ಅಗ್ರಹಾರ ಕಾರ್ಯಸಿದ್ಧಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಸಚಿವ ಡಾ| ನಾರಾಯಣಗೌಡ ವಿಶೇಷಪೂಜೆ

ಮಂಡ್ಯ:ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭೂಮಿಪೂಜೆ ಮಾಡಿ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯದ ಪೌರಾಡಳಿತ, ರೇಷ್ಮೆ, ತೋಟಗಾರಿಕೆ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ| ನಾರಾಯಣಗೌಡ ಕೆ.ಆರ್.ಪೇಟೆ ಪಟ್ಟಣದ ಅಗ್ರಹಾರ ಕಾರ್ಯಸಿದ್ಧಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷಪೂಜೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಚಿವರು, ಭಾರತ ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ರಾಮಮಂದಿರದ ನಿರ್ಮಾಣಕ್ಕೆ ಅಯೋಧ್ಯೆಯಲ್ಲಿ ಭೂಮಿಪೂಜೆ ಮಾಡುವ ಮೂಲಕ ಕೊಟ್ಟಮಾತಿನಂತೆ ನಡೆಯುವ ಜೊತೆಗೆ ದೇಶದ ಬಹುಸಂಖ್ಯಾತ ಹಿಂದೂ ಜನರ ಭಾವನೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದಾರೆ. ದೇಶದ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಸಚಿವ ನಾರಾಯಣಗೌಡ ಅಭಿಮಾನದಿಂದ ಹೇಳಿದರು.

ಕೆ.ಆರ್.ಪೇಟೆ ತಾಲ್ಲೂಕಿನ ತೆಂಡೇಕೆರೆ, ಅಕ್ಕಿಹೆಬ್ಬಾಳು, ಬೂಕನಕೆರೆ ಮತ್ತು ಸಂತೇಬಾಚಹಳ್ಳಿ ಗ್ರಾಮಗಳಲ್ಲಿ ಸುಸಜ್ಜಿತವಾದ ಬಸ್ ನಿಲ್ದಾಣಕ್ಕೆ ರಾಜ್ಯ ಸರ್ಕಾರವು ಮಂಜೂರಾತಿ ನೀಡಿದ್ದು ಸಧ್ಯದಲ್ಲಿಯೇ ಬಸ್ ನಿಲ್ದಾಣದ ಕಾಮಗಾರಿ ಆರಂಭವಾಗಲಿದೆ.
ರಾಜ್ಯ ಸರ್ಕಾರವು ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ 33 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿದ್ದು ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿಯೂ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿಗಳು ನಡೆಯುತ್ತಿವೆ. ಕೊರೋನಾ ಹಿನ್ನೆಲೆಯಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳ ಅನುಷ್ಠಾನಕ್ಕೆ ತಡೆಯಾಗಿತ್ತು. ಪ್ರತೀ ಗ್ರಾಮಗಳಲ್ಲಿಯೂ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಮಾಡುತ್ತಿದ್ದೇನೆ. ಕೊರೊನಾ ನಡುವೆಯೂ ಅಭಿವೃದ್ಧಿ ಕಾಮಗಾರಿ ತ್ವರಿತಗತಿಯಲ್ಲಿ ನಡೆಯಲಿದೆ ಎಂದು ಸಚಿವರು ಹೇಳಿದರು.

ಇದೆ ವೇಳೆ ಸಚಿವರು ಕೆಆರ್ ಪೇಟೆಯ ವಿವಿಧೆಡೆ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.

ಪೀಣ್ಯಾದ ಬಸವೇಶ್ವರ ಬಸ್ ನಿಲ್ದಾಣದಲ್ಲಿ‌ ಕೋವಿಡ್ ಕೇರ್ ಸೆಂಟರ್ ಗೆ ಡಿಸಿಎಂ ಚಾಲನೆ…!

ಬೆಂಗಳೂರು: ಪೀಣ್ಯಾದ ಬಸವೇಶ್ವರ ಬಸ್ ನಿಲ್ದಾಣದಲ್ಲಿ ಸ್ಥಾಪಿಸಿರುವ ಕೋವಿಡ್ ಕೇರ್ ಸೆಂಟರ್ ಅನ್ನು ಡಿಸಿಎಂ ಲಕ್ಷ್ಮಣ‌ ಸವದಿ ಉದ್ಘಾಟಿಸಿದರು ‌

ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಕೋವಿಡ್-19 ಲಕ್ಷಣಗಳಲ್ಲದ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಅವಕಾಶ ಕಲ್ಪಿಸುವುದು ಕಷ್ಟಕರವಾಗುತ್ತಿದೆ. ಸರ್ಕಾರದ ಸಲಹೆಯಂತೆ, ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಲಕ್ಷಣರಹಿತ ಮತ್ತು ಸೌಮ್ಯ ಪ್ರಕರಣಗಳನ್ನು ನಿರ್ವಹಿಸಲು ಕೋವಿಡ್ ಆರೈಕೆ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೋವಿಡ್ ಆರೈಕೆ ಕೇಂದ್ರದ ಸ್ಥಾಪನೆಗಾಗಿ ಕೆಎಸ್‌ಆರ್‌ಟಿಸಿಯ ಬಸವೇಶ್ವರ ಬಸ್ ನಿಲ್ದಾಣ, ಪೀಣ್ಯ ಬೆಂಗಳೂರಿನಲ್ಲಿ ಸ್ಥಳಾವಕಾಶ ಒದಗಿಸಿದೆ.ಇಲ್ಲಿನ ಕೇಂದ್ರವು ಆಗಸ್ಟ್ 8 ರಿಂದ ಕಾರ್ಯಾರಂಭ ಮಾಡಲಿದೆ.

ರೊಟಲಿ ಅದ್ವಿಕಾ ಕೇರ್ ಫೌಂಡೇಶನ್ ಮತ್ತು ನಯೋನಿಕಾ ಐ ಟ್ರಸ್ಟ್ ಸಹಯೋಗದೊಂದಿಗೆ ಈ ಕೇಂದ್ರವನ್ನು ಸ್ಥಾಪಿಸಲು ಮುಂದಾಗುದ್ದು,.ಈ ಕೇಂದ್ರವನ್ನು ನಿರ್ವಹಿಸಲು ವೈದ್ಯಕೀಯ ಪಾಲುದಾರರಾಗಿ ಪ್ರಕ್ರಿಯಾ ಆಸ್ಪತ್ರೆ, ನಾಗಸಂದ್ರ, ಬೆಂಗಳೂರು ಮತ್ತು ಟೈಟಾನ್ ಸಂಸ್ಥೆಯ ಪ್ರಮುಖ ಹಣಕಾಸು ಪಾಲುದಾರರಾಗಿ ಸಾರ್ವಜನಿಕ -ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಈ ಕೇಂದ್ರವನ್ನು ಡಿಸಿಎಂ ಲಕ್ಷ್ಮಣ ಸಂ ಸವದಿ ಇಂದು ಉದ್ಘಾಟಿಸಿದರು.ಕೋವಿಡ್ -19 ಗೆ ತುತ್ತಾಗಿ ಗುಣಮುಖರಾದ ಕೆ ಎಸ್ ಆರ್ ಟಿ ಸಿ ಚಾಲಕ/ ನಿರ್ವಾಹಕ ಸಿಬ್ಬಂದಿಗಳಿಗೆ ಉಪ ಮುಖ್ಯಮಂತ್ರಿಗಳು ಹೂ ನೀಡಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾತನಾಡುತ್ತಾ, ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ಸುಮಾರು ಒಂದು ಸಾವಿರ ಸಿಬ್ಬಂದಿ ಕೋವಿಡ್ -19 ಗೆ ತುತ್ತಾಗಿದ್ದು 700 ಸಿಬ್ಬಂದಿ ಗುಣಮುಖರಾಗಿದ್ದಾರೆ, ಅವರುಗಳ ಯೋಗಕ್ಷೇಮ ನಮ್ಮ ಪ್ರಥಮ ಆದ್ಯತೆಯಾಗಿದೆ ಈ ಕೋವಿಡ್ ಕೇರ್ ಸೆಂಟರ್ ನಲ್ಲಿ ನಿಗಮದ ಸಿಬ್ಬಂದಿ ಮತ್ತು ಕುಟುಂಬದವರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.

ಈ ಬಸ್ ನಿಲ್ದಾಣವು ಈ ಒಳ್ಳೆಯ ಉದ್ದೇಶಕ್ಕೆ ಉಪಯೋಗವಾಗುತ್ತಿರುವುದು ಒಳ್ಳೆಯದು. ಈ ಕೇಂದ್ರಕ್ಕೆ ದಾಖಲಾಗುವ ರೋಗಿಗಳು ಗುಣಮುಖರಾಗಿ ತೆರಳಲಿ ಎಂದು ಆಶಿಸಿದರು.

ಕೋವಿಡ್ ಕೇರ್ ಕೇಂದ್ರ :

ಪೀಣ್ಯ ಬಸ್ ನಿಲ್ದಾಣ ನೆಲಮಹಡಿ ಹಾಗೂ ಮೊದಲನೇ ಮಹಡಿಯಲ್ಲಿ, ಈ ಕೇಂದ್ರವು ಮೊದಲನೇ ಹಂತದಲ್ಲಿ 200 ಹಾಸಿಗೆ ಗಳನ್ನು ಹೊಂದಿರುತ್ತದೆ. ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಮತ್ತು ಬೇಡಿಕೆ ಹೆಚ್ಚಾದರೆ ಇನ್ನೂ 100 ಹಾಸಿಗೆ ಗಳನ್ನು ಸೇರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕೇಂದ್ರದಲ್ಲಿ ಪೂರ್ಣ ಸಮಯದ ದಾದಿಯರು, ವೈದ್ಯರು, ರೋಗಿಗಳ ಆರೈಕೆ ಮಾಡುವವರು, ಸ್ವಚ್ಛತಾ ಗಾರರು, ವ್ಯವಸ್ಥಾಪಕರು, ಬಿಲ್ಲಿಂಗ್ ತಂಡ, ಸ್ವಾಗತಕಾರರು, ನಿರ್ವಹಣೆ ಮತ್ತು ಭದ್ರತಾ ತಂಡಗಳು ಇರಲಿದೆ, ರೋಗಿಗೆ ಆಸ್ಪತ್ರೆ ಆರೈಕೆ ಅಗತ್ಯವಿದ್ದಲ್ಲಿ, ಪ್ರಕ್ರಿಯಾ ಆಸ್ಪತ್ರೆ ತನ್ನ ಆಸ್ಪತ್ರೆಗಳಲ್ಲಿ ಅವಕಾಶ ಕಲ್ಪಿಸುತ್ತದೆ. ಈ ಕೇಂದ್ರದಲ್ಲಿ ಆಂಬುಲೆನ್ಸ್ ಜೊತೆ ಆಕ್ಸಿಜನ್ ಸೌಲಭ್ಯ ಲಭ್ಯವಿರುತ್ತದೆ. ಸ್ವಾಬ್ ಸಂಗ್ರಹ ಕೇಂದ್ರವನ್ನು ಸಹ ಇಲ್ಲಿ ಸ್ಥಾಪಿಸಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.

ಈ ಕೇಂದ್ರದಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ ಸಾರಿಗೆ ಮತ್ತು ವಾಯವ್ಯ ಸಾರಿಗೆ ಉದ್ಯೋಗಿಗಳು ಮತ್ತು ಅವರ ಕುಟುಂಬಗಳಿಗೆ 50% ಹಾಸಿಗೆಗಳನ್ನು ಒದಗಿಸಲಾಗಿದೆ. ಈ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ರೊಟರಿ ಮತ್ತು ಟೈಟಾನ್‌ನಿಂದ ಉಲ್ಲೇಖಿಸಲಾದ ರೋಗಿಗಳಿಗೆ 10% ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಸರ್ಕಾರ ಸೂಚಿಸಿದ ದರಗಳ ಪ್ರಕಾರ ರೋಗಿಗಳಿಗೆ ಶುಲ್ಕ ವಿಧಿಸಲಾಗುತ್ತದೆ. ಬಡವರು ಮತ್ತು ನಿರ್ಗತಿಕರಿಗೆ ಈ ಕೇಂದ್ರದಿಂದ ಅನುಕೂಲವಾಗಿದೆ ಎಂದರು.

ರೋಗಿಗಳಿಗೆ ಆಹಾರ ಮತ್ತು ಇತರ ಸೇವೆಗಳೊಂದಿಗೆ ಮೂಲ ವೈದ್ಯಕೀಯ ಸೇವೆಯನ್ನು ನೀಡಲಾಗುತ್ತದೆ. ಸದರಿ ಕೇಂದ್ರದಲ್ಲಿ ಶೌಚಾಲಯ, ಬಿಸಿ ನೀರಿನ ಸ್ನಾನದ ಸೌಲಭ್ಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದೆ. ಎಲ್ಲಾ ರೋಗಿಗಳಿಗೆ ಪೌಷ್ಟಿಕ ಆಹಾರವನ್ನು ನೀಡಲಾಗುವುದು. ಈ ಕೇಂದ್ರದಲ್ಲಿ ಸಿಬ್ಬಂದಿ ಇರಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಸಿಬ್ಬಂದಿ ಮತ್ತು ವೈದ್ಯರುಗಳಿಗೆ ಸೋಂಕು ಹರಡದಂತೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಈ ಕೇಂದ್ರದಲ್ಲಿ ಕೆಲಸ ಮಾಡುವ ಎಲ್ಲರಿಗೂ ಸಂಪೂರ್ಣ ಪಿಪಿಇ ಕಿಟ್‌ಗಳನ್ನು ಒದಗಿಸಲಾಗಿದೆ. ಕೇಂದ್ರದ ತುರ್ತು ವಾರ್ಡ್ ಮತ್ತು 10 ಹಾಸಿಗೆಗಳ ಐಸಿಯು ಹೊಂದಿದ್ದು, ಇದರಲ್ಲಿ ರೋಗಿಗಳ ಹಾಸಿಗೆಗಳು, ಮಾನಿಟರ್‌ಗಳು, ಆಮ್ಲಜನಕ ಪೂರೈಕೆ ಮತ್ತು ಆಮ್ಲಜನಿಕ ಸಾಂದ್ರತೆಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಐಸಿಯು ಅನ್ನು ಟೈಟಾನ್ ಕಂಪನಿಯು ಪ್ರಯೋಗಿಸುತ್ತಿದೆ. ರೋಗಿಗಳು ಆಸ್ಪತ್ರೆಯಲ್ಲಿ. ಹಾಸಿಗೆ ಸಿಗುವವರೆಗೂ ಅವರನ್ನು ಇಲ್ಲಿ ತಾತ್ಕಾಲಿಕವಾಗಿ ನೋಡಿಕೊಳ್ಳಲಾಗುತ್ತದೆ, ಹೆಚ್ಚಿನ ವೈದ್ಯಕೀಯ ಅಗತ್ಯ ಕಂಡುಬಂದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು ಎಂದರು‌

ಸಾಲಿಗೆ ಸಂಜೀವಿನಿ ಆಂಬ್ಯುಲೆನ್ಸ್ ( 07 ಎಫ್ 77) ಗೆ ಚಾಲನೆ:

ಕೆ ಎಸ್ ಆರ್ ಟಿ ಸಿ, ಪ್ರಾದೇಶಿಕ ಕಾರ್ಯಾಗಾರ, ಬೆಂಗಳೂರಿನಲ್ಲಿ ಅಂತರಿಕವಾಗಿ ಲಭ್ಯವಿರುವ ವಸ್ತುಗಳಲ್ಲಿ ಮಿಡಿ ಬಸ್ಸನ್ನು ಆಂಬುಲೆನ್ಸ್ ಆಗಿ ನಿರ್ಮಿಸಲಾಗಿದ್ದು, ವೆಚ್ಚ ಸುಮಾರು 25 ಲಕ್ಷಗಳಾಗಿದೆ.

ತುರ್ತುಸ್ಥಳದಿಂದ ಆಂಬ್ಯುಲೆನ್ಸ್‌ಗೆ ರೋಗಿಯನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ವರ್ಗಾಹಿಸಲು ಮತ್ತು ಆಸ್ಪತ್ರೆಯನ್ನು ತಲುಪಿದ ನಂತರ ತುರ್ತು ಕೋಣೆ ರೋಗಿಯನ್ನು ತ್ವರಿತವಾಗಿ ಮತ್ತು ಆರಾಮದಾಯಕವಾಗಿ ವರ್ಗಾಹಿಸಲು ಅನುಕೂಲವಾಗುವಂತೆ 2 ಸ್ಟೇಚರ್‌ಗಳನ್ನು ಹೊಂದಿದ ಬಸ್ ಅಂಬ್ಯುಲೆನ್ಸ್‌ ಆಗಿದೆ. ಬ್ಯಾಂಡೇಜ್,ಕ್ರಿಮಿನಾಶಕ, ಸೋಂಕು ನಿವಾರಕ ಪರಿಹಾರಗಳನ್ನು ಒಳಗೊಂಡಿರುವ ಪ್ರಥಮ ಚಿಕಿತ್ಸಾ ಶಿಟ್‌ಗಳನ್ನು ಹೊಂದಿದ್ದು, ಅಂಬ್ಯುಲೆನ್ಸ್‌ನಲ್ಲಿ ಆಕ್ಸಿಜನ್, ಶುದ್ಧವಾದ ಆಮ್ಲಜನಕವನ್ನು ಕೃತಕವಾಗಿ ಒದಗಿಸುವ ಮೂಲಕ ರೋಗಿಯ ಜೀವವನ್ನು ಉಳಿಸಲು ಸಹಾಯ ಮಾಡುವ ಒಂದು ಆಮ್ಲಜನಕ ಸಿಲಿಂಡರನ್ನು ಆಂಬ್ಯುಲೆನ್ಸ್‌ನಲ್ಲಿ ಇರಿಸಲಾಗಿದೆ. ಸಂಪೂರ್ಣ ಕ್ರಿಯಾತ್ಮಕ ಮತ್ತು ತುಂಬದ 1 ಕೆಜಿ ಅಗ್ನಿಶಾಮಕ ಯಂತ್ರವನ್ನು ಅಂಬ್ಯುಲೆನ್ಸ್‌ನಲ್ಲಿ ಇರಿಸಲಾಗಿದೆ. ಕೈ ತೊಳೆಯಲು ಸಲೂನ್ ನೊಳಗೆ 20 ಅಟರ್ ನ ನೀರಿನ ಟ್ಯಾಂಕ್, ಮತ್ತೊಂದು ಟ್ಯಾಂಕ್ ನೀರು ಸಂಗ್ರಹಿಸಲು ಒದಗಿಸಲಾಗಿದೆ. ಕೈ ತೊಳೆದು ನೀರನ್ನು ಸಂಗ್ರಹಿಸಲು ಪ್ರತ್ಯೇಕ ಪ್ಲಾಸ್ಟಿಕ್ ಟ್ಯಾಂಕ್ ಒದಗಿಸಲಾಗಿದೆ. ಡ್ರೈವರ್‌ಗೆ ಸುಲಭವಾದ ಪ್ರತ್ಯೇಕ ಚಾಲಕ ವಿಭಾಗವನ್ನು ಒದಗಿಸಲಾಗಿದೆ. ಸಿಸಿ ಕ್ಯಾಮೆರಾ ಒದಗಿಸಲಾಗಿದೆ. ಕೆಂಪು ಅಂಬ್ಯುಲೆನ್ಸ್‌ನ ಮುಂಭಾಗದ ಮೇಲ್ಬಾಗದಲ್ಲಿ ಕೆಂಪು ಮತ್ತು ನೀಲಿ ಬಣ್ಣ ಸೂಚಕ ಬೆಳಕನ್ನು ಮತ್ತು ಸೈರನ್ ಆಂಬ್ಯುಲೆನ್ಸ್‌ನಲ್ಲಿ ಜೋಡಿಸಲಾಗಿದೆ. ಒಟ್ಟು 5 ಸಂಖ್ಯೆ 2 ಆಸನಗಳ ಪ್ರಯಾಣಿಕರ ಆಸನ ಚೌಕಟ್ಟುಗಳನ್ನು ಸಲೂನ್ ಒಳಗೆ ಒದಗಿಸಲಾಗಿದೆ. (ಚಾಲಕರ ಕ್ಯಾಚಿನ್ ಜೋಡನೆಗೆ ಎದುರಾಗಿರುವ ಸ್ವೀಟ್ ಲೈಟ್‌ಗೆ 3 ಸಂಖ್ಯೆ ಮತ್ತು ರೋಗಿಗಳ ಹತ್ತಿರ ಬರುವ ವಿರುದ್ಧ ದಿಕ್ಕಿನಲ್ಲಿ 1 ಸಂಖ್ಯೆ ನೀಲಿ ಬಣ್ಣದ ಕಿಟಕಿ ಪರದೆಗಳನ್ನು ಎರಡೂ ಕಡೆ ಒದಗಿಸಲಾಗಿದೆ. 4 ಫ್ಯಾನ್‌ಗಳನ್ನು ಅಳವಡಿಸಲಾಗಿದೆ. Foot operated sanitizer ಅನ್ನು ಒಳಗೆ ಅಳವಡಿಸಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೂ ಕೊರೊನಾ ಪಾಸಿಟಿವ್

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಗೂ ಕೋವಿಡ್ ಸೋಂಕು ತಗುಲಿದೆ. ಪರೀಕ್ಷಾ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸಿಎಂ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಿಎಂ ಆರೋಗ್ಯ ಸ್ಥಿರವಾಗಿದೆ ಯಾವುದೇ ಆತಂಕ ಬೇಡ, ವೈದ್ಯಕೀಯ ತಂಡ ನಿರಂತರವಾಗಿ ಸಿಎಂ ಆರೋಗ್ಯವನ್ನು ಪರಿಶೀಲನೆ ಮಾಡಲಿದೆ ಎಂದು ಮಣಿಪಾಲ್ ಆಸ್ಪತ್ರೆ ವೈದ್ಯರು ಸಿಎಂ ಆರೋಗ್ಯದ ಕುರಿತು ಹೆಲ್ತ್ ಬುಲೆಟಿನ್ ನೀಡಿದ್ದಾರೆ.

ಆಸ್ಪತ್ರೆಯಲ್ಲಿ ಇರುವ ಸಿಎಂ
ಆದಷ್ಟು ಬೇಗ ಕರ್ತವ್ಯಕ್ಕೆ ಮರಳುತ್ತೇನೆ, ಯಾರೂ ಆತಂಕಕ್ಕೊಳಗಾಗಬೇಡಿ ಎಂದು ರಾಜ್ಯದ ಜನತೆಗೆ ಕರೆ ನೀಡಿದ್ದಾರೆ. ರಾಜ್ಯದ ಜನರು ಮತ್ತು ಮಠಾಧಿಪತಿಗಳು ನನಗೆ ಶೀಘ್ರ ಗುಣಮುಖವಾಗಲಿ ಎಂದು ಆಶೀರ್ವಾದ ಮಾಡಿದ್ದಾರೆ ಎಂದು ಆದಷ್ಟು ಬೇಗ ನಾನು ಗುಣಮುಖನಾಗಿ ಆಸ್ಪತ್ರೆಯಿಂದ ಹೊರಬಂದು ಕೆಲಸ ಕಾರ್ಯದಲ್ಲಿ ತೊಡಗಲಿದ್ದೇನೆ ಎಂದಿದ್ದಾರೆ.

ವಿಜ್ಞಾನ ವಿದ್ಯಾರ್ಥಿಗಳಿಗೆ ಸ್ವಾಬ್ ಸಂಗ್ರಹಣೆ ತರಬೇತಿ ನೀಡಿ: ಡಿಸಿಎಂ

ಬೆಂಗಳೂರು: ಕೋವಿಡ್ 19 ಪರೀಕ್ಷೆಯನ್ನು ಹೆಚ್ಚಿಸಲಾಗುತ್ತಿದ್ದು, ಸ್ವ್ಯಾಬ್ ಸಂಗ್ರಹಣೆಗೆ ವಿಜ್ಞಾನ ಹಿನ್ನೆಲೆಯುಳ್ಳ ಬಿ.ಎಸ್.ಸಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಜಿಲ್ಲೆಯಲ್ಲಿ ನಿಯೋಜಿಸಿಕೊಳ್ಳಿ ಎಂದ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ತಿಳಿಸಿದರು.

ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಮನಗರ ಜಿಲ್ಲಾಡಳಿತದ ಜತೆ ಚರ್ಚೆ ನಡೆಸುವಾಗ ಹೀಗೆ ಹೇಳಿದರು.
ರಾಮನಗರ ಜಿಲ್ಲೆಯಲ್ಲಿರುವ 69 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್-19 ಪರೀಕ್ಷೆಯ ಸ್ವ್ಯಾಬ್ ಸಂಗ್ರಹಣೆ ಕೇಂದ್ರಗಳನ್ನು ತೆರೆದು ತರಬೇತಿ ನೀಡಲಾಗುವ ವಿದ್ಯಾರ್ಥಿಗಳನ್ನು ನಿಯೋಜಿಸಿಕೊಳ್ಳಿ. ಜಿಲ್ಲೆಯಲ್ಲಿ ಕೋವಿಡ್-19 ಲಕ್ಷಣವುಳ್ಳ ರೋಗಿ ಪರೀಕ್ಷೆಗೆ ಒಳಪಡಬೇಕು ಎಂದರೆ ಯಾವುದೇ ಕಾರಣಕ್ಕೂ ಅವರು ಅದರಿಂದ ವಂಚಿತರಾಗಬಾರದು ಎಂದರು.

24 ಗಂಟೆಯೊಳಗೆ ವರದಿ : ರಾಮನಗರ ಜಿಲ್ಲೆಯಲ್ಲಿ ಕೋವಿಡ್-19 ಪರೀಕ್ಷೆಗೆ ಒಳಪಟ್ಟವರಿಗೆ 24 ಗಂಟೆಯೊಳಗೆ ಪರೀಕ್ಷೆಯ ವರದಿ ನೀಡಬೇಕು. ಪರೀಕ್ಷೆಯ ವರದಿ ಬ್ಯಾಕ್‌ಲಾಗ್ ಆಗದಂತೆ ನೋಡಿಕೊಳ್ಳಿ. ಕೋವಿಡ್-19 ಪರೀಕ್ಷೆ ರೋಗಿಗಳನ್ನು ಒಳಪಡಿಸುವಾಗ ಸರಿಯಾದ ವಿಳಾಸ ಪಡೆದುಕೊಳ್ಳಿ. ಇಲ್ಲಾವಾದಲ್ಲಿ ಪಾಸಿಟಿವ್ ಬಂದ ಸಂದರ್ಭದಲ್ಲಿ ಪತ್ತೆಹಚ್ಚುವುದು ಕಷ್ಟಕರವಾಗುತ್ತದೆ ಹಾಗೂ ರೋಗ ಕೂಡ ಹರಡುತ್ತದೆ. ಐ.ಎಲ್.ಐ ಮತ್ತು ಎಸ್.ಎ.ಆರ್.ಐ ಪ್ರಕರಣಗಳಲ್ಲಿ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯನ್ನು ನಡೆಸಿ ಎಂದರು.

ಹೆಚ್ಚುವರಿ ಕಟ್ಟಡಕ್ಕೆ ಪ್ರಸ್ತಾವನೆ: ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ಆಸ್ಪತ್ರೆಗೆ ಹೆಚ್ಚುವರಿ ಕಟ್ಟಡ ಮತ್ತು ಉಪಕರಣಗಳ ಅವಶ್ಯಕತೆಯಿದ್ದಲ್ಲಿ ಸೂಕ್ತ ಪ್ರಸ್ತಾವನೆ ಸಲ್ಲಿಸಿ. ಮಂಡ್ಯ ಜಿಲ್ಲೆಯ ನಂತರ ಬೆಂಗಳೂರಿಗೆ ತಲುಪುವವರೆಗೂ ಮೈಸೂರು -ಬೆಂಗಳೂರು ಹೆದ್ದಾರಿಯಲ್ಲಿ ಯಾವುದೇ ಟ್ರಾಮಾ ಸೆಂಟರ್ ಇಲ್ಲ. ಜಿಲ್ಲಾ ಆಸ್ಪತ್ರೆಯಲ್ಲಿ ಟ್ರಾಮಾ ಸೆಂಟರ್ ಸೇರಿದಂತೆ ಆಸ್ಪತ್ರೆಗೆ ಬೇಕಿರುವ ಸಿಬ್ಬಂದಿ, ಸಲಕರಣೆಗಳ ವಿವರದ ಮಾಹಿತಿಯನ್ನು ಸಲ್ಲಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಕೆರೆ ಒತ್ತುವರಿ ತೆರವುಗೊಳಿಸಿ: ರಾಮನಗರ ಜಿಲ್ಲೆಯಲ್ಲಿರುವ ಕೆರೆಗಳ ಸರ್ವೆ ನಡೆಸಿ ಒತ್ತುವರಿಯನ್ನು ಶೀಘ್ರವಾಗಿ ತೆರವುಗೊಳಿಸಬೇಕು. ಗ್ರಾಮಗಳಲ್ಲಿ ಕಂದಾಯ ನಿರೀಕ್ಷಕರು ಹಾಗೂ ಗ್ರಾಮಲೆಕ್ಕಿಗರು ತಮ್ಮ ವ್ಯಾಪ್ತಿಗೆ ಬರುವ ಕೆರೆಗಳ ಬಗ್ಗೆ ನಿಗಾವಹಿಸಿ ಒತ್ತುವರಿಯಾಗದಂತೆ ನೋಡಿಕೊಳ್ಳಬೇಕು. ಒತ್ತುವರಿ ಪ್ರಕರಣಗಳಿದ್ದಲ್ಲಿ ನೋಟಿಸ್ ನೀಡಿ ತೆರವುಗೊಳಿಸಿ ಎಂದು ಉಪಮುಖ್ಯಮಂತ್ರಿಗಳು ತಿಳಿಸಿದರು.

ಸಿಎಸ್ಆರ್ ಅನುದಾನ: ರಾಮನಗರ ಜಿಲ್ಲೆಯಲ್ಲಿ ಬಹಳಷ್ಟು ಕೈಗಾರಿಕೆಗಳು ತಮ್ಮ ಸಿ.ಎಸ್.ಆರ್. ಅನುದಾನವನ್ನು ಬೇರೆ ಜಿಲ್ಲೆಗಳಿಗೆ ನೀಡಿ ಅಭಿವೃದ್ಧಿ ಕೆಲಸ ನಡೆಸುತ್ತಿವೆ. ಜಿಲ್ಲೆಯಲ್ಲಿ ಸರಿಯಾದ ರೀತಿಯಲ್ಲಿ ಯೋಜನೆ ರೂಪಿಸಿ ಕೈಗಾರಿಕೆಗಳ ಸಿ.ಎಸ್.ಆರ್. ಅನುದಾನವನ್ನು ಪಡೆದುಕೊಂಡು ಜಿಲ್ಲೆಯ ಅಭಿವೃದ್ಧಿಗೆ ಬಳಸಿಕೊಳ್ಳಿ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ಅವರು ಮಾತನಾಡಿ ಜಿಲ್ಲೆಯಲ್ಲಿ 1273 ಕೋವಿಡ್ ಪಾಸಿಟಿವ್ ಪ್ರಕರಣಗಳಿದ್ದು, 566 ಮಂದಿ ಗುಣಮುಖರಾಗಿರುತ್ತಾರೆ. 690 ಸಕ್ರಿಯ ಪ್ರಕರಣಗಳಿದ್ದು, 17 ಜನ ಮೃಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಇಕ್ರಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಬಿ.ಪಿ. ವಿಜಯ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಅಂತಿಮ ಸೆಮಿಸ್ಟರ್ ಪರೀಕ್ಷೆ, ಬ್ಯಾಕ್ ಲಾಗ್ ವಿಷಯಗಳಿಗೂ ಪರೀಕ್ಷೆ ನಡೆಸಲು ಡಿಸಿಎಂ ಸೂಚನೆ

ಬೆಂಗಳೂರು: ಅಂತಿಮ ಸೆಮಿಸ್ಟರ್‌/ವರ್ಷದ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಎಲ್ಲ ರೀತಿಯ ತಯಾರಿ ನಡೆದಿದ್ದು, ಇದರ ಜತೆಗೆ ಅವರ ಬ್ಯಾಕ್‌ಲಾಗ್‌ ವಿಷಯಗಳ ಪರೀಕ್ಷೆಗಳನ್ನೂ ನಡೆಸಲು ಎಲ್ಲ ವಿಶ್ವವಿದ್ಯಾಲಯಗಳಿಗೆ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸೋಮವಾರ ಇಲ್ಲಿ ಸೂಚಿಸಿದರು.

ಸಿಇಟಿ ಪರೀಕ್ಷೆ ಸುಗಮವಾಗಿ ಪೂರ್ಣಗೊಂಡಿರುವುದರ ಪ್ರಯುಕ್ತ ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ರಸ್ತೆ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಜತೆ ವಿಡಿಯೊ ಸಂವಾದ ನಡೆಸಿ, ಕೃತಜ್ಞತೆ ಸಲ್ಲಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಕೋವಿಡ್‌ ಕಾರಣದಿಂದಾಗಿ ಅಂತಿಮ ವರ್ಷ/ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಈ ನಡುವೆ ಕೆಲವು ವಿ‍ಶ್ವವಿದ್ಯಾಲಯಗಳು ಅಂತಿಮ ವರ್ಷದ ವಿದ್ಯಾರ್ಥಿಗಳು ಬಾಕಿ ಉಳಿಸಿಕೊಂಡಿರುವ (ಅನುತ್ತೀರ್ಣರಾಗಿರುವ) ಹಿಂದಿನ ಸೆಮಿಸ್ಟರ್‌ಗಳ ವಿಷಯಗಳ ಪರೀಕ್ಷೆ ನಡೆಸುವುದಿಲ್ಲ ಎನ್ನುವ ತೀರ್ಮಾನಕ್ಕೆ ಬಂದಿರುವ ಮಾಹಿತಿ ಸಿಕ್ಕಿದ್ದು, ಇದು ಅಕ್ಷಮ್ಯ ಅಪರಾಧ ಎಂದು ಅವರು ಹೇಳಿದರು.

ʼನಮ್ಮ ಉದ್ದೇಶ ಇರುವುದು ಅಂತಿಮ ವರ್ಷದಲ್ಲಿ ಇರುವ ವಿದ್ಯಾರ್ಥಿಗಳು ಪದವಿಯನ್ನು ಮುಗಿಸಿಕೊಂಡು ಹೊರಹೋಗಬೇಕು ಎನ್ನುವುದು. ಇಂತಹ ಸನ್ನಿವೇಶದಲ್ಲಿ ಕೇವಲ ಅಂತಿಮ ವರ್ಷ/ಸೆಮಿಸ್ಟರ್‌ ಪರೀಕ್ಷೆ ನಡೆಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಬದಲಿಗೆ, ಹಿಂದಿನ ವರ್ಷಗಳ, ಅನುತ್ತೀರ್ಣಗೊಂಡಿರುವ ವಿಷಯಗಳ ಪರೀಕ್ಷೆಗಳಿಗೂ ಅವಕಾಶ ಮಾಡಿಕೊಡಬೇಕಾಗುತ್ತದೆ. ಈ ಕೆಲಸವನ್ನು ಎಲ್ಲ ವಿಶ್ವವಿದ್ಯಾಲಯಗಳು ಕಡ್ಡಾಯವಾಗಿ ಮಾಡಬೇಕು’ ಎಂದು ಸೂಚಿಸಿದರು.

ಜಾಗ ಕೊಡಲು ಸೂಚನೆ:
ರಾಜ್ಯದ ವಿವಿಧ ಜಿಲ್ಲೆಗಳ 33 ಪದವಿ ಕಾಲೇಜುಗಳಿಗೆ ಜಾಗದ ಸಮಸ್ಯೆ ಇದೆ. ಇಷ್ಟೂ ಕಾಲೇಜುಗಳಿಗೆ ಜಾಗ ಕೊಡಿಸುವ ಜವಾಬ್ದಾರಿ ಜಿಲ್ಲಾಧಿಕಾರಿಗಳಿಗೆ ಸಂಬಂಧಿಸಿದ್ದು. ಬಾಗಲಕೋಟೆ ಜಿಲ್ಲೆಯೊಂದರಲ್ಲೇ ಆರು ಪದವಿ ಕಾಲೇಜುಗಳಿಗೆ ನಿವೇಶನವೇ ಕೊಟ್ಟಿಲ್ಲ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟರ್‌ ರಾಜೇಂದ್ರ ಅವರು ಇಲಾಖೆಯ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದರೆ ತಕ್ಷಣವೇ ಜಾಗ ಕೊಡಿಸುವ ಭರವಸೆ ನೀಡಿದರು. ಇದಕ್ಕೆ ಉಪ ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿ, ತಕ್ಷಣ ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಇದೇ ರೀತಿ ಐದು ಡಿಪ್ಲೊಮಾ ಕಾಲೇಜು ಮತ್ತು 28 ಐಟಿಐ ಕಾಲೇಜುಗಳಿಗೆ ರಾಜ್ಯದ ವಿವಿಧೆಡೆ ಜಾಗದ ಕೊರತೆ ಇದ್ದು, ತಕ್ಷಣ ಜಿಲ್ಲಾಧಿಕಾರಿಗಳು ಇತ್ತ ಗಮನ ನೀಡಬೇಕು. ಜಾಗ ಕೊಟ್ಟ ತಕ್ಷಣ ಹೊಸ ಕಟ್ಟಡಗಳು ತಲೆಎತ್ತಲಿವೆ ಎಂದು ಅವರು ಹೇಳಿದರು.

ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಡಾ.ರಮಣರೆಡ್ಡಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟ ರಾಜಾ, ಪದವಿ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್‌ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸಿಇಟಿ ಯಶಸ್ಸಿಗೆ ಕೃತಜ್ಞತೆ ಸಲ್ಲಿಸಿದ ಡಿಸಿಎಂ:

ಬೆಂಗಳೂರು: ಕೋವಿಡ್‌ ಕಾರಣದಿಂದಾಗಿ ಎದುರಾಗಿದ್ದ ಸಂಕಷ್ಟದ ಸಂದರ್ಭದಲ್ಲಿಯೂ ಸಿಇಟಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಕಾರಣರಾದ ಸರ್ಕಾರದ ಎಲ್ಲ ಹಂತದ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಕೃತಜ್ಞತೆ ಸಲ್ಲಿಸಿದರು.

ಎಲ್ಲ ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳ ಜತೆ ವಿಡಿಯೊ ಸಂವಾದ ನಡೆಸಿ, ಧನ್ಯವಾದ ಅರ್ಪಿಸಿದ ಉಪ ಮುಖ್ಯಮಂತ್ರಿಯವರು, ಪರೀಕ್ಷೆ ಯಶಸ್ವಿಯಾಗಿ ನಡೆಸಲು ಕಾರಣರಾದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೂ ಕೃತಜ್ಞತೆ ಸಲ್ಲಿಸಿದರು.

ಒಟ್ಟು 1,94,419 ಮಂದಿ ಸಿಇಟಿಗೆ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 1,75,428 ಮಂದಿ ಪರೀಕ್ಷೆ ತೆಗೆದುಕೊಂಡಿದ್ದು, ಸಾಮಾನ್ಯ ವರ್ಷಗಳಲ್ಲಿ ಇದ್ದಷ್ಟೇ ಹಾಜರಾತಿ ಈ ಸಂದರ್ಭದಲ್ಲಿಯೂ ಇತ್ತು. ಇಷ್ಟಕ್ಕೂ ಈ ಬಾರಿ ಸಿಇಟಿ ನಡೆಯುವ ವೇಳೆಗೆ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಕೂಡ ಬಂದಿತ್ತು. ಈ ಕಾರಣಕ್ಕೆ ಅರ್ಹರಾಗಿಲ್ಲದ ಕೆಲವರು ಸಿಇಟಿಯಿಂದ ಹಿಂದೆ ಸರಿದಿರಬಹುದು. ಒಟ್ಟಿನಲ್ಲಿ ಸಿಇಟಿ ಪರೀಕ್ಷೆ ನಡೆಸಿದ್ದು ಒಂದು ರೀತಿಯ ದೊಡ್ಡ ಯಶಸ್ಸು ಎಂದು ಬಣ್ಣಿಸಿದರು.

ʼನಾವು ಪರೀಕ್ಷೆ ನಡೆಸಿದ ನಂತರ ನಮ್ಮದೇ ನಿಯಮಗಳನ್ನು ಮುಂದಿಟ್ಟುಕೊಂಡು ಅರುಣಾಚಲ ಪ್ರದೇಶದಲ್ಲಿ ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಹಾಗೆಯೇ ನಮ್ಮದೇ ಕೆಪಿಎಸ್‌ಸಿ ಕೂಡ ಪರೀಕ್ಷೆ ನಡೆಸುವುದಾಗಿ ಹೇಳಿದೆ. ಹೀಗೆ ಅನೇಕರಿಗೆ ಮಾದರಿಯಾದಂತಹ ಕೆಲಸವನ್ನು ಇಂತಹ ಕ್ಲಿಷ್ಟ ಸನ್ನಿವೇಶದಲ್ಲಿಯೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮಾಡಿರುವುದು ನಿಜಕ್ಕೂ ಮೆಚ್ಚುವಂತಹದ್ದು ಎಂದು ಅವರು ಅಭಿಪ್ರಾಯಪಟ್ಟರು.

ಪಿಎಸ್‌ಐ ಕಿರಣ್ ಕುಮಾರ್ ಆತ್ಮಹತ್ಯೆ ಪ್ರಕರಣ ಉನ್ನತ ತನಿಖೆಗೆ ವಹಿಸಿ: ಎಚ್ಡಿಕೆ ಆಗ್ರಹ

ಬೆಂಗಳೂರು: ಪಿಎಸ್ ಐ ಕಿರಣ್ ಕುಮಾರ್ ಅವರ ಆತ್ಮಹತ್ಯೆ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕೆಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಟ್ವಿಟರ್ ಮೂಲಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿರೋ ಎಚ್ಡಿಕೆ, ಪೊಲೀಸರು ಮತ್ತು ಹಿರಿಯ ಪೊಲೀಸ್ ಸಿಬ್ಬಂದಿ ಜೀವದ ಹಂಗು ತೊರೆದು ಹೋರಾಟ ಮಾಡುವ ಪರಿಸ್ಥಿತಿಯಲ್ಲಿ ಅವರ ಆತ್ಮಾಭಿಮಾನ, ಸ್ವಾಭಿಮಾನಕ್ಕೆ ಧಕ್ಕೆ ತರುವಂತೆ ಹಿರಿಯ ಅಧಿಕಾರಿಗಳು ಕಿರುಕುಳ ನೀಡಿದ್ದೇ ಪಿಎಸ್ಐ ಆತ್ಮಹತ್ಯೆಗೆ ಕಾರಣ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಸೂಕ್ತ ತನಿಖೆಗೆ ಆದೇಶಿಸುವ ಮೂಲಕ ಕಿರಿಯ ಹಂತದ ಪೊಲೀಸ್ ಅಧಿಕಾರಿಗಳಲ್ಲಿ ನೈತಿಕ, ಸ್ಥೈರ್ಯ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕು.

ಹಿಂದೆ ಗಣಪತಿ ಭಟ್, ಮಲ್ಲಿಕಾರ್ಜುನ ಬಂಡೆ, ಕಲ್ಲಪ್ಪ ಹಂಡಿಬಾಗ್ ಅವರ ಅಕಾಲಿಕ ಸಾವು ಮತ್ತು ಅನುಪಮಾ ಶೆಣೈ ಅವರ ರಾಜೀನಾಮೆ ವೇಳೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ರಾಜ್ಯದಾದ್ಯಂತ “ಜಾಗಟೆ” ಬಾರಿಸಿದ್ದ ಬಿಜೆಪಿ ಈಗ ಮೌನಕ್ಕೆ ಶರಣಾಗಿದೆ. ಆತ್ಮಹತ್ಯೆ ಮಾಡಿಕೊಂಡ ಕಿರಣ್ ಕುಮಾರ್ ಅವರ ಮೊಬೈಲ್ ಫೋನನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಜಪ್ತಿ ಮಾಡಿದ್ದು ಹಲವು ಶಂಕೆಗಳಿಗೆ ಎಡೆಮಾಡಿಕೊಟ್ಟಿದೆ. ಇವರ ಸಾವಿಗೆ ಆಯಕಟ್ಟಿನ ಜಾಗದಲ್ಲಿ ಕುಳಿತ ಹಿರಿಯ ಪೊಲೀಸ್ ಅಧಿಕಾರಿಗಳ ದೌರ್ಜನ್ಯ ಹಾಗೂ ಬೆದರಿಕೆ ತಂತ್ರ ಕಾರಣ ಎಂಬ ಮಾಹಿತಿ ನನಗಿದೆ. ಬೇರೆ ಪಕ್ಷಗಳ ಆಡಳಿತಾವಧಿಯಲ್ಲಿ ಅಧಿಕಾರಿಗಳ ನಿಗೂಢ ಸಾವಿಗೆ ಸರ್ಕಾರವೇ ಕಾರಣ ಎಂದು ಬೊಬ್ಬೆ ಹಾಕಿದ್ದ ಬಿಜೆಪಿ ವರ್ಷದಿಂದ ಆಡಳಿತ ಚುಕ್ಕಾಣಿ ಹಿಡಿದಿದೆ. ಈಗ ಪಿ.ಎಸ್.ಐ, ಇದಕ್ಕೂ ಮುನ್ನ ಐಎಎಸ್ ಅಧಿಕಾರಿ, ಕಳೆದ ವರ್ಷ ಐ.ಎಫ್.ಎಸ್. ಅಧಿಕಾರಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸರ್ಕಾರ ದಿವ್ಯ ಮೌನಕ್ಕೆ ಶರಣಾಗಿರುವುದು ಸರಿಯಲ್ಲ. ಈ ಹಿಂದೆ ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆಗೆ ಶರಣಾದಾಗ ನ್ಯಾಯಸಮ್ಮತ ತನಿಖೆಗೆ ಒತ್ತಡ ಹೇರುತ್ತಿದ್ದ ಬಿಜೆಪಿ ಈ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ತಕ್ಷಣ ಆದೇಶ ನೀಡಬೇಕು. ಯಾವುದೇ ಇಲಾಖೆಯಲ್ಲಿಯೂ ಪ್ರಾಮಾಣಿಕ ಅಧಿಕಾರಿಗಳು ಕಿರುಕುಳಕ್ಕೆ ಒಳಗಾಗದಂತೆ ಎಚ್ಚರವಹಿಸಬೇಕುಅಂತಾ ಆಗ್ರಹಿಸಿದ್ದಾರೆ.