ಬೆಂಗಳೂರು ಲಾಕ್ ಡೌನ್ ಗೆ ಕುಮಾರಸ್ವಾಮಿ ಬೆಂಬಲ

ಬೆಂಗಳೂರು: ಲಾಕ್ ಡೌನ್ ಜಾರಿ ಉತ್ತಮ ನಿರ್ಧಾರವಾಗಿದ್ದು, ಇತರ ಜಿಲ್ಲೆಗಳಲ್ಲೂ ಜಾರಿಗೊಳಿಸಿದರೆ ಬೆಂಬಲಿಸುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಲಾಕ್ ಡೌನ್ ಗೆ ಸಹಮತ ವ್ಯಕ್ತಪಡಿಸಕದ್ದಾರೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಲಾಕ್ ಡೌನ್ ಗೆ ಸರ್ಕಾರ ನಿರ್ಧಾರ ಮಾಡಿರುವ ಬೆನ್ನಲ್ಲೇ ಸರಕು ಸಾಗಣೆ ವಾಹನಗಳನ್ನು ಹೊರತುಪಡಿಸಿ ಅಂತರ್ ಜಿಲ್ಲಾ ಸಂಚಾರವನ್ನು ನಿರ್ಬಂಧಿಸುವಂತೆ ಒತ್ತಾಯಿಸುತ್ತೇನೆ.

ಕರೋನ ವೈರಸ್ ಸಮುದಾಯಕ್ಕೆ ಹಬ್ಬುತ್ತಿರುವ ಹಿನ್ನಲೆಯಲ್ಲಿ ಪರಿಸ್ಥಿತಿಯನ್ನು ಮನಗಂಡು ಇತರೆ ಗಂಭೀರ ಜಿಲ್ಲೆಗಳಲ್ಲಿಯೂ ಲಾಕ್ ಡೌನ್ ಮತ್ತೆ ಜಾರಿಗೊಳಿಸಿದರೆ ಸಾರ್ವಜನಿಕ ಸ್ವಾಸ್ಥ್ಯದ ಹಿತದೃಷ್ಟಿಯಿಂದ ನಾನು ಬೆಂಬಲಿಸುತ್ತೇನೆ ಎಂದು ಟ್ವಿಟರ್ ಮೂಲಕ ಎಚ್ಡಿಕೆ ಅಭಿವೃದ್ಧಿ ವ್ಯಕ್ತಪಡಿಸಿದ್ದಾರೆ

ಕೊರೊನಾ ಉಪಕರಣಗಳ ಖರೀದಿ ಸಂಬಂಧ ರಾಜ್ಯದ ಜನತೆಗೆ ಲೆಕ್ಕ ಕೊಡಿ: ಸಿದ್ದರಾಮಯ್ಯ

ಬೆಂಗಳೂರು : ಕೊರೊನಾ ಉಪಕರಣಗಳ ಖರೀದಿ ಸಂಬಂಧ ರಾಜ್ಯದ ಜನತೆಗೆ ಲೆಕ್ಕ ಕೊಡಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಅವರು ಜನತೆಯ ಪರವಾಗಿ ಆರು ಪ್ರಶ್ನೆಗಳಿಗೆ ಸರ್ಕಾರದಿಂದ ಉತ್ತರ ಬಯಸಿದ್ದಾರೆ.ಈ ಬಗ್ಗೆ ಸಿದ್ದರಾಮಯ್ಯ ಅವರ ಪ್ರಶ್ನೆಗಳ ವಿಡಿಯೋ ಯೂಟ್ಯೂಬ್, ಫೇಸ್‌ಬುಕ್‌, ಟ್ವೀಟರ್ ನಲ್ಲಿ ಅಪಲೋಡ್ ಆಗಿದ್ದು ಲೆಕ್ಕ ಕೊಡಿ ಹೆಸರಿನ ಆಭಿಯಾನ ಆರಂಭವಾಗಿದೆ.

ಲೆಕ್ಕ ಕೇಳುವುದು ರಾಜ್ಯದ ಜನತೆಯ ಹಕ್ಕು, ಉತ್ತರ ಕೊಡುವುದು ಸರ್ಕಾರದ ಕರ್ತವ್ಯ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಪ್ರಶ್ನೆಗಳು ಹೀಗಿವೆ :
# ರಾಜ್ಯದ ಜನ ಕೇಳುತ್ತಿದ್ದಾರೆ ಲೆಕ್ಕ ಕೊಡಿ.
1.ಕೊರೋನ ಸೋಂಕು ಬಂದಾಗಿನಿಂದ ಇದುವರೆಗೆ ರಾಜ್ಯ ಸರ್ಕಾರ ಖರ್ಚು ಮಾಡಿದ ಹಣ ಎಷ್ಟು?
ಕೇಂದ್ರ ಸರ್ಕಾರ ಎಷ್ಟು ನೀಡಿದೆ?

2. ಯಾವ ಯಾವ ಇಲಾಖೆ ಯಾವ ಬಾಬತ್ತಿಗೆ ಎಷ್ಟು ಹಣ ಖರ್ಚು ಮಾಡಿವೆ?

3. ಪಿಪಿಇ ಕಿಟ್, ಟೆಸ್ಟ್ ಕಿಟ್,ಗ್ಲೌಸ್,ಸ್ಯಾನಿಟೈಸರ್,
ಥರ್ಮಲ್ ಸ್ಕ್ಯಾನರ್, ಕಿಯೋಸ್ಕ್ ಮುಂತಾದವುಗಳಿಗೆ ಮಾರುಕಟ್ಟೆ ದರ ಎಷ್ಟು? ನೀವು ಪ್ರತಿಯೊಂದನ್ನು
ಯಾವ ದರಕ್ಕೆ ಖರೀದಿಸಿದ್ದೀರಿ?

4. ಈವರೆಗೆ ಎಷ್ಟು ಫುಡ್ ಕಿಟ್ ಎಷ್ಟು ಫುಡ್ ಪ್ಯಾಕೆಟ್ ಕೊಟ್ಟಿದ್ದೀರಿ? ಯಾರಿಗೆ ಕೊಟ್ಟಿದ್ದೀರಿ?
ಪ್ರತಿಯೊಂದಕ್ಕೆ ಎಷ್ಟು ಹಣ ಖರ್ಚು ಮಾಡಿದ್ದೀರಿ?
ತಾಲ್ಲೂಕುವಾರು. ವಾರ್ಡ್ ವಾರು ಲೆಕ್ಕ ಕೊಡಿ.

5.ವಲಸೆ ಕಾರ್ಮಿಕರಿಗೆ ಪ್ರಯಾಣದ ಸಂದರ್ಭದಲ್ಲಿ ಎಷ್ಟು ಫುಡ್ ಕಿಟ್ ಕೊಟ್ಟಿದ್ದೀರಿ?
ಏನೇನು ಕೊಟ್ಟಿದ್ದೀರಿ?
ಪ್ರತಿ ಕಿಟ್ ಗೆ ಖರ್ಚು ಮಾಡಿದ ಹಣ ಎಷ್ಟು?

5. ಸಂಕಷ್ಟದಲ್ಲಿರುವ ಜನರಿಗೆ ಕೇಂದ್ರ , ರಾಜ್ಯ ಸರ್ಕಾರಗಳು ಘೋಷಿಸಿದ ಪ್ಯಾಕೇಜುಗಳು ಯಾವುವು?
ಇದುವರೆಗೆ ಯಾವ ಯಾವ ವೃತ್ತಿಯವರಿಗೆ, ಯಾವ ಯಾವ ಸಮುದಾಯಕ್ಕೆ ಎಷ್ಟು ಹಣ ಬಿಡುಗಡೆ ಮಾಡಿದ್ದೀರಿ?

6. ಕೊರೋನ‌ ಸಂತ್ರಸ್ತರ ಆರೈಕೆಗೆ ಎಷ್ಟು ಹಣ ಖರ್ಚು ಮಾಡಿದ್ದೀರಿ?

ಈ ಎಲ್ಲದರ ಸಂಪೂರ್ಣ ಲೆಕ್ಕ ಕೊಡಿ ಎಂದು ಸಿದ್ದರಾಮಯ್ಯ ಅವರು ಕೇಳಿದ್ದಾರೆ.

ಹಾಸಿಗೆ ಕೊಡದ ಖಾಸಗಿ ಆಸ್ಪತ್ರೆಗಳ ವಿರುದ್ಧ ನಿರ್ದಾಕಿಣ್ಯ ಕ್ರಮ: ಡಿಸಿಎಂ ಎಚ್ಚರಿಕೆ

ಬೆಂಗಳೂರು: ತಮ್ಮಲ್ಲಿರುವ ಒಟ್ಟು ಹಾಸಿಗೆಗಳ ಪೈಕಿ ಶೇಕಡಾ 50 ರಷ್ಟನ್ನು ಕೋವಿಡ್-19 ಸೋಂಕಿತರಿಗಾಗಿ ಸರಕಾರದ ವಶಕ್ಕೆ ನೀಡದ ಖಾಸಗಿ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ನಗರದ ಕೋವಿಡ್ ಕೇಂದ್ರಗಳ ಉಸ್ತುವಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರನಲ್ಲಿ ಶನಿವಾರ ಪಶ್ಚಿಮ ವಲಯದ ಶಾಸಕರು, ಬಿಬಿಎಂಪಿ ಸದಸ್ಯರು ಮತ್ತು ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆಲ ಖಾಸಗಿ ಆಸ್ಪತ್ರೆಗಳು ಸರಕಾರದ ಸೂಚನೆಗಳನ್ನು ಪಾಲಿಸದಿರುವುದು ಮತ್ತು ಕೋವಿಡ್ ಬಗ್ಗೆ ನಿರ್ಲಕ್ಷ್ಯ ತಾಳಿರುವುದು ಕಂಡು ಬಂದಿದೆ. ಅಂತಹ ಆಸ್ಪತ್ರೆಗಳು ಕಾನೂನು ಕ್ರಮ ಎದುರಿಸುವುದು ಖಚಿತ ಎಂದರು.

ಕೋವಿಡ್ ಹಾಗೂ ಕೋವಿಡ್ ಹೊರತಾದ ರೋಗಿಗಳಿಗೆ ಸಮಾನ ಮಹತ್ವ ಕೊಟ್ಟು ಚಿಕಿತ್ಸೆ ನೀಡಬೇಕು. ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಿಸಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಈ ಕೂಡಲೇ ಅವರು ಎಚ್ಚಿತ್ತುಕೊಳ್ಳದಿದ್ದರೆ ಅಂತಹ ಆಸ್ಪತ್ರೆಗಳ ವಿರುದ್ಧ ಮುಲಾಜಿಲ್ಲದೆ ಕಾನೂನು ವ್ಯಾಪ್ತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೋವಿಡ್ ಅನಿರೀಕ್ಷಿತವಾಗಿ ರಾಜ್ಯದ ಮೇಲರಗಿದ ಸಾಂಕ್ರಾಮಿಕ ಪೀಡೆ. ಇದನ್ನು ಯುದ್ಧೋಪಾದಿಯಲ್ಲಿ ಎದುರಿಸಲು ಪ್ರತಿಯೊಬ್ಬರು ಸರಕಾರದ ಜತೆ ಕೈಜೋಡಿಸಬೇಕು. ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ಸರಿಯಲ್ಲ ಎಂದ ಅವರು, ಜನರಿಗಿಂತ ಯಾರೂ ಹೆಚ್ಚಲ್ಲ ಎಂಬ ಸಂಗತಿಯನ್ನು ಮರೆಯಬಾರದು. ಎಲ್ಲರೂ ಯೋಧರಂತೆ ಕೆಲಸ ಮಾಡಬೇಕು ಎಂದು ಖಾಸಗಿ ಆಸ್ಪತ್ರೆಗಳ ಮಾಲೀಕರಿಗೆ ಕಿವಿಮಾತು ಹೇಳಿದರು.

ಪಶ್ಚಿಮದಲ್ಲಿ ಕಾಲ್ ಸೆಂಟರ್:
ಪಶ್ಚಿಮ ವಿಭಾಗದಲ್ಲಿ ಕೋವಿಡ್ ಬಗ್ಗೆ ಸಮಗ್ರ ಮಾಹಿತಿಯನ್ನು ಕೊಡುವ ಹಾಗೂ ಆಸ್ಪತ್ರೆ, ಕೋವಿಡ್ ಕೇರ್ ಕೇಂದ್ರಗಳು, ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಹಾಗೂ ಸಾರ್ವಜನಿಕರ ನಡುವೆ ನೇರ ಸಂಪರ್ಕ ಸೇತುವೆಯಾಗಿ ದಿನದ 24 ಗಂಟೆ ಕೆಲಸ ಮಾಡುವ ಕಾಲ್ ಸೆಂಟರ್ ಒಂದನ್ನು ತೆರೆಯಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಮಾಹಿತಿ ನೀಡಿದರು.

ಇದರಿಂದ ಈ ವಿಭಾಗದ ಎಲ್ಲ ಮಾಹಿತಿ ಅಂಗೈನಲ್ಲೇ ಇರುತ್ತದೆ. ಸೋಂಕಿತರ ಪರೀಕ್ಷೆ, ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡುವುದು, ಕ್ವಾರಂಟೈನ್, ಹೋಮ್ ಕೇರ್ ಸೇರಿ ಎಲ್ಲ ಸಂಗತಿಗಳ ಬಗ್ಗೆ ಇಲ್ಲಿ ಮಾಹಿತಿ ಲಭ್ಯವಾಗುತ್ತದೆ ಎಂದರು ಅವರು.

ಲಾಕ್ ಡೌನ್ ಬಗ್ಗೆ ಚರ್ಚೆ ಇಲ್ಲ:
ಈ ಸಭೆಯಲ್ಲಿ ಲಾಕ್ ಡೌನ್ ಬಗ್ಗೆ ಯಾವುದೇ ಚರ್ಚೆ ನಡೆಯಲಿಲ್ಲ. ಬದಲಿಗೆ ಇರುವ ವ್ಯವಸ್ಥೆಯನ್ನೇ ಮತ್ತಷ್ಟು ಉತ್ತಮಪಡಿಸುವುದು, ಜನರಿಗೆ ಹೆಚ್ಚು ಅನುಕೂಲ ಮಾಡಿಕೊಡುವುದು ಹೇಗೆ ಎಂಬ ಬಗ್ಗೆ ಮಾತುಕತೆ ನಡೆಯಿತು. ಆ ಬಗ್ಗೆ ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವ ಕೆ. ಗೋಪಾಲಯ್ಯ ಸೇರಿದಂತೆ ಎಲ್ಲ ಶಾಸಕರು ಮತ್ತು ಪಾಲಿಕೆ ಸದಸ್ಯರು ಸಲಹೆಗಳನ್ನು ನೀಡಿದರು. ವೀಕೆಂಡ್ ಲಾಕ್ ಡೌನ್ ಬಗ್ಗೆಯೂ ಚರ್ಚೆ ಆಗಲಿಲ್ಲ. ಈಗಲೂ ಶನಿವಾರ ಸಂಜೆಯಿಂದ ಸೋಮವಾರ ಮುಂಜಾನೆವರೆಗೆ ಕರ್ಫ್ಯೂ ಜಾರಿಯಲ್ಲಿದೆ. ಜತೆಗೆ, ಭಾನುವಾರ ಕಂಪ್ಲೀಟ್ ಲಾಕ್ ಡೌನ್ ಇದೆ. ಮುಂದಿನ ದಿನಗಳ ಸ್ಥಿತಿಗತಿ ಹಾಗೂ ಸೋಂಕಿತರ ಪ್ರಮಾಣ ನೋಡಿಕೊಂಡು ಆ ಬಗ್ಗೆ ಮುಖ್ಯಮಂತ್ರಿಗಳೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಸೋಂಕು ನಿವಾರಣೆಗೆ ಲಾಕ್ ಡೌನ್ ಉತ್ತಮ ಪರಿಹಾರ ಎನ್ನುವುದರಲ್ಲಿ ಅನುಮಾನ ಇಲ್ಲ. ಆದರೆ ತದನಂತರದ ಸವಾಲುಗಳು ಜಾಸ್ತಿ. ಜೀವದ ಜತೆಗೆ ಜೀವನೋಪಾಯವೂ ಮುಖ್ಯ. ಸದ್ಯಕ್ಕೆ ವೈರಸ್ ತೀವ್ರತೆ ಕಡಿಮೆಯಾಗಿದೆ. ಅದನ್ನು ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು

ಸ್ಥಳೀಯ ಆಸ್ಪತ್ರೆಗಳ ಬಳಕೆ:
ಹಾಸಿಗೆಳ ಕೊರತೆ ಉಂಟಾದರೆ ಸ್ಥಳೀಯವಾಗಿ ಇರುವ ಸಣ್ಣಪುಟ್ಟ ಆಸ್ಪತ್ರೆಗಳ ಹಾಸಿಗೆಗಳನ್ನು ಸರಕಾರದ ವಶಕ್ಕೆ ಪಡೆಯಬಾರದೇಕೆ ಎಂದು ಗೋಪಾಲಯ್ಯ ಅವರು ಸಲಹೆ ನೀಡಿದರು. ಒಂದು ವಾರ ಪರಿಸ್ಥಿತಿಯನ್ನು ನೋಡಿಕೊಂಡು ಆ ಬಗ್ಗೆ ತೀರ್ಮಾನ ಮಾಡುತ್ತೇವೆ. ಇದರ ಜತೆಗೆ, ಈ ವಿಭಾಗದಲ್ಲಿ ದಿನವಹಿ ನಡೆಸುವ ಪರೀಕ್ಷೆಗಳ ಪ್ರಮಾಣವನ್ನು ಹೆಚ್ಚಿಸಿ ಆದಷ್ಟು ಬೇಗ ರಿಸಲ್ಟ್ ಸಿಗುವಂತೆ ನೋಡಿಕೊಳ್ಳಲಾಗುವುದು. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಟ್ರೂನ್ಯಾಟ್ ಯಂತ್ರಗಳನ್ನು ಅಳವಡಿಸಿ, ಸ್ಯಾಂಪಲ್ ಪಡೆದ ಅರ್ಧ ಗಂಟೆಯೊಳಗೆ ವರದಿ ಸಿಗುವಂತೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ವೈದ್ಯರ ಕೊರತೆ ನಿವಾರಣೆಗೆ ಕ್ರಮ:
ನಗರದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ನರ್ಸುಗಳು ಹಾಗೂ ವೈದ್ಯಕೀಯ ಸಹಾಯಕ ಸಿಬ್ಬಂದಿ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಸರಕಾರ ಸಿಬ್ಬಂದಿ ಕೊರತೆ ಇದ್ದ ಕಡೆ ಖಾಸಗಿ ಆಸ್ಪತ್ರೆಯ ವೈದ್ಯರು, ನರ್ಸುಗಳು ಮತ್ತಿತರೆ ಸಿಬ್ಬಂದಿಯನ್ನು ಎರವಲು ಪಡೆಯಲಾಗುತ್ತಿದೆ. ಈಗಾಗಲೇ ಸರಕಾರಿ, ಖಾಸಗಿ ವೈದ್ಯಕೀಯ ಕಾಲೇಜುಗಳ ನೆರವು ಕೋರಲಾಗಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರಲ್ಲದೆ, ಮೃತದೇಹಗಳ ವೈಜ್ಞಾನಿಕ ಮತ್ತು ಸುರಕ್ಷಿತ ವಿಲೇವಾರಿಗೆ ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಮೃತರ ಕುಟುಂಬಕ್ಕೆ ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು.

ಅಭಿವೃದ್ಧಿ ಹಣ ಬಳಕೆ ಅವಕಾಶ:
ಕೋವಿಡ್ ಹಿನ್ನಲೆಯಲ್ಲಿ ಎಲ್ಲೂ ಹಣಕಾಸು ಕೊರತೆ ಆಗದಂತೆ ಎಚ್ಚರ ವಹಿಸಲಾಗಿದೆ. ಅಕಸ್ಮಾತ್ ಕೊರತೆ ಉಂಟಾದರೆ ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಾದ ಹಣವನ್ನು ಬಳಸುವಂತೆ ಎಲ್ಲ ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜನರಿಗೆ ಅಗತ್ಯವಾದ ಎಲ್ಲ ವ್ಯವಸ್ಥೆಗಳನ್ನು ಸರಕಾರ ಮಾಡುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ನಾನ್ ಕೋವಿಡ್ ರೋಗಿಗಳಿಗೆ ಚಿಕಿತ್ಸೆ:
ಇದೇ ವೇಳೇ ಕೋವಿಡ್ ರಹಿತ ರೋಗಿಗಳಿಗೆ ಆದ್ಯತೆಯ ಮೇರೆಗೆ ಚಿಕಿತ್ಸೆ ನೀಡಬೇಕೆಂದು ಎಲ್ಲ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ. ಪ್ರತಿ ಉಪ ವಿಭಾಗದಲ್ಲಿಯೂ ಬಿಬಿಎಂಪಿ ಆಸ್ಪತ್ರೆಗಳು ಹಾಗೂ ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದರ ಜತೆಗೆ ಎಲ್ಲ ವಾರ್ಡುಗಳಲ್ಲಿ ಫೀವರ್ ಕ್ಲಿನಿಕ್‌ ಗಳಿಗೆ ಪರ್ಯಾಯವಾಗಿ ತುರ್ತು ಕ್ಲಿನಿಕ್‌ ಗಳನ್ನು ತೆರೆಯಲಾಗುತ್ತಿದೆ ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.

ಸಚಿವ ಗೋಪಾಲಯ್ಯ, ಶಾಸಕ ಜಮೀರ್‌ ಅಹಮದ್‌, ಐಎಎಸ್ ಅಧಿಕಾರಿ ಹಾಗೂ ಪಶ್ಚಿಮ ವಲಯದ ಕೋವಿಡ್ ಉಸ್ತುವಾರಿ ಉಜ್ವಲ್ ಕುಮಾರ್ ಘೋಷ್, ಪಾಲಿಕೆಯ ವಿಶೇಷ ಆಯುಕ್ತ ಬಸವರಾಜು, ಜಂಟಿ ಆಯುಕ್ತ ಚಿದಾನಂದ ಮುಂತಾದವರು ಸಭೆಯಲ್ಲಿ ಹಾಜರಿದ್ದರು.

ರಾಜ್ಯದಲ್ಲಿ ಒಂದೇ ದಿನ 20,288 RTPCR ಪರೀಕ್ಷೆ:ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು – ಜುಲೈ 11, 2020: ವಾರಾಂತ್ಯದೊಳಗೆ 20 ಸಾವಿರ ಕೋವಿಡ್ ಪರೀಕ್ಷೆ ನಡೆಸುವ ಗುರಿ ಹೊಂದಿದ್ದ ರಾಜ್ಯದಲ್ಲಿ ಶನಿವಾರದಂದು 20,288 RTPCR ಪರೀಕ್ಷೆಗಳನ್ನು ನಡೆಸಲಾಗಿದ್ದು 2,798 ಪ್ರಕರಣಗಳು ಧೃಢಪಟ್ಟಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ನಗರದಲ್ಲಿಂದು ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಿನ ಪ್ರಮಾಣ ಇಂದಿಗೂ ಕೂಡ ರಾಜ್ಯದಲ್ಲಿ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದ್ದು 1.69% ರಷ್ಟಿದೆ. ಮರಣಪ್ರಮಾಣ ಕಡಿಮೆ ಮಾಡುವಲ್ಲಿ ಕರ್ನಾಟಕ ಉತ್ತಮ ಯಶಸ್ಸು ಸಾಧಿಸಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೋವಿಡ್ ನೋಡಲ್ ಅಧಿಕಾರಿ ಡಾ.ಶಶಿಭೂಷಣ್ ಉಪಸ್ಥಿತರಿದ್ದರು

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇಂದು 1 ಲಕ್ಷ ಆಂಟಿಜೆನ್ ಟೆಸ್ಟ್ ಮಾಡಲಾಗಿದ್ದು, ನಾಳೆಯೇ ಇದರ ಫಲಿತಾಂಶ ಸಿಗಲಿದೆ ಎಂದು ಸಚಿವರು ಈ ಸಂದರ್ಭದಲ್ಲಿ ಹೇಳಿದರು. ಲಾಕ್ಡೌನ್ ಕುರಿತಾದ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರಿನಲ್ಲಿ ಲಾಕ್ಡೌನ್ ಮಾಡುವ ಕುರಿತಂತೆ 8 ವಲಯಗಳ ಉಸ್ತುವಾರಿ ಸಚಿವರು ಮಾನ್ಯ ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿಯವರು ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಹೇಳಿದರು.

3 C ಗಳಿಂದ ದೂರವಿರಿ, 3 W ಗಳನ್ನು ಪಾಲಿಸಿ

ಕೊರೋನ ಮಣಿಸಲು 3 C ಗಳಾದ (Closed Spaces, Close Contacts and Crowds) ಗಾಳಿಯಾಡದ ಪ್ರದೇಶ, ಹತ್ತಿರದ ಸಂಪರ್ಕ, ಗುಂಪುಗೂಡುವುದು ಇವುಗಳಿಂದ ದೂರವಿದ್ದು, 3 W (Watch your distance, Wear Masks, Wash your hands) ಗಳಾದ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಮತ್ತು ಆಗಾಗ
ಕೈತೊಳೆಯುತ್ತಿರುವುದು ಇವುಗಳನ್ನು ಕಡ್ಡಾಯವಾಗಿ ಪಾಲಿಸುವುದರಿಂದ ಕೊರೋನ ಗೆಲ್ಲಬಹುದು ಎಂದು ಸಚಿವ ಸುಧಾಕರ್ ಅಭಿಪ್ರಾಯಪಟ್ಟರು.

ಕೊರೋನ ವಿರುದ್ಧದ ಹೋರಾಟದಲ್ಲಿ ಅಳಿಲು ಸೇವೆ

ಪ್ರತಿದಿನ ನೀತಿಯುಕ್ತ ಮಾಹಿತಿಗಳಿಂದ ಜನರಿಗೆ ಅರಿವು ಮೂಡಿಸಲು ಯತ್ನಿಸುತ್ತಿರುವ ಸಚಿವ ಸುಧಾಕರ್ ಅವರು ರಾಮಾಯಣದಲ್ಲಿ ರಾಮಸೇತುವೆ ನಿರ್ಮಿಸಲು ಅಳಿಲುಸೇವೆಯ ಮಹತ್ವವನ್ನು ವಿವರಿಸಿದರು. ಸೇವೆಯ ಮನಸ್ಥಿತಿ ಇರಬೇಕು, ಗಾತ್ರ ಮುಖ್ಯವಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಅದೇರೀತಿ ಕೊರೋನ ವಿರುದ್ಧದ ಸಮರದಲ್ಲಿ ನಮ್ಮ ಕೈಲಾಗುವ ನೆರವನ್ನು ಮಾಡಬೇಕು. ಚಿಕ್ಕ ಕೆಲಸ, ಅಲ್ಪ ಕಾಣಿಕೆ ಎಂಬ ಮನೋಭಾವ ಇರಬಾರದು. ಹಿಂಜರಿಕೆ ತೊರೆದು ನಮ್ಮ ಕೈಲಾದ ಸಹಾಯವನ್ನು ಮಾಡಲು ಮುಂದಾಗಬೇಕು ಎಂದು ಹೇಳಿದರು.

ಕೊರೋನ ನಿಯಂತ್ರಣಕ್ಕಾಗಿ ಸರ್ಕಾರ ಬೂತ್ ಮಟ್ಟದ ಸಮಿತಿಗಳನ್ನು ರಚಿಸಿ ಆದರಲ್ಲಿ ಧಾರ್ಮಿಕ, ಸಾಮಾಜಿಕ ಸಂಘ ಸಂಸ್ಥೆಗಳು, RSS, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಸ್ಕೌಟ್ಸ್ ಅಂಡ್ ಗೈಡ್ಸ್ ಮುಂತಾದ ಸಂಘಟನೆಗಳ ಸಹಕಾರ ಅಗತ್ಯವಿದೆ. ಕೋವಿಡ್ ಕೇರ್ ಸೆಂಟರ್ ಗಳಿಗೆ ಮತ್ತು ಆಸ್ಪತ್ರೆಗಳಿಗೆ ತಲುಪಿಸಲು ಸಹಾಯ ಮಾಡುವುದು, ಹಿರಿಯ ನಾಗರೀಕರು ಒಂಟಿಯಾಗಿದ್ದರೆ ಅವರಿಗೆ ದಿನನಿತ್ಯದ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಿವುದು
ಹೋಮ್ ಐಸೋಲೇಷನ್ ಕುರಿತು ಮನೆಯ ಸದಸ್ಯರಿಗೆ ಮತ್ತು ನೆರೆಹೊರೆಯವರಿಗೆ ಅರಿವು ಮೂಡಿಸುವುದು, ಮುಂಜಾಗ್ರತೆಗಳ ಬಗ್ಗೆ ತಿಳಿಸುವುದು, ಅವರಲ್ಲಿರುವ ಭಯ, ಆತಂಕ ಮತ್ತು ಸೋಂಕಿತರ ಮೇಲಿರುವ ಕಳಂಕ ಭಾವ ನಿವಾರಿಸುವುದು ಹೀಗೆ ಹಲವಾರು ರೀತಿಯಲ್ಲಿ ಸಮಾಜದ ನೆರವು ಸಹಕಾರ ಅಗತ್ಯವಿದೆ. ಆದ್ದರಿಂದ ನಿಮ್ಮೆಲ್ಲರ ಸಹಕಾರ ಕೋರುತ್ತೇನೆ ಎಂದು ಸಚಿವರು ಹೇಳಿದರು.

ಚಿಕ್ಕಬಳ್ಳಾಪುರದಲ್ಲಿ ಅತ್ಯಾಧುನಿಕ, ದೇಶದಲ್ಲೇ ಮೊದಲ ಲೆವೆಲ್ -2 ಜೈವಿಕ ಸುರಕ್ಷತೆಯ ಆರ‍್ಟಿ‍ಪಿಸಿ‍ಆರ್ ಲ್ಯಾಬ್ ಉದ್ಘಾಟನೆ

ಚಿಕ್ಕಬಳ್ಳಾಪುರ – ಜುಲೈ, 11, 2020: ಚಿಕ್ಕಬಳ್ಳಾಪುರದ 29 ಪೌರಕಾರ್ಮಿಕರುಗಳಿಗೆ ಉಚಿತ ನಿವೇಶನಗಳ ಹಕ್ಕುಪತ್ರಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸುಧಾಕರ್ ಶನಿವಾರದಂದು ವಿತರಿಸಿದ್ದಾರೆ. ನಗರದಲ್ಲಿ ಶನಿವಾರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಸಚಿವರು, ಕಂದವಾರ ಬಳಿ ಇರುವ ಬಸಪ್ಪನ ಛತ್ರ ನಿರಾಶ್ರಿತರ ಜಾಗದಲ್ಲಿ 20X30 ಅಳತೆಯ ನಿವೇಶನಗಳನ್ನು 29 ಜನ ಪೌರಕಾರ್ಮಿಕರಿಗೆ ವಿತರಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವರೂ ಆಗಿರುವ ಡಾ.ಸುಧಾಕರ್ ಅವರು ಚಿಕ್ಕಬಳ್ಳಾಪುರದಲ್ಲಿ ಅತ್ಯಾಧುನಿಕ ಹಾಗೂ ದೇಶದಲ್ಲೇ ಪ್ರಥಮ ಎನ್ನುಉವ ಹೆಗ್ಗಳಿಕೆಯ ಲೆವೆಲ್-2 ಬಯೋಸೇಫ್ಟಿ ಹೊಂದಿರುವ ಆರ್ಟಿಪಿಸಿಆರ್ ಲ್ಯಾಬ್ ಉದ್ಘಾಟನೆ ಮಾಡಿದರು. ISO 8 ವರ್ಗೀಕರಣ ಹೊಂದಿರುವ ಈ ಲ್ಯಾಬ್ ಊಷ್ಣತೆ ನಿಯಂತ್ರಿತ ಹಾಗೂ ಸ್ವಚ್ಛ ಹವೆಯ ಲ್ಯಾಬ್ ಆಗಿದೆ. ಬಯೋ ಮೆಡಿಕಲ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಈ ಪ್ರಯೋಗಾಲಯ ಹೊಂದಿರುತ್ತದೆ. ಇದರಿಂದಾಗಿ ಜಿಲ್ಲೆಯ ಎಲ್ಲಾ ಕೋವಿಡ್ ಪರೀಕ್ಷೆಗಳನ್ನು ಇನ್ನು ಮುಂದೆ ಇಲ್ಲಿಯೇ ನಡೆಸಬಹುದಾಗಿದೆ ಎಂದು ಹೇಳಿದರು,

ಸಚಿವ ಸುಧಾಕರ್ ಅವರು ಜಿಲ್ಲಾ ಖನಿಜ ಪ್ರತಿಷ್ಠಾನ ಕೋಶ ಅನುದಾನದ ಅಡಿಯಲ್ಲಿ ನೇರ ಹಾಗೂ ಪರೋಕ್ಷ ಗಣಿಬಾದಿತ ಪ್ರದೇಶದ 12 ಜನ ಫಲಾನುಭವಿಗಳಿಗೆ ಇ-ರಿಕ್ಷಾ ವಾಹನ ವಿತರಿಸಿದರು. 18.63 ಲಕ್ಷ ರೂ.ವೆಚ್ಚದ ಈ ವಾಹನಗಳು ಪರಿಸರಸ್ನೇಹಿಯಾಗಿದ್ದು ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಲಾಯಿತು. ಬ್ಯಾಟರಿ ಚಾಲಿತ ಈ ರಿಕ್ಷಾಗಳು 75 ಕಿಮೀ ವರೆಗೆ ಸಾಗಬಲ್ಲವು. 18.83 ಲಕ್ಷ ಮೊತ್ತದ ಈ ಯೋಜನೆಯಲ್ಲಿ ಫಲಾನುಭವಿಗಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗಲಿವೆ ಎಂದು ಸಚಿವರು ಹೇಳಿದರು.

ಇತರೆ ಕಾರ್ಯಕ್ರಮಗಳಲ್ಲಿ ಭಗವಹಿಸಿದ್ದ ಸಚಿವರು, ಎಸ್ಡಿಐಎಂಟಿ ಬಡಾವಣೆಯಲ್ಲಿ ಹಾಗೂ ಮುನ್ಸಿಪಲ್ ಬಡಾವಣೆಯಲ್ಲಿ ನಿರ್ಮಿಸಲಾಗಿರುವ ಪಾರ್ಕ್‌ಗಳ ಉದ್ಘಾಟನೆ ಮಾಡಿದರು. ಕಂದವಾರ ವಾರ್ಡಿನ 140 ಎಸ್‍ಸಿ/ಎಸ್ಟಿ ವಿದ್ಯಾರ್ಥಿಗಳಿಗೆ 8.47 ಲಕ್ಷ ಮೊತ್ತದ ವಿದ್ಯಾರ್ಥಿವೇತನ ವಿತರಿಸಿದರು. SSLC ಹಾಗೂ PUC ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ಇದರಿಂದ ಪ್ರಯೋಜನ ಆಗಲಿದೆ ಎಂದು ಸಚಿವರು ಹೇಳಿದರು. ಹಲವಾರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಜುಲೈ 14 ರಿಂದ ಒಂದು ವಾರ ಬೆಂಗಳೂರು ಲಾಕ್ ಡೌನ್

ಬೆಂಗಳೂರು: ಹೆಚ್ಚುತ್ತಿರುವ ಕೋವಿಡ್-19 ತಡೆಗೆ ಲಾಕ್ ಡೌನ್ ಮಾಡುವಂತೆ ತಜ್ಞರ ಸಮಿತಿ ಶಿಫಾರಸ್ಸಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಪ್ಪಿಗೆ ಸೂಚಿಸಿದ್ದು ಜುಲೈ 14 ರಿಂದ 22 ರವರೆಗೆ ಬೆಂಗಳೂರಿನಲ್ಲಿ ಲಾಕ್ ಡೌನ್ ಜಾರಿಗೊಳಿಸಿ ಆದೇಶಿಸಿದ್ದಾರೆ.

ರಾಜ್ಯದಲ್ಲಿ ದಿನೇ ದಿನೇ ಭಾರಿ ಸಂಖ್ಯೆಯಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ತಜ್ಞರ ಸಲಹೆ ಮೇರೆಗೆ ದಿನಾಂಕ: 14.07.2020ರ ಮಂಗಳವಾರ ರಾತ್ರಿ 8.00 ಗಂಟೆಯಿಂದ 1 ವಾರಗಳ ಕಾಲ ಅಂದರೆ ದಿನಾಂಕ: 22.07.2020 ರ ಬೆಳಿಗ್ಗೆ 5.00 ಗಂಟೆಯವರೆಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಲಾಗುವುದು.

ಈ ಅವಧಿಯಲ್ಲಿ ಎಂದಿನಂತೆ ಆಸ್ಪತ್ರೆಗಳು, ದಿನಸಿ, ಹಾಲು, ಹಣ್ಣು, ತರಕಾರಿ, ಔಷದಿ ಮೊದಲಾದ ದಿನಬಳಕೆಯ ಅಗತ್ಯ ವಸ್ತುಗಳು ಲಭ್ಯವಿರುತ್ತವೆ. ಇದರ ಜೊತೆ ಈಗಾಗಲೇ ನಿಗದಿಯಾಗಿರುವ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ನಡೆಯಲಿವೆ.

ದಿನಬಳಕೆ ವಸ್ತುಗಳ ಖರೀದಿಗೆ ತೆರಳುವಾಗ ಸಾಮಾಜಿಕ ಅಂತರ ಪಾಲಿಸಿ, ಮಾಸ್ಕ್ ಧರಿಸಿ, ಸರ್ಕಾರ ಹೊರಡಿಸುವ ಲಾಕ್ ಡೌನ್ ಸಂಬಂಧಿತ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿ ಸಹಕರಿಸಿ. ತಾವು ಲಾಕ್‍ಡೌನ್ ಸಂಧರ್ಬದಲ್ಲಿ ಮನೆಯಲ್ಲೇ ಇರುವ ಮೂಲಕ ಕೋವಿಡ್-19ರ ನಿಯಂತ್ರಣಕ್ಕೆ ಕೈ ಜೋಡಿಸಿ.

ಕೋವಿಡ್-19 ಸೋಂಕು ಹರಡುವುದನ್ನು ನಿಯಂತ್ರಿಸಲು ಹಗಲಿರಳು ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಮತ್ತು ಪೋಲಿಸ್ ಸಿಬ್ಬಂದಿಗಳು ಹಾಗೂ ಎಲ್ಲಾ ಅಧಿಕಾರಿಗಳು, ಸ್ವಯಂ ಸೇವಕರು ಮನೆ ಮನೆಗೂ ಕೋವಿಡ್-19 ಕುರಿತು ಮಾಹಿತಿ ನೀಡುತ್ತಿರುವ ಪತ್ರಕರ್ತರು ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲರಿಗೂ ನಾನು ಇನ್ನೊಮ್ಮೆ ಅಭಿನಂದನೆ ಸಲ್ಲಿಸುತ್ತೇನೆ.

ಕೋವಿಡ್-19ಸೋಂಕು ಹರಡುವುದನ್ನು ನಿಯಂತ್ರಿಸಲು ನಿಮ್ಮ ಸಹಯೋಗ ಅತಿ ಅಗತ್ಯ ಎಂದು ಸಿಎಂ ಮನವಿ ಮಾಡಿದ್ದಾರೆ.