ಸಿಇಟಿ ಪರೀಕ್ಷೆ ಯಶಸ್ವಿ; ಡಿಸಿಎಂ ಸಂತಸ

ಬೆಂಗಳೂರು: ಕೋವಿಡ್-19 ಸವಾಲಿನ ನಡುವೆಯೂ ಮೊದಲ ದಿನದ ಸಿಇಟಿ ಪರೀಕ್ಷೆಯನ್ನು ರಾಜ್ಯ ಸರಕಾರ ಯಶಸ್ವಿಯಾಗಿ ನಡೆಸಿದ್ದು, ಕೊರೋನಾ ಪಾಸಿಟೀವ್ ಬಂದಿದ್ದ ವಿದ್ಯಾರ್ಥಿಗಳು ಕೂಡ ತಮಗೆ ನಿಗದಿ ಮಾಡಲಾಗಿದ್ದ ಪ್ರತ್ಯೇಕ ಜಾಗಗಳಲ್ಲಿಯೇ ನಿರಾತಂಕವಾಗಿ ಪರೀಕ್ಷೆ ಬರೆದರು.

ಬೆಂಗಳೂರಿನಲ್ಲಿ ಬುಧವಾರ ಸಂಜೆ ಆನ್ ಲೈನ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ಸಂತಸ ವ್ಯಕ್ತಪಡಿಸಿದ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ, ಬಲವಾದ ಇಚ್ಛಾಶಕ್ತಿ ಮತ್ತು ಉತ್ತಮ ತಂಡವಿದ್ದರೆ ಇಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಹುದು ಎಂಬುದನ್ನು ಸಿಇಟಿ ಪ್ರರೀಕ್ಷೆ ಸಾಬೀತುಪಡಿಸಿದೆ ಎಂದರು.

ಮೊತ್ತ ಮೊದಲಿಗೆ ಎಲ್ಲ ಸವಾಲುಗಳ ನಡುವೆಯೂ ಧೈರ್ಯವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿಗಳಿಗೂ ಹಾಗೂ ಒಂದು ಸಮಷ್ಠಿ ತಂಡವಾಗಿ ಕೆಲಸ ಮಾಡಿ ಸೈ ಎನಿಸಿಕೊಂಡ ಆರೋಗ್ಯ, ಉನ್ನತ ಶಿಕ್ಷಣ, ಸಾರಿಗೆ, ಬಿಬಿಎಂಪಿ, ಎಲ್ಲ ಜಿಲ್ಲಾಡಳಿತಗಳು ಹಾಗೂ ಪ್ರತ್ಯಕ್ಷ- ಪರೋಕ್ಷವಾಗಿ ಈ ಪ್ರಕ್ರಿಯೆಯಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಅಭಾರಿಯಾಗಿದ್ದೇನೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಉತ್ತಮ ಹಾಜರಾತಿ:

ಮೊದಲ ದಿನವಾದ ಬುಧವಾರ ಬೆಳಗ್ಗೆ ಜೀವಶಾಸ್ತ್ರ ಹಾಗೂ ಮಧ್ಯಾಹ್ನ ಗಣಿತ ಪರೀಕ್ಷೆ ನಡೆಯಿತು. ಜೀವಶಾಸ್ತ್ರಕ್ಕೆ 1,94,419 ವಿದ್ಯಾರ್ಥಿಗಳು ನೋಂದಾಯಿತರಾಗಿ 1,47,491 ಮಂದಿ ಹಾಜರಾಗಿದ್ದರು. ಒಟ್ಟು ಹಾಜರಾತಿ ಶೇ.75.89ರಷ್ಟಿತ್ತು. ಕಳೆದ ವರ್ಷ ಇದೇ ವಿಷಯದಲ್ಲಿ 1,48,022 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಇನ್ನು ಗಣಿತ ವಿಷಯಕ್ಕೆ ಬಂದರೆ, 1,94,419 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರೆ, 1,73,408 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ ಶೇ.89.22ರಷ್ಟು ಹಾಜರಾತಿ ಇದೆ. ಕಳೆದ ವರ್ಷ ಗಣಿತವನ್ನು 1,84,022 ಮಂದಿ ಬರೆದಿದ್ದರು. ಕಳೆದ ವರ್ಷ ಸಿಇಟಿ ಗೆ ಮೊದಲು ದ್ವಿತೀಯ ಪಿಯುಸಿ ಫಲಿತಾಂಶ ಬಂದಿರಲಿಲ್ಲ, ಈ ವರ್ಷ ಬಂದಿದ್ದು ಅರ್ಹರಷ್ಟೇ ಪರೀಕ್ಷೆ ಬರೆದಿದ್ದಾರೆ ಎಂದು ಡಿಸಿಎಂ ಮಾಹಿತಿ ಕೊಟ್ಟರು.

ಕೋವಿಡ್ ಪಾಸಿಟೀವ್ ವಿದ್ಯಾರ್ಥಿಗಳು:

ರಾಜ್ಯದಲ್ಲಿ ಒಟ್ಟು 60 ಮಂದಿ ಕೋವಿಡ್ ಪಾಸಿಟೀವ್ ಬಂದಿದ್ದ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ ಗಣಿತದಲ್ಲಿ 57, ಜೀವಶಾಸ್ತ್ರದಲ್ಲಿ 49 ವಿದ್ಯಾರ್ಥಿಗಳು  ಪರೀಕ್ಷೆಗೆ ಹಾಜರಾಗಿದ್ದರು. ಇವರದು ಪೂರ್ಣ ಹಾಜರಾತಿ ಎಂದೇ ಹೇಳಬಹುದು. ಇನ್ನು ಬೆಂಗಳೂರಿನಲ್ಲಿ ಎರಡು ಕೇಂದ್ರಗಳಲ್ಲಿ ಪಾಸಿಟೀವ್ ವಿದ್ಯಾರ್ಥಿಗಳಿಗೆ ಸ್ಥಳ ನಿಗದಿ ಮಾಡಲಾಗಿತ್ತು. ಕೋವಿಡ್ ಆರೈಕೆ ಕೇಂದ್ರಗಳಿರುವ ಜ್ಞಾನಭಾರತಿ ಪರೀಕ್ಷಾ ಕೇಂದ್ರದಲ್ಲಿ 6 ಹಾಗೂ ಜಿಕೆವಿಕೆ ಕೇಂದ್ರದಲ್ಲಿ 4 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ನಾನೂ ಸಹ ಜಿಕೆವಿಕೆ ಕೇಂದ್ರಕ್ಕೆ ಭೇಟಿ ನೀಡಿದ್ದೆ. ಇದೇ ಮೊದಲ ಬಾರಿಗೆ ಕೋವಿಡ್ ಆರೈಕೆ ಕೇಂದ್ರದೊಳಕ್ಕೆ ಹೋಗಿದ್ದೆ. ಆ ವಿದ್ಯಾರ್ಥಿಗಳು ಅತ್ಯಂತ ಧೈರ್ಯವಾಗಿ ಪರೀಕ್ಷೆ ಬರೆದಿದ್ದನ್ನು ಕಣ್ಣಾರೆ ಕಂಡೆ. ಅಲ್ಲಿನ ಹಿರಿಯ ವೈದ್ಯರೇ ಪರೀಕ್ಷೆಯ ಮೇಲ್ವಿಚಾರಕರಾಗಿದ್ದರು. ಆ ನಾಲ್ವರು ವಿದ್ಯಾರ್ಥಿಗಳಿಗಾಗಿ ಹತ್ತಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಪಾಸಿಟೀವ್ ಅಭ್ಯರ್ಥಿಗಳಿಗೆ ಪ್ರತ್ಯೇಕ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಎಸ್’ಪಿಒ ಪ್ರಕಾರವೇ ಕಂಟೈನ್ಮೆಂಟ್ ಝೋನ್’ನಿಂದ ಹೊರಬಂದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಪರೀಕ್ಷೆಗೆ ಹಾಜರಾಗಿದ್ದರು. ಎಲ್ಲೂ ಒಂದು ಸಣ್ಣ ಲೋಪವೂ ಇಲ್ಲದೆ ಮೊದಲ ದಿನದ ಪರೀಕ್ಷೆ ಮುಕ್ತಾಯವಾಗಿದೆ ಎಂದು ಡಿಸಿಎಂ ಹೇಳಿದರು.

ರಾಮನಗರ, ಚಿಕ್ಕೋಡಿ, ವಿಜಯಪುರ, ದಾವಣಗೆರೆ, ಗದಗ, ಹಾವೇರಿ, ಕೋಲಾರ, ಉತ್ತರ ಕನ್ನಡ, ತುಮಕೂರು, ಕೊಡಗು ಹೊರತುಪಡಿಸಿ ಉಳಿದ 22 ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟೀವ್ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದ ಅವರು, ಇನ್ನು 10-15 ದಿನಗಳಲ್ಲಿ ಫಲಿತಾಂಶ ಹೊರಬರಲಿದೆ. ಈ ವರ್ಷ ಕೌನ್ಸೆಲಿಂಗ್ ಸೇರಿ ಎಲ್ಲವೂ ಆನ್’ಲೈನ್’ನಲ್ಲಿಯೇ ನಡೆಯಲಿದೆ. ವಿದ್ಯಾರ್ಥಿಗಳು ನೇರವಾಗಿ ಕಾಲೇಜಿಗೇ ಹೋಗಿ ಪ್ರವೇಶ ಪಡೆಯಬಹುದು ಎಂದು ಅವರು ತಿಳಿಸಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಚರ್ಚೆ ಆರಂಭಿಸಿದ ಡಿಸಿಎಂ

ಬೆಂಗಳೂರು: ಕೇಂದ್ರ ಸರಕಾರದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮುಕ್ತಕಂಠದಿಂದ ಸ್ವಾಗತ ಮಾಡಿರುವ ರಾಜ್ಯ ಸರಕಾರವು ಅದನ್ನು ಹಂತ ಹಂತವಾಗಿ ಜಾರಿ ಮಾಡಲು ನಿರ್ಧರಿಸಿದೆ. ಆ ನಿಟ್ಟಿನಲ್ಲಿ ತಜ್ಞರ ಜತೆ ಮೊದಲ ಸಭೆ ನಡೆಸಿದೆ.

ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು, ನಿವೃತ್ತ ಐಎಎಸ್ ಅಧಿಕಾರಿ ಎಸ್.ವಿ. ರಂಗನಾಥ್ ನೇತೃತ್ವದಲ್ಲಿ ಈಗಾಗಲೇ ರಚನೆ ಮಾಡಲಾಗಿರುವ ಉನ್ನತ ಶಿಕ್ಷಣ ಕಾರ್ಯಪಡೆಯ ಸದಸ್ಯರ ಜತೆ ಮಹತ್ವದ ಮಾತುಕತೆ ನಡೆಸಿದರು. ಹಾಗೆ ನೋಡಿದರೆ, ರಾಜ್ಯ ಸರಕಾರವು ಈ ಶಿಕ್ಷಣ ನೀತಿಯ ಬಗ್ಗೆ ಕ್ಷಿಪ್ರವಾಗಿ ಸ್ಪಂದಿಸಿದ್ದು, ಅಷ್ಟೇ ಕ್ಷಿಪ್ರವಾಗಿ ಜಾರಿ ಮಾಡುವ ಬಗ್ಗೆಯೂ ತನ್ನ ಬದ್ಧತೆಯನ್ನು ತೋರಿದೆ.

ಈ ನೀತಿಯನ್ನು ಹೇಗೆ ಜಾರಿ ಮಾಡಬೇಕು? ಎಷ್ಟು ಹಂತಗಳಲ್ಲಿ ಮಾಡಬೇಕು? ಅದಕ್ಕೆ ಮಾಡಿಕೊಳ್ಳಬೇಕಾದ ಸಿದ್ಧತೆ ಮತ್ತಿತರೆ ಅಂಶಗಳ ಬಗ್ಗೆ ಚರ್ಚೆ ನಡೆಸಿದ ಡಿಸಿಎಂ ಅವರು, ದೇಶದಲ್ಲಿಯೇ ಈ ನೀತಿಯನ್ನು ಕರ್ನಾಟಕದಲ್ಲಿಯೇ ಮೊದಲು ಜಾರಿ ಮಾಡುವಂತಾಗಬೇಕು ಎಂದು ಸಭೆಯಲ್ಲಿ ಹೇಳಿದರು.

ಈ ಬಗ್ಗೆ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಸಲಹೆಗಳನ್ನು ನೀಡಿದರಲ್ಲದೆ, ಅಗಸ್ಟ್ 16ರಂದು ಶಿಕ್ಷಣ ನೀತಿಯನ್ನು ಜಾರಿ ಮಾಡುವ ಬಗ್ಗೆ ಒಂದು ಪ್ರೆಸೆಂಟೇಷನ್ ನೀಡುವುದು ಹಾಗೂ ಅದೇ ತಿಂಗಳ 20ರಂದು ಕಾರ್ಯಪಡೆ ಒಂದು ಸಮಗ್ರ ವರದಿ ನೀಡಬೇಕು ಎಂಬುದಾಗಿ ಸಭೆಯಲ್ಲಿ ತೀರ್ಮಾನವಾಗಿದೆ. 3 ತಿಂಗಳ ಹಿಂದೆಯೇ ಕೇಂದ್ರ ಸರಕಾರದಿಂದ ಈ ನೀತಿಯ ಕರಡು ಬಂದಾಗಲೇ ಅದನ್ನು ಸೂಕ್ತ ರೀತಿಯಲ್ಲಿ ಪರಾಮರ್ಶಿಸಿ ಜಾರಿ ಮಾಡುವ ಬಗ್ಗೆ ಎಸ್.ವಿ. ರಂಗನಾಥ್ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿತ್ತು.

ಪಕ್ಕಾ ಸಿದ್ಧತೆಯೊಂದಿಗೆ ಜಾರಿ:

ಸಭೆಯ ನಂತರ ಆನ್’ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಸಿ.ಎನ್. ಅಶ್ವತ್ಥನಾರಾಯಣ, ಬುಧವಾರ ಹೊಸ ನೀತಿಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದ್ದು, ನಮ್ಮ ಹೆಮ್ಮೆಯ ಕನ್ನಡಿಗರಾದ ಡಾ. ಕಸ್ತೂರಿ ರಂಗನ್ ಅಧ್ಯಕ್ಷತೆಯ, ಡಾ. ಎಂ.ಕೆ. ಶ್ರೀಧರ್ ಸದಸ್ಯರಾಗಿದ್ದ ಸಮಿತಿ ಈ ನೀತಿಯನ್ನು ರೂಪಿಸಿದೆ. ಅತ್ಯಂತ ಸುಸ್ಥಿರ ಹಾಗೂ ದೇಶದ ಸಮಗ್ರ ಅಭಿವೃದ್ಧಿಗೆ ಪೂಕವಾಗಿರುವ ನೀತಿಯನ್ನು ಸ್ವಾಗತಿಸಿ ಕಾರ್ಯಪಡೆ ಸಭೆಯಲ್ಲಿ ನಿರ್ಣಯವೊಂದನ್ನು ಅಂಗೀಕರಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

ನಮ್ಮ ದೇಶದ ಹಿರಿಮೆ, ಗರಿಮೆಯನ್ನು ಎತ್ತಿ ಹಿಡಿಯುವ, ವಿಶ್ವಮಾನವ ಪರಿಕಲ್ಪನೆಗೆ ಪೂರಕವಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯೂ ಬಲಿಷ್ಠ ಹಾಗೂ ಭವ್ಯ ಭಾರತ ಕಟ್ಟುವಲ್ಲಿ ಖಂಡಿತವಾಗಿಯೂ ಮಹತ್ವದ ಪಾತ್ರ ವಹಿಸಲಿದೆ. ಅದರಲ್ಲೂ ಶೈಕ್ಷಣಿಕವಾಗಿ ಸದಾ ಹೊಸತನಕ್ಕೆ ತುಡಿಯುವ ಕರ್ನಾಟಕಕ್ಕೆ ಹೊಸ ನೀತಿಯೂ ಮತ್ತಷ್ಟು ಶಕ್ತಿ ತುಂಬಲಿದೆ ಎಂಬ ವಿಶ್ವಾಸವನ್ನು ಡಿಸಿಎಂ ವ್ಯಕ್ತಪಡಿಸಿದರು.

ಮೊದಲಿದ್ದ ಶಿಕ್ಷಣ ಪದ್ಧತಿಯೂ ಕೇವಲ ಅಕಾಡೆಮಿಕ್ ಕಡೆಗೇ ಹೆಚ್ಚು ಫೋಕಸ್ ಆಗಿತ್ತು. ಆದರೆ ಹೊಸ ಶಿಕ್ಷಣ ನೀತಿ 360 ಡಿಗ್ರಿ ಕೋನದಲ್ಲಿ ವಿಶಾಲ ದೃಷ್ಟಿಕೋನದಲ್ಲಿದೆ. ಎಲ್ಲ ರೀತಿಯ ಶೈಕ್ಷಣಿಕ ಪರಿಹಾರಗಳೂ ಅದರಲ್ಲಿವೆ. ಹೀಗಾಗಿ ಭಾರತದ ಮುಂದಿನ ಬೆಳವಣಿಗೆಯಲ್ಲಿ ಇದು ಅತ್ಯಂತ ಗುರುತರ ಪಾತ್ರ ವಹಿಸಲಿದೆ. 34 ವರ್ಷಗಳ ನಂತರ ಆಗಿರುವ ಅತಿ ಮಹತ್ವದ ಸುಧಾರಣೆ ಇದು. ಈ ಸುಧಾರಣೆಗಾಗಿ ನಾನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ಸಭೆಯಲ್ಲಿ ಸ್.ವಿ. ರಂಗನಾಥ್, ಪ್ರೊ. ತಿಮ್ಮೇಗೌಡ, ಶಾಸಕ ಅರುಣ್ ಶಹಾಪುರ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಮಣ ರೆಡ್ಡಿ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಹಾಲ್ಗೊಂಡಿದ್ದರು. ಪ್ರೊ. ಎಂ.ಕೆ. ಶ್ರೀಧರ್ ಅವರು ಆನ್’ಲೈನ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು.

ಐವರು ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು: ಐವರು ನಾಮ ನಿರ್ದೆಶನಗೊಂಡ ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಸಿ.ಪಿ. ಯೋಗೇಶ್ವರ್, ಎಚ್. ವಿಶ್ವನಾಥ್, ಶಾಂತಾರಾಮ್ ಸಿದ್ದಿ, ಭಾರತಿ ಶೆಟ್ಟಿ ಹಾಗೂ ಸಾಬಣ್ಣ ತಳವಾರ ಪ್ರಮಾಣ ವಚನ ಸ್ವೀಕರಿಸಿದರು.ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಪ್ರತಿಜ್ಞಾ ವಿಧಿ ಬೋಧಿಸಿದರು.

ನಂತರ ಸುದ್ದಿಗೋಷ್ಟಿ ನಡೆಸಿದ ಎಚ್. ವಿಶ್ವನಾಥ್,
ನಾಮ.ನಿರ್ದೇಶನಕ್ಕೆ ಅವಕಾಶ ಕಲ್ಪಿಸಿದ ಪ್ರಧಾನಿ ಮೋದಿ,ಕೇಂದ್ರ ಗೃಹ ಸಚಿವ ಅಮಿತ್ ಶಾ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ. ನಡ್ಡಾ,ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ರು.ಭಾರತೀಯ ಜನತಾ ಪಕ್ಷದ ಇಡಿ ಕುಟುಂಬ ನಮಗೆ ಆಶೀರ್ವಾದ ಮಾಡಿರುವುದು ಸಂತೋಷವಾಗಿದೆ ಎಂದ್ರು.

ನಮ್ಮ ಮೇಲೆ ದೊಡ್ಡ ಜವಾಬ್ದಾರಿ ಇದೆ. ಕೊರೋನಾ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಎಲ್ಲ ಜನ ಪ್ರತಿನಿಧಿಗಳು ಕೊರೊನಾ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ನಾವೂ ಅವರೊಂದಿಗೆ ಕೈ ಜೋಡಿಸಿ ಕೆಲಸ ಮಾಡುತ್ತೇವೆ ಎಂದ್ರು.

ಶಾಂತಾರಾಮ್ ಬುಡ್ನಾ ಅವರು ಆ ಸಮಾಜದ ಅಭಿವೃದ್ಧಿಗೆ ಎಲೆ ಮರೆ.ಕಾಯಿಯಂತೆ ಕೆಲಸ ಮಾಡುತ್ತಿದ್ದರು. ಅವರ ಸಮುದಾಯದ ಮಕ್ಕಳ ಶಿಕ್ಷಣ ಹಾಗೂ ಸಮಾಜದ ಅಭಿವೃದ್ಧಿಗೆ ಸರ್ಕಾರದ ಮಟ್ಟದಿಂದಲೂ ಎಲ್ಲ ಸಹಕಾರ ನೀಡುತ್ತದೆ.ಬಿಜೆಪಿ ಎಲ್ಲ ಜಾತಿ ಜನಾ ಜನಾಂಗಕ್ಕೆ ಅವಕಾಶ ನೀಡುತ್ತಿದೆ. ಇದು ಪಕ್ಷದ ಕಾರ್ಯ ಕರ್ತರಿಗೆ ಉತ್ಸಾಹ ಹೆಚ್ಚಾಗುವಂತೆ ಮಾಡಿದೆ ಎಂದ್ರು‌

ನಾಲಿಗೆ ಮೇಲೆ ನಿಂತ ನಾಯಕ ಯಡಿಯೂರಪ್ಪ.ಮಾತಿಗೆ ತಪ್ಪದ ನಾಯಕ ಯಡಿಯೂರಪ್ಪ.ನಾವೆಲ್ಲ ಅವರ ಬೆಂಬಲಕ್ಕೆ ಇದೀವ ಎಂದ್ರು.

ಸಿ.ಪಿ ಯೋಗೇಶ್ವರ್ ಮಾತನಾಡಿ,ನನ್ನ ಆಯ್ಕೆಯಲ್ಲಿ ಪಕ್ಷದಲ್ಲಿ ಯಾರಿಗೂ ಅಸಮಾಧಾನ ಇಲ್ಲ. ಪಕ್ಷ ಹಾಗೂ ಯಡಿಯೂರಪ್ಪ ಎಲ್ಲರೂ ಒಮ್ಮತದಿಂದ ಆಯ್ಕೆ ಮಾಡಿದಾರೆ. ನನ್ನನ್ನು ಪರಿಷತ್ ಸದಸ್ಯನನ್ನಾಗಿ ಆಯ್ಕೆ ಮಾಡಿರುವುದು ಪುಣ್ಯ, ಸಂಪುಟಕ್ಕೆ ಸೇರಿಸಿಕೊಳ್ಳುವುದು ಪಕ್ಷದ ನಾಯಕರಿಗೆ ಬಿಟ್ಟ ವಿಚಾರ ಎಂದ್ರು.

ಡಿ.ಕೆ ಶಿವಕುಮಾರ್ ಅವರು ಕುಮಾರಸ್ವಾಮಿ ಮೂಲ ಕ್ಷೇತ್ರ ರಾಮನಗರದಲ್ಲಿಯೇ ಅವರ ಬುಡಕ್ಕೆ ಕೈ ಹಾಕಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಡಿ.ಕೆ.ಶಿ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಡಿ.ಕೆ.ಶಿ ಹಾಗೂ ಕುಮಾರಸ್ವಾಮಿ ಅನುಕೂಲಕ್ಕೆ ತಕ್ಕಂತೆ ರಾಜಕಾರಣ ಮಾಡುತ್ತಾರೆ.ಇಷ್ಟು ದಿನ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಬಂದಿದ್ದರು. ಈಗ ಇಬ್ಬರಿಗೂ ಅಸ್ತಿತ್ವದ ಪ್ರಶ್ನೆಯಾಗಿದೆ ಹೀಗಾಗಿ ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಿದ್ದಾರೆ ಎಂದ್ರು.

ಕುಮಾರಸ್ವಾಮಿಗೆ ಈಗ ಅಸ್ತಿತ್ವದ ಪ್ರಶ್ನೆ ಇದೆ ಅದಕ್ಕೆ ಮಾತನಾಡುತ್ತಿದ್ದಾರೆ. ಅವರ ಮಾತುಗಳನ್ನು ಮೇಲ್ನೋಟಕ್ಕೆ ನೋಡಿದರೆ ಬಿಜೆಪಿಗೆ ಬೆಂಬಲ ಕೊಡುತ್ತಿದ್ದಾರೆ ಅಂತ ಕಾಣಿಸುತ್ತಿದೆ. ನಮ್ಮ ಸರ್ಕಾರದಲ್ಲಿ ಕುಮಾರಸ್ವಾಮಿ ಹೇಳಿರುವ ಎಲ್ಲ ಕೆಲಸಗಳೂ ಆಗುತ್ತಿವೆ. ಅವರು ಹೇಳಿದ ಅಧಿಕಾರಿಗಳನ್ನು ವರ್ಗಾವಣೆ ಮಾಡಿಕೊಡಲಾಗುತ್ತಿದೆ. ಹೀಗಾಗಿ ಅವರೂ ಬಿಜೆಪಿಗೆ ಸಫೋರ್ಟ್ ಮಾಡಲು ಮುಂದಾಗಿದ್ದಾರೆ.ಡಿ. ಕೆ. ಶಿವಕುಮಾರ್ ಹಗಲು ಹೊತ್ತಲ್ಲಿ ಮಾತ್ರ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡುತ್ತಾರೆ. ರಾತ್ರಿಯಾದರೆ ನಮ್ಮ ಮುಖ್ಯಮಂತ್ರಿ ಬಳಿ ಬಂದು ಕೆಲಸ ಮಾಡಿಸಿಕೊಳ್ಳುತ್ತಾರೆ.ಇಬ್ಬರೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿ ಮುಂದುವರೆಯಲಿ ಎಂದು ಬಯಸುತ್ತಾರೆ.ಇಬ್ಬರೂ ನಾಯಕರು ಸಂದರ್ಭಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಅವರನ್ನ ನಂಬಿ ಕಾರ್ಯಕರ್ತರು ಹಾಳಾಗ್ತಿರಿ ಅದಕ್ಕೆ ಬಿಜೆಪಿ ಸೇರುವಂತೆ ಬಹಿರಂಗವಾಗಿ ಆಹ್ವಾನ ನೀಡುತ್ತಿದ್ದೇನೆ ಎಂದ್ರು.

ಮೀನುಗಾರಿಕೆ ಇಲಾಖೆಯ ಕ್ರಿಯಾ ಯೋಜನೆ ಬಿಡುಗಡೆ

ಬೆಂಗಳೂರು: ವಿಶ್ವ ಮೀನುಗಾರಿಕೆ ಕೃಷಿ ದಿನಾಚರಣೆ ಅಂಗವಾಗಿ ಇಂದು ಮಾನ್ಯ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮೀನುಗಾರಿಕೆ ಇಲಾಖೆಯ ಕ್ರಿಯಾ ಯೋಜನೆಯನ್ನು ಬಿಡುಗಡೆಗೊಳಿಸಿದರು.

ಮೀನುಗಾರಿಕೆಯಲ್ಲಿ ನಿರತರಾಗಿದ್ದ ವೇಳೆ ಮೃತಪಟ್ಟ ಮೀನುಗಾರರಿಗೆ ಸಂಕಷ್ಟ ಪರಿಹಾರ ನಿಧಿಯಿಂದ ಮಂಜೂರುಗೊಂಡ ತಲಾ 6 ಲಕ್ಷದ ಚೆಕ್ ಗಳನ್ನು ಸಾಂಕೇತಿಕವಾಗಿ ಇಬ್ಬರು ಮೀನುಗಾರರ ಕುಟುಂಬದ ಸದಸ್ಯರಿಗೆ ವಿತರಿಸಲಾಯಿತು.

ಮೀನುಗಾರಿಕೆ ಹಾಗೂ ಬಂದರು ಇಲಾಖೆಯು ಮೂಲಕ ಮೀನುಗಾರಿಕೆಯ ಸಮಗ್ರ ಅಭಿವೃದ್ಧಿಗೆ ಕಾರ್ಯೋನ್ಮುಖರಾಗಿರುವ ಮಾನ್ಯ ಮುಖ್ಯಮಂತ್ರಿಗಳಿಗೆ ಕರಾವಳಿ ಜಿಲ್ಲೆಗಳ ಮೀನುಗಾರರ ಪರವಾಗಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಬೆಳ್ಳಿಯ ಮೀನು ಸ್ಮರಣಿಕೆ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್ ಅಶೋಕ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಮೀನುಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ  ಮಣಿವಣ್ಣನ್, ಉಡುಪಿ ಶಾಸಕ ಕೆ ರಘುಪತಿ ಭಟ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕೋವಿಡ್ ಹೋರಾಟಕ್ಕೆ ಸಹಕರಿಸದ ಖಾಸಗಿ ಆಸ್ಪತ್ರೆಗಳ ವಿರುದ್ಧ ಖಡಕ್ ಕ್ರಮ: ಸಚಿವ ಡಾ.ಕೆ.ಸುಧಾಕರ್ ಸೂಚನೆ

ಬೆಂಗಳೂರು, ಜುಲೈ 30, ಗುರುವಾರ: ರಾಜ್ಯದಲ್ಲಿ ಕೋವಿಡ್ ವಿರುದ್ಧದ ಹೋರಾಟಕ್ಕೆ ಸರ್ಕಾರಕ್ಕೆ ಸಹಕರಿಸದ ಖಾಸಗಿ ಆಸ್ಪತ್ರೆಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೂಚಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆಗೂ ಚರ್ಚಿಸುವುದಾಗಿ ಅವರು ತಿಳಿಸಿದ್ದಾರೆ.

ಕೋವಿಡ್ ಗೆ ಸಂಬಂಧಿಸಿದ ಚಟುವಟಿಕೆಗಳ ಬಗ್ಗೆ ಪರಿಶೀಲಿಸಲು ಸಚಿವರ ನೇತೃತ್ವದಲ್ಲಿ ಗುರುವಾರ ನಡೆದ ವೀಡಿಯೋ ಕಾನ್ಫರೆನ್ಸ್ ನಲ್ಲಿ ಈ ಕುರಿತು ಚರ್ಚೆಯಾಯಿತು.

ಸರ್ಕಾರಿ ಆಸ್ಪತ್ರೆಗಳಿಗೆ ಕೊರೊನಾ ರೋಗಿಗಳು ದಾಖಲಾಗುತ್ತಿದ್ದಾರೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾತಿ ನಿರಾಕರಿಸುವುದು, ಹೆಚ್ಚು ಶುಲ್ಕ ವಿಧಿಸುವುದು ಕಂಡುಬರುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಕೆಪಿಎಂಇ ಕಾಯ್ದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ಆಯಾ ವಲಯದ ಜಂಟಿ ಆಯುಕ್ತರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಇದನ್ನು ಬಳಸಿಕೊಂಡು ಅಧಿಕಾರಿಗಳು ಕ್ರಮ ಜರುಗಿಸಬೇಕು. ಕ್ರಮ ಕೈಗೊಳ್ಳಲು ಪೊಲೀಸರ ಸಹಕಾರ ಪಡೆಯಬಹುದು. ಈ ಕುರಿತು ಮುಖ್ಯಮಂತ್ರಿಗಳ ಬಳಿಯೂ ಚರ್ಚೆ ಮಾಡುತ್ತೇನೆ ಎಂದು ಸಚಿವರು ಸಭೆಗೆ ತಿಳಿಸಿದರು.

ನಂತರ ಸಚಿವರು ಬಿಬಿಎಂಪಿಯ ಪ್ರತಿ ವಲಯದ ಜಂಟಿ ಆಯುಕ್ತರೊಂದಿಗೆ ಮಾತನಾಡಿ, ಕೊರೊನಾ ಪತ್ತೆ ಪರೀಕ್ಷೆಯ ಬಗ್ಗೆ ಮಾಹಿತಿ ಪಡೆದರು. ಪ್ರತಿ ವಲಯದಲ್ಲಿ ಈಗ ನಡೆಯುತ್ತಿರುವ ಪರೀಕ್ಷೆ ಸಂಖ್ಯೆಯನ್ನು ಮೂರರಿಂದ ನಾಲ್ಕು ಪಟ್ಟು ಹೆಚ್ಚಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಹಿರಿಯ ಅಧಿಕಾರಿಗಳಾದ ಶಾಲಿನಿ ರಜನೀಶ್, ತುಷಾರ್ ಗಿರಿನಾಥ್, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ವೀಡಿಯೋ ಕಾನ್ಫರೆನ್ಸ್ ನಲ್ಲಿ ಪಾಲ್ಗೊಂಡಿದ್ದರು.

*ಸಭೆಯ ಮುಖ್ಯಾಂಶಗಳು*

*ಕೊರೊನಾ ಪತ್ತೆ ಪರೀಕ್ಷೆಗೆ ಸಿಬ್ಬಂದಿ ಕೊರತೆ ಎದುರಾಗಿದೆ. ಇದರಿಂದಾಗಿ ಪರೀಕ್ಷೆಗಳ ಸಂಖ್ಯೆ ಕಡಿಮೆಯಾಗಿದೆ. ಇದಕ್ಕಾಗಿ ಮೆಡಿಕಲ್ ಕಾಲೇಜುಗಳ ಎಂಬಿಬಿಎಸ್ ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬಹುದು. ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾಗಿಯಾಗುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹವಾಗಿ ಇಂಟರ್ನಲ್ ಅಂಕಗಳನ್ನು ನೀಡಬೇಕು. ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಕೊರೊನಾ ಕಾರ್ಯದಲ್ಲಿ ಭಾಗಿಯಾಗುವಂತೆ ಸೂಚಿಸಬೇಕು.

*ಬಿಬಿಎಂಪಿಯ ಪ್ರತಿ ಬೂತ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಿ ಕೋವಿಡ್ ನಿಯಂತ್ರಣ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಇನ್ನು 2-3 ದಿನಗಳಲ್ಲಿ ಟಾಸ್ಕ್ ಫೋರ್ಸ್ ತಂಡಗಳು ರಚನೆಯಾಗಬೇಕು.

*ಬಿಬಿಎಂಪಿ ವಲಯ ಮಟ್ಟದಲ್ಲಿ ನಿಗದಿಪಡಿಸಿದಂತೆ ಕೊರೊನಾ ಪರೀಕ್ಷೆ ನಡೆಯುತ್ತಿಲ್ಲ. ವಲಯದ ಜಂಟಿ ಆಯುಕ್ತರು ತಮಗೆ ನೀಡಿದ ಗುರಿಯನ್ನು ತಲುಪಬೇಕು. ಪ್ರತಿ ದಿನ ನಡೆಸಿದ ಪರೀಕ್ಷೆಯ ಸಂಖ್ಯೆಯನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸಬೇಕು.

*ಲಕ್ಷಣ ರಹಿತ ರೋಗಿಗಳನ್ನು (ಎ ಸಿಂಪ್ಟಮೆಟಿಕ್) ಆಸ್ಪತ್ರೆಗೆ ಸೇರಿಸಬಾರದು. ಅಂತಹವರಿಗೆ ಮನೆ ಆರೈಕೆಗೆ ವ್ಯವಸ್ಥೆ ಮಾಡಬೇಕು. ವೃದ್ಧರು, ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಗುರುತಿಸಿ ರಿವರ್ಸ್ ಕ್ವಾರಂಟೈನ್ ಗೆ ಒಳಪಡಿಸಬೇಕು.

ಪಿಪಿಇ ಕಿಟ್ ಧರಿಸಿ ಕೋವಿಡ್ ಕೇರ್ ಸಿಇಟಿ ಪರೀಕ್ಷಾ ಕೇಂದ್ರ ಪ್ರವೇಶಿಸಿದ ಡಿಸಿಎಂ

ಬೆಂಗಳೂರು: ನಗರದ ಜಿಕೆವಿಕೆ ಕ್ಯಾಂಪಸ್’‌ನಲ್ಲಿರುವ ರೈತ ತರಬೇತಿ ಸಂಸ್ಥೆ ಮತ್ತು ವಸತಿ ನಿಲಯದ ಕೋವಿಡ್ ಕೇರ್ ಸೆಂಟರ್’ನಲ್ಲಿನ ಸಿಇಟಿ ಕೇಂದ್ರಕ್ಕೆ ಬುಧವಾರ ಬೇಟಿ ನೀಡಿದ ಉಪ ಮುಖ್ಯಮಂತ್ರಿ
ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು, ಅಲ್ಲಿ ಪರೀಕ್ಷೆಗೆ ಹಾಜರಾಗಿದ್ದ ನಾಲ್ವರು ವಿದ್ಯಾರ್ಥಿಗಳ ಕ್ಷೇಮ ವಿಚಾರಿಸಿದರು.

ಸ್ವತಃ ಡಿಸಿಎಂ ಅವರೇ ಪಿಪಿಇ ಕಿಟ್ ಧರಿಸಿ ಪರೀಕ್ಷಾ ಕೇಂದ್ರದ ಒಳಗೆ ಹೋದರಲ್ಲದೆ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು ಹಾಗೂ ಖುಷಿಯಾಗಿ ಪರೀಕ್ಷೆ ಎದುರಿಸುವಂತೆ ಹೇಳಿದರು. ಜತೆಗೆ, ಅವರಿಗೆ ಒದಗಿಸಲಗಿರುವ ಸೌಲಭ್ಯಗಳ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಂಡರು. ರೋಗ ಲಕ್ಷಣ ಇಲ್ಲದ ನಾಲ್ವರು ಕೋವಿಡ್ ಪಾಸಿಟಿವ್ ಪೇಷೆಂಟ್’ಗಳು ಇಲ್ಲಿ ಪರೀಕ್ಷೆ ಬರೆಯುತ್ತಿದ್ದು, ಯಾವುದೇ ಸಮಸ್ಯೆ ಇಲ್ಲದೆ ನಮ್ಮನ್ನು ಆಂಬುಲೆನ್ಸ್ ನಲ್ಲಿ ನಮ್ಮ ಕರೆತರಲಾಯಿತು ಎಂದು ವಿದ್ಯಾರ್ಥಿಗಳು ಉಪ ಮುಖ್ಯಮಂತ್ರಿಗೆ ತಿಳಿಸಿದರು.

ಕೋವಿಡ್ ಸೋಂಕಿನ ನಡುವೆಯೂ ಉತ್ಸಾಹದಿಂದ ಸಿಇಟಿ ಪರೀಕ್ಷೆಗೆ ಹಾಜರಾಗಿರುವ ಆ ವಿದ್ಯಾರ್ಥಿಗಳನ್ನು ಡಿಸಿಎಂ ಅಭಿನಂದಿಸಿದರು. “ನಿಮ್ಮ ಶ್ರದ್ಧೆ, ನಿಮ್ಮ ಕಮಿಟ್’ಮೆಂಟ್ ಬಗ್ಗೆ ತುಂಬಾ ಮೆಚ್ಚುಗೆ ಇದೆ. ಮುಂದಿನ ವಿಷಯಗಳನ್ನು ಉತ್ತಮವಾಗಿ ಎದುರಿಸಿ. ನಿಮಗೆಲ್ಲ ಒಳ್ಳೆಯದೇ ಆಗುತ್ತದೆ” ಎಂದು ಡಿಸಿಎಂ ಶುಭ ಹಾರೈಸಿದರು.

ವೈದ್ಯರೇ ಮೇಲ್ವಿಚಾರಕರು:

ಈ ಪರೀಕ್ಷಾ ಕೇಂದ್ರದಲ್ಲಿ ವೈದ್ಯರೇ ಪರೀಕ್ಷಾ ಕೊಠಡಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದ್ದು ಬಹಳ ವಿಶೇಷ. ವೈದ್ಯರ ಜತೆಗೆ ಒಬ್ಬ ನರ್ಸ್ ಕೂಡ ಇದ್ದರಲ್ಲದೆ, ನಾಲ್ವರಷ್ಟೇ ಬರೆದ ಈ ಪರೀಕ್ಷಾ ಕೇಂದ್ರದಲ್ಲಿ 10ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ವೈದ್ಯರು ಮತ್ತು ನರ್ಸ್’ ಮತ್ತಿತರೆ ಎಲ್ಲ ಸಿಬ್ಬಂದಿಗೂ ಕೃತಜ್ಞತೆ ಸಲ್ಲಿಸಿದ ಡಿಸಿಎಂ, ಅವರ ಜತೆಯೂ ಮಾತುಕತೆ ನಡೆಸಿದರು.

“ಯಾವಾಗಲೂ ವೈದ್ಯ ವೃತ್ತಿಯಲ್ಲೇ ಸಂತೋಷ ಕಾಣುತ್ತಿದ್ದ ನಮಗೆ ಪರೀಕ್ಷಾ ಕೇಂದ್ರದ ಮೇಲ್ವಿಚಾರಣೆ ಮಾಡಿದ್ದೂ ಖುಷಿ ತಂದಿದೆ. ಕೋವಿಡ್-19 ದಂತಹ ಸಂಕಷ್ಟ ಸಮಯದಲ್ಲಿ ಈ ಕೆಲಸವನ್ನು ಮಾಡಲೇಬೇಕಾಯಿತು. ಇದೊಂದು ರೀತಿಯ ಹೊಸ ಅನುಭವ” ಎಂದು ಆ ವೈದ್ಯರು ಹೇಳಿದರು.