ವಿಧಾನಸೌಧದಿಂದ ತಳಹಂತದವರೆಗೂ ಬೆಟ್ಟಿಂಗ್, ಮಟ್ಕಾ ಕಬಂಧಬಾಹುಗಳು ಚಾಚಿವೆ: ಹೆಚ್ಡಿಕೆ ನೇರ ಆರೋಪ

ಸಿಂಧಗಿ: ವಿಜಯಪುರ ಜಿಲ್ಲೆಯೂ ಸೇರಿ ರಾಜ್ಯದ ಅನೇಕ ಕಡೆ ಮಟ್ಕಾ, ಬೆಟ್ಟಿಂಗ್‌ ದಂಧೆಗಳು ಅವ್ಯಾಹತವಾಗಿ ನಡೆಯುತ್ತಿದ್ದು, ಅನೇಕ ಬಡ ಕುಟುಂಬಗಳು ಬೀದಿ ಪಾಲಾಗಿವೆ. ಆದರೂ ರಾಜ್ಯದ ಬಿಜೆಪಿ ಸರಕಾರ ಚಕಾರ ಎತ್ತದೇ ಮೌನವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.‌ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ಸಿಂಧಗಿ ಕ್ಷೇತ್ರದ ಉಪ ಚುಣಾವಣೆ ನಿಮಿತ್ತ ಪ್ರಚಾರ ಕೈಗೊಂಡಿರುವ ಅವರು ಕ್ಷೇತ್ರದ ಯಂಕಂಚಿ ಗ್ರಾಮದಲ್ಲಿ ಮಾಧ್ಯಮಗಳ ಜತೆ ಮಾತನಾಡಿದರು.

ಈ ದಂಧೆಯ ಕಬಂಧಬಾಹುಗಳು ವಿಧಾನಸೌಧದಿಂದ ತಳಹಂತದವರೆಗೂ ವ್ಯಾಪಕವಾಗಿ ಚಾಚಿಕೊಂಡಿದ್ದು, ಸರಕಾರ ಕೈಕಟ್ಟಿ ಕೂತಿದೆ. ಬಡಕುಟುಂಬಗಳು ಇಂಥ ದಂಧೆಗಳಿಗೆ ಸಿಕ್ಕಿ ಬಲಿಯಾಗುತ್ತಿವೆ. ಆ ಕುಟುಂಬಗಳ ಮಕ್ಕಳು ಹೆಚ್ಚು ಬಡ್ಡಿಗೆ ಸಾಲ ಮಾಡಿಕೊಂಡು ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ವಿಜಯಪುರ ಜಿಲ್ಲೆಯಲ್ಲಿ ಈ ದಂಧೆ ಮಿತಿಮೀರಿ ನಡೆಯುತ್ತಿದೆ. ಹಣ ಕೊಟ್ಟು ಜಿಲ್ಲೆಗೆ ಪೋಸ್ಟಿಂಗ್‌ ಮಾಡಿಸಿಕೊಂಡು ಬಂದಿರುವ ಅಧಿಕಾರಿಗಳಿಗೆ ʼಮಂತ್ಲಿʼ ತಪ್ಪದೇ ಹೋಗುತ್ತಿದೆ. ದೊಡ್ಡದೊಂದು ಗ್ಯಾಂಗ್‌ ಜಿಲ್ಲೆಯಲ್ಲಿ ಈ ದಂಧೆಗಳನ್ನು ವ್ಯಾಪಕ ಮಟ್ಟದಲ್ಲಿ ಆಪರೇಟ್‌ ಮಾಡುತ್ತಿದ್ದು, ಜನರೇ ಬೀದಿಬೀದಿಗಳಲ್ಲಿ ನಿಂತು ಮಾತನಾಡುತ್ತಾ ಈ ಪೀಡೆಯನ್ನು ಹತ್ತಿಕ್ಕದ ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

2006ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಎಲ್ಲ ಲಾಟರಿಗಳನ್ನು ನಿಷೇಧ ಮಾಡಿದ್ದೆ. ಇಂಥ ದಂಧೆಗಳಿಗೆ ಕಠಿಣವಾಗಿ ಕಡಿವಾಣ ಹಾಕಿದ್ದೆ. ಆದರೆ, ಈಗ ಅವೆಲ್ಲ ಬೇರೆ ಬೆರೆ ರೂಪಗಳಲ್ಲಿ ಅನಧಿಕೃತವಾಗಿ ಮತ್ತೆ ಕಾಣಿಸಿಕೊಂಡಿದ್ದು, ಪೊಲೀಸ್‌ ಇಲಾಖೆ ಕುಮ್ಮಕ್ಕು ನೀಡುತ್ತಿದೆ. ದೊಡ್ಡ ದೊಡ್ಡ ಹಂತದಲ್ಲಿ ಇದರಲ್ಲಿ ಶಾಮೀಲಾಗಿದ್ದಾರೆಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಸಮಾಜದ ಆರೋಗ್ಯವನ್ನು ಹಾಳು ಮಾಡುತ್ತಿರುವ, ಯುವಕರ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿರುವ ಈ ದಂಧೆಗಳು ಸ್ವೇಚ್ಛಾಚಾರದಿಂದ ನಡೆಯುತ್ತಿವೆ. ಶ್ರಮಜೀವಿಗಳ ಹಣ ಹಾಳಾಗುತ್ತಿದೆ. ಸರಕಾರ ಅವುಗಳನ್ನು ಹತ್ತಿಕ್ಕುವ ಬದಲು ಸುಮ್ಮನಿದೆ ಎಂದು ಅವರು ಟೀಕಿಸಿದರು.

ಬಿಜೆಪಿಯವರೆಂದೂ ಕಾಮನ್‌ಮ್ಯಾನ್‌ಗಳಲ್ಲ:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದೂ ಕಾಮನ್‌ಮ್ಯಾನ್‌ ಆಗಲು ಸಾಧ್ಯವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.‌ಡಿ.ಕುಮಾರಸ್ವಾಮಿ ಅವರು ಹೇಳಿದರು.

ಮುಖ್ಯಮಂತ್ರಿಗಳು ಸಂಚಾರ ಮಾಡುವ ರಸ್ತೆಗಳಲ್ಲಿ ಹಂಪ್ಸ್‌ʼಗಳನ್ನು ತೆಗೆಯಲಾಗಿದೆ, ರಾತ್ರಿ ಹೊತ್ತು ಅವರಿಗೆ ಎಸ್ಕಾರ್ಟ್‌ ಕೊಡಲಾಗುತ್ತಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು; ಈ ಬಗ್ಗೆ ನನಗೂ ಮಾಹಿತಿ ಬಂದಿದೆ ಎಂದರು.

ಬಿಜೆಪಿ ಅವರು ಹಿಂದೆ ಐದು ವರ್ಷ ಆಡಳಿತ ನಡೆಸಿದ್ದನ್ನು ನೋಡಿದ್ದೇವೆ. ನನ್ನ ನೇತೃತ್ವದ ಸಮ್ಮಿಶ್ರ ಸರಕಾರವನ್ನು ಪತನ ಮಾಡಿ ಸರಕಾರ ಮಾಡಿ ಈಗ ಆಡಳಿತ ನಡೆಸುತ್ತಿರುವುದನ್ನು ನೋಡಿದ್ದೇವೆ. ಅವರೆಂದು ಜನಸಾಮಾನ್ಯರ ಪರ ಅಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ತೈಲ ಬೆಲೆಗಳನ್ನು, ಅಗತ್ಯ ವಸ್ತುಗಳ ಬೆಲೆಗಳನ್ನು ಏರಲು ಬಿಟ್ಟು ಜನಸಾಮಾನ್ಯರ ಜೀವನವನ್ನು ನರಕ ಮಾಡಿರುವ ಇವರು ಕಾಮನ್‌ ಮ್ಯಾನ್‌ʼಗಳಾ ಎಂದು ಹೆಚ್‌ಡಿಕೆ ಅವರು ಕಿಡಿ ಕಾರಿದರು.

ಆರ್ಥಿಕ ತೊಂದರೆ ಇದೆ ಎನ್ನುವ ನೆಪವೊಡ್ಡಿ ಸರಕಾರ ನೀರಾವರಿ ಇಲಾಖೆಯ ಎಲ್ಲ ಕಾಮಗಾರಿಗಳನ್ನು ಸ್ಥಗಿತ ಮಾಡಿರುವ ಮಾಹಿತಿಯೂ ಬಂದಿದೆ. ಈ ಬಗ್ಗೆ ಪತ್ರಿಕೆಯಲ್ಲಿ ವರದಿ ಬಂದಿದೆ. ಇನ್ನೂ 6000 ಕೋಟಿ ರೂ.ಗಳಷ್ಟು ಹಣವನ್ನೂ ಬಿಡುಗಡೆ ಮಾಡಿಲ್ಲ ಅನ್ನುವ ಮಾಹಿತಿ ಇದೆ. ಇವರಿಗೆ ಭ್ರಷ್ಟಾಚಾರ ಮಾಡಲು ಹಣವಿದೆ, ಯೋಜನೆಗಳಿಗೆ ಕೊಡಲು ಇಲ್ಲ ಎಂದರೆ ಹೇಗೆ ಎಂದು ಅವರು ಪ್ರಶ್ನಿಸಿದರು.

ಸರ್ಟಿಫಿಕೇಟ್‌ ಕೊಡೋಕೆ ಸಿದ್ದರಾಮಯ್ಯ ಯಾರು?

ಜೆಡಿಎಸ್‌ ಸೆಕ್ಯೂಲರ್‌ ಪಕ್ಷ ಹೌದೋ ಅಲ್ಲವೋ ಎಂಬ ಬಗ್ಗೆ ಸರ್ಟಿಫಿಕೇಟ್‌ ಕೊಡಲು ಸಿದ್ದರಾಮಯ್ಯ ಯಾರು ಎಂದು ಮಾಜಿ ಮುಖ್ಯಮಂತ್ರಿಗಳು ಖಾರವಾಗಿ ಪ್ರಶ್ನಿಸಿದರು.

ಜೆಡಿಎಸ್‌ ಸೆಕ್ಯೂಲರ್‌ ಅಲ್ಲ ಎಂದು ಸಿದ್ದರಾಮಯ್ಯ ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು; ನಮ್ಮದು ಎಲ್ಲರನ್ನೂ ಒಳಗೊಂಡ, ಎಲ್ಲರನ್ನೂ ಪ್ರತಿನಿಧಿಸುವ ಪಕ್ಷ. ಸಿದ್ದರಾಮಯ್ಯ ಅವರಿಂದ ನಾವು ಹಿತೋಪದೇಶ ಪಡೆಯುವ ಅಗತ್ಯವಿಲ್ಲ. ಸಿದ್ದರಾಮಯ್ಯ ಬಂದಿದ್ದು ಎಲ್ಲಿಂದ? ಇದೇ ಪಕ್ಷದಿಂದ. ಇವತ್ತು ಒಂಭತ್ತು ಜನ ಮೈನಾರಿಟಿ ನಾಯಕರಾಗಿ ಹೊರಹೊಮ್ಮಿದ್ದರೆ ಅದು ಪಕ್ಷ ಮತ್ತು ದೇವೇಗೌಡರ ಕೊಡುಗೆ ಎಂದು ಕುಮಾರಸ್ವಾಮಿ ಅವರು ತಿರುಗೇಟು ನೀಡಿದರು.

220 ಶತಕೋಟಿ ಡಾಲರ್ ವಹಿವಾಟು ಉದ್ದೇಶ,ಕರ್ನಾಟಕ ಮೊದಲ ಸ್ಥಾನ ಪಡೆಯುವ ಗುರಿ,ಮಿಕಂಡಕ್ಟರ್ ವಲಯಕ್ಕೆ ಉಜ್ವಲ ಭವಿಷ್ಯ: ಅಶ್ವತ್ಥನಾರಾಯಣ

ಬೆಂಗಳೂರು: 2025ರ ಹೊತ್ತಿಗೆ ದೇಶದಲ್ಲಿ 220 ಶತಕೋಟಿ ಡಾಲರ್ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆಯಲಿರುವ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿ-ಕಂಡಕ್ಟರ್ ಕ್ಷೇತ್ರದಲ್ಲಿ ಕರ್ನಾಟಕವನ್ನು ದೇಶದಲ್ಲೇ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯಲಾಗುವುದು ಎಂದು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ವರ್ಚುಯಲ್ ರೂಪದಲ್ಲಿ ನಡೆದ 16ನೇ ವರ್ಷದ ಅಖಿಲ ಭಾರತ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ಸ್ ಒಕ್ಕೂಟದ (ಐಇಎಸ್ಎ) ಅಧಿವೇಶನವನ್ನು ಉದ್ದೇಶಿಸಿ ಗುರುವಾರ ಮಾತನಾಡಿದ ಅವರು, ನ.17ರಿಂದ 21ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ `ಬೆಂಗಳೂರು ಟೆಕ್ ಸಮ್ಮಿಟ್’ನಲ್ಲಿ ಕೂಡ ಈ ವಲಯದ ಬಗ್ಗೆ ಆದ್ಯತೆಯ ಮೇರೆಗೆ ಚರ್ಚಿಸಲಾಗುವುದು ಎಂದರು.

ರಾಜ್ಯದಲ್ಲಿ ವಿದ್ಯುನ್ಮಾನ ಉದ್ಯಮದ ಬೆಳವಣಿಗೆಗೆ ಪೂರಕವಾದ ನೀತಿಗಳು ಚಾಲನೆ ಪಡೆದುಕೊಂಡಿದ್ದು, ಹುಬ್ಬಳ್ಳಿಯಲ್ಲಿ ಪರಿಪೋಷಣಾ ಕೇಂದ್ರವನ್ನು (ಇನ್ಕ್ಯುಬೇಷನ್ ಸೆಂಟರ್) ಸ್ಥಾಪಿಸಲಾಗಿದೆ. ಐಇಎಸ್ಎ ಮತ್ತು ರಾಜ್ಯದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯಗಳು ಇದಕ್ಕೆ ಕೈಜೋಡಿಸಿವೆ ಎಂದು ಅವರು ತಿಳಿಸಿದರು.

ದೇಶದ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ (ಇಎಸ್ ಡಿಎಂ) ರಫ್ತಿನಲ್ಲಿ ಕರ್ನಾಟಕದ ಪಾಲು ಶೇ.64ರಷ್ಟಿದ್ದು, ಜಗತ್ತಿನ 85ಕ್ಕೂ ಹೆಚ್ಚು ಚಿಪ್ ವಿನ್ಯಾಸ ಕಂಪನಿಗಳು ಬೆಂಗಳೂರಿನಲ್ಲೇ ಇವೆ. ಈ ವಲಯವು ಮುಂಬರುವ ದಿನಗಳಲ್ಲಿ 1 ಕೋಟಿ ಉದ್ಯೋಗ ಸೃಷ್ಟಿಸಲಿದೆ. ಇದರಿಂದಾಗಿ ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತದ ಕನಸು ಕೂಡ ನನಸಾಗಲಿದೆ ಎಂದು ಸಚಿವರು ವಿವರಿಸಿದರು.

ರಾಜ್ಯ ಸರಕಾರವು ಹೋದ ವರ್ಷವೇ ಇಎಸ್ ಡಿಎಂ ವಲಯವನ್ನು ಉತ್ತೇಜಿಸಲು ನೀತಿಯನ್ನು ಜಾರಿಗೆ ತಂದಿದೆ. ಈ ನಿಟ್ಟಿನಲ್ಲಿ ಕಂಪನಿಗಳಿಗೆ ಬಂಡವಾಳ ಹೂಡಿಕೆ ಮೇಲೆ ಸಬ್ಸಿಡಿ, ವಿದ್ಯುತ್ ದರದಲ್ಲಿ ರಿಯಾಯಿತಿ ಮತ್ತು ವಾರ್ಷಿಕ ವಹಿವಾಟಿನ ಮೇಲೆ ಪ್ರೋತ್ಸಾಹಧನ ಮುಂತಾದ ಸೌಲಭ್ಯಗಳನ್ನು ಕೊಡಲಾಗುತ್ತಿದೆ ಎಂದು ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಅಡಿಯಲ್ಲಿ ಕೂಡ ಡಿಜಿಟಲ್ ಉದ್ಯಮಗಳನ್ನು ಉತ್ತೇಜಿಸಲಾಗುತ್ತಿದ್ದು, ಇದಕ್ಕೆ ಬೆಂಗಳೂರಿನ ಐಐಐಟಿ ಸಹಯೋಗವಿದೆ. ಇದರಂತೆ, ಮುಂದಿನ 9 ತಿಂಗಳಲ್ಲಿ 180 ಡಿಸೈನ್ ಎಂಜಿನಿಯರುಗಳನ್ನು ಸಿದ್ಧಗೊಳಿಸಲಾಗುವುದು. `ಬಿಯಾಡ್ ಬೆಂಗಳೂರು’ ಉಪಕ್ರಮದಡಿ ಹುಬ್ಬಳ್ಳಿ-ಧಾರವಾಡದಂತಹ ಎರಡನೇ ಸ್ತರದ ನಗರಗಳಲ್ಲಿ ಸೆಮಿಕಂಡಕ್ಟರ್ ಸ್ಟಾರ್ಟಪ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಗೊಳ್ಳುವಂತೆ ಮಾಡುವುದು ಈಗಿರುವ ಗುರಿಯಾಗಿದೆ ಎಂದು ಅವರು ನುಡಿದರು.

ಸಮಾವೇಶದಲ್ಲಿ ಕೇಂದ್ರ ಕೈಗಾರಿಕಾ ಮತ್ತು ವಾಣಿಜ್ಯ ಖಾತೆಯ ಸಹಾಯಕ ಸಚಿವ ಸೋಮ್ ಪ್ರಕಾಶ್, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್, ಆಂಧ್ರಪ್ರದೇಶದ ಕೈಗಾರಿಕಾ ಸಚಿವ ಗೌತಮ್ ರೆಡ್ಡಿ ಮತ್ತು ಡಿಕ್ಸಾನ್ ಕಂಪನಿಯ ಉಪಾಧ್ಯಕ್ಷ ಅತುಲ್ ಲಾಲ್ ಭಾಗವಹಿಸಿದ್ದರು.

ಶಿಕ್ಷಣದಲ್ಲಿ ಸಮಗ್ರ ಸುಧಾರಣೆ:

ಉದ್ಯಮಗಳ ಅಗತ್ಯ ಗಮನಿಸಿ ಶಿಕ್ಷಣದಲ್ಲಿ ಸಮಗ್ರ ಸುಧಾರಣೆ ತರಲಾಗುತ್ತಿದೆ. ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ತಂದಿರುವ ಮೊದಲ ರಾಜ್ಯ ನಮ್ಮದು. ಇದಕ್ಕೆ 600 ಕೋಟಿ ರೂ. ಮೀಸಲಿಡಲಾಗಿದೆ. ಗ್ರಾಮೀಣ ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಬೆಳೆಸಲು ದೀನದಯಾಳ್ ಉಪಾಧ್ಯಾಯ ಪ್ರೋತ್ಸಾಹ ಯೋಜನೆಯಡಿ ತಲಾ 40 ಸಾವಿರ ರೂ.ಗಳಿಂದ 2 ಲಕ್ಷ ರೂ.ವರೆಗೆ ಸಹಾಯಧನ ನೀಡಲಾಗುತ್ತಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಜೈಲಿಗೆ ಕಳುಹಿಸುತ್ತೇನೆಂದು ಎಲ್ಲೂ ಹೇಳಿಲ್ಲ, ಅಧಿಕಾರ ದುರ್ಬಳಕೆ ಬಗ್ಗೆ ಹೇಳಿದ್ದೇನೆ: ಸಚಿವ ಡಾ.ಕೆ.ಸುಧಾಕರ್

ಹಾನಗಲ್, ಅಕ್ಟೋಬರ್ 21, ಗುರುವಾರ:ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾನು ಏನು ಹೇಳಿದ್ದೇನೆ ಎಂದು ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಹಕಾರ ಕ್ಷೇತ್ರದಲ್ಲಿ ‘ಸರ್ವರಿಗೂ ಸಮಬಾಳು’ ಎಂಬ ಪರಿಕಲ್ಪನೆಯಿದೆ. ಆದರೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೋಮುಲ್ ಹಾಗೂ ಡಿಸಿಸಿ ಬ್ಯಾಂಕ್ ಅನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಡಿಸಿಸಿ ಬ್ಯಾಂಕ್ ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕರೇ ಆದ ಕೆ.ಎಚ್.ಮುನಿಯಪ್ಪ ಹೇಳಿದ್ದರು. ಆಗಿನ ಸಿಎಂ ಸಿದ್ದರಾಮಯ್ಯನವರಿಗೆ ಅವರೇ ಈ ಬಗ್ಗೆ ಪತ್ರ ನೀಡಿದ್ದರು. ಆಗ ಮುಖ್ಯಮಂತ್ರಿಗಳಾಗಿದ್ದವರು ತನಿಖೆಗೆ ಆದೇಶ ನೀಡಬಹುದಿತ್ತು ಎಂದರು.

ಸಹಕಾರ ಸಚಿವ ಎಸ್.ಟಿ.ಸೋಮೇಶೇಖರ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗ ತನಿಖೆಗೆ ಆದೇಶಿಸಿದ್ದಾರೆ. ಆದ್ದರಿಂದ ತಪ್ಪಿತಸ್ಥರು ಶಿಕ್ಷೆ ಅನುಭವಿಸುತ್ತಾರೆ ಎಂದು ಹೇಳಿದ್ದೇನೆ. ಆದರೆ ರಮೇಶ್ ಕುಮಾರ್ ಅವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಆದರೆ ಅವರೇ ರಿಂಗ್ ಮಾಸ್ಟರ್ ಆಗಿದ್ದು, ರಾಜಕೀಯ ಲಾಭಕ್ಕಾಗಿ ಎರಡೂ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಅನೇಕ ಹಿರಿಯರಿಗೆ ಮುಖ್ಯಮಂತ್ರಿಗಳು ಚುನಾವಣೆಯ ಪ್ರಮುಖ ಜವಾಬ್ದಾರಿ ನೀಡಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿ ಶೇ.2 ರಷ್ಟು ಬಿಜೆಪಿಗೆ ಮತಬ್ಯಾಂಕ್ ಇದ್ದು, ಅದನ್ನು ಶೇ.50 ಕ್ಕೆ ಏರಿಸಲಾಗಿದೆ. ಎಂಟಿಬಿ ನಾಗರಾಜ್ ಕೂಡ ಅನುಭವಿಗಳಾಗಿದ್ದಾರೆ. ಸಚಿವ ಸಂಪುಟದ ಸದಸ್ಯರಿಗೆ ಚುನಾವಣೆಯ ಹೊಣೆ ನೀಡಲಾಗಿದೆ. ಜನರ ಮನಸ್ಸು ಗೆಲ್ಲುವ ಕೆಲಸ, ಹಾನಗಲ್ ನ ಜನರಿಗೆ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಅನೈತಿಕ ಮಾರ್ಗ, ಹಣದ ಹೊಳೆ ಹರಿಸುವ ಆಲೋಚನೆ ನಮಗಿಲ್ಲ. ಕಾಂಗ್ರೆಸ್ ಆಡಳಿತವಿದ್ದಾಗ ಆ ರೀತಿ ಮಾಡಿದ್ದು, ಅವರ ಅನುಭವವನ್ನು ಅವರೇ ಹಂಚಿಕೊಳ್ಳುತ್ತಿದ್ದಾರೆ ಎಂದರು.

ಹಾನಗಲ್ ನ ಜನರು ಪ್ರತಿ ನಾಯಕರ ಮಾತು ಗಮನಿಸುತ್ತಿದ್ದಾರೆ. ವೈಯಕ್ತಿಕ ನಿಂದನೆ, ಏಕವಚನ ಪ್ರಯೋಗವನ್ನು ನೋಡುತ್ತಿದ್ದಾರೆ. ಪ್ರಧಾನಿಗಳನ್ನು ಕೂಡ ಏಕವಚನದಲ್ಲಿ ಕರೆಯಲಾಗುತ್ತಿದೆ. ಗ್ರಾಮೀಣ ಜನರು ಸ್ವಾಭಿಮಾನಿಗಳಾಗಿದ್ದು, ಅವರು ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸಲಿದ್ದಾರೆ. ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಮಾಜಿ ಶಾಸಕರ ಬಳಗಕ್ಕೆ ಸೇರಿದವರಾಗಿದ್ದಾರೆ. ಆದ್ದರಿಂದ ಭಾವನಾತ್ಮಕ ಸಂಬಂಧವಾಗಿದೆ. ಬಿಜೆಪಿ ಸುಲಭವಾಗಿ ಗೆಲ್ಲಲಿದೆ ಎಂದರು.

ವಿಧಾನಸಭೆ ಅಧಿವೇಶನದಲ್ಲಿ ವಿರೋಧ ಪಕ್ಷದವರು ಕೋವಿಡ್ ಚರ್ಚೆಗೆ ಉತ್ತರ ಕೇಳದೆ ಪಲಾಯನ ಮಾಡಿದರು. ಅವರೆಲ್ಲ ಸುಳ್ಳು ಆಪಾದನೆ ಮಾಡುತ್ತಿರುವುದನ್ನು ನಾನು ಕಡತಕ್ಕೆ ಕಳುಹಿಸಿಕೊಟ್ಟಿದ್ದೇನೆ. ಸರ್ಕಾರ ಯಾವುದನ್ನೂ ಮುಚ್ಚಿಡುತ್ತಿಲ್ಲ. ಅತ್ಯಂತ ಪಾರದರ್ಶಕ, ಪ್ರಾಮಾಣಿಕತೆಯಿಂದ ಕೋವಿಡ್ ನಿರ್ವಹಣೆಯನ್ನು ಸರ್ಕಾರ ಮಾಡಿದೆ. ಈ ವಿಚಾರದಲ್ಲಿ ಕಾಂಗ್ರೆಸ್ಸಿಗರು ಕೆಸರೆರೆಚಾಟ ಮಾಡಬಾರದು ಎಂದರು.

ದಾಖಲೆಯ ಲಸಿಕೆ ಅಭಿಯಾನ:

6.20 ಕೋಟಿ ಲಸಿಕೆಯನ್ನು ರಾಜ್ಯದಲ್ಲಿ ನೀಡಲಾಗಿದೆ. ಇಂದು ಬೆಳಗ್ಗೆ ಭಾರತದಲ್ಲಿ 100 ಕೋಟಿ ಲಸಿಕೆ ನೀಡಲಾಗಿದೆ. ಇದು ಇಡೀ ಜಗತ್ತಿನಲ್ಲೇ ಪ್ರಥಮ ದಾಖಲೆಯಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಲಸಿಕೆ ನೀಡಿರುವುದರಿಂದ ಸೋಂಕು ಹರಡುವಿಕೆ ಕಡಿಮೆಯಾಗಲಿದೆ. ಎರಡನೇ ಡೋಸ್ ಕೂಡ ಶೀಘ್ರ ನೀಡಲಾಗುವುದು. ಲಸಿಕೆ ಅಭಿಯಾನಕ್ಕೆ ಸಹಕರಿಸಿದ ಎಲ್ಲ ಆರೋಗ್ಯ ಸಿಬ್ಬಂದಿ, ನಾಗರಿಕರು ಹಾಗೂ ಆವಿಷ್ಕಾರ ಮಾಡಿದ ವಿಜ್ಞಾನಿಗಳಿಗೆ ಧನ್ಯವಾದಗಳು ಎಂದು ಹೇಳಿದರು.

Video-ಅಲ್ಪಸಂಖ್ಯಾತರ ಬಗ್ಗೆ ಬಿಜೆಪಿ ದ್ವಂದ್ವ: ಹೆಚ್‌ಡಿಕೆ ತರಾಟೆ

ವಿಜಯಪುರ: ಅಲ್ಪಸಂಖ್ಯಾತರ ಬಗ್ಗೆ ಬಿಜೆಪಿ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.

ಸಿಂಧಗಿಗೆ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಇಂದಿಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಯಡಿಯೂರಪ್ಪನವರು ಅಲ್ಪಸಂಖ್ಯಾತರರನ್ನು ಮತಕ್ಕಾಗಿ ಓಲೈಸುವ ಕೆಲಸ ಮಾಡುತ್ತಿದ್ದಾರಲ್ಲ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು.

ಒಂದೆಡೆ ಮುಸ್ಲೀಮರನ್ನು ದೇಶದಿಂದಲೇ ಓಡಿಸಬೇಕು ಎಂದು ಎನ್ನುವ ಬಿಜೆಪಿ, ಇನ್ನೊಂದೆಡೆ ಅವರಿಗೆ ನಾವೂ ಸಹಾಯ ಮಾಡಿದ್ದೇವೆ. ನಮಗೆ ವೋಟು ಕೊಡಬೇಕು ಎಂದು ಕೇಳುತ್ತಿದೆ. ದ್ವಿಮುಖ ನೀತಿ ಎಂದರೆ ಇದುವೇ ಎಂದು ಅವರು ಕಿಡಿಕಾರಿದರು.

ಮುಸ್ಲೀಮರು ನಮ್ಮ ಪರ ಇರಬೇಕು ಎನ್ನುವ ಬಿಜೆಪಿ, ಅವರನ್ನು ಸಮಾನವಾಗಿ ನೋಡಬೇಕಲ್ಲವೇ? ಹಾಗೆ ಮಾಡದೇ ಮತ ಮಾತ್ರ ಹಾಕಬೇಕು ಎಂದು ಕೇಳಿದರೆ ಹೇಗೆ? ಎಂದು ಹೆಚ್‌ಡಿಕೆ ಖಾರವಾಗಿ ಪ್ರಶ್ನಿಸಿದರು.

ಬಿಜೆಪಿಯು ಉಪ ಚುನಾವಣೆಯಲ್ಲಿ ಹಿಂದುತ್ವದ ಆಧಾರದ ಮೇಲೆ ಮತಯಾಚನೆ ಮಾಡುತ್ತಿದೆಯಲ್ಲ ಎನ್ನುವ ಮತ್ತೊಂದು ಪ್ರಶ್ನೆಗೆ ಕುಮಾರಸ್ವಾಮಿ ಅವರು ಉತ್ತರಿಸಿದ್ದು ಹೀಗೆ;

“ಬಿಜೆಪಿಯವರು ಮಾತ್ರ ಹಿಂದುಗಳಾ? ನಾವೇನು ಹೊರಗಿನಿಂದ ಬಂದಿದ್ದೇವೆಯಾ? ನಮಗೂ ಹಿಂದುತ್ವವಿದೆ, ನಂಬಿಕೆ-ಶ್ರದ್ಧೆಗಳಿವೆ. ಆದರೆ ನಾವು ಎಲ್ಲರನ್ನೂ ಒಳಗೊಂಡು ರಾಜಕೀಯ ಮಾಡಿದರೆ, ಬಿಜೆಪಿಯವರು ಕೇವಲ ಹಿಂದುತ್ವದ ಆಧಾರದ ಮೇಲೆ ಮಾತ್ರ ರಾಜಕಾರಣ ಮಾಡುತ್ತಿದ್ದಾರೆ” ಎಂದರು.

ಹೊರಗೆ ನಾವೆಲ್ಲ ಒಂದು, ನಾವೆಲ್ಲ ಹಿಂದು ಎಂದು ಹೇಳುತ್ತಲೇ ಒಳಗೆ ಮಾತ್ರ ಗರ್ಭಗುಡಿ ಸಂಸ್ಕೃತಿಯನ್ನು ಜೀವಂತ ಇಟ್ಟುಕೊಂಡಿದೆ ಬಿಜೆಪಿ. ಕೆಲವನ್ನು ಬಿಟ್ಟರೆ ದೀನ ದಲಿತರು, ಶೋಷಿತರಿಗೆ ಅಲ್ಲಿಗೆ ಪ್ರವೇಶಾ ಇದೆಯಾ? ಎಂದು ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದರು.

ಸಿಂಧಗಿಯನ್ನು ನಿರ್ಲಕ್ಷಿಸಿದ ರಾಷ್ಟ್ರೀಯ ಪಕ್ಷಗಳು:

ಕಳೆದ ಐವತ್ತು ವರ್ಷಗಳಿಂದ ಸಿಂಧಗಿ ಕ್ಷೇತ್ರವನ್ನು ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಸಮಾನವಾಗಿ ಕಡೆಗಣಿಸಿವೆ. ಇಲ್ಲಿನ ಪರಿಸ್ಥಿತಿ ನೋಡಿದರೆ ಎಲ್ಲ ರಾಜಕೀಯ ಪಕ್ಷಗಳೂ ತಲೆತಗ್ಗಿಸುವಂತೆ ಇದೆ. ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಿ ಆಗಿದ್ದಾಗ ಕೊಟ್ಟ ನೀರಾವರಿ ಯೋಜನೆಗಳು ಹಾಗೂ ನಾನು ಮುಖ್ಯಮಂತ್ರಿ ಆಗಿದ್ದಾಗ ಕೈಗೊಂಡ ಕಾರ್ಯಕ್ರಮಗಳು ಬಿಟ್ಟರೆ ಬೇರಾವ ಪ್ರಗತಿಯೂ ಇಲ್ಲಿ ಆಗಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಬೇಸರ ವ್ಯಕ್ತಪಡಿಸಿದರು.

14 ತಿಂಗಳು ನಾನು ಮುಖ್ಯಮಂತ್ರಿ ಆಗಿದ್ದಾಗ 1200 ಕೋಟಿ ರೂ. ಅನುದಾನವನ್ನು ಸಿಂಧಗಿ ಕ್ಷೇತ್ರಕ್ಕೆ ನೀಡಿದ್ದೇನೆ. ದೇವೇಗೌಡರು ಇಲ್ಲದಿದ್ದರೆ ನಾವಿಲ್ಲಿ ಭತ್ತ, ಕಬ್ಬು ಬೆಳೆಯಲು ಸಾಧ್ಯವೇ ಆಗುತ್ತಿರಲಿಲ್ಲ ಎಂದು ಇಲ್ಲಿನ ಜನ ಈಗಲೂ ಮಾತನಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್‌ ಉತ್ತರ ಕೊಟ್ಟಿಲ್ಲ:

‌ಕಾಂಗ್ರೆಸ್‌ ಮತ್ತು ಸಿದ್ದರಾಮಯ್ಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು; ಅಲ್ಪಸಂಖ್ಯಾತರ ವಿಷಯದ ಬಗ್ಗೆ ನಾನು ಕೇಳಿದ ಐದು ಪ್ರಶ್ನೆಗಳಿಗೆ ಇನ್ನೂ ಸಿದ್ದರಾಮಯ್ಯ ಅವರಾಗಲಿ ಅಥವಾ ಕಾಂಗ್ರೆಸ್‌ ಆಗಲಿ ಉತ್ತರ ನೀಡಿಲ್ಲ. ಅದರ ಹೊರತಾಗಿ ಅನಗತ್ಯ ವಿಷಯಗಳ ಬಗ್ಗೆ ಆ ಪಕ್ಷದ ನಾಯಕರು ಮಾತನಾಡುತ್ತಿದ್ದಾರೆಂದು ಕುಮಾರಸ್ವಾಮಿ ಅವರು ಹೇಳಿದರು.

ವೈಯಕ್ತಿಕ ವಿಚಾರಗಳ ಬಗ್ಗೆ ಆಸಕ್ತಿ ಇಲ್ಲ:

ಯಾರ ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡುವ ಆಸಕ್ತಿ ನನಗಿಲ್ಲ. ನನ್ನ ಬಗ್ಗೆ ಕಾಮೆಂಟ್‌ ಮಾಡೋರನ್ನು ನಾನು ಕೇರ್‌ ಮಾಡಲ್ಲ. ಜನರಿಗೆ ಮಾಡುವ ಕೆಲಸ ಬೇಕಾದಷ್ಟಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಜನರು ಅನೇಕ ಸಮಸ್ಯೆಗಳಿಂದ ಒದ್ದಾಡುತ್ತಿದ್ದಾರೆ. ಅವರಿಗೆ ಪರಿಹಾರ ಕೊಡುವುದು ಎಲ್ಲರ ಆದ್ಯತೆ ಆಗಬೇಕು ಎಂದರಲ್ಲದೆ; ನಾನು ಆರ್‌ ಎಸ್‌ ಎಸ್‌ ಸೇರಿಂದತೆ ಯಾವುದೇ ಸಂಘ ಸಂಸ್ಥೆ ಬಗ್ಗೆ ವೈಯಕ್ತಿಕ ನೆಲೆಗಟ್ಟಿನಲ್ಲಿ ಮಾತನಾಡಿಲ್ಲ. ನನ್ನ ಅನುಭವಕ್ಕೆ ಬಂದ, ನನಗೆ ತಿಳಿದ ವಿಷಯಗಳನ್ನಷ್ಟೇ ಹೇಳಿದ್ದೇನೆ ಎಂದು ಅವರು ತಿಳಿಸಿದರು.

ಇಂದು 14 ಹಳ್ಳಿಗಳಿಗೆ ಹೆಚ್‌ಡಿಕೆ

ಈವರೆಗೆ ಸಿಂಧಗಿ ವಿಧಾನಸಭೆ ಕ್ಷೇತ್ರದಲ್ಲಿ 30 ಹಳ್ಳಿಗಳಿಗೆ ಭೇಟಿ ನೀಡಿ ಜನರನ್ನು ಭೇಟಿಯಾಗಿದ್ದೇನೆ. ಇಂದು 14 ಹಳ್ಳಿಗಳಿಗೆ ಭೇಟಿ ನೀಡಲಿದ್ದೇನೆ. ನಾಳೆಯೂ ಇಲ್ಲಿಯೇ ಪ್ರಚಾರ ನಡೆಸಿ ನಾಡಿದ್ದು (ಶನಿವಾರ) ಹಾನಗಲ್‌ʼಗೆ ತೆರಳುತ್ತೇನೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ಸಿಂಧಗಿಯಲ್ಲಿ ನಾನು ಗೆದೇ ಗೆಲ್ಲುತ್ತೇವೆ. ಪ್ರತಿ ಹಳ್ಳಿಯಲ್ಲೂ ಪಕ್ಷದ ಪರವಾದ ವಾತಾವರಣ ಇದೆ. ಹಾನಗಲ್‌ ಕ್ಷೇತ್ರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲವಾದ ಪೈಪೋಟಿ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ಮಹಿಳೆಯರ ಆತ್ಮರಕ್ಷಣೆಗಾಗಿ ವಿಶೇಷ ತರಬೇತಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ ,‌ಅಕ್ಟೋಬರ್ 21: ಮಹಿಳೆಯರ ಆತ್ಮರಕ್ಷಣೆಗಾಗಿ ವಿಶೇಷ ತರಬೇತಿ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಇಂದು ಹುಬ್ಬಳ್ಳಿ-ಧಾರವಾಡ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಕವಾಯತು ಮೈದಾನದ‌ ಬಳಿ‌ ಆಯೋಜಿಸಿರುವ “ಪೋಲಿಸ್ ಸಂಸ್ಮರಣಾ ದಿನಾಚರಣೆ” ಕಾರ್ಯಕ್ರಮದ‌ ನಂತರ* ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಮಹಿಳೆಯರ ಆತ್ಮರಕ್ಷಣೆಗಾಗಿ ತರಬೇತಿ ನೀಡುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,ಕೆಎಸ್ ಆರ್ ಪಿ ಪಡೆ ಹಾಗೂ ಪೋಲಿಸ್ ತರಬೇತಿ ಶಾಲೆಯಲ್ಲಿ ಕಾರ್ಯನಿರ್ವಹಿಸಿದ ನಿವೃತ್ತ ಅಧಿಕಾರಿಗಳ ಸೇವೆ ಹಾಗೂ ಅನುಭವವನ್ನು ಬಳಸಿಕೊಂಡು ಈ ತರಬೇತಿಯನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ, ನಾಗರಿಕರ ಸುರಕ್ಷತೆಗಾಗಿ ಪೊಲೀಸರು ಮಾಡುವ ಸೇವೆ ತ್ಯಾಗವನ್ನು ಸ್ಮರಣೆ ಮಾಡಬೇಕು. ನಮ್ಮ ನಾಗರಿಕ ಕರ್ತವ್ಯವನ್ನು ನೆನಪು ಮಾಡಿಕೊಳ್ಳುವ ದಿನವಿದು. ಪೊಲೀಸರು ಜನಸ್ನೇಹಿ ಯಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕೇರಳ ಪ್ರವಾಹ:
ಕೇರಳ ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಆಗಿರುವ ಸಂಕಷ್ಟಕ್ಕೆ ರಾಜ್ಯದ ಜನತೆ ಹಾಗೂ ಕರ್ನಾಟಕ ಸರ್ಕಾರ ದಿಂದ ಎಲ್ಲಾ ರೀತಿಯ ಸಹಾಯ ಸಹಕಾರವನ್ನು ಒದಗಿಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಉತ್ತರಾಖಂಡದಲ್ಲಿ ಕನ್ನಡಿಗರ ರಕ್ಷಣೆಗೆ ಅಧಿಕಾರಿಗಳ ತಂಡ:
ಉತ್ತರಾಖಂಡದಲ್ಲಿಯೂ ಉಂಟಾಗಿರುವ ಭೂಕುಸಿತ ಸಂಭವಿಸುತ್ತಿದೆ. ಅಲ್ಲಿ ಸಿಲುಕಿಕೊಂಡಿರುವ ಕನ್ನಡಿಗರಿಗೆ ನೆರವು ಒದಗಿಸಲು ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

Video-ಯಡಿಯೂರಪ್ಪ ಅವರನ್ನು ಯಾವ ಸಮುದ್ರಕ್ಕೆ ಎಸೆದಿದ್ದೀರೀ..?: ಬಿಜೆಪಿ ಮುಖಂಡರಿಗೆ ಡಿ.ಕೆ. ಶಿವಕುಮಾರ್ ಪ್ರಶ್ನೆ

ಹಾನಗಲ್:‘ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಯಡಿಯೂರಪ್ಪ ಅವರನ್ನು ಈಗ ಯಾವ ನದಿ, ಯಾವ ಡ್ಯಾಂ, ಯಾವ ಸಮುದ್ರಕ್ಕೆ ಎಸೆದಿದ್ದೀರಿ’ ಎಂದು ಬಿಜೆಪಿ ಮುಖಂಡರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದ ಮತದಾರರು ಕಟ್ಟಿ ಕೆಆರೆಸ್ ಡ್ಯಾಂಗೆ ಎಸೆದಿದ್ದಾರೆ ಎಂದು ಅಭ್ಯರ್ಥಿ ಶಿವರಾಜ್ ಸಜ್ಜನ ಸೇರಿದಂತೆ ಬಿಜೆಪಿ ಮುಖಂಡರು ಟೀಕೆ ಮಾಡಿದ್ದ ಹಾನಗಲ್ ವಿಧಾನಸಭೆ ಕ್ಷೇತ್ರದಲ್ಲೇ ಅವರಿಗೆ ಡಿ.ಕೆ. ಶಿವಕುಮಾರ್ ಅವರು ಸೋಮವಾರ ತಿರುಗೇಟು ನೀಡಿದ್ದಾರೆ.

‘ದಕ್ಷಿಣ ಭಾರತದಲ್ಲಿ ಬಿಜೆಪಿ ಸರಕಾರದ ಹೆಬ್ಬಾಗಿಲು ತೆರೆದಿದ್ದೇ ಯಡಿಯೂರಪ್ಪನವರು ಎಂದು ಹೇಳುತ್ತಿದ್ದ ಬಿಜೆಪಿಯವರು ಅವರನ್ನು ಈಗೇಕೆ ಹೀನಾಯವಾಗಿ ನಡೆಸಿಕೊಂಡರು? ಅವರನ್ಯಾಕೆ ಮೂಲೆಗುಂಪು ಮಾಡಿದರು? ಅವರು ಕಣ್ಣೀರು ಹಾಕಿಕೊಂಡು ಮನೆಗೆ ಹೋಗುವಂತೆ ಮಾಡಿದರು’ ಎಂದು ಕೆಲವರಕೊಪ್ಪದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಪ್ರಶ್ನಿಸಿದರು.

‘ಯಡಿಯೂರಪ್ಪ ಅವರ ಕಣ್ಣೀರು ಬಿಜೆಪಿಯವರನ್ನು ಸುಮ್ಮನೆ ಬಿಡುವುದಿಲ್ಲ. ಈ ಸರಕಾರ ಅವರ ಕಣ್ಣೀರಿನಲ್ಲೇ ಕೊಚ್ಚಿಕೊಂಡು ಹೋಗುತ್ತದೆ.‘ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರಕಾರಗಳು ನಾಡಿಗೆ ಒಂದು ಶಾಪ. ಕರ್ನಾಟಕದವರೇ ಕೇಂದ್ರದಲ್ಲಿ ಕಲ್ಲಿದ್ದಲು ಮಂತ್ರಿ. ಆದರೆ ಇಲ್ಲಿ ಕಲ್ಲಿದ್ದಲ ಕೊರತೆ ಇದೆ. ಕರ್ನಾಟಕದವರೇ ಕೇಂದ್ರದಲ್ಲಿ ಗೊಬ್ಬರದ ಮಂತ್ರಿ. ಆದರೆ ಕರ್ನಾಟಕದಲ್ಲಿ ಗೊಬ್ಬರದ ಕೊರತೆ ಇದೆ. ಜತೆಗೆ ಬೆಲೆಯೂ ಹೆಚ್ಚಳವಾಗಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಹೋದ ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವರು. ಆದರೆ ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಪಾಲಾಗಲಿ, ಆರ್ಥಿಕ ಅನುದಾನವಾಗಲಿ, ನೆರೆ ಪರಿಹಾರವಾಗಲಿ ಬರಲಿಲ್ಲ. ಇದು ನಮ್ಮ ರಾಜ್ಯದ ಹಣೆಬರಹ ಎಂದ್ರು.

ಸಿಎಂ ಬಸವರಾಜ ಬೊಮ್ಮಾಯಿ ಅವರು ವೀರಾವೇಶದಿಂದ ಮಾತಾಡಿದ್ದಾರೆ. ಕ್ಷೇತ್ರದಲ್ಲಾಗಿರೋ ಅಭಿವೃದ್ಧಿ ಕೆಲಸ ನೋಡಿ ಎಂದು ಸವಾಲು ಹಾಕಿದ್ದಾರೆ. ನೋಡೋಣ ಎಂದು ಈಗ ನಿಮ್ಮೂರಿಗೆ ಕಾರಿಳಿದು ನಡೆದುಕೊಂಡೇ ಬಂದೆ. ರೋಡ್ ಕಣಿವೆ ಇದ್ದಂತಿದೆ. ಅದಕ್ಕೆ ನೀವೇ ಸಾಕ್ಷಿ. ಇದೇನಾ ಅಭಿವೃದ್ಧಿ ಕೆಲಸ ಅಂದ್ರೆ..?
ಪ್ರಧಾನಿ ಮೋದಿ ಅವರು 20 ಲಕ್ಷ ಕೋಟಿ, ಹಿಂದಿನ ಸಿಎಂ ಯಡಿಯೂರಪ್ಪನವರು 1800 ಕೋಟಿ ರುಪಾಯಿ ಕೊರೋನಾ ಪ್ಯಾಕೇಜ್ ಅನೌನ್ಸ್ ಮಾಡಿದ್ರು. ನಿಮ್ಮ ಅಕೌಂಟ್ ಗೇನಾದರೂ ಪರಿಹಾರದ ಹಣ ಬಂತಾ? ಸತ್ತವರ ಕುಟುಂಬಗಳಿಗೇನಾದರೂ ಪರಿಹಾರ ಬಂತಾ? ರೈತರಿಗೆ ಬೆಳೆ ಹಾನಿ ಹಣ ಬಂತಾ? ಹೆಕ್ಟೇರಿಗೆ 10 ಸಾವಿರ ರು ಪರಿಹಾರ ಘೋಷಣೆ ಮಾಡಿದ್ರು. ಅಂದರೆ ಕುಂಟೆಗೆ 100 ರುಪಾಯಿ. ಇದಕ್ಕೆ ಯಾರಾದರೂ ಆನ್ ಲೈನ್ ನಲ್ಲಿ ಅರ್ಜಿ ಹಾಕ್ತಾರಾ? ಎಂಜಿನಿಯರಿಂಗ್ ಪದವೀಧರ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಬೇಕು ಎಂದ್ರು.

ದೇವರು ಸಿ.ಎಂ. ಉದಾಸಿ ಅವರನ್ನು ಬೇಗನೆ ಕರೆಸಿಕೊಂಡಿದ್ದಾನೆ. ನಾನು ಅವರನ್ನು ತಕ್ಕಮಟ್ಟಿಗೆ ಬಲ್ಲೆ. ಅವರನ್ನು ಆಗಾಗ್ಗೆ ಭೇಟಿ ಮಾಡುತ್ತಿದ್ದೆ. ಬಹಳ ಸಜ್ಜನ ವ್ಯಕ್ತಿತ್ವ ಅವರದು. ಅವರ ಮೇಲೆ ದೂಷಣೆ ಮಾಡಲು ನಾನಿಲ್ಲಿಗೆ ಬಂದಿಲ್ಲ. ಅವರ ವಿರುದ್ಧ ನಮ್ಮ ಶ್ರೀನಿವಾಸ ಮಾನೆ ಅವರು ಸೋತಿದ್ದರೂ ಸಹ ಆಗಾಗ್ಗೆ ಅವರ ಆರೋಗ್ಯ ವಿಚಾರಿಸುತ್ತಿದ್ದೆ. ಅವರೂ ಪ್ರೀತಿ, ವಿಶ್ವಾಸದಿಂದ ಕಾಣುತ್ತಿದ್ದರು. ನಮ್ಮ ಉದಾಸಿ ಅವರ ಮನಸಿಗೆ ಇದ್ದ ನೋವೇನೆಂದರೆ, ಅಷ್ಟು ಹಿರಿಯ ನಾಯಕರಾದರೂ ತಮ್ಮನ್ನು ಯಡಿಯೂರಪ್ಪ ಅವರ ಸರ್ಕಾರದಲ್ಲಿ ಮಂತ್ರಿ ಮಾಡಲಿಲ್ಲವಲ್ಲಾ ಅಂತಾ. ಅವರನ್ನೇಕೆ ಮಂತ್ರಿ ಮಾಡಲಿಲ್ಲ ಎಂದು ಬೊಮ್ಮಾಯಿ ಅವರನ್ನು ಕೇಳಲು ಬಯಸುತ್ತೇನೆ. ಇದೇ ಕೊರಗಿನಲ್ಲಿ ಉದಾಸಿ ಅವರು ತಮ್ಮ ಕೊನೆಯುಸಿರೆಳೆದಿದ್ದಾರೆ ಎಂಬುದು ನನ್ನ ಭಾವನೆ. ವ್ಯಕ್ತಿ ಸತ್ತಮೇಲೆ ಅವರನ್ನು ಹೊಗಳುವುದಲ್ಲ, ಆತ ಬದುಕಿದ್ದಾಗ ನೀವು ಅವರನ್ನು ಯಾವ ರೀತಿ ಗೌರವಿಸಿದಿರಿ ಎಂಬುದು ಮುಖ್ಯ ಎಂದ್ರು.

ನಿನ್ನೆ ಮುಖ್ಯಮಂತ್ರಿ ಸೇರಿದಂತೆ ಹಲವು ನಾಯಕರು ಬಂದು ಉದ್ದುದ್ದ ಭಾಷಣ ಮಾಡಿ ಹೋಗಿದ್ದಾರೆ. ಬೊಮ್ಮಾಯಿ ಅವರು ತಮ್ಮ ಕುರ್ಚಿ ಗಟ್ಟಿ ಮಾಡಿಕೊಳ್ಳಲು ಏನೇನೋ ಮಾತನಾಡುತ್ತಿದ್ದಾರೆ. ಅವುಗಳಿಗೆ ಬೇರೆ ಸಮಯದಲ್ಲಿ ಉತ್ತರ ನೀಡುತ್ತೇನೆ.ಕೋವಿಡ್ ಸಮಯದಲ್ಲಿ ರೈತರಿಗೆ ಬೆಂಬಲ ಬೆಲೆ ಕೊಟ್ಟರಾ? ಬೀದಿ ವ್ಯಾಪಾರಿಗಳಿಗೆ ಪರಿಹಾರ ಕೊಟ್ಟರಾ? ಚಿಕಿತ್ಸೆಯಿಂದ ಆಕ್ಸಿಜನ್ ವರೆಗೂ ಎಲ್ಲದಕ್ಕೂ ಕ್ಯೂ ನಿಲ್ಲುವಂತೆ ಮಾಡಿದರು. ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 36 ಜನ ಇಲಿಗಳಂತೆ ವಿಲ, ವಿಲ ಒದ್ದಾಡಿ ಪ್ರಾಣ ಬಿಟ್ಟರು. ಒಬ್ಬ ಶಾಸಕ, ಮಂತ್ರಿ ಅವರನ್ನು ಭೇಟಿ ಮಾಡಿ ಸಹಾಯ ಮಾಡಲಿಲ್ಲ. ನಾನು, ಸಿದ್ದರಾಮಯ್ಯ ಹಾಗೂ ಧೃವನಾರಾಯಣ್ ಅವರು ಹೋಗಿ ನಮ್ಮ ಕೈಲಾದಷ್ಟು ಸಹಾಯ ಮಾಡಿದ್ದೇವೆ. ರಾಜ್ಯ ಸರಕಾರದವರು ಕೇಂದ್ರಕ್ಕೆ ಆಕ್ಸಿಜನ್ ಸಮಸ್ಯೆಯಿಂದ ಒಬ್ಬರೂ ಸತ್ತಿಲ್ಲ ಎಂದು ವರದಿ ಕೊಟ್ಟಿದ್ದಾರೆ. ನಾವು ನಿಮ್ಮ ಪರವಾಗಿ ಮನೆ, ಮನೆಗೂ ಹೋಗಿ ಅವರಿಗೆ 1 ಲಕ್ಷ ರು. ನೆರವು ನೀಡಿ, ಸಾಂತ್ವನ ಹೇಳಿದ್ದೇವೆ. ರಾಜ್ಯದುದ್ದಗಲಕ್ಕೂ ನಮ್ಮ ಪಕ್ಷದ ಕಾರ್ಯಕರ್ತರು ಸತ್ತವರ ಮನೆಗೆ ಹೋಗಿ ಸಾಂತ್ವನ ಹೇಳಿದ್ದಾರೆ ಎಂದ್ರು.

ಬಿಜೆಪಿಯವರು ಕೇವಲ ಸುಳ್ಳು ಹೇಳಿ ಮೋಸ ಮಾಡುತ್ತಿದ್ದಾರೆ. ಸರ್ಕಾರ ಮಾತು ಕೊಟ್ಟರೆ ಅದನ್ನು ಉಳಿಸಿಕೊಳ್ಳಬೇಕು. ಅವರು ರೈತ, ಕಾರ್ಮಿಕ, ಕೋವಿಡ್ ಸೋಂಕಿತರು, ಸತ್ತವರ ಕುಟುಂಬಕ್ಕೆ ಸಹಾಯ ಮಾಡಲಿಲ್ಲ. ಆದರೂ ಅದ್ಯಾವ ಮುಖ ಇಟ್ಟುಕೊಂಡು ಬಂದು ಮತ ಕೇಳುತ್ತಿದ್ದಾರೋ ಗೊತ್ತಿಲ್ಲ. ಶ್ರೀನಿವಾಸ ಮಾನೆ ಅವರು ಆಪದ್ಭಾಂದವ ಎಂಬ ಕಾರ್ಯಕ್ರಮ ಹಮ್ಮಿಕೊಂಡು, ವೃತ್ತಿ ಉಳಿಸಿಕೊಂಡು ಬಂದವರಿಗೆ, ಉದ್ಯೋಗ ಕಳೆದುಕೊಂಡವರ ಮನೆಗೆ ಹೋಗಿ ತಲಾ 2 ಸಾವಿರ ರೂಪಾಯಿ ಚೆಕ್ ಕೊಟ್ಟು ಬಂದಿದ್ದಾರೆ. ಮಾನೆ ಅವರು ಕೊಟ್ಟಿದ್ದು ನಿಜಾನೋ, ಸುಳ್ಳೋ?ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನೇ ಮಾಲೀಕ. ಅವನ ತೀರ್ಮಾನವೇ ಮುಖ್ಯ. ಯಾವುದೇ ಸರ್ಕಾರವಾಗಲಿ ಅವನ ಕಷ್ಟಕ್ಕೆ ಸ್ಪಂದಿಸಬೇಕು.
ರಾಜ್ಯದಿಂದ 25 ಸಂಸದರು ಆಯ್ಕೆಯಾಗಿದ್ದಾರೆ. ಅವರು ರಾಜ್ಯದ ಜನರ ಹಿತಕಾಯಲು ಕೃಷ್ಣ, ಮಹದಾಯಿ, ಮೇಕೆದಾಟು ಯೋಜನೆ ವಿಚಾರವಾಗಿ ಏನಾದರೂ ಮನವಿ ಪತ್ರ ನೀಡಿದ್ದಾರಾ? ಹಾಗಾದ್ರೆ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಸಾಧನೆ ಏನು? ನಿಮ್ಮ ಸ್ವಾರ್ಥಕ್ಕಾಗಿ ರಾಜ್ಯದ ಧ್ವನಿ ಅಡಗಿಸಿದ್ದೀರಿ. ಮೊನ್ನೆ ಬಿಜೆಪಿ ಶಾಸಕ ರಾಯಚೂರಿನ ಭಾಗವನ್ನು ತೆಲಂಗಾಣಕ್ಕೆ ಸೇರಿಸಬೇಕು ಅಂದಿದ್ದಾರೆ. ಬಿಜೆಪಿಯ ಮತ್ತೊಬ್ಬ ಮಂತ್ರಿ ಹಿಂದೆ ಬೆಳಗಾವಿಯನ್ನು ಪ್ರತ್ಯೇಕ ರಾಜ್ಯ ಮಾಡಬೇಕು ಎಂದು ಹೇಳಿದ್ದರು. ಆದರೂ ಬಿಜೆಪಿಯವರು ಅಖಂಡ ಕರ್ನಾಟಕದ ಬಗ್ಗೆ ಮಾತನಾಡಿಲ್ಲ. ಈ ರೀತಿ ಮಾತನಾಡುತ್ತಿರುವುದು ತಪ್ಪು ಎಂದು ಮುಖ್ಯಮಂತ್ರಿಗಳೂ ಹೇಳುತ್ತಿಲ್ಲ ಎಂದ್ರು.

ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದರು. ಯಾರಿಗಾದರೂ ಸರ್ಕಾರಿ ಕೆಲಸ ಅಲ್ಲ ಖಾಸಗಿ ಕೆಲಸ ಸಿಕ್ಕಿತಾ? ಯುವಕರು ತಮ್ಮ ಪದವಿ ಪ್ರಮಾಣಪತ್ರವನ್ನು ಬೊಮ್ಮಾಯಿ ಅವರಿಗೆ ಕಳುಹಿಸಿ ಕೊಡಿ. ಕಳೆದ 7 ವರ್ಷಗಳಲ್ಲಿ 14 ಕೋಟಿ ಉದ್ಯೋಗ ನೀಡುವುದಿರಲಿ, ಇದ್ದ 4 ಕೋಟಿ ಕೆಲಸ ಕೂಡ ನಾಶವಾಗಿದೆ. ಇನ್ಯಾವ ಕಾರಣಕ್ಕೆ ನೀವು ಅವರಿಗೆ ಮತ ಹಾಕಬೇಕು. ಇಲ್ಲಿ ಕೇವಲ ಶ್ರೀನಿವಾಸ ಮಾನೆ ಮಾತ್ರ ಅಭ್ಯರ್ಥಿಯಲ್ಲ. ಇಲ್ಲಿರುವ ಪ್ರತಿಯೊಬ್ಬ ಮತದಾರನೂ ಅಭ್ಯರ್ಥಿಯೇ. ಕೇವಲ ನೀವು ಮಾತ್ರ ಮಾನೆ ಅವರಿಗೆ ಮತ ಹಾಕಿದರೆ ಸಾಲದು. ನಿಮ್ಮ ಜತೆ ಇನ್ನೂ ಐದು ಜನ ಮತಹಾಕುವಂತೆ ಮಾಡಬೇಕು. ಆಗ ಮಾನೆ ಅವರು 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲಲು ಸಾಧ್ಯ.ಬಿಜೆಪಿ ಸರ್ಕಾರ ಏನಾದರೂ ಸಾಧನೆ ಮಾಡಿದೆಯಾ? ಬಡವರಿಗೆ, ರೈತರಿಗೆ ಸಹಾಯ ಮಾಡಲು ಆಗಲಿಲ್ಲ. ಉದ್ಯೋಗ ನೀಡಲಿಲ್ಲ. ಆದರೂ ಅಚ್ಛೇದಿನ್ ಬಂತು ಅಂತಾರೆ? ಯಾರಿಗೆ ಬಂತು ಅಚ್ಛೇ ದಿನ? ನಿಮಗೇನಾದರೂ ಅಚ್ಛೇದಿನ ಬಂತಾ? ನಿಮ್ಮ ಖಾತೆಗೆ ಹಣ ಬಂತಾ? ಖಾತೆಗೆ ಹಣ ಹಾಕುತ್ತೇವೆ ಎಂದರಲ್ಲ ಎಲ್ಲಿ ಅಂತಾ ಬೊಮ್ಮಾಯಿ ಅವರನ್ನು ಕೇಳಬೇಕು. ಈ ರೀತಿ ಕೇಳಲು ಇದೇ 30ರಂದು ನಿಮಗೆ ಅವಕಾಶ, ಅಧಿಕಾರ ಕೊಟ್ಟಿದ್ದಾರೆ ಎಂದ್ರು.

ಈ ಚುನಾವಣೆಯನ್ನು ಇಡೀ ರಾಷ್ಟ್ರ ನೋಡುತ್ತಿದೆ. ಇತ್ತೀಚೆಗೆ ನಡೆದ ಮಸ್ಕಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 31 ಸಾವಿರ ಮತಗಳ ಅಂತರದಲ್ಲಿ ಗೆದ್ದರು. ಎಲ್ಲರೂ ಇದನ್ನು ಮೆಚ್ಚಿದರು. ಬೆಳಗಾವಿಯಲ್ಲಿ ಸ್ವಲ್ಪ ಅಂತರದಲ್ಲಿ ಸೋತೆವು. ಹೀಗಾಗಿ ನಮಗೆ ಒಂದೊಂದು ವೋಟೂ ಮುಖ್ಯ. ನಿಮ್ಮ ಪರಿಸ್ಥಿತಿ, ನಿಮ್ಮ ಬ್ಯಾಂಕ್ ಖಾತೆಯನ್ನು ನೋಡಿ ನಿರ್ಧಾರ ಮಾಡಿ. ನೀವು ಮಾತ್ರವಲ್ಲ, ನಿಮ್ಮ ಜತೆ ಇನ್ನು ಐದು ಜನ ಹಸ್ತದ ಗುರುತಿಗೆ ಮತ ಹಾಕುವಂತೆ ಮಾಡಿ. ನೀವು ಮತಯಂತ್ರದಲ್ಲಿ ಮತ ಚಲಾಯಿಸಿದಾಗ ಬರುವ ಶಬ್ಧ ಮೋದಿ ಹಾಗೂ ಬೊಮ್ಮಾಯಿ ಅವರಿಗೆ ಕೇಳಬೇಕು. ಆ ರೀತಿ ನೀವು ಮತದಾನ ಮಾಡಬೇಕು ಎಂದ್ರು.

ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ರಾಜ್ಯದ ಮಾಜಿ ಸಚಿವರಾದ ಎಚ್.ಕೆ. ಪಾಟೀಲ್, ಎ.ಎಂ. ಹಿಂಡಸಗೇರಿ, ಅಲ್ಲಂ ವೀರಭದ್ರಪ್ಪ, ಮನೋಹರ್ ತಹಶೀಲ್ದಾರ್, ಪಿ.ಟಿ. ಪರಮೇಶ್ವರ ನಾಯಕ್, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಅಭ್ಯರ್ಥಿ ಶ್ರೀನಿವಾಸ ಮಾನೆ, ಮಾಜಿ ಸಂಸದ ಚಂದ್ರಪ್ಪ, ಮುಖಂಡ ಅನಿಲ್ ಪಾಟೀಲ್ ಮತ್ತಿತರರು ಭಾಗವಹಿಸಿದ್ದರು.