ರಾಜ್ಯದಲ್ಲಿ ಇಂದು ದಾಖಲೆಯ 4537 ಕರೋನಾ ಕೇಸ್: 59652 ಕ್ಕೆ ತಲುಪಿದ ಸೋಂಕಿತರ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ ನಿರೀಕ್ಷೆ ಮೀರಿ ಕೋವಿಡ್ ಪ್ರಕರಣ ದಾಖಲಾಗುತ್ತಿದ್ದು ಇಂದು ದಾಖಲೆಯ 4537 ಹೊಸ ನೋವೆಲ್ ಕರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ,93 ಸೋಂಕಿತರು ಒಂದೇ ದಿನ ಮೃತರಾಗುವ ಮೂಲಕ ರಾಜ್ಯದಲ್ಲಿ ಆತಂಕವನ್ನು ಹೆಚ್ಚುವಂತೆ ಮಾಡಿದೆ.

ಸಧ್ಯ 36631 ಆಕ್ಟೀವ್ ಕೇಸ್ ಗಳಿದ್ದು, ಸೋಂಕಿತರ ಸಂಖ್ಯೆ 59652 ಕ್ಕೆ ತಲುಪಿದೆ.1240 ಸೋಂಕಿತರು ಈವರೆಗೆ ಮೃತರಾಗಿದ್ದಾರೆ. 580 ಸೋಂಕಿತರು ಯುಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು‌ 1018 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬಿಡುಗಡೆಯಾದವರ ಸಂಖ್ಯೆ 21775 ಆಗಿದೆ.

ಲಾಕ್‌ಡೌನ್ ಜಾರಿಯಾಗಿದ್ದರೂ ಬೆಂಗಳೂರಿನಲ್ಲಿ ಕರೊನಾ ವೈರಸ್ ನಿಯಂತ್ರಣಕ್ಕೆ ಬಂದಿಲ್ಲ ಇಂದು ಒಂದೇ ದಿನ ನಗರದಲ್ಲಿ 2125 ಸೋಂಕಿತರು ಪತ್ತೆಯಾಗಿದ್ದಾರೆ, ಅರ್ಧದಷ್ಟು ಪ್ರಮಾಣದಲ್ಲಿ ಬೆಂಗಳೂರಲ್ಲೇ ಸೋಂಕಿತರು ಪತ್ತೆಯಾಗುತ್ತಿರುವುದು ಹೊಸ ಆತಂಕ ಸೃಷ್ಟಿಸಿದೆ.

ಜಿಲ್ಲಾವಾರು ಕೋವಿಡ್ ವಿವರ:

ಕೆರೆ ಕಾಮೇಗೌಡರ ಪರ ವಿರೋಧ ಚರ್ಚೆ: ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲು ಮುಂದಾದ ನಾರಾಯಣಗೌಡ

ಮಂಡ್ಯ – 18: ಜಿಲ್ಲೆಯಲ್ಲಿ ಮೊನ್ನೆಯವರೆಗು ಕೊರೋನಾದಿಂದ ಯಾವುದೇ ಸಾವು ಸಂಭವಿಸಿರಲಿಲ್ಲ. ಆದ್ರೆ ಈಗ 6 ಜನ ಮೃತಪಟ್ಟಿದ್ದು ನೋವಿನ ಸಂಗತಿಯಾಗಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ| ನಾರಾಯಣಗೌಡ ಹೇಳಿದ್ದಾರೆ.

ಮಂಡ್ಯದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಕೊವಿಡ್ – 19 ನಿಯಂತ್ರಿಸುವ ಸಂಬಂಧ ತೆಗೆದುಕೊಂಡಿರುವ ಕ್ರಮಗಳಬಗ್ಗೆ ಚರ್ಚಿಸಿದ ಬಳಿಕ ಅವರು ಮಾಧ್ಯಮದೊಂದಿಗೆ ಮಾತನಾಡಿದ್ರು. ಜಿಲ್ಲೆಯಲ್ಲಿ ಕೊವಿಡ್ 19 ನಿಂದ ಮೃತಪಟ್ಟವರಿಗೆ ಹೈಪೊಥೈರಾಯಿಡ್ , ಬಿಪಿ, ಶುಗರ್ , ಶ್ವಾಸಕೋಸದ ಸಮಸ್ಯೆ ಕೂಡ ಇತ್ತು. ಇನ್ನಿಬ್ಬರು ವೆಂಟಿಲೇಟರ್ ನಲ್ಲಿ ಇದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದ್ರು.

ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ 35 ಕಡೆಗಳಲ್ಲಿ ಸ್ಥಳ ಗುರುತಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಇಲ್ಲ. ಹಣದ ಕೊರತೆಯೂ ಇಲ್ಲ. ಯಾವುದೇ ರೋಗಿಗು ಚಿಕಿತ್ಸೆ ನೀಡುವಲ್ಲಿ ಸಮಸ್ಯೆ ಇಲ್ಲ. ಎಲ್ಲ ಶಾಸಕರು ಸಹಕಾರ ನೀಡಬೇಕು. ಶಾಸಕರುಗಳಿಗೆ ಅಧಿಕಾರಿಗಳು ಎಲ್ಲ ಮಾಹಿತಿ ನೀಡುವಂತೆ ಸೂಚಿಸಿದ್ದೇನೆ ಎಂದು ಹೇಳಿದ್ರು.

ಮೈಶುಗರ್ ಕಾರ್ಖಾನೆ ಅತಿ ಶೀಘ್ರದಲ್ಲಿ ಆರಂಭವಾಗಬೇಕು. ಅದಕ್ಕೆ ಬೇಕಾದ ಸಿದ್ಧತೆ ನಡೆದಿದೆ. ಮಂಗಳವಾರ, ಬುಧವಾರ ಈ ಸಂಬಂಧ ಸಭೆ ಇದೆ. ಬಳಿಕ ಸಿಎಂ ಜೊತೆ ಚರ್ಚಿಸಿ ಕಾರ್ಖಾನೆ ಆರಂಭಿಸುತ್ತೇವೆ. ಕಾರ್ಖಾನೆ ಆರಂಭಿಸಲು ಕಾರ್ಮಿಕರೂ ಸಹಕರಿಸಬೇಕು. ವಿನಾಕಾರಣ ಅಡ್ಡಿಪಡಿಸಿದರೆ ರೈತರಿಗೆ ಸಮಸ್ಯೆ ಆಗುತ್ತೆ. ಕೆರೆ ಕಾಮೇಗೌಡ ಅವರ ಬಗ್ಗೆಯೂ ಪರ ವಿರೋಧ ಕೇಳಿದ್ದೇನೆ. ಸಧ್ಯದಲ್ಲೇ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುವುದಾಗಿ ಸಚಿವ ನಾರಾಯಣಗೌಡ ಮಂಡ್ಯ ಪರಿವೀಕ್ಷಣಾ ಮಂದಿರದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಹೇಳಿದ್ದಾರೆ.

ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ನಾಳೆಯಿಂದಲೇ ಶೇ. 50 ಹಾಸಿಗೆ ಒದಗಿಸಲು ಮುಖ್ಯಮಂತ್ರಿ ಸೂಚನೆ

ಬೆಂಗಳೂರು, ಜುಲೈ 18-ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರೊಂದಿಗೆ ಕೋವಿಡ್ 19 ನಿರ್ವಹಣೆಗೆ ಸಂಬಂಧಿಸಿದಂತೆ ಸಭೆ ನಡೆಸಿ, ಚರ್ಚಿಸಿದರು.

ಬೆಂಗಳೂರು ನಗರದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಇನ್ನೂ ಹೆಚ್ಚಿನ ಸಹಕಾರ ನೀಡುವ ಅಗತ್ಯವಿದೆ. ಕೆಲವೆಡೆಗಳಲ್ಲಿ ಕೋವಿಡ್ ಹಾಗೂ ಕೋವಿಡ್ ಅಲ್ಲದ ರೋಗಿಗಳಿಗೂ ಚಿಕಿತ್ಸೆ ನಿರಾಕರಿಸುವುದು ಸರ್ಕಾರದ ಗಮನಕ್ಕೆ ಬಂದಿದ್ದು,

ಹಾಗೆಯೇ ಕೋವಿಡ್‍ಗೆ ಚಿಕಿತ್ಸೆ ಅಗತ್ಯವಿರುವವರು ಹಾಗೂ ಇತರ ಸಮಸ್ಯೆಗಳಿಂದ ಬಳಲುತ್ತಿರುವವರು ಸೂಕ್ತ ಚಿಕಿತ್ಸೆ ದೊರೆಯದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವ ಹಾಗೂ ಹಲವರು ಪ್ರಾಣ ತ್ಯಾಗ ಮಾಡಿದ ದಾರುಣ ಘಟನೆಗಳ ಕುರಿತು ಕಳವಳ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಕೋವಿಡ್ ನಿರ್ವಹಣೆಯಲ್ಲಿ ಬೆಂಗಳೂರು ಮಾದರಿಯಾಗಿತ್ತು. ಮುಂದೆಯೂ ಮಾದರಿಯಾಗಿರಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಹಿಂದಿನ ಸಭೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 2 ಸಾವಿರ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸುಮಾರು 4,500 ಹಾಸಿಗೆಗಳು ದೊರೆಯುವುದು ಎಂದು ಒಮ್ಮತದ ತೀರ್ಮಾನಕ್ಕೆ ಬರಲಾಗಿತ್ತು. ಆದರೆ ಖಾಸಗಿ ವೈದ್ಯಕೀಯ ಕಾಲೇಜುಗಳು ಅಷ್ಟು ಸಂಖ್ಯೆಯ ಹಾಸಿಗೆಗಳನ್ನು ಒದಗಿಸದೆ ಇರುವುದು ಹಾಗೂ ಇನ್ನೂ ಅನೇಕ ಸಮಸ್ಯೆಗಳು ನಮ್ಮ ಸಚಿವರುಗಳು ಕೆಲವು ವೈದ್ಯಕೀಯ ಕಾಲೇಜುಗಳಿಗೆ ಭೇಟಿ ನೀಡಿದಾಗ ತಿಳಿದುಬಂದಿದೆ ಎಂದು ಮುಖ್ಯಮಂತ್ರಿಯವರು ಅಸಮಾಧಾನ ವ್ಯಕ್ತಪಡಿಸಿದರು.

ಇಂದಿನ ಈ ತುರ್ತು ಸಂದರ್ಭದಲ್ಲಿ ಮಾನವೀಯತೆಯಿಂದ ಕೋವಿಡ್ ಚಿಕಿತ್ಸೆಗೆ ಸಹಕರಿಸಬೇಕು.. ಕೋವಿಡ್ ಇಲ್ಲದ ಇತರ ರೋಗಿಗಳಿಗೂ ಚಿಕಿತ್ಸೆ ನಿರಾಕರಿಸದೆ, ರಾಜ್ಯದ ವೈದ್ಯಕೀಯ ವ್ಯವಸ್ಥೆಯಲ್ಲಿ ಸಮತೋಲನ ಇರುವಂತೆ ಎಚ್ಚರ ವಹಿಸಬೇಕು ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಸಲಹೆ ಮಾಡಿದರು.

ಇದಲ್ಲದೆ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವುದರಿಂದ ಖಾಸಗಿ ವೈದ್ಯಕೀಯ ಕಾಲೇಜುಗಳು ಶೇ. 50 ರಷ್ಟು ಹಾಸಿಗೆಗಳನ್ನು ನಾಳೆಯಿಂದಲೇ ಕೋವಿಡ್ ಚಿಕಿತ್ಸೆಗೆ ಒದಗಿಸುವಂತೆ ಮುಖ್ಯಮಂತ್ರಿಗಳು ತಿಳಿಸಿದರು.

ವೈದ್ಯರು, ನರ್ಸ್ ಗಳ ಕೊರತೆ ಇದ್ದರೆ, ಸರ್ಕಾರವೇ ನೇಮಕ ಮಾಡುವುದು. ಯಾವುದೇ ರೀತಿಯ ಬೆಂಬಲ ಅಗತ್ಯವಿದ್ದರೂ ಸರ್ಕಾರ ನೀಡಲಿದೆ ಎಂದು ಮುಖ್ಯಮಂತ್ರಿಯವರು ಭರವಸೆ ನೀಡಿದರು.

ಇದಕ್ಕೆ ಸ್ಪಂದಿಸಿದ ಕ ಖಾಸಗಿ ವೈದ್ಯಕೀಯ ಕಾಲೇಜುಗಳು ಶೇ. 50 ರಷ್ಟು ಇನ್ನು ಕೆಲ ಕಾಲೇಜುಗಳು ಶೇ. 80 ರಷ್ಟು ಹಾಸಿಗೆಗಳನ್ನು ನೀಡುವುದಾಗಿ ಹಾಗೂ ಲಭ್ಯವಿರುವ ವೆಂಟಿಲೇಟರ್ ಗಳನ್ನು ಸಹ ಒದಗಿಸುವುದಾಗಿ ತಿಳಿಸಿದರು.

ಇನ್ನು‌ ಕಾಲೇಜುಗಳ ಬೆಡ್ ಗಳ ಮೇಲೆ‌ ನಿಗಾ ಇಡಲು‌ ಅಧಿಕಾರಿಗಳನ್ನು‌‌ ಈಗಾಗಲೆ ನೇಮಕ‌ ಮಾಡಲಾಗಿದೆ.ಸಭೆಗೆ ಹಾಜರಾಗದ ವೈದೇಹಿ ವೈದ್ಯಕೀಯ ಕಾಲೇಜಿಗೆ ನೋಟಿಸ್ ನೀಡಲು ಸೂಚಿಸಲಾಯಿತು.

ಕಂಟೈನರ್ ನಲ್ಲಿ ಕೋವಿಡ್ ಐಸಿಯು: ಬೆಂಗಳೂರಿನಲ್ಲಿ ಮೊದಲ ಪ್ರಯೋಗ

ಬೆಂಗಳೂರು: ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಹಾಸಿಗೆಗಳ ಕೊರತೆ ಆಗದಂತೆ ಸರಕಾರ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿರುವ ಬೆನ್ನಲ್ಲಿಯೇ, ಖಾಸಗಿ ಕಂಪನಿಯೊಂದು ಎಲ್ಲಿಗೆ ಬೇಕಾದರೂ ಸಾಗಿಸಿ ಬಳಸಬಹುದಾದ ’ಮಾಡ್ಯೂಲರ್ ಐಸಿಯು’ಗಳನ್ನು ಅಭಿವೃದ್ಧಿಪಡಿಸಿದೆ. ಇವಗಳನ್ನು ’ಮೊಬೈಲ್ ಐಸಿಯು’ಗಳೆಂದೂ ಕರೆಯಬಹುದಾಗಿದೆ.

ಸಾಮಾನ್ಯವಾಗಿ ಹಡಗುಗಳಲ್ಲಿ ಸರಕು ಸಾಗಣೆಗೆ ಬಳಸಲಾಗುವ ಬೃಹತ್ ಗಾತ್ರದ ಕಂಟೈನರುಗಳಲ್ಲಿ ಈ ಐಸಿಯುಗಳನ್ನು ಅಭಿವೃದ್ಧಿಪಡಿಸಿದ್ದು, ಬೆಂಗಳೂರಿನಲ್ಲಿ ಶನಿವಾರ, ನಗರದ ಕೋವಿಡ್ ಕೇರ್ ಕೇಂದ್ರಗಳ ಉಸ್ತುವಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಇವುಗಳನ್ನು ಪರಿಶೀಲನೆ ಮಾಡಿದರು.

ಶಸ್ತ್ರಚಿಕಿತ್ಸಾ ಘಟಕ ಹಾಗೂ ಕ್ಲೀನ್ ರೂಮುಗಳನ್ನು ಅಭಿವೃದ್ಧಿಪಡಿಸುವಲ್ಲಿ ಹೆಸರಾಗಿರುವ ಬೆಂಗಳೂರು ಮೂಲದ ರಿನ್ಯಾಕ್ ಎಂಬ ಕಂಪನಿ ಇವುಗಳನ್ನು ಅಭಿವೃದ್ಧಿಪಡಿಸಿದ್ದು, ಈ ಬಗ್ಗೆ ಕಂಪನಿಯ ತಜ್ಞರಿಂದ ಉಪ ಮುಖ್ಯಮಂತ್ರಿ ಮಾಹಿತಿ ಪಡೆದರಲ್ಲದೆ, ಕಂಟೈನರುಗಳಲ್ಲಿನ ಐಸಿಯುಗಳನ್ನು ಕೂಲಂಕಶವಾಗಿ ಪರಿಶೀಲನೆ ಮಾಡಿದರು.

ವಿನೂತನ ಪ್ರಯೋಗ ಎಂದ ಡಿಸಿಎಂ:

ಸರಕು ಸಾಗಣೆ ಮಾಡುವ ಕಂಟೈನರುಗಳಲ್ಲಿ ಐಸಿಯು ಮಾಡಬಹುದು ಎಂಬ ಆಲೋಚನೆಯೇ ವಿನೂತನವಾಗಿದೆ. ದೇಶದಲ್ಲೇ ಮೊತ್ತಮೊದಲ ಬಾರಿಗೆ ಇಂಥ ತುರ್ತು ಚಿಕಿತ್ಸಾ ಘಟಕಗಳನ್ನು ನಮ್ಮ ರಾಜ್ಯದಲ್ಲಿ ಸಿದ್ಧಪಡಿಸಲಾಗಿದೆ. ನಮ್ಮ ಸಂಶೋಧಕರು, ತಜ್ಞರ ಸೃಜನಶೀಲತೆಗೆ ಇದೊಂದು ಉತ್ತಮ ಉದಾಹರಣೆ. ಪ್ರಸಕ್ತ ಕಾಲದ ಅಗತ್ಯಕ್ಕೆ ತಕ್ಕಂತೆ ಇವುಗಳನ್ನು ಅತ್ಯಾಧುನಿಕವಾಗಿ ರೂಪಿಸಲಾಗಿದೆ. ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಹಾಗೂ ಬಳಸಲಾಗಿರುವ ಎಲ್ಲ ಉಪಕರಣಗಳು ಉತ್ತಮವಾಗಿವೆ ಎಂದು ಡಿಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಸಿಜೆಗೆ 10 ಕಂಟೈನರ್:
ಪ್ರಾಯೋಗಿಕವಾಗಿ ಮೊದಲು ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಗೆ ಹತ್ತು ಕಂಟೈನರುಗಳನ್ನು ಒದಗಿಸಲಾಗುವುದು. ಅಲ್ಲಿನ ವೈದ್ಯರೇ ಇವುಗಳಲ್ಲಿ ದಾಖಲಾಗುವ ರೋಗಿಗಳಿಗೆ ಚಿಕಿತ್ಸೆ ನೀಡುವರು. ಪ್ರತಿ ಕಂಟೈನರಲ್ಕಿ 5 ಹಾಸಿಗೆಗಳು ಇರುತ್ತವೆ. ರಿನ್ಯಾಕ್ ಕಂಪನಿ ತಮ್ಮದೇ ವೆಚ್ಚದಲ್ಲಿ ಎಕ್ಸ್’ಕ್ಲೂಸೀವ್ ಆಗಿ ನಮಗಾಗಿಯೇ ಇವುಗಳನ್ನು ತಯಾರಿಸಿ ಕೊಟ್ಟಿದೆ. ಕೋವಿಡ್ ನಂತರವೂ ಇವುಗಳನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಬಹುದು. ತುರ್ತು ಸಂದರ್ಭಗಳು, ಅದರಲ್ಲೂ ನೈಸರ್ಗಿಕ ವಿಕೋಪದಂಥ ದುರಂತಗಳು ಎದುರಾದಾಗ ಇಂಥ ಐಸಿಯುಗಳು ಹೆಚ್ಚು ಪರಿಣಾಮಕಾರಿ. ಕೇವಲ 10ರಿಂದ 15 ದಿನಗಳಲ್ಲಿ ಇಷ್ಟು ಬೆಡ್ ಗಳನ್ನು ಸಿದ್ಧಪಡಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಇದರಲ್ಲಿ ಏನೇನಿರುತ್ತದೆ?:
ಜಾಗತಿಕ ಗುಣಮಟ್ಟವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಿದ್ಧಪಡಿಸಲಾಗಿದೆ. ಆಮ್ಲಜನಕ ವ್ಯವಸ್ಥೆ ಇರುತ್ತದೆ. ಹವಾನಿಯಂತ್ರಿತ ವ್ಯವಸ್ಥೆ ಮಾಡಲಾಗಿದೆ. ಕ್ಯಾಮೆರಾ ಕೂಡ ಇದ್ದು, ಆನ್’ಲೈನ್ ಚಿಕಿತ್ಸೆ ನೀಡಲು ಬೇಕಾದ ಎಲ್ಲ ಪರಿಕರಗಳನ್ನು ಅಳವಡಿಸಲಾಗಿದೆ. ಪ್ರತಿ ಕಂಟೈನರ್’ಗೆ 5 ಬೆಡ್ ಇದ್ದು, ಅದಕ್ಕೆ ಇನ್ನೊಂದು ಕಂಟೈನರ್ ಸೇರಿದರೆ 10 ಬೆಡ್’ಗಳಾಗುತ್ತವೆ. ಆಗ ಅದನ್ನು ಪ್ರತ್ಯೇಕ ನರ್ಸಿಂಗ್ ಹಾಗೂ ಮಾನಿಟರಿಂಗ್ ಸ್ಟೇಷನ್ ಎಂದು ಪರಿಗಣಿಸಿ ಚಿಕಿತ್ಸೆ ನೀಡುವುದು ಸುಲಭವಾಗುತ್ತದೆ. ಅದು ಪ್ರತ್ಯೇಕವಾಗಿರುತ್ತದೆ. ಎಲ್ಲಿಗೆ ಬೇಕಾದರೂ ಈ ಐಸಿಯುಗಳನ್ನು ಸುಲಭವಾಗಿ ಸಾಗಿಸಿ ಇಡಬಹುದು. ಆಯಾ ಆಸ್ಪತ್ರೆಗಳ ವೈದ್ಯರೇ ಇವುಗಳಲ್ಲಿ ದಾಖಲಾಗಿರುವ ರೋಗಿಗಳಿಗೂ ಚಿಕಿತ್ಸೆ ನೀಡಬಹುದು ಎಂದು ರಿನ್ಯಾಕ್ ಕಂಪನಿ ಅಧಿಕಾರಿಗಳು ಮಾಹಿತಿ ನೀಡಿದರು.

ಈಗಲೇ ಶಾಲೆ ಆರಂಭವಿಲ್ಲ: ಸುಧಾಕರ್ ಸ್ಪಷ್ಟನೆ

ಬೆಂಗಳೂರು: ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆರಡೂ ಮಕ್ಕಳ ಆರೋಗ್ಯ ಕಾಪಾಡಲು ಬದ್ಧವಾಗಿವೆ. ಶಾಲೆಗಳನ್ನು ತೆರೆದರೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಈಗಲೇ ಶಾಲೆ ಆರಂಭವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ.

ವೀಡಿಯೋ ಸಂವಾದದ ಮೂಲಕ ಸುದ್ದಿಗೋಷ್ಟಿ ನಡೆಸಿದ ಸಚಿವರು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಇಂದು ಮುಖ್ಯಮಂತ್ರಿಗಳ ಮಹತ್ವದ ಸಭೆ ನಡೆಸಿದೆ. 5,200 ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡಲು ಮುಖ್ಯಮಂತ್ರಿಗಳ ನಿರ್ದೇಶನ ನೀಡಿದ್ದಾರೆ. ಒಂದು ವಾರದೊಳಗೆ ಹೆಚ್ಚುವರಿ 3,000 ಹಾಸಿಗೆಗಳು ಸೇರ್ಪಡೆಯಾಗಲಿದೆ.ಇಂದಿನ ಸಭೆಗೆ ಹಾಜರಾಗದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದ್ರು.

ಕೋವಿಡ್ ಮತ್ತು ಕೋವಿಡ್ ಅಲ್ಲದ ಕಾಯಿಲೆಗಳಿಗೆ ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆರಡೂ ಮಕ್ಕಳ ಆರೋಗ್ಯ ಕಾಪಾಡಲು ಬದ್ಧವಾಗಿವೆ. ಶಾಲೆಗಳನ್ನು ತೆರೆದರೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಈಗಲೇ ಶಾಲೆ ಆರಂಭವಿಲ್ಲ. ಲಕ್ಷಣರಹಿತ ಮತ್ತು ಅಲ್ಪ ಲಕ್ಷಣವುಳ್ಳ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ ಮತ್ತು ಹೋಂ ಐಸೋಲೇಶನ್ ಮಾಡುವ ನಿಟ್ಟಿನಲ್ಲಿ ಸರ್ಕಾರದ ಸುತ್ತೋಲೆ. ಖಾಸಗಿ ಆಸ್ಪತ್ರೆಗಳು ಲಕ್ಷಣರಹಿತ ಸೋಂಕಿತರನ್ನು ದಾಖಲು ಮಾಡಿಕೊಳ್ಳುವಂತಿಲ್ಲ ಎಂದ್ರು.

ರಾಜ್ಯದಲ್ಲಿ ಇದುವರೆಗೆ 21,775 ಜನರು ಗುಣಮುಖರಾಗಿದ್ದು, ಇಂದು ರಾಜ್ಯದಲ್ಲಿ 24,909 RTPCR ಟೆಸ್ಟ್ ನಡೆಸಲಾಗಿದೆ. ರಾಜ್ಯದಲ್ಲಿ ಈಗ 85 ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳಿದ್ದು ಮುಂದಿನ ದಿನಗಳಲ್ಲಿ ಇನ್ನೂ 25 ಲ್ಯಾಬ್ ಸ್ಥಾಪಿಸುವ ಚಿಂತನೆ ಇದೆ. ಮುಂದಿನ ದಿನಗಳಲ್ಲಿ 50,000 ಆರ್ಟಿಪಿಸಿಆರ್ ಟೆಸ್ಟ್ ಪ್ರತಿದಿನ ನಡೆಸುವ ಗುರಿ ಹೊಂದಲಾಗಿದೆ. ಇದುವರೆಗೆ 9.8 ಲಕ್ಷ ಟೆಸ್ಟ್ ನಡೆಸಲಾಗಿದ್ದು ಕೆಲವೇ ರಾಜ್ಯಗಳು ನಮಗಿಂತ ಹೆಚ್ಚು ಟೆಸ್ಟ್ ನಡೆಸಿವೆ ಎಂದ್ರು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ 10 ಲಕ್ಷ ಜನಸಂಖ್ಯೆಗೆ 149 ಪರೀಕ್ಷೆ ನಡೆಸಬೇಕಾಗಿದ್ದು, ರಾಜ್ಯದಲ್ಲಿ 300 ಜನರಿಗೆ ಟೆಸ್ಟ್ ಮಾಡಲಾಗುತ್ತಿದೆ. ಇನ್ನೂ 10 ಲಕ್ಷ ಆಂಟಿಜೆನ್ ಕಿಟ್ ಗಳಿಗೆ ಆರ್ಡರ್ ನೀಡಲಾಗಿದೆ. ಟೆಸ್ಟ್ ನಡೆಸುವಲ್ಲಿ ಮೊದಲ 10 ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂದು ಹೇಳಿದ್ರು.

ಸಚಿವರು ಜನರನ್ನು ರಕ್ಷಿಸುವ ಬದಲು ದುಡ್ಡು ಮಾಡಲು ಮುಂದಾಗಿದ್ದಾರೆ: ಡಿ.ಕೆ ಶಿವಕುಮಾರ್ ವಾಗ್ದಾಳಿ

ಬೆಂಗಳೂರು: ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು, ಸಾವಿನ ಪ್ರಮಾಣ ಏರಿಕೆಯಾಗುತ್ತಿದೆ. ಈ ಸಂದರ್ಭದಲ್ಲಿ ಸಚಿವರುಗಳು ಜನರನ್ನು ರಕ್ಷಿಸುವ ಬದಲು ದುಡ್ಡು ಬಾಚಿಕೊಳ್ಳುವತ್ತ ಹೆಚ್ಚು ಗಮನ ಹರಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಗಳಲ್ಲಿ ಸರ್ಕಾರದ ಭ್ರಷ್ಟಾಚಾರ ಕುರಿತು ಬಂದಿರುವ ವರದಿಗೆ ಸಂಬಂಧಿಸಿದಂತೆ ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಈ ಎಲ್ಲ ಆರೋಪಗಳಿಗೆ ಮುಖ್ಯಮಂತ್ರಿಗಳು ಉತ್ತರ ನೀಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಅವರು ಹೇಳಿದ್ದಿಷ್ಟು…

‘ಕೊರೋನಾ ನಿಯಂತ್ರಣಕ್ಕೆ ಹಾಗೂ ಜನರ ಜೀವ ಉಳಿಸಲು ದೇಶದೆಲ್ಲೆಡೆ ಸರ್ಕಾರಗಳಿಗೆ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಪ್ರತಿ ಹಂತದಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ.

ಹಾಸಿಗೆ, ದಿಂಬಿನಿಂದ ಹಿಡಿದು, ವೆಂಟಿಲೇಟರ್, ಪಿಪಿಇ ಕಿಟ್ ಖರೀದಿವರೆಗೂ ಅಕ್ರಮ ನಡೆದಿದೆ. ಇಲ್ಲಿ ಶೇ. 5, 10, 20, 30ರಷ್ಟು ಭ್ರಷ್ಟಾಚಾರ ನಡೆದಿಲ್ಲ. ಶೇ.200ರಿಂದ 500 ರಷ್ಟು ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ನಾವು ನೋಡುತ್ತಿದ್ದೇವೆ.

ಹಾಸಿಗೆ ಹಗರಣ, ವೆಂಟಿಲೇಟರ್ ಹಗರಣಗಳ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಿವೆ. ರಾಜ್ಯದಲ್ಲಿ ಮಾಧ್ಯಮಗಳು ಜನರ ಪರ ಧ್ವನಿಯಾಗಿ ಅಂಕಿಅಂಶಗಳನ್ನು ನಮ್ಮ ಮುಂದೆ ಇಡುತ್ತಿವೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು, ಇದಕ್ಕೆ ಉತ್ತರ ಹಾಗೂ ಲೆಕ್ಕವನ್ನು ನೀಡಲಿ ಎಂದು ಆಗ್ರಹಿಸುತ್ತೇನೆ. ನಾನು ಅಥವಾ ನಮ್ಮ ವಿರೋಧ ಪಕ್ಷದ ನಾಯಕರು ಈ ವಿಚಾರದ ಬಗ್ಗೆ ಮಾತನಾಡಿದರೆ ಅದನ್ನು ರಾಜಕೀಯ ಆರೋಪ ಎಂದು ದೂರುತ್ತೀರಿ. ಆದರೆ ಮಾಧ್ಯಮಗಳು ಯಾವುದೇ ವೈಯಕ್ತಿಕ ಹಾಗೂ ರಾಜಕೀಯ ಅಜೆಂಡಾ ಇಟ್ಟುಕೊಂಡಿಲ್ಲ.

ಮುಖ್ಯಮಂತ್ರಿ ಸ್ಥಾನದಲ್ಲಿ ಕೂತಿರುವ ನೀವು ಈ ಪ್ರಶ್ನೆಗಳಿಗೆಲ್ಲಾ ಉತ್ತರ ನೀಡಬೇಕಾಗಿರುವುದು ನಿಮ್ಮ ಕರ್ತವ್ಯ. ಕಳೆದ 60 ವರ್ಷಗಳಲ್ಲಿ ಮಾನವೀಯ ವಿಚಾರಕ್ಕೆ ಸಂಬಂಧಿಸಿದಂತೆ ನಡೆದಿರುವ ಅತಿ ದೊಡ್ಡ ಹಗರಣ ಇದಾಗಿದೆ. ಕೊರೋನಾದಂತಹ ಕಠಿಣ ಸಮಯದಲ್ಲಿ ಇಂತಹ ದೊಡ್ಡ ಭ್ರಷ್ಟಾಚಾರವನ್ನು ಜನರು ನಿರೀಕ್ಷೆ ಮಾಡಿರಲಿಲ್ಲ.

ಹಾಸಿಗೆ ವಿಚಾರದಲ್ಲಿ ಅವ್ಯವಹಾರದ ಬಗ್ಗೆ ಗೊತ್ತಾಗಿ ಮುಖ್ಯಮಂತ್ರಿಗಳೇ ಆ ನಿರ್ಧಾರ ವಾಪಸ್ ಪಡೆದಿದ್ದಾರೆ. ಅದೇ ರೀತಿ ಸಚಿವರುಗಳು ಪ್ರತಿ ಹಂತದಲ್ಲೂ ದುಡ್ಡು ಹೊಡೆಯುತ್ತಿದ್ದಾರೆ. ಮುಖ್ಯಮಂತ್ರಿಗಳು ಸಾಲು ಸಾಲಾಗಿ ಮಂತ್ರಿಗಳಿಗೆ ಕೊರೋನಾ ಜವಾಬ್ದಾರಿ ವಹಿಸಿದರೂ, ಯಾರೊಬ್ಬರೂ ಆಸ್ಪತ್ರೆಗೆ ಹೋಗಿ ಅಲ್ಲಿನ ಸೋಂಕಿತರ ಜತೆ ಮಾತನಾಡಿ ಅವರಿಗೆ ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡಿಲ್ಲ. ಸಚಿವರು ಜನರನ್ನು ರಕ್ಷಿಸುವ ಬದಲು ದುಡ್ಡು ಮಾಡುವ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳು ಈ ವಿಚಾರವಾಗಿ ಉತ್ತರ ನೀಡಲೇಬೇಕು.’