ಸಿಇಟಿ ಪರೀಕ್ಷೆ ನಿರಾತಂಕ; ಪರೀಕ್ಷಾ ಕೇಂದ್ರಗಳನ್ನು ಪರಿಶೀಲಿಸಿದ ಡಿಸಿಎಂ

ಬೆಂಗಳೂರು: ಸಿಇಟಿ ಪರೀಕ್ಷೆ ರಾಜ್ಯದೆಲ್ಲೆಡೆ ಆರಂಭವಾಗಿದ್ದು, ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್ . ಅಶ್ವತ್ಥನಾರಾಯಣ, ಬೆಂಗಳೂರಿನ ಎರಡು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಕೋವಿಡ್-19 ಹಿನ್ನೆಲೆಯಲ್ಲಿ ಕೈಗೊಂಡಿರುವ ಎಲ್ಲ ಎಚ್ಚರಿಕೆ ಕ್ರಮಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದರು.

ಮಲ್ಲೇಶ್ವರದ ಎಂಇಎಸ್ ಕಾಲೇಜು ಹಾಗೂ ಶೇಷಾದ್ರಿಪುರಂ ಕಾಂಪೋಸಿಟ್ ಪಿಯು ಕಾಲೇಜಿಗೆ ಭೇಟಿ ನೀಡಿದ ಅವರು, ಸ್ಯಾನಿಟೈಸರ್ ಹಾಕುವುದು, ಥರ್ಮೊಮೀಟರ್ ಇಟ್ಟು ಪರಿಶೀಲಿಸುವ ವ್ಯವಸ್ಥೆ ನೋಡಿದರು. ಸಾರಿಗೆ, ಆರೋಗ್ಯ, ಪೊಲೀಸ್ ಮತ್ತು ಉನ್ನತ ಶಿಕ್ಷಣ ಇಲಾಖೆಗಳೆಲ್ಲ ಸೇರಿ ಕೈಗೊಂಡಿರುವ ಕ್ರಮಗಳ ಬಗ್ಗೆ ಡಿಸಿಎಂ ಮೆಚ್ವುಗೆ ವ್ಯಕ್ತಪಡಿಸಿದರು.

ಜತೆಗೆ, ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರಲ್ಲದೆ ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ಬರಲು ಏನಾದರೂ ಸಮಸ್ಯೆ ಆಯತೇ? ಬಸ್ ವ್ಯವಸ್ಥೆ ಇತ್ತೆ? ಪರೀಕ್ಷಾ ಕೇಂದ್ರದಲ್ಲಿ ಎಲ್ಲ ರೀತಿಯ ಮಾರ್ಗದರ್ಶನ ಸಿಕ್ಕಿತೆ? ಎಂಬಿತ್ಯಾದಿ ಸಂಗತಿಗಳ ಬಗ್ಗೆ ಮಾಹಿತಿ ಪಡೆದರು.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಹೀಗಾಗಿ ಪೋಷಕರು ಮತ್ತು ವಿದ್ಯಾರ್ಥಿಗಳು ಆತಂಕಕ್ಕೆ ಗುರಿಯಾಗಬೇಕಾದ ಅಗತ್ಯವಿಲ್ಲ. ವಿದ್ಯಾರ್ಥಿಗಳು ನಿರಾಳವಾಗಿ ಪರೀಕ್ಷೆ ಬರೆಯಲಿ ಎಂದು ಶುಭ ಹಾರೈಸಿದರು.

ಕಟ್ಟುನಿಟ್ಟಿನ ಎಚ್ಚರಿಕೆ:

ಕೋವಿಡ್-19 ಹಿನ್ನೆಲೆ ಹಾಗೂ ಹೈಕೋರ್ಟ್ ನೀಡಿರುವ ಸೂಚನೆಯ ಅನುಸಾರ ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಮಾಸ್ಕ್ ಕಡ್ಡಾಯ, ಸ್ಯಾನಿಟೈಸರ್ ಬಳಕೆ, ದೈಹಿಕ ಅಂತರ ಇತ್ಯಾದಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ. ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳನ್ನು ಕೂರಿಸಲಾಗಿದೆ. ಪಾಸಿಟೀವ್ ಬಂದಿರುವ ವಿದ್ಯಾರ್ಥಿಗಳಿಗೆ ಸಂಪೂರ್ಣ ಪ್ರತ್ಯೇಕ ಕೊಠಡಿಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಸರಕಾರದಿಂದ ಮಾಡಲಾಗಿರುವ ವ್ಯವಸ್ಥೆಗಳಲ್ಲಿ ಎಲ್ಲೂ ಲೋಪವಾಗಿಲ್ಲ. ವಿದ್ಯಾರ್ಥಿಗಳು ಸಂತೋಷದಿಂದ ಪರೀಕ್ಷೆ ಬರೆಯುತ್ತಿದ್ದಾರೆಂದು ಡಿಸಿಎಂ ಮಾಹಿತಿ ನೀಡಿದರು.

1,94,356 ವಿದ್ಯಾರ್ಥಿಗಳು:

ರಾಜ್ಯಾದ್ಯಂತ 1,94,356 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಒಟ್ಟು 497 ಕೇಂದ್ರಗಳಿವೆ. ಬೆಂಗಳೂರು ನಗರದಲ್ಲಿ 83 ಕೇಂದ್ರಗಳಲ್ಲಿ, 40,200 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಕೋವಿಡ್ ಪಾಸಿಟೀವ್ ಬಂದಿರುವ 40 ವಿದ್ಯಾರ್ಥಿಗಳು ಇದ್ದಾರೆ. ಇದರಲ್ಲಿ ಬೆಂಗಳೂರಿನಲ್ಲಿ 12 ಮಂದಿ ಇದ್ದಾರೆ. ಜ್ಞಾನಭಾರತಿ ಕೇಂದ್ರದಲ್ಲಿ 7, ಜಿಕೆವಿಕೆ ಕೇಂದ್ರದಲ್ಲಿ 5 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಇವರನ್ನು ಅವರಿದ್ದ ಸ್ಥಳದಿಂದಲೇ ಆಂಬುಲೆನ್ಸ್’ನಲ್ಲಿ ಕರೆತರಲಾಗಿದೆ. ಮತ್ತೆ ಅವರನ್ನು ನಮ್ಮ ಸಿಬ್ಬಂದಿಯೇ ವಾಪಸ್ ಬಿಡುವರು. ಕೋವಿಡ್‌ ಹಿನ್ನೆಲೆಯಲ್ಲಿ 30 ಸಾವಿರ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಬದಲಿಸಿಕೊಂಡಿದ್ದಾರೆ. ಹೀಗಾಗಿ ಯಾವುದೇ ಸಮಸ್ಯೆ ಆಗಿಲ್ಲ ಎಂದು ಉಪ ಮುಖ್ಯಮಂತ್ರಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಆನ್’ಲೈನ್ ಕೌನ್ಸೆಲಿಂಗ್:

ಈ ವರ್ಷ ಫಲಿತಾಂಶ ಬಂದ ನಂತರ ಕೌನ್ಸೆಲಿಂಗ್ ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಆನ್’ಲೈನ್’ನಲ್ಲಿಯೇ ನಡೆಸಲಾಗುವುದು. ವಿದ್ಯಾರ್ಥಿ ಮತ್ತು ಪೋಷಕರು ಸಿಇಟಿ ಘಟಕಕ್ಕೆ ಬರುವ ಅಗತ್ಯವಿಲ್ಲ. ವಿದ್ಯಾರ್ಥಿಗಳು ಕಾಲೇಜನ್ನು ಆಯ್ಕೆ ಮಾಡಿಕೊಂಡ ಮೇಲೆ ನೇರವಾಗಿ ಕಾಲೇಜಿಗೆ ಹೋಗಿ ಪ್ರವೇಶ ಪಡೆಯಬಹುದು ಎಂದು ಡಿಸಿಎಂ ಹೇಳಿದರು.

ಭಾರತಕ್ಕೆ ಬಂದಿಳಿದ ರಫೇಲ್ ಫೈಟರ್ ಜೆಟ್ ಯುದ್ದ ವಿಮಾನಗಳು

ಹರ್ಯಾಣ: ದೇಶದ ರಕ್ಷಣಾ ವ್ಯವಸ್ಥೆ ಬಲಪಡಿಸುವ ರಫೇಲ್ ಯುದ್ದ ವಿಮಾನಗಳು ದೇಶಕ್ಕೆ ಹಸ್ತಾಂತರವಾಗಿದ್ದು ಮೊದಲ ಸರಣಿಯ ಫೈಟರ್ ಜೆಟ್ ಗಳು ಲ್ಯಾಂಡ್ ಆಗಿವೆ.

ಎರಡು ದಿನಗಳ ಹಿಂದೆ ಫ್ರಾನ್ಸ್ ನಿಂದ ಹೊರಟಿದ್ದ ಆರು ಫೈಟರ್ ಜೆಟ್ ಗಳು ಏಳು ಸಾವಿರ ಕಿಲೋಮೀಟರ್ ಸಂಚರಿಸಿ ಭಾರತವನ್ನು ತಲುಪಿವೆ, ನಿನ್ನೆ ಪೈಲಟ್ ಗಳ ವಿಶ್ರಾಂತಿ ಕಾರಣಕ್ಕೆ ಅಬುದಾಬಿಯಲ್ಲಿ ಲ್ಯಾಂಡ್ ಆಗಿದ್ದ ಯುದ್ದ ವಿಮಾನಗಳು ಇಂದು ದೇಶದ ಹರಿಯಾಣದಲ್ಲಿರುವ ಅಂಬಾಲಾ ವಾಯುನೆಲೆಯಲ್ಲಿ ಬಂದಿಳಿದವು.

59 ಸಾವಿರ ಕೋಟಿ ವೆಚ್ಚದಲ್ಲಿ ಫ್ರಾನ್ಸ್ ನ ಡಸಾಲ್ಡ್ ಏವಿಯೇಷನ್ ಜೊತೆ 36 ರಫೇಲ್ ಯುದ್ದ ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು ಅದರಂತೆ ಇಂದು 5 ವಿಮಾನ ದೇಶವನ್ನು ತಲುಪಿದ್ದು ಉಳಿದ ವಿಮಾನಗಳು 2021 ರ ಅಂತ್ಯದ ವೇಳೆಗೆ ಭಾರತಕ್ಕೆ ಹಸ್ತಾಂತರವಾಗಲಿವೆ.

ಜಗತ್ತಿನ ಅತ್ಯಾಧುನಿಕ ಯುದ್ದ ವಿಮಾನಗಳಲ್ಲಿ ರಫೇಲ್ ಒಂದಾಗಿದ್ದು ವಾಯುಪಡೆಯ ಸಾಮರ್ಥ್ಯವನ್ನು ಹೆಚ್ಚಿಸಿದೆ.ಪಾಕಿಸ್ತಾನ ಹಾಗು ಚೀನಾ ಗಡಿ ಕ್ಯಾತೆಗೆ ತಕ್ಕ ಉತ್ತರ ನೀಡಲು ಭಾರತಕ್ಕೆ ಈಗ ರಫೇಲ್ ಬಲ ಸಿಕ್ಕಂತಾಗಿದೆ.

ಕರ್ನಾಟಕವನ್ನು ಜಾಗತಿಕ ’ಬಿಟಿ ಹಬ್’ ಮಾಡಲು ಸರ್ವ ಕ್ರಮ: ಸಿಎಂ

ಬೆಂಗಳೂರು: ರಾಜ್ಯದ ಆರ್ಥಿಕತೆಯ ಶಕ್ತಿಯಾಗಿರುವ ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಎಲ್ಲ ಸೌಕರ್ಯಗಳನ್ನು ಆದ್ಯತೆಯ ಮೇರೆಗೆ ಒದಗಿಸಲಾಗುವುದು ಹಾಗೂ ಕರ್ನಾಟಕವು ಜಾಗತಿಕ ’ಬಿಟಿ ಹಬ್’ ಆಗಿ ಹೊರಹೊಮ್ಮುವುದಕ್ಕೆ ಬೇಕಾದ ಸರ್ವ ಕ್ರಮಗಳನ್ನೂ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬುಧವಾರ ’ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್’ಗೆ ಭೂಮಿಪೂಜೆ ನೆರವೇರಿಸಿದ ನಂತರ ಮಾತನಾಡಿದ ಅವರು, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳೆರಡೂ ಬಹಳ ಮುಖ್ಯವಾದವು. ಆರ್ಥಿಕತೆ, ಉದ್ಯೋಗ ಸೃಷ್ಟಿಯಲ್ಲಿ ಇವೆರಡೂ ನಿರ್ಣಾಯಕ ಪಾತ್ರ ವಹಿಸುತ್ತಿವೆ. ಹೀಗಾಗಿ ಈ ಎರಡೂ ಕ್ಷೇತ್ರಗಳಿಗೆ ಸರಕಾರ ಮಹತ್ವ ನೀಡಲಿದೆ ಎಂದು ನುಡಿದರು.

ಈಗಾಗಲೇ ಅನೇಕ ಸುಧಾರಣಾ ಕ್ರಮಗಳನ್ನು ಜಾರಿಗೆ ತಂದು ಕೈಗಾರಿಕೆ ಪೂರಕ ವಾತಾವರಣವನ್ನು ಸೃಷ್ಟಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ವಾಣಿಜ್ಯ, ಕೈಗಾರಿಕೆ ಕ್ಷೇತ್ರಗಳಿಗೆ ಹೆಚ್ಚು ಮನ್ನಣೆ ನೀಡಲಾಗುವುದು ಎಂದು ಸಿಎಂ ಒತ್ತಿ ಹೇಳಿದರು.

’ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್’ ರಾಜ್ಯದ ಜೈವಿಕ ತಂತ್ರಜ್ಞಾನ ಕ್ಷೇತ್ರದ ಪರಿಧಿಯನ್ನು ಮತ್ತಷ್ಟು ವಿಸ್ತಾರಗೊಳಿಸಲಿದೆ. ದೇಶದ ಬಿಟಿ ರಾಜಧಾನಿ ಆಗಿರುವ ಬೆಂಗಳೂರು ನಗರಕ್ಕೆ ಈ ಪಾರ್ಕ್ ಅನನ್ಯ ಕೊಡುಗೆ ನೀಡುವ ವಿಶ್ವಾಸ ನನಗಿದೆ. ಸರಕಾರವೂ ಈ ಯೋಜನೆಗೆ 150 ಕೋಟಿ ರೂ. ಅನುದಾನ ನೀಡಿದೆ.  150ಕ್ಕೂ ಹೆಚ್ಚು ಕಂಪನಿಗಳು ಈ ಪಾರ್ಕ್ ನಲ್ಲಿ ನೆಲೆಗೊಳ್ಳಲಿವೆ. 100ಕ್ಕೂ ಹೆಚ್ಚು ನವೋದ್ಯಮಗಳು ಸ್ಥಾಪನೆಯಾಗಲಿವೆ. ಇದರಿಂದ 50,000ಕ್ಕೂ ಹೆಚ್ಚು ಜನರಿಗೆ ಪ್ರತ್ಯಕ್ಷ, ಪರೋಕ್ಷವಾಗಿ ಕೆಲಸ ಸಿಗಲಿದೆ. ರಾಜ್ಯದ ಅರ್ಥವ್ಯವಸ್ಥೆಗೆ ಈ ಯೋಜನೆ ಮಹತ್ವದ ಕಾಣಿಕೆ ನೀಡಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಬಿಟಿ ಕ್ಷೇತ್ರದಲ್ಲಿ ಕರ್ನಾಟಕ ದೊಡ್ಡ ಸಾಧನೆಯನ್ನೇ ಮಾಡಿದೆ. ಸದ್ಯಕ್ಕೆ ರಾಜ್ಯದಲ್ಲಿ 380 ಕಂಪನಿಗಳು, 200ಕ್ಕೂ ಹೆಚ್ಚು ನವೋದ್ಯಮಗಳು ಇದರಲ್ಲಿ ತೊಡಗಿಕೊಂಡಿವೆ. ಏಷ್ಯಾದಲ್ಲಿ ಶೇ.9ರಷ್ಟು, ಭಾರತದಲ್ಲಿ ಶೇ.35ರಷ್ಟು ಮಾರುಕಟ್ಟೆ ಪಾಲನ್ನು ನಾವು ಹೊಂದಿದ್ದೇವೆ. ಮುಂದಿನ ದಿನಗಳಲ್ಲಿ ಇದರ ಪ್ರಮಾಣ ಗಣನೀಯವಾಗಿ ಹೆಚ್ಚಾಗಬೇಕು. ಅದಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸರಕಾರ ಸಿದ್ಧವಿದೆ ಎಂದು ಅವರು ಪ್ರಕಟಿಸಿದರು.

ಎರಡು ದಶಕಗಳ ಕನಸು:

ಐಟಿ-ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ’ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆ ಸಾಕಾರವಾಗುವ ಸಮಯ ಬಂದಿದೆ. ಈಗಾಗಲೇ ಪ್ರಬಲವಾಗಿ ಹೊರಹೊಮ್ಮಿರುವ ರಾಜ್ಯ ಬಿಟಿ ಕ್ಷೇತ್ರಕ್ಕೆ ಈ ಪಾರ್ಕ್ ಮೂಲಕ ಮತ್ತಷ್ಟು ಬಲ ಬರಲಿದೆ. ಸರಕಾರದ ಇಚ್ಚಾಶಕ್ತಿಯಿಂದ ಇದು ಸಾಧ್ಯವಾಗುತ್ತಿದೆ. ಸಂಶೋಧನೆ, ಅಭಿವೃದ್ಧಿ ಎಲ್ಲವೂ ಒಂದೇ ಸೂರಿನ ಅಡಿಯಲ್ಲಿ ಆಗಲಿದೆ. ಈ ಯೋಜನೆ ಸಾಕಾರಗೊಂಡ ಮೇಲೆ ಜಾಗತಿಕ ಭೂಪಟದಲ್ಲಿ ಬೆಂಗಳೂರಿನ ಪ್ರತಿಷ್ಠೆ ಮತ್ತಷ್ಟು ಹೆಚ್ಚಲಿದೆ ಎಂದರು.

ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ಈ ಕ್ಷೇತ್ರವಿಲ್ಲದೆ ಈಗ ಮನುಕುಲವನ್ನು ಊಹಿಸಿಕೊಳ್ಳುವುದೇ ಕಷ್ಟ. ಕೃಷಿ, ಕೈಗಾರಿಕೆ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಇದರ ಪ್ರಭಾವ ಇದೆ. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಸರಕಾರ ಅನೇಕ ಸುಧಾರಣಾ ಕ್ರಮಗಳನ್ನು ಜಾರಿ ಮಾಡಿದೆ. ‌ಉದ್ಯಮಸ್ನೇಹಿಯಾದ ಹತ್ತಾರು ಕ್ರಮಗಳನ್ನು ದಿಟ್ಟತನದಿಂದ ಕೈಗೊಂಡಿದೆ. ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ಹತ್ತುಹಲವು ಕಾನೂನುಗಳನ್ನು ಸರಳಗೊಳಿಸಿ ಹೂಡಿಕೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿ ಮಾಡಲಾಗಿದೆ ಎಂದು ಡಿಸಿಎಂ ಹೇಳಿದರು.

ಸಂಶೋಧನೆ ಮತ್ತು ಹೊಸ ಅವಿಷ್ಕಾರಗಳಿಗಿದ್ದ ಕಾನೂನು ತೊಡಕನ್ನು ನಿವಾರಿಸಲಾಗಿದೆ. ’ಕರ್ನಾಟಕ ಇನೋವೆಷನ್ ಅಥಾರಿಟ”ಯನ್ನು ಸ್ಥಾಪಿಸಲಾಗಿದೆ. ’ಇನ್’ವೆಸ್ಟ್ ಕರ್ನಾಟಕ ಮೂಲಕ ಹೂಡಿಕೆಗೆ ಮುಕ್ತ ಅವಕಾಶ ಕಲ್ಪಿ ಸಲಾಗಿದೆ. ದೇಶದ ಯಾವುದೇ ರಾಜ್ಯವೂ ಕೈಕೊಳ್ಳದಂತಹ ಪರಿಣಾಮಕಾರಿ ಕ್ರಮಗಳನ್ನು ಯಡಿಯೂರಪ್ಪ ನೇತೃತ್ವದ ಸರಕಾರ ಕೈಗೊಂಡಿದೆ ಎಂದು ಉಪ ಮುಖ್ಯಮಂತ್ರಿ ನುಡಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್, ಶಾಸಕ ಎಂ. ಕೃಷ್ಣಪ್ಪ ಮಾತನಾಡಿದರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಮಣ ರೆಡ್ಡಿ, ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್ ಸಿಇಒ ಚಿರಾಗ್ ಪುರುಷೋತ್ತಮ್ ಯೋಜನೆಯ ಮಾಹಿತಿ ನೀಡಿದರು. ಕರ್ನಾಟಕ ಕೈಗಾರಿಕಾ ತಾಂತ್ರಿಕ ಸಂಸ್ಥೆಯ ನಿರ್ದೇಶಕಿ ಮೀನಾ ನಾಗರಾಜ್  ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸಿಇಟಿ ಪರೀಕ್ಷಾ ಕೇಂದ್ರ ಪರಿಶೀಲಿಸಿದ ಡಿಸಿಎಂ

ಬೆಂಗಳೂರು: ನಾಳೆ ಮತ್ತು ನಾಡಿದ್ದು ನಡೆಯಲಿರುವ ಸಿಇಟಿ ಪರೀಕ್ಷೆಯ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಮಲ್ಲೇಶ್ವರದ ಲಕ್ಷ್ಮೀ ಅಮ್ಮಣ್ಣಿ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದರು.

ಪರೀಕ್ಷಾ ಕೇಂದ್ರವನ್ನು ಕೂಲಂಷವಾಗಿ ಪರಿಶೀಲಿಸಿದ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ಕೈಗೊಂಡಿರುವ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಗಮನಿಸಿದರು. ವಿದ್ಯಾರ್ಥಿಗಳು ಕೂರುವ ಅಂತರ, ಕೊಠಡಿಗಳ ಸ್ಯಾನಿಟೈಶೇಷನ್, ಮಾಸ್ಕ್ ಧರಿಸುವುದು, ಥರ್ಮಲ್ ಸ್ಕ್ರೀನಿಂಗ್, ಭದ್ರತೆ, ಸಾರಿಗೆ, ಮೂಲಸೌಕರ್ಯ ಮತ್ತಿತರೆ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಡಿಸಿಎಂ ಅವರು, ಸಿಇಟಿ ಪರೀಕ್ಷೆ ಬಗ್ಗೆ ಸರಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಕೋವಿಡ್ ಹಿನ್ನೆಲೆಯಲ್ಲೂ ನಿರಾತಂಕವಾಗಿ ಪರೀಕ್ಷೆ ನಡೆಸಲು ಸರಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೋವಿಡ್ ಸವಾಲಿನ ನಡುವೆಯೂ ನಾವು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಅದೇ ರೀತಿ ದ್ವಿತೀಯ ಪಿಯುಸಿಯ ಒಂದು ವಿಷಯದ ಪರೀಕ್ಷೆಯನ್ನು ಕೂಡ ನಿರಾತಂಕವಾಗಿ ನಡೆಸಿದ್ದೇವೆ. ಈ ಪರೀಕ್ಷೆಯನ್ನೂ ಯಾವುದೇ ತೊಂದರೆ ಇಲ್ಲದೆ ನಡೆಸಲು ಸರಕಾರಕ್ಕೆ ಸಾಧ್ಯವಿದೆ ಹಾಗೂ ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಹೇಳೀದರು.

ಏಪ್ರಿಲ್ 23-24ಕ್ಕೇ ಸಿಇಟಿ ಪರೀಕ್ಷೆ ನಿಗದಿಯಾಗಿತ್ತು. ಕೋವಿಡ್ ಲಾಕ್’ಡೌನ್ ಇದ್ದ ಕಾರಣಕ್ಕೆ ಮುಂದೂಡಲಾಯಿತು. ಮೇ 12ರಂದು ಜುಲೈ 30-31ರಂದು ಪರೀಕ್ಷೆ ನಡೆಸುವುದು ಎಂದು ನಿರ್ಧರಿಸಲಾಯಿತು. ಆ ಕ್ಷಣದಿಂದಲೇ ಸರಕಾರವೂ ಕೋವಿಡ್ ಮುನ್ನೆಚ್ಚರಿಕೆ ವಹಿಸುವುದರ ಜತೆಗೆ, ವಿದ್ಯಾರ್ಥಿಗಳಿಗೆ ಸಾರಿಗೆ, ವೈದ್ಯಕೀಯ, ರಕ್ಷಣೆ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಯಿತು. ಕೋವಿಡ್ ಪಾಸಿಟೀವ್ ಬಂದಿರುವ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಗಿದೆ. ಕಂಟೈನ್ಮೆಂಟ್ ಝೋನ್’ನಲ್ಲಿರುವ ವಿದ್ಯಾರ್ಥಿಗಳು ತಮ್ಮ ಪೋಷಕರೊಬ್ಬರ ಜತೆ ಹೊರಬಂದು ಪರೀಕ್ಷೆ ಬರೆಯಬಹುದಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸೇಷನ್, ದೈಹಿಕ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ ಎಂದು ಹೇಳಿದರು.

ರಾಜಾಹುಲಿ ಕುರ್ಚಿಗೆ ಕುತ್ತು ತರಲಿದ್ದಾರಾ ಡಿಸಿಎಂ ಸವದಿ; ಬಿಜೆಪಿಯಲ್ಲಿ ಮತ್ತೆ ಶುರುವಾಯ್ತು ನಾಯಕತ್ವ ಬದಲಾವಣೆ ಕೂಗು

ಬೆಂಗಳೂರು: ಸಚಿವ ಸ್ಥಾನದ ಆಕಾಂಕ್ಷಿಗಳನ್ನು ತಣ್ಣಗೆ ಮಾಡಲು ಮಾಡಿದ ಬಿಎಸ್ವೈ ಪ್ಲಾನ್ ಉಲ್ಟಾ ಹೊಡೆದಿದೆ. ಶಾಸಕರ ಜೊತೆ ಕಾರ್ಯಕರ್ತರ ಕೆಂಗಣ್ಣಿಗೂ ರಾಜಾಹುಲಿ ಗುರಿಯಾಗಿದ್ದಾರೆ. ತಮ್ಮ ಖುರ್ಚಿ ಭದ್ರ ಪಡಿಸಿಕೊಳ್ಳಲು ಸಿಎಂ ಹೆಣಗಾಡ್ತಿದ್ರೆ, ಬಿಎಸ್ವೈ ಖುರ್ಚಿಗೆ ಕುತ್ತು ತರೋಕೆ ದೆಹಲಿಯಲ್ಲೇ ಮೆಗಾ ಪ್ಲಾನ್ ರೆಡಿಯಾಗ್ತಿದೆ.

ಹೌದು, ಬಿಎಸ್ವೈ ಸರ್ಕಾರದಲ್ಲಿ ಮಂತ್ರಿಗಳಾಗ್ಬೇಕು ಅಂತಾ ಕನಸು ಕಾಣ್ತಿದ್ದೊರಿಗೆ ನಿಗಮ ಮಂಡಳಿ ಅಧ್ಯಕ್ಷರ ಸ್ಥಾನ ಕೊಟ್ಟು ತಣ್ಣಗೆ ಮಾಡಲು ಬಿಎಸ್ವೈ ಪ್ಲಾನ್ ಮಾಡಿದ್ರು. ಆದ್ರೆ, ಸಿಎಂ ಈ ಪ್ಲಾನ್ ಅವರಿಗೆ ಉಲ್ಟಾ ಹೊಡೆದಿದೆ. ಹಲವು ಶಾಸಕರು ತಮಗೆ ನಿಗಮ ಮಂಡಳಿ ಬೇಡ ಅಂತಾ ತಿರಸ್ಕರಿಸಿದ್ದಾರೆ. ಒಂದ್ಕಡೆ ಶಾಸಕರು ನಿಗಮ ಮಂಡಳಿ ಬೇಡ ಅಂತಾ ಬಂಡಾಯದ ಬಾವುಟ ಹಾರಿಸಿದ್ರೆ, ಇನ್ನೊಂದ್ಕಡೆ ತಮಗೆ ನೀಡಬೇಕಾದ ನಿಗಮ ಮಂಡಳಿ ಸ್ಥಾನಗಳನ್ನ ಶಾಸಕರಿಗೆ ನೀಡಿದ್ದೀರಾ ಅಂತಾ ಕಾರ್ಯಕರ್ತರು ಬಂಡಾಯವೆದ್ದಿದ್ದಾರೆ. ಶಾಸಕರನ್ನ ತೃಪ್ತಿಗೊಳಿಸಿ ಸ್ಥಾನ ಭದ್ರ ಪಡಿಸಿಕೊಳ್ಳೋಕೆ ಮುಂದಾದ ಬಿಎಸ್ವೈ ಕಾರ್ಯಕರ್ತರ ಬೇಗುದಿಯನ್ನು ಎದುರಿಸಬೇಕಾಗಿದೆ.

ಬಿಎಸ್ವೈ ಸರ್ಕಾರಕ್ಕೆ ಒಂದು ವರ್ಷ ಪೂರೈಸಿದ ಬೆನ್ನಲ್ಲೇ ನಾಯಕತ್ವ ಬದಲಾವಣೆ ಕುರಿತು ಮಾತುಗಳು ಕೇಳಿ ಬರ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ ಡಿಸಿಎಂ ಲಕ್ಷ್ಮಣ್ ಸವದಿ ಒಂದು ವರ್ಷದ ಸಂಭ್ರಮಾಚರಣೆ ದಿನವೇ ದೆಹಲಿ ಪ್ರವಾಸ ಕೈಗೊಂಡಿದ್ದು, ಬಿಎಸ್ವೈ ಆಜನ್ಮ ಶತ್ರು ಬಿ.ಎಲ್.ಸಂತೋಷ್ ಭೇಟಿ ಮಾಡಿ ಚರ್ಚೆ ನಡೆಸಿರೋದು ಕುತೂಹಲ ಕೆರಳಿಸಿದೆ. ಕೊರೋನಾ, ನೆರೆ ಹಾವಳಿ ಸೇರಿದಂತೆ ಸರ್ಕಾರದ ಒಂದು ವರ್ಷದ ವೈಫಲ್ಯಗಳನ್ನು ವಿರೋಧ ಪಕ್ಷಗಳಿರಲಿ ಸ್ವಪಕ್ಷದವರೇ ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ಈ ಎಲ್ಲಾ ವಿಚಾರಗಳನ್ನು ವರಿಷ್ಠರ ಗಮನಕ್ಕೆ ತಂದು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.

ಬಗೆಹರಿಯದ ಸಂಪುಟ ವಿಸ್ತರಣೆ ಕಸರತ್ತು, ಸಚಿವಾಕಾಂಕ್ಷಿಗಳ ಬಂಡಾಯ, ನಿಗಮ ಮಂಡಳಿ ಅಸಮಧಾನ ಬಿಎಸ್ವೈಗೆ ಹೊಸ ತಲೆ ನೋವು ತಂದಿವೆ.

ಬಿಜೆಪಿ ಇತಿಹಾಸ ತಿರುಚಲು ಕಾಂಗ್ರೆಸ್ ಬಿಡಲ್ಲ: ಡಿಕೆಶಿ

ಫೈಲ್ ಫೋಟೋ:

ಬೆಂಗಳೂರು: ಟಿಪ್ಪು ಸುಲ್ತಾನ್ ವಿಚಾರ ಕೇವಲ ಒಂದು ವರ್ಗಕ್ಕೆ ಸೀಮಿತವಾದ ವಿಚಾರವಲ್ಲ. ಅವರು ದೇಶದ ಇತಿಹಾಸದ ಒಂದು ಭಾಗ. ಬಿಜೆಪಿ ಸರ್ಕಾರ ತಮ್ಮ ರಾಜಕೀಯ ಲಾಭಕ್ಕಾಗಿ ಇತಿಹಾಸವನ್ನೆ ತಿರುಚಲು ಪ್ರಯತ್ನಿಸುತ್ತಿದೆ ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ರು.

7ನೇ ತರಗತಿ ಪಠ್ಯದಿಂದ ಟಿಪ್ಪು ಕುರಿತ ಪಾಠಗಳನ್ನು ತೆಗೆದು ಹಾಕಿರೋ ಸರ್ಕಾರದ ನಿಲುವು ಕುರಿತು ಮಾತನಾಡಿದ ಡಿಕೆಶಿ, ಬಿಜೆಪಿಯವರು ಜನರ ದಾರಿ ತಪ್ಪಿಸಲು ನಾವು ಬಿಡುವುದಿಲ್ಲ. ಇದರ ಸಾಧಕ ಬಾಧಕಗಳ ಕುರಿತು ನಾವು ತಜ್ಞರಿಂದ ಅಧ್ಯಯನ ನಡೆಸುತ್ತೇವೆ. ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಇತಿಹಾಸ ತಿರುಚುವುದು, ಸಂವಿಧಾನ ಬದಲಿಸುವುದು ಖಂಡನೀಯ ಎಂದರು.

ಬಿಜೆಪಿ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡುವುದು ಬಿಡುವುದು ಆ ಸರ್ಕಾರಕ್ಕೆ ಬಿಟ್ಟ ವಿಚಾರ. ಟಿಪ್ಪು, ಹೈದರಾಲಿ ಅವರು ನಮ್ಮ ಇತಿಹಾಸದ ಭಾಗ. ಈ ದೇಶದ ರಾಷ್ಟ್ರಪತಿ ಕೋವಿಂದ್ ಅವರು ವಿಧಾನಸೌಧಕ್ಕೆ ಬಂದು ಜಂಟಿ ಅಧಿವೇಶನದಲ್ಲಿ ಟಿಪ್ಪು ಇತಿಹಾಸ, ಚರಿತ್ರೆ, ದೇಶಭಕ್ತಿ ಬಗ್ಗೆ ಹಾಡಿ ಹೊಗಳಿ ಹೋಗಿದ್ದಾರೆ. ನಮ್ಮ ಇತಿಹಾಸ ಬದಲಾವಣೆ ಆಗಬಾರದು. ಆದರೆ, ಬಿಜೆಪಿ ಇದನ್ನು ಮೊಟಕು ಮಾಡಲು ಪ್ರಯತ್ನಿಸುತ್ತಿದೆ. ನಮ್ಮ ಮಕ್ಕಳಿಗೆ ತಿಳುವಳಿಕೆ ಹೇಳಿಕೊಡಬೇಕು. ಇದರ ಬಗ್ಗೆಯೂ ನಮ್ಮ ತಂಡ ಅಧ್ಯಯನ ಮಾಡಲಿದೆ ಎಂದು ತಿಳಿಸಿದರು.