ಕೋವಿಡ್‌ ವಿರುದ್ಧ ಸಂಘಟಿತ ಹೋರಾಟ ಅಗತ್ಯ : ಸಚಿವ ಸುಧಾಕರ್‌

ಬೆಂಗಳೂರು : ಸರ್ಕಾರದ ಪ್ರಮಾಣಿಕ ಪ್ರಯತ್ನಗಳ ಜತೆಗೆ ಸಮಾಜದ ಪ್ರತಿಯೊಬ್ಬರ ಸಹಕಾರ ಮತ್ತು ಸಂಘಟಿತ ಹೋರಾಟದಿಂದ ಮಾತ್ರ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಯಶಸ್ಸು ಸಾಧ್ಯ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಅಭಿಪ್ರಾಯಪಟ್ಟರು.

ಮೈಸೂರಿನ ಜೆಎಸ್‌ಎಸ್‌ ಸಂಸ್ಥೆ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಜಿಯವರ ಜಯಂತಿ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ʼಕೋವಿಡ್‌-೧೯ : ಸವಾಲು ಮತ್ತು ನಿರ್ವಹಣೆ ʼ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶನಿವಾರ ಸಚಿವರು ಮಾತನಾಡಿದರು.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಮತ್ತು ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರಗಳು ಮಾನವೀಯ ನೆಲೆಯಲ್ಲಿ ಬಡವ-ಶ್ರೀಮಂತ, ಹಿರಿಯರು-ಕಿರಿಯರು ಬೇಧವಿಲ್ಲದೆ ಸಮಭಾವದಿಂದ ಎಲ್ಲರಿಗೂ ಗುಣಮಟ್ಟದ ಕೋವಿಡ್‌ ಚಿಕಿತ್ಸೆ ನೀಡುತ್ತಿವೆ. ಅದರಲ್ಲೂ ರೋಗಕ್ಕೆ ತುತ್ತಾಗುವ ಅವಕಾಶಗಳಿರುವ ಮಕ್ಕಳು ಮತ್ತು ಹಿರಿಯರ ವಿಷಯದಲ್ಲಿ ವಿಶೇಷ ಕಾಳಜಿ ವಹಿಸಿದೆ. ಕೆಲ ಮುಂದುವರಿದ ರಾಷ್ಟ್ರಗಳು ತಮ್ಮದೇ ಕಾರಣಗಳಿಂದ ರೋಗಪೀಡಿತರಾದ ಹಿರಿಯ ನಾಗರಿಕರಿಗೆ ಚಿಕಿತ್ಸೆ ನಿರಾಕರಿಸಿದ ಉದಾಹರಣೆಗಳಿವೆ. ಅಂತಹ ಯಾವುದೇ ತಾರತಮ್ಯ ನಮ್ಮಲ್ಲಿ ಮಾಡಿಲ್ಲ ಎಂದರು.

ಜಗತ್ತಿನ ಇತರೆ ರಾಷ್ಟ್ರಗಳಲ್ಲಿ ಸಾವಿನ ಪ್ರಮಾಣ ಶೇಕಡಾ ೪ ಮತ್ತು ಅದಕ್ಕಿಂತ ಹೆಚ್ಚು ಇದ್ದರೆ ಭಾರತದಲ್ಲಿ ಶೇ.1.5 ರಿಂದ 1.7 ರಷ್ಟಿರುವುದು ಸಮಾಧಾನಕರ ಸಂಗತಿ. ಇದನ್ನು ಶೇಕಡಾ ೧ಕ್ಕಿಂತ ಕಡಿಮೆ ಮಾಡುವ ಉದ್ದೇಶದಿಂದ ಯತ್ನಗಳನ್ನು ಮುಂದುವರಿಸಲಾಗಿದೆ. ಇದು ಯುದ್ಧದ ಸಮಯ. ಈ ಹೋರಾಟದಲ್ಲಿ ಸರ್ಕಾರದಿಂದ ಮಾತ್ರ ಸಂಪೂರ್ಣ ನಿಗ್ರಹ ಸಾಧ್ಯವಿಲ್ಲ. ಸಮಾಜದಲ್ಲಿನ ಎಲ್ಲ ಸಂಘ-ಸಂಸ್ಥೆಗಳ ಜತೆ ಪ್ರತಿಯೊಬ್ಬ ನಾಗರೀಕರು ತಮ್ಮ ಜವಾಬ್ದಾರಿಗಳನ್ನು ಅರಿತು ಈ ಸಮಯದಲ್ಲಿ ಸಾಮಾಜಿಕ ಪ್ರಜ್ಞೆ ಮೆರೆಯಬೇಕಿದೆ ಎಂದರು.

ಕೋವಿಡ್‌ ನಂತರದ ದಿನಗಳಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳು ಸಂಶೋಧನೆ ಮತ್ತು ಪರಿಹಾರ ಉಪಕ್ರಮಗಳ ಬಗ್ಗೆ ಗಮನಹರಿಸಬೇಕಿದೆ. ಭವಿಷ್ಯದಲ್ಲಿ ಎದುರಾಗುವ ಇಂತಹ ಕಂಟಕಗಳನ್ನು ಯಾವುದೇ ಜೀವಹಾನಿ ಮತ್ತು ಜೀವನಕ್ರಮಗಳಿಗೆ ಧಕ್ಕೆ ಆಗದಂತೆ ನಿವಾರಿಸುವ ಪರಿಹಾರೋಪಾಯಗಳನ್ನು ನಾವು ಕಂಡುಕೊಳ್ಳಬೇಕು. ಇತರೆ ದೇಶಗಳ ಕೆಲ ತಪ್ಪು ನಿರ್ಧಾರಗಳಿಂದ ಎಚ್ಚೆತ್ತುಕೊಂಡ ನಾವು ನಿಖರ ಮತ್ತು ವೈಜ್ಞಾನಿಕ ಹಿನ್ನಲೆಯಲ್ಲಿ ತೀರ್ಮಾನಗಳನ್ನು ತೆಗೆದುಕೊಂಡಿದ್ದರಿಂದ ಇಂದು ಸಮಾಧಾನಕರ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಸರ್ಕಾರ ಸೂಚಿಸಿರುವ ಸರಳ ಮಾರ್ಗಸೂಚಿಗಳನ್ನು ದೈನಂದಿನ ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಳ್ಳುವ ಮೂಲಕ ಸಹಕರಿಸಬೇಕು. ಆಗ ಮಾತ್ರ ಕೋವಿಡ್‌ ಮಣಿಸಲು ಸಾಧ್ಯ ಎಂದು ತಿಳಿಸಿದರು.

ಆರಂಭದಿಂದಲೂ ಕರ್ನಾಟಕ ದೇಶಕ್ಕೆ ಮಾದರಿಯಾದ ಕ್ರಮಗಳನ್ನು ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಅಳವಡಿಸಿಕೊಂಡಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಪ್ರಯಾಣಿಕರ ತಪಾಸಣೆ, ಜನದಟ್ಟಣಿ ಪ್ರದೇಶಗಳಲ್ಲಿ ನಿರ್ಬಂಧಗಳಂತಹ ಸಕಾರಾತ್ಮಕ ನಿಲುವುಗಳು ಕೊರೋನಾ ಹರಡುವಿಕೆಯ ತೀವ್ರತೆಯನ್ನು ತಡೆಯಲು ಸಾಧ್ಯವಾಯಿತು. ತಂತ್ರಜ್ಞಾನದ ಬಳಕೆ, ಇತರೆ ರಾಜ್ಯಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ವೈದ್ಯಕೀಯ, ನರ್ಸಿಂಗ್‌, ಪ್ಯಾರಾಮೆಡಿಕಲ್‌ ಶಿಕ್ಷಣ ಸಂಸ್ಥೆಗಳಿಂದ ನಮ್ಮಲ್ಲಿ ಚಿಕಿತ್ಸೆಗೆ ಹೆಚ್ಚಿನ ಮಾನವ ಸಂಪನ್ಮೂಲವನ್ನು ಒದಗಿಸಿಕೊಳ್ಳಲಾಯಿತು. ಜತೆಗೆ ಲಾಕ್‌ಡೌನ್‌ ಸಂದರ್ಭದಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು ನೆರವಿಗೆ ಬಂತು ಎಂದು ವಿವರಿಸಿದರು.

ರೋಗಕ್ಕೆ ಶೀಘ್ರದಲ್ಲೇ ಲಸಿಕೆ ಸಿಗುವ ವಿಶ್ವಾಸವಿದೆ. ಆದರೆ ಅಲ್ಲಿಯವರೆಗೆ ಜೀವ ಮತ್ತು ಜೀವನ ನಡೆಸಲು ಅವಕಾಶ ಮಾಡಿಕೊಟ್ಟಿರುವ ಸರ್ಕಾರದ ಜತೆಗೆ ಜನರು ಕೈ ಜೋಡಿಸಬೇಕು. ನಿಯಮಿತವಾಗಿ ನೀಡುವ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಆಗ ಮಾತ್ರ ಸಂಪೂರ್ಣ ನಿಯಂತ್ರಣ ಸಾಧ್ಯ ಎಂದರು.

ಜಮ್ಮು ಕಾಶ್ಮೀರದ ಲೆಪ್ಟಿನೆಂಟ್‌ ಗೌರ್ನರ್‌ ಮನೋಜ್‌ ಸಿನ್ಹಾ ಕಾರ್ಯಕ್ರಮ ಉದ್ಘಾಟಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ, ಇನ್ಫೊಸಿಸ್‌ ಫೌಂಡೇಶನ್ನಿನ ಮುಖ್ಯಸ್ಥೆ ಸುಧಾಮೂರ್ತಿ, ಚಿತ್ರನಟ ದರ್ಶನ್‌, ಜೆಎಸ್‌ಎಸ್‌ ಸಂಸ್ಥೆಗಳ ಸಮ ಕುಲಾಧಿಪತಿ ಡಾ. ಸುರೇಶ್‌ ಭೋಜರಾಜ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರು ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದರು.

ವಾಲ್ಮೀಕಿ ನಿಗಮದ ಮೂವರು ಅಧಿಕಾರಿಗಳು ಅಮಾನತು : ಗೋವಿಂದ ಕಾರಜೋಳ

ಬೆಂಗಳೂರು. ಆ.29: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮದ ಮೂವರು ಅಧಿಕಾರಿಗಳನ್ನು ಭೂ ಒಡೆಯತನ ಯೋಜನೆಯಲ್ಲಿ ಲಂಚ ಪಡೆದ ಆರೋಪದಡಿ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಬಂಧಿಸಿದ್ದು, ಈ ಮೂವರು ಅಧಿಕಾರಿಗಳನ್ನು ಅಮಾನತು ಗೊಳಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ತಿಳಿಸಿದ್ದಾರೆ.

ನಿಗಮದ ಪ್ರಧಾನ ವ್ಯವಸ್ಥಾಪಕ ಎಸ್.ಎಸ್. ನಾಗೇಶ್, ಸಹಾಯಕ ಪ್ರಧಾನ ವ್ಯವಸ್ಥಾಪಕಿಮಂಜುಳ ಮತ್ತು ಕಚೇರಿ ಅಧೀಕ್ಷಕ ಪಿ.ಡಿ. ಸುಬ್ಬಪ್ಪ ಅವರು ಕರ್ನಾಟಕ ನಾಗರಿಕ ಸೇವಾ ನಿಯಮದನ್ವಯ ಕರ್ತವ್ಯ ಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದ್ದು, ಇಲಾಖೆ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತು ಮಾಡಲಾಗಿದೆ. ಅಮಾನತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ಕೇಂದ್ರಸ್ಥಾನ ಬಿಡಬಾರದು ಎಂದು ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಎಸ್ಸಿ ಎಸ್ಟಿ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಪರಿಣಾಮಕಾರಿ ಶಿಕ್ಷಣಕ್ಕೆ ವಿಶೇಷ ಕ್ರಿಯಾಯೋಜನೆ ರೂಪಿಸಿ: ಗೋವಿಂದ ಕಾರಜೋಳ ಸೂಚನೆ

ಬೆಂಗಳೂರು. ಆ. 29 : ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಸರ್ಕಾರಿ ಶಾಲಾ ವ್ಯವಸ್ಥೆಯನ್ನು ಬಲಪಡಿಸಲಿದೆ. ಈ ಶಿಕ್ಷಣ ನೀತಿಯಡಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಶಿಕ್ಷಣ, ವೃತ್ತಿಪರ ಶಿಕ್ಷಣಕ್ಕೆ ಒತ್ತು ನೀಡಿ, ವಿಶೇಷ ಕ್ರಿಯಾಯೋಜನೆಯನ್ನು ಸಿದ್ದಪಡಿಸುವಂತೆ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಸೂಚಿಸಿದರು.

ವಿಧಾನಸೌಧದಲ್ಲಿಂದು ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನ ಕುರಿತು ಸಭೆ ನಡೆಸಿದ ಅವರು, ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ವಿದ್ಯಾರ್ಥಿಗಳೇ ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರಿ ಶಾಲೆಗಳನ್ನು ಅವಲಂಭಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಹಾಗೂ ಪರಿಣಾಮಕಾರಿ ಶಿಕ್ಷಣ ನೀಡಲು ಈ ಶಿಕ್ಷಣ ನೀತಿಯಡಿ ಪರಿಣಾಮಕಾರಿ ಶಿಕ್ಷಣಕ್ಕೆ ವಿಪುಲ ಅವಕಾಶಗಳಿವೆ. ಈ ಎಲ್ಲಾ ವಿಪುಲ ಅವಕಾಶಗಳು ಈ ಸಮುದಾಯದ ವಿದ್ಯಾರ್ಥಿಗಳಿಗೆ ಸದ್ಬಳಕೆಯಾಗಿ, ಪರಿಣಾಮಕಾರಿ ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಶಿಕ್ಷಣ ಪಡೆದು ಸ್ವಾವಲಂಭಿಗಳಾಗುವಂತಹ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಬೇಕು. ಪರಿಶಿಷ್ಟ ಜಾತಿ- ಪಂಗಡ ಹಾಗೂ ಹಿಂದುಳಿದ ವರ್ಗಗಳು ಪ್ರಾತಿನಿದ್ಯ ಕಡಿಮೆ ಇರುವ ಗುಂಪು (ಯುಆರ್‍ಜಿ) ಗುಂಪಿನಲ್ಲಿ ಬರುವುದರಿಂದ ಸಂವಿಧಾನ ಆಶಯದಂತೆ ಈ ಸಮುದಾಯಗಳಿಗೆ ವಿಶೇಷ ಆದ್ಯತೆ ನೀಡಿ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಅವರು ಸೂಚಿಸಿದರು.

ಈ ನೀತಿಯಡಿ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರಾದೇಶಿಕ ಅಸಮಾನತೆ ನಿವಾರಣೆಗಾಗಿ ವಿಶೇಷ ಶೈಕ್ಷಣಿಕ ವಲಯ( ಎಸ್‍ಇಝಡ್) ರಚನೆ ಕುರಿತು ಪ್ರಸ್ತಾಪಿಸಲಾಗಿದೆ. ಇದರ ಜಾರಿಗೆ ಒತ್ತು ನೀಡಬೇಕಿದೆ. ಪರಿಶಿಷ್ಟ ಜಾತಿ -ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ಶಿಕ್ಷಕ ವೃಂದಕ್ಕೆ ವೃತ್ತಿಪರ ಅಭಿವೃದ್ಧಿಗೆ ವಿಶೇಷ ಕಾರ್ಯಯೋಜನೆ ರೂಪಿಸಬೇಕು. ಶಿಕ್ಷಕರ ಶಿಕ್ಷಣ ಹಾಗೂ ನೇಮಕಾತಿಗಾಗಿ ವಿಶೇಷ ಒತ್ತು ನೀಡಲಾಗಿದೆ. ಇದರ ಆಶಯವನ್ನು ರಾಜ್ಯದಲ್ಲಿ ಪರಿಣಾಮಕಾರಿ ಈಡೇರಿಸಬೇಕು. ಉನ್ನತ ಶಿಕ್ಷಣದಲ್ಲಿ ಮಲ್ಟಿಪಲ್ ಎಂಟ್ರಿ ಮತ್ತು ಮಲ್ಟಿಪಲ್ ಎಕ್ಸಿಟ್ ನಿಂದಾಗಿ ಶಾಲೆಯಿಂದ ಹೊರಗುಳಿಯುವವರ(ಡ್ರಾಪ್ ಔಟ್) ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದೆ. ಪರಿಶಿಷ್ಠ ಜಾತಿ ಮತ್ತು ಪಂಗಡ ಸಮುದಾಯದವರು ಹೆಚ್ಚಿನ ಪ್ರಮಾಣದಲ್ಲಿ ವಲಸೆ ಹೋಗುವುದರಿಂದ ಅವರ ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ. ಎಸ್‍ಸಿಪಿ ಮತ್ತು ಟಿಎಸ್‍ಪಿ ಅನುದಾನವನ್ನು ಈ ನಿಟ್ಟಿನಲ್ಲಿ ವಿನಿಯೋಗಿಸುವ ಕುರಿತು ಸುಧೀರ್ಘವಾಗಿ ಚರ್ಚಿಸಿದರು.

ಕರ್ನಾಟಕದಲ್ಲಿರುವ ವಸತಿ ಶಿಕ್ಷಣ ವ್ಯವಸ್ಥೆಯನ್ನು ಮಾದರಿ ಎಂದು ಈ ಶಿಕ್ಷಣ ನೀತಿಯಲ್ಲಿ ಉಲ್ಲೇಖಿಸಲಾಗಿದ್ದು, ಇದೇ ಮಾದರಿಯನ್ನು ಎಲ್ಲಾ ರಾಜ್ಯಗಳಲ್ಲಿ ಅನುಷ್ಠಾನಗೊಳಿಸುವಂತೆ ಪ್ರಸ್ತಾಪಿಸಲಾಗಿದೆ. ವಸತಿ ಶಿಕ್ಷಣ ವ್ಯವಸ್ಥೆಯಿಂದ ಕರ್ನಾಟಕದಲ್ಲಿ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುವ (ಡ್ರಾಪ್ ಔಟ್) ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳು ವಸತಿ ಶಿಕ್ಷಣ ಶಾಲೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿಸಿದರೆ ಮಕ್ಕಳು ಶಾಲೆಯಿಂದ ಹೊರಗುಳಿಯುವ ಸಮಸ್ಯೆ ತಾನಾಗಿಯೇ ನಿವಾರಣೆಯಾಗುತ್ತದೆ. ಪೂರ್ವ ಪ್ರಾಥಮಿಕ ಹಂತದ ಚಿಕ್ಕಮಕ್ಕಳಿಗೆ ಹೋಮ್ ಸ್ಕೂಲಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಗುಣಾತ್ಮಕ ಶಿಕ್ಷಣದಿಂದ ಪ್ರಾದೇಶಿಕ ಅಸಮಾನತೆ ನಿವಾರಣೆಗೆ ನಾಂದಿಯಾಗುತ್ತದೆ. ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿ ಸೇವಾ ಮನೋಭಾವ ಮೂಡುವಂತೆ ಪ್ರೇರೇಪಿಸಬೇಕು ಎಂದು ಅವರು ತಿಳಿಸಿದರು.

ಹೊಸ ಶಿಕ್ಷಣ ನೀತಿಯಂತೆ ವಸತಿ ಶಿಕ್ಷಣ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಕ್ರಮಕೈಗೊಳ್ಳಬೇಕು. ಸ್ವಂತ ನಿವೇಶನ ಹೊಂದಿರುವ ವಸತಿ ಶಾಲೆಗಳಲ್ಲಿ ಹೆಚ್ಚುವರಿ ಶಾಲಾ ಕೊಠಡಿ, ವಸತಿ ಕೊಠಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿ ಪಡಿಸಿ, ಈಗಿರುವ 1.7 ಲಕ್ಷ ವಿದ್ಯಾರ್ಥಿಗಳ ಸಂಖ್ಯೆಯನ್ನು 2.5 ಲಕ್ಷಕ್ಕೆ ವಿಸ್ತರಿಸಲು ಕ್ರಮಕೈಗೊಳ್ಳಬೇಕು ಎಂದು ಕ್ರೈಸ್ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸೂಚಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಸದಸ್ಯರೂ ಆಗಿರುವ ವಿಧಾನ ಪರಿಷತ್ ಸದಸ್ಯರಾದ ಶ್ರೀ ಅರುಣ್ ಶಹಪೂರ್ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ಅಂಶಗಳ ಕುರಿತು ವಿವರಿಸಿ, ಈ ಶಿಕ್ಷಣ ನೀತಿಯು ಎಲ್ಲಾ ವಯೋಮಾನ, ಎಲ್ಲಾ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಸಿದ್ದಪಡಿಸಲಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಲಿದೆ ಎಂದು ತಿಳಿಸಿದರು.

ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಮಗನ ವಿರುದ್ಧವೇ ಸುಫಾರಿ

ಹಾಸನ: ತಂದೆಯ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಮೂರು ವರ್ಷಗಳಿಂದ ಮನೆಯಿಂದ ಹೊರ ಹಾಕಲ್ಪಟ್ಟಿದ್ದ ಯುವಕನೊಬ್ಬ, ಇದೀಗ ತಂದೆಯ ಹಳೆಯ ಸೇಡಿನಿಂದಾಗಿ ಶೂಟೌಟ್ ಗೆ ಬಲಿಯಾಗಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ಕಳೆದ ರಾತ್ರಿ ನಡೆದಿದೆ.

ತಾಲೂಕಿನ ಬೇಡಿಗನ ಹಳ್ಳಿ ಗ್ರಾಮದ ಪುನೀತ್(25), ಹತ್ಯೆಯಾದ ಯುವಕ. ಮಗನನ್ನು ತನ್ನ ಪತಿಯೇ ಸುಪಾರಿಕೊಟ್ಟು ಕೊಲೆ ಮಾಡಿಸಿದ್ದಾನೆ ಎಂದು ಮೃತನ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಇದನ್ನು ಆಧರಿಸಿ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪುನೀತ್ ತಂದೆ ಹೇಮಂತ್ ಮದುವೆಯಾಗಿ ಹಲವು ದಶಕ ಕಳೆದಿದ್ದು, ಬೆಳೆದ ಮಕ್ಕಳಿದ್ದರೂ, ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಈ ಬಗ್ಗೆ ಪುನೀತ್ ಪ್ರಶ್ನೆ ಮಾಡಿದ್ದಕ್ಕೆ ಹೇಮಂತ್ ಮಗನನ್ನು ಮೂರು ವರ್ಷಗಳ ಹಿಂದೆಯೇ ಮನೆಯಿಂದ ಹೊರ ಹಾಕಿದ್ದ. ನಂತರ ಕೆಲ ದಿನ ಪ್ರತ್ಯೇಕವಾಗಿದ್ದ ಪುನೀತ್, ಬಳಿಕ ಬೆಂಗಳೂರಿಗೆ ಹೋಗಿ ಲಾಕ್ಡೌನ್ ಹಿನ್ನೆಲೆಯಲ್ಲಿ ಊರಿಗೆ ಮರಳಿದ್ದ. ಈ ನಡುವೆ ಹೇಮಂತ್ ಪತ್ನಿ ಯಶೋಧ ಪುನೀತ್ ಪರ ನಿಂತಿದ್ದರಿಂದ ಆಕೆಯನ್ನೂ ಹೇಮಂತ್ ದೂರ ಮಾಡಿದ್ದ. ಯಶೋಧ ಮತ್ತು ಪುನೀತ್ ಬೇಡಿಗನಹಳ್ಳಿಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು.

ಹೇಮಂತ್ ಮತ್ತು ಇನ್ನೊಬ್ಬ ಮಗ ಪ್ರಶಾಂತ್ ಹೊಸೂರು ಎಂಬ ಗ್ರಾಮದಲ್ಲಿ ವಾಸವಿದ್ದರು. ಈ ನಡುವೆ ಹೇಮಂತ್ ಪತ್ನಿಗೆ ಯಾವುದೇ ಜೀವನಾಂಶ ನೀಡಿರಲಿಲ್ಲ.
ಹೀಗಿರುವಾಗ ತಂದೆಯ ತೋಟದಲ್ಲಿ ಕೆಲ ದಿನಗಳ ಹಿಂದೆ ಪುನೀತ್ ತೆಂಗಿನಕಾಯಿ ಕೆಡವಿಸಿದ್ದ. ಇದರಿಂದ ಕೆಂಡಾಮಂಡಲನಾದ ಪತಿ ಹೇಮಂತ್, ಹಳೆ ಜಿದ್ದಿನ ಹಿನ್ನೆಲೆಯಲ್ಲಿ ಸುಪಾರಿಕೊಟ್ಟು ಕೊಲೆ ಮಾಡಿಸಿದ್ದಾನೆ ಎಂಬುದು ಯಶೋಧಮ್ಮಳ ಗಂಭೀರ ಆರೋಪವಾಗಿದೆ.

ಕನ್ನಡಿಗರೆಂದರೆ ಸಾಧುಂಗೆ ಸಾಧು, ಮಾಧುರ್ಯಂಗೆ ಮಾಧುರ್ಯನ್: ಎಚ್ಡಿಕೆ

ಬೆಳಗಾವಿ: ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಟಾಪನೆಗೆ ವಿರೋಧಿಸಿ ಮರಾಠಿ ಭಾಷಿಗರು ದಾಂಧಲೆ ನಡೆಸಿದ್ದು ಅಕ್ಷಮ್ಯ. ನಮ್ಮ ನೆಲದಲ್ಲಿ ಅಪ್ರತಿಮ ಹೋರಾಟಗಾರ ರಾಯಣ್ಣನ ಪ್ರತಿಮೆ ಸ್ಥಾಪನೆಗೆ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ ಅಂತಾ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಎಂಇಎಸ್, ಶಿವಸೇನೆ ಅಥವಾ ಮತ್ಯಾರೇ ಆಗಲಿ ನಮ್ಮ ನಾಡಿನ ಹೆಮ್ಮೆಯ ವೀರಪುತ್ರ ಸಂಗೊಳ್ಳಿ ರಾಯಣ್ಣನಿಗೆ ಅಪಮಾನ ಮಾಡಿದರೆ ಕನ್ನಡಿಗರ ಸಹನೆ ಪರೀಕ್ಷಿಸಿದಂತೆ. ಇಂತಹ ಉದ್ಧಟತನಗಳನ್ನು ಕನ್ನಡಿಗರು ಸಹಿಸುವುದಿಲ್ಲ. ಸಂಗೊಳ್ಳಿ ರಾಯಣ್ಣ ನಮ್ಮ ನಾಡಿನ ಹೆಮ್ಮೆ. ಅವರ ಪ್ರತಿಮೆ ಸ್ಥಾಪನೆಗೆ ವಿರೋಧಿಸುವುದು ಕನ್ನಡಿಗರ ಕೆಚ್ಚೆದೆಯ ಸ್ವಾಭಿಮಾನ ಕೆಣಕಿದಂತೆ. ನಾಡಿನ ವೀರಪುತ್ರ ಮತ್ತು ವನಿತೆಯರ ವಿರುದ್ಧ ನಮ್ಮ ನೆಲದಲ್ಲಿ ತಗಾದೆ ತೆಗೆದರೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಮ್ಮ ನಾಡಿನ ನೆಲ-ಜಲ, ಭಾಷೆ ಮತ್ತು ಗಡಿ ವಿಷಯದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ. ಈ ನೆಲದ ಅಸ್ಮಿತೆಗೆ ಭಂಗ ತರುವವರನ್ನು ಹೆಡೆಮುರಿ ಕಟ್ಟುವುದು ಸ್ವಾಭಿಮಾನಿ ಕನ್ನಡಿಗರ ರಕ್ತದಲ್ಲೇ ಇದೆ.
ಕನ್ನಡಿಗರೆಂದರೆ –
ಸಾಧುಂಗೆ ಸಾಧು, ಮಾಧುರ್ಯಂಗೆ ಮಾಧುರ್ಯನ್, ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್

ಬಾಡಿಗೆ ಕಟ್ಟಡಗಳಲ್ಲಿರುವ ಸರ್ಕಾರಿ ಕಚೇರಿಗಳಿಗಾಗಿ 25 ಮಹಡಿಗಳ ಟ್ವಿನ್ ಟವರ್ ನಿರ್ಮಾಣ : ಗೋವಿಂದ ಕಾರಜೋಳ

ಬೆಂಗಳೂರು. ಆ. 27: ಬೆಂಗಳೂರು ನಗರದಲ್ಲಿ ಬಾಡಿಗೆ ಕಟ್ಟಡಗಳಲ್ಲಿರುವ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಆನಂದ್ ರಾವ್ ಸರ್ಕಲ್ ಬಳಿ 25 ಮಹಡಿಗಳ ಟ್ವಿನ್ ಟವರ್ ನಿರ್ಮಿಸಲು ಪ್ರಸ್ತಾವನೆಯನ್ನು ಸಿದ್ದಪಡಿಪಡಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು.

ವಿಧಾನಸೌಧದಲ್ಲಿಂದು ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಈ ಪ್ರಸ್ತಾವನೆಯ ಪ್ರಾತ್ಯಕ್ಷಿಕೆಯ ಮೂಲಕ ಚರ್ಚಿಸಿದ ಅವರು, ರಾಷ್ಟ್ರೀಯ ಕಟ್ಟಡ ನಿರ್ಮಾಣ ನಿಗಮ(ಎನ್‍ಬಿಸಿಸಿ)ವು ಪ್ರಸ್ತಾವನೆಯನ್ನು ಸಿದ್ದಪಡಿಸಿದೆ. ಎನ್ ಬಿಸಿಸಿಯು ಡಿಪಿಎಆರ್ ಅನ್ನ ಸಿದ್ದಪಡಿಸಲಿದೆ. ಪ್ರಸ್ತುತವಾಗಿ ಸಿದ್ದಪಡಿಸಿರುವ ಪ್ರಸ್ತಾವನೆಯು ಎಫ್ ಎ ಆರ್ 2.5 ಅನುಪಾತದಲ್ಲಿದೆ. ಆ ಪ್ರದೇಶದಲ್ಲಿ ಮೆಟ್ರೋ ಕಾಮಗಾರಿಗಳು ಎಫ್ ಎ ಆರ್ 4.0 ಅನುಪಾತದಲ್ಲಿರುವುದರಿಂದ ಅದೇ ಮಾದರಿಯಲ್ಲಿ ಟ್ವಿನ್ ಟವರ್ ಅನ್ನು ನಿರ್ಮಿಸಬೇಕಿದೆ. ಈ ಪ್ರಸ್ತಾವನೆಯನ್ನು ಎಫ್‍ಎ ಆರ್ 4.0 ಅನುಪಾತದೊಂದಿಗೆ ಮರುವಿನ್ಯಾಸಗಳಿಸುವಂತೆ ಸೂಚಿಸಿದರು.

ಒಡಂಬಡಿಕೆ ಕರಡು ಪ್ರತಿಯನ್ನು ಸಿದ್ದಪಡಿಸಿ ಆರ್ಥಿಕ ಇಲಾಖೆ ಹಾಗೂ ಕಾನೂನು ಇಲಾಖೆಯ ಸಹಮತಿಯೊಂದಿಗೆ ಅನುಮೋದನೆ ಪಡೆಯಬೇಕು. ಈ ಪ್ರಸ್ತಾವನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ದಪಡಿಸಲು ಮುಂದಿನ 15 ದಿನಗಳೊಳಗೆ ಸಚಿವ ಸಂಪುಟದ ಅನುಮೋದನೆ ಪಡೆಯಲು ಕ್ರಮಕೈಗೊಳ್ಳಬೇಕು. ಒಡಂಬಡಿಕೆಯ ಕರಡು ಅನ್ನು ಸಚಿವ ಸಂಪುಟದ ಅನುಮೋದನೆ ಪಡೆಯುವಂತೆ ಕ್ರಮಕೈಗೊಳ್ಳಬೇಕು. ಈ ಟ್ವಿನ್ ಟವರ್ ನಿರ್ಮಾಣದಿಂದ ಬಾಡಿಗೆ ಕಟ್ಟಡಗಳಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಗಳು ಒಂದೇ ಸೂರಿನಡಿ ಬರಲಿದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಹಕಾರಿಯಾಗಲಿದೆ. ಇದರಿಂದ ಸಾರ್ವಜನಿಕರು ಸುಲಲಿತವಾಗಿ ಏಕಕಾಲದಲ್ಲೇ ತಮಗೆ ಅಗತ್ಯವಿರುವ ಕಚೇರಿಗಳಿಗೆ ಭೇಟಿಯಾಗಿ ಸೇವೆಯನ್ನು ಪಡೆಯಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.

ಎನ್‍ಬಿಸಿಸಿಯ ಡಿಜಿಎಂ ವೇಣುಗೋಪಾಲ್ ಹಾಗೂ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಗುರುಪ್ರಸಾದ್ ಪ್ರಸ್ತಾವನೆ ಕುರಿತು ವಿಸ್ತೃತವಾಗಿ ವಿವರಿಸಿದರು.

ಸಭೆಯಲ್ಲಿ ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯ ಅಭಿಯಂತರ ಶಿವಯೋಗಿ ಹಿರೇಮಠ, ಕಾರ್ಯನಿರ್ವಾಹಕ ಅಭಿಯಂತರ ಬಿ.ಪಿ.ಕುಮಾರ್, ಉಪಕಾರ್ಯದರ್ಶಿ ವಿಜಯ ಕುಮಾರಿ, ಡಿಸಿಎಂ ಆಪ್ತಕಾರ್ಯದರ್ಶಿ ವಿ.ಶ್ರೀನಿವಾಸ ಮತ್ತಿತರರು ಉಪಸ್ಥಿತರಿದ್ದರು.