ಜುಲೈ 30-31ಕ್ಕೆ ಸಿಇಟಿ ಪರೀಕ್ಷೆ ಪಿಜಿ ಮತ್ತು ಡಿಪ್ಲೊಮಾ ಸಿಇಟಿ ಮುಂದಕ್ಕೆ

ಬೆಂಗಳೂರು: ಕೋವಿಡ್-19 ಆತಂಕದ ನಡುವೆಯೂ ದ್ವಿತೀಯ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದ್ದ ರಾಜ್ಯ ಸರಕಾರವು ಇದೀಗ ಇದೇ ಜುಲೈ 30 ಮತ್ತು 31ರಂದು ರಾಜ್ಯಾದ್ಯಂತ ಸಿಇಟಿ ಪರೀಕ್ಷೆ ನಡೆಸಲಿದೆ.

ಬೆಂಗಳೂರಿನಲ್ಲಿ ಮಂಗಳವಾರ ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು.

ಕೋವಿಡ್-19 ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ ಕೈಗೊಂಡ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಈ ಪರೀಕ್ಷೆಗೂ ಕೈಗೊಳ್ಳಲಾಗುವುದು. ಗಡಿನಾಡು ವಿದ್ಯಾರ್ಥಿಗಳ ಕನ್ನಡ ಪರೀಕ್ಷೆಯನ್ನು ಅಗಸ್ಟ್ 1ರಂದು ನಡೆಸಲಾಗುವುದು.
ರಾಜ್ಯದಲ್ಲಿ ಒಟ್ಟು 1,94,356 ವಿದ್ಯಾರ್ಥಿಗಳು 120 ಸ್ಥಳಗಳ 497 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ ಎಂದು ಅವರು ತಿಳಿಸಿದರು.

ಬೆಂಗಳೂರು ಮಹಾನಗರದಲ್ಲಿ 83 ಕೇಂದ್ರಗಳ ವ್ಯವಸ್ಥೆ ಮಾಡಲಾಗಿದ್ದು, 40,200 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಒಟ್ಟು ವಿದ್ಯಾರ್ಥಿಗಳಲ್ಲಿ 30 ಮಂದಿ ವಿದೇಶಿಯರೂ ಇದ್ದಾರೆ. ಪರೀಕ್ಷೆಯ ಸಮಯ ಬೆಳಗ್ಗೆ 10.30ರಿಂದ 11.50 ಗಂಟೆ ಹಾಗೂ ಮಧ್ಯಾಹ್ನ 2.30ರಿಂದ 3.30 ಗಂಟೆ ಎಂದು ಡಿಸಿಎಂ ಮಾಹಿತಿ ನೀಡಿದರು.

ಸಕಲ ಸಿದ್ಧತೆ ಮತ್ತು ಮುನ್ನೆಚ್ಚರಿಕೆ:

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರಕಾರ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಂಡಿದೆ. ಈಗಾಗಲೇ ಎಸ್‌ಒಪಿ (Standard operating procedure) ರಚಿಸಲಾಗಿದೆ. ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್, ದೈಹಿಕ ಅಂತರವನ್ನು ಸೇರಿದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು. ಎರಡು ದಿನಗಳ ಮುಂಚೆಯೇ ಕೇಂದ್ರಗಳನ್ನ ಸ್ಯಾನಿಟೈಸ್ ಮಾಡಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

ಪಾಸಿಟಿವ್ ವಿದ್ಯಾರ್ಥಿಗಳಿಗೂ ಅವಕಾಶ:

ಕೋವಿಡ್-19 ಪಾಸಿಟಿವ್ ಬಂದಿರುವ ವಿದ್ಯಾರ್ಥಿಗಳಿಗೂ ಸಿಇಟಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಅವರಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗುತ್ತದೆ. ಕೋವಿಡ್ ಲಕ್ಷಣಗಳಲ್ಲದೆ ನೆಗಡಿ, ಕೆಮ್ಮು, ಶೀತ ಇರುವ ವಿದ್ಯಾರ್ಥಿಗಳನ್ನೂ ಪ್ರತ್ಯೇಕ ಕೊಠಡಿಗಳಲ್ಲಿ ಕೂರಿಸಲಾಗುವುದು. ಎಲ್ಲ ಕೇಂದ್ರಗಳ ಬಳಿ ಆ್ಯಂಬುಲೆನ್ಸ್ ಸೇರಿ ಸಾರಿಗೆ ವ್ಯವಸ್ಥೆಯನ್ನೂ ಮಾಡಲಾಗಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ ಹಾಗೂ ರಾಜ್ಯಾದ್ಯಂತ ಕೆಎಸ್ಸಾರ್ಟಿಸಿ ವತಿಯಿಂದ ಬಸ್’ಗಳ ವ್ಯವಸ್ಥೆ ಮಾಡಲಾಗಿದೆ.

ಕ್ವಾರಂಟೈನ್ ವಿನಾಯಿತಿ:

ಸಿಇಟಿ ಪರೀಕ್ಷೆ ಎದುರಿಸುತ್ತಿರುವ ವಿದೇಶಿ ಅಥವಾ ಹೊರಗಿನ ವಿದ್ಯಾರ್ಥಿಗಳಿಗೆ ಹಾಗೂ ಅವರ ಜತೆಯಲ್ಲಿ ಬಂದಿರುವ ಪೋಷಕರಿಗೆ 4 ದಿನಗಳ ಕಾಲ ಕ್ವಾರಂಟೈನ್’ನಿಂದ ವಿನಾಯಿತಿ ನೀಡಲಾಗಿದೆ. ಅವರೂ ಕೂಡ ಎಲ್ಲ ರೀತಿಯಲ್ಲೂ ಪರೀಕ್ಷೆಗೆ ಒಳಗಾಗಿದ್ದಾರೆ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ಡಿಸಿಎಂ ತಿಳಿಸಿದರು.

ಗಡಿನಾಡ ವಿದ್ಯಾರ್ಥಿಗಳು:

ಇನ್ನು ಗಡಿನಾಡ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬೆಂಗಳೂರಿಗೇ ಬರಬೇಕಾಗಿಲ್ಲ. 188 ಮಂದಿ ಅಂತಹ ವಿದ್ಯಾರ್ಥಿಗಳಿದ್ದು, ಅವರು ಗಡಿ ಭಾಗದಲ್ಲಿರುವ ಬಳ್ಳಾರಿ, ಬೆಳಗಾವಿ, ಬೆಂಗಳೂರು, ಮಂಗಳೂರು, ಬೀದರ್,ಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಕೋವಿಡ್ ಕಾರಣಕ್ಕೆ ಈಗಾಗಲೇ ಅನೇಕ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಿಕೊಂಡಿದ್ದಾರೆ. ಅಲ್ಲಿಯೂ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.

ಈಗಾಗಲೇ 1,30,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪತ್ರಗಳನ್ನು ಡೌನ್’ಲೋಡ್ ಮಾಡಿಕೊಂಡಿದ್ದಾರೆ. ಎಲ್ಲ ಮಾಹಿತಿಯೂ ಆನ್’ಲೈನ್’ನಲ್ಲಿರುತ್ತದೆ. ಗೊಂದಲವಿಲ್ಲದೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿ ಎಂದು ನಾನು ಶುಭ ಹಾರೈಸುತ್ತೇನೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಪಿಜಿ-ಸಿಇಟಿ ಪರೀಕ್ಷೆ ಮುಂದಕ್ಕೆ:

ಅಂತಿಮ ವರ್ಷದ ಪರೀಕ್ಷೆಗಳು ನಡೆಯದ ಕಾರಣ ಪಿಜಿ-ಸಿಇಟಿ ಹಾಗೂ ಡಿಪ್ಲೋಮೋ-ಸಿಇಟಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ನಿಗದಿಯಂತೆ ಈ ಪರೀಕ್ಷೆಗಳು ಕ್ರಮವಾಗಿ ಅಗಸ್ಟ್ 8-9 ಮತ್ತು 9 ರಂದು ನಡೆಯಬೇಕಾಗಿತ್ತು. ಅಂತಿಮ ವರ್ಷದ ಪರೀಕ್ಷೆಯ ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಡಿಸಿಎಂ ತಿಳಿಸಿದರು.

ಕೌನ್ಸೆಲಿಂಗ್ ಕೂಡ ಅನ್’ಲೈನ್:

ಈ ವರ್ಷ ಸಿಇಟಿ ಕೌನ್ಸೆಲಿಂಗ್, ದಾಖಲೆಗಳ ಪರಿಶೀಲನೆ ಸೇರಿದಂತೆ ಎಲ್ಲವೂ ಆನ್’ಲೈನ್ ನಲ್ಲಿ ನಡೆಯಲಿದೆ. ಇದೆಲ್ಲವನ್ನೂ ವಿದ್ಯಾರ್ಥಿಗಳು ಮನೆಯಿಂದಲೇ ಪೂರೈಸಬಹುದು. ಅಂತಿಮವಾಗಿ ತಾವು ಆಯ್ಕೆ ಮಾಡಿಕೊಳ್ಳುವ ಕಾಲೇಜಿಗೆ ತೆರಳಿ ಪ್ರವೇಶಾತಿ ಪಡೆಯಬಹುದು ಎಂದ ಡಿಸಿಎಂ, ಈಗಾಗಲೇ ಎಲ್ಲ ವಿವಿಗಳಲ್ಲಿ ಪ್ರವೇಶಗಳು ಆರಂಭವಾಗಿವೆ. ಉನ್ನತ ಶಿಕ್ಷಣ ಇಲಾಖೆಯ ಎಲ್ಲ ಚಟುವಟಿಕೆಗಳು ಆರಂಭವಾಗಿವೆ ಎಂದು ತಿಳಿಸಿದರು.

ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಕೆಇಎ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟ್ ರಾಜಾ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದ ಕೋವಿಡ್ ಆರೈಕೆ ಕೇಂದ್ರಕ್ಕೆ ಸಿದ್ದರಾಮಯ್ಯ ಭೇಟಿ: ವ್ಯವಸ್ಥೆ ಬಗ್ಗೆ ಪರಿಶೀಲನೆ

ಬೆಂಗಳೂರು : ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆರಂಭಿಸುತ್ತಿರುವ ಕೋವಿಡ್ ಆರೈಕೆ ಕೇಂದ್ರದಲ್ಲಿ ಅಗತ್ಯಕ್ಕೆ ತಕ್ಕ ಸೌಲಭ್ಯಗಳಿಲ್ಲ. ಸರ್ಕಾರ ಕೂಡಲೇ ಆ ಕುರಿತು ಗಮನ ಹರಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.

ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದ ಬಳಿಕ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ಏಷ್ಯಾದಲ್ಲೇ ಅತಿದೊಡ್ಡ ಕೋವಿಡ್ ಆರೈಕೆ ಕೇಂದ್ರ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿಯವರು ಹೇಳಿದ್ದರು. ಹೀಗಾಗಿ ಇಲ್ಲಿಯ ವ್ಯವಸ್ಥೆ ಹೇಗಿದೆ ಎಂಬುದನ್ನು ನೋಡಲು ಬಂದಿದ್ದೆ. ಶುಕ್ರವಾರದಿಂದ ಇಲ್ಲಿ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಸೋಂಕಿನ ಲಕ್ಷಣ ಇಲ್ಲದವರನ್ನು ದಾಖಲು ಮಾಡಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಇಂಥ ಸೌಲಭ್ಯದಲ್ಲಿ ಸರ್ಕಾರ ಪರಿಸ್ಥಿತಿಯನ್ನು ಯಾವ ರೀತಿ ನಿಭಾಯಿಸುವುದೋ ಕಾದು ನೋಡಬೇಕಿದೆ ಎಂದು ವಿಪಕ್ಷ ನಾಯಕರು ಹೇಳಿದರು.

ಮಾಧ್ಯಮ ಪ್ರತಿನಿಧಿಗಳಿಗೆ ಅವರು ಹೇಳಿದ್ದಿಷ್ಟು :

ಬೆಡ್ ಕೊರತೆಯಿಂದ ಕೊರೊನಾ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಬೆಡ್‍ಗಳಿಗೆ ಅಲೆದಾಟ, ಚಿಕಿತ್ಸೆಗೆ ಪರದಾಟ ಎಂಬ ಸುದ್ದಿಗಳನ್ನು ನೋಡುತ್ತಿದ್ದೇವೆ. ಜುಲೈ, ಆಗಸ್ಟ್ ತಿಂಗಳಲ್ಲಿ ಸೋಂಕು ಉಲ್ಬಣಿಸಲಿದೆ ಎಂದು ತಜ್ಞರು ಮೊದಲೇ ಹೇಳಿದ್ದರು. ಲಾಕ್‍ಡೌನ್ ಅವಧಿಯಲ್ಲೇ ಇದಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಆಗ ಸರ್ಕಾರಕ್ಕೆ ಸಮಯ ಇರಲಿಲ್ಲ.

ಈ ಕೇಂದ್ರದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಬೆಡ್‍ಗಳಿವೆ. 2 ಸಾವಿರಕ್ಕೂ ಹೆಚ್ಚು ವೈದ್ಯರು, ಅರೆ ವೈದ್ಯ ಸಿಬ್ಬಂದಿ ನೇಮಕವಾಗಬೇಕು. ಇನ್ನೂ ನೇಮಕ ಪ್ರಕ್ರಿಯೆ ನಡೆಯುತ್ತಲೇ ಇದೆ. ಶುಕ್ರವಾರದಿಂದ ಸೋಂಕಿತರ ದಾಖಲಾತಿ ಆರಂಭವಾಗುತ್ತದೆ. ವೈದ್ಯರೇ ಇಲ್ಲ ಎಂದರೆ ಹೇಗೆ ?
ಹಾಸಿಗೆ, ದಿಂಬು, ಬೆಡ್‍ಶೀಟ್ ಒದಗಿಸುವ ಗುತ್ತಿಗೆದಾರರ ಸಮಸ್ಯೆಯೇ ಇನ್ನೂ ಇತ್ಯರ್ಥವಾಗಿಲ್ಲ. 800 ರೂ. ಪ್ರಕಾರ ಬಾಡಿಗೆಗೆ ಪಡೆಯುವುದಾಗಿ ಸರ್ಕಾರ ಹೇಳಿತ್ತು. ಸಾರ್ವಜನಿಕವಾಗಿ ಟೀಕೆಗಳು ಬಂದ ಬಳಿಕ ಈಗ ಸರ್ಕಾರವೇ ಖರೀದಿ ಮಾಡುತ್ತಿದೆ. ಅದೂ ಇತ್ಯರ್ಥವಾಗಿಲ್ಲ. ಬಾಡಿಗೆಯೋ, ಖರೀದಿಯೋ ಎಂಬುದು ಮೊದಲು ಇತ್ಯರ್ಥವಾಗಬೇಕು.

ಕೇಂದ್ರದಲ್ಲಿ ಶೌಚಾಲಯಗಳು ದೂರ ಇವೆ. ವಯಸ್ಸಾದವರು ಹೋಗಿ ಬರಲು ಕಷ್ಟ. ಒಳಚರಂಡಿ ವ್ಯವಸ್ಥೆ ಸಹ ಸರಿಯಾಗಿಲ್ಲ. ತಾತ್ಕಾಲಿಕ ವ್ಯವಸ್ಥೆಯೇನೋ ಮಾಡಿದ್ದಾರೆ. ವೈದ್ಯರ ಜೊತೆಗೆ ನರ್ಸ್‍ಗಳು, ಡ್ರಿ ಗ್ರೂಪ್ ನೌಕರರು ಸೇರಿದಂತೆ ಅರೆ ವೈದ್ಯಕೀಯ ಸಿಬ್ಬಂದಿ ಕೂಡಲೇ ನೇಮಕವಾಗಬೇಕು.
ಮೊದಲು ಮಾಡಬೇಕಾದ್ದನ್ನು ಕೊನೆಯಲ್ಲಿ ಮಾಡುತ್ತಿದ್ದಾರೆ. ಕೊನೆಯಲ್ಲಿ ಯಾವುದು ಮಾಡಬೇಕಿತ್ತೋ ಅದನ್ನು ಮೊದಲು ಮಾಡಿದ್ದಾರೆ. ಸರ್ಕಾರ ಉದಾಸೀನ ತೋರಿಸಿರುವುದು ಸ್ಪಷ್ಟವಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಸಿದ್ಧತೆ ಮಾಡಿಕೊಳ್ಳದೇ ಹೋಗಿದ್ದು ಸರ್ಕಾರದ ತಪ್ಪು. ಸೋಂಕು ನಿಯಂತ್ರಣಕ್ಕೆ ಮತ್ತು ಸೋಂಕಿತರ ಚಿಕಿತ್ಸೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲೇ ಇಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಬೇಜವಾಬ್ದಾರಿತನ ಎದ್ದು ಕಾಣುತ್ತದೆ. ಎರಡೂ ಸರ್ಕಾರಗಳು ಸೋಂಕು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ.

ಕೊರೊನಾ ವಿಚಾರದಲ್ಲಿ ರಾಜ್ಯ ಸರ್ಕಾರ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಪ್ರತಿಪಕ್ಷಗಳು ಸಲಹೆ ನೀಡಿದರೆ ಗಂಭೀರವಾಗಿ ಪರಿಗಣಿಸುವುದಿಲ್ಲ. ವಿಧಾನ ಮಂಡಲ ಅಧಿವೇಶನ ಕರೆಯುವುದಿಲ್ಲ. ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು.

ಭ್ರಷ್ಟಾಚಾರ ನಡೆದಿದ್ದರೂ ಸುಮ್ಮನಿರಬೇಕೇ ?
ಕೊರೊನಾ ವಿಚಾರದಲ್ಲಿ ಸರ್ಕಾರ ಕೈಗೊಂಡ ಕ್ರಮಗಳಿಗೆ ನಾವು 3-4 ತಿಂಗಳು ಸಂಪೂರ್ಣವಾಗಿ ಸಹಕಾರ ನೀಡುತ್ತಾ ಬಂದೆವು. ಎಲ್ಲಿಯೂ ಮಾತನಾಡಲಿಲ್ಲ. ಹಾಗೆಂದು ಕೊರೊನಾ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರೂ ಸುಮ್ಮನೇ ಕೂರಬೇಕಿತ್ತೇ ? ಪ್ರತಿಪಕ್ಷವಾಗಿ ನಮ್ಮ ಜವಾಬ್ದಾರಿ ನಿರ್ವಹಿಸುವುದೂ ತಪ್ಪೇ ?

ಸಚಿವ ಶ್ರೀರಾಮುಲು ಅವರು ನಿನ್ನೆ ಪತ್ರಿಕಾಗೋಷ್ಠಿ ನಡೆಸಿ ಲೆಕ್ಕ ಕೊಟ್ಟಿರುವುದಾಗಿ ತಿಳಿಸಿದ್ದಾರೆ. ಗುರುವಾರ ಪಕ್ಷದ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ ನಾವೂ ದಾಖಲೆಗಳನ್ನು ಮುಂದಿಡುತ್ತೇವೆ. ಒಂದು ವೆಂಟಿಲೇಟರ್ ಖರೀದಿಗೆ ತಮಿಳುನಾಡು ಸರ್ಕಾರ 4.78 ಲಕ್ಷ ರೂ. ವೆಚ್ಚ ಮಾಡಿದೆ. ಆದರೆ ಇಲ್ಲಿಯ ಸರ್ಕಾರ 15-18 ಲಕ್ಷ ರೂ. ಕೊಟ್ಟು ಖರೀದಿಸಿದೆ. ಇದನ್ನು ಭ್ರಷ್ಟಾಚಾರ ಎನ್ನದೇ ಏನೆಂದು ಕರೆಯಬೇಕು. ?

ಉಪಕರಣಗಳ ಗುಣಮಟ್ಟದ ಬಗ್ಗೆ ಮಾತನಾಡಲು ನಾನು ಸರ್ವಜ್ಞ ಅಥವಾ ತಜ್ಞ ಅಲ್ಲದಿರಬಹುದು. ಆದರೆ, ತಜ್ಞರ ಅಭಿಪ್ರಾಯ ಕೇಳಬಹುದಲ್ಲವೇ ? ನಾವು ಒಂದು ಇಲಾಖೆಯ ಲೆಕ್ಕ ಕೇಳಿಲ್ಲ. ಐದಾರು ಇಲಾಖೆಗಳು ಮಾಡಿರುವ ಖರ್ಚಿನ ಬಗ್ಗೆ ಲೆಕ್ಕ ಕೇಳಿದ್ದೇವೆ. ಮಾಹಿತಿ ಕೋರಿ ವಾರದ ಹಿಂದೆಯೇ ಪತ್ರ ಬರೆದಿದ್ದರೂ ಮುಖ್ಯ ಕಾರ್ಯದರ್ಶಿಗಳಿಂದ ಈ ವರೆಗೆ ಉತ್ತರ ಬಂದಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಮಾಜಿ ಸಚಿವರಾದ ಎಚ್.ಎಂ. ರೇವಣ್ಣ ಹಾಗೂ ಬಿಬಿಎಂಪಿ ಸದಸ್ಯರಾದ ಶಿವರಾಜ್ ಅವರು ಹಾಜರಿದ್ದರು.

ಆಗಸ್ಟ್ ಮೊದಲ ವಾರ ಎಸ್ಸೆಸ್ಸೆಲ್ಸಿ ಫಲಿತಾಂಶ: ಸುರೇಶ್ ಕುಮಾರ್

ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶವನ್ನು ಆಗಸ್ಟ್ ಮೊದಲ ವಾರದಲ್ಲಿ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಸೋಮವಾರ ಬೆಂಗಳೂರು ನಗರದ ವಿವಿಧೆಡೆಯ ಐದು ಎಸ್ ಎಸ್ ಎಲ್ ಸಿ ಮೌಲ್ಯಮಾಪನ ಕೇಂದ್ರಗಳಿಗೆ ಭೇಟಿ ನೀಡಿ ಮೌಲ್ಯಮಾಪನ ಪ್ರಕ್ರಿಯೆಯನ್ನು ವೀಕ್ಷಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯಾದ್ಯಂತ 220 ಮೌಲ್ಯಮಾಪನ ಕೇಂದ್ರದಲ್ಲಿ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ವಿವಿಧ ವಿಷಯಗಳ ಮೌಲ್ಯಮಾಪನ ನಡೆಯುತ್ತಿದೆ ಎಂದರು.

ಇದರಲ್ಲಿ ಈಗಾಗಲೇ 120 ಕೇಂದ್ರಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನು ಎರಡು ದಿನಗಳಲ್ಲಿ 180 ಕೇಂದ್ರಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಮುಗಿಯಲಿದೆ. ಬೆಂಗಳೂರು ಮಹಾನಗರದ 28 ಕೇಂದ್ರಗಳಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಮೌಲ್ಯಮಾಪನಕ್ಕೆ ಶೇ. 45ರಷ್ಟು ಶಿಕ್ಷಕರು ಹಾಜರಾಗಿದ್ದು, ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಮೌಲ್ಯಮಾಪನ ನಡೆಯುತ್ತಿದೆ ಎಂದರು.

ಇನ್ನು 10 ದಿನಗಳಲ್ಲಿ ರಾಜ್ಯದ ಎಲ್ಲ ಕೇಂದ್ರಗಳ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, 8.5 ಲಕ್ಷ ವಿದ್ಯಾರ್ಥಿಗಳ ಫಲಿತಾಂಶವನ್ನು ಆಗಸ್ಟ್ ಮೊದಲ ವಾರದಲ್ಲಿ ಪ್ರಕಟಿಸುವ ಆಲೋಚನೆ ಹೊಂದಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಇಂದು ಸಚಿವರು ಬೆಂಗಳೂರಿನ ಮಲ್ಲೇಶ್ವರದ ಸ್ಟೆಲ್ಲಾ ಮೇರಿಸ್ ಪ್ರೌಢಶಾಲೆ, ಎಂಎಲ್ಎ ಪ್ರೌಢಶಾಲೆ, ನಿರ್ಮಲಾರಾಣಿ ಪ್ರೌಢಶಾಲೆ, ರಾಜಾಜಿನಗರದ ಎಸ್ ಜೆ ಆರ್ ಸಿ ಕಾಲೇಜು, ಸೇಂಟ್ ಆನ್ಸ್ ಪ್ರೌಢಶಾಲೆಗಳ ಮೌಲ್ಯಮಾಪನ ಕೇಂದ್ರಗಳಿಗೆ ಭೇಟಿ ನೀಡಿ ಮೌಲ್ಯಮಾಪನ ಪ್ರಕ್ರಿಯೆ ವೀಕ್ಷಿಸಿದರು.

ಖಾಸಗಿ ಆಸ್ಪತ್ರೆಯ ವೈದ್ಯರೂ ಕೂಡ ಧೃತಿಗೆಡದೆ ಕೋವಿಡ್ ಸೋಂಕಿತರ ಹೆರಿಗೆಗೆ ಮುಂದಾಗಬೇಕು: ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಇದುವರೆಗೆ 10,57,303 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಮರಣ ಪ್ರಮಾಣ 2.08% ರಷ್ಟಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರ‌ಎ‌

ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ರಾಷ್ಟ್ರೀಯ ಆರೋಗ್ಯ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರಿಗೆ 45 ರಿಂದ 48 ಸಾವಿರದವರೆಗೆ ಮಾಸಿಕ ವೇತನ ಸರ್ಕಾರವೇ ಭರಿಸಲಿದೆ. ಮುಂದಿನ 6 ತಿಂಗಳವರೆಗೆ ಅನುಷ್ಠಾನ ಬರಲಿದೆ ಎಂದ್ರು.

ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಕುರಿತಂತೆ ಶೀಘ್ರದಲ್ಲೇ ನಿರ್ಧಾರ ಮಾಡಲಾಗುತ್ತೆ. ಮುಖ್ಯಮಂತ್ರಿಗಳೊಂದಿಗೆ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದೆ ಎಂದ್ರು.

ದೇಶದಲ್ಲಿ ಕೊರೋನ ಇನ್ನೂ ಸಮುದಾಯ ಹಂತಕ್ಕೆ ತಲುಪಿಲ್ಲ. ಕಳೆದ 15 ದಿನಗಳಿಂದ ಮಾತ್ರವೇ ರಾಜ್ಯದಲ್ಲಿ ಸೋಂಕು ಹರಡುವಿಕೆ ಹೆಚ್ಚಾಗಿದೆ. ಇತರೆ ರಾಜ್ಯಗಳಲ್ಲಿ 2 ತಿಂಗಳು ಮುಂಚಿತವಾಗಿಯೇ ಈ ಮಟ್ಟದಲ್ಲಿ ಹರಡಿತ್ತು ಎಂದ್ರು.

ಬೆಂಗಳೂರಿನ ವಲಯವಾರು ಕೋವಿಡ್ ಉಸ್ತುವಾರಿ ಸಚಿವರುಗಳ ಜೊತೆ ಸಿಎಂ ಮಹತ್ವದ ಸಭೆ. ಬೂತ್ ಮಟ್ಟದ ಕಾರ್ಯಪಡೆಗಳು ಸೋಂಕಿತರ, ಸಂಪರ್ಕಿತರ ಮತ್ತು ILI ಮತ್ತು SARI ಲಕ್ಷಣವುಳ್ಳ ವ್ಯಕ್ತಿಗಳನ್ನು ತ್ವರಿತವಾಗಿ ಪತ್ತೆ ಹಚ್ಚಿ ಪರೀಕ್ಷೆ ಮಾಡಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದ್ರು.

ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ ಡ್ಯಾಶ್ ಬೋರ್ಡ್ ನಲ್ಲಿ ಈಗ ಲಭ್ಯ. ರಿಯಲ್ ಟೈಮ್ ಮಾಹಿತಿಯಿಂದ ಹಾಸಿಗೆ ಲಭ್ಯತೆ ಕಂಡುಹಿಡಿಯುವುದು ಈಗ ಸರಳವಾಗಿದೆ ಎಂದ್ರು.

ವಿಕ್ಟೋರಿಯ ಆಸ್ಪತ್ರೆಯಲ್ಲಿ ಮೇ ಯಿಂದ ಇದುವರೆಗೆ 118 ಕೋವಿಡ್ ಸೋಂಕಿತ ಗರ್ಭಿಣಿಯರ ಹೆರಿಗೆ ಮಾಡಲಾಗಿದ್ದು ಎಲ್ಲ ತಾಯಂದಿರು ಹಾಗೂ ನವಜಾತ ಶಿಶುಗಳು ಆರೋಗ್ಯದಿಂದಿದ್ದಾರೆ. ಯಾವ ಮಗುವಿಗೂ ಸೋಂಕು ತಗುಲಿಲ್ಲ. ಖಾಸಗಿ ಆಸ್ಪತ್ರೆಯ ವೈದ್ಯರೂ ಕೂಡ ಧೃತಿಗೆಡದೆ ಕೋವಿಡ್ ಸೋಂಕಿತರ ಹೆರಿಗೆಗೆ ಮುಂದಾಗಬೇಕು. ಗರ್ಭಿಣಿಯರಿಗೆ ಈ ಸಂದರ್ಭದಲ್ಲಿ ನೆರವಾಗಬೇಕು ಎಂದು ಸಚಿವ ಡಾ.ಸುಧಾಕರ್ ಕರೆ ನೀಡಿದ್ರು.

ಅರ್ಧದಷ್ಟು ಹಾಸಿಗೆ ನೀಡುವಂತೆ 2 ಕ್ಷೇತ್ರಗಳ ಖಾಸಗಿ ಆಸ್ಪತ್ರೆಗಳ ಮನವೊಲಿಸಿದ ಡಿಸಿಎಂ

ಬೆಂಗಳೂರು: ಕೋವಿಡ್-19 ರೋಗಿಗಳಿಗೆ ಯಾವುದೇ ಕಾರಣಕ್ಕೂ ಹಾಸಿಗೆಗಳ ಕೊರತೆಯಾಗದಂತೆ ಸಾಕಷ್ಟು ಎಚ್ಚರಿಕೆ ವಹಿಸಿರುವ ಸರಕಾರವೂ, ಖಾಸಗಿ ಆಸ್ಪತ್ರೆಗಳಿಂದ ನಿಗದಿತ ಶೇ.50ರಷ್ಟು ಹಾಸಿಗೆಗಳನ್ನು ಪಡೆಯುವ ನಿಟ್ಟಿನಲ್ಲಿ ಎಲ್ಲ ಕ್ರಮಗಳನ್ನು ಕೈಗೊಂಡಿದೆ.

ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಸೋಮವಾರಂದು ನಗರದ ರಾಜಾಜಿನಗರ, ಮಹಾಲಕ್ಷ್ಮೀ ಲೇಔಟ್’ಗೆ ಭೇಟಿ ನೀಡಿ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿರುವ ಖಾಸಗಿ ಆಸ್ಪತ್ರೆಗಳ ಮಾಲೀಕರು, ವ್ಯವಸ್ಥಾಪಕರ ಜತೆ ಮಾತುಕತೆ ನಡೆಸಿದರಲ್ಲದೆ, ಕೂಡಲೇ ಹಾಸಿಗೆಗಳನ್ನು ನೀಡುವಂತೆ ಮನವೊಲಿಸಿದರು.

ಅನಿರೀಕ್ಷಿತವಾಗಿ ಕೋವಿಡ್ ಸೋಂಕು ಎದುರಾಗಿದ್ದು ಯುದ್ಧದಂಥ ಸನ್ನಿವೇಶ ಬಂದಿದೆ. ಪ್ರತಿಯೊಬ್ಬರೂ ವಿಪತ್ತಿನ ಸಂದರ್ಭದಲ್ಲಿ ಎಷ್ಟು ಜವಾಬ್ದಾರಿಯಿಂದ ವರ್ತಿಸುತ್ತೇವೆಯೋ ಅಷ್ಟೇ ಹೊಣೆಗಾರಿಕೆಯಿಂದ ಎಲ್ಲರೂ ಸಹಕಾರ ನೀಡಬೇಕಾಗಿದೆ. ಇದರ ಜತೆಯಲ್ಲೇ ಸರಕಾರ ಸಾಕಷ್ಟು ಮುನ್ನಚ್ಚರಿಕೆಯಿಂದ ಕೆಲಸ ಮಾಡುತ್ತಿದೆ. ಅಕ್ಟೋಬರ್ ಹೊತ್ತಿಗೆ ಸೋಂಕು ಮತ್ತಷ್ಟು ವ್ಯಾಪಿಸಲಿದೆ ಎಂದು ಐಸಿಎಂಆರ್ ಈಗಾಗಲೇ ಎಚ್ಚರಿಕೆ ನೀಡಿದೆ. ಹೀಗಾಗಿ ಸರಕಾರ ಎಲ್ಲ ರೀತಿಯಲ್ಲೂ ಸನ್ನದ್ಧಗೊಳ್ಳಲೇಬೇಕು. ಆದ್ದರಿಂದ ಎರಡೂ ಕ್ಷೇತ್ರಗಳಲ್ಲಿರುವ ಖಾಸಗಿ ಆಸ್ಪತ್ರೆಗಳು ಕೂಡಲೇ ತಮ್ಮಲ್ಲಿರುವ ಒಟ್ಟು ಹಾಸಿಗೆಗಳ ಪೈಕಿ ಶೇ.೫೦ರಷ್ಟನ್ನು ಸರಕಾರಕ್ಕೆ ನೀಡಲೇಬೇಕು ಎಂದು ಡಿಸಿಎಂ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ಮನವರಿಕೆ ಮಾಡಿದರು.

ಈಗಾಗಲೇ ಹಾಸಿಗೆಗಳನ್ನು ಸರಕಾರದ ವಶಕ್ಕೆ ನೀಡಬೇಕಾಗಿತ್ತು. ತುಂಬಾ ತಡವಾಗಿದೆ. ನಾಳೆ ಹೊತ್ತಿಗೆ ಎಲ್ಲ ಆಸ್ಪತ್ರೆಗಳು ಈ ಕೆಲಸವನ್ನು ಮಾಡಲೇಬೇಕು. ತಪ್ಪಿದರೆ ಐಎಎಸ್ ಅಧಿಕಾರಿಗಳು ನಿಮ್ಮ ಆಸ್ಪತ್ರೆಗಳಿಗೆ ತಪಾಸಣೆಗೆ ಬರಲಿದ್ದಾರೆ. ಒಂದು ವೇಳೆ ಆಗ ಸಿಕ್ಕಿಬಿದ್ದರೆ ಕೂಡಲೇ ಆಸ್ಪತ್ರೆಯ ಪರವಾನಗಿಯೇ ರದ್ದಾಗುತ್ತದೆ. ಇಂಥ ಕ್ರಮಕ್ಕೆ ಅವಕಾಶ ಮಾಡಿಕೊಡಬೇಡಿ. ಯಾವುದೇ ನೆಪ ಹೇಳದೇ ತತ್’ಕ್ಷಣವೇ ಹಾಸಿಗೆಗಳನ್ನು ಸರಕಾರದ ವಶಕ್ಕೆ ನೀಡಿ ಎಂದು ಡಿಸಿಎಂ ಎಚ್ಚರಿಕೆ ನೀಡಿದರು.

ಈಗಾಗಲೇ ಹಲವು ಸಲ ಮನವಿ ಮಾಡಿದ್ದೇವೆ. ಇದಕ್ಕೆ ಕೆಲವರು ಕಿವಿಗೊಡದೇ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಸರಕಾರ ಸಹಿಸುವುದಿಲ್ಲ. ಮುಖ್ಯಮಂತ್ರಿಯವರು ಈಗಾಗಲೇ ಈ ಬಗ್ಗೆ ಸ್ಷಷ್ಟ ಆದೇಶ ನೀಡಿದ್ದಾರೆ. ಸರಕಾರದ ಆದೇಶ ಪಾಲಿಸಿದ ಆಸ್ಪತ್ರೆಗಳಿಗೆ ಕೂಡಲೇ ನೀರು ಮತ್ತು ವಿದ್ಯುತ್ ಸರಬರಾಜು ನಿಲ್ಲಿಸುವುದೂ ಸೇರಿದಂತೆ ಎಲ್ಲ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು. ನೀವು ಚಿಕಿತ್ಸೆ ನೀಡುವ ಕೋವಿಡ್ ರೋಗಿಗಳ ಪೂರ್ಣ ವೆಚ್ಚವನ್ನು ಸರಕಾರವೇ ಭರಿಸಲಿದೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ಆಸ್ಪತ್ರೆಗಳು ತಮ್ಮ ವೃತ್ತಿಧರ್ಮದಿಂದ ಪಲಾಯನ ಮಾಡಬಾರದು ಎಂದು ತಿಳಿಸಿದರು.

ಈ ನಡುವೆ ಡಿಸಿಎಂ ಮಾತಿಗೆ ಕಿವಿಗೊಟ್ಟ ಹಲವಾರು ಆಸ್ಪತ್ರೆಗಳ ಮುಖ್ಯಸ್ಥರು, ಕೂಡಲೇ ತಮ್ಮಲ್ಲಿರುವ ಹಾಸಿಗೆಗಳಲ್ಲಿ ಅರ್ಧದಷ್ಟನ್ನು ಸರಕಾರಕ್ಕೆ ನೀಡಲಾಗುವುದು ಎಂದು ಭರವಸೆ ನೀಡಿದರು.ರಾಜಾಜಿನಗರದ ಸಭೆಯಲ್ಲಿ ಸಚಿವ ಸುರೇಶ್ ಕುಮಾರ್ ಹಾಗೂ ಮಹಾಲಕ್ಷ್ಮೀ ಲೇಔಟ್ ಸಭೆಯಲ್ಲಿ ಸಚಿವ ಕೆ. ಗೋಪಾಲಯ್ಯ ಉಪಸ್ಥಿತರಿದ್ದರು. ಜತೆಗೆ, ಪಾಲಿಕೆ, ಆರೋಗ್ಯ ಮತ್ತಿತರೆ ಇಲಾಖೆಗಳ ಅಧಿಕಾರಿಗಳು ಕೂಡ ಹಾಜರಿದ್ದರು.

ಕೋವಿಡ್-19ರಲ್ಲಿ ಕಾಂಗ್ರೆಸ್ಸಿಗರ ಸುಳ್ಳುಲೆಕ್ಕ: ಅಸಲಿ ಲೆಕ್ಕ ಜನರ ಮುಂದಿಟ್ಟ ಡಿಸಿಎಂ ಮತ್ತು ಶ್ರೀರಾಮುಲು

ಬೆಂಗಳೂರು: ಕೋವಿಡ್-19 ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಮತ್ತು ಆರೋಗ್ಯ ಸಚಿವ ಶ್ರೀರಾಮುಲು, ಈ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರು ಮಾಡುತ್ತಿರುವ ಆರೋಪಗಳು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿವೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಪರಿಕರವನ್ನು ಆಯಾ ಸಂದರ್ಭದಲ್ಲಿ ಕಾನೂನಿನ ಚೌಕಟ್ಟಿನಲ್ಲಿಯೇ ಖರೀದಿ ಮಾಡಲಾಗಿದೆ. ಇದರಲ್ಲಿ ಒಂದು ನಯಾಪೈಸೆಯಷ್ಟೂ ಅಕ್ರಮ ನಡೆದಿಲ್ಲ. ಕೇವಲ ದುರುದ್ದೇಶದಿಂದ ಮಾತ್ರ ಪ್ರತಿಪಕ್ಷ ನಾಯಕರು ಅರೋಪ ಮಾಡುತ್ತಿದ್ದಾರೆಂದು ತಿರುಗೇಟು ನೀಡಿದರು.

ಕೋವಿಡ್‌ -19 ಉಪಕರಣಗಳ ಖರೀದಿಯಲ್ಲಿ 2,200 ಕೋಟಿ ರೂ. ಅವ್ಯವಹಾರ ನಡೆದಿದೆ ಎಂಬುದು ಪ್ರತಿಪಕ್ಷ ನಾಯಕರ ಕಪೋಲಕಲ್ಪಿತ ಊಹೆ ಮಾತ್ರ. ಕೇವಲ ಆರೋಪ ಮಾಡಲಿಕ್ಕೆ ಮಾತ್ರವೇ ಅವರು ಹೀಗೆ ಹೇಳಿರುವುದು ಎಂದು ಡಿಸಿಎಂ ಹೇಳಿದರೆ, ವೆಂಟಿಲೇಟರ್​​ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ವಿಪಕ್ಷ ನಾಯಕರು ಆರೋಪಿಸಿರುವುದು ಸರಿಯಲ್ಲ. ನನ್ನ ಅವಧಿಯಲ್ಲಿ ಒಂದು ವೇಳೆ ಅವ್ಯವಹಾರ ನಡೆದಿದ್ದರೇ ಒಂದು ಕ್ಷಣವೂ ನಿಲ್ಲದೆ ರಾಜೀನಾಮೆ ನೀಡುತ್ತೇನೆ ಎಂದು ಶ್ರೀರಾಮುಲು ಸವಾಲು ಹಾಕಿದರು.

ಅವರಿಬ್ಬರೂ ಹೇಳಿದ್ದಿಷ್ಟು ಹೀಗೆ:

*ಅಂಕಿ-ಅಂಶಗಳನ್ನು ಹೇಳುವ ಭರದಲ್ಲಿಯೇ ಪ್ರತಿಪಕ್ಷ ನಾಯಕರು ಸುಳ್ಳು ಲೆಕ್ಕ ಹೇಳಿದ್ದಾರೆ. 2,220 ಕೋಟಿ ರೂ. ಅಕ್ರಮ ನಡೆದಿದೆ ಎಂದು ಅವರು ಹೇಳಿದ್ದಾರೆ. ಆದರೆ, ಇಡೀ ಕೋವಿಡ್’ಗಾಗಿ ಸರಕಾರ ಖರೀದಿ ಮಾಡಿರುವ ಪರಿಕರಗಳ ಒಟ್ಟಾರೆ ಮೊತ್ತ 290.6 ಕೋಟಿ ರೂ. ಮಾತ್ರ. ವೈದ್ಯಕೀಯ ಶಿಕ್ಷಣ ಇಲಖೆಯಲ್ಲಿ 33 ಕೋಟಿಯಷ್ಟು ಮೊತ್ತದ ಪರಿಕರಗಳನ್ನು ಖರೀದಿಸಲಾಗಿದೆ. ಹಾಗಾದರೆ ಉಳಿದ ಲೆಕ್ಕದ ಬಗ್ಗೆ ಅವರು ಏನು ಹೇಳುತ್ತಾರೆ? ಅವರು ಜನರನ್ನು ದಿಕ್ಕು ತಪ್ಪಿಸಲು ಹಾಗೂ ಸರಕಾರಕ್ಕೆ ಮಸಿ ಬಳಿಯಲು ಇಂಥ ಲೆಕ್ಕಗಳನ್ನು ಸೃಷ್ಟಿಸಿದ್ದಾರೆ.

*ವೆಂಟಿಲೇಟರ್​​​​ ಖರೀದಿ ಎಂಬುದು ಸುಖಾಸುಮ್ಮನೆ ಮಾಡುವಂಥದ್ದಲ್ಲ. ಹತ್ತಾರು ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಜತೆಗೆ, ತಾಂತ್ರಿಕತೆ ಅಂಶಗಳ ಆಧಾರದ ಮೇಲೆ ಖರೀದಿ ಮಾಡಬೇಕಾಗುತ್ತದೆ. ಸುಮಾರು 4 ಲಕ್ಷ ರೂ.ಗಳಿಂದ 50-60 ಲಕ್ಷ ರೂ. ಮೌಲ್ಯದ ವೆಂಟಿಲೇಟರ್’​​ಗಳೂ ಇವೆ. ಅವುಗಳಲ್ಲಿ ಅಡಗಿರುವ ಸೌಲಭ್ಯಗಳ ಮೇಲೆ ದರ ನಿಗದಿ ಆಗುತ್ತದೆ. ಕೇವಲ 4 ಲಕ್ಷದ ದರದ ಮೇಲೆ ಮಾತ್ರ ವೆಂಟಿಲೇಟರ್’ಗಳನ್ನು​ ಖರೀದಿ ಮಾಡಲಾಗಿಲ್ಲ. ಜತೆಗೆ, ತುರ್ತು ನಿಗಾ ಘಟಕದಲ್ಲಿ ಬಳಸಲ್ಪಡುವ ವೆಂಟಿಲೇಟರ್‌ಗೆ 18 ಲಕ್ಷಕ್ಕೂ ಹೆಚ್ಚು ದರವಿದೆ. ಇವೆಲ್ಲ ಮಾಹಿತಿಯನ್ನು ಪ್ರತಿಪಕ್ಷ ನಾಯಕರು ಸೂಕ್ತವಾಗಿ ಸಂಗ್ರಹ ಮಾಡಬೇಕಾಗಿತ್ತು.

*ವೆಂಟಿಲೇಟರ್ ಖರೀದಿ ವ್ಯವಹಾರ ಒಂದರಲ್ಲೇ 120 ಕೋಟಿ ರೂ. ಅವ್ಯವಹಾರ ಆಗಿದೆ ಎಂದು ಅವರು ದೂರಿದ್ದಾರೆ. ಇದುವರೆಗೂ 10.61 ಕೋಟಿ ರೂ. ಮೌಲ್ಯದ ವೆಂಟಿಲೇಟರ್’ಗಳನ್ನಷ್ಟೇ ಖರೀದಿ ಮಾಡಲಾಗಿದೆ. ಇನ್ನು, ಪಿಪಿಇ ಕಿಟ್‌ ಖರೀದಿಗೆ 79.35 ಕೋಟಿ ರೂ.ಗಳಷ್ಟು ಖರ್ಚು ಮಾಡಲಾಗಿದೆ. ಇದೊಂದರಲ್ಲಿಯೇ 150 ಕೋಟಿ ರೂ.ಗಳಿಗೂ ಹೆಚ್ಚು ಅಕ್ರಮ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದರು. ಎಲ್ಲಿದೆ ಅವರ ಲೆಕ್ಕ? ಈಗ ಹೇಳಲಿ ಉತ್ತರ.

*N-95 ಮಾಸ್ಕ್ ಖರೀದಿಯಲ್ಲೂ ಸರಕಾರ ನಿಯಮಗಳನ್ನು ಬಿಟ್ಟು ಆಚೀಚೆ ಕದಲಿಲ್ಲ. ಪ್ರತಿ ಒಂದು ಮಾಸ್ಕ್ ಅನ್ನು ಆರಂಭದಲ್ಲಿ ಅಂದರೆ ಮಾರ್ಚ್ ನಲ್ಲಿ 147 ರೂ. ಖರೀದಿಸಿದ್ದೇವೆ. ಈಗ ಅದರ ಬೆಲೆ 44.75 ರೂಪಾಯಿಗೆ ಇಳಿದಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ಈ ಮಾಸ್ಕ್ ಖರೀದಿಗೆ 11.51 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಇದೇ ರೀತಿ ಅಗತ್ಯಕ್ಕೆ ತಕ್ಕಂತೆ ಸರ್ಜಿಕಲ್ ಗ್ಲೌಸ್‌’ಗಳನ್ನು ಖರೀದಿ ಮಾಡಲಾಗಿದೆ. ಕೇರಳದ ಕಂಪನಿಯವರು ತಲಾ ಒಂದು ಸರ್ಜಿಕಲ್ ಗ್ಲೌಸ್‌ಗೆ 8.10 ರೂ. ಕೊಡುತ್ತೇವೆಂದು ಒಪ್ಪಿದ್ದರು. ಬಳಿಕ ಅವರು ಸರಬರಾಜು ಮಾಡಲಿಲ್ಲ. ಆಮೇಲೆ ಬೆಂಗಳೂರಿನ ಕಂಪನಿಯೊಂದಕ್ಕೆ ಆದೇಶ ನೀಡಲಾಯಿತು. ಪ್ರತಿ ಒಂದು ಗ್ಲೌಸ್​​ 9.50 ರೂ.ಗೆ ಕೊಡುತ್ತೇವೆ ಎಂದು ಅವರು ತಿಳಿಸಿದ್ದರು. ಅವರಿಗೆ 3 ಲಕ್ಷ ಗ್ಲೌಸುಗಳಿಗೆ ಆದೇಶ ನೀಡಲಾಗಿತ್ತು. ಅವರು ನೋಡಿದರೆ ಕೇವಲ 30 ಸಾವಿರ ಗ್ಲೌಸುಗಳನ್ನು ಪೂರೈಕೆ ಮಾಡಿದ್ದಾರೆ. ಇದಕ್ಕೆ 28.5 ಲಕ್ಷ ಆಗಿದೆ.

*ಸ್ಯಾನಿಟೈಸರ್ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರದ ಆದೇಶದಂತೆ ಸ್ಯಾನಿಟೈಸರ್ ಖರೀದಿ ಆಗಿದೆ. 500 ಎಂ.ಎಲ್. ಬಾಟಲಿಯ 25 ಸಾವಿರ ಲೀಟರ್‌ಗೆ ಆದೇಶ ನೀಡಿದ್ದೇವೆ. ಈವರೆಗೂ ಬೇರೆ ಬೇರೆ ಕಂಪನಿಗಳೊಂದಿಗೆ 2.65 ಕೋಟಿ ರೂ. ಮೊತ್ತದಷ್ಟು ಸ್ಯಾನಿಟೈಸರಗ ಖರೀದಿ ಮಾಡಲಾಗಿದೆ. ಸಿಎಸ್ ಆರ್ ಹಣದಿಂದ ಹಲವಾರು ಸರಬರಾಜು ‌ಮಾಡುತ್ತಿರುವ ಕಾರಣ ಇದರ ಖರೀದಿ‌ ನಿಲ್ಲಿಸಿದ್ದೇವೆ

ಶ್ರೀರಾಮುಲು ಸವಾಲು:

ಇಡೀ ದೇಶದಲ್ಲಿ ಕೊರೋನಾಗೆ ಮೊದಲ ಸಾವು ಆಗಿದ್ದು ಕಲ್ಬುರ್ಗಿಯಲ್ಲಿ. ನಾನು ಎರಡು ದಿನ ಅಲ್ಲೇ ಇದ್ದು ವೈದ್ಯರಿಗೆ ಧೈರ್ಯ ತುಂಬಿದೆ. ಕೇವಲ 4 ಕಾಂಪೋನೆಂಟ್ ಇರುವ ಪಿಪಿಇ ಕಿಟ್ ಕೊಟ್ಟರೇ ಆಗಲ್ಲ ಎಂದು ವೈದ್ಯರೇ ಹೇಳಿದ್ದರು. ಬಳಿಕ 6 ಕಾಂಪೋನೆಂಟ್ ಇರುವ ಪಿಪಿಇ ಕಿಟ್ ಬೇಕು ಎಂದರು. ಅದನ್ನು ತಯಾರು ಮಾಡಲು ಮುಂದಾಗಿದ್ದೆವು. 1 ಲಕ್ಷ ಕಿಟ್ ತಯಾರು ಮಾಡಲು ಆದೇಶ ನೀಡಿದೆವು. ಈವರೆಗೂ ನಮಗೆ 40 ಸಾವಿರ ಕಿಟ್ ಮಾತ್ರ ಪೂರೈಕೆಯಾಗಿದೆ. ನಾವು ಕೆಲಸ ಮಾಡುತ್ತಿರುವುದು ಪ್ರತಿಪಕ್ಷದ ಕಣ್ಣಿಗೆ ಕಾಣುವುದಿಲ್ಲವೇ? ಅಕ್ರಮವನ್ನು ಅವರು ಸಾಬೀತು ಮಾಡಿದರೆ ಈಗಲೇ ಕುರ್ಚಿ ಬಿಟ್ಟು ಎದ್ದು ಹೋಗುತ್ತೇನೆ ಎಂದು ಸವಾಲು ಹಾಕಿದರು ಶ್ರೀರಾಮುಲು.

ಮುಖ್ಯಮಂತ್ರಿಯಾದಿಯಾಗಿ ನಾವೆಲ್ಲರೂ ಬಹಳ ಕಷ್ಟಪಟ್ಟು ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದೇವೆ. ಅಂಥ ವೇಳೆಯಲ್ಲಿ 6 ಕಾಂಪೋನೆಂಟ್‌ನಿಂದ 10 ಕಾಂಪೋನೆಂಟ್ ಇರುವ ಪಿಪಿಇ ಕಿಟ್ ಬೇಕು ಎಂದು ವೈದ್ಯರು ಬೇಡಿಕೆ ಇಟ್ಟರು. ಚೀನಾ, ಸಿಂಗಾಪುರದಿಂದ ಈ ಕಿಟ್ ಖರೀದಿ ಮಾಡಿದ್ದೇವೆ. ಮೂರು ಕಂಪನಿಗಳಿಂದ ಒಟ್ಟು 10 ಲಕ್ಷ ಕಿಟ್ ಖರೀದಿಸಿದ್ದೇವೆ. ಆರಂಭದಲ್ಲಿ ಅದರ ಬೆಲೆ ಹೆಚ್ಚಿತ್ತು. ಇದರ ಬೆಲೆ ಇದ್ದಿದ್ದು ಬೇರೆ, ಈಗಿನ ದರ ಬೇರೆ ಇದೆ.

ವಸ್ತುಸ್ಥಿತಿ ಅರಿಯಬೇಕೆಂದ ಡಿಸಿಎಂ:

ಕೋವಿಡ್-19 ಬಂದಾಗ ಒಂದು‌ ಕಂಪನಿ ಮಾತ್ರ ವೆಂಟಿಲೇಟರ್’ಗಳನ್ನು ತಯಾರು ಮಾಡುತ್ತಿತ್ತು. ಹೀಗಾಗಿ ಆಗಲೇ 130 ವೆಂಟಿಲೇಟರ್‌ಗೆ ಆದೇಶ ನೀಡಲಾಗಿತ್ತು. ಅದನ್ನು ವೈದ್ಯಕೀಯ ಶಿಕ್ಷಣ ಇಲಾಖೆಯಿಂದಲೂ ಆರ್ಡರ್ ಮಾಡಲಾಗಿತ್ತು. ಆ ಕಂಪನಿ 130 ವೆಂಟಿಲೇಟರ್ ಪೈಕಿ 80 ಮಾತ್ರ ಪೂರೈಸಿತ್ತು. ಪ್ರತಿಯೊಂದರ ಬೆಲೆ 5.65 ಲಕ್ಷ. 18 ಲಕ್ಷ ರೂ.ಗಳಿಗೆ ಐಸಿಯು‌ನಲ್ಲಿ‌ ಬಳಸಬಹುದಾದ ಉತ್ಕೃಷ್ಟ ಗುಣಮಟ್ಟದ ವೆಂಟಿಲೇಟರ್ ಖರೀದಿಯಾಗಿದೆ. ಇನ್ನು ತಮಿಳುನಾಡಿನಲ್ಲಿ ಕೇವಲ 4 ಲಕ್ಷಕ್ಕೆ ವೆಂಟಿಲೇಟರ್ ಕೊಡುತ್ತಾರೆ ಎನ್ನುತ್ತಾರೆ. ಅದು ಮೊಬೈಲ್ ವೆಂಟಿಲೇಟರ್. ಒಂದು‌ ಕಡೆಯಿಂದ ಇನ್ನೊಂದು ಕಡೆ ತೆಗೆದುಕೊಂಡು ಹೋಗಲು, ಕೇವಲ ಅಂಬ್ಯುಲೆನ್ಸ್‌ನಲ್ಲಿ ಬಳಕೆಯಾಗುವ ವೆಂಟಿಲೇಟರ್ ಅದು. ಶಿವಾನಂದ ಪಾಟೀಲ್ ಆರೋಗ್ಯ ಸಚಿವರಾಗಿದ್ದಾಗ 2019ರಲ್ಲಿ ವೆಂಟಿಲೇಟರ್ ಖರೀದಿಯಾಗಿದೆ. ಆಗ 15,12,000 ರೂ. ವೆಚ್ಚ ಮಾಡಲಾಗಿದೆ. ಅಂದಿನ ಪರಿಸ್ಥಿತಿ ಏನಿತ್ತು? ಇದುವರೆಗೆ ಮೂರು ಬಾರಿ ವೆಂಟಿಲೇಟರ್ ಖರೀದಿಯಾಗಿದೆ. ಇದೆಲ್ಲ ಪ್ರತಿಪಕ್ಷ ನಾಯಕರಿಗೆ ಗೊತ್ತಿಲ್ಲವೇ? ಎಂದು ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ಪ್ರಶ್ನಿಸಿದ್ದಾರೆ.

ರಾಜ್ಯ ಈ ವರ್ಷದ ಆರಂಭದಿಂದಲೂ ಕೋವಿಡ್-19 ಎದುರಿಸುವ ಪರಿಸ್ಥಿತಿ ಬಂದಿದೆ. ಆರೋಗ್ಯ ಇಲಾಖೆಯಲ್ಲಿ ಹೆಚ್ಚಿನ ವ್ಯವಸ್ಥೆ ಮಾಡಬೇಕಿತ್ತು. ಬೇರೆ ಹಂತದಲ್ಲಿ ಹುಷಾರು ತಪ್ಪಿದವರು ಆಸ್ಪತ್ರೆಗೆ ಬರುತ್ತಾರೆ. ಹಿಂದೆ ದುಡ್ಡು ಕೊಟ್ಟರೂ ಸ್ಯಾನಿಟೈಜೇಷರ್, N-95 ಮಾಸ್ಕ್ ಸಿಗುತ್ತಿರಲಿಲ್ಲ. ಪಿಪಿಇ ಕಿಟ್ ಕೂಡ ಇರಲಿಲ್ಲ. ಎಲ್ಲಾ ಪರಿಕರಗಳನ್ನು ಚೀನಾದಿಂದಲೇ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈ ಸೋಂಕಿನಿಂದ ಏಕಾಏಕಿ ಬೇಡಿಕೆ ಹೆಚ್ಚಾಯಿತು. ಅಂತಹ ಸಂದರ್ಭದಲ್ಲಿ ಚೀನಾ ಕೂಡ ಕೈಕೊಟ್ಟಿತು. ಇವತ್ತು ಒಳ್ಳೆಯ ಪಿಪಿಇ ಕಿಟ್ 3,900 ರೂ. ಇದೆ ಎಂದು ಡಿಸಿಎಂ ಮಾಹಿತಿ ನೀಡಿದರು.

ತನಿಖೆಯ ಪ್ರಶ್ನೆಯೇ ಇಲ್ಲ:

ಕಾಂಗ್ರೆಸ್ ಕೇವಲ ರಾಜಕೀಯಕ್ಕಾಗಿ ಆರೋಪ ಮಾಡುತ್ತಿದೆ. ಇದರಲ್ಲಿ ತನಿಖೆಯ ಪ್ರಶ್ನೆಯೇ ಇಲ್ಲ. ಅಗತ್ಯಬಿದ್ದರೆ ಸದನದಲ್ಲಿ ಉತ್ತರ ನೀಡಲು ಸರಕಾರ ಸಿದ್ಧವಿದೆ. ಸರಕಾರದ್ದು ಎಳ್ಳಷ್ಟು ತಪ್ಪಿಲ್ಲ. ಹೀಗೆ ತಪ್ಪಿಲ್ಲ ಎಂದ ಮೇಲೆ ತನಿಖೆಯ ಮಾತೇ ಬರುವುದಿಲ್ಲ. ಸುಖಾಸುಮ್ಮನೆ ಹಿಟ್ ಅಂಡ್ ರನ್ ಮಾಡಬಾರದು ಎಂದು ಡಿಸಿಎಂ ತರಾಟೆಗೆ ತೆಗೆದುಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದಶೀ ಜಾವೇದ್ ಆಖ್ತರ್, ರಾಜ್ಯ ಡ್ರಗ್ಸ್ ಲಾಜಿಸಿಕ್ಟಿಕ್ಸ್ ಸಂಸ್ಥೆ ಹೆಚ್ಚುವರಿ ನಿರ್ದೇಶಕಿ ಎನ್ ಮಂಜುಶ್ರೀ ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದರು.