ನೆರೆಯಲ್ಲೂ ರಾಜಕೀಯ: ಪ್ರತಿಪಕ್ಷಕ್ಕೆ ಡಿಸಿಎಂ ತರಾಟೆ

ಬೆಂಗಳೂರು: ಅತಿವೃಷ್ಟಿ ಮತ್ತು ನೆರೆಯಂತಹ ಪ್ರಕೃತಿ ವಿಕೋಪದ ವೇಳೆಯಲ್ಲೂ ಪ್ರತಿಪಕ್ಷ ನಾಯಕರು ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಸರಕಾರಕ್ಕೆ ರಚನಾತ್ಮಕವಾಗಿ ಸಲಹೆ ನೀಡುವುದು ಬಿಟ್ಟು ಕೇವಲ ರಾಜಕೀಯ ಮಾಡಿಕೊಂಡು ಕಾಲಹರಣ ಮಾಡುವುದು ಎಷ್ಟು ಸರಿ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಪುಣ್ಯತಿಥಿ ನಿಮಿತ್ತ ವಿಧಾನಸೌಧ ಬಳಿ ಅವರ ಪ್ರತಿಮೆಗೆ ಗೌರವಾರ್ಪಣೆ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಡಿಸಿಎಂ, ಇಷ್ಟು ದಿನ ಕೋವಿಡ್ ಇಟ್ಟುಕೊಂಡು ಟೀಕಿಸಿದರು. ಈಗ ನೆರೆ-ಪ್ರವಾಹ ಸಿಕ್ಕಿದೆ. ಒಟ್ಟಿನಲ್ಲಿ ಯಾವುದಾದರೊಂದು ವಿಷಯ ಇಟ್ಟುಕೊಂಡು ಸರಕಾರವನ್ನು ’ವಿರೋಧ’ ಮಾಡುವುದೇ ವಿರೋಧ ಪಕ್ಷದ ಕೆಲಸವಾಗಿದೆ ಎಂದು ಲೇವಡಿ ಮಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷ ರಚನಾತ್ಮಕವಾಗಿ ಕೆಲಸ ಮಾಡಬೇಕು. ತುರ್ತು ಸಂದರ್ಭಗಳಲ್ಲಿ ಸರಕಾರಕ್ಕೆ ಹೆಗಲುಕೊಟ್ಟು ಕೆಲಸ ಮಾಡಬೇಕು. ಹೊಣೆಗಾರಿಕೆಯಿಂದ ಕೆಲಸ ಮಾಡಿ ಲೋಪವಿದ್ದರೆ ತೋರಿಸಬೇಕು ಎಂದು ಡಿಸಿಎಂ ಹೇಳಿದರು.

ಕೋವಿಡ್ ನಂತರ ಬಂದಿರುವ ಪ್ರವಾಹ ಪರಿಸ್ಥಿತಿಯನ್ನು ಸರಕಾರ ಸಮರ್ಥವಾಗಿ ಎದುರಿಸುತ್ತಿದೆ. ಅಪಾಯದ ಸ್ಥಳಗಳಿಂದ ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಸಂತ್ರಸ್ಥರಿಗೆ 10 ಸಾವಿರ ರೂ. ಹಾಗೂ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ನೆರವು ಕೊಡಲಾಗುವುದು. ಕಳೆದ ವರ್ಷ ಉತ್ತಕ ಕರ್ನಾಟಕ ಪ್ರದೇಶದ ನೆರೆ ಸಂತ್ರಸ್ಥರಿಗೆ ನೆರವಾದ ರೀತಿಯಲ್ಲೇ ಸಕಲ ರೀತಿಯ ಸಹಾಯ ಹಸ್ತ ಚಾಚಲಾಗುವುದು. ಕೇಂದ್ರ ಸರಕಾರಕ್ಕೂ ಮನವಿ ಸಲ್ಲಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಉಳಿದಂತೆ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಎಲ್ಲ ಪರಿಸ್ಥಿತಿಯನ್ನು ನೋಡಿಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತಗಳು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿವೆ. ಸಂಕಷ್ಟಕ್ಕೆ ಈಡಾಗಿರುವ ಎಲ್ಲ ಜಿಲ್ಲೆಗಳಿಗೂ ಅಗತ್ಯ ಸಂಪನ್ಮೂಲಗಳನ್ನು, ಸಾಮಗ್ರಿಗಳನ್ನು ಒದಗಿಸಲಾಗಿದೆ. ಜತೆಗೆ, ವೈದ್ಯಕೀಯ ನೆರವನ್ನು ನೀಡಲಾಗಿದೆ. ಎಷ್ಟು ರೀತಿಯಲ್ಲಿ ನೆರೆ ಸಂತ್ರಸ್ಥರಿಗೆ ನೆರವಾಗಬೇಕೋ ಅಷ್ಟೆಲ್ಲ ರೀತಿಯಲ್ಲಿ ಸಹಾಯ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕೋವಿಡ್ ವಾರಿಯರ್ಸ್’ಗೆ ಕಿವಿಮಾತು:
ರಾಜ್ಯವನ್ನು ತೀವ್ರವಾಗಿ ಕಾಡುತ್ತಿರುವ ವೈರಾಣುವನ್ನು ಹತ್ತಿಕ್ಕಲು ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಪಾತ್ರ ದೊಡ್ಡದು. ಹೀಗಾಗಿ ಕರ್ತವ್ಯಕ್ಕೆ ಗೈರು ಹಾಜರಾಗಿರುವವರು ಕೂಡಲೇ ಹಾಜರಾಗಬೇಕು. ರಾಜ್ಯವೇ ಸಂಕಷ್ಟದಲ್ಲಿರುವ ಹೊತ್ತಿನಲ್ಲಿ ಹೀಗೆ ಕರ್ತವ್ಯದಿಂದ ಪಲಾಯನ ಮಾಡುವುದು ಸರಿಯಲ್ಲ ಎಂದು ಉಪ ಮುಖ್ಯಮಂತ್ರಿ ಕಿವಿಮಾತು ಹೇಳಿದರು.

ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಕೊರೋನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರೂ ತಮಗೆ ವಹಿಸಿರುವ ಕೆಲಸವನ್ನು ಮಾಡಲೇಬೇಕು. ಅವರಿಗೆ ಅಗತ್ಯವಾಗಿ ಬೇಕಿರುವ ಎಲ್ಲ ಸುರಕ್ಷತಾ ಸಾಧನಗಳನ್ನು ಈಗಾಗಲೇ ಸರಕಾರ ಒದಗಿಸಿದೆ. ಜತೆಗೆ ಕೋವಿಡ್ ಭತ್ಯೆ, ವಿಮೆ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸರಕಾರದ ಕೆಲಸ ದೇವರ ಕೆಲಸ ಎನ್ನುವುದು ನಮ್ಮ ಧ್ಯೇಯವಾಕ್ಯ. ಇದಕ್ಕೆ ಮನ್ನಣೆ ಕೊಟ್ಟು ಕೋಡಲೇ ಗೈರಾದವರೆಲ್ಲರೂ ಕೆಲಸಕ್ಕೆ ಹಾಜರಾಗಬೇಕು. ತಪ್ಪಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿಸಿಎಂ ಎಚ್ಚರಿಕೆ ನೀಡಿದರು.

ಆ. 10 ರ ಭಾರತ ರಕ್ಷಿಸಿ ಆಂದೋಲನಕ್ಕೆ ಡಿ.ಕೆ. ಶಿವಕುಮಾರ್ ಬೆಂಬಲ

ಬೆಂಗಳೂರು, ಆ. 7: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು (JCTU) ಇದೇ ಆ. 10 ರಂದು ಹಮ್ಮಿಕೊಂಡಿರುವ ಭಾರತ ರಕ್ಷಿಸಿ ಆಂದೋಲನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಇಡೀ ಜಗತ್ತನ್ನೇ ನಡುಗಿಸಿರುವ ಕೋವಿಡ್-19 ಹಾಗೂ ತತ್ಪರಿಣಾಮದ ಲಾಕ್ ಡೌನ್ ಹೇರಿಕೆಯಿಂದ ಕಾರ್ಮಿಕ ವರ್ಗವು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿದೆ. ದೊಡ್ಡ ಪ್ರಮಾಣದ ಉದ್ಯೋಗ ನಷ್ಟವಾಗಿದೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ದುಡಿಯುವ ವರ್ಗದ ನೆರವಿಗೆ ಬರಬೇಕಿದ್ದ ಕೇಂದ್ರ ಸರಕಾರ ಹಾಗೂ ಬಿಜೆಪಿ ಆಳ್ವಿಕೆಯಿರುವ ರಾಜ್ಯ ಸರಕಾರಗಳು ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳ ಮೂಲಕ ಈ ವರ್ಗದ ಬದುಕನ್ನು ಮತ್ತಷ್ಟು ಬರ್ಬರವಾಗಿಸಿವೆ ಎಂದು ಡಿ.ಕೆ. ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ಟೀಕಿಸಿದ್ದಾರೆ.

ಕರ್ನಾಟಕ ಸರಕಾರವು ಇತ್ತೀಚೆಗೆ ತಂದಿರುವ ಕೈಗಾರಿಕೆ ಕಾಯಿದೆ ತಿದ್ದುಪಡಿಯಿಂದಾಗಿ ಶೇಕಡಾ 80 ಕ್ಕೂ ಹೆಚ್ಚು ಉದ್ದಿಮೆಗಳ ಮಾಲೀಕರಿಗೆ ಕೆಲಸಗಾರರನ್ನು ಮನಸೋ ಇಚ್ಛೆ ಬಳಸಿಕೊಂಡು ಬಿಸಾಡುವಂತಹ ಸ್ವಾತಂತ್ರ್ಯವನ್ನು ಕೊಟ್ಟಿದೆ. ಇದರಿಂದ ರಾಜ್ಯದ ಶೇಕಡಾ 50 ಕ್ಕೂ ಹೆಚ್ಚು ಭಾಗದ ಸಂಘಟಿತ ವಲಯದ ಕಾರ್ಮಿಕರು ಕೆಲಸದ ಅವಧಿ, ಓವರ್ ಟೈಮ್ ಭತ್ಯೆ, ಸುರಕ್ಷತೆ ಹಾಗೂ ಗಳಿಕೆ ರಜೆ ಮತ್ತಿತರ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಜತೆಗೆ 417 ರುಪಾಯಿ ವ್ಯತ್ಯಸ್ಥ ತುಟ್ಟಿಭತ್ಯೆಯನ್ನು (Variable Dearness Allownance) ಒಂದು ವರ್ಷ ಮುಂದೂಡುವ ಮೂಲಕ ಮಾಸಿಕ 11,000 ರುಪಾಯಿ ವರಮಾನದ ಅತ್ಯಂತ ದುರ್ಬಲ ವರ್ಗದ ದುಡಿಯುವ ಜನರ ಹೊಟ್ಟೆಯ ಮೇಲೆ ಗದಾಪ್ರಹಾರ ಮಾಡಿದೆ. ಮಾದರಿ ಸ್ಥಾಯಿ ಆದೇಶವನ್ನು ತಿದ್ದುಪಡಿ ಮಾಡಿ ನಿಗದಿತ ಕಾಲಾವಧಿ ಕೆಲಸ ಜಾರಿ ಮಾಡುವ ಮೂಲಕ ಶಾಶ್ವತ ಕೆಲಸದ ಪರಿಕಲ್ಪನೆಯನ್ನೇ ನಾಶ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

ಕಾರ್ಖಾನೆಗಳ ಕಾಯಿದೆ, ಕೈಗಾರಿಕಾ ವಿವಾದ ಕಾಯಿದೆ, ಗುತ್ತಿಗೆ ಕಾರ್ಮಿಕರ ಕಾಯಿದೆಗಳಿಗೆ ತಂದಿರುವ ತಿದ್ದುಪಡಿಯನ್ನು ತಕ್ಷಣ ರದ್ದುಪಡಿಸಬೇಕು. ನಿಗದಿತ ಅವಧಿ ಕೆಲಸ ಪದ್ಧತಿ ಅನುಷ್ಠಾನಕ್ಕೆ ತರಲಾಗಿರುವ ತಿದ್ದುಪಡಿ ಹಾಗೂ ವ್ಯತ್ಯಸ್ಥ ತುಟ್ಟಿಭತ್ಯೆ ಮುಂದೂಡಿಕೆ ಆದೇಶ ಹಿಂಪಡೆಯಬೇಕು. ಭೂಸುಧಾರಣೆ, ಎಪಿಎಂಸಿ ಕಾಯಿದೆ, ಅಗತ್ಯ ವಸ್ತುಗಳ ಕಾಯಿದೆಗಳಿಗೆ ತಿದ್ದುಪಡಿ ತಂದಿರುವ ಸುಗ್ರೀವಾಜ್ಞೆಗಳನ್ನು ವಾಪಸ್ಸು ಪಡೆಯಬೇಕು. ಮುಂದಿನ 6 ತಿಂಗಳ ಅವಧಿಗೆ ಆದಾಯ ತೆರಿಗೆ ಪಾವತಿಸದ ಕುಟುಂಬಗಳಿಗೆ ಮಾಸಿಕ 7500 ರುಪಾಯಿ ಪಾವತಿಸಬೇಕು ಎಂದು ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.

ಅಸಂಘಟಿತ ವಲಯದ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯಿದೆ 2008 ರ ಅಡಿಯಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸರಕಾರವು 10,000 ಕೋಟಿ ರುಪಾಯಿಗಳ ವರ್ತುಲ ನಿಧಿಯನ್ನು ಸ್ಥಾಪಿಸಬೇಕು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸಾರ್ವತ್ರಿಕ ಮೂಲ ವರಮಾನ ಯೋಜನೆ, ನಿರುದ್ಯೋಗ ಭತ್ಯೆ, ನಗರ ಪ್ರದೇಶ ಉದ್ಯೋಗ ಖಾತ್ರಿ ಯೋಜನೆ ಮತ್ತಿತರ ವಿಚಾರಗಳ ಬಗ್ಗೆ ಚರ್ಚಿಸಲು ಸಂಸತ್ ಹಾಗೂ ರಾಜ್ಯ ವಿಧಾನ ಮಂಡಲ ಅಧಿವೇಶನ ಕರೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದರ ಜತೆಗೆ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪ್ರಗತಿ ವಿರೋಧಿ, ಕಾರ್ಮಿಕ ವಿರೋಧಿ ಹಾಗೂ ರೈತ ವಿರೋಧಿ ಕ್ರಮಗಳನ್ನು ಖಂಡಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ಸಹಭಾಗಿ ಸಂಘಟನೆಗಳ ಪರವಾಗಿ ಇದೇ 10 ರಂದು ಹಮ್ಮಿಕೊಂಡಿರುವ ರಾಜ್ಯಾದ್ಯಂತದ ಭಾರತ ರಕ್ಷಿಸಿ ಆಂದೋಲನವನ್ನು ತಾವು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಶಿವಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆ.10 ಕ್ಕೆ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ: ಸುರೇಶ್ ಕುಮಾರ್

ಬೆಂಗಳೂರು: ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶಗಳನ್ನು ಆಗಸ್ಟ್ 10 ರಂದು ಅಪರಾಹ್ನ 3.00 ಗಂಟೆಗೆ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್‌ಕುಮಾರ್ ಹೇಳಿದ್ದಾರೆ.

ಜೂನ್ 25 ರಿಂದ ಜುಲೈ 3 ರವರೆಗೆ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆದಿದೆ ಅಂದಾಜು 7.5 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.ಕೋವಿಡ್ ಆತಂಕದಲ್ಲಿಯೂ ಶಿಕ್ಷಣ ಇಲಾಖೆ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ.ಕೋವಿಡ್ ಸೋಂಕು ದೃಢಪಟ್ಟ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು.ಆತಂಕದಿಂದಲೇ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಪದೇ ಪದೇ ಮುಂದೂಡಿಕೆಯಾಗಿ ಪರೀಕ್ಷೆ ನಡೆಯುವುದೋ ಇಲ್ಲವಾ ಎನ್ನುವ ಗೊಂದಲದ ನಡುವೆ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಆಗಸ್ಟ್ 10 ರ ಮಧ್ಯಾಹ್ನ ವಿದ್ಯಾರ್ಥಿಗಳ ಭವಿಷ್ಯ ಹೊರಬೀಳಲಿದೆ. ಪರೀಕ್ಷೆ ಬರೆದಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಸುದ್ದಿಲೋಕ ಪರವಾಗಿ ಆಲ್ ದಿ ಬೆಸ್ಟ್.

ಗುರುಕುಲ ಶಿಕ್ಷಣ ನೆನಪಿಸುವ ವಿದ್ಯಾಗಮ: ಸುರೇಶ್ ಕುಮಾರ್

ಬೆಂಗಳೂರು: ಕೋವಿಡ್ ಪ್ರಸರಣದ ಹಿನ್ನೆಲೆಯಲ್ಲಿ ಎಲ್ಲ ಸ್ತರದ ವಿದ್ಯಾರ್ಥಿಗಳನ್ನು ಪಾಠಪ್ರವಚನಗಳತ್ತ ಸೆಳೆಯಲು ಜಾರಿಗೆ ತಂದಿರುವ ‘ವಿದ್ಯಾಗಮʼ ಯೋಜನೆ ಗುರುಕುಲ ಮಾದರಿ ಶಾಲೆಗಳನ್ನು ನೆನಪಿಸುವಂತದ್ದು, ಈ ಮೂಲಕ ನಮ್ಮ ಸಂಸ್ಕೃತಿಯ ಪುನರುತ್ಥಾನವಾದಂತಾಗಿದೆ ಎಂದಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಈ ಯೋಜನೆ ಮೂಲಕ ನಮ್ಮ ಕಟ್ಟಕಡೆ ಹಳ್ಳಿಯ ಮಕ್ಕಳಿಗೂ ತಲುಪುವಂತೆ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕೆಂದು ಹೇಳಿದ್ದಾರೆ.

ಶುಕ್ರವಾರ ಸಾರ್ವಜನಿಕ ಶಿಕ್ಷಣ ಆಯುಕ್ತರ ಕಚೇರಿಯಲ್ಲಿ ವಿದ್ಯಾಗಮ ಯೋಜನೆ ಕುರಿತಂತೆ ರಾಜ್ಯದ ಎಲ್ಲ ಡಿಡಿಪಿಐ, ಡಯಟ್ ಪ್ರಾಚಾರ್ಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಮಾರ್ಗದರ್ಶನ ನೀಡಿ, ಯೋಜನೆಯ ರೂಪುರೇಷೆಗಳನ್ನು ವಿವರಿಸಿ ಈ ಯೋಜನೆಯ ಯಶಸ್ಸಿಗೆ ಪ್ರತಿಯೊಬ್ಬರೂ ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಳ್ಳಬೇಕು ಎಂದರು.

ಶಾಲೆಗಳು ಆರಂಭವಾಗಬೇಕೆಂಬ ಒತ್ತಡ ಎಲ್ಲೆಡೆಯಿಂದ ಕೇಳಿಬರುತ್ತಿದೆ. ಆದರೆ ನಾವು ಕೇಂದ್ರ ಸರ್ಕಾರದ ಮಾರ್ಗಸೂಚಿ ಕಾಯುತ್ತಿದ್ದೇವೆ. ಈ ಮಧ್ಯೆ ನಮ್ಮ ಮಕ್ಕಳು ಕಲಿಕೆಯಿಂದ ಹಿಂದುಳಿಯಬಾರದೆಂಬ ಹಿನ್ನೆಲೆಯಲ್ಲಿ ವಿದ್ಯಾಗಮ ಯೋಜನೆಯಿಂದ ಮಕ್ಕಳನ್ನು ತಲುಪುವ ಪ್ರಯತ್ನ ಮಾಡಿದ್ದು, ಇದು ಇಡೀ ದೇಶದಲ್ಲಿಯೇ ಪ್ರಥಮವಾಗಿದೆ. ನಮ್ಮ ನಾಡಿನ ಯಾವುದೇ ಕೊನೆಯ ವಿದ್ಯಾರ್ಥಿಯೂ ಕಲಿಕೆಯ ವಿಳಂಬದ ತೊಂದರೆಗೆ ಸಿಕ್ಕಿಕೊಳ್ಳಬಾರದೆಂಬುದು ವಿದ್ಯಾಗಮದ ಪ್ರಮುಖ ಉದ್ದೇಶವಾಗಿದೆ ಎಂದರು.

ಕೋವಿಡ್ ಪ್ರಸರಣದ ಈ ಸಮಯದಲ್ಲಿ ಹೆಚ್ಚು ದಿನ ಮಕ್ಕಳು ಕಲಿಕೆಯಿಂದ ಹಿಂದುಳಿಯಬಾರದೆಂಬ ಉದ್ದೇಶದಿಂದ ಎಲ್ಲ ಮಕ್ಕಳಿಗೂ ತಂತ್ರಜ್ಞಾನಾಧಾರಿತ ಶಿಕ್ಷಣ ದೊರೆಯುವಂತೆ ಮಾಡುವುದು ಮತ್ತು ಶಿಕ್ಷಕರು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುವ ಮೂಲಕ ಮಕ್ಕಳ ಮನೋಸ್ಥೈರ್ಯವನ್ನು ಹೆಚ್ಚಿಸುವುದು ವಿದ್ಯಾಗಮ ಯೋಜನೆಯ ಉದ್ದೇಶವಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು.

ಈ ಸಂದರ್ಭದಲ್ಲಿ ಪ್ರಮುಖವಾಗಿ ಸಾಮಾಜಿಕ ಅಂತರ, ಫೇಸ್ ಮಾಸ್ಕ್ ಮತ್ತು ಕೈ ಸ್ವಚ್ಛತೆ ಸೇರಿದಂತೆ ಕೋವಿಡ್ ಸಂದರ್ಭದ ನಿಯಮಗಳನ್ನು ಸರಿಯಾಗಿ ಪಾಲಿಸುವುದು ಎಲ್ಲರ ಕರ್ತವ್ಯ. ಈ ಕರ್ತವ್ಯಗಳ ಮೂಲಕ ಶಾಲೆ ಮುಂದೆ ಆರಂಭವಾಗುವ ತನಕ ವಿದ್ಯಾಗಮ ಯೋಜನೆಯ ಯಶಸ್ಸಿನಲ್ಲಿ ತೊಡಗಿಸಿಕೊಂಡು ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದ ಸಚಿವರು, ಕಲಿಕೆ ವಿಳಂಬವಾದರೆ ಮಕ್ಕಳು ಶಾಲೆಯಿಂದ ಡ್ರಾಪ್ ಔಟ್, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದಕ್ಕೆ ನಾವು ಅವಕಾಶ ಕೊಡಬಾರದೆಂಬ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿರುವ ವಿದ್ಯಾಗಮ ಯೋಜನೆ ನಮ್ಮ ಗುರುಕುಲ ಮಾದರಿಯನ್ನು ನೆನಪಿಸುವಂತಾಗಬೇಕು ಎಂದರು.

ಫೋನ್ನಲ್ಲಿ, ಟಿವಿಗಳಲ್ಲಿ, ಪಡಸಾಲೆಗಳಲ್ಲಿ, ಶಾಲಾವರಣಗಳಲ್ಲಿ, ಮರಗಳ ನೆರಳಿನಲ್ಲಿ ನಡೆಸಬಹುದಾದ ಈ ತರಗತಿಗಳಿಗೆ ಅನುಕೂಲವಾಗುವಂತೆ ಶಿಕ್ಷಕರು ಕಲಿಕಾ ಸಾಮಗ್ರಿಗಳನ್ನು ರೂಪಿಸಿಕೊಳ್ಳಬೇಕು. ನಮ್ಮ ಇಲಾಖೆಗಾಗಿಯೇ ಪ್ರತ್ಯೇಕ ಎರಡು ದೂರದರ್ಶನ ಚಾನೆಲ್ ಗಳನ್ನು ಕೇಳಿದ್ದು, ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರೆದಿದೆ ಎಂದೂ ಸುರೇಶ್ ಕುಮಾರ್ ತಿಳಿಸಿದರು.

ಯಾವುದೇ ಪ್ರಮಾಣ ಪತ್ರ ಕೇಳದೆ ದಾಖಲಾತಿ:

ಶಾಲೆಗೆ ಈ ವೇಳೆಗೆ ರಾಜ್ಯದಲ್ಲಿ 10 ಲಕ್ಷ ವಿದ್ಯಾರ್ಥಿಗಳು ದಾಖಲಾಗಬೇಕಿತ್ತು. ಆದರೆ ಕೊರೋನಾದಿಂದಾಗಿ ಅದು ಸಾಧ್ಯವಾಗಿಲ್ಲ. ಹಾಗಾಗಿ ಯಾವುದೇ ದಾಖಲೆಗಳನ್ನು ಅಪೇಕ್ಷಿಸದೇ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳಬೇಕು. ಯಾವ ದಿನವೇ ಆಗಲಿ ಶಾಲೆಗೆ ದಾಖಲು ಅಪೇಕ್ಷಿಸಿ ಬರುವರನ್ನೂ ಸಹ ದಾಖಲಿಸಿಕೊಳ್ಳಬೇಕು. ಪೋಷಕರು ಹೇಳುವ ಮಾತಿನ ಮೂಲಕವೇ ಮಕ್ಕಳನ್ನು ದಾಖಲಿಸಿಕೊಳ್ಳಬೇಕು. ಆ. 10 ರಿಂದ 15 ರವರೆಗೆ ಮಕ್ಕಳ ಶಾಲಾ ದಾಖಲಾತಿ ಅಂದೋಲನದ ಮಾದರಿಯಲ್ಲಿ ನಡೆಯಬೇಕು. ಆ ನಂತರವೂ ಮಕ್ಕಳನ್ನು ದಾಖಲು ಮಾಡಿಕೊಳ್ಳುವ ಪ್ರಕ್ರಿಯೆ ಮುಂದುವರೆಸಬೇಕು ಎಂದು ಸುರೇಶ್ ಕುಮಾರ್ ತಿಳಿಸಿದರು.

ಈಗಾಗಲೇ ಶಾಲಾ ಮಕ್ಕಳಿಗೆ ಪುಸ್ತಕ, ನೋಟ್ ಬುಕ್ ಗಳನ್ನು ಒದಗಿಸಲಾಗಿದೆ. ಇನ್ನೂ ಅಗತ್ಯವಿರುವವರು ತಮ್ಮ ವ್ಯಾಪ್ತಿಯ ಬಿಇಒಗಳನ್ನು ಸಂಪರ್ಕಿಸಿ ಪುಸ್ತಕಗಳನ್ನು ಪಡೆಯಬಹುದಾಗಿದೆ ಎಂದು ಅವರು ಶಿಕ್ಷಕರಿಗೆ ಸಲಹೆ ನೀಡಿದರು. ಪುಸ್ತಕ ತಲುಪದ ಕಡೆಗಳಿಗೆ ತಕ್ಷಣವೇ ಮಕ್ಕಳ ಮನೆಗೆ ಪುಸ್ತಕ ತಲುಪಿಸಲು ಕ್ರಮ ಕೈಗೊಳ್ಳಬೇಕೆಂದು ಬಿಇಒಗಳಿಗೆ ಸಚಿವರು ಸೂಚನೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜಿ.ಜಗದೀಶ್ ವಿದ್ಯಾಗಮ ಯೋಜನೆಯ ಯಾವ ರೀತಿಯಲ್ಲಿ ಕೈಗೊಳ್ಳಬೇಕು, ಅದಕ್ಕಾಗಿ ಅನುಸರಿಸಬೇಕಾದ ನಿಯಮಗಳು, ಸಿದ್ಧತೆಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿನ ಸಮಸ್ಯೆಗಳನ್ನು ನಿವೇದಿಸಿ ಪರಿಹಾರಗಳನ್ನು ಕಂಡುಕೊಂಡರು.

ಎಸ್ಎಸ್ಎ ರಾಜ್ಯ ಯೋಜನಾಧಿಕಾರಿ ದೀಪಾ ಚೋಳನ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

ವಿಧಾನಪರಿಷತ್ ಸದಸ್ಯರೊಂದಿಗೆ ಸಂವಾದ:

ಶುಕ್ರವಾರ ಬೆಳಗ್ಗೆ ಸರ್ವಶಿಕ್ಷಣ ಅಭಿಯಾನ ಕಚೇರಿಯಲ್ಲಿ ವಿದ್ಯಾಗಮ ಯೋಜನೆ ಅನುಷ್ಠಾನ ಕುರಿತಂತೆ ರಾಜ್ಯದ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯರೊಂದಿಗೆ ವೆಬಿನಾರ್ ಮೂಲಕ ಸಚಿವ ಸುರೇಶ್ ಕುಮಾರ್ ಸಂವಾದ ನಡೆಸಿದರು.

ಗಡಿಭಾಗದ ನೀರಿನ ಸಮಸ್ಯೆ ಪರಿಹರಿಸಲು ಆಂಧ್ರಪ್ರದೇಶದೊಂದಿಗೆ ನೀರು ಹಂಚಿಕೆ: ಸಚಿವ ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರ, ಆಗಸ್ಟ್ 7,ಚಿಕ್ಕಬಳ್ಳಾಪುರದ ಗಡಿಭಾಗದಲ್ಲಿ ಕುಡಿಯುವ ನೀರಿನ ಕೊರತೆ ನೀಗಿಸಲು ಆಂಧ್ರಪ್ರದೇಶದಿಂದ ನೀರು ಪಡೆಯುವ ಕುರಿತು ಚರ್ಚೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಗರಸಭೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 7.29 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, “ಚಿಕ್ಕಬಳ್ಳಾಪುರ ತಾಲೂಕಿನ ನೀರಿನ ಸಮಸ್ಯೆ ಪರಿಹರಿಸಲು ಎಚ್ ಎನ್ ವ್ಯಾಲಿಯಿಂದ ಕೆರೆಗಳಿಗೆ ನೀರು ತುಂಬಿಸುವ ಕೆಲಸವಾಗುತ್ತಿದೆ. ಗೌರಿಬಿದನೂರಿಗೂ ಈ ನೀರು ಸಿಗಲಿದೆ. ಎತ್ತಿನಹೊಳೆ ಯೋಜನೆಯಿಂದಲೂ ಈ ಭಾಗಗಳಿಗೆ ನೀರು ನೀಡುವ ಪ್ರಯತ್ನ ನಡೆದಿದೆ. ಇದರ ಜೊತೆಗೆ ಆಂಧ್ರಪ್ರದೇಶದಿಂದ 5 ರಿಂದ 10 ಟಿಎಂಸಿ ನೀರು ಪಡೆಯುವ ಬಗ್ಗೆ ಚರ್ಚೆಯಾಗಿದೆ. ಜಲಸಂಪನ್ಮೂಲ ಸಚಿವರ ಜೊತೆ ಈ ಬಗ್ಗೆ ಚರ್ಚಿಸಲಾಗಿದೆ,’’ ಎಂದು ತಿಳಿಸಿದರು.

“ಆಂಧ್ರದಿಂದ ಇಲ್ಲಿನ ಗಡಿಭಾಗಗಳಿಗೆ ನೀರು ಪಡೆದು, ಬೇರೆ ಮೂಲಗಳಿಂದ ಅಷ್ಟೇ ನೀರನ್ನು ಆಂಧ್ರಕ್ಕೆ ನೀಡುವ ಕುರಿತು ಚರ್ಚೆಯಾಗಿದೆ. ಶೀಘ್ರದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಾಗುವುದು,’’ ಎಂದರು.

“ಗೌರಿಬಿದನೂರಿನಲ್ಲಿ ಕೈಗಾರಿಕೆ ಅಭಿವೃದ್ಧಿಯಾಗುತ್ತಿದೆ. ಇದಕ್ಕೆ ಪೂರಕವಾದಂತೆ ರಾಜ್ಯ ಸರ್ಕಾರ ಹೊಸ ಕೈಗಾರಿಕಾ ನೀತಿಯನ್ನು ಜಾರಿ ಮಾಡಿದೆ. ಚಿಕ್ಕಬಳ್ಳಾಪುರವನ್ನು ಕೂಡ ‘ಹಂತ 2’ ವರ್ಗದಲ್ಲಿ ಸೇರ್ಪಡೆಗೊಳಿಸಿದರೆ ಕೈಗಾರಿಕೆ ಅಭಿವೃದ್ಧಿ ಸುಲಭವಾಗಲಿದೆ. ಜೊತೆಗೆ ಉದ್ಯಮಿಗಳಿಗೆ ಹಲವು ಬಗೆಯ ರಿಯಾಯಿತಿ ದೊರೆಯಲಿದೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ,’’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ತಲಾ 5 ಸಾವಿರ ರೂ. ವೈದ್ಯಕೀಯ ಸಹಾಯಧನ ವಿತರಿಸಲಾಯಿತು. ಆಶ್ರಯ ಯೋಜನೆಯಡಿಯ ಫಲಾನುಭವಿಗಳಿಗೆ ಹಕ್ಕುಪತ್ರ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲಾಯಿತು.

ಶಾಸಕ ಶಿವಶಂಕರರೆಡ್ಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚಿಕ್ಕನರಸಿಂಹಯ್ಯ, ಮಾಜಿ ಶಾಸಕಿ ಜ್ಯೋತಿ ರೆಡ್ಡಿ ಉಪಸ್ಥಿತರಿದ್ದರು.

ಇತರೆ ಅಂಶಗಳು:

*17 ಜಿಲ್ಲೆಗಳಲ್ಲಿ ಭಾರಿ‌ ಮಳೆ ಸುರಿಯುತ್ತಿದೆ. ಮುಖ್ಯಮಂತ್ರಿಗಳು ಆಸ್ಪತ್ರೆಯಲ್ಲಿದ್ದರೂ ಮಳೆಹಾನಿ ಪರಿಹಾರ ಕಾರ್ಯ ಕೈಗೊಂಡಿದ್ದಾರೆ. ಆಸ್ಪತ್ರೆಯಿಂದಲೇ ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದಾರೆ. ನಮ್ಮ‌ ಸರ್ಕಾರ ವಿಕೋಪದ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದೆ.

*ಚಿಕ್ಕಬಳ್ಳಾಪುರದಲ್ಲಿ ವಿದುರಾಶ್ವತ್ಥ ಸೇರಿದಂತೆ ಹಲವು ಪ್ರವಾಸಿ ತಾಣಗಳಿವೆ. ಇಂತಹ ಸ್ಥಳಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಆಕರ್ಷಿಸಬೇಕಿದೆ.

*ಕೊರೊನಾ ನಿಯಂತ್ರಣಕ್ಕೆ ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳಬೇಕು. ಸರ್ಕಾರ ಸೂಚಿಸಿದ ನಿಯಮಗಳನ್ನು ಪಾಲಿಸಬೇಕು.

*ಶೇ.98 ರಷ್ಟು ಕೊರೊನಾ ರೋಗಿಗಳು ಗುಣಮುಖರಾಗಿದ್ದಾರೆ. ಕೊರೊನಾ ಬಂದರೆ ಸಾವೇ ಗತಿ ಎಂಬ ತಪ್ಪು ಕಲ್ಪನೆ ಬೇಡ.

ಡಿಸಿಎಂರಿಂದ ಶ್ರೀರಾಮನಿಗೆ ವಿಶೇಷ ಪೂಜೆ

ಬೆಂಗಳೂರು:ಅತ್ತ ಆಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಬುಧವಾರ ಭೂಮಿ ಪೂಜೆ ನಡೆಯುತ್ತಿದ್ದರೆ ಇತ್ತ ಮಲ್ಲೇಶ್ವರದ ಪ್ರಸಿದ್ಧ ರಾಮಮಂದಿರದಲ್ಲಿ ವಿಶೇಷ ಪೂಜಾ ಸಂಭ್ರಮ.

ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ನೇತೃತ್ವದಲ್ಲಿ ನಡೆದ ಪೂಜಾ ಕೈಂಕಾರ್ಯದಲ್ಲಿ ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು ಸೇರಿದಂತೆ ಹಲವು ಬಿಜೆಪಿ ಕಾರ್ಯಕರ್ತರು ಭಾಗವಹಿಸಿ, ಖುಷಿಪಟ್ಟರು.

ಪೂಜೆ ಬಳಿಕ ಅಲ್ಲಿ ನೆರೆದಿದ್ದ ಎಲ್ಲರಿಗೂ ಸಿಹಿ ಹಂಚಿ ನೂರಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ವಿವಾದಕ್ಕೆ ತೆರೆ ಎಳೆದಿದ್ದಕ್ಕೆ ಧನ್ಯತಾಭಾವ ಪ್ರದರ್ಶಿಸಿದರು. ರಾಮನ ಜನ್ಮಭೂಮಿಯಲ್ಲೇ ಮಂದಿರ ನಿರ್ಮಾಣವಾಗಬೇಕು ಎನ್ನುವ ಪ್ರತಿಯೊಬ್ಬ ಭಾರತೀಯನ ಕನಸು ನನಸಾಗಿದ್ದು ನಿಜಕ್ಕೂ ಸಂತಸದ ವಿಚಾರ ಎಂದು ಡಾ.ಅಶ್ವತ್ಥನಾರಾಯಣ ಇದೇ ಸಂದರ್ಭದಲ್ಲಿ ಹೇಳಿದರು.

500 ವರ್ಷಗಳಿಂದ ನಡೆಯುತ್ತಿದ್ದ ಸಾತ್ವಿಕ ಸಂಘರ್ಷ ಮತ್ತು 134 ವರ್ಷಗಳ ಕಾನೂನು ಹೋರಾಟದ ಬಳಿಕ ಮಂದಿರ‌ ನಿರ್ಮಾಣಕ್ಕೆ ಹಾದಿ ಸುಗಮವಾಗಿದೆ. ಇವತ್ತಿನ ಈ ಕ್ಷಣಕ್ಕಾಗಿ ಸಂಕಲ್ಪ, ತ್ಯಾಗ ಮತ್ತು ಬಲಿದಾನ ಮಾಡಿದ ಎಲ್ಲ ಶ್ರದ್ಧಾಳುಗಳಿಗೂ ನನ್ನ ನಮನಗಳು ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

ಸರ್ವಧರ್ಮಿಯರ ಬೆಂಬಲದೊಂದಿಗೆ ನಡೆಯುತ್ತಿರುವ ಈ ಕಾರ್ಯವನ್ನು ಭಾರತದ ಭಾವೈಕ್ಯತೆಯ ಸಂಕೇತ ಎಂದೇ ಹೇಳಬಹುದು. ಶಾಂತಿಯ ನಾಡಿನಲ್ಲಿ ಸಂಭ್ರಮ ಮನೆ ಮಾಡಲಿದೆ. ಎಲ್ಲ ಸಂಕಷ್ಟಗಳೂ ದೂರವಾಗಲಿವೆ. ರಾಮಮಂದಿರ ನಿರ್ಮಾಣದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಡೆದುಕೊಂಡ ರೀತಿ ಇಡೀ ನಾಡು ಮೆಚ್ಚುವಂತಹದ್ದು ಎಂದು ಅವರು ಹೇಳಿದರು.

ರಾಯರ ದರ್ಶನ:
ರಾಮನ ಪೂಜೆ ಬಳಿಕ ಗುರು ರಾಘವೇಂದ್ರರ ಆರಾಧನೆ ಪ್ರಯುಕ್ತ ಹಲವು ಮಠಗಳಿಗೆ ಉಪ ಮುಖ್ಯಮಂತ್ರಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮಲ್ಲೇಶ್ವರದ ೮ನೇ ಅಡ್ಡರಸ್ತೆ, ೪ನೇ ಅಡ್ಡರಸ್ತೆ, ಸಂಪಿಗೆ ರಸ್ತೆಯ ಪಲಿಮಾರುಮಠ, ಶೇಷಾಧಿಪುರದಲ್ಲಿನ ರಾಘವೇಂದ್ರ ಮಠಗಳಿಗೆ ತೆರಳಿ ಪೂಜೆ ಸಲ್ಲಿಸಿದರು.