತಕ್ಕೊಳಗಾದ ಎಲ್ಲಾ ಜಾತಿಗಳಿಗೂ ಮೀಸಲಾತಿಯ ಫಲ ದಕ್ಕಬೇಕು ಎಂಬ ಸುಪ್ರೀಂ ಕೋರ್ಟುನ ಆಶಯ ಒಳಮೀಸಲಾತಿಯ ಪರವಾದ ನಿಲುವೇ ಆಗಿದ್ದು, ಅದನ್ನು ಜಾರಿಗೊಳಿಸುವುದು ಸಾಮಾಜಿಕ ನ್ಯಾಯದ ಪರಿಪಾಲನೆಯ ಕರ್ತವ್ಯವಾಗುತ್ತದೆ.ಮೇಲ್ಜಾತಿಯಲ್ಲಿನ ಬಡವರಿಗೆ ಶೇ. ೧೦ ರಷ್ಟು ಮೀಸಲಾತಿಯನ್ನು ಜಾರಿಗೆ ತಂದ ಕೇಂದ್ರದ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗಗಳಲ್ಲಿನ ಅವಕಾಶವಂಚಿತರಿಗೆ ಒಳಮೀಸಲಾತಿ ಜಾರಿಗೆ ತರಬಾರದೇಕೆ ಎಂದು ಪ್ರಶ್ನಿಸಿದ್ದಾರೆ.

ಸ್ವತಃ ಹಿಂದುಳಿದವರ್ಗದವರೇ ಆಗಿರುವ ಪ್ರಧಾನಿಗಳು ಸಾಮಾಜಿಕ ನ್ಯಾಯವನ್ನು ಅನುಷ್ಠಾನಗೊಳಿಸುವ ಮೂಲಕ ಸಮಬಾಳು-ಸಮಪಾಲು ಎಂಬ ತತ್ವವನ್ನು ಎತ್ತಿಹಿಡಿಯಬೇಕಾಗಿದೆ. ಶೋಷಿತ ವರ್ಗದಲ್ಲೂ ಸ್ಪೃಶ್ಯ ಸಮುದಾಯ ಅಸ್ಪೃಶ್ಯರನ್ನು ಹತ್ತಿರ ಬಿಟ್ಟು ಕೊಳ್ಳದ ಪರಿಸ್ಥಿತಿ ಈಗಲೂ ಇದೆ.ಪರಿಶಿಷ್ಟಜಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಒಳಮೀಸಲಾತಿ ವಿಚಾರದಲ್ಲಿ ತುಟಿಗೆ ತುಪ್ಪ ಸವರುವ ನೀತಿಗಳನ್ನು ಸರ್ಕಾರಗಳು ಇನ್ನಾದರೂ ಬಿಡಬೇಕು ಎಂದು ಆಗ್ರಹಿಸಿದ್ದಾರೆ.

ಅಂಕ ಕಂಡಾ, ಕೋಲಾಸೆ ಮತ್ತೇಕಯ್ಯಾ
ಲೆಂಕ ಕಂಡಾ, ಪ್ರಾಣದಾಸೆ ಮತ್ತೇಕಯ್ಯಾ
ಭಕ್ತ ಕಂಡಾ, ತನುಮನಧನದಾಸೆ ಮತ್ತೇಕಯ್ಯಾ
ನಿಮ್ಮ ಅಂಕೆಗೆ ಝಂಕೆಗೆ ಶಂಕಿತನಾದೆಡೆ ಎನ್ನ ಲೆಂಕತನಕ್ಕೆ ಹಾನಿ ಕೂಡಲಸಂಗಮದೇವಾ ಎನ್ನುವ ವಚನದ ಸಾಲುಗಳೊಂದಿಗೆ ಸರ್ಕಾರದ ಗಮನ ಸೆಳೆಯಲು ಎಚ್ಡಿಕೆ ಯತ್ನಿಸಿದ್ದಾರೆ.

ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಕೊರೊನಾ ಪಾಸಿಟಿವ್ ದೃಢ

ಬೆಂಗಳೂರು:ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜನಾರ್ಧನ ರೆಡ್ಡಿ ನಾಳೆ (ಆಗಸ್ಟ್ 30) ಬಳ್ಳಾರಿಗೆ ತೆರಳಬೇಕಾಗಿತ್ತು. ಇದಕ್ಕೂ ಮುನ್ನ ಇಂದು ಸಂಜೆ ಅವರು ಕೊರೋನಾ ಪರೀಕ್ಷೆಗೆ ಒಳಗಾಗಿದ್ದರು. ಈ ವೇಳೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.ಈ ಕುರಿತಂತೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಜನಾರ್ಧನ ರೆಡ್ಡಿ,
“ ಇಂದು ಸಂಜೆ ನನಗೆ ಕೊರೋನಾ ಸೊಂಕು ದೃಢಪಟ್ಟಿರುವ ಹಿನ್ನಲೆಯಲ್ಲಿ ನಾನು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವೆ. ಆ ಕಾರಣದಿಂದ ನಾನು ನಾಳೆ ಆಗಸ್ಟ್ ೩೦ ರಂದು ಬಳ್ಳಾರಿಗೆ ಭೇಟಿ ನೀಡಿ ನನ್ನ ಪ್ರಾಣ ಸ್ನೇಹಿತ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ತಾಯಿಯವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಯಲ್ಲಿ ಉತ್ತಮ ವೈದ್ಯರ ತಂಡ ನನಗೆ ಚಿಕಿತ್ಸೆ ನೀಡುತ್ತಿದೆ. ನನಗೆ ಯಾವುದೇ ರೋಗದ ಲಕ್ಷಣಗಳು ಇಲ್ಲದಿದ್ದರೂ ಕೊರೋನಾ ಪಾಸಿಟಿವ್ ಬಂದಿದೆ.ನಿಮ್ಮೆಲ್ಲರ ಆಶೀರ್ವಾದದಿಂದ ಆದಷ್ಟು ಬೇಗ ಗುಣಮುಖನಾಗಿ ಮನೆಗೆ ಮರಳಲಿದ್ದೇನೆ ಅಂದಿದ್ದಾರೆ.

ಜಿಎಸ್‍ಟಿ ವಿಚಾರದಲ್ಲಿ ರಾಜ್ಯಕ್ಕೆ ದ್ರೋಹ : ಸಿದ್ದರಾಮಯ್ಯ

ಫೈಲ್ ಫೋಟೋ:

ಬೆಂಗಳೂರು: ಜಿ.ಎಸ್.ಟಿ ಪರಿಹಾರ ನಿರಾಕರಿಸುವ ಮೂಲಕ ರಾಜ್ಯಕ್ಕೆ ಕೇಂದ್ರ ಸರ್ಕಾರ ದೊಡ್ಡ ದ್ರೋಹ ಎಸಗಿದೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ
ಕೊರೊನಾ ರೋಗದಿಂದಾಗಿ ದೇಶದ ಎಲ್ಲಾ ರಾಜ್ಯಗಳು ಆರ್ಥಿಕ ದುಸ್ಥಿತಿಯನ್ನು ಎದುರಿಸುತ್ತಿವೆ. ಸರ್ಕಾರಿ ನೌಕರರಿಗೆ ಸಂಬಳ ನೀಡುವುದು ಕಷ್ಟವೆನ್ನುವ ಪರಿಸ್ಥಿತಿ ಇದೆ. ಜಿ.ಎಸ್.ಟಿ ಜಾರಿಗೆ ತರುವ ಸಂದರ್ಭದಲ್ಲಿ ಜಿ.ಎಸ್.ಟಿ ಕೌನ್ಸಿಲ್ ನಲ್ಲಿ ಒಂದು ಒಪ್ಪಂದವಾಗಿತ್ತು, ಅದರಂತೆ ಜಿ.ಎಸ್.ಟಿ ಸಂಗ್ರಹದಲ್ಲಿ ನಷ್ಟವಾದರೆ ಅದನ್ನು ಕೇಂದ್ರ ಸರ್ಕಾರ ಭರಿಸಿಕೊಡಬೇಕು ಹಾಗೂ ಮುಂದಿನ 5 ವರ್ಷಗಳವರೆಗೆ ಕೇಂದ್ರ ಸರ್ಕಾರ ಸಂಪೂರ್ಣ ಜವಾಬ್ದಾರಿಯಾಗಿರಬೇಕು ಎಂದಿತ್ತು.
ಒಪ್ಪಂದದ ಪ್ರಕಾರ ನಡೆದಕೊಳ್ಳಬೇಕಾಗಿರುವುದು ನರೇಂದ್ರ ಮೋದಿಯವರ ಸರ್ಕಾರದ ಜವಾಬ್ದಾರಿ ಎಂದರು.

14% ಜಿ.ಎಸ್.ಟಿ ಖೋತಾ ಆಗಲಿದೆ, ಅದನ್ನು ಮುಂದಿನ 5 ವರ್ಷಗಳವರೆಗೆ ತುಂಬಿಕೊಡಬೇಕು ಎಂದು ಒಪ್ಪಂದವಾಗಿತ್ತು. ಆಗ ನಮ್ಮ ಸರ್ಕಾರ ಆಡಳಿತದಲ್ಲಿತ್ತು. ಆ ನಷ್ಟವನ್ನು ಪರಿಹಾರದ ರೂಪದಲ್ಲಿ ರಾಜ್ಯಗಳಿಗೆ ಕೇಂದ್ರ ಸರ್ಕಾರ ತುಂಬಿಕೊಡಬೇಕಾಗಿತ್ತು. ಆದರೆ ಈಗ ನಿರ್ಮಲಾ ಸೀತಾರಾಮನ್ ಅವರು ಈಗ ಕೊರೊನಾ ಬಂದಿದೆ, ಇದನ್ನು ಯಾರೂ ಊಹಿಸಿರಲಿಲ್ಲ, ಇದು ದೇವರ ಆಟ, ಸುಮಾರು 3 ಲಕ್ಷ ಕೋಟಿ ರೂಪಾಯಿಗಳಷ್ಟು ನಷ್ಟ ಉಂಟಾಗಿದೆ. ಸೆಸ್ ಇಂದ 65 ಸಾವಿರ ಕೋಟಿ ಬರುತ್ತೆ, ಉಳಿದ 2.65 ಲಕ್ಷ ಕೋಟಿ ನಷ್ಟ ಆಗುತ್ತಿರುವುದರಿಂದ ನಾವು ನಷ್ಟ ತುಂಬಿಕೊಡಲು ಸಾಧ್ಯವಿಲ್ಲ ಎಂದಿದ್ದಾರೆ ಅಸಮಧಾನ ವ್ಯಕ್ತಪಡಿಸಿದರು.

ರಾಜ್ಯಗಳಿಗೆ ನೀವು ರಿಸರ್ವ್ ಬ್ಯಾಂಕ್ ಗಳಿಂದ ಸಾಲ ಪಡೆದು ತಿರಿಸಿಕೊಳ್ಳಿ ಎಂದು ಕೇಂದ್ರ ವಿತ್ತ ಸಚಿವರು ಹೇಳಿದರು, ಇದರ ಬದಲು ಕೇಂದ್ರವೇ ಏಕೆ ರಿಸರ್ವ್ ಬ್ಯಾಂಕಿನಿಂದ ಸಾಲ ಪಡೆದು ರಾಜ್ಯಗಳಿಗೆ ನೀಡಬಾರದು? ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯನ್ನು ರಾಜ್ಯಗಳ ಮೇಲೆ ಹಾಕುತ್ತಿರುವುದು ಏಕೆ? ಒಪ್ಪಂದದ ಪ್ರಕಾರ ನಷ್ಟ ತುಂಬಿಕೊಡಬೇಕಾಗಿರುವುದು ನಿಮ್ಮ ಕರ್ತವ್ಯವಲ್ಲವೇ? ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಒತ್ತಡ ಹಾಕುತ್ತಿರುವ ನೀತಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಮತ್ತು ಇದೇ ವೇಳೆ ರಾಜ್ಯಕ್ಕೆ ಸಂವಿಧಾನಬದ್ಧವಾಗಿ ನೀಡಬೇಕಾಗಿರುವ ಜಿ.ಎಸ್.ಟಿ ಪರಿಹಾರವನ್ನು ನೀಡಿ ಎಂದು ಒತ್ತಾಯಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೆ ಸ್ವರ್ಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ದನ್ನು ನಂಬಿದ ರಾಜ್ಯದ ಜನರು 25 ಜನ ಸಂಸದರನ್ನು ಗೆಲ್ಲಿಸಿಕೊಟ್ಟಿದ್ದಾರೆ, ಉಪಚುನಾವಣೆಯಲ್ಲಿ ನಿಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ, ಜನರು ನಿಮ್ಮ ಮೇಲಿಟ್ಟಿರುವ ನಂಬಿಕೆಗೆ ಈಗ ನೀವು ಮಾಡುತ್ತಿರುವುದು ದ್ರೋಹವಲ್ಲವೇ? ರಾಜ್ಯಗಳನ್ನು ಕೇಂದ್ರ ದಿವಾಳಿಯಾಗುವತ್ತ ಕೊಂಡೊಯ್ಯುತ್ತಿದೆ. ಹಾಗಾಗಿ ಕೇಂದ್ರದ ಈ ಸಲಹೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರಕ್ಕೆ ಧಮ್ ಇದ್ದರೆ ನೀವೆ ಸಾಲ ತೆಗೆದುಕೊಂಡು ನಮಗೆ ಜಿ.ಎಸ್.ಟಿ ಪರಿಹಾರ ಕೊಡಿ ಎಂದು ಕೇಳಲಿ ಮತ್ತು ಸರ್ವ ಪಕ್ಷ ನಿಯೋಗ ಕೊಂಡೊಯ್ದು ಕೇಂದ್ರದ ಮೇಲೆ ಒತ್ತಡ ಹೇರಲಿ. ಇದರ ಜೊತೆಗೆ 15ನೇ ಹಣಕಾಸು ಆಯೋಗದಿಂದ ಕೂಡ ನಮಗೆ ಅನ್ಯಾಯವಾಗಿದೆ, ಅದರ ಜೊತೆಗೆ ಜಿ.ಎಸ್.ಟಿ ಪರಿಹಾರವನ್ನು ಕೊಡಲ್ಲ ಎಂದರೆ ಹೇಗೆ? ಜಿ.ಡಿ.ಪಿ ನೆಲಕಚ್ಚಿದೆ, ನಿರುದ್ಯೋಗ ಪ್ರಮಾಣ ಏರಿಕೆಯಾಗಿದೆ ಹೀಗಿರುವಾಗ ಮತ್ತೆ ರಾಜ್ಯ ಸರ್ಕಾರ ಸಂಬಳ ನೀಡಲು ಸಾಲ ಪಡೆದುಕೊಂಡರೆ ಅಭಿವೃದ್ಧಿ ಕಾರ್ಯಗಳು ಆಗುವುದಿಲ್ಲ. ನಮ್ಮ ಆಡಳಿತಾವಧಿಯಲ್ಲಿ ಆರ್ಥಿಕ ಶಿಸ್ತು ಅತ್ಯುತ್ತಮವಾಗಿ ನಿರ್ವಹಣೆಯಾಗಿತ್ತು. ಸಾಲದ ಪ್ರಮಾಣ ಜಿ.ಡಿ.ಪಿ 25% ಗಿಂತಲೂ ಕಡಿಮೆಯಿತ್ತು. ಈಗ ಸಾಲ ಅನಿಯಂತ್ರಿತವಾಗಿ ಜಾಸ್ತಿಯಾಗುವುದರಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿ, ಅಭಿವೃದ್ಧಿಯಲ್ಲಿ 10 ವರ್ಷಗಳಷ್ಟು ಹಿಂದಕ್ಕೆ ಹೋಗಲಿದೆ ಎಂದರು.

ರಾಜ್ಯದ ಹಿತದೃಷ್ಟಿಯಿಂದ ಕೇಂದ್ರದ ಮೇಲೆ ಒತ್ತಡ ಹೇರುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು. ರಾಜ್ಯಗಳಿಗೆ ನೀವೇ ಸಾಲ ತೆಗೆದುಕೊಳ್ಳಿ ಎಂದು ಹೇಳುವುದೇ ವಿಪರ್ಯಾಸ. ರಾಜ್ಯಗಳ ಬಗ್ಗೆ ಕಾಳಜಿಯೇ ಇಲ್ಲದಿರುವ ಅತ್ಯಂತ ಕೆಟ್ಟ ಸರ್ಕಾರ ಕೇಂದ್ರದಲ್ಲಿದ್ದರೆ, ಅದನ್ನು ಪ್ರಶ್ನಿಸುವ ಧೈರ್ಯವಿಲ್ಲದ ಹೇಡಿ ಸರ್ಕಾರ ರಾಜ್ಯದಲ್ಲಿದೆ. ಬಿಜೆಪಿಯೇತರ ರಾಜ್ಯ ಸರ್ಕಾರಗಳು ಕೇಂದ್ರದ ಈ ನೀತಿಯನ್ನು ವಿರೋಧ ಮಾಡಿವೆ. ಆದರೆ ನಿರ್ಮಲಾ ಸೀತಾರಾಮನ್ ಅವರು ಇದನ್ನು ದೇವರ ಆಟ ಎಂದು ಕೈಚೆಲ್ಲಿದ್ದಾರೆ ಎಂದು ಟೀಕಿಸಿದರು ‌

ಪ್ರವಾಹ, ಸರ್ಕಾರ ಎಡವಿದೆ :
ಈ ವರ್ಷವೂ ಪ್ರವಾಹ ಬಂದಿದ್ದು 56 ತಾಲೂಕುಗಳ 1000 ಹಳ್ಳಿಗಳು ಪ್ರವಾಹದಿಂದ ಬಾಧಿಸಲ್ಪಟ್ಟಿದೆ. ಸುಮಾರು 1 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ, ಮನೆಗಳು ಕುಸಿದುಬಿದ್ದಿವೆ, ಜಾನುವಾರುಗಳು ಸಾವಿಗೀಡಾಗಿವೆ. ರಾಜ್ಯ ಸರ್ಕಾರವೇ ಸುಮಾರು 4 ಸಾವಿರ ಕೋಟಿ ನಷ್ಟವಾಗಿದೆ ಎಂದಿದೆ. ಈ ಹಿಂದೆಯೂ ಸರಿಯಾಗಿ ಪರಿಹಾರ ಕೊಟ್ಟಿಲ್ಲ. 35,000 ಕೋಟಿ ಪರಿಹಾರ ಕೇಳಿದ್ದರೆ ಬರೀ 1800 ಕೋಟಿ ಪರಿಹಾರ ನೀಡಲಾಗಿದೆ. ಇನ್ನು ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಟ್ಟಿಲ್ಲ, ಹಳ್ಳಿಗಳ ಸ್ಥಳಾಂತರವಾಗಿಲ್ಲ, ಶಾಲೆಗಳ ಪುನರ್ ನಿರ್ಮಾಣ ಕಾರ್ಯವೂ ಆಗಿಲ್ಲ, ಮತ್ತೆ ಈ ವರ್ಷವೂ ಪ್ರವಾಹ ಬಂದಿದೆ. ಯಡಿಯೂರಪ್ಪನವರು ಹೆಲಿಕಾಪ್ಟರ್ ಮೂಲಕ ಸರ್ವೇ ಮಾಡಿದರು, ಆದರೆ ಸರ್ಕಾರದ ಬೇರೆ ಮಂತ್ರಿಗಳು ಜನರ ಬಳಿಗೆ ಹೋಗಿ ಅವರ ಕಷ್ಟ ಆಲಿಸಬೇಕೋ ಬೇಡವೋ? ಸಚಿವರಾದ ಅಶೋಕ್ ಅವರು ಕೇಂದ್ರದಿಂದ ಪರಿಹಾರ ಕೇಳಿದ್ದೇವೆ, ಅವರ ತಂಡ ಬಂದು ಸರ್ವೇ ಮಾಡಿ ಪರಿಹಾರ ನೀಡುತ್ತದೆ ಎನ್ನುತ್ತಾರೆ, ಆದರೆ ಅಧಿಕಾರಗಳ ಮಾತೇ ಬೇರೆ. ಇವರು ಕೇಂದ್ರ ವಿತ್ತ ಸಚಿವರನ್ನು ಭೇಟಿ ಮಾಡಿ ಮನವಿ ಕೊಟ್ಟು, ಪ್ರಧಾನಿಗಳ ಮನವೊಲಿಕೆ ಮಾಡಿ ಪರಿಹಾರದ ಹಣ ಸಿಗುವವರೆಗೂ ಹಿಡಿದ ಕಾರ್ಯದಿಂದ ಹಿಂದೆ ಸರಿಯಬಾರದು. ನಮ್ಮ ಸರ್ಕಾರವಿದ್ದಾಗ ಪದೇ ಪದೇ ಪ್ರಧಾನಿಗಳನ್ನು ಭೇಟಿ ಮಾಡಿ ಮನವಿ ಕೊಟ್ಟು ಪರಿಹಾರಕ್ಕಾಗಿ ಆಗ್ರಹಿಸುತ್ತಿದ್ದೆವು, ಆದರೆ ಇವರು ಪ್ರಧಾನಿಗಳನ್ನು ಭೇಟಿ ಮಾಡಲು ಹೆದರುತ್ತಾರೆ, ಇದೊಂದು ಮಹಾ ಪುಕ್ಕಲು ಸರ್ಕಾರ ಎಂದು ಟೀಕಿಸಿದರು.

ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡುವುದರಲ್ಲಿ ಈ ಸರ್ಕಾರ ಎಡವಿದೆ. ತಕ್ಷಣ ಪ್ರವಾಹ ಪೀಡಿತ ಪ್ರದೇಶಗಳ ಸರ್ವೇ ನಡೆಸಿ, ನಷ್ಟದ ಪ್ರಮಾಣದ ರಿಪೋರ್ಟ್ ತರಿಸಿಕೊಂಡು ಪರಿಹಾರ ನೀಡಬೇಕು ಎಂದು ಒತ್ತಾಯ ಮಾಡುತ್ತೇನೆ. ಈ ವಿಚಾರವನ್ನು ಅಧಿವೇಶನದಲ್ಲಿ ಪ್ರಶ್ನಿಸಿದರೆ ಸರಿಯಾಗಿ ಉತ್ತರ ನೀಡಲ್ಲ. ಕಳೆದ ಬಾರಿ ಹೀಗೆ ಆಯಿತು. ನಾನು ಸರ್ಕಾರವನ್ನು ಪ್ರಶ್ನಿಸಿದರೆ ನನ್ನ ಮಾತನ್ನು ಕೇಳಿಸಿಕೊಳ್ಳಲು ಸರ್ಕಾರ ಸಿದ್ಧವಿರಲಿಲ್ಲ. ಈ ಬಾರಿಯ ಅಧಿವೇಶನದಲ್ಲೂ ಈ ವಿಚಾರವನ್ನು ಪ್ರಶ್ನಿಸುತ್ತೇನೆ ಎಂದರು.

ರಾಯಣ್ಣ ಪ್ರತಿಮೆ, ವಿವಾದ ಮಾಡಿಕೊಂಡಿದ್ದು ತಪ್ಪು: 

ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣ ವಿಚಾರದಲ್ಲಿ ರಾಜ್ಯ ಸರ್ಕಾರ ಬೇಗನೆ ಒಂದು ನಿರ್ಧಾರ ತೆಗೆದುಕೊಂಡಿದ್ದರೆ ಇಂದು ರಾಯಣ್ಣ ವರ್ಸಸ್ ಶಿವಾಜಿ, ಕನ್ನಡಿಗರು ವರ್ಸಸ್ ಮರಾಠಿಗರು ಎಂಬ ಪರಿಸ್ಥಿತಿಯೇ ನಿರ್ಮಾನವಾಗುತ್ತಿರಲಿಲ್ಲ. ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿಯವರಿಗೆ 2 ಬಾರಿ ಕರೆ ಮಾಡಿ ಮಾತನಾಡಿದೆ.

ರಾಯಣ್ಣನ ವಿಚಾರವನ್ನು ವಿವಾದ ಮಾಡಿಕೊಳ್ಳುವುದೇ ದೊಡ್ಡ ತಪ್ಪು, ರಾಯಣ್ಣನವರು ಚೆನ್ನಮ್ಮನ ಸಂಸ್ಥಾನದಲ್ಲಿ ಸೈನಿಕನಾಗಿ ಬ್ರಿಟೀಷರ ವಿರುದ್ಧ ಹೋರಾಡಿ ಗಲ್ಲಿಗೇರಿದವರು, ರಾಯಣ್ಣ ಇಂದಿನ ಯುವ ಜನರಿಗೆ ಸ್ಪೂರ್ತಿಯ ಸೆಲೆ, ಅಂಥವರ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಹಿಂದೆಮುಂದೆ ನೋಡಬಾರದಾಗಿತ್ತು. ನಿನ್ನೆ ಸರ್ಕಾರ ಮಾಡಿದ ಕೆಲಸವನ್ನು ಮೊದಲೇ ಮಾಡಿದ್ದರೆ ಬೆಳಗಾವಿಯಲ್ಲಿ ವಿವಾದ ಇಷ್ಟು ದೊಡ್ಡದಾಗುತ್ತಿರಲಿಲ್ಲ. ಶಿವಾಜಿಯೂ ಸ್ವತಂತ್ರ ಹೋರಾಟಗಾರ ಎಂಬುದರಲ್ಲಿ ಎರಡು ಮಾತಿಲ್ಲ, ಶಿವಾಜಿಯವರಂತೆ ರಾಯಣ್ಣ ಕೂಡ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರು. ಇಬ್ಬರೂ ಗೌರವಕ್ಕೆ ಅರ್ಹರು, ಅಂತಹ ಮಹಾನ್ ವ್ಯಕ್ತಿಗಳ ಮಧ್ಯೆ ಸಂಘರ್ಷ ಉಂಟಾಗಲು ಸರ್ಕಾರ ಅವಕಾಶ ಮಾಡಿಕೊಡಬಾರದು. ಈ ಹೋರಾಟದಲ್ಲಿ ಕನ್ನಡಿಗರ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸಲಾಗಿದೆ, ಅದನ್ನು ತಕ್ಷಣ ವಾಪಾಸು ಪಡೆಯಬೇಕು ಎಂದು ಆಗ್ರಹಿಸುತ್ತೇನೆ.
ಸಿಟಿ ರವಿಯವರು ರಾಯಣ್ಣ ಪ್ರತಿಮೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಡೆಸಲಾದ ಹೋರಾಟವನ್ನು ವ್ಯಂಗ್ಯ ಮಾಡಿದ್ದಾರೆ. ಆ ಭಾಗದ ಜನರು ರಾಯಣ್ಣನ ಪ್ರತಿಮೆ ನಿರ್ಮಾಣಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ರಾಜಕೀಯ ಬಣ್ಣ ಕೊಡುವ ಅಗತ್ಯವಿಲ್ಲ. ಇದು ಬಹಳ ಹಿಂದಿನಿಂದಲೂ ಪ್ರತಿಮೆ ನಿರ್ಮಾಣಕ್ಕಾಗಿ ಹೋರಾಡುತ್ತಾ ಬಂದಿದ್ದಾರೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವರಾದ ಸಿಟಿ ರವಿಯವರು ಜವಾಬ್ದಾರಿಯಿಂದ ಮಾತನಾಡಬೇಕು ಎಂದರು.

ಡಿ.ಜೆ. ಹಳ್ಳಿ ಘಟನೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ :

ಡಿ.ಜೆ.ಹಳ್ಳಿ ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿಯೇ ಇದೆ, ಈಗಲೇ ಯಾರನ್ನೂ ಅಪರಾಧಿಗಳು ಅಂತಲೋ ಅಥವಾ ಅಮಾಯಕರು ಅಂತಲೋ ನಿರ್ಧರಿಸಲು ಸಾಧ್ಯವಿಲ್ಲ. ನಮ್ಮ ಪಕ್ಷದ ಶಾಸಕರಾದ ಜಮೀರ್ ಅಹ್ಮದ್ ಅವರು ಗಲಭೆಯ ಆರೋಪಿಗಳನ್ನು ಅಮಾಯಕರು ಎಂದಿಲ್ಲ. ಗಲಭೆಯಲ್ಲಿ ಮೃತಪಟ್ಟ ಕುಟುಂಬದ ಸದಸ್ಯರು ತೀರ ಬಡವರು ಎನ್ನುವ ಕಾರಣಕ್ಕಾಗಿ ಪರಿಹಾರ ನೀಡಿದ್ದೇನೆ ಎಂದು ಹೇಳಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ವಿಚಾರದಲ್ಲಿ ನಮ್ಮ ತಕರಾರಿಲ್ಲ. ಈ ವಿಷಯದಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆಯಾಗಲಿ. ತನಿಖಾ ಸಂಸ್ಥೆಯ ವರದಿ ಬರುವ ಮುಂಚೆಯೇ ಗೃಹ ಸಚಿವರು ಯಾರನ್ನೂ ಅಪರಾಧಿ ಎಂದು ಪರಿಗಣಿಸುವುದು ಸರಿಯಲ್ಲ. ತನಿಖೆಯಾಗಿ ಅಪರಾಧಿಗಳನ್ನು ಪತ್ತೆ ಹಚ್ಚಿದ ನಂತರ ಅಂಥವರಿಗೆ ಕಠಿಣ ಶಿಕ್ಷೆ ನೀಡಲಿ. ಈ ಘಟನೆಯನ್ನು ನಾನು ಖಂಡಿಸುತ್ತೇನೆ, ಶೀಘ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆದು ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ಸರ್ಕಾರವನ್ನು ಒತ್ತಾಯಿಸಿರು.

ಡ್ರಗ್ಸ್ ಜಾಲ, ತನಿಖೆಯಾಗಲಿ :

ಗಾಂಜಾ ಮಾರಾಟ ಮತ್ತು ಸೇವನೆ ಎರಡೂ ಮಹಾ ಅಪರಾಧ. ಒಂದು ವೇಳೆ ರಾಜ್ಯದಲ್ಲಿ ಗಾಂಜಾ ಮಾರಾಟ ಆಗುತ್ತಿದ್ದರೆ ಅದಕ್ಕೆ ಸರ್ಕಾರದ ವೈಫಲ್ಯವೇ ಕಾರಣ. ಗಾಂಜಾ ಮಾರುವವರು ಮತ್ತು ಸೇವನೆ ಮಾಡುವವರನ್ನು ಪತ್ತೆ ಹಚ್ಚಿ, ಶಿಕ್ಷೆಗೆ ಒಳಪಡಿಸಬೇಕು. ಟಿಪ್ಪು ಸುಲ್ತಾನ್ ವಿಚಾರದಲ್ಲಿ ವಿಧಾನ ಪರಿಷತ್ ಸದಸ್ಯರಾದ ವಿಶ್ವನಾಥ್ ಅವರು ಸತ್ಯವನ್ನೇ ಹೇಳಿದ್ದಾರೆ. ಅದನ್ನು ಬಿಜೆಪಿಯವರು ಒಪ್ಪಿಕೊಳ್ಳಬೇಕು. ರಾಜ್ಯದಲ್ಲಿ ಮಧ್ಯಂತರ ಸರ್ಕಾರ ಬರಲಿದೆ ಎಂಬುದು ಸುಳ್ಳು ನಾವಂತೂ ಸರ್ಕಾರ ತೆಗೆಯುವ ಪ್ರಯತ್ನಕ್ಕೆ ಕೈ ಹಾಕುವುದಿಲ್ಲ ಎಂದರು.

ಸಂಪೂರ್ಣ ಗುಣಮುಖನಾಗಿದ್ದೇನೆ :
ಕೊರೊನಾ ಸೋಂಕಿಗೆ ಒಳಗಾಗಿದ್ದ ನಾನು ಇದೀಗ ಸಂಪೂರ್ಣ ಗುಣಮುಖನಾಗಿದ್ದೇನೆ. ಕೊರೊನಾ ವಾಸಿಯಾಗದ ಕಾಯಿಲೆ ಏನಲ್ಲ. ಆದರೆ, ಮುಂಜಾಗ್ರತೆ ವಹಿಸುವುದು ಅವಶ್ಯ. ಮಾಸ್ಕ್ ಮತ್ತು ಸ್ಯಾನಿಟೈಸನ್ ಕಡ್ಡಾಯವಾಗಿ ಬಳಸಬೇಕು. ನಾನು ಆಸ್ಪತ್ರೆಯಲ್ಲಿದ್ದಾಗ ಗುಣಮುಖನಾಗುವಂತೆ ಹಾರೈಸಿದ ಎಲ್ಲರಿಗೂ ಧನ್ಯವಾದಗಳು. ವೈದ್ಯರ ಸಲಹೆ ಮೇರೆಗೆ ನಾನು ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದೆ. ಇಂದಿನಿಂದ ಎಂದಿನಂತೆ ಚಟುವಟಿಕೆಗಳಲ್ಲಿ ಭಾಗಿಯಾಗುತ್ತೇನೆ. ಮುಂದಿನ ವಾರ ಬಾದಾಮಿಗೆ ಭೇಟಿ ನೀಡುತ್ತೇನೆ.

ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವೆ,ಉಸಿರಿರುವವರೆಗೆ ಇಲ್ಲೇ ಇರುತ್ತೇನೆ: ಸಚಿವ ಡಾ.ನಾರಾಯಣ್ ಗೌಡ

ಮಂಡ್ಯ- 29: ಜಿಲ್ಲೆಯ ಮತ್ತು ತಾಲ್ಲೂಕಿನ ಅಭಿವೃದ್ಧಿಗಾಗಿ ಶ್ರಮವಹಿಸುತ್ತೇನೆ. ನನ್ನ ಉಸಿರಿರುವವರೆಗೂ ಇಲ್ಲೇ ಇರುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ತಿಳಿಸಿದ್ದಾರೆ.

ಅಂದು ಜೀವನೋಪಾಯಕ್ಕಾಗಿ ಮುಂಬೈಗೆ ಹೋಗಿದ್ದೆ. ಕ್ಷೇತ್ರದ ಜನ ಮೂರು ಬಾರಿ ಗೆಲ್ಲಿಸಿದ್ದಾರೆ. ಗೆದ್ದಮೇಲೆ ಮುಂಬೈಗೆ ಹೋಗುತ್ತಾರೆ ಎಂದು ಕೆಲವರು ಟೀಕಿಸಿದರು. ಆದ್ರೆ ಆ ಬಗ್ಗೆ ನಾನು ಮಾತಾಡಲ್ಲ. ನನ್ನ ಕ್ಷೇತ್ರವನ್ನ ಎರಡನೆ ಶಿಕಾರಿಪುರ ಮಾಡುವುದೇ ನನ್ನ ಗುರಿ‌. 265 ಕೋಟಿ ಅನುದಾನವನ್ನು ಕೆ.ಆರ್.ಪೇಟೆ ತಾಲೂಕಿಗೆ ತಂದಿದ್ದೇನೆ. ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲ ರೀತಿಯಲ್ಲು ಮುಖ್ಯಮಂತ್ರಿಗಳು ಸಹಕರಿಸುತ್ತಾರೆ ಎಂದು ಸಚಿವರು ಹೇಳಿದರು.

ಇಂದು ನಮ್ಮ ಸರ್ಕಾರ ನಿಮ್ಮ ಮನೆ ಮನೆಗಳಿಗೆ ಬಂದಿದೆ ಎಲ್ಲರ ಅಭಿವೃದ್ಧಿಯೇ ನಮ್ಮ ಸರ್ಕಾರದ ಅಭಿವೃದ್ಧಿ ಹಾಗೂ ಸುಮಾರು 200 ಕೋಟಿ ಅನುದಾನದಲ್ಲಿ ನರ್ಸಿಂಗ್ ಮತ್ತು ಮೆಡಿಕಲ್ ಕಾಲೇಜ್ ಸ್ಥಾಪಿಸಲಾಗುವುದು ಹಾಗೂ 666 ಕೋಟಿ ಅನುದಾನದಲ್ಲಿ ಮನೆ ಮನೆಗೆ ನೀರಿನ ವ್ಯವಸ್ಥೆ ಮಾಡಲಾಗುವುದು ಮತ್ತು ಜಿಲ್ಲೆಯ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಮುಖ್ಯಮಂತ್ರಿಗಳು ಕೆ.ಆರ್. ಪೇಟೆ ತಾಲ್ಲೂಕಿನ ಅಭಿವೃದ್ಧಿಗೆ ಮುಂದಾಗುತ್ತಾರೆ ಅಲ್ಲದೆ ಜನರ ಸಮಸ್ಯೆಗೆ ತಕ್ಷಣವೇ ಬಗೆಹರಿಯಬೇಕು. ಆ ಕಾರಣಕ್ಕಾಗಿಯೆ ಮನೆ ಬಾಗಿಲಿಗೆ ಸರ್ಕಾರ ಎಂಬ ಕಾರ್ಯಕ್ರಮ ಆಯೋಜಿಸಿದ್ದೇವೆ‌ ಎಂದು ಸಚಿವರು ಹೇಳಿದರು.

ಕೃಷಿ ಮತ್ತು ತೋಟಗಾರಿಕೆ ಇಲಾಖೆಯ, ಕಂದಾಯ ಇಲಾಖೆ, ಸರ್ವೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಜಲಸಂಪನ್ಮೊಲ ಇಲಾಖೆ ಮತ್ತು ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಹಾಗೂ ಇತರ ಇಲಾಖೆಯ ವತಿಯಿಂದ ರೈತರ ಎಲ್ಲ ಸಮಸ್ಯೆಗಳನ್ನು ಪರಿಶೀಲಿಸಿ ಸ್ಥಳದಲ್ಲೇ ಸಾರ್ವಜನಿಕರಿಗೆ ಹಕ್ಕು ಪತ್ರಗಳನ್ನು, ಭಾಗ್ಯ ಲಕ್ಷ್ಮೀ ಬಾಂಡ್ ಗಳನ್ನು ಮತ್ತು ಪಿಂಚಣಿದಾರರಿಗೆ ಪತ್ರಗಳನ್ನು ಸಚಿವರು ವಿತರಿಸಿದರು.

ಈ ವೇಳೆ ಮಾತನಾಡಿದ ಡಿಸಿ ಡಾ. ವೆಂಕಟೇಶ್ ಜಿಲ್ಲೆಯ ಕಂದಾಯ ಸಮಸ್ಯೆಗಳನ್ನು ಬಗೆಹರಿಸಲು ಸ್ಥಳದಲ್ಲಿಯೇ ವ್ಯವಸ್ಥೆ ಮಾಡಲಾಗಿದ್ದು,ಪಿಂಚಣಿ 2 ಸಾವಿರ ಮನೆಗಳ ವಿತರಣೆಗೆ ಜಿಲ್ಲಾ ಉಸ್ತುವಾರಿ ಸಚಿವ ನಿರ್ದೇಶನದಂತೆ ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾಡಳಿತ ವ್ಯವಸ್ಥಿತವಾಗಿ ಜನರ ಸಮಸ್ಯೆಗಳನ್ನು ನಿವಾರಣೆಗೆ ಮಾಡಲು ಕ್ರಮವಹಿಸಲಾಗುವುದು ಎಂದು ಹೇಳಿದರು.

ಜನರಿಂದ ಒಟ್ಟು 216 ಅರ್ಜಿಗಳು ಬಂದಿದ್ದು, ಅವುಗಳಲ್ಲಿ 54 ಅರ್ಜಿಗಳನ್ನ ಸ್ಥಳದಲ್ಲೇ ಇತ್ಯರ್ಥ ಮಾಡಲಾಗಿದೆ. ಪಿಂಚಣಿ, ಆರ್ಟಿಸಿ ಕರೆಕ್ಷನ್, ನಿವೇಶನಕ್ಕೆ ಸಂಬಂಧಿಸಿದ ಅರ್ಜಿಗಳನ್ನ ಸ್ಥಳದಲ್ಲೇ ಇತ್ಯರ್ಥಪಡಿಸಿ ಸಚಿವರು ಅರ್ಜಿದಾರರಿಗೆ ವಿತರಿಸಿದರು‌. ಇನ್ನುಳಿದ ಎಲ್ಲ ಅರ್ಜಿಗಳನ್ನ 15 ದಿನಗಳಲ್ಲಿ‌ ಇತ್ಯರ್ಥ ಮಾಡಿ ಅರ್ಜಿದಾರರ ಮನೆಗೆ ತಲುಪಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ‌

‘ಮನೆ ಬಾಗಿಲಿಗೆ ಸರ್ಕಾರ’ ಕಾರ್ಯಕ್ರಮದಲ್ಲಿ ನಗರ ಸಭೆ ಆಯುಕ್ತರು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ನ ಅಧ್ಯಕ್ಷರು, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಉಪಸ್ಥಿತರಿದ್ದರು.

ನಾಳೆ ಅನಂತಕುಮಾರ್ ಪ್ರತಿಷ್ಠಾನದಿಂದ ದೇಶ ಮೊದಲು ವೆಬಿನಾರ್ ಸಂವಾದ ಸರಣಿಗೆ ಚಾಲನೆ

ಬೆಂಗಳೂರು ಆಗಸ್ಟ್‌ 29: ಕೋವಿಡ್-19 ಸಾಂಕ್ರಾಮಿಕ ಪಿಡುಗನ್ನು ಇಡೀ ದೇಶದ ಜನಸಾಮಾನ್ಯರು, ನಾಯಕರು ಸಮರ್ಥ ನಾಯಕತ್ವ ವಹಿಸಿಕೊಂಡು ಹೇಗೆ ನಿವಾರಣೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದರು ಮತ್ತು ಇನ್ನೂ ಶಕ್ತಿಶಾಲಿಯಾಗಿ ಹೊರ ಬರಲಾಯಿತು ಎಂಬ ವಿಚಾರದ ಕುರಿತು ಅನಂತಕುಮಾರ್ ಪ್ರತಿಷ್ಠಾನ ನಾಳೆ ಬೆಂಗಳೂರಿನಲ್ಲಿ ವೆಬಿನಾರ್ ಸಂವಾದವನ್ನು ಆಯೋಜಿಸಿದೆ.

ಬೆಂಗಳೂರಿನಲ್ಲಿ ಈ ವಿಷಯ ತಿಳಿಸಿದ ಅದಮ್ಯ ಚೇತನದ ವ್ಯವಸ್ಥಾಪಕ ಟ್ರಸ್ಟಿ ಮತ್ತು ಅನಂತಕುಮಾರ್ ಪ್ರತಿಷ್ಠಾನದ ಟ್ರಸ್ಟಿ ಆಗಿರುವ ತೇಜಸ್ವಿನಿ ಅನಂತಕುಮಾರ್ ಅವರು, ಪ್ರತಿಷ್ಠಾನವು ಅನಂತಕುಮಾರ್ ರಾಷ್ಟ್ರೀಯ ನಾಯಕತ್ವ ಮತ್ತು ನೀತಿ ನಿರೂಪಣೆ ಸಂಸ್ಥೆಯನ್ನು ಆರಂಭಿಸುವ ಉದ್ದೇಶ ಹೊಂದಿದೆ. ಇದರಲ್ಲಿ ನಾಯಕತ್ವ ಮತ್ತು ನೀತಿ ನಿರೂಪಣೆಗೆ ಸಂಬಂಧಿಸಿದಂತೆ ಸೂಕ್ತ ತರಬೇತಿ ಮತ್ತು ಸಂಶೋಧನೆಯನ್ನು ಕೈಗೊಳ್ಳಲು ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಿದೆ ಎಂದು ತಿಳಿಸಿದರು.

ಉದ್ದೇಶಿತ ಸಂಸ್ಥೆಯ ಆರಂಭಕ್ಕೆ ಪೂರಕವಾಗಿ ವೆಬಿನಾರ್ ಸಂವಾದಗಳ ಸರಣಿಯನ್ನು ಆರಂಭಿಸಲಾಗುತ್ತಿದೆ. ಇದಕ್ಕೆ ದೇಶ ಮೊದಲು ಸಂವಾದ ಹೆಸರಿಸಲಾಗಿದ್ದು, ಇದರ ವಿಷಯ: ದೇಶವು ಕೋವಿಡ್ ಎಂಬ ಸಾಂಕ್ರಾಮಿಕ ಪಿಡುಗನ್ನು ಸಮರ್ಥವಾಗಿ ಎದುರಿಸಿ ಇನ್ನೂ ಹೆಚ್ಚಿನ ಶಕ್ತಿಯುತವಾಗಿ ಹೊರ ಹೊಮ್ಮುತ್ತಿದೆ ಎಂಬುದಾಗಿದೆ. ಈ ಮೊದಲ ಸಂವಾದವನ್ನು ನಾಳೆ ಅಂದರೆ ಆಗಸ್ಟ್ 30 ರಂದು ಸಂಜೆ 4.30 ಕ್ಕೆ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಹರ್ಷವರ್ಧನ್ ಅವರು ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಡಾ.ಬಿ.ಎಸ್.ಶ್ರೀನಾಥ್, ನಾರಾಯಣ ಹೆಲ್ತ್ ನ ಅಧ್ಯಕ್ಷ ಮತ್ತು ಸಂಸ್ಥಾಪಕ ಡಾ.ದೇವಿ ಶೆಟ್ಟಿ, ಜಯದೇವ ಹೃದ್ರೋಗ ವಿಜ್ಞಾನಗಳು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್, ಸ್ವಾಮಿ ವಿವೇಕಾನಂದ ಯುವ ಆಂದೋಲನದ ಸಂಸ್ಥಾಪಕ ಮತ್ತು ನಾಯಕತ್ವ ತರಬೇತುದಾರರಾದ ಡಾ.ಬಾಲಸುಬ್ರಮಣ್ಯಂ ಹಾಗೂ ಹಲವಾರು ರಾಜಕಾರಣಿಗಳು “ಸಾಂಕ್ರಾಮಿಕ ಪಿಡುಗಿನ ಅವಧಿಯಲ್ಲಿನ ನಾಯಕತ್ವ’’ದ ಬಗ್ಗೆ ವಿವರವಾದ ವಿಚಾರಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ ಎಂದು ಅವರು ಹೇಳಿದರು.

ಇದೊಂದು ಅತ್ಯಂತ ಮಾಹಿತಿಪೂರ್ಣವಾದ ಕಾರ್ಯಕ್ರಮವಾಗಲಿದ್ದು, ಆಸಕ್ತಿದಾಯಕ ಮತ್ತು ಕುತೂಹಲಕಾರಿಯಾಗಿರುತ್ತದೆ. ಈ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಉಪನ್ಯಾಸಕರಿಗೆ ಸಾರ್ವಜನಿಕರು ಪ್ರಶ್ನೆಗಳನ್ನು ಕೇಳಬಹುದಾಗಿದೆ. ಇದಕ್ಕಾಗಿ ವೆಬ್ ಸೈಟ್ akp.org.in ಗೆ ಭೇಟಿ ನೀಡಿ ಪ್ರಶ್ನೆಗಳನ್ನು ಕಳುಹಿಸಬಹುದಾಗಿದೆ.

ಈ ವೆಬಿನಾರ್ ಸಂವಾದದ ನೇರಪ್ರಸಾರವನ್ನು ಈ ಕೆಳಗಿನ ಲಿಂಕ್ ಗಳಿಂದಲೂ ವೀಕ್ಷಿಸಬಹುದು.
https://bit.ly/3lizQHz
Meeting number: 170 737 0071
Meeting Password: nationfirst
Or
https://www.youtube.com/c/ananthkumar_bjp
Or
https://www.facebook.com/AnanthKumar.Pratishthana