ಲಾಕ್ ಡೌನ್ ಮುಂದುವರೆಸುವ ಯಾವುದೇ ಯೋಜನೆ ಸರ್ಕಾರದ ಮುಂದೆ ಇಲ್ಲ: ಸಿಎಂ

ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಬೆಂಗಳೂರಿನ ಕೋವಿಡ್ ಪರಿಸ್ಥಿತಿ ಹಾಗೂ ನಿರ್ವಹಣೆ ಕುರಿತು ಎಂಟು ವಲಯಗಳ ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಿ ಚರ್ಚಿಸಿದರು.

ಈ ಸಂದರ್ಭದಲ್ಲಿ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ದಾಖಲಾಗಲು ಆಗುತ್ತಿರುವ ತೊಡಕು ನಿವಾರಿಸುವ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಖಾಸಗಿ ಆಸ್ಪತ್ರೆಗಳೊಂದಿಗೆ ಸಭೆ ನಡೆಸಿ, ಕೋವಿಡ್ ಹಾಗೂ ನಾನ್ ಕೋವಿಡ್ ರೋಗಿಗಳಿಗೆ ಚಿಕಿತ್ಸಾ ಸೌಲಭ್ಯ ದೊರಕುವುದನ್ನು ಖಾತರಿ ಪಡಿಸುವಂತೆ ಸೂಚಿಸಿದರು. ರೋಗ ಲಕ್ಷಣ ಇಲ್ಲದ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸದೆ, ಕೋವಿಡ್ ಕೇರ್ ಸೆಂಟರ್ ಗಳಿಗೆ ಅಥವ ಹೋಮ್ ಕ್ವಾರಂಟೈನ್ ಹಾಗಗೃಹಗಳನ್ನುೂವುದು ಆ ಮೂಲಕ ತೀವ್ರತರ ರೋಗಲಕ್ಷಣದಿಂದ ಬಳಲುತ್ತಿರುವ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಒದಗಿಸುವಂತೆ ಸೂಚಿಸಿದರು.

ಆಸ್ಪತ್ರೆ ಯಲ್ಲಿ ಮೃತರಾದವರಿಗೆ ರ್ಯಾಪಿಡ್ ಆಂಟಿಜೆನ್ ಪರೀಕ್ಷೆ ನಡೆಸಿ ಶವವನ್ನು ಕೂಡಲೇ ಹಸ್ತಾಂತರಿಸಲು ಅಥವಾ ನಿಯಮಾನುಸಾರ ಅಂತ್ಯಕ್ರಿಯೆ ನಡೆಸಲು ಕ್ರಮ ವಹಿಸಬೇಕು. ಮನೆಯಲ್ಲಿ ಮೃತರಾದವರಿಗೂ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ನಡೆಸಿ ಮೃತದೇಹವನ್ನು ತುರ್ತಾಗಿ ಅಂತ್ಯಕ್ರಿಯೆ ನಡೆಸಲು‌ ಕ್ರಮ ವಹಿಸುವುದು.

ಕೋವಿಡ್ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವಲ್ಲ; ಲಾಕ್ ಡೌನ್ ಮುಂದುವರೆಸುವ ಯಾವುದೇ ಯೋಜನೆ ಸರ್ಕಾರದ ಮುಂದೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ವೈದ್ಯರ ಕೊರತೆ ನಿವಾರಿಸಲು, ಹುದ್ದೆ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ.ಪ್ರತಿ ವಾರ್ಡಿನಲ್ಲೂ ಸ್ವಯಂ ಸೇವಕರನ್ನು ಗುರುತಿಸಲಾಗಿದೆ ಹಾಗೂ ಅಂಬ್ಯುಲೆನ್ಸ್ ನಿಗದಿ ಪಡಿಸಲಾಗಿದೆ.ಖಾಸಗಿ ಆಸ್ಪತ್ರೆಗಳು ಬೆಡ್ ನೀಡದೆ ಇದ್ದರೆ ಕಠಿಣ ಕ್ರಮ ಕೈಗೊಳ್ಳಬೇಕು.ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ದಾಖಲಾತಿ ಮತ್ತು ಹಾಸಿಗೆಗಳ ಲಭ್ಯತೆ ಕುರಿತು ಮಾಹಿತಿ ಒದಗಿಸಲು ಸ್ವಯಂ ಸೇವಕರು ಹಾಗು ನೋಡಲ್ ಅಧಿಕಾರಗಳ ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿಯವರು ತಿಳಿಸಿದರು.

ಪ್ರತಿ ವಾರ್ಡುಗಳಲ್ಲಿ ಕಲ್ಯಾಣ ಮಂಟಪಗಳನ್ನು ಹಾಗು ವಸತಿ ಗೃಹಳನ್ನು ಗುರುತಿಸಲಾಗಿದ್ದು, ಪ್ರತ್ಯೇಕವಾಗಿ ವಾಸಿಸಲು ಕೊಠಡಿಗಳು ಇಲ್ಲದವರಿಗೆ ಕ್ವಾರಂಟೈನ್ ಮಾಡಲು ಈ ಕಲ್ಯಾಣ ಮಂಟಪಗಳನ್ನು ಬಳಸುವಂತೆ ಸೂಚಿಸಿದರು.

ರಾಜ್ಯದಲ್ಲಿ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸುವಂತೆ ಮುಖ್ಯಮಂತ್ರಿಯವರು ನಿರ್ದೇಶನ ನೀಡಿದರು.ಜನ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವ ಸಾಧ್ಯತೆಗಳಿರುವ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸುವಂತೆ ತಿಳಿಸಿದರು.

ಪರೀಕ್ಷೆಯ ಫಲಿತಾಂಶ ದೊರೆತ ಎರಡು ಗಂಟೆಗಳೊಳಗೆ ಹಾಸಿಗೆ ಹಂಚಿಕೆ ಮಾಡಿ, ಅಂಬ್ಯುಲೆನ್ಸ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಕ್ರಮ ವಹಿಸಬೇಕು. ಈ ವ್ಯವಸ್ಥೆಯನ್ನು ವೀಕೇಂದ್ರೀಕರಿಸಿ, ವಲಯವಾರು, ಮೇಲ್ವಿಚಾರಣೆ ನಡೆಸುವಂತೆ ಮುಖ್ಯಮಂತ್ರಿಯವರು ಸೂಚಿಸಿದರು.

ರೋಗ ಲಕ್ಷಣ ಇರುವ, 65 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಮೊದಲ ಆದ್ಯತೆಯ ಮೇರೆಗೆ ಹಾಸಿಗೆ ಹಂಚಿಕೆ ಮಾಡಬೇಕು. ರೋಗಲಕ್ಷಣ ಇಲ್ಲದವರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

ಆಯುಷ್ ವೈದ್ಯರ ವೇತನ ತಾರತಮ್ಯ ಸರಿಪಡಿಸಿ: ಕುಮಾರಸ್ವಾಮಿ ಒತ್ತಾಯ

ಬೆಂಗಳೂರು: ವೇತನ ತಾರತಮ್ಯ ಬಗೆಹರಿಸುವಂತೆ ಒತ್ತಾಯಿಸಿ ರಾಜ್ಯದ 2000 ಸರ್ಕಾರಿ ಗುತ್ತಿಗೆ ಆಯುಷ್ ವೈದ್ಯರು ಸಾಮೂಹಿಕ ರಾಜೀನಾಮೆ ಸಲ್ಲಿಸಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಅವರೊಂದಿಗೆ ಮಾತುಕತೆ ನಡೆಸಿ ಬಿಕ್ಕಟ್ಟು ಪರಿಹರಿಸುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಕರೋನಾ ನಿಯಂತ್ರಣ ಮತ್ತು ಚಿಕಿತ್ಸೆಗೆ ಆಯುಷ್ ವೈದ್ಯರಿಗೆ ಮಾಸಿಕ 20000 ರೂಪಾಯಿಗಳು. ಆಲೋಪತಿ ವೈದ್ಯರಿಗೆ ಮಾಸಿಕ 60000 ರೂಪಾಯಿ ವೇತನ ನೀಡುತ್ತಿರುವುದು ತಾರತಮ್ಯ ಎಂದು ಆಯುಷ್ ವೈದ್ಯರು ರಾಜಿನಾಮೆ ನೀಡಿದ್ದಾರೆ. ಈಗಾಗಲೇ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಕೊರತೆ ಎದುರಿಸುತ್ತಿರುವ ರಾಜ್ಯ ಸರ್ಕಾರ ಆಯುಷ್ ವೈದ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮನವೊಲಿಸಬೇಕು.

ಯಾವುದೇ ಕಾರಣಕ್ಕೂ ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಸರ್ಕಾರ ಹೊಣೆ ಗೇಡಿತನ ಪ್ರದರ್ಶಿಸಬಾರದು.
ಅಲೋಪತಿ ಮತ್ತು ಆಯುಷ್ ವೈದ್ಯರ ನಡುವಣ ಅಜಗಜಾಂತರ ವೇತನ ತಾರತಮ್ಯ ಸಹಜವಾಗಿಯೇ ಕಂದಕ ಸೃಷ್ಟಿಸಿದೆ. ಸರ್ಕಾರ ಕೂಡಲೇ ಈ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಕರೋನ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಬಲು ಕಷ್ಟವಾಗುತ್ತದೆ. ಸಮಸ್ಯೆ ಬಿಗಡಾಯಿಸುವ ಮುನ್ನ ಸರ್ಕಾರ ಎಚ್ಚರ ವಹಿಸಬೇಕು.

ಕೇಂದ್ರದ ರೀತಿ‌ ಸಣ್ಣ,ಅತಿಸಣ್ಣ ಕೈಗಾರಿಕೆಗಳಿಗೆ ಟೆಂಡರ್ ಮುಂಗಡ ಪಾವತಿ ವಿನಾಯಿತಿ ನೀಡಿ: ಎಚ್ಡಿಕೆ

ಬೆಂಗಳೂರು: ಟೆಂಡರ್ ಮುಂಗಡ ಪಾವತಿ ವಿಷಯದಲ್ಲಿ ರಾಜ್ಯ ಸರ್ಕಾರ MSME ಗಳಿಗೆ ಕೇಂದ್ರ ಸರ್ಕಾರದ ಮಾದರಿಯಲ್ಲಿ ವಿನಾಯಿತಿ ನೀಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೊರೋನಾ ಸೋಂಕು ಹಬ್ಬಿದ ನಂತರ ಲಾಕ್ಡೌನ್ ಮತ್ತು ವಹಿವಾಟುಗಳಿಲ್ಲದೆ ವಿಶೇಷವಾಗಿ ಸಣ್ಣ, ಮಧ್ಯಮ ಕೈಗಾರಿಕೆಗಳು ಬದುಕುಳಿಯುವುದೇ ಕಷ್ಟವಾಗಿದೆ. MSME ಗಳು ಕೇಂದ್ರದ ಯಾವುದೇ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಮುಂಗಡ ಹಣ ಪಾವತಿ ಮಾಡಬೇಕಿಲ್ಲ. ಆದರೆ ರಾಜ್ಯ ಸರ್ಕಾರದಲ್ಲಿ ಮಾತ್ರ ಇಂತಹ ವಿನಾಯಿತಿ ಇಲ್ಲ. ರಾಜ್ಯ ಸರ್ಕಾರ MSME ಗಳಿಗೆ ಕೇಂದ್ರ ಸರ್ಕಾರದ ಮಾದರಿಯಲ್ಲಿ ವಿನಾಯಿತಿ ನೀಡಲು ತಕ್ಷಣ ಕ್ರಮ ಕೈಗೊಳ್ಳಬೇಕು.

ರಾಜ್ಯದಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚುಮಂದಿ MSME ಉದ್ದಿಮೆದಾರರು ನೊಂದಾಯಿಸಿಕೊಂಡಿದ್ದು, ಇದರಲ್ಲಿ ಶೇಕಡ ಅರ್ಧಕ್ಕಿಂತ ಹೆಚ್ಚು ಬೆಂಗಳೂರಿನ ಉದ್ಯಮಿಗಳು. ರಾಜ್ಯ ಸರಕಾರದ ಬಿಡ್ ನಲ್ಲಿ ಭಾಗವಹಿಸಲು ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ ಮುಂಗಡ ಹಣ ಪಾವತಿ ಕಡ್ಡಾಯ ಮಾಡಿರುವುದನ್ನು ರದ್ದುಗೊಳಿಸಬೇಕು.

ರಾಜ್ಯ ಸರ್ಕಾರ ಕೇಂದ್ರದ ರೀತಿ ಸಣ್ಣ,ಮಧ್ಯಮ ಉದ್ದಿಮೆದಾರರಿಗೆ ಸಹಾಯಹಸ್ತ ಚಾಚಿದರೆ ಕಷ್ಟಕ್ಕೆ ಸಿಲುಕಿರುವ MSME ಉದ್ದಿಮೆದಾರರು ತುಸು ಉಸಿರಾಡಲು ಸಾಧ್ಯವಾಗುತ್ತದೆ. ಇವರೊಂದಿಗೆ ಸುಮಾರು 40 ಲಕ್ಷಕ್ಕೂ ಹೆಚ್ಚು ಉದ್ಯೋಗಸ್ಥರಿದ್ದಾರೆ ರಾಜ್ಯಸರ್ಕಾರ ತಡಮಾಡದೆ ತಕ್ಷಣವೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವಂತೆ ಒತ್ತಾಯಿಸಿದ್ದಾರೆ.

ಮನೆಯ ಮೇಲ್ಚಾವಣಿ ಕುಸಿದು ವೃದ್ದ ಸಾವು

ಚಿಕ್ಕಬಳ್ಳಾಪುರ: ತಡರಾತ್ರಿ ಬಿದ್ದ ಮಳೆಗೆ ಮನೆ ಮೇಲ್ಚಾವಣಿ ಕುಸಿದು ವೃದ್ದ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಜಾತವಾರ ಗ್ರಾಮದಲ್ಲಿ ನಡೆದಿದೆ. ಕೃಷ್ಣಪ್ಪ (65) ಮೃತ ದುರ್ದೈವಿ.

ಮೃತ ಕೃಷ್ಣಪ್ಪ ತನ್ನ ಪತ್ನಿ ಕೇಶವಮ್ಮ ಜೊತೆ ಈ ಮನೆಯಲ್ಲಿ ರೇಷ್ಮೆ ಹುಳು ಮೇಯಿಸುತ್ತಿದ್ದರು. ನಿನ್ನೆ ರಾತ್ರಿ ಮಲಗಿದ್ದಾಗ ಕಳೆದ ಮೂರು ದಿನಗಳಿಂದ ಸಂಜೆಯ ವೇಳೆ ಸುರಿಯುತ್ತಿದ್ದ ಮಳೆಗೆ ನೆನೆದಿದ್ದ ಹಳೆಯದಾದ ಮೇಲ್ಚಾವಣಿ ತಡರಾತ್ರಿ ಕುಸಿದು ಬಿದ್ದು ಕೃಷ್ಣಪ್ಪ ಸ್ಥಳದಲ್ಲೇ ಮೃತರಾಗಿ ಪತ್ನಿ ಕೇಶವಮ್ಮಳ ಮೇಲೆ ಮಣ್ಣು ಕುಸಿದಿದೆ.

ಬೆಳಗ್ಗೆ ಕೃಷ್ಣಪ್ಪನ ಪುತ್ರ ತಂದೆ-ತಾಯಿಗೆ ಟೀ ತೆಗೆದು ಕೊಂಡು ಹೋಗಿ ಮನೆಯ ಬಾಗಿಲು ತೆರದಾಗ ಘಟನೆ ಬೆಳಕಿಗೆ ಬಂದಿದ್ದು, ತಂದೆ ಮೃತರಾಗಿದ್ದರೆ ತಾಯಿ ಯಾವುದೇ ಗಾಯಗಳಿಲ್ಲದೇ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಕೋವಿಡ್ ಇರೋದ್ರಿಂದ ಆ ವೃದ್ದನ ಮೃತ ದೇಹವನ್ನು ಕೋವಿಡ್ ಟೆಸ್ಟ್ ಮಾಡಲು ಸ್ಥಳಕ್ಕೆ ತಾಲ್ಲೂಕು ಆಡಳಿತ ಆಗಮಿಸಿದ್ದು, ಕೊರೋನಾ ಪರೀಕ್ಷೆ ವರದಿ ಬಂದ ನಂತರ ಶವದ ಮರಣೋತ್ತರ ಪರೀಕ್ಷೆ ಮಾಡಿ ಮೃತನ ಸಂಬಂದಿಗಳಿಗೆ ಹಸ್ತಾಂತರ ಮಾಡಲಾಗುವುದು.

ಭೂಸುಧಾರಣೆ ತಿದ್ದುಪಡಿ ಕಾಯ್ದೆ ಸುಗ್ರೀವಾಜ್ಞೆ ವಾಪಸ್ಸಿಲ್ಲ: ಡಿಸಿಎಂ

ಬೆಂಗಳೂರು: ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಹೊರಡಿಸಲಾಗಿರುವ ಸುಗ್ರೀವಾಜ್ಞೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಬೆಂಗಳೂರಿನಲ್ಲಿ ಗುರುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಗತಿಗೆ ಪೂರಕವಾದ ಈ ತಿದ್ದುಪಡಿ ಕಾಯ್ದೆಯನ್ನು ಹಿಂದೆ ಸದನದಲ್ಲಿ ಕಾಂಗ್ರೆಸ್ ಸದಸ್ಯರೇ ಬೆಂಬಲಿಸಿದ್ದರು. ಈಗ ನೋಡಿದರೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆ ಮಾಡುತ್ತಿರುವುದು ಅಚ್ಚರಿ ತಂದಿದೆ ಎಂದರು.

ಇಡೀ ದೇಶದಲ್ಲೇ ಒಂದು ಕಾಯ್ದೆ ಇದ್ದರೆ, ನಮ್ಮ ರಾಜ್ಯದಲ್ಲೇ ಒಂದು ಕಾಯ್ದೆ ಇತ್ತು. ಅದರಿಂದ ರೈತರಿಗೆ, ಜನರಿಗೆ ಅನುಕೂಲವಾಗಿದ್ದು ಏನೂ ಇಲ್ಲ. ಈವರೆಗೂ ಇದರ ದುರ್ಬಳಕೆ ಆಗಿ ವಿಪರೀತ ಭ್ರಷ್ಟಾಚಾರಕ್ಕೆ ಕಾರಣವಾಗಿತ್ತು. ಇದರಿಂದಾಗಿಯೇ ರಾಜ್ಯಕ್ಕೆ ಸಾಕಷ್ಟು ಹಾನಿಯಾಗಿದೆ. ಹಾಗೆ ನೋಡಿದರೆ ಈ ತಿದ್ದಪಡಿ ಕಾಯ್ದೆಯೂ ಪ್ರಗತಿಗೆ ಪೂರಕವಾದ ಕ್ರಮವಾಗಿದೆ ಎಂದು ಡಿಸಿಎಂ ಕಾಯ್ದೆಯನ್ನು ಸಮರ್ಥಿಸಿಕೊಂಡರು.

ವಿಧಾನಸಭೆಯಲ್ಲಿ ಚರ್ಚೆ ನಡೆಯಬೇಕಾದರೆ, ಇದೊಂದು ಅತ್ಯುತ್ತಮ ಕಾಯ್ದೆ. ಇದು ಜಾರಿಗೆ ಬರಬೇಕು ಎಂದು ಕೆಪಿಸಿಸಿಯ ಈಗಿನ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ ಹೇಳಿದ್ದರು. ಈ ಬಗ್ಗೆ ಬಗ್ಗೆ ಟೀಕೆ ಮಾಡುತ್ತಿರುವವರು ಎದೆ ಮುಟ್ಟಿಕೊಂಡು ಆತ್ಮಾವಲೋಕನ ಮಾಡಿಕೊಳ್ಳಲಿ. ಇದು ಖಂಡಿತಾ ರೈತ ವಿರೋಧಿಯಲ್ಲ. ಕೆಲವರು ತಮ್ಮ ಏನೇನೋ ರಾಜಕೀಯ ಹುನ್ನಾರಗಳ ಕಾರಣಕ್ಕೆ ಭಿನ್ನಸ್ವರ ಹಾಡುತ್ತಿದ್ದಾರೆ. ಜನರನ್ನು ಹಾಳು ಮಾಡುವುದೇ ಕೆಲವರ ನಿತ್ಯ ಕೆಲಸವಾಗಿದೆ ಎಂದು ಡಿಸಿಎಂ ಹರಿಹಾಯ್ದರು.

ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ಮುಖಂಡರಿಗೆ, ಕಾರ್ಯಕರ್ತರಿಗೆ ಎಚ್ಡಿಡಿ ಪತ್ರ!

ಬೆಂಗಳೂರು: ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಪತ್ರ ಬರೆದಿದ್ದಾರೆ. ವಿಧಾನಸಭೆ ಚುನಾವಣೆ ಮುಗಿದು ಎರಡೂವರೆ ವರ್ಷ ಕಳೆದಿದೆ. ಇನ್ನೂ ಒಂದು ವರ್ಷದಲ್ಲಿ ಮತ್ತೆ ಚುನಾವಣೆ ಬಿಸಿ ಆರಂಭವಾಗುತ್ತದೆ. ದುರಾದೃಷ್ಟವಶಾತ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಿಮ್ಮಗಳ ಹಿತ ಕಾಪಾಡುವಲ್ಲಿ ನಾವು ಎಡವಿದ್ದೇವೆ. ಇದು ಪಕ್ಷಕ್ಕೆ ದೊಡ್ಡಹಾನಿ ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಇನ್ನೂ ಒಂದು ವರ್ಷದಲ್ಲಿ ಪಕ್ಷವನ್ನು ಚುರುಕು ಗೊಳಿಸಬೇಕಾಗಿದೆ. ಇದರ ಅನಿವಾರ್ಯತೆಯನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಖುದ್ದಾಗಿ ನಿಮ್ಮನ್ನು ಬರಮಾಡಿಕೊಂಡು ಇದ್ದೆಲ್ಲವನ್ನೂ ಮನಬಿಚ್ಚಿ ಮಾತನಾಡಬೇಕು ಅನ್ನೋದು ಇಚ್ಛೆ. ಆದ್ರೆ ಲಾಕ್ ಡೌನ್ ಅದಕ್ಕೆ ಅಡ್ಡಿಯಾಗಿದೆ. ಲಾಕ್ ಡೌನ್ ಯಾವಾಗ ಮುಗಿಯುತ್ತೋ ಏನೋ ಅಲ್ಲಿವರೆಗೆ ಕೈಕಟ್ಟಿಕುಳಿತುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ನಿಮ್ಮ ವಿಧಾಮಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕೆಲಸ ಶುರು ಮಾಡಿ ಎಂದು ಪತ್ರದ ಮೂಲಕ ಕರೆ ನೀಡಿದ್ದಾರೆ.

ಪಕ್ಷ ಸಂಘಟನೆಯಲ್ಲಿ ನಿಮ್ಮ ಭವಿಷ್ಯ ಮತ್ತು ಪಕ್ಷದ ಭವಿಷ್ಯ ಎರಡೂ ಅಡಗಿದೆ ಎಂಬುದನ್ನು ಅರ್ಥಮಾಡಿಕೊಂಡು ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಚುರುಕಾಗಿ ಪಕ್ಷದ ಸಂಘಟನೆ ಮಾಡಬೇಕು. ಕೊರೋನಾ ವಾತಾವರಣ ತಿಳಿಯಾಗುವವರೆಗೆ ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಹೆಚ್ಚು ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.