ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಸುಖಾಂತ್ಯ: ಮರಳಿ ‘ಕೈ’ವಶವಾದ ಪೈಲಟ್

ನವದೆಹಲಿ: ರಾಜಸ್ಥಾನದಲ್ಲಿ ಆಪರೇಷನ್ ಕಮಲಕ್ಕೆ ಕೈ ಹಾಕಿದ್ದ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಕೊನೆಗೂ ಸುಖಾಂತ್ಯ ಕಂಡಿದೆ. ಕಳೆದ ಒಂದು ತಿಂಗಳಿಂದ ಪತನದಂಚಿನಲ್ಲಿದ್ದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ಕೊಂಚ ಗಟ್ಟಿಯಾಗಿದೆ. ನಮ್ಮಲ್ಲಿದ್ದಿದ್ದು ಕೇವಲ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಷ್ಟೇ ಎನ್ನುವ ಮೂಲಕ ಕೈ ಪಕ್ಷದೊಂದಿಗಿನ ತಮ್ಮ ಹಾದಿ ಗಟ್ಟಿಗೊಳಿಸಿಕೊಂಡಿದ್ದಾರೆ.

ಕಳೆದ ಒಂದು ತಿಂಗಳಿಂದ ರಾಜಸ್ಥಾನದಲ್ಲಿ ಉದ್ಭವಿಸಿದ್ದ ರಾಜಕೀಯ ಬಿಕ್ಕಟ್ಟು ಸುಖಾಂತ್ಯ ಕಂಡಿದೆ.
ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಬಂಡಾಯವೆದ್ದು ಡಿಸಿಎಂ ಸ್ಥಾನ ಕಳೆದುಕೊಂಡಿದ್ದ ಸಚಿನ್ ಪೈಲೆಟ್ ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಾಳಯಕ್ಕೆ ಮರಳಿದ್ದಾರೆ. ಬಂಡಾಯ ಕುರಿತು ತಮ್ಮ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರೊಂದಿಗೆ ಹಲವು ತಾಸು ಮಾತುಕತೆ ನಡೆಸಿ ಬಿಕ್ಕಟ್ಟು ಬಗೆ ಹರಿಸಿಕೊಂಡಿದ್ದಾರೆ. ಇನ್ನೂ ಈ ಕುರಿತು ಸ್ವತಂ ಮಾಜಿ ಡಿಸಿಎಂ ಸಚಿನ್ ಪೈಲಟ್ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ್ದು, ನಮ್ಮ ನಡುವೆ ಇದ್ದದ್ದು ಕೇವಲ ಸೈದ್ಧಾಂತಿಕ ಬಿಕ್ಕಟ್ಟು ಎನ್ನುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಇನ್ನೂ ಸಚಿನ್ ಪೈಲಟ್ ಜೊತೆ ಕೈ ಜೋಡಿಸಿದ್ದ ಬಂಡಾಯ ಶಾಸಕರ ಸಮಸ್ಯೆ ಬಗೆಹರಿಸಲು ಕೈ ನಾಯಕರು ಮುಂದಾಗಿದ್ದಾರೆ. ಬಂಡಾಯ ಶಾಸಕರು ಎತ್ತಿರುವ ವಿಷಯಗಳ ಬಗ್ಗೆ ಗಮನ ಹರಿಸಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತ್ರಿಸದಸ್ಯ ಸಮಿತಿ ರಚನೆ ಮಾಡಿದ್ದಾರೆ. ಇನ್ನೂ ಪಕ್ಷ ಹಾಗೂ ರಾಜಸ್ಥಾನ ಸರ್ಕಾರದ ಹಿತಕ್ಕಾಗಿ ದುಡಿಯುವ ಬದ್ಧತೆಯನ್ನು ಸಚಿನ್ ಪೈಲಟ್ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಆಗಸ್ಟ್ 14 ಕ್ಕೆ ರಾಜಸ್ಥಾನ ವಿಧಾನ ಸಭೆಯಲ್ಲಿ ವಿಶೇಷ ಅಧಿವೇಷನ ನಡೆಯಲಿದ್ದು, ಬಹುಮತ ಸಾಭೀತು ಪರೀಕ್ಷೆ ನಡೆಯುವ ಸಾಧ್ಯತೆ ಇದೆ. ಪೈಲಟ್ ಅವರ ತಂಡ ಮರಳಿ ಪಕ್ಷಕ್ಕೆ ಬಂದಿರುವುದರಿಂದ ಸರ್ಕಾರಕ್ಕೆ ಎದುರಾಗಿದ್ದ ಪತನದ ಭೀತಿ ದೂರವಾಗಿದೆ. ಈ ಬೆಳವಣಿಗೆಗಳ ಕುರಿತು ಮಾತನಾಡಿರೋ ಅಶೋಕ್ ಗೆಹ್ಲೋಟ್, ಬಿಜೆಪಿಯ ಪ್ರತಿಯೊಂದು ಕುತಂತ್ರವೂ ವಿಫಲವಾಗಿದೆ. ಬಿಜೆಪಿಗೆ ಇದೊಂದು ತಕ್ಕ ಪಾಠ, ಬಿಜೆಪಿ ನಾಯಕರಿಂದ ಆಡಳಿತ ಯಂತ್ರ ದುರುಪಯೋಗವಾಗಿದೆ. ನನ್ನ ಮೇಲೆ ಶಾಸಕರಿಗೆ ಸಂಪೂರ್ಣ ನಂಬಿಕೆ ಇದೆ. ಕಾಂಗ್ರೆಸ್ ನ ಒಬ್ಬ ಶಾಸಕರೂ ನಮ್ಮಿಂದ ದೂರವಾಗಿಲ್ಲ, 5 ವರ್ಷ ಅವಧಿ ಪೂರೈಸುತ್ತೇವೆಅಂತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್; ರಾಜ್ಯದ ಕೊರೊನ ಪರಿಸ್ಥಿತಿ ವಿವರಿಸಿದ ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು, ಆಗಸ್ಟ್ 11: ಕೋವಿಡ್ 19 ನಿರ್ವಹಣೆ ಕುರಿತು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವೀಡಿಯೋ ಕಾನ್ಫರೆನ್ಸ್ ನಡೆಸಿದರು.

ಮಂಗಳವಾರ ನಡೆದ ವೀಡಿಯೋ ಸಭೆಯಲ್ಲಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅನುಪಸ್ಥಿತಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪಾಲ್ಗೊಂಡು, ವರದಿ ನೀಡಿದರು.

ಮಾನವ ಸಂಪನ್ಮೂಲವನ್ನು ಸಮರ್ಥವಾಗಿ ಬಳಸಿಕೊಳ್ಳಲು ಪದವಿ ಮತ್ತು ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಕೋರ್ಸ್ ಬಳಿಕ ಕಡ್ಡಾಯವಾಗಿ ಸೇವೆ ಸಲ್ಲಿಸುವಂತೆ ಮಾಡಬೇಕು. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಆದೇಶ ಹೊರಡಿಸಬೇಕು. ಕೋವಿಡ್ ಸಂಬಂಧಿತ ಚಟುವಟಿಕೆಗಳಿಗೆ ಅಂತಿಮ ವರ್ಷದ ಅರೆ ವೈದ್ಯಕೀಯ ಮತ್ತು ವೈದ್ಯ ಪದವಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ಅವರಿಗೆ ತರಗತಿ ಆರಂಭಿಸಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.

ಲಿಕ್ವಿಡ್ ಆಕ್ಸಿಜನ್ ಘಟಕಗಳು ಸುಲಭವಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. ವೈದ್ಯ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆಗೆ ಒತ್ತು ನೀಡಬೇಕು. ಮೆಡಿಕಲ್ ಕಾಲೇಜುಗಳಲ್ಲಿ ಪ್ರತಿ ವರ್ಷ 10,000 ಪದವಿ ಮತ್ತು 2,000 ಸ್ನಾತಕೋತ್ತರ ಸೀಟುಗಳನ್ನು ಹೆಚ್ಚಿಸಲು ಅನುಮತಿ ನೀಡಬೇಕು ಎಂದು ಕೋರಿದರು.

ಕೋವಿಡ್ ಮಾಹಿತಿ:

*ಕೊರೊನಾ ರೋಗಿಯ ಸಂಪರ್ಕಿತ ವ್ಯಕ್ತಿಗಳ ಪತ್ತೆಗೆ ಬೂತ್ ಮಟ್ಟದಲ್ಲಿ ಅಧಿಕಾರಿಗಳು ಮತ್ತು ಸ್ವಯಂಸೇವಕರ ತಂಡ ರಚಿಸಲಾಗಿದೆ. ರೋಗಿಯ ಸರಾಸರಿ ಸಂಪರ್ಕ ಪತ್ತೆ ಪ್ರಮಾಣ 3.5 ರಿಂದ (ಜುಲೈನಲ್ಲಿ) 4.5 ಕ್ಕೆ (ಆಗಸ್ಟ್) ಏರಿಕೆಯಾಗಿದೆ.

*ದಿನದ ಕೊರೊನಾ ಪರೀಕ್ಷೆ ಸಂಖ್ಯೆಯನ್ನು 20,000 ದಿಂದ 50,000 ಕ್ಕೆ ಏರಿಸಲಾಗಿದೆ. 75,000 ಏರಿಸುವ ಗುರಿ ಇದೆ. ಒಟ್ಟು 100 ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ.

*ಕಂಟೇನ್ಮೆಂಟ್ ಹಾಗೂ ಬಫರ್ ವಲಯದಲ್ಲಿ ಪರೀಕ್ಷೆಗೆ 1,300 ಮೊಬೈಲ್ ಲ್ಯಾಬ್ ಗಳನ್ನು ನಿಯೋಜಿಸಲಾಗಿದೆ.

*ಲಕ್ಷಣ ರಹಿತ ಮತ್ತು ಕಡಿಮೆ ಲಕ್ಷಣ ಹೊಂದಿರುವವರಿಗೆ ಸೌಲಭ್ಯವಿದ್ದರ ಮನೆಯಲ್ಲೇ ಆರೈಕೆ ಮಾಡಲಾಗುತ್ತಿದೆ. ಮನೆಗೆ ಭೇಟಿ ಹಾಗೂ ಟೆಲಿ ಮಾನಿಟಿರಿಂಗ್ ಮೂಲಕ ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ.

*43 ಖಾಸಗಿ ಮೆಡಿಕಲ್ ಕಾಲೇಜು, 17 ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಸೇವೆ ಕಲ್ಪಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಹಾಸಿಗೆಗಳನ್ನು ಕೊರೊನಾಗೆ ಮೀಸಲಿಡಲಾಗಿದೆ. ಕೇಂದ್ರೀಕೃತ ಹಾಸಿಗೆ ನಿರ್ವಹಣೆ ವ್ಯವಸ್ಥೆ ನಿರ್ಮಿಸಿದ್ದು, ಯಾವ ಆಸ್ಪತ್ರೆಯಲ್ಲಿ ಹಾಸಿಗೆ ಖಾಲಿ ಇದೆ ಎಂಬುದರ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುತ್ತದೆ.

*ಶಿಫಾರಸು ಮೇರೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗುವ ಕೊರೊನಾ ರೋಗಿಗಳ ಶುಲ್ಕವನ್ನು ರಾಜ್ಯ ಸರ್ಕಾರ ಪಾವತಿಸುತ್ತಿದೆ. ಪ್ಲಾಸ್ಮ ಬ್ಯಾಂಕ್ ಆರಂಭಿಸಲಾಗಿದೆ.

*ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ 10,100 ಹಾಸಿಗೆ ಸಾಮರ್ಥ್ಯದ ಕೋವಿಡ್ ಆರೈಕೆ ಕೇಂದ್ರ ಆರಂಭಿಸಲಾಗಿದೆ. ಬೇರೆ ಕೇಂದ್ರಗಳಲ್ಲಿ 1,04,000 ಹಾಸಿಗೆಗಳಿವೆ.

*ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ 5,500 ಆಕ್ಸಿಜನ್ ಸಹಿತ ಹಾಸಿಗೆಗಳಿದ್ದು, ಹೆಚ್ಚುವರಿಯಾಗಿ 1,600 ಆಕ್ಸಿಜನ್ ಹಾಸಿಗೆಗಳನ್ನು ನೀಡಲಾಗಿದೆ. ಆಗಸ್ಟ್ ಅಂತ್ಯಕ್ಕೆ ಇನ್ನೂ 5,000 ಆಕ್ಸಿಜನ್ ಹಾಸಿಗೆ ನೀಡಲಾಗುವುದು. ಸೆಪ್ಟೆಂಬರ್ ಅಂತ್ಯಕ್ಕೆ 20,000 ಕ್ಕೂ ಅಧಿಕ ಆಕ್ಸಿಜನ್ ಹಾಸಿಗೆಗಳು ಲಭ್ಯವಿರಲಿದೆ. ಪ್ರಮುಖ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಘಟಕ ಆರಂಭಿಸಲಾಗುತ್ತಿದೆ.

*ಕೋವಿಡ್ ರೋಗಿಗಳನ್ನು ಕರೆದೊಯ್ಯಲು ಆಂಬ್ಯುಲೆನ್ಸ್ ಸಂಖ್ಯೆಯನ್ನು 800 ರಿಂದ 2,000 ಕ್ಕೆ ಹೆಚ್ಚಿಸಲಾಗಿದೆ.

ಕಠಿಣ ಕ್ರಮ:

*ಮಾಸ್ಕ್ ಧರಿಸದಿರುವುದು ಸೇರಿದಂತೆ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಲಾಗಿದೆ. 2,05,029 ಪ್ರಕರಣ ದಾಖಲಿಸಿದ್ದು, 6.65 ಕೋಟಿ ರೂ. ದಂಡ ಸಂಗ್ರಹವಾಗಿದೆ.

*ಕ್ವಾರಂಟೈನ್ ನಿಯಮ ಉಲ್ಲಂಘಿಸಿದವರ ವಿರುದ್ಧ 5,821 ಎಫ್ ಐಆರ್ ದಾಖಲಾಗಿದೆ. ಕ್ವಾರಂಟೈನ್ ನಲ್ಲಿದ್ದ 5.7 ಲಕ್ಷ ಜನರಿಗೆ ಎಚ್ಚರಿಕೆ ನೀಡಲಾಗಿದೆ. 3,246 ಮಂದಿಯನ್ನು ಮನೆಯಿಂದ ಸಾಂಸ್ಥಿಕ ಕ್ವಾರಂಟೈನ್ ಗೆ ಕಳುಹಿಸಲಾಗಿದೆ.

*ಮರಣ ಪ್ರಮಾಣ ಕಡಿಮೆ ಮಾಡಲು ಕೈಗೊಂಡ ಕ್ರಮಗಳಿಂದ ಜುಲೈ ನಲ್ಲಿದ್ದ 2.1 ಮರಣ ಪ್ರಮಾಣವು ಆಗಸ್ಟ್ ನಲ್ಲಿ 1.8 ಕ್ಕೆ ಇಳಿಕೆಯಾಗಿದೆ.

*ಕೋವಿಡ್ ಕೇರ್ ಸೆಂಟರ್ ಗಳಲ್ಲಿ 1.14 ಲಕ್ಷ ಹಾಸಿಗೆ, 20,000 ಜನರಲ್ ಹಾಸಿಗೆ, 8,000 ಆಕ್ಸಿಜನ್ ಹಾಸಿಗೆ, 3,000 ಐಸಿಯು ಹಾಸಿಗೆ, 1,500 ವೆಂಟಿಲೇಟರ್ ಸಹಿತ ಹಾಸಿಗೆಯೊಂದಿಗೆ ಕೊರೊನಾ ಪಿಡುಗು ನಿಯಂತ್ರಣ ಮಾಡುತ್ತಿದ್ದೇವೆ.

*ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ 2,025 ವೆಂಟಿಲೇಟರ್ ನೀಡಿರುವುದಕ್ಕೆ ಧನ್ಯವಾದ ಎಂದು ಸರ್ಕಾರದ ಪರವಾಗಿ ಸುಧಾಕರ್ ತಿಳಿಸಿದರು .

ಕೋವಿಡ್-19 ಗೆ ಮೊದಲ ಲಸಿಕೆ ಕಂಡುಹಿಡಿದ ರಷ್ಯಾ: ಕೊರೊನಾ ಲಸಿಕೆ ನೋಂದಣಿ, ನಾಳೆಯಿಂದ ರಷ್ಯಾದಲ್ಲಿ ಲಸಿಕೆ ಲಭ್ಯ

ನವದೆಹಲಿ: ಇಡೀ ವಿಶ್ವವನ್ನೇ ಕಾಡುತ್ತಿರುವ ಕೋವಿಡ್-19 ಗೆ ರಷ್ಯಾ ಮೊದಲ ಲಸಿಕೆಯನ್ನು ನೋಂದಣಿ ಮಾಡಿಸಿದೆ.ನಾಳೆಯಿಂದ ರಷ್ಯಾದಲ್ಲಿ ಲಸಿಕೆ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕಡೆಗೂ ಕೊರೊನಾಗೆ ಮೊದಲ ಲಸಿಕೆಯನ್ನು ರಷ್ಯಾ ಕಂಡುಹಿಡಿದಿದ್ದು ಇಂದು ಲಸಿಕೆಯನ್ನು ನೋಂದಣಿ ಮಾಡಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಕಟಿಸಿದ್ದಾರೆ ಅಲ್ಲದೆ ಮೊದಲ ಲಸಿಕೆಯನ್ನು ಕೊರೊನಾ ಸೋಂಕಿಗೆ ಸಿಲುಕಿರುವ ತಮ್ಮ ಪುತ್ರಿಗೆ ಕೊಡಿಸುವ ಹೇಳಿಕೆ ನೀಡಿ ಲಸಿಕೆ ಮೇಲೆ ಭರವಸೆ ಮೂಡುವಂತೆ ಮಾಡಿದ್ದಾರೆ.

ಎಲ್ಲಾ ಹಂತರ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರವೇ ಲಸಿಕೆ ನೋಂದಣಿ ಮಾಡಿದ್ದು, ನಾಳೆಯಿಂದ ಸಾರ್ವಜನಿಕವಾಗಿ ಲಭ್ಯವಾಗಲಿದೆ ಅಲ್ಲದೆ ಉತ್ಪಾದನೆ ಮಾಡಿ ಬೇರೆ ದೇಶಗಳಿಗೆ ವಿತರಣೆಯನ್ನು ಮಾಡಲಿದೆ ಎನ್ನಲಾಗುತ್ತದೆ.

ಅಮೆರಿಕಾ,ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಕೊರೊನ ಲಸಿಕೆಗಾಗಿ ಸಂಶೋಧನೆ ನಡೆಸುತ್ತಿವೆ ಆದರೆ ರಷ್ಯಾ ಮಾತ್ರ ಯಶಸ್ವಿಯಾಗಿದೆ.ಇತರ ರಾಷ್ಟ್ರಗಳು ಸಂಶೋಧನೆ ಮುಂದುವರೆಸಿವೆ.

ಹಿಂದಿ ರಾಜಕಾರಣ ದಕ್ಷಿಣ ಭಾರತೀಯರ ಅವಕಾಶ ಕಸಿಯುತ್ತಿದೆ: ಎಚ್ಡಿಕೆ

ಬೆಂಗಳೂರು: ಕೇಂದ್ರ ಸರ್ಕಾರದ ಹಿಂದಿ ಭಾಷೆ ಹೇರಿಕೆ ಕುರಿತು ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಭಾಷೆ ಕಾರಣಕ್ಕೆ ಸಂಸದೆ ಕನಿಮೋಳಿಯವರನ್ನು ನೀವು ಭಾರತೀಯರೇ ಅಂತಾ ಪ್ರಶ್ನಿಸಿರೋದು ಇದೀಗ ಮತ್ತೊಮ್ಮೆ ಹಿಂದಿ ವ್ಯಾಮೋಹದ ವಿರುದ್ಧ ಧ್ವನಿ ಎತ್ತುವಂತೆ ಮಾಡಿದೆ. ಈ ಕುರಿತು ಟ್ವೀಟ್ ಮಾಡಿರೋ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಭಾಷೆ ಕಾರಣಕ್ಕೆ ಡಿಎಂಕೆ ಸಂಸದೆ ಕನಿಮೋಳಿ ಅವರನ್ನು ‘ನೀವು ಭಾರತೀಯರೇ’ ಎಂದು ಪ್ರಶ್ನಿಸಿದ ಘಟನೆ ನಡೆದಿದೆ. ಸೋದರಿ ಕನಿಮೋಳಿಗೆ ಆದ ಅಪಮಾನದ ವಿರುದ್ಧ ನನ್ನದೂ ಧ್ವನಿ ಇದೆ ಅಂತಾ ಬೆಂಬಲ ಸೂಚಿಸಿದ್ದಾರೆ.

ಇದೇ ಹೊತ್ತಲ್ಲೇ, ಹಿಂದಿ ವ್ಯಾಮೋಹ, ಹಿಂದಿ ರಾಜಕಾರಣ, ಹಿಂದಿ ಶ್ರೇಷ್ಠತೆ ವ್ಯಸನ ದಕ್ಷಿಣ ಭಾರತದ ನಾಯಕರ, ಜನರ ಅವಕಾಶಗಳನ್ನು ಕಸಿದ ವಿಚಾರ ಚರ್ಚಾರ್ಹ. ಹಿಂದಿ ರಾಜಕಾರಣವು ದಕ್ಷಿಣ ಭಾರತದ ಹಲವು ನಾಯಕರ ಪ್ರಧಾನಿಯಾಗುವ ಅವಕಾಶ ಕಸಿದಿದೆ. ಅದರಲ್ಲಿ ಎಚ್.ಡಿ.ದೇವೇಗೌಡ, ಕರುಣಾನಿಧಿ, ಕಾಮರಾಜರ ಹೆಸರುಗಳು ಪ್ರಧಾನ. ಈ ವ್ಯೂಹವನ್ನು ದೇವೇಗೌಡರು ಭೇದಿಸಿ ಅತ್ಯುನ್ನತ ಪಟ್ಟ ಅಲಂಕರಿಸಿದರಾದರೂ, ಭಾಷೆ ವಿಚಾರಕ್ಕೆ ಅವರನ್ನು ಮೂದಲಿಸಿದ, ಗೇಲಿ ಮಾಡಿದ, ಕನ್ನಡತನ ಪ್ರಶ್ನಿಸಿದ ಪ್ರಸಂಗಗಳು ಆಗಿ ಹೋಗಿವೆ. ಭಾರತದ ಪ್ರಧಾನ ಮಂತ್ರಿಯಾಗಿದ್ದ ದೇವೇಗೌಡರಿಂದ ಅಂದು ಕೆಂಪು ಕೋಟೆಯಲ್ಲಿ ಹಿಂದಿಯಲ್ಲೇ ಭಾಷಣ ಮಾಡಿಸುವಲ್ಲಿ ‘ಹಿಂದಿ ರಾಜಕಾರಣ’ ಯಶಸ್ವಿಯಾಗಿತ್ತು. ಬಿಹಾರ ಮತ್ತು ಉತ್ತರ ಪ್ರದೇಶದ ಬಹುದೊಡ್ಡ ರೈತ ಸಮುದಾಯದ ದೃಷ್ಟಿಯಿಂದ ಅಂದು ದೇವೇಗೌಡರು ಹಿಂದಿಯಲ್ಲೇ ಮಾತನಾಡಿದರು. ಅಷ್ಟರ ಮಟ್ಟಿಗೆ ಈ ದೇಶದಲ್ಲಿ ಹಿಂದಿ ರಾಜಕಾರಣ ಕೆಲಸ ಮಾಡುತ್ತದೆ.

ಇನ್ನೂ ಇಂಥದ್ದೇ ಅನುಭವ ನನಗೂ ಆಗಿವೆ. ನಾನೂ 2 ಬಾರಿ ಸಂಸದನಾಗಿದ್ದವನು. ಸಂಸತ್ನಲ್ಲಿ ಕನ್ನಡದಲ್ಲಿ ಮಾಡಲಾಗುವ ಭಾಷಣಗಳ ಬಗ್ಗೆ ಆಳುವ ವರ್ಗ ದಿವ್ಯ ನಿರ್ಲಕ್ಷ್ಯ ತೋರುತ್ತದೆ. ಅಲ್ಲದೆ, ಹಿಂದಿ ವ್ಯಾಮೋಹಿ ರಾಜಕಾರಣಿಗಳ ವರಸೆಗಳನ್ನು ಹತ್ತಿರದಿಂದ ನಾನು ಕಂಡಿದ್ದೇನೆ. ಹಿಂದಿಯೇತರ ರಾಜ್ಯಗಳ ರಾಜಕಾರಣಿಗಳೆಂದರೆ ಬಹುತೇಕರಿಗೆ ಅಲ್ಲಿ ಅಪತ್ಯವೇ ಸರಿ. ರಾಜಕಾರಣ ಹೊರತುಪಡಿಸಿ ಔದ್ಯೋಗಿಕ ಕ್ಷೇತ್ರಕ್ಕೆ ಬಂದರೆ, ಕೇಂದ್ರ ಸರ್ಕಾರದ ಕೆಲ ಹುದ್ದೆಗಳ ಪರೀಕ್ಷೆಗಳನ್ನು ಇಂಗ್ಲಿಷ್-ಹಿಂದಿಯಲ್ಲೇ ಬರೆಯಬೇಕಿದೆ. ಅದರಲ್ಲಿ #ibpsmosa ಕೂಡ ಒಂದು. ಈ ಬಾರಿಯ ಅಧಿಸೂಚನೆಯಲ್ಲಿ ಕನ್ನಡಕ್ಕೆ ಸ್ಥಾನವೇ ಇಲ್ಲ. ಹೀಗಾಗಿ ಕನ್ನಡದ ಉದ್ಯೋಗಾಕಾಂಕ್ಷಿಗಳು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಇದು ನಿಲ್ಲಬೇಕು.

ಅಧಿಕೃತ ಭಾಷೆಗಳಲ್ಲಿ ಹಿಂದಿಯೂ ಒಂದು ಎಂದು ಕೇಂದ್ರ ಸರ್ಕಾರ ಬಾಯಿ ಮಾತಿಗಷ್ಟೇ ಹೇಳುತ್ತದೆ. ಆದರೆ, ಹಿಂದಿ ಅಭಿವೃದ್ಧಿಗಾಗಿ ದೇಶ, ವಿದೇಶದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕೇಂದ್ರವು ಕೋಟ್ಯಂತರ ಮೊತ್ತ ವಿನಿಯೋಗಿಸುತ್ತದೆ. ಇದು ರಹಸ್ಯ ಕಾರ್ಯಸೂಚಿಗಳಲ್ಲೊಂದು. ಪ್ರಾಮಾಣಿಕ ಭಾಷಾಭಿಮಾನದಿಂದ ಮಾತ್ರ ಇವುಗಳನ್ನು ಮೆಟ್ಟಿಸಲು ಸಾಧ್ಯಎಂದು ಅಭಿಪ್ರಾಯ ಪಟ್ಟಿದ್ದಾರೆ.

ಅತಿವೃಷ್ಟಿ ಸಮೀಕ್ಷೆಗೆ ಬರುವಂತೆ ಪ್ರಧಾನಿ ಮೋದಿಗೆ ಆಗ್ರಹಿಸಿದ ಸಿದ್ದು

ಬೆಂಗಳೂರು: ಅತಿವೃಷ್ಟಿ ಕುರಿತು ಕೇಂದ್ರ ಸರ್ಕಾರ ರಾಜ್ಯದಿಂದ ಮಾಹಿತಿ ಪಡೆದಿದೆ. ಆದ್ರೆ, ಕಳೆದ ಬಾರಿಯ ಪರಿಹಾರವನ್ನೆ ಇನ್ನೂ ನೀಡಿಲ್ಲ ಈ ವರ್ಷದ ಪರಿಹಾರ ಯಾವಾಗ ನೀಡ್ತಾರೆ ಅನ್ನೋ ಅನುಮಾನಗಳು ವ್ಯಕ್ತವಾಗಿವೆ. ಈ ಕುರಿತು ಟ್ವೀಟ್ ಮಾಡಿರೋ ವಿಪಕ್ಷ ನಾಯಕ ಸಿದ್ದರಾಮಯ್ಯ, ಅತಿವೃಷ್ಟಿ ಬಗ್ಗೆ ಪ್ರಧಾನಿ ಮೋದಿ ರಾಜ್ಯ ಸಚಿವರ ಸಭೆ ನಡೆಸುತ್ತಿರುವುದು ಸ್ವಾಗತಾರ್ಹ. ಕಳೆದ ಬಾರಿ ರಾಜ್ಯ ಅತಿವೃಷ್ಟಿಯಿಂದ ತತ್ತರಿಸುತ್ತಿರುವಾಗ ಕರ್ನಾಟಕದ ಕಡೆ ತಿರುಗಿ ನೋಡದೆ ನಿರ್ಲಕ್ಷಿಸಿದ್ದ ಪ್ರಧಾನಿ ಈ ಬಾರಿಯಾದರೂ ಎಚ್ಚೆತ್ತುಕೊಂಡಿದ್ದಾರೆ ಅಂತಾ ಕಾಲೆಳೆದಿದ್ದಾರೆ.

ಕಳೆದ ವರ್ಷದ ಅತಿವೃಷ್ಟಿಯ ಅಂದಾಜು ನಷ್ಟ 1,00,000 ಕೋಟಿ ರೂಪಾಯಿ, ರಾಜ್ಯ ಸರ್ಕಾರದ ವರದಿ ಪ್ರಕಾರ ಆದ ನಷ್ಟ 50,000 ಕೋಟಿ ರೂಪಾಯಿ, ಪರಿಹಾರ ಕೇಳಿದ್ದು 35,000 ಕೋಟಿ ರೂಪಾಯಿ. ಕೇಂದ್ರ ಸರ್ಕಾರ ಕೊಟ್ಟಿದ್ದು ಕೇವಲ1860 ಕೋಟಿ ರೂಪಾಯಿ ಮಾತ್ರ. ರಾಜ್ಯದ ಸಚಿವರು ಹಳೆಯ ಬಾಕಿಯನ್ನೂ ಕೇಳುವ ಧೈರ್ಯ ಮಾಡಲಿ. ಕಳೆದ ವರ್ಷ ಸಿಎಂ ಬಿಎಸ್ವೈ ಅತಿವೃಷ್ಟಿಯ ವರದಿ ಕಳಿಸಿರುವುದು ಆಗಸ್ಟ್ ವರೆಗಿನ ಹಾನಿ ಬಗ್ಗೆ ಮಾತ್ರ. ಸೆಪ್ಟೆಂಬರ್-ಅಕ್ಟೋಬರ್ ತಿಂಗಳ ಅತಿವೃಷ್ಟಿ ವರದಿ ಕಳಿಸದೆ ಸರ್ಕಾರ ನೊಂದ ಜನತೆಗೆ ಮೋಸ ಮಾಡಿದೆ. ಈ ಬಾರಿ ಪರಿಹಾರವನ್ನು ಕೇಳುವಾಗ ಇದನ್ನು ಪ್ರಧಾನಿ ಅವರ ಗಮನಕ್ಕೆ ತರಬೇಕು ಅಂತಾ ಒತ್ತಾಯಿಸಿದ್ದಾರೆ.

ಇನ್ನೂ ರಾಜ್ಯದ ಅತಿವೃಷ್ಟಿ ಪರಿಸ್ಥಿತಿಯ ಸಮೀಕ್ಷೆಗೆ ಈ ಬಾರಿಯಾದರೂ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಬೇಕು ಮತ್ತು ಪರಿಸ್ಥಿತಿಯ ಅಧ್ಯಯನಕ್ಕೆ ಕೇಂದ್ರ ತಂಡವನ್ನು ತಕ್ಷಣ ಕಳಿಸಬೇಕು ಅಂತಾ ಬೇಡಿಕೆ ಇಟ್ಟಿದ್ದಾರೆ. ಈ ವರೆಗಿನ ಅನುಭವದ ಪ್ರಕಾರ ರಾಜ್ಯದ ಹಿತಾಸಕ್ತಿ ರಕ್ಷಣೆಯ ಪರ ಗಟ್ಟಿಯಾಗಿ ನಿಂತು ಪಿಎಂ ಮೋದಿ ಅವರ ಜೊತೆ ಮಾತನಾಡಿ ಹೆಚ್ಚು ಪರಿಹಾರ ಪಡೆಯುವ ಶಕ್ತಿ ಸಿಎಂ ಬಿಎಸ್ವೈ ಇಲ್ಲವೇ ಸಚಿವರಿಗಿಲ್ಲ.ಇದಕ್ಕಾಗಿ, ಹೆಚ್ಚಿನ ಪರಿಹಾರ ಕೋರಲು ಸರ್ವಪಕ್ಷಗಳ ನಿಯೋಗವನ್ನು ದೆಹಲಿಗೆ ಕೊಂಡೊಯ್ಯಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಧಾನಿ ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್: 4 ಸಾವಿರ ಕೋಟಿ ಪ್ರಾಥಮಿಕ ಪರಿಹಾರಕ್ಕೆ ಬೇಡಿಕೆ ಇಟ್ಟ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯದಲ್ಲಿ ಅತಿವೃಷ್ಟಿಯಿಂದ ಉಂಟಾದ ನಷ್ಟಗಳ ಕುರಿತು ರಾಜ್ಯ ಸರ್ಕಾರ ಪ್ರಧಾನಿ ಮೋದಿಗೆ ಮಾಹಿತಿ ನೀಡಿದೆ. ಪ್ರಾಥಮಿಕ ಹಂತವಾಗಿ 4 ಸಾವಿರ ಕೋಟಿ ಪರಿಹಾರ ನೀಡುವಂತೆ ಮನವಿ ಮಾಡಿದೆ. ಅಲ್ಲದೆ, ಕೇಂದ್ರ ಸರ್ಕಾರದ ಮುಂದೆ ರಾಜ್ಯ ಸರ್ಕಾರ ಐದು ಬೇಡಿಕೆಗಳನ್ನು ಇಟ್ಟಿದೆ.

ರಾಜ್ಯದಲ್ಲಿ ಅತಿವೃಷ್ಟಿಯಿಂದ ಜನ ತತ್ತರಿಸಿ ಹೋಗಿದ್ದಾರೆ. ಕಳೆದ ವರ್ಷದ ಪ್ರವಾಹದಿಂದ ಚೇತರಿಸಿಕೊಳ್ಳದ ಜನರು ಈ ವರ್ಷವೂ ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ. ಈಗಾಗಲೇ ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಗುಡ್ಡ ಕುಸಿತ, ಕಡಲ ಕೊರೆತ, ಬೆಳೆ ನಾಶದಿಂದ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಕೊರೋನಾ ಮಧ್ಯದಲ್ಲಿ ಸರ್ಕಾರ ಹೇಗೆ ಈ ಪರಿಸ್ಥಿತಿ ನಿಭಾಯಿಸುತ್ತದೆ ಅನ್ನೋ ಭಯದಲ್ಲಿ ಜನರಿದ್ದಾರೆ.

ನೆರೆ ಹಾವಳಿ ಸಂಬಂಧ ಇಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರ್ಕಾರದ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿತು. ಸಿಎಂ ಬಿಎಸ್ವೈ ಅನುಪಸ್ಥಿತಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಯಿ, ಕಂದಾಯ ಸಚಿವ ಆರ್. ಅಶೋಕ್ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿ ರಾಜ್ಯದ ಪರಿಸ್ಥಿತಿ ಕುರಿತು ಮಾಹಿತಿ ನೀಡಿದ್ರು. 56 ತಾಲ್ಲೂಕುಗಳು ಮಳೆಯಿಂದ ಹಾನಿಗೊಳಗಾಗಿವೆ. 885 ಗ್ರಾಮಗಳು ಪ್ರವಾಹ ಪೀಡಿತವಾಗಿವೆ. 3500 ಕಿ.ಮೀ.ರಸ್ತೆ ಹಾಳಾಗಿದೆ. 3 ಸಾವಿರ ಮನೆಗಳು, 250 ಸೇತುವೆಗಳು ಮಳೆಯಿಂದ ಹಾನಿಗೊಳಗಾಗಿವೆ. 85 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು ರಾಜ್ಯದಲ್ಲಿ 4 ಸಾವಿರ ಕೋಟಿ ನಷ್ಟವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯದ ಪರಿಸ್ಥಿತಿ ಅವಲೋಕನಕ್ಕೆ ಶೀಘ್ರವೇ ಕೇಂದ್ರದ ತಂಡವನ್ನು ರಾಜ್ಯಕ್ಕೆ ಕಳುಹಿಸಿಕೊಡಬೇಕು. ಪಶ್ಚಿಮ ಘಟ್ಟ ಮತ್ತು ಕೃಷ್ಣ ಜಲಾನಯನ ಪ್ರದೇಶಗಳಿಗೆ 2 ಅಧ್ಯಯನ ತಂಡಗಳನ್ನು ಕಳುಹಿಸಿಕೊಡಬೇಕು. ಕೂಡಲೇ ನೆರೆ ಪರಿಸ್ಥಿತಿ ಎದುರಿಸಲು ಮುಂಗಡ ಪರಿಹಾರ ನೀಡುವುದು, 4 ಎನ್ ಡಿಆರ್ ಎಫ್ ತಂಡಗಳನ್ನು ಕಳುಹಿಸಿಕೊಡುವುದು ಸೇರಿದಂತೆ 5 ಬೇಡಿಕೆಗಳನ್ನು ರಾಜ್ಯ ಸರ್ಕಾರ ಕೇಂದ್ರದ ಮುಂದಿಟ್ಟಿದೆ. ಇನ್ನೂ ಕಳೆದ ವರ್ಷದ ನಷ್ಟಕ್ಕೆ ಪರಿಹಾರ ಕೊಡಿ ಅನ್ನೋ ಮನವಿಯನ್ನು ಕೇಂದ್ರದ ಮುಂದಿಟ್ಟಿದೆ.

ರಾಜ್ಯ ಸರ್ಕಾರ ಮಳೆ ಹಾನಿಯ ಮಾಹಿತಿಯನ್ನೇನೋ ಕೇಂದ್ರಕ್ಕೆ ನೀಡಿದೆ. ಆದ್ರೆ, ಕಳೆದ ಬಾರಿಯ ಪರಿಹಾರವನ್ನೆ ಕೇಂದ್ರ ಸರ್ಕಾರ ಇನ್ನೂ ನೀಡಿಲ್ಲ ಇನ್ನೂ ಈ ವರ್ಷದಪರಿಹಾರ ನೀಡೋದು ಯಾವಾಗ ಅನ್ನೋ ಪ್ರಶ್ನೆ ಉಧ್ಬವವಾಗಿದೆ.