ಕೋವಿಡ್ ಟೆಸ್ಟ್ ಗಳ ಸಂಖ್ಯೆ ಹೆಚ್ವಿಸಲು ಮೆಡಿಕಲ್ ಕಾಲೇಜು ಮತ್ತು ಖಾಸಗಿ ಸಂಸ್ಥೆಗಳಿಗೆ ಸಚಿವ ಸುಧಾಕರ್ ಸೂಚನೆ

ಬೆಂಗಳೂರು : ಕೋವಿಡ್ ಟೆಸ್ಟ್ ಗಳ ವಿಷಯದಲ್ಲಿ ನಿರ್ಲಕ್ಷ್ಯ ತೋರಿಸುವ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ನಿಶ್ಚಿತ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

ಮುಂದಿನ ಹತ್ತು – ಹದಿನೈದು ದಿನಗಳಲ್ಲಿ ಐದುನೂರರಿಂದ ಒಂದು ಸಾವಿರ ಟೆಸ್ಟ್ ಗಳವರೆಗೆ ಗುರಿ ತಲುಪಬೇಕು. ಈ ವಿಷಯದಲ್ಲಿ ರಾಜಿ ಪ್ರಶ್ನೆ ಇಲ್ಲ ಎಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಂವಾದದಲ್ಲಿ ಸ್ಪಷ್ಟಪಡಿಸಿದರು.

ಸರ್ಕಾರ ಕಳೆದ ನಾಲ್ಕು ತಿಂಗಳಿಂದ ಅನೇಕ ಸೂಚನೆಗಳನ್ನು ನೀಡಿದೆ. ಲ್ಯಾಬ್ ಸ್ಥಾಪನೆಗೆ ಅಗತ್ಯ ವಿರುವ ನೆರವು ನೀಡಲಾಗಿದೆ. ಸಿಬ್ಬಂದಿಗೆ ನಿಮ್ಹಾನ್ಸ್ ಮೂಲಕ ತರಬೇತಿ ನೀಡಲಾಗಿದೆ. ಇಷ್ಟರ ಮೇಲೂ ಸರ್ಕಾರದ ಜತೆ ಕೈಜೋಡಿಸದ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದರು.
ಮೆಡಿಕಲ್ ಕಾಲೇಜುಗಳಲ್ಲಿ ಪ್ರಯೋಗಾಲಯ ಸ್ಥಾಪನೆ ಮಾಡುವುದು ಕಡ್ಡಾಯ. ಎಂಸಿಐ ನಿಂದ ಸ್ಪಷ್ಟ ನಿದರ್ಶನಗಳಿವೆ. ಆದರೂ ಕೆಲವರು ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಇನ್ನೂ ಇಂತಹ ಮೀನಮೇಷ ವರ್ತನೆಯನ್ನು ಸಹಿಸುವುದಿಲ್ಲ ಎಂದರು.

ರಾಜ್ಯದಲ್ಲಿ ಸೋಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಟೆಸ್ಟ್ ಫಲಿತಾಂಶ ವಾರಗಳ ವರೆಗೆ ಬರುತ್ತಿಲ್ಲ ಎಂಬ ದೂರುಗಳಿವೆ. ಇನ್ನು ಮುಂದೆ 24 ರಿಂದ 30 ತಾಸಿನಲ್ಲಿ ವರದಿ ಕೈಸೇರಬೇಕು. ಆ ಉದ್ದೇಶದಿಂದ ಹಿರಿಯ ಅಧಿಕಾರಿ ಶಾಲೀನಿ ರಜನೀಶ್ ಅವರನ್ನು ಇದರ ಉಸ್ತುವಾರಿಗೆ ನಿಯೋಜಿಸಲಾಗಿದೆ ಎಂದರು.

ಕೊಪ್ಪಳ ಆಸ್ಪತ್ರೆಯಲ್ಲಿ ಕನಿಷ್ಠ ಸಿಬ್ಬಂದಿ ಇಟ್ಟುಕೊಂಡು ಒಂದು ಸಾವಿರದ ಇನ್ನೂರು ಟೆಸ್ಟ್ ಗಳನ್ನು ಮಾಡಿ ರಾಜ್ಯಕ್ಕೆ ಮಾದರಿಯಾಗಿದೆ. ಉಳಿದ ಸಂಸ್ಥೆಗಳು ಈ ಗುರಿ ತಲುಪಬೇಕು. ಅದಕ್ಕಾಗಿ ಅಗತ್ಯ ಇರುವ ಸಿಬ್ಬಂದಿ ಮತ್ತು ಯಂತ್ರೋಪಕರಣಗಳನ್ನು ಅಳವಡಿಸಬೇಕು ಎಂದರು.
ಪ್ರತಿದಿನ ಮಾಡುವ ಟೆಸ್ಟ್ ಮತ್ತು ಬಾಕಿ ಉಳಿದ ಸ್ಯಾಂಪಲ್ ವಿವರಗಳನ್ನು ರಾಜ್ಯದ ಡ್ಯಾಷ್ ಬೋಡ್೯ನಲ್ಲಿ ಸಿಗುವಂತೆ ಎಲ್ಲರೂ ಮಾಹಿತಿ ಒದಗಿಸಬೇಕು. ಇದಕ್ಕಾಗಿಯೇ ಡಾಟಾ ಆಪರೇಟರ್ ಗಳನ್ನು ನೇಮಕ ಮಾಡಬೇಕು. ಇನ್ನು ಮುಂದೆ ನೆಪಗಳನ್ನು ಹೇಳುವಂತಿಲ್ಲ ಎಂದರು.

ರೋಗ ಲಕ್ಷಣ ಇದ್ದವರು ಮತ್ತು ಇಲ್ಲದವರ ಸ್ಯಾಂಪಲ್ ಗಳನ್ನು ಸರ್ಕಾರ ನೀಡಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ಟೆಸ್ಟ್ ಮಾಡಬೇಕು. ಚೌಕಾಸಿ ಪ್ರಶ್ನೆಯಿಲ್ಲ ಎಂದು ತಿಳಿಸಿದರು.

ಮೆಡಿಕಲ್ ಕಾಲೇಜು ಹೊರತು ಪಡಿಸಿ ಇರುವ ಖಾಸಗಿ ಪ್ರಯೋಗಾಲಯಗಳ ಜತೆ ಬುಧವಾರ ಮತ್ತೊಂದು ಸುತ್ತಿನ ಸಭೆ ನಡೆಸಿ ಪರಾಮರ್ಶೆ ಮಾಡಲಾಗುತ್ತದೆ ಎಂದು ಸಚಿವರು ಎಂದು ತಿಳಿಸಿದರು.

ಪ್ರಯೋಗಾಲಯ ಸ್ಥಾಪನೆ, ಸಿಬ್ಬಂದಿ ತರಬೇತಿ ಹಾಗೂ ನಾನಾ ಸಂಸ್ಥೆಗಳ ಅಕ್ರಡೇಶನ್ ಕೊಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತ್ತಿರುವ ನಿಮ್ಹಾನ್ಸ್ ನ ಡಾ. ರವಿ ಅವರನ್ನು ಸಚಿವರು ಅಭಿನಂದಿಸಿದರು.

ಮುಂದಿನ ಹತ್ತು ದಿನಗಳಲ್ಲಿ ಬಾಕಿ ಇರುವ 25 ರಿಂದ 30 ಪ್ರಯೋಗಾಲಯ ಗಳನ್ನು ಸ್ಥಾಪಿಸಿ ಟೆಸ್ಟ್ ಗಳ ವಿಷಯದಲ್ಲಿ ಗೊಂದಲ ಉದ್ಭವಿಸದಂತೆ ನೋಡಿಕೊಳ್ಳಬೇಕು ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ತಾಕೀತು ಮಾಡಿದರು.

ಕೊರೋನಾದಿಂದ ದೇವರೆ ಕಾಪಾಡಬೇಕು: ಶ್ರೀರಾಮುಲು

ಚಿತ್ರದುರ್ಗ: ಮುಂದಿನ‌ ಎರಡು ತಿಂಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ, ಹೀಗಾಗಿ ಮಹಾಮಾರಿಯಿಂದ ದೇವರೇ ನಮ್ಮನ್ನು ಕಾಪಾಡಬೇಕು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಸರ್ಕಾರದ ಕರ್ತವ್ಯವನ್ನು ದೇವರ ಹೆಗಲಿಗೆ ಹಾಕಿದ್ದಾರೆ.

ಚಿತ್ರದುರ್ಗದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಶ್ವದಲ್ಲೇ ಕೊರೊನಾ ಅಟ್ಟಹಾಸ ಹೆಚ್ಚಾಗಿದೆ. ನಮ್ಮಲ್ಲೂ ಕೂಡ ಮುಂದಿನ ಎರಡು ತಿಂಗಳಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ರು. ಸೋಂಕು ಹೆಚ್ಚಲು ಸರ್ಕಾರದ ನಿರ್ಲಕ್ಷ್ಯವೇ ಕಾರಣ, ಸಚಿವರ ಹೊಂದಾಣಿಕೆಯ ಕೊರತೆಯೇ ಕಾರಣ ಎಂಬ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಆರೋಪಗಳೆಲ್ಲಾ ಸತ್ಯಕ್ಕೆ ದೂರವಾದ ಮಾತು, ಇವತ್ತು ಕೊರೊನಾ ನಿಯಂತ್ರಣ ಯಾರ ಕೈಯಲ್ಲಿದೆ ಹೇಳಿ? ದೇವರೇ ನಮ್ಮನ್ನು ಕಾಪಾಡಬೇಕು, ಕಾಂಗ್ರೆಸ್ ನವರು ಇಂತಹ‌ ಸಮಯದಲ್ಲಿ ರಾಜಕಾರಣ ಮಾಡಬಾರದು, ಅವರಿಗೆ ಶೋಭೆ ತರುವುದಿಲ್ಲ, ನಾವೇನಾದರೂ ತಪ್ಪು ಮಾಡಿದ್ದರೆ ಪ್ರಾಯಶ್ಚಿತ್ತ ನಿಭಾಯಿಸಲು ಸಿದ್ದರಿದ್ದೇವೆ ಎಂದರು.

ಈ ಮೂಲಕ ಇನ್ನೆರಡು ತಿಂಗಳಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗುವ ಬಗ್ಗೆ ಮುನ್ಸೂಚನೆ ನೀಡಿರುವ ಆರೋಗ್ಯ ಸಚಿವರು, ತಮ್ಮಿಂದ ಕೊರೊನಾ ನಿಯಂತ್ರಣ ಸಾಧ್ಯವಿಲ್ಲ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡು ಜವಬ್ದಾರಿಯಿಂದ ಕೈಚೆಲ್ಲಿದ್ದಾರೆ.

ಆಯುಷ್ ವೈದ್ಯರ ಸಾಮೂಹಿಕ ರಾಜೀನಾಮೆ!

ರಾಯಚೂರು: ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಯುಷ್ ನೌಕರರನ್ನು ಖಾಯಂ ನೌಕರರ ಪಟ್ಟಿಗೆ ಸೇರಿಸಿ ಕನಿಷ್ಠ ವೇತನ ಪಾವತಿಸುವಂತೆ ಒತ್ತಾಯಿಸಿ, ರಾಯಚೂರಿನ 70 ಆಯುಷ್ ವೈದ್ಯರು ಸಿಎಂ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಕಳೆದ 15 ವರ್ಷಗಳಿಂದ ಹೆಚ್ಚು ಕಡಿಮೆ 20 ಸಾವಿರ ರೂಪಾಯಿಗಳಿಗೆ ದುಡಿಯುತ್ತಿರುವ ಆಯುಷ್ ವೈದ್ಯರು‌ ಕೊರೋನಾ ತುರ್ತು ಸಂದರ್ಭದಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದೇವೆ. ಕೊರೋನಾ ವಾರಿಯರ್ಸ್ ಆಗಿ ಐಸೊಲೇಷನ್ ವಾರ್ಡ್, ಚೆಕ್‌ಪೋಸ್ಟ್ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ‌. ಕಡಿಮೆ ವೇತನದಿಂದ ನಮ್ಮ ಸಂಸಾರ ನಡೆಸಲು ಸದ್ಯಕ್ಕೆ ಆಗುತ್ತಿಲ್ಲ ಅದ್ರಲ್ಲೂ ಆಯುಷ್ ನೌಕರರಾದ ನಮಗೆ ಯಾವುದೇ ಆರೋಗ್ಯ ವಿಮೆಗಳಿಲ್ಲ ಎಂದು ಆಯುಷ್ ವೈದ್ಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ರಾಯಚೂರಿನ PHC 36, RBSK 24 , WPHC 10 ಸಿಬ್ಬಂದಿಗಳು ಸೇರಿದಂತೆ ಒಟ್ಟು 70 ಆಯುರ್ವೇದ ವೈದ್ಯರು ಸೇರಿದಂತೆ ರಾಜ್ಯದ 2000 ಜನ ಆಯುರ್ವೇದ ವೈದ್ಯರು ಈಗಾಗಲೇ ಸಿಎಂ ಅವರಿಗೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒಂದು ವಾರದ ಹಿಂದೆ ಮನವಿ‌ ಸಲ್ಲಿಸಿ, ಕಪ್ಪು ಬಟ್ಟೆ ಕಟ್ಟಿಕೊಂಡು ಸೇವೆ ಸಲ್ಲಿಸಿದರೂ, ಸರ್ಕಾರ ಮಾತ್ರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದೆ ಇರುವುದರಿಂದ ಮನನೊಂದು ಇಂದು ಸಾಮೂಹಿಕವಾಗಿ ರಾಜೀನಾಮೆ ಸಲ್ಲಿದ್ದಾರೆ. ರಾಜ್ಯಾದ್ಯಂತ 2000 ಜನ ಆಯುಷ್ ವೈದ್ಯರು ರಾಜೀನಾಮೆ ಸಲ್ಲಿದ್ದಾರೆ.

ಪೊಲೀಸ್ ಫೋರ್ಸ್ ಬಳಸುವ ಅನಿವಾರ್ಯತೆ ಸೃಷ್ಟಿಸಬೇಡಿ: ಬೊಮ್ಮಾಯಿ

ಬೆಂಗಳೂರು:ದಿನಸಿ ಸಾಮಾನು‌ ಖರೀದಿಗೆ 12 ಗಂಟೆಯವರೆಗೆ ಅವಕಾಶ ಮಾಡಿಕೊಡಲಾಗಿದೆ, ಯಾರ್ಯಾರು ಅವಕಾಶ ಬಳಕೆ ಮಾಡಿಕೊಳ್ತಾರೋ ಮಾಡಿಕೊಳ್ಳಲಿ 12 ಗಂಟೆ ಬಳಿಕ ಅವಕಾಶ ಇಲ್ಲ, 12 ಗಂಟೆ ಒಳಗೆ ನಿಮ್ಮ ನಿಮ್ಮ ವ್ಯವಹಾರಗಳನ್ನು ಮುಗಿಸಿಕೊಳ್ಳಿ, ಪೊಲೀಸ್ ಫೋರ್ಸ್ ಬಳಸುವ ಅನಿವಾರ್ಯತೆ ತಂದುಕೊಡಬೇಡಿ, ನೀವು ಅನಿವಾರ್ಯತೆ ತಂದರೆ ಬಳಕೆ ಮಾಡಬೇಕಾಗುತ್ತದೆ, ಬಳಸುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಾ,
ಪೊಲೀಸ್ ಇಲಾಖೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ ಡೌನ್ ಪಾಲನೆ ಮಾಡಲು ಕಟ್ಟುನಿಟ್ಟಾದ ಕ್ರಮ ತೆಗೆದುಕೊಂಡಿದ್ದಾರೆ ಹಲವಾರು ಬ್ಯಾರಿಕೇಡ್ ಹಾಕಿ, ಫ್ಲೈ ಓವರ್ ಬಂದ್ ಮಾಡಿದ್ದೇವೆ ವಾಹನ ದಟ್ಟಣೆ ಕಡಿಮೆ‌ ಇದೆ, ಲಾಕ್ ಡೌನ್ ವಾತಾವರಣ ನಿರ್ಮಾಣವಾಗಿದೆ ಅಗತ್ಯ ಸೇವೆಗಳಿಗೆ ಅವಕಾಶ ಕೊಡುವಂತೆ ಪೊಲೀಸರಿಗೆ ಸೂಚಿಸಿದ್ದೇವೆ ಪೊಲೀಸರು ಸಹಕಾರ ಕೊಟ್ಟು ಕೆಲಸ ಮಾಡ್ತಾರೆ, ಜನರೂ ಕೂಡಾ ಸಹಕಾರ ನೀಡಬೇಕು ಎಂದರು.

ಲಾಕ್ ಡೌನ್ ಯಶಸ್ವಿ ಆಗಬೇಕಾದರೆ ಜನರ ಸ್ವಯಂಪ್ರೇರಿತ ಲಾಕ್ ಡೌನ್ ಆಗಬೇಕು ಈ ಬಾರಿ ಹೆಚ್ಚು ಸೋಂಕು ಇರುವ ಕಾರಣ ಚೈನ್ ಬ್ರೇಕ್ ಮಾಡಲು ಲಾಕ್ ಡೌನ್ ಮಾಡಿದ್ದೇವೆ
ಅನಾವಶ್ಯಕ ಓಡಾಟ ತಡೆಗಟ್ಟಿ ಎಂದು ಪೊಲೀಸರಿಗೆ ಸೂಚಿಸಿದ್ದೇವೆ ಫೋರ್ಸ್ ಬಳಸುವ ಅನಿವಾರ್ಯತೆ ಬರದಂತೆ ಜನರು ಸಹಕಾರ ಮಾಡಬೇಕು ಎಂದು ಮನವಿ ಮಾಡಿದ್ರು.

ಲಾಕ್ ಡೌನ್ ಗೆ ಸಿಲಿಕಾನ್ ಸಿಟಿ‌ ಸ್ತಬ್ಧ

ಬೆಂಗಳೂರು: ಮೊದಲ ದಿನದ ಲಾಕ್ ಡೌನ್ ಗೆ ಸಿಲಿಕಾನ್ ಸಿಟಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಇಡೀ ನಗರ ಸ್ಥಬ್ಧಗೊಂಡಿದೆ.ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲಾ ಸಂಪೂರ್ಣವಾಗಿ ಬಂದ್ ಆಗಿದೆ.

ಬೆಂಗಳೂರಿನಲ್ಲಿ ಆರಂಭಗೊಂಡ ಒಂದ ವಾರದ ಲಾಕ್ ಡೌನ್ ಹಿನ್ನಲೆಯಲ್ಲಿ ಸಾರ್ವಜನಿಕ ಸಂಚಾರ ವ್ಯವಸ್ಥೆ ಸಂಪೂರ್ಣ ಬಂದ್ ಆಗಿದೆ.ತುರ್ತು ಸೇವೆ ಹೊರತುಪಡಿಸಿ ಬಸ್ ಗಳ ಸಂಚಾರ ಸ್ಥಗಿತವಾಗಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದ್ದು ಬಿಎಂಟಿಸಿ,ಕೆಎಸ್ಆರ್‌ಟಿಸಿ ಬಸ್ ಗಳ ಸಂಚಾರ, ಆಟೋ,ಕ್ಯಾಬ್ ಸೇವೆಯೂ ಸ್ಥಗಿತವಾಗಿದೆ.ಪೂರ್ವನಿಗದಿತ ರೈಲುಗಳ ಸಂಚಾರ ಮಾತ್ರ ಟಿಕೆಟ್ ಕಾಯ್ದಿರಿಸಿದ‌್ದವರಿಗೆ ಅವಕಾಶ ಕಲ್ಪಿಸಲಾಗಿದೆ.

ಇನ್ನು ಮಧ್ಯಾಹ್ನ 12 ಗಂಟೆವರೆಗೂ ಹಾಲು, ದಿನಸಿ, ತರಕಾರಿ ವ್ಯಾಪಾರಿಗಳಿಗೆ ಅವಕಾಶ ನೀಡಿದ್ದು ಮಧ್ಯಾಹ್ನದ ನಂತರ ಅವೂ ಬಂದ್ ಆಗಿವೆ. ಇಡೀ ನಗರವೇ ಬಂದ್ ಆಗಿದ್ದು ಎಲ್ಲಾ ಕಡೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.ಫ್ಲೈ ಓವರ್ ಗಳನ್ನು ಬಂದ್ ಮಾಡಲಾಗಿದೆ. ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗುತ್ತಿದೆ. ಇಡೀ ನಗರದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ.

ವಿಕ್ಟೋರಿಯಾ ಆಸ್ಪತ್ರೆ ಕೊರೋನಾ ಸೋಂಕಿತರು, ವೈದ್ಯರು, ಸಿಬ್ಬಂದಿ ಜತೆ ಚರ್ಚಿಸಿ ಆತ್ಮಸ್ಥೈರ್ಯ ತುಂಬಿದ ಡಿ.ಕೆ ಶಿವಕುಮಾರ್

ಬೆಂಗಳೂರು, ಜು. 15:ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಿಕ್ಟೋರಿಯಾ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ಕೊರೊನಾ ಸೋಂಕಿತರು, ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಆಸ್ಪತ್ರೆ ಸಿಬ್ಬಂದಿ ಜತೆ ಸಮಾಲೋಚನೆ ನಡೆಸಿ ಅವರಲ್ಲಿ ಆತ್ಮಸ್ಥೆರ್ಯ ತುಂಬಿದರು.

ಕೋವಿಡ್ ಸೋಂಕಿತರನ್ನು ಸಮಾಜವು ವಿಚಿತ್ರ ಹಾಗೂ ನಿರ್ಲಕ್ಷ್ಯ ಭಾವದಿಂದ ನೋಡುತ್ತಿರುವ ಸಂದರ್ಭದಲ್ಲಿ ಶಿವಕುಮಾರ್ ಅವರು ಆಸ್ಪತ್ರೆಗೆ ನೀಡಿ, ಅವರಲ್ಲಿ ಧೈರ್ಯ ತುಂಬಿದ್ದು ಮಾದರಿ ನಡೆಯಾಗಿದೆ.

ಜತೆಗೆ ಮನೆ, ಕುಟುಂಬ ಪರಿವಾರದವರನ್ನು ಬಿಟ್ಟು, ತಮ್ಮ ಆರೋಗ್ಯ ಹಾಗೂ ಜೀವವನ್ನು ಪಣಕ್ಕಿಟ್ಟು ಸೇವಾಮನೋಭಾವದಿಂದ ಕೆಲಸ ಮಾಡುತ್ತಿರುವ ವೈದ್ಯರು, ಆಸ್ಪತ್ರೆ ಸಿಬ್ಬಂದಿಗಳ ಜತೆಗೂ ಮಾತನಾಡಿದ ಶಿವಕುಮಾರ್ ಅವರು, ಅವರ ಕಾರ್ಯವೈಖರಿ ಹಾಗೂ ಕಾರ್ಯಕ್ಷಮತೆಯನ್ನು ಪ್ರಶಂಸಿದರು. ಅವರ ಸಮಸ್ಯೆಗಳನ್ನು ಆಲಿಸಿದರು. ಅವರಲ್ಲಿ ಆತ್ಮವಿಶ್ವಾಸ ತುಂಬಿದರು.

ನೀವು ಉತ್ತಮವಾಗಿ ಕೆಲಸ ಮಾಡುತ್ತಿದ್ದೀರಿ. ಜನರ ಜೀವ ಉಳಿಸುತ್ತಿದ್ದೀರಿ. ನಿಮ್ಮ ಸೇವೆ ಅಮೂಲ್ಯವಾದದ್ದು. ನಿಮ್ಮ ಸೇವೆಗೆ ಬೆಲೆ ಕಟ್ಟಲು ಆಗದು ಎಂದು ಹೊಗಳಿದರು.

ಇದೇ ಸಂದರ್ಭದಲ್ಲಿ ಬೆಂಗಳೂರು ಮೆಡಿಕಲ್ ಕಾಲೇಜಿಗೂ ಭೇಟಿ ನೀಡಿದ್ದ ಶಿವಕುಮಾರ್ ಅವರು ಅಲ್ಲಿಂದಲೂ ಕೋವಿಡ್ ಚಿಕಿತ್ಸೆ ಕೇಂದ್ರಗಳಿಗೆ ವಿಡಿಯೋ ಕಾನ್ಫೆರೆನ್ಸ ಮೂಲಕ ಸಂಪರ್ಕ ಸಾಧಿಸಿ, ಕೊರೊನಾ ಸೋಂಕಿತರು, ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಜತೆ ಸಮಾಲೋಚನೆ ನಡೆಸಿ, ನಿಮ್ಮ ಜತೆಗೆ ನಾನಿದ್ದೇನೆ ಎಂದು ಧೈರ್ಯ ತುಂಬಿದರು.

ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಿಷ್ಟು:

‘ಇಂದು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದು, ಇಲ್ಲಿರುವ ಸೋಂಕಿತರು, ವೈದ್ಯರು, ಆಸ್ಪತ್ರೆ ಸಿಬ್ಬಂದಿಗಳ ಜತೆ ಮಾತನಾಡಿ ಅವರಿಗೆ ಧೈರ್ಯ ತುಂಬಿದ್ದೇನೆ. ನಾನು ಈ ಹಿಂದೆ ವೈದ್ಯಕೀಯ ಶಿಕ್ಷಣ ಸಚಿವನಾಗಿ ಕೆಲಸ ಮಾಡಿದ್ದರಿಂದ ಇಲ್ಲಿನ ವೈದ್ಯಕೀ ಸಿಬ್ಬಂದಿ ಪರಿಚಯ ನನಗಿದೆ. ಆಸ್ಪತ್ರೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನೂ ಅರಿತಿದ್ದೇನೆ.’

‘ಮಹಾಮಾರಿ ಕೊರೊನಾ ವಿರುದ್ಧದ ಹೋರಾಟದಲ್ಲಿ ವೈದ್ಯರು, ಆಸ್ಪತ್ರೆ ಸಿಬ್ಬಂದಿ, ನರ್ಸ್ ಗಳು, ಪೊಲೀಸರು ಸೇರಿದಂತೆ ಎಲ್ಲ ವಾರಿಯರ್ಸ್ ಗಳು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ತಮ್ಮ ಜೀವದ ಹಂಗು ತೊರೆದು ಹೋರಾಡುತ್ತಿದ್ದಾರೆ. ಈ ಸಮಯದಲ್ಲಿ ಅವರ ಬೆನ್ನಿಗೆ ನಿಲ್ಲುವುದು, ಅವರಿಗೆ ಧೈರ್ಯ ತುಂಬುವುದು ನಮ್ಮ ಕರ್ತವ್ಯ.’

‘ಹಲವಾರು ಸೋಂಕಿತರ ಜತೆಗೂ ನಾನು ಮಾತನಾಡಿದ್ದು, ಅವರು ಚಿಕಿತ್ಸೆ ಮತ್ತಿತರ ವ್ಯವಸ್ಥೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಇಲ್ಲಿ 4 ವರ್ಷದ ಮಗುವಿನಿಂದ ಹಿಡಿದು 99 ವರ್ಷದ ವೃದ್ಧರವರೆಗೂ ಅನೇಕ ಸೋಂಕಿತರು ಚಿಕಿತ್ಸೆ ಪಡೆದು, ಗುಣಮುಖರಾಗಿ ಮನೆಗೆ ಮರಳಿದ್ದಾರೆ. ನೂರಾರು ಗರ್ಭಿಣಿಯರು ಚಿಕಿತ್ಸೆ ಪಡೆದು ಮನೆಗೆ ಮರಳಿರುವ ದಾಖಲೆಗಳನ್ನು ನೋಡಿದ್ದೇನೆ. ಇನ್ನೂ ವಿಶೇಷವೆಂದರೆ ಇಲ್ಲಿ ಚಿಕಿತ್ಸೆ ಪಡೆದು, ಗುಣಮುಖರಾಗಿ ಹೋದವರು ಮತ್ತೆ ಇಲ್ಲಿಗೆ ಬಂದು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ಮುಂದಾಗಿದ್ದಾರೆ. ಹೀಗಾಗಿ ಸೋಂಕಿತರು, ಚಿಕಿತ್ಸೆ ನೀಡುತ್ತಿರುವವರು ಇಬ್ಬರಿಗೂ ನಾವೆಲ್ಲರೂ ನೈತಿಕ ಬೆಂಬಲ ನೀಡಬೇಕಿದೆ. ಅವರು ಯಾವುದೇ ಕಾರಣಕ್ಕೂ ಹೆದರುವ ಅಗತ್ಯವಿಲ್ಲ ಎಂಬ ಮನೋಭಾವ ತುಂಬುವ ಹೊಣೆ ನಮ್ಮ-ನಿಮ್ಮೆಲ್ಲರದ್ದಾಗಿದೆ.’

‘ಮಂತ್ರಿಗಳು ಕೂಡ ಆಸ್ಪತ್ರೆಗಳಿಗೆ ಭೇಟಿ ನೀಡಿ ಸೋಂಕಿತರು ಮತ್ತು ಚಿಕಿತ್ಸೆ ನೀಡುತ್ತಿರುವವರಿಗೆ ಆತ್ಮವಿಶ್ವಾಸ ತುಂಬುವುದು ಉತ್ತಮ. ಕೋವಿಡ್ ಸೋಂಕಿತರ ಬಗ್ಗೆ ತಪ್ಪು ಕಲ್ಪನೆಗಳನ್ನು ಇಟ್ಟುಕೊಳ್ಳುವುದು ಬೇಡ. ಚಿಕಿತ್ಸೆ ವ್ಯವಸ್ಥೆಯಲ್ಲಿ ಸಣ್ಣಪುಟ್ಟ ದೋಷಗಳಿದ್ದರೆ ಅದನ್ನು ಸರಿಪಡಿಸುವುದು ಸರಕಾರದ ಕರ್ತವ್ಯ. ಕೋವಿಡ್ ಸಲಕರಣೆಗಳ ಖರೀದಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಇಲ್ಲಿ ಮಾತನಾಡುವುದು ಸರಿಯಲ್ಲ. ಅದನ್ನು ಬೇರೆ ಸಂದರ್ಭದಲ್ಲಿ, ಬೇರೆ ವೇದಿಕೆಯಲ್ಲಿ ಪ್ರಸ್ತಾಪ ಮಾಡುತ್ತೇನೆ. ಇಲ್ಲಿಗೆ ಬಂದಿರುವುದು ಸೋಂಕಿತರು, ವೈದ್ಯರು ಮತ್ತು ಸಿಬ್ಬಂದಿಗೆ ಆತ್ಮವಿಶ್ವಾಸ ತುಂಬಲು ಮಾತ್ರ. ಬೇರೆ ವಿಚಾರಗಳ ಬಗ್ಗೆ ಇಲ್ಲಿ ಮಾತನಾಡುವುದಿಲ್ಲ.’

‘ಈ ಸಮಯದಲ್ಲಿ ಸೋಂಕಿತರ ಮಾನಸಿಕ ಆರೋಗ್ಯವೂ ಬಹಳ ಮುಖ್ಯ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಫೋನ್ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಸೋಂಕಿತರು ತಮ್ಮ ಕುಟುಂಬದವರ ಜತೆ ಮಾತನಾಡಬಹುದಾಗಿದೆ. ಎಲ್ಲ ಆಸ್ಪತ್ರೆಗಳಲ್ಲೂ ಈ ರೀತಿಯ ಫೋನ್ ವ್ಯವಸ್ಥೆ ಕಲ್ಪಿಸಬೇಕು.’