ಲಾಕ್ ಡೌನ್ ಹಿನ್ನೆಲೆ ಖುದ್ದು ರಸ್ತೆಗಿಳಿದ ಸಚಿವರು: ವಾಹನ ಸವಾರರಿಗೆ ಖಡಕ್ ವಾರ್ನಿಂಗ್

ಬೆಂಗಳೂರು: ಕೋವಿಡ್ 19 ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಮತ್ತೆ ಬೆಂಗಳೂರು ನಗರ ಮತ್ತು ಬೆ‌ಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಒಂದು ವಾರ ಲಾಕ್ ಡೌನ್ ಜಾರಿಗೊಳಿಸಿದ್ದು ವಿನಾಕಾರಣ ವಾಹನ ಸವಾರರು ರಸ್ತೆಗಿಳಿದಿದ್ದು ಇದನ್ನು ನಿಯಂತ್ರಿಸುವ ಸಲುವಾಗಿ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ವಿನಾಕಾರಣ ರಸ್ತೆಗಿಳಿದ ವಾಹನ ಸವಾರರಿಗೆ ಖಡಕ್ ವಾರ್ನಿಂಗ್ ನೀಡುವ ಮೂಲಕ ಲಾಕ್ ಡೌನ್ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ.

ಕೆ.ಆರ್.ಪುರ ರೈಲ್ವೆ ಸ್ಟೇಷನ್ ಸಮೀಪ ಮಹದೇವಪುರ ವಲಯ ಕೋವಿಡ್ 19 ವಲಯ ಕಮಾಂಡ್ ಕೇಂದ್ರ ಉದ್ಘಾಟಿಸಿ, ನಂತರ ಮಾರತ್ತಹಳ್ಳಿ ರಿಂಗ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರನ್ನು ತಪಾಸಣೆ ನಡೆಸಿದರು. ಈ ವೇಳೆ ಅನವಶ್ಯಕವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದು ದಂಡ ವಿದಿಸುವಂತೆ ಕೆ.ಆರ್.ಪುರ ಸಂಚಾರಿ ಪೊಲೀಸರಿಗೆ ಸೂಚಿಸಿದರು.

ಇದಕ್ಕೂ ಮುನ್ನ ವೈಟ್ ಫೀಲ್ಡ್ ಖಾಸಗಿ ಹೋಟೆಲ್ ನಲ್ಲಿ ಬೆಂಗಳೂರು ಪೂರ್ವ ತಾಲೂಕು ಇಲಾಖೆ ಅಧಿಕಾರಿಗಳ ಸಭೆ ಕರೆದು ಕಳೆದ ಶನಿವಾರ ನಡೆಸಿದ ಸಭೆ ಬಳಿಕ ಯಾವ ಕೆಲಸಗಳು ನಡೆಯುತ್ತಿವೆ, ಕೋವಿಡ್ ನಿಯಂತ್ರಿಸುವ ಸಲುವಾಗಿ ಮತ್ಯಾವ ಕ್ರಮಗಳನ್ನು ಕೈಗೊಳ್ಳಬೇಕೆಂಬ ವಿಷಯಗಳ ಕುರಿತು ಚರ್ಚಿಸಿ, ಕೋವಿಡ್ ಪ್ರಕರಣಗಳ ಮಾಹಿತಿ ಪಡೆದು ಮುಂದೆ ಪ್ರಕರಣಗಳು ಹೆಚ್ಚಾಗದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಮಹದೇವಪುರ ವಲಯ ಉಸ್ತುವಾರಿ ಅಧಿಕಾರಿ ಮಂಜುಳ, ಮಹದೇವಪುರ ವಲಯ ಜಂಟಿ ಆಯುಕ್ತ ವೆಂಕಟಾಚಲ, ಡಿಸಿಪಿ ಅನುಚೇತ್ ಮತ್ತಿತರರು ಹಾಜರಿದ್ದರು.

ಮಳೆಯಲ್ಲಿ ಕೊಚ್ಚಿ ಹೋದ ರೈತನ ಬದುಕು

ಯಾದಗಿರಿ: ಇಂದು ಬೆಳಿಗ್ಗೆಯಿಂದ ಜಿಲ್ಲಾದ್ಯಂತ ರಣಭೀಕರವಾಗಿ ಮಳೆಯಾಗುತ್ತಿದ್ದು ನೂರಾರು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ ಬೆಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಚಾಮನಾಳ ಗ್ರಾಮದಲ್ಲಿ 25 ಎಕರೆ ಭತ್ತ ನಾಟಿ ಮಾಡಿದ ಜಮೀನಲ್ಲಿ ಮಳೆ‌ನೀರು ನುಗ್ಗಿ ಕೊಚ್ಚಿಕೊಂಡು ಹೋಗಿ ಅನ್ನದಾತನು ಕಣ್ಣೀರು ಹಾಕುವಂತಾಗಿದೆ.

ಜಿಲ್ಲೆಯಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದ ಯಾವ ರಸ್ತೆಯಲ್ಲಿ ನೋಡಿದ್ರು ಮಳೆ ನೀರು ಆವರಿಸುವ ದೃಶ್ಯಗಳು ಕಾಣಿಸುತ್ತಿವೆ. ಯಾದಗಿರಿ ನಗರದ ಸುಭಾಷ್ ಸರ್ಕಲ್ ಬಳಿ ಪಾರ್ಕಿಂಗ್ ಬಳಿ ನಿಲ್ಲಿಸಿದ ಬೈಕ್ಗಳ ಇಂಜಿನ ವರೆಗೆ ನೀರು ಆವರಿಸಿವೆ, ಅದೇ ರೀತಿ ಶಹಾಪುರ ನಗರದ ಬಸವೇಶ್ವರ ಸರ್ಕಲ್ ಸುತ್ತಲೂ ನೀರು ಆವರಿಸಿ ನಡುಗಡ್ಡೆಯಾದಂತೆ ಕಾಣಿಸುತ್ತಿದೆ.

ಇನ್ನೂ ಸುರಪುರ, ಗುರಮಠಕಲ್ ತಾಲೂಕಿನ ಹಲವು ಭಾಗದಲ್ಲಿ ಭಾರೀ ಮಳೆಯಾಗಿದೆ. ಇನ್ನೂ ಕೆಲವು ಕಡೆ ವಾಹನ ಸವಾರರು ತೊಂದರೆ‌ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಮಂಜು ಮುಸಿಕಿದ ಮೊಡವಿರುವ ವಾತವರಣ ಆವರಿಸಿಕೊಂಡಿದೆ.

ಕೊರೊನಾ ನಿಯಂತ್ರಣದ ನಿಯಮ ಪಾಲನೆಯೊಂದಿಗೆ ಕಾಮಗಾರಿಗಳ ಅನುಷ್ಠಾನ ಕ್ಕೆ ಡಿಸಿಎಂ ಸೂಚನೆ

ಕೊಪ್ಪಳ ಜು.15: ಕೊರೊನಾ‌‌ ಸೊಂಕಿನ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನಗಳನ್ನು ಪಾಲಿಸಿಕೊಂಡು ಕಾಮಗಾರಿಗಳನ್ನು ಅನುಷ್ಠಾನ ಗೊಳಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಸೂಚಿಸಿದರು.

ಕುಷ್ಟಗಿ ಬಳಿಯ ಪ್ರವಾಸಿಮಂದಿರಲ್ಲಿಂದು ಕೊಪ್ಪಳ ಹಾಗೂ ರಾಯಚೂರು ವಿಭಾಗದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕಟ್ಟಡ, ರಸ್ತೆ ನಿರ್ಮಾಣದ ಕಾರ್ಮಿಕರು ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಾರ್ಯನಿರ್ವಹಿಸುವಂತೆ ಕ್ರಮವಹಿಸಬೇಕು‌. ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು. ರಸ್ತೆಗಳ ನಿರ್ವಹಣೆ ಯನ್ನು ಉತ್ತಮವಾಗಿ ನಿರ್ವಹಿಸಬೇಕು. ಅಧಿಕಾರಿಗಳು ಕಾಮಗಾರಿಗಳ ಗುಣಮಟ್ಟವನ್ನು ಕ್ಷೇತ್ರ ಪ್ರವಾಸ ಕೈಗೊಂಡು ಪರಿಶೀಲಿಸಿ, ಕಳೆದ ಮೂರು ತಿಂಗಳಲ್ಲಿ ಅನುಷ್ಠಾನ ವಾಗಬೇಕಾಗಿದ್ದ ಕಾಮಗಾರಿಗಳನ್ನು ಸಮರ್ಪಕವಾಗಿ ಪೂರ್ಣಗೊಳಿಸುವಂತೆ ಡಿಸಿಎಂ ಸೂಚಿಸಿದರು.

ಸಭೆಯಲ್ಲಿ ಶಾಸಕ  ಹಾಲಪ್ಪ ಆಚಾರ್ ವಿಭಾಗಗಳ ಅಭಿಯಂತರರು ಉಪಸ್ಥಿತರಿದ್ದರು.

ಬಾಗಲಕೋಟೆ : ಕೋವಿಡ್ ಪ್ರಕರಣ ಹೆಚ್ಚಾಗುವ ಪ್ರದೇಶಗಳಲ್ಲಿ ಲಾಕ್‍ಡೌನ್‍ಗೆ ಡಿಸಿಎಂ‌ ಸೂಚನೆ

ಬಾಗಲಕೋಟೆ: ಜುಲೈ 15 : ಬಾಗಲಜೋಟೆ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿಗೆ ಕಂಡುಬಂದ ಪ್ರದೇಶಗಳಲ್ಲಿ ಅಗತ್ಯವಿದ್ದರೆ ಲಾಕ್‍ಡೌನ್‍ ಘೋಷಿಸಿ, ಕೊರೊನಾ ಸೋಂಕು ನಿಯಂತ್ರಣಕ್ಕೆ ಕ್ರಮಕೈಗೊಳ್ಳುವಂತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಜಿಲ್ಲಾಡಳಿತಕ್ಕೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿಂದು ಜರುಗಿದ ಕೋವಿಡ್ ಹಾಗೂ ಇತರೆ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಬಾಗಲಕೋಟೆ, ಮುಧೋಳ, ಇಲಕಲ್ಲ ಹಾಗೂ ಕಲಾದಗಿ ಗ್ರಾಮಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಕೋವಿಡ್ ಪ್ರಕರಣಗಳು ಹೆಚ್ಚಿಗೆಯಾಗುವುದನ್ನು ತಡೆಗಟ್ಟಲು ಅಗತ್ಯವಿದ್ದರೆ ಆ ವ್ಯಾಪ್ತಿಯಲ್ಲಿ ಲಾಕ್‍ಡೌನ್‍ಗೆ ಕ್ರಮಕೈಗೊಳ್ಳಲು ಸೂಚಿಸಿದರು.
ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಜಾರಿಗೊಳಿಸುವುದಿಲ್ಲ. ಲಾಕ್‍ಡೌನ್ ಹೇರಿದರೆ ರೈತರಿಗೆ, ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತದೆ. ಆದರೆ ಸರಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಜನರು ಪಾಲಿಸಬೇಕು. ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇದರ ಜೊತೆಗೆ ಕೋವಿಡ್ ನಿಯಂತ್ರಣದಲ್ಲಿ ಸಾರ್ವಜನಿಕರು ಸಹ ಸಹಕಾರ ನೀಡುವುದು ಅಗತ್ಯವಾಗಿದೆ. ಕೆಮ್ಮು, ನೆಗಡಿ, ಜ್ವರ ಬಂದರೆ ತಕ್ಷಣ ಸಮೀಪದ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಲು ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿಗೆ ಅನುಗುಣವಾಗಿ ಜಿಲ್ಲೆಯ ಎಲ್ಲ ತಾಲೂಕಾ ಕೇಂದ್ರಗಳ ಹೊರ ವಲಯಗಳಲ್ಲಿರುವ ವಸತಿ ನಿಲಯಗಳನ್ನು ಸಜ್ಜುಗೊಳಿಸಬೇಕು. ಅಗತ್ಯವಿದ್ದರೆ ಅವುಗಳನ್ನು ಕೋವಿಡ್ ಹೆಲ್ತ್ ಕೇರ್ ಸೆಂಟರ್ ಗಳಾಗಿ ಪರಿವರ್ತಿಸಬೇಕು. ಬಾಗಲಕೋಟೆಯ ನವಗರದಲ್ಲಿರುವ ಅಲ್ಪಸಂಖ್ಯಾತರ ವಸತಿ ನಿಲಯವನ್ನು ಕೋವಿಡ್ ಹೆಲ್ತ ಕೇರ್ ಸೆಂಟರಾಗಿ ಪರಿವರ್ತಿಸಲಾಗಿದೆ. ಕ್ವಾರಂಟೈನ್‍ನಲ್ಲಿದ್ದವರನ್ನು ಪರೀಕ್ಷೆಗೆ ಒಳಪಡಿಸಿ ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಪರೀಕ್ಷೆಗೆ ಒಳಡಿಸಿ ಸ್ಯಾಂಪಲ್ ತೆಗೆದುಕೊಳ್ಳಲು ತಿಳಿಸಿದರು.

ಅಗತ್ಯವಿದ್ದರೆ ಖಾಸಗಿ ವೈದ್ಯರು ಹಾಗೂ ಸಿಬ್ಬಂದಿಗಳು ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಲು ತಿಳಿಸಿದರು. ವೈದ್ಯ ಮತ್ತು ಸಿಬ್ಬಂದಿಗಳಿಗೆ ಅನಗತ್ಯವಾಗಿ ರಜೆ ಮೇಲೆ ತೆರಳಬಾರದು. ಖಾಸಗಿ ಆಸ್ಪತ್ರೆಗಳು ಫಿವರ್ ಕ್ಲಿನ್‍ಗಳಾಗಿದ್ದು, ಅಲ್ಲಿಯೂ ಸಹ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಫಿವರ್ ಕ್ಲಿನಿಕ್ ಬಗ್ಗೆ ಬೋರ್ಡ ಹಾಕಲು ತಿಳಿಸಿದರು.

ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ಕೋವಿಡ್‍ನ ಜಿಲ್ಲೆಯ ಸ್ಥಿತಿಗತಿಯ ಬಗ್ಗೆ ವಿಸ್ತೃತವಾಗಿ ತಿಳಿಸಿದರು. ಸಭೆಯಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ  ಎಸ್.ಆರ್.ಪಾಟೀಲ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಡಾ.ವೀರಣ್ಣ ಚರಂತಿಮಠ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಲೋಕೇಶ ಜಗಲಾಸರ, ಜಿ.ಪಂ ಸಿಇಓ ಟಿ.ಭೂಬಾಲನ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿಗಳಾದ ಎಂ.ಗಂಗಪ್ಪ, ಸಿದ್ದು ಹುಲ್ಲೊಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬೆಂಗಳೂರಿನ ವಲಯವಾರು ಉಸ್ತುವಾರಿ ಅಧಿಕಾರಿಗಳ ಜೊತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸಮಾಲೋಚನೆ

ಬೆಂಗಳೂರು – ಜುಲೈ 15, 2020 : ರಾಜಧಾನಿಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಪರಿಣಾಮಕಾರಿ ಕಾರ್ಯತಂತ್ರ ರೂಪಿಸಿದ್ದು ಅದರ ಅನ್ವಯ ಕಾರ್ಯ ನಿರ್ವಹಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ವಲಯವಾರು ಉಸ್ತುವಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಎರಡು ತಾಸಿಗೂ ಹೆಚ್ಚು ಕಾಲ ಅಧಿಕಾರಗಳ ಜತೆ ವಿಡಿಯೋ ಸಂವಾದದ ಮೂಲಕ ಚರ್ಚಿಸಿ ಮಾಹಿತಿ ಪಡೆದ ಸಚಿವರು, ನಿರ್ದಿಷ್ಟ ಹೊಣೆಗಾರಿಕೆ ವಹಿಸಿಕೊಂಡಿರುವ ಅಧಿಕಾರಿಗಳು ಇತರೆ ಸಹೋದ್ಯೋಗಿಗಳ ಜತೆ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದರು.

ಲಾಕ್ ಡೌನ್ ಅವಧಿ ಮುಕ್ತಾಯಗೊಳ್ಳುವ ಮುನ್ನ ಬೂತ್ ಮಟ್ಟದಲ್ಲಿ ಸಮಿತಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಬೇಕು. ಅದಕ್ಕಾಗಿ ಸಮಿತಿಗಳ ರಚನೆ ತರಬೇತಿ ಪ್ರಕ್ರಿಯೆ ಒಂದೆರಡು ದಿನಗಳಲ್ಲಿ ಮುಗಿಸಬೇಕು. ಆ ನಂತರ ಸಮಿತಿ ಸದಸ್ಯರು ತಮಗೆ ನಿಗದಿಗೊಳಿಸಿರುವ ಬೂತ್ ಗಳಲ್ಲಿ ಮನೆ ಮನೆ ಸಮೀಕ್ಷೆ ನಡೆಸಬೇಕು ಎಂದರು.

ಸಮೀಕ್ಷೆ ವೇಳೆ ಐಎಲ್ ಐ ಮತ್ತು ಸಾರಿ ಪ್ರಕರಣಗಳ ತಪಾಸಣೆ ನಡೆಸಿ ರೋಗ ಲಕ್ಷಣ ಆಧರಿಸಿ ಅವರನ್ನು ಹೋಮ್ ಐಸೋಲೇಷನ್, ಕೋವಿಡ್ ಕೇರ್ ಸೆಂಟರ್ ಮತ್ತು ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸುವ ಕೆಲಸ ಮಾಡಬೇಕು. ಅದಕ್ಕಾಗಿ ಸಮಿತಿ ಸದಸ್ಯರಿಗೆ ಮಾರ್ಗಸೂಚಿ ಬಗ್ಗೆ ತರಬೇತಿ ಸಮಯದಲ್ಲೇ ಮನವರಿಕೆ ಮಾಡಿಕೊಡಬೇಕು. ಅವರಿಗೆ ಪಲ್ಸ್ ಆಕ್ಸಿಮೀಟರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ಯಂತ್ರಗಳನ್ನು ಒದಗಿಸಬೇಕು. ಆಂಬ್ಯುಲೆನ್ಸ್ ಒದಗಿಸುವುದು ಸಮಿತಿ ಜವಾಬ್ದಾರಿ ಆಗಬೇಕು. ಸಂಪರ್ಕಿತರ ಪತ್ತೆ ಕಾರ್ಯವೂ ಮರು ಆರಂಭ ಆಗಬೇಕು ಎಂದು ತಿಳಿಸಿದರು.

ವಲಯವಾರು ಉಸ್ತುವಾರಿ ಅಧಿಕಾರಿಗಳು ಪ್ರತಿದಿನ ಈ ಎಲ್ಲಾ ಕೆಲಸಗಳ ಮೇಲೆ ನಿಗಾವಹಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು. ಜತೆಗೆ ತಮ್ಮ ವ್ಯಾಪ್ತಿಗೆ ಸೇರಿರುವ ಲ್ಯಾಬ್ ಗಳ ಪರೀಕ್ಷೆ ಮತ್ತು ಕಾರ್ಯ ನಿರ್ವಹಣೆ ಮೇಲೂ ನಿಗಾ ಇಡಬೇಕು. ಒಂದು ವಾರದೊಳಗೆ ಯಾವುದೇ ಸ್ಯಾಂಪಲ್ ಬಾಕಿ ಇಲ್ಲದಂತೆ ನೋಡಿಕೊಳ್ಳಬೇಕು. ಇದರ ಸಮನ್ವಯವನ್ನು ಹಿರಿಯ ಅಧಿಕಾರಿ ಶಾಲೀನಿ ರಜನೀಶ್ ಅವರು ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಕೊಳಚೆ ಪ್ರದೇಶ ಮತ್ತು ಹೋಮ್ ಕ್ವಾರಂಟೈನ್ ಸೌಲಭ್ಯಗಳಿಲ್ಲದ ಜನವಸತಿ ಪ್ರದೇಶಗಳಲ್ಲಿ ಪಾಸಿಟಿವ್ ಆದವರನ್ನು ಸರ್ಕಾರಿ ವ್ಯವಸ್ಥೆಯ ಕ್ವಾರಂಟೈನ್ ಕೇಂದ್ರಗಳಲ್ಲಿ ಇಡುವ ಕೆಲಸ ಆಗಬೇಕು. ಇದಕ್ಕಾಗಿ ಮುಂಬಯಿ ಧಾರಾವಿಯಲ್ಲಿ ಅಳವಡಿಸಿಕೊಂಡಿರುವ ವ್ಯವಸ್ಥೆ ರೂಪಿಸಿಕೊಳ್ಳಬೇಕು ಎಂದರು.

ವಲಯವಾರು ಅಗತ್ಯ ವಿರುವ ವಾಹನ ಮತ್ತು ಸಿಬ್ಬಂದಿ ಕೊರತೆಯನ್ನು ಬಿಬಿಎಂಪಿ ಆಯುಕ್ತರು ನಿರ್ವಹಿಸಬೇಕು. ವೈದ್ಯರು ಮತ್ತು ಶುಶ್ರೂಷಾ ಸಿಬ್ಬಂದಿ ಕೊರತೆ ನಿವಾರಿಸುವ ಕೆಲಸವನ್ನು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರು ನೋಡಿಕೊಳ್ಳಬೇಕು ಎಂದು ಆದೇಶ ನೀಡಿದರು.