ಒಂದು ವರ್ಷದ ರಾಜ್ಯ ಸರ್ಕಾರದ ಸಾಧನೆಗಳನ್ನು ನಾಡಿನ ಜನರಿಗೆ ತಿಳಿಸಲು ಪಕ್ಷದ ವತಿಯಿಂದ ವಿವಿಧ ಕಾರ್ಯಕ್ರಮ

ಬೆಂಗಳೂರು: ಒಂದು ವರ್ಷದ ರಾಜ್ಯ ಸರ್ಕಾರದ ಸಾಧನೆಗಳನ್ನು ನಾಡಿನ ಜನರಿಗೆ ತಿಳಿಸಲು ಪಕ್ಷದ ವತಿಯಿಂದ ಪತ್ರಿಕಾಗೋಷ್ಠಿ ಗಳನ್ನು ಮನೆ-ಮನೆ ಸಂಪರ್ಕ, ಸಸಿ ನೆಡುವ ಅಭಿಯಾನ, ವರ್ಚುವಲ್ ಸಭೆಗಳನ್ನು ರಾಜ್ಯದಾದ್ಯಂತ ಆಯೋಜಿಸಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.

ಪಕ್ಷದ ಕಚೇರಿಯಲ್ಲಿ ಮಾತನಾಡುತ್ತಾ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಈ ಜುಲೈ 26 ಕ್ಕೆ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಹಲವಾರು ಸವಾಲುಗಳು ಹಾಗೂ ಕೊರೋನಾ ನಿರ್ವಹಣೆಯೊಂದಿಗೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಶ್ರಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜುಲೈ 27 ರಂದು ಬೆಳಗ್ಗೆ 11 ಕ್ಕೆ ವಿಧಾನಸೌಧದಲ್ಲಿ ಒಂದು ವರ್ಷದ ರಾಜ್ಯ ಸರ್ಕಾರದ ಸಾಧನೆಗಳ ಕುರಿತು “ಜನರಿಗೆ ಸರ್ಕಾರದ ವರ್ಷದ ವರದಿ” ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಸಂಸದರು ಭಾಗವಹಿಸಲಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪಕ್ಷದ ಪದಾಧಿಕಾರಿಗಳು ಸರ್ಕಾರದ ಸಾಧನೆಯ ಕುರಿತು ಪತ್ರಿಕಾಗೋಷ್ಠಿಯನ್ನು ನಡೆಸಿದ್ದಾರೆ ಎಂದರು.

• ಜುಲೈ 28 ರಿಂದ ಪ್ರಾರಂಭವಾಗಿ ಮಳೆಗಾಲ ಅಂತ್ಯಗೊಳ್ಳುವ ವರೆಗೆ ರಾಜ್ಯದ ಎಲ್ಲ 58,000 ಬೂತಗಳಲ್ಲಿ ಸರ್ಕಾರದ ಸಾಧನೆಯ ಜೊತೆಗೆ ಪರಿಸರ ಜಾಗೃತಿಗಾಗಿ ಒಂದು ಕೋಟಿಗಿಂತ ಹೆಚ್ಚು ಸಸಿ ನೆಡುವ ಅಭಿಯಾನ ರಾಜ್ಯಾದ್ಯಂತ ನಡೆಯಲಿದೆ.

ಜುಲೈ 29-31 ರ ಮೂರು ದಿನಗಳ ಕಾಲ ರಾಜ್ಯ ಸರ್ಕಾರದ ಸಾಧನೆಗಳನ್ನು ತಿಳಿಸಲು ರಾಜ್ಯಾದ್ಯಂತ ಸುಮಾರು 50 ಲಕ್ಷ ಕ್ಕಿಂತ ಹೆಚ್ಚು ಮನೆ-ಮನೆ ಸಂಪರ್ಕ ಅಭಿಯಾನ ನಡೆಯಲಿದೆ. ಆಗಸ್ಟ್ 1 ರಂದು ಸಂಜೆ 6 ಕ್ಕೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸರ್ಕಾರದ ಸಾಧನೆಯ ಅಂಗವಾಗಿ ವರ್ಚುವಲ್ ಸಭೆ ನಡೆಯಲಿದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯ ಸರ್ಕಾರದ ಒಂದು ವರ್ಷದ “ಸಾಧನಾ ಸಂವಾದ” ಮಾಡಿದ್ದಾರೆ, ಈ ಸಂದರ್ಭದಲ್ಲಿ ರಾಜ್ಯದ 1 ಕೋಟಿ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರುಗಳಾದ, ಸಂಸದ ಪಿ.ಸಿ.ಮೋಹನ್, ನಿರ್ಮಲ್ ಕುಮಾರ ಸುರಾನಾ ಮತ್ತು ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಎ.ಎಚ್.ಆನಂದ್ ರವರು ಉಪಸ್ಥಿತರಿದ್ದರು,

ಬಿಜೆಪಿ ಸರಕಾರದ ವರ್ಷದ ಸಾಧನೆಯ ವಿವರ ನೀಡಿದ ಡಿಸಿಎಂ ಡಾ.ಅಶ್ವತ್ಥನಾರಾಯಣ್

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರದ ಒಂದು ವರ್ಷದ ಅವಧಿ ಪೂರೈಸಿದ ಸಂದರ್ಭದಲ್ಲಿ ಅನೇಕ ಸವಾಲುಗಳ ನಡುವೆಯೂ ಹಾಗೂ ಕೊರೋನಾ ನಿರ್ವಹಣೆಯೊಂದಿಗೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯೊಂದಿಗೆ ಶ್ರಮಿಸಿದ್ದು, ರಾಜ್ಯ ಸರ್ಕಾರದ ಸಾಧನೆಯನ್ನು ಡಿಸಿಎಂ ಡಾ.ಅಶ್ವತ್ಥನಾರಾಯಣ ಜನತೆ ಮುಂದಿಟ್ಟಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಾ
ನಾವು ಅಂದು ಅಧಿಕಾರ ವಹಿಸಿಕೊಂಡಾಗ ಸಂದರ್ಭದಲ್ಲಿ ಅನಾವೃಷ್ಟಿ ಬರಗಾಲ ವಿತ್ತು. ನಂತರ ಕೆಲ ದಿನದಲ್ಲಿ ಅತಿವೃಷ್ಟಿ, ಉಪ ಚುನಾವಣೆ ಮತ್ತು ಈಗ ಕೋವಿಡ್ ಸೋಂಕು, ಈ ನಾಲ್ಕರ ಹಿನ್ನೆಲೆಯಲ್ಲಿ ಅನೇಕ ಸವಾಲು ಸಮಸ್ಯೆಗಳಿದ್ದರೂ, ರಾಜ್ಯದ ಆಡಳಿತ ಸುಧಾರಣೆ, ಅಭಿವೃದ್ಧಿಗೆ ಹಿನ್ನಡೆ ಯಾಗದಂತೆ ಹಲವಾರು ಸಾಧನೆಗಳನ್ನು ನಮ್ಮ ಸಿಎಂ ಯಡಿಯೂರಪ್ಪನವರು ಕೈಗೊಂಡಿದ್ದಾರೆ. ಅತಿವೃಷ್ಟಿಯಲ್ಲಿ ಮಳೆ ಪ್ರವಾಹ ಸಂದರ್ಭದಲ್ಲಿ 6 ಸಾವಿರ ಕೋಟಿಗೂ ಅಧಿಕ ನೆರವು ನೀಡಿ, ಇಡೀ ವ್ಯವಸ್ಥೆಯನ್ನು ಸಂತ್ರಸ್ತರ ಮನೆ ಬಾಗಿಲಿಗೆ ಕೊಂಡೊಯ್ಯಲಾಯಿತು. ಸಂತ್ರಸ್ತರ ಕಷ್ಟ ಕಾಲದಲ್ಲಿ ನೆರವಾದರು. 2 ಲಕ್ಷ ಅಧಿಕ ಕುಟುಂಬಕ್ಕೆ ತಲಾ 10 ಸಾವಿರ ಪರಿಹಾರ, 1.25 ಲಕ್ಷ ಮನೆ ದುರಸ್ತಿಗೆ 911 ಕೋಟಿ, ಸಂಪೂರ್ಣವಾಗಿ ಕುಸಿದ ಮನೆಗಳಿಗೆ 5 ಲಕ್ಷ ಹಣ ನೀಡಲಾಯಿತು. ಬೆಳೆಗಳ ನಾಶಕ್ಕೆ ಪರಿಹಾರವಾಗಿ 1185 ಕೋಟಿ ನೀಡಿ, ಒಟ್ಟು 6,018 ಕೋಟೆಯನ್ನು ಪ್ರವಾಹದ ವೇಳೆ ವ್ಯಯಿಸಲಾಗಿದೆ ಎಂದರು.

ನಮ್ಮ ಪಕ್ಷದ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸರ್ಕಾರ ರಚನೆ ಮಾಡಲು. ಸಾಧ್ಯವಾಗಲಿಲ್ಲ. ರಾಜ್ಯದ ಜನ ತಿರಸ್ಕಾರ ಮಾಡಿದ ಕಾಂಗ್ರೆಸ್ ಪಕ್ಷ ಭಂಡತನದಿಂದ, ಅಪವಿತ್ರ ಮೈತ್ರಿ ಸರ್ಕಾರ ರಚನೆ ಮಾಡಿತು ಆದರೆ, ಜನ ಪಡಬಾರದ ಕಷ್ಟ ಪಡುವಂತಾಯಿತು. ನಂತರ ರಾಜ್ಯ ರಾಜಕೀಯ ಸನ್ನಿವೇಶದ ಸಂದರ್ಭದಲ್ಲಿ ಉಪ ಚುನಾವಣೆಯನ್ನು ರಾಜ್ಯ ಎದುರಿಸಬೇಕಾಯಿತು. ಈ ಉಪ ಚುನಾವಣೆ 15 ಸ್ಥಾನದಲ್ಲಿ 12 ಶಾಸಕರನ್ನು ಆಯ್ಕೆ ಮಾಡುವುದರ ಮೂಲಕ ಸ್ಥಿರವಾದ ಸರ್ಕಾರಕ್ಕೆ ಬಿಜೆಪಿ ಪಕ್ಷಕ್ಕೆ ರಾಜ್ಯದ ಜನರು ಆಶೀರ್ವಾದ ನೀಡಿದರು.ಹಿಂದಿನ ಮೈತ್ರಿ ಸರ್ಕಾರದ ವೇಳೆ ಸಾಂದರ್ಭಿಕ ಶಿಶು ಹೇಳಿಕೆಗಳು, ದಿನನಿತ್ಯ ಕಿತ್ತಾಟ-ಜಗಳ, ಗೊಂದಲವನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ. ರಾಜ್ಯದ ಜನರ ಕಷ್ಟಗಳ ಬದಲು, ಕೇವಲ ಇವರ ಮೈತ್ರಿ ಸರ್ಕಾರದ ಕಷ್ಟಗಳನ್ನು ನೋಡಬೇಕಿತ್ತು. ಈಗಲೂ ಸಿದ್ದರಾಮಯ್ಯ, ಕುಮಾರಸ್ವಾಮಿ ಪರಸ್ಪರ ಪ್ರಶ್ನೆಗಳು, ಹೆಳಿಕೆಗಳು ನೀಡುತ್ತಾ ರಾಜಕಾರಣ ಮಾಡುತ್ತಿದ್ದಾರೆ. ಅವರು ಜನಪರ ಕೆಲಸ-ಕಾರ್ಯ ಮಾಡಲಿಲ್ಲ. ಕೇವಲ ಅಧಿಕಾರದ ಆಸೆಗೆ ಸ್ವಾರ್ಥ ರಾಜಕಾರಣ ಮಾಡಿದರು ಎಂದರು.

ಮಹಾಮಾರಿ ಕೊಡ್-19 ಸಮಸ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶದಲ್ಲಿ ಉತ್ತಮವಾಗಿ ನಿರ್ವಹಣೆ ಮಾಡುತ್ತಿದೆ. ಕೊರೊನಾ ನಿರ್ವಹಣೆಯಲ್ಲಿ ವೈದ್ಯಕೀಯ ಉಪಕರಣ ಕ್ಕೆ ಬೇರೆ ದೇಶಗಳು ಇನ್ನೂ ಅವಲಂಬನೆಯಲ್ಲಿದ್ದಾರೆ, ಆದರೆ ನಾವು ವೈದ್ಯಕೀಯ ಕ್ಷೇತ್ರದಲ್ಲಿ ಸ್ವಾವಲಂಬಿಗಳಾಗಿದ್ದಾರೆ. ರಾಜ್ಯದಲ್ಲಿ ಕೊರೋನಾ ನಿರ್ವಹಣೆಯನ್ನು ಸಿಎಂ ನೇತೃತ್ವದಲ್ಲಿ ಉತ್ತಮವಾಗಿ ನಿರ್ವಹಿಸಲಾಗುತ್ತಿದೆ. ಆರ್ಥಿಕ ಮುಗ್ಗಟ್ಟು ಕಷ್ಟ ಕಾಲದ ನಡುವೆ ನಮ್ಮ ರಾಜ್ಯದಲ್ಲಿ 60 ದಿನ ನಿರಂತರ ಲಾಕ್ ಡೌನ್ ಜಾರಿ ಮಾಡಲಾಯಿತು. ರಾಜ್ಯದ ಜನತೆಗೆ ಯಾವುದಕ್ಕೂ ಕೊರತೆ ಆಗದಂತೆ ಆಹಾರ, ತರಕಾರಿ, ಔಷಧಿ ಸೇರಿದಂತೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲಾಯಿತು. ನಂತರ ಇಡೀ ದೇಶದಲ್ಲೇ ಮೊದಲ ಬಾರಿಗೆ ಆರ್ಥಿಕ ವಿಶೇಷ ಪ್ಯಾಕೇಜ್ ನ್ನು ರಾಜ್ಯ ಸರ್ಕಾರ ಘೋಷಣೆ ಮಾಡಲಾಯಿತು. ರಾಜ್ಯದ ಅಸಂಘಟಿತ ವಲಯದ ಕಾರ್ಮಿಕರು, ರೈತರು, ಹೂ-ಹಣ್ಣು ಬೆಳೆಗಾರರು, ಆಗಸರು, ಮಡಿವಾಳರು, ಚರ್ಮ-ಕುಶಲಕರ್ಮಿಗಳು, ಆಟೋ-ಟ್ಯಾಕ್ಸಿ ಚಾಲಕರಿಗೆ ಆರ್ಥಿಕ ಸಹಾಯ ಮಾಡಲಾಯಿತು ಎಂದರು.

ಪಡಿತರ ಯೋಜನೆ ಅಡಿಯಲ್ಲಿ ರಾಜ್ಯದ ಬಿ.ಪಿ.ಎಲ್ ಕಾರ್ಡ್ ಸೇರಿದಂತೆ ಎಲ್ಲರಿಗೂ ಉಚಿತವಾಗಿ ಕಳೆದ 3 ತಿಂಗಳಿಂದ ರೇಷನ್ ನೀಡಲಾಯಿತು. ಅಲ್ಲದೇ ಮುಂದಿನ ನವೆಂಬರ್ ತಿಂಗಳವರೆಗೆ ಉಚಿತ ರೇಷನ್ ನೀಡಲಾಗುತ್ತದೆ. ಕೊರೋನಾ ಚಿಕಿತ್ಸೆಯನ್ನು ರಾಜ್ಯದ ಬಡ-ಶ್ರೀಮಂತ ಎಂಬ ಬೇಧ ಭಾವವಿಲ್ಲದೆ ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದಲ್ಲೀಗ ಹೆಚ್ಚು ಟೆಸ್ಟಿಂಗ್ ಲ್ಯಾಬ್ ಆರಂಭಿಸಿದ್ದೇವೆ, ವೆಂಟಿಲೇಟರ್ ಸೇರಿ ಎಲ್ಲಿ ವೈದ್ಯಕೀಯ ವ್ಯವಸ್ಥೆಯನ್ನು ಮಾಡಲಾಗಿದೆ. ನಮ್ಮ ರಾಜ್ಯವು ಪಿಪಿಇ ಕಿಟ್ ಉತ್ಪಾದನೆ ಯಲ್ಲಿ ಮುಂದಿದ್ದಾರೆ, ಇಡಿ ದೇಶಕ್ಕೆ ಬೇಕಾದ ಪಿಪಿಇ ಕಿಟ್ ಪೂರೈಸುವ ಶಕ್ತಿಯನ್ನು ನಾವು ಹೊಂದಿದ್ದೇವೆ. ಜನಪರ ನಾಯಕ, ರೈತ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಯಾವುದಕ್ಕೂ ಕೊರತೆ ಆಗದಂತೆ ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ. ರಾಜ್ಯದ ಜನರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಕೃಷಿ ಭೂಮಿ ಖರೀದಿಯಲ್ಲೂ ಬರೀ ಭ್ರಷ್ಟಾಚಾರಕ್ಕೆ ಇದ್ದ ಕಾನೂನನ್ನು ನಾವು ತಿದ್ದುಪಡಿ ಮಾಡಿ “ಭೂ ಸುಧಾರಣೆ ಕಾಯ್ದೆ”, “ ನನ್ನ ಬೆಳೆ-ನನ್ನ ಹಕ್ಕು” ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ರೈತರ ಸಮಗ್ರ ಏಳ್ಳಿಗೆಗೆ, ಕೃಷಿಗೆ ಉತ್ತೇಜನ ಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ವಿಶ್ವದಲ್ಲೇ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ನಲ್ಲಿ ನಂಬರ್ ಒನ್ ಆಗಿ ಬೆಂಗಳೂರು ಆಯ್ಕೆಯಾಗಿದೆ. ವಿರೋಧ ಪಕ್ಷದವರು ಕೇವಲ ಬರಿ ಬಣ್ಣ ಬಳಿಯುವ ಕೆಲಸ ಮಾಡಿದ್ದು, ಸರಿ-ತಪ್ಪು ಆಲೋಚನೆ ಮಾಡುವ ಸಮಾಧಾನ ಇವರಿಗೆ ಇಲ್ಲ, ಜನರ, ರಾಜ್ಯದ ಅಭಿವೃದ್ಧಿ ಚಿಂತನೆ ಇಲ್ಲದೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಹೂಡಿಕೆದಾರರನ್ನು ಆಕರ್ಷಿಸಲು ದಾವೋಸ್‌ನಲ್ಲಿ
ನಡೆದ “ವಲ್ಡ್ ಎಕನಾಮಿಕ್ ಫೋರಂ” ಸಮಾವೇಶದಲ್ಲಿ ಭಾಗವಹಿಸಿ, ವಿಶ್ವ ಮಟ್ಟದ ನಾಯಕರ ಜೊತೆ ಚರ್ಚೆ ಮಾಡಿ ಹಲವಾರು ಕೈಗಾರಿಕೆಗಳು ರಾಜ್ಯದಲ್ಲಿ ಸ್ಥಾಪನೆ ಯಾಗುವಂತೆ, ಬಂಡವಾಳ ಹೂಡಿಕೆ ಮಾಡುವಂತೆ ಮಾಡಿದ್ದರು. ಆದರೆ ಈ ಹಿಂದಿನ ಸರ್ಕಾರಗಳು ದಾವೋಸ್‌ಗೆ ಹೋಗದೆ ಇಲ್ಲೇ ಸುತ್ತುತ್ತಾ ಇದ್ದರು. ಬೀದಿ ನಾಟಕ ಮಾಡುತ್ತಿದ್ದರು. ಆದರೆ ಯಡಿಯೂರಪ್ಪನವರು ದಾವೋಸ್‌ಗೆ ಹೋಗಿ ಬಂದು ನಮ್ಮ ಅಕ್ಕಪಕ್ಕದ ರಾಜ್ಯಗಳ ಸ್ಪರ್ಧೆಯ ಜೊತೆಗೆ ವಿದೇಶಗಳ ಜೊತೆಯೂ ಪೈಪೋಟಿ ಅಗತ್ಯ ಎಂದು ತೋರಿಸಿದರು. ಇನ್ಸೆಸ್ಟ್ ಕರ್ನಾಟಕ, ಅಕ್ರಮ-ಸಕ್ರಮ ಸೇರಿದಂತೆ ಬಹಳಷ್ಟು ಸುಧಾರಣೆಗಳನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಹೀಗೆ ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆಯ ಪಕ್ಷಿ ನೋಟದ ಕುರಿತು ಸಮಗ್ರ ವಿವರವನ್ನು ಈ ಸಂದರ್ಭದಲ್ಲಿ ನೀಡಿದರು.

ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ 500 ಬೆಡ್:ಆಸ್ಪತ್ರೆ ಆಡಳಿತ ಮಂಡಳಿ ಜತೆ ಡಿಸಿಎಂ ಚರ್ಚೆ

ಬೆಂಗಳೂರು: ನಗರದ ಪ್ರತಿಷ್ಟಿತ ಆಸ್ಪತ್ರೆಗಳಲ್ಲಿ ಒಂದಾದ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿತರಿಗಾಗಿ ಈಗಾಗಲೇ 340 ಹಾಸಿಗೆಗಳನ್ನು ಮೀಸಲಿಡಲಾಗಿದ್ದು, ಮುಂದಿನ ಎರಡು ವಾರದಲ್ಲಿ ಅವುಗಳನ್ನು 500 ಹಾಸಿಗೆಗಳಿಗೆ ಹೆಚ್ಚಿಸಿ ಸರಕಾರದ ವಶಕ್ಕೆ ನೀಡಲಿದೆ.

ಶನಿವಾರ ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ಎಂ.ಎಸ್. ರಾಮಯ್ಯ ಸಮೂಹ ಸಂಸ್ಥೆಗಳ ಮುಖ್ಯಸ್ಥ ಎಂ.ಆರ್. ಜಯರಾಮ್ ಹಾಗೂ ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ ಮೂರ್ತಿ ಅವರು ಈ ಭರವಸೆ ನೀಡದರು. ಇದೇ ವೇಳೆ ಡಿಸಿಎಂ ಅವರು ಕಾಲೇಜು ಸಿಬ್ಬಂದಿ ಜತೆ ಸಭೆ ನಡೆಸಿದರಲ್ಲದೆ, ಬೋರ್ಡ್ ರೂಂನಿಂದಲೇ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಕೋವಿಡ್ ವಾರ್ಡ್’ಗಳನ್ನು ವೀಕ್ಷಿಸಿ ಅಲ್ಲಿನ ಅಚ್ಚುಕಟ್ಟುತನಕ್ಕೆ ತೃಪ್ತಿ ವ್ಯಕ್ತಪಡಿಸಿದರು.

ಪದೇಪದೆ ಮನವಿ ಮಾಡಿದರೂ ತಮ್ಮಲ್ಲಿರುವ ಅರ್ಧದಷ್ಟು ಹಾಸಿಗೆಗಳನ್ನು ಸರಕಾರಕ್ಕೆ ನೀಡಲು ಮೀನಾಮೇಷ ಎಣಿಸುತ್ತಿರುವ ಕೆಲ ಖಾಸಗಿ ಆಸ್ಪತ್ರೆಗಳ ನಡುವೆಯೇ ನಾವು ಕೇಳುವುದಕ್ಕೆ ಮುನ್ನವೇ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ, ಹಾಸಿಗೆಗಳನ್ನು ನೀಡಲು ಮುಂದೆ ಬಂದಿರುವ ಎಂ.ಎಸ್. ರಾಮಯ್ಯ ಆಸ್ಪತ್ರೆಯ ಬದ್ಧತೆ ಮತ್ತು ಸೇವಾ ತತ್ಪರತೆಯನ್ನು ಮುಕ್ತಮನಸ್ಸಿನಿಂದ ಮೆಚ್ಚಲೇಬೇಕು ಎಂದು ಡಿಸಿಎಂ ಹೇಳಿದರು.

ಸದ್ಯಕ್ಕೆ 340 ಹಾಸಿಗೆಗಳು ಕೋವಿಡ್ ಸೋಂಕಿತರಿಗೆ ಸಿದ್ಧವಾಗಿ ಬಳಕೆಯಾಗುತ್ತಿವೆ. ಇನ್ನೆರಡು ವಾರದಲ್ಲಿ ಮತ್ತೆ 160 ಹಾಸಿಗೆಗಳು ಲಭ್ಯವಾಗುತ್ತವೆ ಎಂದು ಶ್ರೀನಿವಾಸಮೂರ್ತಿ ಅವರು ಉಪ ಮುಖ್ಯಮಂತ್ರಿ ಗಮನಕ್ಕೆ ತಂದರು.

ವೆಂಟಿಲೇಟರ್ ಸಂಖ್ಯೆ ಹೆಚ್ಚಳ:
ಸದ್ಯಕ್ಕೆ ಈ ಆಸ್ಪತ್ರೆಯಲ್ಲಿ ಐದು ವೆಂಟಿಲೇಟರುಗಳಿವೆ. ಅವುಗಳ ಸಂಖ್ಯೆಯನ್ನು 25ಕ್ಕೆ ಹೆಚ್ಚಿಸಬೇಕು. 50 ಐಸಿಯು ಬೆಡ್ ಗಳನ್ನು ಕನಿಷ್ಠ 100 ರಿಂದ 150 ಮಾಡಬೇಕು ಎನ್ನುವ ಡಿಸಿಎಂ ಅವರ ಮನವಿಗೆ ಸ್ಪಂದಿಸಿದರು.

ಔಷಧ ಪೂರೈಕೆ:
ಕೋವಿಡ್ ಸೋಂಕಿತರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ’ರೆಮೀಡಿಸ್ ಸ್ವೀರ್’ ಎಂಬ ಚುಚ್ಚುಮದ್ದಿನ ಕೊರತೆ ಇದ್ದು, ಅದನ್ನು ಸರಕಾರ ಪೂರೈಸಬೇಕು ಎಂದು ಆಸ್ಪತ್ರೆ ಆಡಳಿತ ವರ್ಗ ಮನವಿ ಮಾಡಿತು. ಇದಕ್ಕೂ ಸ್ಪಂದಿಸಿದ ಡಿಸಿಎಂ, ಅಗತ್ಯವಿರುವಷ್ಟು ಚುಚ್ಚುಮದ್ದು, ಮತ್ತಿತರೆ ಎಲ್ಲ ಔಷಧಗಳನ್ನು ಕೂಡಲೇ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸಿಬ್ಬಂದಿ ಕೊರತೆ:
ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಒಟ್ಟು ಸಿಬ್ಬಂದಿಯ ಪೈಕಿ ಶೇ.10ರಷ್ಟು ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲುತ್ತಿದೆ. ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಚಿಕಿತ್ಸೆ ವೇಳೆ ಸೋಂಕು ತಗುಲುತ್ತಿದೆ. ಆದರೂ ನಮ್ಮ ಸಿಬ್ಬಂದಿ ಛಲದಿಂದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈಗ ಆಸ್ಪತ್ರೆಯಲ್ಲಿ ವೈದ್ಯರು, ಅರೆ ವ್ಯದ್ಯಕೀಯ ಸಿಬ್ಬಂದಿ ಕೊರತೆ ಇದೆ ಎಂದು ಸಿಇಒ ಶ್ರೀನಿವಾಸಮೂರ್ತಿ ಹೇಳಿದರು.
ಕೆ.ಸಿ.ಜನರಲ್ ಆಸ್ಪತ್ರೆಗೆ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ನೆರವು ಒದಗಿಸಬೇಕೆನ್ನುವ ಡಿಸಿಎಂ ಅವರ ಮನವಿಗೂ ಸ್ಪಂದಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಹಿರಿಯ ಅಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು, ಆರೋಗ್ಯ ಮತ್ತು ಬಿಬಿಎಂಪಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

ಅನೈತಿಕ ಸಂಬಂಧದ ಸಂಶಯ:ಗರ್ಭಿಣಿ ಪತ್ನಿಯನ್ನೆ ಪತಿ ಚಾಕು ಇರಿದು ಕೊಲೆ

ಬಾಗಲಕೋಟೆ: ಅನೈತಿಕ ಸಂಬಂಧದ ಸಂಶಯದ ಹಿನ್ನೆಲೆ ಗರ್ಭಿಣಿ ಪತ್ನಿಯನ್ನೆ ಪತಿ ಚಾಕು ಇರಿದು ಕೊಲೆಗೈದ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದ ರಂಗನಾಥ ನಗರದಲ್ಲಿ ನಡೆದಿದೆ.

ಮಂಜುಳಾ ಸಂದೀಪ ಬಣಪಟ್ಟಿ (24) ಕೊಲೆಯಾದ ದುರ್ದೈವಿ. ಮಂಜುಳಾ ಪತಿ ಸಂದೀಪ ಬಣಪಟ್ಟಿ ಕೊಲೆಗೈದು, ನಂತರ ತಲೆಗೆ ಕಲ್ಲು ಹೊಡೆದುಕೊಂಡು ಆತ್ಮಹತ್ಯೆ ನಾಟಕವಾಡಿದ್ದಾನೆ. ಗಾಯಗಳಾಗಿದ್ದ ಆತನನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.

ಸ್ಥಳಕ್ಕೆ ಬಾದಾಮಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕರೊನಾ ಮಹಾಮಾರಿ ವಿರುದ್ದ ಹೋರಾಡಿ ಗೆದ್ದ ರಾಜ್ಯದ ಮೊದಲ ಶತಾಯುಷಿ ಅಜ್ಜಿ

ಬಳ್ಳಾರಿ: ಇಷ್ಟು ದಿನ 50-60 ವರ್ಷವಾದ ವೃದ್ದರಿಗೆ ಕೊರೋನಾ ಬಂದ್ರೆ ಬದುಕಲ್ಲ ಅನ್ನೂ ಮಾತಿತ್ತು. ಆದ್ರೆ, ಇದೀಗ ಶತಾಯುಷಿ ಅಜ್ಜಿಯೊಬ್ರು ಸುಳ್ಳು ಮಾಡಿ ತೋರಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಪಟ್ಟಣದ 100 ವರ್ಷದ ಹಾಲಮ್ಮ ಕೊರೋನಾ ಬಂದ ನಂತರವೂ ಮನೆಯಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಮನೆಯಲ್ಲಿ ಮಗನಿಗೆ ಕರೊನಾ ಬಂದಿದ್ದ ಹಿನ್ನಲೆ ಹಾಲಮ್ಮ ಅವರಿಗೂ ಟೆಸ್ಟ್ ಮಾಡಲಾಗಿದೆ. ಆಗ ಕೊರೋನಾ ಸೊಂಕಿರುವುದು ದೃಢ ಪಟ್ಟಿತ್ತು.
ಹೀಗೆ ಸೊಂಕು ದೃಢಪಟ್ಟ ನಂತರ ವೈದ್ಯರ ಸಲಹೆಯಂತೆ ಮನೆಯಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಅಷ್ಟೇ ಅಲ್ಲ ಅಜ್ಜಿ ಜೊತೆ ಮನೆಯಲ್ಲಿದ್ದ ನಾಲ್ವರು ಕೂಡ ಕರೊನಾದಿಂದ ಗುಣಮುಖರಾಗಿದ್ದಾರೆ.

ಶತಾಯುಷಿ ಅಜ್ಜಿ ಯಶಸ್ವಿಯಾಗಿ ಗುಣಮುಖರಾದ ಹಿನ್ನೆಲೆ ಬಳ್ಳಾರಿ ಆರೋಗ್ಯ ಇಲಾಖೆಗೆ ಪ್ರಶಂಸೆಯ ಗರಿ ಮೂಡಿದೆ.

ಶ್ರೀರಾಮಸೇನೆಯಿಂದ ಅಯೋಧ್ಯೆಗೆ ಅಂಜನಾದ್ರಿ ಬೆಟ್ಟದ ರಜತ ಕವಚ ಲೇಪಿತ ಶಿಲೆ ರವಾನೆ: ಮುತಾಲಿಕ್

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಶಿಲಾನ್ಯಾಸ ದಿನಾಂಕ ಪ್ರಕಟಿಸಿದ್ದು ಸಂತೋಷ ಹಾಗೂ ಹರ್ಷವನ್ನು ತಂದಿದೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ತಿಳಿದ್ದಾರೆ.

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಹನುಮಂತನ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟದ ಒಂದು ಶಿಲೆಗೆ ರಜತ ಕವಚ ಲೇಪನ ಮಾಡಿ ಶ್ರೀರಾಮಸೇನೆ ವತಿಯಿಂದ ಅಯೋಧ್ಯೆಗೆ ತಲುಪಿಸುವ ಮಹತ್ವದ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಹನುಮಂತನ ಜನ್ಮಸ್ಥಾನದಿಂದ ರಾಮನ ಜನ್ಮಸ್ಥಾನಕ್ಕೆ ಶ್ರೀರಾಮಸೇನೆ ಕೊಡುಗೆ ನೀಡಲು ಮುಂದಾಗಿದ್ದು, ಇದು ಕರ್ನಾಟಕದ ಹೆಮ್ಮೆಯ ವಿಷಯವಾಗಿದ್ದು, ಸುಮಾರು ಐದು ನೂರು ವರ್ಷಗಳ ಹೋರಾಟದ ಪರಿಣಾಮದಿಂದ ಜಯಸಿಕ್ಕಿರುವುದು ವಿಶೇಷವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.