ಕೊರೊನಾದಿಂದ ಬಿತ್ತನೆ ಬೀಜ ಹಾಗೂ ಯೂರಿಯಾ ಗೊಬ್ಬರ ಪೂರೈಕೆಗೆ ಯಾವುದೇ ತೊಂದರೆಯಾಗದು: ಕೃಷಿ ಸಚಿವ ಬಿ.ಸಿ.ಪಾಟೀಲ್

ಫೈಲ್ ಫೋಟೋ:

ಬೆಂಗಳೂರು,ಜು.24:ಈ ಬಾರಿ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ತಡ ಮುಂಗಾರು ಜಿಲ್ಲೆಗಳಲ್ಲಿ ಆಗಸ್ಟ್ ವರೆಗೂ ಬಿತ್ತನೆ ಕಾರ್ಯ ಮುಂದುವರೆಯುವುದರಿಂದ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಲು ಇಲಾಖೆ ಸಿದ್ಧತೆ ಮಾಡಿಕೊಂಡಿದ್ದು, ಕೊರೊನಾದಿಂದಾಗಿ ರೈತರಿಗೆ ಯಾವುದೇ ರೀತಿಯಲ್ಲಿ ಬಿತ್ತನೆ ಬೀಜ ಹಾಗೂ ಯೂರಿಯಾ ಗೊಬ್ಬರ ಪೂರೈಕೆಗೆ ಕೊರತೆಯಾಗದಂತೆ ಸೂಕ್ತ ಕ್ರಮ ವಹಿಸಲಾಗಿದ್ದು, ಕಳೆದ ಬಾರಿಗಿಂತ ಈ ಬಾರಿ ಹೆಚ್ಚುವರಿಯಾಗಿ ಯೂರಿಯಾ ಗೊಬ್ಬರ ಹಾಗೂ ಬಿತ್ತನೆ ಬೀಜ ವಿತರಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

2020-21 ನೇ ಸಾಲಿನ ಮುಂಗಾರು ಹಂಗಾಮಿನ 2020 ಏಪ್ರಿಲ್ 1 ರಿಂದ ಜುಲೈ ಅಂತ್ಯದವರೆಗೆ ಒಟ್ಟು 13.99 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆ ಇದ್ದು ಇದರಲ್ಲಿ ಯೂರಿಯಾ 4.98 ಲಕ್ಷ ಡಿಎಪಿ 3.06 ಲಕ್ಷ ಮೆಟ್ರಿಕ್ ಟನ್ ಎಂಒಪಿ 1.37 ಲಕ್ಷ ಮೆಟ್ರಿಕ್ ಟನ್ ಮತ್ತು ಕಾಂಪ್ಲೆಕ್ಸ್ 4.58 ಲಕ್ಷ ಮೆಟ್ರಿಕ್ ಟನ್ ಗೆ ಬೇಡಿಕೆಯಿದೆ. ಈ ಪೈಕಿ ಜುಲೈ 23 ರವರೆಗೆ ಒಟ್ಟು 13.50 ಲಕ್ಷ ಮೆಟ್ರಿಕ್ ಟನ್ ಅಂದರೆ 5.36 ಮೆಟ್ರಿಕ್ ಟನ್ ಯೂರಿಯಾ ಡಿ ಎ ಪಿ- 2.49 ಲಕ್ಷ ಮೆ.ಟನ್ , ಎಂಒಪಿ . 1.03 ಲಕ್ಷ ಮೆ.ಟನ್ ಮತ್ತು ಕಾಂಪ್ಲೆಕ್ಸ್ , 4.62 ಲಕ್ಷ ಮೆ.ಟನ್ ಸರಬರಾಜಾಗಿರುತ್ತದೆ .ಕಳೆದ ಬಾರಿಗೆ ಹೋಲಿಸಿದರೆ ಶೇ.5.4 ರಷ್ಟು 13.50 ಲಕ್ಷ ಮೆಟನ್ ವಿವಿಧ ರಸಗೊಬ್ಬರಗಳು ಸರಬರಾಜಾಗಿರುತ್ತವೆ. ವಿಶೇಷವಾಗಿ 30.8%ರಷ್ಟು ಯೂರಿಯಾ ರಸಗೊಬ್ಬರ ಹೆಚ್ಚುವರಿ ಸರಬರಾಜಾಗಿರುತ್ತದೆ.

ಅದರಂತೆ ಮುಂಗಾರು ಚಟುವಟಿಕೆಗಳಿಗೆ ಅಗತ್ಯವಾದ ಬಿತ್ತನೆ ಬೀಜವನ್ನು ಸಹ ಅಗತ್ಯಕ್ಕೆ ತಕ್ಕಂತೆ ಪೂರೈಸಲಾಗುತ್ತಿದ್ದು, ಯಾವುದೇ ಕೊರತೆಯಿರುವುದಿಲ್ಲ 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 5.97 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಗಳ ಬೇಡಿಕೆ ಇದ್ದು, ರಾಜ್ಯದ್ಯಂತ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳ ಮೂಲಕ ಇದುವರೆಗೂ 3,29,862.8 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಲಾಗಿದೆ. ಹಾಲಿ ರೈತ ಸಂಪರ್ಕ ಕೇಂದ್ರಗಳಲ್ಲಿ 52110 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಇದೆ. ರಾಜ್ಯದಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಅಗತ್ಯವಾಗಿರುವ ಬಿತ್ತನೆ ಬೀಜ ಹಾಗೂ ಯೂರಿಯಾ ರಸಗೊಬ್ಬರಕ್ಕೆ ಯಾವುದೇ ಕೊರತೆಯಾಗಿಲ್ಲ. ರೈತರ ಬೇಡಿಕೆಗಳನ್ನು ಪೂರೈಸಲು ಇಲಾಖೆ ಬದ್ಧವಾಗಿದೆ ಎಂದು ಸಚಿವರು ಹೇಳಿದ್ದಾರೆ

ಭೂ ಸುಧಾರಣೆ ಕಾಯಿದೆ : ಜನ ಕಲಾ ಮೇಳದ ರೀತಿ ಹೋರಾಟಕ್ಕೆ ನಿರ್ಧಾರ

ಬೆಂಗಳೂರು : ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣೆ ತಿದ್ದುಪಡಿ ಕಾಯಿದೆ ವಿರೋಧಿಸಿ ರೈತ ಸಂಘಟನೆಗಳ ಬೆಂಬಲದೊಂದಿಗೆ ರಾಜ್ಯಾದ್ಯಂತ ಜನ ಕಲಾ ಮೇಳದ ರೀತಿ ಹೋರಾಟ ರೂಪಿಸಲು. ಸಂಘಟನೆಗಳು ನಿರ್ಧರಿಸಿವೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇದು ನಡೆದ ದಲಿತ ಸಂಘಟನೆಗಳ ಮುಖಂಡರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಭೂ ಸುಧಾರಣೆ ಕಾಯಿದೆಗೆ ಸರ್ಕಾರ ತಂದಿರುವ ತಿದ್ದುಪಡಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಇದಕ್ಕೆ ಜನ ಕಲಾಮೇಳದ ರೀತಿಯ ಹೋರಾಟವೇ ಸೂಕ್ತ. ಇದಕ್ಕಾಗಿ ರೈತ ಸಂಘಟನೆಗಳು ಹಾಗೂ ದಲಿತ ಸಂಘಟನೆಗಳ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಬೇಕು. ಆಗಸ್ಟ್ 15ರ ವೇಳೆಗೆ ಹೋರಾಟದ ರೂಪುರೇಷೆ ಸಿದ್ಧಪಡಿಸಬೇಕು ಎಂದು ಪ್ರಮುಖರು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಮಾನಾಡಿದ ಮುಖಂಡರು, ತಿದ್ದುಪಡಿಯ ಹಿಂದೆ ಇರುವ ಹುನ್ನಾರದ ಬಗ್ಗೆ ಜನರಿಗೆ ತಿಳಿ ಹೇಳಬೇಕು. ಇದಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ತಂಡಗಳನ್ನು ರಚನೆ ಮಾಡಬೇಕು. ಕೋವಿಡ್ ಹಿನ್ನೆಲೆಯಲ್ಲಿ ಜಾರಿಗೆ ತಂದಿರುವ ಮಾರ್ಗಸೂಚಿ ಅನ್ವಯವೇ ಹೋರಾಟ ನಡೆಯಬೇಕು ಎಂದು ಹೇಳಿದರು.

ಇದು ಕೇವಲ ರಾಜಕೀಯ ವಿಷಯ ಅಲ್ಲ. ಇದರಲ್ಲಿ ಗ್ರಾಮೀಣ ಜನರ ಬದುಕು ಅಡಗಿದೆ. ಆವರ ಆರ್ಥಿಕತೆ, ಉದ್ಯೋಗ, ಉತ್ಪಾದನೆ ವಿಚಾರವಿದೆ. ಭೂ ಸುಧಾರಣೆ ಕಾಯಿದೆ ಜೊತೆಗೆ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಆಗಿರುವ ಅವ್ಯವಹಾರ ಹಾಗೂ ಇತರ ಕಾಯಿದೆಗಳಿಗೆ ತಂದಿರುವ ತಿದ್ದುಪಡಿ ವಿಚಾರದಲ್ಲಿಯೂ ಹೋರಾಟ ನಡೆಸಬೇಕು.

ನಿಮ್ಮೊಂದಿಗೆ ನಾವಿದ್ದೇವೆ :
ಈ ಚಳವಳಿಯಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಿದ್ದರಾಮಯ್ಯ ಅವರಿಗೆ ಹೇಳಿದ ಮುಖಂಡರು, ಭೂ ಸುಧಾರಣೆ ಕಾಯಿದೆ ತಿದ್ದುಪಡಿ ವಿರೋಧಿಸಿ ಆಂದೋಲನ ರೂಪುಗೊಳ್ಳುವ ಅಗತ್ಯವಿದೆ ಎಂದರು.

ಈ ತಿದ್ದುಪಡಿ ಜೀವ ಸಂಕುಲದ ವಿರೋಧಿಯಾಗಿದೆ. ಸಾಮಾಜಿಕ, ಸಾಂಸ್ಕøತಿಕ ಮತ್ತು ಪಾಕೃತಿಕವಾದ ವಿಚಾರಗಳು ಇದರಲ್ಲಿ ಅಡಗಿವೆ. ಇದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎಂದು ಹೇಳಿದರು.

ಚಳವಳಿಗೆ ಶಕ್ತಿ : ಸಿದ್ದರಾಮಯ್ಯ
ಪಕ್ಷದ ವೇದಿಕೆಯಲ್ಲೂ ಈ ಕುರಿತು ಚರ್ಚಿಸುತ್ತೇವೆ. ರೈತ ಹಾಗೂ ದಲಿತ ಸಂಘಟನೆಗಳು ಕೈ ಜೋಡಿಸಿದರೆ ಚಳವಳಿಗೆ ಶಕ್ತಿ ಬರುತ್ತದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.
ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತಂದಿರುವುದರಿಂದ ಅಂಬಾನಿ, ಅದಾನಿ, ಟಾಟಾ, ಬಿರ್ಲಾ ಸೇರಿದಂತೆ ರೈತರಲ್ಲದವರು ಯಾರು ಬೇಕಾದರೂ ಈಗ ಜಮೀನು ಖರೀದಿಸಬಹುದು. ಇಡೀ ಕಾಯಿದೆಯೇ ಈಗ ಹಲ್ಲು ಕಿತ್ತ ಹಾವಿನಂತೆ ಆಗಿದೆ. ಕಾಯಿದೆಯ ಹೃದಯವನ್ನೇ ಸರ್ಕಾರ ಕಸಿದುಕೊಂಡಿದೆ.
ರೈತ ಸಂಘಟನೆಗಳು ಹಾಗೂ ದಲಿತ ಸಂಘಟನೆಗಳು ಹೋರಾಟಕ್ಕೆ ಬೆಂಬಲ ಸೂಚಿಸಲು ಒಪ್ಪಿವೆ. ಈ ಸಂಬಂಧ ಆಗಸ್ಟ್ ಮೊದಲ ವಾರದಲ್ಲಿ ಉಭಯ ಸಂಘಟನೆಗಳ ಪ್ರಮುಖರ ಸಭೆ ಕರೆಯಲಾಗುವುದು. ಜೊತೆಗೆ ಕಾರ್ಯಾಗಾರ ಆಯೋಜಿಸುವ ಕುರಿತಂತೆಯೂ ಚರ್ಚಿಸಲಾಗುವುದು ಎಂದು ಹೇಳಿದರು.

ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತಂದಿರುವುದರ ಹಿಂದೆ ಷಡ್ಯಂತ್ರ ಇದೆ. ಇದರಿಂದ ತಳ ಸಮುದಾಯಕ್ಕೆ ಹೊಡೆತ ಬಿದ್ದು ಅವರು ನಿರ್ಗತಿಕರಾಗುವ ಅಪಾಯವಿದೆ. ಇದನ್ನು ಜನರ ಮುಂದೆ ಎಳೆ ಎಳೆಯಾಗಿ ಬಿಡಿಸಿ ಇಡಬೇಕು. ಕೊರೊನಾದಂಥ ಸಂಕಷ್ಟದ ಸಮಯದಲ್ಲೂ ಇಂಥ ಜನವಿರೋಧಿ ಕಾಯಿದೆಗಳನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ಮುಖಂಡರ ಸಲಹೆ ಮೇರೆಗೆ ಈ ಹಿಂದೆ ನಾವು ಭೂ ಸುಧಾರಣೆ ಕಾಯಿದೆ ಬಗ್ಗೆ ಸಮಾಲೋಚನೆ ನಡೆಸಿದ್ದೇವೆ. ಹಳ್ಳಿ, ಹಳ್ಳಿಗಳಲ್ಲಿಯೂ ಹೋರಾಟ ನಡೆಸುವ ಕುರಿತು ಮುಂದೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮಾಜಿ ಸಚಿವ ಡಾ. ಎಚ್.ಸಿ. ಮಹಾದೇವಪ್ಪ, ದಲಿತ ಸಂಘಟನೆಗಳ ಮುಖಂಡರಾದ ಮಾವಳ್ಳಿ ಶಂಕರ್, ಲಕ್ಷ್ಮೀನಾರಾಯಣ ನಾಗವಾರ, ಗುರುಪ್ರಸಾದ್ ಕೆರಗೋಡು, ಬಸವರಾಜ ನಾಯಕ, ಜನಾರ್ದನ (ಜೆನ್ನಿ), ಎಂ. ವೆಂಕಟೇಶ್, ಅಣ್ಣಯ್ಯ, ಗಂಗಾಧರಮೂರ್ತಿ, ಮುನಿಕೃಷ್ಣಪ್ಪ, ಬೆನ್ನಿಗಾನಹಳ್ಳಿ ರಾಮಚಂದ್ರ, ಕೆ.ಆರ್. ಗೋಪಾಲಕೃಷ್ಣ, ಆಲಂಗೂಡು ಶಿವಕುಮಾರ್, ವೈ.ಸಿ. ಮಯೂರ, ಜವರಯ್ಯ, ಕಾರಳ್ಳಿ ಶ್ರೀನಿವಾಸ, ಶಿವಲಿಂಗಯ್ಯ, ಜಂಬೂದ್ವೀಪ ಸಿದ್ದರಾಜು, ಜೀವನಹಳ್ಳಿ ಆರ್. ವೆಂಕಟೇಶ್, ರವಿಕುಮಾರ್, ಕಾಂತರಾಜು, ಜಯರಾಮಯ್ಯ ಮತ್ತಿತರರು ಭಾಗವಹಿಸಿದ್ದರು. ವಾಲ್ಮೀಕಿ ನಾಯಕ ಪರಿಷತ್ತು, ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳು ಸಭೆಯಲ್ಲಿ ಪಾಲ್ಗೊಂಡಿದ್ದವು.

ರಾಜ್ಯದಲ್ಲಿ ಕಾಂಗ್ರೆಸ್ ಶಕ್ತಿಹೀನವಾಗಿದೆ: ಕೆ.ಎಸ್.ಈಶ್ವರಪ್ಪ

ಫೈಲ್ ಫೋಟೋ:

ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಶಕ್ತಿಹೀನವಾಗಿದೆ ಎನ್ನುವುದಕ್ಕೆ ರೈತ ಸಂಘದ ಜೊತೆ ಸೇರಿ ಹೋರಾಟ ಮಾಡುತ್ತೇವೆ ಎನ್ನುವ ಸಿದ್ದರಾಮಯ್ಯ ಹೇಳಿಕೆಯೇ ಸಾಕ್ಷಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದರು.

ಚಿತ್ರದುರ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಗೆ ಸ್ವತಂತ್ರವಾಗಿ ಹೋರಾಡುವ ಶಕ್ತಿ ಇದ್ದಿದ್ದರೆ ರೈತ ಸಂಘವನ್ನು ಯಾಕೆ ಸೇರಿಸಿಕೊಳ್ಳಬೇಕಿತ್ತು, ಅವರು ಹತಾಶರಾಗಿದ್ದಾರೆ. ಲೋಕಸಭೆಯಲ್ಲಿ ಒಂದೇ ಸ್ಥಾನ ಗೆದ್ದಿದ್ದು, ಅಧಿಕಾರ ಕಳೆದುಕೊಂಡಿದ್ದು, ಎಲ್ಲವೂ ಇದಕ್ಕೆ ಉದಾಹರಣೆಯಾಗಿವೆ. ಈ ಕಾರಣಕ್ಕೆ ಜೀವ ಪಡೆದುಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು.

ಕಾಂಗ್ರೆಸ್ನಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ವಿಪಕ್ಷ ನಾಯಕರ ನಡುವೆ ಪೈಪೋಟಿ ನಡೆಯುತ್ತಿದೆ. ನಾನು ಲೀಡರ್ ಆಗಬೇಕು, ನಾನು ಲೀಡರ್ ಆಗಬೇಕು ಎಂಬ ಪೈಪೋಟಿ ನಡೆಯುತ್ತಿದೆ. ರಾಜಕೀಯವಾಗಿ ಏನಾದರೂ ಆಪಾದನೆ ಮಾಡಿದರೆ ನಾಯಕರಾಗುತ್ತೇವೆ ಎಂಬ ಉದ್ದೇಶ ಹೊಂದಿದ್ದಾರೆ. ಅಲ್ಲದೆ ಹೋರಾಟ ಮಾಡುತ್ತಿದ್ದೇನೆ ಎಂದು ಸೋನಿಯಾ ಗಾಂಧಿ ಅವರನ್ನು ತೃಪ್ತಿಪಡಿಸಬೇಕು ಅದಕ್ಕಾಗಿ ಹೀಗೆ ಮಾತನಾಡುತ್ತಾರೆ. ವಿರೋಧ ಪಕ್ಷದ ನಾಯಕರಾಗಿ ಜೀವಂತವಾಗಿದ್ದೇವೆ ಎಂದು ತೋರಿಸಬೇಕಲ್ಲ ಅದಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ಸಿನವರು ಈ ಪರಿಸ್ಥಿತಿಯಲ್ಲಿ ಪಕ್ಷ ಬೇಧ ಮರೆತು ಸರ್ಕಾರಕ್ಕೆ ಬೆಂಬಲ ಕೊಡಬೇಕಾಗಿತ್ತು. ಜನ ಸಂಕಷ್ಟದಲ್ಲಿದ್ದಾರೆ, ರಾಜಕೀಯ ಮಾಡಬಾರದು ಎಂದು ಸಹಕಾರ ಕೊಡುವುದು ಬಿಟ್ಟು, ಹುಳುಕು ಹುಡುಕುತ್ತಿದ್ದಾರೆ. ಇದನ್ನು ಜನ ಗಮನಿಸುತ್ತಾರೆ. ಇಂತಹ ಸಂದರ್ಭದಲ್ಲೂ ರಾಜಕಾರಣ ಮಾಡುತ್ತಾರೆ ಎಂದು ಜನ ಸಿದ್ದರಾಮಯ್ಯ ಅವರಿಗೆ ಛೀಮಾರಿ ಹಾಕುತ್ತಾರೆ ಎಂದರು.

ಸಚಿವರು ಸತ್ಯವಂತರಾದರೆ ತನಿಖೆ ಬೇಡ ಎನ್ನುವುದೇಕೆ : ಸಿದ್ದರಾಮಯ್ಯ

ಫೈಲ್ ಫೋಟೋ:

ಬೆಂಗಳೂರು : ವೈದ್ಯಕೀಯ ಉಪಕರಣಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರಕ್ಕೆ ಭಯವೇಕೆ? ಸಚಿವರುಗಳು ಸತ್ಯವಂತರು ಏನ್ನುವುದಾದರೆ ತನಿಖೆ ಬೇಡ ಎನ್ನುವುದೇಕೆ ? ಇದು ಭಂಡತನದ ಪರಮಾವಧಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ತಮ್ಮ ನಿವಾಸದಲ್ಲಿಂದು ತಮ್ಮನ್ನು ಭೇಟಿಯಾಗಿದ್ದ ಮಾಧ್ಯಮ ಪ್ರತಿನಿಧಿಗಳ ಜೊತೆ ಸಿದ್ದರಾಮಯ್ಯ ಅವರು ಮಾತನಾಡಿದರು.

ಮಾಧ್ಯಮ ಪ್ರತಿನಿಧಿಗಳಿಗೆ ಅವರು ಹೇಳಿದ್ದಿಷ್ಟು :
ಸರ್ಕಾರ ಅಂದರೆ ಸಾಮೂಹಿಕ ಜವಾಬ್ದಾರಿ. ಹೀಗಾಗಿ ನಿನ್ನೆ ಐದು ಸಚಿವರು ಪತ್ರಿಕಾಗೋಷ್ಠಿ ಮಾಡಿದ್ದಾರೆ. ನಾವು ನಿನ್ನೆ ಪತ್ರಿಕಾಗೋಷ್ಠಿ ನಡೆಸಿ ಅವ್ಯವಹಾರದ ಬಗ್ಗೆ 14 ದಾಖಲೆಗಳನ್ನು ಕೊಟ್ಟಿದ್ದೇವೆ. ಆದರೂ ಆ ದಾಖಲೆಗಳನ್ನು ಸಚಿವರು ನಿರಾಕರಿಸುತ್ತಾರೆ ಎಂದರೆ ಅವರು ಭಂಡರಿದ್ದಾರೆ.
ಜನರಿಗೆ ಸತ್ಯಾಸತ್ಯತೆ ಗೊತ್ತಾಗಬೇಕು ಎಂದರೆ ನ್ಯಾಯಾಂಗ ತನಿಖೆಯಾಗಲಿ. ಅದಕ್ಕೆ ಭಯವೇಕೆ ? ಸತ್ಯ ಹೊರ ಬಂದರೆ ಜನರೇ ತೀರ್ಮಾನ ಮಾಡುತ್ತಾರೆ. ನಮ್ಮ ಮತ್ತು ಅವರ ದಾಖಲೆಗಳು ನ್ಯಾಯಾಂಗ ತನಿಖೆಯ ಮುಂದೆ ಬರಲಿ.
ನಾವು ಸುಳ್ಳು ಹೇಳುತ್ತೇವೆ, ಅವವರೇ ಸತ್ಯವಂತರು ಎನ್ನುವುದಾದರೆ ತನಿಖೆ ಬೇಡ ಎನ್ನುವುದೇಕೆ ? ಅಂದು ಭಂಡತನ ಅಲ್ಲವೇ ? ಹೀಗಾಗಿ ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆಯಾಗಲಿ ಎಂದು ಮತ್ತೆ ಒತ್ತಾಯಿಸುತ್ತೇನೆ. ತನಿಖೆಗೆ ಸರ್ಕಾರ ಆದೇಶ ಮಾಡುವುದಿಲ್ಲ ಎಂದಾದರೆ ಅವರು ಕಳ್ಳತನ ಮಾಡಿದ್ದಾರೆ ಎಂದು ಅರ್ಥ. ನಾವು ತನಿಖೆಗೆ ಆಗ್ರಿಸಿದ ಮೇಲೆ ಕೆಲ ಉಪಕರಣಗಳ ಖರೀದಿಗೆನೀಡಿದ್ದ ಆದೇಶ ರದ್ದು ಮಾಡಲಾಗಿದೆ ಎಂಬುದರ ಬಗ್ಗೆ ನನಗೆ ತಿಳಿಯದು.

ಮಂತ್ರಿಗಳಾಗಿರುವುದೇ ಸುಳ್ಳಾ ?:
ಪತ್ರಿಕಾಗೋಷ್ಠಿಯಲ್ಲಿ ನಿನ್ನೆ ನಾವು ಕೊಟ್ಟಿರುವುದೂ ನಾವು ಕೊಟ್ಟಿರುವುದೂ ಸರ್ಕಾರಿ ದಾಖಲೆಗಳೇ. ಅದು ಸುಳ್ಳು ಎನ್ನುವುದಾದರೆ ನಿನ್ನೆ ಸರ್ಕಾರದ ಪರವಾಗಿಪತ್ರಿಕಾಗೋಷ್ಠಿ ನಡೆಸಿದವರೂ ಮಂತ್ರಿಗಳಾಗಿರುವುದೇ ಸುಳ್ಳಾ ? ಸರ್ಕಾರದಲ್ಲಿ ಇರುವ ದಾಖಲೆಗಳೇ ಸುಳ್ಳಾ?
ನಾವು ಕೊಟ್ಟಿರುವ ದಾಖಲೆಗಳನ್ನು ನಾನು ಸೃಷ್ಟಿ ಮಾಡಿದ್ದಲ್ಲ. ಉದಾಹರಣೆಗೆ ಕೇಂದ್ರ ಸರ್ಕಾರ ಪಿಎಂಒ ಕಚೇರಿಯಿಂದ ಹೊರಡಿಸಿರುವ ಪ್ರಕಟಣೆಯಲಿ 50 ಸಾವಿರ ವೆಂಟಿಲೇಟರ್‍ಗಳನ್ನು ತಲಾ ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ಖರೀದಿಸಲಾಗಿದೆ. ಇದಕ್ಕಾಗಿ ಎರಡು ಸಾವಿರ ಕೋಟಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದೆ.
ಕೇಂದ್ರ ಸರ್ಕಾರ ಹೇಳಿರುವುದು ಸುಳ್ಳು. ಅದು ಸುಳ್ಳು. ನಮಗೆ ಕೊಟ್ಟಿರುವ ವೆಂಟಿಲೇಟರ್‍ಗಳೂ ಕಳಪೆ ಎಂದು ಮಂತ್ರಿಗಳು ಹೇಳಲಿ. ಗುಣಮಟ್ಟದ ವಿಚಾರಕ್ಕೆ ಬರುವುದಾದರೆ ಕಾರುಗಳಲ್ಲಿ ಐಷಾರಾಮಿಯೂ ಇರುತ್ತದೆ. ಸಾಮಾನ್ಯದ್ದೂ ಇರುತ್ತದೆ. ಕೇಂದ್ರ ಸರ್ಕಾರ ಸಹ 18 ಲಕ್ಷ ರೂ. ವೆಚ್ಚದಲ್ಲಿಯೇ ವೆಂಟಿಲೇಟರ್ ಖರೀದಿ ಮಾಡಬುದಿತ್ತು. ಕೇಂದ್ರ ಸಕಾರ 4 ಲಕ್ಷ ರೂ. ವೆಚ್ಚದಲ್ಲಿ ಖರೀದಿ ಮಾಡಿವುದು ಸುಳ್ಳೇ ? ಇದಕ್ಕೆ ಮಂತ್ರಿಗಳು ನೀಡುವ ಉತ್ತರ ಏನು ?

ಕಾರ್ಮಿಕ ಇಲಾಖೆಯಲ್ಲಿ ಒಂದು ಸಾವಿರ ಕೋಟಿ ರೂ.ಗಳ ಅವ್ಯವಹಾರ ಆಗಿದೆ ಎಂದು ಹೇಳಿಲ್ಲ. ಅಷ್ಟು ಖರ್ಚಾಗಿದೆ ಎಂದಿದ್ದೇನೆ. ಆದರೆ ಫುಡ್ ಪ್ಯಾಕೇಟ್ ಕೊಡುವಲ್ಲಿ ಅವ್ಯವಹಾರ ಆಗಿದೆ. ಒಂದು ಸಾವಿರ ಕೋಟಿ ಖರ್ಚಾಗಿದೆ ಅದಕ್ಕೆ ಲೆಕ್ಕ ಕೊಡಿ ಅಂದೆ. ಇವರು 324 ಕೋಟಿ ಮಾತ್ರ ಖರ್ಚು ಆಗಿದೆ. ಎನ್ನುತ್ತಾರೆ. ಆದರೆ ನಿನ್ನೆ ಮಂತ್ರಿಗಳೇ 2118 ಕೋಟಿ ರೂ. ವೆಚ್ಚ ಎಂದಿದ್ದು ಏಕೆ. ಅವರೇ ಸುಳ್ಳು ಲೆಕ್ಕ ಕೊಡುತ್ತಿದ್ದಾರೆ ಎಂಬುದು ಇದರ ಅರ್ಥ.

ನನಗೇನೂ ಗೊತ್ತಿಲ್ಲದೆ ಟಿಕೆಟ್ ಕೊಡಿಸಿದೆ :
ವೈದ್ಯಕೀಯ ಶಿಕ್ಷಣ ಇಲಾಖೆಯ ಕಡತದಲ್ಲಿ ಇರುವ ವಿಚಾರದ ಬಗ್ಗೆ ನಾನು ಹೇಳಿದ್ದು ಏನೆಂದರೆ 815 ಕೋಟಿಗೆ ಪ್ರಸ್ತಾವನೆ ಕಳುಹಿಸಿರುವುದು ನಿಜ. ತಜ್ಞರ ಶಿಫಾರಸು ಇಲ್ಲದೆ ಉಪಕರಣಗಳ ಖರೀದಿಗೆ ಮುಂದಾಗಿರುವುದಾಗಿ ಟಿಪ್ಪಣಿ ಬರೆಯಲಾಗಿದೆ.
ನನಗೇನೋ ಗೊತ್ತಿಲ್ಲದೆ ಸುಧಾಕರ್ ಅವರಿಗೆ ನಾನು ಟಿಕೆಟ್ ಕೊಡಿಸಿದ್ದು. ಖರ್ಚು, ವೆಚ್ಚ, ಪ್ರಸ್ತಾವನೆ. ಮಂಜೂರಾತಿ, ಹಣ ಬಿಡುಗಡೆ ಏನು ಎಂಬುದು ಗೊತ್ತಿಲ್ಲದೆ ನಾನು 13 ಬಜೆಟ್ ಮಂಡಿಸಿದ್ದೇನೆ ಅಲ್ಲವೇ ?
ಸುಧಾಕರ್ ಅವರು ಮಂತ್ರಿಯಾಗಿ ಎಷ್ಟು ವರ್ಷ ಆಯಿತು. ನಾನು ಮೊದಲ ಬಾರಿಗೆ ಮಂತ್ರಿಯಾಗಿದ್ದು ಯಾವಾಗ. ಅವರಿಗೆ ಸ್ವಲ್ಪ ಉಪಕಾರ ಸ್ಮರಣೆ ಇರಬೇಕು. ನಾನು ರಾಜ್ಯ ಮಂತ್ರಿ, ಸಂಪುಟ ದರ್ಜೆ ಮಂತ್ರಿ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದೇನೆ. 13 ಬಾರಿ ಬಜೆಟ್ ಮಂಡಿಸಿದ್ದೇನೆ. ಹೀಗಿರುವಾಗ ಸುಧಾಕರ್ ಅವರೇ ನನಗೇ ಪಾಠ ಹೇಳಿಕೊಟ್ಟರೆ ಹೇಗೆ ?
ಅಧಿಕಾರದ ಅಹಂನಿಂದ ಅವರು ಈ ರೀತಿ ಮಾತನಾಡುತ್ತಾರೆ. ಉಪಕಾರ ಸ್ಮರಣೆ ಮರೆತು ಬಾಯಿಗೆ ಬಂದಂತೆ ಮಾತನಾಡಬಾರದು. ಅಧಿಕಾರ ಬಂದ ಬಳಿಕ ಎಲ್ಲವನ್ನೂ ಮರೆಯಬಾರದು.
ನಿನ್ನೆ ದಾಖಲಾತಿಗಳ ಮೂಲಕ ನಾನು ಮಾತನಾಡಿದ್ದೇನೆ. ಅವರು ಏನಾದರೂ ದಾಖಲೆಗಳನ್ನು ಕೊಟ್ಟಿದ್ದಾರೆಯೇ? ಸಮ್ಮಿಶ್ರ ಸರ್ಕಾರ ಇದ್ದಾಗ ಖರೀದಿ ಮಾಡಿರುವ ವೆಂಟಿಲೇಟರ್ ಗಳ ಬಗ್ಗೆ ಅವರು ಮಾತನಾಡಿದ್ದಾರೆ. ನಾನು ಆಗ ಅಧಿಕಾರದಲ್ಲಿ ಇರಲಿಲ್ಲ. ಮುಖ್ಯಮಂತ್ರಿಯೂ ಆಗಿರಲಿಲ್ಲ. ದಾಖಲೆಗಳು ಅವರ ಬಳಿಯೇ ಇದೆ ಅಲ್ಲವೇ ? ಆ ಬಗ್ಗೆಯೂ ತನಿಖೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಿ. ಯಾರು ತಪ್ಪು ಮಾಡಿದರೂ, ಯಾವಾಗ ತಪ್ಪು ಮಾಡಿದರೂ ತಪ್ಪೇ.
ಸಚಿವರು ಪಾಂಡವರು, ಕೌರವರ ಬಗ್ಗೆ ಮಾತನಾಡಿದ್ದೇನೆ. ಅವರು ಕೌರವರು ಆಗಲಿಕ್ಕೂ ಲಾಯಕ್ಕಿಲ್ಲ. ಮಹಾಭಾರತದ ಪಾಂಡವರು, ಕೌರವರ ವಿಚಾರ ಈಗ ಏಕೆ. ದ್ವಾಪರ ಯುಗದಲ್ಲಿ ನಡೆದಿದ್ದನ್ನು ಈಗ ಈ ವಿಚಾರದಲ್ಲಿ ಎಳೆದು ತರುವುದೇಕೆ ?

ಸಿದ್ದರಾಮಯ್ಯ ಈಸ್ ಸಿದ್ದರಾಮಯ್ಯ :
ಸಿದ್ದರಾಮಯ್ಯ ಈಸ್ ಸಿದ್ದರಾಮಯ್ಯ. ನಾನು ನನ್ನನ್ನು ಬೇರೆಯವರಿಗೆ ಹೋಲಿಕೆ ಮಾಡಿಕೊಳ್ಳುವುದಿಲ್ಲ. ನಾನು ಪಾಂಡವನೂ ಅಲ್ಲ, ಕೌರವನೂ ಅಲ್ಲ, ಐಯಾಮ್ ಸಿದ್ದರಾಮಯ್ಯ ಓನ್ಲಿ.
ಈವತ್ತು ಏನಾದರೂ ನೀತಿ, ನಿಯಮಗಳು ಇದ್ದರೆ ರಾಮಾಯಣ, ಮಹಾಭಾರತವೇ ಅದನ್ನು ಹೇಳಿಕೊಡುವುದು. ನಮಗೆ ರಾಜಕೀಯ ಹೇಳಿಕೊಡುವುದು ರಾಮಾಯಣ, ಮಹಾಭಾರತವೇ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಬೆಂಗಳೂರಿನ ಪೂರ್ವ ಪಶ್ಚಿಮ‌ ಮತ್ತು ಯಲಹಂಕ ವಲಯಗಳ ಕೋವಿಡ್-19 ಉಸ್ತುವಾರಿ ಸಚಿವರುಗಳ ಸಭೆ ನಡೆಸಿದ ಸಿಎಂ

ಬೆಂಗಳೂರು: ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ಬೆಂಗಳೂರಿನ ಪೂರ್ವ ಪಶ್ಚಿಮ‌ ಮತ್ತು ಯಲಹಂಕ ವಲಯಗಳ ಕೋವಿಡ್-19 ಉಸ್ತುವಾರಿ ಸಚಿವರುಗಳು ಹಾಗೂ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಭೆ ನಡೆಸಿದರು.

ಬೆಂಗಳೂರಿನಲ್ಲಿ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಕೋವಿಡ್-19 ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಇಂದು ವಲಯವಾರು ಸಭೆಯನ್ನು‌ ನಡೆಸಿದ ಮುಖ್ಯಮಂತ್ರಿ ಗಳು. ಹೆಚ್ಚು ಹೆಚ್ಚು ಟೆಸ್ಟ್ ಮಾಡಿ. 24 ಗಂಟೆಯ ಒಳಗೆ ವರದಿ‌ ಬರುವಂತೆ ಮಾಡಬೇಕು.
ವಾರ್ಡ್ ಗಳಲ್ಲಿ ಕೋವಿಡ್ – 19 ಬಗ್ಗೆ‌ ಮಾಹಿತಿ ನೀಡುವ ಜಾಹೀರಾತು ಫಲಕಗಳನ್ನು ಹಾಕಬೇಕು.
ಕುಂಟು‌ ನೆಪ ಹೇಳಿ ಕೆಲಸಕ್ಕೆ ಹಾಜರಾಗದ ಅಧಿಕಾರಿಗಳ ವಿರುದ್ದ‌ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೋಳ್ಳಿ ಅಂತ ಸೂಚನೆ ನೀಡಿದರು. ಜೊತೆಗೆ ನಿನ್ನೆಯಂತೆಯೇ 5 T
ಟಾರ್ಗೆಟ್ ಫಿಕ್ಸ್ ಮಾಡಿದ ಮುಖ್ಯಮಂತ್ರಿಗಳು.ನಿಮ್ಮ ನಿಮ್ಮ ವಲಯಗಳಲ್ಲಿ‌ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗಬೇಕು. ಟಾರ್ಗೆಟ್ ರೀಚ್ ಆಗಲೇಬೇಕು ಅಂತ ತಾಕೀತು ಮಾಡಿದರು.

ನಿಮ್ಮ ವಲಯಗಳ ಪ್ರಗತಿ ಬಗ್ಗೆ ಪ್ರತಿ ವಾರ ನನಗೆ ಮಾಹಿತಿ ನೀಡಬೇಕೆಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು. ಕೆಲವು ಕಡೆ ಸೋಂಕಿತರು ತಮ್ಮ ಮೊಬೈಲ್ ‌ನಂಬರ್ ತಪ್ಪಾಗಿ ನೀಡುತ್ತಿರುವ ಕಾರಣ.‌ ಟೆಸ್ಟ್ ಗು‌ ಮುನ್ನ ಓಟಿಪಿ ಅಥವಾ ಬೇರೆ ರೀತಿಯ ದಾಖಲಾತಿಗಳನ್ನು‌ ಪಡೆಯುವಂತೆ ಸೂಚಿಸಲಾಯಿತು

ಬೆಂಗಳೂರು ಪಶ್ಚಿಮ ಕೋವಿಡ್ ಸ್ಥಿತಿಗತಿ ಪರಿಶೀಲನೆ: ಮತ್ತಷ್ಟು ಹೆಚ್ಚುವರಿ ಕ್ರಮಕ್ಕೆ ಡಿಸಿಎಂ ಸೂಚನೆ

ಬೆಂಗಳೂರು: ನಗರದ ಪಶ್ಚಿಮ ವಿಭಾಗದಲ್ಲಿ ಕೋವಿಡ್-19 ನಿಯಂತ್ರಣಕ್ಕಾಗಿ ಬುಧವಾರ ಮಹತ್ವದ ಸಭೆ ನಡೆಸಿದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಮತ್ತಷ್ಟು ಹೆಚ್ಚುವರಿ ಕ್ರಮಗಳನ್ನು ಕೈಗೊಂಡು ಸೋಂಕಿತರಿಗೆ ನೆರವಾಗಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ಒಂದೆಡೆ ಸೋಂಕಿತರನ್ನು ಗುರುತಿಸಿ ಅವರನ್ನು ಆಸ್ಪತ್ರೆಗಳಿಗೆ ಅಥವಾ ಕೋವಿಡ್ ಆರೈಕೆ ಕೇಂದ್ರಗಳಿಗೆ ಶಿಫ್ಟ್ ಮಾಡುವುದು ಹಾಗೂ ಹೋಮ್ ಕೋರಂಟೈನ್ ಅಗಲು ಬಯಸುವವರಿಗೆ ಅಗತ್ಯ ಸೌಕರ್ಯಗಳನ್ನು ಮಾಡುವುದೂ ಸೇರಿದಂತೆ ಅಗತ್ಯವಾದ ಎಲ್ಲ ಕೆಲಸಗಳನ್ನು ಯುದ್ಧೋಪಾದಿಯಲ್ಲಿ ಮಾಡಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು ಡಿಸಿಎಂ.

ಖಾಸಗಿ ಆಸ್ಪತ್ರೆಗಳಿಂದ ಹಾಸಿಗೆಗಳನ್ನು ಪಡೆಯುವ ಬಗ್ಗೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದರೂ ಕೆಲ ಖಾಸಗಿ ಆಸ್ಪತ್ರೆಗಳಿಂದ ಈವರೆಗೂ ಹಾಸಿಗೆಗಳನ್ನು ಪಡೆಯಲು ಸಾಧ್ಯವಾಗಿಲ್ಲ. ರಾಜಾಜಿನಗರ ಮತ್ತು ಮಹಾಲಕ್ಷ್ಮೀ ಲೇಔಟ್’ಗಳಲ್ಲಿ ಖಾಸಗಿ ಆಸ್ಪತ್ರೆಗಳ ಮಾಲೀಕರ ಜತೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಹಾಸಿಗೆಗಳನ್ನು ನೀಡಲು ಅವರು ಒಪ್ಪಿಕೊಂಡಿದ್ದಾರೆ. ಕೂಡಲೇ ಹಾಸಿಗೆಗಳನ್ನು ವಶಕ್ಕೆ ಪಡೆದು ಅವುಗಳನ್ನು ಸೋಂಕಿತರಿಗಾಗಿ ಸಜ್ಜುಗೊಳಿಸಬೇಕು ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಪೀಣ್ಯಾದ ಯುರೋಪಿಯನ್ ಲ್ಯಾಬಿನಲ್ಲಿ ದಿನಕ್ಕೆ 250 ಕೋವಿಡ್ ಪರೀಕ್ಷೆಗಳು ನಡೆಯುತ್ತಿದ್ದು, ಆ ಪ್ರಮಾಣವನ್ನು 1000ಕ್ಕೆ ಹೆಚ್ಚಿಸಬೇಕು. ಪಶ್ಚಿಮ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೌಲಭ್ಯಗಳನ್ನು ಮತ್ತಷ್ಟು ಹೆಚ್ಚಿಸಬೇಕು ಹಾಗೂ ಇಂಥ ಕೇಂದ್ರಗಳಲ್ಲಿ ಬೆಡ್,ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಎಲ್ಲಡೆ ಫೀವರ್ ಕ್ಲೀನಿಕ್ಕುಗಳನ್ನು ಸ್ಥಾಪಿಸಬೇಕು. ಕೋವಿಡ್ ಮತ್ತು ಕೋವಿಡ್’ರಹಿತ ರೋಗಿಗಳನ್ನು ಸಮಾನ ಆದ್ಯತೆಯ ಮೇರೆಗೆ ನೋಡಬೇಕು, ಜತೆಗೆ ಯಾವುದೇ ರೀತಿಯ ಔಷಧಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಡಿಸಿಎಂ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಈ ಭಾಗದ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿಯೂ ಟೆಸ್ಟಿಂಗ್ ಲ್ಯಾಬುಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಬೇಕು. ಆಂಟಿಜನ್ ಟೆಸ್ಟಿಂಗ್ ವ್ಯವಸ್ಥೆ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು. ಒಂದು ಕ್ಷಣವೂ ಮೈಮರೆಯದೇ ಕೆಲಸ ಮಾಡಬೇಕು ಎಂದು ಅವರು ಒತ್ತಿ ಹೇಳಿದರು.

ವಾರ್ಡ್’ಗೊಂದು ಹೆಲ್ಪ್’ಲೈನ್:

ಎಲ್ಲ ವಿಧಾನಸಭೆ ಕ್ಷೇತ್ರಗಳ ಪ್ರತಿ ವಾರ್ಡಿಗೊಂದು ಹೆಲ್ಪ್’ಲೈನ್ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಡಿಸಿಎಂ, ವಿಭಾಗೀಯ ಹೆಲ್ಪ್’ಲೈನ್ ಸಂಖ್ಯೆಯಾದ 080- 68248454 ಗೆ ಸಾರ್ವಜನಿಕರು ಕರೆ ಮಾಡಬಹುದು. ಇದರ ಜತೆಗೆ, ಕೋವಿಡ್’ಗಾಗಿಯೇ ಇರುವ 104, 108, 14410, 1912 ಸಂಖ್ಯೆಗಳಿಗೂ ಕರೆ ಮಾಡಬಹುದು. ನಮ್ಮ ಅಧಿಕಾರಿಗಳು ಸದಾ ಸಜ್ಜಾಗಿರುತ್ತಾರೆ ಎಂಬುದನ್ನು ಜನತೆಯ ಗಮನಕ್ಕೆ ತರಬಯಸುವೆ ಎಂದು ಮಾಹಿತಿ ನೀಡಿದರು.

ಐಸಿಯು ಬೆಡ್ಡುಗಳ ವ್ಯವಸ್ಥೆ:

ಎಲ್ಲ ಆಸ್ಪತ್ರೆಗಳಲ್ಲಿಯೂ ತುರ್ತು ನಿಗಾ ಘಟಕದಲ್ಲಿ ಬೆಡ್’ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಐಸಿಯುನಲ್ಲಿ ಕೇವಲ 4 ಐಸಿಯು ಹಾಸಿಗೆಗಳನ್ನು ಹೊಂದಿದ್ದ ಕೆಸಿ ಜನರಲ್ ಆಸ್ಪತ್ರೆಯಲ್ಲಿ 100 ಐಸಿಯು ಬೆಡ್’ಗಳನ್ನು ಮಾಡಲಾಗುತ್ತಿದೆ. ಆಸ್ಪತ್ರೆಯ ಒಳಗೆ 50 ಮತ್ತು ಆಸ್ಪತ್ರೆಯ ಹೊರಗೆ 50 ಮಾಡ್ಯೂಲರ್ (ಮೊಬೈಲ್) ಐಸಿಯು ಹಾಸಿಗೆಗಳನ್ನು ಹಾಕಲಾಗುತ್ತಿದೆ. ಈ ಪ್ರಕ್ರಿಯೆ ಈಗಾಗಲೇ ಅಂತಿಮ ಹಂತದಲ್ಲಿದೆ . ಇದರ ಜತೆಗೆ ರಾಜಾಜಿನಗರದ ಇಎಸ್‌ಐನಲ್ಲಿಯೂ 50 ಐಸಿಯು ಬೆಡ್ಡುಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಡಿಸಿಎಂ ವಿವರಿಸಿದರು.

ಇಡೀ ವಿಭಾಗದಲ್ಲಿ ವೈದ್ಯರು, ಅರೆ ವೈದ್ಯ ಸಿಬ್ಬಂದಿ, ನರ್ಸುಗಳು, ಆಂಬುಲೆನ್ಸ್, ಆಂಬುಲೆನ್ಸ್ ಚಾಲಕರು, ಔಷಧಗಳು ಕೊರತೆ ಉಂಟಾಗದಂತೆ ಎಚ್ಚರ ವಹಿಸಬೇಕು. ಕೋವಿಡ್ ಸೋಕಿತರಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸದಂತೆ ನೋಡಿಕೊಳ್ಳಬೇಕು. ಈಗಾಗಲೇ ಕೋವಿಡ್ ಕಾರ್ಯಪಡೆಗಳನ್ನು ಸ್ಥಾಪಿಸಲಾಗಿದೆ. ಅವು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಆ ಬಗ್ಗೆ ಗಮನ ಹರಿಸಿ. ಅವುಗಳಲ್ಲಿ ಸೇರ್ಪಡೆಯಾಗಿರುವ ಎಲ್ಲರೂ ಉತ್ತಮವಾಗಿ, ಅರ್ಪಣಾ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಡಿಸಿಎಂ ಹೇಳಿದರು.