ಶೀಘ್ರದಲ್ಲೇ ಕಾಂಗ್ರೆಸ್ ಆರೋಗ್ಯ ಅಭಯ ಹಸ್ತ ಯೋಜನೆ ಅನುಷ್ಠಾನಕ್ಕೆ; ಡಿಕೆ ಶಿವಕುಮಾರ್

ಬೆಂಗಳೂರು:ಹಳ್ಳಿ ಜನರ ಆರೋಗ್ಯ ತಪಾಸಣೆಗೆ ಶೀಘ್ರದಲ್ಲೇ ಕಾಂಗ್ರೆಸ್ ಆರೋಗ್ಯ ಅಭಯ ಹಸ್ತ ಯೋಜನೆ ಹಮ್ಮಿಕೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ, ವಿಧಾನಸಭಾ ಕ್ಷೇತ್ರ, ಬ್ಲಾಕ್ ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಉಸ್ತುವಾರಿಗೆ ನಿಯೋಜಿತರಾಗಿರುವ ಪ್ರತಿನಿಧಿಗಳೊಂದಿಗೆ ಜತೆ ಚರ್ಚೆ ನಡೆಸಿದ ಡಿ.ಕೆ ಶಿವಕುಮಾರ್ ಈ ಯೋಜನೆ ಬಗ್ಗೆ ವಿವರಿಸಿದರು.

ಪ್ರತಿ ಗ್ರಾಮ ಪಂಚಾಯ್ತಿಗೆ ಕಾಂಗ್ರೆಸ್ ನ ಮೂರು ಜನರ ಪ್ರತಿನಿಧಿಗಳ ತಂಡ ಭೇಟಿ ನೀಡಲಿದೆ. ಈ ತಂಡದವರು ಪಿಪಿಇ ಕಿಟ್ ಧರಿಸಲಿದ್ದು, ಇವರಿಗೆ ಉಷ್ಣ ಮಾಪಕ (ಥರ್ಮಲ್ ಸ್ಕ್ಯಾನರ್), ಪಲ್ಸ್ ಆಕ್ಸಿಮೀಟರ್, ಸ್ಯಾನಿಟೈಸರ್ ಅನ್ನು ನೀಡಲಾಗುವುದು. ಈ ತಂಡ ಹಳ್ಳಿಗಳಲ್ಲಿ ಜನರ ದೇಹದ ಉಷ್ಣತೆ, ಅವರಲ್ಲಿ ಆಕ್ಸಿಜನ್ ಪ್ರಮಾಣ ಪರೀಕ್ಷಿಸುತ್ತಾರೆ.

ಒಂದು ವೇಳೆ ಉಷ್ಣತೆ ಅಥವಾ ಆಕ್ಸಿಜನ್ ಪ್ರಮಾಣದಲ್ಲಿ ವ್ಯತ್ಯಾಸವಿದ್ದರೆ, ಕಾಂಗ್ರೆಸ್ ವೈದ್ಯ ಘಟಕದ ವೈದ್ಯರ ಜತೆ ಚರ್ಚಿಸಿ ಅವರಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಿದ್ದಾರೆ. ತೀರಾ ಅಗತ್ಯವೆನಿಸಿದರೆ ಅವರಿಗೆ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಲು ಸಲಹೆ ನೀಡಲಾಗುವುದು ಎಂದು ವಿವರಿಸಿದರು.

ಕೋವಿಡ್ ಸೋಂಕಿತರು ಬಳಸಿದ ಹಾಸಿಗೆಗಳನ್ನು ಹಾಸ್ಟೆಲ್ ಮಕ್ಕಳಿಗೆ ನೀಡುವುದರ ವಿರುದ್ಧ ಆಂದೋಲನ: ಡಿ.ಕೆ ಶಿವಕುಮಾರ್

ಬೆಂಗಳೂರು, ಜು.20:ಕೋವಿಡ್ ಸೋಂಕಿತರು ಬಳಸಿದ ಹಾಸಿಗೆಗಳನ್ನು ನಂತರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡುವ ಸರಕಾರದ ತೀರ್ಮಾನದ ವಿರುದ್ಧ ಆಂದೋಲನ ಆರಂಭಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಕೋವಿಡ್ ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ಸಂಪೂರ್ಣ ವೈಫಲ್ಯ, ಕೋವಿಡ್ ಸಲಕರಣೆ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತಿತರ ವಿಚಾರಗಳ ಬಗ್ಗೆ ಸೋಮವಾರ ಹಿರಿಯ ಮುಖಂಡರ ಸಭೆ ನಡೆಸಿದ ನಂತರ ಮಾಧ್ಯಮಗಳ ಜತೆ ಅವರು ಮಾತನಾಡಿದರು.

ಈ ವೇಳೆ ಅವರು ಹೇಳಿದ್ದಿಷ್ಟು:

ಸರಕಾರ 10 ಸಾವಿರವೋ 20 ಸಾವಿರವೋ ಹಾಸಿಗೆಗಳನ್ನು ಖರೀದಿಸುತ್ತಿದೆ. ಮೊದಲು ಒಂದಕ್ಕೆ ಮೂರರಷ್ಟು ದರ ನಿಗದಿ ಮಾಡಿ ಬಾಡಿಗೆಗೆ ಎಂದರು. ಈಗ ಖರೀದಿ ಮಾಡುತ್ತಾರಂತೆ. ಅವುಗಳನ್ನು ಕೋವಿಡ್ ಸೋಂಕಿತರು ಬಳಸಿದ ನಂತರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕೊಡಲು ಅಧಿಕಾರಿಗಳು ಮಾಡಿರುವ ಸಲಹೆಯನ್ನು ಸರಕಾರ ಒಪ್ಪಿದೆ. ಅದಕ್ಕೆ ನನ್ನ ಬಳಿ ದಾಖಲೆಗಳಿವೆ.

ಈ ದೇಶದಲ್ಲಿ ವಿದ್ಯಾವಂತಿಕೆ, ಬುದ್ಧಿವಂತಿಕೆ ಇಲ್ಲದಿದ್ದರೂ ಪರವಾಗಿಲ್ಲ. ಆದರೆ ಪ್ರಜ್ಞಾವಂತಿಕೆ ಇರಬೇಕು. ಸೋಂಕಿನಿಂದ ಸತ್ತವರ ದೇಹವನ್ನು ಮುಟ್ಟಲು ಹಿಂದೆ ಮುಂದೆ ನೋಡುತ್ತಿರುವ ಈ ಸರ್ಕಾರ ಈಗ ಸೋಂಕಿತರು ಬಳಸಿದ ಹಾಸಿಗೆ ವಸ್ತುಗಳನ್ನು ಹಾಸ್ಟೆಲ್ ವಿದ್ಯಾರ್ಥಿಗಳು, ನಮ್ಮ ಹಳ್ಳಿ ಮಕ್ಕಳಿಗೆ ಹೇಗೆ ನೀಡುತ್ತಾರೆ? ಇವರಿಗೇನಾದರೂ ಬುದ್ಧಿ ಇದೆಯೇ? ಇವರು ಎಂತೆಂಥ ಸಲಹೆಗಾರರು, ಅಧಿಕಾರಿಗಳನ್ನು ಇಟ್ಟುಕೊಂಡಿದ್ದಾರೆ, ಸರಕಾರ ಹೇಗೆ ಆಡಳಿತ ನಡೆಸುತ್ತಿದೆ ಎಂಬುದಕ್ಕೆ ಇದು ಬಹುದೊಡ್ಡ ಸಾಕ್ಷಿ. ಯಾವುದೇ ಕಾರಣಕ್ಕೂ
ನಾವು ಇದಕ್ಕೆಅವಕಾಶ ನೀಡುವುದಿಲ್ಲ.

ಬೇಕಾದರೆ ಆ ಹಾಸಿಗೆಗಳನ್ನು ಮುಖ್ಯಮಂತ್ರಿಗಳು, ಸಚಿವರು ಹಾಗೂ ಅಧಿಕಾರಿಗಳ ಮನೆಗೆ ತೆಗೆದುಕೊಂಡು ಹೋಗಿ ಬಳಸಿಕೊಳ್ಳಲಿ. ಅವರ ಮಕ್ಕಳಿಗೆ ಕೊಡಲಿ. ಆದರೆ ಹಳ್ಳಿ ಮಕ್ಕಳು ಹಾಗೂ ವಿದ್ಯಾರ್ಥಿ ಹಾಸ್ಟೆಲ್ ಗಳಲ್ಲಿ ಇವುಗಳನ್ನು ಬಳಸಲು ನಾವು ಅವಕಾಶ ನೀಡುವುದಿಲ್ಲ. ನಮ್ಮ ಮಕ್ಕಳನ್ನು ಸೋಂಕಿನ ಅಪಾಯಕ್ಕೆ ದೂಡಲು ಬಿಡಲ್ಲ. ವಿದ್ಯಾರ್ಥಿಗಳು, ಪೋಷಕರು, ಯುವಕರು, ಹೆಣ್ಣುಮಕ್ಕಳು ಇದರ ವಿರುದ್ಧ ಧ್ವನಿ ಎತ್ತಬೇಕು, ಹೋರಾಡಬೇಕು. ಹಳ್ಳಿ ಮಕ್ಕಳು, ಬಡವರ ಮಕ್ಕಳ ಜೀವದ ಜತೆ ಸರಕಾರ ಚೆಲ್ಲಾಟವಾಡಲು ನಾವು ಬಿಡಲ್ಲ. ಇದರ ವಿರುದ್ಧ ಆಂದೋಲನ ಆರಂಭಿಸುತ್ತೇವೆ.

ಜನರನ್ನು ತಲುಪಲು ಕಾರ್ಯಕ್ರಮ:

ಕೋವಿಡ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಿ, ಅವರಿಗೆ ಧೈರ್ಯ ತುಂಬಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಆದರೆ ಈ ಸಮಯದಲ್ಲಿ ಯಾವುದೇ ರಾಜಕೀಯ ಸಭೆ ನಡೆಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ. ಹಾಗಂತ ನಾವು ಸುಮ್ಮನೆ ಕೂರಲು ಆಗುವುದಿಲ್ಲ. ಕಷ್ಟದಲ್ಲಿರುವವರ ನೆರವಿಗೆ ಧಾವಿಸಬೇಕಾದದ್ದು ನಮ್ಮ ಧರ್ಮ. ನಮಗೇನೂ ಇದರಲ್ಲಿ ರಾಜಕೀಯ ಬೇಕಿಲ್ಲ. ಹಿರಿಯ ಮುಖಂಡರ ಜತೆ ಚರ್ಚಿಸಿ ಶೀಘ್ರದಲ್ಲೇ ಕಾರ್ಯಕ್ರಮ ರೂಪಿಸುತ್ತೇವೆ. ಅದರ ಸ್ವರೂಪವನ್ನು ನಿರ್ಧರಿಸುತ್ತೇವೆ.

ಗುರುವಾರ ಪತ್ರಿಕಾಗೋಷ್ಠಿ ಕರೆದು ಕಾರ್ಯಕ್ರಮದ ಬಗ್ಗೆ ವಿವರಿಸಲಾಗುವುದು. ಸರ್ಕಾರ ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇನ್ನು ಚಿಕಿತ್ಸಾ ಸಲಕರಣೆ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಈ ಎಲ್ಲ ವಿಚಾರವನ್ನು ನಾವು ಜನರಿಗೆ ಮುಟ್ಟಿಸಬೇಕಿದೆ. ಅದು ನಮ್ಮ ಜವಾಬ್ದಾರಿಯೂ ಹೌದು.

ಈ ಕಾರ್ಯಕ್ರಮ ಸ್ವರೂಪ ಹೇಗಿರುತ್ತದೆ, ಹಿರಿಯ ಮುಖಂಡರು, ಮಾಜಿ ಸಚಿವರು, ಸಂಸದರು, ಶಾಸಕರು, ಮಾಜಿ ಶಾಸಕರು ಸೇರಿದಂತೆ ಯಾವ, ಯಾವ ನಾಯಕರು ಎಲ್ಲಿಗೆ ಹೋಗುತ್ತಾರೆ ಎಂಬುದರ ವಿವರವನ್ನು ಶೀಘ್ರದಲ್ಲೇ ತಿಳಿಸುತ್ತೇವೆ.

ಕೋವಿಡ್ ಪರಿಸ್ಥಿತಿ, ಸರಕಾರದ ವೈಫಲ್ಯ, ಭ್ರಷ್ಟಾಚಾರವನ್ನು ಬಯಲಿಗೆಳೆದು, ಯಥಾಸ್ಥಿತಿಯನ್ನು ಜನರಿಗೆ ಮುಟ್ಟಿಸುವಲ್ಲಿ ಮಾಧ್ಯಮಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿವೆ. ಇದಕ್ಕಾಗಿ ನಿಮ್ಮ ಕಾರ್ಯಕ್ಕೆ ಅಭಿನಂದನೆಗಳು.

ದೊಡ್ಡ ಅಣ್ಣಂದಿರೆಲ್ಲ ಬೇಕಾದ್ದು ಮಾತನಾಡಲಿ:

ಕಾಂಗ್ರೆಸ್ ನವರು ಜೆಡಿಎಸ್ ಅವರನ್ನು ನೋಡಿ ಕಲಿಯಲಿ ಎಂದು ಸಚಿವ ಅಶೋಕ್ ನೀಡಿರುವ ಹೇಳಿಕೆ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಅವರು ಅಧಿಕಾರದಲ್ಲಿದ್ದಾರೆ. ಅವರು ದೊಡ್ಡವರು, ಏನು ಬೇಕಾದರೂ ಹೇಳಲಿ. ಅಶೋಕ್ ಅಣ್ಣನಷ್ಟೇ ಅಲ್ಲ, ಶ್ರೀರಾಮುಲು ಅಣ್ಣಾ, ಸುಧಾಕರಣ್ಣಾ, ಯಡಿಯೂರಪ್ಪನವರು ಸೇರಿದಂತೆ ಮಂತ್ರಿ ಮಂಡಲದ ಯಾರು ಬೇಕಾದರೂ ಏನನ್ನಾದರೂ ಹೇಳಲಿ. ಅವರಿಗೆ ಅನಿಸಿದ್ದು ಅವರು ಮಾಡಲಿ. ಮಾಧ್ಯಮದವರು ಜನರ ಸಮಸ್ಯೆಗಳನ್ನು ಹೊರಗೆ ತರುತ್ತಿದ್ದೀರಿ. ನಾವು ಜನರ ಜತೆ ಇರಲು ಬಯಸುತ್ತೇವೆ. ನಾವಿಬ್ಬರೂ ಸೇರಿ ಒಟ್ಟಿಗೆ ಕೆಲಸ ಮಾಡೋಣ.

ಕೋವಿಡ್ ಸಲಕರಣೆಗಳ ಖರೀದಿ ಅಕ್ರಮ ಆರೋಪಕ್ಕೆ ಸಚಿವರು ನೀಡಿರುವ ಸ್ಷಷ್ಟನೆ, ವಿವರಣೆ ಕುರಿತು ಮಾತನಾಡಿದ ಶಿವಕುಮಾರ್ ಅವರು, ನಮ್ಮ ಬಳಿ ದಾಖಲೆಗಳಿವೆ. ಯಾರು, ಯಾರು ಏನು ಮಾಡಿದ್ದಾರೆಂಬ ಬಗ್ಗೆ ವಿವರಗಳಿವೆ. ಒಂದೇ ವಸ್ತುವಿಗೆ ತಮಿಳುನಾಡಿನಲ್ಲಿ ಎಷ್ಟು, ಇಲ್ಲೆಷ್ಟು ಕೊಟ್ಟಿದ್ದಾರೆ ಎಂಬುದು ಗೊತ್ತಿದೆ. ಅವರು ಹೇಳುವುದನ್ನು ಅವರು ಹೇಳಲಿ. ನಮ್ಮ ಬಳಿ ಇರುವ ದಾಖಲೆಗಳನ್ನು ಜನರ ಬಳಿ ಇಡುತ್ತೇವೆ.

ಶಾಲಾರಂಭದ ಕುರಿತಂತೆ ರಾಜ್ಯ ಸರ್ಕಾರವು ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ- ಎಸ್.ಸುರೇಶ್‌ಕುಮಾರ್

ಬೆಂಗಳೂರು:ರಾಜ್ಯದಲ್ಲಿ ಶಾಲಾರಂಭದ ಕುರಿತಂತೆ ರಾಜ್ಯ ಸರ್ಕಾರವು ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ ಎಂದು ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ತಿಳಿಸಿದ್ದಾರೆ.

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಅಪೇಕ್ಷೆಯಂತೆ ಕರ್ನಾಟಕದಲ್ಲಿ ಸೆಪ್ಟೆಂಬರ್ ಮಾಹೆಯಲ್ಲಿ ಶಾಲೆಗಳನ್ನು ತೆರೆಯುತ್ತೇವೆಂದು ಸರ್ಕಾರವು ಅಭಿಪ್ರಾಯ ವ್ಯಕ್ತ ಪಡಿಸಿದೆಯೆಂದು ವರದಿಯಾಗಿರುವುದು ಸರ್ಕಾರದ ನಿರ್ಣಯವಾಗಿರುವುದಿಲ್ಲ. ನಮ್ಮ ಅಧಿಕಾರಿಗಳು ಸಭೆಯೊಂದರಲ್ಲಿ ಭಾಗವಹಿಸಿದಾಗ ವ್ಯಕ್ತಪಡಿಸಿರಬಹುದಾದ ಸಾಮಾನ್ಯ ಅಭಿಪ್ರಾಯವನ್ನು ಈ ರೀತಿ ಪ್ರತಿಬಿಂಬಿಸಲಾಗಿದೆಯಷ್ಟೆ ಎಂದು ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದ್ದಾರೆ.

ಕೊರೋನಾ ಸಂದರ್ಭದಲ್ಲಿನ ಶಿಕ್ಷಣ ಕ್ಷೇತ್ರದ ಆದ್ಯತೆಗಳು‌ ಬೇರೆಯಿದ್ದು, ಅವನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ‌ ರಾಜ್ಯ ಸರ್ಕಾರ ತನ್ನನ್ನು ತೊಡಗಿಸಿಕೊಂಡಿದೆ. ವಿದ್ಯಾರ್ಥಿಗಳು ಯಾವುದೇ ತೊಂದರೆಯಿಲ್ಲದ ಮುಕ್ತ ವಾತಾವರಣದ ಸೃಷ್ಟಿಯಾದ ಮೇಲೆ ಮಾತ್ರ ಶಾಲೆಗಳಿಗೆ ಹಾಜರಾಗುತ್ತಾರೆ. ಸದ್ಯಕ್ಕೆ ಶಾಲೆಗಳನ್ನು ತೆರೆಯುವ ಬಗ್ಗೆ ನಾವು ಯಾವುದೇ ಯೋಚನೆ, ನಿರ್ಣಯ ಕೈಗೊಂಡಿಲ್ಲ. ಬೇರಾವ ಅನವಶ್ಯಕ ಆತಂಕ ಬೇಡ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.

ರಾಜ್ಯದಲ್ಲಿ ಇಂದು 4120 ಕರೋನಾ ಕೇಸ್: 63772 ಕ್ಕೆ ತಲುಪಿದ ಸೋಂಕಿತರ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ ನಿರೀಕ್ಷೆ ಮೀರಿ ಕೋವಿಡ್ ಪ್ರಕರಣ ದಾಖಲಾಗುತ್ತಿದ್ದು ಇಂದು ದಾಖಲೆಯ 4120 ಹೊಸ ನೋವೆಲ್ ಕರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ,91 ಸೋಂಕಿತರು ಒಂದೇ ದಿನ ಮೃತರಾಗಿದ್ದು ಸಾವಿನ ಸಂಖ್ಯೆಯಲ್ಲಿಯೂ ಪ್ರತಿ ದಿನ ನೂರರ ಗಡಿ ಸಮೀಪವೇ ಇರುವುದು ರಾಜ್ಯದಲ್ಲಿ ಆತಂಕವನ್ನು ಹೆಚ್ಚುವಂತೆ ಮಾಡಿದೆ.

ಸಧ್ಯ 39370 ಆಕ್ಟೀವ್ ಕೇಸ್ ಗಳಿದ್ದು, ಸೋಂಕಿತರ ಸಂಖ್ಯೆ 63772 ಕ್ಕೆ ತಲುಪಿದೆ.1331ಸೋಂಕಿತರು ಈವರೆಗೆ ಮೃತರಾಗಿದ್ದಾರೆ. 579 ಸೋಂಕಿತರು ಯುಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು‌ 1290 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬಿಡುಗಡೆಯಾದವರ ಸಂಖ್ಯೆ 23065 ಆಗಿದೆ.

ಲಾಕ್‌ಡೌನ್ ಜಾರಿಯಾಗಿದ್ದರೂ ಬೆಂಗಳೂರಿನಲ್ಲಿ ಕರೊನಾ ವೈರಸ್ ನಿಯಂತ್ರಣಕ್ಕೆ ಬಂದಿಲ್ಲ ಇಂದು ಒಂದೇ ದಿನ ನಗರದಲ್ಲಿ 2156 ಸೋಂಕಿತರು ಪತ್ತೆಯಾಗಿದ್ದಾರೆ, ಅರ್ಧದಷ್ಟು ಪ್ರಮಾಣದಲ್ಲಿ ಬೆಂಗಳೂರಲ್ಲೇ ಸೋಂಕಿತರು ಪತ್ತೆಯಾಗುತ್ತಿರುವುದು ಹೊಸ ಆತಂಕ ಸೃಷ್ಟಿಸಿದೆ.

ಜಿಲ್ಲಾವಾರು ಕೋವಿಡ್ ವಿವರ:

ಕೊರೊನ ಸೋಂಕಿತರ ಮನೆಗಳ ಎದುರು ಎಚ್ಚರಿಕೆ ನಾಮಫಲಕ ಬೇಡ: ಎಚ್ಡಿಕೆ

ಬೆಂಗಳೂರು: ಕೊರೊನ ಸೋಂಕಿತರ ಮನೆಗಳ ಎದುರು ಸ್ಥಳೀಯ ಆಡಳಿತ ಹಾಕುತ್ತಿರುವ ಎಚ್ಚರಿಕೆ ಫಲಕ ನವಯುಗದ ಸಾಮಾಜಿಕ ತಾರಮ್ಯ, ಅಸ್ಪೃಶ್ಯತೆಗೆ ಕಾರಣವಾಗುತ್ತಿದೆ. ಕುಟುಂಬಗಳನ್ನು ಸಮಾಜ ತಿರಸ್ಕಾರದಿಂದ ನೋಡುವಂತೆ ಮಾಡುತ್ತಿದೆ. ಸೋಂಕಿನ ನಂತರವೂ ವ್ಯಕ್ತಿ, ಕುಟುಂಬ ಗೌರವಯುತವಾಗಿ ಬದುಕಬೇಕು. ಹಾಗಾಗಿ ಫಲಕ ಹಾಕುವ ಪರಿಪಾಠವನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕು‌ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಮನೆಗಳ ಎದುರು ಫಲಕ ಹಾಕಿ ಅಸ್ಪೃಶ್ಯತೆ ಸೃಷ್ಟಿಸುವ ಬದಲು ಆರೋಗ್ಯ ಕಾರ್ಯಕರ್ತರನ್ನು ಅವರ ಮನೆಗೆ ಕಳುಹಿಸಿ ಧೈರ್ಯ, ಜಾಗೃತಿ, ಅರಿವು ಮೂಡಿಸಬೇಕು‌. ಮನೆಯಿಂದ ಹೊರಬಾರದಂತೆ ಅವರ ಜವಾಬ್ದಾರಿ ತಿಳಿಸಿಕೊಡಬೇಕು. ಅದು ಬಿಟ್ಟು ಇಂಥ ಅಪಮಾನಿಸುವ ಪರಿಪಾಠ ಬೇಡ. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಲಿ ಎಂದು ಆಗ್ರಹಿಸುತ್ತೇನೆ‌.

ಚಿಕಿತ್ಸೆ ನಿರಾಕರಿಸುವುದು ಯಾವುದೇ ಆಸ್ಪತ್ರೆಯ ತಪ್ಪು. ಆದರೆ ಅದೇ ಕಾರಣಕ್ಕೆ ಸರ್ಕಾರ ಮೆಡಿಕಲ್ ಕಾಲೇಜುಗಳ ಲೈಸನ್ಸ್ ರದ್ದು ಮಾಡುವ ಬೆದರಿಕೆ ಹಾಕುವುದು ಸರಿಯಲ್ಲ. ಆರೋಗ್ಯದ ಈ ತುರ್ತುಪರಿಸ್ಥಿತಿಯಲ್ಲಿ ಅದರಿಂದ ಲಾಭವೂ ಇಲ್ಲ. ಅಷ್ಟಕ್ಕೂ ಮೆಡಿಕಲ್ ಕಾಲೇಜುಗಳ ಲೈಸನ್ಸ್ ರದ್ದು ಮಾಡುವ ಅಧಿಕಾರ ಇರುವುದು MCIಗೆ. ಸರ್ಕಾರಕಲ್ಲ ನೆನಪಿರಲಿ.

ಈ ಪರಿಸ್ಥಿಯಲ್ಲಿ ಮೆಡಿಕಲ್ ಕಾಲೇಜುಗಳ ಮೇಲೆ ರೋಷಾವೇಶ ತೋರುವುದನ್ನು ಬಿಟ್ಟು ಅವರನ್ನು ವಿಶ್ವಾಸಕ್ಕೆ ಪಡೆದುಕೊಂಡು ಅವರ ಸೇವೆ ಪಡೆಯುವತ್ತ ಸರ್ಕಾರ ಗಮನಹರಿಸಲಿ‌. ಅವರ ಅಗತ್ಯಗಳನ್ನು ಪೂರೈಸುವತ್ತ ಗಮನ ಹರಿಸಲಿ. ಈ ಮೂಲಕ ಕೊರೊನಾ ವೈರಸ್ ವಿರುದ್ಧ ಸಾಂಘಿಕ ಹೋರಾಟ ನಡೆಸಲಿ ಎಂದು ನಾನು ಒತ್ತಾಯಿಸುತ್ತೇನೆ‌‌ ಎಂದಿದ್ದಾರೆ.

ಕೊರೊನಾ ಮೃತನ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಆದರ್ಶ ಮೆರೆದ ಸಂಸದ ಡಿ.ಕೆ ಸುರೇಶ್

ಕನಕಪುರ: ಕೋವಿಡ್ 19 ಹಾಗೂ ಸೋಂಕಿನಿಂದ ಬಲಿಯಾದವರ ಅಂತ್ಯ ಸಂಸ್ಕಾರದ ಕುರಿತು ಜನರಲ್ಲಿರುವ ಅಪನಂಬಿಕೆ ಮತ್ತು ಅಪಪ್ರಚಾರಗಳನ್ನು ತೊಡೆದು ಹಾಕಲು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ ಸುರೇಶ್ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ತಮ್ಮ ಕ್ಷೇತ್ರದ ವ್ಯಾಪ್ತಿಯ ಕನಕಪುರದ ನಿವಾಸಿ 73 ವರ್ಷ ವಯಸ್ಸಿನ ನರಸಿಂಹ ಶೆಟ್ಟಿಯವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಸುರೇಶ್ ಅವರು ಆದರ್ಶ ಮೆರೆದಿದ್ದಾರೆ.
ಮೃತರ ಅಂತ್ಯಸಂಸ್ಕಾರವನ್ನು ಕನಕಪುರ ದೇಗುಲಮಠದ ಬಳಿಯಿರುವ ಸ್ಮಶಾನದಲ್ಲಿ ಎಲ್ಲಾ ವಿಧಿ-ವಿಧಾನಗಳ ಪ್ರಕಾರ ಗೌರವಯುತವಾಗಿ ನೆರವೇರಿಸಲು ಸಹಕರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಅಂತ್ಯ ಸಂಸ್ಕಾರದಲ್ಲಿ ಪ್ರತಿಯೊಬ್ಬರೂ ಅಗತ್ಯ ಸುರಕ್ಷಾ ಪರಿಕರಗಳಾದ ಪಿಪಿಇ ಕಿಟ್ ಬಳಸಿ ಪಾಲ್ಗೊಂಡಿದ್ದರು. ವಿಧಾನ ಪರಿಷತ್ ಸದಸ್ಯ ರವಿ ಹಾಗೂ ಕನಕಪುರ ನಗರಸಭೆ ಸದಸ್ಯರು ಸಹ ಈ ಸಂದರ್ಭದಲ್ಲಿ ಹಾಜರಿದ್ದರು.

ಇತ್ತೀಚೆಗೆ ಕೊರೋನಾ ಸೋಂಕಿತರನ್ನು ಸಮಾಜ ಕೀಳಾಗಿ ನೋಡುತ್ತಿರುವ ಹಿನ್ನೆಲೆಯಲ್ಲಿ ತಾವೇ ಖುದ್ದಾಗಿ ಆಸ್ಪತ್ರೆಗೆ ಭೇಟಿ ನೀಡಿ ಸೋಂಕಿತರ ಜತೆ ಮಾತನಾಡಿ ಸಮಾಜಕ್ಕೆ ಸಕಾರಾತ್ಮಕ ಸಂದೇಶ ರವಾನಿಸಿದ್ದ ಸುರೇಶ್ ಅವರು, ಈಗ ಸೋಂಕಿನಿಂದ ಮೃತಪಟ್ಟವರಿಗೆ ಗೌರವಯುತ ಅಂತ್ಯ ಸಂಸ್ಕಾರ ಆಗುವಂತೆ ನೋಡಿಕೊಂಡಿದ್ದಾರೆ.
ಈ ವಿಚಾರವಾಗಿ ಇತ್ತೀಚೆಗಷ್ಟೇ ಬಹಿರಂಗ ಪತ್ರ ಬರೆದಿದ್ದ ಸುರೇಶ್ ಅವರು, ‘ಕೊರೊನ ಸೋಂಕಿನಿಂದ ಮರಣ ಹೊಂದಿದ ವ್ಯಕ್ತಿಗಳಿಂದ ಸಮಾಜಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಈ ವಿಷಯದಲ್ಲಿ ಬರೀ ಊಹಾಪೋಹಗಳನ್ನು ಹಬ್ಬಿಸಲಾಗಿದೆ. ಹೀಗಾಗಿ ಶವ ಸಂಸ್ಕಾರಕ್ಕೆ ಪ್ರತಿರೋಧ ಒಡ್ಡುವುದಾಗಲಿ, ಅಡ್ಡಿಪಡಿಸುವುದಾಗಲಿ ನಮ್ಮ ಸಂಸ್ಕೃತಿಯೂ ಅಲ್ಲ, ಸದಾಚಾರವೂ ಅಲ್ಲ. ಆದ್ದರಿಂದ ಆಯಾ ಪ್ರದೇಶಗಳಲ್ಲಿ ಕೋವಿಡ್ಚ ನಿಂದ ಮರಣ ಹೊಂದಿದ ವ್ಯಕ್ತಿಗಳ ಬಂಧುಗಳು ಹಾಗೂ ಗ್ರಾಮಸ್ಥರು ನಿರಾತಂಕವಾಗಿ, ಮೃತ ವ್ಯಕ್ತಿಗೆ ಗೌರವಯುತ ಅಂತಿಮ ಸಂಸ್ಕಾರ ನೆರವೇರಲು ಅವಕಾಶ ಮಾಡಿಕೊಡಬೇಕು. ಆ ಮೂಲಕ ಮಾನವೀಯತೆ ಮತ್ತು ಸೌಹಾರ್ದತೆ ಮೆರೆಯಬೇಕು’ ಎಂದು ಮನವಿ ಮಾಡಿದ್ದರು.

ನರಸಿಂಹ ಶೆಟ್ಟಿಯವರ ಅಂತ್ಯ ಸಂಸ್ಕಾರದ ನಂತರ ಮಾತನಾಡಿದ ಸುರೇಶ್ ಅವರು, ‘ನರಸಿಂಹ ಶೆಟ್ಟಿಯವರು ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕೊರೋನಾ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದರು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಜೀವ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬ ವರ್ಗದವರಿಗೆ ಈ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಈ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ಮತ್ತು ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ’ ಎಂದರು.