ರಾಜಕೀಯ ಬೇಧ ಮರೆತು ಎಲ್ಲರೂ ಕೊಡಗಿನ ಹಾನಿಗೆ ಶಾಶ್ವತ ಪರಿಹಾರ ಯೋಜನೆ ರೂಪಿಸಬೇಕು: ಡಿ.ಕೆ.ಶಿವಕುಮಾರ್

ಮಡಿಕೇರಿ:ರಾಜ್ಯಕ್ಕೆ ಕಿರೀಟದಂತಿರುವ ಕೊಡಗು ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಪ್ರಾಕೖತ್ತಿಕ ವಿಕೋಪ ಸಂಬಂಧಿತ ರಾಜಕೀಯ ಬೇಧ ಮರೆತು ಎಲ್ಲಾ ಪಕ್ಷಗಳ ನಾಯಕರು ಒಂದಾಗಿ ಶಾಶ್ವತವಾದ ಪರಿಹಾರ ಕ್ರಮಗಳ ಯೋಜನೆಯನ್ನು ಸಕಾ೯ರದ ಮೂಲಕ ಜಾರಿಗೊಳಿಸಬೇಕಾಗಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ದೇಶಕ್ಕೆ ಅಪ್ರತಿಮ ಸೈನಿಕರನ್ನು ನೀಡಿದ, ಜೀವನದಿ ಕಾವೇರಿಯ ತವರು, ಕನಾ೯ಟಕ ರಾಜ್ಯಕ್ಕೆ ವಿಲೀನಗೊಂಡ ಸಂದಭ೯ದ ಅಂದಿನ ಸಂದಭ೯ದಲ್ಲಿಯೇ 10 ಲಕ್ಷ ರು. ತೆರಿಗೆ ನೀಡಿದ ಕೊಡಗಿನ ರಕ್ಷಣೆಗೆ ಎಲ್ಲರೂ ಮುಂದಾಗಬೇಕಾಗಿದೆ. ನಾಡಿಗೆ ಮಳೆ ಅಗತ್ಯವಾಗಿದೆ. ಆದರೆ ಮಳೆಯಿಂದ ಉಂಟಾಗುವ ಅನಾಹುತಗಳನ್ನು ತಡೆಗಟ್ಟಲೇಬೇಕಾಗಿದೆ. ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಲು ಸಾಧ್ಯ ಎಂದು ಯೋಜನೆ ರೂಪಿಸುತ್ತೇವೆ ಎಂದು ಹೇಳಿದರು.

ಕಳೆದ ವಷ೯ ರಾಜ್ಯದಲ್ಲಿ ಸಂಭವಿಸಿದ ಪ್ರಾಕೖತ್ತಿಕ ವಿಕೋಪ ಸಂತ್ರಸ್ಥರಿಗೇ ಇನ್ನೂ ರಾಜ್ಯ ಸಕಾ೯ರ ಭರವಸೆ ನೀಡಿದ್ದ ಪರಿಹಾರ ಇನ್ನೂ ನೀಡಿಲ್ಲ. ಶಾಸಕರು, ಸಂಸದರಿಗೆ ಈ ಬಗ್ಗೆ ಪ್ರಶ್ನಿಸಲೂ ಸಾಧ್ಯವಾಗದ ಅಸಾಹಯಕ ಸ್ಥಿತಿಯಿದೆ. ರಾಜ್ಯದಲ್ಲಿ ಕೋರೋನಾ ಮತ್ತು ಮಳೆಹಾನಿ ಪರಿಸ್ಥಿತಿಯನ್ನು ಸಮಥ೯ವಾಗಿ ನಿವ೯ಹಿಸುವಲ್ಲಿ ಸಕಾ೯ರ ಸಂಪೂಣ೯ ವಿಫಲವಾಗಿದೆ ಎಂದೂ ಶಿವಕುಮಾರ್ ಆರೋಪಿಸಿದರು.

ಮಳೆ ಹಾನಿ ಪರಿಸ್ಥಿತಿ ನಿಭಾಯಿಸುವಲ್ಲಿ ಕೊಡಗಿನ ರಾಜಕಾರಣಿಗಳು ವಿಫಲರಾಗಿದ್ದಾರೆಯೋ ಅಥವಾ ರಾಜಕಾರಣಿಗಳು ವಿಫಲರಾಗಿದ್ದಾರೆಯೋ ಎಂಬ ಬಗ್ಗೆ ಪರಿಶೀಲಿಸುವುದಾಗಿ ಡಿ.ಕೆ.ಶಿವಕುಮಾರ್ ಹೇಳಿದರು. ಕೊಡಗು ಜಿಲ್ಲಾ ಕಾಂಗ್ರೆಸ್ ಮುಖಂಡರು ಈ ಸಂದಭ೯ ಇದ್ದರು.

ಬಿಡದಿಯ ಕೊಕೋ ಕೋಲಾ ಫ್ಯಾಕ್ಟರಿಗೆ ಸಚಿವ ಜಗದೀಶ್ ಶೆಟ್ಟರ್ ಭೇಟಿ

ಬಿಡದಿ ಆಗಸ್ಟ್‌ 08, 2020: ಕರೋನಾ ಸಾಂಕ್ರಾಮಿಕ ಪಿಡುಗಿನಿಂದ ಕಾರ್ಮಿಕರ ರಕ್ಷಣೆಗೆ ಹೆಚ್ಚಿನ ಒತ್ತು ನೀಡುವಂತೆ ಬೃಹತ್‌ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಜಗದೀಶ ಶೆಟ್ಟರ್‌ ಹೇಳಿದರು.

ಅವರು ಇಂದು ಬಿಡದಿಯ ಕೋಕೊ ಕೋಲಾ ಫ್ಯಾಕ್ಟರಿಗೆ ಭೇಟಿ ನೀಡಿ ಮಾತನಾಡಿದರು. ಕರೋನಾ ಸಾಂಕ್ರಾಮಿಕ ರೋಗ ಎಲ್ಲಾ ಕ್ಷೇತ್ರ ಹಾಗೂ ಜನರನ್ನು ಸಂಕಷ್ಟಕ್ಕೀಡು ಮಾಡಿದೆ. ದೇಶ ಹಾಗೂ ರಾಜ್ಯದ ಆರ್ಥಿಕತೆಯ ಗಾಲಿ ಮುಂದೆ ಸಾಗಲು ಕೈಗಾರಿಕಾ ಕ್ಷೇತ್ರದ ತನ್ನ ಕಾರ್ಯ ಆರಂಭ ಮಾಡಬೇಕಾಗಿರುವುದು ಅನಿವಾರ್ಯ. ಇದನ್ನು ಮನಗೊಂಡು ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ಲಾಕ್‌ ಡೌನ್‌ ಸಡಲಿಕೆ ಮಾಡಿದೆ. ಆದರೆ, ಕರೋನಾ ಮಹಾಮಾರಿಯ ತೊಂದರೆ ಇನ್ನು ತಪ್ಪಿಲ್ಲ. ಕರೋನಾ ಜೊತೆಯಲ್ಲಿಯೇ ಬದುಕಲು ನಾವು ಕಲಿತುಕೊಳ್ಳಬೇಕಾಗಿದೆ. ಸಾಮಾಜಿಕ ಅಂತರ, ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ಬಳಕೆಯನ್ನು ನಮ್ಮ ಬದುಕಿನ ಕರ್ತವ್ಯಗಳಾಗಿ ಸ್ವೀಕರಿಸಬೇಕು ಎಂದು ಹೇಳಿದರು.

ಕಾರ್ಮಿಕರ ಸುರಕ್ಷತೆಗೆ ಹೆಚ್ಚು ಒತ್ತು ನೀಡುವ ಮೂಲಕ ಕಾರ್ಖಾನೆಗಳು ತಮ್ಮ ಕೆಲಸವನ್ನು ಮುಂದುವರೆಸಿಕೊಂಡು ಹೋಗಬೇಕು. ಕಾರ್ಮಿಕರುಗಳಿಗೆ ಅಗತ್ಯವಿರುವ ಸುರಕ್ಷತಾ ಸೌಲಭ್ಯಗಳನ್ನು ಕಾರ್ಖಾನೆ ಆಡಳಿತ ಮಂಡಳಿ ಒದಗಿಸುವ ಮೂಲಕ ಕಾರ್ಖಾನೆಯ ಕೆಲಸಗಳು ಮುಂದುವರೆಸಿಕೊಂಡು ಹೋಗಬೇಕು ಎಂದರು. ಕೋಕೊ ಕೋಲಾ ಫ್ಯಾಕ್ಟರಿಯಲ್ಲಿ ಅಳವಡಿಸಿಕೊಂಡಿರುವ ಸುರಕ್ಷತೆಯ ಕ್ರಮಗಳನ್ನು ಪರಿಶೀಲಿಸಿದರು.

ಇದೇ ವೇಳೆ ಕೊಕೋ ಕೋಲಾ ಕಂಪನಿಯ ಆವರಣದಲ್ಲಿ ಮಾನ್ಯ ಸಚಿವರ ಭೇಟಿಯ ನೆನಪಿಗೆ ಗಿಡವನ್ನು ನೆಡಲಾಯಿತು.

ನೆರೆ ಅಧ್ಯಯನಕ್ಕೆ ಶೀಘ್ರ ತಂಡಗಳ ನೇಮಕ: ಡಿ.ಕೆ ಶಿವಕುಮಾರ್

ಬೆಂಗಳೂರು:ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಹೆಚ್ಚಾಗಿರುವ ಪರಿಣಾಮ ಪ್ರವಾಹ ಎದುರಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಹಾಗೂ ಜೀವ ಹಾನಿ ಸಂಭವಿಸಿದೆ. ಈ ಪರಿಸ್ಥಿತಿಯಲ್ಲಿ ನೆರೆ ಪ್ರದೇಶಗಳ ಅಧ್ಯಯನ ನಡೆಸಲು ಹಾಗೂ ಅಲ್ಲಿನ ಜನರಿಗೆ ಧೈರ್ಯ ತುಂಬಲು ಒಂದೆರಡು ದಿನಗಳಲ್ಲಿ ಕಾಂಗ್ರೆಸ್ ಪಕ್ಷದಿಂದ 4-5 ತಂಡಗಳನ್ನು ರಚಿಸಿ ವಿವಿಧ ಭಾಗಗಳಿಗೆ ಕಳುಹಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಹೆಚ್ಚಿನ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಿಸುತ್ತಿರುವ ಹುಣಸೂರಿನಲ್ಲಿ ಪರಿಸ್ಥಿತಿ ಅವಲೋಕಿಸಲು ಶನಿವಾರ ಹೊರಡುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು ಹೇಳಿದ್ದಿಷ್ಟು…

ಅತಿಯಾದ ಮಳೆಯಿಂದಾಗಿ, ಕಾವೇರಿ, ಕೃಷ್ಣ ಭಾಗದ ಜಿಲ್ಲೆಗಳು, ಕರಾವಳಿ, ಮಲೆನಾಡು ಜಿಲ್ಲೆಗಳು ಪ್ರವಾಹ ಎದುರಿಸುತ್ತಿದೆ. ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಹಾಗೂ ಜೀವ ಹಾನಿಗಳು ಸಂಭವಿಸಿದೆ. ಮುಖ್ಯಮಂತ್ರಿಗಳು ಈಗಾಗಲೇ ತಮ್ಮ ಸಚಿವರುಗಳಿಗೆ ಭೇಟಿ ನೀಡಲು ಸೂಚನೆ ನೀಡಿದ್ದಾರೆ ಹಾಗೂ ಈ ಜಿಲ್ಲೆಗಳಿಗೆ 5 ಕೋಟಿ ಅನುದಾನ ನೀಡುವುದಾಗಿ ಹೇಳಿರುವ ಬಗ್ಗೆ ಮಾಧ್ಯಮಗಳಿಂದ ತಿಳಿದಿದೆ. ನೆರೆ ಪೀಡಿತ ಪ್ರದೇಶಗಳಲ್ಲಿ ಅಧ್ಯಯನ ಮಾಡಿ, ವರದಿ ಸಿದ್ಧಪಡಿಸಲು ಶಾಸಕರು, ಮಾಜಿ ಶಾಸಕರು, ಮಾಜಿ ಮಂತ್ರಿಗಳು ಹಾಗೂ ಇತರೆ ಮುಖಂಡರುಗಳು ಒಳಗೊಂಡಂತೆ ತಂಡಗಳನ್ನು ರಚನೆ ಮಾಡಿ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಾಗುವುದು.

ಸರ್ಕಾರ ಈ ಹಿಂದೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಈಗಷ್ಟೇ ಟ್ಯಾಕ್ಸಿ ಮತ್ತು ಆಟೋ ಚಾಲಕರ ಸಂಘಗಳ ಪ್ರತಿನಿಧಿಗಳು ನನ್ನನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡರು. ಸರ್ಕಾರ 7.5 ಲಕ್ಷ ಚಾಲಕರಿಗೆ ಹಣ ನೀಡುವುದಾಗಿ ಘೋಷಿಸಿತ್ತು. ಈವರೆಗೂ 1.20 ಲಕ್ಷ ಚಾಲಕರಿಗೆ ಮಾತ್ರ ಕೊಟ್ಟು ದಾಖಲೆ ನೀಡಿ ಎಂದು ಹೇಳಿ ಮುಂದಕ್ಕೆ ಹಾಕುತ್ತಿದೆ. ಆಶಾ ಕಾರ್ಯಕರ್ತೆಯರಾಗಲಿ, ಸವಿತಾ ಸಮಾಜದವರಾಗಲಿ, ನೇಕಾರರಾಗಿರಲಿ ಯಾರಿಗೂ ಹಣ ತಲುಪಿಲ್ಲ. 11 ನೇಕಾರರು ಈವರೆಗೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಬರೀ 2 ಸಾವಿರ ಕೊಡುವುದಾಗಿ ಘೋಷಿಸಿದ ಸರ್ಕಾರ ಅದನ್ನು ಕೊಟ್ಟಿಲ್ಲ. ಇಂತಹ ವಿಚಾರಗಳು ಬೇಕಾದಷ್ಟಿವೆ. ನಮಗೆ ಈ ಸಮಯದಲ್ಲಿ ರಾಜಕಾರಣ ಮಾಡಲು ಇಷ್ಟವಿಲ್ಲ. ಆದರೆ ನಾವು ಸರ್ಕಾರವನ್ನು ಪ್ರಶ್ನೆಸಿದೇ ಬೇರೆ ವಿಧಿ ಇಲ್ಲ. ನಾವು ಜನರ ಧ್ವನಿಯಾಗಿ ಅವರ ಜತೆ ನಿಲ್ಲಬೇಕಿದ್ದು, ನಾನು ಆ ಕೆಲಸ ಮಾಡುತ್ತೇನೆ.

ಮುಖ್ಯಮಂತ್ರಿಗಳು ಆಸ್ಪತ್ರೆಯಲ್ಲಿದ್ದು, ಈ ಸಮಯದಲ್ಲಿ ನಾನು ಅವರಿಂದ ಏನನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ ಸರ್ಕಾರದ ಬೇರೆ ಮಂತ್ರಿಗಳು ಈ ಜವಾಬ್ದಾರಿ ನಿರ್ವಹಿಸಬೇಕಿತ್ತು. ಆದರೆ ಅವರ ಸಂಭ್ರಮವೇ ಬೇರೆ ಇದೆ. ಸಮಾಯದಲ್ಲಿ ಅಸೂಯೆ, ದ್ವೇಷವನ್ನು ಬಿತ್ತುವ, ಸಮಾಜ ಒಡೆಯುವ ಹೇಳಿಕೆ ನೀಡುವುದರಲ್ಲಿ ಅವರು ನಿರತರಾಗಿದ್ದಾರೆ.

ಈಗ ನಾನು ಮೈಸೂರು, ಮಡಿಕೇರಿ ಭಾಗಗಳಿಗೆ ಭೇಟಿ ನೀಡಲು ಹೊರಡುತ್ತಿದ್ದೇನೆ. ಜನರ ನೋವಿಗೆ ನೆರವಾಗಲು ಹೊರಟಿದ್ದೇನೆ.

ಜನರಿಗೆ ನ್ಯಾಯ ಸಿಗುವವರೆಗೂ ಬಿಡುವುದಿಲ್ಲ:

ಸರ್ಕಾರದ ಭ್ರಷ್ಟಾಚಾರದ ವಿರುದ್ಧದ ಉತ್ತರ ಕೊಡಿ, ಲೆಕ್ಕ ಕೊಡಿ ಆಂದೋಲನವನ್ನು ನಾವು ನಿಲ್ಲಿಸಿಲ್ಲ. ಜನರಿಗೆ ನ್ಯಾಯ ಸಿಗುವವರೆಗೂ ನಾವು ಇದನ್ನು ಮುಂದುವರಿಸುತ್ತೇವೆ. ಲೆಕ್ಕ ಕೊಡಿ ಅಂತಾ ಕೇಳಿದ್ದೇವೆ, ಉತ್ತರ ಕೊಡಿ ಅಂತಾ ಕೇಳಿದ್ದೇವೆ, ನ್ಯಾಯ ಕೊಡಿ ಅಂತಾ ಕೇಳುತ್ತೇವೆ.

ಮಂತ್ರಿಗಳು ವಿಶ್ರಾಂತಿ ತೆಗೆದುಕೊಳ್ಳಲಿ:
ಜಿಲ್ಲಾ ಉಸ್ತುವಾರಿ ಮಂತ್ರಿಗಳು ಪ್ರವಾಹದ ಸಮಯದಲ್ಲಿ ತಮ್ಮ ಜಿಲ್ಲೆಗೆ ಭೇಟಿ ನೀಡಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ‘ಅವರಿಗೆ ತೊಂದರೆ ಕೊಡಬೇಡಿ. ಅವರು ಮಲಗಿಕೊಂಡಿರಲಿ, ವಿಶ್ರಾಂತಿ ಪಡೆದುಕೊಂಡು ಆರೋಗ್ಯ ನೋಡಿಕೊಳ್ಳಲಿ’ ಎಂದರು.

ಅವರೇ ಮುಖ್ಯಮಂತ್ರಿಗಳಿಗೆ ಅಗೌರವ ತೋರುತ್ತಿದ್ದಾರೆ:

ಪ್ರವಾಹ ವಿಚಾರವಾಗಿ ನಮ್ಮ ಪಕ್ಷದ ಯಾವುದೇ ನಾಯಕರು ಹೇಳಿಕೆ ನೀಡಿಲ್ಲ. ನಾನು ಈಗಷ್ಟೇ ಮುಖ್ಯಮಂತ್ರಿಗಳು ಸೂಚನೆ ನೀಡಿರುವ ಬಗ್ಗೆ ಹಾಗೂ ಹೆಚ್ಚಿನ ಅನುದಾನ ನೀಡಿರುವ ಬಗೆಗಿನ ಹೇಳಿಕೆಯನ್ನು ತಿಳಿಸಿದ್ದೇನೆ. ಕುಂಬಳಕಾಯಿ ಕಳ್ಳ ಅಂದರೆ ಅವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ನಾನೇನಾದರೂ ಹೇಳಿಕೆ ನೀಡಿದ್ದೀನಾ? ಸಿದ್ದರಾಮಯ್ಯನವರು ಆಸ್ಪತ್ರೆಯಿಂದ ಹೇಳಿಕೆ ನೀಡಿದ್ದಾರಾ? ನಾನು ಕಾಂಗ್ರೆಸ್ ಪಕ್ಷದ ಧ್ವನಿ, ಸಿದ್ದರಾಮಯ್ಯನವರು ವಿರೋಧ ಪಕ್ಷದ ಧ್ವನಿ. ನಾವ್ಯಾರು ಮಾತನಾಡಿಲ್ಲ ಎಂದ ಮೇಲೆ ಅವರಿಗೇಕೆ ನೋವಾಗುತ್ತಿದೆ. ಅವರ ಪಕ್ಷದವರೇ ಮುಖ್ಯಮಂತ್ರಿಗಳಿಗೆ ಅಗೌರವ ತೋರುತ್ತಿದ್ದಾರೆ. ಯಾವುದೇ ನಾಯಕರು ಎಲ್ಲಿ ಮಾತನಾಡಿದರು ನನಗೆ ಮಾಹಿತಿ ಬರುತ್ತದೆ. ಅವರಿಗೆ ಆರೋಗ್ಯ ಸರಿ ಇಲ್ಲ ಎನಿಸುತ್ತದೆ, ಆಸ್ಪತ್ರೆಗೆ ತೋರಿಸುವುದು ಒಳ್ಳೆಯದು.

ಆನ್ಲೈನ್ ಮೂಲಕ ‘ಮನೆ ಬಾಗಿಲಿಗೆ ಮದ್ಯ’ ಪೂರೈಸುವ ಯೋಜನೆ ಕೈಬಿಡಿ: ಎಚ್ಡಿಕೆ ಒತ್ತಾಯ

ಬೆಂಗಳೂರು: ಸಂಪನ್ಮೂಲ ಸಂಗ್ರಹಣೆಯಲ್ಲಿ ಮುಗ್ಗರಿಸಿ ಬಿದ್ದಿರುವ ಅಬಕಾರಿ ಇಲಾಖೆ ಆನ್ಲೈನ್ ಮೂಲಕ ‘ಮನೆ ಬಾಗಿಲಿಗೆ ಮದ್ಯ’ ಪೂರೈಸುವ, ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಎಂಎಸ್ಐಎಲ್ ಮದ್ಯದಂಗಡಿ ತೆರೆಯುವ ಪ್ರಸ್ತಾವನೆ ಅಥವಾ ಚಿಂತನೆಯನ್ನು ಕೈಬಿಡುವಂತೆ ಎಚ್.ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಈ ಸಂಬಂಧ ಖಾಸಗಿ ಕಂಪನಿ ಜೊತೆ ಮಾತುಕತೆ ಹಾಗೂ ಅಬಕಾರಿ ಆಯುಕ್ತರು ಈ ಬಗ್ಗೆ ಒಲವು ಹೊಂದಿರುವುದು ನನ್ನ ಗಮನಕ್ಕೆ ಬಂದಿದೆ. ಸರ್ಕಾರ ಇಂತಹ ಅವಿವೇಕದ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ‌ ಎಂದು ಎಚ್ಚರಿಕೆ ನೀಡಿದ್ದಾರೆ.

ಕೊರೋನಾ ವೈರಸ್ ನಂತರ ಎದುರಾದ ಲಾಕ್ ಡೌನ್ ಪರಿಸ್ಥಿತಿಯಿಂದ ಜನತೆ ಆದಾಯ ಇಲ್ಲದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೈನಂದಿನ ಜೀವನ ನಡೆಸಲು ಹೆಣಗಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮನೆಬಾಗಿಲಿಗೆ ಮದ್ಯ ಪೂರೈಸುವ ಮನೆಹಾಳು ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಬೆಕ್ಕಿಗೆ ಚೆಲ್ಲಾಟವಾದರೆ ಇಲಿಗೆ ಪ್ರಾಣ ಸಂಕಟ ಎಂಬಂತೆ ಮದ್ಯದಂಗಡಿಗಳನ್ನು ಹೊಸದಾಗಿ ತೆರೆಯುವ ಇಲ್ಲ ಆನ್ಲೈನ್ ಮೂಲಕ ಮದ್ಯ ಪೂರೈಸುವ ಚಿಂತನೆ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟುಮಾಡಲಿದೆ. ತನ್ನ ಖಜಾನೆ ತುಂಬಿಸಿಕೊಳ್ಳಲು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವುದು ಸಲ್ಲ ಎಂದು ಸರಕಾರವನ್ನು ತರಾಟೆ ತೆಗೆದುಕೊಂಡರು.

ಇ.ಎಸ್.ಐ ಆಸ್ಪತ್ರೆಯಲ್ಲಿ ಹೆಚ್ಚಳಗೊಂಡ ಮರಣ ಪ್ರಮಾಣ ಪರಿಶೀಲಿಸಲು ಸಮಿತಿ ರಚನೆ: ಸಚಿವ ಡಾ.ಕೆ.ಸುಧಾಕರ್ ಸೂಚನೆ

ಬೆಂಗಳೂರು, ಆಗಸ್ಟ್ 8, ಶನಿವಾರ:ರಾಜಾಜಿನಗರದ ಇ.ಎಸ್. ಐ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳ ಮರಣ ಪ್ರಮಾಣ ಹೆಚ್ಚಳವಾಗಿದ್ದು, ಇದಕ್ಕೆ ಕಾರಣ ತಿಳಿಯಲು ಸಮಿತಿ ರಚಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೂಚನೆ ನೀಡಿದ್ದಾರೆ.

ಶನಿವಾರ ಸಚಿವ ಡಾ.ಕೆ.ಸುಧಾಕರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಕೊರೊನಾ ರೋಗಿಗಳಿಗೆ ದೊರೆಯುತ್ತಿರುವ ಚಿಕಿತ್ಸೆ, ಇತರೆ ಸೌಲಭ್ಯಗಳನ್ನು ಪರಿಶೀಲಿಸಿದರು.

ಆಸ್ಪತ್ರೆಯಲ್ಲಿ ಈವರೆಗೆ 421 ಕೊರೊನಾ ರೋಗಿಗಳು ದಾಖಲಾಗಿದ್ದಾರೆ. ಈವರೆಗೆ 54 ಕೊರೊನಾ ರೋಗಿಗಳು ಮೃತಪಟ್ಟಿದ್ದು, ಮರಣ ಪ್ರಮಾಣ ಶೇ.12.8 ರಷ್ಟಿದೆ ಎಂದು ವೈದ್ಯಾಧಿಕಾರಿಗಳು ಸಚಿವರಿಗೆ ವಿವರಿಸಿದರು. ಈ ರೀತಿ ಮರಣ ಹೆಚ್ಚಳವಾಗಲು ಕಾರಣ ಪತ್ತೆ ಮಾಡಬೇಕು. ಇದಕ್ಕಾಗಿ ಸಮಿತಿಯೊಂದನ್ನು ರಚಿಸಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಸೂಚಿಸಿದರು.

ಕ್ಯಾನ್ಸರ್ ಇರುವ ರೋಗಿಗಳು ಹೆಚ್ಚಾಗಿ ದಾಖಲಾಗುತ್ತಿದ್ದಾರೆ. ಇನ್ನೂ ಹಲವು ರೋಗಿಗಳು ತಡವಾಗಿ ಬಂದು ದಾಖಲಾಗಿದ್ದಾರೆ. ಹೀಗಾಗಿ ಮರಣ ಪ್ರಮಾಣ ಹೆಚ್ಚಿದೆ. ಮರಣಕ್ಕೆ ಸಂಬಂಧಿಸಿದಂತೆ ಆಡಿಟ್ ವರದಿ ರೂಪಿಸಲು ಆದೇಶಿಸಲಾಗಿದೆ. ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ವೈದ್ಯಾಧಿಕಾರಿಗಳು ಹೇಳಿದರು.

ಇದೇ ವೇಳೆ ಸಚಿವ ಡಾ.ಕೆ.ಸುಧಾಕರ್ ಅವರು ವೀಡಿಯೋ ಮೂಲಕ ರೋಗಿಗಳೊಂದಿಗೆ ಮಾತುಕತೆ ನಡೆಸಿ ಕ್ಷೇಮ ವಿಚಾರಿಸಿದರು.

ನಂತರ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, “ಇಎಸ್ ಐ ಆಸ್ಪತ್ರೆಯಲ್ಲಿ 494 ಹಾಸಿಗೆಗಳಿದ್ದು, ಸುಮಾರು 150 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡಲಾಗಿದೆ. ಇಬ್ಬರು ರೋಗಿಗಳ ಸ್ಥಿತಿ ಗಂಭೀರವಾಗಿದೆ. 10 ರೋಗಿಗಳು ಐಸಿಯುನಲ್ಲಿದ್ದು, ಈಗ ಚೇತರಿಸಿಕೊಂಡಿದ್ದಾರೆ. ಈ ಆಸ್ಪತ್ರೆಯಲ್ಲಿ ಮನೆಯ ಆರೈಕೆ ದೊರೆಯುತ್ತಿದೆ ಎಂದು ಅವರು ಶ್ಲಾಘಿಸಿದ್ದಾರೆ. ಪಿಜಿ ವಿದ್ಯಾರ್ಥಿಗಳು ಮತ್ತು ವೈದ್ಯರು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ರೀತಿ ಮತ್ತಷ್ಟು ಆಸ್ಪತ್ರೆಗಳಿಗೆ ಭೇಟಿ ನೀಡಿ ರೋಗಿಗಳಲ್ಲಿ ವಿಶ್ವಾಸ ಮೂಡಿಸಬೇಕಿದೆ’’ ಎಂದರು.

ಇತರೆ ಅಂಶಗಳು:

*ಕೊರೊನಾ ಸೋಂಕಿತರಾಗಿದ್ದ 42 ಗರ್ಭಿಣಿಯರಿಗೆ ಇಎಸ್ ಐ ನಲ್ಲಿ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ. ಆಸ್ಪತ್ರೆಯಲ್ಲಿ ಆರ್ ಟಿಪಿಸಿಆರ್ ಲ್ಯಾಬ್ ನಿರ್ಮಿಸಿದ್ದು, ಮುಂದಿನ ವಾರದಿಂದ ಕಾರ್ಯಾರಂಭಿಸಲಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

*ಕೋವಿಡ್ ಆರೈಕೆ ಕೇಂದ್ರಗಳಲ್ಲಿ 1,500 ಹಾಸಿಗೆಗಳು ಖಾಲಿ ಇವೆ. ಹಾಸಿಗೆ ಸಾಕಷ್ಟು ಲಭ್ಯವಿದೆ. ಪ್ರತಿ ಜಿಲ್ಲೆಯಲ್ಲಿ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಹಾಸಿಗೆ ಸಾಮರ್ಥ್ಯ ಹೆಚ್ಚಿಸಲಾಗಿದೆ.

*ಕೋವಿಡ್ ಪಿಡುಗು ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡ ನಿಲುವುಗಳನ್ನು ದೇಶದ ಶೇ.91 ರಷ್ಟು ಜನರು ಒಪ್ಪಿದ್ದಾರೆ ಎಂದು ಸಮೀಕ್ಷೆಯೊಂದರಲ್ಲಿ ತಿಳಿದುಬಂದಿದೆ. ಇದು ತಪ್ಪು ಎಂದಾದಲ್ಲಿ, ಅಷ್ಟೂ ಜನರ ಭಾವನೆಗಳಿಗೆ ವಿರುದ್ಧವಾಗಿ ಹೇಳಿದಂತಾಗುತ್ತದೆ.

ಪ್ರವಾಹ ಬಾದಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಡಿಸಿಎಂ ಗೋವಿಂದ ಕಾರಜೋಳ

ಬಾಗಲಕೋಟೆ: ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ಅತಿವೃಷ್ಟಿ‌ ಪ್ರವಾಹ ಹಾನಿ, ಪರಿಹಾರ ಕ್ರಮಗಳ ಕುರಿತು ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ, ಸಂಭವಿಸಬಹುದಾದ ಹೆಚ್ವು ಹಾನಿಯನ್ನು ತಡೆಗಟ್ಟಲು ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸನ್ನದ್ಧ ವಾಗಬೇಕು ಎಂದು ಸೂಚಿಸಿದರು.

ನಂತರ ಮಾಚಕನೂರು ಸೇರಿದಂತೆ ಇತರ ಪ್ರವಾಹ ಭಾದಿತ‌ ಗ್ರಾಮಗಳಿಗೆ ಭೇಟಿ ನೀಡಿದ ಡಿಸಿಎಂ ಪರಿಶೀಲಿಸಿ ಜಿಲ್ಲಾಡಳಿತ ಕ್ಕೆ ನಿರ್ದೇಶಿಸಿದರು. ಸಂದರ್ಭದಲ್ಲಿ ಸಂಸದರಾದ ಶ್ರೀ‌ ಪಿ.ಸಿ.ಗದ್ದಿಗೌಡರ್ , ಶಾಸಕರಾದ ಡಾ.ವೀರಣ್ಣ ಚರಂತಿಮಠ ಜಿಲ್ಲಾಧಿಕಾರಿಗಳಾದ ಕ್ಯಾಪ್ಟನ್ ರಾಜೇಂದ್ರ, ಎಸ್ಪಿ ಶ್ರೀ ಲೋಕೇಶ್ ಜಗಲಾಸ್ಕರ್, ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.