ಮನೆ ಮನೆಗೂ ಸರ್ಕಾರ ಕೊರೋನಾ ಕಿಟ್ ಒದಗಿಸಬೇಕು: ಎಚ್ಡಿ ಕುಮಾರಸ್ವಾಮಿ

ಬೆಂಗಳೂರು: ಕೊರೋನಾ ವ್ಯಾಪಕ‌ ಹೆಚ್ಚಳ ಹಿನ್ನೆಲೆಯಲ್ಲಿ ವಿಟಮಿನ್ ಸಿ ಔಷಧಿ ಹಾಗೂ ಆಯುಷ್ ಸಚಿವಾಲಯ ದೃಢೀಕರಿಸಿದ ರೋಗ ನಿರೋಧಕ ಶಕ್ತಿ ವರ್ಧಕ ಕಿಟ್ (Immunity Booster) ಮತ್ತು ಸ್ಯಾನಿಟೈಸರ್ ಪ್ರತಿ ಮನೆ ಮನೆಗೂ ಸರ್ಕಾರ ಒದಗಿಸಲಿ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಸರ್ಕಾರವನ್ನು ಆಗ್ರಹಿಸಿದ್ದಾರೆ‌.

ಈ ಆರೋಗ್ಯ ಕಿಟ್ ಗಳು ಪ್ರತಿ ಮೆಡಿಕಲ್ ಹಾಗೂ ಇತರ ಅಂಗಡಿಗಳಲ್ಲಿ ಮಾರಾಟಕ್ಕೂ ದೊರೆಯಲಿ. ಇದಲ್ಲದೆ ರೋಗ ಲಕ್ಷಣ ಕಂಡು ಬಂದವರಿಗೂ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಔಷಧಿಗಳನ್ನು ಪೂರೈಸಬೇಕು. ಆಗ ಮಾತ್ರ ಕರ್ನಾಟಕ ಕೊರೋನ‌ ನಿಯಂತ್ರಣ ಮಾಡಲು ಸಾಧ್ಯ.

ಎಲ್ಲರಿಗೂ ಆರೋಗ್ಯ ಕಿಟ್ ನೀಡಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಕನಿಷ್ಠ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಆರೋಗ್ಯ ಕಿಟ್ ನೀಡಲು ಸರ್ಕಾರ ತಕ್ಷಣವೇ ನಿರ್ಧಾರ ತೆಗೆದುಕೊಳ್ಳಬೇಕು.

ಇದರ ಜೊತೆಗೆ ಕೇಂದ್ರ ಸರ್ಕಾರ ಈ ಸೋಂಕು ತಡೆಗೆ ಬಳಸಬಹುದಾದ ಯೋಗ್ಯ ಔಷಧಿಗಳ (supplements) ಪಟ್ಟಿ ಒದಗಿಸಿ ಅದನ್ನು ಸಾರ್ವಜನಿಕರು ವ್ಯಾಪಕವಾಗಿ ಬಳಸುವಂತೆ ಸಾಮೂಹಿಕ ಜಾಗೃತಿ ಮೂಡಿಸುವುದು ಇಂದಿನ ತುರ್ತು ಅಗತ್ಯ.

ಸರ್ಕಾರ ದಿನಕೊಂದು ನಿರ್ಧಾರ ತೆಗೆದುಕೊಳ್ಳುವ ಮೂಲಕ ಕೊರೋನಾ ವೈರಸ್ ತಡೆಯುವಲ್ಲಿ ಎಡವುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇನ್ನಾದರೂ ಜವಾಬ್ದಾರಿಯಿಂದ, ದೂರದೃಷ್ಟಿಯಿಂದ ಸರ್ಕಾರ ಕಾರ್ಯ ಸಾಧುವಾದ ಯೋಜನೆಗಳನ್ನು ಜಾರಿಗೊಳಿಸಲು ತಕ್ಷಣ ಕಾರ್ಯೋನ್ಮುಖರಾಗುವಂತೆ ಆಗ್ರಹಿಸುತ್ತೇನೆ‌ ಎಂದು ಟ್ವೀಟ್ ಮಾಡಿದ್ದಾರೆ.

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ – ಎಸ್. ಸುರೇಶ್ ಕುಮಾರ್

ಬೆಂಗಳೂರು:ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶವನ್ನು ನಾಳೆ ದಿನಾಂಕ 14.07.2020 ರಂದು ಬೆಳಿಗ್ಗೆ 11.30ಕ್ಕೆ ಪ್ರಕಟಿಸಲಾಗುವುದೆಂದು ಸಚಿವ ಎಸ್. ಸುರೇಶ್ ಕುಮಾರ್ ರವರು ಹೇಳಿದ್ದಾರೆ.

ಇಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಕುರಿತಂತೆ ನಿರ್ದೇಶನ ನೀಡಲಾಗಿದೆ ಎಂದ ಸಚಿವರು ನಾಳೆ ಅಧಿಕೃತ ಫಲಿತಾಂಶ ಪ್ರಕಟಣೆಯ ಬಳಿಕ ಉತ್ತೀರ್ಣಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಮೊಬೈಲ್ ಮೂಲಕ ಸಂದೇಶ ರವಾನೆಯಾಗುವುದು. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ನಾಳೆ ಮಧ್ಯಾಹ್ನ 12 ಗಂಟೆಯ ಬಳಿಕ ಸರ್ಕಾರದ ಅಧಿಕೃತ ಜಾಲತಾಣ www.karresults.nic.in ಗಳಲ್ಲಿಯೂ ಸಹ ವೀಕ್ಷಿಸಬಹುದೆಂದು ದಿನಾಂಕ 04.03.2020 ರಿಂದ 21.03.2020 ರವರೆಗೆ ವಿವಿಧ ವಿಷಯಗಳ ಪರೀಕ್ಷೆಗಳು ನಡೆದಿದ್ದು ನಂತರ ಕೋವಿಡ್-19 ಸಂದರ್ಭದಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ದಿನಾಂಕ 18.06.2020 ರಂದು ಆಂಗ್ಲಭಾಷೆಯ ಪರೀಕ್ಷೆಗಳನ್ನು ನಡೆಸಿದ್ದನ್ನು ಸ್ಮರಿಸಬಹುದು. ಸುಮಾರು 6.75 ಲಕ್ಷ ವಿದ್ಯಾರ್ಥಿಗಳ ಫಲಿತಾಂಶ ನಾಳೆ ಹೊರಬೀಳಲಿದೆ ಎಂದು ಸಚಿವರು ಹೇಳಿದ್ದಾರೆ.

ಪ್ರಥಮ ಪಿಯುಸಿ ಪೂರಕ ಪರೀಕ್ಷೆ ರದ್ದು

ಜುಲೈ 16 ರಿಂದ 27ರವರೆಗೆ ನಿಗಧಿಯಾಗಿದ್ದ ಪ್ರಥಮ ಪಿಯುಸಿ ಪೂರಕ ಪರೀಕ್ಷೆಗಳನ್ನು ಕೋವಿಡ್-19 ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ ಎಂದು ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. ಸುಮಾರು 60 ಸಾವಿರ ವಿದ್ಯಾರ್ಥಿಗಳು ಈ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕಿದ್ದು ಕಾಲೇಜು ಹಂತದಲ್ಲಿ ಪರೀಕ್ಷೆಗಳನ್ನು ನಿರ್ವಹಿಸಿ ಇದೇ 30 ರಂದು ಫಲಿತಾಂಶವನ್ನು ಪ್ರಕಟಿಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಕೋವಿಡ್ ಸೊಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾರ್ಷಿಕ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳ ಪರೀಕ್ಷೆಯನ್ನು ಬರೆದು ಅನುತ್ತೀರ್ಣಗೊಂಡ ವಿದ್ಯಾರ್ಥಿಗಳನ್ನು ದ್ವಿತೀಯ ಪಿಯುಸಿಗೆ ತೇರ್ಗಡೆಗೊಳಿಸಲಾಗುವುದು. ಪರೀಕ್ಷೆಯಲ್ಲಿ ಉತ್ತೀರ್ಣತೆಯನ್ನು ಪಡೆಯಲು ಅವಶ್ಯಕತೆಯಿರುವ ಕನಿಷ್ಠ ಅಂಕಗಳನ್ನು ಕಾಲೇಜು ಹಂತದಲ್ಲಿಯೇ ನೀಡಲಾಗುವುದು. ಹಾಜರಾತಿ ಕೊರತೆಯಿಲ್ಲದ, ಅನಿವಾರ್ಯ ಸಂದರ್ಭದಲ್ಲಿ ಪರೀಕ್ಷೆಗೆ ಗೈರುಹಾಜರಾದ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗಳು ಪ್ರಾರಂಭವಾದ ಬಳಿಕ ದ್ವಿತೀಯ ಪಿಯುಸಿಯ ಪ್ರಥಮ ಕಿರುಪರೀಕ್ಷೆಗೂ ಪೂರ್ವದಲ್ಲಿ ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣವಾದ ವಿಷಯಗಳಿಗೆ ಮತ್ತೊಮ್ಮೆ ಕಾಲೇಜು ಹಂತದಲ್ಲಿ ಕಿರುಪರೀಕ್ಷೆಯನ್ನು ನಡೆಸಿ ಅವರ ಕಲಿಕೆಯ ಮಟ್ಟವನ್ನು ಮೌಲ್ಯಮಾಪನ ಮಾಡಲಾಗುವುದೆಂದು ಸಚಿವರು ಹೇಳಿದ್ದಾರೆ. ಹಾಜರಾತಿಯ ಕೊರತೆಯಿಂದ ವಾರ್ಷಿಕ ಪರೀಕ್ಷೆಗೆ ಹಾಜರಾಗಲು ಅನುಮತಿ ಪಡೆಯದ ವಿದ್ಯಾರ್ಥಿಗಳು ಮಾತ್ರ ಅನುತ್ತೀರ್ಣಗೊಳ್ಳುವರು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

20.07.2020 ರಿಂದ ದೂರದರ್ಶನದ ಚಂದನ ವಾಹಿನಿಯಲ್ಲಿ ಇ ಕ್ಲಾಸ್ ಕಲಿಕಾ ಕಾರ್ಯಕ್ರಮ

ಕೋವಿಡ್ ಸಂದರ್ಭದಲ್ಲಿ ಮಕ್ಕಳ ನಿರಂತರ ಕಲಿಕೆಗೆ ಯಾವುದೇ ಅಡಚಣೆಯುಂಟಾಗದಂತೆ ಕಲಿಕೆಯನ್ನು ಮುಂದುವರೆಸಲು, ಮಕ್ಕಳು ಮನೆಯಲ್ಲಿಯೇ ಇದ್ದರೂ ಕಲಿಕೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು ಇದೇ 20.07.2020 ರಿಂದ 20 ದಿನಗಳ ಅವಧಿಗೆ 8 ರಿಂದ 10ನೇ ತರಗತಿಯ ಮಕ್ಕಳಿಗೆ ಪ್ರಥಮ ಭಾಷೆ ಕನ್ನಡ, ಇಂಗ್ಲೀಷ್, ಸಂಸ್ಕೃತ, ಉರ್ದು, ದ್ವಿತೀಯ ಭಾಷೆ ಇಂಗ್ಲೀಷ್, ತೃತೀಯ ಭಾಷೆ ಹಿಂದಿ, ಕನ್ನಡ ಮಾಧ್ಯಮದಲ್ಲಿ ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳಲ್ಲಿ ಸೇತುಬಂಧ (Bridge Course) ಕಾರ್ಯಕ್ರಮಗಳನ್ನು ದೂರದರ್ಶನದ ಚಂದನ ವಾಹಿನಿಯಲ್ಲಿ ಬಿತ್ತರಿಸಲಾಗುವುದೆಂದು ಸಚಿವ ಶ್ರೀ ಎಸ್. ಸುರೇಶ್ ಕುಮಾರ್ ರವರು ಹೇಳಿದ್ದಾರೆ. 20 ದಿನಗಳ ಸೇತುಬಂಧ ತರಗತಿಗಳ ಬಳಿಕ 8ರಿಂದ 10ನೇ ತರಗತಿಗಳಿಗೆ ಕನ್ನಡ ಮಾಧ್ಯಮದಲ್ಲಿ ದೈನಂದಿನ ಬೋಧನೆ ಮುಂದುವರೆಯಲಿವೆ ಎಂದ ಸಚಿವರು ಮುಂದಿನ ದಿನಗಳಲ್ಲಿ 1ರಿಂದ 10ನೇ ತರಗತಿಯ ಎಲ್ಲಾ ಮಕ್ಕಳಿಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ವಿಡೀಯೋ ಪಾಠಗಳನ್ನು ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ದೂರದರ್ಶನ ಚಂದನ ವಾಹಿನಿಯು ಪ್ರಸಾರ ಮಾಡಲಿದೆ ಎಂದು ಹೇಳಿದರು ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಈ ಕಲಿಕೆಯ ಪ್ರಯೋಜನವನ್ನು ಪಡೆಯುವಲ್ಲಿ ಪ್ರೇರೆಪಿಸಬೇಕೆಂದು ಮನವಿ ಮಾಡಿದ ಎಸ್. ಸುರೇಶ್ ಕುಮಾರ್ ಶಿಕ್ಷಣ ಇಲಾಖೆಯ ಯುಟ್ಯೂಬ್ ವಾಹಿನಿಯಲ್ಲಿಯೂ ಸಹ ಈ ಎಲ್ಲಾ ತರಗತಿಗಳು ಲಭ್ಯವಿರಲಿದ್ದು ವಿದ್ಯಾರ್ಥಿಗಳು ಇದನ್ನು ಸದುಪಯೋಗ ಮಾಡಿಕೊಳ್ಳಬಹುದಾಗಿದೆ. ಈ ತರಗತಿಗಳ ಕಲಿಕೆಯನ್ನು ಮೌಲ್ಯಮಾಪನ ಮಾಡಲು ಪ್ರತಿ 20 ವಿದ್ಯಾರ್ಥಿಗಳಿಗೆ ಒಬ್ಬ ಮೆಂಟಾರ್ ಶಿಕ್ಷಕರನ್ನು ಮ್ಯಾಪಿಂಗ್ ಮಾಡಲಾಗುತ್ತಿದ್ದು ಶಿಕ್ಷಕರು ಕಲಿಕೆಯ ಸಮರ್ಥ ಮೌಲ್ಯಮಾಪನಕ್ಕೆ ಶಿಕ್ಷಣ ಇಲಾಖೆಯು ವ್ಯವಸ್ಥಿತ ರೂಪುರೇಶೆಗಳನ್ನು ಜಾರಿಯಲ್ಲಿಟ್ಟಿದೆ ಎಂದು ತಿಳಿಸಿದರು.

ಸರ್ಕಾರದ ವೈಫಲ್ಯ ಜನರನ್ನು ಗೊಂದಲ ಮತ್ತು ಆತಂಕಕ್ಕೆ ಸಿಲುಕಿಸಿದೆ: ಡಿ.ಕೆ ಶಿವಕುಮಾರ್

ಬೆಂಗಳೂರು:ಸರ್ಕಾರ ಕೋವಿಡ್ ಪರಿಸ್ಥಿತಿ ನಿಭಾಯಿಸಲು ವಿಫಲವಾಗಿರುವುದರಿಂದ ಜನರಲ್ಲಿ ಆತಂಕ ಹಾಗೂ ಗೊಂದಲ ಹೆಚ್ಚಾಗಿದೆ. ಹೀಗಾಗಿ ಅವರು ಬೆಂಗಳೂರು ತೊರೆದು ಹಳ್ಳಿಗಳತ್ತ ಸಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಿಷ್ಟು…

ಸರ್ಕಾರ ಮತ್ತೆ ಲಾಕ್ ಡೌನ್ ಮಾಡುತ್ತಿರುವ ವಿಚಾರದ ಬಗ್ಗೆ ನಾವು ಮಾತನಾಡುವುದಿಲ್ಲ. ಅವರ ಆಡಳಿತ ಕಾರ್ಯದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಈ ಕೋವಿಡ್ ಪಿಡುಗನ್ನು ಪಕ್ಷಾತೀತವಾಗಿ ಎದುರಿಸಬೇಕು ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ಆದರೆ ಬಿಜೆಪಿ ಈ ವಿಚಾರದಲ್ಲೂ ತಮ್ಮ ರಾಜಕೀಯ ಸಾಧಿಸುತ್ತಿದ್ದಾರೆ. ಅವರು ನಮ್ಮನ್ನು ಕರೆದು ಚರ್ಚಿಸಿದರೆ ನಾವು ಈ ಬಗ್ಗೆ ಮಾತನಾಡುತ್ತೇವೆ.

ಬಿಜೆಪಿ ಮಂತ್ರಿಗಳ ಮಾತುಗಳನ್ನು ನಾವು ಗಮನಿಸುತ್ತಿದ್ದೇವೆ. ಉಪಮುಖ್ಯಮಂತ್ರಿಗಳು ತಮ್ಮ ಪಕ್ಷದ ಕಾರ್ಯಕರ್ತರನ್ನು ಸ್ವಯಂ ಸೇವಕರಾಗಿ ನೇಮಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಈ ವಿಚಾರವಾಗಿ ನಾನು ಸಿಎಂಗೆ ಪತ್ರ ಬರೆದಿದ್ದು, ನಮ್ಮ ಕಾರ್ಯಕರ್ತರು ಆರಂಭದಿಂದ ಜನರ ಸೇವೆ ಮಾಡುತ್ತಿದ್ದು, ಸರ್ಕಾರದ ಜತೆಗೂಡಿ ಕೆಲಸ ಮಾಡಲು ಸಿದ್ಧ ಎಂದು ತಿಳಿಸಿದ್ದೇನೆ. ಅವರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡೋಣ.

ಸರ್ಕಾರದಲ್ಲಿ ಅನೇಕ ಗೊಂದಲಗಳಿವೆ. ಅವರು ಯಾರನ್ನು ನಂಬುವ ಪರಿಸ್ಥಿತಿಯಲ್ಲಿ ಇಲ್ಲ. ಮೊದಲು ಆರೋಗ್ಯ ಸಚಿವರು, ನಂತರ ವೈದ್ಯಕೀಯ ಶಿಕ್ಷಣ ಸಚಿವರು, ನಂತರ ಶಿಕ್ಷಣ ಸಚಿವರನ್ನು ಉಸ್ತುವಾರಿಯಾಗಿ ನೇಮಿಸಿದರು. ಆಮೇಲೆ ಬೆಂಗಳೂರಿನಲ್ಲೇ ನಾಲ್ಕೈದು ಸಚಿವರಿಗೆ ಹೊಣೆ ನೀಡಿದ್ದಾರೆ. ರಾಜಕೀಯ ಕಾರ್ಯದರ್ಶಿಗಳು ಕೂಡ ಈಗ ಮಂತ್ರಿಗಳ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳನ್ನೂ ನಂಬುವ ಪರಿಸ್ಥಿತಿಯಲ್ಲಿ ಇಲ್ಲ. ಸರ್ಕಾರ ಗೊಂದಲ ಹಾಗೂ ವೈಫಲ್ಯಗಳಿಂದ ಕೂಡಿದ್ದು ಜನರಿಗೆ ಸರಿಯಾದ ಭರವಸೆ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜನ ಬೇಸತ್ತು ತಮ್ಮ ಊರಿಗೆ ವಾಪಸ್ ಹೋಗುತ್ತಿದ್ದಾರೆ.

ಹಳ್ಳಿಗಳಲ್ಲೂ ಆತಂಕ ಹೆಚ್ಚುತ್ತಿದೆ. ನಾನು ಜಿಲ್ಲಾ ಅಧ್ಯಕ್ಷರುಗಳ ಜತೆ ಮಾತನಾಡಿದ್ದು, ಇನ್ನು ಕೆಲವು ಯುವ ನಾಯಕರನ್ನು ಚರ್ಚಿಸಲು ಆಹ್ವಾನಿಸಿದ್ದೇನೆ. ನಂತರ ಹಿರಿಯ ನಾಯಕರ ಜತೆ ಚರ್ಚಿಸಲಿದ್ದೇವೆ.

ಸಚಿನ್ ಪೈಲಟ್ ಪಕ್ಷ ಬಿಡುವುದಿಲ್ಲ ಎಂಬ ನಂಬಿಕೆ ಇದೆ:

ರಾಜಸ್ಥಾನ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಕಾಂಗ್ರೆಸಿಗ. ಅವರ ತಂದೆ ಹಾಗೂ ಅವರು ಪಕ್ಷಕ್ಕಾಗಿ ದುಡಿದಿದ್ದಾರೆ. ಅವರು ಪಕ್ಷ ಬಿಡುವುದಿಲ್ಲ ಎಂಬ ವಿಶ್ವಾಸವಿದೆ. ಪಕ್ಷದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇರಬಹುದು. ಅದನ್ನು ನಮ್ಮ ರಾಷ್ಟ್ರೀಯ ನಾಯಕರು ಬಗೆ ಹರಿಸಲಿದ್ದಾರೆ.

ಬೇರೆ ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವುದು ಬಿಜೆಪಿಯ ಅಜೆಂಡಾ. ಬಿಜೆಪಿ ರಾಜಸ್ಥಾನದಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಜನರ ದಾರಿ ತಪ್ಪಿಸುತ್ತಿದೆ. ಜನರು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದಾರೆ.

ಇಡೀ ರಾಜ್ಯಕ್ಕೆ ಲಾಕ್ ಡೌನ್ ವಿಸ್ತರಣೆ ಮಾಡಿ: ದೇವೇಗೌಡ

ಬೆಂಗಳೂರು: ಕೋವಿಡ್-19 ಹರಡುವಿಕೆ ನಿಯಂತ್ರಣಕ್ಕಾಗಿ ಒಂದು ವಾರದ ಲಾಕ್ ಡೌನ್ ಬೆಂಗಳೂರಿಗೆ ಸೀಮಿತಗೊಳಿಸದೇ ಇಡೀ ರಾಜ್ಯಕ್ಕೆ ವಿಸ್ತರಣೆ ಮಾಡುವಂತೆ ಮಾಜಿ ಪ್ರಧಾನಮಂತ್ರಿ ಎಚ್.ಡಿ‌ ದೇವೇಗೌಡರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಶರವೇಗದಲ್ಲಿ ಹರಡುತ್ತಿರುವ ಮಹಾಮಾರಿ ಕರೋನ ವೈರಸ್ ತಡೆಯಲು ರಾಜ್ಯ ಸರ್ಕಾರ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದೆ ತಿಂಗಳು 14ರ ರಾತ್ರಿ 8 ಗಂಟೆ ಯಿಂದ ಲಾಕ್ ಡೌನ್ ಜಾರಿ ಮಾಡಿದೆ ಇದು ಸ್ವಾಗತಾರ್ಹ ಇದರ ಜೊತೆಗೆ ಇಡಿ ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಮಾಡಲು ಮಾಧ್ಯಮಗಳ ಮುಖೇನ ರಾಜ್ಯ ಸರ್ಕಾರವನ್ನು ನಾನು ಆಗ್ರಹಿಸುತ್ತೀನಿ ಎಂದಿದ್ದಾರೆ.

ರಾಜ್ಯದ ಜನತೆಯ ಜೊತೆಗೆ ನಮ್ಮ ಇಡಿ ದೇಶದ ಜನತೆಗೆ ನಾನು ಮನವಿ ಮಾಡಿಕೊಳ್ಳುತ್ತೀನಿ ನಮಗೆ ಆರೋಗ್ಯವೇ ಭಾಗ್ಯ ಆದ್ದರಿಂದ ದಯವಿಟ್ಟು ಮನೆಯಿಂದ ಹೊರ ಹೋಗಬೇಕಾದರೆ ದಯವಿಟ್ಟು ಮಾಸ್ಕ್ ಧರಿಸಿ ,, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ,, ಏನೇ ಮುಟ್ಟಬೇಕಾದರು ಸ್ಯಾನಿಟೈಸರ್ ನಿಂದ ಕೈ ಅನ್ನು ಸ್ವಚ್ಛ ಗೊಳಿಸಿ ನಂತರ ಮುಟ್ಟಿ ,, ಮುಖ್ಯವಾದ ಕೆಲಸ ಕಾರ್ಯಗಳು ಇದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ

ಇನ್ನೊಂದು ಪ್ರಮುಖವಾದ ವಿಷಯ ಈ ಮಹಾಮಾರಿ ವೈರಸ್ಸನ್ನು ತಡೆಗಟ್ಟಲು ರಾಜ್ಯ ಸರ್ಕಾರ ಅನೇಕ ಪ್ಯಾಕೇಜುಗಳನ್ನು ಘೋಷಿಸಿದೆ ಅದರಲ್ಲಿ ಅವ್ಯವಹಾರ ನಡೆದಿದೆ ಎಂದು ಅನೇಕ ನಾಯಕರುಗಳು ಆಪಾದಿಸುತ್ತಿದ್ದಾರೆ ಅದೇನೇ ಇದ್ದರೂ ಮುಂಬರುವ ಅಧಿವೇಶನದಲ್ಲಿ ಚರ್ಚೆಮಾಡಲಿ ಈಗ ನಮಗೆ ಜನತೆಯ ಆರೋಗ್ಯ ಮುಖ್ಯ ,, ಮೊದಲು ನಾವೆಲ್ಲ ಅದರ ಕಡೆ ಗಮನ ಹರಿಸೋಣ ಸರ್ಕಾರವು ಸಹ ಇದರ ನಿಟ್ಟಿನಲ್ಲಿ ಕೆಲಸ ಮಾಡಬೇಕು ನಾವೆಲ್ಲ ಜೊತೆಗಿದ್ದೀವಿ ,, ಜನತೆಯ ಆರೋಗ್ಯದ ಜೊತೆ ಚೆಲ್ಲಾಟ ಬೇಡ ,, ದಯವಿಟ್ಟು ಇನ್ನು ಮುಂದಾದರು ಎಚ್ಚೆತ್ತು ಕೆಲಸ ಮಾಡಿ ಎಂದು ಮನವಿ ಮಾಡುತ್ತೀನಿ ಎಂದು ತಿಳಿಸಿದ್ದಾರೆ.

ಗಮನಕ್ಕೆ ತಾರದೆ ಪದಾಧಿಕಾರಿ ನೇಮಿಸಿದರೆ ಶಿಸ್ತುಕ್ರಮ: ಡಿಕೆಶಿ ಎಚ್ಚರಿಕೆ

ಬೆಂಗಳೂರು: ಗಮನಕ್ಕೆ ತಾರದೆ ಪದಾಧಿಕಾರಿಗಳ ನೇಮಕ,ಪಟ್ಟಿ ಬದಲಾವಣೆ ಮಾಡಿದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿವಿಧ ಘಟಕಗಳಿಗೆ ಎಚ್ಚರಿಕೆ ನೀಡಿದ್ದಾರೆ.

ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಹಿನ್ನಲೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ ವಿರುದ್ಧ ಅಸಮಧಾನ ಸ್ಪೋಟಗೊಂಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಓವರ್ ಟೇಕ್ ಮಾಡಿದ್ದ ಬಾದರ್ಲಿ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಬಸನಗೌಡ ಬಾದರ್ಲಿ ಕಾರ್ಯವೈಖರಿಗೆ ಅಸಮಧಾನ ಆಕ್ರೋಶ ವ್ಯಕ್ತವಾಗಿದೆ.

ಬಾದರ್ಲಿ ನಡವಳಿಕೆಗೆ ಯೂತ್ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಟೋಟಗೊಂಡಿದ್ದು,ಯೂತ್ ಕಾಂಗ್ರೆಸ್ ಅಧ್ಯಕ್ಷನ ಬದಲಾವಣೆಗೆ ಕೈ ಯುವ ನಾಯಕರು ಆಗ್ರಹಿಸಿದ್ದಾರೆ. ಈ ಬಗ್ಗೆ ಯೂತ್ ಕಾಂಗ್ರೆಸ್ ವಾಟ್ಸ್ ಆಫ್ ಗ್ರೂಫ್ ನಲ್ಲಿ ಭಾರೀ ಚರ್ಚೆ ನಡೆದಿದೆ. ನನ್ನನ್ನ ಬದಲಾವಣೆ ಮಾಡುತ್ತಾರೆ ಅನ್ನೋದು ಸುಳ್ಳು ಹಾಗೇನಾದರೂ ಆದಲ್ಲಿ ರಾಜ್ಯದಲ್ಲಿ ಯೂತ್ ಕಾಂಗ್ರೆಸ್ ಮಾರ್ಯಾದೆ ಹಾಳಾಗುತ್ತಿದೆ ನಾವೇಕೆ ಯೂತ್ ಕಾಂಗ್ರೆಸ್ ನಲ್ಲಿ ಕೆಲಸ ಮಾಡಬೇಕು ಎಂದು ಬಾದರ್ಲಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಡಿಕೆ ಶಿವಕುಮಾರ್ ರಂಗಪ್ರವೇಶ ಮಾಡಿದ್ದು,ಬಾದರ್ಲಿಗೆ ಬಿಸಿ ಮುಟ್ಟಿಸಿದ್ದಾರೆ. ಇಂತಹ ನಡವಳಿಕ ಸಹಿಸಲ್ಲ, ಪದಾಧಿಕಾರಿಗಳ ನೇಮಕ ಹೈಕಮಾಂಡ್ ನಿಂದ ಆಗಿರುತ್ತೆ ಹಾಗಾಗಿ ಪಕ್ಷದ ಗಮನಕ್ಕೆ ತಾರದೆ ನೇಮಕ ಮಾಡಿದರೆ ಶಿಸ್ತುಕ್ರಮ ಕೈಗೊಳ್ಳಲಾಗುತ್ತೆ ಅಂತಾ ಎಚ್ಚರಿಕೆ ನೀಡಿ ಅಸಮಧಾನಕ್ಕೆ ಬ್ರೇಕ್ ಹಾಕಿದ್ದಾರೆ.

ರಾಮನಗರ ಲಾಕ್‌ಡೌನ್‌ಗೆ ಮಾಜಿ ಸಿಎಂ ಎಚ್ಡಿಕೆ ಸಲಹೆ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಗೆ ಹೊಂದಿಕೊಂಡಂತೇ ಇರುವ ರಾಮನಗರ ಜಿಲ್ಲೆಯನ್ನೂ ಲಾಕ್‌ಡೌನ್‌ ಮಾಡುವಂತೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಕಂದಾಯ ಸಚಿವ ಆರ್‌.ಅಶೋಕ್‌, ರಾಮನಗರ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಯೊಂದಿಗೆ ಭಾನುವಾರ ಸಮಾಲೋಚನೆ ನಡೆಸಿದ ಎಚ್‌ಡಿಕೆ ಲಾಕ್‌ಡೌನ್‌ನ ಅಗತ್ಯತೆಯನ್ನು ವಿವರಿಸಿದ್ದಾರೆ. ‘ಬೆಂಗಳೂರಿನೊಂದಿಗೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಲಾಕ್‌ಡೌನ್‌ ಮಾಡಲಾಗಿದೆ. ಆದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲೂಕುಗಳಿಗಿಂತಲೂ ಬೆಂಗಳೂರಿಗೆ ಹೆಚ್ಚು ಹತ್ತಿರವಿರುವ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಿಂತಲೂ ಅಧಿಕ ಸೋಂಕಿನ ಪ್ರಕರಣಗಳನ್ನು ಹೊಂದಿರುವ ರಾಮನಗರ ಜಿಲ್ಲೆಯನ್ನು ಲಾಕ್‌ಡೌನ್‌ ಮಾಡಲೇಬೇಕಾದ್ದನ್ನು ಎಚ್‌ಡಿಕೆ ವಿವರಿಸಿದ್ದಾರೆ.