ಶೀಘ್ರವೇ ಚಂದನದಲ್ಲಿ ಪ್ರೌಢಶಾಲಾ ಸೇತುಬಂಧ ತರಗತಿಗಳ ಆರಂಭ: ಸುರೇಶ್ ಕುಮಾರ್

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 8, 9 ಮತ್ತು 10ನೇ ತರಗತಿಗಳಿಗಾಗಿ ‘ಸೇತುಬಂಧ’ (ಬ್ರಿಡ್ಜ್ ಕೋರ್ಸ್) ಕಾರ್ಯಕ್ರಮಗಳ ವಿಡಿಯೋ ತರಗತಿಗಳನ್ನು ದೂರದರ್ಶನ ಚಂದನವಾಹಿನಿಯಲ್ಲಿ ಪ್ರಸಾರ ಮಾಡಲಾಗುತ್ತಿದ್ದು, ಈ ಸಂಬಂದ ಎಲ್ಲ ಅಗತ್ಯ ಪೂರ್ವ ಸಿದ್ಧತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಬುಧವಾರ ಇಲಾಖೆಯ ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ-ಡಿಎಸ್‍ಇಆರ್‍ಟಿಯಲ್ಲಿ ಸೇತುಬಂಧ ಕಾರ್ಯಕ್ರಮದ ರೂಪುರೇಷೆ ಮತ್ತು ಸಿದ್ಧತೆಗಳನ್ನು ಪರಿಶೀಲಿಸಿ,ದ ಸಚಿವರು, ಇಲಾಖೆ ಸಿದ್ಧಪಡಿಸಿದ ವಿಡಿಯೋ ತರಗತಿಗಳನ್ನು ವೀಕ್ಷಿಸಿದರು.

ನಮ್ಮ ವಿದ್ಯಾರ್ಥಿಗಳ ಕಲಿಕೆಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಕಲಿಕೆಯನ್ನು ನಿರಂತರವಾಗಿರಿಸಲು ಸಾರ್ವಜನಿಕ ಶಿಕ್ಷಣ ಇಂದಿನ ಸಂದರ್ಭಕ್ಕೆ ಪರಿಣಾಮಕಾರಿಯಾದ ಪರ್ಯಾಯ ಕ್ರಮಗಳಿಗೆ ಚಾಲನೆ ನೀಡಿದೆ ಎಂದು ಅವರು ಹೇಳಿದರು.

ಒಂದು ತರಗತಿಯಿಂದ ಮತ್ತೊಂದು ತರಗತಿಗೆ ತೇರ್ಗಡೆ ಹೊಂದುವ ಮಕ್ಕಳಿಗೆ ಹಿಂದಿನ ತರಗತಿಗಳ ಕಲಿಕೆಯನ್ನು ನೆನಪಿಸಿ ಮುಂದಿನ ತರಗತಿಗಳಿಗೆ ಸಿದ್ಧಗೊಳಿಸುವ ‘ಸೇತುಬಂಧ’ ಮಕ್ಕಳ ಕಲಿಕೆಯನ್ನು ಸಮಗ್ರವಾಗಿಸುವ ನಿಟ್ಟಿನಲ್ಲಿ ಒಂದು ಪರಿಪೂರ್ಣ ಕಾರ್ಯಕ್ರಮ ಎಂದು ಅವರು ತಿಳಿಸಿದರು. ಕೆಲವೇ ದಿನಗಳಲ್ಲಿ 8ರಿಂದ 10ನೇ ತರಗತಿಯ ಸೇತುಬಂದ ವಿಡಿಯೋ ತರಗತಿಗಳು ಚಂದನ ವಾಹಿನಿಯಲ್ಲಿ ಆರಂಭಗೊಳ್ಳಲಿವೆ. ಆ ನಂತರ ಇಂಗ್ಲಿಷ್ ಮಾಧ್ಯಮಗಳಲ್ಲೂ ಈ ತರಗತಿಗಳ ಪಾಠಗಳನ್ನು ಪ್ರಾರಂಭಿಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

ಅದರಂತೆಯೇ ಶಿಕ್ಷಣ ಇಲಾಖೆಯಿಂದಲೇ ಒಂದು ಪ್ರತ್ಯೇಕ ಚಾನಲ್ ಪ್ರಾರಂಭಕ್ಕೂ ಪ್ರಯತ್ನಗಳು ನಡೆದಿವೆ. ಹಾಗೆಯೇ ರಾಜ್ಯದ ಆಯ್ದ ಸ್ಥಳಗಳಲ್ಲಿ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಹೊಸ ಸ್ಟುಡಿಯೋಗಳ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಅವುಗಳು ಸಹ ಪ್ರಾರಂಭವಾಗಲಿವೆ ಎಂದು ಸಚಿವರು ತಿಳಿಸಿದರು. ಈ ಮೂಲಕ ಎಲ್ಲ ತರಗತಿಗಳ ವಿದ್ಯಾರ್ಥಿಗಳ ಕಲಿಕೆ ನಿರಂತರವಾಗಿರಲಿದ್ದು, ಸಮರ್ಥ ಅನುಪಾಲನಾ ವ್ಯವಸ್ಥೆ ಸಹ ಜಾರಿಯಲ್ಲಿರಲಿದೆ ಎಂದು ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರಿಗೂ ಜನಸೇವೆ ಅವಕಾಶ ಕೊಡಿ: ಸಿಎಂಗೆ ಡಿ.ಕೆ ಶಿವಕುಮಾರ್ ಪತ್ರ

ಬೆಂಗಳೂರು:ಕೊರೋನಾ ಮಹಾಮಾರಿ ಎದುರಿಸುವಲ್ಲಿ ಸಾರ್ವಜನಿಕರಿಗೆ ನೆರವಾಗಲು ಕಾಂಗ್ರೆಸ್ ಕಾರ್ಯಕರ್ತರಿಗೂ ಅವಕಾಶ ನೀಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪತ್ರ ಬರೆದಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಕೊರೋನಾ ನಿರ್ವಹಣೆಗೆ ಬಿಜೆಪಿ ಕಾರ್ಯಕರ್ತರನ್ನು (ಕೊರೊನಾ ವಾರಿಯರ್ಸ್) ಬಳಸಿಕೊಳ್ಳುವುದಾಗಿ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಅವರು ನೀಡಿದ್ದ ಹೇಳಿಕೆ ಹಿನ್ನೆಲೆಯಲ್ಲಿ ಸಿಎಂಗೆ ಪತ್ರ ಬರೆದಿರುವ ಶಿವಕುಮಾರ್, ಹೇಳಿರುವುದಿಷ್ಟು:

‘ಜನಸೇವೆ ವಿಚಾರದಲ್ಲಿ ನಮ್ಮ ಪಕ್ಷ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ. ಕೋವಿಡ್ ಸಂತ್ರಸ್ತರ ನೆರವಿಗೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಎಲ್ಕ ಜಿಲ್ಲಾ, ತಾಲೂಕು ಹಾಗೂ ಪಂಚಾಯಿತಿ ಮಟ್ಟದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಹಗಲಿರುಳು ದುಡಿದು, ತನು ಮನ ಧನ ಸಹಾಯ ಮಾಡುತ್ತಿದ್ದಾರೆ.

ನಮ್ಮ ಪಕ್ಷದ ಕಾರ್ಯಕರ್ತರು ಸ್ವಯಂ ಸೇವಕರಾಗಿ ಕೆಲಸ ಮಾಡಲು ಸದಾ ಸನ್ನದ್ಧರಾಗಿದ್ದು, ಜನಸೇವೆಗೆ ಲಭ್ಯರಿದ್ದಾರೆ. ಹೀಗಾಗಿ ಸರ್ಕಾರ ಅಧಿಕೃತವಾಗಿ ನಮ್ಮ ಕಾರ್ಯಕರ್ತರಿಗೂ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಲು ಅವಕಾಶ ನೀಡಬೇಕು.’

ಸುಸಜ್ಜಿತ ಕೋವಿಡ್ ಆಸ್ಪತ್ರೆಯಾಗಿ ರೂಪುಗೊಳ್ಳುತ್ತಿದೆ ಬೆಂಗಳೂರಿನ ಬ್ರಾಡ್ ವೇ ಆಸ್ಪತ್ರೆ: ಅಗತ್ಯ ಸಿಬ್ಬಂದಿ ನೇಮಿಸಲು ಸಚಿವ ಡಾ.ಸುಧಾಕರ್ ಸೂಚನೆ

ಬೆಂಗಳೂರು – ಜುಲೈ 8, 2020: ಶಿವಾಜಿನಗರದ ಬ್ರಾಡ್ ವೇ ರಸ್ತೆಯಲ್ಲಿರುವ ಬಿಬಿಎಂಪಿಗೆ ಸೇರಿದ ಕಟ್ಟಡವನ್ನು ಸುಸಜ್ಜಿತ ಕೋವಿಡ್ ಆಸ್ಪತ್ರೆಯಾಗಿ ಸಜ್ಜುಗೊಳಿಸಲಾಗುತ್ತಿದೆ. ಇಲ್ಲಿಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವ ಸುಧಾಕರ್ ಅವರು, ಆಸ್ಪತ್ರೆಗೆ ಅಗತ್ಯವಿರುವ 30 ಕೋಟಿ ವೆಚ್ಚದ ಮೂಲಸೌಕರ್ಯವನ್ನು ಪ್ರತಿಷ್ಠಿತ ಇನ್ಫೋಸಿಸ್ ಫೌಂಡೇಷನ್ನಿನಿಂದ ಒದಗಿಸಲಾಗುತ್ತಿದ್ದು ಶೀಘ್ರದಲ್ಲೇ ಪೂರ್ಣ ಪ್ರಮಾಣದ ಕೋವಿಡ್ ಆಸ್ಪತ್ರೆಯಾಗಿ ರೂಪುಗೊಳ್ಳಲಿದೆ ಎಂದು ತಿಳಿಸಿದರು.

ಅರಂಭದಲ್ಲಿ ಹೈ ಫ್ಲೋ ಆಕ್ಸಿಜೆನ್ ಹೊಂದಿರುವ 180 ಹಾಸಿಗೆಗಳ ಸೌಕರ್ಯ ಒದಗಿಸಲಾಗುತ್ತಿದ್ದು, ಅಗತ್ಯವಿದ್ದಲ್ಲಿ ವೆಂಟಿಲೇಟರ್ ಅಳವಡಿಸುವ ವ್ಯವಸ್ಥೆ ಹೊಂದಿರುತ್ತದೆ ಎಂದು ಸಚಿವರು ಹೇಳಿದರು. ಆಸ್ಪತ್ರೆಗೆ 30 ವೆಂಟಿಲೇಟರ್ ಒದಗಿಸಲಾಗುತ್ತಿದ್ದು, ನ್ಯೂರೋ ಸರ್ಜರಿ ಓಟಿ, ಕಾರ್ಡಿಯೋ ಓಟಿ, ಸಿಟಿ ಸ್ಕ್ಯಾನ್ ಸೌಲಭ್ಯವನ್ನು ಈ ಆಸ್ಪತ್ರೆ ಒಳಗೊಂಡಿರುತ್ತದೆ. ಮುಂದಿನ 10 ದಿನಗಳ ಒಳಗೆ ಸಂಪೂರ್ಣವಾಗಿ ಸಿದ್ಧವಾಗಲಿದೆ ಎಂದು ಸಚಿವರು ತಿಳಿಸಿದರು.

ನಂತರ ಬೌರಿಂಗ್ ಮತ್ತು ಲೇಡಿ ಕರ್ಜ಼ನ್ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಸುಧಾಕರ್ ಅವರು, ಚಿಕಿತ್ಸಾ ಸೌಲಭ್ಯ ಸೇರಿದಂತೆ ಇಲ್ಲಿ ಪಾಲಿಸಲಾಗುತ್ತಿರುವ ಸುರಕ್ಷತಾಕ್ರಮಗಳ ಪರಾಮರ್ಶೆ ನಡೆಸಿದರು. ಸೋಂಕಿತರೊಂದಿಗೆ ವೀಡಿಯೋ ಸಂವಾದ ನಡೆಸಿ ಯೋಗಕ್ಷೇಮ ವಿಚಾರಿಸಿದರು. ಚಿಕಿತ್ಸಾ ಸೌಲಭ್ಯಗಳ ಕುರಿತು ಇಲ್ಲಿನ ರೋಗಿಗಳು ತೃಪ್ತಿ ವ್ಯಕ್ತಪಡಿಸಿದ್ದಾರೆ. ಇದೇ ಆಸ್ಪತ್ರೆಯಲ್ಲಿ ಕೋವಿಡ್ ಮರಣ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಮರಣ ಮೌಲ್ಯಮಾಪನಾ ವರದಿ (Death Audit Report ) ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಉದ್ಯೋಗ ಸೃಜಿಸುವ ಯೋಜನೆಗಳನ್ನು ರೂಪಿಸಿ: ಗೋವಿಂದ ಕಾರಜೋಳ ಸೂಚನೆ

ಬೆಂಗಳೂರು. ಜು.7 : ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದವರಿಗೆ ಉದ್ಯೋಗ ಕಲ್ಪಿಸುವಂತಹ ಯೋಜನೆಗಳನ್ನು ರೂಪಿಸುವಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು.

ವಿಕಾಸಸೌಧದಲ್ಲಿಂದು ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ಹಳ್ಳಿಗಳಿಗೆ ಹಿಂದಿರುಗಿದ್ದು, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಎಲ್ಲರಿಗೂ ಜಾಬ್ ಕಾರ್ಡ್ ನೀಡಿ ಎಲ್ಲರಿಗೂ ಕೆಲಸ ಒದಗಿಸಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೂಲಿ ಕಾರ್ಮಿಕರಿಗೆ ವರ್ಷದಲ್ಲಿ ಕಡ್ಡಾಯವಾಗಿ 100 ದಿನ ಕೆಲಸ ನೀಡಿ ಅವರ ಕೃಷಿ ಭೂಮಿಯಲ್ಲಿಯೂ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು. ರಾಜ್ಯದಲ್ಲಿ 65 ಲಕ್ಷ ಜಾಬ್ ಕಾರ್ಡ್‍ದಾರಿದ್ದು, ಅವರಲ್ಲಿ 15 ಲಕ್ಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿದ್ದಾರೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಜಾಬ್ ಕಾರ್ಡ್‍ಗಳನ್ನು ನೀಡಿ ಗ್ರಾಮೀಣ ಪ್ರದೇಶದ ಎಲ್ಲಾ ಕುಟುಂಬಗಳನ್ನು ಈ ಸೌಲಭ್ಯದ ವ್ಯಾಪ್ತಿಗೆ ತರುವಂತೆ ಅಧಿಕಾರಿಗಳಿಗೆ ಸೂಚಿಲಾಗಿದೆ.

ಕೆ.ಎಂ.ಎಫ್ ಹಾಲಿನ ಸೊಸೈಟಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರನ್ನು ಸದಸ್ಯರನ್ನಾಗಿ ನೊಂದಾಯಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಹಾಲು ಉತ್ಪಾದನೆಯನ್ನು ಕೈಗೊಳ್ಳಲು ಉತ್ತೇಜಿಸಲು ಕರು, ಹಸು ಎಮ್ಮೆಗಳನ್ನು ಸಾಲ ಮತ್ತು ಸಹಾಯಧನದಲ್ಲಿ ಒದಗಿಸಲು ಯೋಜನೆಯನ್ನು ರೂಪಿಸಬೇಕು. ಕೆ.ಎಂ.ಎಫ್ ಮಳಿಗೆಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹಂಚಿಕೆ ಮಾಡಿ ಹಾಲು ಉತ್ಪನ್ನಗಳನ್ನು ಮಾರಲು ಅವಕಾಶ ಕಲ್ಪಿಸಬೇಕು. ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೆ.ಎಂ.ಎಫ್ ಹಾಲಿನ ಸೊಸೈಟಿಗಳನ್ನು ಸ್ಥಾಪಿಸಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡಬೇಕು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ತರಕಾರಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಉತ್ತೇಜನ ನೀಡಬೇಕು. ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಾಪ್‍ಕಾಮ್ಸ್‍ಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರನ್ನು ಸದಸ್ಯರನ್ನಾಗಿ ನೊಂದಾಯಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಹಾಪ್‍ಕಾಮ್ಸ್ ಮೂಲಕ ವಿವಿಧ ಇಲಾಖೆಗಳ ವಸತಿ ನಿಲಯಗಳು ಮತ್ತು ವಸತಿ ಶಾಲೆಗಳಿಗೆ ತರಕಾರಿ ಸರಬರಾಜು ಮಾಡಬೇಕು. ಹಾಪ್‍ಕಾಮ್ಸ್ ನಿಂದ ತರಕಾರಿ ಮತ್ತು ಹಣ್ಣುಗಳಿಗೆ ನಿಗದಿಪಡಿಸಿರುವ ದರವನ್ನು ಆಯಾ ಇಲಾಖೆಗಳು ಭರಿಸುವಂತೆ ಆದೇಶಿಸಲಾಗಿದೆ.

ಶಾಲೆಗಳು ಪ್ರಾರಂಭವಾಗದ ಹಿನ್ನೆಲೆಯಲ್ಲಿ ಮಿಡ್ ಡೇ ಮೀಲ್ ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಮತ್ತು ಇತರೆ ಮಕ್ಕಳಿಗೆ ಆಹಾರ ಧಾನ್ಯಗಳನ್ನು ಮನೆಗೆ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು. ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ಮತ್ತು ವರ್ಕ್ ಪುಸ್ತಕಗಳನ್ನು ಮನೆಗೆ ಸರಬರಾಜು ಮಾಡಬೇಕು. ಟಿ.ವಿ, ರೇಡಿಯೋ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಪಾಠದ ವ್ಯವಸ್ಥೆ ಮಾಡಬೇಕು. ವಲಸೆ ಕಾರ್ಮಿಕರು ಮರಳಿ ಬಂದಿದ್ದು ಇವರ ಮಕ್ಕಳು ಶಾಲೆ ಬಿಡದಂತೆ ಕ್ರಮವಹಿಸಬೇಕು.ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಕಾರ್ಯಕ್ರಮಗಳಡಿ ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಲು ಎಲ್ಲಾ ಮಂಡಳಿಗಳು ಕ್ರಮಕೈಗೊಳ್ಳಬೇಕು. ಮಂಡಳಿಗಳು ಮಹಿಳೆಯರು ಮತ್ತು ನಿರುದ್ಯೋಗಿಗಳಿಗೆ ಕೌಶಲ್ಯಾಭಿವೃದ್ದಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಟಾನ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

 

ಸಮಾಜ ಕಲ್ಯಾಣ ಇಲಾಖೆಯ ಸೇವೆಗಳು ಸಕಾಲ ವ್ಯಾಪ್ತಿಗೆ : ಡಿಸಿಎಂ ಕಾರಜೋಳ ಚಾಲನೆ

ಬೆಂಗಳೂರು. ಜು.7 : ಸಮಾಜ ಕಲ್ಯಾಣ ಇಲಾಖೆಯ ಪ್ರಮುಖ 9 ಯೋಜನೆಗಳನ್ನು ನಿಗಧಿತ ಕಾಲಮಿತಿಯೊಳಗೆ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಉದ್ದೇಶದಿಂದ ಸಕಾಲ ಯೋಜನೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ತಿಳಿಸಿದರು.

ವಿಕಾಸಸೌಧದಲ್ಲಿಂದು ಈ ಸೇವೆಗಳನ್ನು ಸಕಾಲ ಯೋಜನೆಗೆ ಒಳಪಡಿಸಲು ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಯೋಜನೆಗಳನ್ನು ಅರ್ಹಫಲಾನುಭವಿಗಳಿಗೆ ಸುಲಿತ ಹಾಗೂ ಶೀಘ್ರವಾಗಿ ತಲುಪಿಸಬಹುದಾಗಿದೆ. ಈ ಸದುದ್ದೇಶದಿಂದ ಅಂತರ್ಜಾತಿ ವಿವಾಹಿತ ದಂಪತಿಗಳಿಗೆ ಪ್ರೋತ್ಸಾಹಧನ, ದೌರ್ಜನ್ಯ ಸಂತ್ರಸ್ತರಿಗೆ ಪರಿಹಾರ, ಯುಪಿಎಸ್‍ಸಿ, ಕೆಎಎಸ್ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷಾ ಪೂರ್ವ ತರಬೇತಿ, ಸಾಗರೋತ್ತರ ವಿದ್ಯಾರ್ಥಿ ವೇತನ ನೀಡುವ ಪ್ರಬುದ್ಧ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ, ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿನಿಲಯಗಳಿಗೆ ಪ್ರವೇಶ ಯೋಜನೆಗಳನ್ನು ಸಕಾಲ ವ್ಯಾಪ್ತಿಗೊಳಪಡಿಸಲಾಗಿದೆ. ಫಲಾನುಭವಿಗಳು ಈ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್, ಆಯುಕ್ತ ರವಿಕುಮಾರ್ ಸುರಪುರ್, ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯ ಸಲಹೆಗಾರರಾದ ಇ.ವೆಂಕಟಯ್ಯ, ಡಿಸಿಎಂ ಅವರ ಆಪ್ತ ಕಾರ್ಯದರ್ಶಿ  ವಿ.ಶ್ರೀನಿವಾಸ, ಅಪರ ನಿರ್ದೇಶಕ ನಾಗೇಶ್, ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮುಖ್ಯಸ್ಥ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

ಕೋವಿಡ್ ನಿಯಂತ್ರಣಕ್ಕೆ ರಾಜ್ಯದ ಕ್ರಮ- ಕೇಂದ್ರ ತಂಡದ ಮೆಚ್ಚುಗೆ

ಬೆಂಗಳೂರು, ಜುಲೈ 7– ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಇಂದು ಭೇಟಿಯಾದ ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳ ತಂಡವು ರಾಜ್ಯದ ಕೋವಿಡ್ ನಿರ್ವಹಣೆಯ ಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿತು.

ಕೇಂದ್ರ ಆರೋಗ್ಯ ಸಚಿವಾಲಯದ ಅಪರ ಕಾರ್ಯದರ್ಶಿ ಆರ್ತಿ ಅಹುಜಾ ಹಾಗೂ ತುರ್ತು ವೈದ್ಯಕೀಯ ಸ್ಪಂದನಾ ಕೇಂದ್ರದ ನಿರ್ದೇಶಕ ಡಾ. ರವೀಂದ್ರನ್ ಅವರು ರಾಜ್ಯಕ್ಕೆ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಚರ್ಚಿಸಿದರು. ಈ ಸಂದರ್ಭದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸಂಪರ್ಕಿತರ ಪತ್ತೆ ಹಚ್ಚುವುದು ಹಾಗೂ ಕೊ-ಮಾರ್ಬಿಡ್ ವ್ಯಕ್ತಿಗಳನ್ನು ಗುರುತಿಸಿ, ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಈ ತಂಡವು ಪ್ರಶಂಸೆ ಮಾಡಿತು.

ಮುಂದಿನ ದಿನಗಳಲ್ಲಿ, ಕೋವಿಡ್ ನಿಂದ ಉಂಟಾಗುವ ಮರಣವನ್ನು ತಡೆಗಟ್ಟಲು ಹಾಗೂ ರೋಗ ಲಕ್ಷಣ ಇರುವ ಸೋಂಕಿತರಿಗೆ ಸೂಕ್ತ ಚಿಕಿತ್ಸಾ ಸೌಲಭ್ಯ ಒದಗಿಸಲು ಆದ್ಯತೆ ನೀಡಬೇಕಾಗಿದೆ.

ಜೊತೆಗೆ ಕಂಟೇನ್ ಮೆಂಟ್ ವಲಯಗಳಲ್ಲಿ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆಯಾಗಬೇಕಾಗಿದೆ ಎಂದು ಕೇಂದ್ರ ತಂಡದ ಅಧಿಕಾರಿಗಳು ಸಲಹೆ ನೀಡಿದರು.

ರಾಜ್ಯದಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು, ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳು ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಹೈ ಫ್ಲೋ ಆಕ್ಷಿಜನ್ ವ್ಯವಸ್ಥೆ ಅಳವಡಿಸಲಾಗುತ್ತಿದ್ದು, ಆಗಸ್ಟ್ 15 ರೊಳಗಾಗಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿವೆ ಎಂದು ವಿವರಿಸಿದರು..

ಸಭೆಯಲ್ಲಿ ಆರೋಗ್ಯ ಸಚಿವ ಬಿ. ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು..