ಸಿಇಟಿ ಫಲಿತಾಂಶ ಪ್ರಕಟ: ಎಂಜಿನಿಯರಿಂಗ್’ನಲ್ಲಿ ಎಂ. ರಕ್ಷಿತಾ, ವರುಣ್ ಗೌಡ, ಸಾಯಿ ವಿವೇಕ್ ಟಾಪರ್

ಬೆಂಗಳೂರು: ಮಹಾಮಾರಿ ಕೋವಿಡ್-19 ನಡುವೆಯೂ ವೃತ್ತಿಪರ ಶಿಕ್ಷಣ ಕೋರ್ಸುಗಳ ಪ್ರವೇಶಕ್ಕಾಗಿ ನಡೆಸಲಾಗಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಬೆಂಗಳೂರಿನಲ್ಲಿ ಗುರುವಾರ ಪ್ರಕಟಿಸಿದರು.

ಎಂಜಿನಿಯರಿಂಗ್, ಪಶುವೈದ್ಯಕೀಯ, ಬಿಎಸ್ಸಿ (ಕೃಷಿ), ಬಿ- ಫಾರ್ಮಾ, ಡಿ-ಪಾರ್ಮಾ, ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕೋರ್ಸುಗಳ ಪ್ರವೇಶಕ್ಕಾಗಿ ಸಿಇಟಿ ನಡೆಸಲಾಗಿತ್ತು. ವರಮಹಾಲಕ್ಷ್ಮಿ ಹಬ್ಬದಂದು ಪರೀಕ್ಷೆ ನಡೆಸಿದ್ದ ಕೆಇಎ, ಗೌರಿ ಹಬ್ಬದಂದು ಫಲಿತಾಂಶ ಪ್ರಕಟಿಸಿದೆ. ದಾಖಲೆಯ 20 ದಿನಗಳಲ್ಲೇ ಫಲಿತಾಂಶ ಕೊಟ್ಟಿರುವುದು ಕೆಇಎನ ಹೆಗ್ಗಳಿಕೆ ಎಂದು ಉಪ ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇಡೀ ದೇಶಕ್ಕೆ ಸಿಇಟಿಯನ್ನು ಕೊಟ್ಟು ಉನ್ನತ ಶಿಕ್ಷಣಕ್ಕೆ ಹೊಸ ಆಯಾಮ ನೀಡಿದ ಕರ್ನಾಟಕದಲ್ಲಿ ಈ ವರ್ಷ ಕೋವಿಡ್ ಕಾರಣಕ್ಕೆ ಪರೀಕ್ಷೆ ನಡೆಸುವುದೇ ಕಷ್ಟವೆನ್ನುವ ಪರಿಸ್ಥಿತಿ ತಲೆದೋರಿತ್ತು. ಆದರೆ, ವಿದ್ಯಾರ್ಥಿಗಳು ಹಾಗೂ ಪೋಷಕರ ಹಿತದೃಷ್ಟಿಯಿಂದ ಪರೀಕ್ಷೆಯನ್ನು ನಡೆಸಲಾಯಿತಲ್ಲದೆ, ಕೋವಿಡ್ ಪಾಸಿಟೀವ್ ಇದ್ದ 63 ವಿದ್ಯಾರ್ಥಿಗಳಿಗೂ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದು, ಸಿಇಟಿ ಇತಿಹಾಸದಲ್ಲಿ ಮೈಲುಗಲ್ಲಾಗಿ ಉಳಿಯಲಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಸಿಇಟಿ ಟಾಪರ್ಸ್

ಎಂಜಿನಿಯರಿಂಗ್:

1.ಎಂ. ರಕ್ಷಿತ್: ಬೆಂಗಳೂರಿನ ಆರ್.ವಿ. ಪಿಯು ಕಾಲೇಜು
2.ಆರ್. ಶುಭನ್: ಬೆಂಗಳೂರಿನ ಶ್ರೀ ಚೈತನ್ಯ ಇ ಟೆಕ್ನೋ ಕಾಲೇಜು
3.ಎಂ.ಶಶಾಂಕ್ ಬಾಲಾಜಿ: ಹುಬ್ಬಳ್ಳಿಯ ಬೇಸ್ ಪಿಯು ಕಾಲೇಜು
4.ಪಿ. ಶಶಾಂಕ್: ಮಂಗಳೂರಿನ ಎಕ್ಸ್’ಪರ್ಟ್ ಕಾಲೇಜು
5.ಸಂದೀಪನ್ ನಸ್ಕರ್: ಹೊರನಾಡ ಕನ್ನಡಿಗ ವಿದ್ಯಾರ್ಥಿ

ಬಿಎಸ್ಸಿ ಅಗ್ರಿ:

1.ವರುಣ್ ಗೌಡ ಎ.ಬಿ.: ಮಂಗಳೂರಿನ ಎಕ್ಸ್’ಪರ್ಟ್ ಕಾಲೇಜು
2.ಕೆ. ಸಂಜನಾ: ಮೈಸೂರು ಬೇಸ್ ಕಾಲೇಜು
3.ಲೋಕೇಶ್ ಬಿ. ಜೋಗಿ: ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲ ಪಿಯು ಕಾಲೇಜು
4.ಪಿ.ಪಿ. ಅರನವ್ ಅಯ್ಯಪ್ಪ: ಮೂಡಬಿದಿರೆಯ ಆಳ್ವಾಸ್ ಕಾಲೇಜು
5.ಪ್ರಜ್ವಲ್ ಕಶ್ಯಪ್: ಬೆಂಗಳೂರಿನ ವಿದ್ಯಾಮಂದಿರ ಪಿಯು ಕಾಲೇಜು

ಪಶುವೈದ್ಯ ವಿಜ್ಞಾನ:

1.ಪಿ. ಸಾಯಿ ವಿವೇಕ್: ಬೆಂಗಳೂರಿನ ನಾರಾಯಣ ಇ- ಟೆಕ್ನೋ ಶಾಲೆ
2.ಆರ್ಯನ್ ಮಹಾಲಿಂಗಪ್ಪ ಚನ್ನಲ್: ಕೋಟಾದ ಪ್ರಗತಿ ಪಬ್ಲಿಕ್ ಶಾಲೆ
3.ಕೆ. ಸಂಜನಾ: ಮೈಸೂರಿನ ಬೇಸ್ ಕಾಲೇಜು
4.ಪವನ್ ಎಸ್. ಗೌಡ: ಬೆಂಗಳೂರು ನಾರಾಯಣ ಪಿಯು ಕಾಲೇಜು
5.ಪಿ.ಪಿ. ಅರ್ನವ್ ಅಯ್ಯಪ್ಪ : ಮೂಡಬಿದಿರೆಯ ಆಳ್ವಾಸ್ ಕಾಲೇಜು

ಬಿ ಫಾರ್ಮಾ ಮತ್ತು ಡಿ ಫಾರ್ಮಾ:

1.ಪಿ. ಸಾಯಿ ವಿವೇಕ್: ಬೆಂಗಳೂರಿನ ನಾರಾಯಣ ಇ- ಟೆಕ್ನೋ ಶಾಲೆ
2.ಸಂದೀಪನ್ ನಸ್ಕರ್: ಹೊರನಾಡ ಕನ್ನಡಿಗ ವಿದ್ಯಾರ್ಥಿ
3.ಪವನ್ ಎಸ್. ಗೌಡ : ಬೆಂಗಳೂರು ನಾರಾಯಣ ಪಿಯು ಕಾಲೇಜು
4.ಆರ್ಯನ್ ಮಹಾಲಿಂಗಪ್ಪ ಚನ್ನಲ್: ಕೋಟಾದ ಪ್ರಗತಿ ಪಬ್ಲಿಕ್ ಶಾಲೆ
5.ಕೆ. ಸಂಜನಾ: ಮೈಸೂರಿನ ಬೇಸ್ ಕಾಲೇಜು

ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ:

1.ಪಿ.ಪಿ. ಅರನವ್ ಅಯ್ಯಪ್ಪ: ಮೂಡಬಿದಿರೆಯ ಆಳ್ವಾಸ್ ಕಾಲೇಜು
2.ಕೆ. ಸಂಜನಾ: ಮೈಸೂರಿನ ಬೇಸ್ ಕಾಲೇಜು
3.ಪಿ. ಸಾಯಿ ವಿವೇಕ್: ಬೆಂಗಳೂರಿನ ನಾರಾಯಣ ಇ- ಟೆಕ್ನೋ ಶಾಲೆ
4.ಕಾರ್ತಿಕ್ ರೆಡ್ಡಿ: ಬೀದರಿನ ಶಾಹಿನ್ ಐಎನ್’ಡಿಪಿ ಕಾಲೇಜು
5.ವರುಣ್ ಗೌಡ ಎ.ಬಿ.: ಮಂಗಳೂರಿನ ಎಕ್ಸ್’ಪರ್ಟ್ ಕಾಲೇಜು

ವೆಬ್’ಸೈಟಿನಲ್ಲಿ ಫಲಿತಾಂಶ:

ಸಾಮಾನ್ಯ ಪ್ರವೇಶ ಪರೀಕ್ಷೆ (KCET) ಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಅಧಿಕೃತ ವೆಬ್​ಸೈಟ್​ cetonline.karnataka.gov.in/kea ದಲ್ಲಿ ನೋಡಿ, ಡೌನ್’ಲೋಡ್ ಮಾಡಿಕೊಳ್ಳಬಹುದಾಗಿದೆ.
ಫಲಿತಾಂಶ ನೋಡಲು ಕೆಳಗಿನ ಲಿಂಕ್’ಗಳನ್ನು ಕ್ಲಿಕ್​ ಮಾಡಬಹುದು.
kea.kar.nic.in, kea.kar.nic.in, karresults.nic.in, karresults.nic.in

ಉತ್ತಮ ಪ್ರತಿಕ್ರಿಯೆ:

ಕೋವಿಡ್’ನಿಂದ ಎಷ್ಟೇ ಸಮಸ್ಯೆ ಎದುರಾದರೂ ಸರಕಾರ ಪರೀಕ್ಷೆ ನಡೆಸಿತು. ಯಾವುದೇ ಕಾರಣಕ್ಕೂ ಶೈಕ್ಷಣಿಕ ಚಟುವಟಿಕೆಗಳಿಗೆ ಧಕ್ಕೆ ಆಗಬಾರದು ಎಂಬುದು ಸರಕಾರದ ಅಚಲ ನಂಬಿಕೆಯಾಗಿತ್ತು. ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಎಲ್ಲ ಇಲಾಖೆಗಳ ಸಹಕಾರದಿಂದ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಎಂಜಿನಿಯರಿಂಗ್ ಕೋರ್ಸ್’ಗೆ 1,94,419 ವಿದ್ಯಾರ್ಥಿಗಳು, ಅರ್ಜಿ ಸಲ್ಲಿಸಿದ್ದರೆ, ಆ ಪೈಕಿ 1,75,349 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಇವರಲ್ಲಿ 1,53,470 ವಿದ್ಯಾರ್ಥಿಗಳಿಗೆ ರಾಂಕ್‌ ನೀಡಲಾಗಿದೆ.

ಬಿಎಸ್ಸಿ ಅಗ್ರಿ ವಿಭಾಗದಲ್ಲೂ 1,27,627, ಪಶುವೈದ್ಯ ವಿಜ್ಞಾನ ವಿಭಾಗದಲ್ಲಿ 1,29,666, ಬಿ-ಫಾರ್ಮಾ, ಡಿ-ಫಾರ್ಮಾ ವಿಭಾಗದಲ್ಲಿ 1,55,552 ವಿದ್ಯಾರ್ಥಿಗಳು ರಾಂಕ್ ಪಡೆದಿದ್ದಾರೆ.

ಅಕ್ಟೋಬರ್‌ನಲ್ಲಿ ಕೌನ್ಸೆಲಿಂಗ್:

ಜೆಇಇ, ನೀಟ್ ಮುಂತಾದ ಪರೀಕ್ಷೆಗಳ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ನೋಡಿಕೊಂಡು ಸಿಇಟಿ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು. ಬಹುತೇಕ ಅಕ್ಟೋಬರ್‌ನಲ್ಲಿ ನಡೆಸುವುದು ಖಚಿತ. ಎಐಸಿಟಿ ಸೂಚನೆಯಂತೆ ನಡೆಯಲಿದೆ. ಆನ್‌ಲೈನ್‌ ಕೌನ್ಸೆಲಿಂಗ್‌ಗೆ ತಯಾರಿ ಮಾಡಿಕೊಂಡಿದ್ದೇವೆ. ಒಟ್ಟು ಎರಡು ಸುತ್ತಿನ ಕೌನ್ಸೆಲಿಂಗ್ ಮತ್ತು ಅಂತಿಮವಾಗಿ ಒಂದು ವಿಸ್ತರಣಾ ಸುತ್ತು ಇರುತ್ತದೆ. ಇದು ಕೇವಲ ಬದಲಾವಣೆ ಇತ್ಯಾದಿಗಳಿಗೆ ಸಂಬಂಧಿಸಿದ ಮಾಪಪ್ ರೌಂಡ್ ಆಗಿರುತ್ತದೆ ಎಂದು ಡಿಸಿಎಂ ಮಾಹಿತಿ ನೀಡಿದರು.

ದಾಖಲೆ ಸಲ್ಲಿಸಿ ಜಾಯಿನ್ ಆಗಿ:

2ನೇ ಸುತ್ತಿನ ಕೌನ್ಸೆಲಿಂಗ್ ಮುಗಿಯುತ್ತಿದ್ದಂತೆ ತಮ್ಮ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಕೊಂಚವೂ ತಡ ಮಾಡದೇ ತಮ್ಮ ಮೂಲ ದಾಖಲೆಗಳನ್ನು ಸಲ್ಲಿಸಿ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯಬೇಕು. ಒಂದು ವೇಳೆ ಶುಲ್ಕ ಪಾವತಿ ಮಾಡಿ ದಾಖಲೆಗಳನ್ನು ಸಲ್ಲಿಸದಿದ್ದರೆ ಆ ಪ್ರವೇಶಾತಿ ತಾನಾಗಿಯೇ ರದ್ದಾಗುತ್ತದೆ. ಈ ಅಂಶವನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಹೆಣ್ಣುಮಕ್ಕಳಿಗೆ ಶೈಕ್ಷಣಿಕ ನೆರವು: ಖಾಸಗಿ ಸಹಭಾಗಿತ್ವಕ್ಕೆ ಡಿಸಿಎಂ ಕರೆ

ಬೆಂಗಳೂರು: ಪ್ರತಿಭಾವಂತ ವಿದ್ಯಾರ್ಥಿನಿಯರು ಶಿಕ್ಷಣದಲ್ಲಿ ಉನ್ನತಿಯತ್ತ ಸಾಗಬೇಕು. ಅದಕ್ಕಾಗಿ ಸರಕಾರವೂ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಇದರ ಜತೆಗೆ ಖಾಸಗಿ ವ್ಯಕ್ತಿಗಳು, ಸಂಘ-ಸಂಸ್ಥೆಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಕೈಜೋಡಿಸಬೇಕು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಕರೆ ನೀಡಿದರು.

ಬೆಂಗಳೂರಿನಲ್ಲಿ ಶನಿವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ‌ ಪಡೆದ ಮಲ್ಲೇಶ್ವರದ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವಿದ್ಯಾಜ್ಯೋತಿ ಚಾರಿಟಬಲ್ ಟ್ರಸ್ಟ್ ವತಿಯಿಂದ ನೀಡಲಾದ ಸ್ಕಾಲರ್ ಶಿಪ್ ನೀಡಿ ಮಾತನಾಡಿದ ಅವರು, ಮಕ್ಕಳಲ್ಲಿ ಅದರಲ್ಲೂ ಹೆಣ್ಣು ಮಕ್ಕಳಲ್ಲಿ ಅದಮ್ಯವಾದ ಶಕ್ತಿ ಇರುತ್ತದೆ. ಅವರ ಶಕ್ತಿ ಮತ್ತು ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಡಿಸಿಎಂ ಕರೆ ನೀಡಿದರು.

ಎಸ್ಸೆಸ್ಸೆಲ್ಸಿ ನಂತರದ ಶಿಕ್ಷಣದ ಘಟ್ಟ ಇನ್ನಷ್ಟು ಮಹತ್ವದ್ದು. ತದನಂತರದ ಘಟ್ಟ ಮತ್ತೂ ಮಹತ್ವದ್ದು. ಅದಕ್ಕಾಗಿ ಯುವ ಸಬಲೀಕರಣಕ್ಕೆ ಸರಕಾರ ಹೆಚ್ಚು ಆದ್ಯತೆ ಕೊಡುತ್ತಿದೆ. ಇದಕ್ಕೆ ಪೂರಕವಾದ ವಾತಾವರಣ ಹೈಸ್ಕೂಲು ಮತ್ತು ಪಿಯುಸಿ ಹಂತದಲ್ಲಿಯೇ ಇರಬೇಕು. ಶಿಕ್ಷಕ ವರ್ಗ ಈ ನಿಟ್ಟಿನಲ್ಲಿ ಹೆಚ್ಚು ಕೆಲಸ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಬದಲಾವಣೆ:

ಕೇಂದ್ರ ಸರಕಾರ ರೂಪಿಸಿರುವ ನೂತನ ಶಿಕ್ಷಣ ನೀತಿಯಿಂದ ದೇಶದ ಶೈಕ್ಷಣಿಕ ವ್ಯವಸ್ಥೆಯ ರೂಪವೇ ಬದಲಾಗಲಿದೆ. ಈ ನೀತಿಯಿಂದ ಸರಕಾರಿ ಶಿಕ್ಷಣಕ್ಕೆ ಹೊಸ ಆಯಾಮವೇ ಸಿಗಲಿದೆ. ಹೀಗಾಗಿ ಈ ನೀತಿಯನ್ನು ಕರ್ನಾಟಕವೇ ಮೊತ್ತ ಮೊದಲಿಗೆ ಜಾರಿ ಮಾಡುವ ರಾಜ್ಯವಾಗಲಿದೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ವಿದ್ಯಾಜ್ಯೋತಿ ಚಾರಿಟಬಲ್ ಟ್ರಸ್ಟ್,ನ ರಾಜೇಶ್, ಅನೇಕ ಪೋಷಕರು ಮತ್ತು ಸ್ಕಾಲರ್ ಶಿಪ್ ಪಡೆದ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅನಂತಪುರ ಸೆಂಟ್ರಲ್ ವಿವಿ ಉಪ ಕುಲಪತಿಯಾಗಿ ಪ್ರೊ. ಎಸ್.ಎ. ಕೋರಿ

ಬೆಂಗಳೂರು: ಆಂಧ್ರಪ್ರದೇಶದ ಅನಂತಪುರ ನೂತನ ಸೆಂಟ್ರಲ್ ಯುನಿವರ್ಸಿಟಿಯ ಉಪ ಕುಲಪತಿಯಾಗಿ ಪ್ರೊ. ಎಸ್.ಎ. ಕೋರಿ ಅವರನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನೇಮಕ ಮಾಡಿದ್ದಾರೆ.

ಕರ್ನಾಟಕ ಉನ್ನತ ಶಿಕ್ಷಣ ಪರಿಷತ್’ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಅವರು ಕೆಲಸ ಮಾಡುತ್ತಿದ್ದರು. ಅವರನ್ನು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅಭಿನಂದಿಸಿದ್ದಾರೆ.

ಉನ್ನತ ಶಿಕ್ಷಣ ಪರಿಷತ್’ನ ಬಹುಮುಖ್ಯ ಭಾಗವಾಗಿದ್ದ ಕೋರಿಯವರು, ರಾಜ್ಯದ ಉನ್ನತ ಶಿಕ್ಷಣ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದ್ದಾರೆ. ಅನಂತಪುರದ ಅವರ ನಗರ ಯುನಿವರ್ಸಿಟಿಯ ಉಪ ಕುಲಪತಿಯಾಗಿ ಮತ್ತಷ್ಟು ಉತ್ತಮ ಕೆಲಸ ಮಾಡಲಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ಡಿಸಿಎಂ ತಿಳಿಸಿದ್ದಾರೆ.

ಮುಂದೆ ಕಾಂಗ್ರೆಸ್ ಪ್ರಧಾನಿ ಕೆಂಪುಕೋಟೆ ಮೇಲೆ ಭಾಷಣ ಮಾಡುವುದನ್ನು ನೋಡಲಿದ್ದೇವೆ: ಡಿಕೆ ಶಿವಕುಮಾರ್

ಬೆಂಗಳೂರು: ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪ್ರಧಾನಿಯು ಕೆಂಪು ಕೋಟೆ ಮೇಲೆ ಭಾಷಣ ಮಾಡುವುದನ್ನು ನೋಡುತ್ತೇವೆ ಆ ದಿನ ಭಾರತದ ಶತಕೋಟಿ ಜನರು ಶಾಂತಿ ಹಾಗೂ ಸೌಹಾರ್ದತೆಯನ್ನು ಆಚರಿಸಲಿದೆ. ಇದಕ್ಕೆ ಬದ್ಧರಾಗಿ ನಾವು ನೀವೆಲ್ಲರು ಶ್ರಮಿಸೋಣ ದುಡಿಯೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕರೆ ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.ಪಕ್ಷದ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದರು. ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ರು.

ಡಿಕೆ ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭಾಷಣದ ಸಾರಾಂಶ:

ಇಂದು ಭಾರತದ 74ನೇ ಸ್ವಾತಂತ್ರ್ಯ ದಿನಾಚಾರಣೆಯನ್ನು ಆಚರಿಸುತ್ತಿದ್ದೇವೆ. ಪ್ರತಿಯೊಬ್ಬ ನಾಗರೀಕರಿಗೂ ವೈಯಕ್ತಿಕವಾಗಿ ಹಾಗೂ ಕಾಂಗ್ರೆಸ್ ಪಕ್ಷದ ಪರವಾಗಿ ಶುಭಾಷಯ ಕೋರುತ್ತೇನೆ. 74 ವರ್ಷಗಳ ಹಿಂದೆ ದೆಹಲಿಯ ಕೆಂಪುಕೋಟೆಯ ಮೇಲೆ ಪಂಡಿತ್ ಜವಾಹರ್ ಲಾಲ್ ನೆಹರೂ ಅವರು ಭಾರತದ ಧ್ವಜವನ್ನು ಹಾರಿಸುವ ಮೂಲಕ ಈ ಐತಿಹಾಸಿಕ ಕ್ಷಣವನ್ನು ಆರಂಭಿಸಿದರು. ಬ್ರಿಟೀಷರ ಹಸ್ತಕ್ಷೇಪವಿಲ್ಲದೇ ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಜೀವನ ನಡೆಸಲು ದಾರಿ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ನಾನು ಹೇಳುವುದೇನೆಂದರೆ, ಇಂದಿನ ಪೀಳಿಗೆಯ ಜನ ಸ್ವಾತಂತ್ರ್ಯಕ್ಕೆ ಸಾಕ್ಷಿಯಾಗಲಿಲ್ಲ. ಆದರೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿದುಕೊಂಡು ಬೆಳೆದಿದ್ದೇವೆ. ಅವರ ನೈತಿಕತೆ, ಮೌಲ್ಯ, ದೇಶಭಕ್ತಿ, ಸಮರ್ಪಣೆ ನಮ್ಮ ದೇಶವಾಸಿಗಳು ಅದರಲ್ಲೂ ಯುವ ಜನತೆ ಅಳವಡಿಸಿಕೊಳ್ಳಬೇಕು. ಮಹಾತ್ಮ ಗಾಂಧಿಜಿ ಅವರು ಪಾಲಿಸಿದ ಅಹಿಂಸೆ ಹಾಗೂ ಸರ್ವೋದಯ ತತ್ವಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಈ ದಿನ ರಾಷ್ಟ್ರಕ್ಕಾಗಿ ಪ್ರಾಣತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆಪಿಸಿಕೊಳ್ಳುವ ದಿನ. ದೇಶದ ಸ್ವಾತಂತ್ರ್ಯಕ್ಕೆ ಬೆನ್ನೆಲುಬಾದ ಈ ನಾಯಕರುಗಳ ಆದರ್ಶವನ್ನು ನಾವೆಲ್ಲರೂ ಪಾಲಿಸಲು ಬದ್ಧರಾಗಿದ್ದೇವೆ. ಭಾರತ ಸ್ವಾತಂತ್ರ್ಯ ಪಡೆದ ನಂತರ ಅಪಾರ ಭಾರತೀಯ ಸೈನಿಕರು ಗಡಿಯಲ್ಲಿ ನಮ್ಮ ರಕ್ಷಿಸುವ ವೇಳೆ ಹುತಾತ್ಮರಾಗಿದ್ದಾರೆ. ಈ ಸಂದರ್ಭದಲ್ಲಿ ಅವರ ತ್ಯಾಗವನ್ನು ನಾವು ಸ್ಮರಿಸೋಣ.

1947ರ ಆಗಸ್ಟ್ 14ರ ಮಧ್ಯರಾತ್ರಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರು ಮಾಡಿದ ಭಾಷಣದಲ್ಲಿ (Tryst with Destiny) ಆಡಿರುವ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ. ಅದೇನೆಂದರೆ ‘ಭಾರತದ ಸೇವೆ ಎಂದರೆ, ಕೋಟ್ಯಾಂತರ ಜನರ ಸೇವೆಯಾಗಿದೆ. ಇದರಂತೆ ಬಡತನ, ಅಜ್ಞಾನ, ರೋಗ, ಅಸಮಾನತೆ ಹೋಗಲಾಡಿಸುವುದಾಗಿದೆ.’

74 ವರ್ಷಗಳ ನಂತರವೂ ನಾವು ದೇಶವನ್ನು ನಿಭಾಯಿಸುವ ಪ್ರಯತ್ನದಲ್ಲಿದ್ದೇವೆ. 2020ರಲ್ಲಿ ಕೊರೋನಾ ವೈರಸ್ ಪರಿಸ್ಥಿತಿ, ಆರ್ಥಿಕ ಕುಸಿತವನ್ನು ನಿಭಾಯಿಸಲು ಕಷ್ಟಕರವಾಗಿದೆ. ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಿರುವವರನ್ನು ಉತ್ತೇಜಿಸಬೇಕಾಗಿದೆ. ಇಂತಹ ಅಸಮಾನತೆಯನ್ನುನಿರ್ಮೂಲನೆ ಮಾಡುವುದಾಗಿ ನಾವೆಲ್ಲ ಇಂದು ಪ್ರತಿಜ್ಞೆ ಮಾಡುತ್ತಿದ್ದೇವೆ. ನಮ್ಮ ಸ್ವಾತಂತ್ರ್ಯ ಹೋರಾಟ ಇಲ್ಲಿಗೆ ಮುಗಿದಿಲ್ಲ.

ನಮ್ಮ ಪೂರ್ವಜರು ಬ್ರಿಟೀಷರ ವಿರುದ್ಧ ಹೋರಾಡಿದರು. ಆದರೆ ನಾವೆಲ್ಲರೂ ಇಂದು ದೇಶದ ಸಂವಿಧಾನ ಹಾಗೂ ಅದರಲ್ಲಿರುವ ಹಕ್ಕನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದೇವೆ. ಸ್ವಾತಂತ್ರ್ಯದ ಹೊರತಾಗಿಯೂ 74 ವರ್ಷಗಳ ನಂತರ ಇನ್ನು ನಾವು ಸ್ವಾತಂತ್ರ್ಯವನ್ನು ಹುಡುಕಾಡುತ್ತಿರುವುದು ದುರಾದೃಷ್ಟಕರ. ಹೀಗಾಗಿ ನಮ್ಮ ಸಂವಿಧಾನಕ್ಕೆ ಹಾನಿಯಾಗುವ ಯಾವುದೇ ನಿರ್ಧಾರವನ್ನು ಖಂಡಿಸಬೇಕು. ಭಾರತದ ಪ್ರಜಾಪ್ರಭುತ್ವ ಮೌಲ್ಯಗಳನ್ನು ರಕ್ಷಿಸಲು ಎಲ್ಲರೂ ಪ್ರತಿಜ್ಞೆ ಮಾಡಬೇಕೆಂದು ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತಿದ್ದೇನೆ.

ಭಾರತದ ಸ್ವಾತಂತ್ರ್ಯ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು.ಒಂದನ್ನು ಬಿಟ್ಟು ಮತ್ತೊಂದನ್ನು ಯೋಚನೆ ಮಾಡಲು ಸಾಧ್ಯವೇ ಇಲ್ಲ. ಕಾಂಗ್ರೆಸ್ ಜನ್ಮ ತಳೆದಿದ್ದೇ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ಹೋರಾಟಕ್ಕಾಗಿ. ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದೇ ಕಾಂಗ್ರೆಸ್ ಹೋರಾಟದಿಂದಾಗಿ. ಹಲವಾರು ಮಹನೀಯರ ಹೋರಾಟ, ತ್ಯಾಗ, ಬಲಿದಾನದಿಂದ ಈ ದೇಶಕ್ಕೆ ಸ್ವಾತಂತ್ರ ಬಂತು. ಅವರೆಲ್ಲರೂ ಕಾಂಗ್ರೆಸ್ ಬೇರಿನವರು ಎಂಬುದೇ ಹೆಮ್ಮೆಯ ವಿಚಾರ. ಸ್ವಾತಂತ್ರ್ಯ ಸಂಗ್ರಾಮದ ಧ್ವಜ ಕಾಂಗ್ರೆಸ್ ಧ್ವಜ. ಅನಿಬೆಸೆಂಟ್, ಮಹಾತ್ಮ ಗಾಂಧೀಜಿ, ಮೌಲಾನಾ ಅಬ್ದುಲ್ ಕಲಾಂ ಅಜಾದ್, ಸುಭಾಷ್ ಚಂದ್ರ ಬೋಸ್, ಬಾಲಗಂಗಾಧರ ತಿಲಕರು, ದಾದಾ ಬಾಯಿ ನವರೂಜಿ, ಸರ್ದಾರ್ ವಲ್ಲಭಬಾಯಿ ಪಟೇಲ್, ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ನೆಹರೂ ಅವರಂಥ ಮಹನೀಯರು ಹಿಡಿದ ಧ್ವಜ ಕಾಂಗ್ರೆಸ್ ಧ್ವಜ.ಈ ದೇಶದ ಧ್ವಜ ಕಾಂಗ್ರೆಸ್ ಧ್ವಜ. ಅಂತಹ ಕಾಂಗ್ರೆಸ್ ಧ್ವಜ ಹಿಡಿದಿರುವ ನಾವೆಲ್ಲರೂ ಧನ್ಯರು.

ಅವತ್ತು ದೇಶದ ವಿಮುಕ್ತಿಗಾಗಿ ಜಾತಿ, ಧರ್ಮ, ಪಂಥ ಎಲ್ಲವನ್ನೂ ಬದಿಗಿಟ್ಟು ನಾವೆಲ್ಲ ಒಂದೇ ತಾಯಿಯ ಮಕ್ಕಳು ಎಂಬಂತೆ ಕಾಂಗ್ರೆಸ್ ಧ್ವಜ ಹಿಡಿದು ಎಲ್ಲರೂ ಹೋರಾಡಿದ್ದರು. ದೇಶದ ಐಕ್ಯತೆ, ಭಾವಕೈತೆ, ಭ್ರಾತೃತ್ವ, ಸೌಹಾರ್ಧತೆ ಅವರೆಲ್ಲರ ಮೂಲಮಂತ್ರವಾಗಿತ್ತು. ಅಂದು ಜವಾಹರ್ ಲಾಲ್ ನೆಹರೂ ಅವರು ದೇಶದ ಜನರ ಸೇವೆ, ಮಾನವೀಯತೆ ಕೊಡುಗೆಗಾಗಿ ನೀಡಿದ್ದ ಪ್ರತಿಜ್ಞೆ ಕರೆಯನ್ನು ನಾವು ಇಂದು ಪುನಃ ಸ್ವೀಕರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

Earth provides enough to satisfy every man’s needs, but not every man’s greed. ‘ಭೂಮಿ ತಾಯಿ ಮನುಷ್ಯನ ಎಲ್ಲ ಆಸೆಗಳನ್ನು ತೃಪ್ತಿಪಡಿಸುವಷ್ಟು ಸಂಪತ್ತು ಕೊಟ್ಟಿದ್ದಾಳೆ. ಆದರೆ ಮನುಷ್ಯನ ದುರಾಸೆಯನ್ನು ತೃಪ್ತಿಪಡಿಸಲು ಅಲ್ಲ’ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದಾರೆ.

ಆದರೆ, ಪ್ರಜಾಪ್ರಭುತ್ವದ ಸೌಧ ನಿರ್ಮಿಸಲು, ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರಲು ಅವಕಾಶ ಮಾಡಿಕೊಟ್ಟ ಸಂವಿಧಾನಕ್ಕೇ ಇಂದು ಅಪಚಾರವಾಗುತ್ತಿದೆ. ಸಂವಿಧಾನ, ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿ ಅಧಿಕಾರದ ಮೇಲಾಟ ನಡೆಯುತ್ತಿದೆ. ಇದು ದುರಂತ ಭಾರತದ ಮೊದಲ ಅಧ್ಯಾಯವಾಗಲಿದೆ. ಇದನ್ನು ಉಳಿಸಿ, ರಕ್ಷಿಸುವ ಹೊಣೆ ನಮ್ಮೆಲ್ಲರದಾಗಿದೆ.

ದಲಿತ ಸಮುದಾಯದಲ್ಲಿ ಹುಟ್ಟಿ ಸಮಾಜದಲ್ಲಿ ಎಲ್ಲ ಶೋಷಣೆಗಳನ್ನು ಮಟ್ಟಿನಿಂತು ಸಂವಿಧಾನ ಶಿಲ್ಪಿಯಾಗಿ ಬೆಳೆದು ನಿಂತ ಅಂಬೇಡ್ಕರ್ ಅವರ ಬಗೆಗೂ ಈ ಬಿಜೆಪಿಯವರಿಗೆ ಕನಿಷ್ಠ ಗೌರವವಿಲ್ಲ. ಅಂಬೇಡ್ಕರ್ ಅವರ ಸಂವಿಧಾನವನ್ನು ನಾವ್ಯಾಕೆ ಒಪ್ಪಬೇಕು ಎಂಬ ಅಹಂಭಾವದಿಂದ ಈಗ ಸಂವಿಧಾನವನ್ನೇ ಬದಲಾಯಿಸಲು ಹೊರಟಿದ್ದಾರೆ. ಅವರ ಸಂವಿಧಾನವನ್ನು ಸುಟ್ಟುಹಾಕುವ ಮಾತಾಡಿದ್ದಾರೆ.

ಸ್ವಾತಂತ್ರ್ಯ ಫಲವಾಗಿ ನಮಗೆ ಸಿಕ್ಕ ಸಂವಿಧಾನವನ್ನು ಕೊಲ್ಲಲು ಹೊರಟಿರುವವರಿಂದ ಸ್ವಾತಂತ್ರ್ಯ ಸಿಗಬೇಕಿದೆ. ಇವತ್ತು ದೇಶಕ್ಕೆ ಕೋಮುವಾದಿಗಳಿಂದ ಸ್ವಾತಂತ್ರ್ಯ ಸಿಗಬೇಕಿದೆ. ಮತಾಂಧರಿಂದ ಸ್ವಾತಂತ್ರ್ಯ ಸಿಗಬೇಕಿದೆ. ಜನರಲ್ಲಿ ಕೋಮುದ್ವೇಷ ಭಿತ್ತಿ, ಅದರ ಜ್ವಾಲೆಯಲ್ಲೇ ಮೈ ಕಾಯಿಸಿಕೊಳ್ಳುತ್ತಿರುವ ದುಷ್ಟಶಕ್ತಿಗಳಿಂದ ಸ್ವಾತಂತ್ರ್ಯ ಸಿಗಬೇಕಿದೆ. ಇಂದು ಜಾತಿ, ಧರ್ಮವನ್ನು ಮುಂದಿಟ್ಟು ದೇಶವನ್ನು ತುಂಡು ತುಂಡು ಮಾಡುವ ಹುನ್ನಾರ ನಡೆಯುತ್ತಿದೆ. ಕೋಮುದ್ವೇಷದ ವಿಷಬೀಜ ಭಿತ್ತಿ ಜನರಲ್ಲಿ ಧಾರ್ಮಿಕ ಭಾವನೆಗಳನ್ನು ಹೈಜಾಕ್ ಮಾಡಲಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಕೋಮುವಾದಿಗಳಿಂದ ದೇಶವನ್ನು ರಕ್ಷಿಸಲು ಮತ್ತೊಂದು ಸುತ್ತಿನ ಹೋರಾಟಕ್ಕೆ ಕಾಂಗ್ರೆಸ್ ನ ಎಲ್ಲರು ಸಜ್ಜಾಗಬೇಕಾಗಿದೆ. ಈ ಹೋರಾಟ ಸ್ವಾತಂತ್ರ್ಯದ ಹೋರಾಟದ ಸ್ವರೂಪದಲ್ಲೇ ನಡೆಯಬೇಕಿದೆ. ಯಾವುದೇ ಯುದ್ಧ ಗೆಲ್ಲಬೇಕಾದರೆ ಸೈನಿಕರು ಕಾರ್ಯಕರ್ತರು ಬಹಳ ಮುಖ್ಯ.

ಇಂದು ನಮ್ಮ ಮುಖ್ಯ ಧ್ಯೇಯ ಕರ್ನಾಟಕದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಮುಕ್ತಗೊಳಿಸಬೇಕು. ದೇಶದಲ್ಲಿ ಶಾಂತಿ, ಸೌಹಾರ್ದತೆ, ಐಕ್ಯತೆಯನ್ನು ಕಾಪಾಡಬೇಕಾಗಿದೆ. ಪ್ರತಿ ಮನೆಯ ಯುವಕರಿಗೂ ಉದ್ಯೋಗ ಸಿಗುವಂತೆ ಮಾಡಬೇಕು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ನಮ್ಮ ತತ್ವ ಸಿದ್ಧಾಂತವನ್ನು ಕಾಪಾಡಬೇಕಾಗಿದೆ.

ಈ ದೇಶವನ್ನು ಉಳಿಸಿ, ರಾಜ್ಯದಲ್ಲಿ ಸೌಹಾರ್ದತೆ ವಾತಾವರಣ ನಿರ್ಮಾಣ ಮಾಡಲು ಎಲ್ಲ ಜಾತಿ, ಧರ್ಮದವರನ್ನು ಒಟ್ಟಾಗಿ ಕರೆದೊಯ್ಯಬೇಕಿದೆ. ಇಂದು ನಮ್ಮೆಲ್ಲರ ಬದುಕನ್ನು ದೇಶಕ್ಕೋಸ್ಕರ ಮೀಸಲಿಡೋಣ. ನಮ್ಮ ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ಹೆಜ್ಜೆ ಹಾಕೋಣ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇ ಈ ದೇಶವನ್ನು ಕಟ್ಟಲು, ಈ ಪೀಳಿಗೆಯನ್ನು ಉಳಿಸುವುದಕ್ಕಾಗಿ. ಇದಕ್ಕೆ ಬದ್ಧರಾಗಿ ನಾವೆಲ್ಲರೂ ದುಡಿಯೋಣ.

ಶಿರಾ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ: ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ

ಬೆಂಗಳೂರು: ನಾನು ಶಿರಾ ಉಪಚುನಾವಣೆಯ ಅಭ್ಯರ್ಥಿಯಾಗುವ ಕನಸು ಕಂಡವನಲ್ಲ. ಯಾವುದೇ ಕಾರಣಕ್ಕೂ ನಾನು ಶಿರಾದಲ್ಲಿ ಅಭ್ಯರ್ಥಿ ಆಗುವುದಿಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ‌.

ಇಂತಹ ಕಪೋಲಕಲ್ಪಿತ ಸುದ್ದಿ- ವದಂತಿಗಳನ್ನು ಯಾರು ಹಬ್ಬಿಸುತ್ತಾರೋ? ಯಾಕೆ ಹಬ್ಬಿಸುತ್ತಾರೋ? ಇದರಿಂದ ಕುತ್ಸಿತ ಮನಸುಗಳಿಗೆ ಆಗುವ ಲಾಭ ಏನೆಂಬುದು ನನಗೆ ತಿಳಿಯದಾಗಿದೆ.ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಚುನಾವಣೆ ಮೇಲೆ ಕಣ್ಣಿಟ್ಟಿದ್ದೇನೆ ಎಂಬಂತೆ ವದಂತಿಗಳನ್ನು ಪುಂಖಾನುಪುಂಖವಾಗಿ ಹರಿಯ ಬಿಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ರು.

ಮಾಜಿ ಸಚಿವರು ಹಾಗೂ ಶಾಸಕರಾಗಿದ್ದ ಬಿ. ಸತ್ಯನಾರಾಯಣ ಅವರು ಅಕಾಲಿಕ ನಿಧನರಾಗಿದ್ದ ರಿಂದ ಶಿರಾ ಕ್ಷೇತ್ರಕ್ಕೆ ಉಪಚುನಾವಣೆ ಅನಿವಾರ್ಯವಾಗಿದೆ. ಹಾಗಂತ ಅಕಾಲಿಕವಾಗಿ ಖಾಲಿಬಿದ್ದ ಕ್ಷೇತ್ರಕ್ಕೆ ಜೋತುಬೀಳುವ ಜಾಯಮಾನ ನನ್ನದಲ್ಲವೇ ಅಲ್ಲ.2018 ರ ವಿಧಾನಸಭಾ ಚುನಾವಣೆ ವೇಳೆ ಮೂರು ದಿನಗಳ ಕಾಲ ಶಿರಾ ಸೇರಿದಂತೆ ತುಮಕೂರು ಜಿಲ್ಲೆಯಲ್ಲಿ ಪಕ್ಷದ ಪರವಾಗಿ ನಿಷ್ಠಾವಂತ ಕಾರ್ಯಕರ್ತನಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ನಿಜ.ಇನ್ನು ಸತ್ಯ ನಾರಾಯಣ ಅವರ ಪಕ್ಷ ನಿಷ್ಠೆ ಮತ್ತು ಬದ್ಧತೆ ಪ್ರಶ್ನಾತೀತ.ಯಾವುದೇ ಆಮಿಷಗಳಿಗೆ ಬಲಿಯಾಗದೆ ಕೊನೆ ಉಸಿರಿರುವವರೆಗೂ ನಂಬಿದ ಪಕ್ಷವನ್ನು ಹೆಸರಿಗೆ ತಕ್ಕಂತೆ ‘ಸತ್ಯ”ವಾಗಿಸಿಕೊಂಡಿದ್ದರು.ಉಪಚುನಾವಣೆಗೆ ಯೋಗ್ಯ, ಸಮರ್ಥ ಅಭ್ಯರ್ಥಿಯನ್ನು ಪಕ್ಷದ ವರಿಷ್ಠರು ಆಯ್ಕೆ ಮಾಡಲಿದ್ದಾರೆ. ಅವರ ಪರವಾಗಿಯೂ ಪಕ್ಷದ ಅಭ್ಯರ್ಥಿ ಪರ ಟೊಂಕಕಟ್ಟಿ ನಿಂತು ಪ್ರಚಾರ ಮಾಡಲಿದ್ದೇನೆ.ಇದರಲ್ಲಿ ಯಾರಿಗೂ ಎಳ್ಳಷ್ಟು ಸಂಶಯ ಬೇಡ ಎಂದ್ರು.

ಸತ್ಯನಾರಾಯಣ ಅವರ ‘ಚಿತೆ” ಆರುವ ಮುನ್ನವೇ ಉಪ ಚುನಾವಣೆ ಅಖಾಡಕ್ಕೆ ನನ್ನ ಹೆಸರನ್ನು ತೇಲಿ ಬಿಟ್ಟವರ ಬಗ್ಗೆ ಮರುಕವಿದೆ. ಇಂತಹ ಹೀನ ಸಂಸ್ಕೃತಿಯ ರಾಜಕೀಯ ಪರಂಪರೆ ನಮ್ಮದಲ್ಲ.ಶಿರಾ ಉಪಚುನಾವಣೆಗೆ ನನ್ನನ್ನು ಕಣಕ್ಕಿಳಿಸಲು ಒತ್ತಡಗಳಿವೆ ಎಂಬಂತೆ ಹಾಗೂ ರಾಜಕೀಯ ನೆಲೆ ಕಂಡುಕೊಳ್ಳಲು ಈ ಕ್ಷೇತ್ರವನ್ನೇ ‘ಚಿಮ್ಮು ಹಲಗೆ” ಮಾಡಿ ಕೊಳ್ಳುವ ಹವಣಿಕೆಯಲ್ಲಿದ್ದಾರೆ ಎಂಬ ವದಂತಿಗಳನ್ನು ಸಾರಾಸಗಟಾಗಿ ತಳ್ಳಿ ಹಾಕುತ್ತೇನೆ.ರಾಜ್ಯ ಜಾತ್ಯಾತೀತ ಯುವ ಜನತಾದಳದ ಅಧ್ಯಕ್ಷನಾಗಿರುವ ನಾನು ಪಕ್ಷಕ್ಕಾಗಿ ದುಡಿಯುವಾಗ ‘ಹುದ್ದೆ”ಯ ಕಿರೀಟವನ್ನು ಬದಿಗಿರಿಸಿ ಪಕ್ಷದ ಸಾಮಾನ್ಯ ಕಾರ್ಯಕರ್ತನಂತೆ ದಣಿವರಿಯದೆ ದುಡಿಯುತ್ತೇನೆ. ಪಕ್ಷದ ನಿಷ್ಠಾವಂತ ಹಿರಿಯ-ಕಿರಿಯರ ನಿಸ್ವಾರ್ಥ ರಾಜಕೀಯ ನಿಷ್ಠೆಯೇ ಇದಕ್ಕೆ ಮೂಲ ಪ್ರೇರಣೆ ಎಂದಿದ್ದಾರೆ.

ಅರಿವುಂಟೆ?:
*ತೊಳಗಿ ಬೆಳಗಿ ಪ್ರಜ್ವಲಿಸಿ ಉರಿವ ಬೆಳಗು*
*ಕೆಡುವಲ್ಲಿ ಉಡುಗುತ್ತಿದ್ದೇನೆ ಎಂದು ನುಡಿಯಿತ್ತೆ?*
*ಇಂತಿವ ಹಿಡಿವಲ್ಲಿ ಬಿಡುವಲ್ಲಿ ಮಿಕ್ಕಾದವ*
*ಒಡಗೂಡುವಲ್ಲಿ ಅಡಿಯೇರಿ*
*ಮತ್ತೆ ಪುನರಪಿ*
*ಅಡಿ ಉಂಟೆ?*
*ತೊಟ್ಟು ಬಿಟ್ಟ ಹಣ್ಣಿಂಗೆ ಮತ್ತಾ ಬುಡದಾಸೆಯೇಕೆ?* *ನಿಶ್ಚಯವೆಂಬುದು ನಷ್ಟವಾದಲ್ಲಿ ಕಾಮಧೂಮ* *ಧೂಳೇಶ್ವರನೆಂಬ ಲಕ್ಷವೇತಕ್ಕೆ?*
– *ಮಾದಾರ ಧೂಳಯ್ಯ*
.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ, ರಾಜ್ಯದಲ್ಲೇ ಮೊದಲು ಜಾರಿ: ಡಿಸಿಎಂ ಅಶ್ವತ್ಥನಾರಾಯಣ್

ರಾಮನಗರ: ಕೇಂದ್ರ ಸರಕಾರ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕವೇ ಮೊತ್ತ ಮೊದಲಿಗೆ ಜಾರಿ ಮಾಡುವ ರಾಜ್ಯವಾಗಲಿದೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

74ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಶನಿವಾರ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರೆವೇರಿಸಿ ಭಾಷಣ ಮಾಡಿದ ಅವರು, ಇಡೀ ದೇಶದ ದಿಕ್ಸೂಚಿಯನ್ನೇ ಬದಲಿಸುವ ಶಕ್ತಿ ಇರುವ ಹಾಗೂ ಶೈಕ್ಷಣಿಕ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯಕ್ಕೆ ಹೊಸ ನೀತಿಯೂ ಮತ್ತಷ್ಟು ಬಲ ತುಂಬಲಿದೆ. ಹೀಗಾಗಿ ಈ ನೀತಿಯನ್ನು ಮೊತ್ತ ಮೊದಲು ಅಂಗೀಕರಿಸಿದ ರಾಜ್ಯ ಕರ್ನಾಟಕವೇ ಆಗಿದೆ ಎಂದು ಹೇಳಿದರು.

ಹೊಸ ನೀತಿಯ ಕರಡು ಪ್ರತಿ ಸಿಕ್ಕಿದ ಕೂಡಲೇ ಸರಕಾರ ಇದಕ್ಕೆ ಸಂಬಂಧಿಸಿ ಕಾರ್ಯಪಡೆಯನ್ನು ರಚನೆ ಮಾಡಿತ್ತು. ಕೇಂದ್ರ ನೀತಿಯನ್ನು ಪ್ರಕಟಿಸಿದ ಮೇಲೆ ಕಾರ್ಯಪಡೆ ಜತೆ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ನೀತಿಯ ಜಾರಿಯ ಬಗ್ಗೆ ಆದಷ್ಟು ಬೇಗ ಈ ಕಾರ್ಯಪಡೆ ವರದಿ ನೀಡಲಿದೆ ಎಂದು ಡಿಸಿಎಂ ನುಡಿದರು.

ಡಿಸಿಎಂ ಅಶ್ವತ್ಥನಾರಾಯಣ್ ಭಾಷಣ

ಉನ್ನತ ಶಿಕ್ಷಣದಲ್ಲಿ ಸುಧಾರಣೆ ಪರ್ವ:

ನಮ್ಮ ರಾಜ್ಯವನ್ನು ಕಟ್ಟುವುದರಲ್ಲಿ ಉನ್ನತ ಶಿಕ್ಷಣದ ಪಾತ್ರ ಸಾಕಷ್ಟಿದೆ. ಈ ಕಾರಣಕ್ಕಾಗಿ ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲು ಸರಕಾರ ಮುಂದಾಗಿದೆ. ಕಳೆದ ಒಂದು ವರ್ಷದಲ್ಲಿ ಅನೇಕ ಗುರುತರ ಸುಧಾರಣೆಗಳನ್ನು ತರಲಾಗಿದೆ. ಉನ್ನತ ಶಿಕ್ಷಣ ಇಲಾಖೆ ಸಂಪೂರ್ಣ ಗಣಕೀಕರಣವಾಗಿದೆ. ’ಇ-ಆಫೀಸ್’ ಅಸ್ತಿತ್ವಕ್ಕೆ ಬಂದಿದ್ದು, ಅದರ ಮೂಲಕ ಎಲ್ಲ ವ್ಯವಹಾರಗಳು ನಡೆಯುತ್ತಿವೆ. ಜತೆಗೆ, ಪ್ರತಿಷ್ಟಿತ ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯಕ್ಕೆ ಆರ್ಥಿಕ, ಆಡಳಿತಾತ್ಮಕ, ಶೈಕ್ಷಣಿಕ ಸ್ವಾಯತ್ತತೆ ನೀಡಲು ಡಾ. ಎಸ್. ಸಡಗೋಪನ್ ಅವರ ನೇತೃತ್ವದ ಸಮಿತಿ ವರದಿ ನೀಡಿದೆ. ಆ ವರದಿಯನ್ನು ಸರಕಾರ ಜಾರಿ ಮಾಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಕೋವಿಡ್ ಬಿಕ್ಕಟ್ಟಿನಲ್ಲಿ ವಿದ್ಯಾರ್ಥಿಗಲಿಗೆ ತೊಂದರೆಯಾಗದಂತೆ ಎಲ್ಲ ಕ್ರಮಗಳನ್ನು ಸರಕರ ಕೈಗೊಂಡಿತ್ತು.
ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಇಲಾಖೆಯು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸಲು ಒಟ್ಟು 69,000 ಆನ್’ಲೈನ್ ತರಗತಿಗಳನ್ನು ನಡೆಸಲಾಗಿದೆ. 12,500 ವಿಡಿಯೋ ತರಗತಿಗಳನ್ನು ಜ್ಞಾನ ನಿಧಿ ಯುಟ್ಯೂಬ್ ಚಾನೆಲ್’ನಲ್ಲಿ ಅಪ್’ಲೋಡ್ ಮಾಡಲಾಗಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಸಿಇಟಿ ಪರೀಕ್ಷೆಗೆ ಸಜ್ಜುಗೊಳಿಸಲು ನೆರವು ನೀಡಲಾಗಿತ್ತು. ಹಾಗೆಯೇ, ಕೋವಿಡ್-19 ನಡುವೆಯೂ ರಾಜ್ಯಾದ್ಯಂತ ಈ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. 1,94,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಕೋವಿಡ್ ಪಾಸಿಟೀವ್ ಬಂದಿದ್ದ ವಿದ್ಯಾರ್ಥಿಗಳು ಆತ್ಮಸ್ಥೈರ್ಯದಿಂದ ಪರೀಕ್ಷೆ ಹಾಜರಾಗಿದ್ದರು ಎಂದು ಉಪ ಮುಖ್ಯಮಂತ್ರಿ ಸಂತಸ ವ್ಯಕ್ತಪಡಿಸಿದರು.

ಸೋಂಕಿನಿಂದ ಆತಂಕಗೊಂಡಿದ್ದ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಸರಕಾರದ ಈ ದಿಟ್ಟ ನಡೆಯಿಂದ ಅನುಕೂಲವಯಿತು. ದೇಶಕ್ಕೆ ಸಿಇಟಿಯನ್ನು ಪರಿಚಯಿಸಿದ ಕರ್ನಾಟಕವೂ ಬಿಕ್ಕಟ್ಟಿ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಹೇಗೆ ಎಂಬುದನ್ನು ದೇಶಕ್ಕೆ ತೋರಿಸಿಕೊಟ್ಟಿತು ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು.

ಮುಂದೊನ ದಿನಗಳಲ್ಲಿ ಮತ್ತಷ್ಟು ಸುಧಾರಣಾ ಕ್ರಮಗಳು ಉನ್ನತ ಶಿಕ್ಷಣ ಇಲಾಖೆಯಲ್ಲಿ ಜಾರಿಗೆ ಬರಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.