ಅತಿವೃಷ್ಟಿ: ಹೆಚ್ಚಿನ ಪರಿಹಾರ ಕೋರಲು ಮುಂದಿನ ವಾರ ದೆಹಲಿಗೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಳಗಾವಿ, ಆ.25(ಕರ್ನಾಟಕ ವಾರ್ತೆ): ಶೀಘ್ರ ಎಲ್ಲ ಶಾಸಕರ ಸಭೆ ಕರೆದು ಅತಿವೃಷ್ಟಿಯಿಂದ ಆಗಿರುವ ಹಾನಿಗೆ ಸಮರ್ಪಕ ಪರಿಹಾರ ನೀಡಲು ಯೋಜನೆ ರೂಪಿಸಲಾಗುವುದು. ಎಲ್ಲ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಲಾಗುವುದು. ಮುಂದಿನ ವಾರ‌ ದೆಹಲಿಗೆ ಹೋಗಿ ಹೆಚ್ವಿನ ಪರಿಹಾರ ಬಿಡುಗಡೆಗೆ ಮನವಿ ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಅತಿವೃಷ್ಟಿಗೆ ಸಂಬಂಧಿಸಿದಂತೆ ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ(ಆ.25) ನಡೆದ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ಜನಪ್ರತಿನಿಧಿಗಳ ಹಾಗೂ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಕೋವಿಡ್-೧೯ ಇರುವುದರಿಂದ ಎನ್.ಡಿ‌.ಆರ್.ಎಫ್. ಅನುದಾನದಡಿ ತುರ್ತು ಅಗತ್ಯವಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಆಗಿರುವ ಹಾನಿ ಮತ್ತು ಅಗತ್ಯವಿರುವ ಅನುದಾನದ ಮಾಹಿತಿಯನ್ನು ತಕ್ಷಣ ಸರ್ಕಾರಕ್ಕೆ ಕಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರವಾಹ ನಿರ್ವಹಣೆ ಮತ್ತಿತರ ತುರ್ತು ಕೆಲಸಕ್ಕೆ ಬೆಳಗಾವಿ ಜಿಲ್ಲೆಯಲ್ಲಿ 412 ಕೋಟಿ ರೂಪಾಯಿ ಅನುದಾನ ಲಭ್ಯವಿದೆ.

ಹೆಚ್ಚಿನ ಹಣ ಬೇಕಾದರೆ ತಕ್ಷಣವೇ ಬಿಡುಗಡೆ ಮಾಡಲಾಗುವುದು.
ಜಿಲ್ಲೆಯಲ್ಲಿ ಮನೆ ನಿರ್ಮಾಣಕ್ಕೆ 174 ಕೋಟಿ ರೂಪಾಯಿ ಇದೆ. ಇದಲ್ಲದೇ ಉಳಿದಿರುವ ಅನುದಾನದಲ್ಲಿ ರಸ್ತೆ ದುರಸ್ತಿ ಮತ್ತಿತರ ಕಾಮಗಾರಿ ಕೈಗೊಳ್ಳಲು ಸೂಚನೆ ನೀಡಿದರು.

ಇದೇ ರೀತಿ ಇತರೆ ಜಿಲ್ಲೆಗಳಲ್ಲಿ ಸಾಕಷ್ಟು ಹಣ ಲಭ್ಯವಿದೆ. ಮನೆ ಕಳೆದುಕೊಂಡಿರುವ ಬೆಳಗಾವಿಯ 44156 ಫಲಾನುಭವಿಗಳಿಗೆ 488 ಕೋಟಿ ಪರಿಹಾರ ಬಿಡುಗಡೆಯಾಗಿದೆ.

ಜಿಲ್ಲೆಯಲ್ಲಿ ಆಗಿರುವ ಹಾನಿ ಮತ್ತು ಅಗತ್ಯವಿರುವ ಅನುದಾನದ ಮಾಹಿತಿಯನ್ನು ತಕ್ಷಣ ಸರ್ಕಾರಕ್ಕೆ ಕಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಳಗಾವಿ-ಧಾರವಾಡ ಸಮಸ್ಯೆಗಳನ್ನು ಗಮನಕ್ಕೆ ಬಂದಿದ್ದು, ಕೋವಿಡ್-೧೯ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಆಧರಿಸಿ ಮನೆ ಹಾಗೂ ಬೆಳೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಬೆಳಗಾವಿ-ಧಾರವಾಡ ಸಮಸ್ಯೆಗಳನ್ನು ಗಮನಕ್ಕೆ ಬಂದಿದ್ದು, ಕೋವಿಡ್-೧೯ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಆಧರಿಸಿ ಮನೆ ಹಾಗೂ ಬೆಳೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಪ್ರವಾಹ ಸ್ಥಿತಿಗತಿಯ ಬಗ್ಗೆ ಮಾತನಾಡಿದರು.
ಕಂದಾಯ ಸಚಿವರಾದ ಆರ್.ಅಶೋಕ, ಕಳೆದ ವರ್ಷದ ಮನೆಪರಿಹಾರ ನೀಡುವ ತಂತ್ರಾಂಶ ಪುನಃ ಆರಂಭಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ,ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್, ಅವರು ಪ್ರವಾಹ‌ ನಿರ್ವಹಣೆ ಮತ್ತು ಪರಿಹಾರ ಕ್ರಮಗಳ ಬಗ್ಗೆ ಮಾತನಾಡಿದರು.

ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಜಿಲ್ಲೆಯ ಇನ್ನೂ 9 ಸಾವಿರ ಮನೆಗಳನ್ನು ಪರಿಹಾರದ ಪಟ್ಟಿಗೆ ಸೇರ್ಪಡೆ ಮಾಡಿ ವಿವಿಧ ಕಂತುಗಳ ಬಿಡುಗಡೆ ಮಾಡಲು ವಿನಂತಿಸಿದರು.

ವಿಧಾನಸಭೆಯ ಉಪಸಭಾಪತಿ ಆನಂದ ಮಾಮನಿ, ಬೆಳೆವಿಮೆಯಲ್ಲಿ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ನಡುವೆ ಪ್ರತಿವರ್ಷ ವ್ಯತ್ಯಾಸ ಕಂಡುಬರುತ್ತಿದೆ. ಇದನ್ನು ಸರಿಪಡಿಸಲು ಮನವಿ ಮಾಡಿಕೊಂಡರು.

ಶಾಸಕರಾದ ಮಹಾದೇವಪ್ಪ ಯಾದವಾಡ, ಕಳೆದ ಬಾರಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಭಯ್ ಪಾಟೀಲ ಮಾತನಾಡಿ, ಬೆಳಗಾವಿ ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ 320 ಕೋಟಿ ರೂಪಾಯಿ ರಸ್ತೆ ಅಭಿವೃದ್ಧಿಗೆ ಅಗತ್ಯವಿದೆ.
ಕಳೆದ ವರ್ಷ ಹಾನಿಗೊಳಗಾದ ಮನೆಗಳ ಮರು ಸಮೀಕ್ಷೆ ನಡೆಸಿ ಲಾಗಿನ್ ಆಗಲು ಅನುಕೂಲ ಕಲ್ಪಿಸಬೇಕು.
ನಗರೋತ್ಥಾನ ಯೋಜನೆ ಅನುದಾನ ತಕ್ಷಣ ಬಿಡುಗಡೆಗೆ ಒತ್ತಾಯಿಸಿದರು.

ಮಹೇಶ್ ಕುಮಠಳ್ಳಿ, ಅಥಣಿ ಮತಕ್ಷೇತ್ರದಲ್ಲಿ ಬೆಳೆಹಾನಿ ಮತ್ತು ಮನೆ ಪರಿಹಾರ ಇನ್ನೂ ಪಾವತಿಸುವುದು ಬಾಕಿಯಿದೆ. ರಸ್ತೆಗಳು ಹಾಳಾಗಿರುವುದರಿಂದ ತುರ್ತಾಗಿ 50-60 ಕೋಟಿ ಬಿಡುಗಡೆಗೆ ಆಗ್ರಹಿಸಿದರು.

ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕೆರೆಗಳು ಹಾಗೂ ಬಾಂದಾರಗಳು ಒಡೆದಿರುವುದರಿಂದ ಬೆಳೆ ಕೂಡ ಹಾನಿಯಾಗಿದೆ. ಆದ್ದರಿಂದ ಇವುಗಳ ಶಾಶ್ವತ ದುರಸ್ತಿಗೆ ಮತ್ತು ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.

ಧಾರವಾಡ ಜಿಲ್ಲೆಯ ಶಾಸಕ ಅರವಿಂದ ಬೆಲ್ಲದ, ಮಳೆಯ ಪ್ರಮಾಣ ತಿಳಿಯಲು ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕಿದೆ ಎಂದರು.
ಹುಬ್ಬಳ್ಳಿ-ಧಾರವಾಡ ರಸ್ತೆ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಲು ಆಗ್ರಹಿಸಿದರು.

ಶಾಸಕ ಶಂಕರಪಾಟೀಲ ಮುನೇನಕೊಪ್ಪ ಹಾಗೂ ಅಮೃತ ದೇಸಾಯಿ ಅವರು, ಪ್ರತಿ ಮಳೆಗಾಲದಲ್ಲಿ ಬೆಣ್ಣಿಹಳ್ಳದಿಂದ ಉದ್ಭವಿಸುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಮನವಿ ಮಾಡಿಕೊಂಡರು.

ಶಾಸಕರಾದ ಮಹಾಂತೇಶ ಕೌಜಲಗಿ, ಮಹಾಂತೇಶ ದೊಡ್ಡಗೌಡ್ರ ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಜಿಲ್ಲೆಯಲ್ಲಿ ಅತಿವೃಷ್ಟಿ ಪರಿಸ್ಥಿತಿ ಮತ್ತು ನಿರ್ವಹಣೆಯ ಸ್ಥಿತಿಗತಿಗಳನ್ನು ವಿವರಿಸಿದರು.
ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಅತ್ಯಂತ ಮುತುವರ್ಜಿಯಿಂದ ಮಹಾರಾಷ್ಟ್ರ ಸರ್ಕಾರದ ಜತೆ ಸಮನ್ವಯ ಸಾಧಿಸಿದ್ದರಿಂದ ಪ್ರವಾಹ ನಿರ್ವಹಣೆ ಸಾಧ್ಯವಾಯಿತು.
ಪ್ರವಾಹ ನಿರ್ವಹಣೆಗೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ನಮ್ಮ ಅಧಿಕಾರಿಗಳು ಮಹಾರಾಷ್ಟ್ರದ ಅಧಿಕಾರಿಗಳ ಜತೆ ಸತತ ಸಂಪರ್ಕದಲ್ಲಿ ಇದ್ದ ಪರಿಣಾಮ ಯಾವುದೇ ತೊಂದರೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಜಿಲ್ಲೆಯಲ್ಲಿ ಬೀಜ, ಗೊಬ್ಬರ ಸಮರ್ಪಕವಾಗಿ ವಿತರಿಸಲಾಗಿದ್ದು, ಸಾಕಷ್ಟು ದಾಸ್ತಾನು ಲಭ್ಯವಿದೆ ಎಂದರು.
ಧಾರವಾಡ ಜಿಲ್ಲೆಯ ಮಾಹಿತಿಯನ್ನು ಅಲ್ಲಿನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ವಿವರಿಸಿದರು.

ಕೈಮಗ್ಗ ಮತ್ತು ಜವಳಿ ಇಲಾಖೆಯ ಸಚಿವರಾದ ಶ್ರೀಮಂತ ಪಾಟೀಲ, ಸಂಸದರಾದ ಅಣ್ಣಾ ಸಾಹೇಬ್ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ,
ಶಾಸಕರಾದ ಪಿ.ರಾಜೀವ್, ದುರ್ಯೋಧನ ಐಹೊಳೆ, ಉಮೇಶ್ ಕತ್ತಿ, ಮಹಾಂತೇಶ ಕೌಜಲಗಿ, ಶಾಸಕ ಅನಿಲ್ ಬೆನಕೆ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಎಲ್.ಅತೀಕ್, ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಹೂಡಿಕೆ ಮಾಡಲು ಆಸ್ಟ್ರೇಲಿಯಾ ಉದ್ಯಮಿಗಳ ಒಲವು,ಅವಕಾಶಗಳ ಮನವರಿಕೆ ಮಾಡಿಕೊಟ್ಟ ಡಿಸಿಎಂ

ಬೆಂಗಳೂರು: ಕರ್ನಾಟಕ ಕೈಗಾರಿಕೆ ಅಭಿವೃದ್ಧಿಗೆ ಅತ್ಯಂತ ಮಾದರಿ ರಾಜ್ಯವಾಗಿದ್ದು, ಬಂಡವಾಳ ಹೂಡಿಕೆಗೆ ಅತ್ಯಂತ ಸೂಕ್ತ ತಾಣವಾಗಿದೆ ಎಂದು ಐಟಿ-ಬಿಟಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿಎನ್‌ ಅಶ್ವತ್ಥನಾರಾಯಣ ಅವರು ಆಸ್ಟ್ರೇಲಿಯಾ ಉದ್ಯಮಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಕರ್ನಾಟಕದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಆಸ್ಟ್ರೇಲಿಯಾ ದೇಶದ ಉದ್ಯಮಿಗಳು, ಭಾರತದಲ್ಲಿನ ಆಸ್ಟ್ರೇಲಿಯಾ ರಾಯಬಾರಿ ಬಾರ್ರಿ ಒಪರಾಲ್‌ ಜತೆ ವೆಬಿನಾರ್ ಮೂಲಕ ಡಿಸಿಎಂ ಅಶ್ವತ್ಥನಾರಾಯಣ ಮಾತನಾಡಿದರು. ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಹೂಡಿಕೆಗೆ ಹೆಚ್ಚಿನ ಅವಕಾಶಗಳು ಇದ್ದು ಕರ್ನಾಟಕ ಸರ್ಕಾರ ಹಲವು ರಿಯಾಯಿತಿಗಳನ್ನು ಕೂಡ ನೀಡಲಿದೆ ಎಂದು ಉದ್ಯಮಿಗಳಿಗೆ ಅಭಯ ನೀಡಿದರಲ್ಲದೆ, ರಾಜ್ಯವು ವಿದೇಶಿ ಹೂಡಿಕೆದಾರರ ನೆಚ್ಚಿನ ತಾಣವಾಗಿರುವುದೇಕೆ ಹಾಗೂ ಅದಕ್ಕೆ ಇರುವ ಕಾರಣಗಳನ್ನು ವಿವರವಾಗಿ ತಿಳಿಸಿದರು

ಭಾರತವು ಅನೇಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ಅದೇ ನಮ್ಮ ದೇಶದಲ್ಲಿ ಕರ್ನಾಟಕವು ಹತ್ತು ಹಲವು ಕ್ಷೇತ್ರಗಳಲ್ಲಿ ಅಗ್ರಗಣ್ಯ ಸ್ಥಾನದಲ್ಲಿದೆ. ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ಕೃಷಿ, ಕೈಗಾರಿಕೆ, ವೈದ್ಯಕೀಯ, ಯಂತ್ರೋಪಕರಣ, ಬಾಹ್ಯಾಕಾಶ ಹಾಗೂ ಸೇವಾ ವಲಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ರಾಜ್ಯವು ಅತ್ಯಂತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಹೀಗಾಗಿ ಇಲ್ಲಿ ಹೂಡಿಕೆ ಮಾಡುವುದು ಅತ್ಯಂತ ಉತ್ತಮ ಎಂದು ಅವರು ಪ್ರತಿಪಾದಿಸಿದರು.

ನಿರಾತಂಕವಾಗಿ ಹೂಡಿಕೆ ಮಾಡಿ:

ಕರ್ನಾಟಕ ಆರಂಭದಿಂದಲೂ ಕೈಗಾರಿಕಾ ಸ್ನೇಹಿ ರಾಜ್ಯವಾಗಿದೆ. ಭಾರತದ ಒಟ್ಟಾರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಶೇ.40, ಜೈವಿಕ ತಂತ್ರಜ್ಞಾನ ವಲಯದಲ್ಲಿ ಶೇ.35, ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ವಿನ್ಯಾಸ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಕೂಡ ಶೇ.64ರಷ್ಟು ರಫ್ತು ಮಾಡುತ್ತಿರುವ ಅತ್ಯಂತ ಪ್ರಗತಿಪೂರಕ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ. ಜತೆಗೆ, ಆಸ್ಟ್ರೇಲಿಯಾ ಜತೆ ಎಲ್ಲ ರೀತಿಯ ಕೈಗಾರಿಕಾ ಮತ್ತು ವಾಣಿಜ್ಯ ಸಂಬಂಧಗಳ ಬಗ್ಗೆ ನಮ್ಮ ರಾಜ್ಯ ಉತ್ಸುಕವಾಗಿದೆ ಎಂದು ಡಿಸಿಎಂ ಹೇಳಿದರು.

ಅನೇಕ ವರ್ಷಗಳಿಂದಲೂ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವ್ಯೂಹಾತ್ಮಕ ಪಾಳುದಾರಿಕೆ ಇದೆ. ವಾಣಿಜ್ಯ, ಕೈಗಾರಿಕೆ, ಕಲ್ಲಿದ್ದಲು, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಎರಡೂ ದೇಶಗಳು ಪರಸ್ಪರ ಕೈಜೋಡಿಸಿ ಕೆಲಸ ಮಾಡುತ್ತಿವೆ. ಜತೆಗೆ, ಎರಡೂ ದೇಶಗಳ ನಡುವೆ ಸರಕು ಮತ್ತು ಸೇವೆಯ ವ್ಯವಹಾರವೂ 2018-19ರಲ್ಲಿ 1.6 ಲಕ್ಷ ಕೋಟಿ ರೂ. ಮೀರಿತ್ತು. ಹೀಗಾಗಿ ಆಸ್ಟ್ರೇಲಿಯಾಕ್ಕೆ ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಹೂಡಿಕೆ ಮಾಡಲು ವಿಪುಲ ಅವಕಾಶಗಳಿವೆ ಎಂದು ಡಾ. ಸಿ.ಎನ್.‌ ಅಶ್ವತ್ಥನಾರಾಯಣ ನುಡಿದರು.

ಕರ್ನಾಟಕ ನಂ.1:

ಎಲ್ಲ ರಂಗಗಳಲ್ಲೂ ಕರ್ನಾಟಕ ನಾಗಾಲೋಟದಲ್ಲಿ ಮುಂದೆ ಸಾಗುತ್ತಿದೆ. ನೀತಿ ಆಯೋಗದ 2019ನೇ ಸಾಲಿನ ವರದಿಯಲ್ಲಿ ಆವಿಷ್ಕಾರ ಕ್ಷೇತ್ರದಲ್ಲಿ ನಮ್ಮ ರಾಜ್ಯವು ಮೊದಲ ಸ್ಥಾನದಲ್ಲಿದೆ. ಸದ್ಯ ರಾಜ್ಯದ ಒಟ್ಟಾರೆ ಜಿಡಿಪಿ 220 ಶತಕೋಟಿ ಡಾಲರ್‌ ಆಗಿದ್ದು, ಅದನ್ನು ಹೆಚ್ಚಿಸುವ ಸ್ಪಷ್ಟ ಗುರಿ ಹೊಂದಲಾಗಿದೆ. ಇನ್ನು ವಿದೇಶಿ ಹೂಡಿಕೆ ಬರುತ್ತಿರುವ ರಾಜ್ಯಗಳಲ್ಲಿ ನಮ್ಮ ರಾಜ್ಯವು 3ನೇ ಅಗ್ರ ರಾಜ್ಯವಾಗಿದೆ. 2000-2019ರ ಅವಧಿಯಲ್ಲಿ ರಾಜ್ಯಕ್ಕೆ 42.3 ದಶಲಕ್ಷ ಡಾಲರ್‌ ವಿದೇಶಿ ಹೂಡಿಕೆ ಹರಿದುಬಂದಿದೆ. ಇದೇ ವೇಳೆ ಅಭಿವೃದ್ಧಿಯ ಎಲ್ಲ ಕ್ಷೇತ್ರಗಳಿಗೆ ಶಕ್ತ ತುಂಬುವ ಉದ್ದೇಶದಿಂದ ಈಗಾಗಲೇ ಡಿಜಿಟಲ್‌ ಎಕಾನಮಿ ಮಿಷನ್‌, ವಿಷನ್‌ ಗ್ರೂಪ್‌, ಕರ್ನಾಟಕ ಆವಿಷ್ಕಾರ ಪ್ರಾಧಿಕಾರ, ಎಂಎನ್‌ಸಿ ಎಂಗೇಜ್‌ಮೆಂಟ್‌ ಸೆಲ್‌ ಇತ್ಯಾದಿ ಸಂಸ್ಥೆಗಳು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಇದರೊಟ್ಟಿಗೆ, ಕಳೆದ ಒಂದು ವರ್ಷದಲ್ಲಿ ಅನೇಕ ಗುರುತರ ಸುಧಾರಣೆಗಳನ್ನು ತರಲಾಗಿದೆ ಎಂದು ಉಪ ಮಖ್ಯಮಂತ್ರಿ ತಿಳಿಸಿದರು.

ವೆಬಿನಾರ್‌ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಉನ್ನತ ಅಧಿಕಾರಿಗಳೂ ಸೇರಿದಂತೆ ಬೃಹತ್‌ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣ ರೆಡ್ಡಿ, ಭಾರತ- ಆಸ್ಟ್ರೇಲಿಯಾ ಚೇಂಬರ್‌ ಆಫ್‌ ಕಾಮರ್ಸ್‌ನ ಮೈಕೆಲ್‌ ವಾಡೆ, ಜಿತೇಶ್‌ ಅಗರವಾಲ್‌, ರೋಹಿತ್‌ ಮಾನ್‌ಚಂದ, ಪೀಟರ್‌ ಬಾಲ್ಡ್‌ವಿನ್‌, ಸಿದ್ದಾರ್ಥ ಮೆಹತಾ, ಪೆಟುಲಾ ಥಾಮಸ್‌, ರವೀನ್‌ ಮೀರ್‌ಚಂದಾನಿ ಮುಂತಾದವರು ಪಾಲ್ಗೊಂಡಿದ್ದರು.

ಡಿಕೆ ಶಿವಕುಮಾರ್ ಗೆ ಕೊರೊನಾ ಪಾಸಿಟಿವ್, ಸೋನಿಯಾ, ರಾಹುಲ್ ಗಾಂಧಿ ದೂರವಾಣಿ ಕರೆ; ಶೀಘ್ರ ಗುಣಮುಖರಾಗುವಂತೆ ಹಾರೈಕೆ

ಬೆಂಗಳೂರು:ಬೆನ್ನು ನೋವಿನಿಂದ ಬಳಲುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೊರೊನಾ ಸೋಂಕಿಗೆ ಸಿಲುಕಿದ್ದಾರೆ.ಕೋವಿಡ್-19 ಪರೀಕ್ಷೆ ವೇಳೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕೊರೊನಾ ಸೋಂಕು ದೃಢಪಟ್ಟ ವಿಷಯವನ್ನು ಟ್ವೀಟ್ ಮಾಡಿ ಡಿಕೆ ಶಿವಕುಮಾರ್ ಖಚಿತಪಡಿಸಿದ್ದು ಪ್ರಾಥಮಿಕ ಸಂಪರ್ಕಿತರು ಕೋವಿಡ್ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಕೊರೋನಾ ಸೋಂಕಿತರಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಅನೇಕ ಹಿರಿಯ ಕಾಂಗ್ರೆಸ್ ಮುಖಂಡರು ದೂರವಾಣಿ ಕರೆ ಮಾಡಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ.

ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಿ.ಕೆ ಶಿವಕುಮಾರ್ ಅವರಿಗೆ ಸೋನಿಯಾ, ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಅನೇಕ ಎಐಸಿಸಿ ಮುಖಂಡರು ಮಂಗಳವಾರ ಮಧ್ಯಾಹ್ನ ದೂರವಾಣಿ ಕರೆ ಮಾಡಿ, ಆರೋಗ್ಯ ಕ್ಷೇಮ ವಿಚಾರಿಸಿದರು. ಆದಷ್ಟು ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ,ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿದಂತೆ ರಾಜ್ಯದ ಕಾಂಗ್ರೆಸ್ ಮುಖಂಡರು ಡಿಕೆ ಶಿವಕುಮಾರ್ ಶೀಘ್ರವಾಗಿ ಗುಣಮುಖರಾಗುವಂತೆ ಪ್ರಾರ್ಥಿಸಿದ್ದಾರೆ.

ಮೆಕಾಲೆ ಶಿಕ್ಷಣ ವ್ಯವಸ್ಥೆಗೆ ವಿದಾಯದ ಕ್ಷಣ ಸನ್ನಿಹಿತ :ಸುರೇಶ್ ಕುಮಾರ್

ಬೆಂಗಳೂರು: ಲಾರ್ಡ್ ಮೆಕಾಲೆ ತಳಹದಿಯ ಶಿಕ್ಷಣ ವ್ಯವಸ್ಥೆಗೆ ಇಂದು ನಾವು ವಿದಾಯ ಹೇಳುವ ಕ್ಷಣ ಸನ್ನಿಹಿತವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ಬೆಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಹೊಸ ಶಿಕ್ಷಣ ನೀತಿಯ ಕುರಿತಾದ ಸಂವಾದದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕವಾದ ಬದಲಾವಣೆಗೆ ನಾಂದಿ ಹಾಡಿದ್ದು, ಈ ನೀತಿ ಪ್ರೇರಿತವಾದ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳ ಜ್ಞಾನಾರ್ಜನೆ, ತರ್ಕಬದ್ಧ ಆಲೋಚನೆ ಮತ್ತು ಸಾಮಾಜಿಕವಾದ ನೈಪುಣ್ಯತೆಯನ್ನು ಪ್ರೇರೇಪಿಸುವಲ್ಲಿ ಹೊಸ ದಿಕ್ಕನ್ನು ಸೃಷ್ಟಿಸಲಿದೆ ಎಂದರು.

ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯಕ್ರಮ ಹಾಗೂ ಬೋಧನಾ ಕ್ರಮಗಳ ಕುರಿತಂತೆ ನೂತನ ಶಿಕ್ಷಣ ನೀತಿಯು ಪ್ರತಿಪಾದಿಸುವ ಅಂಶಗಳನ್ನು ಪ್ರಸ್ತಾಪಿಸಿದ ಸಚಿವರು, ಶಿಕ್ಷಣ ನೀತಿಯನ್ನು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ಅವಶ್ಯಕತೆಗಳಿಗೆ ಅನುಗುಣವಾಗಿ ಅಳವಡಿಸಿಕೊಳ್ಳುವ ಪ್ರಯತ್ನಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ಇಡೀ ರಾಷ್ಟ್ರದಲ್ಲಿ ಹೊಸ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವ ಮೊದಲ ರಾಜ್ಯಗಳಲ್ಲಿ ಕರ್ನಾಟಕವು ಒಂದಾಗಲಿದೆ ಎಂದರು.

ಈ ಕುರಿತಂತೆ ರಾಜ್ಯಕ್ಕೆ ಸಂಬಂಧಿಸಿದಂತೆ ಕರಡು ನೀತಿಯನ್ನು ಈಗಾಗಲೇ ರೂಪಿಸಲಾಗಿದ್ದು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಗಳು ಜಂಟಿಯಾಗಿ ಹೊಸ ನೀತಿಯ ಅನುಷ್ಠಾನಕ್ಕೆ ಮುಂದಾಗಲಿವೆ ಎಂದು ಸುರೇಶ್ ಕುಮಾರ್ ಹೇಳಿದರು.

ಕೇಂದ್ರದ ಹೊಸ ಶಿಕ್ಷಣ ನೀತಿಯ ಹಲವು ಸಕಾರಾತ್ಮಕ ಅಂಶಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಕ್ರೀಡಾ ಸಂಯೋಜಿತ ಶಿಕ್ಷಣ, ಕಥಾ ನಿರೂಪಣಾ ಕಲಿಕೆಯಂತಹ ವಿಶಿಷ್ಟ ಕಲಿಕಾ ಉಪಕ್ರಮಗಳಂತಹ ಅನುಭವ ಜನ್ಯವಾದ ಕಲಿಕೆಯನ್ನು ಪ್ರತಿಪಾದಿಸುವ ನೂತನ ಶಿಕ್ಷಣ ನೀತಿಗೆ ಸಂವಾದಿಯಾಗಿ ಕರ್ನಾಟಕ ಸರ್ಕಾರವು ಈಗಾಗಲೇ ಈ ನಿಟ್ಟಿನಲ್ಲಿ ಕೆಲವು ಪ್ರಯೋಗಗಳನ್ನು ಈಗಾಗಲೇ ಮಾಡಿದ್ದು, ನಮ್ಮಲ್ಲಿ ಅನುಷ್ಠಾನಗೊಂಡಿವೆ ಎಂದರು.

ಇಂತಹ ಉಪಕ್ರಮಗಳನ್ನು ಹೊಸ ಶಿಕ್ಷಣ ನೀತಿಯಲ್ಲಿ ಅಳವಡಿಸಿರುವುದು ಈಗಾಗಲೇ ನಮ್ಮಲ್ಲಿ ಅನುಷ್ಠಾನಗೊಂಡಿರುವ ಉಪಕ್ರಮಗಳಾದ್ದರಿಂದ ಈ ಹೊಸ ನೀತಿಯ ಜಾರಿಯಲ್ಲಿ ನಮಗೆ ಒಂದು ದಿಕ್ಸೂಚಿ ದೊರೆತಂತಾಗಿದೆ ಎಂದರು. ಸಮಗ್ರ ಕಲಿಕೆಗೆ ನೂತನ ಶಿಕ್ಷಣ ನೀತಿ ಇಂಬು ನೀಡಲಿದ್ದು, ವಿದ್ಯಾರ್ಥಿಯ ಆಸಕ್ತಿದಾಯಕ ವಿಷಯಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ನೆರವಾಗಲಿದೆ ಎಂದು ಸುರೇಶ್ ಮಾರ್ ಹೇಳಿದರು.

ಶಾಲಾ ಶಿಕ್ಷಣದ ಕಲಿಕೆಯ ಅಂತ್ಯದ ವೇಳೆಗೆ ವಿದ್ಯಾರ್ಥಿಗೆ ಒಂದು ಕೌಶಲ್ಯ ದೊರೆತು ಅವನನ್ನು ಗಟ್ಟಿಗೊಳಿಸಲಿದೆ. ವಿದ್ಯಾರ್ಥಿಗಳನ್ನು ಸ್ವಯಂಪ್ರೇರಣೆಯ ಕಲಿಕಾರ್ಥಿಯನ್ನಾಗಿಸಲು ಈ ನೀತಿಯ ಅಂಶಗಳು ಸಹಾಯ ಮಾಡಲಿವೆ. ಅವಶ್ಯಕತೆಯಿರುವುದನ್ನು ಕಲಿಯಲು ಮತ್ತು ಆರನೇ ತರಗತಿಯಿಂದಲೇ ವೃತ್ತಿಪರವಾದ ಶಿಕ್ಷಣ ನೀಡಿ ಅವರನ್ನು ಸ್ವಾವಲಂಬಿಯನ್ನಾಗಿ ರೂಪಿಸಲು ಹೊಸ ನೀತಿ ಸಹಕರಿಸಲಿದೆ ಎಂದು ಸಚಿವರು ಹೇಳಿದರು.

ಸಂವಾದದಲ್ಲಿ ರಾಷ್ಟ್ರೀಯ ಕಾನೂನು ಶಾಲೆಯ ಮಾಜಿ ಮುಖ್ಯಸ್ಥರಾದ ಪ್ರೊ. ವೆಂಕಟರಾವ್, ಪುಣೆಯ ಡಿಫೆನ್ಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಟೆಕ್ನಾಲಜಿ ಸಂಸ್ಥೆಯ ಮಾಜಿ ಮುಖ್ಯಸ್ಥರಾದ ಪ್ರೊ. ಪಟ್ನಾಯಕ್, ಚೆನ್ನೈನ ಅಣ್ಣಾ ವಿವಿ ಕುಲಪತಿ ಪ್ರೊ. ಸೂರಪ್ಪ, ಬೆಂಗಳೂರು ವಿವಿ ಕುಲಪತಿ, ಪ್ರೊ. ವೇಣುಗೋಪಾಲ್, ಮಾಜಿ ಕುಲಪತಿ ಪ್ರೊ. ತಿಮ್ಮೇಗೌಡ ಮತ್ತಿತರರು ಭಾಗವಹಿಸಿದ್ದರು.

ಇನ್ನು ಮುಂದೆ ಪಠ್ಯದಲ್ಲೇ ಕೌಶಲ್ಯ ತರಬೇತಿ: ಡಿಸಿಎಂ

ಬೆಂಗಳೂರು: ರಾಜ್ಯದಲ್ಲಿ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಸೃಷ್ಟಿ ಹಾಗೂ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಶಾಲಾ- ಕಾಲೇಜು ಪಠ್ಯದಲ್ಲಿಯೇ ಕೌಶಲ್ಯ ತರಬೇತಿ ವಿಷಯವನ್ನು ಸೇರಿಸಲಾಗುತ್ತದೆ ಎಂದು ಕೌಶಲ್ಯಾಭಿವೃದ್ಧಿ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

ಬೆಂಗಳೂರಿನ ಮಲ್ಲೇಶ್ವರದ ಒಳಾಂಗಣ ಕ್ರೀಡಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ನಾರಾಯಣ ತರಬೇತಿ ಸಂಸ್ಥೆಗಳ ಸಹಯೋಗದಲ್ಲಿ ತೆರೆಯಲಾಗಿರುವ “ಮಲ್ಲೇಶ್ವರಂ ಕೌಶಲ್ಯ ಕೇಂದ್ರ”ದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು,
ಇವತ್ತು ಕೌಶಲ್ಯವಿರುವುದರ ಜತೆಗೆ, ಆ ಕೌಶಲ್ಯಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ನೌಕರಿ ಸಿಗುತ್ತದೆಯೇ ಎಂಬುದು ಬಹಳ ಮುಖ್ಯವಾದ ವಿಚಾರ. ಹೀಗಾಗಿ ಜಾಬ್‌ ಮಾರುಕಟ್ಟೆಗೆ ತಕ್ಕ ಹಾಗೆ, ಅಂದರೆ ಕೈಗಾರಿಕೆಗಳಿಗೆ ಅಗತ್ಯವಿರುವ ದಿಕ್ಕಿನಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಾಂಕ್ಷಿಗಳಿಗೆ ತರಬೇತಿ ನೀಡಲಾಗುವುದು ಎಂದು ನುಡಿದರು.

ಹಿಂದಿನಿಂದ ಇದೇ ರೀತಿಯ ವೈರುಧ್ಯವನ್ನು ನಾವು ಗಮನಿಸುತ್ತಾ ಬಂದಿದ್ದೇವೆ. ಕೆಲಸಗಳೇ ಬೇರೆ ಇರುತ್ತವೆ. ಅದಕ್ಕೆ ಬೇಕಾದ ಕುಶಲ ಮಾನವ ಸಂಪನ್ಮೂಲ ಲಭ್ಯ ಇರುವುದಿಲ್ಲ. ಓದಿದ್ದೇ ಬೇರೆ, ಸಿಗುವ ಕೆಲಸಗಳೇ ಬೇರೆ. ಇದರಿಂದ ದಕ್ಷತೆ ಇರುವುದಿಲ್ಲ ಎಂಬುದು ಸಾಬೀತಾಗಿದೆ. ಇಂಥ ಅಂತರದಿಂದ ನಿರುದ್ಯೋಗ ಹೆಚ್ಚುತ್ತಲೇ ಹೋಗುತ್ತಿದೆ. ಇದನ್ನು ನಿವಾರಿಸಲು ಸರಕಾರ ಪಠ್ಯದಲ್ಲೇ ಕೌಶಲ್ಯಕ್ಕೆ ಸಂಬಂಧಿಸಿದ ವಿಷಯವನ್ನು ಅಡಕಗೊಳಿಸಲು ಮುಂದಾಗಿದೆ. ಶಿಕ್ಷಣದ ಹಂತದಲ್ಲೇ ಅಗತ್ಯವಾದ ಕುಶಲತೆಯನ್ನು ಹೊಂದಬೇಕಾಗುತ್ತದೆ. ಉದ್ಯೋಗದ ನಂತರ ಅದನ್ನು ಯಾರೂ ಹೇಳಿಕೊಡುವ ಸನ್ನಿವೇಶ ಇರುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಕೋವಿಡ್‌ ಪೆಟ್ಟು ಕೊಟ್ಟಿದೆ:

ಕೋವಿಡ್ ಮಹಾಮಾರಿಯಿಂದಾದ ಬಹಳ ಉದ್ಯಮಗಳು ನಷ್ಟಕ್ಕೆ ತುತ್ತಾಗಿ ಅನೇಕ ಯುವಕ ಯುವತಿಯರು ಕೆಲಸ ಕಳೆದುಕೊಂಡಿದ್ದು, ಭವಿಷ್ಯದ ಬಗ್ಗೆ ಚಿಂತೆಗೀಡಾಗಿದ್ದಾರೆ. ಅಂತಹ ಅನೇಕ ಯುವಜನರಿಗೆ ಅಗತ್ಯ ಕೌಶಲ್ಯದ ಕೊರತೆಯಿದ್ದು, ಸೂಕ್ತವಾದ ಹೊಸ ಕೆಲಸ ಹುಡುಕಿಕೊಳ್ಳಲು ಅವರು ಪರದಾಡುತ್ತಿದ್ದಾರೆ. ಇಂಥವರ ನೆರವಿಗೆ ಸರಕಾರ ಧಾವಿಸಿದೆ. ಕೋವಿಡ್‌ ನಂತರ ಉಂಟಾಗಿರುವ ಉದ್ಯೋಗ ನಷ್ಟವನ್ನು ಸರಕಾರ ಸರಿಪಡಿಸಲಿದೆ ಎಂದು ಡಿಸಿಎಂ ಭರವಸೆ ನೀಡಿದರು.

ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಿವೆ. ಔದ್ಯೋಗಿಕವಾಗಿ ಆಕಾಂಕ್ಷಿಗಳಿಗೆ ಸಹಾಯವಾಗುವ ಹಲವು ಯೋಜನೆಗಳನ್ನು ಹಮ್ಮಿಕೊಂಡಿವೆ. ಅಂತಹುದೇ ಒಂದು ಯೋಜನೆ ಇದಾಗಿದೆ. ಕೋವಿಡ್ʼನಿಂದ ಸಂಕಷ್ಟಕ್ಕೆ ತುತ್ತಾಗಿ ಉದ್ಯೋಗ ವಂಚಿತರಾದ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಯುವಕ- ಯುವತಿಯರಿಗೆ ಕೌಶಲ್ಯ ತರಬೇತಿ ನೀಡುವ ಸಲುವಾಗಿ ʼಮಲ್ಲೇಶ್ವರಂ ಕೌಶಲ್ಯ ಕೇಂದ್ರʼವನ್ನು ಆರಂಭಿಸಲಾಗಿದೆ ಎಂದು ಅವರು ಹೇಳಿದರು..

ಈ ಕೇಂದ್ರದಲ್ಲಿ ಏನಿರುತ್ತದೆ?

ಮುಖ್ಯವಾಗಿ ಈ ಕೇಂದ್ರದಲ್ಲಿ ಪ್ರಾರಂಭಿಕವಾಗಿ ಬ್ಯಾಂಕಿಂಗ್‌, ಹಣಕಾಸು ಸೇವೆ, ವಿಮಾ ಸೇವೆ, ಲೆಕ್ಕ ನಿರ್ವಹಣೆ, ಐಟಿ ಸೆಕ್ಯೂರಿಟಿ ವಿಶ್ಲೇಷಣೆ ಸೇರಿದಂತೆ ಹಲವು ಉಪಯುಕ್ತ ವಿಭಾಗಗಳಲ್ಲಿ ತರಬೇತಿ ನೀಡಲಾಗುವುದು. ದಿನಕ್ಕೆ ಎರಡು ಬ್ಯಾಚ್‌ʼಗಳಲ್ಲಿ ಇಲ್ಲಿ ತರಬೇತಿ ನೀಡಲಾಗುವುದು. ಕೌಶಲ್ಯ ತರಬೇತಿ ಕೇಂದ್ರದಲ್ಲಿ, ಉದ್ಯೋಗಾಕಾಂಕ್ಷಿಗಳ ಕಲಿಕೆಗೆ ಅನುಕೂಲವಾಗುವಂತೆ ಸುಸಜ್ಜಿತ ತರಗತಿಗಳು ಮತ್ತು ಪ್ರಯೋಗಾಲಯಗಳನ್ನೂ ಸಹ ತಯಾರು ಮಾಡಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.

ಸಮಾರಂಭದಲ್ಲಿ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು ಸೇರಿದಂತೆ ಇತರ ಪಾಲಿಕೆ ಸದಸ್ಯರು ಹಾಗು ಅಧಿಕಾರಿಗಳು ಪಾಲ್ಗೊಂಡಿದ್ದರು.

ಶಿಕ್ಷಣ ನೀತಿ ಜಾರಿಗೆ ಆಡಳಿತ, ಕಾನೂನು ಕ್ರಮಗಳಿಗೆ ಸಿದ್ಧತೆ: ಡಿಸಿಎಂ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಗೆ ಬೇಕಿರುವ ಎಲ್ಲ ಆಡಳಿತಾತ್ಮಕ ಸುಧಾರಣೆಗಳು ಹಾಗೂ ಕಾನೂನು ತಿದ್ದುಪಡಿಗಳ ಬಗ್ಗೆ ರಾಜ್ಯ ಸರಕಾರ ತಯಾರಿ ಮಾಡಿಕೊಳ್ಳುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಬೆಂಗಳೂರಿನಲ್ಲಿ ಸೋಮವಾರ ಬೆಂಗಳೂರು ವಿಶ್ವವಿದ್ಯಾಲಯ, “ರಾಷ್ಟ್ರೀಯ ಶಿಕ್ಷಣ ನೀತಿಯ ಮುಖ್ಯಾಂಶಗಳು ಮತ್ತು ಜಾರಿ” ಬಗ್ಗೆ ಹಮ್ಮಿಕೊಂಡಿದ್ದ ಐದು ದಿನಗಳ ಆನ್‌ಲೈನ್‌ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನಿರ್ದಿಷ್ಟ ಗುರಿ ಹಾಗೂ ಸ್ಪಷ್ಟ ಕಾರ್ಯಸೂಚಿಯ ಮೂಲಕ ಸರಕಾರ ಎಲ್ಲ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ. ಇಡೀ ದೇಶದಲ್ಲೇ ಈ ನೀತಿಯನ್ನು ಮೊತ್ತ ಮೊದಲಿಗೆ ಜಾರಿ ಮಾಡಿದ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಲಿದೆ ಎಂದು ಹೇಳಿದರು.

ಮೊದಲಿನಿಂದಲೂ ಉತ್ಸುಕತೆ:

ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ರಾಜ್ಯವು ಮೊದಲಿನಿಂದಲೂ ಉತ್ಸುಕತೆಯನ್ನು ಹೊಂದಿದೆ. ನೀತಿಯ ಕರಡು ಪ್ರತಿ ಕೈಸೇರುತ್ತಿದ್ದಂತೆ, ನೀತಿಯ ಜಾರಿಗಾಗಿ ಉನ್ನತ ಮಟ್ಟದ ಕಾರ್ಯಪಡೆಯನ್ನು ರಚನೆ ಮಾಡಲಾಯಿತು ಎಂದ ಉಪ ಮುಖ್ಯಮಂತ್ರಿಗಳು, ನೀತಿ ಪ್ರಕಟವಾಗುವುದಕ್ಕೂ ಮೊದಲು, ಪ್ರಕಟವಾದ ನಂತರ ಕಾರ್ಯಪಡೆ ಜತೆ ಹತ್ತು ಹಲವು ಮಹತ್ವದ ಸಭೆಗಳನ್ನು ನಡೆಸಲಾಗಿದೆ ಎಂದರು.

‌ನೀತಿಯನ್ನು ಹಂತ ಹಂತವಾಗಿ ಜಾರಿ ಮಾಡುವ ಬಗ್ಗೆ ಈಗಾಗಲೇ ಕಾರ್ಯಪಡೆ ಅತ್ಯಮೂಲ್ಯ ಸಲಹೆಗಳನ್ನು ನೀಡಿದೆ. ಇನ್ನು ಅಂತಿಮ ಹಂತದ ಶಿಫಾರಸುಗಳನ್ನಷ್ಟೇ ನೀಡುವುದು ಬಾಕಿ ಇದೆ. ಆ ಶಿಫಾರಸುಗಳು ಬಂದ ಕೂಡಲೇ ಸರಕಾರ ನೀತಿಯ ಜಾರಿಯತ್ತ ಆಡಳಿತಾತ್ಮಕ ಹಾಗೂ ಕಾನೂನಾತ್ಮಕ ಹೆಜ್ಜೆಗಳನ್ನು ಇಡಲಿದೆ. ಇನ್ನೊಂದು ವರ್ಷದ ಅವಧಿಯಲ್ಲಿ ಇಡೀ ನೀತಿಯ ಬಗ್ಗೆ ಎಲ್ಲರಿಗೂ ಮಾಹಿತಿ ನೀಡುವುದು ಹಾಗೂ ಆಂದೋಲನದಂಥ ಕಾರ್ಯಕ್ರಮಗಳನ್ನು ಕೈಗೊಳ್ಳುವುದು ಸರಕಾರದ ಉದ್ದೇಶವಾಗಿದೆ ಎಂದು ಉಪ ಮುಖ್ಯಮಂತ್ರಿಗಳು ನುಡಿದರು.

ಎಲ್ಲರಿಗೂ ಗೊತ್ತಿರುವಂತೆ ಕರ್ನಾಟಕ ನಮ್ಮ ದೇಶದ ಅತ್ಯಂತ ಪ್ರಗತಿಶೀಲ ರಾಜ್ಯ. ಹೀಗಾಗಿ ಶಿಕ್ಷಣ ನೀತಿ ಜಾರಿಯ ನಂತರ ನಮ್ಮ ರಾಜ್ಯದ ದಿಕ್ಕೇ ಬದಲಾಗಲಿದೆ. ಎಲ್ಲ ಕ್ಷೇತ್ರಗಳಲ್ಲೂ ಬದಲಾವಣೆಯನ್ನು ಗುರುತರವಾಗಿ ತರಬಲ್ಲ ಈ ನೀತಿಯಿಂದ ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶದ ಸ್ವರೂಪವೇ ಬದಲಾಗಲಿದೆ. ಮುಂದಿನ ದಿನಗಳಲ್ಲಿ ಗುಣಮಟ್ಟದ ಬೋಧನೆ ಸಿಕ್ಕಿ ಇಡೀ ವ್ಯವಸ್ಥೆಯೇ ಸುಧಾರಿಸಲಿದೆ. ಶಿಕ್ಷಣದಿಂದ ಮಾತ್ರ ಇದು ಸಾಧ್ಯವಾಗುತ್ತದೆ ಎಂಬ ಬಲವಾದ ನಂಬಿಕೆ ನನ್ನದು ಎಂದು ಅವರು ಹೇಳಿದರು.

ಮುಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳ ಗುಣಮಟ್ಟವೂ ಸುಧಾರಿಸುತ್ತದೆ. ಇನಸ್ಪೆಕ್ಟರ್‌ ರಾಜ್‌ ವಾತಾವರಣಕ್ಕೆ ಪೂರ್ಣವಾಗಿ ತೊಲಗಿ ಬದಲಾವಣೆಯ ಶಖೆ ಆರಂಭವಾಗಲಿದೆ ಎಂದು ಡಿಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

ಯುಜಿಸಿ ಅಧ್ಯಕ್ಷ ಪ್ರೊ. ಡಿ.ಪಿ.ಸಿಂಗ್‌, ಉಪಾಧ್ಯಕ್ಷ ಡಾ. ಭೂಷಣ್‌ ಪಟವರ್ಧನ್‌ ಮಾತನಾಡಿದರು. ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಕೆ.ಆರ್.‌ ವೇಣುಗೋಪಾಲ್‌ ಪ್ರಾಸ್ತಾವಿಕ ಭಾಷಣ ಮಾಡಿದರು.