ಮಾದರಿ ಡಿಜಿಟಲ್ ಗ್ರಂಥಾಲಯ ವ್ಯವಸ್ಥೆ: ಕರ್ನಾಟಕ ಮಾದರಿ- ಸುರೇಶ್ ಕುಮಾರ್

0

ಬೆಂಗಳೂರು: ಇಡೀ ದೇಶದಲ್ಲಿ ಮಾದರಿ ಡಿಜಿಟಲ್ ಗ್ರಂಥಾಲಯ ವ್ಯವಸ್ಥೆಯನ್ನು ಹೊಂದಿದ ಮೊದಲ ರಾಜ್ಯ ಕರ್ನಾಟಕ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ಸೋಮವಾರ ನಗರದ ಜಕ್ಕೂರಿನ ಎಂಸಿಇಎಸಿಎಚ್ ಬಡಾವಣೆಯ ಡಾ. ಶಿವರಾಮ ಕಾರಂತ ನಗರದ 2ನೇ ಹಂತದಲ್ಲಿ ಶಾಖಾ ಗ್ರಂಥಾಲಯಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ತಾವು ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಇಂದಿನ ಅವಶ್ಯಕತೆಗಳಿಗನುಗುಣವಾಗಿ ಡಿಜಿಟಲ್ ಗ್ರಂಥಾಲಯಗಳನ್ನು ರಾಜ್ಯಾದ್ಯಂತ ಸ್ಥಾಪಿಸಲು ಕ್ರಮ ವಹಿಸಲಾಗಿದೆ ಎಂದರು.

ಕಳೆದ ಆರು ತಿಂಗಳ ಅವಧಿಯಲ್ಲಿ ರಾಜ್ಯದೆಲ್ಲೆಡೆ 272 ಡಿಜಿಟಲ್ ಗ್ರಂಥಾಲಯಗಳು ಕಾರ್ಯಾರಂಭ ಮಾಡಿದ್ದು, ಇಡೀ ದೇಶದಲ್ಲಿ ಇದು ಅಭೂತ ಪ್ರಯತ್ನವಾಗಿದೆ. ಕೋವಿಡ್ ಸೃಷ್ಟಿಸಿದ ಸಾಮಾಜಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಷ್ಟ್ರದಲ್ಲಿಯೇ ಮೊದಲ ಉಪಕ್ರಮವಾಗಿ ಕರ್ನಾಟಕ ರಾಜ್ಯದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಡಿಜಿಟಲ್ ಗ್ರಂಥಾಲಯ ಮೊಬೈಲ್ ಆಪ್ ನ್ನು ಲೋಕಾರ್ಪಣೆಗೊಳಿಸಿದ್ದು, ಇಂದು ನಾಲ್ಕು ಲಕ್ಷಕ್ಕೂ ಹೆಚ್ಚು ಜನ ಈ ಆಪ್ ಬಳಸುತ್ತಿದ್ದಾರೆ. ಒಂದು ಲಕ್ಷಕ್ಕೂ ಮೀರಿದ ಪುಸ್ತಕಗಳು ಈ ಆಪ್ ನಲ್ಲಿ ಲಭ್ಯವಿವೆ ಎಂದು. ಈ ತನಕ 15 ಲಕ್ಷ ಜನರು ಇದರ ಉಪಯೋಗ ಪಡೆದಿದ್ದಾರೆ ಅವರು ಹೇಳಿದರು.

ಪುಸ್ತಕ ಸಂಸ್ಕೃತಿ ಬೆಳೆಸಲು ರಾಜ್ಯಾದ್ಯಂತ 6841 ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಇದು ದೇಶದಲ್ಲಿಯೇ ಮಾದರಿ ಗ್ರಂಥಾಲಯ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ವರ್ಗದ ಜನರ ಜ್ಞಾನಾರ್ಜನೆಗೆ ಉಪಯೋಗವಾಗುವಂತೆ ಗ್ರಂಥಾಲಯಗಳನ್ನು ಅವಶ್ಯಕ ಸೇವೆಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.

ಸ್ಥಳೀಯ ಕ್ಷೇಮಾಭಿವೃದ್ಧಿ ಸಂಘದವರು ಉಚಿತವಾಗಿ ನೀಡಿದ ಈ ನಿವೇಶನದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುವುದು. ಈ ಕಟ್ಟಡವು 3 ಅಂತಸ್ತಿನಿಂದ ಕೂಡಿದ್ದು, ಅದರಲ್ಲಿ ಮಹಿಳೆಯರಿಗೆ, ಹಿರಿಯ ನಾಗರೀಕರಿಗೆ ಅನುಕೂಲವಾಗುವಂತೆ ವಿವಿಧ ವಿಭಾಗಗಳನ್ನು ಸೃಜಿಸಲಾಗುವುದು. ಶಿವರಾಮ ಕಾರಂತರಿಗೆ ಮಕ್ಕಳೆಂದರೆ ಬಲುಮೆಚ್ಚುಗೆ ಇರುವುದರಿಂದ ಮಕ್ಕಳಿಗಾಗಿ ಈ ಗ್ರಂಥಾಲಯದಲ್ಲಿ ವಿಶೇಷ ವಿಭಾಗ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ಪ್ರತ್ಯೇಕ ವಿಭಾಗವಿರಲಿದೆ ಎಂದು ಸುರೇಶ್ ಕುಮಾರ್ ಹೇಳಿದರು.

ಈ ಕಟ್ಟಡವನ್ನು ಸಾಧ್ಯವಾದಷ್ಟು ತ್ವರಿತವಾಗಿ ನಿರ್ಮಾಣ ಮಾಡಿ ಸಾರ್ವಜನಿಕ ಉಪಯೋಗಕ್ಕೆ ಅರ್ಪಿಸಲಾಗುವುದು ಎಂದು ಹೇಳಿದ ಸಚಿವರು, ಈ ಕುರಿತು ಹೆಚ್ಚಿನ ಗಮನ ಹರಿಸಲು ಇಲಾಖೆಯ ನಿರ್ದೇಶಕರಿಗೆ ಸೂಚಿಸಿದರು. ಸ್ಥಳೀಯರ ಬೇಡಿಕೆಯಂತೆ ಈ ಗ್ರಂಥಾಲಯದ ಮುಂದೆ ಡಾ. ಶಿವರಾಮ ಕಾರಂತರ ಪ್ರತಿಮೆ ಸ್ಥಾಪನೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು ಸುರೇಶ್ ಕುಮಾರ್ ಹೇಳಿದರು.

ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಕೆ. ಎ. ಮುನಿಂದ್ರ ಕುಮಾರ್, ನಾಡಿನ ಹಿರಿಯ ಹಾಗೂ ಪ್ರಸಿದ್ಧ ಕಲಾವಿದರಾದ ಬಿ.ಕೆ.ಎಸ್. ವರ್ಮಾ ಮತ್ತಿತರರು ಭಾಗವಹಿಸಿದ್ದರು.

ಡಿ.ಕೆ ಶಿವಕುಮಾರ್ ಒಬ್ಬ ದೊಡ್ಡ ಕಳ್ಳ : ಸಿ .ಪಿ ಯೋಗೇಶ್ವರ್

ರಾಮನಗರ:ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ವಿಧಾನಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ ಮಾತಿನ ಸಮರ ಮುಂದುವರೆಸಿದ್ದಾರೆ. ಡಿಕೆ ಶಿವಕುಮಾರ್ ದೊಡ್ಡ ಕಳ್ಳ ಅವರ ಫೋನ್ ಕದ್ದಾಲಿಕೆ ಮಾಡಿ ನಮ್ಮ ಸರ್ಕಾರ ಯಾವ ರಾಜ್ಯ ಗೆಲ್ಲಬೇಕಾಗಿದೆ ಎಂದು ಸಿ .ಪಿ ಯೋಗೇಶ್ವರ್ ಗುಡುಗಿದ್ದಾರೆ .

ಚನ್ನಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ
ಸಿ.ಪಿ ಯೋಗೇಶ್ವರ್ ,ಡಿ.ಕೆ ಶಿವಕುಮಾರ್ ಫೋನ್ ಟ್ಯಾಪಿಂಗ್ ಆರೋಪ ಮಾಡುತ್ತಿದ್ದಾರೆ ಆದರೆ ಅವರೇ ಒಬ್ಬ ದೊಡ್ಡ ಕಳ್ಳ ಅವರು ಇನ್ನೊಬ್ಬರ ಮೇಲೆ ಆರೋಪ ಮಾಡೋಕೆ ಏನಿದೆ ? ಟೆಲಿಫೋನ್ ಕದ್ದಾಲಿಕೆ ಆರೋಪ ಶುದ್ಧ ಸುಳ್ಳು ಅವರ ಫೋನನ್ನು ಯಾವ ಉದ್ದೇಶಕ್ಕಾಗಿ ಕದ್ದಾಲಿಕೆ ಮಾಡಬೇಕು ?
ಅದರ ಅಗತ್ಯ ಏನಿದೆ ?? ಬಿಜೆಪಿಗೆ ಅಥವಾ ರಾಜ್ಯ ಸರ್ಕಾರಕ್ಕೆ ಏನು ಲಾಭವಿದೆ ?ಅವರ ಫೋನ್ ಕದ್ದಾಲಿಕೆ ಮಾಡಿ ಯಾವ ರಾಜ್ಯ ಗೆಲ್ಲಬೇಕಾಗಿದೆ ಎನ್ನುವ ಮೂಲಕ ಡಿಕೆ ಶಿವಕುಮಾರ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಡಿಕೆ ಶಿವಕುಮಾರ್ ಅವರೇ ಈ ಹಿಂದೆ ಫೋನ್ ಟ್ಯಾಪಿಂಗ್ ಮಾಡಿಸಿ ಅದನ್ನ ನಮ್ಮ ಪಕ್ಷದ ಮೇಲೆ ಆರೋಪ ಹೊರಿಸಿದ್ದರು .ರಾಜ್ಯದ ಜನರ ಗಮನ ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಅವರು ಇಂತಹ ನಿರಾಧಾರ ಆರೋಪ ಮಾಡುತ್ತಿದ್ದಾರೆ ಎಂದ ಸಿ .ಪಿ ಯೋಗೇಶ್ವರ್ ಫೋನ್ ಕದ್ದಾಲಿಕೆ ಮಾಡುವುದರಲ್ಲಿ ಡಿಕೆ ಶಿವಕುಮಾರ್ ತುಂಬಾ ಅನುಭವಿ ಎಂದು ಛೇಡಿಸಿದ್ದಾರೆ.

ಇನ್ನು ನರೇಗಾ ಹಣವನ್ನು ಕನಕಪುರ ದವರು ಜಾಸ್ತಿ ಪಡೆಯುತ್ತಿದ್ದಾರೆ ಇದರಿಂದಾಗಿ ಮಾಗಡಿ ಚನ್ನಪಟ್ಟಣ ರಾಮನಗರ ತಾಲೂಕುಗಳಿಗೆ ಅನ್ಯಾಯವಾಗುತ್ತಿದೆ ಅಧಿಕಾರಿಗಳು ಹಣವನ್ನು ಮೂರು ಜಿಲ್ಲೆಗಳಿಗೆ ಸಮಾನವಾಗಿ ಹಂಚಿಕೆ ಮಾಡಬೇಕು ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುವ ಸಮಯಕ್ಕೆ ಸರಿಯಾಗಿ ಒಬ್ಬರು ಅಧಿಕಾರಿಗಳ ಸಭೆ ಕರೆಯುತ್ತಾರೆ ಸರ್ಕಾರ ಹಣ ಬಿಡುಗಡೆ ಮಾಡುತ್ತಿದ್ದಂತೆ ಕನಕಪುರದವರು ಹಣ ಡ್ರಾ ಮಾಡಿಕೊಳ್ಳುತ್ತಾರೆ ಎಂದು ಯೋಗೇಶ್ವರ್ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ಹೆಸರು ಹೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಜಮೀನುಗಳಲ್ಲಿ ರೈತ ಬೆಳೆ ಆ್ಯಪ್ ಸಮೀಕ್ಷೆ‌‌ ಪ್ರಾತ್ಯಕ್ಷಿಕೆ ನಡೆಸಿದ ಕೃಷಿ ಸಚಿವ ಬಿ.ಸಿ ಪಾಟೀಲ್

ಶಿವಮೊಗ್ಗ/ಹಾವೇರಿ ಆ.24: ಕೃಷಿ ಸಚಿವರೂ ಆಗಿರುವ ಕೊಪ್ಪಳ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲರಿಂದು ಸೊರಬ ತಾಲೂಕಿನ ಯಲವಾಳ ಗ್ರಾಮ

ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕಕೊಣತಿ ಗ್ರಾಮದ ಜಮೀನುಗಳಲ್ಲಿ 2020-21ನೇ ಸಾಲಿನ ರೈತ ಬೆಳೆ ಸಮೀಕ್ಷೆ ಆ್ಯಪ್ ಪ್ರಾತ್ಯಕ್ಷಿಕೆ ನಡೆಸಿದರು.ಜಮೀನಿನಲ್ಲಿ ನಿಂತು ಬೆಳೆವಿವರ ಸರ್ವೆ ನಂಬರ್ ಸೇರಿದಂತೆ ಜಮೀನಿನಲ್ಲಿನ‌ ತಮ್ಮ ಭಾವಚಿತ್ರವನ್ನು ಆ್ಯಪ್‌ ಪ್ರಾತ್ಯಕ್ಷಿಕೆ ಮಾಡಿ ರೈತರಿಗೆ ಮಾದರಿಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ಸಿ.ಪಾಟೀಲರು ರೈತನ ಬೆಳೆ ರೈತನ ಹಕ್ಕಾಗಿದೆ.ಇದೇ ದೇಶದಲ್ಲಿ ಮೊದಲ ಬಾರಿಗೆ ರೈತನೇ ಸ್ವತಃ ತನ್ನ ಹೊಲದ ಸಮೀಕ್ಷೆ ನಡೆಸಿ ತಾನೇ ಪ್ರಮಾಣಪತ್ರ‌ನೀಡುವಂತಹ ಮಹತ್ವದ ಆ್ಯಪ್ ಇದಾಗಿದ್ದು, ರೈತರು ಆ್ಯಪ್ ಸಮೀಕ್ಷೆ ಬಗ್ಗೆ ಹೆಚ್ಚೆಚ್ಚು ಒಲವು ತೋರುತ್ತಿದ್ದಾರೆ.ಈ ಬಾರಿಯ ರೈತ ಬೆಳೆ ಸಮೀಕ್ಷೆ ರೈತರ ಬೆಳೆಯ ಉತ್ಸವವೇ ಆಗಿದೆ‌.ಸಮೀಕ್ಷೆಗೆ ದೊರೆತಿರುವ ಅಭೂತಪೂರ್ವ ಸ್ಪಂದನೆ ಕಂಡು ಆಗಸ್ಟ್ 24 ರವರೆಗೆ ನಿಗದಿಗೊಳಿಸಲಾಗಿದ್ದ ರೈತ ಬೆಳೆ ಆ್ಯಪ್ ಸಮೀಕ್ಷೆಯ ಅವಧಿಯನ್ನು ಇನ್ನು ಸ್ವಲ್ಪದಿನಗಳ ಕಾಲ ವಿಸ್ತರಿಸಲಾಗಿದೆ.ಕೇಂದ್ರ ಸರ್ಕಾರವು ಸಹ ರಾಜ್ಯದ ಈ ಕ್ರಾಂತಿಕಾರಕ ಹಾಗೂ ರೈತೋಪಯೋಗಿ ಆ್ಯಪ್ ಸಮೀಕ್ಷೆಯಿಂದ ಪ್ರೇರಿತಗೊಂಡಿದ್ದು, ದೇಶದ ಇತರೆ ಜಿಲ್ಲೆಗಳಲ್ಲಿಯೂ ಸಹ ಜಾರಿಗೊಳಿಸಲು ಮುಂದಾಗಿದೆ ಎಂದರು.

ವೈದ್ಯಾಧಿಕಾರಿ ಸಾವಿಗೆ ದುಡ್ಡು ಪರಿಹಾರವಲ್ಲ, ಆತ್ಮಹತ್ಯೆಗೆ ಕಾರಣರಾದವರನ್ನು ಶಿಕ್ಷಿಸಿ: ಡಿ.ಕೆ ಶಿವಕುಮಾರ್

ಬೆಂಗಳೂರು:ಆತ್ಮಹತ್ಯೆ ಮಾಡಿಕೊಂಡ ವೈದ್ಯಾಧಿಕಾರಿ ಕುಟುಂಬಕ್ಕೆ ಸರ್ಕಾರ 50 ಲಕ್ಷ ರೂಪಾಯಿ ದುಡ್ಡು ನೀಡುವುದರಿಂದ ಅವರಿಗೆ ನ್ಯಾಯ ಸಿಗುವುದಿಲ್ಲ. ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಿಷ್ಟು:

‘ವೈದ್ಯಾಧಿಕಾರಿಗಳ ಸಾವಿಗೆ ನೀವು 50 ಲಕ್ಷನಾದ್ರೂ ಕೊಡಿ, 1 ಕೋಟಿಯಾದ್ರೂ ಕೊಡಿ. ಅವರ ಕುಟುಂಬದವರು ನಿಮ್ಮ ದುಡ್ಡು ಕಾಯ್ತಾ ಕೂತಿಲ್ಲ. ವೈದ್ಯಾಧಿಕಾರಿ ಯಾಕೆ ಆತ್ಮಹತ್ಯೆ ಮಾಡಿಕೊಂಡರು? ಅದಕ್ಕೆ ಕಾರಣರು ಯಾರು? ಅವರ ವಿರುದ್ಧ ಯಾವ ಕ್ರಮ ಕೈಗೊಂಡಿರಿ? ಎಂಬುದು ಮುಖ್ಯ. ವ್ಯಕ್ತಿ ಸತ್ತ ಮೇಲೆ ಇವರೇನು ಕೊಡುವುದು. ಆ ಹೆಣ್ಣುಮಗಳು ಇವರ ಬಳಿ ದುಡ್ಡುಕೊಡಿ ಅಂತಾ ಕೇಳಿದರಾ? ದುಡ್ಡು ಪರಿಹಾರವಲ್ಲ. ಅವರಿಗೆ ನ್ಯಾಯ ಒದಗಿಸಿಕೊಡಬೇಕು. ಅವರ ಈ ಸ್ಥಿತಿಗೆ ಕಾರಣವಾದರಿಗೆ ಶಿಕ್ಷೆ ಆಗಬೇಕು. ಮಾಧ್ಯಮಗಳು ಆಡಿಯೋ ಪ್ರಸಾರ ಮಾಡಿದ ಮೇಲೂ ಮುಖ್ಯಮಂತ್ರಿಗಳು ಯಾಕೆ ಯೋಚಿಸುತ್ತಿದ್ದಾರೆ?

ಕೊರೋನಾ ಸಮಯದಲ್ಲಿ ವೈದ್ಯರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಕೆಲಸ ಮಾಡುತ್ತಿದ್ದಾರೆ. ಅವರ ಸೇವೆಗೆ ಎಷ್ಟು ಗೌರವ ಕೊಟ್ಟರೂ ಸಾಲದು. ಪ್ರತಿ ಸಂದರ್ಭದಲ್ಲೂ ಅವರಿಗೆ ಧೈರ್ಯ ತುಂಬಬೇಕು ಅಂತಾ ಹೇಳುತ್ತಾ ಬಂದಿದ್ದೇನೆ. ನಾನು ವಿಕ್ಟೋರಿಯಾ ಆಸ್ಪತ್ರೆಗೆ ಹೋದಾಗ, ಕೆಲವು ಬಿಜೆಪಿ ನಾಯಕರು ಲೇವಡಿ ಮಾಡಿದರು. ನಾನು ಮಂತ್ರಿಯಲ್ಲ, ಸರ್ಕಾರದಲ್ಲಿಲ್ಲ. ಒಂದು ಪಕ್ಷದ ಜವಾಬ್ದಾರಿ ಸ್ಥಾನದಲ್ಲಿದ್ದು, ನಮ್ಮ ವೈದ್ಯರು, ಆರೋಗ್ಯ ಸಿಬ್ಬಂದಿಗೆ ರಕ್ಷಣೆ ನೀಡಿ, ಅವರ ಧ್ವನಿಯಾಗಿ ಕೆಲಸ ಮಾಡಬೇಕು ಅಂತಾ ಹೋಗಿದ್ದೆ. ಆದರೆ ಆಡಳಿತ ಪಕ್ಷದವರು ಟೀಕೆ ಮಾಡುತ್ತಿದ್ದಾರೆ, ಮಾಡಲಿ.

ತನ್ನ ಪತಿಯನ್ನು ಕಳೆದುಕೊಂಡ ಹೆಣ್ಣುಮಗಳು ಒಂದು ಹೇಳಿಕೆ ನೀಡಿದ್ದಾರೆ. ತಪ್ಪಿತಸ್ಥರನ್ನು ಬಂಧಿಸಲು ಸರ್ಕಾರಕ್ಕೆ ಇನ್ನು ಎಷ್ಟು ಸಮಯಬೇಕು? ಸಚಿವರುಗಳು ಡ್ಯಾಮೇಜ್ ಕಂಟ್ರೋಲ್ ಮಾಡಲು ಬೆಳಗ್ಗೆಯಿಂದ ಸಂಜೆವರೆಗೂ ನಿಂತುಕೊಂಡಿದ್ದಾರೆ. ನೀವು ಪ್ರಕರಣ ಮುಚ್ಚಿಹಾಕಲು ಯಾಕೆ ಪ್ರಯತ್ನಿಸುತ್ತಿದ್ದೀರಿ? ಆರೋಗ್ಯ ಇಲಾಖೆಯ ಸ್ಥಿತಿ ಬಗ್ಗೆ ಮಾಧ್ಯಮಗಳು ವಿಸ್ತಾರವಾಗಿ ವರದಿ ಮಾಡುತ್ತಿವೆ. ಆ ಮಾಧ್ಯಮಗಳು ನಮ್ಮ ಪಕ್ಷದವರಾ? ಅಲ್ಲ, ಜನರ ಧ್ವನಿ. ಅವರಿಗೆ ಸಿಕ್ಕ ವಾಸ್ತಾವಂಶವನ್ನು ಜನರಿಗೆ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತೇನೆ. ಆ ವೈದ್ಯ ಆರು ತಿಂಗಳಿಂದ ಮನೆಯಿಂದ ಹೊರಗಿದ್ದು, ಕೆಲಸ ಮಾಡಿದ್ದರೂ, ಅವರ ಮೇಲೆ ದೌರ್ಜನ್ಯವಾಗಿದೆ. ಅವರಿಗೆ ಬೈದು, ಆತ ಆತ್ಮಹತ್ಯೆ ಮಾಡಿಕೊಳ್ಳಲು ಕೆಲವರು ಕಾರಣರಾಗಿದ್ದರೂ, ನೀವು ಸುಮ್ಮನೆ ಇದ್ದೀರಿ ಎಂದರೆ ನಿಮ್ಮ ಸರ್ಕಾರ ಯಾವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ ಎಂದು ಗೊತ್ತಾಗುತ್ತದೆ.

ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ವೈದ್ಯರನ್ನು ಎಷ್ಟು ಕಠಿಣವಾಗಿ ನಡೆಸಿಕೊಳ್ಳುತ್ತಿದ್ದೀರಿ ಎಂಬುದಕ್ಕೆ ಇದೊಂದು ಸಣ್ಣ ಸಾಕ್ಷಿ. ಬೇರೆ ಪ್ರಕರಣಗಳಲ್ಲಿ ಸುಮೋಟೋ ಮೂಲಕ ತನಿಖೆ ನಡೆಸುವ ನೀವು, ಈ ವಿಚಾರದಲ್ಲಿ ಯಾಕೆ ಮೌನ ವಹಿಸಿದ್ದೀರಿ?

ಸರ್ಕಾರ ಅಧಿವೇಶನ ಕರೆದಿದ್ದು, ಈ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇನೆ ಅಂತ ಹೇಳಿದೆ. ಆದರೆ ಜನರನ್ನು ಉಳಿಸುವ ಕೆಲಸ ಮಾಡುತ್ತಿಲ್ಲ. ದೆಹಲಿ ಮಾದರಿ ಕ್ರಮ ಅಂತಿದ್ದರಲ್ಲಾ, ಇದೇನಾ? ಸರ್ಕಾರ ಈ ವಿಚಾರದಲ್ಲಿ ವಿಳಂಭ ಧೋರಣೆಗೆ ಶರಣಾಗಿದೆ. ಇವರಿಗೆ ಸರ್ಕಾರ ನಡೆಸಲು ಗೊತ್ತಿಲ್ಲ, ಅಧಿಕಾರಿಗಳನ್ನು ಬಳಸಿಕೊಳ್ಳಲೂ ಗೊತ್ತಿಲ್ಲ.’

ಯಾರು ಏನು ಬೇಕಾದರೂ ಹೇಳಲಿ:

ನಾನು ಪೊಲೀಸರಿಗೆ ಮನವಿಯನ್ನೂ ಮಾಡಿದ್ದೇನೆ. ಅಧಿಕಾರಿಗಳ ಪ್ರಾಮಾಣಿಕತೆ ಬಗ್ಗೆ ನನಗೆ ಅರಿವಿದೆ. ಅವರು ಕ್ಲೀನ್ ರೆಕಾರ್ಡ್ ಹೊಂದಿದ್ದಾರೆ. ಮಂತ್ರಿಗಳು ಇಂತವರಿಗೆ ನೋಟೀಸ್ ಕೊಡು ಅಂತಾ ಹೇಳುತ್ತಿದ್ದಾರೆ. ಹಾಗೆ ಹೇಳಲು ಅವರಿಗೆ ಸಂವಿಧಾನದಲ್ಲಿ ಯಾವ ಅಧಿಕಾರವಿದೆ? ಇಂತಹ ಹೇಳಿಕೆಯಿಂದ ಅವರು ಪ್ರಭಾವ ಬೀರುತ್ತಿದ್ದಾರೆ. ತನಿಖೆ ಮಾಡಲಿ, ತಪ್ಪು ಮಾಡಿದ್ದರೆ ಅವರಿಗೆ ಯಾವ ಶಿಕ್ಷೆ ಬೇಕಾದರೂ ನೀಡಲಿ. ನಮ್ಮ ಅಭ್ಯಂತರವಿಲ್ಲ.

ಮೊದಲ ದಿನದಿಂದ ಇವತ್ತಿನವರೆಗೂ ನಾವು ಗಲಭೆಯನ್ನು ಖಂಡಿಸುತ್ತಿದ್ದೇವೆ. ನಾವು ಯಾರಿಗೂ ಬೆದರಿಕೆ ಹಾಕುತ್ತಿಲ್ಲ. ಆದರೆ ಸರ್ಕಾರ ಅವರಿಗೆ ಬೆದರಿಕೆ ಹಾಕುತ್ತಿದೆ.

ಕೊರೋನಾ ಸಮಯದಲ್ಲಿ ಮಂತ್ರಿಗಳು, ಬಿಜೆಪಿ ಶಾಸಕರು, ಸಂಸದರು ಕೋಮು ಗಲಭೆಗೆ ಪ್ರೇರಣೆ ನೀಡುವ ಹೇಳಿಕೆ ನೀಡಿದ್ದರು. ಅದನ್ನು ತಡೆಯಲು ಮುಖ್ಯಮಂತ್ರಿಗಳು ಯಾವುದಾದರೂ ಕ್ರಮ ಕೈಗೊಂಡರಾ? ಈ ಗಲಭೆ ಬಗ್ಗೆ ಹೊರಗಿನ ಜನ ಗಮನಿಸುತ್ತಿದ್ದಾರೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಆಹ್ವಾನ ನೀಡುತ್ತಿದ್ದೀರಿ. ಇದಕ್ಕೆ ಈ ಬೆಳವಣಿಗೆಗಳು ಅಡ್ಡಿಯಾಗುತ್ತವೆ. ಶಿವಮೊಗ್ಗದಲ್ಲಿ ಕೂತು ಒಬ್ಬ ಮಂತ್ರಿ ಮಾತನಾಡಿದರೆ, ಮತ್ತೊಬ್ಬರು ಚಿಕ್ಕಮಗಳೂರಿನಲ್ಲಿ, ಇನ್ನೊಬ್ಬರು ಬೆಂಗಳೂರಿನಲ್ಲಿ… ಹೀಗೆ ಒಂದೊಂದು ಕಡೆಯಿಂದಲೂ ಹೇಳಿಕೆ ಬರುತ್ತಿವೆ. ಇವರಿಗೆ ಲಂಗು ಲಗಾಮು ಇಲ್ವಾ?

ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಗುಪ್ತಚರ ದಳದ ವೈಫಲ್ಯ ಮುಚ್ಚಿಕೊಳ್ಳಲು ಗಲಭೆಗೆ ಕಾಂಗ್ರೆಸ್ ಆಂತರಿಕ ಬಿಕ್ಕಟ್ಟು ಕಾರಣ ಎಂದು ದಾರಿ ತಪ್ಪಿಸಬೇಡಿ. ದೂರು ನೀಡುವಾಗ ಯಾರು, ಎಲ್ಲಿದ್ದರೂ ಎಲ್ಲವೂ ನನಗೆ ಗೊತ್ತಿದೆ. ತನಿಖೆ ಪಾಡಿಗೆ ತನಿಖೆ ನಡೆಯಲಿ. ಅದನ್ನು ಸೂಕ್ತ ಸಮಯದಲ್ಲಿ, ಸೂಕ್ತ ವೇದಿಕೆಯಲ್ಲಿ ಮಾತನಾಡುತ್ತೇನೆ. ಮಂತ್ರಿಗಳು ಪೊಲೀಸ್ ಅಧಿಕಾರಿಗಳಿಗೆ ಸ್ವತಂತ್ರವಾಗಿ ತನಿಖೆ ನಡೆಸಲು ಬಿಡಬೇಕು. ನೀವ್ಯಾಕೆ ದಾರಿ ತಪ್ಪಿಸುತ್ತೀರಿ?

ಮುಖ್ಯಮಂತ್ರಿಗಳು ತಾವು ಆಡಿದ ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರಾ? ಯಾವ ಸರ್ಕಾರವೂ ಶಾಶ್ವತ ಅಲ್ಲ. ಇವತ್ತು ಇವರಿದ್ದರೆ, ನಾಳೆ ಮತ್ತೊಬ್ಬರು ಬರುತ್ತಾರೆ. ಆದರೆ ಅಧಿಕಾರಿಗಳು ಶಾಶ್ವತ. ಅಧಿಕಾರಿಗಳು ಹರಕೆಯ ಕುರಿಯಾಗಬಾರದು. ನೊಟೀಸ್ ಕೊಟ್ಟು ಅವರನ್ನ ಕರೆಸಿ ಥ್ರೆಟ್ ಮಾಡ್ತಿದ್ದಾರೆ.

ನನ್ನ ಫೋನ್ ಟ್ಯಾಪ್ ಮಾಡಲಾಗ್ತಿದೆ:

ನಿನ್ನೆ, ಮೊನ್ನೆವರೆಗೂ ನನ್ನ ಫೋನ್ ಸರಿಯಾಗಿತ್ತು. ಈಗ ಕರೆ ಸರಿಯಾಗಿ ಬರ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡುತ್ತೇನೆ. ನನ್ನ ಫೋನ್ ಟ್ಯಾಪ್ ಆಗುತ್ತಿದೆ ಎಂದೆನಿಸುತ್ತಿದೆ. ಸಾಕ್ಷ್ಯ ಇಲ್ಲದೆ ಆರೋಪ ಮಾಡುವುದಿಲ್ಲ. ನಮ್ಮ ಸುದರ್ಶನ್ ಕಾಲ್ ಮಾಡಿದ್ದಾರೆ, ಆದರೆ ಕಾಲ್ ಬರ್ತಿಲ್ಲ.

ಉತ್ತರ ಕರ್ನಾಟಕ ಪ್ರವಾಸ ಮಾಡಬೇಕು:

ಪ್ರವಾಹ ಪೀಡಿತ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿ ಪರಿಶೀಲಿಸಬೇಕಿದೆ. ಹೀಗಾಗಿ ಕಳೆದ ವರ್ಷ ಏನಾಗಿತ್ತು? ಸರ್ಕಾರ ಯಾವ ಭರವಸೆ ನೀಡಿತ್ತು? ಕೊಟ್ಟ ಭರವಸೆಯಲ್ಲಿ ಎಷ್ಟು ಈಡೇರಿಸಿದೆ ಎಂಬುದನ್ನು ನೋಡಬೇಕು. ಸರ್ಕಾರ ಪರಿಸ್ಥಿತಿ ನಿಭಾಯಿಸಲು ವಿಫಲವಾಗಿದೆ. ನಾಲ್ಕು ತಿಂಗಳಿಂದ ವೃದ್ಧರಿಗೆ ನೀಡುವ ಪಿಂಚಣಿಯನ್ನೇ ಕೊಟ್ಟಿಲ್ಲ. ನೇಕಾರರು ರಾಜ್ಯದ ವಿವಿಧ ಭಾಗಗಳಿಂದ ದೂರು ನೀಡುತ್ತಿದ್ದಾರೆ. ನಮ್ಮ ಮಂತ್ರಿಗಳು ನಮ್ಮಲ್ಲಿ ತೀವ್ರ ನೆರೆ ಪರಿಸ್ಥಿತಿ ಇಲ್ಲ ಅಂತಿದ್ದಾರೆ. ಹಾಗಾದ್ರೆ ಮಾಧ್ಯಮಗಳು ತೋರಿಸಿದ್ದೇನು?

ಮಂತ್ರಿಗಳಾದವರು ಕಷ್ಟದ ಸಮಯದಲ್ಲಿ ಜನರನ್ನು ಭೇಟಿ ಮಾಡಿ ಅವರಿಗೆ ಧೈರ್ಯ ತುಂಬ ಬೇಕು. ಅಧಿಕಾರಿಗಳಿಗೆ ನಿರ್ದಿಷ್ಟ ಸೂಚನೆ ನೀಡಬೇಕು. ಅದನ್ನು ಬಿಟ್ಟು ಹಬ್ಬ ಇದ್ದಾಗ ಹೋಗುವುದಲ್ಲ.

ರಾಜ್ಯದ ಜನತೆಗೆ ಶುಭಾಶಯಗಳು:

ರಾಜ್ಯದ ಜನತೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಗೌರಿ ಹಾಗೂ ಗಣೇಶ ಹಬ್ಬದ ಶುಭಾಶಯಗಳು. ಈ ವರ್ಷ ಬಹಳ ಕಷ್ಟದ ದಿನಗಳನ್ನು ನಾವು ಎದುರಿಸಿದ್ದೇವೆ. ತಾಯಿ ಗೌರಿ ಹಾಗೂ ವಿಘ್ನ ನಿವಾರಕ ವಿಘ್ನೇಶ್ವರ ನಾಡಿನ ಜನತೆಗೆ ನೆಮ್ಮದಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಸರ್ಕಾರ ಏನೇ ಮಾನದಂಡ ಹಾಕಿದ್ದರೂ ಹಬ್ಬದ ಆಚರಣೆ ವೇಳೆ ಆಡಂಬರ ಬೇಡ. ಆದಷ್ಟು ಅಂತರ ಕಾಯ್ದುಕೊಳ್ಳಿ ಎಂದು ನಮ್ಮ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಮನವಿ ಮಾಡಿಕೊಳ್ಳುತ್ತೇನೆ.

ನವೀನ ಕೃಷಿ ತಂತ್ರಜ್ಞಾನ ರೈತರ ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು:ಬಿ.ಸಿ.ಪಾಟೀಲ್

ಬೆಂಗಳೂರು,ಆ.21: ನವೀನ ಕೃಷಿ ತಂತ್ರಜ್ಞಾನ ರೈತರ ಸಮಸ್ಯೆಗಳನ್ನು ಪರಿಹರಿಸಬಲ್ಲದು ಹಾಗೂ ತಂತ್ರಜ್ಞಾನ ಕೃಷಿ ಕ್ಷೇತ್ರದಲ್ಲಿ ಯುವ ಸಮುದಾಯಕ್ಕೆ ಅವಕಾಶವನ್ನು ಸೃಷ್ಟಿಸಬಲ್ಲದು ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ವಿಕಾಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ “ಕೃಷಿ ನವೋದ್ಯಮ” (ಅಗ್ರಿ ಸ್ಟಾರ್ಟಪ್) ಸಮ್ಮೇಳನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು 2014 ರಿಂದ ಕೇಂದ್ರ ಸರ್ಕಾರವನ್ನು ಮುನ್ನಡೆಸುತ್ತಿದ್ದು, ಮೋದಿಯವರಿಂದಾಗಿ ದೇಶದಲ್ಲಿ ಸ್ಟಾರ್ಟಪ್ ಗಳ ಯುಗ ಆರಂಭವಾಯಿತು. 2018 ರ ಹೊತ್ತಿಗೆ ದೇಶದಲ್ಲಿ 50 ಸಾವಿರ ನವೋದ್ಯಮಗಳು, ಹಾಗೂ ಬಳಿಕ 9,300 ಸ್ಟಾರ್ಟಪ್ ಗಳು ಪ್ರಾರಂಭವಾದವು. ಇವುಗಳ ಪೈಕಿ 474 ಕೃಷಿ ಉದ್ಯಮಗಳು ಆರಂಭವಾಗಿವೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕೃಷಿ ಕ್ಷೇತ್ರಕ್ಕೆ ನವಚೈತನ್ಯವನ್ನು ಒದಗಿಸಲು ಕೃಷಿ ಸ್ಟಾರ್ಟಪ್ ಗಳನ್ನು ಆರಂಭಿಸಿ ರೈತರು ಹಾಗೂ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ವೇದಿಕೆ ಸೃಷ್ಟಿಸಲಾಗಿದೆ ಎಂದರು.

ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ 4 ಸಾವಿರ ಸ್ಟಾರ್ಟಪ್ ಗಳನ್ನು ಆರಂಭಿಸಲಾಗುತ್ತಿದೆ. ದೇಶದ ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಆರಂಭಿಕ ನೀತಿಗಳನ್ನು ಹೊರತಂದಿದೆ. ಇದರಿಂದಾಗಿ ವಾರ್ಷಿಕವಾಗಿ 4,000 ನವೋದ್ಯಮ ಸೃಷ್ಟಿಸಲು ಅನುಕೂಲವಾಗಿದೆ. ಸ್ಟಾರ್ಟಪ್ ಗಳು ಯುವಕರಿಗೆ 1.7 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಿದೆ. ಭಾರತದಲ್ಲಿ ಕೃಷಿ ನವೋದ್ಯಮ ಪ್ರಾರಂಭದ ಹಂತದಲ್ಲಿಯೇ ಆಕರ್ಷಿತವಾಗಿರುವುದು ಹೆಮ್ಮೆಯ ವಿಚಾರ. ಅಂಕಿಅಂಶಗಳ ಪ್ರಕಾರ ಪ್ರತಿದಿನ 2 ರಿಂದ 3 ಸ್ಟಾರ್ಟ್ಅಪ್ಗಳು ಭಾರತದಲ್ಲಿ ಸ್ಥಾಪನೆಯಾಗುತ್ತಿವೆ.ಅಕ್ಸೆಂಚರ್ ಕಂಪನಿಯು ಮಾಡಿದ ಸಮೀಕ್ಷೆಯ ಅಂದಾಜಿನ ಪ್ರಕಾರ, ನಮ್ಮ ದೇಶದಲ್ಲಿ ಅಗ್ರಿ ಸ್ಟಾರ್ಟ್ಅಪ್‌ಗಳಿಂದ 4.5 ಬಿಲಿಯನ್ ಡಾಲರ್ ಮಾರುಕಟ್ಟೆಯ ಸೃಷ್ಟಿ ಆಗಲಿದೆ ಎಂದು ಅಂದಾಜಿಸಲಾಗಿದೆ ಎಂದರು.

ಸ್ಟಾರ್ಟಪ್ ವ್ಯವಸ್ಥೆಗಳನ್ನು ಹೊಂದಿರುವ ವಿಶ್ವದ 20 ಅಗ್ರ ದೇಶಗಳಲ್ಲಿ ಬೆಂಗಳೂರು 15 ನೇ ಸ್ಥಾನವನ್ನು ಪಡೆದುಕೊಂಡಿದೆ. ಅಲ್ಲದೇ ಏಷ್ಯಾ ಖಂಡದಲ್ಲಿ ಸಿಂಗಾಪೂರ್ ಬಳಿಕ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವೆಂದು ಸಹ ಬೆಂಗಳೂರು ಗುರುತಿಸಲ್ಪಟ್ಟಿದೆ. ಕರ್ನಾಟಕ ರಾಜ್ಯ ಜೈವಿಕ ಹಾಗೂ ಸಿರಿಧಾನ್ಯಗಳ ಹಬ್ ಎಂದು ಕರೆಯಲ್ಪಟ್ಟಿದೆ. ಮಧ್ಯಾಹ್ನದ ಬಿಸಿಯೂಟದಲ್ಲಿ ಸಿರಿಧಾನ್ಯವನ್ನು ಪರಿಚಯಿಸಲು ಸರ್ಕಾರ ಚಿಂತನೆ ನಡೆಸಿದೆ. ಇದರಿಂದಾಗಿ ಕೃಷಿಕರಿಗೆ ಇನ್ನಷ್ಟು ಅನುಕೂಲವಾಗಲಿದೆ. ರಾಜ್ಯದಲ್ಲಿ ಜೀವರ್ಗಿ, ಹಿರಿಯೂರು, ಮಾಲೂರು ಹಾಗೂ ಬಾಗಲಕೋಟೆಯಲ್ಲಿ ಈಗಾಗಲೇ ಮೆಗಾಫುಡ್ ಪಾರ್ಕ್ ಗಳಿದ್ದು, ಕೇಂದ್ರ ಸರ್ಕಾರದಡಿ ಕೆ.ಆರ್.ಪೇಟೆ ಹಾಗೂ ತುಮಕೂರಿನಲ್ಲಿಯೂ ಮೆಗಾಫುಡ್ ಪಾರ್ಕ್ ಆರಂಭಿಸಲಾಗಿದೆ. ಆ ಮೂಲಕ ಕೃಷಿ ಉತ್ಪಾದನಾ, ಆಹಾರ ಉತ್ಪಾದನಾ ಕ್ಷೇತ್ರಗಳಿಗೆ ರಾಜ್ಯದಲ್ಲಿ ಆದ್ಯತೆ ಕಲ್ಪಿಸಲಾಗಿದೆ. ಆತ್ಮ ನಿರ್ಭರ್ ಯೋಜನೆಯಡಿ ಆಹಾರ ಉತ್ಪಾದನಾ ಕೈಗಾರಿಕೆಗಳಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ವೆಬಿನಾರ್ ನಲ್ಲಿ ಸಚಿವರು ಮಾಹಿತಿ ಹಂಚಿಕೊಂಡರು.

ಕೃಷಿ ನವೋದ್ಯಮದಲ್ಲಿ ಕೃಷಿ ಉತ್ಪಾದನ ಉದ್ಯಮಿಗಳು ದೇಶಾದ್ಯಂತ ಸಕ್ರಿಯವಾಗಿ ಭಾಗವಹಿಸಿರುವುದು ಖುಷಿ ತಂದಿದೆ. ಕೊರೊನಾ ವೈರಸ್‌ನಿಂದಾಗಿ ಬಿಕ್ಕಟ್ಟಿನ ಅವಧಿಯಲ್ಲಿ ರೈತರು ಬೆಳೆದ ತರಕಾರಿ ಹಣ್ಣು ಸೇರಿದಂತೆ ಕೃಷಿ ಫಸಲುಗಳು ನಾಶವಾಗದಂತೆ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕೋಲ್ಡ್ ಸ್ಟೋರೇಜ್ ಗಳನ್ನು ಆರಂಭಿಸಲಾಯಿತು.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬೆಂಬಲ ಸಹಕಾರ ಸೂಚನೆಯಡಿ ಕೃಷಿಕ್ಷೇತ್ರದಲ್ಲಿ ರೈತರಿಗೆ ಇನ್ನಷ್ಟು ಅನುಕೂಲ ಕಲ್ಪಿಸುವ ಹೊಸಹೊಸ ಯೋಜನೆಗಳನ್ನು ಜಾರಿಗೊಳಿಸಲಾಗುವುದು.ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಜ್‌ಕುಮಾರ್ ಕತ್ರಿ ಅವರ ಮೇಲ್ವಿಚಾರಣೆಯಲ್ಲಿ ಕೃಷಿ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿ ವರ್ಗಗಳು ಉದ್ಯಮಿಗಳಿಗಾಗಿ ಕೃಷಿ ನವೋದ್ಯಮ ವೇದಿಕೆ ಆಯೋಜಿಸಿರುವುದು ಸಂತಸ ಹಾಗೂ ಹೆಮ್ಮೆಯ ವಿಚಾರ ಎಂದರು.

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಜ್ ಕುಮಾರ್ ಕತ್ರಿ ಸ್ವಾಗತಿಸಿ, ಕೃಷಿ ಇಲಾಖೆ ಆಯುಕ್ತ ಬ್ರಿಜೆಷ್ ಕುಮಾರ್ ದೀಕ್ಷಿತ್ ವಂದಿಸಿದರು.

ಡಿಜೆ ಹಳ್ಳಿ ಗಲಭೆ ಕುರಿತಂತೆ ಬಿಜೆಪಿ–ಕಾಂಗ್ರೆಸ್‌ಗೆ ಎಚ್‌.ಡಿ ಕುಮಾರಸ್ವಾಮಿ ಬಹಿರಂಗ ಪತ್ರ

ಬೆಂಗಳೂರು: ಜನರ ಮನಸ್ಸಿನಲ್ಲಿರಬಹುದಾದ ತಮ್ಮ ವಿಶ್ವಾಸಾರ್ಹತೆ, ಉತ್ತರದಾಯಿತ್ವವನ್ನು ಬಿಜೆಪಿ ಕಾಂಗ್ರೆಸ್‌ ಪಕ್ಷಗಳೆರಡೂ ಕಳೆದುಕೊಂಡು ನಿರ್ವಾಣಗೊಂಡಿವೆ. ಪ್ರತಿ ಘಟನೆಯಲ್ಲೂ ರಾಜಕೀಯ ಧ್ರುವೀಕರಣಕ್ಕೆ ಬೇಕಾಗುವ ಅಂಶ ಹುಡುಕುವ ಈ ಎರಡೂ ಪಕ್ಷಗಳು ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರಿಸಬಲ್ಲವೇ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಬಹಿರಂಗ ಪತ್ರ ಬರೆದಿದ್ದಾರೆ.

ಡಿ.ಜೆ ಹಳ್ಳಿ ಗಲಭೆಯು ರಾಜ್ಯದ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆ. ಈ ಘಟನೆಯನ್ನು ಪರಾಮರ್ಶಿಸಿ, ದುಷ್ಟರನ್ನು ಶಿಕ್ಷಿಸುವ ಕಾರ್ಯವಾಗಬೇಕಾಗಿತ್ತು. ಈ ಘಟನೆಯ ಅಧ್ಯಯನದ ಮೂಲಕ ಮುಂದಿನ ದಿನಗಳಲ್ಲಿ ಗಲಭೆಗಳು ಸಂಭವಿಸದಂತೆ ಎಚ್ಚರಿಕೆ, ಜವಾಬ್ದಾರಿಯುತ ನಡವಳಿಕೆಯನ್ನು ಸರ್ಕಾರ ಮತ್ತು ಅದರ ಚುಕ್ಕಾಣಿ ಹಿಡಿದಿರುವ ಪಕ್ಷ, ವಿಪಕ್ಷ ಪ್ರದರ್ಶಿಸಬೇಕಾಗಿತ್ತು. ಆದರೆ, ಈ ಘಟನೆಯನ್ನೇ ನೆಪ ಮಾಡಿಕೊಂಡು ರಾಷ್ಟ್ರೀಯ ಪಕ್ಷಗಳೆರಡು ಕೆಸರೆರಚಾಟದಲ್ಲಿ ತೊಡಗಿವೆ ಎಂದಿದ್ದಾರೆ.

ಕಾಂಗ್ರೆಸ್‌ಗೆ ಪ್ರಶ್ನೆ: ಅಲ್ಪ ಸಂಖ್ಯಾತರನ್ನು ರಕ್ಷಿಸಬೇಕಾದ್ದು ಯಾವಾಗ?

1. ಡಿಜೆ ಹಳ್ಳಿ ಗಲಭೆ ಪ್ರಕರಣ ಮತ್ತು ಪಾದರಾಯನಪುರ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್‌ ಅಲ್ಪಸಂಖ್ಯಾತರ ರಕ್ಷಕನಂತೆ ತನ್ನನ್ನು ತಾನು ಬಿಂಬಿಸಿಕೊಳ್ಳುತ್ತಿದೆ. ಅನ್ಯ ಕೋಮಿನ ಜನರ ಅಪರಾಧ ಪ್ರಕರಣಗಳ ಸಂದರ್ಭದಲ್ಲಿ ಎದ್ದು ನಿಲ್ಲುವ ಕಾಂಗ್ರೆಸ್‌, ಪೌರತ್ವ ತಿದ್ದುಪಡಿ ಕಾಯ್ದೆಯಂಥ ದುರಿತ ಕಾಲದಲ್ಲಿ ಅಲ್ಪಸಂಖ್ಯಾತರ ರಕ್ಷಣೆಗೆ ಏಕೆ ನಿಲ್ಲಲಿಲ್ಲ? ಮಂಗಳೂರಿನಲ್ಲಿ ಗೋಲಿಬಾರ್‌ ಆಗಿ ಅಲ್ಪಸಂಖ್ಯಾತ ಯುವಕರು ಮೃತಪಟ್ಟಾಗ ಎಲ್ಲಿ ಹೋಗಿತ್ತು ಈ ಕಾಳಜಿ? ಕ್ರೈಂ ಸಂಭವಿಸಿದಾಗ ಮಾತ್ರವೇ ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರ ರಕ್ಷಣೆ ಕಾಣಿಸುತ್ತದೆಯೇ?

2. ಗಲಭೆಯಲ್ಲಿ ನಷ್ಟವನ್ನು ಗಲಭೆಕೋರರಿಂದ ಸಂಗ್ರಹಿಸಲು ಹೊರಟ ಸರ್ಕಾರಕ್ಕೆ ಕಾಂಗ್ರೆಸ್‌ ಸಲಹೆಹೊಂದನ್ನು ನೀಡಿದೆ. ‘ಇನ್ನೊಂದು ಕಡೆ‘ಯವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಹೇಳಿದೆ. ಹಾಗಾದರೆ, ಆ ‘ಇನ್ನೊಂದು ಕಡೆಯವರು’ ಯಾರು ಎಂದು ಕಾಂಗ್ರೆಸ್‌ ಧೈರ್ಯದಿಂದ ಹೇಳಬಹುದೇ?

3.ಎಸ್‌ಡಿಪಿಐ ಅನ್ನು ನಿಷೇಧಿಸುವ ವಿಚಾರ ಬಂದಾಗ ಕಾಂಗ್ರೆಸ್‌ ಸಿಡಿದೆದ್ದು ನಿಲ್ಲುತ್ತದೆ. ತಾಕತ್ತಿದ್ದರೆ ಅದನ್ನು ನಿಷೇಧಿಸಿ ಎಂದು ಆಡಳಿತದಲ್ಲಿರುವವರಿಗೆ ಸವಾಲೆಸೆಯುತ್ತದೆ. ಅದರ ನಿಷೇಧವಾಗುವುದು, ಆಗದೇ ಇರುವುದರಲ್ಲಿ ಕಾಂಗ್ರೆಸ್‌ಗೆ ಏನು ಲಾಭವಿದೆ? ಇದರ ವಿವರಣೆ ನೀಡಬಹುದೇ?

4. ಗಲಭೆಯಲ್ಲಿ ಏನೋ ರಾಜಕೀಯ ಷಡ್ಯಂತ್ರವಿದೆ ಎಂಬುದು ಕಾಂಗ್ರೆಸ್ ಆರೋಪ. ಆ ಷಡ್ಯಂತ್ರ ಕಾಂಗ್ರೆಸ್‌ ಒಳಗಿನದ್ದೋ, ಹೊರಗಿನದ್ದೋ? ಟಿಕೆಟ್‌ ಆಕಾಂಕ್ಷಿಗಳದ್ದೋ? ಗುಟ್ಟಾಗಿರುವ ಈ ವಿಷಯ ಬಹಿರಂಗಗೊಳಿಸಲು ಕಾಂಗ್ರೆಸ್‌ಗೆ ತಾಕತ್ತು ಇದೆಯೇ? ಬೇರೆ ಪಕ್ಷಗಳಿಂದ ಕರೆದುಕೊಂಡು ಹೋದ ಮುಖಂಡರು ಕಾಂಗ್ರೆಸ್‌ಗೆ ಕೆಲ ಬಾರಿ ಅಪಥ್ಯವಾಗುತ್ತಾರೆಯೇ?

5. ಆಂತರಿಕ ಸಮಸ್ಯೆಯನ್ನು ಗಲಭೆಯಾಗಿ ಪರಿವರ್ತಿಸಿ, ಎರಡು ಕೋಮುಗಳ ನಡುವೆ ಮನಸ್ಥಾಪ ತಂದಿಟ್ಟು, ಸಾಮಾಜಿಕ ಸಾಮರಸ್ಯ ಹಾಳು ಮಾಡಿದ ಬಗ್ಗೆ ಕಾಂಗ್ರೆಸ್‌ಗೆ ಸ್ವಲ್ಪವಾದರೂ ಅಳುಕಿದೆಯೇ?

ಬಿಜೆಪಿಗೆ ಪ್ರಶ್ನೆ: ಬೆಂಕಿ ಬಿದ್ದ ಮನೆಯಲ್ಲೂ ರಾಜಕಾರಣ ಮಾಡುವಿರೇ?

1. ಡಿಜೆ ಹಳ್ಳಿ ಪ್ರಕರಣ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಗೃಹ ಇಲಾಖೆ, ಗುಪ್ತಚರ ಇಲಾಖೆ ಮತ್ತು ಸರ್ಕಾರದ ಅತಿ ದೊಡ್ಡ ವೈಫಲ್ಯ. ಇದರ ಹೊಣೆ ಹೊರಬೇಕಾದ ಬಿಜೆಪಿ ಸರ್ಕಾರ ಅಕ್ಷರಶಃ ಹೊಣೆಗೇಡಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಗೃಹ ಇಲಾಖೆಯ ಯಾವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ? ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ ಇದರಲ್ಲಿ ರಾಜಕೀಯ ಧ್ರುವೀಕರಣದ ಸಂಚು ನಡೆಸುತ್ತಿದೆ. ನಾಚಿಕೆಯಾಗದೇ ಬಿಜೆಪಿಗೆ?

2. ಡಿಜೆ ಹಳ್ಳಿ ಘಟನೆಯಲ್ಲಿ ಕಾಂಗ್ರೆಸ್ಸಿಗರೇ ದುಷ್ಕೃತ್ಯ ನಡೆಸಿದ್ದಾರೆ, ಕಾಂಗ್ರೆಸ್‌ನ ಕೈವಾಡವಿದೆ ಎಂದು ಬೀದಿಯಲ್ಲಿ ಹೇಳುತ್ತಿರುವ ಬಿಜೆಪಿಯ ವಾಚಾಳಿ, ಬಾಯಿಬಡುಕ ಮಂತ್ರಿ, ಶಾಸಕರು ತಮ್ಮ ಬಳಿ ಇರುವ ಕಾಂಗ್ರೆಸ್‌ ವಿರುದ್ಧದ ಸಾಕ್ಷಿಯನ್ನು ತನಿಖಾಧಿಕಾರಿಗಳಿಗೆ ಕೊಡಬಾರದು ಏಕೆ? ಹೇಗಿದ್ದರು ಸರ್ಕಾರವೇ ಬಿಜೆಪಿಯದ್ದಾಗಿದೆ. ಸೂಕ್ತ ತನಿಖೆ ನಡೆಸಿ ಕಾಂಗ್ರೆಸ್‌ ವಿರುದ್ಧ ಕ್ರಮ ಕೈಗೊಳ್ಳಬಾರದೇಕೆ? ಸಾಕ್ಷ್ಯವಿಲ್ಲವಾದರೆ ಬಿಜೆಪಿಯದ್ದೂ ಕೇವಲ ರಾಜಕೀಯ ಧ್ರುವೀಕರಣ ಉದ್ದೇಶದ ಬಡಾಯಿತನವೇ?

3.ಗಲಭೆ ಸೃಷ್ಟಿಸಲೆಂದೇ ಅನ್ಯ ರಾಜ್ಯಗಳಿಂದ ಗೂಂಡಾಗಳನ್ನು ಕರೆತರಲಾಗಿತ್ತು ಎಂದು ಬಿಜೆಪಿ ಆರಂಭದಲ್ಲಿ ಉಯಿಲೆಬ್ಬಿಸಿತು. ಹಾಗಾದರೆ, ಘಟನೆಗೆ ಸಂಬಂಧಿಸಿದಂತೆ ಈ ವರೆಗೆ ಬಂಧನಕ್ಕೊಳಗಾಗಿರುವ ಅನ್ಯರಾಜ್ಯದ ಗೂಂಡಾಗಳು ಎಷ್ಟು ಜನ? ಕೋವಿಡ್‌ ಸಂದರ್ಭದಲ್ಲಿ ಗಡಿಯಲ್ಲಿ ಸಂಚಾರ ಕಷ್ಟವಿರುವಾಗ ಗೂಂಡಾಗಳು ಗುಂಪು ಗುಂಪಾಗಿ ನಮ್ಮ ಚೆಕ್‌ ಪೋಸ್ಟ್‌ಗಳನ್ನು ದಾಟಿ ಬಂದದ್ದು ಹೇಗೆ? ಬಂದಿದ್ದೇ ಆದರೆ, ವೈಫಲ್ಯ ಯಾರದ್ದು?

4. ದೊಡ್ಡ ಅಂತರದ ಮತಗಳಿಂದ ಗೆದ್ದ ಶಾಸಕನೊಬ್ಬನ ಮನೆಗೇ ರಕ್ಷಣೆ ಹಾಗೂ ಪೊಲೀಸ್ ಠಾಣೆಗೆ ರಕ್ಷಣೆ ನೀಡಲಾರದಷ್ಟು ದುರ್ಬಲವಾಗಿರುವ, ಶಕ್ತಿಹೀನ ಸರ್ಕಾರ ಸಾಮಾನ್ಯರಲ್ಲಿ ಸಾಮಾನ್ಯರ ಹಿತ ಕಾಯಲು ಶಕ್ತವಾಗಿದೆಯೇ? ಹಾಗಿಲ್ಲ ಎಂದಮೇಲೆ ಸರ್ಕಾರ ಇದ್ದು ಪ್ರಯೋಜನವೇನು? ಇಲ್ಲವೇ, ಬಿಬಿಎಂಪಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಇಂಥದ್ದೊಂದು ಗಲಭೆ ಬೇಕಾಗಿತ್ತೇ?

5. ಕೋಮು ಸೂಕ್ಷ್ಮ ವಿಚಾರಗಳಲ್ಲಿ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ನೂಕು ನುಗ್ಗಲಿನಲ್ಲೂ ಮುಂದೆ ಬರುವ ಬಿಜೆಪಿಗೆ ನೈತಿಕ ರಾಜಕಾರಣದ ಅರ್ಥವೇನಾದರೂ ಗೊತ್ತಿದೆಯೇ?

ಅಧಿಕಾರ ಪಡೆಯುವುದು ಎಲ್ಲ ರಾಜಕೀಯ ಪಕ್ಷಗಳ ಪರಮ ಗುರಿ ಹೌದು. ಆದರೆ, ಅದರಲ್ಲಿ ಸಾಮಾಜಿಕ ಜವಾಬ್ದಾರಿಗಳಿರಬೇಕು, ಉತ್ತರದಾಯಿತ್ವವಿರಬೇಕು, ಪ್ರಾಮಾಣಿಕತೆ ಇರಬೇಕು. ಸಾಮಾಜಿಕ ಸಾಮರಸ್ಯಕ್ಕೆ ಸಂಬಂಧಿಸಿದ ವಿಚಾರವೊಂದರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡೆದುಕೊಳ್ಳುತ್ತಿರುವ ರೀತಿಯಲ್ಲಿ ಇದ್ಯಾವುದೂ ಇಲ್ಲ. ಇನ್ನಾದರೂ ಸಣ್ಣತನದ ರಾಜಕೀಯ ಬಿಡಿ ಎಂದು ಬಹಿರಂಗ ಪತ್ರ ಬರೆದಿದ್ದಾರೆ.