ಬಿಜೆಪಿ ಮಾಡಿರುವ ಅನ್ಯಾಯಕ್ಕೆ ಉಪ ಚುನಾವಣೆಯಲ್ಲಿ ಉತ್ತರ ನೀಡಿ: ಸಿದ್ದರಾಮಯ್ಯ ಮನವಿ

ಸಿಂಧಗಿ: ರಾಜ್ಯಕ್ಕೆ ಬಿಜೆಪಿ ಮಾಡಿರುವ ಅನ್ಯಾಯಗಳಿಗೆ ತಕ್ಕ ಉತ್ತರ ನೀಡಲು ಜನರಿಗೆ ಉಪಚುನಾವಣೆಯಲ್ಲಿ ಒಂದು ಅವಕಾಶ ಇದೆ. ಹಾಗಾಗಿ ಕಾಂಗ್ರೆಸ್ ಗೆ ಮತ ನೀಡುವ ಮೂಲಕ ಅಶೋಕ್ ಮನಗೂಳಿ ಅವರನ್ನು ವಿಧಾನಸಭೆಗೆ ಕಳಿಸಿಕೊಡಿ ಎಂದು ಕ್ಷೇತ್ರದ ಜನರಲ್ಲಿ ಮನವಿ ಮಾಡುತ್ತೇನೆ.

ಸಿಂಧಗಿ ವಿಧಾನಸಭೆ ಕ್ಷೇತ್ರದ ಮೊರಟಗಿ ಗ್ರಾಮದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಭಾಗವಹಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ್ ಮನಗೂಳಿ ಅವರ ಪರ ಪ್ರಚಾರ ಭಾಷಣ ಮಾಡಿದರು.

ಸಿಂಧಗಿ ಕ್ಷೇತ್ರದಿಂದ ಎಂ.ಸಿ ಮನಗೂಳಿಯವರು ಈ ಹಿಂದೆ ಶಾಸಕರಾಗಿ ಆಯ್ಕೆಯಾಗಿದ್ದರು, ಆದರೆ ದುರಾದೃಷ್ಟವಶಾತ್ ಅವರು ದೈವಾದೀನರಾಗಿದ್ದಾರೆ. ಅವರ ಅಗಲಿಕೆಯಿಂದ ತೆರವಾದ ಸ್ಥಾನಕ್ಕೆ ಈಗ ಉಪಚುನಾವಣೆ ನಡೆಯುತ್ತಿದೆ. ಇದನ್ನು ನಾವ್ಯಾರು ಬಯಸಿರಲಿಲ್ಲ. ಎಂ.ಸಿ ಮನಗೂಳಿಯವರು ಸಾಯುವ ಮುನ್ನ ನಮ್ಮ ಮನೆಗೆ ಬಂದಿದ್ದರು, ಆಗ ಅವರು ತಮ್ಮ ಮಗನನ್ನು ಕಾಂಗ್ರೆಸ್ ಗೆ ಸೇರಿಸಿಕೊಂಡು ರಾಜಕೀಯವಾಗಿ ಬೆಳೆಸಿ ಎಂದು ನನ್ನ ಬಳಿ ಕೇಳಿಕೊಂಡಿದ್ದರು. ತಂದೆಯ ಇಚ್ಛೆಯಂತೆ ಅಶೋಕ್ ಮನಗೂಳಿ ಕಾಂಗ್ರೆಸ್ ಸೇರಿದರು. ಈಗಿನ ಉಪಚುನಾವಣೆಯಲ್ಲಿ ನಮ್ಮ ಸರ್ವಸಮ್ಮತ ಅಭ್ಯರ್ಥಿ ಕೂಡ ಆಗಿದ್ದಾರೆ ಎಂದ್ರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾವೊಂದು ಪಕ್ಷಕ್ಕೂ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗದ ಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್ ನ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಯಡಿಯೂರಪ್ಪ ಅವರು ಅಧಿಕಾರ ಇಲ್ಲದೆ ಸುಮ್ಮನಿರೊ ಗಿರಾಕಿಯಲ್ಲ, ಹಾಗಾಗಿ ಎರಡೂ ಪಕ್ಷಗಳ ಶಾಸಕರಿಗೆ ಹಣ, ಅಧಿಕಾರದ ಆಮಿಷವೊಡ್ಡಿ ಅವರನ್ನು ಖರೀದಿಸಿ, ಅನೈತಿಕ ಮಾರ್ಗದಲ್ಲಿ ಸರ್ಕಾರ ರಚನೆ ಮಾಡಿದರು. ಬಿಜೆಪಿಯವರು ಯಡಿಯೂರಪ್ಪ ಅವರನ್ನು ಮುಂದೆ ಬಿಟ್ಟು ಕೋಟ್ಯಂತರ ರೂಪಾಯಿ ಖರ್ಚು ಮಾಡಿಸಿ, ಸರ್ಕಾರ ರಚನೆ ಮಾಡಿಸಿದ್ರು, ಎರಡು ವರ್ಷ ಆಗ್ತಾ ಇದ್ದ ಹಾಗೆ ಯಡಿಯೂರಪ್ಪ ಅವರನ್ನೇ ಕಿತ್ತು ಬಿಸಾಕಿದರು ಎಂದ್ರು.

ಬಿಜೆಪಿ ಅಧಿಕಾರಕ್ಕೆ ಬಂದು ಎರಡು ವರ್ಷ ಆಗಿದೆ, ರಾಜ್ಯದ ಜನರಿಗಾಗಿ ಏನೆಲ್ಲಾ ಕೆಲಸ ಮಾಡಿದ್ದಾರೆ ಎಂದು ಅವರೂ ಪಟ್ಟಿಕೊಡಲಿ, ಐದು ವರ್ಷದ ನನ್ನ ಆಡಳಿತದಲ್ಲಿ ನಾನು ಯಾವೆಲ್ಲಾ ಯೋಜನೆ ಜಾರಿ ಮಾಡಿದ್ದೆ ಎಂದು ಪಟ್ಟಿ ಕೊಡುತ್ತೇನೆ. ಇಂಧಗಿ ಕ್ಷೇತ್ರದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ಹೋರಾಟ ಮಾಡಿದವರು ಎಂ.ಸಿ ಮನಗೂಳಿ ಅವರು, ಇವತ್ತು ಅವರ ಹೋರಾಟದ ಲಾಭವನ್ನು ಪಡೆಯಲು ಇನ್ಯಾರೋ ಹೊರಟಿದ್ದಾರೆ. ಅಂಥವರಿಗೆ ಮತ ನೀಡಬಾರದು. ಕೃಷಿಭಾಗ್ಯ, ಕ್ಷೀರಧಾರೆ, ಪಶುಭಾಗ್ಯ, ಶೂ ಭಾಗ್ಯ, ಶಾದಿಭಾಗ್ಯ, ವಿದ್ಯಾಸಿರಿ, ಮಾತೃಪೂರ್ಣ ಹೀಗೆ ನಮ್ಮ‌ ಸರ್ಕಾರ ಹಲವು ಯೋಜನೆಗಳು ಇಂದು ಸ್ಥಗಿತಗೊಂಡಿವೆ. ಅನ್ನಭಾಗ್ಯದ ಅಕ್ಕಿ ಪ್ರಮಾಣವನ್ನು ಕಡಿತ ಮಾಡಿದ್ದಾರೆ ಎಂದ್ರು.

ಕೊರೊನಾ ಹೆಚ್ಚಿರೋದ್ರಿಂದ ಲಾಕ್ ಡೌನ್ ಇದೆ, ಜನರಿಗೆ ದುಡಿಮೆ ಇಲ್ಲ, ಹೊಟ್ಟೆಪಾಡಿಗೂ ಕಷ್ಟ ಆಗಿದೆ ಉಚಿತವಾಗಿ ಹತ್ತು ಕೆ.ಜಿ ಅಕ್ಕಿ ಕೊಡಿ, ಪ್ರತಿ ಬಿಪಿಎಲ್ ಕುಟುಂಬಕ್ಕೆ ಹತ್ತು ಸಾವಿರ ಧನಸಹಾಯ ಮಾಡಿ ಎಂದು ಸದನದಲ್ಲಿ ಹೇಳಿದೆ, ಅದಕ್ಕೆ ಯಡಿಯೂರಪ್ಪ ಸರ್ಕಾರದ ಬಳಿ ಹಣವಿಲ್ಲ ಎಂದರು. ಕೊರೊನಾದಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಕೊಡ್ತೀವಿ ಎಂದು ಹೇಳಿ ಇವತ್ತಿನವರೆಗೆ ನಯಾಪೈಸೆ ಪರಿಹಾರ ನೀಡಿಲ್ಲ ಎಂದ್ರು.

ಜನ ಕೊರೊನಾದಿಂದ ನರಳುತ್ತಿರುವಾಗ ಸರ್ಕಾರ ಆಸ್ಪತ್ರೆ, ಆಕ್ಸಿಜನ್, ಹಾಸಿಗೆಗಳು, ವೆಂಟಿಲೇಟರ್, ಆಂಬುಲೆನ್ಸ್ ವ್ಯವಸ್ಥೆ ಮಾಡದೆ ಬೀದಿ ಬೀದಿಯಲ್ಲಿ ಸಾಯಲು ಬಿಟ್ರು. ರಾಜ್ಯದಲ್ಲಿ ಕನಿಷ್ಟ 4 ಲಕ್ಷ ಮತ್ತು ದೇಶದಲ್ಲಿ ಸುಮಾರು 50 ಲಕ್ಷ ಜನ ಕೊರೊನಾದಿಂದ ಸತ್ತಿದ್ದಾರೆ. ಇಂಥಾ ಕೊಲೆಗಡುಕ ಸರ್ಕಾರಕ್ಕೆ ನಿಮ್ಮ ಮತ ನೀಡ್ತೀರಾ? ಎಂದು ಜನ ಯೋಚನೆ ಮಾಡಬೇಕು ಎಂದ್ರು.

ನಮ್ಮ ಸರ್ಕಾರ ಐದು ವರ್ಷಗಳಲ್ಲಿ ಹದಿನೈದು ಲಕ್ಷ ಮನೆಗಳನ್ನು ನಿರ್ಮಾಣ ಮಾಡಿತ್ತು, ಈಗಿನ ಸರ್ಕಾರ ಒಂದೇ ಒಂದು ಮನೆ ಕಟ್ಟಿ ಕೊಟ್ಟ ಉದಾಹರಣೆ ಇದ್ದರೆ ತೋರಿಸಿ ನೋಡೋಣ. ನಾವು ಕೊಟ್ಟಿದ್ದ ಕೆಲವು ಮನೆಗಳಿಗೆ ಹಣ ಬಿಡುಗಡೆ ಮಾಡದೆ ಲಾಕ್ ಮಾಡಿದ್ದಾರೆ. ಪಾಪ ಬಡವರು ಮನೆ ಇಲ್ಲದೆ ಎಲ್ಲಿಗೆ ಹೋಗಬೇಕು? ಎಂದು ಪ್ರಶ್ನಿಸಿದರು.

ಉದ್ಯೋಗ ಖಾತ್ರಿ ಯೋಜನೆ, ಆಹಾರ ಸುರಕ್ಷತಾ ಕಾಯಿದೆ, ಮಾಹಿತಿ ಹಕ್ಕು ಕಾಯಿದೆ ಜಾರಿಗೆ ತಂದಿದ್ದು ಮನಮೋಹನ್ ಸಿಂಗ್ ಅವರ ಯುಪಿಎ ಸರ್ಕಾರ. ಹಾಗಾದರೆ ನರೇಂದ್ರ ಮೋದಿ ಅವರ ಕೊಡುಗೆ ಏನು? ಅಚ್ಚೇ ದಿನ್ ಬರುತ್ತೆ ಎಂದು ಮೋದಿ ಹೇಳಿದ್ರು, ಅವರು ಅಧಿಕಾರಕ್ಕೆ ಬಂದು ಏಳು ವರ್ಷ ಆಯ್ತಲ್ಲಾ ನಿಮಗೆಲ್ಲಾ ಅಚ್ಚೇ ದಿನ ಬಂತಾ? ಈಗ ಪೆಟ್ರೋಲ್ ಬೆಲೆ 110, ಡೀಸೆಲ್ ಬೆಲೆ 100, ಗ್ಯಾಸ್ ಬೆಲೆ 950 ರೂಪಾಯಿ ಆಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಎದ್ವಾತದ್ವಾ ತೆರಿಗೆ ಹೆಚ್ಚಳ ಮಾಡಿರುವ ಕಾರಣ ಇವುಗಳ ಬೆಲೆ ಗಗನಕ್ಕೇರಿದೆ. ಒಂದು ಲೀಟರ್ ಪೆಟ್ರೋಲ್ ನ ನೈಜ ಬೆಲೆ 45 ರೂಪಾಯಿ, ಉಳಿದ 60 ರೂಪಾಯಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ತೆರಿಗೆ ಎಂದ್ರು.

ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಎಂದು ಯುವಕರಿಗೆ ಮೋದಿ ಭರವಸೆ ನೀಡಿದ್ರು, ಪಾಪ ಯುವಕರು ನಂಬಿ ಓಟು ಹಾಕಿ ಗೆಲ್ಲಿಸಿದ್ರು, ಈಗ ಹನ್ನೆರಡು ಕೋಟಿ ಉದ್ಯೋಗ ಕಿತ್ತುಕೊಂಡು ಹೋಗಿದೆ. ಜನ ಉದ್ಯೋಗ ಕೇಳಿದ್ರೆ ಪಕೋಡ ಮಾರಿ ಎಂದು ಉಪದೇಶ ಕೊಡ್ತಾರೆ. ಮೊದಲು ಮೋದಿ ಮೋದಿ ಎಂದು ಕೂಗುತ್ತಿದ್ದವರೇ ಇಂದು ಮೋದಿ ಹೆಸರು ಕೇಳಿದರೆ ಉರಿದು ಬೀಳ್ತಿದ್ದಾರೆ ಎಂದ್ರು.

ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಿಷನ್ ಹಾನಗಲ್, ಮಿಷನ್ ಸಿಂಧಗಿ ಎಂಬ ಅಭಿವೃದ್ಧಿ ಯೋಜನೆ ಘೋಷಣೆ ಮಾಡಿದ್ದಾರೆ. ಬಿಜೆಪಿ ಸರ್ಕಾರ ಬಂದು ಎರಡು ವರ್ಷ ಆಯ್ತಲ್ಲಾ ಇವತ್ತು ಅವರಿಗೆ ಹಾನಗಲ್ ಮತ್ತು ಸಿಂಧಗಿ ನೆನಪಾಗಿದ್ದಾ? ಇಂಥಾ ಬೂಟಾಟಿಕೆಯ ಮಾತುಗಳನ್ನು ನಂಬಿ ಜನ ಮೋಸಹೋಗಬಾರದು, ಬಿಜೆಪಿಯವರು ಸುಳ್ಳಿನ ಕಾರ್ಖಾನೆಯನ್ನೇ ನಡೆಸೋರು. ಕರ್ನಾಟಕದಲ್ಲಿ ಬಿಜೆಪಿ ಜೀವಂತವಾಗಿರೋದು ನರೇಂದ್ರ ಮೋದಿ ಅವರ ಹೆಸರೇಳಿಕೊಂಡು. ಇಲ್ಲಿನ ನಾಯಕರಿಗೆ ಮತ ಕೇಳಲು ಸ್ವಂತ ವರ್ಚಸ್ಸು ಇಲ್ಲ ಎಂದ್ರು.

14ನೇ ಹಣಕಾಸು ಶಿಫಾರಸಿನ ಪ್ರಕಾರ ರಾಜ್ಯದ ತೆರಿಗೆ ಪಾಲು 38,000 ಕೋಟಿ ರೂಪಾಯಿ ಬರುತ್ತಿತ್ತು. ಈಗದು 20,000 ಕೋಟಿ ರೂಪಾಯಿಗೆ ಬಂದು ನಿಂತಿದೆ. ಕೇಂದ್ರದ ಸಹಾಯಧನ, ಜಿ.ಎಸ್.ಟಿ ಪರಿಹಾರದ ಹಣ ಇವೆಲ್ಲಾ ಕಡಿಮೆಯಾಗಿ ರಾಜ್ಯಕ್ಕೆ ಕನಿಷ್ಟ. 40,000 ಕೋಟಿ ನಷ್ಟವಾಗ್ತಿದೆ. ರಾಜ್ಯ ಬಿಜೆಪಿ ನಾಯಕರ ಹೇಡಿತನ ಮತ್ತು ಗುಲಾಮಗಿರಿ ಇಷ್ಟಕ್ಕೆಲ್ಲಾ ಕಾರಣ. ಈ ಅನ್ಯಾಯಗಳ ಬಗ್ಗೆ ಒಮ್ಮೆಯಾದರೂ ಬಾಯಿಬಿಟ್ಟು ಮಾತನಾಡಿದ್ದಾರ? ನಮ್ಮ ಸರ್ಕಾರವೇ ಅಧಿಕಾರದಲ್ಲಿ ಇದ್ದಿದ್ದರೆ ನರೇಂದ್ರ ಮೋದಿ ಅವರ ಮುಂದೆ ಧರಣಿ ಮಾಡಿ ನಮ್ಮ ಪಾಲಿನ ಹಣವನ್ನು ವಸೂಲಿ ಮಾಡಿಕೊಂಡು ಬರ್ತಿದ್ದೆ. ರಾಜ್ಯ ಬಿಜೆಪಿಯವರು ತಮ್ಮ ಸ್ವಾಮಿನಿಷ್ಠೆಗೆ ರಾಜ್ಯವನ್ನು ಬಲಿಕೊಡಲು ಹೊರಟಿದ್ದಾರೆ. ಇದನ್ನು ನೋಡಿಕೊಂಡು ನಾವು ಸುಮ್ಮನಿರಬೇಕೆ? ಎಂದು ಪ್ರಶ್ನಿಸಿದ್ರು.

Video-ಬೆಂಗಳೂರು ಒಳಚರಂಡಿ ವ್ಯವಸ್ಥೆ ಸರಿಪಡಿಸಲು ಮಾಸ್ಟರ್ ಪ್ಲಾನ್ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಅಕ್ಟೋಬರ್ 18:ಬೆಂಗಳೂರು ಒಳಚರಂಡಿ ವ್ಯವಸ್ಥೆ ಸರಿಪಡಿಸಲು ವಿಶೇಷ ಸಭೆ ಕರೆದು ಮಾಸ್ಟರ್ ಪ್ಲಾನ್ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಳೆಯಿಂದ ಹಾನಿಗೊಳಗಾದ ಎಚ್.ಎಸ್.ಆರ್ ಬಡಾವಣೆ, ಮಡಿವಾಳ, ಹೊಸೂರು ರಸ್ತೆ, ಸಿಲ್ಕ್ ಬೋರ್ಡ್ ಜಂಕ್ಷನ್ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಕೆರೆಗಳ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಮುಖ್ಯಮಂತ್ರಿಗಳು ಅಗರ ಪಕ್ಕದಲ್ಲಿರುವ ಬಡಾವಣೆಗಳಿಗೆ ನೀರು ಮನೆಗಳಿಗೆ ನುಗ್ಗಿ ಅನಾಹುತಗಳಾಗಿವೆ. 15-20 ಕೆರೆಗಳ ನೀರು ಮೇಲ್ಮಟ್ಟದಿಂದ ಅಗರ ಕೆರೆಗೆ ಹರಿದು ಬರುತ್ತಿದೆ. ಇದನ್ನು ತಡೆಗಟ್ಟಿ ಸಾಮರ್ಥ್ಯವನ್ನು ಹೆಚ್ಚಿಸಲು ಮುಖ್ಯ ಚರಂಡಿ ದುರಸ್ಥಿ ಮಾಡಲು ಸೂಚನೆ ನೀಡಲಾಗಿದೆ ಎಂದರು.

ಅಗರ ಸುತ್ತುಲಿನ ಬಡಾವಣೆಗಳಿಗೆ ಪ್ರತ್ಯೇಕ ಚರಂಡಿ ನಿರ್ಮಾಣ ಕಾರ್ಯವನ್ನು 4-5 ತಿಂಗಳಲ್ಲಿ ಪೂರ್ಣಗೊಳಿಸಬೇಕೆಂದು ಸೂಚಿಸಲಾಗಿದೆ. ಒಳಚರಂಡಿ ಹಾಗೂ ಕೊಳಚೆ ನೀರನ್ನು ಪ್ರತ್ಯೇಕ ಮಾಡಲು ಅಗತ್ಯ ಕ್ರಮವಹಿಸಲಾಗುವುದು ಎಂದರು.

ಬಡಾವಣೆಗಳಲ್ಲಿ ಯು.ಜಿ.ಡಿ ಲೆವೆಲ್ ಗಳಲ್ಲಿ ವ್ಯತ್ಯಾಸ ಉಂಟಾಗಿದ್ದು, ಅದನ್ನು ಸರಿಪಡಿಸಲು ಸೂಚನೆ ನೀಡಲಾಗಿದೆ. ಅಗರ ಎಸ್.ಟಿ.ಪಿ ಘಟಕದ ಸಾಮರ್ಥ್ಯ 35 ಎಂ.ಎಲ್‌ಡಿ ಇದ್ದರೂ ಕೇವಲ 25 ಎಂ.ಎಲ್.ಡಿ ನೀರನ್ನು ಸಂಸ್ಕರಿಸುತ್ತಿದೆ. ಪರಿಶೀಲನೆ ವೇಳೆಯಲ್ಲಿ ಸಂಸ್ಕರಿತ ನೀರೂ ಸಹ ಚರಂಡಿಗೆ ಸೇರುತ್ತಿರುವುದನ್ನು ಗಮನಿಸಿದ್ದು, ತಕ್ಷಣವೇ ಇದನ್ನು ಸರಿಪಡಿಸಿ, ನೇರವಾಗಿ ಕೆರೆಗಳಿಗೆ ಹರಿಸಬೇಕೆಂದು ಈಗಾಗಲೇ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದರು.

ಮಡಿವಾಳ ಕೆರೆಗೆ ಹೊಂದಿಕೊಂಡಂತೆ ಇರುವ 4 ಎಂ.ಎಲ್.ಡಿ ಎಸ್.ಟಿ.ಪಿ ಘಟಕ ಕಾರ್ಯಾರಂಭ ಮಾಡಿಲ್ಲ. 4-5 ತಿಂಗಳ ಅವಧಿಯಲ್ಲಿ ಅದು ಕೂಡ ಸಂಪೂರ್ಣವಾಗಿ ಕಾಮಗಾರಿ ಮುಗಿಸಲು ಸೂಚಿಸಲಾಗಿದೆ ಎಂದರು.

*ಸಮನ್ವಯ*
ಬಿ.ಬಿ.ಎಂ.ಪಿ, ಬೆಸ್ಕಾಂ, ಬಿ.ಡಬ್ಲೂ ಎಸ್.ಎಸ್.ಬಿ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದರು.

*ಗುಂಡಿ ಮುಚ್ಚಲು ಕ್ರಮ*
ಗುಂಡಿಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗುತ್ತಿದ್ದು, ಸಮಸ್ಯೆ ಬಗೆಹರಿಸಲು ಸಭೆ ಕರೆದು, ಪರಿಶೀಲಿಸಲಾಗುವುದು. ಸತತ ಮಳೆಯಿಂದಾಗಿ ದುರಸ್ಥಿ ಸಾಧ್ಯವಾಗುತ್ತಿಲ್ಲ. ಮಳೆ ಬಿಡುವು ನೀಡಿದ ಕೂಡಲೇ ಗುಂಡಿಗಳನ್ನು ಮುಚ್ಚಲು ಸಮರೋಪಾದಿಯಲ್ಲಿ ಕ್ರಮವಹಿಸಲಾಗುವುದು ಎಂದರು.

ಶಾಸಕ ಸತೀಶ್ ರೆಡ್ಡಿ, ಬಿ.ಬಿ.ಎಂ.ಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಆಡಳಿತಾಧಿಕಾರಿ ರಾಕೇಶ್ ಸಿಂಗ್ ಉಪಸ್ಥಿತರಿದ್ದರು.

ಯಡಿಯೂರಪ್ಪನ್ನ ಜೈಲಿಗೆ ಹಾಕ್ತೀವಿ ಅಂತ ಹೆದರಿಸಿ ಮುಖ್ಯಮಂತ್ರಿ ಹುದ್ದೆ ಇಂದ ಕೆಳಗಿಳಿಸಿದ್ರು, ಪಾಪ ಕಣ್ಣೀರು ಹಾಕ್ತಾ ರಾಜೀನಾಮೆ ಕೊಟ್ರು: ಸಿದ್ದರಾಮಯ್ಯ

ಹಾವೇರಿ: ಬಿಜೆಪಿ ಸರ್ಕಾರದ ಎಲ್ಲಾ ಕರ್ಮಕಾಂಡಗಳಲ್ಲಿ ಬಸವರಾಜ ಬೊಮ್ಮಾಯಿಯವರ ಪಾಲುದಾರಿಕೆ ಇದೆ. ಯಡಿಯೂರಪ್ಪ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರ ಒಂದಾ ಎರಡಾ? ಬೊಮ್ಮಾಯಿ ಈಗ ಮುಖ್ಯಮಂತ್ರಿ ಆದ ಕೂಡಲೆ ಹಿಂದೆ ಮಾಡಿದ್ದ ಕರ್ಮಗಳೆಲ್ಲಾ ಹೋಗುತ್ತಾ? ಯಡಿಯೂರಪ್ಪನ್ನ ಜೈಲಿಗೆ ಹಾಕ್ತೀವಿ ಅಂತ ಹೆದರಿಸಿ ಮುಖ್ಯಮಂತ್ರಿ ಹುದ್ದೆ ಇಂದ ಕೆಳಗಿಳಿಸಿದ್ರು, ಪಾಪ ಕಣ್ಣೀರು ಹಾಕ್ತಾ ರಾಜೀನಾಮೆ ಕೊಟ್ಟರು. ಯಡಿಯೂರಪ್ಪ ಕೆಳಗಿಳಿಯೋದನ್ನೇ ಕಾಯ್ತಾ ಇದ್ರು ಬೊಮ್ಮಾಯಿ ಎಂದು ವಿರೋಧಪಕ್ಷ ನಾಯಕ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ಹಾನಗಲ್ ವಿಧಾನಸಭೆ ಕ್ಷೇತ್ರದ ಮಾಸನಕಟ್ಟೆ ಗ್ರಾಮದಲ್ಲಿ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುತ್ತಾ, ಕೊವಿಡ್ ಸಂದರ್ಭದಲ್ಲಿ ಸರ್ಕಾರ ಮಾಡಬೇಕಿದ್ದ ಕೆಲಸವನ್ನು ಶ್ರೀನಿವಾಸ್ ಮಾನೆ ಮಾಡಿದ್ದಾರೆ. ಕಷ್ಟಕಾಲದಲ್ಲಿ ತಮ್ಮ ನೆರವಿಗೆ ಧಾವಿಸಿದ್ದರಿಂದ ಜನರೇ ಅವರನ್ನು ಆಪದ್ಬಾಂಧವ ಎಂದು ಕರೆಯುತ್ತಿದ್ದಾರೆ. ಈ ಬಾರಿ ಅವರನ್ನು ಗೆಲ್ಲಿಸಲೇ ಬೇಕು ಎಂದು ನಿರ್ಧಾರ ಮಾಡಿದ್ದಾರೆ ಎಂದ್ರು.

ನಿನ್ನೆ ಸಂಗೂರು ಸಕ್ಕರೆ ಕಾರ್ಖಾನೆ ಬಗ್ಗೆ ಮಾತಾಡಿದ್ದೆ. ಈ ಕಾರ್ಖಾನೆಯ ಆಡಳಿತ ಮಂಡಳಿಗೆ ಉದಾಸಿ ಅವರು ಅಧ್ಯಕ್ಷ ಮತ್ತು ಸಜ್ಜನರ್ ಉಪಾಧ್ಯಕ್ಷ ಆಗಿದ್ದರು. ಕಾರ್ಖಾನೆ ದಿವಾಳಿಯಾಗಿದ್ದು ನಮ್ಮಿಂದಲೋ? ಸಜ್ಜನರ್ ಮತ್ತು ಉದಾಸಿ ಇಂದಲೋ? ಇಂಥವರು ಸಜ್ಜನರಲ್ಲ ದುರ್ಜನರು. ಭ್ರಷ್ಟಾಚಾರದ ಆರೋಪ ಇರುವ ವ್ಯಕ್ತಿಯನ್ನು ಶಾಸಕರಾಗಿ ಆಯ್ಕೆ ಮಾಡ್ತೀರಾ? ಸಜ್ಜನರ್ ಮೇಲೆ ನನಗೆ ವೈಯಕ್ತಿಕ ದ್ವೇಷ ಇಲ್ಲ. ಆದರೆ ಸತ್ಯ ಜನರಿಗೆ ಗೊತ್ತಾಗಬೇಕಲ್ವಾ? ಇವತ್ತು ಸಕ್ಕರೆ ಕಾರ್ಖಾನೆಯನ್ನು ಸಿದ್ದೇಶ್ವರ ಅವರಿಗೆ ಕೊಟ್ಟಿರೋದು ಯಾರು? ಎಂದ್ರು.

ರಾಜ್ಯದಲ್ಲಿ ಬಿಜೆಪಿ ಬಂದು ಎರಡೂ ಕಾಲು ವರ್ಷ ಆಯ್ತು? ಈ ಸರ್ಕಾರ ಜನರಿಗಾಗಿ ಏನಾದ್ರೂ ಮಾಡಿದೆಯಾ? ನಾನು ಏಳು ಕೆ.ಜಿ ಅಕ್ಕಿ ಉಚಿತವಾಗಿ ಕೊಡ್ತಿದ್ದೆ. ಈಗಿನ ಬಿಜೆಪಿ ಸರ್ಕಾರ ಅದನ್ನು ಐದು ಕೆ.ಜಿ ಗೆ ಇಳಿಸಿದೆ. ಅದಕ್ಕೆ ನಾನು ಕೊರೊನಾ ಇದೆ, ಲಾಕ್ ಡೌನ್ ಇದೆ, ಜನರಿಗೆ ದುಡಿಮೆ ಇಲ್ಲ ಹತ್ತು ಕೆ.ಜಿ ಅಕ್ಕಿ ಕೊಡಿ, ಪ್ರತಿ ಬಿಪಿಎಲ್ ಕುಟುಂಬಕ್ಕೆ ಹತ್ತು ಸಾವಿರ ಧನಸಹಾಯ ಮಾಡಿ ಎಂದು ಸದನದಲ್ಲಿ ಹೇಳಿದೆ, ನನ್ನ ಮಾತನ್ನು ಕಿವಿಗೆ ಹಾಕೊಂಡಿಲ್ಲ. ಜನರ ತೆರಿಗೆ ಹಣವನ್ನು ಜನರಿಗೆ ಖರ್ಚು ಮಾಡಲು ಏನು ರೋಗ ಸರ್ಕಾರಕ್ಕೆ? ಮುಂದಿನ ಚುನಾವಣೆಯಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ, ಆಗ ಬಡವರಿಗೆ ಹತ್ತು ಕೆ.ಜಿ ಉಚಿತ ಅಕ್ಕಿ ಕೊಡುತ್ತೇವೆ ಎಂದ್ರು.

ನಮ್ಮ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಭಾಗ್ಯ, ಸಾಲ ಮನ್ನಾ, ಶಾದಿ ಭಾಗ್ಯ, ಪಶು ಭಾಗ್ಯ, ಇಂದಿರಾ ಕ್ಯಾಂಟೀನ್, ಅನುಗ್ರಹ ಮುಂತಾದ ಯೋಜನೆಗಳನ್ನು ಕೈಬಿಟ್ಟಿದ್ದಾರೆ. ಕೇಳಿದ್ರೆ ಕೊರೊನಾಗೆ ಖರ್ಚು ಮಾಡಿದೀವಿ , ನಮ್ಮ ಬಳಿ ದುಡ್ಡಿಲ್ಲ ಎನ್ನುತ್ತಾರೆ. ಈ ಸರ್ಕಾರ ಕೊರೊನಾ ಕಾಲದಲ್ಲೂ ಲೂಟಿ ಮಾಡಿದೆ. ನಾವು ಅಧಿಕಾರಕ್ಕೆ ಬಂದ ಮೇಲೆ ಮತ್ತೆ ಇಂದಿರಾ ಕ್ಯಾಂಟೀನ್ ಆರಂಭ ಮಾಡುತ್ತೇವೆ ಎಂದ್ರು.

ನಾನು ಮುಖ್ಯಮಂತ್ರಿ ಆಗುವಾಗ ಅಲ್ಪಸಂಖ್ಯಾತರ ಅಭಿವೃದ್ಧಿಗೆ ನೀಡುತ್ತಿದ್ದ ಅನುದಾನ ಕೇವಲ 400 ಕೋಟಿ ರೂಪಾಯಿ ಇತ್ತು, ನನ್ನ ಕಡೇ ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ನೀಡಿದ ಅನುದಾನ 3,100 ಕೋಟಿ. ಬಡವರಿಗೆ ಅಕ್ಕಿ ಕೊಟ್ಟು ಜನರನ್ನು ಸೋಮಾರಿ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳ್ತಾರೆ. ಹಸಿವಿನ ಸಂಕಟ ಗೊತ್ತಿಲ್ಲದವರು ಮಾತ್ರ ಇಂಥಾ ಹೇಳಿಕೆ ಕೊಡಲು ಸಾಧ್ಯ ಎಂದ್ರು.

ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಏಳು ವರ್ಷ ತುಂಬಿದೆ. ಸುಳ್ಳು ಭರವಸೆ ನೀಡೋದು ಬಿಟ್ಟು ಜನರಿಗೆ ಬೇರೇನೂ ಮಾಡಿಲ್ಲ. ಅಚ್ಚೇ ದಿನ್ ಬರುತ್ತೆ ಅಂತ ಹೇಳಿದ್ರು, ಬಂತಾ? ಸಬ್ ಕ ಸಾಥ್, ಸಬ್ ಕ ವಿಕಾಸ್ ಅಂತ ಬಾಯಲ್ಲಿ ಹೇಳ್ತಾರೆ, ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡ್ತಾರೆ. ಎಲ್ಲಾ ಧರ್ಮದ, ಜಾತಿಯ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಏಕೈಕ ಪಕ್ಷ ಕಾಂಗ್ರೆಸ್. ಕಾರಣ ನಾವು ಸಂವಿಧಾನದ ಹಾದಿಯಲ್ಲಿ ನಡೆಯುವವರು. ಸಂಪತ್ತಿನ ಸಮಾನ ಹಂಚಿಕೆ, ಸರ್ವರಿಗೂ ಸಮಾನ ಅವಕಾಶ, ಪರಸ್ಪರ ಪ್ರೀತಿ ವಿಶ್ವಾಸ ದಿಂದ ಬದುಕಬೇಕು ಎಂದು ನಂಬಿದವರು ನಾವು. ಮಹಾತ್ಮ ಗಾಂಧಿಯವರ ಚಿಂತನೆಗಳು ನಮಗೆ ಪ್ರೇರಣೆ ಎಂದ್ರು.

ದೇಶದ ಸುಮಾರು 14% ಜನಸಂಖ್ಯೆ ಇರುವ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದ ಒಬ್ಬನೇ ಒಬ್ಬ ಶಾಸಕನಾಗಲೀ, ಸಂಸದನಾಗಲೀ, ಮಂತ್ರಿಯಾಗಲೀ ಬಿಜೆಪಿ ಪಕ್ಷದಲ್ಲಿ ಇಲ್ಲ. ಯಾಕೆ ಅವರು ದೇಶದ ನಾಗರಿಕರಲ್ಲವೇ? ಯಡಿಯೂರಪ್ಪ ಅವರ ಸರ್ಕಾರ ಹಾವೇರಿಯಲ್ಲಿ ರೈತರ ಮೇಲೆ ಗುಂಡು ಹಾರಿಸಿ ಕೊಲ್ಲಿಸಿತ್ತು. ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವರ ಮಗ ಕಾರು ಹತ್ತಿಸಿ, ನಾಲ್ವರು ರೈತರನ್ನು ಹತ್ಯೆ ಮಾಡಿದ್ದಾನೆ. ಇವರನ್ನು ಕೊಲೆಗಡುಕರು, ಗೂಂಡಾಗಳ ಸರ್ಕಾರ ಅನ್ನದೆ ಇನ್ನೇನು ಹೇಳಬೇಕು? ಎಂದ್ರು.

ಈಗ ಪೆಟ್ರೋಲ್ ಬೆಲೆ 110, ಡೀಸೆಲ್ ಬೆಲೆ 100, ಗ್ಯಾಸ್ ಬೆಲೆ 950 ರೂಪಾಯಿ ಆಗಿದೆ. ಬಡವರು ಹೇಗೆ ಬದುಕಬೇಕು? ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಎಂದು ಯುವಕರಿಗೆ ಮೋದಿ ಭರವಸೆ ನೀಡಿದ್ರು, ಪಾಪ ಯುವಕರು ನಂಬಿ ಓಟು ಹಾಕಿ ಗೆಲ್ಲಿಸಿದ್ರು, ಈಗ ಉದ್ಯೋಗ ಕೇಳಿದ್ರೆ ಪಕೋಡ ಮಾರಿ ಎಂದು ಬಿಟ್ಟಿಸಲಹೆ ಕೊಡ್ತಾರೆ. ಹೋಗಲಿ ಪಕೋಡಾ ಆದ್ರೂ ಮಾರಲು ಸಾಧ್ಯವಿದೆಯಾ? ಅಡುಗೆ ಎಣ್ಣೆ ಬೆಲೆ 200 ರೂಪಾಯಿ ಆಗಿದೆ. ಮೋದಿ ಮೋದಿ ಎಂದವರಿಗೆ ತಿರುಪತಿ ನಾಮ ಹಾಕಿದ್ದಾರೆ. ಅದಕ್ಕೆ ಈಗ ಯಾರೂ ಸಾರ್ವಜನಿಕ ಸಭೆಗಳಲ್ಲಿ ಮೋದಿ ಮೋದಿ ಅಂತ ಕೂಗಾಡ್ತಿಲ್ಲ ಎಂದ್ರು.

ಕೊರೊನಾ ಓಡಿಸಲು ಲಸಿಕೆ ನೀಡುವ ಬದಲು ಜನರಿಗೆ ದೀಪ ಹಚ್ಚಿ, ಗಂಟೆ ಬಾರಿಸಿ ಎಂದು ದಾರಿ ತಪ್ಪಿಸಿದರು. ಮೋದಿ ತಮಗೆ 56 ಇಂಚಿನ ಎದೆ ಇದೆ ಎನ್ನುತ್ತಿದ್ದರು, ಎದೆ ಎಷ್ಟು ಇಂಚಿದೆ ಎಂಬುದು ಮುಖ್ಯವಲ್ಲ. ಆದ್ರೆ ಆ ಎದೆಯೊಳಗೆ ಬಡವರಿಗಾಗಿ, ಶೋಷಿತರಿಗಾಗಿ ಮಿಡಿಯುವ ತಾಯಿ ಹೃದಯ ಇದೆಯಾ? ಎಂಬುದು ಮುಖ್ಯ. ಮೋದಿಯನ್ನು, ಆರ್.ಎಸ್.ಎಸ್ ಅನ್ನು ಹೊಗಳಿ ಹೊಗಳಿ ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿದ್ದಾರೆ. ಇವರು ರಿಮೋಟ್ ಮುಖ್ಯಮಂತ್ರಿ, ಇವರನ್ನು ಬಿಜೆಪಿ ಕಂಟ್ರೋಲ್ ಮಾಡುತ್ತಿದೆ ಎಂದ್ರು.

ಒಂದು ಸಾವಿರ ಕೋಟಿ ಬೆಲೆಬಾಳುವ ಜಮೀನನ್ನು ಕೇವಲ 50 ಕೋಟಿಗೆ ಆರ್.ಎಸ್.ಎಸ್ ಮೂಲದ ಶಿಕ್ಷಣ ಸಂಸ್ಥೆಗೆ ನೀಡಿದ್ದಾರೆ. ಇದು ಬಹುದೊಡ್ಡ ಹಗರಣ. ಇದನ್ನು ಕೇಳಿದ್ರೆ ಸಂಘಪರಿವಾರದವರು ದೇಶಭಕ್ತರು ಎನ್ನುತ್ತಾರೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಒಬ್ಬನೇ ಒಬ್ಬ ಆರ್.ಎಸ್.ಎಸ್ ನಾಯಕನ ಹೆಸರು ಹೇಳಲಿ ನೋಡೋಣ. ಇಂಥವರು ಬೇರೆಯವರಿಗೆ ದೇಶಭಕ್ತಿ ಪಾಠ ಮಾಡ್ತಾರೆ ಎಂದ್ರು.

ಈ ಬಾರಿಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರಿಗೆ ಮತ ನೀಡಿ, ವಿಧಾನಸಭೆಗೆ ಅವರನ್ನು ಕಳಿಸಿಕೊಡಿ ಎಂದು ಕ್ಷೇತ್ರದ ಮತದಾರರಲ್ಲಿ ಕೈ ಮುಗಿದು ಮನವಿ ಮಾಡುತ್ತೇನೆ ಎಂದ್ರು.

ಕಾವೇರಿ ತೀರ್ಥೋದ್ಭವವನ್ನು ಕಣ್ತುಂಬಿಕೊಂಡ ಸಚಿವ ಡಾ. ನಾರಾಯಣಗೌಡ

ಕೊಡಗು, ಅ. 17: ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವವನ್ನು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಂಡ್ಯ ಉಸ್ತುವಾರಿ ಸಚಿವ ಡಾ.ನಾರಾಯಣ ಗೌಡ ಅವರು ಕಣ್ತುಂಬಿಕೊಂಡರು.

ಮಕರ ಲಗ್ನದಲ್ಲಿ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ತೀರ್ಥೋದ್ಭವಾಗಿದ್ದು, ಈ ವೇಳೆ ಸಚಿವ ನಾರಾಯಣ ಗೌಡ ಅವರು ಹಾಜರಿದ್ದು, ತಾಯಿಯ ದರ್ಶನ ಪಡೆದರು. ಮೈಸೂರು-ಕೊಡಗು ಸಂಸದರಾದ ಪ್ರತಾಪ್ ಸಿಂಹ ಸೇರಿದಂತೆ ಹಲವರು ಉಪಸ್ಥಿತರಿದ್ದರು.

*ಮೊದಲ ಬಾರಿಗೆ ತಾಯಿಯ ದರ್ಶನ – ಸಚಿವ ಡಾ. ನಾರಾಯಣಗೌಡ*

ಮಂಡ್ಯ ಜಿಲ್ಲೆಯ ಪರವಾಗಿ ಬಂದು ತಾಯಿಯ ದರ್ಶನ ಪಡೆದಿದ್ದೇನೆ. ತಾಯಿಯ ಪ್ರಸಾದವನ್ನು ತೆಗೆದುಕೊಂಡು ಹೋಗಿ, ಮಂಡ್ಯದ ಕಾಳಿಕಾಂಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಭಕ್ತರಿಗೆ ಹಂಚಲಾಗುತ್ತದೆ. ಕೋಟ್ಯಂತರ ಜನರಿಗೆ ನೀರು, ಅನ್ನವನ್ನ ನೀಡುತ್ತಿರುವ ತಾಯಿಯ ದರ್ಶನ ಮಾಡಿದ್ದೇನೆ. ಮೊದಲ ಬಾರಿಗೆ ಬಂದು ದೇವಿಯ ದರ್ಶನ ಪಡೆದಿದ್ದೇನೆ. ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚಿನ ಜನರಿಗೆ ಅವಕಾಶ ನೀಡಿಲ್ಲ, ಆದರೆ ಎಲ್ಲರಿಗೂ ಪ್ರಸಾದ ನೀಡುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಗೊಂದಲ ಆಗದಂತೆ ಜಿಲ್ಲಾಡಳಿತ ಎಲ್ಲಾ ರೀತಿಯ ವ್ಯವಸ್ಥೆ ಮಾಡಿದೆ. ಸರ್ವರಿಗೂ ಅಭಿನಂದನೆ ತಿಳಿಸುತ್ತೇನೆ. ದೇವಿ ಎಲ್ಲರಿಗೂ ಒಳ್ಳೇದು ಮಾಡಲಿ. ರಾಜ್ಯದಿಂದ ದೇಶದಿಂದ ಮಹಾಮಾರಿ ಕೊರೋನಾ ದೂರ ಆಗಲಿ ಎಂದು ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಸಚಿವ ನಾರಾಯಣ ಗೌಡ ಅವರು ತಿಳಿಸಿದರು.

ಕಾವೇರಿ ತೀರ್ಥೋದ್ಭವದ ತೀರ್ಥವನ್ನು ಐದು ಬಿಂದಿಗೆಯಲ್ಲಿ ತಲಕಾವೇರಿಯಿಂದ ಮಂಡ್ಯಕ್ಕೆ ತೆಗೆದುಕೊಂಡು ಬರಲಾಗುತ್ತಿದೆ. ಸಂಜೆ ಐದು ಗಂಟೆಗೆ ಮಂಡ್ಯದ ಕಾಳಿಕಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ವಿತರಿಸಲಾಗುತ್ತದೆ.

ಕುಮಾರಸ್ವಾಮಿ ಹಿಟ್ ಎಂಡ್ ರನ್ ಕೇಸ್ ಗಿರಾಕಿ: ಸಿದ್ದರಾಮಯ್ಯ

ಹುಬ್ಬಳ್ಳಿ: ಕುಮಾರಸ್ವಾಮಿ ಹಿಟ್ ಎಂಡ್ ರನ್ ಕೇಸ್ ಗಿರಾಕಿ. ಅವರು ಯಾವಾಗಲೂ ಬರೀ ಸುಳ್ಳೇ ಹೇಳೋದು ಹಾಗಾಗಿ ಅವರ ಮಾತುಗಳಿಗೆ ಪ್ರತಿಕ್ರಿಯೆ ನೀಡಬಾರದು ಎಂದು ನಿರ್ಧಾರ ಮಾಡಿದ್ದೇನೆ. ನಾನು ಅಲ್ಪಸಂಖ್ಯಾತರಿಗೆ ಮೋಸ ಮಾಡಿದ್ದೀನಾ ಬಿಟ್ಟಿದೀನಾ ಎಂದು ನಮ್ಮ ಪಕ್ಷದ ಅಲ್ಪಸಂಖ್ಯಾತ ನಾಯಕರು ಹೇಳ್ತಾರೆ, ನಾನು ಈ ಬಗ್ಗೆ ಮಾತನಾಡಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಕಾಂಗ್ರೆಸ್ ಕಚೇರಿಯಿಂದ ಎಲ್ಲರಿಗೂ ಪ್ರಚಾರಕ್ಕೆ ಬರುವಂತೆ ಪತ್ರ ಕಳಿಸಿದ್ದಾರೆ, ಸಿ.ಎಂ ಇಬ್ರಾಹಿಂ ಅವರಿಗೆ ಚುನಾವಣಾ ಪ್ರಚಾರಕ್ಕೆ ಬರಬೇಡಿ ಎಂದು ಯಾರೂ ಹೇಳಿಲ್ಲ. ಮುಂದೆ ಅವರು ಬಂದರೂ ಬರಬಹುದು ಎಂದ್ರು.

ಆರ್.ಎಸ್.ಎಸ್ ಒಂದು ಕೋಮುವಾದಿ ಸಂಘಟನೆ, ಅವರು ಮನುಸ್ಮೃತಿ ಮತ್ತು ಶ್ರೇಣೀಕೃತ ವ್ಯವಸ್ಥೆ ಪರವಾಗಿದ್ದಾರೆ. ನಾನು 1971 ರಲ್ಲಿ ರಾಜಕೀಯಕ್ಕೆ ಬಂದಾಗಿನಿಂದ ಈ ಸಂಘಟನೆಯನ್ನು ವಿರೋಧಿಸುತ್ತಾ ಬಂದಿದ್ದೇನೆ. ಆರ್.ಎಸ್.ಎಸ್ ಸ್ಥಾಪನೆಯಾದ ದಿನದಿಂದ ಇಂದಿನವರೆಗೆ ಅವರ ಇತಿಹಾಸವನ್ನು ನೋಡಿದರೆ ಅವರು ಸಮಾಜ ಒಡೆಯುವವರು ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ‘ಸಬ್ ಕ ಸಾಥ್, ಸಬ್ ಕ ವಿಕಾಸ್’ ಎಂಬುದು ಬರಿ ಸುಳ್ಳು. ಬಿಜೆಪಿ ಯಲ್ಲಿ ಒಬ್ಬನೇ ಒಬ್ಬ ಮುಸ್ಲಿಂ, ಕ್ರಿಶ್ಚಿಯನ್ ಶಾಸಕ ಇದ್ದಾರ? ಯಾಕೆ ಅವರಿಗೆ ಪಕ್ಷದ ಟಿಕೆಟ್ ಕೊಡಲ್ಲ? ಅಲ್ಪಸಂಖ್ಯಾತರಿಗೆ ಬಿಜೆಪಿ ಟಿಕೆಟ್ ಬೇಕಾದರೆ ತಮ್ಮ ಕಚೇರಿ ಕಸ ಗುಡಿಸಬೇಕು ಎಂದು ಈಶ್ವರಪ್ಪ ಹೇಳುತ್ತಾರೆ. ಬಿಜೆಪಿಯವರು ಪ್ರಜಾಪ್ರಭುತ್ವ, ಬ್ರಾತ್ರುತ್ವ, ಸಮಾನತೆ, ಸೌಹಾರ್ದತೆ, ಸರ್ವಧರ್ಮ ಸಹಿಷ್ಣುತೆ ಸಾರುವ ಸಂವಿಧಾನ ಬದಲಾವಣೆ ಮಾಡುತ್ತೀವಿ ಎನ್ನುತ್ತಾರೆ ಎಂದ್ರು.

ಸಂಗೂರು ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿದ್ದವರು ಉದಾಸಿ, ಉಪಾಧ್ಯಕ್ಷರಾಗಿದ್ದವರು ಶಿವರಾಜ್ ಸಜ್ಜನರ್. ಈ ಇಬ್ಬರೂ ಸೇರಿ ಕಾರ್ಖಾನೆಯನ್ನು ಸಂಪೂರ್ಣ ಹಾಳು ಮಾಡಿದರು. ಇದಕ್ಕೆ ನಾವೇನು ಮಾಡಬೇಕು? ಇವತ್ತು ಕಾರ್ಖಾನೆಯನ್ನು ಬೋಗ್ಯಕ್ಕೆ ಕೊಟ್ಟಿರೋದು ಸುಳ್ಳಾ? ಉದಾಸಿ ಅಧ್ಯಕ್ಷರಾಗುವ ಮೊದಲು ಕಾರ್ಖಾನೆ ಲಾಭದಲ್ಲಿ ಇದ್ದಿದ್ದು ಸುಳ್ಳಾ? ಈ ಬಗ್ಗೆ ಮಾತಾಡಿ ಎಂದು ಜನರೇ ಒತ್ತಾಯ ಮಾಡುತ್ತಿದ್ದಾರೆ. ಹಾಗಾಗಿ ಸತ್ಯ ವಿಚಾರವನ್ನು ನಿನ್ನೆ ಹೇಳಿದ್ದೆ ಎಂದ್ರು.

ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಡಿಸೇಲ್ ಬೆಲೆ 45 ರೂಪಾಯಿ ಇತ್ತು, ಈಗ 100 ರೂಪಾಯಿ ಆಗಿದೆ. ಇದಕ್ಕೆ ಕೇಂದ್ರ ಸರ್ಕಾರದ ತೆರಿಗೆ ಹೆಚ್ಚಳ ಕಾರಣ. ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ 3 ರೂಪಾಯಿ 45 ಪೈಸೆ ಇದ್ದ ಅಬಕಾರಿ ಸುಂಕವನ್ನು ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ 31 ರೂಪಾಯಿ 84 ಪೈಸೆಗೆ ಹೆಚ್ಚಿಸಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ 125 ಡಾಲರ್ ಗೆ ತಲುಪಿದಾಗಲೂ ಡೀಸೆಲ್ ಬೆಲೆ 50 ರೂಪಾಯಿಯ ಆಸುಪಾಸಿನಲ್ಲೇ ಇತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆರಿಗೆಯನ್ನು ಕಡಿಮೆ ಮಾಡಲಿ. ಪೆಟ್ರೋಲ್ ಮೇಲೆ ತೆರಿಗೆ ಹಾಕೋದು ರಾಜ್ಯಗಳ ಹಕ್ಕು, ಪೆಟ್ರೋಲ್ ಡೀಸೆಲ್ ಜಿಎಸ್‌ಟಿಗೆ ಸೇರಿಸಿದರೆ ರಾಜ್ಯಗಳಿಗೆ ತೆರಿಗೆ ವಿಧಿಸುವ ಹಕ್ಕು ಹೋಗುತ್ತದೆ. ಹಾಗಾಗಿ ಇದಕ್ಕೆ ನನ್ನ ವಿರೋಧವಿದೆ ಎಂದ್ರು.

ಹಿಂದೆ ಜಿ.ಎಸ್.ಟಿ ಕೌನ್ಸಿಲ್ ಸಭೆಗೆ ಯಡಿಯೂರಪ್ಪ ಅವರ ಪರವಾಗಿ ಹೋಗುತ್ತಿದ್ದದ್ದು ಬಸವರಾಜ ಬೊಮ್ಮಾಯಿ ಅವರೆ. ರಾಜ್ಯದ ಆರ್ಥಿಕ ಸ್ಥಿತಿಗತಿ ಏನಿದೆ ಅಂತ ಮುಖ್ಯಮಂತ್ರಿ ಆದವರಿಗೆ ಗೊತ್ತಿರಲ್ವಾ? ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಈ ರೀತಿ ಸುಳ್ಳು ಹೇಳುತ್ತಿದ್ದಾರೆ ಅಷ್ಟೆ. ವರ್ಕಿಂಗ್ ಕಮಿಟಿಯ ಹಲವಾರು ಮಂದಿ ಸದಸ್ಯರು ನೀವೇ ಮತ್ತೆ ಕಾಂಗ್ರೆಸ್ ಅಧ್ಯಕ್ಷರಾಗಬೇಕು ಎಂದು ರಾಹುಲ್ ಗಾಂಧಿಯವರ ಬಳಿ ಒತ್ತಾಯ ಮಾಡಿದ್ದಾರೆ, ಹಾಗಾಗಿ ನಿಮ್ಮೆಲ್ಲರ ಮನವಿಯ ಬಗ್ಗೆ ಯೋಚನೆ ಮಾಡ್ತೀನಿ ಎಂದು ರಾಹುಲ್ ಗಾಂಧಿಯವರು ಭರವಸೆ ನೀಡಿದ್ದಾರೆ. ರಾಹುಲ್ ಗಾಂಧಿಯವರೇ ಕಾಂಗ್ರೆಸ್ ಅಧ್ಯಕ್ಷರಾಗಬೇಕು ಎಂಬುದು ನನ್ನ ಅಭಿಪ್ರಾಯ. ಈ ಹಿಂದೆಯೂ ಹಲವು ಬಾರಿ ಇದನ್ನೇ ಹೇಳಿದ್ದೆ ಎಂದ್ರು.

ಉಪಚುನಾಣೆ ಹಾನಗಲ್ ಅಭಿವೃದ್ದಿಯ ಭವಿಷ್ಯದ ಪ್ರಶ್ನೆ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ

ಹಾವೇರಿ, ಅಕ್ಟೋಬರ್ 17 :ಹಾನಗಲ್ ಮತ್ತು ಸಿಂಧಗಿ ಕ್ಷೇತ್ರಗಳ ಉಪಚುನಾವಣೆ ತಮಗೆ ಪ್ರತಿಷ್ಠೆಯ ಪ್ರಶ್ನೆಯಲ್ಲ. ಇದು ಹಾನಗಲ್ ತಾಲ್ಲೂಕಿನ ಅಭಿವೃದ್ದಿಯ ಭವಿಷ್ಯದ ಪ್ರಶ್ನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಹಾವೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಯಾವುದೇ ಚುನಾವಣೆ ಭವಿಷ್ಯದ ದಿಕ್ಸೂಚಿಯಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಗಳಿದ್ದಾಗ ನಂಜನಗೂಡು, ಗುಂಡ್ಲುಪೇಟೆ ಗೆದ್ದರು, ಮುಂದೆ ಸಾರ್ವತ್ರಿಕ ಚುನಾವಣೆಯಲ್ಲಿ ಬಿದ್ದರು. ಹೀಗಾಗಿ ಸಾರ್ವತ್ರಿಕ ಚುನಾವಣೆಯಲ್ಲಿ ಇಡೀ ರಾಜ್ಯ ತೀರ್ಮಾನಿಸುತ್ತದೆ ಎಂದರು.

ಹಾನಗಲ್ ಮತ್ತು ಸಿಂಧಗಿ ಎರಡೂ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಅತಿ ಹೆಚ್ಚು ಅಂತರದಿಂದ ಗೆಲ್ಲಲಿದ್ದಾರೆ. ಹಾನಗಲ್ ತಾಲ್ಲೂಕಿನ ರಾಜಕಾರಣ ವಿಭಿನ್ನ. ಇಬ್ಬರು ವ್ಯಕ್ತಿತ್ವಗಳ ಮೇಲೆ ಕೇಂದ್ರಿತವಾದ ಮೂರು ದಶಕಗಳ ರಾಜಕಾರಣವನ್ನು ಹಾನಗಲ್ ಕಂಡಿದೆ, ಸನ್ಮಾನ್ಯ ಸಿ.ಎಂ. ಉದಾಸಿಯವರು ತೀರಿಕೊಂಡ ಮೇಲೆ, ಮನೋಹರ್ ತಹಶೀಲ್ದಾರ್ ಅವರಿಗೆ ಸ್ಪರ್ಧೆ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಮೊದಲನೇ ಬಾರಿಗೆ ಉದಾಸಿ ಮತ್ತು ಮನೋಹರ್ ತಹಶೀಲ್ದಾರ್ ರಹಿತವಾದ ಚುನಾವಣೆ ನಡೆಯುತ್ತಿದೆ ಎಂದರು.

ಉದಾಸಿಯವರು ತಮ್ಮ ಜೊತೆಗೆ ಪಕ್ಷವನ್ನು ಕಟ್ಟಿದರು. ವೈಯಕ್ತಿಕವಾಗಿ ಎಲ್ಲರೊಂದಿಗೆ ಸಂಪರ್ಕ ಹೊಂದಿದ್ದರು. ಅವರು ಜನರ ಕಾರ್ಯಕ್ಕೆ ಸ್ಪಂದಿಸುವ ರೀತಿಯಲ್ಲಿ ಇನ್ಯಾರೂ ಸ್ಪಂದಿಸಿಲ್ಲ. ಹಾನಗಲ್ ತಾಲ್ಲೂಕಿನಲ್ಲಿ ಏನಾದರೂ ಅಭಿವೃದ್ಧಿ ಆಗಿದ್ದರೆ, ಅದಕ್ಕೆ ಉದಾಸಿಯವರ ಕೊಡುಗೆ ಬಹಳ ಇದೆ ಎಂದು ಅಭಿಪ್ರಾಯಪಟ್ಟರು.

ರಸ್ತೆ, ಕರೆಕಟ್ಟೆ ಮುಂತಾದ ಮೂಲಭೂತ ಸೌಕರ್ಯಗಳು ಸೇರಿದಂತೆ, ಐ.ಟಿ.ಐ, ಡಿಪ್ಲೊಮಾ ಕಾಲೇಜುಗಳನ್ನು ಹಾನಗಲ್ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ಉದಾಸಿಯವರ ಜನಪರ ಹೋರಾಟದಿಂದ ರೈತರಿಗೆ ವಿಮೆಯನ್ನು ಪರಿಚಯಿಸಿದರು. ನಿರಂತರವಾಗಿ ಎರಡು ದಶಕಗಳ ಕಾಲ ಅಭಿವೃದ್ಧಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಯಾರೂ ಏನೇ ಹೇಳಿದರೂ, ತಳಮಟ್ಟದಲ್ಲಿ ರೈತರ ಜೊತೆಗೆ, ಜನಸಾಮಾನ್ಯರ ಜೊತೆಗೆ ನಮ್ಮ ಪಕ್ಷದ ನಿಕಟ ಸಂಪರ್ಕ ಹಾಗೂ ಸಂಬಂಧ ಚುನಾವಣೆ ಪ್ರಚಾರಕ್ಕೆ ಹಾಗೂ ಚುನಾವಣೆಯ ಗೆಲುವಿಗೆ ಬಹಳ ದೊಡ್ಡ ಶಕ್ತಿಯಾಗಲಿದೆ ಎಂದರು.

ಜಿಲ್ಲೆಯ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ್ದರು, ತುಂಗಭದ್ರಾ ಮೇಲ್ದಂಡೆ ಯೋಜನೆಯಾಗಿದ್ದು ಅವರ ಉದಾಸಿಯವರ ಕಾಲದಲ್ಲಿಯೇ. ಜಮೀನುಗಳಿಗೆ ಕಾಂಗ್ರೆಸ್ ನವರು ನೀರು ಕೊಡಲಿಲ್ಲ. ಹಾನಗಲ್, ಹಿರೇಕೆರೂರು, ಬ್ಯಾಡಗಿಯಲ್ಲಿ ತುಂಗಾಭದ್ರಾ ಯೋಜನೆ ಅನುಷ್ಠಾನದಲ್ಲಿದೆ. ಅನೇಕ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಮಾಡಿದೆ ಎಂದರು.

ಇಂಜಿನಿಯರಿಂಗ್ ಕಾಲೇಜು ಆಗಲಿ, ಅಥವಾ ಇನ್ಯಾವುದೇ ಅಭಿವೃದ್ಧಿಯಾಗಿರುವುದೇ ನಮ್ಮ ಕಾಲದಲ್ಲಿ. ಜನ ಈ ಬಾರಿ ಬೆಂಬಲ ನೀಡಲಿದ್ದಾರೆ, ಸಮಗ್ರ ಅಭಿವೃದ್ಧಿಗೆ ನಮ್ಮ ಬದ್ಧತೆಯ ಬಗ್ಗೆ ಜನರಿಗೆ ಗೊತ್ತಿದೆ ಎಂದರು.

ಆರ್.ಎಸ್.ಎಸ್ ಕಾರ್ಯಕರ್ತರು ವಿಶ್ವವಿದ್ಯಾನಿಲಯಗಳಲ್ಲಿ ಸಿಂಡಿಕೇಟ್ ಸದಸ್ಯರಾಗಿ ಹಣ ದೋಚುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆರೋಪಿಸಿರುವ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು, ಯಾರನ್ನು ಮೆಚ್ಚಿಸಲು ಅವರು ಈ ಮಾತುಗಳನ್ನು ಆಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಸಿದ್ಧರಾಮಯ್ಯ ಮತ್ತು ಕುಮಾರಸ್ವಾಮಿಯವರ ನಡುವೆ ಆರ್.ಎಸ್.ಎಸ್ ಬೈಯ್ಯಲು ಸ್ಪರ್ಧೆ ಇದೆ. ಅಲ್ಪಸಂಖ್ಯಾತರನ್ನು ಓಲೈಸಲು ಇಬ್ಬರೂ ಸ್ಪರ್ಧಿಸುತ್ತಿದ್ದಾರೆ ಎಂದರು.

ಚುನಾವಣೆಗೂ ಮುನ್ನ ಹಾನಗಲ್ ಸಮಗ್ರ ಅಭಿವೃದ್ಧಿಗೆ ವಿಷನ್ ಡಾಕ್ಯುಮೆಂಟ್ ಬಿಡುಗಡೆ ಮಾಡಲಿದ್ದೇವೆ ಎಂದರು.

ಬಾಳಂಬೀಡ ಹಾಗೂ ಏತ ನೀರಾವರಿ ಯೋಜನೆಗಳು ಕಾಲದಲ್ಲಿ ಆಗಿದ್ದು ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ ಅವರು, ಈ ಬಗ್ಗೆ ದಾಖಲೆ ಸಮೇತ ನೋಡಬೇಕು. ಯಾರ ಕಾಲದಲ್ಲಿ ಡಿ.ಪಿ.ಆರ್ ಆಗಿದೆ, ಆಡಳಿತಾತ್ಮಕ ಮಂಜೂರಾತಿ ದೊರತಿದೆ, ಅನುದಾನ ಬಿಡುಗಡೆಯಾಗಿದೆ ಎನ್ನುವುದನ್ನು ಪರಿಶೀಲಿಸಬೇಕು ಎಂದರು.

ಇವೆಲ್ಲವೂ ಬಿಜೆಪಿ ಕಾಲದಲ್ಲಿಯೇ ಆಗಿದೆ ಎನ್ನುವುದು ಜನರಿಗೆ ಗೊತ್ತಿದೆ ಎಂದು ಸ್ಪಷ್ಟಪಡಿಸಿದರು. ಮತ್ತೊಂದು ಕೆರೆ ತುಂಬಿಸಿದ ಯೋಜನೆ ಮಂಜೂರು ಮಾಡಿ ಎಂಬ ಮನವಿಯನ್ನು ಹೊತ್ತು ಕಾಂಗ್ರೆಸ್ಸಿಗರೇ ನನ್ನ ಬಳಿ ಬಂದಿದ್ದರು ಎಂದರು.

ಯಡಿಯೂರಪ್ಪ ಪ್ರಚಾರ:

ಬಿ.ಎಸ್.ಯಡಿಯೂರಪ್ಪ ಅವರು ಅತ್ಯಂತ ಉತ್ಸಾಹದಿಂದ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.