ಪ್ರವಾಹದಿಂದ 2030 ಕೋಟಿ ರೂ ವೆಚ್ಚದ ರಸ್ತೆ, ಸೇತುವೆ ಹಾನಿ : ಗೋವಿಂದ ಕಾರಜೋಳ

ಬೆಂಗಳೂರು. ಆ.27: ರಾಜ್ಯದಲ್ಲಿ ಪ್ರವಾಹದಿಂದ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ 2032 ಕೋಟಿ ರೂ. ಮೊತ್ತದ ರಸ್ತೆ, ಸೇತುವೆ ಹಾಗೂ ಕಟ್ಟಡಗಳು ಹಾನಿಗೊಳಗಾಗಿದ್ದು, ತುರ್ತಾಗಿ ದುರಸ್ಥಿ ಕಾಮಗಾರಿಯನ್ನು ಕೈಗೊಳ್ಳಲು 478 ಕೋಟಿ ರೂ. ಅನುದಾನದ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು.

ವಿಧಾನಸೌಧದಲ್ಲಿಂದು ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರವಾಹದಿಂದ ಆಗಿರುವ ಹಾನಿ ವಿವರ, ಹಾಗೂ ತುರ್ತು ಕಾಮಗಾರಿಗಳ ಕುರಿತ ಚರ್ಚಿಸಿದ ಡಿಸಿಎಂ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಭವಿಸಿದ ಪ್ರವಾಹ, ಭೀಕರ ಮಳೆಯಿಂದಾಗಿ ಲೋಕೋಪಯೋಗಿ ಇಲಾಖೆಯ ರಸ್ತೆಗಳು, ಸೇತುವೆಗಳು, ಕಟ್ಟಡಗಳು ದುರಸ್ಥಿಗೆ ಬಂದಿರುವುದರಿಂದ ಸಾರ್ವಜನಿಕರಿಗೆ ಸಂಪರ್ಕಕ್ಕೆ ತೊಂದರೆಯಾಗಿದೆ. ಉತ್ತರ ವಲಯದಲ್ಲಿ 1437 ಕೋಟಿ, ಕೇಂದ್ರ ವಲಯದಲ್ಲಿ 135 ಕೋಟಿ, ದಕ್ಷಿಣ ವಲಯದಲ್ಲಿ 181 ಕೋಟಿ, ಈಶಾನ್ಯ ವಲಯದಲ್ಲಿ 71 ಕೋಟಿ ಹಾಗೂ ರಾಷ್ಟ್ರೀಯ ಹೆದ್ದಾರಿಯ 26 ಕೋಟಿ ರೂ. ವೆಚ್ಚದ ರಸ್ತೆ, ಸೇತುವೆ, ಕಟ್ಟಡಗಳು ಹಾನಿಗೊಳಗಾಗಿವೆ. ತುರ್ತಾಗಿ ಸಂಪರ್ಕ ಕಲ್ಪಿಸಬೇಕಾದ ಕಾಮಗಾರಿಗಳನ್ನು ಕೂಡಲೇ ಕೈಗೊಳ್ಳಬೇಕಿದೆ. ಹಾನಿ ವಿವರ ಹಾಗೂ ಪುನರ್ ನಿರ್ಮಾಣ ಕಾಮಗಾರಿಗಳ ಕುರಿತ ಸಮಗ್ರ ವಿವರವನ್ನು ರಾಜ್ಯ ವಿಪತ್ತು ನಿರ್ವಹಣಾ ಘಟಕ ಹಾಗೂ ಸಚಿವ ಸಂಪುಟ ಶಾಖೆಗೆ ಕೂಡಲೇ ಸಲ್ಲಿಸಬೇಕು. ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೊಂಡು, ಸಾರ್ವಜನಿಕ ಸಂಪರ್ಕಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಡಿಸಿಎಂ ಸೂಚಿಸಿದರು.

ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಗುರುಪ್ರಸಾದ್, ಪ್ರವಾಹದಿಂದ ಆಗಿರುವ ಹಾನಿ ಹಾಗೂ ಪುನರ್ ನಿರ್ಮಾಣ ಕಾಮಗಾರಿಗಳ ವಿವರವನ್ನು ವಿಸೃತವಾಗಿ ವಿವರಿಸಿದರು. ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯಅಭಿಯಂತರರಾದ ಶಿವಯೋಗಿ ಹಿರೇಮಠ, ಕಾರ್ಯನಿರ್ವಹಕ ಅಭಿಯಂತರರಾದ ಜಿ.ಪಿ.ಕುಮಾರ್, ಉಪಕಾರ್ಯದರ್ಶಿ ವಿಜಯ ಕುಮಾರಿ, ಡಿಸಿಎಂ ಆಪ್ತಕಾರ್ಯದರ್ಶಿ ವಿ.ಶ್ರೀನಿವಾಸ ಮತ್ತಿತರರು ಉಪಸ್ಥಿತರಿದ್ದರು.

ಮೇಕೆದಾಟು ಯೋಜನೆ ತ್ವರಿತ ಜಾರಿಗೆ ಕ್ರಮ:ಡಿಸಿಎಂ

ಬೆಂಗಳೂರು:ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಬಳಿ ಸಮತೋಲನ/ ಶೇಖರಣಾ ಜಲಾಶಯ ನಿರ್ಮಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಈ ಸಂಬಂಧ ಕೇಂದ್ರ ಸರ್ಕಾರದ ಜತೆ ತ್ವರಿತವಾಗಿ ಮಾತುಕತೆ ನಡೆಸಲಾಗುವುದು ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಬುಧವಾರ ಇಲ್ಲಿ ಹೇಳಿದರು.

ಮೇಕೆದಾಟು ಯೋಜನೆ ಜಾರಿ ಸಂಬಂಧ ಎದುರಾಗಿರುವ ಸಮಸ್ಯೆಗಳ ಕುರಿತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಜತೆ ಬುಧವಾರ ಸಭೆ ನಡೆಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಮುಂದಿನ ದಿನಗಳಲ್ಲಿ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಕೊರತೆ ಎದುರಾಗಬಾರದು ಎನ್ನುವ ಪ್ರಮುಖ ಉದ್ದೇಶವೂ ಈ ಯೋಜನೆ ಹಿಂದೆ ಇದೆ. ಈ ವಿಷಯವನ್ನು ಕೇಂದ್ರ ಜಲಶಕ್ತಿ ಸಚಿವಾಲಯ ಮತ್ತು ಕೇಂದ್ರ ಜಲ ಆಯೋಗಕ್ಕೂ ಮನವರಿಕೆ ಮಾಡಿಕೊಡಲಾಗುವುದು. ಈ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಈಗಾಗಲೇ ಎರಡು ಬಾರಿ ಕೇಂದ್ರ ಸಚಿವರ ಜತೆಗೂ ಮಾತುಕತೆ ನಡೆಸಿದ್ದು, ಆದಷ್ಟು ಬೇಗ ಒಪ್ಪಿಗೆ ಸಿಗುವ ವಿಶ್ವಾಸ ಇದೆ ಎಂದು ಅವರು ಹೇಳಿದರು.

ಸಮಗ್ರ ಯೋಜನಾ ವರದಿಯ ಪರಿಶೀಲನೆ ಕೇಂದ್ರ ಜಲ ಆಯೋಗದ ಮುಂದೆ ಇದೆ. ಅದನ್ನು ತ್ವರಿತವಾಗಿ ಮಾಡಿ ಮುಗಿಸುವಂತೆಯೂ ಆಯೋಗವನ್ನು ಕೋರಲಾಗುವುದು. ಹಾಗೆಯೇ ಅರಣ್ಯ ಮತ್ತು ಪರಿಸರ ಸಚಿವಾಲಯದ ಒಪ್ಪಿಗೆ ಕೂಡ ಬೇಕಿದ್ದು ಎಲ್ಲವನ್ನೂ ತ್ವರಿತವಾಗಿ ಪಡೆಯಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.

ಸುಪ್ರೀಂಕೋರ್ಟ್‌ ಆದೇಶದ ಪ್ರಕಾರ ತಮಿಳುನಾಡಿಗೆ ನೀರು ಬಿಡುವುದಕ್ಕೂ ಇದು ಹೆಚ್ಚು ಅನುಕೂಲ. ಹಾಗೆಯೇ 400 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಬಹುದು. ಒಟ್ಟಾರೆ ಈ ಯೋಜನೆಗೆ ಒಂಬತ್ತು ಸಾವಿರ ಕೋಟಿ ಖರ್ಚಾಗುವ ಅಂದಾಜು ಮಾಡಿದ್ದು, ಕಾವೇರಿ ಅಚ್ಚುಕಟ್ಟು ಪ್ರದೇಶದ ರಾಜ್ಯಗಳಿಗೂ ಹೆಚ್ಚು ಅನುಕೂಲ ಆಗಲಿದೆ ಎಂದು ಅವರು ಹೇಳಿದರು.

ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶ ಜಯಪ್ರಕಾಶ್‌ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಅಕ್ಟೋಬರ್ ನಿಂದ ಪದವಿ ತರಗತಿ ಆರಂಭ ಸೆಪ್ಟೆಂಬರ್ 1ರಿಂದಲೇ ಆನ್ ಲೈನ್ ತರಗತಿ: ಡಿಸಿಎಂ

ಬೆಂಗಳೂರು: ಸೆಪ್ಟೆಂಬರ್ 1ರಿಂದಲೇ ಪದವಿ ಕಾಲೇಜುಗಳ ಶೈಕ್ಷಣಿಕ ವರ್ಷವನ್ನು ಆನ್ ಲೈನ್ ಮೂಲಕವೇ ಪೂರ್ಣ ಪ್ರಮಾಣದಲ್ಲಿ ಆರಂಭ ಮಾಡಲಾಗುತ್ತಿದ್ದು, ಅಕ್ಟೋಬರ್ ನಿಂದ ನೇರ (ಆಫ್‌ಲೈನ್) ತರಗತಿಗಳು ಶುರುವಾಗಲಿವೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಪ್ರಕಟಿಸಿದರು.

ಬೆಂಗಳೂರಿನ ಸುಬ್ರಹ್ಮಣ್ಯ ನಗರದ ವಾರ್ಡ್ ಸಂಖ್ಯೆ 66ರಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರ ಸರಕಾರದಿಂದ ನೇರವಾಗಿ ತರಗತಿಗಳನ್ನು ಆರಂಭ ಮಾಡುವುದರ ಬಗ್ಗೆ ಮಾರ್ಗಸೂಚಿ ಬರಬೇಕಿದೆ ಮತ್ತೂ ಸೆಪ್ಟೆಂಬರ್ ತಿಂಗಳಲ್ಲಿ ಕೆಲ ಪದವಿ ಪರೀಕ್ಷೆಗಳು ನಡೆಯಲಿವೆ. ಹೀಗಾಗಿ ಸರಕಾರವೂ ಮುಂದಿನ ತಿಂಗಳಿಂದ ಅನ್ ಲೈನ್ ಮೂಲಕವೇ ಎಲ್ಲ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರ್ಣ ಪ್ರಮಾಣದಲ್ಲಿ ಚಾಲನೆ ನೀಡಲು ನಿರ್ಧರಿಸಿದೆ. ಜತೆಗೆ, ಅಕ್ಟೋಬರ್ ತಿಂಗಳಿಂದಲೇ ಎಲ್ಲ ಕಾಲೇಜುಗಳನ್ನು ಆರಂಭಿಸಲಾಗುವುದು. ವಿದ್ಯಾರ್ಥಿಗಳು ಕೂಡ ತರಗತಿಗಳಿಗೆ ಹಾಜರಾಗಬೇಕಾಗುತ್ತದೆ ಎಂದರು.

ತರಗತಿಗಳನ್ನು ಆರಂಭಿಸುವ ಬಗ್ಗೆ ಈಗಾಗಲೇ ಯುಜಿಸಿ ಮಾರ್ಗಸೂಚಿಯಂತೆ ರಾಜ್ಯ ಸರಕಾರ ಎಲ್ಲ ರೀತಿಯ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೇಂದ್ರ ಸರಕಾರದ ಆದೇಶ ಬರುತ್ತಿದ್ದಂತೆಯೇ ಈ ನಿಟ್ಟಿನಲ್ಲಿ ರಾಜ್ಯವು ಕಾರ್ಯೋನ್ಮುಖವಾಗಲಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಅಂತಿಮ ವರ್ಷದ ಪರೀಕ್ಷೆ:
ಶೈಕ್ಷಣಿಕ ವರ್ಷದ ಆರಂಭದ ಜತೆಯಲ್ಲಿಯೇ ಅಂತಿಮ ವರ್ಷದಲ್ಲಿರುವ ಎಲ್ಲ ಪದವಿ, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಜತೆಗೆ, ಬ್ಯಾಕ್ ಲಾಗ್ ಉಳಿಸಿಕೊಂಡಿರುವ ವಿದ್ಯಾರ್ಥಿಗಳಿಗೂ ಪರೀಕ್ಷೆ ನಡೆಸಲಾಗುವುದು. ಯಾವುದೇ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ಉಂಟಾಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಡಿಸಿಎಂ ಹೇಳಿದರು.

ನೀಟ್ ಪರೀಕ್ಷೆಗೆ ಅಡ್ಡಿ ಬೇಡ:
ಸರಕಾರವು ರಾಜ್ಯದಲ್ಲಿ 1.94 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಸಿಇಟಿ ಪರೀಕ್ಷೆ ಬರೆದಿದೆ. ಅದರಲ್ಲೂ 63 ಮಂದಿ ಕೋವಿಡ್ ಪಾಸಿಟೀವ್ ವಿದ್ಯಾರ್ಥಿಗಳು ಕೂಡ ಆತ್ಮಸ್ಥೈರ್ಯದಿಂದ ಪರೀಕ್ಷೆ ಬರೆದು ಉತ್ತಮ ರಾಂಕ್ ಪಡೆದಿದ್ದಾರೆ. ವಾಸ್ತವ ಹೀಗಿರಬೇಕಾದರೆ ಕೆಲವರು ನೀಟ್ ಪರೀಕ್ಷೆ ಯಾಕೆ ಬೇಡ ಅನ್ನುತ್ತಿದ್ದಾರೋ ಗೊತ್ತಿಲ್ಲ. ಅಂಥವರಿಗೆ ಒಂದು ಕಿವಿಮಾತು ಹೇಳಲು ಇಷ್ಟಪಡುತ್ತೇನೆ, ಯಾರೂ ಕೂಡ ಮಕ್ಕಳ ಭವಿಷ್ಯದ ಜತೆ ಚೆಲ್ಲಾಟ ಆಡಬಾರದು. ಇದರ ಹಿಂದೆ ಏನೋ ಹುನ್ನಾರ ಇದ್ದಹಾಗಿದೆ, ಮೆರಿಟ್ ಮೂಲಕ ಸೀಟು ಸಿಗಬಾರದು, ವ್ಯವಸ್ಥಿತವಾಗಿ ಸೀಟು ಹಂಚಿಕೆಯಾಗಬಾರದು ದುರುದ್ದೇಶ ಇದ್ದಂತೆ ಕಾಣುತ್ತಿದೆ. ಯಾವುದೊ ಕಾಣದ ಕೈಗಳು ಇದರ ಹಿಂದಿವೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮೊದಲಿನಿಂದಲೂ ನೀಟ್ ಪರೀಕ್ಷೆಗೆ ಅಡ್ಡಿಪಡಿಸಲು ಯತ್ನಿಸುತ್ತಲೇ ಇವೆ. ಇದರ ಹಿಂದೆ ದೊಡ್ಡ ಜಾಲವೇ ಇದೆ. ಹಲವಾರು ವರ್ಷಗಳಿಂದ ಈ ದುಷ್ಪ್ರಯತ್ನಗಳನ್ನು ಮಾಡುತ್ತಾ ಬರಲಾಗುತ್ತಿದೆ. ಆದರೆ, ಆವರ ಉದ್ದೇಶ ಈಡೇರುತ್ತಿಲ್ಲ. ಹಾಗೆ ನೋಡಿದರೆ, ನೀಟ್ ಪರೀಕ್ಷೆ ಅತ್ಯುತ್ತಮವಾಗಿದೆ. ಒಂದು ಪರೀಕ್ಷೆ ಮೂಲಕ ದೇಶ ವಿವಿಧೆಡೆ ಪ್ರವೇಶಾತಿ ಪಡೆಯುವ ಪದ್ಧತಿ ಇದಾಗಿದೆ. ಈ ಪರೀಕ್ಷೆ ಆಗಲೇಬೇಕಿದೆ ಎಂದು ಡಾ. ಅಶ್ವತ್ಥನಾರಾಯಣ ಒತ್ತಿ ಹೇಳಿದರು.

ನೀಟ್ ವಿರೋಧ ಮಾಡುತ್ತಿರುವವರಿಗೆ ಖಂಡಿತವಾಗಿಯೂ ದುರುದ್ದೇಶವಿದೆ. ಆದರೆ ರಾಜ್ಯ ಸರಕಾರ ಈ ಪರೀಕ್ಷೆಗೆ ಬೇಕಾದ ಎಲ್ಲ ಸಹಕಾರ ನೀಡುತ್ತದೆ ಹಾಗೂ ನಾವೂ ಪರೀಕ್ಷೆಗೆ ಸನ್ನದ್ಧರಾಗಿದ್ದೇವೆ ಎಂದು ಅವರು ಸ್ಪಷ್ಟವಾಗಿ ಹೇಳಿದರು.

ಬಿಬಿಎಂಪಿ ಸದಸ್ಯ ಮಂಜುನಾಥ್ ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಬೆಂಗಳೂರು ಟೆಕ್‌ ಸಮಿಟ್‌ಗೆ ಸಿದ್ಧತೆ ಬಗ್ಗೆ ಚರ್ಚೆ: ಪ್ರತಿ ಕ್ಷೇತ್ರಕ್ಕೂ ತಂತ್ರಜ್ಞಾನ ವಿಸ್ತರಣೆ ಎಂದ ಡಿಸಿಎಂ

ಬೆಂಗಳೂರು: ರಾಜ್ಯದ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವ ತಂತ್ರಜ್ಞಾನವನ್ನು ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ವಿಸ್ತರಿಸಲು ಸರಕಾರ ಸ್ಪಷ್ಟ ಗುರಿಯೊಂದಿಗೆ ಸಾಗುತ್ತಿದೆ ಎಂದು ಐಟಿ-ಬಿಟಿ ಮತ್ತು ತಂತ್ರಜ್ಞಾನ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ʼಬೆಂಗಳೂರು ಟೆಕ್‌ ಸಮಿಟ್‌ʼ (ಬಿಟಿಎಸ್) ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಪ್ರತಿನಿಧಿಗಳ ಜತೆ ವರ್ಚುವಲ್‌ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೋವಿಡ್-19 ಸಂಕಷ್ಟ ಕಾಲದಲ್ಲಿ ದೇಶದ 130 ಕೋಟಿ ಜನರನ್ನು ಕೆಲವೇ ಸೆಕೆಂಡುಗಳಲ್ಲಿ ಕೇಂದ್ರ, ರಾಜ್ಯ ಸರಕಾರಗಳು ತಲುಪಿದವು. ಅರ್ಹ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಹಣ ಜಮೆ ಆಯಿತು. ಎಲ್ಲವೂ ವೇಗವಾಗಿ, ಪಾರದರ್ಶಕವಾಗಿ ನಡೆಯಿತು. ಕಳೆದ ಎರಡು ದಿನಗಳ ಹಿಂದೆ ಆದಾಯ ತೆರಿಗೆ ಇಲಾಖೆಯಲ್ಲಿ ಫೇಸ್ ಲೆಸ್ ತಪಾಸಣೆಗೂ ಚಾಲನೆ ನೀಡಲಾಗಿದೆ. ತಂತ್ರಜ್ಞಾನದ ಶಕ್ತಿ ಏನೆಂಬುದು ಇದರಿಂದ ನಮಗೆ ವೇದ್ಯವಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.

ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ರಾಜ್ಯವೂ ಮುಂಚೂಣಿಯಲ್ಲಿದೆ. ಅದು ಮತ್ತಷ್ಟು ಗಟ್ಟಿಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಟೆಕ್‌ ಸಮಿಟ್‌ ದೊಡ್ಡ ಕಾಣಿಕೆ ನೀಡಬೇಕು ಎಂಬುದು ಸರಕಾರದ ಅಭಿಲಾಶೆ. ನವೆಂಬರ್ 19ರಿಂದ 21ರವರೆಗೆ ಬಿಟಿಎಸ್ ನಡೆಸಲು ತೀರ್ಮಾನಿಸಿದ್ದು ರೂಪುರೇಷೆ ಬಗ್ಗೆ ಚರ್ಚಿಸಲಾಗುವುದು ಎಂದರು.

‘ಈಗಾಗಲೇ 220 ಶತಕೋಟಿ ಡಾಲರ್‌ ಜಿಡಿಪಿಯನ್ನು ಹೊಂದಿರುವ ರಾಜ್ಯವು, 500 ಶತಕೋಟಿ ಡಾಲರ್‌ ಜಿಡಿಪಿಯತ್ತ ಮುನ್ನಡೆಯುತ್ತಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನ ಕ್ಷೇತ್ರದ ಕೊಡುಗೆ ಬಹಳ ಮಹತ್ವದ್ದು’ ಎಂದು ಡಾ. ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

ತಂತ್ರಜ್ಞಾನಾಧಾರಿತ ಸುಧಾರಣೆ:

ರಾಜ್ಯದಲ್ಲಿ ತಂತ್ರಜ್ಞಾನಾಧಾರಿತ ಸುಧಾರಣೆಗಳನ್ನು ತರುವುದು ಇವತ್ತಿನ ಅಗತ್ಯವಾಗಿದೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇದು ದೇಶಾದ್ಯಂತ ಆಗುತ್ತಿದೆ. ಕರ್ನಾಟಕವೂ ಮುಂಚೂಣಿಯಲ್ಲಿದೆ. ಕರ್ನಾಟಕವು ತಂತ್ರಜ್ಞಾನದ ಸಮೃದ್ಧ ನೆಲವಾಗಿರುವ ಕಾರಣ ಈ ಗುರಿಯನ್ನು ಸಾಧಿಸುವುದು ಸುಲಭವೆಂದು ನನ್ನ ಭಾವನೆ ಎಂದ ಡಿಸಿಎಂ, ರಾಜ್ಯದ ಪ್ರತಿಮೂಲೆಯನ್ನು ಟೆಕ್ನಾಲಜಿ ತಲುಪಬೇಕು ಎಂದು ಕರೆ ನೀಡಿದರು.

ಟೆಕ್ನಾಲಜಿ ಎಂಬುದು ಇಂದು ಕೇವಲ ನಗರಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರತಿ ಹಳ್ಳಿಯ ಮೂಲೆ ಮೂಲೆಗೂ ಅದು ತಲುಪಬೇಕಿದೆ. ಮುಖ್ಯವಾಗಿ ಕೃಷಿ, ಸೇವಾ ವಲಯ ಕೇತ್ರಗಳಲ್ಲಿ ತಂತ್ರಜ್ಞಾನವೂ ದೊಡ್ಡ ಅದ್ಭುತಗಳನ್ನೇ ಸೃಷ್ಟಿ ಮಾಡುತ್ತಿದೆ. ಭವಿಷ್ಯದಲ್ಲಿಯೂ ಇದನ್ನೇ ಅತ್ಯಂತ ಪ್ರಮುಖ ವಿಷಯವಾಗಿ ಸರಕಾರವೂ ಆದ್ಯತೆಯ ಮೇರೆಗೆ ಕೆಲಸ ಮಾಡಲಿದೆ. ಈ ನಿಟ್ಟಿನಲ್ಲಿ ರಾಜ್ಯದ ತಂತ್ರಜ್ಞಾನ ದಿಗ್ಗಜರೆಲ್ಲ ಸರಕಾರಕ್ಕೆ ಹೆಗಲು ಕೊಡಬೇಕಿದೆ ಎಂದು ಉಪ ಮುಖ್ಯಮಂತ್ರಿ ವಿನಂತಿ ಮಾಡಿದರು.

ಸ್ಪಷ್ಟ ಗುರಿ, ಕರಾರುವಕ್ಕಾದ ಕಾರ್ಯಕ್ರಮ:

ನಮ್ಮ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ಈಗಾಗಲೇ ತಂತ್ರಜ್ಞಾನ ಕ್ಷೇತ್ರಕ್ಕೆ ಪೂರಕವಾದ ಅನೇಕ ಸುಧಾರಣೆ ಕ್ರಮಗಳನ್ನು ಅನುಷ್ಟಾನಕ್ಕೆ ತರಲಾಗಿದೆ. ಜತೆಗೆ, ಕೈಗಾರಿಕೆ- ವಾಣಿಜ್ಯ ಕ್ಷೇತ್ರಗಳ ಬೆಳವಣಿಗೆಗೆ ಶಕ್ತಿ ತುಂಬುವ ಅನೇಕ ಮಹತ್ವದ ಸುಧಾರಣಾ ಕ್ರಮಗಳನ್ನು ಸರಕಾರ ಕೈಗೊಂಡಿದೆ. ಇದರಲ್ಲಿ ಭೂ ಸುಧಾರಣಾ ಕಾಯ್ದೆ ತುಂಬಾ ಪ್ರಮುಖವಾದದ್ದು. ಸರಕಾರವು ಸ್ಪಷ್ಟ ಗುರಿಯೊಂದಿಗೆ ಕರಾರುವಕ್ಕಾದ ದೀರ್ಘಕಾಲೀನ ಪ್ರಭಾವ ಬೀರುವ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

ಬಿಟಿ ಸ್ಟಾರ್ಟ್ ಅಪ್ ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಶಾ, ಐಟಿ ಸ್ಟಾರ್ಟ್ ಅಪ್ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣ, ಸ್ಟಾರ್ಟ್ ಅಪ್‌ ವಿಷನ್‌ ಗ್ರೂಪ್‌ ಅಧ್ಯಕ್ಷ ಪ್ರಶಾಂತ್‌ ಪ್ರಕಾಶ್‌, ಐಟಿಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಬೆಂಗಳೂರು ಟೆಕ್‌ ಸಮಿಟ್‌ ಸಿಇಒ ಪಿ.ವಿ. ಮೋಹನ್‌ ರಾಮ್‌, ಐಟಿ-ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್‌ ಮುಂತಾದವರು ಈ ವರ್ಚುವಲ್‌ ಸಂವಾದದಲ್ಲಿ ಭಾಗಿಯಾಗಿದ್ದರು.

ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಲೀಗಲ್ ಅಡ್ವೈಸರ್!

ಬಳ್ಳಾರಿ: ಬ್ಯಾಂಕ್ ಒಂದರಲ್ಲಿ ಲೀಗಲ್ ಅಡ್ವವೈಸರ್ ಆಗಿದ್ದ ಲಾಯರ್ ವಿಷ ಸೇವಿಸಿ ಆತ್ಮಹತ್ಯೆ‌ ಮಾಡಿಕೊಂಡಿದ್ದಾರೆ. ಸೆಲ್ಫಿ ವೀಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದು, ಹಿರಿಯ ಅಧಿಕಾರಿಗಳ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ.

ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಕ್ ನಲ್ಲಿ ಲೀಗಲ್ ಅಡವೈಸರ್ ಆಗಿದ್ದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ಮೂಲದ ಮಹೇಶ್(೨೮) ಆತ್ಮಹತ್ಯಗೆ ಶರಣಾದ ವ್ಯಕ್ತಿ.
ಹೊಸಪೇಟೆ ಬ್ರಾಂಚ್ ನಲ್ಲಿ ಮಹೇಶ್ ಕೆಲಸ ಮಾಡುತಿದ್ದು, ಮೇಲಾಧಿಕಾರಿಗಳ ಕಿರುಕುಳ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಅನ್ನೊ ಆರೋಪ ಕೇಳಿ ಬಂದಿದೆ.

ಸೂಸೈಡ್ ಮಾಡಿಕೊಂಡ ಮಹೇಶ್ ಡೆತ್ ನೋಟ್ ಲಭ್ಯವಾಗಿದೆ. ಮೇಲಾಧಿಲಾರಿಗಳ ಕಿರುಕುಳಕ್ಕೆ ಸೂಸೈಡ್‌ ಮಾಡಿಕೊಂಡಿರೋದಾಗಿ ಮಹೇಶ್ ಪತ್ರದಲ್ಲಿ ಬರೆದಿದ್ದಾರೆ. ದಾಖಲೆಗಳು ಸರಿಯಾಗಿ ಇಲ್ಲದಿದ್ದರೂ ಲೋನ್ ಕೊಡಲು ಅಧಿಕಾರಿಗಳು ಒತ್ತಾಯ ಮಾಡುತ್ತಿದ್ದರು ಎಂದು ಆರೊಪಿಸಿದ್ದಾರೆ.

ಸಾಯೋವರೆಗೂ ಕಾಂಗ್ರೆಸ್ ಪಕ್ಷದಲ್ಲೇ ಇರ್ತೇನೆ: ಮೊಯ್ಲಿ ಭಾವುಕ ನುಡಿ

ಬೆಂಗಳೂರು: ನಾನು ಸಾಯುವವರೆಗೂ ಕಾಂಗ್ರೆಸ್ ನಲ್ಲೇ ಇರುತ್ತೇನೆ. ಬಿಜೆಪಿಯ ಪ್ರಶ್ನೆಯೇ ಇಲ್ಲ, ನಾನು ಕಾಂಗ್ರೆಸ್ ಗೆ ನಿಷ್ಠನಾಗಿದ್ದೇನೆ, ಕಾಂಗ್ರೆಸ್ ಪಕ್ಷದಲ್ಲೇ ಸಾಯೋವರೆಗೂ ಇರುತ್ತೇವೆ. ಮೋದಿಯವರಿಗೆ ಕನಸು ಮನಸಿನಲ್ಲೂ ಬೆಂಬಲ ಕೊಟ್ಟಿಲ್ಲ ಅಂತಾ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಭಾವುಕ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ವೀರಪ್ಪ ಮೊಯ್ಲಿ, ನಾನು ಸಹಿ ಮಾಡಿದ ಪತ್ರದಲ್ಲಿ ನಾವು ನಾಯಕತ್ವ ಪ್ರಶ್ನೆ ಮಾಡಿಲ್ಲ. ನಾವು ನೇರವಾಗಿ ಸೋನಿಯಾ ಗಾಂಧಿ ಅವರಿಗೆ ಮಾತ್ರ ಒಂದು ಪ್ರತಿ ಪತ್ರ ಕೊಟ್ಟಿದ್ದೇವೆ. ಈ ಪತ್ರ ಲೀಕ್ ಮಾಡಿದವರು ಯಾರು..? ಈ ಪತ್ರ ಲೀಕ್ ಮಾಡಿದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷಿಣಿ ಸೋನಿಯಾ ಗಾಂಧಿಯವರು ತನಿಖೆ ಮಾಡಿಸಲಿ. ಯಾರು ಲೀಕ್ ಮಾಡಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ನಾವು ಪಕ್ಷದ ಹಿತದೃಷ್ಟಿಯಿಂದ ಪತ್ರ ಬರೆದೆವು. ಇಂದಿರಾ ಕಾಂಗ್ರೆಸ್ ಹಾಗೂ ಅರಸು ಕಾಂಗ್ರೆಸ್ ಅಂತ ಇಬ್ಬಾಗ ಆದಾಗಲೂ ಸಹ ಈಗ ಯಾರು ಕಾಂಗ್ರೆಸ್ ಗೆ ವಿಧೇಯರು ಅಂತ ಹೇಳಿಕೊಳ್ಳುತ್ತಿದ್ದಾರೋ ಅವರೆಲ್ಲ ಅರಸು ಜೊತೆ ಹೋಗಿದ್ದರು. ಆದರೆ, ನಾವೆಲ್ಲ ಇಂದಿರಾ ಗಾಂಧಿಯವರ ಜೊತೆಯೆ ನಿಂತೆವು. ಕಾಂಗ್ರೆಸ್ ನ ತತ್ವ ಸಿದ್ಧಾಂತಗಳನ್ನ ನಂಬಿ ಪಕ್ಷದಲ್ಲಿದ್ದೇವೆ. 2024ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲೇಬೇಕು. ಈಗ ಪುನರ್ ಸಂಘಟನೆಗೆ ಒಂದು ಕಮಿಟಿ ಮಾಡಲಾಗಿದೆ, ಅದನ್ನು ಸ್ವಾಗತಿಸುತ್ತೇವೆ. ಸೋನಿಯಾ ಗಾಂಧಿಯವರ ಮುಂದುವರಿಕೆ ಸ್ವಾಗತಿಸುತ್ತೇವೆ ಎಂದು ಹೇಳಿದರು.