166 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರ, ಆಗಸ್ಟ್ 12, ಬುಧವಾರ:ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಗ್ರಾಮೀಣ ಆಶ್ರಯ ನಿವೇಶನ ಯೋಜನೆಯಡಿ 166 ಫಲಾನುಭವಿಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಹಕ್ಕು ಪತ್ರ ವಿತರಿಸಿದರು.

ಸೂಲಕುಂಟೆಯಲ್ಲಿ ಬುಧವಾರ ನಡೆದ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪಾಲ್ಗೊಂಡರು. ಹಕ್ಕುಪತ್ರ ವಿತರಿಸಿದ ಬಳಿಕ ಮಾತನಾಡಿದ ಸಚಿವರು, “ಕೆಲ ವರ್ಷಗಳ ಹಿಂದೆ ಕೊಟ್ಟ ಮಾತಿನಂತೆ ಈಗ ಮನೆ ಕಟ್ಟಿಕೊಳ್ಳಲು ನಿವೇಶನ ನೀಡಲಾಗಿದೆ. ಇಲ್ಲಿನ ಜನರು ಸ್ವಾಭಿಮಾನದಿಂದ ಬದುಕುವಂತೆ ಮಾಡುವುದು ಈ ಯೋಜನೆಯ ಉದ್ದೇಶ. ಸರ್ಕಾರದಿಂದ ಫಲಾನುಭವಿಗಳಿಗೆ ತಲಾ 1.20 ಲಕ್ಷ ರೂ. ನೀಡಲಿದ್ದು, ಮೂರ್ನಾಲ್ಕು ತಿಂಗಳಲ್ಲಿ ಮನೆ ನಿರ್ಮಿಸಿಕೊಳ್ಳಬಹುದು’’ ಎಂದು ವಿವರಿಸಿದರು.

“ಕಳೆದ ಎರಡು ತಿಂಗಳಿಂದ ಎಲ್ಲ ರೀತಿಯ ವೈಪರೀತ್ಯಗಳನ್ನು ನೋಡುತ್ತಿದ್ದೇವೆ. ಚಿಕ್ಕಬಳ್ಳಾಪುರ ಭಾಗದಲ್ಲಿ ಉತ್ತಮ ಮಳೆ ಸುರಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಬೆಳೆಯನ್ನು ನಿರೀಕ್ಷಿಸಬಹುದು. ಕೃಷಿಗೆ ನೆರವಾಗಲು ಎಚ್‍ಎನ್ ವ್ಯಾಲಿಯಿಂದ ಈ ಭಾಗದ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಇದರಿಂದಾಗಿ ಸುತ್ತಮುತ್ತಲಿನ ಜಮೀನುಗಳಲ್ಲಿ ಅಂತರ್ಜಲ ವೃದ್ಧಿಯಾಗುತ್ತಿದೆ. ಇತ್ತೀಚೆಗೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಮೂರ್ನಾಲ್ಕು ತಿಂಗಳಲ್ಲಿ ಎಚ್‍ಎನ್ ವ್ಯಾಲಿಯಿಂದ 25 ರಿಂದ 26 ಕೆರೆಗಳಿಗೆ ನೀರು ಹರಿಸುತ್ತೇವೆ ಎಂದಿದ್ದಾರೆ’’ ಎಂದು ತಿಳಿಸಿದರು.

“ಜಿಲ್ಲೆಗೆ ನೀರು ಹರಿಸಲು ಎತ್ತಿನಹೊಳೆ ಯೋಜನೆ ಕಾಮಗಾರಿ ನಡೆಯುತ್ತಿದೆ. ಎಚ್‍ಎನ್ ವ್ಯಾಲಿಯಿಂದ ನೀರು ತುಂಬಿಸದ ಕೆರೆಗಳಿಗೆ ಎತ್ತಿನಹೊಳೆಯಿಂದ ನೀರು ಹರಿಸಲಾಗುವುದು. ಒಟ್ಟಾರೆಯಾಗಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ’’ ಎಂದು ಹೇಳಿದರು.

“ಎಸ್‍ಎಸ್‍ಎಲ್ ಸಿಯಲ್ಲಿ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ವಿದ್ಯಾರ್ಥಿಗಳು ದಾಖಲೆ ಬರೆದಿದ್ದಾರೆ. ಮೊದಲ ಸ್ಥಾನವನ್ನು ಮುಂದೆಯೂ ಕಾಪಾಡಿಕೊಳ್ಳಬೇಕು’’ ಎಂದರು.

ಕಮ್ಮತ್ತಹಳ್ಳಿ, ಯಲಗಲಹಳ್ಳಿ, ಮುದ್ದಲಹಳ್ಳಿಯಲ್ಲಿ ಸಚಿವ ಡಾ.ಕೆ.ಸುಧಾಕರ್ ಅವರು ಹಕ್ಕುಪತ್ರ ವಿತರಿಸಿದರು. 4.69 ಕೋಟಿ ರೂ. ವೆಚ್ಚದಲ್ಲಿ ಬಾಗೇಪಲ್ಲಿಯಲ್ಲಿ ನಿರ್ಮಾಣವಾಗಲಿರುವ ವಸತಿ ನಿಲಯಕ್ಕೆ ಶಂಕುಸ್ಥಾಪನೆ ಸೇರಿದಂತೆ 5 ಕೋಟಿ ರೂ. ಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿಗೆ ಕಾಮಗಾರಿಗೆ ಸಚಿವರು ಚಾಲನೆ ನೀಡಿದರು. ಇದೇ ವೇಳೆ ಕೃಷಿ ಬೆಳೆ ಸಮೀಕ್ಷೆ ಮಾಡುವ ಆ್ಯಪ್ ಬಿಡುಗಡೆಗೊಳಿಸಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚಿಕ್ಕನರಸಿಂಹಯ್ಯ, ಜಿಲ್ಲಾಧಿಕಾರಿ ಲತಾ ಉಪಸ್ಥಿತರಿದ್ದರು.

ಮುಲಾಜಿಲ್ಲದೆ ಕ್ರಮ:

ಬೆಂಗಳೂರಿನ ಗಲಭೆ ಕುರಿತು ಪ್ರತಿಕ್ರಿಯಿಸಿದ ಸಚಿವ ಡಾ.ಕೆ.ಸುಧಾಕರ್, “ಕಿಡಿಗೇಡಿಗಳ ವಿರುದ್ಧ ನಮ್ಮ ಸರ್ಕಾರ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಿದೆ. ಸೂಕ್ತ ತನಿಖೆ ಬಳಿಕ ತಪ್ಪಿತಸ್ಥರ ಬಗ್ಗೆ ತಿಳಿದುಬರಲಿದೆ’’ ಎಂದರು.

“ಮಾಧ್ಯಮದವರ ಮೇಲೂ ಹಲ್ಲೆ ನಡೆದಿರುವುದು ದುರದೃಷ್ಟಕರ. ಬೆಂಗಳೂರಿನಲ್ಲಿ ಈ ರೀತಿಯ ವ್ಯವಸ್ಥಿತ ಪಿತೂರಿ ಹಿಂದೆ ನಡೆದಿರಲಿಲ್ಲ. ಜನರು ಆಟೊ, ಟೆಂಪೊಗಳಲ್ಲಿ ಬಂದು ಹಲ್ಲೆ ಮಾಡುವ ಘಟನೆ ಜಮ್ಮು ಮತ್ತು ಕಾಶ್ಮೀರದಂತಹ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತದೆ. ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಆದರೆ ಜನರೇ ಹೀಗೆ ಕಾನೂನು ಕೈಗೆತ್ತಿಕೊಳ್ಳಬಾರದು. ಜಗತ್ತಿನ ಡೈನಾಮಿಕ್ ನಗರವೆಂದು ಹೆಸರಾಗಿರುವ ಬೆಂಗಳೂರಿನಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಹಾಳು ಮಾಡಬಾರದು’’ ಎಂದರು.

ಗಲಭೆ ಪೀಡಿತ ಪ್ರದೇಶಗಳಿಗೆ ಕೇಂದ್ರ ಸಚಿವ ಸದಾನಂದ ಗೌಡ ಭೇಟಿ: ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ

ಬೆಂಗಳೂರು, ಆಗಸ್ಟ್‌ ೧೨ – ಕೇಂದ್ರ ರಾಸಾಯನಿಕ ಮತ್ತ ರಸಗೊಬ್ಬರ ಸಚಿವ ಶ್ರೀ ಡಿ ವಿ ಸದಾನಂದ ಗೌಡ ಅವರು ಇಂದು ಸಾಯಂಕಾಲ ಗಲಭೆ ಪೀಡಿತ ಬೆಂಗಳೂರಿನ ಡಿ ಜಿ. ಹಳ್ಳಿ ಮತ್ತು ಕೆ ಜಿ ಹಳ್ಳಿ ಪ್ರದೇಶಗಳಿಗೆ ಗೃಹ ಸಚಿವ ಶ್ರೀ ಬಸವರಾಜ್‌ ಬೊಮ್ಮಾಯಿ ಅವರೊಂದಿಗೆ ಭೇಟಿ ನೀಡಿ ಪೊಲೀಸರು ಹಾಗೂ ಸಂತೃಸ್ಥ ನಾಗರಿಕರಲ್ಲಿ ಸ್ಥೈರ್ಯ ತುಂಬಿದರು.

ಗಲಭೆಕೋರರು ಡಿ ಜಿ ಹಳ್ಳಿ ಪೊಲೀಸ್‌ ಠಾಣೆ, ಹತ್ತಾರು ಮನೆಗಳು, ಅಂಗಡಿಗಳು, ನೂರಾರು ವಾಹನಗಳಿಗೆ ಬೆಂಕಿಹಚ್ಚಿ ನಡೆಸಿರುವ ವಿಧ್ವಂಸ ಕೃತ್ಯಗಳಿಂದ ಆಸ್ತಿಪಾಸ್ತಿಗೆ ಆಗಿರುವ ಅಪಾರ ಪ್ರಮಾಣದ ಹಾನಿಯನ್ನು ಕಂಡು ಸಚಿವರು ಖೇದ ವ್ಯಕ್ತಪಡಿಸಿದರು. ಗಲಭೆಕೋರರ ಗುಂಪುಗಳು ಈ ಭಾಗದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳ ಮನೆಮುಂದೆ ನಿಲ್ಲಿಸಿರುವ ನೂರಾರು ಕಾರು-ಬೈಕುಗಳು, ಕೈಗಾಡಿಗಳನ್ನು ಸುಟ್ಟುಹಾಕಿವೆ. ಡಿ ಜಿ ಹಳ್ಳಿ ಪೊಲೀಸ್ ಠಾಣೆ, ಪೊಲೀಸ್‌ ವಾಹನಗಳಲ್ಲದೆ ಅನೇಕ ಹಿಂದುಗಳ ಮನೆಗಳಿಗೂ ಬೆಂಕಿಹಚ್ಚಿವೆ. ಕೆ. ಜಿ ಹಳ್ಳಿ. ಪೊಲೀಸ್‌ ಠಾಣೆ ಮೇಲೂ ದಾಳಿ ಮಾಡಿವೆ.
ಕೇಂದ್ರ ಸಚಿವ ಸದಾನಂದಗೌಡ ಅವರು ಎರಡೂ ಪೊಲೀಸ್‌ ಠಾಣೆಗಳಿಗೂ ಭೇಟಿ ನೀಡಿದರು. ಹಾಗೆಯೇ ಗಲಭೆ ಪೀಡಿತ ಬಿಜೆಪಿ ಕಾರ್ಯಕರ್ತ ಮುನೆಗೌಡ, ಅರುಣ ಮುಂತಾದವರ ಮನೆಗಳಿಗೆ ತೆರಳಿ ಸಾಂತ್ವನ ಹೇಳಿದರು.

ತಾವಿಲ್ಲಿ ಅಲ್ಪಸಂಖ್ಯಾತರಾಗಿದ್ದೇವೆ. ಅಸುರಕ್ಷಿತರಾಗಿದ್ದೇವೆ. ನಮ್ಮ ಜೀವಕ್ಕೆ ರಕ್ಷಣೆ ಬೇಕು. ಗಲಭೆಕೋರರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಅವರನ್ನೆಲ್ಲ ತಕ್ಷಣ ಬಂಧಿಸಬೇಕು” ಎಂದು ಅನೇಕ ಸಂತ್ರಸ್ತ ಹಿಂದುಗಳು ವಿಶೇಷವಾಗಿ ಮಹಿಳೆಯರು ಸಚಿವರನ್ನು ವಿನಂತಿಸಿದರು. ಸಂತ್ರಸ್ತರಿಗೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಸ್ಥಳದಲ್ಲಿದ್ದ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದರು. ಉಪಮುಖ್ಯಮಂತ್ರಿ ಡಾ ಅಶ್ವತ್ಥನಾರಾಯಣ ಅವರೂ ಜೊತೆಯಾದರು.

ಈ ಸಂದರ್ಭದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಸದಾನಂದ ಗೌಡರು – ಪೊಲೀಸರು ಗಲಭೆಯನ್ನು ನಿಯಂತ್ರಿಸಲು ಸಂಯಮದಿಂದ ವರ್ತಿಸಿದ್ದಾರೆ. ಗಲಭೆಕೋರರು ವಾಹನ, ಮನೆಗಳಿಗೆ ಬೆಂಕಿಹಚ್ಚುವುದನ್ನು ಮುಂದುವರಿಸಿದಾಗ ಅನಿವಾರ್ಯವಾಗಿ ಗೋಲಿಬಾರ್‌ ಮಾಡಿದ್ದಾರೆ. ಮ್ಯಾಜಿಸ್ಟ್ರೇಟ್‌ ತನಿಖೆಗೆ ಆದೇಶಿಸಲಾಗಿದೆ. ನಿಷ್ಪಕ್ಷಪಾತ ತನಿಖೆ ನಡೆಯಲಿದೆ. ನಿರಪರಾದಿಗಳ್ಯಾರಿಗೂ ತೊಂದರೆಯಾಗುವುದಿಲ್ಲ. ಆದರೆ ದೊಂಬಿಯಲ್ಲಿ ತೊಡಗಿದವರನ್ನು ಯಾರನ್ನೂ ಬಿಡುವುದಿಲ್ಲ. ರಾತ್ರಿಯೇ ಗಲಭೆಯನ್ನು ನಿಯಂತ್ರಿಸಿರುವ ಪೊಲೀಸರು ಈಗಾಗಲೇ ಹಲವರನ್ನು ಬಂಧಿಸಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ.” ಎಂದು ಹೇಳಿದರು.

ಇದಕ್ಕೂ ಮೊದಲು ಸಚಿವ ಸದಾನಂದ ಗೌಡರು ತಾವು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗಲಭೆಯಾದ ಹಿನ್ನಲೆಯಲ್ಲಿ ದೆಹಲಿಯಿಂದ ಬೆಂಗಳೂರಿಗೆ ಧಾವಿಸಿದರು. ಹಾಗೆಯೇ ಮುಖ್ಯಮಂತ್ರಿ ಶ್ರೀ ಬಿ ಎಸ್‌ ಯಡ್ಯೂರಪ್ಪನವರ ಅಧ್ಯಕ್ಷತೆಯಲ್ಲಿ ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಪೊಲೀಸರನ್ನು ಕೊಲ್ಲಲಿಕ್ಕಾಗಿಯೇ ಠಾಣೆಗೆ ಬೆಂಕಿ: ಡಿಸಿಎಂ ಆರೋಪ

ಬೆಂಗಳೂರು: ದೇವರಜೀವನಹಳ್ಳಿ, ಕೆ.ಜಿ.ಹಳ್ಳಿ ಮತ್ತು ಕಾವಲ್’ಭೈರಸಂದ್ರದಲ್ಲಿ ನಡೆದ ಗಲಭೆಯ ಹಿಂದೆ ವ್ಯವಸ್ಥಿತ ಷಡ್ಯಂತ್ರವೇ ಇದೆ. ಮಂಗಳೂರಿನಲ್ಲಿ ನಡೆಸಿದ್ದ ರೀತಿಯಲ್ಲಿಯೇ ಇಲ್ಲಿಯೂ ಹಿಂಸಾಚಾರ ನಡೆಸಲಾಗಿದೆ. ಅದರ ಹಿಂದೆ ಯಾರಿದ್ದಾರೆ ಎಂಬುದನ್ನು ಶೀಘ್ರವಾಗಿ ಪತ್ತೆ ಹಚ್ಚಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಗುಡುಗಿದ್ದಾರೆ.

ದಾಳಿಕೋರರಿಂದ ಹಾನಿಗೊಳಗಾಗಿದ್ದ ದೇವರಜೀವನಹಳ್ಳಿ ಹಾಗೂ ಗಲಭೆಪೀಡಿತ ಪ್ರದೇಶಗಳಿಗೆ ಬುಧವಾರ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರ ಜತೆ ಭೇಟಿ ನೀಡಿ ಪರಿಶೀಲಿಸಿದ ಅವರು, ಹಿಂಸಾಚಾರದ ನಂತರದ ದೃಶ್ಯಗಳನ್ನು ನೋಡಿದರೆ ಗೊತ್ತಾಗುತ್ತದೆ, ಯಾವ ರೀತಿಯಲ್ಲಿ ಭಾರೀ ಸಂಚು ರೂಪಿಸಿ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಲಾಗಿದೆ ಎಂದು. ಠಾಣೆಗೆ ಬರುವ ದಾರಿಯಲ್ಲಿಯೇ ಇದನ್ನು ರುಜುವಾತುಪಡಿಸುವ ಅನೇಕ ಸ್ಪಷ್ಟವಾದ ಸಾಕ್ಷಿಗಳಿವೆ. ಯಾರೊಬ್ಬರೂ ಠಾಣೆಗೆ ಬರದಂತೆ ಅಡ್ಡಿಪಡಿಸಲು ಎಲ್ಲ ರೀತಿಯ ಸಂಚುಗಳನ್ನು ಮಾಡಲಾಗಿದೆ ಎಂದು ಹೇಳಿದರು.

ತಪ್ಪಿತಸ್ಥರನ್ನು ಬಿಡುವ ಪ್ರಶ್ನೆಯೇ ಇಲ್ಲ. ಪೊಲೀಸರನ್ನು ಕೊಲ್ಲುವ ದುರುದ್ದೇಶ ಇಟ್ಟುಕೊಂಡೇ ಈ ಗಲಾಟೆ ಮಾಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಹಾಳು ಮಾಡುವ ಉದ್ದೇಶದಿಂದಲೇ ಠಾಣೆಗೆ ಬೆಂಕಿ ಹಚ್ಚಿ ಸಿಬ್ಬಂದಿಯ ಪ್ರಾಣ ತೆಗೆಯಲು ದುಷ್ಕೃತ್ಯ ಮಾಡಿರುವುದು ಖಂಡನೀಯ. ತಪ್ಪು ಮಾಡಿದ ಪ್ರತಿಯೊಬ್ಬರೂ ತಕ್ಕ ಶಾಸ್ತಿ ಅನುಭವಿಸಲಿದ್ದಾರೆ. ಸರಕಾರವೂ ಗಲಭೆ ಮಾಡಿ ಬಿಲಗಳಲ್ಲಿ ಅಡಗಿಕೂತಿರುವ ಎಲ್ಲ ಇಲಿಗಳನ್ನು ಬೋನಿಗೆಳೆಯಲಿದೆ. ಅವರ ವಿರುದ್ಧ ತೀವ್ರವಾದ ಕ್ರಮ ಜರುಗಿಸಲಾಗುವುದು. ಕನಸು-ಮನಸ್ಸಿನಲ್ಲೂ ಇಂಥ ಹೀನಕೃತ್ಯಗಳನ್ನು ಮಾಡಲು ಹೆದರಬೇಕು. ಆ ರೀತಿಯಲ್ಲಿ ಪಾಠ ಕಲಿಸಲಾಗುವುದು. ಭವಿಷ್ಯದಲ್ಲಿ ಬೆಂಗಳೂರಿನಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ಕಟ್ಟೆಚ್ಚರ ವಹಿಸಲಾಗುವುದು ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.

ಕಾಂಗ್ರೆಸ್ ವಿರುದ್ಧ ಗರಂ:
ಫೇಸ್’ಬುಕ್ ನಲ್ಲಿ ಪೋಸ್ಟ್ ಹಾಕಿರುವ ನವೀನ್ ಎಂಬ ಯುವಕ ಬಿಜೆಪಿ ಕಾರ್ಯಕರ್ತ ಎಂದು ಕಾಂಗ್ರೆಸ್ ಆರೋಪ ಮಾಡಿದೆ ಎಂದು ಸುದ್ದಿಗಾರರ ಗಮನ ಸೆಳೆದಾಗ ಗರಂ ಆದ ಡಿಸಿಎಂ, ಆ ಪಕ್ಷದ ನಾಯಕರಿಗೆ ರಾಜಕೀಯ ಮಾಡೋದು ಬಿಟ್ಟರೆ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲಾಗದ ಅಸಹಾಯಕತೆ ಆ ಪಕ್ಷದ ನಾಯಕರನ್ನು ಕಾಡುತ್ತಿದೆ. ಅದಕ್ಕೆ ಈ ರೀತಿಯ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಆ ವ್ಯಕ್ತಿಯೇ ಕಾಂಗ್ರೆಸ್ ಕಾರ್ಯಕರ್ತ ಎಂದು ಪೋಸ್ಟ್ ಹಾಕಿಕೊಂಡಿದ್ದಾನೆ. ಹೀಗಾಗಿ ಅವರು ಜನರನ್ನು ದಿಕ್ಕು ತಪ್ಪಿಸುವುದನ್ನು ಇನ್ನಾದರು ನಿಲ್ಲಿಸಬೇಕು ಎಂದು ತರಾಟೆಗೆ ತಗೆದುಕೊಂಡರು.

ಇನ್ನೊಬ್ಬರ ಪ್ರಾಣ ತೆಗೆಯಲು ಬಂದವರಿಗೆ, ಪೊಲೀಸ್ ಠಾಣೆಗೆ ಬೆಂಕಿ ಇಡಲು ಬಂದವರಿಗೆ ಪರಿಹಾರ ನೀಡಲು ಸಾಧ್ಯವೇ? ಮುಂದೆ ಏನು ಮಾಡಬೇಕು ಎಂಬುದನ್ನು ಸರಕಾರ ಪರಿಶೀಲಿಸಿ ನಿರ್ಧಾರ ಮಾಡುತ್ತದೆ ಎಂದು ಡಿಸಿಎಂ ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ಜಿಲ್ಲಾ ಮ್ಯಾಜಿಸ್ಟ್ರೇಟ್ ತನಿಖೆಗೆ ಡಿಜೆ ಹಳ್ಳಿ ಗಲಭೆ ಪ್ರಕರಣ

ಬೆಂಗಳೂರು: ದೇವರಜೀವನಹಳ್ಳಿ ಹಾಗು ಕಾಡುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಿನ್ನೆ ನಡೆದ ಗಲಭೆಗಳ ಕುರಿತು ಜಿಲ್ಲಾ ಮ್ಯಾಜಿಸ್ಟ್ರೇಟ್ ರವರಿಂದ ಸಮಗ್ರ ತನಿಖೆ ನಡೆಸಲು ಆದೇಶಿಸಲಾಗಿದೆ.

ಗಲಭೆ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸದಲ್ಲಿ ಸಭೆ ನಡೆಸಲಾಯಿತು. ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಘಟನೆ ಕುರಿತು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಲಾಯಿತು.

ಹಿರಿಯ ಪೊಲೀಸ್ ಅಧಿಕಾರಿಗಳು ಘಟನೆಯ ಇಂಚಿಂಚು ಮಾಹಿತಿ ನೀಡಿದರು, ಯಾವ ಯಾವ ಹಂತದಲ್ಲಿ ಯಾವ ಯಾವ ಕ್ರಮ ಕೈಗೊಳ್ಳಲಾಯಿತು ಎನ್ನುವ ವಿವರ ನೀಡಿದರು. ಗೋಲಿಬಾರ್ ಅನಿವಾರ್ಯತೆ ತಿಳಿಸಿದರು..

ನಂತರ ಇಡೀ ಘಟನೆಯ ಕುರಿತು ತನಿಖೆಗೆ ನಿರ್ಧಾರ ಕೈಗೊಳ್ಳಲಾಯಿತು. ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಂದ ತನಿಖೆ ನಡೆಸಲು ಆದೇಶ ನೀಡಲಾಯಿತು.

ಡಿಜೆ ಹಳ್ಳಿಯಲ್ಲಿ ಗಲಭೆ, ಗೋಲಿಬಾರ್ ಗೆ ಮೂರು ಬಲಿ: ಬೆಚ್ಚಿ ಬಿದ್ದ ಸಿಲಿಕಾನ್ ಸಿಟಿ

ಬೆಂಗಳೂರು: ಕೊರೊನಾ ಸ್ಟೋಟದ ನಡುವೆ ಡಿಜೆ ಹಳ್ಳಿಯಲ್ಲಿ ನಡೆದ ಗಲಭೆಗೆ ಮೂವರು ಬಲಿಯಾಗಿದ್ದು ಸಿಲಿಕಾನ್ ಸಿಟಿ ಬೆಚ್ಚಿಬಿದ್ದಿದೆ.ಆತಂಕದ ವಾತಾವರಣ ನಿರ್ಮಾಣವಾಗಿದ್ದು ಇಡೀ ನಗರದಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.

ವಿವಾದಾತ್ಮಕ ಪೋಸ್ಟ್ ಖಂಡಿಸಿ ನಡೆದ ಡಿಜೆ ಹಳ್ಳಿ ಠಾಣೆ ಎದುರು ಕಳೆದ ರಾತ್ರಿ ನಡೆದ ಪ್ರತಿಭಟನೆ ನಂತರ ಗಲಭೆಗೆ ತಿರುವುತು. ಏಕಾಏಕಿ ನೂರಾರು ದುಷ್ಕರ್ಮಿಗಳು ಕಲ್ಕು ತೂರಾಟ ನಡೆಸಿದರು. ಪೊಲೀಸ್ ವಾಹನ ಸೇರಿ ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.‌ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೂ ಬೆಂಕಿ ಹಚ್ಚಿದ್ದು ಮನೆಯ ಕೆಳ ಮಹಡಿ ಸಂಪೂರ್ಣ ಸುಟ್ಟುಹೋಗಿದೆ.

ಮಧ್ಯರಾತ್ರಿಯಾದರೂ ಪರಿಸ್ಥಿತಿ ತಿಳಿಯಾಗದೆ ಕೈಮೀರಿದ್ದು ಪೊಲೀಸರ ವಿರುದ್ಧ ದುಷ್ಕರ್ಮಿಗಳು ಕಲ್ಲು ತೂರಾಟ, ಬಾಟಲಿ ತೂರಾಟ ನಡೆಸಿದ್ದು, ಪೊಲೀಸ್ ಠಾಣೆಯನ್ನು ಮುತ್ತಿಗೆಯ ಹಾಕಿದ್ದರು ಪೊಲೀಸರ ಪ್ರಾಣಕ್ಕೆ ಅಪಾಯ ಸನ್ನಿವೇಶ ನಿರ್ಮಾಣದ ನಂತರ ಅಶ್ರುವಾಯು ಪ್ರಯೋಗ, ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ದುಷ್ಕರ್ಮಿಗಳು ದುಷ್ಕೃತ್ಯ ಮುಂದುವರೆಸಿದರು ಇದರಿಂದ ಡಿಜೆ ಹಳ್ಳಿಯಲ್ಲಿ ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟವಾಗಿದ್ದು ಪೊಲೀಸರ ಜೀವಕ್ಕೂ ಅಪಾಯ ಎದುರಾಗಿತ್ತು ನಂತರ
ಕಡೆಯ ಅಸ್ತ್ರವಾಗಿ ಪೊಲೀಸರು ಗೋಲಿವಾರ್ ನಡೆಸಿದರು.

ಪೊಲೀಸರ ಗುಂಡಿಗೆ ಸ್ಥಳದಲ್ಲೇ ಓರ್ವ ಮೃತಪಟ್ಟರೆ,ಗಾಯಗೊಂಡಿದ್ದ ಮತ್ತಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಐವತ್ತಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಗಲಭೆ ಸಂಬಂಧ 145 ,ದುಷ್ಕರ್ಮಿಗಳನ್ನು ಬಂಧಿಸಲಾಗಿದ್ದು ತನಿಖೆಯನ್ನು ಚುರುಕುಗೊಳಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧಾರದಲ್ಲಿ ಆರೋಪಿಗಳ ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.ನಗರದಾದ್ಯಂತೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ.

ಯುಪಿಎಸ್ ಸಿ: ಮೇಘನಾರನ್ನು ಅಭಿನಂದಿಸಿದ ಡಿಸಿಎಂ

ಬೆಂಗಳೂರು: ಇತ್ತೀಚೆಗೆ ನಡೆದ ಯುಪಿಎಸ್’ಸಿ ಪರೀಕ್ಷೆಯಲ್ಲಿ ಸತತ ಅಧ್ಯಯನದ ಮೂಲಕ ಉತ್ತಮ ಸಾಧನೆ ಮಾಡಿರುವ ವಿಶೇಷಚೇತನ ಪರೀಕ್ಷಾರ್ಥಿ ಮೇಘನಾ ಅವರನ್ನು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ನಗರದಲ್ಲಿ ಮಂಗಳವಾರ ಸನ್ಮಾನಿಸಿ ಗೌರವಿಸಿದರು.

ಡಾ. ರಾಜಕುಮಾರ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದ ಅವರು, 465ನೇ ರಾಂಕ್ ಪಡೆದು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ಅವರಿಗೆ ಎರಡೂ ಕಣ್ಣುಗಳು ಕಾಣುವುದಿಲ್ಲ. ಇದರ ನಡುವೆಯೂ ಅವರು ತೇರ್ಗಡೆ ಆಗಿರುವುದು ನಾವೆಲ್ಲರೂ ಹೆಮ್ಮಪಡುವ ಸಂಗತಿ ಎಂದು ಡಿಸಿಎಂ ಹೇಳಿದರು.

ಯಾವುದೇ ರೀತಿಯ ಅಂಗವೈಕಲ್ಯ ಇಲ್ಲದ ವಿದ್ಯಾರ್ಥಿಗಳೇ ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಸುಲಭದ ಮಾತಲ್ಲ. ಆದರೆ ಮೇಘನಾ ಅವರು ಅಂಥ ಸವಾಲನ್ನು ಎದುರಿಸಿ ಯಶಸ್ವಿಯಾಗಿ ಗುರಿ ಮುಟ್ಟಿ ಇತರೆ ಪರೀಕ್ಷಾರ್ಥಿಗಳಿಗೆ ಮಾದರಿ ಹಾಗೂ ಪ್ರೇರಣೆಯಾಗಿದ್ದಾರೆಂದು ಉಪ ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇಂತಹ ಪರೀಕ್ಷಾರ್ಥಿಗಳಿಗೆ ಆಸರೆಯಾಗಿ ನಿಂತು ಕೆಲಸ ಮಾಡುತ್ತಿರುವ ಡಾ. ರಾಜಕುಮಾರ್ ಅಕಾಡೆಮಿಯ ಕಾರ್ಯವನ್ನು ಡಿಸಿಎಂ ಮನಸಾರೆ ಶ್ಲಾಘಿಸಿದರು.

ಇದೇ ವೇಳೆ ಮಾತನಾಡಿದ ಮೇಫನಾ ಅವರು, ಜನರ ಸೇವೆಯನ್ನು ಮಾಡುತ್ತ ನನ್ನ ಸಾಧನೆಯ ಸಾರ್ಥಕತೆಯನ್ನು ಕಾಣುತ್ತೇನೆ. ನನ್ನ ಸಾಧನೆಗೆ ನೆರವಾದ ಡಾ. ರಾಜಕುಮಾರ್ ಅಕಾಡೆಮಿಗೆ ಋಣಿಯಾಗಿದ್ದೇನೆ ಎಂದು ಹೇಳಿದರು.

ಅಕಾಡೆಮಿಯ ಮುಖ್ಯಸ್ಥ ಯುವರಾಜ್ ಕುಮಾರ್, ಅವರ ಪತ್ನಿ ಶ್ರೀದೇವಿ ಅವರು ಉಪಸ್ಥಿತರಿದ್ದರು.