ಸಮಾನ ಮನಸ್ಕ ಪಕ್ಷಗಳನ್ನು ಒಡೆದು ಕಾಂಗ್ರೆಸ್ ಶಾಸಕರನ್ನು ಸೆಳೆಯುತ್ತಿದೆ: ಎಚ್ಡಿಕೆ ಆರೋಪ

ಬೆಂಗಳೂರು: ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಡೆಯನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಶಾಸಕರನ್ನು ಖರೀದಿಸಿ, ಸರ್ಕಾರಗಳನ್ನು ಉರುಳಿಸುತ್ತಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ “ಪ್ರಜಾಪ್ರಭುತ್ವ ಉಳಿಸಿ” ಎಂದು ಹೋರಾಟ ನಡೆಸುತ್ತಿದೆ. ಇದೇ ಕಾಂಗ್ರೆಸ್ ರಾಜಸ್ಥಾನದಲ್ಲಿ ಏನು ಮಾಡಿದೆ? ಅಂತಾ ಎಚ್ಡಿಕೆ ಪ್ರಶ್ನಿಸಿದ್ದಾರೆ.

ಸರ್ಕಾರ ರಚಿಸಲು ಬೆಂಬಲ ನೀಡಿದ BSPಯ ಎಲ್ಲ ಶಾಸಕರನ್ನೂ ಕಾಂಗ್ರೆಸ್ ಸೆಳೆದಿಲ್ಲವೇ? ಇದು ಖರೀದಿಯಲ್ಲವೇ? ಸರ್ಕಾರ ರಚಿಸಲು ಬೆಂಬಲ ಕೊಟ್ಟವರನ್ನೇ ಕುತಂತ್ರದಿಂದ ಸೆಳೆದುಕೊಳ್ಳುವುದು, ಇಡೀ ಪಕ್ಷವನ್ನೇ ವಿಲೀನ ಮಾಡಿಸಿಕೊಳ್ಳುವುದು ಪ್ರಜಾಪ್ರಭುತ್ವ ನಡೆಯೇ? ಸಮಾನ ಮನಸ್ಕ ಪಕ್ಷಗಳನ್ನು ಒಡೆದು ಶಾಸಕರನ್ನು ಸೆಳೆಯುತ್ತಿದ್ದರೆ ನಿಮಗೆ ಯಾರು ಬೆಂಬಲ ಕೊಟ್ಟಾರು. ಈ ತಪ್ಪುಗಳು ನಿಮಗೆ ಕಾಣುತ್ತಿಲ್ಲವೇ?

ಶಾಸಕರ ಖರೀದಿ ವಿಚಾರವಾಗಿ ದೊಡ್ಡ ಗಂಟಲು ಮಾಡುತ್ತಿರುವ ಕಾಂಗ್ರೆಸ್ ಹಿಂದೆ ಜೆಡಿಎಸ್ ಅನ್ನು ಒಡೆದಿಲ್ಲವೇ? ಒಡೆಯಲು ಪ್ರಯತ್ನಗಳನ್ನು ಮಾಡಲಿಲ್ಲವೇ? ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಂಟು ಮಂದಿಯನ್ನು ಕೇವಲ ರಾಜ್ಯಸಭೆ ಚುನಾವಣೆಗಾಗಿ ಖರೀದಿಸಲಿಲ್ಲವೇ? ಇದು ಪ್ರಜಾಸತ್ತಾತ್ಮಕವೇ? ಖರೀದಿ ವಿಚಾರದಲ್ಲಿ ಎರಡೂ ಪಕ್ಷಗಳೂ ‘ಅಪರಾಧಿ’ಗಳೇ

ಎಸ್.ಎಂ ಕೃಷ್ಣ ಅವರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ನಮ್ಮ ಶಾಸಕರನ್ನು ಖರೀದಿ ಮಾಡಿರಲಿಲ್ಲವೇ? 2018ರ ವಿಧಾನಸಭೆ ಚುನಾವಣೆ ನಂತರ ನಮ್ಮ ಶಾಸಕರನ್ನು ಖರೀದಿಸಿ ಸ್ವತಂತ್ರವಾಗಿ ಸರ್ಕಾರ ರಚಿಸಲು ಹೊಂಚು ಹಾಕಿರಲಿಲ್ಲವೇ? ಕಾಂಗ್ರೆಸ್ ಬಳಿ ಈ ಪ್ರಶ್ನೆಗಳಿಗೆ ಉತ್ತರಿಸಲು ನೈತಿಕತೆ ಇದೆಯೇ?

2004ರ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಇದೇ ಕಾಂಗ್ರೆಸ್ ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿತ್ತು. ಇದನ್ನು ಮನಗಂಡೇ ನಾನು ಕ್ಷಿಪ್ರ ರಾಜಕೀಯ ಕ್ರಾಂತಿ ಮಾಡಬೇಕಾಯಿತು. ಪಕ್ಷಗಳನ್ನು ಒಡೆಯುವ, ಶಾಸಕರನ್ನು ಖರೀದಿಸುವ ವ್ಯವಾಹರದಲ್ಲಿ ಕಾಂಗ್ರೆಸ್ ನಿಪುಣ. ‘ಕುದುರೆ ವ್ಯಾಪಾರ’ ಎಂಬ ಭಾಷೆ ಹುಟ್ಟಿದ್ದೇ ಕಾಂಗ್ರೆಸ್ನಿಂದ.

ಪಕ್ಷಾಂತರ ನಿಷೇಧ ಕಾಯ್ದೆ ಪರಿಣಾಮಕಾರಿಯಾಗಿಲ್ಲ.‌ ಆದ್ದರಿಂದಲೇ ಈ ಪ್ರಜಾಪ್ರಭುತ್ವ ವಿರೋಧಿ ಪ್ರಹಸನಗಳು ನಡೆಯುತ್ತಿವೆ. ಹಾಗಾಗಿ ಪಕ್ಷಾಂತರ ಮಾಡಿದ ವ್ಯಕ್ತಿ, ಆತನ ಕುಟುಂಬಕ್ಕೆ 2 ಅವಧಿಗೆ ಚುನಾವಣೆ ನಿರ್ಬಂಧಿಸುವ ಮತ್ತು ಈ ಅವಧಿಯಲ್ಲಿ ಯಾವುದೇ ಅಧಿಕಾರ ಹೊಂದದಂತೆ ಮಾಡುವುದು ಸೂಕ್ತ. ಇದರತ್ತ ಚರ್ಚೆಗಳಾದರೂ ನಡೆಯಲಿ. ಪ್ರಜಾಪ್ರಭುತ್ವ ಉಳಿಯಲಿ.

ಪ್ರಜಾಪ್ರಭುತ್ವ ಉಳಿಸಲು ಪ್ರಾಣ ನೀಡುವುದಾಗಿ ಕಾಂಗ್ರೆಸ್‌ ಪ್ರತಿಭಟನೆಯಲ್ಲಿ ಮಾಜಿ ಸಿಎಂ ಹೇಳುತ್ತಿದ್ದರು. ಸ್ವಾಮಿ, ಜೀವ ಅಮೂಲ್ಯ. ನೀವು ಪ್ರಾಣ ಕೊಡುವುದು ಬೇಡ. ಕಾಂಗ್ರೆಸ್‌ ನಡೆದು ಬಂದ ದಾರಿಯನ್ನು ಒಂದು ಬಾರಿ ನೆನಪಿಸಿಕೊಳ್ಳಿ. ನಂತರ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಸದೃಢಗೊಳಿಸುವತ್ತ ಚಿಂತನೆ ಮಾಡಿ. ಪ್ರಜಾಪ್ರಭುತ್ವ ತಂತಾನೆ ಉಳಿಯುತ್ತದೆ.

ಶಾಸಕರಿಗೆ ಉಡುಗೊರೆ, ಜನತೆಗೆ ಬರೆ ಸರ್ಕಾರದ ವಿರುದ್ಧ ಎಚ್ಡಿಕೆ ವ್ಯಂಗ್ಯ

ಬೆಂಗಳೂರು: ರಾಜ್ಯದ ಜನರು ಕೊರೋನಾ ಸಂಕಷ್ಟದಿಂದ ತತ್ತರಿಸಿದ್ರೆ ಬಿಜೆಪಿ ಸರ್ಕಾರ ವರ್ಷಾಚರಣೆ ಸಂಭ್ರಮದ ಜೊತೆ ಶಾಸಕರಿಗೆ ಉಡುಗೊರೆ ನೀಡಿ ಕುರ್ಚಿ ಉಳಿಸಿಕೊಳ್ಳುವ ಕಸರತ್ತು ನಡೆಸ್ತಿದೆ ಅಂತಾ ಮಾಜಿ ಸಿಎಂ ಎಚ್ಡಿಕೆ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಟ್ವಟರ್ ಮೂಲಕ ಸರ್ಕಾರಷ ವಿರುದ್ಧ ಕಿಡಿ ಕಾರಿರೋ ಎಚ್ಡಿಕೆ, ಕೊರೋನಾ ಸಂಕಷ್ಟ ಸಮಯದಲ್ಲಿ ಬದುಕಿಗಾಗಿ ಜನತೆ ಹೋರಾಟ ಮಾಡುತ್ತಿದ್ದರೆ, ವರ್ಷಾಚರಣೆಯ ಸಂಭ್ರಮದಲ್ಲೂ ಕುರ್ಚಿ ಉಳಿಸಿಕೊಳ್ಳುವ ಕಸರತ್ತಿನಲ್ಲಿ ತನ್ಮಯವಾಗಿರುವ ಬಿಜೆಪಿ ಸರ್ಕಾರ 24 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಉಡುಗೊರೆ ನೀಡುವ ಮೂಲಕ ಜನತೆಯ ಆಶೋತ್ತರಗಳಿಗೆ ಕೊಳ್ಳಿ ಇಟ್ಟಿದೆ.

ಸರ್ಕಾರ ಮಾತ್ರವಲ್ಲ, ಜನತೆಯು ಕೂಡ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವಾಗ ಬೊಕ್ಕಸ ಹಾಗೂ ಜನಸಾಮಾನ್ಯನ ಮೇಲೆ ಹೊರೆ ಹೇರುವ ಮೂಲಕ ‘ಶಾಸಕರಿಗೆ ಉಡುಗೊರೆ, ಜನತೆಗೆ ಬರೆ’ ಎಳೆಯುವ ರಾಜ್ಯ ಬಿಜೆಪಿ ಸರ್ಕಾರದ ನಿರ್ಲಜ್ಜ ನಡವಳಿಕೆಯನ್ನು ಖಂಡಿಸುತ್ತೇನೆ.

ಬಿಜೆಪಿ ಸರ್ಕಾರಕ್ಕೆ ಸಾಮಾನ್ಯರ ಹಿತ ಮುಖ್ಯವೋ? ಕುರ್ಚಿ ಉಳಿಸಿಕೊಳ್ಳಲು ಶಾಸಕರ ಹಿತ ಮುಖ್ಯವೋ? ರಾಜ್ಯದ ಜನತೆಗೆ ಉಡುಗೊರೆ ಕೊಡಬೇಕಾಗಿದ್ದ ಸರ್ಕಾರ ಶಾಸಕರ ತೃಪ್ತಿಪಡಿಸುವ ಅನಾಚಾರ ಪ್ರದರ್ಶಿಸಿದೆ.

ರಾಜ್ಯ ಎದುರಿಸುತ್ತಿರುವ ಇಂತಹ ಸಂಕಷ್ಟದ ಸಮಯದಲ್ಲಿ ನಿಗಮ ಮಂಡಳಿ ಅಧ್ಯಕ್ಷ ಗಾದಿಯ ಮೇಲೆ ಸವಾರಿ ಮಾಡುವುದು ವಿಹಿತವೇ ಎಂಬುದನ್ನು ಶಾಸಕರು ಆತ್ಮಸಾಕ್ಷಿಗೆ ಪ್ರಶ್ನೆ ಮಾಡಿಕೊಳ್ಳಿ.

ಹಗಲನಿರುಳು ಮಾಡಿ, ಇರುಳ ಹಗಲ ಮಾಡಿ
ಆಚಾರವ ಅನಾಚಾರವ ಮಾಡಿ
ಅನಾಚಾರವ ಆಚಾರವ ಮಾಡಿ
ಭಕ್ತನ ಭವಿಯ ಮಾಡಿ, ಭವಿಯ ಭಕ್ತನ ಮಾಡಿ
ನುಡಿವವರ ಮಾತ ಕೇಳಲಾಗದು ಗುಹೇಶ್ವರಾ.

ಪೋಲೀಸರಿಗೆ ಹೆದರಿ ಓಡಿ ಹೆಣವಾದ ಯುವಕ!

ಚಾಮರಾಜನಗರ: ಪೊಲೀಸರಿಗೆ ಹೆದರಿ ಓಡುತ್ತಿದ್ದ ಯುವಕ ಪ್ರಜ್ಞೆತಪ್ಪಿ ಬಿದ್ದು ಸಾವಿಗೀಡಾಗಿರುವ ಘಟನೆ ತಾಲೂಕಿನ ಯಾಲಕ್ಕೂರು ಗ್ರಾಮದಲ್ಲಿ ನಿನ್ನೆ ನಡೆದಿದೆ.

ಯಲಕ್ಕೂರು ಗ್ರಾಮದ ಶಂಕರ್(22) ಮೃತ ಯುವಕ. ಕೋವಿಡ್-19 ಹಿನ್ನೆಲೆಯಲ್ಲಿ ಗುಂಪುಗೂಡದಂತೆ ನಿಷೇದಾಜ್ಞೆ ಜಾರಿಯಲ್ಲಿರುವ ಹಿನ್ನಲೆಯಲ್ಲಿ ಕುದೇರು ಠಾಣೆ ಪೊಲೀಸರು ಗಸ್ತು ತಿರುಗುತ್ತಿದ್ರು. ಈ ವೇಳೆ ಯಲಕ್ಕೂರು ಗ್ರಾಮದ ಪಡಸಾಲೆಯೊಂದರಲ್ಲಿ ಯುವಕರ ಗುಂಪು ಕುಳಿತಿದ್ದರು. ಪೊಲೀಸ್ ಜೀಪ್ ಕಂಡೊಡನೆ ದಿಕ್ಕಾಪಾಲಾಗಿ ಯುವಕರು ಓಡಿದ್ದಾರೆ.

ಓಡುತ್ತಾ ಜಮೀನೊಂದರಲ್ಲಿ ಎಡವಿ ಬಿದ್ದು ಶಂಕರ್​ ಪ್ರಜ್ಞೆ ಕಳೆದುಕೊಂಡಿದ್ದ. ಚಿಕಿತ್ಸೆಗೆಂದು ಸಂತೇಮಾರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗ್ರಾಮಸ್ಥರು ಕರೆದೊಯ್ದರು. ಬಳಿಕ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದರು. ಅದರಂತೆ ಶಂಕರನನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು.
ಆದರೆ, ಯುವಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆಂದು ಜಿಲ್ಲಾಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಆ್ಯಂಬುಲೆನ್ಸ್ ಮೂಲಕ ಯುವಕನ ಶವವನ್ನು ಗ್ರಾಮಕ್ಕೆ ತರಲಾಗಿದೆ. ಇತ್ತ ವಿಷಯ ತಿಳಿದಿದ್ದರು ಏನೂ ಆಗಿಲ್ಲವೆಂಬಂತೆ ವರ್ತಿಸುತ್ತಿರುವ ಕುದೇರು ಠಾಣಾ ಪೊಲೀಸರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಬಿಐಇಎಸ್ ಕೋವಿಡ್ ಕೇರ್ ಕೇಂದ್ರ ಆರಂಭ; ತಕ್ಷಣಕ್ಕೆ 1,536 ಹಾಸಿಗೆಗಳು ಲಭ್ಯ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕಿತರು ಹೆಚ್ಚುತ್ತಿರುವ ಬೆನ್ನಲ್ಲಿಯೇ ಭವಿಷ್ಯದಲ್ಲಿ ಎದುರಾಗಬಹುದಾದ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಸರಕಾರ ಸರ್ವ ಸಜ್ಜಾಗಿರುವ ಬೆನ್ನಲ್ಲಿಯೇ, ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ದೇಶದ ಅತಿದೊಡ್ಡ ಕೋವಿಡ್ ಆರೈಕೆ ಕೇಂದ್ರವನ್ನು ಲೋಕಾರ್ಪಣೆ ಮಾಡಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಇಎಸ್) ದಲ್ಲಿ ಸ್ಥಾಪಿಸಲಾಗಿರುವ 10,100 ಹಾಸಿಗೆಗಳ ಸಾಮರ್ಥ್ಯದ ಆರೈಕೆ ಕೇಂದ್ರವು ನಾಳೆಯಿಂದಲೇ ಬಳಕೆಗೆ ಲಭ್ಯವಾಗಲಿದೆ. ಮೊದಲ ಹಂತದಲ್ಲಿ 1,536 ಹಾಸಿಗೆಗಳು ಬಳಕೆಗೆ ಲಭ್ಯವಾಗಲಿವೆ. ಕೂಡಲೇ ಈ ಕೇಂದ್ರಕ್ಕೆ ಸೋಂಕಿತರನ್ನು ಸ್ಥಳಾಂತರಿಸಿ ಚಿಕಿತ್ಸೆ ನೀಡಬಹುದಾಗಿದೆ.

ಅತ್ಯಂತ ಪ್ರತಿಷ್ಟಿತವಾಗಿ, ಪಂಚತಾರಾ ಹೋಟೆಲಿನಂಥ ಸೌಲಭ್ಯಗಳನ್ನು ಒಳಗೊಂಡಿರುವ ಈ ಕೋವಿಡ್ ಆರೈಕೆ ಕೇಂದ್ರವನ್ನು ಸೋಮವಾರ ಸೋಂಕಿತರ ಸೇವೆಗೆ ಮುಕ್ತಗೊಳಿಸಿದ ಸಂದರ್ಭದಲ್ಲಿ ಡಿಸಿಎಂ ಅವರ ಜತೆಗೆ, ಕಂದಾಯ ಸಚಿವ ಆರ್. ಅಶೋಕ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್, ಮೇಯರ್ ಗೌತಮ್ ಕುಮಾರ್, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಏನೇನಿದೆ ಇಲ್ಲಿ?
ಅತ್ಯಂತ ಸುಸಜ್ಜಿತ ಹಾಗೂ ಅತ್ಯಾಧುನಿಕವಾಗಿ ಯಾವುದೇ ಬೃಹತ್ ಖಾಸಗಿ ಆಸ್ಪತ್ರೆಯನ್ನು ಸರಿಗಟ್ಟುವಂತೆ ನಿರ್ಮಾಣವಾಗಿರುವ ಈ ಆರೈಕೆ ಕೇಂದ್ರದಲ್ಲಿ ಸೋಂಕಿತರಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಒಟ್ಟು 5,000 ಹಾಸಿಗೆಗಳು ಸಿದ್ಧವಾಗಿದ್ದು, ಈ ಪೈಕಿ 1,536 ಹಾಸಿಗೆಗಳು ಕೂಡಲೇ ಬಳಕೆಗೆ ಲಭ್ಯ ಇವೆ.

5ನೇ ಸಂಖ್ಯೆಯ ಹಾಲ್’ನಲ್ಲಿ 24 ವಾರ್ಡುಗಳ ವ್ಯವಸ್ಥೆ ಮಾಡಲಾಗಿದ್ದು, ಒಮ್ಮೆಲೆ 350 ಜನರು ಒಟ್ಟಿಗೆ ಊಟ ಮಾಡಬಹುದು. ಇದರ ಜತೆಗೆ, ಮನರಂಜನಾ ಕೊಠಡಿ ಮಾಡಲಾಗಿದ್ದು ಟಿವಿ, ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಸೋಫಾ, ಕುರ್ಚಿಗಳು ಹಾಗೂ ಫ್ಯಾನ್ ಸೌಕರ್ಯವನ್ನು ಮಾಡಲಾಗಿದೆ. ಹಾಗೆಯೇ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇದೆ. ಸ್ನಾನಕ್ಕೆ, ಮೂತ್ರ ವಿಸರ್ಜನೆಗೆ, ಕೈ ತೊಳೆದುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಇದೆ.

ಇವುಗಳೊಂದಿಗೆ ಇಡೀ ಕೇಂದ್ರದಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ನಿಯಂತ್ರಣ ಕೊಠಡಿಯನ್ನೂ ತೆರೆಯಲಾಗಿದೆ. ಕೋವಿಡ್ ಪಾಸಿಟೀವ್ ಬಂದಿರುವ ರೋಗಿಗಳು ನೋಂದಣಿ ಅಥವಾ ದಾಖಲು ಮಾಡಿಕೊಳ್ಳಲು ಪ್ರತ್ಯೇಕ ಕೊಠಡಿ ಮಾಡಲಾಗಿದೆ. ಜತೆಗೆ, ಇಡೀ ಕೇಂದ್ರವನ್ನು ನಿರ್ವಹಣೆ ಮಾಡಲು ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಲಾಗಿದೆ. ಹೌಸ್ ಕೀಪಿಂಗ್ ಮತ್ತು ಬಟ್ಟೆ ಒಗೆಯಲು ಪ್ರತ್ಯೇಕ  ಸಿಬ್ಬಂದಿಯನ್ನು ಇಡಲಾಗಿದೆ. ಇನ್ನು ಸುರಕ್ಷತೆ ಕಾರಣಕ್ಕೆ ಮಾರ್ಷಲ್’ಗಳು ಹಾಗೂ ಕೆ.ಎಸ್.ಆರ್.ಪಿ ಯ ಒಂದು ತುಕಡಿಯನ್ನು ಮತ್ತು ಅಗ್ನಿಶಾಮಕ ದಳದ ತುಕಡಿಯನ್ನು ಇಲ್ಲಿ ನಿಯೋಜನೆ ಮಾಡಲಾಗಿದೆ.

ದಿನದ 24 ಗಂಟೆ ವಿದ್ಯುತ್ ಸಮಸ್ಯೆ ಆಗದಂತೆ ಈ ಕೋವಿಡ್ ಕೇಂದ್ರಕ್ಕೆ ಪ್ರತ್ಯೇಕ ವಿದ್ಯುತ್ ಲೈನ್ ಅನ್ನು ಎಳೆಯಲಾಗಿದೆ. ಇನ್ನು ಸರಕಾರ ಈಗಾಗಲೇ ನಿಗದಿ ಮಾಡಿರುವ ಫುಡ್ ಮೆನು ಪ್ರಕಾರ ಸೋಂಕಿತರಿಗೆ ನಿತ್ಯವೂ ಆಹಾರ ಪೂರೈಕೆ ಮಾಡಲಾಗುವುದು.

ಮಂಚದ ಗುಣಮಟ್ಟ ಪರಿಶೀಲನೆ:

ಕೋವಿಡ್ ಪರಿಕರಗಳ ಗುಣಮಟ್ಟದ ಬಗ್ಗೆ ಕೆಲವರು ತಕರಾರು ತೆಗೆದಿರುವ ಹಿನ್ನೆಲೆಯಲ್ಲಿ ಡಿಸಿಎಂ ಅವರು, 170 ಕೆಜಿ ತೂಕದ ವ್ಯಕ್ತಿಯೊಬ್ಬರನ್ನು ಹಾಸಿಗೆಯ ಮೇಲೆ ಮಲಗಿಸಿ ಮಂಚದ ಸಾಮರ್ಥ್ಯವನ್ನು ಪರಿಶೀಲನೆ ನಡೆಸಿದರು. ಇದರ ಜತೆಗೆ, ಎಲ್ಲ ಸಚಿವರು, ಅಧಿಕಾರಿಗಳ ಜತೆ ಇಡೀ ಕೇಂದ್ರವನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿದರಲ್ಲದೆ, ಗುಣಮಟ್ಟದ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈ ಕೇಂದ್ರದಲ್ಲಿ ರೋಗಿಗಳು ದಾಖಲಾದಂತೆ ಹಾಸಿಗೆಗಳ ಪ್ರಮಾಣವನ್ನು ಹೆಚ್ಚಿಸಲಾಗುವುದು. ಎ ಸಿಂಪ್ಟೆಮಿಕ್ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಮತ್ತಷ್ಟು ಕಡೆ ಕೋವಿಡ್ ಕೇಂದ್ರಗಳು:

ಈಗ ಬೆಂಗಳೂರು ನಗರದಲ್ಲಿ 9 ಕಡೆ ಕೋವಿಡ್ ಆರೈಕೆ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳ ಜತೆಗೆ ಬಿಐಎಸ್’ಸಿ ಕೇಂದ್ರವು ಸೇರ್ಪಡೆಯಾಗಿದೆ. ಇದರ ಜತೆಗೆ ಅರಮನೆ ಮೈದಾನ, ಅಂತಾರಾಷ್ಟ್ರೀಯ ಕನ್ವೆಂಷನ್ ಸೆಂಟರ್, ಪೊಲೀಸ್ ಕ್ವಾಟ್ರಸ್ ಮುಂತದ ಕಡೆ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಹಾಗೆಯೇ  ಕೆಲ ಖಾಸಗಿ ಅಪಾರ್ಟ್ಮೆಂಟುಗಳಲ್ಲಿ ಕೂಡ ಇಂತಹ ಕೇಂದ್ರಗಳನ್ನು ಆರಂಭಿಸಲಾಗುವುದು. ಅಗತ್ಯಕ್ಕೆ ತಕ್ಕಂತೆ ಸರಕಾರ ವ್ಯವಸ್ಥೆ ಮಾಡುತ್ತ ಹೋಗಲಿದೆ. ಇದರ ಜತೆಯಲ್ಲಿಯೇ ಹೋಂ ಕೇರ್ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಡಿಸಿಎಂ ಹೇಳಿದರು.

ರಿಸಲ್ಟ್ ತಡವಾಗಲ್ಲ:

ಇನ್ನು ಮೇಲೆ ಸೋಂಕಿತರ ಅಥವಾ ಸ್ಯಾಂಪಲ್ ಪರೀಕ್ಷೆ ನಂತರ ರಿಸಲ್ಟ್ ತಡವಾಗಲ್ಲ. ಸ್ಯಾಂಪಲ್ ಕೊಟ್ಟ ನಂತರ ಅರ್ಧ ಗಂಟೆಯಲ್ಲೇ ರಿಸಲ್ಟ್ ಸಿಗಲಿದೆ. ಇದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದೆ. ರಾಪಿಡ್ ಟೆಸ್ಟಿಂಗ್ ಕಿಟ್’ಗಳನ್ನೂ ಅಗತ್ಯವಿದ್ದಷ್ಟು ಒದಗಿಸಲಾಗಿದೆ. ಜನರು ಈ ಬಗ್ಗೆ ಆತಂಕಪಡುವುದು ಬೇಡ ಎಂದು ಡಿಸಿಎಂ ಮನವಿ ಮಾಡಿದರು.

63 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ:ಡಿಸಿಎಂ

ರಾಮನಗರ: ಜಿಲ್ಲಾ ಕೇಂದ್ರದಲ್ಲಿ 63 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 250 ಹಾಸಿಗೆಗಳ ಸುಸುಜ್ಜಿತ ಆಸ್ಪತ್ರೆಯ ಕಾಮಗಾರಿಯನ್ನು ಉಪ ಮುಖ್ಯಮಂತ್ರಿ ಡಾ. ಸಿ.ಎನ್.‌ ಅಶ್ವತ್ಥನಾರಾಯಣ ಅವರು ಪರಿಶೀಲನೆ ನಡೆಸಿದರು.

ಬೆಂಗಳೂರಿನಿಂದ ಬರುವಾಗಲೇ ತಮ್ಮ ಜತೆಯಲ್ಲಿ ಮಣಿಪಾಲ್‌ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಮುರಳಿ, ಡಾ. ಶ್ರೀರಾಮ ಅವರನ್ನು ಕರೆದುಕೊಂಡು ಬಂದಿದ್ದ ಅವರು, ಅವರೊಂದಿಗೆ ಇಡೀ ಆಸ್ಪ್ರತ್ರೆಯನ್ನು ಸುತ್ತುಹಾಕಿದರು ಹಾಗೂ 6 ತಿಂಗಳಲ್ಲಿ ಕಾಮಗಾರಿ ಮುಗಿಸಲು ಅಧಿಕಾರಿಗಳಿಗೆ ಸೂಚಿಸಿದರು. ಮಣಿಪಾಲ್‌ ಆಸ್ಪತ್ರೆಯ ತಜ್ಞರು ಹೊಸ ಆಸ್ಪತ್ರೆಗಳನ್ನು ಸಿದ್ಧಪಡಿಸುವುದರಲ್ಲಿ ಪರಿಣಿತಿ ಹೊಂದಿದ್ದು, ಇಂತಹ ಆಸ್ಪತ್ರೆ ನಿರ್ಮಾಣಕ್ಕೆ ಅವರ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಜಾಗತಿಕ ಗುಣಮಟ್ಟದ ಎಲ್ಲ ಸೌಲಭ್ಯಗಳು ಈ ಆಸ್ಪತ್ರೆಯಲ್ಲಿ ಇರುತ್ತವೆ. ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಪರಿಕರಗಳನ್ನು ಅಳವಡಿಸಲಾಗುವುದು. ಬೆಂಗಳೂರು- ಮೈಸೂರು ರಸ್ತೆಯ ಆಯಕಟ್ಟಿನಲ್ಲಿರುವ ಈ ಆಸ್ಪತ್ರೆಯನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ರೂಪಿಸಲಾಗುವುದು. ಇದಕ್ಕೆ ಸಂಬಂಧಿಸಿ ತಜ್ಞ ವೈದ್ಯರ ಜತೆ ನಿರಂತರವಾಗಿ ಮಾತುಕತೆ ನಡೆಸಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಜಿಲ್ಲಾಧಿಕಾರಿ ಅರ್ಚನಾ, ಸಿಇಒ ಇಕ್ರಂ, ಡಿಎಚ್ ಒ ಡಾ. ನಿರಂಜನ ಇದ್ದರು

ರಾಜ್ಯ ಅಭಿವೃದ್ಧಿಯಲ್ಲಿ ನವಶಕೆ ಆರಂಭ: ಬಿಎಸ್’ವೈ ನಾಯಕತ್ವ ಕೊಂಡಾಡಿದ ಡಿಸಿಎಂ

ರಾಮನಗರ: ರಾಜ್ಯವು ರಾಜಕೀಯ ಶೂನ್ಯತೆ ಮತ್ತು ನಾಯಕತ್ವದ ಕೊರತೆ ಎದುರಿಸುತ್ತಿದ್ದ ಸಂಕಷ್ಟ ಕಾಲದಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು, ಕಠಿಣ ಸವಾಲುಗಳ ನಡುವೆಯೂ ರಾಜ್ಯವನ್ನು ಸಮರ್ಥವಾಗಿ ಮುನ್ನಡೆಸಿದ ಪ್ರಬಲ ನಾಯಕ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಕೊಂಡಾಡಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಡೆದ ರಾಜ್ಯಮಟ್ಟದ ಸರಳ ವರ್ಚುಯಲ್ ಫ್ಲಾಟ್’ಫಾರಂ ಸಮಾರಂಭದಲ್ಲಿ ರಾಮನಗರದಿಂದಲೇ ಮಾತನಾಡಿದ ಅವರು, 50 ವರ್ಷಗಳಿಗೂ ಹೆಚ್ಚಿನ ರಾಜಕೀಯ ಅನುಭವ ಹಾಗೂ ಜನಪರ ಕೆಲಸ ಮಾಡಿರುವ ಯಡಿಯೂರಪ್ಪ ಅವರು, ನಮಗೆಲ್ಲರಿಗೂ ಸಮರ್ಪಕ ಮಾರ್ಗದರ್ಶನ ನೀಡುವ ಮೂಲಕ ರಾಜ್ಯಕ್ಕೆ ಅತ್ಯುತ್ತಮವಾದ ಸ್ಥಿರ ಸರಕಾರ ನೀಡಿದ್ದಾರೆ. ಇದಕ್ಕಾಗಿ ನಾನು ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ನುಡಿದರು.

2018ರಲ್ಲಿ ಯಾರಿಗೂ ಬಹಮತ ಸಿಗದಿದ್ದಾಗ ರಾಜ್ಯದಲ್ಲಿ ಒಂದು ರೀತಿಯ ರಾಜಕೀಯ ಶೂನ್ಯತೆ, ಅಭಿವೃದ್ಧಿಹೀನ ವಾತಾವರಣ ಉಂಟಾಗಿತ್ತು. ಬಳಿಕ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಉತ್ತರ ಕರ್ನಾಟಕದಲ್ಲಿ ಹಿಂದೆಂದೂ ಕಂಡರಿಯದ ಮಹಾ ಪ್ರವಾಹ ಉಂಟಾಯಿತು. ಇದೆಲ್ಲವನ್ನು ಸಮರ್ಥವಾಗಿ ಎದುರಿಸಿ ಮುಖ್ಯಮಂತ್ರಿಗಳು, ಬಳಿಕ ಎದುರಾದ ಉಪ ಚುನಾವಣೆಯನ್ನು ಅಷ್ಟೇ ಸಮರ್ಥವಾಗಿ ಎದುರಿಸಿದರು. ಅದರ ಪ್ರತಿಫಲವಾಗಿ 15 ಕ್ಷೇತ್ರಗಳ ಪೈಕಿ 12 ಕಡೆ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದರು. ಜನರು ಸ್ಥಿರ ಸರಕಾರವನ್ನು ಅಪೇಕ್ಷಿಸಿದ್ದರು ಎಂಬುದಕ್ಕೆ ಇದು ಸಾಕ್ಷಿಯಾಗಿತ್ತು. ಅದರಂತೆ ಯಡಿಯೂರಪ್ಪ ಅವರು ಸ್ಥಿರ ಮತ್ತು ಅಭಿವೃದ್ಧಿಪರ ಸರಕಾರವನ್ನು ನೀಡಿದ್ದಾರೆಂದು ಡಿಸಿಎಂ ಒತ್ತಿ ಹೇಳಿದರು.

ನಾಲ್ಕು ಸವಾಲುಗಳು:
ಸರಕಾರ ಅಧಿಕಾರಕ್ಕೆ ಬರುವ ಹೊತ್ತಿಗೆ ರಾಜ್ಯವು ಅನಾವೃಷ್ಟಿಗೆ ಸಿಲಕಿತ್ತು. ಅದಾದ ಮೇಲೆ ಪ್ರವಾಹ, ತದನಂತರ ಉಪ ಚುನಾವಣೆ, ಅದಾದ ಮೇಲೆ ಕೋವಿಡ್‌ ನಮ್ಮ ಮೇಲೆ ಬಂದೆರಗಿತು. ಎದುರಾದ ಸವಾಲುಗಳನ್ನು ಸವಾಲಿನಂತೆಯೇ ಸ್ವೀಕರಿಸಿ ನಮ್ಮ ಸರಕಾರವು ಯಡಿಯೂರಪ್ಪ ಅವರ ನೇತೃತ್ವದಲ್ಲಿ ಎದುರಿಸಿದೆ. ವಿಕೋಪ ಬಂದಾಗ ಸುಮಾರು 50,000ಕ್ಕೂ ಹೆಚ್ಚು ನೆರೆಪೀಡಿತರನ್ನು ರಕ್ಷಿಸಲಾಯಿತು. ಯುವಕರೂ ನಾಚುವಂತೆ ಬಿಎಸ್’ವೈ ಅವರು ಇಡೀ ಉತ್ತರ ಕರ್ನಾಟಕವನ್ನು ಸುತ್ತು ಹಾಕಿದ್ದನ್ನು ಯಾರೂ ಮೆರಯಲು ಸಾಧ್ಯವಿಲ್ಲ. ರಾಷ್ಟ್ರೀಯ ವಿಪತ್ತು ಕಾಯ್ದೆ ಅಡಿಯಲ್ಲಿ ಸುಮಾರು 2.7 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ತಲಾ 10,000 ರೂಪಾಯಿದಂತೆ 207 ಕೋಟಿ ರೂ. ಹಂಚಿಕೆ ಮಾಡಲಾಯಿತು. ಹಾನಿಗೀಡಾಗಿದ್ದ 1.25 ಲಕ್ಷಕ್ಕೂ ಹೆಚ್ಚು ಮನೆಗಳನ್ನು ಮರು ನಿರ್ಮಾಣಕ್ಕೆ 911 ಕೋಟಿ ರೂ. ವೆಚ್ಚ ಮಾಡಲಾಯಿತು. ಸಂಪೂರ್ಣವಾಗಿ ಕುಸಿದಿದ್ದ ಮನೆಗಳ ಮರು ನಿರ್ಮಾಣಕ್ಕೆ ತಲಾ 5 ಲಕ್ಷ ರೂ. ಮಂಜೂರು ಮಾಡಲಾಯಿತು. ಇಡೀ ದೇಶದಲ್ಲಿಯೇ ನೆರೆಪೀಡಿತರಿಗೆ ಮನೆ ಕಟ್ಟಿಕೊಳ್ಳಲು ಇಷ್ಟು ದೊಡ್ಡ ಮೊತ್ತದ ಪರಿಹಾರವನ್ನು ನೀಡಿದ ಏಕೈಕ ಸರಕಾರ ನಮ್ಮದು ಎಂದು ಹೇಳಲು ಹೆಮ್ಮೆಯಾಗುತ್ತದೆ. ಅದಕ್ಕಾಗಿ ನಾನು ಮುಖ್ಯಮಂತ್ರಿಗಳನ್ನು ಮತ್ತೊಮ್ಮೆ ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಡಾ. ಅಶ್ವತ್ಥನಾರಾಯಣ ನುಡಿದರು.

ಕೋವಿಡ್‌ ಸವಾಲು:
ಅನಿರೀಕ್ಷಿತವಾಗಿ ಬಂದೆರಗಿದ ಕೋವಿಡ್‌ ಸವಾಲನ್ನೂ ಸರಕಾರವು ಪ್ರಬಲವಾಗಿ ಎದುರಿಸಿದೆ. ಹಗಲು ರಾತ್ರಿಯೆನ್ನದೇ ಮುಖ್ಯಮಂತ್ರಿಗಳಾದಿಯಾಗಿ ಎಲ್ಲರೂ ಕೆಲಸ ಮಾಡಿದ್ದೇವೆ. ಲಾಕ್‌ʼಡೌನ್‌ ನಂಥ ಕಠಿಣ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲಾಗಿದೆ. ಯಾರಿಗೂ ಚಿಕಿತ್ಸೆ, ಔಷಧಿ, ಆಸ್ಪತ್ರೆ ಕೊರತೆ ಆಗದಂತೆ ನೋಡಿಕೊಳ್ಳಲಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ಅನೇಕ ಪಾಠಗಳನ್ನು ಕಲಿತು ಜನರ ಜೀವ ಉಳಿಸುವುದರ ಜತೆಗೆ, ಅವರ ಜೀವನೋಪಾಯಕ್ಕೂ ಧಕ್ಕೆಯಾಗದಂತೆ ನೋಡಿಕೊಳ್ಳಲಾಗಿದೆ. ಮುಖ್ಯಮಂತ್ರಿಗಳ ಉತ್ತಮ ಮಾರ್ಗದರ್ಶನದಿಂದ ಇದೆಲ್ಲ ಸಾಧ್ಯವಾಗಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ:
1974ರ ಭೂ ಸುಧಾರಣಾ ಕಾಯ್ದೆಗೆ ಯಡಿಯೂರಪ್ಪ ಸರಕಾರದ ಅತಿ ಪ್ರಮುಖ ಸಾಧನೆಗಳಲ್ಲಿ ಒಂದು ಎಂದು ಹೇಳಿದ ಡಿಸಿಎಂ, ಇಡೀ ದೇಶದಲ್ಲೇ ಒಂದು ಕಾಯ್ದೆ ಇದ್ದರೆ, ನಮ್ಮ ರಾಜ್ಯದಲ್ಲಿಯೇ ಬೇರೆ ರೀತಿಯ ಕಾಯ್ದೆ ಇತ್ತು. ಇದು ಕೈಗಾರಿಕೆಯೂ ಸೇರಿದಂತೆ ಎಲ್ಲ ರೀತಿಯ ಅಭಿವೃದ್ಧಿಗೂ ಕಂಟಕವಾಗಿತ್ತು. ಹೀಗಾಗಿ ಅನೇಕ ಕಾರಣಗಳಿಂದ ನೆನೆಗುದಿಗೆ ಬಿದ್ದಿದ್ದ ಆ ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿದ್ದು ಅತ್ಯಂತ ಮಹತ್ವದ ಸಾಧನೆ. ಇಂಥ ಕಾಯ್ದೆ ತರಬೇಕಾದರೆ ಅಪಾರ ಇಚ್ಚಾಶಕ್ತಿ ಬೇಕಾಗುತ್ತದೆ. ಅದನ್ನು ಯಡಿಯೂರಪ್ಪ ಅವರು ಸಾಧಿಸಿ ತೋರಿಸಿದ್ದಾರೆ ಎಂದು ಡಿಸಿಎಂ ಹೇಳಿದರು.

ಪದವಿ, ಸ್ನಾತಕೋತ್ತರ ಕೇಂದ್ರಕ್ಕೆ ಶಂಕುಸ್ಥಾಪನೆ:
ರಾಮನಗರ ಜಿಲ್ಲೆ ಮತ್ತು ಅದರ ಸುತ್ತಮುತ್ತಲ ಭಾಗದ ವಿದ್ಯಾರ್ಥಿಗಳ ಪಾಲಿನ ಬಹದಿನಗಳ ನಿರೀಕ್ಷೆಯಾಗಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಕೇಂದ್ರಕ್ಕೆ ರಾಮನಗರದಲ್ಲಿ ಮುಖ್ಯಮಂತ್ರಿ ಪರವಾಗಿ ಉಪ ಮುಖ್ಯಮಂತ್ರಿ ಭೂಮಿಪೂಜೆ ನೆರವೇರಿಸಿದರು. 50 ಕೋಟಿ ರೂ. ವೆಚ್ಚದಲ್ಲಿ ಇಲ್ಲಿ ಸುಸಜ್ಜಿತ ಕ್ಯಾಂಪಸ್‌ ನಿರ್ಮಾಣ ಮಾಡಲಾಗುವುದು. ಒಂದು ವರ್ಷದೊಳಗೆ ಕಾಮಗಾರಿ ಪೂರ್ಣವಾಗಲಿದೆ ಎಂದು ಅವರು ಹೇಳಿದರು.

ಅಭಿವೃದ್ಧಿಯ ಮೂಲವೇ ಶಿಕ್ಷಣದಲ್ಲಿದೆ. ಹೀಗಾಗಿ ಈ ಭಾಗದಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಲಾಗುವುದು. ಇದರ ಜತೆಗೆ ಜಿಲ್ಲೆಯ ಎಲ್ಲ ಭಾಗಗಳಲ್ಲೂ ನನೆಗುದಿಗೆ ಬಿದ್ದಿರುವ ಶೈಕ್ಷಣಿಕ ಯೋಜನೆಗಳನ್ನು ಆದಷ್ಟು ಬೇಗ ಮುಗಿಸಲಾಗುವುದು ಹಾಗೂ ಅಗತ್ಯವಾದ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರಕಟಿಸಿದರು.