ಅಂತಿಮ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಪರೀಕ್ಷೆ ಇಲ್ಲದೆ ಮಧ್ಯಂತರ ಸೆಮಿಸ್ಟರ್‌ ವಿದ್ಯಾರ್ಥಿಗಳು ಪಾಸ್‌

ಮುಖ್ಯಾಂಶಗಳು
* ಪದವಿ, ಸ್ನಾತಕೋತ್ತರ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಈ ಅವಕಾಶ
‍* 2019-20ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯ
* ವಿದ್ಯಾರ್ಥಿಗಳ ಶೈಕ್ಷಣಿಕ ಕ್ಷಮತೆ ಆಧರಿಸಿ ತೇರ್ಗಡೆ
* ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್‌ನಲ್ಲಿ ಪರೀಕ್ಷೆ

ಬೆಂಗಳೂರು: ಮಾರಕ ಕೋವಿಡ್- 19 ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಕೊಂಡಿರುವ ರಾಜ್ಯ ಸರಕಾರವು, 2019-20ನೇ ಸಾಲಿನಲ್ಲಿ ಎಂಜಿನಿಯರಿಂಗ್ ಸೇರಿ ಇತರ ಪದವಿ, ಸ್ನಾತಕೋತ್ತರ, ಡಿಪ್ಲೊಮಾ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಧ್ಯಂತರ ಸೆಮಿಸ್ಟರ್ (intermediate Semester) ವಿದ್ಯಾರ್ಥಿಗಳನ್ನು ಅಂತಿಮ ಪರೀಕ್ಷೆ ಇಲ್ಲದೆಯೇ ಮುಂದಿನ ಹಂತಕ್ಕೆ ಉತ್ತೀರ್ಣಗೊಳಿಸುವುದಾಗಿ ಪ್ರಕಟಿಸಿದೆ. ಜತೆಗೆ, ಪ್ರಸಕ್ತ ಶೈಕ್ಷಣಿಕ ವರ್ಷದ ಅಂತಿಮ ಸೆಮಿಸ್ಟರ್‌ ಅಥವಾ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಯುಜಿಸಿ ಮಾರ್ಗಸೂಚಿ ಅನ್ವಯ ಸೆಪ್ಟೆಂಬರ್ ಅಂತ್ಯದೊಳಗೆ ಪರೀಕ್ಷೆ ನಡೆಸಲೂ ನಿರ್ಧರಿಸಿದೆ.

ವಿದ್ಯಾರ್ಥಿಗಳ ಆರೋಗ್ಯ ಮತ್ತು ಭವಿಷ್ಯವನ್ನು ಗಣನೆಗೆ ತೆಗೆದುಕೊಂಡು ಶಿಕ್ಷಣ ತಜ್ಞರು, ವಿವಿಗಳ ಕುಲಪತಿಗಳ ಜತೆ ನಿರಂತರ ಸಮಾಲೋಚನೆ ನಡೆಸಿದ ನಂತರ ಈ ಮಹತ್ವದ ನಿರ್ಧಾರ ಕೈಕೊಳ್ಳಲಾಗಿದೆ. ತೀರ್ಮಾನವನ್ನು ಕೈಗೊಳ್ಳುವ ಮುನ್ನ ಯುಜಿಸಿ ಮಾಡಿರುವ ಶಿಫಾರಸುಗಳು ಹಾಗೂ ಅದರ ನಿಯಮಾವಳಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಈ ನಿರ್ಧಾರ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ (2019-20) ಮಾತ್ರ ಸೀಮಿತವಾಗಿರುತ್ತದೆ. ಸರಕಾರದ ಈ ನಿರ್ಧಾರಕ್ಕೆ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ವಜೂಭಾಯಿ ವಾಲ ಅವರು ಹಸಿರು ನಿಶಾನೆ ತೋರಿಸಿದ್ದಾರೆ ಎಂದು ಉನ್ನತ ಶಿಕ್ಷಣ ಖಾತೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕೋವಿಡ್ ಇಡೀ ಶೈಕ್ಷಣಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ. ಸಕಾಲಕ್ಕೆ ತರಗತಿಗಳು ನಡೆಸಲು ಸಾಧ್ಯವಾಗಲಿಲ್ಲ. ಲಾಕ್‌ಡೌನ್‌ ಸಂದರ್ಭದಲ್ಲಿ ಆನ್‌ಲೈನ್‌ ಮೂಲಕ ಶಿಕ್ಷಣ ನೀಡಿದ್ದು, ಒಳ್ಳೆಯ ಪ್ರತಿಕ್ರಿಯೆ ಕೂಡ ಬಂದಿದೆ. ಸಾಧ್ಯವಾದಷ್ಟು ಎಲ್ಲರನ್ನೂ ತಲುಪಲು ಪ್ರಾಮಾಣಿಕ ಪ್ರಯತ್ನ ನಡೆಸಲಾಯಿತು. ಇದರ ನಡುವೆ ಕೆಲವು ದಿನಗಳು ತರಗತಿಗಳನ್ನು ನಡೆಸಿ, ಪರೀಕ್ಷೆ ಮಾಡುವ ಚಿಂತನೆಯೂ ಇತ್ತು. ಆದರೆ, ಕೋವಿಡ್‌ ವ್ಯಾಪಕವಾಗಿ ಹಬ್ಬುತ್ತಿರುವ ಕಾರಣಕ್ಕೆ ಅವೆಲ್ಲವನ್ನೂ ಕೈಬಿಟ್ಟು ಮಧ್ಯಂತರ ಸೆಮಿಸ್ಟರ್‌/ವರ್ಷದ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲು ನಿರ್ಧರಿಸಲಾಯಿತು. ಅಂತಿಮ ವರ್ಷ/ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ, ಸೆಪ್ಟೆಂಬರ್‌ ತಿಂಗಳ ಅಂತ್ಯದೊಳಗೆ ಪರೀಕ್ಷೆಗಳನ್ನು (ಆನ್‌ಲೈನ್‌/ಆಪ್‌ಲೈನ್‌) ನಡೆಸಲು ಆಯಾ ವಿಶ್ವವಿದ್ಯಾಲಯಗಳಿಗೇ ಸೂಚಿಸಲಾಗಿದೆ ಎಂದು ಅವರು ವಿವರಿಸಿದರು.

ತೇರ್ಗಡೆ ಮಾಡುವುದು ಹೇಗೆ?:
ಮಧ್ಯಂತರ ಸೆಮಿಸ್ಟರ್‌/ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಆಂತರಿಕ ಮೌಲ್ಯಮಾಪನ (internal marks) ಮತ್ತು ಹಿಂದಿನ ಸೆಮಿಸ್ಟರ್‌/ವರ್ಷದ ಅಂಕಗಳ (50:50) ಸಮಗ್ರ ಮೌಲ್ಯಮಾಪನದ (comprehensive evaluation) ಆಧಾರದ ಮೇಲೆ ತೇರ್ಗಡೆ ಮಾಡಲಾಗುತ್ತದೆ. ಹಿಂದಿನ ವರ್ಷದ ಅಂಕಗಳು ಇಲ್ಲದ ವಿದ್ಯಾರ್ಥಿಗಳನ್ನು (ಉದಾ: ಮೊದಲ ಸೆಮಿಸ್ಟರ್‌ ವಿದ್ಯಾರ್ಥಿಗಳು) ಪೂರ್ಣ ಅಂತರಿಕ ಮೌಲ್ಯಮಾಪನದ ಮೂಲಕವೇ ಉತ್ತೀರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಇದರ ನಡುವೆಯೂ ತಮ್ಮ ಅಂಕಗಳನ್ನು ಉತ್ತಮಗೊಳಿಸಿಕೊಳ್ಳಬೇಕೆನ್ನುವ ವಿದ್ಯಾರ್ಥಿಗಳು ಸೆಮಿಸ್ಟರ್‌ನಲ್ಲಿ ಪ್ರತ್ಯೇಕವಾಗಿ ಪರೀಕ್ಷೆಗಳನ್ನು ಬರೆಯಲು ಅವಕಾಶ ನೀಡಲಾಗುವುದು. ಬ್ಯಾಕ್‌ಲಾಗ್‌ ವಿಷಯಗಳ ಕ್ಯಾರಿ ಓವರ್‌ಗೂ ಅವಕಾಶ ಇರುತ್ತದೆ ಎಂದು ಡಿಸಿಎಂ ತಿಳಿಸಿದರು.

ಏನೇ ಅನುಮಾನಗಳು ಇದ್ದರೂ ಈ ಹೆಲ್ಪ್ ಲೈನ್ ಗೆ ಕರೆ ಮಾಡಬಹುದು. ದೂರವಾಣಿ ಸಂಖ್ಯೆ- 080 22341394

ಅಂತಿಮ ಸೆಮಿಸ್ಟರ್ ಪರೀಕ್ಷೆ ಏಕೆ?:

ವಿದ್ಯಾರ್ಥಿಗಳ ಶೈಕ್ಷಣಿಕ ಮೌಲ್ಯಮಾಪನ ಮತ್ತು ಅವರ ಉದ್ಯೋಗ- ಮತ್ತಿತರ ಭವಿಷ್ಯಕ್ಕೆ ಧಕ್ಕೆಯಾಗದಂತೆ ಅಂತಿಮ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಉನ್ನತ ಶಿಕ್ಷಣ ಪದ್ಧತಿಯಲ್ಲಿ ಶೈಕ್ಷಣಿಕ ಮೌಲ್ಯಮಾಪನ ಅಗತ್ಯ. ಆದ್ದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಕ್ಷಮತೆಯನ್ನು ಗಣನೆಗೆ ತೆಗೆದುಕೊಳ್ಳಲೇಬೇಕಾಗುತ್ತದೆ. ಉದ್ಯೋಗದಾತ ಕಂಪನಿಗಳು ಕೂಡ ಉದ್ಯೋಗಾಕಾಂಕ್ಷಿಗಳ ಶೈಕ್ಷಣಿಕ ಗುಣಮಟ್ಟ ಹಾಗೂ ಅವರು ಗಳಿಸಿರುವ ಶ್ರೇಣಿಯನ್ನು ಗುರುತಿಸುತ್ತವೆ. ಇವರಿಗೆ ಪರೀಕ್ಷೆ ನಡೆಸದಿದ್ದರೆ ಭವಿಷ್ಯದಲ್ಲಿ ತೊಂದರೆಯಾಗುವುದು ಖಚಿತ. ಹೀಗಾಗಿ ಈ ಪರೀಕ್ಷೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಎಲ್ಲ ವಿವಿಗಳಿಗೆ ಸೂಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

ಸೆಪ್ಟೆಂಬರ್ 1ರಿಂದ ಆನ್‌ಲೈನ್‌ ತರಗತಿ:
2020-21ರ ಶೈಕ್ಷಣಿಕ ಸಾಲಿನ ಮೊದಲ ಸೆಮಿಸ್ಟರ್’ಗೆ ಸೆಪ್ಟೆಂಬರ್ 1 ರಿಂದಲೇ ಆನ್‌ಲೈನ್ ತರಗತಿಗಳು ಹಾಗೂ ಅಕ್ಟೋಬರ್ 1 ರಿಂದ ಆಫ್‌ಲೈನ್ ತರಗತಿಗಳು ಆರಂಭವಾಗುತ್ತವೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ವಿವಿಗಳು, ಕಾಲೇಜುಗಳಿಗೆ ಸೂಚಿಸಲಾಗಿದೆ ಎಂದರು ಉಪ ಮುಖ್ಯಮಂತ್ರಿ.

ಕೋವಿಡ್- 19 ಇಡೀ ಶೈಕ್ಷಣಿಕ ವ್ಯವಸ್ಥೆಗೆ ದೊಡ್ಡ ಪೆಟ್ಟು ನೀಡಿದೆ. ವಿದ್ಯಾರ್ಥಿಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜತೆಗೆ ಅವರ ಭವಿಷ್ಯದ ಬಗ್ಗೆಯೂ ನಿರ್ಧರಿಸುವ ಸವಾಲು ಸರಕಾರದ ಮುಂದಿತ್ತು. ಶಿಕ್ಷಣ ತಜ್ಞರು, ವಿವಿಗಳ ಕುಲಪತಿಗಳ ಜತೆ ಸಮಾಲೋಚನೆ ನಡೆಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.
– ಡಾ.ಸಿ.ಎನ್. ಅಶ್ವತ್ಥನಾರಾಯಣ, ಉಪ ಮುಖ್ಯಮಂತ್ರಿ

ಈ ತಿಂಗಳ 30-31ಕ್ಕೆ ಸಿಇಟಿ ಪರೀಕ್ಷೆ: ಉಪ ಮುಖ್ಯಮಂತ್ರಿ

ಬೆಂಗಳೂರು: ಸಿಇಟಿ ಪರೀಕ್ಷೆಗಳು ನಿಗದಿಯಂತೆ ಇದೇ ತಿಂಗಳ 30 ಮತ್ತು 31ರಂದು ನಡೆಯಲಿವೆ ಎಂದು ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ಇದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಸಿಇಟಿ ಘಟಕ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅವರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಪಿಜಿ‌ ಸಿಇಟಿ ಆಗಸ್ಟ್ 8 ಮತ್ತು 9 ನಡೆಯಲಿದೆ.‌ ಆಗಸ್ಟ್ 9 ರಂದು ಡಿಪ್ಲೋಮಾ ‌ಸಿಇಟಿ‌ ನಡೆಯಲಿದೆ ಎಂದರು.

ಕೆ-ಸೆಟ್ ಪರೀಕ್ಷೆಗಳ‌ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ ಎಂದು ಅವರು ಹೇಳಿದರು.

ಪರೀಕ್ಷೆ ತಡ ಮಾಡಿದರೆ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಈ ಹಿನ್ನಲೆಯಲ್ಲಿ ಎಲ್ಲ ಮುನ್ನೆಚ್ಚರಿಕೆಗಳನ್ನು ವಹಿಸಿ ಪರೀಕ್ಷೆ ನಡೆಸಲಾಗುವುದು. ಸಮರ್ಪಕ ಸ್ಯಾನಿಟೈಸೇಷನ್ ಮತ್ತು ಸಾಮಾಜಿಕ ಅಂತರಕ್ಕೆ ಧಕ್ಕೆ ಆಗದ ಹಾಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

ಮೋದಿ ದೇಶದ ಅತ್ಯಂತ ಬೇಜವಾಬ್ದಾರಿ ಪ್ರಧಾನ ಮಂತ್ರಿ: ಎಸ್.ಆರ್.ಹಿರೇಮಠ್ ಆರೋಪ

ರಾಯಚೂರು: ನರೇಂದ್ರ ಮೋದಿ ದೇಶದ ಅತ್ಯಂತ ಬೇಜವಾಬ್ದಾರಿ ಪ್ರಧಾನ ಮಂತ್ರಿಯಾಗಿದ್ದಾರೆ. ಅವರ ಮೂರ್ಖತನದಿಂದಾಗಿ ದೇಶದ ವಲಸೆ ಕಾರ್ಮಿಕರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಚಾಲಕ ಎಸ್. ಆರ್. ಹಿರೇಮಠ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಹಿರೇಮಠ್, ಕೊರೋನಾ ತಡೆಗಾಗಿ ದಿಡೀರನೆ ಲಾಕ್ ಡೌನ್ ಘೋಷಿಸಿದರು. ದುಡಿಯಲು ಹೋಗಿರುವ ವಲಸೆ ಕಾರ್ಮಿಕರಿಗೆ ಕೇವಲ ನಾಲ್ಕು ತಾಸು ಅವಧಿಯಲ್ಲಿ ಸ್ವಗ್ರಾಮಕ್ಕೆ ಮರಳಲು ಸೂಚಿಸಿದ್ದರಿಂದ ಸಾಕಷ್ಟು ವಲಸೆ ಕಾರ್ಮಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ದೇಶದಲ್ಲಿ ನಿರುದ್ಯೋಗದಿಂದಾಗಿ ದುಡಿಮೆಗಾಗಿ ಜನ ವಲಸೆ ಹೋಗುತ್ತಿದ್ದಾರೆ ಅವರಿಗೆ ಭದ್ರತೆ ಇಲ್ಲ ಎಂದರು.

ಸಂಡೇ ಲಾಕ್ ಡೌನ್ ಮಾಡುವುದು ಅವಶ್ಯವಾಗಿದೆ. ಕೊರೋನಾದಂಥ ಸಂಕಷ್ಟ ಸಮಯದಲ್ಲಿ ಸರಕಾರಗಳೊಂದಿಗೆ ತಡೆಯಲು ಎಲ್ಲಾ ರೀತಿ ಸಹಕಾರ ನೀಡಬೇಕಾಗಿದೆ ಎಂದು ಹೇಳಿದ ಅವರು ರಾಜ್ಯದಲ್ಲಿ ಕೊರೋನಾ ಸೋಂಕಿತರಿಗಾಗಿ ಖಾಸಗಿ ಆಸ್ಪತ್ರೆಗಳು ಸಹ ಬೆಡ್ ನೀಡುವುದು ಚಿಕಿತ್ಸೆ ನೀಡುವುದು ಅವಶ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು.

ಗಲಾಟೆ ಬಿಡಿಸಲು ಬಂದ ಪೊಲೀಸರಿಗೆ ಥಳಿಸಿದ ದುಷ್ಕರ್ಮಿ!

ಮಂಗಳೂರು: ಗಲಾಟೆ ನಡೆಯುತ್ತಿದ್ದ ಸ್ಥಳಕ್ಕೆ ‌ಹೋದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೆಲ್ಕಾರ್ ನಲ್ಲಿ ನಡೆದಿದೆ.

ಲಾರಿ ಚಾಲಕರು ಹಾಗೂ ಸಾರ್ವಜನಿಕರ ಮಧ್ಯೆ ಗಲಾಟೆ ನಡಿತಿದೆ ಎಂಬ ಮಾಹಿತಿ‌ ಸಿಕ್ಕ ಹಿನ್ನೆಲೆ ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ರು. ಇದೇ ವೇಳೆ ಸ್ಥಳದಲ್ಲಿ ಕೈಯಲ್ಲಿ ಕಬ್ಬಿಣದ ರಾಡನ್ನು ಹಿಡಿದುಕೊಂಡು ಗಲಾಟೆ ಮಾಡುತ್ತಿದ್ದ ಅಬ್ದುಲ್ ಸಲಾಂ ಎಂಬಾತನ ಬಳಿ ತೆರಳಿ ಗಲಾಟೆಯನ್ನು ನಿಯಂತ್ರಿಸಲು ಪ್ರಯತ್ನಿಸಿದಾಗ ಆತ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಅಲ್ಲದೆ, ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂಧಿಸಿ ಕೊಲೆ ಬೆದರಿಕೆ ಒಡ್ಡಿದ್ದಾನೆ. ನಂತರ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಸ್ಥಳದಲ್ಲಿದ್ದ ಇಲಾಖಾ ವಾಹನವನ್ನು ರಾಡ್ ನಿಂದ ಹೊಡೆದು ಜಖಂಗೊಳಿಸಿದ್ದು, ಸುಮಾರು 10,000 ರೂಪಾಯಿಯಷ್ಟು ನಷ್ಟವುಂಟಾಗಿದೆ. ಈ ವೇಳೆ ಸ್ಥಳದಲ್ಲಿ ಸೇರಿದ ಸಾರ್ವಜನಿಕರು ಪೊಲೀಸರ ಮೇಲಿನ ಹಲ್ಲೆ ತಡೆಯಲು ಆರೋಪಿಗೆ ಥಳಿಸಿದ್ದಾರೆ. ಹಲ್ಲೆಗೊಳಗಾದ ಪೊಲೀಸರರು ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೂ ಆರೋಪಿಯನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರಸಭೆ ಅಧಿಕಾರಿಗಳ ಎಡವಟ್ಟು: ಏಳು ಬಡ ಕುಟುಂಬಗಳು ಬೀದಿಪಾಲು

ಚಿತ್ರದುರ್ಗ: ತುಂತುರು ಮಳೆ, ಚುಮುಚುಮು ಚಳಿಯಲ್ಲಿ ಮನೆಯಿಂದ ಹೊರಗೆ ಬರುವುದೇ ಕಷ್ಟ. ಆದ್ರೆ ಹಿರಿಯೂರು ನಗರಸಭೆ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಸುಮಾರು ಏಳು‌ ಬಡ ಕುಟುಂಬಗಳು ಆಷಾಢದ ಚಳಿಯಲ್ಲಿ ಬೀದಿಗೆ ಬಿದ್ದಿದ್ದಾರೆ. ಮಳೆಯ ನಡುವೆ ಟೆಂಟ್ ಹಾಕಿಕೊಂಡು ಬೀದಿಯಲ್ಲಿ ವಾಸ ಮಾಡುವಂತಾಗಿದೆ.

ಹಿರಿಯೂರಿನ ಹರಿಶ್ಚಂದ್ರ ಘಾಟ್ ನಲ್ಲಿ ಇಂತಹದ್ದೊಂದು ಅಮಾನವೀಯ ಘಟನೆ ನಡೆದಿದ್ದು, ಸುಮಾರು ಮೂರು ದಶಕಗಳಿಂದ ಸ್ವಂತ ಜಾಗವಿಲ್ಲದ ನಿರ್ಗತಿಕರು ಹರಿಶ್ಚಂದ್ರ ಘಾಟ್‌ನ ಪಾರ್ಕ್ ಜಾಗದಲ್ಲಿ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದರು, ನಗರಸಭೆ ಅಧಿಕಾರಿಗಳು ಅವರಿಗೆ ಆಶ್ರಯ ಯೋಜನೆಯಡಿ ಸೂರಿನ‌ ವ್ಯವಸ್ಥೆಯನ್ನೂ ಮಾಡದೆ ಏಕಾಏಕಿ ನಿರ್ಗತಿಕರ ಮನೆಗಳನ್ನು ಕೆಡವಿಹಾಕಿದ್ದಾರೆ. ಹೀಗಾಗಿ ಮನೆ, ಗುಡಿಸಲುಗಳನ್ನು ಕಳೆದುಕೊಂಡ ಏಳು ಬಡ ಕುಟುಂಬಗಳು ತೆರೆದ ಟೆಂಟ್ ಹಾಕಿಕೊಂಡು ಬೀದಿಯಲ್ಲಿ ಅಡುಗೆ ತಯಾರಿಸಿ ಊಟ ಮಾಡಿ ಬದುಕು ಸಾಗಿಸುತ್ತಿದ್ದಾರೆ.

ರಾತ್ರಿಯಿಡೀ ಸುರಿದ ಜಿಟಿ ಜಿಟಿ ಮಳೆಯಲ್ಲೇ ನಿರ್ಗತಿಕ ಹೆಂಗಸರು ಮಕ್ಕಳು ರಾತ್ರಿ ಕಳೆದಿದ್ದಾರೆ, ನೊಂದವರ ಸಹಾಯಕ್ಕೆ ಸ್ಥಳೀಯ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ ಅವರು ಕೂಡ ಧಾವಿಸಿಲ್ಲ. ಕೊರೊನಾ ಸೋಂಕು ಹರಡಿರುವ ಹೆಚ್ಚಿನ ಪ್ರಕರಣಗಳು ಹಿರಿಯೂರು ನಗರದಲ್ಲೇ ಇವೆ. ಹೀಗಾಗಿ ಮನೆಯಿಂದ ಅನಗತ್ಯವಾಗಿ ಹೊರಗೆ ಬರಬೇಡಿ ಎಂದು ಆದೇಶ ನೀಡುವ ಸರ್ಕಾರ, ಮನೆ ಕಳೆದುಕೊಂಡು ಬೀದಿಗೆ ಬಿದ್ದಿರುವ ನಿರ್ಗತಿಕ ಕುಟುಂಬಗಳಿಗೆ ಮನೆಯೊಳಗೆ ಇರಲು ಏನು ವ್ಯವಸ್ಥೆ ಮಾಡುತ್ತದೆ ಎಂಬ ಪ್ರಶ್ನೆ ಎದುರಾಗಿದೆ.

ಕೃಷ್ಣಾ ಪ್ರವಾಹ ಮಾಸುವ ಮುನ್ನವೆ ಮತ್ತೆ ಜಲಾವೃತವಾದ ಜನರ ಬದುಕು!

ಬಾಗಲಕೋಟೆ: ಉತ್ತರ ಕರ್ನಾಟಕದಲ್ಲಿ ಈ ವರ್ಷವೂ ಮಳೆಯ ಅಬ್ಬರ ಶುರುವಾಗಿದೆ. ಕಳೆದ ಎರಡು, ಮೂರು ದಿನಗಳಿಂದ ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಶುರುವಾಗಿದೆ. ಇನ್ನೂ ಜಿಲ್ಲೆಯ ಜಮಖಂಡಿ ತಾಲೂಕಿನ ತುಬಚಿ, ಜಂಬಗಿ ಕೆಡಿ, ಶೂರ್ಪಾಲಿ ಗ್ರಾಮಗಳು ಮಳೆಯ ಅಬ್ಬರಕ್ಕೆ ನಲುಗಿ ಹೋಗಿವೆ. ಧಾರಾಕಾರ ಮಳೆಗೆ ಶೂರ್ಪಾಲಿ ಗ್ರಾಮದ ತೋಟದ ಮನೆಗಳಿಗೆ ನೀರು ನುಗ್ಗಿದೆ. ಪುನರ್ ವಸತಿ ಕೇಂದ್ರದ ಸಮೀಪದ ಮನೆಗಳಿಗೂ ನೀರು ಬಂದಿದೆ.

ಮನೆ ಸುತ್ತ ಎರಡ್ಮೂರು ಅಡಿ ಮಳೆ ನೀರು ಆವರಿಸಿಕೊಂಡಿದೆ. ಹೀಗಾಗಿ ಜನರು ನಡು ನೀರಲ್ಲಿ ನಿಂತಿದ್ದಾರೆ. ಇನ್ನೂ ಹೊಲಗಳಿಗೂ ಮಳೆ ನೀರು ನುಗ್ಗಿದೆ. ಮನೆಗಳಲ್ಲದೇ ಬೆಳೆಗಳೂ ಸಹ ಜಲಾವೃತವಾಗಿವೆ. ಜೊತೆಗೆ ತುಬಚಿ, ಬ್ಯಾಡಗಿ ಕ್ರಾಸ್ ರಸ್ತೆ ಮೇಲೆ ನೀರು ಹರಿಯುತ್ತಿರುವ ಕಾರಣ ಜನ, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಹೈರಾಣಾಗಿದ್ದು, ಕಳೆದ ವರ್ಷದ ಕೃಷ್ಣಾ ಪ್ರವಾಹ ಮಾಸುವ ಮುನ್ನವೇ ಈಗ ಮತ್ತೆ ಮನೆ, ಬೆಳೆ ಜಲಾವೃತ ಆಗ್ತಿರೋದು ಜನರಲ್ಲಿ ಆತಂಕ ತಂದೊಡ್ಡಿದೆ.