ಕೊರೋನದ ನಡುವೆಯೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ನಮ್ಮ ಸರ್ಕಾರದ ಧ್ಯೇಯ – ಸುಧಾಕರ್

ಚಿಕ್ಕಬಳ್ಳಾಪುರ – ಜುಲೈ 28, 2020: ಕರ್ನಾಟಕದ ಮಹಾಜನತೆಯ ಜನಾದೇಶವನ್ನು ಪಡೆದುಕೊಂಡು ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಸರ್ಕಾರ ಜುಲೈ 26 ನೇ ತಾರೀಕಿನಂದು 1 ವರ್ಷ ಪೂರೈಸಿದೆ.

ರಾಜ್ಯದ ಮಹಾಜನತೆಯ ಆಶೋತ್ತರಗಳಿಗೆ ತಕ್ಕಂತೆ ಸಮೃದ್ಧ ಕರ್ನಾಟಕ ನಿರ್ಮಿಸುವ ಸಂಕಲ್ಪದೊಂದಿಗೆ ಕಾರ್ಯೋನ್ಮುಖವಾಗಿರುವ ಬಿಜೆಪಿ ಸರ್ಕಾರ ಕಳೆದ 1 ವರ್ಷದಲ್ಲಿ, ಅತೀವೃಷ್ಠಿ, ಅನಾವೃಷ್ಠಿ, ಈಗ ಕೊರೋನ ದಂತಹ ಹಲವು ಅಡ್ಡಿ ಆತಂಕಗಳನ್ನು ನಡುವೆಯೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲಿ ಎಂದೂ ಕಂಡಿರದ ಇಂತಹ ಸವಾಲುಗಳ ನಡುವೆಯೂ ಜನನಾಯಕ ಸನ್ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಉಕ್ತಿಯಂತೆ ಅವಿರತಾವಾಗಿ ಶ್ರಮಿಸುತ್ತಿದ್ದಾರೆ. ಕೊರೋನ ಸಂಕಷ್ಟದಲ್ಲಿರುವ ಜನತೆಯ ಜೀವನ ಸುಗಮವಾಗಿ ಸಾಗಲು ಪೂರಕ ಸೌಲಭ್ಯಗಳನ್ನು, ಪರಿಹಾರಗಳನ್ನು ಸಕಾಲದಲ್ಲಿ ಒದಗಿಸುವ ಬೃಹತ್ ಹೊಣೆಗಾರಿಕೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜೊತೆಯಾಗಿ ನಿರ್ವಹಿಸುತ್ತಿವೆ ಎಂದು ಹೇಳಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಜನಪ್ರತಿನಿಧಿಗಳು ಸಚಿವರಾಗಿ ಕಾರ್ಯ ನಿರ್ವಹಿಸಿರುವುದು ಬಹಳ ವಿರಳ. ಆದರೆ, ನನಗೆ ಅಂತಹ ಸದವಕಾಶ ಕಲ್ಪಿಸಿರುವ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ನನ್ನ ಧ್ಯೇಯ. ಮೂಲ ಸೌಕರ್ಯದಿಂದ ಹಿಡಿದು ರೈತರ ಹಿತ ಕಾಯುವ ಎಲ್ಲಾ ಯೋಜನೆಗಳನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ನಾನು ಬದ್ಧನಾಗಿದ್ದೇನೆ. ನನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಒಂದೊಂದಾಗಿ ಈಡೆರಿಸುತ್ತಾ ಸಾಗುತ್ತಿದ್ದೇನೆ. ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಎಲ್ಲಾ ಸಹಕಾರಗಳನ್ನು ನೀಡುತ್ತಿದೆ. ಚಿಕ್ಕಬಳ್ಳಾಪುರವನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುವುದು ನನ್ನ ಧ್ಯೇಯ. ಅದಕ್ಕಾಗಿ ನಾನು ಬದ್ಧನಾಗಿದ್ದೇನೆ ಹಾಗೂ ನಿಮ್ಮೆಲ್ಲರ ಸಹಕಾರವನ್ನು ಕೋರುತ್ತೇನೆ ಎಂದು ಸಚಿವ ಸುಧಾಕರ್ ಅವರು ಅಭಿಪ್ರಾಯಪಟ್ಟರು.

ಇದು ಕೇವಲ ಮೊದಲನೇ ವರ್ಷ, ಇನ್ನೂ ಆರಂಭ. ಕಳೆದ 1 ವರ್ಷದಲ್ಲಿ ನಮ್ಮ ಸರ್ಕಾರ ಎದುರಿಸಿರುವ ಸವಾಲು, ಸಮಸ್ಯೆ ಹಾಗೂ ಆತಂಕಗಳ ನಡುವೆ, ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಇದು ಕೇವಲ ಮೊದಲನೇ ವರ್ಷ, ಇನ್ನೂ ಆರಂಭ. ರಾಜ್ಯದಲ್ಲಿ ಬಿಜಿಪಿ ಸರ್ಕಾರ ಅಧಿಕಾರ ವಹಿಸಿಕೊಂಡಾಗಿನಿಂದ ಹಲವು ಸವಾಲುಗಳನ್ನು ಎದುರಿಸಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಸುಮಾರು 6,000 ರೂ. ಕೋಟಿಗೂ ಹೆಚ್ಚು ನೆರವು ನೀಡುವ ಮೂಲಕ ಜನರ ಕೈಹಿಡಿದಿದೆ. ಎಂದು ಸಚಿವ ಸುಧಾಕರ್ ತಿಳಿಸಿದರು.

ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ 4,000 ರೂ. ಹೆಚ್ಚುವರಿ ನೀಡುವ ಮೂಲಕ 50 ಲಕ್ಷ ರೈತರಿಗೆ ಅನುಕೂಲವಾಗುವ ಯೋಜನೆ ರೂಪಿಸಲಾಗಿದೆ. ಇದೇ ಮಾದರಿಯಲ್ಕಿ ನೇಕಾರರಿಗೂ ಯೋಜನೆ ರೂಪಿಸಲಾಗಿದೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರಿಗೆ ತಮ್ಮ ಬೆಳೆಯನ್ನು ಗರಿಷ್ಠ ಬೆಲೆಗೆ ಮಾರುವ ಹಕ್ಕು ನೀಡಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ₹2272 ಕೋಟಿ ಆರ್ಥಿಕ ಪ್ಯಾಕೇಜ್ ಘೋಷಿಸುವ ಮೂಲಕ ಅಸಂಘಟಿತ ವಲಯದ ಕಾರ್ಮಿಕರು, ಆಟೋ-ಟ್ಯಾಕ್ಸಿ ಚಾಲಕರು, ಕ್ಷೌರಿಕರು, ಮಡಿವಾಳರು, ಹೂವು, ಹಣ್ಣು, ತರಕಾರಿ ಬೆಳೆಗಾರರಾಗಿ ನೆರವು ನೀಡಲಾಗಿದೆ. ರೈತರು ಮತ್ತು ಉದ್ಯಮಗಳಿಗೆ ಅನುಕೂಲ ಕಲ್ಪಿಸಲು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಬಂಡವಾಳ ಆಕರ್ಷಿಸಲು ಮತ್ತು ಉದ್ಯಮಗಳಿಗೆ ಉತ್ತೇಜನ ನೀಡಲು ಹೊಸ ಕೈಗಾರಿಕಾ ನೀತಿ ರೂಪಿಸಲಾಗಿದೆ. ಕೋವಿಡ್ ನಿಯಂತ್ರಣದಲ್ಲಿ ಇತರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಪರಿಸ್ಥಿತಿ ಉತ್ತಮವಾಗಿದೆ. ಹಲವು ಸವಾಲುಗಳ ನಡೆವುಯೂ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಆತಂಕ ಮತ್ತು ಭಯದಿಂದ ಕೊರೋನಾ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ದೈರ್ಯದಿಂದ ಮತ್ತು ಆತ್ಮಸ್ಥೈರ್ಯದಿಂದ ಕೊರೋನಾ ನಿರ್ಮೂಲನೆ ಸಾಧ್ಯ. ಜನತೆ ಎಲ್ಲರು ಸುರಕ್ಷತೆಗಾಗಿ ಸರ್ಕಾರ ತಿಳಿಸಿರುವ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಕೊರೋನಾ ನಿರ್ವಹಣೆಗೆ ನಮ್ಮೊಂದಿಗೆ ಕೈಜೋಡಿಸಿ. ಎಂದು ಸಚಿವರು ತಿಳಿಸಿದರು.

*ಕಳೆದ 1 ವರ್ಷದಲ್ಲಿ ಚಿಕ್ಕಬಳ್ಳಾಪುರದಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾರ್ಯಗಳ ಕೆಲವು ಮುಖ್ಯಾಂಶಗಳು*

• *ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, 720 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ *
• ಹೆಚ್.ಎನ್.ವ್ಯಾಲಿ ಯೋಜನೆ: ದಶಕಗಳಿಂದ ಬರಕ್ಕೆ ತುತ್ತಾಗಿರುವ ಜಿಲ್ಲೆಗೆ ಜೀವಜಲ ತರುವ ನಿಟ್ಟಿನಲ್ಲಿ ಹೆಚ್.ಎನ್.ವ್ಯಾಲಿ ಯೋಜನೆ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ಯೋಜನೆಯ ನೀರು ಜಿಲ್ಲೆಯ ಅನೇಕ ಕೆರೆಗಳಿಗೆ ಹರಿಸಲಾಗಿದ್ದು ಅಂತರ್ಜಲ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
• ಜಿಲ್ಲೆಯ ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪಿಸಲಾಗಿದ್ದು ಹಲವು ಯೋಜನೆಗಳು ಈಗಾಗಲೇ ಅನುಷ್ಠಾನಗೊಂಡಿವೆ.
• ನೂತನ ನ್ಯಾಯಲಯ ಸಂಕೀರ್ಣ: ಚಿಕ್ಕಬಳ್ಳಾಪುರದ ಜಿಲ್ಲಾ ನ್ಯಾಯಾಲಯಗಳನ್ನು ಒಂದೇ ಸೂರಿನಡಿ ತರುವ ನಿಟ್ಟಿನಲ್ಲಿ ನೂತನ ನ್ಯಾಯಾಲಯ ಕಟ್ಟಡ ನಿರ್ಮಿಸಲಾಗಿದ್ದು ಈಗಾಗಲೇ ಉದ್ಘಾಟನೆಯಾಗಿದೆ.

• ತಿಪ್ಪೇನಹಳ್ಳಿ ಗ್ರಾಮದಲ್ಲಿ ನೂತನ ಗ್ರಾಮಪಂಚಾಯಿತಿ ಕಟ್ಟಡ ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ.
• ರಾಜ್ಯದಲ್ಲಿ ಅಂತರ್ಜಲ ಹೆಚ್ಚಿಸುವ ಮಹತ್ವಾಕಾಂಕ್ಷಿ ಅಂತರ್ಜಲ ಚೇತನ ಯೋಜನೆಗೆ ನಮ್ಮ ಜಿಲ್ಲೆಯಿಂದಲೇ ಚಾಲನೆ ನೀಡಲಾಗಿದೆ.
• 142 ಕಲ್ಯಾಣಿಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗಿದೆ.
• ದೇಶದಲ್ಲೇ ಪ್ರಥಮ ಎನ್ನಬಹುದಾದ Biosafety Level-2 ಸುರಕ್ಷತೆ ಹೊಂದಿರುವ ಸುಸಜ್ಜಿತ ಕೋವಿಡ್ ಪರೀಕ್ಷಾ ಪ್ರಯೋಗಾಲಯ ನಮ್ಮ ಚಿಕ್ಕಬಳ್ಳಾಪುರದಲ್ಲಿ ಸ್ಥಾಪಿಸಲಾಗಿದೆ.
• 10 ಕೋಟಿ ರೂ. ವೆಚ್ಚದಲ್ಲಿ 50 ಹಾಸಿಗೆಗಳ ಸಾಮರ್ಥ್ಯದ ಆಯುಷ್ ಆಸ್ಪತ್ರೆಗೆ ಶಂಕು ಸ್ಥಾಪನೆ ನೆರವೇರಿಸಲಾಗಿದೆ.
• ಕುಡಿಯುವ ನೀರಿಗೆ ಸಮಗ್ರ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
• ಕಂದವಾರ ಕೆರೆಗೆ ಕಾಯಕಲ್ಪ ರೂಪಿಸಿ ಸುಂದರ ಕೆರೆಯನ್ನಾಗಿ ಮಾಡಲಾಗಿದೆ.
• ಜಿಲ್ಲೆಯಲ್ಲಿ ಪ್ರತ್ಯೇಕ ಡೈರಿ ಸ್ಥಾಪನೆಗೆ ಕ್ರಮ. ಶೀಘ್ರದಲ್ಲೇ ಅನುಷ್ಠಾನ
• ಜಿಲ್ಲೆಯಲ್ಲಿ ಅಂತರ್ಜಲ ಚೇತನ ಯೊಜನೆಯಡಿ 133.66ಕೋಟಿ ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
• ಈ ಯೋಜನೆಯಡಿ ನದಿ ಪುನಶ್ಚೇತನ, ಜಲಾನಯನ ಅಭಿವೃದ್ಧಿ ಹಾಗೂ ಜಲಸಂರಕ್ಷಣೆಯ ಯೋಜನೆಗಳು ಸೇರಿವೆ.
• ಉತ್ತರ ಪಿನಾಕಿನಿ ನದಿಯ 1377 ಚ.ಕಿ ಪ್ರದೇಶದ 52 ಕಿರು ಜಲಾನಯನ ಪ್ರದೇಶದ ಅಭಿವೃದ್ಧಿಗೆ ಅನುಷ್ಠಾನಗೊಳಿಸಲಾಗುತ್ತಿದೆ.
• ಮನ್ರೇಗಾ ಅಡಿಯಲ್ಲಿ ಜಿಲ್ಲೆಯಲ್ಲಿ ಹಲವು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇದರಲ್ಲಿ ಪಶುಗಳಿಗಾಗಿ ಶೆಡ್ ನಿರ್ಮಾಣ, ಕೊಳವೆಬಾವಿ ರೀಚಾರ್ಜ್ ಪಿಟ್ ನಿರ್ಮಾಣ, ರೇಷ್ಮೆ ಕಾಮಗಾರಿ, ಕೆರೆ ಹೂಳೆತ್ತುವುದು, ಕೃಷಿ ಜಮೀನು ಅಭಿವೃದ್ಧಿ, ಆಟದ ಮೈದಾನಗಳು, ಅಂಗನವಾಡಿ ಕಟ್ಟಡಗಳು, ಗೋದಾಮುಗಳು ಸೇರಿದಂತೆ ಅನೇಕ ಯೋಜನೆಗಳು ಸೇರಿವೆ.
• ಸ್ವಚ್ಛಭಾರತ, ಸ್ವಸ್ಥ ಭಾರತ ಯೋಜನೆಯಡಿ ಜಿಲ್ಲೆಯಲ್ಲಿ 64 ಸಮುದಾಯ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ.
• 20 ಶಾಲಾ ಶೌಚಾಲಯಗಳನ್ನು ನಿರ್ಮಿಸಲಾಗಿದೆ. 32 ಗ್ರಾಮ ಪಂಚಾಯಿತಿಗಳಲ್ಲಿ ಸಮುದಾಯ ಶೌಚಾಲಯ ನಿರ್ಮಿಸಲಾಗಿದೆ.
• 130 ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ.
• ಘನ ತ್ಯಾಜ್ಯ ನಿರ್ವಹಣೆಗಾಗಿ 157 ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.
• ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಜಿಲ್ಲೆಯಲ್ಲಿ 27 ಗ್ರಾಮಗಳಿಗೆ ತಲಾ 1 ಕೋಟಿ ವೆಚ್ಚದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿ ಮಾದರಿ ಗ್ರಾಮವನ್ನಾಗಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ.
• ಕಳೆದ 1 ವರ್ಷದಲ್ಲಿ ಜಿಲ್ಲೆಯಲ್ಲಿ ವಸತಿ ಯೋಜನೆಯಡಿ 2998 ಮನೆಗಳನ್ನು ನಿರ್ಮಿಸಲಾಗಿದೆ.
• 185 ಚೆಕ್ ಡ್ಯಾಂ, 2546 ಕೃಷಿ ಹೊಂಡಗಳು, 55 ಕಟ್ಟೆಗಳು, 861 ಮಳೆ ನೀರು ಸಂರಕ್ಷಣಾ ಘಟಕಗಳನ್ನು ಸ್ಥಾಪಿಸಲಾಗಿದೆ.
• ಜಿಲ್ಲೆಯ ಎಲ್ಲಾ 157 ಗ್ರಾಮ ಪಂಚಾಯಿತಿ ಕಾರ್ಯಾಲಯಗಳಲ್ಲಿ ಮಳೆ ನೀರು ಸಂರಕ್ಷಣಾ ಘಟಕಗಳನ್ನು ಸ್ಥಾಪಿಸಲಾಗಿದೆ.

ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ
• ಚಿಕ್ಕಬಳ್ಳಾಪುರದಲ್ಲಿ ದೇಶದಲ್ಲೇ ಪ್ರಥಮ ಎರಡನೇ ಹಂತದ ಸುರಕ್ಷತಾ ವ್ಯವಸ್ಥೆ ಇರುವ ಸುಸಜ್ಜಿತ ಕೋವಿಡ್ ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸಲಾಗಿದೆ.
• ಕೋವಿಡ್ ನಿರ್ವಹಣೆಗಾಗಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಸಿಬ್ಬಂದಿಗಳ ಸುರಕ್ಷತೆಗಾಗಿ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
• ವಲಸಿಗರಿಗೆ ನರೇಗ ಯೋಜನೆಯಡಿ ಉದ್ಯೋಗಾವಕಾಶ ಕಲ್ಪಿಸಲಾಗಿದ್ದು ಕೋವಿಡ್ ಸಮಯದಲ್ಲೂ ಜೀವನ ನಿರ್ವಹಣೆಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ.
• ಹಾಸ್ಟೆಲ್ ಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು, ಲಕ್ಷಣರಹಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
• ಬೂತ್ ಮಟ್ಟದ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿಗಳನ್ನು ರಚಿಸಲಾಗಿದ್ದು, ಸೋಂಕಿತರ ಮತ್ತು ಸಂಪರ್ಕಿತರ ಪತ್ತೆ ಕಾರ್ಯ ಸುಗಮವಾಗಿದೆ.
• ಬೊಂಬೆಯಾಟಗಳ ಮೂಲಕ ಗ್ರಾಮೀಣ ಭಾಗದಲ್ಲಿ ಕೊರೋನ ಜಾಗೃತಿ ಮೂಡಿಸಲಾಗುತ್ತಿದೆ.
• ಎಲ್ಲಾ ಗ್ರಾಮಗಳಲ್ಲಿ ನೀರಿನ ಟ್ಯಾಂಕ್ ಗಳು ಪಶುಗಳು ಕುಡಿಯುವ ನೀರಿನ ಟ್ಯಾಂಕ್ ಗಳನ್ನು ಸ್ಯಾನಿಟೈಸ್ ಮಾಡಲಾಗಿದೆ.
• ಗ್ರಾಮಗಳ ಎಲ್ಲಾ ಭಾಗಗಳಲ್ಲೂ ಫ್ಯೂಮಿಗೇಶನ್/ಸ್ಯಾನಿಟೈಸ್ ಮಾಡಲಾಗಿದೆ.
• ರಂಗೋಲಿಗಳ ಮೂಲಕ, ಬ್ಯಾನರ್ ಗಳ ಮೂಲಕ, ಮನೆಮನೆಗೆ ತೆರಳುವ ಮೂಲಕ ಅನೇಕ ವಿಧದಲ್ಲಿ ಮೂಲಕ ಜಿಲ್ಲೆಯಲ್ಲಿ ಕೊರೋನ ಕುರಿತು ಜನ ಜಾಗೃತಿ ಮೂಡಿಸಲಾಗುತ್ತಿದೆ.
• ಆಶಾ ಕಾರ್ಯುಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತ ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಗಿದೆ.
• ಆನ್‌ಲೈನ್ ನಲ್ಲಿ ಜ಼ೂಮ್ ಮೂಲಕ ಸಭೆಗಳನ್ನು ನಡೆಸಿ ಕೊರೋನ ನಿರ್ವಹಣೆಯ ಪರಿಶೀಲನೆ ನಡೆಸಲಾಗುತ್ತಿದೆ.
• ವಲಸಿಗರಿಗೆ ಉಚಿತ ಹೆಲ್ತ್ ಚೆಕಪ್ ನಡೆಸಿ ಮಾನಿಟರ್ ಮಾಡಲಾಗುತ್ತಿದೆ.

ಸರಕಾರದ ಒಂದು ವರ್ಷದ‌ ಪ್ರಧಾನ ಸಮಾರಂಭದ ನೇರ ಪ್ರಸಾರ ವೀಕ್ಷಣೆ, ಡಿಸಿಎಂ ಅವರಿಂದ ಕಿರು ಹೊತ್ತಿಗೆ ಬಿಡುಗಡೆ

ಬಾಗಲಕೋಟೆ : ಸರಕಾರದ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸೋಮವಾರ ಬೆಂಗಳೂರು ವಿಧಾಸೌಧದಲ್ಲಿ ಬ್ಯಾಂಕ್ವೆಟ್ ಹಾಲ್ ನಲ್ಲಿ ಜರಗಿದ ಸರಕಾರದ ಒಂದು ವರ್ಷದ‌ ಪ್ರಧಾನ ಸಮಾರಂಭದ ನೇರ ಪ್ರಸಾರವನ್ನು ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್‌ನಲ್ಲಿ ಉಪ ಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು , ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವೀಕ್ಷಿಸಿದರು.

ಇದೇ ಸಂದರ್ಭದಲ್ಲಿ ವಾರ್ತಾ ಇಲಾಖೆ ಹೊರತಂದ ಕಿರು ಹೊತ್ತಿಗೆಯನ್ನು ಉಪ ಮುಖ್ಯಮಂತ್ರಿಗಳಾದ ಶ್ರೀ ಗೋವಿಂದ‌ ಎಂ ಕಾರಜೋಳ ಬಿಡುಗಡೆ ಮಾಡಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಸದ‌ ಪಿ.ಸಿ.ಗದ್ದಿಗೌಡರ, ಶಾಸಕರಾದ ವೀರಣ್ಣ ಚರಂತಿಮಠ, ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ, ಎಸ್.ಪಿ ಲೋಕೇಶ ಜಗಲಾಸರ, ಜಿ.ಪಂ ಸಿಇಓ ಟಿ.ಭೂಬಾಲನ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮಂಡ್ಯ ಜಿಲ್ಲಾ ಪಂಚಾಯತ್ ನಲ್ಲಿ ಸರ್ಕಾರದ ವರ್ಷಾಚರಣೆ

ಮಂಡ್ಯ – 27:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣಗೊಳಿಸಿರುವ ಈ ಸುಸಂದರ್ಭದಲ್ಲಿ ಮೊದಲ ವರ್ಷದ ಪ್ರಧಾನ ಸಮಾರಂಭವು ನವತಂತ್ರಜ್ಞಾನದ ವರ್ಚುವಲ್ ಪ್ಲಾಟ್‍ಫಾರಂ ಮೂಲಕ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನ ನೇರ ಸಂವಾದವು ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾ ಪಂಚಾಯತ್‍ನಲ್ಲಿ ನಡೆಯಿತು ಮತ್ತು ರಾಜ್ಯದ ಎಲ್ಲಾ ವಿಭಾಗದ ಫಲಾನುಭವಿಗಳು ಮುಕ್ತವಾಗಿ ಮುಖ್ಯಮಂತ್ರಿಗಳ ನಡುವೆ ಸಂವಾದ ನಡೆಸಿದ ಸಂದರ್ಭದಲ್ಲಿ ಸರ್ಕಾರವು ಕೋವಿಡ್ ಸಮಯದಲ್ಲಿ ತೆಗೆದುಕೊಂಡ ಎಲ್ಲಾ ಕ್ರಮಗಳನ್ನು ಪ್ರಶಂಸಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಜನರನ್ನು ಉದ್ದೇಶಿಸಿ ಕಳೆದ ಒಂದು ವರ್ಷದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಮುಂದೆ ಆಗಬೇಕಾದ ಕೆಲಸಗಳು ಸೇರಿದಂತೆ ಅನೇಕ ವಿಷಯಗಳ ಕುರಿತು ಮಾತನಾಡಿದರು ಮತ್ತು ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಅವರು ಸಂವಾದ ನಡೆಸಿ ಅವರಿಗೆ ಧೈರ್ಯ ತುಂಬಿ ಹಾಗೂ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿಯನ್ನು ಮಾಡುತ್ತೇನೆ ಎಂದು ಹೇಳಿದರು.

ಜಿಲ್ಲೆಯ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ನವತಂತ್ರಜ್ಞಾನದ ವರ್ಚುವಲ್ ಪ್ಲಾಟ್‍ಫಾರಂ ಮೂಲಕ ಕಾರ್ಯಕ್ರಮದಲ್ಲಿ ನೇರಪ್ರಸಾರದಲ್ಲಿ ಜಿಲ್ಲೆಯ ಫಲಾನುಭವಿಗಳಾದ ಸರ್ಕಾರಿ ನೌಕರರಾದ ಮಳವಳ್ಳಿ ತಾಲ್ಲೂಕಿನ ಸಿ.ಡಿ.ಪಿ.ಒ ಕುಮಾರ್ ಅವರು ಕೋವಿಡ್‍ನಿಂದ ಯಾರು ಹೇದರುವುದು ಬೇಡ ಆತ್ಮಸ್ಥೈರ್ಯದಿಂದ ಇದ್ದರೆ ಯಾವುದೇ ರೋಗವನ್ನು ಗೆಲ್ಲಬಹುದು ಮತ್ತು ನನಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ವರಿಷ್ಠಾಧಿಕಾರಿಗಳು ಎಲ್ಲಾ ರೀತಿಯ ಧೈರ್ಯವನ್ನು ತುಂಬಿ ನನ್ನ ಯೋಗಕ್ಷೇಮವನ್ನು ನಿತ್ಯ ವಿಚಾರಿಸುತ್ತಿದ್ದರು ಹಾಗೂ ವೈದ್ಯರು ಎಲ್ಲ ರೀತಿಯಲ್ಲೂ ಸ್ಪಂಧಿಸಿ ಎಲ್ಲರಿಗೂ ನಿತ್ಯವು ಉತ್ತಮವಾದ ಆಹಾರವನ್ನು ನೀಡುತ್ತಿದ್ದರು ಎಂದು ಹೇಳಿದರು.

ಇದೇ ಕಾರ್ಯಕ್ರಮದಲ್ಲಿ ಫಲಾನುಭವಿಗಳಾದ ನಾಗರಾಜು ಮತ್ತು ನಂಜುಂಡಸ್ವಾಮಿರವರು ಮಾತನಾಡಿ 2019 ರಲ್ಲಿ ಪ್ರವಾಹ ಪೀಡಿತರಾದ ನಾವು ಮನೆಯನ್ನು ಕಳೆದುಕೊಂಡಿದ್ದೆವು ಅಂದು ನಮ್ಮ ಜಿಲ್ಲಾಧಿಕಾರಿಗಳು ಮತ್ತು ತಾಲ್ಲೂಕು ದಂಡಾಧಿಕಾರಿಗಳು ನಮ್ಮ ಗ್ರಾಮಕ್ಕೆ ಭೇಟಿಕೊಟ್ಟು ಸ್ಥಳ ಪರಿಶೀಲಿಸಿ ನಮಗೆ ಮನೆ ನಿರ್ಮಾಣಮಾಡಲು ಕ್ರಮವಾಗಿ 5 ಲಕ್ಷವನ್ನು ನಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿದರು ಅದರ ಫಲವಾಗಿ ಇಂದು ಅದೇ ಮನೆಯಲ್ಲಿ ಉತ್ತವಾದ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಸಂವಾದದ ಸಮಯದಲ್ಲಿ ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವಾರದ ಡಾ| ನಾರಾಯಣಗೌಡ ಅವರ ಸಮ್ಮುಖದಲ್ಲಿ ಹೇಳಿದರು.

ಇದೇ ಸಂದರ್ಭದಲ್ಲಿ ಸರಕಾರದ ಒಂದು ವರ್ಷದ ಸಾಧನೆಗೆ ಸಂಬಂಧಿಸಿದಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೊರತಂದಿರುವ ಕಿರುಹೊತ್ತಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ| ನಾರಾಯಣಗೌಡ ಅವರು ಬಿಡುಗಡೆ ಮಾಡಿದರು. ಮುಖ್ಯಮಂತ್ರಿಗಳು ಈ ಸಂಕಷ್ಟದ ಸಂದರ್ಭಲ್ಲಿಯೂ ಒಂದು ವರ್ಷದ ಸಾಧನೆ ಅವಿಸ್ಮರಣೀಯ ಹಾಗೂ ಕೋವಿಡ್-19ಗೆ ಯಾರು ಕೂಡ ಹೆದರುವ ಅವಶ್ಯಕತೆ ಇಲ್ಲ, ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವ ಮೂಲಕ ನಿಯಂತ್ರಿಸಬಹುದು.

ಜಿಲ್ಲಾಧಿಕಾರಿಗಳು ವೈದ್ಯರು ಆಗಿರುವುದರಿಂದ ಜಿಲ್ಲೆಯಲ್ಲಿ ಉತ್ತಮವಾದ ವ್ಯವಸ್ಥೆಯನ್ನು ಕೈಗೊಂಡಿದ್ದಾರೆ ಮತ್ತು ಇಂದಿನ ಕಾರ್ಯಕ್ರಮವನ್ನು ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಯಶಸ್ವಿಯಾಗಿ ನಡೆಸಿದೆ ಎಂದು ಪ್ರಶಂಸಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಡಾ.ಎಂ.ವಿ.ವೆಂಕಟೇಶ್, ಜಿಲ್ಲಾ ಪಂಚಾಯತ್‍ನ ಸಿ.ಇ.ಓ ಜುಲ್ಫಿಕರ್ ಅಹಮದ್, ಸಾರ್ವಜನಿಕ ಮತ್ತು ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ.ಕೆ.ಹರೀಶ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಾದ ಪರಶುರಾಮ್ ಮತ್ತು ಅಪರ ಜಿಲ್ಲಾಧಿಕಾರಿಗಳಾದ ಶೈಲಜಾ ಹಾಗೂ ಆಯ್ದ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ರಾಜಸ್ಥಾನ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ : ಬಿಜೆಪಿಯಿಂದ ಪ್ರಜಾಪ್ರಭುತ್ವ ವಿರೋಧಿ ಕೃತ್ಯ-ಸಿದ್ದರಾಮಯ್ಯ

ಬೆಂಗಳೂರು : ರಾಜಸ್ತಾನದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿರುವ ಬಿಜೆಪಿ ಪ್ರಜಾಪ್ರಭುತ್ವ ವಿರೋಧಿ ಕೃತ್ಯ ಅನುಸರಿಸುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.

ರಾಜಸ್ತಾನ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿಹುನ್ನಾರ ನಡೆಸಿದೆ ಎಂದು ಆರೋಪಿಸಿ ಕೆಪಿಸಿಸಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಿಜೆಪಿಯ ಈ ಷಡ್ಯಂತ್ರದಲ್ಲಿ ರಾಜಸ್ಥಾನದ ರಾಜ್ಯಪಾಲರೂ ಭಾಗಿಯಾಗಿದ್ದಾರೆ. ಸಚಿವ ಸಂಪುಟದ ತೀರ್ಮಾನದಂತೆ ನಡೆದುಕೊಳ್ಳುವುದು ರಾಜ್ಯಪಾಲರ ಕರ್ತವ್ಯ. ಆದರೆ, ಅವರು ಆ ಪಕ್ಷಕ್ಕೆ ಸಹಕಾರ ನೀಡಲು ಅವರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದರು.

ಪ್ರಜಾಪ್ರಭುತ್ವ ಉಳಿಸಿ, ಸಂವಿಧಾನ ರಕ್ಷಿಸಿ ಎಂದು ಕಾಂಗ್ರೆಸ್ ಪಕ್ಷ ಇಂದು ದೇಶಾದ್ಯಂತ ಪ್ರತಿಭಟನೆ ಮಾಡುತ್ತಿದೆ. ನಾವು ಯಾವುದೇ ಹಿಂಸಾತ್ಮಕವಾದ ಹೋರಾಟ ಮಾಡುತ್ತಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲಿ ಶಾಂತಿಯುವಾಗಿ ಅನ್ಯಾಯ ಪ್ರತಿಭಟಿಸಲು ಸಂವಿಧಾನ ಹಕ್ಕು ಕೊಟ್ಟಿದೆ.ಸರ್ಕಾರ ಚುನಾಯಿಸುವವರು ಮತದಾರರು. ಆ ಪರಮಾಧಿಕಾರ ಜನರಿಗೆ ಇದೆಯೇ ಹೊರತು ರಾಷ್ಟ್ರಪತಿ, ರಾಜ್ಯಪಾಲರು, ಪ್ರಧಾನಿಯವರು ಸೇರಿದಂತೆ ಯಾರಿಗೂ ಇಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಹೊರಟಿದ್ದಾರೆ.

ಮೋದಿಯವರು ಪ್ರಧಾನಿಯಾದ ಬಳಿಕ ಸಂವಿಧಾನಕ್ಕೆ ಅಗೌರವ ತೋರುತ್ತಿರುವುದನ್ನು ನಾವು ಎಲ್ಲೆಡೆ ಕಾಣುತ್ತಿದ್ದೇವೆ. ಸಂವಿಧಾನದ ಚೌಕಟ್ಟಿನೊಳಗೆ ಸರ್ಕಾರಗಳು ನಡೆಯಬೇಕು. ಸಂವಿಧಾನ ಎಲ್ಲರಿಗೂ ಹಕ್ಕು ಮತ್ತು ಕತರ್ತವ್ಯಗಳನ್ನು ಕೊಟ್ಟಿದೆ.

ಬಿಜೆಪಿಯವರು ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸಿ ನಮ್ಮ ಶಾಸಕರನ್ನು ಕುದುರೆ ವ್ಯಾಪಾರದ ಮೂಲಕ ಖರೀದಿ ಮಾಡಿ ಕೋಟ್ಯಂತರ ರೂ. ಖರ್ಚು ಮಾಡುತ್ತಾರೆ. ಕರ್ನಾಟಕದಲ್ಲಿಯೂ ಅದೇ ರೀತಿ ಆಯಿತು.ಯಡಿಯೂರಪ್ಪ ಅವರು ಜನರಿಂದ ಚುನಾಯಿತರಾದ ಮುಖ್ಯಮಂತ್ರಿ ಅಲ್ಲ. ಜನ ಅವರಿಗೆ ಆಶೀರ್ವಾದ ಮಾಡಿರಲಿಲ್ಲ. ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಖರೀದಿ ಮಾಡಿ, ಅವರಿಗೆ ಹಣದಾಸೆಗೆ ತೋರಿಸಿ ಮುಖ್ಯಮಂತ್ರಿ ಆಗಿದ್ದಾರೆ. ಇದೀಗ ಅವರು ವಿಧಾನಸೌಧದಲ್ಲಿ ಕೂತಿದ್ದಾರೆ.

ಇಡೀ ದೇಶದಲ್ಲಿ ಆಪರೇಷನ್ ಕಮಲ ಎಂಬುದು ಚಾಲ್ತಿಗೆ ಬಂದಿದ್ದರೆ ಅದು ಯಡಿಯೂರಪ್ಪ ಅವರಿಂದ. ಆಪರೇಷನ್ ಕಮಲ, ಆಪರೇಷನ್ ತೆನೆ ಹೊತ್ತ ಮಹಿಳೆ ಎಂಬುದೇ ಇರಲಿಲ್ಲ. 2008ರಲ್ಲಿ ಆಪರೇಷನ್ ಕಮಲ ಆರಂಭಿಸಿದ್ದೇ ಯಡಿಯೂರಪ್ಪ. ಇದೀಗ ಅದೇ ಆಪರೇಷನ್ ಮೂಲಕ ಅವರು ಮತ್ತೆ ಹಿಂಬಾಗಿಲಿನಿಂದ ಸರ್ಕಾರ ರಚನೆ ಮಾಡಿದ್ದಾರೆ.

ಕೊರೊನಾದಂಥ ಸಂಕಷ್ಟದ ಸಮಯದಲ್ಲಿ ಸರ್ಕಾರಕ್ಕೆ ಸಹಕಾರ ನೀಡದೆ ಭ್ರಷ್ಟಾಚಾರದ ಮಾತುಗಳನ್ನಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಅವರು ಹೇಳುತ್ತಾರೆ. ಕೊರೊನಾ ನಿಯಂತ್ರಣಕ್ಕೆ, ಜನರ ಜೀವ ಉಳಿಸಲಿಕ್ಕೆ ನಮ್ಮ ಸಹಕಾರ ಸದಾ ಇರುತ್ತದೆ. ಆದರೆ, ವೈದ್ಯ ಉಪಕರಣಗಳ ಖರೀದಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ನಮ್ಮ ಸಹಕಾರ ಇಲ್ಲ.
ಈ ಹಿಂದೆ ಬಿಜೆಪಿಯವರು ಮಧ್ಯಪ್ರದೇಶ ಸರ್ಕಾರ ತೆಗೆದರು. ಇದೀಗ ರಾಜಸ್ಥಾನ ಸರ್ಕಾರ ತೆಗೆಯಲು ಹೊರಟಿದ್ದಾರೆ. ಅವರಿಗೆ ಕೊರೊನಾದ ಸಂಕಷ್ಟದ ಸಮಯ ಅನುಭವಕ್ಕೆ ಬಂದಿಲ್ಲವೇ ? ಮಾನ, ಮರ್ಯಾದೆ, ನೈತಿಕತೆ ಕಿಂಚಿತ್ತಾದರೂ ಇದ್ದಿದ್ದರೆ ಬಿಜೆಪಿಯವರು ಈ ಕೆಲಸ ಮಾಡುತ್ತಿರಲಿಲ್ಲ.
ರಾಜಸ್ಥಾನ ರಾಜ್ಯಪಾಲರು ಒಂದು ಕ್ಷಣವೂ ತಮ್ಮ ಹುದ್ದೆಯಲ್ಲಿ ಮುಂದುವರಿಯಬಾರದು. ಬಿಜೆಪಿ ಸಂವಿಧಾನಬದ್ಧವಾದ ಎಲ್ಲ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ತಾ ಇದೆ. ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳ ಕಚೇರಿಯೂ ಇದರಲ್ಲಿ ಸೇರಿದೆ.
ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಯಡಿಯೂರಪ್ಪ ಅವರೇನೂ ಶಾಶ್ವತವಾಗಿ ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರುವುದಿಲ್ಲ. ಹೀಗಾಗಿ ಪೊಲೀಸರು ಕಾನೂನುಬದ್ಧವಾಗಿ ನಡೆದುಕೊಂಡು ಪ್ರತಿಭಟನೆಗೆ ಹಾಗೂ ರಾಜ್ಯಪಾಲರ ಕಚೇರಿಗೆ ಹೋಗಲು ಅವಕಾಶ ಮಾಡಿಕೊಡಬೇಕು ಎಂದು ಸಿದ್ದರಾಮಯ್ಯ ಅವರು ಮನವಿ ಮಾಡಿದರು.

ಪ್ರಜಾಪ್ರಭುತ್ವದ ಕಗ್ಗೊಲೆ, ಸಂವಿಧಾನಕ್ಕೆ ಅಗೌರವ, ಸಂವಿಧಾನಬದ್ಧ ಸಂಸ್ಥೆಗಳಿಗೆ ಅಗೌರವ ತೋರಿಸುವ ಪ್ರಧಾನಿಯವರಿಗೆ ಧಿಕ್ಕಾರ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ವಿಜಯಪುರ ವಿಮಾನ ನಿಲ್ದಾಣಕ್ಕೆ ಮುಖ್ಯಮಂತ್ರಿ ಶಂಕುಸ್ಥಾಪನೆ ಗೋವಿಂದ ಕಾರಜೋಳ

ವಿಜಯಪುರದ. ಜು.26: ವಿಜಯಪುರ ವಿಮಾನ ನಿರ್ಮಾಣ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯಲ್ಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ತಿಳಿಸಿದರು.

ವಿಜಯಪುರ ವಿಮಾನನಿಲ್ದಾಣದ ಸ್ಥಳಪರಿಶೀಲನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವಪರಂಪರೆ ತಾಣ, ಶೈಕ್ಷಣಿಕ, ತೋಟಗಾರಿಕೆ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶೇಷ ಛಾಪನ್ನು ಹೊಂದಿರುವ ಈ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಿಸಿಸುವುದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹಾಗೂ ನಮ್ಮೆಲ್ಲರ ಆಶಯವಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳಲಾಗುವುದು. ಈಗಾಗಲೇ ಮಣ್ಣು ಪರೀಕ್ಷೆ ಸೇರಿದಂತೆ ಪೂರಕ ಕ್ರಮಕೈಗೊಳ್ಳಲಾಗಿದೆ.
ಈ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಲಾಗುವುದು. ಈ ವಿಮಾನ ನಿಲ್ದಾಣವನ್ನು ಉಡಾನ್ ಯೋಜನೆಯ ವ್ಯಾಪ್ತಿಗೊಳಡಿಸಲು ಶ್ರಮಿಸಲಾಗುತ್ತಿದೆ. ವಿಮಾನ ನಿಲ್ದಾಣವು ಈ ಪ್ರದೇಶದ ಅಭಿವೃದ್ದಿಗೆ ನಾಂದಿಯಾಗಲಿದೆ ಎಂದು ಅವರು ತಿಳಿಸಿದರು.
ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಕೋವಿಡ್‌ ಹಗರಣದ ವಿಚಾರದಲ್ಲಿ ಕಾಂಗ್ರೆಸ್‌–ಬಿಜೆಪಿಗೆ ಎಚ್ಡಿಕೆ 5 ಪ್ರಶ್ನೆಗಳು

ಬೆಂಗಳೂರು: ಕೊರೊನಾ ವೈರಸ್‌ನಿಂದ ಜನ ಮತ್ತು ಅವರ ಜೀವನ ಸಂಕಷ್ಟದಲ್ಲಿದೆ. ಇಂಥ ಸಂದಿಗ್ಧ ಸನ್ನಿವೇಶದಲ್ಲೂ ಕೋವಿಡ್‌ ಭ್ರಷ್ಟಾಚಾರದಂಥ ಗಂಭೀರ ಆರೋಪ ಕೇಳಿ ಬಂದಿರುವುದು ರಾಜ್ಯದ ದುರ್ದೈವ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಆಡಳಿತ ಪಕ್ಷದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿರುವ ಕಾಂಗ್ರೆಸ್‌, ಹಗರಣದ ಬಗ್ಗೆ ಈವರೆಗೆ ಯಾವುದೇ ತನಿಖಾ ಸಂಸ್ಥೆಗೆ ದೂರು ನೀಡದೇ ಪ್ರಚಾರಕ್ಕಷ್ಟೇ ಸೀಮಿತವಾಗಿ ದೊಡ್ಡ ಮಟ್ಟದ ಆರೋಪ ಹೊತ್ತಿರುವ ಆಡಳಿತ ಪಕ್ಷ ತನಿಖೆಯಿಂದ ಮುಕ್ತಿ ಪಡೆಯುವ ಯಾವ ಕ್ರಮಕ್ಕೂ ಮುಂದಾಗದೇ, ಹಗರಣ ನಡೆದಿರುವುದನ್ನು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದೆ ಎಂದು ಎಚ್ಡಿಕೆ ಟೀಕಿಸಿದ್ರು.

ಜನರನ್ನು ರಕ್ಷಿಸಬೇಕಾದವರೇ ಕೆಸರೆರಚಾಟದ ಮೂಲಕ ಜನರ ಜೀವದ ಜೊತೆಗೆ ಚೆಲ್ಲಾಟ ಆಡುತ್ತಿರುವುದು ಎರಡೂ ಪಕ್ಷಗಳ ಅತ್ಯಂತ ಕ್ರೂರ ನಡವಳಿಕೆ ಎಂದು ಆರೋಪಿಸಿದ್ರು.

ಇದಕ್ಕೆಲ್ಲ ಕಾಂಗ್ರೆಸ್‌ ಬಳಿ ಉತ್ತರವಿದೆಯೇ?

1. ಕೋವಿಡ್‌ ಹಗರಣದ ಬಗ್ಗೆ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡುತ್ತಿರುವ ಕಾಂಗ್ರೆಸ್‌ ನಾಯಕರು ಎಲ್ಲಾ ದಾಖಲೆಪತ್ರಗಳಿದ್ದೂ ಈ ವರೆಗೆ ಯಾರ ವಿರುದ್ಧವೂ ಯಾಕೆ ಒಂದೇ ಒಂದು ದೂರು ದಾಖಲಿಸಿಲ್ಲ?
2. ದೂರು ದಾಖಲು ಮಾಡದೇ ನಿತ್ಯ ಪತ್ರಿಕಾಗೋಷ್ಠಿಯಲ್ಲಿ ಬಂದು ಏರು ಧ್ವನಿಯಲ್ಲಿ ಮಾತನಾಡುತ್ತಿರುವ ಕಾಂಗ್ರೆಸ್‌ ನಾಯಕರ ನಡೆಯ ಹಿಂದೆ ಪ್ರಚಾರ ಪ್ರಿಯತೆ ಅಡಗಿದೆಯೋ ಅಥವಾ ಸಾರ್ವಜನಿಕ ಹಣ ಅಪವ್ಯವಾಗುತ್ತಿದೆ ಎಂಬ ಪ್ರಮಾಣಿಕ ಕಾಳಜಿ ಇದೆಯೋ?
3. ‘ಲೆಕ್ಕ ಕೊಡಿ’ ಎಂದು ಕಾಂಗ್ರೆಸ್‌ನ ಸಿಎಲ್‌ಪಿ ನಾಯಕರು ಕೇಳುತ್ತಾರೆ. ‘ಉತ್ತರ ಕೊಡಿ ಬಿಜೆಪಿ’ ಎಂದು ಪಕ್ಷದ ಅಧ್ಯಕ್ಷರು ಕೇಳುತ್ತಾರೆ. ನಿಮಗೆ ಉತ್ತರ, ಲೆಕ್ಕ ಕೊಟ್ಟರೆ ಸಾಕೆ? ಹಗರಣವನ್ನು ಕಾನೂನಾತ್ಮಕ ಹೋರಾಟದ ದಿಕ್ಕಿಗೆ ಕೊಂಡೊಯ್ಯುವ ಯಾವುದಾದರೂ ನಿಶ್ಚಿತ, ನಿಖರ ಯೋಜನೆ ಇದೆಯೇ?
4. ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಲೋಕಾಯುಕ್ತ ಸಂಸ್ಥೆಯ ರಕ್ತ, ಮಾಂಸವನ್ನು ಹೀರಿ, ತಿಂದು ಇದೇ ಕಾಂಗ್ರೆಸ್‌ ಸರ್ಕಾರ ಎಸಿಬಿ ರಚಿಸಿತ್ತು. ಹಗರಣದ ಸಂಬಂಧ ಇದೇ ಸಂಸ್ಥೆಗೆ ಕಾಂಗ್ರೆಸ್‌ ದೂರು ನೀಡಬಹುದಿತ್ತಲ್ಲ? ಯಾಕೆ ಎಸಿಬಿ ಮೇಲೆ ಕಾಂಗ್ರೆಸ್‌ಗೆ ನಂಬಿಕೆ ಇಲ್ಲವೇ?
5. ಕೋವಿಡ್‌ ಅಕ್ರಮದ ಆರೋಪ ಮಾಡಿದಾಗಿನಿಂದ ಕಾಂಗ್ರೆಸ್‌ ನಾಯಕರು ಪತ್ರಿಕಾಗೋಷ್ಠಿ, ಪತ್ರಿಕಾ ಹೇಳಿಕೆ, ಟ್ವೀಟ್‌, ಟ್ವಿಟರ್‌ ಟ್ರೆಂಡ್‌, ಪತ್ರ ಚಳವಳಿಗೆ ಮಾತ್ರ ಸೀಮಿವಾಗಿರುವುದನ್ನು ನೋಡುತ್ತಿದ್ದರೆ ಇದು ಕೇವಲ ಪ್ರಚಾರಕ್ಕಾಗಿ, ಸುದ್ದಿಯಲ್ಲಿರಲ್ಲಿಕ್ಕಾಗಿ ಮಾಡುತ್ತಿರುವ ಪ್ರಹಸನ ಎನಿಸುತ್ತಿದೆ. ಇದಕ್ಕೆ ನಿಮ್ಮ ಉತ್ತರವೇನು?

ಜವಾಬ್ದಾರಿಯುತ ಪ್ರತಿಪಕ್ಷವಾಗಿರುವ ಕಾಂಗ್ರೆಸ್‌ಗೆ ಸಾರ್ವಜನಿಕರ ಹಣದ ಮೇಲೆ ಅಷ್ಟು ಕಾಳಜಿ ಇದ್ದರೆ ಮೊದಲು ಯಾವುದಾದರೂ ತನಿಖಾ ಸಂಸ್ಥೆಗೆ ಅಧಿಕೃತವಾಗಿ ದೂರು ದಾಖಲಿಸಲಿ. ಇದು ನನ್ನ ಸವಾಲು.

ಬಿಜೆಪಿ ಉತ್ತರಿಸುವುದೇ?

1. ಸುಮಾರು ಎರಡು ಸಾವಿರ ಕೋಟಿ ರೂಪಾಯಿ ಮೊತ್ತದ ಆರೋಪವನ್ನು ಕಾಂಗ್ರೆಸ್ ನಾಯಕರು ಮಾಡಿದರೂ ಬಿಜೆಪಿ ಯಾಕೆ ತನಿಖೆಯ ಆಗ್ರಹಗಳಿಗೆ ಕಿವಿಗೊಡುತ್ತಿಲ್ಲ. ತನಿಖೆಯ ಕಡೆಗೆ ಗಮನವನ್ನೇ ನೀಡಿದೇ ನಿಂಧನೆಯನ್ನು ಯಾಕೆ ಹೊತ್ತು ತಿರುಗುತ್ತಿದೆ?
2. ನಿರ್ದಿಷ್ಟ ಸಚಿವರ ಮೇಲೆ ಗಂಭೀರ ಆರೋಪಗಳು ಬಂದರೂ ಅವರಿಂದ ರಾಜೀನಾಮೆ ಪಡೆದಿಲ್ಲ ಏಕೆ? ಇದೇನಾ ಜನರಿಗೆ ಯಡಿಯೂರಪ್ಪನವರ ಉತ್ತರದಾಯಿತ್ವ?
3. ಸಚಿವರ ರಾಜೀನಾಮೆ ಪಡೆಯಲು ಮುಖ್ಯಮಂತ್ರಿಗಳಿಗೆ ರಾಜಕೀಯದ ಒತ್ತಡ ಇರಬಹುದು. ಆದರೆ, ಅಧಿಕಾರಿಗಳ ವಿರುದ್ಧವಾದರೂ ಕ್ರಮ ಕೈಗೊಳ್ಳಬಹುದಿತ್ತು. ಈ ವರೆಗೆ ಒಬ್ಬೇ ಒಬ್ಬ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡ ವರದಿ ಇಲ್ಲ. ಅಧಿಕಾರಿಗಳನ್ನು ಅಲ್ಲಲ್ಲಿಯೇ ಬಿಟ್ಟು ಸಾಕ್ಷ್ಯ ನಾಶಕ್ಕೇನಾದರೂ ಪ್ರಯತ್ನಿಸುತ್ತಿದ್ದೀರಾ?
4. ಕಾಂಗ್ರೆಸ್‌ ಮಾಡುತ್ತಿರುವ ಪತ್ರಿಕಾಗೋಷ್ಠಿಗಳಿಗೆ ಪ್ರತಿಯಾಗಿ ಸಚಿವರಿಂದ ಪತ್ರಿಕಾಗೋಷ್ಠಿಗಳನ್ನು ಮಾಡಿಸುತ್ತಿರುವ ಸರ್ಕಾರ ಇಲ್ಲಿ ಪ್ರಚಾರ ಪಡೆಯಲೇನಾದರೂ ಪ್ರಯತ್ನಿಸುತ್ತಿದೆಯೇ? ಅದೂ ಐವರು ಸಚಿವರು ಒಟ್ಟೊಟ್ಟಿಗೆ ಬಂದು ಮಾಧ್ಯಮಗಳ ಮುಂದೆ ನಿಲ್ಲುವುದನ್ನು ನೋಡಿದರೆ ಮಂತ್ರಿಮಂಡಳದ ಸಹೋದ್ಯೋಗಿಗಳಲ್ಲಿ ಪ್ರಚಾರದ ದಾಹ ತೀವ್ರವಾಗಿರುವಂತೆ ಕಾಣದೇ?
5. ಹಗರಣದ ಬಗ್ಗೆ ಈ ವರೆಗೆ ಪ್ರತಿ ಹೇಳಿಕೆಗಳನ್ನೇ ನೀಡುತ್ತಿರುವ ಸರ್ಕಾರ ತನಿಖೆಗೆ ಹಿಂದೇಟು ಹಾಕುತ್ತಿರುವುದು ನೋಡಿದರೆ, ಹಣ ಕದಿಯಲಾಗಿದೆ ಎಂದು ಅನಿಸದೇ? ಆಪರೇಷನ್‌ ಕಮಲಕ್ಕೆ ಮಾಡಿದ್ದ ಸಾಲ ತೀರಿಸಲು ಈ ಹಗರಣ ಮಾಡಿದ್ದೀರಾ?

ದೇಶದ ಅತಿ ಸ್ವಚ್ಛ, ಭ್ರಷ್ಟಾಚಾರ ರಹಿತ, ದೇಶವನ್ನು ವಿಶ್ವಗುರು ಪಟ್ಟಕ್ಕೇರಿಸಲು ಹೊರಟಿರುವ ಬಿಜೆಪಿ ಆರೋಪದಿಂದ ಮುಕ್ತಿ ಪಡೆಯಲು ಸೂಕ್ತ ನಡೆ ಅನುಸರಿಸಬೇಕು ಎಂದಿದ್ದಾರೆ.