ಕೊರೋನಾ ಭ್ರಷ್ಟಚಾರದ ಬಗ್ಗೆ ಸಿಎಂ ಬಿಎಸ್ವೈ ಉತ್ತರ ನೀಡ್ಬೇಕು: ಡಿಕೆಶಿ

ಬೆಂಗಳೂರು: ಕೊರೋನಾ ವಿಚಾರದಲ್ಲಿ ಸರ್ಕಾರ ಕಾರ್ಯವೈಖರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ವಿರುದ್ದ ಟ್ವೀಟ್ ಮಾಡಿರುವ ಡಿಕೆಶಿ, ವೆಂಟಿಲೇಟರ್ ಖರೀದಿಯಲ್ಲಿ ಬಿಜೆಪಿ ಸರಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಜಗಜ್ಜಾಹಿರಾಗಿದೆ. ತಮಿಳುನಾಡು ಸರ್ಕಾರ ತಲಾ 4.78 ಲಕ್ಷ ರೂ.ಗೆ ಖರೀದಿಸಿದ ವೆಂಟಿಲೇಟರ್ ಗೆ ಕರ್ನಾಟಕ ಸರಕಾರ 18.20 ಲಕ್ಷ ರುಪಾಯಿ ಕೊಟ್ಟಿದೆ. ಈ ‘CORONA CORRUPTION’ ಬಗ್ಗೆ ಸಿಎಂಉತ್ತರ ಕೊಡಬೇಕಿದೆ ಎಂದು ಆಗ್ರಹಿಸಿದ್ದಾರೆ.

ವೆಂಟಿಲೇಟರ್ ಸಿಗದೆ ಕರ್ನಾಟಕದ ಕೊರೊನಾ ಸೋಂಕಿತರು ಸಾಯ್ತಾ ಇದ್ದರೆ. ಬಿಜೆಪಿ ಮಂತ್ರಿಗಳು ಪಿಪಿಇ ಕಿಟ್ ಗಳಿಂದ ಹಿಡಿದು ಬೆಡ್ ಗಳವರೆಗೂ ಎಲ್ಲ ಕೊರೊನಾ ಚಿಕಿತ್ಸೆ ಸಲಕರಣೆಗಳ ಖರೀದಿಯಲ್ಲಿ ಭ್ರಷ್ಟಾಚಾರದಲ್ಲೇ ಮುಳುಗಿ ಹೋಗಿದ್ದಾರೆ. ಬಿಜೆಪಿ ಸರಕಾರ ಕೊರೊನಾ ಸಂಕಷ್ಟ ಸಂದರ್ಭವನ್ನೂ ಲೂಟಿ ಮಾಡಲು ಬಳಸಿಕೊಂಡಿದೆ ಅಂತಾ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮಲೆ ಮಹದೇಶ್ವರ ಬೆಟ್ಟ ಮೂರು‌ ದಿನ ಬಂದ್

ಚಾಮರಾಜನಗರ: ಜಿಲ್ಲೆಯಲ್ಲಿ ಕೋರೊನಾ ಸೋಂಕು ದಿನೇದಿನೇ ಹೆಚ್ಚಾಗುತ್ತಿದೆ. ಹಾಗಾಗಿ ಸೋಂಕನ್ನು ನಿಯಂತ್ರಿಸಲು ಮಲೈಮಹದೇಶ್ವರ ಬೆಟ್ಟದಲ್ಲಿನ ಮಾದಪ್ಪನ ದರ್ಶನವನ್ನು ಮೂರು ದಿನ ಬಂದ್ ಮಾಡಲಾಗಿದೆ.

ಶ್ರಾವಣ ಮಾಸದ ವಿಶೇಷ ಪೂಜೆಯ ಹಿನ್ನೆಲೆಯಲ್ಲಿ ಮೂರು ದಿನಗಳಕಾಲ ಮಲೆ ಮಹದೇಶ್ವರ ದರ್ಶನ ಬಂದ್ ಮಾಡಲಾಗಿದ್ದು ಜುಲೈ 19, 20 ಹಾಗೂ 21ರಂದು ಬೆಟ್ಟಕ್ಕೆ ಭಕ್ತಾದಿಗಳ ಪ್ರವೇಶವಿಲ್ಲ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್ ರವಿ ಆದೇಶ ಹೊರಡಿಸಿದ್ದಾರೆ.

ಸೋಮವಾರ ಶ್ರಾವಣ ಮಾಸದ ಅಮಾವಾಸ್ಯೆ ಎಣ್ಣೆ ಮಜ್ಜನ ಸೇವೆ ಹಿನ್ನಲೆಯಲ್ಲಿ ಹೊರ ರಾಜ್ಯ, ಹೊರ ಜಿಲ್ಲೆಯಿಂದ ಭಕ್ತಾದಿಗಳ ದಂಡೇ ಹರಿದು ಬರುವ ಸಾಧ್ಯತೆ ಇದ್ದು, ಕೋರೋನಾ ಸೋಂಕು ನಿಯಂತ್ರಣ ಮಾಡಲು ಮುನ್ನೆಚ್ಚರಿಕೆಯಾಗಿ ಮಲೆ ಮಹದೇಶ್ವರ ದರ್ಶನ ಬಂದ್ ಮಾಡಲು ಮಲೆ ಮಹದೇಶ್ವರ ದೇವಸ್ಥಾನಗಳ ಅಭಿವೃದ್ದಿ ಪ್ರಾಧಿಕಾರಿ ಜಿಲ್ಲಾಡಳಿತಕ್ಕೆ ಕೋರಿದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ.

ಸೋಮವಾರ ಭೀಮನ ಅಮವಾಸೆಯೂ ಇರುವುದರಿಂದ ಮಹದೇಶ್ವರ ದರ್ಶನ ಪಡೆಯುವ ಅಪಾರ ಸಂಖ್ಯೆಯ ಭಕ್ತಿರಿಗೆ ನಿರಾಸೆಯನ್ನುಂಟು ಮಾಡಿದಂತ್ತಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ 25 ಸಾವಿರ ಆಂಟಿಜನ್ ಕಿಟ್,15 ಆಂಬುಲೆನ್ಸ್: ಡಿಸಿಎಂ ಅಶ್ವತ್ಥನಾರಾಯಣ್

ಮಂಗಳೂರು: ಕೊವಿರ್-19 ಗೆ ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಕುರಿತು, ಉಪ ಮುಖ್ಯ ಮಂತ್ರಿ ಡಾ. ಅಶ್ವಥ್ ನಾರಾಯಣರವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತುರ್ತು ಸಭೆ ನಡೆಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣ ಕುರಿತು, ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡುವ ಸಲುವಾಗಿ ವಿಕಾಸಸೌಧದಲ್ಲಿ ಇಂದು ಉಪ ಮುಖ್ಯ ಮಂತ್ರಿ ಡಾ. ಅಶ್ವತ್ ನಾರಾಯಣರವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತುರ್ತು ಸಭೆ ನಡೆಸಿದರು.

ಸಭೆಯ ನಂತರ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಶಾಸಕರುಗಳಾದ ವೇದವ್ಯಾಸ ಕಾಮತ್, ಹರೀಶ್ ಪುಂಜ, ಯು.ಟಿ.ಖಾದರ್ ಹಾಗೂ ಜಿಲ್ಲೆಯ ಆರೋಗ್ಯ ಅಧಿಕಾರಿಗಳ ಜೊತೆ ವಿಡಿಯೋ ಸಂವಾದದಲ್ಲಿ ಮುಖಾಮುಖಿ ಮಾತನಾಡಿದ ಉಪ ಮುಖ್ಯ ಮಂತ್ರಿ ಡಾ ಅಶ್ವತ್ಥನಾರಾಯಣರವರು, ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಕೋರಿಕೆಯಂತೆ ಉಚಿತವಾಗಿ ಕೋವಿಡ್-19 ಪರೀಕ್ಷೆ ಮಾಡಲು 25,000 Rapid antigen test kit ಗಳನ್ನು ಕೂಡಲೇ ಜಿಲ್ಲೆಗೆ ಸರಬರಾಜು ಮಾಡಲಾಗುವುದು ಹಾಗೂ 15 ಆಂಬುಲೆನ್ಸ್‌ಗಳನ್ನು ಕೂಡಲೇ ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.

ಅಲ್ಲದೆ ಕೋವಿಡ್-19 ಸೋಂಕಿತರು, ತಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿದ ಕೂಡಲೇ, ಅಗತ್ಯವಿದ್ದಲ್ಲಿ ಹತ್ತಿರದ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ವೆಚ್ಚದಲ್ಲಿ ಉಚಿತ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗುವುದು ಹಾಗೂ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಲು ಆದೇಶ ನೀಡುವುದಾಗಿ ತಿಳಿಸಿದರು.

ಇನ್ನು ಮುಂದೆ ಕೋವಿಡ್ -19 ಚಿಕಿತ್ಸೆಗೆ ಒಳಪಡುವವರು ಮತ್ತು ಕೋವಿಡ್-19 ಟೆಸ್ಟ್ ಮಾಡಿಕೊಳ್ಳಬೇಕಾದವರು ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ ಎಂದು ಭರವಸೆ ನೀಡಿದ ಉಪ ಮುಖ್ಯಮಂತ್ರಿಗಳು, ಈ ನಿಟ್ಟಿನಲ್ಲಿ ಕೂಡಲೇ ಕಾರ್ಯ ಪ್ರವೃತ್ತರಾಗಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದರು.

ಈ ಮಹತ್ವದ ಸಭೆಯ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಕೋವಿಡ್-19 ಪೀಡಿತರ ಸಮಸೈಗಳು ಪರಿಹಾರ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಪ್ರತಿಕ್ರಿಯಿಸಿ, ಜಿಲ್ಲೆಯ ನೆರವಿಗೆ ಬಂದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ನವರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಾll ಅಶ್ವತ್ ನಾರಾಯಣ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಕೊರೋನಾದಿಂದ ಕೈಗಾರಿಕಾ ಕ್ಷೇತ್ರದಲ್ಲಿ ಲೆಕ್ಕಕ್ಕೆ ಸಿಗದಷ್ಟು ಹಾನಿಯಾಗಿದೆ: ಶೆಟ್ಟರ್

ಬಾಗಲಕೋಟೆ: ಕರೊನಾದಿಂದ ರಾಜ್ಯದ ಕೈಗಾರಿಕಾ ವಲಯದಲ್ಲಿ ಲೆಕ್ಕಕ್ಕೆ ಸಿಗದಷ್ಟು ಹಾನಿ ಆಗಿದೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿಕೆ ನೀಡಿದ್ದಾರೆ.

ಬಾಗಲಕೋಟೆಯಲ್ಲಿ ಮಾತಾನಾಡಿದ ಅವ್ರು ಕರೊನಾದಿಂದ ಸಾಕಷ್ಟು ಜನರು ನಿರುದ್ಯೋಗಿಗಳು ಆಗಿದ್ದಾರೆ. ಸ್ಕಿಲ್ ಲೇಬರ್ ಸಮಸ್ಯೆ ಜಾಸ್ತಿಯಾಗಿದೆ.
ಕನ್ಸ್ಟ್ರಕ್ಷನ್ ವರ್ಕ್ ಗೆ ಬಹಳಷ್ಟು ಸಮಸ್ಯೆ ಆಗಿದೆ. ಲಕ್ಷಾಂತರ ಕೋಟಿ ರೂ.ಹಾನಿಯಾಗಿದೆ. ಆದರೆ, ಪ್ರಧಾನಿ ಮೋದಿ ಅವರು 20 ಲಕ್ಷ ಕೋಟಿ ಪ್ಯಾಕೇಜ್ ಸಹಕಾರಿ ಆಗಿದೆ. ಪ್ಯಾಕೇಜ್ ನಲ್ಲಿ 3 ಲಕ್ಷ ಕೋಟಿ ರೂ. ಕೈಗಾರಿಕೆಗಳಿಗೆ ಕೊಟ್ಟಿದ್ದಾರೆ. ಸದ್ಯ ಕೈಗಾರಿಕೆಗಳಿಗೆ ಸಾಲ ಸೌಲಭ್ಯ ಸಿಗುತ್ತಿದೆ. ವರ್ಕಿಂಗ್ ಕ್ಯಾಪಿಟಲ್ ಗೆ ಹಣ ಸಿಗುತ್ತಿದೆ. ರಾಜ್ಯ ಸರ್ಕಾರವೂ ವಿದ್ಯುತ್ ನ ಮಿನಿಮಮ್ ಬಿಲ್ ವಿನಾಯಿತಿ ಕೊಟ್ಟಿದ್ದೇವೆ. ಈಗ ಕೈಗಾರಿಕೆಗಳು ಮತ್ತೆ ಸಹಜ ಸ್ಥಿತಿಗೆ ಬರುವ ಹಂತದಲ್ಲಿವೆ ಎಂದು ಹೇಳಿದರು.

ಇನ್ನೂ ಕರೊನಾ ವಿಚಾರವಾಗಿ ಸಚಿವ ಶ್ರೀರಾಮುಲು ಹೇಳಿಕೆ ಮುಗಿದ ಅಧ್ಯಾಯ. ಅದಕ್ಕೆ ಅವರೇ ಸ್ಪಷ್ಟಿಕರಣ ಕೊಟ್ಟಿದ್ದಾರೆ. ಅದು ಸಹಜವಾದ ಹೇಳಿಕೆ ಅಷ್ಟೆ. ಅಸಹಾಯಕತೆ ಅಲ್ಲ. ಕೊರೊನಾ ನಿಯಂತ್ರಣಕ್ಕೆ ಜನರು ಸಹಕಾರ ಕೊಡಬೇಕು. ಕೊರೋನಾ ಬಗ್ಗೆ ಹೈಪ್ ಕ್ರಿಯೇಟ್ ಆಗಿದೆ. ಕೊರೋನಾದಿಂದ ಸತ್ತವರ ಪೈಕಿ ಶೇ.75 ಜನರಿಗೆ ಬೇರೆ ಬೇರೆ ಕಾಯಿಲೆ ಇದೆ. 25 ರಷ್ಟು ಜನರು ಮಾತ್ರ ಕರೊನಾದಿಂದ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೋನಾದಿಂದ ಗುಣಮುಖರಾದವರು ಸರಾಸರಿ 63 ಪರ್ಸಂಟ್ ಇದೆ. ಹೀಗಾಗಿ ಹೆದರುವ ಪ್ರಶ್ನೆ ಇಲ್ಲ.
ಆದ್ರೆ, ಎಚ್ಚರದಿಂದ ಇರಬೇಕು, ಭಯ-ಭೀತಿ ಪಡಬಾರದು ಎಂದು ಜನರಿಗೆ ಮನವಿ ಮಾಡಿಕೊಂಡ್ರು.

ಅಸ್ಸಾಂನ ಪರಿಸ್ಥಿತಿಯ ಬಗ್ಗೆ ತುರ್ತು ಗಮನ ಹರಿಸಬೇಕು ಮತ್ತು ಅಲ್ಲಿನ ರಾಜ್ಯ ಸರ್ಕಾರಕ್ಕೆ ಗರಿಷ್ಠ ನೆರವು ನೀಡಬೇಕು: ದೇವೇಗೌಡ

ಬೆಂಗಳೂರು:ಉದಯೋನ್ಮುಖ ರಾಜ್ಯವಾದ ಅಸ್ಸಾಂನ ಪರಿಸ್ಥಿತಿಯ ಬಗ್ಗೆ ತುರ್ತು ಗಮನ ಹರಿಸಬೇಕು ಮತ್ತು ಅಲ್ಲಿನ ರಾಜ್ಯ ಸರ್ಕಾರಕ್ಕೆ ಗರಿಷ್ಠ ನೆರವು ನೀಡಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಮಂತ್ರಿ ಎಚ್.ಡಿ ದೇವೇಗೌಡ ಆಗ್ರಹಿಸಿದ್ದಾರೆ.

ಅಸ್ಸಾಂನಲ್ಲಿನ ಪ್ರವಾಹದ ವರದಿಗಳಿಂದ ನಾನು ತೀವ್ರವಾಗಿ ನೊಂದಿದ್ದೇನೆ. ಕಳೆದ ಕೆಲವು ದಿನಗಳಿಂದ ಅಲ್ಲಿನ ಪರಿಸ್ಥಿತಿ ಸ್ಥಿರವಾಗಿ ಹದಗೆಡುತ್ತಿದೆ ಎಂದು ನನ್ನ ಗಮನಕ್ಕೆ ಬಂದಿದೆ, ಇತ್ತೀಚಿನ ವರದಿಗಳಲ್ಲಿ 60 ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವುದು ನೋವಿನ ಸಂಗತಿ , ಈ ಪ್ರವಾಹದಿಂದ ಸುಮಾರು ನಲವತ್ತು ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ,

ಸುಮಾರು 480 ಪರಿಹಾರ ಶಿಬಿರಗಳನ್ನು ಈಗಾಗಲೇ ಅಲ್ಲಿನ ರಾಜ್ಯ ಸರ್ಕಾರ ಸ್ಥಾಪಿಸ್ಸಿದ್ದರೂ ಕೂಡ ಸಾರ್ವಜನಿಕರ ಮೂಲಸೌಕರ್ಯಗಳಿಗೆ ದೊಡ್ಡ ಪ್ರಮಾಣದ ಪೆಟ್ಟು ಬಿದ್ದಿದೆ

ಜೊತೆಗೆ ಸುಮಾರು 60 ಕ್ಕೂ ಹೆಚ್ಚು ಪ್ರಾಣಿಗಳು ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ ಸಾವನ್ನಪ್ಪಿರುವುದು ಕೂಡ ಬಹಳ ದುಃಖಕರವಾಗಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗವು ದೇಶಾದ್ಯಂತ ಉಲ್ಬಣಗೊಳ್ಳುತ್ತಿರುವಾಗ ಅಸ್ಸಾಂನ ಜನರು ಪ್ರವಾಹ ಮತ್ತು ಅದರಿಂದ ಉಂಟಾದ ಸಾವು ನೋವುಗಳ ಜೊತೆ ಹೋರಾಡುತ್ತಿದ್ದಾರೆ ಮತ್ತು ಈ ಪ್ರವಾಹದಿಂದ ಹಾನಿಗೊಳಗಾಗಿರುವ ಪ್ರದೇಶದಿಂದ ಸ್ಥಳಾಂತರಗಳ್ಳಲು ಹೋರಾಡುತ್ತಿರುವುದು ನೋಡಿದರೆ ಮನಸ್ಸಿಗೆ ಬಹಳ ನೋವುಂಟಾಗುತ್ತದೆ

ನಾನು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮತ್ತು ಅದಾದ ನಂತರವೂ ಕೂಡ ಅಸ್ಸಾಂ ಜನತೆ ಮತ್ತು ಈಶಾನ್ಯಾ ರಾಜ್ಯಗಳ ಜನರು ನನ್ನ ಬಗ್ಗೆ ಅತೀವ ಪ್ರೀತಿ ಮತ್ತು ವಿಶ್ವಾಸ ತೋರಿಸಿದ್ದಾರೆ , ಅಲ್ಲಿನ ಜನರು ಆದಷ್ಟು ಬೇಗ ಈ ಸಂಕಷ್ಟದಿಂದ ಹೊರ ಬರಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೀನಿ

ಈಗ ದೇಶಕ್ಕೆ ಆವರಿಸಿರುವ ಸಾಂಕ್ರಾಮಿಕ ರೋಗ ಕಡಿಮೆ ಆದ ತಕ್ಷಣ ನಾನು ಅಸ್ಸಾಂ ಹಾಗು ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡುತ್ತೇನೆ ಎಂದು ದೇವೇಗೌಡರು ತಿಳಿಸಿದ್ದಾರೆ.

ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಸ್ನೇತನನ್ನೆ ಹತ್ಯೆ ಮಾಡಿದ್ದ ಪಾತಕಿ ಸೆರೆ

ದಾವಣಗೆರೆ: ಚನ್ನಗಿರಿ ತಾಲೂಕಿನ ನಾಗರಕಟ್ಟೆ ಗ್ರಾಮದ ಯುವಕನ ಶೂಟ್ ಔಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನ ಬಂಧಿಸುವಲ್ಲಿ ದಾವಣಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿದ ಎಸ್ಪಿ ಹನಮಂತರಾಯ ಕೆಲವೇ ದಿನಗಳಲ್ಲಿ ಪ್ರಕರಣ ಭೇದಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿಯನ್ನ ಬಂಧಿಸಲಾಗಿದೆ ಅಂತಾ ಮಾಹಿತಿ ನೀಡಿದ್ರು.

ಜುಲೈ 9 ರಂದು ಹಣದ ವಿಚಾರಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಾಗಕಟ್ಟೆ ಗ್ರಾಮದ ಯುವಕ ಚಂದ್ರಾನಾಯಕ್ (25) ಹತ್ತೆಯಾಗಿತ್ತು. ಕೊಲೆಯಾದ ಚಂದ್ರನಾಯಕ್ ತನ್ನ ಸ್ನೇಹಿತನಿಗೆ 1 ಲಕ್ಷದ 80 ಸಾವಿರ ಹಣ ಸಾಲ ನೀಡಿದ್ದ‌. ತಾನು ನೀಡಿದ ಹಣ ವಾಪಸ್ ಕೇಳಿದಾಗ ನಾಗರ ಕಟ್ಟೆ ಸಮೀಪದ ಸೂಳೆಕೆರೆ ಗುಡ್ಡದ ಹತ್ತಿರ ಬಾ ನಿನ್ನ ಹಣ ನೀಡುತ್ತೇನೆ ಅಂತ ಹೇಳಿದ ಸ್ನೇಹಿತನ ಮಾತು ನಂಬಿ ಸೂಳೆಕೆರೆ ಗುಡ್ಡಕ್ಕೆ ಚಂದ್ರನಾಯಕ್ ತೆರಳಿದ್ದಾನೆ. ಈ ವೇಳೆ ಆತನನ್ನ ಶೂಟ್ ಮಾಡಿ ಹತ್ಯೆಗೈಯಲಾಗಿದೆ.

ಹತ್ಯೆ ಬಳಿಕ ಶೂಟ್ ಮಾಡಿರೋ ಬಗ್ಗೆ ಅನುಮಾನ ಬಾರದಿರಲಿ ಅಂತ ಆತನ ತಲೆ ಮೇಲೆ ಕಲ್ಲು ಎತ್ತಿ ಹಾಕಲಾಗಿತ್ತು. ಮೊದಲು ಪೊಲೀಸರು ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ ಅಂತಾನೆ ನಂಬಿದ್ದರು. ನಂತರ ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಶೂಟ್ ಮಾಡಿ ಕೊಲೆ ಮಾಡಿರೋದು ಬೆಳಕಿಗೆ ಬಂದಿದೆ. ಈ ಪ್ರಕರಣ ಬೇಧಿಸಿದ ಪೊಲೀಸರು ಆರೋಪಿ ಚೇತನ್ ನಾಯ್ಕ್ ನನ್ನ ಬಂಧಿಸಲಾಗಿದ್ದಾರೆ.