ಬೆಂಗಳೂರು ಕೊರೊನಾ ನಿಯಂತ್ರಣ: ವಲಯವಾರು ತಂಡ ರಚನೆ

ಬೆಂಗಳೂರು: ಕೊರೊನಾ ಸಂಬಂಧಪಟ್ಟಂತೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಆಗಿದೆ ಬೆಂಗಳೂರಲ್ಲಿ ವಲಯಗಳನ್ನಾಗಿ ಮಾಡಿ ಸಚಿವರನ್ನ ಸಿಎಂ ನೇಮಕ ಮಾಡಲಿದ್ದಾರೆ.ಬಳಿಕ‌ ಆ ಟೀಂ ಆಯಾ ವಲಯಗಳಿಗೆ ಭೇಟಿ ಕೊಡಲಿದ್ದು ಆ ಟೀಂ ವರದಿ ಆಧಾರದ ಮೇಲೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಕಾನೂನು ಸಚಿವ ಜೆ‌ಸಿ ಮಾಧುಸ್ವಾಮಿ ಹೇಳಿದ್ದಾರೆ.

ಸಚಿವ ಸಂಪುಟ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವರು,ಬೆಂಗಳೂರು ನಗರದ ಕೆಲ ಜೋನ್‌ಗಳಿಗೆ ಸಚಿವರಿಗೆ ಉಸ್ತುವಾರಿ ಜೋನ್‌ಗಳಿಗೆ ಮಂತ್ರಿಗಳ ನೇಮಕ ಮಾಡಲಾಗಿದೆ ಅದರ ಬಗ್ಗೆ ಸಿಎಂ ಯಡಿಯೂರಪ್ಪ ಅವರು ಮಾಹಿತಿ ನೀಡುತ್ತಾರೆ ಜಿಲ್ಲಾ ವಾರು ನಿಗಾವಹಿಸಲು ಸೂಚಿಸಿದ್ದಾರೆ, ವೀಕೆಂಡ್ ಲಾಕ್‌ಡೌನ್ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ, ತಂಡ ರಚನೆ ಮಾಡಿದ್ದಾರೆ, ಜವಬ್ದಾರಿ ನೀಡಲಾಗಿದೆ ಎಂದರು.

ಗುತ್ತಿಗೆ ವೈದ್ಯರ ನೇಮಕಾತಿ ಕುರಿತು ಚರ್ಚಿಸಲಾಗಿದೆ
6 ತಿಂಗಳಿಗೆ 2.5 ಅಂಕಗಳನ್ನು ನೀಡಿ ಅವರನ್ನ ಸೇವೆಯಲ್ಲಿ ಮುಂದುವರೆಸುವ ಬಗ್ಗೆ ಚರ್ಚೆ ಆಗಿದೆ ಜತೆಗೆ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಸಲು ನಿರ್ಧರಿಸಲಾಗಿದೆ ಈಗಿರುವ 21 ವರ್ಷ ಮಿತಿಯನ್ನು 26 ವರ್ಷಕ್ಕೆ ಏರಿಸಲಾಗಿದೆ ಎಂದರು.

ತಕ್ಷಣಕ್ಕೆ ಬಳಸಿಕೊಳ್ಳಬಹುದಾದ ಹಣ 80 ಕೋಟಿ ಇತ್ತು
ಆದ್ರೀಗ ಕೋವಿಡ್ 19 ನಿಂದ ಸಮಸ್ಯೆಗೊಳಗಾದವರಿಗೆ ಪರಿಹಾರ ಕೊಡಬೇಕು ಹಾಗಾಗಿ ಸಾದಿಲ್ವಾರು ನಿಧಿಯನ್ನ 500 ಕೋಟಿಗೆ ಹೆಚ್ಚಳ ಮಾಡಿಕೊಂಡಿದ್ದೇವೆ ಇದಕ್ಕಾಗಿ ಸುಗ್ರೀವಾಜ್ಞೆಯನ್ನು ತಂದಿದ್ದೇವೆ, ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ 95 ಕೋಟಿ ಹಣ ಬಿಡುಗಡೆಗೆ ನಿರ್ಧರಿಸಲಾಯಿತು,

ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ಪ್ರಾಥಮಿಕ ವಿಚಾರಣೆಯನ್ನ 90 ದಿನದಲ್ಲಿ ಮುಗಿಸಬೇಕು ೬ ತಿಂಗಳ ಒಳಗೆ ಚಾರ್ಜ್ ಶೀಟ್ ಸಲ್ಲಿಸಬೇಕು ಎರಡನ್ನು ಕಡ್ಡಾಯಗೊಳಿಸಿ ಕಾಯ್ದೆ ತಿದ್ದುಪಡಿ ಮಾಡಲಾಯಿತು.

ಬಿಐಇಸಿಯಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಕೇರ್ ಸೆಂಟರ್ ಗೆ ಸಿಎಂ ಯಡಿಯೂರಪ್ಪ ಭೇಟಿ…!

ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್. ಯಡಿಯೂರಪ್ಪ ಅವರು ಇಂದು ಬಿಐಇಸಿಯಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಅಲ್ಲಿನ ಸೌಕರ್ಯಗಳನ್ನು ಪರಿಶೀಲಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಾ,
ಬೆಂಗಳೂರಿನಲ್ಲಿ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ.ಈ ನಿಟ್ಟಿನಲ್ಲಿ ಇಂದು ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಸ್ಥಾಪಿಸಿರುವ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ.10,100 ಹಾಸಿಗೆ ಸಾಮರ್ಥ್ಯದ ಈ ಕೋವಿಡ್ ಕೇರ್ ಸೆಂಟರ್ ನಲ್ಲಿ ಎಲ್ಲ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.

ಪ್ರತಿ ನೂರು ಮಂದಿಗೆ ಒಬ್ಬ ವೈದ್ಯ, ಇಬ್ಬರು ನರ್ಸ್ ಗಳು, ಒಬ್ಬ ಸಹಾಯಕರು, ಒಬ್ಬರು ಸ್ವಚ್ಛತಾ ಸಿಬ್ಬಂದಿ ಮತ್ತು ಇಬ್ಬರು ಬಿಬಿಎಂಪಿ ಮಾರ್ಷಲ್ ಗಳನ್ನು ನಿಯೋಜಿಸಲಾಗುತ್ತಿದೆ. ವೈದ್ಯರು,, ನರ್ಸ್, ಸಹಾಯಕರು, ಸ್ವಚ್ಛತಾ ಸಿಬ್ಬಂದಿ, ಬಿಬಿಎಂಪಿ ಮಾರ್ಷಲ್ ಮತ್ತು ಪೊಲೀಸರು ಸೇರಿದಂತೆ ಒಟ್ಟು 2200 ಸಿಬ್ಬಂದಿಯನ್ನು ನೇಮಕ ಮಾಡಲಾಗುವುದು. ಸೊಂಕಿತರಿಗೆ ಉತ್ತಮ ಊಟೋಪಚಾರದ ವ್ಯವಸ್ಥೆ, ಮನರಂಜನೆಗಾಗಿ ಟಿವಿ, ಕೇರಂ ಬೋರ್ಡ್ ಚೆಸ್, ಮತ್ತಿತರ ಅನುಕೂಲಗಳನ್ನು ಸಹ ಕಲ್ಪಿಸಲಾಗುತ್ತಿದೆ ಎಂದರು.

ಇವರ ಆರೈಕೆ ಹಾಗೂ ಮೇಲ್ವಿಚಾರಣೆಗೆ ನಿಯೋಜಿಸುವ ಸಿಬ್ಬಂದಿಗೆ ಅಗತ್ಯ ಸುರಕ್ಷತಾ ಸಾಮಗ್ರಿ, ತುರ್ತು ಚಿಕಿತ್ಸಾ ಸೌಲಭ್ಯಗಳು, ಐಸಿಯು ಘಟಕ, ಇಸಿಜಿ, ಆಕ್ಸಿಜನ್ ಸಪೋರ್ಟ್, ಪ್ರಥಮ ಚಿಕಿತ್ಸೆ, ಫಾರ್ಮಸಿ ಮೊದಲಾದ ಸೌಲಭ್ಯಗಳನ್ನು ಒದಗಿಸಲಾಗುವುದು.ಜೊತೆಗೆ ಸಮೀಪದ ಆಸ್ಪತ್ರೆಯೊಂದಿಗೆ ಸಂಯೋಜನೆ ಹಾಗೂ ದಿನದ 24 ಗಂಟೆಯೂ ಇವುಗಳನ್ನು ಮೇಲ್ವಿಚಾರಣೆ ನಡೆಸುವ ನಿಯಂತ್ರಣಾ ಕೊಠಡಿ ಸ್ಥಾಪಿಸಲಾಗುತ್ತಿದೆ.ತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ, ಸೋಂಕಿತರ ಬೆಡ್ ಶೀಟ್, ಬ್ಲಾಂಕೆಟ್ ತೊಳೆಯಲು ಲಾಂಡ್ರಿ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿದೆ ಎಂದರು.

ಈ ಕೇಂದ್ರದಲ್ಲಿ ಯಾವುದೇ ರೋಗ ಲಕ್ಷಣ ಇಲ್ಲದ ಹಾಗೂ ಅತಿ ಕಡಿಮೆ ಲಕ್ಷಣ ಹೊಂದಿರುವ ಸೋಂಕಿತರ ಆರೈಕೆ ಮಾಡಲಾಗುವುದು.ನಗರದ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿಗೆ ಚಿಕಿತ್ಸೆ ಅಗತ್ಯವಿರುವ ವ್ಯಕ್ತಿಗಳಿಗೆ ಹಾಸಿಗೆ ಒದಗಿಸಲು ಅನುವಾಗುವಂತೆ ಈ ವ್ಯವಸ್ಥೆ ರೂಪಿಸಲಾಗಿದೆ ಎಂದರು.

ಅನ್ ಲಾಕ್ ಪ್ರಕ್ರಿಯೆ ಪ್ರಾರಂಭವಾದಾಗಿನಿಂದ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ವರದಿಯಾಗುತ್ತಿವೆ. ರಾಜ್ಯ ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನೂ ಕೈಗೊಂಡಿದೆ. ಲೋಪ ದೋಷಗಳು ಗಮನಕ್ಕೆ ಬಂದ ಕೂಡಲೇ ಅವುಗಳನ್ನು ಸರಿಪಡಿಸುವ ಪ್ರಯತ್ನ ಮಾಡಲಾಗಿದೆ.ಈಗಾಗಲೇ ಹಾಸಿಗೆ ಹಂಚಿಕೆಗೆ ಪಾರದರ್ಶಕ ಕೇಂದ್ರೀಕೃತ ವ್ಯವಸ್ಥೆ ಮಾಡಲಾಗಿದೆ. ಸಹಾಯವಾಣಿಗಳನ್ನು ಸಹ ಸ್ಥಾಪಿಸಲಾಗಿದೆ.ಜನತೆ ವಿಶ್ವಾಸ ಕಳೆದುಕೊಳ್ಳಬಾರದು. ಸ್ವಲ್ಪ ತಾಳ್ಮೆಯಿಂದ ನಮ್ಮ ಜೊತೆ ಸಹಕರಿಸಬೇಕೆಂದು ಮನವಿ ಮಾಡುತ್ತೇನೆ ಎಂದರು.

ಕೋವಿಡ್ ಸೋಂಕು ತಗುಲಿರುವುದು ದೃಢ ಪಟ್ಟ ಕೂಡಲೇ ಅಂಬ್ಯುಲೆನ್ಸ್ ಬರುವುದು ವಿಳಂಬವಾದಲ್ಲಿ, ಅಥವಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ವಿನಾ ಕಾರಣ ನಿರಾಕರಿಸಿದಲ್ಲಿ ನಮ್ಮ ಗಮನಕ್ಕೆ ತನ್ನಿ. ಕ್ರಮ ಕೈಗೊಳ್ಳುತ್ತೇವೆ.
ಅಂತೆಯೇ ಎಲ್ಲ ಶಾಸಕರಲ್ಲಿ ನನ್ನ ಮನವಿ ಇಷ್ಟೆ: ದಯವಿಟ್ಟು ನಿಮ್ಮ ಕ್ಷೇತ್ರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಆದ್ಯತೆ ನೀಡಿ. ತಾಲ್ಲೂಕು ಆಸ್ಪತ್ರೆಗಳಿಗೆ, ಕೋವಿಡ್ ಆಸ್ಪತ್ರೆಗಳಿಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳು ಸರಿಯಿದೆಯೇ ಎಂದು ಪರಿಶೀಲಿಸಿ. ಲೋಪವಾಗಿದ್ದಲ್ಲಿ ನನ್ನ ಗಮನಕ್ಕೆ ತನ್ನಿ, ಸರಿಪಪಡಿಸಲಾಗುವುದು ಎಂದರು.

ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಕೋವಿಡ್ ತಡೆಯುವುದು ಹಾಗೂ ಅಗತ್ಯವುಳ್ಳವರಿಗೆ ಸೂಕ್ತ ಚಿಕಿತ್ಸೆಯನ್ನು ಸಕಾಲದಲ್ಲಿ ಒದಗಿಸಿ, ಜೀವರಕ್ಷಣೆ ಮಾಡುವುದು ಹಾಗೂ ಕೋವಿಡ್ ನಿಯಂತ್ರಿಸುವುದು ನಮ್ಮ ಆದ್ಯತೆ ಆಗಬೇಕು. ಜನರು ಅನಗತ್ಯವಾಗಿ ಬೆಂಗಳೂರಿನಿಂದ ಹಳ್ಳಿಗಳತ್ತ ತೆರಳಬೇಡಿ. ಹಳ್ಳಿಗಳಲ್ಲಿ ಸೋಂಕು ಹಬ್ಬದಂತೆ ಮುನ್ನೆಚ್ಚರಿಕೆ ವಹಿಸಿ.

ನಾವೆಲ್ಲರೂ ಒಟ್ಟಾಗಿ ಕೋವಿಡ್ ನಿಯಂತ್ರಿಸೋಣ. ಇದು ಒಂದೆರಡು ದಿನದ ಹೋರಾಟವಲ್ಲ. ಸತತ ಪ್ರಯತ್ನ, ನಿಮ್ಮೆಲ್ಲರ ಸಹಕಾರ, ಬೆಂಬಲ, ಹಾಗೂ ಸಾಮೂಹಿಕ ಇಚ್ಛಾಶಕ್ತಿಯೊಂದಿಗೆ ಕೋವಿಡ್ ವಿರುದ್ಧ ಜಯಿಸೋಣ ಎಂದರು.

ಕಮಠಾಣಾದ ದಿಲ್ಲಿ ಮಾದರಿಯ ಶಾಲೆಯಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಲಿದೆ: ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್ (ಜು.08): ತಾಲೂಕಿನ ಕಮಠಾಣಾ ಗ್ರಾಮದಲ್ಲಿ ಕೆ.ಕೆ.ಆರ್.ಡಿ.ಬಿ ಅನುದಾನದಲ್ಲಿ ಮೂರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ದಿಲ್ಲಿ ಮಾದರಿಯ ಶಾಲೆಯಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಲಿದೆ ಎಂದು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ತಾಲೂಕಿನ ಕಮಠಾಣಾ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಕೆ.ಕೆ.ಆರ್.ಡಿ.ಬಿ ಅನುದಾನದಲ್ಲಿ ನೂತನವಾಗಿ 3ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಯ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನಮ್ಮ ಗ್ರಾಮೀಣ ಶಾಲೆಗಳನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ. ಆ ನಿಟ್ಟಿನಲ್ಲಿ ಒಳ್ಳೆಯ ವ್ಯವಸ್ಥೆಯಾಗಬೇಕಾಗಿದ್ದು, ನಾನು ಮೊದಲನೇ ಹಂತದಲ್ಲಿ ಮೂರು ಕೋಟಿ ರೂ. ವೆಚ್ಚದ ಬಿಲ್ದಿಂಗ್ ತಂದಿದ್ದೇನೆ. ಮುಂದಿನ ಬಜೆಟ್ ನಲ್ಲಿ ಈ ಶಾಲೆಗೆ 16 ಸ್ವಾರ್ಟ್ ಕ್ಲಾಸ್ ರೂಮ್ ಗಳನ್ನು ತರುತ್ತೇನೆ. ಒಳ್ಳೆಯ ಬಿಲ್ಡಿಂಗ್, ಸ್ವಾರ್ಟ್ ಕ್ಲಾಸ್ ಸೇರಿದಂತೆ ವಿನೂತನ ವ್ಯವಸ್ಥೆ ತರುವ ಮೂಲಕ ಕಮಠಾಣಾ ಗ್ರಾಮದ ದಿಲ್ಲಿ ಮಾದರಿಯ ಶಾಲೆಯನ್ನು ಇತರೆ ಶಾಲೆಗಳಿಗೆ ಮಾದರಿ ಶಾಲೆಯನ್ನಾಗಿ ಮಾಡುತ್ತೇನೆ ಎಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು .

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರು, ತಾಲೂಕು ಪಂಚಾಯ್ತಿ ಸದಸ್ಯರು, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು, ಶಾಲೆಯ ಮುಖ್ಯಗುರುಗಳು, ಶಿಕ್ಷಕರು, ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಅನೇಕರಿದ್ದರು.

ಹೆಚ್ಚುವರಿ ರಸಗೊಬ್ಬರ ದಾಸ್ತಾನಿದೆ,ವದಂತಿಗೆ ಕಿವಿಗೊಡಬೇಡಿ:ಬಿ.ಸಿ ಪಾಟೀಲ್ ಮನವಿ

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರಕ್ಕೆ ಯಾವುದೇ ಕೊರತೆಯಿಲ್ಲ. ರೈತರು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬಾರದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ರೈತರಲ್ಲಿ ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ಜೊತೆ ಸಮಾಲೋಚನೆ ನಡೆಸಿ, ಅಗತ್ಯ ಪ್ರಮಾಣದಷ್ಟು ರಸಗೊಬ್ಬರವನ್ನು ಈಗಾಗಲೇ ರಾಜ್ಯಗಳಿಗೆ ಪೂರೈಸಿ, ದಾಸ್ತಾನು ಮಾಡಲಾಗಿದೆ.ಯಾವುದೇ ಕೊರತೆಯಾಗದಂತೆ ಕ್ರಮವಹಿಸಲಾಗಿದೆ.2020-21 ನೇ ಸಾಲಿನ ಮುಂಗಾರು ಹಂಗಾಮಿನ ಏಪ್ರಿಲ್ 1 ರಿಂದ ಜುಲೈ 6 ರವರೆಗೆ ಯೂರಿಯಾ ರಸಗೊಬ್ಬರಕ್ಕೆ 4,98,000 ಮೆಟ್ರಿಕ್ ಟನ್ ಬೇಡಿಕೆ ಇದ್ದು, 4,35,700 ಮೆ.ಟನ್ ಸರಬರಾಜಾಗಿದೆ. 2,06,750 ಮೆ.ಟನ್ ದಾಸ್ತಾನು ಇದ್ದು,ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಸುಮಾರು 1,55,468 ಮೆಟ್ರಿಕ್ ಟನ್ ಹೆಚ್ಚುವರಿ ಈ ಬಾರಿ ಯೂರಿಯಾ ರಸಗೊಬ್ಬರ ಪೂರೈಕೆಯಾಗಿದೆ. ಎಲ್ಲಾ ಜಿಲ್ಲೆಗಳಲ್ಲಿಯೂ ಸುಮಾರು 2,06, 740 ಟನ್ ದಾಸ್ತಾನು ಇದೆ ಎಂದು ಪತ್ರಿಕಾ ಹೇಳಿಕೆ ಮೂಲಕ ಮಾಹಿತಿ ನೀಡಿದ್ದಾರೆ.

ಮೇ ಮತ್ತು ಜೂನ್ ಅವಧಿಯಲ್ಲಿ ದೇಶಾದ್ಯಂತ ನಿರೀಕ್ಷೆಗಿಂತ ಉತ್ತಮ ಮಳೆಯಾಗಿದ್ದರಿಂದ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಬೇಡಿಕೆ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ.ಹೆಚ್ಚುವರಿಯಾಗಿ ರಸಗೊಬ್ಬರಕ್ಕೆ ಯಾವುದೇ ಬೇಡಿಕೆ ಎದುರಾದರೂ ಇಲಾಖೆ ಪೂರೈಸಲಿದೆ ಎಂದಿದ್ದಾರೆ.

ಕೋವಿಡ್-19 ಸಮರ್ಥ ನಿರ್ವಹಣೆ: ನಗರ ಬಿಟ್ವು ಹೋಗಬೇಡಿ ಎಂದ ಡಿಸಿಎಂ

ಬೆಂಗಳೂರು: ಕೋವಿಡ್-19 ಬಿಕ್ಕಟ್ಟನ್ನು ರಾಜ್ಯದಲ್ಲಿ ಸಮರ್ಥವಾಗಿ ಎದುರಿಸುತ್ತಿದ್ದೇವೆ.ಅಧಿಕಾರಿಗಳು ಕೂಡ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಎಂತಹುದೇ ಪರಿಸ್ಥಿತಿ ಎದುರಾದರೂ ಎದುರಿಸಲು ನಾವು ಸಂಪೂರ್ಣವಾಗಿ ತಯಾರಿದ್ದೇವೆ ಎಂದು ಕೋವಿಡ್ ಕೇರ್ ಕೇಂದ್ರಗಳ ಉಸ್ತುವಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಬೆಂಗಳೂರಿನಲ್ಲಿ ಬುಧವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮಲ್ಲಿ ಅನುಭವಿ, ದಕ್ಷ, ದೂರದೃಷ್ಟಿಯುಳ್ಳ ಅಧಿಕಾರಿಗಳಿದ್ದಾರೆ. ಹೀಗಾಗಿ ಕೋವಿಡ್ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿರ್ವಹಿಸಲು ಸಾಧ್ಯವಾಗಿದೆ. ಎಲ್ಲ ಹಂತಗಳಲ್ಲೂ ಕೆಲಸ ಸುಸೂತ್ರವಾಗಿ ಸಾಗಿದೆ. ಜನರು ಸೋಂಕಿನ ಬಗ್ಗೆ ಆತಂಕಕ್ಕೊಳಗಾಗಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದರು.

ನೆರೆ ರಾಜ್ಯಗಳ ಹೈದರಾಬಾದ್, ಚೆನ್ನೈ, ಮುಂಬಯಿ ಮತ್ತಿತರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಹೀಗಾಗಿ ಯಾರೂ ಆಧೈರ್ಯದಿಂದ ನಗರ ಬಿಟ್ಟು ತಮ್ಮ ಊರುಗಳ ಕಡೆ ಹೋಗುವುದು ಬೇಡ. ಸೋಂಕಿತರಿಗೆ ಅತ್ಯುತ್ತಮ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ. ಈ ನಡುವೆ ಒಂದೆರಡು ದಿನ ಇದ್ದಕ್ಕಿದ್ದ ಹಾಗೆ ಸೋಂಕಿತರ ಪ್ರಮಾಣ ಹೆಚ್ಚಾಯಿತು, ಆಗ ಮಾತ್ರ ಕೊಂಚ ಗೊಂದಲವಾಗಿದ್ದು ಬಿಟ್ಟರೆ ಉಳಿದಂತೆ ಎಲ್ಲವೂ ನಮ್ಮ ನಿಯಂತ್ರಣದಲ್ಲಿದೆ ಎಂದು ಡಿಸಿಎಂ ಜನರಿಗೆ ಧೈರ್ಯ ತುಂಬಿದರು.

ಅಕ್ಟೋಬರ್ ಗೆ ಸಿದ್ಧರಿದ್ದೇವೆ:
ಕೋವಿಡ್-19 ಅಕ್ಟೋಬರ್ ತಿಂಗಳಿಗೆ ಪರಾಕಾಷ್ಠೆ ಮುಟ್ಟಲಿದೆ ಎಂದು ಐಸಿಎಂಆರ್ ಈಗಾಗಲೇ ಎಚ್ಚರಿಸಿದೆ. ಅದಕ್ಕೆ ತಕ್ಕಹಾಗೆ ಸರಕಾರ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮುಖ್ಯವಾಗಿ ಜನರು ವೈಯಕ್ತಿಕ ಸುರಕ್ಷತೆ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಜತೆಗೆ ಸೋಂಕು ಹರಡದಂತೆ ತಡೆಗಟ್ಟಲು ಸರಕಾರ ನಡೆಸುತ್ತಿರುವ ಪ್ರಯತ್ನಕ್ಕೆ ಸಾರ್ವಜನಿಕರು ಕೂಡ ಕಾಣಿಕೆ ನೀಡಬೇಕು. ಹಾಗೆ ಮಾಡುವ ಮೂಲಕ ಸೋಂಕಿತರ ಸಂಖ್ಯೆ ಜಾಸ್ತಿಯಾಗದಂತೆ ನೋಡಿಕೊಳ್ಳಬಹುದು. ನಮ್ಮೆಲ್ಲರ ನಡುವೆ ವೈರಸ್ ಕೂಡ ಓಡಾಡುತ್ತಿದೆ ಎಂಬುದನ್ನು ಮರೆಯಬಾರದೆಂದು ಡಿಸಿಎಂ ಹೇಳಿದರು.

ಸದ್ಯಕ್ಕೆ ನಮ್ಮಲ್ಲಿ ಹಾಸಿಗೆಗಳ ಕೊರತೆ ಇಲ್ಲ. ಕೋವಿಡ್ ಕೇರ್ ಸೆಂಟರುಗಳನ್ನು ಸ್ಥಾಪನೆ ಮಾಡಿದ್ದೇವೆ. 30 ಸಾವಿರಕ್ಕೂ ಹೆಚ್ಚು ಹಾಸಿಗೆಗಳ ವ್ಯವಸ್ಥೆ ಮಾಡುವುದಕ್ಕೆ ನಾವು ಸಜ್ಜಾಗಿದ್ದೇವೆ. ವೈದ್ಯರು, ನರ್ಸ್ ಗಳು ಹಾಗೂ ಪೂರಕ ಸಿಬ್ಬಂದಿಯ ಕೊರತೆಯಾಗದಂತೆ ನೋಡಿಕೊಂಡಿದ್ದೇವೆ. ಇನ್ನು ಕೋವಿಡ್ ಕೇರ್ ಕೇಂದ್ರಗಳು ಸಮರ್ಪಕವಾಗಿ ನಡೆಯುತ್ತಿವೆ. ಮತ್ತಷ್ಟು ಕೇಂದ್ರಗಳನ್ನು ಸ್ಥಾಪನೆ ಮಾಡುವವರಿದ್ದೇವೆ. ಬೆಂಗಳೂರು ವಸ್ತು ಪ್ರದರ್ಶನ ಕೇಂದ್ರದಲ್ಲಿ (ಬಿಐಇಎಸ್) 10 ಸಾವಿರಕ್ಕೂ ಹೆಚ್ಚು ಹಾಸಿಗೆಗಳ ಕೋವಿಡ್ ಕೇಂದ್ರವನ್ನು ತೆರೆದಿದ್ದೇವೆ. ಇದು ಜಗತ್ತಿನಲ್ಲಿ ಅತಿದೊಡ್ಡ ಕೋವಿಡ್ ಚಿಕಿತ್ಸಾ ಕೇಂದ್ರ. ಜತೆಗೆ ಹೋಮ್ ಕೇರ್ ವ್ಯವಸ್ಥೆ ಬಗ್ಗೆಯೂ ಹೆಚ್ಚು ಗಮನ ನೀಡುತ್ತಿದ್ದೇವೆ. ಹೀಗಾಗಿ ಯಾವುದೇ ಆತಂಕ ಬೇಡ ಎಂದು ಅವರು ತಿಳಿಸಿದರು.

ಸೋಂಕು ರಾಜ್ಯಕ್ಕೆ ಕಾಲಿಟ್ಟಾಗ ದಿನಕ್ಕೆ ನೂರಿನ್ನೂರು ಟೆಸ್ಟುಗಳಷ್ಟೇ ಆಗುತ್ತಿತ್ತು. ಈಗ ದಿನಕ್ಕೆ ಏನಿಲ್ಲವೆಂದರೂ 20 ಸಾವಿರಕ್ಕೂ ಹೆಚ್ಚು ಟೆಸ್ಟುಗಳು ನಡೆಯುತ್ತಿವೆ. ದಿನದಿಂದ ದಿನಕ್ಕೆ ನಮ್ಮ ವ್ಯವಸ್ಥೆ ಉತ್ತಮವಾಗುತ್ತಿದೆ. 2 ಇದ್ದ ಲ್ಯಾಬುಗಳು ಈಗ ನಗರವೊಂದರಲ್ಲೆ 100ರ ಸಂಖ್ಯೆ ದಾಟಿವೆ. ಇದರೊಂದಿಗೆ ಕೋವಿಡ್ ಕೇರ್ ಕೇಂದ್ರಗಳಲ್ಲಿಐಸಿಯು ಘಟಕಗಳನ್ನೂ ಮಾಡುತ್ತಿದ್ದೇವೆ ಎಂದವರು ಮಾಹಿತಿ ನೀಡಿದರು.

ಲಾಕ್ ಡೌನ್ ಕಾಲದಲ್ಲಿಯೇ ಸರಕಾರ ಸರಿಯಾಗಿ ಎಚ್ಚೆತ್ತುಕೊಳ್ಳಲಿಲ್ಲ ಎಂಬ ಪ್ರತಿಪಕ್ಷಗಳು ಆರೋಪದ ಬಗ್ಗೆಗಮನ ಸೆಳೆದಾಗ ಡಿಸಿಎಂ ಉತ್ತರಿಸಿದ್ದು ಹೀಗೆ… ಕೋವಿಡ್ ಬಂದ ಮೇಲೆ ಒಂದು ಕ್ಷಣವೂ ಸರಕಾರ ಮೈಮರೆತಿಲ್ಲ. ಅದಕ್ಕೆ ಸಾಕ್ಷಿಯಾಗಿ ಇಂದು ಮಾಡಲಾಗಿರುವ ಎಲ್ಲ ಕೆಲಸಗಳೆ ಕಾಣುತ್ತಿವೆ. ಸೋಂಕು ಬಂದಾಗ ಅದನ್ನು ಎದುರಿಸುವ ಕನಿಷ್ಠ ಮೂಲಸೌಕರ್ಯಗಳೇ ನಮ್ಮಲ್ಲಿ ಇರಲಿಲ್ಲ. ಈಗ ಸರ್ವಸಿದ್ಧತೆ ಆಗಿದೆ. ಎಂತಹ ಪರಿಸ್ಥಿತಿ ಬಂದರೂ ಎದುರಿಸುತ್ತೇವೆ. ಹೀಗಾಗಿ ಇಂಥ ಅರೋಪದಲ್ಲಿ ಹುರುಳಿಲ್ಲ ಎಂದು ಸ್ಪಷ್ಪಡಿಸಿದರು.

ಸಮುದಾಯ ಹಂತಕ್ಕೆ ಬಂದಿಲ್ಲ:
ಬೆಂಗಳೂರಿನಲ್ಲಿ ಪ್ರಸ್ತುತ ಕೋವಿಡ್ ನಿಖರವಾಗಿ ಯವ ಹಂತದಲ್ಲಿದೆ ಎಂಬ ಪ್ರಶ್ನೆಗೆ,
ಕೋವಿಡ್ ಬೆಂಗಳೂರಿನಲ್ಲಿ ವ್ಯಾಪಕವಾಗಿ ವ್ಯಾಪಿಸುತ್ತಿದೆ. ಆದರೆ ಅದಿನ್ನೂ ಸಮುದಾಯ ಮಟ್ಟಕ್ಕೆ ಬಂದಿಲ್ಲ. ಈಗೇನು 2ನೇ ಹಂತದಲ್ಲಿದ್ದೇವೆ, ಅದೇ ಹಂತದಲ್ಲಿಯೇ ಪರಿಸ್ಥಿತಿ ಮುಂದುವರೆದಿದೆ. ಈ ಹಂತ ದಾಟದ ಹಾಗೆ ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆ. ಸರಕಾರದ ಈ ಪ್ರಯತ್ನಕ್ಕೆ ಜನರ ಸಹಕಾರವೂ ಬಹಳ ಮುಖ್ಯವಾಗಿರುತ್ತದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಶಾಲಾ ಕಾಲೇಜುಗಳ ಪ್ರಾರಂಭ, ಆನ್‍ಲೈನ್ ತರಗತಿಗಳ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ: ಸುರೇಶ್ ಕುಮಾರ್

ಬೆಂಗಳೂರು: ಶಾಲಾ ಕಾಲೇಜುಗಳ ಪ್ರಾರಂಭ ಅಥವಾ ಆನ್‍ಲೈನ್ ತರಗತಿಗಳ ಬಗ್ಗೆ ಸರ್ಕಾರ ಅಥವಾ ಶಿಕ್ಷಣ ಇಲಾಖೆ ಯಾವುದೇ ನಿರ್ಧಾರ ಕೈಗೊಂಡಿಲ್ಲ, ಎಂಬುದನ್ನು ಮತ್ತೊಮ್ಮೆ ಸಚಿವ ಸುರೇಶ್ ಕುಮಾರ್‌ ಸ್ಪಷ್ಟ ಪಡಿಸಿದ್ದಾರೆ.

ಸರ್ಕಾರ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಣಯಗಳನ್ನು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಜನೆಯ ಪರ ಕೈಗೊಳ್ಳಲು ಸಮರ್ಥವಾಗಿದೆ ಮತ್ತು ಅಂಥ ನಿರ್ಣಯಗಳನ್ನು ಕೈಗೊಳ್ಳುತ್ತದೆ ಎಂದಿರುವ ಸಚಿವರು ಪಾಲಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಈ ಕುರಿತು ಯಾವುದೇ ಆತಂಕ ಅಥವಾ ಕಪೋಲ ಕಲ್ಪಿತ ಸುಳ್ಳು ಸುದ್ದಿಗಳಿಗೆ ಕಿವಿ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.

ಸರ್ಕಾರ ತಾನಾಗಿಯೇ ಯಾವುದೇ ನಿರ್ಣಯ ಅಧಿಕೃತವಾಗಿ ಪ್ರಕಟಿಸುವ ಮುನ್ನ ಮಾಧ್ಯಮದಲ್ಲಿ ಪ್ರಸಾರವಾಗುವ ಅಥವಾ ಪ್ರಕಟವಾಗುವ ಯಾವುದೇ ಸುದ್ದಿಯನ್ನು ನಿಜ ಎಂದು ನಂಬಬೇಡಿ ಎಂದೂ ಅವರು ಕೋರಿದ್ದಾರೆ.

ತಜ್ಞರ ಸಮಿತಿ ವರದಿ ಅಥವಾ ಬೇರೆ ಬೇರೆ ಆಯಾಮಗಳಲ್ಲಿ ಸರ್ಕಾರದ ಹಂತದಲ್ಲಿ ನಡೆಯುವ ಚರ್ಚೆಗಳು ಎಂದಿಗೂ ಅಂತಿಮ ನಿರ್ಣಯವಾಗಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿದ್ದಾರೆ.