ಭೂ ಸುಧಾರಣಾ ಕಾಯಿದೆ, ರೈತ ಸಂಘಟನೆಗಳ ಜೊತೆ ಸೇರಿ ಹೋರಾಟ : ಸಿದ್ದರಾಮಯ್ಯ 

ಬೆಂಗಳೂರು : ಭೂ ಸುಧಾರಣೆ ಕಾಯಿದೆಗೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಯನ್ನು ವಿರೋಧಿಸಿ ರೈತ ಸಂಘಟನೆಗಳ ಜೊತೆಗೂಡಿ ಹೋರಾಟ ರೂಪಿಸಲಾಗುವುದು. ಈ ಕುರಿತು ಕಾಂಗ್ರೆಸ್ ಪಕ್ಷದ ವೇದಿಕೆಯಲ್ಲಿ ಚರ್ಚಿಸುವುದಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ತಮ್ಮ ನಿವಾಸದಲ್ಲಿ ಇಂದು ರೈತ ಸಂಘಟನೆಗಳ ಮುಖಂಡರ ಜೊತೆ ಸುದೀರ್ಘ ಸಮಾಲೋಚನೆ ನಡೆಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.
ನಾವೆಲ್ಲರೂ ತಿದ್ದುಪಡಿಯನ್ನು ವಿರೋಧ ಮಾಡುತ್ತೇವೆ. ಇದು ರೈತರ ಕತ್ತು ಹಿಚುಕುವ ಕರಾಳ ಶಾಸನ. ಸರ್ಕಾರ ರೈತರನ್ನು ಬೀದಿಪಾಲು ಮಾಡಲು ಹೊರಟಿದೆ. ಇದರಿಂದ ಗ್ರಾಮೀಣ ಜನರ ಆರ್ಥಿಕ ಪರಿಸ್ಥಿತಿ ಬುಡಮೇಲು ಆಗುತ್ತದೆ. ಆಹಾರ ಸ್ವಾವಲಂಬನೆಗೆ ಧಕ್ಕೆ ತರುವ ಕುಟಿಲ ಪ್ರಯತ್ನ. ಇದಾಗಿದೆ ಎಂದು ರೈತ ಸಂಘಟನೆಗಳ ಮುಖಂಡರು ಹೇಳಿದ್ದಾರೆ.
ಹಳ್ಳಿ ಮಟ್ಟದಿಂದ ಹೋರಾಟ ಮಾಡಿ ಸಂಘರ್ಷದ ಹಾದಿ ಹಿಡಿಯಲು ನಾವು ತಯಾರು ಎಂದು ಅವರು ಸಭೆಯಲ್ಲಿ ತಿಳಿಸಿದ್ದಾರೆ. ನಾವು ಸಹ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ ಚಳವಳಿ ಆರಂಭಿಸುತ್ತೇವೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.

ಮೊದಲು ವೈದ್ಯಕೀಯ ಉಪಕರಣ ಖರೀದಿಯಲ್ಲಿ ಆಗಿರುವ ಅವ್ಯವಹಾರ ಕುರಿತು ಮೊದಲು ಹೋರಾಟ ಕೈಗೆತ್ತಿಕೊಳ್ಳುತ್ತೇವೆ. ಬಳಿಕ ಭೂ ಸುಧಾರಣಾ ಕಾಯಿದೆಗೆ ಸಂಬಂಧಿಸಿದ ಚಳ¼ವಳಿ ಆರಂಭವಾಗಲಿದೆ ಎಂದು ಹೇಳಿದರು.

ಇದಲ್ಲದೆ, ಎಪಿಎಂಸಿ ಕಾಯಿದೆ, ಇಂಧನ ಕಾಯಿದೆಗೆ ತಿದ್ದುಪಡಿ ಸೇರಿದಂತೆ ವಿವಿಧ ಕಾಯಿದೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ತಿದ್ದುಪಡಿ ಬಗ್ಗೆಯೂ ನಾವು ಹೋರಾಟ ನಡೆಸಲಿದ್ದೇವೆ. ರೈತರು ಹಾಗೂ ಜನ ಸಾಮಾನ್ಯರಿಗೆ ಮಾರಕವಾಗುವಂಥ ತಿದ್ದುಪಡಿಗಳನ್ನು ಉಭಯ ಸರ್ಕಾರಗಳು ಜಾರಿಗೊಳಿಸುತ್ತಿವೆ ಎಂದು ದೂರಿದರು.

ಭೂ ವ್ಯಾಜ್ಯಕ್ಕೆ ಸಂಬಂಧಿಸಿದಂತೆ 13 ಸಾವಿರಕ್ಕೂ ಹೆಚ್ಚು ಕೇಸುಗಳು ನ್ಯಾಯಾಲಯಗಳಲ್ಲಿವೆ. ಒಂದು ವರದಿ ಪ್ರಕಾರ 1.70 ಲಕ್ಷ ಎಕರೆ ಜಮೀನು ಈ ವ್ಯಾಜ್ಯಗಳಿಗೆ ಸಂಬಂಧಿಸಿದೆ. ಒಂದು ಎಕರೆಗೆ 50 ಲಕ್ಷವಾದರೂ 70-80 ಕೋಟಿ ರೂ. ಮೌಲ್ಯದ ಜಮೀನು ಇದಾಗಿದೆ. ಆ ಎಲ್ಲ ಜಮೀನುಗಳು ಖರೀದಿ ಮಾಡಿರುವವರ ವಿರುದ್ಧವಾಗಿದೆ.
ಇದನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬಹುದು. ಆದರೆ, ಕಾಯಿದೆಗೆ ತಿದ್ದುಪಡಿ ತಂದು ಕೇಸುಗಳನ್ನು ವಜಾ ಮಾಡಿರುವುದರಿಂದ ಕೋಟ್ಯಂತರ ರೂ. ಮೌಲ್ಯದ ಜಮೀನುಗಳು ಉಳ್ಳವರ ಪಾಲಾಗುತ್ತಿದೆ ಎಂದು ಹೇಳಿದರು.
ಹೌಸಿಂಗ್ ಸೊಸೈಟಿ, ರಿಯಲ್ ಎಸ್ಟೇಟ್ ಉದ್ಯಮಿಗಳು, ಶ್ರೀಮಂತರು ಜಮೀನಿನ ಮೇಲೆ ಹಣ ಹೂಡಿಕೆ ಮಾಡುತ್ತಾರೆ. ಇದು ಮುಂದೆ ಹಣ ಮಾಡಿಕೊಳ್ಳುವ ಹುನ್ನಾರ. ಅವರ ಒತ್ತಡಕ್ಕೆ ಸರ್ಕಾರ ಮಣಿದಿದೆ ಎಂದು ಸಿದ್ದರಾಮಯ್ಯ ಅವರು ಆರೋಪಿಸಿದರು.

ಸಿಎಂ ಸುಳ್ಳು ಹೇಳಿದ್ದಾರೆ:
ಕೊರೊನಾ ಉಪಕರಣಗಳ ಖರೀದಿ ಸಂಬಂಧ 24 ಗಂಟೆಯಲ್ಲಿ ಮಾಹಿತಿ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದಾರೆ. ಮಾಹಿತಿ ಕೋರಿ ಜುಲೈ 10ರಂದು ನಾನು ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದೇನೆ. 24 ಗಂಟೆ ಎಂದರೆ 12 ದಿನಗಳೇ ? ರಾಜ್ಯದ ಜನತೆಗೆ ಸಿಎಂ ಈ ಸುಳ್ಳು ಹೇಳಿದ್ದಾರೆ. ಮುಖ್ಯ ಕಾರ್ಯದರ್ಶಿಗೇ ಪತ್ರ ಬರೆದರೂ ಈ ವರೆಗೆ ಉತ್ತರವಿಲ್ಲ. ಒಂದು ಇಲಾಖೆ ಮಾತ್ರವಲ್ಲ. ಆರೋಗ್ಯ, ವೈದ್ಯ ಶಿಕ್ಷಣ, ಕಂದಾಯ, ಶಿಕ್ಷಣ, ನಗರಾಭಿವೃದ್ಧಿ, ಸಮಾಜ ಕಲ್ಯಾಣ ಈ ಎಲ್ಲ ಇಲಾಖೆಗಳಲ್ಲಿ ಹಾಗೂ ಜಿಲ್ಲಾಧಿಕಾರಿಗಳು ಖರೀದಿ ಮಾಡಿರುವ ಉಪಕರಣಗಳು ಮತ್ತು ಅದರ ಮೌಲ್ಯದ ಬಗ್ಗೆ ಮಾಹಿತಿ ಕೋರಿದ್ದೇನೆ. ನಮ್ಮ ಬಳಿ ಕೆಲ ಮಾಹಿತಿಗಳಿವೆ. ಅದನ್ನು ನಾಳೆ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಜನರ ಮುಂದೆ ಇಡುತ್ತೇವೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.

ಕಂದಾಯ ಸಚಿವರಿಗೆ ಉಳುಮೆ ಪಾಠ:
ಕಂದಾಯ ಸಚಿವ ಅಶೋಕ್ ಅವರು ರಾಜಕಾರಣಕ್ಕೆ ಬಂದಿದ್ದು ಯಾವಾಗ ? 1974ರಲ್ಲಿ ಅವರು ರಾಜಕಾರಣದಲ್ಲಿ ಇದ್ದರೆ ? ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯಿಲಿ ಅಥವಾ ಕಾಗೋಡು ತಿಮ್ಮಪ್ಪ ಅವರನ್ನು ಕೇಳಿದರೆ ಭೂ ಸುಧಾರಣೆ ಕಾಯಿದೆ ಜಾರಿಗೆ ಬಂದ ಬಗ್ಗೆ ಹೇಳುತ್ತಾರೆ. ಅದರ ಇತಿಹಾಸ ವಿವರಿಸುತ್ತಾರೆ. ಕಂದಾಯ ಸಚಿವರಾದ ತಕ್ಷಣ ಎಲ್ಲ ಮಾಹಿತಿ ಅವರ ಬಳಿ ಇರುವುದೇ ? ಎಂದಾದರೂ ಅವರು ಹೊಲ ಉಳುಮೆ ಮಾಡಿದ್ದಾರೆಯೇ ? ನೇಗಿಲು ಹಿಡಿದಿದ್ದಾರೆಯೇ ? ಎಂದು ಪ್ರಶ್ನಿಸಿದರು.

ನಮ್ಮ ಮನೆಯಲ್ಲಿ ಕೆಲಸದವರ ಜೊತೆ ನಾನೂ ಹೊಲ ಉಳುಮೆ ಮಾಡಲು ಹೋಗುತ್ತಿದ್ದೆ. ನೆಗಿಲ ಹಿಡಿ ಹಿಡಿದು ಅಂಗೈ ಗಾಯವಾಗುತ್ತಿತ್ತು. ನಾನು ಈಗಲೂ ನೇಗಿಲು ಕಟ್ಟಬಲ್ಲೆ, ಕುಂಟೆ ಕಟ್ಟಬಲ್ಲೆ, ಹಲುಬೆ ಹೊಡೆಯಬಲ್ಲೆ, ಮಟ್ಟ ಹೊಡೆಯಬಲ್ಲೆ, ಹೊಲ ಉಳುಮೆ ಮಾಡಬಲ್ಲೆ.
ರೈತನಾಗಿ ಈ ಎಲ್ಲವನ್ನೂ ಅಶೋಕ್ ಮಾಡಿದ್ದಾರೆಯೇ ? ಪ್ರಧಾನಿ ನರೇಂದ್ರ ಮೋದಿಯವರು ಹೊಲ ಉಳುಮೆ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ನಾನು ಚಹಾ ಮಾರಿದ್ದೇನೆ ಎಂದವರು ತಿಳಿಸಿದ್ದಾರೆ. ಕಂದಾಯ ಸಚಿವರಾದವರು ಈ ಎಲ್ಲವನ್ನೂ ತಿಳಿದುಕೊಳ್ಳಬೇಕು. ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತರುವುದರಿಂದ ಏನೇನು ಅನಾಹುತ ಆಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು. ಅಶೋಕ್ ಅವರಿಗೆ ಏನೂ ಗೊತ್ತಿಲ್ಲ ಎಂದು ಹೇಳುವುದಿಲ್ಲ. ಈ ಎಲ್ಲವನ್ನೂ ತಿಳಿದುಕೊಳ್ಳುವುದು ಒಳ್ಳೆಯದು ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.
ರೈತರ ಜೊತೆ ನಡೆದ ಸಭೆಯಲ್ಲಿ ಪಕ್ಷದ ಹಿರಿಯ ನಾಯಕರಾದ ಡಾ. ಎಚ್.ಸಿ. ಮಹಾದೇವಪ್ಪ, ರಾಮಲಿಂಗಾರೆಡ್ಡಿ, ರಮೇಶ್ ಕುಮಾರ್, ನಸೀರ್ ಅಹಮದ್ ಅವರು ಭಾಗವಹಿಸಿದ್ದರು. ರೈತ ಸಂಘಟನೆಗಳ ಪ್ರಮುಖರಾದ ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರ, ಚಾಮರಸಮಾಲಿ ಪಾಟೀಲ್, ವೀರಸಂಗಯ್ಯ, ಗೋಪಾಲ್ ಮತ್ತಿತತರರು ಹಾಜರಿದ್ದರು.

ಅಭಿಮಾನಿಗಳ ಮಡಿಲಿಗೆ‌ ಮನದಾಳದ ಮಾತು ಒಪ್ಪಿಸಿದ ಎಚ್ಡಿಕೆ

ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರ ಪತನವಾಗಿ ಇಂದಿಗೆ ಒಂದು ವರ್ಷ ಕಳೆದಿವೆ. ಈ ಹಿನ್ನೆಲೆಯಲ್ಲಿ ಎಚ್ಡಿಕೆ ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ, ಮುಖಂಡರಿಗೆ ಸುದೀರ್ಘ ಪತ್ರವೊಂದರ ಮೂಲಕ ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ.

ನಾನು ಎಂದಾದರೂ ಈ ನಾಡಿನ ಮುಖ್ಯಮಂತ್ರಿಯಾಗುತ್ತೇನೆ ಎಂದು ಕನಸನ್ನೂ ಕಂಡವನಲ್ಲ. ಈ ಮಾತನ್ನು ನಾನು ಮತ್ತೆ ಮತ್ತೆ ಹೇಳುತ್ತಲೆ ಬಂದಿದ್ದೇನೆ. ಮೊದಲ ಸಲ ಶಾಸಕನಾದ ಸಂದರ್ಭದಲ್ಲೆ ರಾಜಕೀಯ ಸನ್ನಿವೇಶವೊಂದು ನಾನು ಮುಖ್ಯಮಂತ್ರಿಯನ್ನಾಗುವ ಅವಕಾಶವನ್ನು ತಂದುಕೊಟ್ಟಿತು. ಬಹುಶಃ ಈ ರಾಜ್ಯದ ಜಡ್ಡುಗಟ್ಟಿದ ರಾಜಕೀಯ ನಿರ್ವಾತದಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ದಿಗೆ ಹೊಸತೊಂದು ಹೊಳಹುವುಳ್ಳ, ಚಲನಶೀಲವುಳ್ಳ , ವ್ಯಕ್ತಿಗತ ನೆಲೆಯಿಂದ ಸಾಮುದಾಯಿಕ ನೆಲೆಯವರೆಗೂ ಜನರ ದುಃಖ-ದುಮ್ಮಾನಗಳಿಗೆ ಮಿಡಿಯುವ, ದುಡಿಯುವ ತಾಯ್ತನದ ಸೇವಕನನ್ನು ಕಾಣುವ ನಿಮ್ಮ ಹಂಬಲ-ಹರಕೆಯ ಫಲವೆ ನಾನು ಮುಖ್ಯಮಂತ್ರಿಯಾಗಿದ್ದು ಎಂದು ಎಲ್ಲಾ ಕಾಲಕ್ಕೂ ಭಾವಿಸಿದ್ದೇನೆ.

ಯಕಶ್ಚಿತ್ ‘ಹೆಚ್. ಡಿ ಕುಮಾರಸ್ವಾಮಿ’ ಆಗಿದ್ದ ನನ್ನನ್ನು ‘ಕುಮಾರಣ್ಣ’ ನನ್ನಾಗಿಸಿದ ನಿಮ್ಮ ಪ್ರೀತಿ,ವಿಶ್ವಾಸ ಎಂಬುದು ಎಲ್ಲಾ ಕಾಲಕ್ಕೂ ‘ರಾಜಕೀಯ’ ವನ್ನು ಮೀರಿದ್ದಾಗಿದೆ ಎಂಬುದನ್ನು ಬಲ್ಲೆ. ಅಧಿಕಾರ, ಸ್ಥಾನ-ಮಾನ , ಗೌರವಗಳು ಎಂದಿಗೂ ಶಾಶ್ವತವಲ್ಲ. ನಾನು ಅಧಿಕಾರದಲ್ಲಿದ್ದಾಗಲೂ, ಇಲ್ಲದಿದ್ದಾಗಲೂ ನೀವು ಇಟ್ಟ ಪ್ರೀತಿ-ವಿಶ್ವಾಸಗಳಿಗೆ ಎಂದಿಗೂ ದ್ರೋಹ ಬಗೆದಿಲ್ಲ. ಆದರೆ ನಾಡಿನ ಏಳಿಗೆಗೆ , ಜನರ ಹಿತ ಕಾಯುವಲ್ಲಿ ನಿರೀಕ್ಷಿತ ಗುರಿಯನ್ನು ತಲುಪಲಾಗಿಲ್ಲ ಎಂಬ ನೋವು ನನ್ನನ್ನು ಸದಾ ಕಾಡುತ್ತಲೆ ಇದೆ. ಇಂತಹ ಕಾರಣಗಳಿಗಾಗಿಯೇ ಜನರ ನೋವು-ಸಂಕಟಗಳನ್ನು ಕಂಡಾಗ ಕರುಳ ಬಳ್ಳಿಯ ನಂಟಿನ ಸಂಕಟದಂತೆ ನಾನು ಮತ್ತೆ ಮತ್ತೆ ನನ್ನ ಮಿತಿಯನ್ನೂ ಮೀರಿ ಕಣ್ಣೀರಾಗುತ್ತೇನೆ.

ರಾಜಕಾರಣವೆಂದರೆ ಕೊಟ್ಟ ಕುದುರೆಯನ್ನು ಏರಲಾಗದೆ ಬಸವಳಿದವರೂ ಇದ್ದಾರೆ. ಕುಂಟ ಕುದುರೆಯನ್ನು ಏರಿ ಜನರ ದುಃಖ ದುಮ್ಮಾನಗಳಿಗೆ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿದವರು ಇದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತ್ರ ಯಶಸ್ಸು ಮತ್ತು ಸೋಲು ಕಂಡವರ ಸೋದಾಹರಣ ಉದಾಹರಣೆಗಳು ಬಹಳಷ್ಟಿವೆ. ಇದು ಪ್ರಜಾಪ್ರಭುತ್ವದ ಸೌಂದರ್ಯ ಮತ್ತು ದುರಂತವೂ ಹೌದು. ರಾಜ, ಮಹಾರಾಜರುಗಳು, ಪಾಳೇಗಾರರ ಆಡಳಿತದಲ್ಲಿಯೂ ಇತಿಹಾಸದುದ್ದಕ್ಕೂ ಇಂತಹ ನೂರಾರು ತಾಜಾ ನಿದರ್ಶನಗಳು ಅನುಚಾನವಾಗಿ ನಡೆದಿವೆ. ಹಾಗೆ ಎಂದ ಮಾತ್ರಕ್ಕೆ ನಾನು ಗೆಲುವುಗಳಿಂದ ಬೀಗಿಲ್ಲ. ಸೋಲುಗಳಿಂದ ಧೃತಿಗೆಟ್ಟಿಲ್ಲ. ಇಂತಹ ಮನೋಬಲಕ್ಕೆ ಜನರಿಟ್ಟಿರುವ ಪ್ರೀತಿ, ನಂಬಿಕೆಗಳೇ ಕಾರಣ.

೨೦೧೮ ರಲ್ಲಿ ಜಾತ್ಯತೀತ ಜನತಾದಳ ಪಕ್ಷ ಗಳಿಸಿದ್ದು ಕೇವಲ ೩೭ ಸ್ಥಾನಗಳಷ್ಟೇ. ಯಾವ ಪಕ್ಷಗಳಿಗೂ ಮತದಾರ ಬಹುಮತದ ಸ್ಪಷ್ಟ ಆದೇಶ ಕೊಟ್ಟಿರಲಿಲ್ಲ. ಅಧಿಕಾರದ ಚುಕ್ಕಾಣಿ ಹಿಡಿಯುವ ಅತೀವ ನಿರೀಕ್ಷೆ ಹೊಂದಿದ್ದ ಭಾರತೀಯ ಜನತಾ ಪಕ್ಷ ಗದ್ದುಗೆಯ ಸನಿಹದಲ್ಲಿ ಮುಗ್ಗರಿಸಿ ಬಿತ್ತು. ಆನಂತರದ ಸ್ಥಾನ ಪಡೆದಿದ್ದ ಕಾಂಗ್ರೆಸ್ ಬಿಜೆಪಿಗೆ ಅಧಿಕಾರ ತಪ್ಪಿಸಲು ಜೆಡಿಎಸ್ ನೊಂದಿಗೆ ದೋಸ್ತಿಗೆ ಮುಂದಾಗಿ ಬೇಷರತ್ ಬೆಂಬಲವನ್ನು ವ್ಯಕ್ತಪಡಿಸಿ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಮುಖ್ಯಮಂತ್ರಿ ಗಾದಿಯನ್ನೇ ಬಿಟ್ಟುಕೊಟ್ಟಿತು.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನನ್ನ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಅಧಿಕಾರದ ಕನಸು ಭಗ್ನಗೊಂಡಿದ್ದ ಬಿಜೆಪಿ ಆ ಕ್ಷಣದಿಂದಲೆ ನನ್ನ ನೇತೃತ್ವದ ದೋಸ್ತಿ ಸರ್ಕಾರ ‘ಅಸಮರ್ಥ ಸರ್ಕಾರ’ ಎಂದು ಬೊಬ್ಬೆ ಹೊಡೆಯತೊಡಗಿತು. ನಾನು ಪ್ರಮಾಣವಚನ ಸ್ವೀಕರಿಸಿದ ಮರುಕ್ಷಣದಿಂದಲೇ ನಮ್ಮ ದೋಸ್ತಿ ಸರ್ಕಾರವನ್ನು ಕೆಡವಲು ಬಿಜೆಪಿ ಹತ್ತಾರು ಬಾರಿ ಕುಟಿಲ ರಾಜಕೀಯ ತಂತ್ರಗಳನ್ನು ಬಳಸಿ, ಮುಖಭಂಗವನ್ನೂ ಅನುಭವಿಸಿತು. ೧೪ ತಿಂಗಳು ನನ್ನ ಅಧಿಕಾರಾವಧಿ ಮುಗಿಯುವ ಬೆನ್ನಲೇ ವಾಮಮಾರ್ಗವನ್ನು ಅನುಸರಿಸಿ ಜನಪರ ಸರ್ಕಾರವನ್ನು ಕೆಡವಲು ಆಪರೇಷನ್ ಕಮಲದ ಮೂಲಕ ಮತ್ತೊಮ್ಮೆ ಪ್ರಜಾಪ್ರಭುತ್ವದ ಬುಡಕ್ಕೆ ಕೊಡಲಿ ಪೆಟ್ಟು ಹಾಕುವಲ್ಲಿ ಬಿಜೆಪಿ ಕೈ ಮೇಲಾಯಿತು. ಕುದುರೆ ವ್ಯಾಪಾರ ರಾಜಾರೋಷವಾಗಿ ನಡೆಯಿತು. ರಾಜ್ಯದ ಪ್ರಜ್ಞಾವಂತ ಜನರು ಇವೆಲ್ಲಾ ಅಪಸವ್ಯದ ಪ್ರಹಸನಗಳಿಗೆ ಮೂಕಸಾಕ್ಷಿಯಾದರು. ಅದು ಒತ್ತಟ್ಟಿಗಿರಲಿ.
ಇದು ಬಿಜೆಪಿಯ ಕಥೆಯಾದರೆ , ರಾಜ್ಯ ಕಾಂಗ್ರೆಸ್ ನಾಯಕರ ಒಂದು ವರ್ಗ ಹೈಕಮಾಂಡ್ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಜೆಡಿಎಸ್ ಗೆ ಮುಖ್ಯಮಂತ್ರಿ ಹುದ್ದೆ ನೀಡಿದ್ದನ್ನು ಸಹಿಸಿಕೊಳ್ಳಲಾಗದೆ ನಾನು ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಅಸಹನೆಯ ಕೆಂಡದುಂಡೆ ಉಗುಳುತ್ತಿತ್ತು.

ಕಾಂಗ್ರೇಸ್ ನ ಆ ಗುಂಪು ಒಂದಷ್ಟು ಕಾಲಾವಕಾಶವನ್ನು ಹೈಕಮಾಂಡ್ ಕೊಟ್ಟಿದ್ದರೆ ಜೆಡಿಎಸ್ ಪಕ್ಷವನ್ನು ವಿಭಜಿಸುವ ಕೆಲಸ ಮಾಡುತ್ತಿದ್ದೆವು. ನಾವೇ ಅಧಿಕಾರದ ಮುಂಚೂಣಿಯಲ್ಲಿ ಇರುತ್ತಿದ್ದೆವು ಎಂದು ನನ್ನ ಸರ್ಕಾರವನ್ನು ಕೆಡವಲು ರಹಸ್ಯ ಕಾರ್ಯಸೂಚಿಯ ಒಳ ತಂತ್ರಗಳಿಗೆ ಮೊರೆಹೋಗಿದ್ದು ಇನ್ನು ಹಚ್ಚಹಸಿರಾಗಿದೆ.

ಸಿದ್ದರಾಮಯ್ಯ ಸರ್ಕಾರದ ಬಜೆಟ್ ನ ಲೇಖಾನುದಾನ ಪಡೆದು ಸರ್ಕಾರ ಮುಂದುವರಿಸಿದರೆ ಸಾಕು. ಹೊಸದಾಗಿ ಬಜೆಟ್ ಬೇಡ ಎಂದು ಕಾಂಗ್ರೆಸ್ ನ ಕೆಲವರು ಒತ್ತಡ ತಂದರು. ಆದರೆ ರೈತರ ಸಾಲ ಮನ್ನಾ ಮಾಡುವ ಸಲುವಾಗಿ ಹೊಸದಾಗಿ ಎರಡು ಬಾರಿ ಬಜೆಟ್ ಮಂಡಿಸಿ 25 ಸಾವಿರ ಕೋಟಿ ರೂಪಾಯಿಗಳ ರೈತರ ಸಾಲ ಮನ್ನಾ ಹಣ ಹಂಚಿಕೆಾಡಿದೆ. ಹಾಗಂತ ಸಿದ್ದರಾಮಯ್ಯ ಅವರ ಸರ್ಕಾರದ ಯೋಜನೆಗಳನ್ನು ನಿಲ್ಲಿಸಿರಲಿಲ್ಲ. ಮುಂದುವರಿಸಿಕೊಂಡು ಬಂದೆ. ಆದಾಗ್ಯೂ ಅವರಿಗೆ ತೃಪ್ತಿ ಆಗಿರಲಿಲ್ಲ. 14 ತಿಂಗಳ ಅವಧಿಯಲ್ಲಿ ಯಾವುದೇ ಲೋಪವನ್ನು ಮಾಡಲಿಲ್ಲ. ತಮ್ಮನ್ನು ತಾವೇ ಸಮಾಧಾನ ಪಡಿಸಿಕೊಳ್ಳುವಂತೆ ಲೋಕಸಭಾ ಚುನಾವಣೆ ಮುಗಿಯಲಿ, ಅಲ್ಲಿಯವರಿಗೆ ತಡೆಯಿರಿ ಎಂಬ ‘ಸಿದ್ಧೌಷಧ’ ಮಂತ್ರ ಜಪಿಸುತ್ತಲೇ ಕಾಂಗ್ರೆಸ್ಸಿಗರು ಬಂದರು. ಅದು ಜಗಜ್ಜಾಹೀರಾಯಿತು.

ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ನನ್ನ ಸರ್ಕಾರ ತೆಗೆಯುವ ವಿಷಯದಲ್ಲಿ ಎಷ್ಟೊಂದು ಒಳ ಮತ್ತು ಕುಟಿಲ ತಂತ್ರಗಳ ಮೊರೆಹೋದರು ಎಂಬುದನ್ನು ಆ ದೊಡ್ಡ ನಾಯಕರೇ ಆತ್ಮಾವಲೋಕನ ಮಾಡಿಕೊಳ್ಳಲಿ.
ಕಾಂಗ್ರೆಸ್ ಜೊತೆಗೆ ಮೈತ್ರಿಗೆ ಜೆಡಿಎಸ್ ಎಂದೂ ಮುಂದಾಗಿರಲಿಲ್ಲ. ಮುಂದೆಯೂ ಕೂಡ ಮೈತ್ರಿಗೆ ನಾವು ಹಪಾಹಪಿಸುತ್ತಿಲ್ಲ.

ಕೊರೋನಾಗೆ ಲಾಕ್ಡೌನ್ ಪರಿಹಾರ ಅಲ್ಲ, ನಾಳೆಯಿಂದ ಲಾಕ್ ಡೌನ್ ಇರಲ್ಲ; ಸಿಎಂ

ಬೆಂಗಳೂರು: ಕೊರೋನಾಗೆ ಲಾಕ್ಡೌನ್ ಪರಿಹಾರ ಅಲ್ಲ ಬೆಂಗಳೂರಿನಲ್ಲಿ ಇನ್ಮುಂದೆ ಲಾಕ್ಡೌನ್ ಇರಲ್ಲ ರಾಜ್ಯದ ಎಲ್ಲೂ ಲಾಕ್ಡೌನ್ ಇರಲ್ಲ ಆದ್ರೆ ಕಂಟೈನ್ಮೆಂಟ್ ವಲಯದಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗುತ್ತೆ ಅಂತಾ ಸಿಎಂ ಯಡಿಯೂರಪ್ಪ ಪ್ರಕಟಿಸಿದ್ರು.

ಯೂಟ್ಯೂಬ್ ಲೈವ್ ಭಾಷಣ ಮಾಡಿದ ಯಡಿಯೂರಪ್ಪ
ರಾಜ್ಯದಲ್ಲಿ ಕೊರೋನಾ ಆರಂಭದಲ್ಲಿ ಕಡಿವಾಣ ಹಾಕಲು ಯಶಸ್ವಿಯಾಗಿದ್ವಿ ಆದ್ರೆ ಇತ್ತೀಚೆಗೆ ಬೆಂಗಳೂರಿನಲ್ಲಿ ಸೋಂಕು ಹೆಚ್ಚಳ ಆಗಿದೆ. ದೇಶಾದ್ಯಂತ ಕೊರೊನಾ ಬಗ್ಗೆ ವ್ಯಾಪಕ ಚರ್ಚೆ ನಡಿತಾ ಇದೆ. ಕೊರೋನಾ ವಾರಿಯರ್ಸ್ ಬದುಕು ಮುಡಿಪುಟ್ಟು ಕೆಲಸ ಮಾಡ್ತಿದಾರೆ ನಾವು ಬದುಕಲು ಕೊರೋನಾ ನಿಯಮಗಳ ಪಾಲನೆ ಮಾಡಬೇಕು ಜನ ಮಾಸ್ಕ್, ಸಾಮಾಜಿಕ ಅಂತರ ನಿಯಮ ಪಾಲಿಸಬೇಕು ಎಂದು ಸೂಚನೆ ನೀಡಿದ್ರು.

ಕೊರೋನಾ ತಡೆಗೆ ತಜ್ಞರ ಸಲಹೆ 5 ಟಿ ಬಹಳ‌ ಮುಖ್ಯ
ಟ್ರೇಸ್, ಟ್ರ್ಯಾಕ್, ಟೆಸ್ಟ್ , ಟ್ರೀಟ್ ಮೆಂಟ್, ಟೆಕ್ನಾಲಜಿಗಳೇ 5 ಟಿ
ಇವುಗಳನ್ನು ಪರಿಣಾಮಕಾರಿ ಆಗಿ ರಾಜ್ಯ ಅಳವಡಿಸಿಕೊಂಡಿದೆ
ಶೇ.5 ರಷ್ಟು ಸೋಂಕಿತರಿಗೆ ವೆಂಟಿಲೇಟರ್ ಅಗತ್ಯವಿದೆ, ರೋಗಲಕ್ಷಣ ಇಲ್ಲದವರಿಗೆ ಆಸ್ಪತ್ರೆ ಅಗತ್ಯ ಇಲ್ಲ ಅಂಥವರು ಹೋಂ ಐಸೋಲೇಷನ್ ಅಥವಾ ಸಿಸಿಸಿಗಳಲ್ಲಿ ದಾಖಲಾಗಬೇಕು, ಒಟ್ಟು 11530 ಬೆಡ್ ಗಳು ಬೆಂಗಳೂರಿನಲ್ಲಿವೆ, ಬೆಡ್ ಗಳ ಹಂಚಿಕೆಗೆ ಕೇಂದ್ರೀಕೃತ ವ್ಯವಸ್ಥೆ ಮಾಡಲಾಗಿದೆ. ಕೊರೋನಾ ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡ್ತಾ ಇದ್ದೇವೆ ಜನ ಆತಂಕ ಪಡಬಾರದು ಎಂದು ಕರೆ ನೀಡಿದ್ರು.

ಕೊರೋನಾ ಸೋಂಕಿತರು ಧೈರ್ಯಗೆಡಬೇಡಿ ಕೆಲವರು ಆತ್ಮಹತ್ಯೆ ಪ್ರಯತ್ನ ಮಾಡ್ಕೋತಿದಾರೆ ಯಾರೂ ಆತ್ಮಹತ್ಯೆ ಯತ್ನಕ್ಕೆ ಮುಂದಾಗಬೇಡಿ ಶೇ‌ 90 ಜನ ಕೊರೋನಾ ಬಂದವರು ಗುಣಮುಖ ಆಗ್ತಿದಾರೆ ಎಂದ್ರು.

ಸ್ಯಾಂಪಲ್ ನೀಡಿದ 24 ಗಂಟೆಗಳಲ್ಲಿ ವರದಿ ಬರಲು ಕ್ರಮ ಕೈಗೊಳ್ಳಲಾಗಿದೆ ಖಾಸಗಿ ಆಸ್ಪತ್ರೆಗಳ ಗೊಂದಲ, ಸಮಸ್ಯೆ ಬಗೆಹರಿದಿದೆ ಬೆಂಗಳೂರಿನಲ್ಲಿ ಎಂಟು ವಲಯಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಸಚಿವ, ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ ಎಂದ್ರು.

ಪ್ರತಿಪಕ್ಷಗಳು ಟೀಕೆ ಟಿಪ್ಪಣಿ ಬದಲು ಸಲಹೆ ಕೊಡಲಿ ವಸ್ತುಪ್ರದರ್ಶನ ಕೇಂದ್ರದ ಕೋವಿಡ್ ಸೆಂಟರ್ ನಲ್ಲಿ 7.15 ಕೋಟಿ ರೂ.ಗೆ ಉಪಕರಣಗಳ ಖರೀದಿ ಮಾಡಲಾಗಿದೆ.ಇದರಲ್ಲಿ ಭ್ರಷ್ಟಾಚಾರದ ಆರೋಪ ಸತ್ಯವಲ್ಲ. ಸಿದ್ದರಾಮಯ್ಯ ಇವತ್ತು ಬಿಐಇಸಿಗೆ ಭೇಟಿ ಕೊಟ್ಟಿದ್ರು ಪ್ರತಿಪಕ್ಷಗಳಿಗೆ ಗೊಂದಲ ಬೇಡ ಅಗತ್ಯ ದಾಖಲೆ ಒದಗಿಸುತ್ತೇವೆ, ಪರಿಶೀಲಿಸಬಹುದು.ಬಿಐಇಸಿಯಲ್ಲಿ ಸೋಂಕಿತರು ಬಳಸಿದ ಹಾಸಿಗೆಗಳನ್ನು ಬೆಂಕಿಯಲ್ಲಿ ಸುಡಲಿದ್ದೇವೆ ಮಂಚಗಳನ್ನಷ್ಟೇ ಬಳಕೆ ಮಾಡಲಿದ್ದೇವೆ, ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಒಂದು ರೂ. ಸಹ ಅವ್ಯವಹಾರ ಆಗಿಲ್ಲ ಎಂದು ದಾಖಲೆ ಪರಿಶೀಲನೆಗೆ ಸಿದ್ದರಾಮಯ್ಯಗೆ ಸಿಎಂ ಆಹ್ವಾನ ನೀಡಿದ್ರು. ಬೇರೆ ಬೇರೆ ಜಿಲ್ಲೆಗಳಲ್ಲಿ ಜನ ನರಳ್ತಿದ್ದಾರೆ ಪ್ರತಿಪಕ್ಷಗಳು ಗೊಂದಲ ಸೃಷ್ಟಿಸಬಾರದು ಅಂತಾ ಮನವಿ ಮಾಡಿದ್ರು.

ಮಾಧ್ಯಮದವರಿಗೆ ಅಭಿನಂದನೆ ಸಲ್ಲಿಸ್ತೇನೆ ಕಳೆದ ನಾಲ್ಕೈದು ತಿಂಗಳಿಂದ ಮಾಧ್ಯಮಗಳಿಂದ ಸಂಪೂರ್ಣ ಬೆಂಬಲ ಸಿಕ್ಕಿದೆ
ಮಾಧ್ಯಮಗಳ ಪಾತ್ರ ಮುಂದೆ ದೊಡ್ಡದಾಗಿ ಅಗತ್ಯವಿದೆ
ಮಾಧ್ಯಮಗಳ ಸಹಕಾರ ಭವಿಷ್ಯದಲ್ಲಿ ನಮಗೆ ಅಗತ್ಯ
ಮಾಧ್ಯಮ ಸ್ನೇಹಿತರು ಇನ್ನೂ ಹೆಚ್ಚಿನ ನೆರವು ಕೊಡಬೇಕು
ಜನರಲ್ಲಿ ಮಾಧ್ಯಮಗಳು ಧೈರ್ಯ ತುಂಬಬೇಕು ಎಂದ್ರು.

ಅಗತ್ಯ ಆಂಬುಲೆನ್ಸ್ ಗಳ ವ್ಯವಸ್ಥೆ ಮಾಡಲಾಗಿದೆ ಬೂತ್ ಗಳಲ್ಲಿ ಆಂಬುಲೆನ್ಸಗಳ ವ್ಯವಸ್ಥೆ ಮಾಡ್ತೇವೆ ಸರ್ಕಾರಕ್ಕೆ ಆರ್ಥಿಕ‌ ಸ್ಥಿತಿ ಸುಧಾರಿಸಿಕೊಳ್ಳಬೇಕು ಜನ ಸಹಕಾರ ಕೊಡಬೇಕು ಎಂದು ಸಿಎಂ ಮನವಿ ಮಾಡಿದ್ರು.

ಕಾಳಸಂತೆಗೆ ಕಡಿವಾಣ ಹಾಕಲು ರೆಮಿಡಿಸ್ವಿಯರ್‌ ಔಷಧಿ ಸರ್ಕಾರದ ಮೂಲಕ ಖಾಸಗಿ ಆಸ್ಪತ್ರೆಗಳಿಗೆ ಪೂರೈಕೆ – ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಹತ್ವದ ನಿರ್ಣಯ

ಫೈಲ್ ಫೋಟೋ

ಬೆಂಗಳೂರು – ಜುಲೈ 21, 2020: ನಿನ್ನೆ ಅಪೂಣ೯ಗೊಂಡಿದ್ದ ಕೋವಿಡ್‌ ಟಾಸ್ಕ್ ಫೋಸ್‌೯ ಸಭೆ ಇಂದು ನಡೆಯಿತು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಅಧಿಕೃತ ಕಾಯ೯ ನಿಮಿತ್ತ ಹುಬ್ಬಳ್ಳಿಗೆ ತೆರಳಿದ್ದರಿಂದ ಅವರ ಹೊರತಾಗಿ ಎಲ್ಲ ಸಚಿವರು, ಸಕಾ೯ರದ ಮುಖ್ಯ ಕಾಯ೯ದಶಿ೯ಗಳು, ಇತರೆ ಇಲಾಖೆಗಳ ಹಿರಿಯ ಅಧಿಕಾರಿಗಳು ಮತ್ತು ತಜ್ಞರು ಸಭೆಯಲ್ಲಿ ಪಾಲ್ಗೊಂಡು ಕೆಲ ಮಹತ್ವದ ನಿಧಾ೯ರಗಳನ್ನು ಕೈಗೊಳ್ಳಲಾಯಿತು.

ಟಾಸ್ಕ್ ಫೋರ್ಸ್ ಸಭೆಯ ಮುಖ್ಯಾಂಶಗಳು
• ಪ್ರಮುಖವಾಗಿ ನಾಲ್ಕು ಲಕ್ಷ ರಾಪಿಡ್ ಆಂಟಿಜನ್‌ ಕಿಟ್ ಮತ್ತು ಐದು ಲಕ್ಷ ಕಿಟ್‌ ಖರೀದಿಗೆ ಘಟನೋತ್ತರ ಅನುಮೋದನೆ ನೀಡಲಾಗಿದೆ.

• ಕೋವಿಡ್‌ ನಿವ೯ಹಣೆಗೆ ಹೆಚ್ಚುವರಿ ಔಷಧ ಖರೀದಿಸಲು ಅನುಮೋದನೆ ನೀಡಲಾಗಿದೆ.

• ರಾಪಿಡ್ ಆಂಟಿಜನ್‌ ಟೆಸ್ಟ್‌ಗಳಿಗೆ ಸಂಬಂಧಿಸಿದಂತೆ ಸಕಾ೯ರ ಕಳುಹಿಸುವ ರೋಗಿಗಳಿಗೆ ಎರಡು ಸಾವಿರ ರೂ. ಮತ್ತು ಖಾಸಗಿಯಾಗಿ ಪರೀಕ್ಷೆಗೆ ಬಂದವರಿಗೆ ಮೂರು ಸಾವಿರ ರೂ. ಶುಲ್ಕ ನಿಗದಿಗೆ ತೀಮಾ೯ನಿಸಲಾಗಿದೆ.

• ಖಾಸಗಿ ಆಸ್ಪತ್ರೆಗಳಲ್ಲಿ ಇರುವ ಒಟ್ಟು ಹಾಸಿಗೆ ಸಾಮಥ್ಯ೯ದಲ್ಲಿ ಶೇಕಡಾ 50%ರಷ್ಟನ್ನು ಕೋವಿಡ್‌ ಚಿಕಿತ್ಸೆಗಾಗಿ ಸಕಾ೯ರಕ್ಕೆ ನೀಡಬೇಕು. ಉಳಿದ ಶೇಕಡಾ.50% ಹಾಸಿಗೆಗಳನ್ನು ಖಾಸಗಿಯವರು ಕೋವಿಡ್‌ ಮತ್ತು ಕೋವಿಡ್‌ ಯೇತರ ರೋಗಿಗಳ ಚಿಕಿತ್ಸೆಗೆ ಬಳಸಬಹುದು ಎಂಬ ನಿಧಾ೯ರಕ್ಕೆ ಅನುಮೋದನೆ ನೀಡಲಾಗಿದೆ.
• ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್‌ ಭಾರತ್‌ ಆರೋಗ್ಯ ಕನಾ೯ಟಕ (ಎಬಿ-ಎಆರ್‌ಕೆ) ಯೋಜನೆಯ ಪ್ಯಾಕೇಜ್‌ ದರದಲ್ಲಿ ಚಿಕಿತ್ಸಾ ಸೌಲಭ್ಯ ಒದಗಿಸಲು ಮತ್ತು ಯೋಜನೆ ವ್ಯಾಪ್ತಿಗೆ ಸೇರದ ಚಿಕಿತ್ಸಾ ವಿಧಾನಗಳನ್ನು ಯೂಸರ್‌ ಚಾಜ್‌೯ ಆಧಾರದ ಮೇಲೆ ಚಿಕಿತ್ಸೆ ನೀಡಲು ಅನುಮೋದನೆ ನೀಡಲಾಯಿತು.

• ಕೋವಿಡ್‌ ನಿವ೯ಹಣೆಗೆ ವೈದ್ಯಕೀಯ ಪರಿಕರ, ಔಷಧಿ ಖರೀದಿಯ ಶಿಫಾರಸು ಮೇಲ್ವಿಚಾರಣೆಗೆ ಎಸಿಎಸ್‌, ಐಟಿಬಿಟಿ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಗೆ ಅನುಮೋದನೆ ನೀಡಲಾಗಿದೆ.

• ಕೋವಿಡ್‌ ನಿವ೯ಹಣೆಯಲ್ಲಿ ಕಾಯ೯ ನಿರತರಾಗಿರುವ ಆರೋಗ್ಯ ಕಾಯ೯ಕತ೯ರ ಸುರಕ್ಷತೆಗಾಗಿ 2,59,263 ಎನ್‌ -95 ಮಾಸ್ಕ್ 2,59,263 ಪಿಪಿಇ ಖರೀದಿಗೆ ಒಪ್ಪಿಗೆ ನೀಡಲಾಗಿದೆ.

• ಕೋವಿಡ್‌ ನಿವ೯ಹಣೆ ಉದ್ದೇಶಕ್ಕಾಗಿ 17 ಸಕಾ೯ರಿ ಮೆಡಿಕಲ್‌ ಕಾಲೇಜುಗಳಲ್ಲಿ 4,736 ಹಾಸಿಗೆಗಳಿಗೆ ಆಕ್ಸಿಜನ್ ಪೈಪ್‌ಲೈನ್‌ ಅಳವಡಿಕೆ ಮತ್ತು ಇತರೆ ಅಗತ್ಯ ಪರಿಕರಗಳ ಖರೀದಿಗೆ ಅನುಮೋದನೆ ನೀಡಲಾಗಿದೆ. ಇದರಿಂದ ನಮಗೆ ಹೆಚ್ಚುವರಿ ಹೈಪ್ಲೋ ಆಕ್ಸಿಜನ್‌ ಹಾಸಿಗೆಗಳು ಲಭ್ಯ ಆಗಲಿದ್ದು, ಭವಿಷ್ಯದ ಬಳಕೆಗೂ ಲಭ್ಯ ಆಗಲಿವೆ.

• ಹೊಸದಾಗಿ 16 – ಆರ್‌ಟಿ – ಪಿಸಿಆರ್‌ ಮತ್ತು 15- ಆಟೋಮೇಟೆಡ್‌ ಆರ್‌ಎನ್‌ಎ ಎಕ್ಸಟ್ರಾಕ್ಷನ್‌ ಲ್ಯಾಬ್ ಸ್ಥಾಪನೆಗೂ ಅನುಮೋದನೆ ನೀಡಲಾಗಿದೆ. ಇದರಿಂದ ಈಗ ಲಭ್ಯವಿರುವ ಲ್ಯಾಬ್‌ಗಳ ಜತೆಗೆ ಹೆಚ್ಚುವರಿಯಾಗಿ ಸೇಪ೯ಡೆ ಆಗಲಿವೆ. ಟೆಸ್ಟ್‌ಗಳ ಸಂಖ್ಯೆ ಸಹಜವಾಗಿ ಹೆಚ್ಚಾಗಲಿದ್ದು ದಿನಕ್ಕೆ ಐವತ್ತು ಸಾವಿರ ಟೆಸ್ಟ್‌ಗಳ ಗುರಿ ತಲುಪಲು ಸಾಧ್ಯವಾಗಲಿದೆ.

• ಆಯುಷ್‌ ವೈದ್ಯರಿಗೆ ನೀಡುತ್ತಿರುವ ವೇತನ ನಲವತ್ತೆಂಟು ಸಾವಿರಕ್ಕೆ, ಎಂಬಿಬಿಎಸ್‌ ವೈದ್ಯರಿಗೆ ಎಂಬತ್ತು ಸಾವಿರಕ್ಕೆ ಹಾಗೂ ನಸ್‌೯ಗಳಿಗೆ 30 ಸಾವಿರ ರೂ.ಗಳನ್ನು ಮಾಸಿಕ ವೇತನ ನೀಡಲು ನಿಣ೯ಯಿಸಲಾಗಿದೆ. ಇದು ಆರು ತಿಂಗಳಿಗೆ ಅನ್ವಯ ಆಗಲಿದೆ.

• ಸದ್ಯ ಸಕಾ೯ರಿ ಆಸ್ಪತ್ರೆಗಳಲ್ಲಿ ಮಾತ್ರವೇ ಲಭ್ಯವಿರುವ ರೆಮಿಡಿಸ್ವಿಯರ್‌ ಔಷಧಿಗೆ ಕಾಳಸಂತೆಯಲ್ಲಿ ದುಬಾರಿ ಮೊತ್ತಕ್ಕೆ ಮಾರಾಟ ಮಾಡುತ್ತಿರುವ ದೂರುಗಳಿವೆ. ಹೀಗಾಗಿ ಸಕಾ೯ರದ ಮೂಲಕವೇ ಖಾಸಗಿ ಆಸ್ಪತ್ರೆಗಳಿಗೂ ವಿತರಿಸಲು ನಿಧ೯ರಿಸಲಾಗಿದೆ.

ಈಗಾಗಲೇ ಕೋವಿಡ್‌ ಚಿಕಿತ್ಸೆಗೆ ದರ ನಿಗದಿಪಡಿಸಲಾಗಿದೆ. ಅದಕ್ಕಿಂತ ಹೆಚ್ಚಿನ ಶುಲ್ಕವನ್ನು ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳಿವೆ. ನಿದಿ೯ಷ್ಟ ದೂರು ಬಂದಲ್ಲಿ ಅಂತಹ ಆಸ್ಪತ್ರೆಗಳ ವಿರುದ್ಧ ನಿದಾ೯ಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ.

ಒಟ್ಟಾರೆ ಐದುನೂರು ಕೋಟಿ ಮೊತ್ತದ ಖರೀದಿ ಮತ್ತು ಸೌಲಭ್ಯಗಳ ಮೇಲ್ದಜೆ೯ ಏರಿಕೆ ಕ್ರಮಗಳಿಗೆ ಟಾಸ್ಕ್‌ಫೋಸ್೯ ಸಮಿತಿ ಸಭೆ ಅನುಮೋದನೆ ನೀಡಿದೆ.

ಆಶಾ ಕಾರ್ಯಕರ್ತೆಯರ ಬೇಡಿಕೆಗೆ ಸ್ಪಂದಿಸದಿದ್ದರೆ ಸಿಎಂ ಮನೆಗೆ ಮುತ್ತಿಗೆ: ಡಿ.ಕೆ ಶಿವಕುಮಾರ್ ಎಚ್ಚರಿಕೆ

ಬೆಂಗಳೂರು, ಜು. 21:ಕಳೆದ 12 ದಿನಗಳಿಂದ ಪ್ರತಿಭಟನೆ ಮಾಡುತ್ತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗೆ ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ, ಅವರ ಜತೆಗೂಡಿ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯರನ್ನು ಶಿವಕುಮಾರ್ ಮಂಗಳವಾರ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹಾಗೂ ಶಾಸಕಿ ಸೌಮ್ಯ ರೆಡ್ಡಿ ಇದ್ದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಹೇಳಿದ್ದಿಷ್ಟು:

ಹನ್ನೆರಡು ದಿನಗಳಿಂದ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಮಾಡುತ್ತಿದ್ದರೂ ಸರಕಾರದ ಯಾರೊಬ್ಬರೂ ಅವರ ಅಹವಾಲು ಆಲಿಸಿಲ್ಲ. ಸರಕಾರ ಈಗಲೂ ಸ್ಪಂದಿಸದಿದ್ದರೆ ಕಾಂಗ್ರೆಸ್ ಪರವಾಗಿ ನಾನು ಅವರ ಬೆಂಬಲಕ್ಕೆ ನಿಂತು ಬೆಂಗಳೂರು ಚಲೋ ಚಳವಳಿ ಮಾಡಿ, ಸಿಎಂ ಮನೆಗೆ ಮುತ್ತಿಗೆ ಹಾಕುವುದು ಅನಿವಾರ್ಯವಾಗುತ್ತದೆ.

ಕೋವಿಡ್ ಸಂದರ್ಭದಲ್ಲಿ ಈ ಹೆಣ್ಣು ಮಕ್ಕಳು ತಮ್ಮ ಜೀವವನ್ನು ಪಣಕ್ಕಿಟ್ಟು, ಎರಡೆರಡು ಬಾರಿ ಪ್ರತಿ ಮನೆಗೆ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ನೀಡಿದ್ದಾರೆ.

ಇವರು ಕೂಡ ನಿಮ್ಮ ಅಕ್ಕ- ತಂಗಿಯರು ಮುಖ್ಯಮಂತ್ರಿಗಳೇ. ಕೂಡಲೇ ನಿಮ್ಮ ಸಚಿವರನ್ನು ಕರೆದು ಚರ್ಚಿಸಿ ಇವರ ಬೇಡಿಕೆ ಈಡೇರಿಸಿ.

ಕಳೆದ 12 ವರ್ಷಗಳಿಂದ ಇವರು ದುಡಿಯುತ್ತಿದ್ದು, ಅವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡೂ ಸೇರಿ 6 ಸಾವಿರ ರುಪಾಯಿ ಗೌರವಧನ ನಿಗದಿ ಮಾಡಿವೆ. ಎರಡೂ ಸರಕಾರಗಳು ಸೇರಿ ಒಟ್ಟಿಗೆ 12 ಸಾವಿರ ರುಪಾಯಿ ವೇತನ ಕೊಡಬೇಕು ಎಂದು ಇವರು ಕೇಳುತ್ತಿದ್ದಾರೆ. ಇವರು ಕೇಳುತ್ತಿರುವುದು ನ್ಯಾಯಸಮ್ಮತವಾಗಿದೆ.

ನಾವೆಲ್ಲ ಒತ್ತಾಯಿಸಿದ ನಂತರ ಇವರಿಗೆ ಮೂರು ಸಾವಿರ ರೂಪಾಯಿ ಪರಿಹಾರ ಧನ ನೀಡಲಾಗುವುದು ಎಂದು ಯಡಿಯೂರಪ್ಪನವರು ಹೇಳಿದ್ದರು. ಆದರೆ ಇವರಲ್ಲಿ ಶೇ.10 ರಷ್ಟು ಮಂದಿಗೆ ಆ ಹಣ ತಲುಪಿಲ್ಲ. ಅವರಿಗೆ 3 ಸಾವಿರ ಕೊಡಲು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲವೇ? ಈ ಸರ್ಕಾರ ನುಡಿದಂತೆ ನಡೆಯಲು ವಿಫಲವಾಗಿದೆ.

ಸಾವಿರಾರು ಕೋಟಿ ರುಪಾಯಿ ಸಾಲ ಪಡೆಯುತ್ತಿದ್ದೀರಲ್ಲ, ಅದರಲ್ಲಿ ಇವರಿಗೆ ಕೊಡಬೇಕಾದ ಹಣ ಕೊಡಿ. ಇವರಿಗೂ ರಕ್ಷಣಾ ಸಲಕರಣೆ ನೀಡಿ, ಭದ್ರತೆ ನೀಡಬೇಕು. ಜತೆಗೆ ಇವರಿಗೆ ಆರೋಗ್ಯ ವಿಮೆ ಮಾಡಿಸಬೇಕು.

ಮುಂದಿನ ಮೂರು ದಿನಗಳ ಒಳಗಾಗಿ ರಾಜ್ಯ ಸರ್ಕಾರವೇ ಇವರ ಬಳಿ ಬಂದು ಮಾತನಾಡಿ ಅವರಿಗೆ ಸ್ಪಂದಿಸದಿದ್ದರೆ ಈ ಸಂಘಟನೆಯವರಿಗೆ ಬೆಂಬಲವಾಗಿ ನಿಂತು ಬೆಂಗಳೂರು ಚಲೋ ಪ್ರತಿಭಟನೆ ನಡೆಸಲಾಗುವುದು. ಜತೆಗೆ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು.

ಅಧಿಕಾರದಲ್ಲಿ ಮುಂದುವರಿಯಲು ಅರ್ಹತೆ ಇಲ್ಲ:

ರಾಜ್ಯ ಸರಕಾರ ಕೋವಿಡ್ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಸರ್ಕಾರ ಒಂದು ವಾರವಲ್ಲ, ಇನ್ನೂ ಒಂದು ತಿಂಗಳು ಲಾಕ್ ಡೌನ್ ಮಾಡಿದರೂ, ಅದಕ್ಕೆ ಬೇಕಾದ ಪೂರ್ವ ಸಿದ್ಧತೆ ಮಾಡಿಕೊಳ್ಳುವುದಿಲ್ಲ.

ಕ್ವಾಲಿಟಿ ಬಗ್ಗೆ ಮಾತನಾಡುವ ಸಚಿವರೇ, ಜನ ಆಸ್ಪತ್ರೆಯಲ್ಲಿ ಸೌಲಭ್ಯ ಸಿಗದೆ ಪರದಾಡುತ್ತಿದ್ದಾರೆ. ಇದೇನಾ ನಿಮ್ಮ ಕ್ವಾಲಿಟಿ? ಬಿಜೆಪಿಯವರು ವಿದ್ಯಾವಂತರಿರಬಹುದು. ಆದರೆ ನಮಗೆ ಪ್ರಜ್ಞಾವಂತಿಕೆ ಇದೆ.

ಅವರು ಕೋವಿಡ್ ಸೋಂಕಿತರು ಬಳಸುವ ಹಾಸಿಗೆಯನ್ನು ಬಡ ಮಕ್ಕಳಿರುವ ಹಾಸ್ಟೆಲ್ ನಲ್ಲಿ ಹಾಕಿಸುತ್ತಾರಂತಲ್ಲ ಇದು ಪ್ರಜ್ಞಾವಂತಿಕೆಯೇ. ಸರ್ಕಾರವೇ ಕೋವಿಡ್ ಸೋಂಕಿತರಿಂದ 6 ಅಡಿ ದೂರ ನಿಲ್ಲಿ ಎಂದು ಹೇಳುತ್ತಿದೆ. ಆದರೆ ಸೋಂಕಿತರು ಬಳಸಿದ ಹಾಸಿಗೆಯಲ್ಲಿ ಮಕ್ಕಳನ್ನು ಮಲಗಿಸಲು ಮುಂದಾಗಿದೆ. ಇದೆ ಏನು ಬುದ್ಧಿವಂತಿಕೆ, ಪ್ರಜ್ಞಾವಂತಿಕೆ.

ಜನರನ್ನು ರಕ್ಷಿಸಲು ಸಾಧ್ಯವಾಗದ ಈ ಸರಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯಲು ಅರ್ಹತೆ ಇಲ್ಲ. ನೀವು ಯಾವುದೇ ಅಕ್ರಮ ಮಾಡಿಲ್ಲ ಅಂತಾ ನಮಗೆ ಹೇಳುತ್ತಿದ್ದೀರಿ. ಆದರೆ ನಿಮ್ಮ ಆತ್ಮಸಾಕ್ಷಿಗೆ ನೀವೇ ಉತ್ತರ ಕೊಟ್ಟುಕೊಂಡು ನೋಡಿ.

ಕೋವಿಡ್ ನಿರ್ವಹಣೆ (Response) ಪಡೆಯ ತರಬೇತಿ ಕಾರ್ಯಕ್ರಮಕ್ಕೆ ಡಿ.ಕೆ ಶಿವಕುಮಾರ್ ಚಾಲನೆ

ಬೆಂಗಳೂರು: ಕೆಪಿಸಿಸಿ ವೈದ್ಯ ಘಟಕದ ಹಮ್ಮಿಕೊಳ್ಳಲಾಗಿರುವ ಕೋವಿಡ್ ನಿರ್ವಹಣೆ (Response) ಪಡೆಯ ತರಬೇತಿ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಚಾಲನೆ ನೀಡಿದರು.

ಬೆಂಗಳೂರಿನ ಕೊರಮಂಗಲದಲ್ಲಿ ಮಂಗಳವಾರ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಶಾಸಕಿ ಸೌಮ್ಯ ರೆಡ್ಡಿ, ಎಚ್.ಎನ್ ರವೀಂದ್ರ, ಕೆಪಿಸಿಸಿ ವೈದ್ಯ ಘಟಕದ ಸಚೇತಕರಾದ ಡಾ.ಮಧುಸೂದನ್, ಡಾ.ರಾಘವೇಂದ್ರ, ಡಾ.ಸಂಗಮೇಶ್ ಕೊಳ್ಳಿಯವರ್, ಡಾ.ಶ್ರೀನಿವಾಸ, ಡಾ.ದೀಪ್ತಿ, ಡಾ.ರಾಜೇಶ್ ಅವರು ಇದ್ದರು.

ಈ ವೇಳೆ ಮಾತನಾಡಿದ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಿಷ್ಟು:

‘ಆರೋಗ್ಯ ಹಸ್ತ ಪ್ರಾಯೋಗಿಕ ಕಾರ್ಯಕ್ರಮವನ್ನು ಈ ಕ್ಷೇತ್ರದಿಂದ ಆರಂಭಿಸುತ್ತಿದ್ದು, ಮುಂದಿನ ಕೆಲವು ದಿನ ಈ ತರಬೇತಿ ಕಾರ್ಯಕ್ರಮವನ್ನು ಬೇರೆ ಬೇರೆ ಕಡೆ ಹಮ್ಮಿಕೊಳ್ಳುತ್ತೇವೆ. ಮುಂದಿನ ನಾಲ್ಕೈದು ದಿನಗಳಲ್ಲಿ ಈ ತರಬೇತಿ ಕಾರ್ಯಕ್ರಮ ಮುಗಿದ ನಂತರ ಎಲ್ಲ ಪಂಚಾಯಿತಿಗಳಿಗೂ ಹೋಗಿ ಅಲ್ಲಿ ಪ್ರಾಥಮಿಕ ತಪಾಸಣೆ ನಡೆಸಲು ಎಲ್ಲ ತಾಲ್ಲೂಕು ಹಾಗೂ ಬ್ಲಾಕ್ ಮಟ್ಟದವರ ಜತೆ ನಿನ್ನೆ ಮಾತನಾಡಿದ್ದೇನೆ.

ಈ ತಪಾಸಣೆ ವೇಳೆ ನಾವು ಯಾವುದೇ ಔಷಧ ನೀಡುವುದಿಲ್ಲ. ಥರ್ಮಲ್ ಮೀಟರ್ ಹಾಗೂ ಆಕ್ಸಿಜನ್ ಮೀಟರ್ ಮೂಲಕ ಅವರ ಆರೋಗ್ಯ ತಪಾಸಣೆ ಮಾಡುವುದು. ಅವರಲ್ಲಿ ಧೈರ್ಯ ತುಂಬುವ ಕೆಲಸ ಇದಾಗಿದೆ. ಒಂದು ವೇಳೆ ಯಾರಲ್ಲಾದರೂ ಉಷ್ಣಾಂಶ ಹೆಚ್ಚಾಗಿದ್ದರೆ ಅಥವಾ ಆಕ್ಸಿಜನ್ ಪ್ರಮಾಣ ಕಡಿಮೆ ಇದ್ದರೆ, ನಮ್ಮ ವೈದ್ಯರನ್ನು ಸಂಪರ್ಕಿಸಿ ಅವರಿಗೆ ಅಗತ್ಯ ಮಾರ್ಗದರ್ಶನ ನೀಡಲಾಗುವುದು. ಯಾರಿಗಾದರೂ ಅಗತ್ಯವಿದ್ದರೆ ಅವರಿಗೆ ಪರೀಕ್ಷೆ ಮಾಡಿಸಲು ಸಲಹೆ ನೀಡಲಾಗುವುದು. ಈ ಕಾರ್ಯಕ್ರಮದ ಮೂಲಕ ಜನರೊಂದಿಗೆ ಸಂಪರ್ಕ ಹೊಂದಲು ಇದು ವೇದಿಕೆಯಾಗಲಿದೆ.

ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವ ಕಾರ್ಯಕರ್ತರಿಗೆ ಅಗತ್ಯ ಸುರಕ್ಷತಾ ಸಲಕರಣೆ ನೀಡಲಾಗುತ್ತಿದೆ. ಜತೆಗೆ ಅವರಿಗೆ ವಿಮೆಯನ್ನು ಮಾಡಿಸಲಾಗುತ್ತಿದೆ. ಇದೊಂದು ದೊಡ್ಡ ಮಟ್ಟದ ಸೇವೆಯಾಗಿದ್ದು, ನಿಮ್ಮ ಮುಂದಿನ ತಲೆಮಾರುಗಳು ನಿಮ್ಮ ಈ ಸೇವೆಯಿಂದ ಹೆಮ್ಮೆಪಡಲಿದೆ. ಸ್ವಾತಂತ್ರ್ಯ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಹೇಗೆ ಹೋರಾಟ ಮಾಡಿದ್ದರೋ ಅದೇ ಮಾದರಿಯಲ್ಲಿ ಆರೋಗ್ಯಕ್ಕಾಗಿ ನಮ್ಮ ಹೋರಾಟ ನಡೆಯಲಿದೆ.

ನೀವು ಜನರ ಬಳಿ ಹೋದಾಗ ಅವರ ಪ್ರೀತಿ, ಕೋಪ ಎಲ್ಲವೂ ಗೊತ್ತಾಗುತ್ತದೆ. ನೀವು ಕಾರ್ಯಕರ್ತರಾಗಿದ್ದು, ಅವರ ಭಾವನೆ ಅರ್ಥ ಮಾಡಿಕೊಳ್ಳುವ ಶಕ್ತಿ ಇದೆ. ಎಲ್ಲೆಲ್ಲಿ ಪ್ರೀತಿ ಇದೆ, ಎಲ್ಲೆಲ್ಲಿ ಕೋಪವಿದೆ ಎಂದು ತಿಳಿದು ನಾವು ಮುಂದಿನ ದಿನಗಳಲ್ಲಿ ಸರಿ ಮಾಡಿಕೊಳ್ಳೋಣ.

ಕಾಂಗ್ರೆಸ್ ಕೇವಲ ಅಧಿಕಾರವಲ್ಲ, ಇದೊಂದು ಆಂದೋಲನ, ಹೋರಾಟ. ಜನರ ಮಧ್ಯೆ ಬೆರೆತು, ಅವರ ಭಾವನೆ ಅರಿತು, ಜನರ ಸಂಕಟಕ್ಕೆ ಪರಿಹಾರ ಕಲ್ಪಿಸಿಕೊಡುವ ರಾಷ್ಟ್ರೀಯ ಪಕ್ಷ. ಆ ಪಕ್ಷದ ಸದಸ್ಯರಾಗಿರುವುದೇ ನಿಮ್ಮ ನಮ್ಮೆಲ್ಲರ ಭಾಗ್ಯ.