ಕಾರ್ಮಿಕರ ಬೆಂಬಲಕ್ಕೆ ಕಾಂಗ್ರೆಸ್ ಸದಾ ನಿಲ್ಲಲಿದೆ: ಡಿ.ಕೆ ಶಿವಕುಮಾರ್

ಬೆಂಗಳೂರು: ಕಾರ್ಮಿಕರ ಬದುಕು ಉಳಿಸಲು ಎಲ್ಲ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸುತ್ತಿದ್ದು, ಸರ್ಕಾರ ಕೋವಿಡ್ ಪಿಡುಗಿನ ಪರಿಸ್ಥಿತಿಯಲ್ಲಿ ಕಾರ್ಮಿಕರ ಹಿತಾಸಕ್ತಿ ಕಾಪಾಡಬೇಕು. ಕಾಂಗ್ರೆಸ್ ಪಕ್ಷ ಸದಾ ಕಾರ್ಮಿಕರ ಬೆಂಬಲಕ್ಕೆ ನಿಲ್ಲಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಭಾರತ ರಕ್ಷಿಸಿ’ ಆಂದೋಲನ ಸ್ಥಳಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ತೆರಳಿ ಬೆಂಬಲ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಅವರು ಮಾತನಾಡಿದ ಅವರು ಹೇಳಿದ್ದಿಷ್ಟು…

‘ದೇಶವನ್ನು ರಕ್ಷಿಸಲು ಇಂದು ಎಲ್ಲ ಕಾರ್ಮಿಕ ಸಂಘಟನೆಗಳು ಒಂದಾಗಿ ಹೋರಾಟಕ್ಕೆ ನಿಂತಿವೆ. ಇಂದು ದೇಶ ಉಳಿಯಬೇಕಾಗಿದೆ. ಜೀವ ಇದ್ದರೆ ಜೀವನ. ಸ್ವಾತಂತ್ರ್ಯ ಬಂದ ನಂತರ ಅನೇಕ ಕಾನೂನುಗಳನ್ನು ತಿದ್ದುಪಡಿ ಮಾಡಿಕೊಂಡು ದೇಶ ನಡೆಸಿಕೊಂಡು ಬಂದಿದ್ದೇವೆ. ಈ ಹಿಂದೆ ಕಾನೂನು ತಿದ್ದುಪಡಿ ಮಾಡಬೇಕಾದರೆ ಅನೇಕ ಹೋರಾಟ ಸಂಘಟನೆಗಳ ಜತೆ ಚರ್ಚೆ ಮಾಡಿ ತಿದ್ದುಪಡಿ ಮಾಡಲಾಗುತ್ತಿತ್ತು.

ಇವತ್ತು ಅಸಂಘಟಿತ ಕಾರ್ಮಿಕರು, ರೈತರು, ಕೈಗಾರಿಕೆಗಳ ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗದ ಕಾರ್ಮಿಕರು ಇಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾವುದೇ ಸರ್ಕಾರ ಅಥವಾ ಸಂಸ್ಥೆ ಸರಿಯಾಗಿ ನಡೆಯಬೇಕಾದರೆ ತಳಮಟ್ಟದಿಂದ ಮೇಲ್ಮಟ್ಟದ ವರೆಗೂ ಸಂಘಟಿತವಾಗಿ ಕೆಲಸ ಮಾಡಬೇಕು.

ಸರ್ಕಾರ ಕೋವಿಡ್ ನಿರ್ವಹಣೆಗೆ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದೆ. ರಾಜ್ಯ ಸರ್ಕಾರ 1610 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ ಇದರಲ್ಲಿ ಶೇ.10ರಿಂದ 15 ರಷ್ಟು ಫಲಾನುಭವಿಗಳಿಗೆ ಮಾತ್ರ ಹಣ ತಲುಪಿದೆ. ಸರ್ಕಾರ ತನ್ನ ಮಾತನ್ನು ಉಳಿಸಿಕೊಂಡು ಇವರಿಗೆ ನೆರವಾಗಬೇಕು. ಇಂದು ಕಾರ್ಮಿಕರು ತಮ್ಮ ಬದುಕು ಉಳಿಸಿಕೊಳ್ಳಲು ಇಂದು ಒಟ್ಟಾಗಿ ಹೋರಾಟಕ್ಕೆ ನಿಂತಿವೆ. ಕಾರ್ಮಿಕರ ಹಿತ ಕಾಯಲು ಹಾಗೂ ಕಾರ್ಮಿಕರ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಸದಾ ಬೆಂಬಲ ನೀಡುತ್ತದೆ. ಕಾರ್ಮಿಕರ ಪರವಾಗಿ ಹೋರಾಟ ಮಾಡುತ್ತಿರುವ ಎಲ್ಲ ಸಂಘಟನೆಗಳಿಗೆ ಶುಭವಾಗಲಿ.

ನಾವು ಉಳುವವನೆ ಭೂಮಿಯ ಒಡೆಯ ಎಂದು ಭೂಮಿಯನ್ನು ರೈತರಿಗೆ ಹಂಚಿದೆವು. ಆದರೆ ಇಂದು ಅದೇ ಭೂಮಿಯನ್ನು ಕಸಿದುಕೊಳ್ಳಲು ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುತ್ತಿದೆ. ಜತೆಗೆ ಕಾರ್ಮಿಕರ ಹಿತಕ್ಕೆ ಮಾರಕವಾಗಿರುವ ಕಾರ್ಮಿಕ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುತ್ತಿದೆ.

ನಮ್ಮ ಕಾರ್ಮಿಕ ಕಾಯ್ದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿತ್ತು. ಇಂದು ಯಾವುದೇ ಕಾರ್ಖಾನೆ, ಕೈಗಾರಿಕೆಗಳು ಕೇಳದಿದ್ದರೂ ಸರ್ಕಾರ ಕಾರ್ಮಿಕ ಕಾಯ್ದೆ ತಿದ್ದುಪಡಿ ತಂದಿದೆ. ಇದರ ವಿರುದ್ಧ ಎಲ್ಲರೂ ಹೋರಾಟ ಮಾಡೋಣ ಕಾಂಗ್ರೆಸ್ ಪಕ್ಷ ನಿಮ್ಮ ಜತೆ ನಿಲ್ಲಲಿದೆ.’

ಎಸ್.ಎಸ್.ಎಲ್.ಸಿ. ಫಲಿತಾಂಶ: ಧೈರ್ಯ ತೋರಿದ ಮಕ್ಕಳೇ ಕೊರೋನ ವಾರಿಯರ್ಸ್- ಸುರೇಶ್ ಕುಮಾರ್

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ಪ್ರಸರಣ ಕಾಲಘಟ್ಟದಲ್ಲಿ ಈ ವರ್ಷದ 10ನೇ ತರಗತಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿ ಈ ಬಾರಿ ಶೇ. 71.80 ಫಲಿತಾಂಶ ಲಭ್ಯವಾಗಿದೆ. ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಸೋಮವಾರ ಮಧ್ಯಾಹ್ನ ಬೆಳಗ್ಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಗಳ ಫಲಿತಾಂಶ ಪ್ರಕಟಿಸಿ ಮಾತನಾಡಿದ ಅವರು, ಕೋವಿಡ್ ವಿಷಮ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜೂನ್ ಮತ್ತು ಜುಲೈನಲ್ಲಿ 10ನೇ ತರಗತಿ ಪರೀಕ್ಷೆಗಳಿಗೆ ಮನೆಯಿಂದ ಧೈರ್ಯವಾಗಿ ಬಂದು ಪರೀಕ್ಷೆಗೆ ಹಾಜರಾಗಿದ್ದು, ನಾಡಿನ ಎಲ್ಲ ಎಸ್.ಎಲ್.ಎಲ್.ಸಿ ಮಕ್ಕಳಿಗೆ ಮತ್ತು ಅವರ ಸಾಹಸಕ್ಕೆ ಹೃದಯ ಪೂರ್ವಕ ಅಭಿನಂದನೆಗಳು ಸಲ್ಲುತ್ತವೆ ಎಂದರು. ಈ ನಮ್ಮ ಮಕ್ಕಳೇ ನಿಜವಾದ ಕೊರೋನಾ ವಾರಿಯರ್ಸ್ ಎಂದು ಮಕ್ಕಳ ಧೈರ್ಯವನ್ನು ಶ್ಲಾಘಿಸಿದ ಸಚಿವರು, ಪರೀಕ್ಷಾ ಸಮಯದಲ್ಲಿ ಯಾವುದೇ ಒಂದು ಮಗುವೂ ಸಹ ಸಾರಿಗೆ ವ್ಯವಸ್ಥೆಯಿಲ್ಲದೇ ಪರೀಕ್ಷೆಗೆ ಹಾಜರಾದ ನಿದರ್ಶನಗಳಿಲ್ಲ. ಒಂದೇ ಮಗುವಿದ್ದರೂ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗಿತ್ತು ಎಂದರು.

ಎದೆಗುಂದದೇ ಪರೀಕ್ಷೆಗೆ ಹಾಜರಾದ ಮಕ್ಕಳು ಮತ್ತು ಇದಕ್ಕೆಲ್ಲಾ ಕಾರಣರಾದ ಶಿಕ್ಷಣ ಇಲಾಖೆ ಅಧಿಕಾರಿಗಳು, ಉಪಧ್ಯಾಯ ಸಮೂಹ ಹಾಗೂ ಪ್ರೌಢಶಿಕ್ಷಣ ಮಂಡಳಿ ಅಧಿಕಾರಿಗಳ ಕಾರ್ಯಕ್ಷಮತೆ ಮತ್ತು ದಕ್ಷತೆ ಕಾರಣವಾಗಿದ್ದು, ಅವರೆಲ್ಲರಿಗೂ ಕೃತಜ್ಞತೆಗಳು ಸಲ್ಲಬೇಕಿದೆ ಎಂದು ಅವರು ಹೇಳಿದರು.

ಮೌಲ್ಯಮಾಪನ ವಿವರ:
ಕೊರೊನಾ ಸಂದರ್ಭದಲ್ಲಿ ಮೌಲ್ಯಮಾಪನ ಕಾರ್ಯಗಳು ಅತ್ಯಂತ ಕ್ಲಿಷ್ಟಕರವಾಗಿದ್ದವು. ನಮ್ಮ ಇಲಾಖೆ ಈ ಸಂದರ್ಭವನ್ನು ಒಂದು ಸವಾಲಾಗಿ ಸ್ವೀಕರಿಸಿ, ಆರೋಗ್ಯ ಇಲಾಖೆ ನಿಗದಿಪಡಿಸಿದ ಮಾರ್ಗಸೂಚಿಗಳನ್ನು (ಎಸ್.ಓ.ಪಿ) ಕಟ್ಟುನಿಟ್ಟಾಗಿ ಪಾಲಿಸುವ ಹಾಗೂ ಯಾವುದೇ ಪರೀಕ್ಷಾ ಕೇಂದ್ರದ ಸಿಬ್ಬಂದಿಗೆ ಸಮಸ್ಯೆ ಆಗದ ರೀತಿಯಲ್ಲಿ ವ್ಯವಸ್ಥೆಯನ್ನು ನಿರ್ವಹಿಸಿದೆ. ಪ್ರತಿ ಮೌಲ್ಯಮಾಪನ ಕೇಂದ್ರಗಳಲ್ಲೂ ಸ್ವಚ್ಚತೆಗೆ ಆದ್ಯತೆಯನ್ನು ನೀಡಿ, ನಿಗದಿತ ಸುರಕ್ಷಾ ಕ್ರಮಗಳನ್ನು ಅನುಸರಿಸಿ ಮೌಲ್ಯಮಾಪನ ಪ್ರಕ್ರಿಯೆಗಳನ್ನು ವ್ಯವಸ್ಥಿತವಾಗಿ ನಡೆಸಲಾಗಿದೆ. ಉತ್ತರಪತ್ರಿಕೆಗಳ ಮೌಲ್ಯಮಾಪನವನ್ನು ವಿಕೇಂದ್ರಿಕರಣಗೊಳಿಸಿ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ 227 ಮೌಲ್ಯಮಾಪನ ಕೇಂದ್ರಗಳಲ್ಲಿ ನಡೆಸಲಾಯಿತು. ಒಟ್ಟಾರೆ 52219 ಮೌಲ್ಯಮಾಪಕರು ನಡೆಸಿದ್ದಾರೆ. ಜುಲೈ 13 ರಿಂದ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಯಿತು. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್ಡೌನ್ ಹಿನ್ನೆಲೆಯಲ್ಲಿ ಎರಡು ದಿನ ತಡವಾಗಿ ಆರಂಭವಾಗಿ ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿತು ಎಂದು ಸುರೇಶ್ ಕುಮಾರ್ ಹೇಳಿದರು.

ಮಕ್ಕಳು ಮತ್ತು ಪೋಷಕರಲ್ಲಿ ಮನವಿ:
ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ ಸಚಿವರು, ನಪಾಸಾದ ವಿದ್ಯಾರ್ಥಿಗಳು ಅಧೀರರಾಗುವ ಪ್ರಮೇಯವಿಲ್ಲ. ಪರೀಕ್ಷೆಯೆ ಜೀವನದ ಅಂತಿಮ ಗುರಿಯಲ್ಲ. ಪರೀಕ್ಷೆಯಲ್ಲಿ ನಪಾಸಾಗಿ ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಿದವರ ಉದಾಹರಣೆಗಳು ನಮ್ಮ ಮುಂದಿವೆ. ಹಾಗೆಯೇ ಫೇಲಾದ ಮಕ್ಕಳು ವೇದನೆ ಇಲ್ಲವೇ ಖೇದ ಅನುಭವಿಸಬಾರದು. ಹಾಗೆಯೇ ಪೋಷಕರಾಗಲಿ ಮನಸ್ಸಿಗೆ ಬೇಸರ ಮಾಡಿಕೊಂಡು ಮಕ್ಕಳನ್ನು ಅವಹೇಳನ ಮಾಡದೇ ಮುಂದಿನ ಪೂರಕ ಪರೀಕ್ಷೆಯಲ್ಲಿ ಮಕ್ಕಳು ಉತ್ತೀರ್ಣರಾಗಲು ಸಮಾಧಾನದಿಂದಲೇ ಸಲಹೆ ನೀಡಬೇಕೆಂದು ಸಚಿವರು ಮನವಿ ಮಾಡಿದರು.

*ಈ ವರ್ಷ ಶೇ. 71.80 ಫಲಿತಾಂಶ*: ಈ ಬಾರಿ 811050 ವಿದ್ಯಾರ್ಥಿಗಳು ಪರೀಕ್ಷೆಗಳನ್ನು ತೆಗೆದುಕೊಂಡಿದ್ದಾರೆ. ಈ ಪೈಕಿ 738471 ವಿದ್ಯಾರ್ಥಿಗಳು ಹೊಸಬರು, 50,576 ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ 15301 ಖಾಸಗಿ ವಿದ್ಯಾರ್ಥಿಗಳು, 6702 ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು ಇದ್ದಾರೆ. ಒಟ್ಟಾರೆ 582816 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಸರಾಸರಿ ಫಲಿತಾಂಶ ಶೇ 71.80 ಇದೆ. ಕಳೆದ ಸಾಲಿನಲ್ಲಿ ಶೇ 73.70 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು ಎಂದು ಸಚಿವರು ಫಲಿತಾಂಶದ ವಿವರಗಳನ್ನು ಒದಗಿಸಿದರು. 18,067 ಅಭ್ಯರ್ಥಿಗಳು ಪೂರಕ ಪರೀಕ್ಷೆಗೆ ಹಾಜರಾಗುವ ಉದ್ದೇಶದಿಂದ ಜೂನ್-ಜುಲೈನಲ್ಲಿನ ಪರೀಕ್ಷೆಗೆ ಹಾಜರಾಗಿಲ್ಲ. ಈ ವಿದ್ಯಾರ್ಥಿಗಳನ್ನು ಮುಂದೆ ನೆಡಯುವ ಪೂರಕ ಪರೀಕ್ಷೆಯಲ್ಲಿ ಹೊಸ ಅಭ್ಯರ್ಥಿಗಳು (ಫ್ರೆಶ್ ಕ್ಯಾಂಡಿಡೇಟ್ಸ್ ) ಎಂದೇ ಪರಿಗಣಿಸಲಾಗುತ್ತದೆ. ಈ 18,067 ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಹಾಜರಾಗಲು ಮತ್ತೊಮ್ಮೆ ಪರೀಕ್ಷಾ ಅರ್ಜಿ ಮತ್ತು ಶುಲ್ಕ ತುಂಬ ಬೇಕಾದ ಅಗತ್ಯವಿಲ್ಲ ಎಂದೂ ಸಚಿವರು ಹೇಳಿದರು.

19,086 ಮಕ್ಕಳು ಹಾಜರಿ ಕೊರತೆಯಂತಹ ಸಮಸ್ಯೆಗಳಿಂದ ಪರೀಕ್ಷೆಗೆ ಹಾಜರಾಗಲು ಅನರ್ಹತೆ ಪಡೆದಿದ್ದರು ಎಂದು ಸಚಿವರು ಹೇಳಿದರು.

ಶೇ. 77.74 ವಿದ್ಯಾರ್ಥಿನಿಯರು ಮತ್ತು ಶೇ. 66.41 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆಗಳಿಗೆ ಶೇ. 72.79, ಅನುದಾನಿತ ಶಾಲೆಗಳಿಗೆ ಶೇ. 70.60 ಮತ್ತು ಅನುದಾನ ರಹಿತ ಶೇ. 82.31 ಫಲಿತಾಂಶ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ. ಶೇ. 73.41 ರಷ್ಟು ನಗರ ವಿದ್ಯಾರ್ಥಿಗಳು ಮತ್ತು 77.18 ಗ್ರಾಮೀಣ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 1550 ಶಾಲೆಗಳು ಶೇ.100 ಫಲಿತಾಂಶ ಪಡೆದಿದ್ದರೆ, 62 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ ಎಂದು ಸಚಿವರು ತಿಳಿಸಿದರು. ಪೂರ್ಣ 625 ಅಂಕಗಳನ್ನು 6 ವಿದ್ಯಾರ್ಥಿಗಳು ಪಡೆದಿದ್ದಾರೆ ಎಂದು ಸಚಿವರು ವಿವರಿಸಿದರು.

*ಗ್ರೇಡಿಂಗ್ ಸಿಸ್ಟಂ*: ಎಸ್.ಎಸ್.ಎಲ್.ಸಿ ಪರೀಕ್ಷೆಗಳ ಫಲಿತಾಂಶದಲ್ಲಿ ಜಿಲ್ಲಾವಾರು ಅನಾರೋಗ್ಯಕರ ಪೈಪೋಟಿ ತಪ್ಪಿಸುವ ಸಲುವಾಗಿ ಈ ಬಾರಿಯಿಂದ ಜಿಲ್ಲೆಗಳಿಗೆ ಗ್ರೇಡಿಂಗ್ ಸಿಸ್ಟಂ ನೀಡಲಾಗುತ್ತಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

8 ಜಿಲ್ಲೆಗಳು ಎ- ಗ್ರೇಡ್, 20 ಜಿಲ್ಲೆಗಳು ಬಿ- ಗ್ರೇಡ್ ಮತ್ತು 4 ಜಿಲ್ಲೆಗಳು ಸಿ-ಗ್ರೇಡ್ ಪಡೆದಿವೆ. ಇಡೀ ಜಿಲ್ಲೆಯ ಒಟ್ಟು ಉತ್ತೀರ್ಣರಾದ ಮಕ್ಕಳ ಸಂಖ್ಯೆ (ಶೇ. 40) ಪರೀಕ್ಷೆಗೆ ಹಾಜರಾದ ಎಲ್ಲ ಮಕ್ಕಳು ತೆಗೆದುಕೊಂಡು ಒಟ್ಟಾರೆ ಅಂಕಗಳು (ಶೇ.40) ಮತ್ತು ಪ್ರಥಮ ಸ್ಥಾನ ಮತ್ತು ಅದರ ಮೇಲಿನ ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳ ಸಂಖ್ಯೆ (ಶೇ.20) ಆಧರಿಸಿ ಗ್ರೇಡ್ ನೀಡಲಾಗಿದೆ ಎಂದು ಸಚಿವರು ವಿವರಿಸಿದರು

ಸೆಪ್ಟೆಂಬರ್‌ ನಲ್ಲಿ ಪೂರಕ ಪರೀಕ್ಷೆ:
ಇದೇ ಸೆಪ್ಟೆಂಬರ್‌ ನಲ್ಲಿ ಪೂರಕ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ವಿವರಿಸಿರುವಂತೆ ಅರ್ಜಿಗಳನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡಬೇಕಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.
ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿ: ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ಪ್ರತಿ ಹಾಗೂ ಮರುಮೌಲ್ಯಮಾಪನ ಶುಲ್ಕವನ್ನು ಪಾವತಿಸಲು online payment ಸೌಲಭ್ಯವನ್ನು ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕ ಶಿಕ್ಷಣ ಆಯುಕ್ತ, ಡಾ. ಕೆ.ಜೆ.ಜಗದೀಶ್ ಹಾಗೂ ಪ್ರೌಢಶಿಕ್ಷಣ ಇಲಾಖೆ ನಿರ್ದೇಶಕಿ ವಿ. ಸುಮಂಗಲಾ ಹಾಜರಿದ್ದರು.

ಬಾದಾಮಿ ವಿಧಾನಸಭೆ ಕ್ಷೇತ್ರದ ಗ್ರಾಮಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ: ಸಿದ್ದರಾಮಯ್ಯ ಸೂಚನೆ

ಬೆಂಗಳೂರು : ಪ್ರವಾಹ ಭೀತಿ ಎದುರಿಸುತ್ತಿರುವ ಬಾದಾಮಿ ವಿಧಾನಸಭೆ ಕ್ಷೇತ್ರದ ಗ್ರಾಮಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕ್ಯಾ.ರಾಜೇಂದ್ರ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸಿದ್ದರಾಮಯ್ಯ ಅವರು, ಈಗಾಗಲೇ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಸಧ್ಯಕ್ಕೆ ಪ್ರವಾಹ ಸಾಧ್ಯತೆ ಇಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಡಿಸಿಯವರು ತಿಳಿಸಿದರು.

ಇದೇ ವೇಳೆ ಬಾದಾಮಿ ತಹಶೀಲ್ದಾರರ ಜೊತೆಗೂ ಸಿದ್ದರಾಮಯ್ಯ ಅವರು ದೂರವಾಣಿ ಮೂಲಕ ಮಾತನಾಡಿದರು.

ಮುಳುಗಡೆ ಭೀತಿ ಎದುರಿಸುತ್ತಿರುವ ಗ್ರಾಮಗಳ ಬಗ್ಗೆ ನಿಗಾ ವಹಿಸುವಂತೆ ಅವರು ಸೂಚಿಸಿದರು.

ಕೊರೊನಾ ಕುರಿತಾಗಿಯೂ‌ ತಹಶೀಲ್ದಾರರಿಂದ ಮಾಹಿತಿ‌ ಪಡೆದುಕೊಂಡ ಸಿದ್ದರಾಮಯ್ಯ ಅವರು, ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಲೋಪವಾಗದಂತೆ ನೋಡಿಕೊಳ್ಳಲು ಸೂಚಿಸಿದರು.

ಸೋಂಕು ನಿಯಂತ್ರಣಕ್ಜೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಿದ್ದರಾಮಯ್ಯ ಅವರು ಸೂಚಿಸಿದರು.

ಮಾರ್ಗಸೂಚಿಗೆ ಕಾಯದೆ ಪರಿಹಾರ ನೀಡಿ: ಎಚ್ಡಿಕೆ

ಬೆಂಗಳೂರು: ಮುಂಗಾರು ಮಳೆಯಿಂದ ತತ್ತರಿಸಿರುವ ರೈತರಿಗೆ ಬೆಳೆ ಹಾನಿ ಪರಿಹಾರ ನೀಡುವಾಗ ರಾಷ್ಟ್ರೀಯ ಮತ್ತು ರಾಜ್ಯ ಪ್ರಕೃತಿ ವಿಕೋಪ ನಿಧಿಯ ಮಾರ್ಗಸೂಚಿಗಳಿಗೆ ಜೋತುಬೀಳದೆ ಸರ್ಕಾರ ರೈತರಿಗೆ ಹೆಚ್ಚಿನ ಪರಿಹಾರ ತಕ್ಷಣವೇ ನೀಡಬೇಕು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಸತತ ಮೂರನೇ ವರ್ಷ ಅತಿವೃಷ್ಟಿಗೆ ಸಿಲುಕಿರುವ ರಾಜ್ಯದ ರೈತರು ಈ ಬಾರಿಯೂ ಮಳೆಯ ಅನಾಹುತ ತಡೆದುಕೊಳ್ಳುವ ಶಕ್ತಿ ಇಲ್ಲದೆ ಬಸವಳಿದಿದ್ದಾರೆ. ರಸ್ತೆ, ವಿದ್ಯುತ್ ಸಂಪರ್ಕ ಕಡಿತ ಹಾಗೂ ಮೂಲಭೂತ ಸೌಕರ್ಯಗಳ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಸಮರೋಪಾದಿಯಲ್ಲಿ ಇದನ್ನು ಸರಿಪಡಿಸಲು ತುರ್ತು ಗಮನ ಹರಿಸಬೇಕು.

ಎರಡು ಬಾರಿ ಹೃದಯ ಚಿಕಿತ್ಸೆಗೆ ಒಳಗಾಗಿರುವ ನಾನು ಕೊರೋನಾ ಸಂಕಷ್ಟ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ರಾಜ್ಯದಾದ್ಯಂತ ಖುದ್ದು ಪರಿಶೀಲನೆ ಮಾಡುವುದು ವೈದ್ಯರ ಸಲಹೆ ಮೇರೆಗೆ ಬಲು ಕಷ್ಟ. ಆದರೆ ಅತಿವೃಷ್ಟಿಯ ನಷ್ಟದ ಬಗ್ಗೆ ಜಿಲ್ಲಾವಾರು ಮಾಹಿತಿ ಪಡೆದು ಮುಖ್ಯಮಂತ್ರಿಗಳು, ಸಚಿವರು, ಅಧಿಕಾರಿಗಳು ಸೇರಿದಂತೆ ಸರ್ಕಾರಕ್ಕೆ ಮಾಹಿತಿ ಒದಗಿಸುತ್ತೇನೆ.

ನೆರೆ ಸಂತ್ರಸ್ತರ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉದಾರ ನೆರವು ತಕ್ಷಣವೇ ನೀಡಬೇಕು. ಸಂತ್ರಸ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆತ್ಮವಿಶ್ವಾಸ ಮೂಡಿಸಬೇಕು.

ಸಚಿವರು ಮತ್ತು ಅಧಿಕಾರಿಗಳು ಕಾಟಾಚಾರಕ್ಕೆ ಸ್ಥಳ ಪರಿಶೀಲನೆ ಮಾಡಿದರೆ ಉಪಯೋಗವಾಗದು. ನೆರೆ ಸಂತ್ರಸ್ತರ ನೆರವಿಗೆ ಜಿಲ್ಲಾಧಿಕಾರಿಗಳಿಗೆ 5 ಕೋಟಿ ರೂಪಾಯಿ ಒದಗಿಸಿರುವುದು ಏನೇನೂ ಸಾಲದು. ಅತಿವೃಷ್ಟಿಯನ್ನು ಸರ್ಕಾರ ಸವಾಲಾಗಿ ಸ್ವೀಕರಿಸಿ ಸಂತ್ರಸ್ತರಿಗೆ ತುರ್ತು ಪರಿಹಾರ ನೀಡುವುದನ್ನೇ ಮೂಲಮಂತ್ರವಾಗಿಸಿಕೊಳ್ಳಬೇಕು.

ನೆರೆಹಾವಳಿಯಿಂದ ಕಳೆದ ವರ್ಷ ನಿರ್ವಸತಿಕರಾದವರಿಗೆ 500000 ರೂಪಾಯಿ ಪರಿಹಾರ ಒದಗಿಸುವ ಹಾಗೂ ಮನೆ ಕಟ್ಟಿಸಿಕೊಡುವ ಸರ್ಕಾರದ ಭರವಸೆ ಬಹುಸಂಖ್ಯಾತರಿಗೆ ಅನುಕೂಲವಾಗಲಿಲ್ಲ.

ಈ ವರ್ಷವೂ ಮಳೆಯಿಂದ ನಿರಾಶ್ರಿತರಾದವರಿಗೆ ತಕ್ಷಣವೇ ಸೂರು ಒದಗಿಸುವ (ಕಳೆದ ಬಾರಿಯ ನಿರಾಶ್ರಿತರು ಸೇರಿದಂತೆ) ಶಾಶ್ವತ ಯೋಜನೆಯನ್ನು ಸರ್ಕಾರ ಆದ್ಯತೆಯ ಮೇಲೆ ಅನುಷ್ಠಾನ ಮಾಡಬೇಕು. ಸತ್ಯವನ್ನು ಬಹಳ ಕಾಲ ಮರೆಮಾಚಲು ಸಾಧ್ಯವಿಲ್ಲ ಎಂದು ಎಚ್ಡಿಕೆ ಸರ್ಕಾರದ ಕಿವಿ ಹಿಂಡಿದ್ದಾರೆ.

ಕನ್ನಡಿಗರು-ತಮಿಳರನ್ನು ಬೆಸೆದ ಸರ್ವಜ್ಞ, ತಿರುವಳ್ಳುವರ್

ಬೆಂಗಳೂರು: ತಮಿಳಿನ ಸಂತ ಕವಿ ತಿರುವಳ್ಳುವರ್ ಹಾಗೂ ಕನ್ನಡದ ಸರ್ವಶ್ರೇಷ್ಟ ವಚನಕಾರ ಸರ್ವಜ್ಞರು ಕನ್ನಡ ಮತ್ತು ತಮಿಳಿಗರನ್ನು ಬೆಸೆದಿದ್ದು ಮಾತ್ರವಲ್ಲದೆ ಸಮಾಜ ಸುಧಾರಣೆಗೆ ಅನುಪಮ ಕೊಡುಗೆ ನೀಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥನಾರಾಯಣ ಹೇಳಿದರು.

ಬೆಂಗಳೂರು ಅಲಸೂರು ಬಳಿ ಇರುವ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಯಾಗಿ 11 ವರ್ಷಗಳು ಸಂದ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ಕನ್ನಡ ಮತ್ತು ತಮಿಳು ಭಾಷಿಗರ ಐಕ್ಯತೆಯ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅನೇಕ ವರ್ಷಗಳಿಂದ ಜಟಿಲವಾಗಿದ್ದ ಈ ಸಮಸ್ಯೆಯನ್ನು ಹನ್ನೊಂದು ವರ್ಷಗಳ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ತಿರುವಳ್ಳುವರ್ ಪ್ರತಿಮೆ ಅನಾವರಣಗೊಂಡಿತು. ಅಂದೇ ಚೆನ್ನೈನಲ್ಲಿ ಸರ್ವಜ್ಞ ಪ್ರತಿಮೆ ಸ್ಥಾಪನೆಯಾಯಿತು. ಎರಡು ರಾಜ್ಯಗಳ ನಡುವೆ ಇದೊಂದು ಐತಿಹಾಸಿಕ ಘಟನೆಯಾಯಿತು ಎಂದು ನುಡಿದರು.

ತಮ್ಮ ಸಾಹಿತ್ಯ, ಬರವಣಿಗೆ ಹಾಗೂ ತತ್ತ್ವಾದರ್ಶಗಳ ಮೂಲಕ ಸಮಾನತೆಯನ್ನು ಸಾರಿದ ತಿರುವಳ್ಳುವರ್, ಅವರ ತಿರುಕ್ಕುರಳ್ ಕೃತಿ ಅತ್ಯಂತ ಮಹತ್ತ್ವದ್ದಾಗಿದೆ. ಅದರ ಸಾರ ಎಲ್ಲರಿಗೂ ಎಲ್ಲ ಕಾಲಕ್ಕೂ ಅನುಕರಣೀಯವಾಗಿದೆ. ಅವರು ಬರೆದಿದ್ದೆಲ್ಲವೂ ನಮ್ಮ ಜೀವನಕ್ಕೆ ಹತ್ತಿರವಾಗಿದೆ ಎಂದು ಉಪ ಮುಖ್ಯಮಂತ್ರಿ ನುಡಿದರು.

ಸರ್ವಜ್ಞರು ಮತ್ತು ತಿರುವಳ್ಳುವರ್ ಭಾಷೆ, ಗಡಿ ಮೀರಿದ ತತ್ತ್ವಜ್ಞಾನಿಗಳು. ಜನರ ನಡುವೆಯೇ ಇದ್ದು ಸಮಾಜವನ್ನು ತಿದ್ದಿದರು. ಅವರಿಬ್ಬರು ಬಿಟ್ಚುಹೋದ ಜ್ಞಾನದ ಬೆಳಕು ಎಲ್ಲೆಡೆ ಅನನ್ಯವಾಗಿ ಪಸರಿಸಿದೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

ಭಾಷಾ ಸಾಮರಸ್ಯ:
ಸರ್ವಜ್ಞರು ಮತ್ತು ತಿರುವಳ್ಳುವರ್ ಪ್ರತಿಮೆಗಳ ಸ್ಥಾಪನೆಯಿಂದ ಕರ್ನಾಟಕ ಮತ್ತು ತಮಿಳುನಾಡು ಪ್ರಜೆಗಳ ನಡುವಿನ ಬಾಂಧವ್ಯ ಮತ್ತಷ್ಟು ಗಾಢವಾಗಿದೆ. ಕನ್ನಡ ನಾಡು ಅತ್ಯಂತ ಸಹಿಷ್ಣುತೆಯುಳ್ಳ ರಾಜ್ಯ. ಇಲ್ಲಿ ಪ್ರತಿಯೊಬ್ಬರೂ ನೆಮ್ಮದಿ, ಸಂತಸದಿಂದ ಬಾಳುತ್ತಿದ್ದಾರೆಂದು ಡಿಸಿಎಂ ನುಡಿದರು.

ಈ ಸಂದರ್ಭದಲ್ಲಿ ತಮಿಳು ಸಂಘದ ಪದಾಧಿಕಾರಿಗಳು, ಐಕ್ಯತಾ ಸಮಿತಿ ಸದಸ್ಯರು ಹಾಜರಿದ್ದರು.

ಬೆಂಗಳೂರಿಗೆ 665 ಆಂಬ್ಯುಲೆನ್ಸ್: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು, ಆಗಸ್ಟ್ 8,:ಬೆಂಗಳೂರು ನಗರದಲ್ಲಿ ಕೊರೊನಾ ರೋಗಿಗಳು ಮತ್ತು ಇತರೆ ರೋಗಿಗಳನ್ನು ಆಸ್ಪತ್ರೆ, ಕೋವಿಡ್ ಆರೈಕೆ ಕೇಂದ್ರಗಳಿಗೆ ಕರೆದೊಯ್ಯಲು 665 ಆಂಬುಲೆನ್ಸ್ ಗಳನ್ನು ನಿಯೋಜಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

“ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆಯಂತೆ, ನಗರದಲ್ಲಿ 665 ಆಂಬ್ಯುಲೆನ್ಸ್ ಗಳನ್ನು ನಿಯೋಜಿಸಲಾಗಿದೆ. ಕೊರೊನಾ ಸೋಂಕಿಗೊಳಗಾದ ಮತ್ತು ಇತರೆ ರೋಗಿಗಳನ್ನು ಆಸ್ಪತ್ರೆ ಹಾಗೂ ಕೋವಿಡ್ ಕೇಂದ್ರಕ್ಕೆ ಕೊಂಡೊಯ್ಯಲು ಕ್ರಮ ಕೈಗೊಳ್ಳಲಾಗಿದೆ” ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಬಿಬಿಎಂಪಿಯ ಪೂರ್ವ ವಲಯದಲ್ಲಿ 127, ಪಶ್ಚಿಮ ವಲಯದಲ್ಲಿ 141, ದಕ್ಷಿಣದಲ್ಲಿ 110, ರಾಜರಾಜೇಶ್ವರಿ ನಗರದಲ್ಲಿ 40, ಬೊಮ್ಮನಹಳ್ಳಿಯಲ್ಲಿ 43, ಮಹದೇವಪುರದಲ್ಲಿ 52, ದಾಸರಹಳ್ಳಿಯಲ್ಲಿ 24, ಯಲಹಂಕದಲ್ಲಿ 33 ಆಂಬ್ಯುಲೆನ್ಸ್ ಗಳ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಇಲಾಖೆಯಿಂದ 11 ಹಾಗೂ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ 84 ಆಂಬ್ಯುಲೆನ್ಸ್ ಗಳನ್ನು ನಿಯೋಜನೆ ಮಾಡಲಾಗಿದೆ.

ಮೃತದೇಹ ಹಸ್ತಾಂತರಕ್ಕೆ ಕ್ರಮ:

ಕುಮಾರಸ್ವಾಮಿ ಲೇಔಟ್ ನ ಸಾಗರ್ ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟಿದ್ದ ರೋಗಿಯ ಮೃತದೇಹ ಹಸ್ತಾಂತರಕ್ಕೆ ಸಚಿವ ಡಾ.ಕೆ.ಸುಧಾಕರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಎರಡು ದಿನಗಳಿಂದ ಮೃತದೇಹವನ್ನು ಇಟ್ಟುಕೊಂಡಿದ್ದ ಆಸ್ಪತ್ರೆಯ ಸಿಬ್ಬಂದಿ, 9 ಲಕ್ಷ ರೂ. ಶುಲ್ಕ ಪಾವತಿಸಿದ ಬಳಿಕವೇ ಮೃತದೇಹ ಹಸ್ತಾಂತರಿಸುವುದಾಗಿ ಕುಟುಂಬ ಸದಸ್ಯರಿಗೆ ಹೇಳಿದ್ದರು.

“ಹಣ ಪಾವತಿಸಿದ ನಂತರ ಮೃತದೇಹ ಕೊಡುತ್ತೇವೆ ಎಂದು ಹೇಳಿ ಕುಟುಂಬದವರನ್ನು ಹಿಂಸೆ ಮಾಡಿರುವುದು ಖಂಡನೀಯ. ಕೊರೊನಾ ಸಂಕಷ್ಟದ ಕಾಲದಲ್ಲಿ ಹಣ ಗಳಿಸುವುದು ಖಾಸಗಿ ಆಸ್ಪತ್ರೆಗಳಿಗೆ ಮಾನದಂಡವಾಗಬಾರದು. ಆಸ್ಪತ್ರೆ ಮುಖ್ಯಸ್ಥರೊಂದಿಗೆ ಮಾತನಾಡಿ, ಕುಟುಂಬಕ್ಕೆ ನ್ಯಾಯ ಕೊಡಿಸುತ್ತೇನೆ’’ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.