ಸಹಕಾರಿ ಕ್ಷೇತ್ರಕ್ಕೆ 20 ವರ್ಷಗಳ ನಂತರ ದಕ್ಷ ಸಚಿವರು ; ಡಿಸಿಎಂ ಲಕ್ಷ್ಮಣ ಸವದಿ ಬಣ್ಣನೆ

ಬೆಳಗಾವಿ, ಚಿಕ್ಕೋಡಿ,: ಸುಮಾರು 15-20 ವರ್ಷಗಳ ನಂತರ ಸಹಕಾರ ಕ್ಷೇತ್ರಕ್ಕೆ ಒಬ್ಬ ಉತ್ತಮ ಸಚಿವರು ಸಿಕ್ಕಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ಒಬ್ಬ ದಕ್ಷ, ಪ್ರಾಮಾಣಿಕ ಸಚಿವರನ್ನು ನೇಮಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ಸಹಕಾರ ಇಲಾಖೆ ಹಾಗೂ ಜೊಲ್ಲೆ ಎಜುಕೇಶನ್ ಸೊಸೈಟಿ ಎಕ್ಸಂಬಾ ವತಿಯಿಂದ ಬೆಳಗಾವಿ ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿಯಂತೆ ಸುಮಾರು 44 ಲಕ್ಷ ರೂಪಾಯಿ ಪ್ರೋತ್ಸಾಹ ಧನ ಚೆಕ್ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.

ಇಷ್ಟು ವರ್ಷ ಸಹಕಾರ ಸಚಿವರು ಇದ್ದೂ ಇಲ್ಲದಂತೆ ಇದ್ದರು. ಸಹಕಾರಿ ಧುರೀಣರಾದ ಸೋಮಶೇಖರ್ ಅವರು ಹತ್ತು ಹಲವು ಕಾರ್ಯಗಳನ್ನು ಹಾಕಿಕೊಳ್ಳುತ್ತಾ ಸಹಕಾರಿ ಕ್ಷೇತ್ರ ಉಳಿಯುವಂತೆ ಮಾಡಿದ್ದಾರೆ. ಇದೇ ರೀತಿ ರೈತರ ಪರವಾಗಿ ಇವರ ಸೇವೆ ಮುಂದುವರಿಯಲಿ ಎಂದು ನಾನು ಆಶಿಸುತ್ತೇನೆ ಎಂದು ಹೇಳಿದರು.

ಸಹಕಾರಿ ಕ್ಷೇತ್ರದ ಚುನಾವಣೆ ಮುಂದೂಡಿಕೆ
ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಮಾತನಾಡಿ, ಮಾನ್ಯ ಮುಖ್ಯಮಂತ್ರಿಗಳು 18 ವರ್ಷದ ಯುವಕರಂತೆ ಕಾರ್ಯನಿರ್ಹಣೆ ಮಾಡುತ್ತಿದ್ದಾರೆ. 24×7 ಮಾದರಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಪಣತೊಟ್ಟು ಕೆಲಸ ಮಾಡುತ್ತಿದ್ದು, ಸಚಿವರು ಮತ್ತು ಜಿಲ್ಲಾಡಳಿತಗಳ ಜೊತೆ ನಿರಂತರವಾಗಿ ಮಾಹಿತಿಗಳನ್ನು ಪಡೆದು, ಸಲಹೆ ಸೂಚನೆಗಳನ್ನು , ಮಾರ್ಗದರ್ಶನಗಳನ್ನು ನೀಡುತ್ತಾ ಬಂದಿದ್ಧಾರೆ. ರಾಜ್ಯದಲ್ಲಿ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಶಿಷ್ಟಾಚಾರವನ್ನು ಪಾಲಿಸಬೇಕಾಗಿದೆ. ಹಾಗಾಗಿ ಸಹಕಾರಿ ಕ್ಷೇತ್ರದ ಎಲ್ಲ ಚುನಾವಣೆಗಳನ್ನು ಡಿ. 31ರ ತನಕ ಮುಂದೂಡಲಾಗಿದೆ ಎಂದು ತಿಳಿಸಿದರು.

ರೈತರಿಗೆ ಹಾಗೂ ಸ್ವಸಹಾಯ ಗುಂಪುಗಳಿಗೆ ಮಧ್ಯಮಾವಧಿ, ಅಲ್ಪಾವಧಿ ಹಾಗೂ ದೀರ್ಘಾವಧಿ ಸಾಲವಾಗಿ ನೀಡಲಾಗಿದ್ದ ಸಾಲದಲ್ಲಿ ಮೇಲಿನ ಬಡ್ಡಿ ಸಹಾಯಧನ ನೀಡುವ ಅವಧಿಯನ್ನು ಆ.31ರ ತನಕ ವಿಸ್ತರಣೆ ಮಾಡಲಾಗಿದ್ದು, 36.77 ಕೋಟಿ ರೂ.ವಷ್ಟು ಹಣವನ್ನು ರಾಜ್ಯಸರ್ಕಾರವೇ ಭರಸಲಿದೆ. ಇದು ಸರ್ಕಾರಕ್ಕೆ ಹೊರೆಯಾದರೂ ರೈತರ ಅನುಕೂಲಕ್ಕಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಹೀಗಾಗಿ ರಾಜ್ಯದ ಸುಮಾರು 1.95 ಲಕ್ಷ ರೈತರಿಗೆ ಮತ್ತು 66 ಸಾವಿರ ಸ್ವಸಹಾಯ ಗುಂಪುಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದರು.

ರಾಜ್ಯದ ಕೊರೋನಾ ವಾರಿಯರ್ಸ್ ಗಳಾದ 42,608 ಆಶಾ ಕರ್ಯಕರ್ತೆಯರು ಇದ್ದು, ಇದುವರೆಗೂ ಸುಮಾರು 28 ಸಾವಿರ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿ ಪ್ರೋತ್ಸಾಹಧನವನ್ನು ವಿತರಣೆ ಮಾಡಿದ್ದೇವೆ. ಇನ್ನೂ ವಾರ ಇಲ್ಲವೇ 10 ದಿನಗಳೊಳಗೆ ಉಳಿದ ಎಲ್ಲರಿಗೂ ಪ್ರೋತ್ಸಾಹಧನವನ್ನು ವಿತರಿಸಲಾಗುವುದು ಎಂದು ಸಚಿವರು ತಿಳಿಸಿದರು.

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸದಸ್ಯರಾದ ಅಣ್ಣಾ ಸಾಹೇಬ್ ಜೊಲ್ಲೆ, ಸಚಿವರಾದ ಶಶಿಕಲಾ ಜೊಲ್ಲೆ, ಕುಡುಚಿ ಕ್ಷೇತ್ರದ ಶಾಸಕ ಪಿ,ರಾಜೀವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕಳೆದ ಬಾರಿ ರೈತರಿಗೆ 13,500 ಕೋಟಿ ರೂಪಾಯಿ ಬೆಳೆಸಾಲವನ್ನು ನೀಡಲಾಗಿತ್ತು. ಈ ಬಾರಿ 14,500 ಕೋಟಿ ರೂಪಾಯಿ ಬೆಳೆ ಸಾಲ ವಿತರಣೆ ಮಾಡುವ ಗುರಿ ಹೊಂದಲಾಗಿದೆ. ಹೀಗಾಗಿ ಏ.1ರಿಂದ ಇಲ್ಲಿಯವರೆಗೆ ಸುಮಾರು 8 ಸಾವಿರ ಕೋಟಿ ರೂಪಾಯಿಯನ್ನು ವಿತರಣೆ ಮಾಡಿದ್ದೇವೆ ಎಂದು ಸಚಿವರು ತಿಳಿಸಿದರು.

ಕೊರೋನಾ ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳಿ: ಐವಾನ್ ಡಿಸೋಜಾ ಒತ್ತಾಯ

ಮಂಗಳೂರು: ಕೊರೊನಾ ಉಪಕರಣಗಳ ಖರೀದಿಯಲ್ಲಿ ಭಾರೀ ಭಷ್ಟಾಚಾರ ನಡೆದಿದೆ ಎಂದು ಮಾಜಿ‌ ಸಿಎಂ ಸಿದ್ದರಾಮಯ್ಯರು ಆರೋಪಿಸಿದ್ದು ಹೀಗಾಗಿ ಕೂಡಲೇ ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ವಿಧಾನಪರಿಷತ್ ಮಾಜಿ‌ ಸದಸ್ಯ ಐವನ್ ಡಿಸೋಜಾ ಒತ್ತಾಯಿಸಿದ್ದಾರೆ.

ಮಂಗಳೂರಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಉಪಕರಣ ಖರೀದಿಯಲ್ಲಿ ಎಷ್ಟು ಅವ್ಯವಹಾರ ಆಗಿದೆ ಎಂಬುದನ್ನು ವಿವರವಾಗಿ ಜನರಿಗೆ ಅಂಕಿ ಅಂಶಗಳನ್ನು ತಿಳಿಸಿಕೊಟ್ಟಿದ್ದಾರೆ. ಹೀಗಾಗಿ ಸರ್ಕಾರ ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು, ಅದರ ಬದಲು ದಾಖಲೆ ಕೊಡಿ ಎಂದು ಕೇಳಬಾರದು.

ಕೊರೊನಾ ಹೆಸರಿನಲ್ಲಿ ಹಣ ತಿಂದವರು ದೇಶದಲ್ಲಿ ಇರಲು, ಮಂತ್ರಿ ಸ್ಥಾನದಲ್ಲಿ ಇರಲು‌ ನಾಲಾಯಕ್. ಕೊರೊನಾ ಪೀಡಿತರು ಹಣ ಇಲ್ಲದೇ ಪರದಾಡುತ್ತಿದ್ದಾರೆ. ಬೀದಿಯಲ್ಲಿ ಜನ ಸಾಯುತ್ತಿದ್ದಾರೆ. ಇನ್ನು ಕೊರೊನಾದಿಂದ ಸಾವನ್ನಪ್ಪಿದವರ ಅಂತ್ಯಸಂಸ್ಕಾರ ಮಾಡುತ್ತಿಲ್ಲ. ಅವರಾಗಿಯೇ ಅಂತ್ಯಸಂಸ್ಕಾರ ಮಾಡಲು ಹಣ ಕೊಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ತಹಸೀಲ್ದಾರ್ ಚಂದ್ರಮೌಳೇಶ್ವರ ಕೊಲೆ ಹಿನ್ನೆಲೆ: ಕೋಲಾರ ಸರ್ಕಾರಿ ಅಧಿಕಾರಿಗಳಿಗೆ ಗನ್ ಮ್ಯಾನ್ ಭದ್ರತೆ

ಕೋಲಾರ: ಜಿಲ್ಲೆಯ ಸರ್ಕಾರಿ ಅಧಿಕಾರಿ-ನೌಕರರಿಗೆ ಇನ್ನು ಮುಂದೆ ಗನ್ಮನ್ ಬೆಂಗಾವಲು ಸಿಗಲಿದೆ. ನಿರ್ದಿಷ್ಟ ಪ್ರಕರಣಗಳ ತನಿಖೆ ಅಥವ ಪರಿಶೀಲನೆಗಾಗಿ ತೆರಳುವ ಸರ್ಕಾರಿ ನೌಕರರಿಗೆ ಗನ್ಮನ್ ಜೊತೆಯಾಗಿ ಇರಲಿದ್ದಾರೆ ಅಂತಾ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಅಬಕಾರಿ ಸಚಿವ ಎಚ್.ನಾಗೇಶ ತಿಳಿಸಿದ್ದಾರೆ.

ಕಳೆದ ವಾರ ಬಂಗಾರಪೇಟೆ ತಾಲೂಕಿನ ಜಮೀನೊಂದ್ರ ಅಳತೆ ನಡೆಸುವ ಸಂದರ್ಭದಲ್ಲಿ ತಹಶೀಲ್ದಾರ್ ಚಂದ್ರಮೌಳೇಶ್ವರ ಅವರು ಕೊಲೆಯಾಗಿದ್ದರು. ಕಾಮ ಸಮುದ್ರ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಪೇದೆಗಳೂ ಆ ವೇಳೆಯಲ್ಲಿ ಜಾಗದಲ್ಲಿದ್ರು. ಇಷ್ಟೆಲ್ಲ ವ್ಯವಸ್ಥೆಯಿದ್ರೂ ತಹಶೀಲ್ದಾರ್ ಚಂದ್ರಮೌಳೇಶ್ವರ ಅವ್ರ ಮೇಲೆ ಎರಗಿದ ಆರೋಪಿಯೊಬ್ಬ ಚಾಕುವಿನಿಂದ ಅವ್ರನ್ನು ಇರಿದು ಕೊಂದು ಹಾಕಿದ್ದ ಪ್ರಕರಣವು ನಡೆದುಹೋಗಿತ್ತು.

ಈ ಹಿನ್ನಲೆಯಲ್ಲಿ ಕೋಲಾರ ಉಸ್ತುವಾರಿ ಸಚಿವ ಎಚ್.ನಾಗೇಶ ಅವರು ಇದೀಗ ಜಿಲ್ಲಾಡಳಿತಕ್ಕೆ ಸ್ಪಷ್ಟ ನಿರ್ದೇಶನವನ್ನು ಕೊಟ್ಟಿದ್ದಾರೆ. ಇನ್ನು ಮುಂದೆ ಕೋಲಾರ ಜಿಲ್ಲೆಯ ಸರ್ಕಾರಿ ಅಧಿಕಾರಿ-ನೌಕರರು ತಮ್ಮ ಕರ್ತವ್ಯ ನಿರ್ವಹಣೆಯ ವೇಳೆಯಲ್ಲಿ ಗನ್ಮನ್ ಬೆಂಗಾವಲು ಪಡೆದುಕೊಳ್ಳಬಹುದು. ಸಕಾರಿ ನೌಕರರ ಮೇಲೆ ತಿರುಗಿ ಬೀಳುವವರ ಮೇಲೆ ಸ್ಥಳದಲ್ಲೇ ಕ್ರಮ ಜರುಗಿಸೋದು ಅನಿವಾರ್ಯವಾಗಿದೆ ಅಂತ ಸಚಿವರು ಸಮರ್ಥನೆ ಕೊಟ್ಟಿದ್ದಾರೆ.

ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಂದ ಗ್ರಾಹಕರ ಮೇಲೆ ಹಲ್ಲೆ!

ಕೋಲಾರ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಸಾರ್ವಜನಿಕರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಶ್ರೀನಿವಾಸಪುರ ಕ್ಷೇತ್ರದ ಶಾಸಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಎದುರಲ್ಲಿಯೇ ಈ ಘಟನೆಯು ನಡೆದಿದ್ದು, ಇಂದು ಡಿಸಿಸಿ ಬ್ಯಾಂಕ್‌ ನ ಶ್ರೀನಿವಾಸಪುರದ ಶಾಖೆಯಲ್ಲಿ ಮಹಿಳೆಯರಿದ್ದ ಸಾಲಿನಲ್ಲಿ ನುಗ್ಗಿದ ವ್ಯಕ್ತಿಯ ಕೆನ್ನೆಗೆ ಬಾರಿಸಿದ್ದು ನಿಜ ಅಂತ ಬ್ಯಾಲಹಳ್ಳಿ ಗೋವಿಂದಗೌಡ ಪ್ರತಿಕ್ರಿಯಿಸಿದ್ದಾರೆ.

ಇಂದು ಮಧ್ಯಾಹ್ನ ಒಂದೂವರೆ ಸಮಯದಲ್ಲಿ ಡಿಸಿಸಿ ಬ್ಯಾಂಕಿನ ಶ್ರೀನಿವಾಸಪುರ ಶಾಖೆಯಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ವಿತರಣೆಯ ಕಾರ್ಯಕ್ರಮವಿತ್ತು. ಶ್ರೀನಿವಾಸಪುರ ಕ್ಷೇತ್ರದ ಶಾಸಕರೂ ಆದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವ್ರೂ ಈ ಸಂದರ್ಭದಲ್ಲಿ ಹಾಜರಿದ್ದರು.

ಈ ವೇಳೆಯಲ್ಲಿ ಬ್ಯಾಂಕ್ ಕೌಂಟರ್ ಬಳಿ ನಿಂತಿದ್ದ ಗ್ರಾಹಕರೊಬ್ಬರ ಕೆನ್ನೆಗೆ ಬ್ಯಾಲಹಳ್ಳಿ ಗೋವಿಂದಗೌಡ ಹೊಡೆದಿದ್ದಾರೆ. ಕ್ರಮ ಸಂಖ್ಯೆ ಸರಿಯಾಗಿ ಇಟ್ಟುಕೊಳ್ಳದೆ ಸಾಲ ಪಡೆಯಲು ಬಂದಿದ್ದೀಯ ಅಂತ ವ್ಯಕ್ತಿಯ ಕೆನ್ನೆಗೆ ಬ್ಯಾಲಹಳ್ಳಿ ಗೋವಿಂದಗೌಡ ಹೊಡೆದರು. ಈ ವೇಳೆಯಲ್ಲಿ ಅಲ್ಲಿದ್ದ ಶಾಸಕ ರಮೇಶ್ ಕುಮಾರ್ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಅಂತ ಹೇಳುತ್ತಿರುವುದು ವಿಡಿಯೋದಲ್ಲಿದೆ. ಹಲ್ಲೆಗೊಳಗಾದ ವ್ಯಕ್ತಿ ದೂರು ದಾಖಲಿಸಿಲ್ಲ. ಅಲ್ಲದೆ ಯಾವುದೇ ಪ್ರತಿಕ್ರಿಯೆಗೂ ಸಿಕ್ಕಿಲ್ಲ.

ಎರಡು ಗುಂಪುಗಳ ನಡುವೆ ಘರ್ಷಣೆ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ

ಮಂಗಳೂರು: ದುಷ್ಕರ್ಮಿಗಳ ತಂಡವೊಂದು ಯುವಕರ ಮೇಲೆ ತಲ್ವಾರು ದಾಳಿ ನಡೆಸಿದ ಘಟನೆ ನಗರದ ಬಂದರು ಬಜಿಲಕೇರಿಯಲ್ಲಿ ನಡೆದಿದೆ. ಈ ವೇಳೆ ಗಾಂಜಾ ವ್ಯಸನಿ ಯುವಕನೊಬ್ಬ ನಡು ರಸ್ತೆಯಲ್ಲೇ ತಲ್ವಾರು ಜಳಪಿಸಿ ಭಯದ ವಾತಾವರಣ ಸೃಷ್ಟಿಸಿದ್ದಾನೆ. ಘರ್ಷಣೆ ವೇಳೆ ಮೂರು ಮಂದಿ ಯುವಕರು ಗಾಯಗೊಂಡಿದ್ದಾರೆ.

ಅಲ್ಲದೆ ಇದೇ ತಂಡದ ಮನೆಗೆ ನುಗ್ಗಿ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿ ಮನೆಯ ವಸ್ತುಗಳನ್ನು ಪುಡಿಗೈದಿರುವ ಆರೋಪ ಕೇಳಿಬಂದಿದೆ. ಘಟನೆಯಲ್ಲಿ ಒಂದು ಕಾರು ಹಾಗೂ ಬೈಕ್ ಜಖಂಗೊಂಡಿದೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಗುಂಪಿನ‌ ನಡುವೆ ಮಾತಿನ ಚಕಮಕಿ ನಡೆದು ಹಲ್ಲೆ ನಡೆದಿದೆ. ಹೀಗಾಗಿ
ಬಜಿಲಕೇರಿ ಪರಿಸರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಪ್ರಕರಣ ಕುರಿತು ಬಂದರು ಠಾಣೆಯಲ್ಲಿ ಕೇಸು ದಾಖಲಾಗಿದೆ. ಇನ್ನು ಘಟನೆ ಬಗ್ಗೆ ಮಾಹಿತಿ ಪಡೆದ ಶಾಸಕ ವೇದವ್ಯಾಸ್ ಕಾಮತ್ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಇಲಾಖೆ‌ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಉಡುಪಿ ಲಾಕ್ಡೌನ್ ಕುರಿತು ನಾಳೆ ತೀರ್ಮಾನ

ಉಡುಪಿ: ಲಾಕ್ ಡೌನ್ ಕುರಿತು ನಾಳೆ ಬೆಳಿಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ಕರೆದು ಲಾಕ್ ಡೌನ್ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು,ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಅಂತಿಮ ನಿರ್ಣಯಕ್ಕೆ ಬರಲಿದ್ದೇವೆ. ಮುಖ್ಯಮಂತ್ರಿಗಳು ಬೆಂಗಳೂರು ಹೊರತುಪಡಿಸಿ ಬೇರೆ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿದ್ದಾರೆ.

ಆಯಾ ಜಿಲ್ಲೆಗಳ ಜಿಲ್ಲಾಡಳಿತವೇ ಲಾಕ್ಡೌನ್ ಬಗ್ಗೆ ನಿರ್ಣಯ ಕೈಗೊಳ್ಳಲಿವೆ. ನಾಳೆ ಲಾಕ್ಡೌನ್ ಸಾಧಕ ಬಾಧಕದ ಬಗ್ಗೆ ಚರ್ಚೆ ಮಾಡಲಿದ್ದೇವೆ. ಒಂದಷ್ಟು ಕಾಲಾವಕಾಶ ನೀಡಿ ಬಳಿಕ ಜಿಲ್ಲೆಯ ಗಡಿಗಳನ್ನು ಸೀಲ್ ಡೌನ್ ಮಾಡುವ ಬಗ್ಗೆಯೂ ಅಭಿಪ್ರಾಯಗಳು ಬಂದಿವೆ. ನಾಳೆ ಹತ್ತು ಗಂಟೆಯ ಸಭೆಯಲ್ಲಿ ಈ ಎಲ್ಲದರ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು‌ ಮಾಹಿತಿ ನೀಡಿದ್ದಾರೆ.