ಮುಖ್ಯಮಂತ್ರಿಗಳಿಂದ “ಶಿವಪದ ರತ್ನಕೋಶ” ಗ್ರಂಥ ಲೋಕಾರ್ಪಣೆ

ಬೆಂಗಳೂರು, ಜುಲೈ 28: ಮೈಸೂರಿನ ಜಗದ್ಗುರು ಶಿವರಾತ್ರೀಶ್ವರ ಮಹಾವಿದ್ಯಾಪೀಠ ಹೊರತಂದಿರುವ “ಶಿವಪದ ರತ್ನಕೋಶ” ಗ್ರಂಥವನ್ನು ಮುಖ್ಯಮಂತ್ರಿ ಬಿ ಎಸ್.ಯಡಿಯೂರಪ್ಪ ಅವರು ಇಂದು ಆನ್ ಲೈನ್ ಮೂಲಕ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು ಶಿವಪದ ರತ್ನಕೋಶವು
ಶೈವಾಗಮಗಳು, ವಚನ ಸಾಹಿತ್ಯ, ವೀರಶೈವ ಕಾವ್ಯ, ಅಪರೂಪದ ರೂಢಿಯ ಪದಗಳನ್ನು ಒಳಗೊಂಡು ರೂಪುಗೊಂಡಿದೆ.

ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಗೌರವ ಸಂಪಾದಕತ್ವದಲ್ಲಿ ಹಾಗೂ ವಿಜಯಪುರ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳ ಮಾರ್ಗದರ್ಶನದಲ್ಲಿ ಮೂಡಿಬಂದಿರುವ ಈ ಗ್ರಂಥವು ಶಿವಧರ್ಮ, ಸಂಸ್ಕೃತ, ಸಿದ್ಧಾಂತಗಳನ್ನು ಯಥಾವತ್ತಾಗಿ ಪರಿಚಯಿಸುವ ಸಾವಿರ ಪುಟಗಳ ಬೃಹತ್ ಪದ ಭಂಡಾರವಾಗಿದೆ.

ಜಗದ್ಗುರು  ಶಿವರಾತ್ರೀಶ್ವರ ಗ್ರಂಥಮಾಲೆಯೂ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಮೌಲಿಕ ಗ್ರಂಥಗಳನ್ನು ಪ್ರಕಟಿಸಿರುವ ಕೀರ್ತಿ ಸಂಸ್ಥೆಗೆ ಸಲ್ಲುತ್ತದೆ.

ಕರ್ನಾಟಕದ ಜನರ ಬದುಕಿನಲ್ಲಿ ಮಠಪೀಠಗಳ ಪಾತ್ರ, ಪ್ರಭಾವ ಅಗಾಧವಾದುದು.
ವಿದ್ವತ್ಪೂರ್ಣವೂ, ಪರಿಶ್ರಮದಾಯಕವೂ ಆದ ಈ ಮಹತ್ಕಾರ್ಯವನ್ನು ನೆರವೇರಿಸಿದ ಸುತ್ತೂರು ಶ್ರೀಮಠಕ್ಕೆ ಹಾಗೂ ಸಂಪಾದಕ ಮಂಡಳಿಗೆ ಅಭಿನಂದಿಸಿದ ಮುಖ್ಯಮಂತ್ರಿಗಳು ಈ ಅಮೂಲ್ಯ ಸಂಪತ್ತಿನ ಸದುಪಯೋಗವನ್ನು ಕನ್ನಡಿಗರು ಪಡೆಯಲಿ ಎಂದರು.

ಸಭೆಯಲ್ಲಿ ಸುತ್ತೂರು ಮಠದ ಜೆ.ಎಸ್.ಎಸ್ ಮಹಾವಿದ್ಯಾಪೀಠದ  ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳು, ತುಮಕೂರಿನ ಸಿದ್ದಗಂಗಾ ಮಠದ ಸಿದ್ಧಲಿಂಗಾಸ್ವಾಮಿಗಳು, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ,ಸಂಸದ ಪ್ರತಾಪ್ ಸಿಂಹ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರ ಗೌಡ ಪಾಟೀಲ್ ಉಪಸ್ಥಿತರಿದ್ದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರ ಪ್ರತಿಭಟನೆ: ಡಿ.ಕೆ ಶಿವಕುಮಾರ್  ಬೆಂಬಲ

ಬೆಂಗಳೂರು:ಮಾಸಿಕ 12 ಸಾವಿರ ರೂಪಾಯಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ರಾಜ್ಯಾದ್ಯಂತ ಪ್ರತಿಭಟನೆ ಹಾಗೂ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಕಾರ್ಯಕ್ರಮ ಹಾಕಿಕೊಂಡಿರುವ ಆಶಾ ಕಾರ್ಯಕರ್ತೆಯರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್  ಬೆಂಬಲ ವ್ಯಕ್ತಪಡಿಸಿದ್ದಾರೆ.

ಸರ್ಕಾರ ತಕ್ಷಣವೇ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವಂತೆ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.

ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಆರಂಭದ ಸಮಯದಲ್ಲಿ ನನ್ನ ಬಳಿ ಬಂದು ತಮ್ಮ ಸಮಸ್ಯೆ ಹೇಳಿಕೊಂಡಿದ್ದರು. ನಾನು ಕೂಡ ನೆಲಮಂಗಳದಲ್ಲಿ ಪ್ರತಿಭಟನೆ ಮಾಡುತ್ತಿದ್ದ ಆಶಾ ಕಾರ್ಯಕರ್ತೆಯರನ್ನು ಭೇಟಿ ಮಾಡಿ ಅವರ ಅಹವಾಲು ಆಲಿಸಿದೆ. ನಂತರ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಕೂಡಲೇ ಅವರ ಬೇಡಿಕೆ ಈಡೇರಿಸಿ ಎಂದು ಆಗ್ರಹಿಸಿದ್ದೆ. ಆದರೂ ಸರ್ಕಾರ ಇವರ ಬಗ್ಗೆ ಅಸಡ್ಡೆ ತೋರಿರುವುದು ಅಕ್ಷಮ್ಯ.

ಆಶಾ ಕಾರ್ಯಕರ್ತೆಯರ ಬೇಡಿಕೆ ನ್ಯಾಯಯುತವಾಗಿದೆ. ಅವರಿಗೆ ಸುರಕ್ಷಾ ಸಾಧನಗಳನ್ನು ಒದಗಿಸಬೇಕು. ಕೊರೋನಾ ತುರ್ತು ಪರಿಸ್ಥಿತಿಯಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆ ತಿರುಗಿ ಎರಡೇರಡು ಬಾರಿ ಸಮೀಕ್ಷೆ ನಡೆಸಿದ್ದಾರೆ. ಅವರು ತಮ್ಮ ಪ್ರಾಮಾಣಿಕ ಕೆಲಸಕ್ಕೆ ತಕ್ಕ ಬೇಡಿಕೆಗಳನ್ನು ಕೇಳುತ್ತಿದ್ದು ಸರ್ಕಾರ ಈ ರೀತಿ ವರ್ತಿಸುತ್ತಿರುವುದು ಸರಿಯಲ್ಲ.

ಸರ್ಕಾರ ಆಶಾ ಕಾರ್ಯಕರ್ತರಿಗೆ 3 ಸಾವಿರ ಪ್ರೋತ್ಸಾಹ ಧನ ನೀಡುವುದಾಗಿ ಘೋಷಣೆ ಮಾಡಿತ್ತು. ಘೋಷಣೆ ಮಾಡಿ ಮೂರು ತಿಂಗಳಾದರೂ ಶೇ.10ರಷ್ಟು ಜನರಿಗೆ ಹಣ ತಲುಪಿಲ್ಲ. ಅವರ ತಾಳ್ಮೆಯನ್ನು ಸರ್ಕಾರ ಪರೀಕ್ಷೆ ಮಾಡಲು ಹೊರಟಿದೆ.

ಆಶಾ ಕಾರ್ಯಕರ್ತೆಯರು ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದು, ಅವರಿಗೆ ವಿಮೆ ಸೌಲಭ್ಯ ನೀಡಬೇಕು. ಅವರು ಕೇಳುತ್ತಿರುವ ಮಾಸಿಕ 12 ಸಾವಿರ ರೂಪಾಯಿ ವೇತನ ನೀಡಬೇಕು, ಈಗ ರಾಜ್ಯ ಹಾಗೂ ಕೇಂದ್ರ ಸರ್ಕಾರ ನೀಡುತ್ತಿರುವ ಗೌರವ ಧನವನ್ನು ಏಕ ಕಾಲಕ್ಕೆ ನೀಡಬೇಕು. ಹಲವು ತಿಂಗಳುಗಳಿಂದ ಇರುವ ಬಾಕಿ ಹಣ ಕೂಡಲೇ ನೀಡಬೇಕು.

ಕಳೆದ 19 ದಿನಗಳಿಂದ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಮುಖ್ಯಮಂತ್ರಿಗಳಾಗಲಿ, ಸಂಪುಟ ಸಚಿವರುಗಳಾಗಲಿ ಅವರ ಸಮಸ್ಯೆ ಏನು ಎಂದು ಕೇಳುವ ಪ್ರಯತ್ನ ಮಾಡಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷ ಅವರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಕೋವಿಡ್ ರೋಗಿಗಳಿಗೆ ತ್ವರಿತ ಮಾಹಿತಿ ನೀಡಲು ಕೇಂದ್ರೀಕೃತ ವ್ಯವಸ್ಥೆ: ಡಾ.ಸುಧಾಕರ್

ಫೈಲ್ ಫೋಟೋ:

ಬೆಂಗಳೂರು, ಜುಲೈ 28, 2020:ಕೋವಿಡ್ ಪಾಸಿಟಿವ್ ಆದ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಬೇಕೆ, ಮನೆ ಆರೈಕೆಗೆ ಒಳಪಡಬೇಕೆ ಅಥವಾ ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲಾಗಬೇಕೆ ಎಂದು ಕೂಡಲೇ ನಿರ್ಧರಿಸಲು ಸಾಧ್ಯವಾಗುವಂತಹ ತಂತ್ರಜ್ಞಾನ ಆಧಾರಿತ ಕೇಂದ್ರೀಕೃತ ವ್ಯವಸ್ಥೆ ನಿರ್ಮಿಸಲು ನಿರ್ಧರಿಸಲಾಗಿದೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಹಿರಿಯ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಮಂಗಳವಾರ ನಡೆಸಿದ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಯಿತು.

ಕೋವಿಡ್ ಗೆ ಸಂಬಂಧಿಸಿದಂತೆ ಸರ್ಕಾರ ಬಳಸುತ್ತಿರುವ ಎಲ್ಲ ಆ್ಯಪ್, ತಂತ್ರಜ್ಞಾನಗಳನ್ನು ಒಟ್ಟು ಮಾಡಿ ಕೇಂದ್ರೀಕೃತ ವ್ಯವಸ್ಥೆ ನಿರ್ಮಿಸುವುದರಿಂದ ಕೋವಿಡ್ ರೋಗಿಯು ಎಲ್ಲಿ ದಾಖಲಾಗಬೇಕು ಅಥವಾ ಯಾವ ರೀತಿಯ ಚಿಕಿತ್ಸೆಗೆ ಒಳಪಡಬೇಕು ಎಂಬುದನ್ನು ತಕ್ಷಣ ತೀರ್ಮಾನಿಸಬಹುದು. ಇದರಿಂದಾಗಿ ಚಿಕಿತ್ಸೆ ಪಡೆಯುವಲ್ಲಿನ ಗೊಂದಲ ನಿವಾರಣೆಯಾಗಲಿದೆ ಎಂದು ಸಚಿವರು ಸಭೆಗೆ ಸೂಚಿಸಿದರು.

ಸದ್ಯಕ್ಕೆ ಆಪ್ತಮಿತ್ರ ಸೇರಿದಂತೆ ಹಲವು ಆ್ಯಪ್ ಗಳು ಬಳಕೆಯಲ್ಲಿವೆ. ರಾಜ್ಯದಲ್ಲಿ ಕೋವಿಡ್ ಅಂಕಿ ಅಂಶವನ್ನು ನೀಡುವ ಡ್ಯಾಶ್ ಬೋರ್ಡ್ ಕೂಡ ಇದೆ. ಆದರೆ ಡ್ಯಾಶ್ ಬೋರ್ಡ್ ನಲ್ಲಿ ರಿಯಲ್ ಟೈಮ್ ನಲ್ಲಿ ಮಾಹಿತಿ ದೊರೆಯುವಂತಾಗಬೇಕು. ಯಾವ ಆಸ್ಪತೆಯಲ್ಲಿ ಎಷ್ಟು ಹಾಸಿಗೆ ಖಾಲಿ ಇದೆ, ಪ್ರತಿ ಆಸ್ಪತ್ರೆಯಲ್ಲಿರುವ ಕೋವಿಡ್ ಮತ್ತು ನಾನ್ ಕೋವಿಡ್ ರೋಗಿಗಳೆಷ್ಟು ಎಂಬುದು ಡ್ಯಾಶ್ ಬೋರ್ಡ್ ನಲ್ಲಿ ತಿಳಿಯುವಂತಾಗಬೇಕು. ಕೋವಿಡ್ ಖಚಿತಪಟ್ಟ ನಂತರ ವ್ಯಕ್ತಿಯು ದೂರವಾಣಿ ಕರೆ ಮಾಡಿದ ಕೂಡಲೇ ಆಸ್ಪತ್ರೆ ಅಥವಾ ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲಾಗುವಂತೆ ಸಹಾಯ ದೊರೆಯಬೇಕು. ಇಂತಹ ಕೇಂದ್ರೀಕೃತ ವ್ಯವಸ್ಥೆಯನ್ನು ರಾಜ್ಯದಲ್ಲಿ ತರಬೇಕು ಎಂದು ಸೂಚಿಸಿದರು.

ಹೊಸದೆಹಲಿ ಮತ್ತು ಮಧ್ಯಪ್ರದೇಶದಲ್ಲಿ ಸ್ಟೆಪ್ 1 ಎಂಬ ಸಂಸ್ಥೆ ಯಶಸ್ವಿಯಾಗಿ ಸೇವೆ ನೀಡುತ್ತಿದೆ. ಈ ಸಂಸ್ಥೆ ತನ್ನದೇ ಆದ ವೈದ್ಯ, ನರ್ಸ್ ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ಹೊಂದಿದ್ದು, ಕೋವಿಡ್ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭ್ಯವಾಗುವಂತೆ ಮಾಡುತ್ತಿದೆ. ಈ ಸಂಸ್ಥೆಯಿಂದ ಮಾಹಿತಿ ಪಡೆದುಕೊಂಡು ಆ ಮಾದರಿಯನ್ನು ಕೂಡ ರಾಜ್ಯದಲ್ಲಿ ಅನುಷ್ಠಾನಕ್ಕೆ ತರಬಹುದು ಎಂದು ಸಚಿವ ಡಾ.ಕೆ.ಸುಧಾಕರ್ ಸೂಚಿಸಿದರು.

ನಂತರ ಮಾತನಾಡಿದ ಐಟಿ ಬಿಟಿ ಇಲಾಖೆಯ ಕಾರ್ಯದರ್ಶಿ ಅಜಯ್ ಸೇಠ್, ಕೇಂದ್ರೀಕೃತ ವ್ಯವಸ್ಥೆಯನ್ನು ಕಲ್ಪಿಸಲು ಶೀಘ್ರದಲ್ಲೇ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ಇತರೆ ಅಂಶಗಳು
*ಕೊರೊನಾ ರೋಗಿಯ ರೋಗದ ಗಂಭೀರತೆಯನ್ನು ನಿರ್ಧರಿಸಿ ಆತನನ್ನು ಕೋವಿಡ್ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಲಕ್ಷಣ ರಹಿತ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಬಾರದು ಎಂದು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ವಿವರಿಸಿದರು.

*ಕೊರೊನಾ ರೋಗಿಯ ರೋಗದ ಗಂಭೀರತೆಯನ್ನು ಅರಿತು ಅವರನ್ನು ಕೋವಿಡ್ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ದಾಖಲಿಸಲಾಗುವುದು. ರೋಗಿಯನ್ನು ಗೂಗಲ್ ಮ್ಯಾಪ್ ಸಹಾಯದಿಂದಲೇ ಪತ್ತೆ ಮಾಡಿ ಅವರಿರುವಲ್ಲಿಗೆ ವೈದ್ಯರನ್ನು ಕಳುಹಿಸಿ ರೋಗದ ಗಂಭೀರತೆಯನ್ನು ಪರೀಕ್ಷಿಸಲಾಗುವುದು. ನಂತರ ವೈದ್ಯರು ಅವರನ್ನು ಆಸ್ಪತ್ರೆ ಅಥವಾ ಆರೈಕೆ ಕೇಂದ್ರಕ್ಕೆ ದಾಖಲಿಸುವ ಕುರಿತು ನಿರ್ಧರಿಸುತ್ತಾರೆ. ಹೊಸ ಕೇಂದ್ರೀಕೃತ ವ್ಯವಸ್ಥೆಯು ಇದನ್ನು ಒಳಗೊಳ್ಳಲಿದೆ ಎಂದು ಅಧಿಕಾರಿಗಳು ವಿವರಿಸಿದರು.

*ಬೇರೆ ಜಿಲ್ಲೆಗಳಲ್ಲಿ ಕೊರೊನಾ ಪರೀಕ್ಷೆ ಸಂಖ್ಯೆ ಹೆಚ್ಚಿದೆ. ಆದರೆ ಬೆಂಗಳೂರಿನಲ್ಲಿ ಪರೀಕ್ಷೆ ಸಂಖ್ಯೆ ಕಡಿಮೆಯಾಗುತ್ತಿದೆ. ಪರೀಕ್ಷೆ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಸೂಚನೆ ನೀಡಿದರು.

ನಿಯಮಗಳ ಕಟ್ಟನಿಟ್ಟು ಪಾಲನೆಗೆ ಸೂಚನೆ

ಈ ಸಭೆಗೂ ಮುನ್ನ ಖಾಸಗಿ ವೈದ್ಯಕೀಯ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರೊಂದಿಗೆ ಸಚಿವ ಡಾ.ಕೆ.ಸುಧಾಕರ್ ಸಭೆ ನಡೆಸಿದರು.

ಪ್ರತಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಮೀಸಲಿಡುವ ಸಂಬಂಧ ಇರುವ ನಿಯಮಗಳನ್ನು ಪಾಲಿಸಬೇಕು. ಲಕ್ಷಣ ರಹಿತ ರೋಗಿಗಳನ್ನು (ಎ ಸಿಂಪ್ಟಮೆಟಿಕ್) ಆಸ್ಪತ್ರೆಗೆ ಸೇರಿಸದಿರಲು ಕ್ರಮ ವಹಿಸಬೇಕು ಎಂದು ಸಚಿವರು ಸೂಚಿಸಿದರು.

ಸುಗ್ರೀವಾಜ್ಞೆ ಹಿಂಪಡೆಯದಿದ್ರೆ ಬೀದಿಗಳಿದು ಹೋರಾಟ ಮಾಡ್ತೀವಿ: ಎಚ್ಡಿಡಿ ಗುಡುಗು

ಬೆಂಗಳೂರು: ವರ್ಷಾಚರಣೆ ಸಂಭ್ರಮದಲ್ಲಿರೋ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಸಮಧಾನ ವ್ಯಕ್ತಪಡಿಸಿದ್ದಾರೆ. ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಕೈಗಾರಿಕಾ ಕಾಯ್ದೆಗಳಿಗೆ ತಿದ್ದುಪಡಿ ತಂದಿರೋ ಸರ್ಕಾರದ ವಿರುದ್ಧ ಎಚ್ಡಿಡಿ ಕಿಡಿಕಾರಿದ್ರು.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಎಚ್ಡಿಡಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ತಿದ್ದುಪಡಿಗಳ ವಿರುದ್ಧ ಸಿಎಂಗೆ ಪತ್ರ ಬರೆದ್ರೂ ಏನು ಪ್ರಯೋಜನವಾಗಿಲ್ಲ. ಸುಗ್ರೀವಾಜ್ಞೆ ಮೂಲಕ ಕಾಯ್ದೆಗಳನ್ನು ಜಾರಿಗೆ ತಂದಿದ್ದು ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು ಇಲ್ಲದಿದ್ರೆ ಬೀದಿಗಿಳಿದು ಹೋರಾಟ ಮಾಡ್ತೀವಿ ಅಂತಾ ಎಚ್ಚರಿಕೆ ನೀಡಿದ್ರು.

ರೈತರನ್ನು, ಕಾರ್ಮಿಕರನ್ನು ಬೀದಿಗೆ ತಂದಿರೋ ಕಾಯ್ದೆಗಳ ವಿರುದ್ಧ ಜೆಡಿಎಸ್ ಹೋರಾಟ ನಡೆಸಲಿದೆ. ಈ ಕುರಿತು ಆಗಸ್ಟ್ 1ಕ್ಕೆ ರಾಜ್ಯದ ಎಲ್ಲಾ ತಾಲ್ಲೂಕುಗಳಿಂದ ಒಬ್ಬೊಬ್ಬ ರೈತನ ಸಭೆ ಕರೆಯಲಾಗಿದೆ. ಸಭೆಯಲ್ಲಿ ಹೋರಾಟದ ಕುರಿತು ರೂಪುರೇಷೆ ಸಿದ್ಧಪಡಿಸಲಾಗುವುದು ಅಂತಾ ತಿಳಿಸಿದ್ರು.

ಕೊರೋನಾ ಕಾಲದಲ್ಲಿ ಶಾಲೆ ತೆರೆಯಲು ಅವಸರವಿಲ್ಲ: ಸುರೇಶ್ ಕುಮಾರ್

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ಪ್ರಸರಣದ ಈ ಕಾಲಘಟ್ಟದಲ್ಲಿ ಶಾಲೆಗಳನ್ನು ತೆರೆಯುವ ಅವಸರ ಸರ್ಕಾರದ ಮುಂದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ಕೊರೋನಾ ಸಾಮಾಜಿಕ ಸಂದರ್ಭದಲ್ಲಿ ತಂತ್ರಜ್ಞಾನಾಧಾರಿತ ಶಿಕ್ಷಣ ಮತ್ತು ಶಾಲಾ ಚಟುವಟಿಕೆಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಮಂಗಳವಾರ ಶೈಕ್ಷಣಿಕ ವಲಯದಲ್ಲಿ ತೊಡಗಿಸಿಕೊಂಡಿರುವ ಸರ್ಕಾರೇತರ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ನಡೆಸಿದ ವೆಬಿನಾರ್ ಸಂವಾದದಲ್ಲಿ ಮಾತನಾಡಿದ ಅವರು, ಈ ಸಾಮಾಜಿಕ ಪರಿಸ್ಥಿತಿಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಅವಸರದಲ್ಲಿ ಶಾಲೆ ತೆರೆಯುವುದಿಲ್ಲವಾದರೂ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ಎಲ್ಲ ಆಯಾಮಗಳಿಂದಲೂ ಪ್ರಯತ್ನ ಮಾಡಲಾಗುತ್ತದೆ ಎಂದರು.

ವಿವಿಧ ಸರ್ಕಾರೇತರ 36ಕ್ಕೂ ಹೆಚ್ಚು ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ ವೆಬಿನಾರ್‍ನಲ್ಲಿ ಇಂತಹ ಪರಿಸ್ಥಿತಿಯಲ್ಲಿ ಯಾವ ರೀತಿಯಲ್ಲಿ ಮಕ್ಕಳ ಕಲಿಕೆಯ ನಿರಂತರತೆಗೆ ಮಾಡಬಹುದಾದ ಮತ್ತು ತಮ್ಮ ತಮ್ಮ ವ್ಯಾಪ್ತಿಯಲ್ಲಿ ತಾವು ಕೈಗೊಂಡಿರುವ ವಿವಿಧ ಉಪಕ್ರಮಗಳನ್ನು ಆಲಿಸಿದ ಸಚಿವರು ಇಂತಹ ಪರಿಸ್ಥಿತಿ ಇದೇ ಮೊದಲ ಬಾರಿ ಬಂದೆರಗಿರುವುದರಿಂದ ಆ ನಿಟ್ಟಿನಲ್ಲಿ ಮಕ್ಕಳನ್ನು ತಲುಪಲು ಸಾಧ್ಯವಾಗಬಹುದಾದ ಎಲ್ಲ ಪ್ರಯತ್ನಗಳನ್ನು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎಂದರು.

ವಠಾರ ಶಾಲೆ, ಪಡಸಾಲೆ ಶಾಲೆ, ಮನೆಶಾಲೆ, ತಂತ್ರಜ್ಞಾನಾಧಾರಿತ ಶಿಕ್ಷಣ, ಆಕಾಶವಾಣಿ, ಚಂದನ ದೂರದರ್ಶನ ವಾಹಿನಿ, ಖಾಸಗಿ ವಾಹಿನಿ, ಶಿಕ್ಷಣ ಇಲಾಖೆಯ ಚಾನೆಲ್ ಸೇರಿದಂತೆ ಲಭ್ಯವಾಗಬಹುದಾದ ಎಲ್ಲ ಅವಕಾಶವನ್ನೂ ಮುಕ್ತವಾಗಿರಿಸಿಕೊಂಡು ಶಿಕ್ಷಣ ಇಲಾಖೆ ಎಲ್ಲ ಉಪಕ್ರಮಗಳತ್ತಲೂ ಮಕ್ಕಳ ಹಿತದೃಷ್ಟಿಯಿಂದ ಯೋಚಿಸುತ್ತಿದೆ ಎಂದು ಅವರು ಹೇಳಿದರು.

ಈ ಎಲ್ಲ ಸಾಮೂಹಿಕವಾದ ಪ್ರಯತ್ನಗಳು ಗಟ್ಟಿ ರೂಪ ಪಡೆದು ವಿಕೇಂದ್ರಿಕೃತ ಕಲಿಕೆಯು ಮಕ್ಕಳಿಗೆ ಉಪಯುಕ್ತವಾಗುವ ರೀತಿಯಲ್ಲಿ ನಮ್ಮ ಪ್ರಯತ್ನಗಳು ಇರಬೇಕೆನ್ನುವ ಅಭಿಪ್ರಾಯಗಳು ನಾವು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬಹುದಾದ ನಿರ್ಣಯಗಳಿಗೆ ಒಂದು ಸ್ಪಷ್ಟ ದಿಕ್ಕನ್ನು ಮೂಡಿಸಿವೆ. ಈ ಎಲ್ಲ ಸಲಹೆಗಳನ್ನು ಕ್ರೂಢೀಕರಿಸಿ ದಾಖಲಿಸಿ ಆಯಾ ಸಂದರ್ಭ, ಆಯಾ ಪ್ರದೇಶಕ್ಕನುಗುಣವಾಗಿ ಜಾರಿಯಲ್ಲಿಡುವ ಬಗ್ಗೆಯೂ ಚಿಂತನೆ ನಡೆಸಲಾಗುವುದು ಎಂದು ಸುರೇಶ್‍ಕುಮಾರ್ ಅಭಿಪ್ರಾಯಪಟ್ಟರು.

ಅಜೀಂ ಪ್ರೇಮ್‍ಜಿ ಪ್ರತಿಷ್ಠಾನ, ಗ್ರಾಮ್ಸ್ , ಅಕ್ಷರ ಫೌಂಡೇಷನ್, ಯೂನಿಸೆಫ್, ಶಿಕ್ಷಣ, ಸಿಇಇ (ವಾಷ್ ಪ್ರೋಗ್ರಾಂ), ಪೋರ್ತ್ ಫೌಂಡೇಷನ್, ಪ್ರಥಮ್, ಪ್ರಜಾಯತ್ನ, ಅಗಸ್ತ್ಯ ಫೌಂಡೇಷನ್, ಲೆಂಡ್ ಎ ಹ್ಯಾಂಡ್ ಇಂಡಿಯಾ, ವೈಟ್‍ಫೀಲ್ಡ್ ರೆಡಿ ಸಮೃದ್ಧಿ ಟ್ರಸ್ಟ್, ಇಂಡಿಯನ್ ಲಿಟ್ರೆಸಿ ಪ್ರಾಜೆಕ್ಟ್, ಬಿಜಿವಿಎಸ್, ಎಸ್‍ಟಿಐಆರ್, ಏಕ್ ಸ್ಟೆಪ್-ದೀಕ್ಷಾ, ರೂಂ ಟು ರೀಡ್ ಇಂಡಿಯಾ ಟ್ರಸ್ಟ್, ಗ್ರಾಮ್, ಐ.ಎಲ್.ಪಿ. ಸೇರಿದಂತೆ ಹಲವಾರು ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಸಂವಾದದಲ್ಲಿ ಭಾಗವಹಿಸಿದ ಎಲ್ಲ ಸಂಸ್ಥೆಗಳ ಹಿತದೃಷ್ಟಿಯೂ ನಮ್ಮ ಮಕ್ಕಳೇ ಪ್ರಮುಖವಾಗಿದ್ದರಿಂದ ಅವರನ್ನು ಈ ಪರಿಸ್ಥಿತಿಯಲ್ಲಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ಎಲ್ಲ ರೀತಿಯ ಸಾಧ್ಯತೆಗಳನ್ನು ಕ್ರೋಢೀಕರಿಸಿಕೊಂಡು ಅವಕಾಶವಾಗುವ ಯಾವುದೇ ಸೌಲಭ್ಯದ ಮೂಲಕವಾಗಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ಸರ್ಕಾರ ಮುಂದಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಸಂವಾದದಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಕೆಳಕಂಡಂತಿವೆ:
• ಯೂ-ಟ್ಯೂಬ್, ವಾಟ್ಸಪ್ ಸೇರಿದಂತೆ ಯಾವುದರ ಮೂಲಕವೇ ಆದರೂ ಮಕ್ಕಳು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಮಕ್ಕಳು ಹೆಚ್ಚು ದಿನ ಐಡಲ್ ಆಗಿ ಇರುವಂತಾಗಬಾರದು. ನೇರ ಪ್ರಸಾರ, ರೆಕಾರ್ಡೆಡ್ ಪಾಠದ ಮಾದರಿಯ ತರಗತಿಗಳೂ ಆಗಬಹುದು.
• ಶಾಲೆಗಳ ಗ್ರಂಥಾಲಯಕ್ಕೆ ದಿನಬಿಟ್ಟು ದಿನ ಮಕ್ಕಳು ಬಂದು ಪಾಠ ಪಡೆದು ಅದನ್ನು ಓದಿ ಮತ್ತೊಂದು ದಿನ ಬಂದು ಅದನ್ನು ಒಪ್ಪಿಸುವುದು.
• ಈ ಹಂತದಲ್ಲಿ ಸಿಲೆಬಸ್ ಮುಖ್ಯವಲ್ಲ, ಕಲಿಕೆಯ ಅಂತರವನ್ನು ನಿವಾರಿಸುವುದು ಮುಖ್ಯವಾಗಬೇಕು. ಅದಕ್ಕಾಗಿ ಪಠ್ಯೇತರ ಚಟುವಟಿಕೆಗಳೇ ಆದರೂ ಸರಿ. ಅವುಗಳನ್ನೇ ಕಲಿಸುವ ಪ್ರಯತ್ನ ನಡೆಯಬೇಕು.
• ಪ್ರಸ್ತುತ ಶೈಕ್ಷಣಿಕ ವರ್ಷ ಮತ್ತು ಮುಂದಿನ ಶೈಕ್ಷಣಿಕ ವರ್ಷದ ಪಠ್ಯದ ಕುರಿತು ಒಂದು ಹೈಬ್ರಿಡ್ ಪ್ಲಾನ್ ಮಾಡಿ ಮಕ್ಕಳನ್ನು ತಲುಪುವುದೊಳಿತು.
• ಸಮುದಾಯ ಆಧಾರಿತ ಕೇಂದ್ರಗಳು, ನೆರೆಹೊರೆ ಮಕ್ಕಳ ಗುಂಪು, ಗ್ರಾಮದಲ್ಲಿರುವ ಶಿಕ್ಷಕರು, ಶಿಕ್ಷಕ ಪದವೀಧರರು, ಶಿಕ್ಷಕ ತರಬೇತಿ ಪಡೆದವರು, ಸ್ವಯಂ ಸೇವಕರನ್ನು ಈ ಹಂತದಲ್ಲಿ ಬಳಸಿಕೊಳ್ಳಬೇಕು.
• ಇಂತಹ ಪ್ರಯತ್ನ ಜಾರಿಯಲ್ಲಿ ಆಯಾ ಗ್ರಾಮ ಪಂಚಾಯ್ತಿ ಸದಸ್ಯರು, ಅಧಿಕಾರಿಗಳನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಹೆಜ್ಜೆ ಇಡಬೇಕು.
• ಕೋವಿಡ್ ಒಂದು ಅವಕಾಶವೆಂದು ಪರಿಗಣಿಸಿ ಆ ಸಮಯದಲ್ಲಿ ಮಕ್ಕಳನ್ನು ಕೇವಲ ಪಠ್ಯಕ್ಕೆ ಸೀಮಿತಗೊಳಿಸದೇ ಇತರೆ ಚಟುವಟಿಕೆಗಳಲ್ಲಿ ತೊಡಗಿಸಲು ಮುಂದಾಗಬೇಕು.
• ತಂತ್ರಜ್ಞಾನಾಧಾರಿತ ಶಿಕ್ಷಣ ನೀಡುವಾಗ ಅದು ಮಕ್ಕಳಿಗೆ ಸಮರ್ಪಕಾಗಿ ತಲುಪುತ್ತಿದೆಯೇ ಇಲ್ಲವೇ ಎಂಬ ಬಗ್ಗೆ ಮಾನಿಟರ್ ಮಾಡುವ ವ್ಯವಸ್ಥೆ ಸಹ ಮುಖ್ಯವಾಗುತ್ತದೆ.
• ಸದ್ಯದ ಪರಿಸ್ಥಿತಿಯಲ್ಲಿ ಶಾಲೆಗಳು ಆರಂಭಿಸುವ ಸಾಧ್ಯತೆಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಲಭ್ಯವಿರುವ ಸಂಪನ್ಮೂಲಗಳ ಆಧಾರದಲ್ಲಿ ವಿಕೇಂದ್ರೀಕರಣಗೊಳಿಸಿ ಮಕ್ಕಳ ಹಿತದೃಷ್ಟಿಯಿಂದ ಪರ್ಯಾಯ ಕಲಿಕಾ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಮುಂದಾಗಬೇಕು.
• ತಜ್ಞರ ಅಭಿಪ್ರಾಯಗಳೇನೇ ಇರಲಿ, ಒಟ್ಟಾರೆ ನಾಡಿನ ಮಕ್ಕಳ ಹಿತದೃಷ್ಟಿಯಿಂದ ಕಲಿಕಾ ಚಟುವಟಿಕೆಗಳನ್ನು ಆರಂಭಿಸುವುದು ಒಳ್ಳೆಯದು. ಮಕ್ಕಳು ಶೈಕ್ಷಣಿಕ ಚಟವಟಿಕೆಯಿಂದ ಹೆಚ್ಚು ದಿನಗಳು ವಿಮುಖವಾಗುವುದು ಅಷ್ಟು ಉಚಿತವಲ್ಲವಾದ್ದಾರಿಂದ ಯಾವುದಾದರೂ ರೀತಿಯಿಂದ ಅವರಿಗೆ ತರಗತಿಗಳು ತಲುಪುವಂತಾಗಬೇಕು. ಕೊರೋನಾ ಪರಿಸ್ಥಿತಿ ತಿಳಿಗೊಳ್ಳುವುದು ತಡವಾಗಬಹುದಾದರೂ ಶಾಲೆಗಳು ಇಲ್ಲವೇ ಕಲಿಕೆ ಒಮ್ಮೆ ಶುರುವಾದರೆ ಸಮಸ್ಯೆಗಳು ಒಂದು ಹಂತಕ್ಕೆ ಪರಿಹಾರ ದೊರೆಯಬಹುದು.
• ಪ್ರಯತ್ನಗಳತ್ತಲೇ ನಾವು ಚಿಂತಿಸುತ್ತಾ ಕೂರುವ ಬದಲು ಅವುಗಳನ್ನು ಜಾರಿಗೆ ತಂದು ಮಕ್ಕಳನ್ನು ತಲುಪುವುದಕ್ಕೆ ಮೊದಲ ಆದ್ಯತೆ ನೀಡಬೇಕಾದ ಅಗತ್ಯ ಹೆಚ್ಚಾಗಿದೆ.
• ಆಯಾ ಪರಿಸ್ಥಿತಿಯಲ್ಲಿ ಲಭ್ಯವಿರುವ ಯಾವುದೇ ಅವಕಾಶ ಇಲ್ಲವೇ ಸೌಲಭ್ಯವನ್ನೂ ಈ ಸಂದರ್ಭದಲ್ಲಿ ಬಳಸಿಕೊಳ್ಳುವುದು ಒಳ್ಳೆಯದು. ಪ್ರಸ್ತುತ ಸಂದರ್ಭದಲ್ಲಿಯೂ ಗ್ರಾಮಗಳಲ್ಲಿ ಮಕ್ಕಳು ತಮ್ಮ ಶಾಲೆ ಬಳಿಯೇ ಬಂದು ದಿನಂಪ್ರತಿ ಆಟವಾಡುತ್ತಿದ್ದಾರೆ. ಮಕ್ಕಳಿಗೆ ಶಾಲಾ ತರಗತಿಗಳೇ ಅಚ್ಚುಮೆಚ್ಚು. ಸುರಕ್ಷಿತ ವಾತಾವರಣವೆಂದು ಕಂಡುಬಂದ ಕಡೆಗಳಲ್ಲಿ ಶಾಲಾ ತರಗತಿಗಳನ್ನೇ ಪ್ರಾರಂಭಿಸಿದರೆ ತ್ಪಪ್ಪೇನು ಇಲ್ಲ.
• ಆಯಾ ಪ್ರದೇಶದಲ್ಲಿ ಆಯಾ ನೆಲೆಯಲ್ಲಿ ಸಾಧ್ಯವಾಗಬಹುದಾದ ಆವಕಾಶಗಳನ್ನು ಬಳಸಿಕೊಳ್ಳಲು ಸರ್ಕಾರ ಮುಂದಾಗಬೇಕು.

ಸಂವಾದದಲ್ಲಿ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು, ಹಿರಿಯ ಶಿಕ್ಷಣ ತಜ್ಞರಾದ ಎಂ.ಕೆ. ಶ್ರೀಧರ್, ಡಾ. ಗುರುರಾಜ ಖರ್ಜಗಿ, ಡಾ. ವಿ.ಪಿ. ನಿರಂಜನಾರಾಧ್ಯ, ಪ್ರಾಥಮಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜಿ.ಜಗದೀಶ್, ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾಧಿಕಾರಿ ದೀಪಾ ಚೋಳನ್ ಭಾಗವಹಿಸಿದ್ದರು.

ಪ್ರತಿಷ್ಟಿತ ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್’ಗೆ ಇಂದು ಅಡಿಗಲ್ಲು; ರಾಜ್ಯ ಬಿಟಿ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು

ಬೆಂಗಳೂರು: ಎರಡು ದಶಕಗಳ ಕನಸಾಗಿದ್ದ, ರಾಜ್ಯ ಬಯೋ ಟೆಕ್ನಾಲಜಿ ಕ್ಷೇತ್ರಕ್ಕೆ ನಿರ್ಣಾಯಕ ಕೊಡುಗೆ ನೀಡಬಲ್ಲ ’ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್’ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಧವಾರ ( ಜುಲೈ 29) ಅಡಿಗಲ್ಲು ಹಾಕಲಿದ್ದಾರೆ ಎಂದು ಐಟಿ-ಬಿಟಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ತಿಳಿಸಿದರು.

ಬೆಂಗಳೂರಿನಲ್ಲಿ ಮಂಗಳವಾರ ಆನ್’ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 5,000 ಕೋಟಿ ರೂಪಾಯಿ ಹೂಡಿಕೆಯಲ್ಲಿ ತಲೆ ಎತ್ತಲಿರುವ ಈ ಲೈಫ್ ಸೈನ್ಸೆಸ್ ಪಾರ್ಕಿನಿಂದ ದೇಶದ ಬಿಟಿ ರಾಜಧಾನಿ ಎಂದು ಈಗಾಗಲೇ ಹೆಗ್ಗಳಿಕೆ ಪಡೆದಿರುವ ಬೆಂಗಳೂರು ನಗರದ ಪ್ರಾಮುಖ್ಯತೆ ಮತ್ತಷ್ಟು ಹೆಚ್ಚಾಗಲಿದೆ. ದೇಶದಲ್ಲಿ ಹಾಗೂ ಜಾಗತಿಕವಾಗಿಯೂ ನಮ್ಮ ಬಯೋ ಟೆಕ್ನಾಲಜಿ ಕ್ಷೇತ್ರ ಮತ್ತಷ್ಟು ನಿರ್ಣಾಯಕವಾಗಲಿದೆ ಎಂದರು.

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸ್ಥಾಪನೆಯಾಗುತ್ತಿರುವ ಈ ಯೋಜನೆಗೆ ಬುಧವಾರ ಬೆಳಗ್ಗೆ 9.30 ಗಂಟೆಗೆ ಭೂಮಿಪೂಜೆ ನಡೆಯಲಿದ್ದು, ಮುಖ್ಯಮಂತ್ರಿಗಳ ಜತೆಗೆ ಬಯೋಕಾನ್ ಕಂಪನಿಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ಸರಕಾರದ ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ ಎಂದು ಡಿಸಿಎಂ ಮಾಹಿತಿ ನೀಡಿದರು.

ವಿಷನ್ ಗ್ರೂಪ್ ನೀಡಿದ್ದ ಸಲಹೆ:

ಡಾ. ಕಿರಣ್ ಮಜುಂದಾರ್ ಶಾ ಅವರ ನೇತೃತ್ವದಲ್ಲಿ 2000ರಲ್ಲಿಯೇ ಕರ್ನಾಟಕದಲ್ಲಿ ಬಯೋಟೆಕ್ನಾಲಜಿಯ ವಿಷನ್ ಗ್ರೂಪ್ ರಚಿಸಲಾಯಿತು. ಕೈಗಾರಿಕೆ ಮತ್ತು ಸರ್ಕಾರದ ನಡುವಿನ ಅಂತರವನ್ನು ಕಡಿಮೆ ಮಾಡಲು ಮತ್ತು ರಾಜ್ಯದ ಜೈವಿಕ ತಂತ್ರಜ್ಞಾನ ಪರಿಸರ ವ್ಯವಸ್ಥೆಯ ಬೆಳವಣಿಗೆಯನ್ನು ಮತ್ತಷ್ಟು ವೇಗಗೊಳಿಸಲು ಮುಂದಿನ ಮಾರ್ಗವನ್ನು ಜಂಟಿಯಾಗಿ ಸಾಧಿಸಲು ’ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್’ ಸ್ಥಾಪಿಸಲು ಸಲಹೆ ನೀಡಲಾಗಿತ್ತು. ಅದರಂತೆ ಪ್ರತಿಷ್ಟಿತ ಈ ಯೋಜನೆಗೆ ಅಡಿಗಲ್ಲು ಹಾಕಲಾಗುತ್ತಿದೆ ಎಂದು ಡಿಸಿಎಂ ತಿಳಿಸಿದರು.

ಪ್ರಸಕ್ತ ದಿನಗಳಲ್ಲಿ ಜೈವಿಕ ತಂತ್ರಜ್ಞಾನವು ಬಹಳ ವೇಗವಾಗಿ ಬೆಳೆಯುತ್ತಿದೆಯಲ್ಲದೆ, ಮಾನವ ಸಮಾಜಕ್ಕೆ ಅನಿವಾರ್ಯವಾಗಿದೆ. ಆರೋಗ್ಯ, ಕೃಷಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಇದು ನಿರ್ಣಾಯಕ ಪತ್ರ ಪೋಷಿಸುತ್ತಿದೆ. ಅದರಲ್ಲೂ ಕೋವಿಡ್-19 ನಂತರದ ಕಾಲದಲ್ಲಿ ಹಾಗೂ ಭವಿಷ್ಯದಲ್ಲಿ ಇಂತಹ ಮಾರಣಾಂತಕ ವೈರಸ್’ಗಳ ಸವಾಲು ಎದುರಾದರೆ ಜೈವಿಕ ತಂತ್ರಜ್ಞಾನದಿಂದಲೇ ಅದೆಲ್ಲವನ್ನೂ ಹಿಮ್ಮೆಟ್ಟಿಸಲು ಸಾಧ್ಯವಾಗಲಿದೆ. ಆ ನಿಟ್ಟಿನಲ್ಲಿ ನಮ್ಮ ಬೆಂಗಳೂರು ಮುಂದಿನ ಸವಾಲುಗಳಿಗೆ ಸಜ್ಜಾಗುತ್ತಿದೆ ಮಾತ್ರವಲ್ಲದೆ, ಈಗ ಅಸ್ತಿತ್ವಕ್ಕೆ ಬರುತ್ತಿರುವ ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಉಪ ಮುಖ್ಯಮಂತ್ರಿ ಒತ್ತಿ ಹೇಳಿದರು.

ಬೆಂಗಳೂರೇ ಲೀಡರ್:

ಈಗಾಗಾಲೇ ಬೆಂಗಳೂರಿನಲ್ಲಿ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಸಂಶೋಧನೆಗಳು ನಡೆಯುತ್ತಿವೆ. ಆ ರೀತಿಯ ದೊಡ್ಡ ಬೇಸ್ ನಮ್ಮಲ್ಲಿ ಸೃಷ್ಟಿ ಆಗಿದೆ. ಅದನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಬೇಕಿದೆ. ಸದ್ಯಕ್ಕೆ ನಮ್ಮ ರಾಜ್ಯವು ಬಿಟಿ ವಲಯದಲ್ಲಿ ಏಷ್ಯಾ ಖಂಡದಲ್ಲಿ ಶೇ. 9ರಷ್ಟು ಹಾಗೂ ನಮ್ಮ ದೇಶದಲ್ಲೇ ಶೇ. 35ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಜತೆಗೆ, ನಮ್ಮಲ್ಲಿ 380 ಜೈವಿಕ ತಂತ್ರಜ್ಞಾನ ಕಂಪನಿಗಳು ಹಾಗೂ 200ಕ್ಕೂ ಹೆಚ್ಚು ಸ್ಟಾರ್ಟಪ್’ಗಳು ಇವೆ. ಈ 30 ಸರಕಾರಿ ಸಂಸ್ಥೆಗಳು ಇದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿವೆ. ಇವೆಲ್ಲ ಸಂಸ್ಥೆಗಳು ಅತ್ಯಂತ ಪ್ರತಿಷ್ಟಿತ ಹಾಗೂ ಜಾಗತಿಕ ಮಟ್ಟದ ಖ್ಯಾತಿ ಹೊಂದಿರುವಂತವುಗಳಾಗಿವೆ. ಇವುಗಳ ಜೆತೆಗೆ ಲೈಫ್ ಸೈನ್ಸೆಸ್ ಪಾರ್ಕ್ ಕೂಡ ಸೇರುತ್ತಿರುವುದು ಈ ಕ್ಷೇತ್ರಕ್ಕೆ ದೊಡ್ಡ ಬಲ ಬಂದಂತೆ ಆಗಿದೆ ಎಂದು ಡಿಸಿಎಂ ಅಭಿಪ್ರಾಯಪಟ್ಟರು.

ಜತೆಗೆ ದೇಶದ ಒಟ್ಟಾರೆ ಶೇ. 60ರಷ್ಟು ಬಯೋ ಫಾರ್ಮ ಉತ್ಪನ್ನಗಳು ನಮ್ಮ ರಾಜ್ಯದಲ್ಲಿಯೇ ಆಗುತ್ತಿವೆ. ದೇಶದ ಒಟ್ಟು ಬಯೋ ಉತ್ಪನ್ನಗಳ ರಫ್ತು ವಹಿವಾಟಿನಲ್ಲಿ ಮೂರನೇ ಒಂದು ಭಾಗದಷ್ಟು ಕರ್ನಾಟಕದಿಂದಲೇ ಆಗುತ್ತಿದೆ. ಈ ಕ್ಷೇತ್ರಕ್ಕೆ ಸಂಬಂಧಿಸಿದ ಭಾರತದ ಒಟ್ಟಾರೆ ಮಾನವ ಸಂಪನ್ಮೂಲದಲ್ಲಿ ಶೇ 54ರಷ್ಟು ಬೆಂಗಳೂರಿನಲ್ಲಿಯೇ ಕೆಲಸ ಮಾಡುತ್ತಿದೆ. ಹೊಸ ಅಂಕಿ ಅಂಶಗಳ ಪ್ರಕಾರ ಶೇ. 18ರಷ್ಟು ಸ್ಟಾರ್ಟಪ್’ಗಳು ನಮ್ಮ ರಾಜ್ಯದಲ್ಲಿಯೇ ಇವೆ. ವಾರ್ಷಿಕ ಶೇ. 30ರಷ್ಟು ಪ್ರಗತಿ ದಾಖಲಿಸುತ್ತಿವೆ. ಒಂದು ವರ್ಷಕ್ಕೆ 7,500ಕ್ಕೂ ಹೆಚ್ಚು ಬಿಟಿ ಪದವೀಧರರು ಕಾಲೇಜುಗಳಿಂದ ಹೊರಬರುತ್ತಿದ್ದಾರೆಂದು ಅವರು ಮಾಹಿತಿ ನೀಡಿದರು.

ಏನಿದು ಪಾರ್ಕ್?:

ಬಿಟಿಯ ವಿಷನ್ ಗ್ರೂಪಿನ ಶಿಫಾರಸ್ಸಿನ ಮೇರೆಗೆ, ಬಯೋಹೆಲಿಕ್ಸ್ ಪಾರ್ಕ್ ಅನ್ನು ಈ ಕೆಳಗಿನ ಅಂಶಗಳೊಂದಿಗೆ ರೂಪಿಸಲಾಗಿದೆ. ಒಟ್ಟು 86 ಎಕರೆ ಜಾಗದಲ್ಲಿ ಸಾಂಸ್ಥಿಕ ಪ್ರದೇಶಕ್ಕಾಗಿ 20 ಎಕರೆ, ಸಂಶೋಧನೆ ಉದ್ದೇಶಕ್ಕೆ 10 ಎಕರೆ ಹಾಗೂ ಕೈಗಾರಿಕಾ ಕ್ಲಸ್ಟರ್’ಗಳ ಅಭಿವೃದ್ಧಿಗೆ 52.27 ಎಕರೆಯನ್ನು ಮೀಸಲು ಇಡಲಾಗಿದೆ. ಬಯೋ ಟೆಕ್ನಾಲಜಿ ಕ್ಷೇತ್ರದ ದೊಡ್ಡ ಹಬ್ ಆಗಿ ’ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್’ ಹೊರಹೊಮ್ಮಲಿದೆ. 64 ವರ್ಷಗಳ ಲೀಸ್ ಒಪ್ಪಂದವನ್ನೂ ಮಾಡಿಕೊಳ್ಳಲಾಗಿದೆ. ಈ ನಿಗದಿತ ಪಾರ್ಕ್’ನಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 50,000 ಮಂದಿಗೆ ಉದ್ಯೋಗ ಲಭ್ಯವಾಗಲಿದೆ. ಜಾಗತಿಕ ಗುಣಮಟ್ಟದ ಪ್ರಯೋಗಾಲಯಗಳು ಇಲ್ಲಿ ನಡೆಯಲಿವೆ. ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಈ ಯೋಜನೆ ಬರುತ್ತಿದ್ದು, ಇದನ್ನು ಮಾದರಿ ಟೌನ್‌ಶಿಪ್ ಆಗಿ ಅಭಿವೃದ್ಧಿ ಮಾಡಲಾಗುತ್ತದೆ. ಈಗಾಗಲೇ ಐಟಿ ಕ್ಯಾಪಿಟಲ್ ಆಗಿ ಹೆಸರಾಗಿರುವ ಬೆಂಗಳೂರು ಮುಂದಿನ ದಿನಗಳಲ್ಲಿ ಬಿಟಿ ಕ್ಯಾಪಿಟಲ್ ಆಗಿಯೂ ಹೊರಹೊಮ್ಮಲಿದೆ. ಅದಕ್ಕೆ ಈ ಪಾರ್ಕ್ ಗಣನೀಯ ಕಾಣಿಕೆ ನೀಡಲಿದೆ. ಇದು ಸರಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ತಲೆ ಎತ್ತಲಿದೆ.

9ರಿಂದ 10 ದಶಲಕ್ಷ ಚ.ಅಡಿಯಷ್ಟು ವಿಶಾಲ ಜಾಗದಲ್ಲಿ ನಿರ್ಮಾಣವಾಗಲಿರುವ ಈ ಪಾರ್ಕ್’ನಲ್ಲಿ 160ಕ್ಕೂ ಹೆಚ್ಚು ಕಂಪನಿಗಳು ಬರಲಿವೆ. 100ಕ್ಕೂ ಹೆಚ್ಚು ಸ್ಟಾರ್ಟ್ ಟಪ್ ಗಳು ಕಾರ್ಯ ನಿರ್ವಹಿಸಲಿವೆ. 86 ಸಾವಿರದಿಂದ 1 ಲಕ್ಷದಷ್ಟು ಉದ್ಯೋಗಿಗಳು ಕೆಲಸ ಮಾಡಲಿದ್ದಾರೆ. 5,000 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗಲಿದೆ. ಮೊದಲ ಹಂತದಲ್ಲಿಯೇ ಎರಡು ಘಟಕಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಬಯೋ ಹೆಲಿಕ್ಸ್ ಪಾರ್ಕ್‌ನಲ್ಲಿ ಸಾಂಸ್ಥಿಕ ಮತ್ತು ಪೂರಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ರಾಜ್ಯ ಸರಕಾರ 150 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ.

ಕಿರಣ್ ಮಜುಂಧರ್ ಷಾ ಸಂತಸ:

ಕೊನೆಗೂ ಈ ಯೋಜನೆ ಸಾಕಾರ ಆಗುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದು ಬಯೋಕಾನ್ ಕಂಪನಿಯ ಅಧ್ಯಕ್ಷೆ ಹಾಗೂ ಬಿಟಿ ವಿಷನ್ ಗ್ರೂಪ್ ಮುಖ್ಯಸ್ಥರಾಗಿದ್ದ ಕಿರಣ್ ಮಜುಂದಾರ್ ಷಾ ಹೇಳಿದರು. ಉಪ ಮುಖ್ಯಮಂತ್ರಿ ಜತೆ ಆನ್’ಲೈನ್ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಯೋಜನೆ ಬಹಳ ಹಿಂದೆಯೇ ಬರಬೇಕಿತ್ತು. ಈಗಲಾದರೂ ಬರುತ್ತಿದೆ ಎಂಬುದಕ್ಕೆ ನನಗೆ ತುಂಬಾ ಆನಂದವಾಗಿದೆ. ಆದಷ್ಟು ಬೇಗ ಈ ಪಾರ್ಕ್ ಕಾರ್ಯಾರಂಭ ಶುರು ಮಾಡಲಿ ಎಂದು ಅವರು ಹಾರೈಸಿದರಲ್ಲದೆ, ಬೆಂಗಳೂರು ಸೈನ್ಸೆಸ್ ಪಾರ್ಕ್ ಅತ್ಯುತ್ತಮ ಯೋಜನೆಯಾಗಿದೆ. ಇದು ಬಂದ ನಂತರ ನಮ್ಮ ರಾಜ್ಯದ ಬಿಟಿ ಕ್ಷೇತ್ರದ ಶಕ್ತಿ ದುಪ್ಪಟ್ಟಾಗಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಸೈನ್ಸೆಸ್ ಪಾರ್ಕ್ ಸಿಇಒ ಚಿರಾಗ್ ಪುರುಷೋತ್ತಮ್ ಕೂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಮಣ ರೆಡ್ಡಿ, ಐಟಿ-ಬಿಟಿ ನಿರ್ದೇಶಕಿ ನಾಗರಾಜ್ ಇದ್ದರು.
ಬೆಂಗಳೂರು ಸೈನ್ಸೆಸ್ ಪಾರ್ಕ್ ಸಿಇಒ ಚಿರಾಗ್ ಪುರುಷೋತ್ತಮ್ ಉದ್ದೇಶಿತ ಬಿಟಿ ಪಾರ್ಕ್ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.