ಅತಿವೃಷ್ಟಿ ಯಿಂದ 1685 ಕಿ.ಮೀ. ರಸ್ತೆ , 456 ಸೇತುವೆ ಹಾನಿ : ಡಿಸಿಎಂ ಗೋವಿಂದ ಕಾರಜೋಳ

ಬಾಗಲಕೋಟೆ : ಆ.14 : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉಂಟಾಗಿರುವ ಅತಿವೃಷ್ಟಿ ಹಾಗೂ ಪ್ರವಾಹದಿಂದ ಲೋಕೋಪಯೋಗಿ ಉಲಾಖೆಯ 1685 ಕಿ.ಮೀ‌ ರಸ್ತೆ, 456 ಸೇತುವೆ ಹಾಗೂ 46 ಕಟ್ಟಡಗಳು ಹಾನಿಗೊಳಗಾಗಿದ್ದು, ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು 2697 ಕೋಟಿ ರೂ ಬೇಕಾಗುತ್ತದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು.

ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚಾಗಿ ಮಳೆಯಾಗಿದ್ದು, ಲೋಕೋಪಯೋಗಿ ಇಲಾಖೆಯ ಹಾನಿಗೊಳಗಾದ ಸಾರ್ವಜನಿಕ ಆಸ್ತಿಪಾಸ್ತಿಯನ್ನು ಪ್ರಾಥಮಿಕ ಸಮೀಕ್ಷೆ ನಡೆಸಲಾಗಿದೆ. ಬಾಗಲಕೋಟೆ ಜಿಲ್ಲೆಉಲ್ಲಿ 2.65 ಲಕ್ಷ ಹೆಕ್ಟೇರ್ ಬಿತ್ತನೆಯ ಗುರಿ ಪೈಕಿ 2.36 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಈ ವರೆಗೆ 98952 ಮೆಟ್ರಿಕ್ ಟನ್ ರಸಗೊಬ್ಬರವನ್ನು ರೈತರಿಗೆ ಪೂರೈಕೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

ಯೂರಿಯಾ 29950 ಮೆ.ಟನ್ ಅವಶ್ಯಕತೆಗೆ 37559 ಮೆ.ಟನ್ ಪೂರೈಸಲಾಗಿದೆ.ಡಿಎಪಿ 18982 ಮೆ.ಟನ್, ಕಾಂಪ್ಲೇಕ್ಸ್ 26752 ಮೆ.ಟನ್, ಎಂಒಪಿ 14226 ಮೆ.ಟನ್, ಎಸ್ಎಸ್.ಎ 1433 ಮೆ.ಟನ್ ಪೂರೈಸಲಾಗಿದೆ ಎಂದರು. ಜುಲೈ ಮಾಹೆಯಲ್ಲಿ ಕಾಪುದಾಸ್ತು ಅಡಿ ಸಹಕಾರ ಸಂಘಗಳಿಗೆ 3,436 ಮೆ.ಟನ್, ಖಾಸಗಿ ವಿತರಕರಿಗೆ 2,672 ಮೆ.ಟನ್ ಯೂರಿಯಾ ಗೊಬ್ಬರ ಪೂರೈಸಲಾಗಿದೆ ಎಂದು ತಿಳಿಸಿದರು.

ಕೋವಿಡ್ ಲಾಕಡೌನ್ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ಮುಸುಕಿನ ಜೋಳದ ಪ್ರತಿ ರೈತರಿಗೆ 5 ಸಾವಿರ ರೂ.ಗಳಂತೆ ಜಿಲ್ಲೆಯ 27855 ರೈತರಿಗೆ 13.92 ಕೋಟಿ ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗಿದೆ ಎಂದರು.

ಬಿತ್ತನೆ ಬೀಜ ಯೋಜನೆಯಡಿ 1.39 ಕೋಟಿ ಸಹಾಯಧನದಲ್ಲಿ ಜಿಲ್ಲೆಯ 55560 ರೈತರಿಗೆ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗಿದೆ. ಬೆಳೆ ವಿಮೆ ಯೋಜನೆಯಡಿ 2018-19ನೇ ಸಾಲಿನ ಮುಂಗಾರು, ಹಿಂಗಾರು ಹಂಗಾಮಿನಲ್ಲಿ 65011 ರೈತರಿಗೆ 114.89 ಕೋಟಿ ರೂ. ಬೆಳೆ ವಿಮೆ‌ ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದರು.
ಸಂದರ್ಭದಲ್ಲಿ ಶಾಸಕರಾದ ಡಾ.ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿಗಳಾದ ಕ್ಯಾಪ್ಟನ್ ರಾಜೇಂದ್ರ, ಸಿಇಓ‌ ಮತ್ತಿತರರು ಉಪಸ್ಥಿತರಿದ್ದರು.

ಕೊರೊನಾದಿಂದ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆಯಾದ ಸಿದ್ದರಾಮಯ್ಯ

ಬೆಂಗಳೂರು: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಎರಡನೇ ಬಾರಿಗೆ ನಡೆದ ಪರೀಕ್ಷೆಯಲ್ಲೂ ನೆಗೆಟಿವ್ ಬಂದಿದ್ದು ಅವರನ್ನು ಆಸ್ಪತ್ತೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಸಿದ್ದರಾಮಯ್ಯ ಅವರು ಮೂತ್ರದ ಸೋಂಕಿನ ಹಿನ್ನೆಲೆಯಲ್ಲಿ ಆಗಸ್ಟ್ 3ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು. ಕಳೆದ ಹತ್ತು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರು, ಸಿಬ್ಬಂದಿಗೆ ಸಿದ್ದರಾಮಯ್ಯ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಗುಣಮುಖರಾಗುವಂತೆ ತಮಗೆ ಹಾರೈಸಿದ ನಾಡಿನ ಜನತೆ ಸೇರಿದಂತೆ ಎಲ್ಲರಿಗೂ ಸಿದ್ದರಾಮಯ್ಯ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.ವೈದ್ಯರ ಸಲಹೆ ಮೇರೆಗೆ ಸಿದ್ದರಾಮಯ್ಯ ಅವರು ಮನೆಯಲ್ಲಿ ಒಂದು ವಾರ ವಿಶ್ರಾಂತಿ ಪಡೆಯಲಿದ್ದಾರೆ.

ಸಿದ್ದರಾಮಯ್ಯ ಜೊತೆ ಅವರ ಪುತ್ರ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರೂ ಇಂದು ಕೊರೊನಾ ನೆಗಟಿವ್ ಹಿನ್ನಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದರು.

ಪೋಷಕ ಕಲಾವಿದರಿಗೆ ಆರ್ಥಿಕ ನೆರವು

ಬೆಂಗಳೂರು: ಕೋವಿಡ್-19 ಕಾರಣದಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವ ಕನ್ನಡ ಚಿತ್ರರಂಗದ 40 ಪೋಷಕ ಕಲಾವಿದರಿಗೆ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಅಲಿಯನ್ಸ್ ವಿಶ್ವವಿದ್ಯಾಲಯ ವತಿಯಿಂದ ಆರ್ಥಿಕ ನೆರವು ಕೊಡಿಸಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಸಿನಿಮಾ ಹಾಗೂ ಕಿರುತೆರೆಯ ಸುಮಾರು 40 ಕಲಾವಿದರಿಗೆ ಅಲಿಯನ್ಸ್ ವಿಶ್ವವಿದ್ಯಾಲಯ ನೀಡಿದ ಹಣಕಾಸು ನೆರವಿನ ಜತೆಗೆ ಪ್ರಶಂಸನಾ ಯತ್ರವನ್ನು ನೀಡಿದರಲ್ಲದೆ, ತಮ್ಮ ನಟನೆಯ ಮೂಲಕ ಚಿತ್ರರಂಗದ ಹಿರಿಮೆಗೆ ಕಾರಣರಾದ ಕಲಾವಿದರಿಗೆ ನೆರವಾಗುತ್ತಿರುವ ವಿವಿಯನ್ನು ಅಭಿನಂದಿಸಿದರು.

60 ವರ್ಷ ಮೇಲ್ಪಟ್ಟ ಹಿರಿಯ ಕಲಾವಿದರು ಕೂಡ ಚಿತ್ರೀಕರಣ ದಲ್ಲಿ ಭಾಗವಹಿಸಿ ಜೀವನ ಸಾಗಿಸಲು ಅನುವು ಮಾಡಿಕೊಡುವಂತೆ ಇದೇ ವೇಳೆ ಕಲಾವಿದರು ಡಿಸಿಎಂ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.

ಹಿರಿಯ ನಟಿಯರಾದ ಲಕ್ಷ್ಮಿದೇವಮ್ಮ, ಸುಲೋಚನಾ ರೈ, ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ ಹಾಗೂ ಸದಸ್ಯರಾದ ಬ್ಯಾಂಕ್ ಜನಾರ್ಧನ್, ವೆಂಕಟಾಚಲ, ಬಿರಾದಾರ್, ಆಡುಗೋಡಿ ಶ್ರೀನಿವಾಸ್, ಶೈಲಜಾ ಸೋಮಶೇಖರ್, ಭಾಗ್ಯಶ್ರೀ, ಸುರೇಶ್ ದಾವಣಗೆರೆ, ಭವ್ಯಶ್ರೀ, ಭಾಸ್ಕರ್, ಪುಷ್ಪಾ ಸ್ವಾಮಿ, ರಾಧಾ ರಾಮಚಂದ್ರ ಸೇರಿದಂತೆ ಸುಮಾರು 40 ಕಲಾವಿದರು ಹಾಜರಿದ್ದರು. ಗಣೇಶ ರಾವ್ ಹಾಜರಿದ್ದರು. ಇವೆಲ್ಲರೂ ಅಲಯನ್ಸ್ ವಿವಿ ಜತೆ ಮಾತನಾಡಿ ಆರ್ಥಿಕ ನೆರವು ಕೊಡಿಸಿದ ಉಪ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದರು

ರಾಮನಗರ ಅಭಿವೃದ್ಧಿ ಯೋಜನೆಗಳ ಬಗ್ಗೆ ಡಿಸಿಎಂ ಸಮಾಲೋಚನೆ

ಬೆಂಗಳೂರು: ರಾಮನಗರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಇಲ್ಲಿನ ವಿಕಾಸಸೌಧ ದಲ್ಲಿ ಗುರುವಾರ ಸರಣಿ ಸಭೆಗಳನ್ನು ನಡೆಸಿದ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಅಭಿವೃದ್ಧಿ ಕಾಮಗಾರಿಗಳ ವೇಗ ಹೆಚ್ಚಬೇಕು ಹಾಗೂ ಪೂರ್ವ ನಿಗಧಿತ ಸಮಯಕ್ಕೆ ಅವುಗಳ ಪ್ರಯೋಜನ ಜನರಿಗೆ ಲಭ್ಯವಾಗಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ರಾಮನಗರದಲ್ಲಿ ನಿರ್ಮಾಣವಾಗುತ್ತಿರುವ 250 ಹಾಸಿಗೆಗಳ ಆಸ್ಪತ್ರೆಯನ್ನು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿ, ಜಿಲ್ಲೆಯ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆ, ಒಳಚರಡಿ ಸುಧಾರಣೆ ಸೇರಿ ಜಿಲ್ಲೆಯಲ್ಲಿ ಕಾರ್ಯಗತವಾಗುತ್ತಿರುವ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರಲ್ಲದೆ, ಎಲ್ಲ ಯೋಜನೆಗಳು ಕಾಲಮಿತಿಯಲ್ಲಿ ಮುಗಿಯಲೇಬೇಕು ಎಂದು ಅಧಿಕಾರಿಗಳಿಗೆ ಖಡಕ್ಕಾಗಿ ಸೂಚನೆ ನೀಡಿದರು.

250 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ:

ಜಿಲ್ಲಾ ಕೇಂದ್ರದಲ್ಲಿ ಈಗ ನಿರ್ಮಾಣ ಆಗುತ್ತಿರುವ 250 ಹಾಸಿಗೆಗಳ ಆಸ್ಪತ್ರೆಯನ್ನು ಜಾಗತಿಕ ಗುಣಮಟ್ಟದ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನಾಗಿ ಪರಿವರ್ತಿಸುವ ಕಾಮಗಾರಿಯ ಪ್ರಗತಿಯ ಬಗ್ಗೆ ಡಿಸಿಎಂ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು. ಈ ಆಸ್ಪತ್ರೆಯಲ್ಲಿ ಕ್ಯಾನ್ಸರ್, ಹೃದ್ರೋಗ, ನರರೋಗ, ಎದೆ ಸಮಸ್ಯೆ ಮುಂತಾದ ಗಂಭೀರ ಕಾಯಿಲೆಗಳ ರೋಗಿಗಳಿಗೆ ಚಿಕಿತ್ಸೆ ನೀಡಲಾಗುವುದು. ಜತೆಗೆ ಈಗಾಗಲೇ ಜಿಲ್ಲಾ ಕೇಂದ್ರದಲ್ಲಿರುವ 100 ಹಾಸಿಗೆಗಳ ಅಸ್ಪತ್ರೆಯನ್ನು ತಾಯಿ-ಮಕ್ಕಳ ಆಸ್ಪತ್ರೆಯಾಗಿ ಪರಿವರ್ತನೆ ಮಾಡಲು ಕೂಡ ಸಭೆಯಲ್ಲಿ ನಿರ್ಧರಿಸಲಾಯಿತು.

ಮಣಿಪಾಲ್ ಆಸ್ಪತ್ರೆ ತಜ್ಞ ವೈದ್ಯರು ಆಸ್ಪತ್ರೆಯ ನಿರ್ಮಾಣಕ್ಕೆ ಸೂಕ್ತ ಸಲಹೆ ನೀಡುತ್ತಿದ್ದು, ಜಾಗತಿಕ ಗುಣಮಟ್ಟಕ್ಕೆ ಯಾವುದೇ ರೀತಿಯಲ್ಲೂ ತಗ್ಗದಂತೆ ಸೌಲಭ್ಯಗಳ ವ್ಯವಸ್ಥೆ ಮಾಡಲಾಗುವುದು. ಮೂರು ತಿಂಗಳ ಅವಧಿಯಲ್ಲಿ ಈ ಆಸ್ಪತ್ರೆಯ ಕಾಮಗಾರಿ ಮುಗಿಯುತ್ತದೆ. ಈ ಭಾಗದ ಜನರಿಗೆ ಇನ್ನು ಮುಂದೆ ರಾಮನಗರದಲ್ಲಿಯೇ ಜಾಗತಿಕ ಗುಣಮಟ್ಟದ ಚಿಕಿತ್ಸೆ ದೊರೆಯಲಿದೆ. ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಇಂಥ ಸುಸಜ್ಜಿತ ಆಸ್ಪತ್ರೆ ಅಗತ್ಯವಾಗಿತ್ತು ಎಂಬುದನ್ನು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಈ ಸಭೆಯಲ್ಲಿ ಪಾಲ್ಗೊಂಡಿದ್ದ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ನಿಗದಿತ ವೇಳೆಯಲ್ಲೇ ಈ ಆಸ್ಪತ್ರೆಯೂ ಜನರ ಸೇವೆಗೆ ಲಭ್ಯವಾಗುವಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿಗಳಿಗೆ ಹೇಳಿದರು.

ರಾಮನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್, ಜಿಲ್ಲಾ ಸರ್ಜನ್ ಡಾ. ಶಶಿಧರ್, ಜಿಲ್ಲೆಯ ತಜ್ಞ ವೈದ್ಯೆ ಡಾ. ಪದ್ಮಾ ಹಾಗೂ ಮಣಿಪಾಲ ಆಸ್ಪತ್ರೆಯ ವೈದ್ಯರು ಪಾಲ್ಗೊಂಡಿದ್ದರು.

ಕುಡಿಯುವ ನೀರಿನ ಯೋಜನೆ:

ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರೊದಿಗಿಸಲು ಇಗ್ಗಲೂರು ಅಣೆಕಟ್ಟೆಯಿಂದ ಕಣ್ವ, ಮಂಚನಬೆಲೆ ಮತ್ತು ವೈ.ಜಿ. ಗುಡ್ಡ ಜಲಾಶಯಗಳಿಗೆ ನೀರು ತುಂಬಿಸುವ ಕಾಮಗಾರಿಯ ಪ್ರಗತಿಯನ್ನು ಉಪ ಮುಖ್ಯಮಂತ್ರಿ ಪರಿಶೀಲನೆ ನಡೆಸಿದರು. 540 ಕೋಟಿ ರೂ. ವೆಚ್ಚದಲ್ಲಿ ಕಾರ್ಯಗತವಾಗುತ್ತಿರುವ ಈ ಯೋಜನೆಯೂ 2020ರ ಡಿಸೆಂಬರ್ ಹೊತ್ತಿಗೆ ಮುಗಿಯಲಿದ್ದು, ಕಾವೇರಿ ನದಿಯಿಂದ ಜಿಲ್ಲೆಗೆ ನೀರು ತರಲಾಗುತ್ತಿದೆ ಎಂದು ಅವರು ತಿಳಿಸಿದರು.

ಇದಾದ ಮೇಲೆ 1,800 ಕೋಟಿ ರೂ. ವೆಚ್ಚದಲ್ಲಿ ಮನೆಮನೆಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು, ಇದಕ್ಕೆ ಕೇಂದ್ರದ ಒಪ್ಪಿಗೆಯನ್ನು ಪಡೆಯಬೇಕಾಗಿದೆ. ಇನ್ನು 311 ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಯ ಒಟ್ಟು 2.8 ಲಕ್ಷ ಮನೆಗಳ ಪೈಕಿ ಮೊದಲ ಹಂತದಲ್ಲಿ 75,000 ಮನೆಗಳಿಗೆ ಶುದ್ಧ ನೀರು ಒದಗಿಸುವ ಯೋಜನೆ ಪ್ರಗತಿಯಲ್ಲಿದೆ. ಎಲ್ಲ ಯೋಜನೆಗಳನ್ನು ನಿಗದಿತ ಕಾಲಮಿತಿಯಲ್ಲೇ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಡಿಸಿಎಂ ತಾಕೀತು ಮಾಡಿದರು.

ರಾಮನಗರ, ಚನ್ನಪಟ್ಟಣ, ಬಿಡದಿ, ಮಾಗಡಿ ಮತ್ತು ಕನಕಪುರ ಪಟ್ಟಣಗಳಿಗೆ ಕುಡಿಯುವ ನೀರು ಮತ್ತು ಒಳಚರಂಡಿ ಯೋಜನೆಗಳ ಪ್ರಗತಿಯನ್ನು ಕೂಡ ಡಿಸಿಎಂ ಪರಿಶೀಲನೆ ನಡೆಸಿದರು. ರಾಮನಗರ ಪಟ್ಟಣಕ್ಕೆ 456 ಕೋಟಿ ರೂ. ವೆಚ್ಚದಲ್ಲಿ ಹಾಗೂ ಬಿಡದಿ ಪಟ್ಟಣಕ್ಕೆ 171 ಕೋಟಿ ರೂ. ವೆಚ್ಚದಲ್ಲಿ ನೀರು ಒದಗಿಸುವ ಕಾಮಗಾರಿ ಭರದಿಂದ ನಡೆಯುತ್ತಿದ್ದು ಈ ಕಾಮಗಾರಿಗಳು ಪೂರ್ವ ನಿಗದಿತ ಎರಡು ವರ್ಷದಲ್ಲಿಯೇ ಪೂರ್ಣ ಆಗಲೇಬೇಕು ಎಂದು ಡಿಸಿಎಂ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಭೆಯಲ್ಲಿ ಜಿಲ್ಲೆಯ ಉನ್ನತ ಅಧಿಕಾರಿಗಳ ಜತೆಗೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಜಯರಾಂ, ಬೆಂಗಳೂರು ಜಲಮಂಡಳಿ ಮುಖ್ಯ ಎಂಜಿನಿಯರ್ ರಮೇಶ್, ನಗರ ನೀರು ಸರಬರಾಜು ಮಂಡಳಿ ಮುಖ್ಯ ಎಂಜಿನಿಯರ್ ದಿನೇಶ್, ಸಣ್ಣ ನೀರಾವರಿ ಇಲಾಖೆಯ ಮುಖ್ಯ ಎಂಜಿನೀಯರ್ ಶಂಕರೇ ಗೌಡ, ಗ್ರಾಮೀಣ ನೀರು ಸರಬರಾಜು ಇಲಾಖೆಯ ಮುಖ್ಯ ಎಂಜಿನೀಯರ್ ಬಸಪ್ಪ ಉಪಸ್ಥಿತರಿದ್ದರು.

ಈ ಎಲ್ಲ ಸಭೆಗಳಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿ ಅರ್ಚನಾ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಸೇರಿದಂತೆ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ನವೀನ್ ಕಾಂಗ್ರೆಸ್ ಕಾರ್ಯಕರ್ತ; ಡಿಕೆಶಿಗೆ ತಿರುಗೇಟು ಕೊಟ್ಟ ಡಿಸಿಎಂ

ಬೆಂಗಳೂರು: ನಗರದ ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಮತ್ತು ಕಾವಲ್‌ ಭೈರಸಂದ್ರದಲ್ಲಿ ನಡೆದ ಗಲಭೆ ಸದ್ಯಕ್ಕೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ ಎಂದಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಫೇಸ್‌ಬುಕ್‌ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವ ಯುವಕ ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿದರು.

ಬೆಂಗಳೂರಿನಲ್ಲಿ ಗುರುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಬಗ್ಗೆ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿರುವ ಕಾಂಗ್ರೆಸ್ಸಿಗರ ನಡೆ ಸರಿ ಇಲ್ಲ. ನವೀನ್ ಬಿಜೆಪಿ ಕಾರ್ಯಕರ್ತ ಅಲ್ಲ. ಕಾಂಗ್ರೆಸ್ ಕಾರ್ಯಕರ್ತ. ಈ ಬಗ್ಗೆ ಡಿಕೆ ಶಿವಕುಮಾರ್ ಅವರಿಗೆ ಮಾಹಿತಿ ಕೊರತೆ ಇದೆ. ಒಂದು ಪಕ್ಷದ ಅಧ್ಯಕ್ಷ ಸ್ಥಾನದಲ್ಲಿರುವ ವ್ಯಕ್ತಿ ಹೀಗೆ ಮಾತಾಡೋದು ಸರಿಯಲ್ಲ ಎಂದರಲ್ಲದೆ, ಶಿವಕುಮಾರ್ ಅವರಿದ್ದ ಪೋಸ್ಟರ್’ನಲ್ಲಿ ನವೀನ್ ಇರುವ ಫೋಟೋವನ್ನು ಪ್ರದರ್ಶನ ಮಾಡಿದರು.

ಸರಕಾರ ಮತ್ತು ಬಿಜೆಪಿ ವಿರುದ್ಧ ಡಿಕೆಶಿ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಉಪ ಮುಖ್ಯಮಂತ್ರಿ, ಕಾಂಗ್ರೆಸ್ ಮತ್ತು ಎಸ್ ಡಿಪಿಐ ನಡುವೆ ಗುದ್ದಾಟ ಪ್ರಾರಂಭವಾಗಿದೆ. ಗಲಭೆ ಉಂಟಾಗಲು ಇದೇ ಕಾರಣ. ಅದನ್ನು ಮುಚ್ಚಿಟ್ಟುಕೊಳ್ಳಲು ಅವರು ಹೀಗೆ ಮಾಡುತ್ತಿದ್ದಾರೆ. ಪ್ರತಿ ಹಬ್ಬಕ್ಕೂ ನವೀನ್ ಪೋಸ್ಟ್ ಹಾಕ್ತಿದ್ದ. ಆತನ ಫೇಸ್ ಬುಕ್ ನೋಡಿದರೆ ನಿಮಗೆ ಎಲ್ಲಾ ಗೊತ್ತಾಗುತ್ತದೆ. ನವೀನ್ ‌ಕಾಂಗ್ರೆಸ್ ಕಾರ್ಯಕರ್ತ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.

ಗಲಭೆಕೋರರಿಂದಲೇ ನಷ್ಟ ಭರ್ತಿ:

ಗಲಭೆ ಮಾಡಿದ ಕಿಡಿಗೇಡಿಗಳಿಂದಲೇ ಆಗಿರುವ ನಷ್ಟವನ್ನು ವಸೂಲಿ ಮಾಡಲಾಗುವುದು. ದೊಂಬಿ ಎಬ್ಬಿಸಿ ಸರಕಾರಿ ಆಸ್ತಿಗಳನ್ನು ಹಾನಿ ಮಾಡಿದ ಕಿಡಿಗೇಡಿಗಳನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಪೊಲೀಸರ ವಾಹನಗಳನ್ನು ಸುಟ್ಟು ಹಾಕಿದ್ದಾರೆ. ಪೊಲೀಸ್ ಠಾಣೆಗೆ ಬೆಂಕಿ ಇಡಲಾಗಿದೆ. ಅನೇಕ ಬಡವರು ತಮ್ಮ ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಈ ಎಲ್ಲ ನಷ್ಟವನ್ನು ದುಷ್ಕರ್ಮಿಗಳಿಂದಲೇ ವಸೂಲಿ ಮಾಡುತ್ತೇವೆ. ಪೈಸೆಪೈಸೆಯೂ ವಸೂಲಾಗುತ್ತದೆ. ಇದಕ್ಕೆ ಅಗತ್ಯವಾದ ಕಾನೂನು ತಿದ್ದುಪಡಿ ತರುವ ಕೆಲಸವನ್ನು ಸರಕಾರ ಮಾಡುತ್ತದೆ ಎಂದು ಡಿಸಿಎಂ ಸ್ಪಷ್ಟವಾಗಿ ಹೇಳಿದರು.

ಸಂಚು ರೂಪಿಸಿ ದಾಳಿ:

ಗಲಭೆಕೋರರು ಪೂರ್ವಯೋಜಿತವಾಗಿ ದಾಳಿ ನಡೆಸಿದ್ದಾರೆ. ಯಾರ ಮಾತನ್ನು ಕೇಳದೆ ಉದ್ರೇಗಕ್ಕೆ ಒಳಗಾಗಿ ಬೆಂಕಿ ಇಟ್ಟಿದ್ದಾರೆ. ಪೊಲೀಸ್ ಸ್ಟೇಷನ್ ಗೆ ಬೆಂಕಿ ಇಡಲು ಹೋಗಿದ್ದು ನೋಡಿದರೆ ಪೊಲೀಸ್ ಸಿಬ್ಬಂದಿಯನ್ನು ಕೊಲ್ಲುವುದು ಅವರ ಉದ್ದೇಶವಾಗಿತ್ತು ಎಂಬುದು ಸ್ಪಷ್ಟವಾಗಿ ತಿಳಿಯುತ್ತೆ. ಈಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಮತ್ತೆ ಎಲ್ಲೂ ಗಲಭೆ ಅಗಿಲ್ಲ. ಸರ್ಕಾರ ಮತ್ತಷ್ಟು ಕಟ್ಟೆಚ್ಚರ ವಹಿಸಿದೆ. ಗಲಭೆಗೆ ಕಾರಣರಾದವರನ್ನು ಹುಡುಕುವ ಕೆಲಸ ಇನ್ನೂ ನಡೆಯುತ್ತಿದೆ. ಮತ್ತೆ ಹೀಗೆ ಆಗದಂತೆ ಎಲ್ಲವನ್ನು ಕ್ಲೀನ್ ಮಾಡಲಾಗುತ್ತಿದೆ. ಇನ್ನೆಂದೂ ಇಂಥ ಗಲಭೆಗಳಿಗೆ ಅವಕಾಶವೇ ಇಲ್ಲದಂತೆ ಬಿಗಿ ಮಾಡಲಾಗುತ್ತಿದೆ. ಜತೆಗೆ, ಜಿಹಾದಿ ಕೆಲಸ ಮಾಡೋದಕ್ಕೂ ನಮ್ಮ ಸರಕಾರ ಅವಕಾಶ ಕೊಡೊದಿಲ್ಲ ಎಂದು ಡಿಸಿಎಂ ಖಡಕ್ಕಾಗಿ ಹೇಳಿದರು.

ಬ್ಯಾನ್ ಬಗ್ಗೆಯೂ ಪರಿಶೀಲನೆ:
ಎಸ್’ಡಿಪಿಐ ಸಂಘಟನೆಯನ್ನು ಬ್ಯಾನ್ ಮಾಡುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ಹಿಂದಿನ ಘಟನೆಗಳಿಗೂ ಸಾಕ್ಷಿಗಳು ಇವೆ. ಅದರ ಹಿನ್ನೆಲೆಯಲ್ಲಿ ಇಂತಹ ಸಂಘಟನೆಗಳನ್ನು ನಿಷೇಧ ಮಾಡುವ ನಿಟ್ಟಿನಲ್ಲಿ ಸರಕಾರ ದಿಟ್ಟ ಕ್ರಮ ತೆಗೆದುಕೊಳ್ಳುತ್ತದೆ. ಅಗತ್ಯ ಸಾಕ್ಷ್ಯಗಳ ಸಂಗ್ರಹ ಮಾಡಿದ ನಂತರ ಈ ಸಂಘಟನೆಯನ್ನು ನಿಷೇಧ ಮಾಡುವ ನಿಟ್ಟಿನಲ್ಲಿ ಸರಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

ಮಾಜಿ ಸಚಿವ ಕೆ.ಜೆ.ಜಾರ್ಜ್ ಜೊತೆಯಲ್ಲೂ ಆರೋಪಿ ಪಾಷಾ ಕಾಣಿಸಿಕೊಂಡಿರುವ ಫೋಟೋ ಬಗ್ಗೆಯೂ ತನಿಖೆ ನಡೆಯುತ್ತಿದೆ. ಎಲ್ಲ ಕೋನಗಳಲ್ಲೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ತನಿಖೆಯಲ್ಲಿ ಎಲ್ಲವೂ ತಿಳಿಯಲಿದೆ. ಯಾರೇ ತಪ್ಪಿತಸ್ಥರು ಇದ್ದರೂ ಕ್ರಮ ಜರುಗಿಸಲಾಗುವುದು ಎಂದು ಡಿಸಿಎಂ ತಿಳಿಸಿದರು.

ಫಿಲ್ಮ್’ಸಿಟಿ; ರೋರಿಚ್ ಎಸ್ಟೇಟ್ ಬದಲು ಹೆಸರಘಟ್ಟದಲ್ಲಿ ನಿರ್ಮಾಣ

ಬೆಂಗಳೂರು: ಬಹುನಿರೀಕ್ಷೆಯ ಫಿಲ್ಮ್’ಸಿಟಿಯನ್ನು ರೋರಿಚ್ ಎಸ್ವೇಟಿನ ಬದಲು ಹೆಸರಘಟ್ಟದಲ್ಲಿಯೇ ನಿರ್ಮಾಣ ಮಾಡಲಾಗುವುದು. ಜತೆಗೆ ಕೋವಿಡ್-19 ನಿಂದ ತೀವ್ರ ಸಂಕಷ್ಟಕ್ಕೆ ಗುರಿ ಆಗಿರುವ ಚಿತ್ರರಂಗದ ಪುನಶ್ಚೇತನಕ್ಕೆ ಎಲ್ಲ ರೀತಿಯ ನೆರವೂ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಬೆಂಗಳೂರಿನಲ್ಲಿ ಗುರುವಾರ ಡಾ. ಶಿವರಾಜ್ ಕುಮಾರ್ ನೇತೃತ್ವದಲ್ಲಿ ತಮ್ಮನ್ನು ಭೇಟಿಯಾದ ಕನ್ನಡ ಚಿತ್ರರಂಗದ ನಿಯೋಗದ ಜತೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ರೋರಿಚ್ ಎಸ್ಟೇಟಿನಲ್ಲಿ ಪರಿಸರಾತ್ಮಕ ಸಮಸ್ಯೆಗಳು ಎದುರಾದವು. ಹೀಗಾಗಿ ಅಲ್ಲಿ ಈ ಯೋಜನೆ ಸಾಧ್ಯವಾಗುತ್ತಿಲ್ಲ ಎಂದರು.

ಹೆಸರಘಟ್ಟದಲ್ಲಿ ಪಶುಸಂಗೋಪನಾ ಇಲಾಖೆಯ 450 ಎಕರೆ ಭೂಮಿ ಇದ್ದು, ಅದರಲ್ಲಿ 150 ಎಕರೆಯನ್ನು ಫಿಲ್ಮ್’ಸಿಟಿ ನಿರ್ಮಾಣಕ್ಕೆ ನೀಡಲಾಗುವುದು. ಅಲ್ಲಿ ಫಿಲ್ಮ್ ಸಿಟಿಗೆ ಸಂಪರ್ಕಕ್ಕೆ ಬೇಕಾದ ರಸ್ತೆಯೊಂದನ್ನು ಮಾಡಿ ಆ ಜಾಗವನ್ನು ಫಿಲ್ಮ್ ಸಿಟಿಗೆ ಹಸ್ತಾಂತರ ಮಾಡಲಾಗುವುದು. ಈಗಾಗಲೇ ಇದಕ್ಕೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳು ನಡೆಯುತ್ತಿವೆ. ಆದಷ್ಟು ತ್ವರಿತವಾಗಿ ಫಿಲ್ಮ್’ಸಿಟಿ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಕೋವಿಡ್-19 ಕಾರಣದಿಂದ ಚಿತ್ರರಂಗ ಎದುರಿಸುತ್ತಿರವ ಸಮಸ್ಯೆಗಳ ಬಗ್ಗೆ ಶಿವರಾಜ್ ಕುಮಾರ್ ಅವರ ಜತೆ ವಿವರವಾಗಿ ಚರ್ಚೆ ಮಾಡಲಾಗಿದೆ. ಮುಂದಿನ ವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಮಸ್ಯೆಗಳ ಪರಿಹಾರದ ಬಗ್ಗೆ ಮಾತುಕತೆ ನಡೆಸಲಾಗುವುದು. ಅದಕ್ಕೆ ಪೂರ್ವಭಾವಿಯಾಗಿ ಇವತ್ತು ಸಭೆ ನಡೆದಿದೆ. ಸಿಎಂ ಅವರ ಜತೆ ಮಾತುಕತೆಯ ನಂತರ ಚಿತ್ರರಂಗದ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಹೇಳಿದರು.

ಚಿತ್ರರಂಗದಲ್ಲಿ ಅಸಂಘಟಿತ ದಿನಗೂಲಿ ನೌಕರರ ಹಿತ ಕಾಯುವ ಬಗ್ಗೆ ಆದಷ್ಟು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು. ಅವರನ್ನು ಕಾರ್ಮಿಕ ಇಲಾಖೆ ಅಡಿಗೆ ತಂದು ಸರಕಾರದ ಸವಲತ್ತುಗಳು ಅವರಿಗೂ ಸಿಗುವಂತೆ ನೋಡಿಕೊಳ್ಳಲಾಗುವುದು. ಪ್ರದರ್ಶಕ ವಲಯದಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ ಕಾರ್ಮಿಕರಿಗೂ ಸರಕಾರ ಸಹಾಯ ಹಸ್ತ ಚಾಚಲಿದೆ. ಈ ಬಗ್ಗೆ ಸಂಬಂಧಪಟ್ಟವರ ಜತೆ ಆದಷ್ಟು ಬೇಗ ಚರ್ಚೆ ಮಾಡಲಾಗುವುದು. ಇದರ ಜತಗೆ ಸಕಾಲದಲ್ಲಿ ಸಬ್ಸಿಡಿ ಸಿಗುವಂತೆ ಮಾಡುವುದು, ಆ ಸಬ್ಸಿಡಿ ಪ್ರಮಾಣವನ್ನು ಹೆಚ್ಚಿಸುವುದು, ಜಿಎಸ್’ಟಿ ವಿಚಾರದಲ್ಲಿ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳನ್ನು ಹೋಗಲಾಡಿಸುವುದು ಹಾಗೂ ಸಿನಿಮಾ ನಿರ್ಮಾಣಕ್ಕೆ ಪೂರಕವಾದ ಉತ್ತಮ ಮೂಲಸೌಕರ್ಯಗಳನ್ನು ಒದಗಿಸುವುದೂ ಸೇರಿದಂತೆ ಅನೇಕ ಸಂಗತಿಗಳ ಬಗ್ಗೆ ಮಾತುಕತೆಯಾಗಿದ್ದು, ಮುಖ್ಯಮಂತ್ರಿಗಳ ಜತೆ ಸಭೆ ನಡೆದ ನಂತರ ಇವೆಲ್ಲಕ್ಕೂ ಪರಿಹಾರ ಸಿಗಲಿದೆ ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.

ಎಸ್‌ಒಪಿಯಲ್ಲಿ ರಿಯಾಯಿತಿ:

ಕೋವಿಡ್-19 ಕಾರಣಕ್ಕೆ ಎಸ್‌ಒಪಿ ಜಾರಿಯಲ್ಲಿದೆ. ಕಲಾವಿದರು ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಈ ನಿಯಮಗಳಲ್ಲಿ ಸ್ವಲ್ಪ ಮಟ್ಟಿಗೆ ರಿಯಾಯಿತಿ ನೀಡುವಂತೆ ಚಿತ್ರರಂಗದ ಗಣ್ಯರು ಕೇಳಿದ್ದಾರೆ. ಆ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದ ಡಿಸಿಎಂ, ಸದ್ಯಕ್ಕೆ ಎಸ್‌ಒಪಿ ಪ್ರಕಾರ ಶೂಟಿಂಗ್ ಮತ್ತಿತರೆ ಸಿನಿಮಾ ಸಂಬಂಧಿತ ಚಟುವಟಿಕೆಗಳಲ್ಲಿ 40 ಜನ ಮಾತ್ರ ಇರಬೇಕು. ಇದರಿಂದ ಕೈಕಾಲು ಕಟ್ಟಿಹಾಕಿದಂತೆ ಆಗಿದ್ದು, ಅನೇಕ ಕಲಾವಿದರು ಮತ್ತು ಕಾರ್ಮಿಕರಿಗೆ ಕಷ್ಟವಾಗುತ್ತಿದೆ. ಹೀಗಾಗಿ ಈ ಮಿತಿಯನ್ನು ಸಡಿಲ ಮಾಡುವಂತೆ ಕೇಳಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.

ಹೊಸ ಚಲನಚಿತ್ರ ನೀತಿ:

ಕನ್ನಡ ಚಲನಚಿತ್ರ ರಂಗವೂ ಸರಕಾರದ ಹಲವಾರು ಇಲಾಖೆಗಳಲ್ಲಿ ಹಂಚಿಹೋಗಿದೆ. ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಲನಚಿತ್ರ ಅಕಾಡೆಮಿ ಇತ್ಯಾದಿಗಳ ಅಡಿಯಲ್ಲಿ ಸಿನಿಮಾ ಕ್ಷೇತ್ರದ ಕೆಲಸಗಳು ಆಗುತ್ತಿವೆ. ಇವೆಲ್ಲವನ್ನೂ ಒಟ್ಟಾಗಿ ಅನುಸಂಧಾನಗೊಳಿಸಿ ಕನ್ನಡ ಚಲನಚಿತ್ರ ಉತ್ತೇಜನಾ ಮಂಡಳಿಯನ್ನು ರಚಿಸಲು ಸಾಧ್ಯವೇ? ಎಂಬ ಚಿಂತನೆಯೂ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಲಾಗುವುದು. ಹಾಗೆಯೇ ಈಗಾಗಗಲೇ ಇರುವ ಚಲನಚಿತ್ರ ನೀತಿ ಹಳೆಯದಾಗಿದ್ದು, ಆದಷ್ಟು ಬೇಗ ಹೊಸ ನೀತಿಯನ್ನು ರೂಪಿಸಲಾಗುವುದು. ಅದರಲ್ಲಿ ಜನತಾ ಥಿಯೇಟರ್ ಸ್ಥಾಪನೆ, ಈಗಿರುವ ಟಾಕೀಸ್’ಗಳನ್ನು ಉತ್ತಮಪಡಿಸಿ ಪ್ರದರ್ಶನ ವಲಯಕ್ಕೆ ಶಕ್ತಿ ತುಂಬುವ ಅಂಶಗಳನ್ನು ಮುಂಬರುವ ನೀತಿಯಲ್ಲಿ ಸೇರಿಸಲಾಗುವುದು ಎಂದು ಅವರು ಹೇಳಿದರು.

ಇದೇ ವೇಳೆ ಮಾತನಾಡಿದ ಶಿವರಾಜ್ ಕುಮಾರ್ ಅವರು, ಕೋವಿಡ್ ಕಾರಣಕ್ಕೆ ಚಿತ್ರರಂಗ ಕಂಗೆಟ್ಟಿದೆ. ಸರಕಾರವೇ ನಮ್ಮ ಚಿತ್ರರಂಗವನ್ನು ರಕ್ಷಿಸಬೇಕು. ಈಗಾಗಲೇ ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ಉಪ ಮುಖ್ಯಮಂತ್ರಿಗಳ ಜತೆ ನಡೆಸಿದ ಮಾತುಕತೆ ಸಕಾರಾತ್ಮಕವಾಗಿತ್ತು. ಮುಂದಿನ ವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ನಿರ್ಮಾಪಕ ಕೆ.ಪಿ. ಶ್ರೀಕಾಂತ್, ಕೆಜಿಎಫ್ ಚಿತ್ರದ ಸಹ ನಿರ್ಮಾಪಕ ಕಾರ್ತಿಕ್ ಮುಂತಾದವರು ಪಾಲ್ಗೊಂಡಿದ್ದರು.