ವಿಕ್ಟೋರಿಯಾ ಆಸ್ಪತ್ರೆಗೆ ಸಚಿವ ಸುಧಾಕರ್ ಭೇಟಿ ; ಲೋಪಗಳಿಗೆ ಅವಕಾಶ ನೀಡದಂತೆ ವೈದ್ಯರಿಗೆ ಸೂಚನೆ

ಬೆಂಗಳೂರು : ಕೋವಿಡ್ ರೋಗಿಗಳ ಚಿಕಿತ್ಸೆ ಮತ್ತು ಸೌಲಭ್ಯಗಳ ವಿಷಯದಲ್ಲಿ ಲೋಪಗಳಿಗೆ ಅವಕಾಶವಿಲ್ಲದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಲು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸೂಚನೆ ನೀಡಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳು, ವೈದ್ಯರು ಮತ್ತು ಸಿಬ್ಬಂದಿ ಜತೆ ಸಮಾಲೋಚನೆ ನಡೆಸಿ ಪರಿಶೀಲನೆ ನಡೆಸಿದ ಸಚಿವರು ಸಭೆಯಲ್ಲಿ ಈ ಕುರಿತು ಎಚ್ಚರಿಕೆ ನೀಡಿದರು. ಮುಖ್ಯಮಂತ್ರಿ ಯವರ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಾಧ್ಯಮಗಳಲ್ಲಿ ಆಸ್ಪತ್ರೆಗೆ ಸಂಬಂಧಿಸಿದಂತೆ ನಕಾರಾತ್ಮಕ ವರದಿಗಳು ಬರುತ್ತಿವೆ. ಹಗಲು- ರಾತ್ರಿ ಲೆಕ್ಕಿಸದೆ ಮುಖ್ಯ ಮಂತ್ರಿ ಆದಿಯಾಗಿ ಎಲ್ಲರೂ ಕೆಲಸ ಮಾಡುತ್ತಿರುವಾಗ ಇಂತಹ ಲೋಹಗಳನ್ನು ಸಹಿಸಲು ಸಾಧ್ಯವಿಲ್ಲ. ನಿಮಗೆ ಬೇಕಿರುವ ಎಲ್ಲ ಸೌಲಭ್ಯಗಳನ್ನು ಸರ್ಕಾರ ನೀಡಲು ಸಿದ್ಧ ಆದರೆ ತಪ್ಪುಗಳು ಮರುಕಳಿಸಬಾರದು ಎಂದು ತಾಕೀತು ಮಾಡಿದರು.

ಪ್ರತಿದಿನ ದಾಖಲು ಆಗುತ್ತಿರುವ ಸೋಂಕಿತರು ಮತ್ತು ಗುಣಮುಖರಾಗಿ ಬಿಡುಗಡೆ ಆಗುವವರ ಸಂಖ್ಯೆ ಯನ್ನು ಅಧಿಕೃತವಾಗಿ ತಿಳಿಸುವ ವ್ಯವಸ್ಥೆ ಮಾಡಬೇಕು. ಹಾಗೆಯೇ ಸಾವಿನ ಸಂಖ್ಯೆ ಮತ್ತು ಕಾರಣಗಳು, ಗಂಭೀರ ಸ್ಥಿತಿಯಲ್ಲಿ ಇರುವವರು ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಅನುಸರಿಸುತ್ತಿರುವ ಚಿಕಿತ್ಸಾ ವಿಧಿ- ವಿಧಾನಗಳು, ಡಯಾಲಿಸಿಸ್ ಸೌಲಭ್ಯ ಪಡೆಯುತ್ತಿರುವವರ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಮಾಹಿತಿಯನ್ನು ಪ್ರತಿದಿನವೂ ಕೊಡಬೇಕು. ಹಾಗೆಯೇ ಗರ್ಭಿಣಿಯರ ವಿವರಗಳನ್ನು ನೀಡಲು ಸೂಚಿಸಿದರು.

ಈ ಹಿಂದೆ ಸೂಚನೆ ನೀಡಿದ್ದಂತೆ ಟೆಲಿ ಐಸಿಯುಗೆ ಸೇರ್ಪಡೆ ಮಾಡಿಲ್ಲದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಆದಷ್ಟು ಬೇಗ ಸೇರ್ಪಡೆ ಮಾಡುವಂತೆ ತಿಳಿಸಿದರು.
ಇದಾದ ಬಳಿಕ ವಿಡಿಯೋ ಸಂವಾದದ ಮೂಲಕ ಐಸಿಯು, ವಾರ್ಡುಗಳಲ್ಲಿರುವ ರೋಗಿಗಳ ಜತೆ ಸಮಾಲೋಚನೆ ನಡೆಸಿ ಚಿಕಿತ್ಸೆ ಮತ್ತು ಸೌಲಭ್ಯಗಳ ಗುಣಮಟ್ಟದ ಬಗ್ಗೆ ವಿಚಾರಿಸಿದರು. ಊಟದ ಗುಣಮಟ್ಟದ ಬಗ್ಗೆ ವಿಚಾರಿಸಿದರು. ಅದಕ್ಕೆ ಎಲ್ಲಾ ರೋಗಿಗಳು ತೃಪ್ತಿ ವ್ಯಕ್ತಪಡಿಸಿದರು.

ಆನ್‍ಲೈನ್ ಶಿಕ್ಷಣ: ಸುರೇಶ್ ಕುಮಾರ್ ಗೆ ತಜ್ಞರ ಸಮಿತಿ ವರದಿ ಸಲ್ಲಿಕೆ

ಬೆಂಗಳೂರು: ಕೋವಿಡ್ ಕಾಲಘಟ್ಟದಲ್ಲಿ ರಾಜ್ಯದಲ್ಲಿ ಶಾಲಾ ಶಿಕ್ಷಣದಲ್ಲಿ ಕಲಿಕೆ ಮುಂದುವರಸುವ ಸಂಬಂಧದಲ್ಲಿ ತಂತ್ರಜ್ಞಾನಾಧಾರಿತ ಶಿಕ್ಷಣ ಕುರಿತಂತೆ ಪ್ರೊ. ಎಂ.ಕೆ. ಶ್ರೀಧರ್ ಅಧ್ಯಕ್ಷತೆಯ ತಜ್ಞರ ಸಮಿತಿ ಮಂಗಳವಾರ ಸರ್ಕಾರಕ್ಕೆ ವರದಿ ಸಲ್ಲಿಸಿತು.

ಸರ್ವಶಿಕ್ಷಣ –ಕರ್ನಾಟಕ ಸಭಾಂಗಣದಲ್ಲಿ ಪ್ರೊ. ಎಂ.ಕೆ. ಶ್ರೀಧರ್ ನೇತೃತ್ವದಲ್ಲಿ ಸಮಿತಿ ಸದಸ್ಯರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ವರದಿ ಸಲ್ಲಿಸಿದರು.

ಸಮಿತಿಯಲ್ಲಿ ಸಮಾಜದ ಹಲವಾರು ಸ್ತರಗಳನ್ನು ಪ್ರತಿನಿಧಿಸುವ ಸದಸ್ಯರಿದ್ದಾಗ್ಯೂ ಎಲ್ಲರ ಉದ್ದೇಶವೂ ನಮ್ಮ ಶಿಕ್ಷಣದ ಪ್ರಮುಖ ಪಾಲುದಾರರಾದ ಮಕ್ಕಳ ಹಿತವನ್ನೇ ಗಮನದಲ್ಲಿಟ್ಟುಕೊಂಡಿದ್ದರಿಂದ ಒಂದು ಉತ್ತಮವಾದ ವರದಿಯನ್ನು ತಯಾರು ಮಾಡಿ ಸರ್ಕಾರಕ್ಕೆ ಸಲ್ಲಿಸಲು ಸಾಧ್ಯವಾಯಿತು ಎಂದು ಸಮಿತಿ ಅಧ್ಯಕ್ಷ ಹಾಗೂ ಹಿರಿಯ ಶಿಕ್ಷಣ ತಜ್ಞ ಪ್ರೊ. ಎಂ.ಕೆ. ಶ್ರೀಧರ್ ಹೇಳಿದರು.

ಇದು ಕೊರೋನಾ ಸಾಂಕ್ರಾಮಿಕ ಕಾಲಘಟ್ಟದಲ್ಲಿ ನಮ್ಮ ಮಕ್ಕಳ ಶಿಕ್ಷಣ ಕಲಿಕೆಯ ಮುಂದುವರಿಕೆಗೆ ತೊಂದರೆಯಾಗಬಾರದು, ಅದನ್ನು ಹೇಗೆ ಮುಂದುವರೆಸಬೇಕು, ಮುಂದುವರಿಕೆ ಕ್ರಮಗಳಿಂದ ಮಕ್ಕಳ ಮಾನಸಿಕ ಆರೋಗ್ಯಕ್ಕೆ ವ್ಯತ್ಯಯವಾಗದಂತೆ ಯಾವ ರೀತಿ ಅದನ್ನು ಮುಂದವರೆಸೆಬೇಕೆಂಬುದನ್ನು ಗಮನದಲ್ಲಿಟ್ಟುಕೊಂಡು ಸಮಿತಿ ವರದಿ ಸಲ್ಲಿಸಿದೆ ಎಂದು ಅವರು ಹೇಳಿದರು.

ವರದಿ ಸ್ವೀಕರಿಸಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಕರ್ನಾಟಕ ರಾಜ್ಯದ ಶಾಲಾ ಶಿಕ್ಷಣದಲ್ಲಿ ಕಲಿಕೆಯ ಮುಂದುವರೆಯುವಿಕೆ ಹಿನ್ನೆಲೆಯಲ್ಲಿ ಕೋವಿಡ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ತಂತ್ರಜ್ಞಾನಾಧಾರಿತ ಶಿಕ್ಷಣಕ್ಕಾಗಿ ಮಾರ್ಗಸೂಚಿಗಳನ್ನು ಸಿದ್ಧಪಡಿಸಿ ಕೆಲವೇ ದಿನಗಳಲ್ಲಿ ವರದಿ ಸಲ್ಲಿಸಿರುವ ತಜ್ಞರ ಸಮಿತಿಗೆ ಕೃತಜ್ಞತೆ ಸಲ್ಲಿಸಿದರು. ಡಾ. ಪ್ರೊ. ಎಂ.ಕೆ. ಶ್ರೀಧರ್, ಗುರುರಾಜ ಕರ್ಜಗಿ, ಪ್ರೊ. ವಿ.ಪಿ. ನಿರಂಜನಾರಾಧ್ಯ ಅವರಂತಹ ಹಿರಿಯ ಶಿಕ್ಷಣ ತಜ್ಞರು ಈ ಸಮಿತಿಯಲ್ಲಿ ಸೇವೆ ಸಲ್ಲಿಸುವ ಮೂಲಕ ಒಂದು ರಚನಾತ್ಮಕ ವರದಿ ನೀಡಿರುವುದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಹೇಳಿದರು.

ಕೋವಿಡ್ ಸಾಂಕ್ರಾಮಿಕ ರೋಗ ಪ್ರಸರಣದ ಹಿನ್ನೆಲೆಯಲ್ಲಿ ಶಾಲೆಗಳು ಸಕಾಲದಲ್ಲಿ ಆರಂಭವಾಗದಿರುವಾಗ ಕೆಲ ಶಿಕ್ಷಣ ಸಂಸ್ಥೆಗಳು ಆನ್‍ಲೈನ್ ಶಿಕ್ಷಣ ನೀಡಲು ಮುಂದಾದವು. ಇನ್ನೂ ಕೆಲ ಸಂಸ್ಥೆಗಳು ಅದರ ಹೆಸರಲ್ಲಿ ಪ್ರತ್ಯೇಕ ಶುಲ್ಕ ವಸೂಲು ಮಾಡಲು ಶುರು ಮಾಡಿದವು. ಹಾಗೆಯೇ ಅವೈಜ್ಞಾನಿಕವಾಗಿ ಆನ್‍ಲೈನ್ ಬೋಧನೆ ಅನುಸರಿಸುತ್ತಿದ್ದ ಕೆಲ ಶಿಕ್ಷಣ ಸಂಸ್ಥೆಗಳಿಗೆ ಇದಕ್ಕೆಲ್ಲಾ ಕಡಿವಾಣ ಹಾಕಬೇಕೆಂಬ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ಮತ್ತು ಹಿತವನ್ನು ಗಮನದಲ್ಲಿಟ್ಟುಕೊಂಡು ಈ ಕುರಿತಂತೆ ವಿಸ್ತೃತ ವರದಿ ಪಡೆಯಲು ಸರ್ಕಾರ ತಜ್ಞರ ಸಮಿತಿ ರಚಿಸಿದ್ದು, ಸಮಿತಿ ಮಕ್ಕಳ ಹಿತದೃಷ್ಟಿಯನ್ನಿಟ್ಟುಕೊಂಡು ನೀಡಿರುವ ವರದಿ ನಮ್ಮ ಕೈಸೇರಿದೆ ಎಂದರು.

ಸಮಿತಿಯ ವರದಿಯ ಪೂರ್ಣಪಾಠವನ್ನು ಅಧ್ಯಯನ ಮಾಡಿ ಅದು ಸೂಚಿಸಿರುವ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು, ರಾಜ್ಯದಲ್ಲಿ ಆನ್‍ಲೈನ್ ಶಿಕ್ಷಣ ಕುರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ನೀಡುವ ತೀರ್ಪಿಗನುಗುಣವಾಗಿ ನಿಯಮಗಳನ್ನು ಸಿದ್ಧಪಡಿಸಲಾಗುವುದೆಂದು ಸಚಿವರು ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಇರುವ ಸೌಲಭ್ಯಗಳು, ಮಕ್ಕಳ ಶಿಕ್ಷಣದ ಹಕ್ಕು, ವಿಭಿನ್ನ ವಯೋಮಾನದವರಿಗೆ ವಿಭಿನ್ನ ಕಲಿಕೆಯ ತಂತ್ರಗಳು ಸೇರಿದಂತೆ ಸಮಗ್ರವಾದ ಚಿತ್ರಣ ಕಲ್ಪಿಸಲಾಗಿದೆ. ನಮ್ಮ ಸರ್ಕಾರಿ ಶಾಲಾ ಮಕ್ಕಳು ತಂತ್ರಜ್ಞಾನ ಆಧಾರಿತ ಶಿಕ್ಷಣದಿಂದ ವಂಚಿತರಾಗದಂತೆ ಯಾವ ಯಾವ ಉಪಕ್ರಮಗಳನ್ನು ಉಪಯೋಗಿಸಿಕೊಂಡು ಕಲಿಕೆ ಮುಂದುವರೆಸಹುದೆಂಬುದು ಸೇರಿದಂತೆ ಸಮಿತಿ ತನ್ನೆಲ್ಲಾ ಶಿಫಾರಸುಗಳ ಜೊತೆ ಇಂತಹ ಸಂದರ್ಭದಲ್ಲಿ ಕಲಿಕೆಯನ್ನು ಮುಂದುವರೆಸಲು ಮ್ಯಾಟ್ರಿಕ್ಸ್‍ವೊಂದನ್ನು ಸಹ ಒದಗಿಸಿದೆ ಎಂದು ಸಚಿವರು ತಿಳಿಸಿದರು.

3 ರಿಂದ 6 ವರ್ಷ ವಯೋಮಾನದ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಆಟ, ಕಥೆ, ಪ್ರಾಸ ಸೇರಿದ ನವೀನ ಚಟುವಟಿಕೆಗಳನ್ನು ಮಾತ್ರ ಪಾಲಕರ ಕಡ್ಡಾಯ ಉಪಸ್ಥಿತಿಯಲ್ಲಿ ನೇರ/ ಮುದ್ರಿತ ಬೋಧನಾ ವಿಧಾನಗಳು. ವಾರಕ್ಕೆ ಮೂರು ದಿನ ಪ್ರತಿದಿನ ಒಂದು ಅವಧಿಯಂತೆ ಕಲಿಸಬಹುದು. ಅದೇ ರೀತಿ 1ರಿಂದ 2ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಆಟ, ಕಥೆಯ ರೂಪದ ನವೀನ ಚಟುವಟಿಕೆಗಳನ್ನು ಮಾತ್ರ ವಾರಕ್ಕೆ ಮೂರು ದಿನ ಪ್ರತಿದಿನ ಎರಡು ಅವಧಿಯ ಕಲಿಕೆಗೆ ಅವಕಾಶ ನೀಡಬಹುದು ಎಂಬ ಕುರಿತು ವರದಿಯಲ್ಲಿ ವಿವರಿಸಲಾಗಿದೆ. 3ರಿಂದ 5ನೇ ತರಗತಿಗಳಿಗೆ ವಾರಕ್ಕೆ 5ದಿನ ಪ್ರತಿದಿನ 30 ನಿಮಿಷದ 2 ಅವಧಿಗಳನ್ನು ಆನ್ ಲೈನ್ ಬೋಧನೆ ಮಾಡಬಹುದೆಂದು ಸಮಿತಿ ಹೇಳಿದೆ. ಪಠ್ಯಕ್ಕೆ ಪೂರಕ ಬೋಧನೆಯನ್ನು ಅಳವಡಿಸಿಕೊಳ್ಳಬಹುದು. 6ರಿಂದ 8ನೇ ತರಗತಿಗೆ 30ರಿಂದ 45 ನಿಮಿಷಗಳ ಗರಿಷ್ಠ 3 ಅವಧಿ ಹಾಗೂ 9-10ನೇ ತರಗತಿಗೆ 30-45 ನಿಮಿಷಗಳ ಪ್ರತಿದಿನದ ಗರಿಷ್ಠ 4 ಅವಧಿ ಪರ್ಯಾಯ ಕಲಿಕೆಯನ್ನು ಶಿಫಾರಸು ಮಾಡಿದೆ ಎಂದು ಸಚಿವರು ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ ಪರ್ಯಾಯ ಬೋಧನಾ ಕ್ರಮಗಳ ಕುರಿತಂತೆ ಇಷ್ಟರಲ್ಲಿಯೇ ದೂರದರ್ಶನ/ಆಕಾಶವಾಣಿ ಮೂಲಕ ಸೇತುಬಂಧ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುತ್ತಿದೆ. ಪ್ರತಿ ಶಿಕ್ಷಕರನ್ನು ಪ್ರತಿ ವಿದ್ಯಾರ್ಥಿಯೊಂದಿಗೆ ಮ್ಯಾಪಿಂಗ್ ಮಾಡಿ ಕಲಿಕೆಯನ್ನು ಅನುಪಾಲಿಸುವ ಸಮರ್ಥ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ವಿಶಿಷ್ಟವಾಗಿ ಸಂಕಷ್ಟದ ಸಮಯದಲ್ಲಿ ಅಲ್ಲದೇ ಆ ನಂತರವೂ ತಂತ್ರಜ್ಞಾನಾಧಾರಿತ ಶಿಕ್ಷಣವನ್ನು ನಮ್ಮ ಮಕ್ಕಳಿಗೆ ಯಾವ ರೀತಿಯಲ್ಲಿ ನೀಡಬಹುದು, ಅದಕ್ಕೆ ಯಾವ ವೇದಿಕೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು, ಯಾವ ವಯಸ್ಸಿನ ಮಕ್ಕಳಿಗೆ ಎಷ್ಟು ಸಮಯ ಇಂತಹ ಶಿಕ್ಷಣ ನೀಡಬಹುದೆನ್ನುವುದು ಸೇರಿದಂತೆ ಸವಿಸ್ತಾರವಾದ ವರದಿ ಕೈ ಸೇರಿದ್ದು, ಈ ಕುರಿತಂತೆ ನಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

ಸಮಿತಿ ಸದಸ್ಯರಾದ ಹಿರಿಯ ಶಿಕ್ಷಣ ತಜ್ಞ ಡಾ. ವಿ.ಪಿ. ನಿರಂಜನಾರಾಧ್ಯ, ಅಜೀಂ ಪ್ರೇಂಜಿ ಪ್ರತಿಷ್ಠಾನದ ಪ್ರತಿನಿಧಿ ಬಿ.ಎಸ್. ಹೃಷಿಕೇಶ್, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, ಅರ್ಲಿ ಚೈಲ್ಡ್‍ಹುಡ್ ಅಸೋಷಿಯೇಷನ್ ರಾಜ್ಯ ಸಮಿತಿ ಸದಸ್ಯೆ ಶ್ರೀಮತಿ ಪ್ರೀತಿವಿಕ್ರಂ, ಎಚ್.ಎನ್.ಗೋಪಾಲಕೃಷ್ಣ, ಎಂ.ಆರ್. ಮಾರುತಿ, ಸತ್ಯಮೂರ್ತಿ, ಕೃಷ್ಣಾಜಿ, ಮಮತಾ ಮತ್ತಿತರರು ಮಾತನಾಡಿದರು.

ಸಮಿತಿ ಸದಸ್ಯ ಕಾರ್ಯದರ್ಶಿ, ಸರ್ವಶಿಕ್ಷಣ ಕರ್ನಾಟಕ ರಾಜ್ಯ ಯೋಜನಾಧಿಕಾರಿ ಡಾ. ಎಂ.ಟಿ. ರೇಜು ಪ್ರಾಸ್ತಾವಿಕವಾಗಿ ಮಾತನಾಡಿ ಸಮಿತಿ ವರದಿ ಸಿದ್ಧಪಡಿಸಲು ತೆಗೆದುಕೊಂಡ ಕ್ರಮಗಳನ್ನು ವಿವರಿಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್ ಸಮಿತಿ ರಚನೆ ಮತ್ತು ಅದರ ಕಾರ್ಯಸೂಚಿಗಳನ್ನು ವಿವರಿಸಿದರು.

ಎದೆ ಎಕ್ಸ್‌ ರೇ ಯಿಂದಲೇ ಕೋವಿಡ್‌ ಪತ್ತೆ ಸಂಶೋಧನೆಯಲ್ಲಿ ಕನ್ನಡಿಗರ ಮುನ್ನಡೆ: 6 ಉತ್ಪನ್ನಗಳನ್ನು ಬಿಡುಗಡೆ ಮಾಡಿದ ಡಿಸಿಎಂ

ಬೆಂಗಳೂರು: ಇದುವರೆಗೂ ವಿದೇಶಗಳಿಂದ ಮಾತ್ರ ಆಮದು ಮಾಡಿಕೊಂಡು ಕೋವಿಡ್- 19 ಸೋಂಕನ್ನು ಹತ್ತಿಕ್ಕಲು ಉಪಯೋಗಿಸಲಾಗುತ್ತಿದ್ದ ಆರು ಪ್ರಮುಖ ಉತ್ಪನ್ನಗಳನ್ನು ಇದೀಗ ದೇಶಿಯವಾಗಿಯೇ ಬೆಂಗಳೂರಿನ, ಅದರಲ್ಲೂ ಕನ್ನಡದ ವಿಜ್ಞಾನಿಗಳು ಮತ್ತು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಇದರೊಂದಿಗೆ ಕೋವಿಡ್ ವಿರುದ್ಧದ ಸಮರದಲ್ಲಿ ರಾಜ್ಯಕ್ಕೆ ಮಹತ್ವದ ಮುನ್ನಡೆ ಸಿಕ್ಕಿದೆ.

ರಾಜ್ಯದ ಐಟಿ- ಬಿಟಿ ಇಲಾಖೆ ವ್ಯಾಪ್ತಿಯ ಬೆಂಗಳೂರು ಬಯೋ ಇನ್ನೋವೇಷನ್‌ ಕೇಂದ್ರದ ಅಡಿಯಲ್ಲಿ ಸಂಶೋಧನೆಯಲ್ಲಿ ನಿರತವಾಗಿರುವ ವಿವಿಧ ಸ್ಟಾರ್ಟ್‌ಅಪ್‌ ಗಳು ಈ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ್ದು, ಇದರಿಂದಾಗಿ ನಾವು ಬಹುತೇಕ ವಿದೇಶಿ ಅವಲಂಬನೆಯನ್ನು ತಗ್ಗಿಸಬಹುದಾಗಿದೆ. ಜತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತ ಪರಿಕಲ್ಪನೆಯ ಸ್ಫೂರ್ತಿಯಿಂದ ಇವೆಲ್ಲ ಸಿದ್ಧವಾಗಿವೆ ಎಂದು ಐಟಿ-ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಮಂಗಳವಾರ ಇಲ್ಲಿ ತಿಳಿಸಿದರು.

ಈ ಆರೂ ಉತ್ಪನ್ನಗಳನ್ನು ಬಿಡುಗಡೆ ಮಾಡಿದರಲ್ಲದೆ, ಇವುಗಳಿಗೆ ಐಸಿಎಂಆರ್ (ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ) ಮಾನ್ಯತೆ ಸಿಕ್ಕಿದೆ ಎಂಬುದನ್ನು ಅವರು ಇದೇ ಸಂದರ್ಭದಲ್ಲಿ ಪ್ರಕಟಿಸಿದರು. ಈ ಕ್ಷಣದಿಂದಲೇ ಇವೆಲ್ಲವನ್ನು ಎಲ್ಲರೂ ಬಳಸಬಹುದು, ಖರೀದಿ ಮಾಡಬಹುದು. ಜತೆಗೆ ಸರಕಾರವು ಈ ಉತ್ಪನ್ನಗಳಿಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡಲಿದೆ ಎಂದು ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಅತ್ಯಂತ ಅಲ್ಪಾವಧಿಯಲ್ಲಿಯೇ ನಮ್ಮ ಯುವ ಸಂಶೋಧಕರು, ವಿಜ್ಞಾನಿಗಳು ಈ ಉತ್ಪನ್ನಗಳನ್ನು ತಯಾರಿಸಿದ್ದಾರೆ. ಇವು ವಿದೇಶಗಳಿಂದ ನಾವು ಆಮದು ಮಾಡಿಕೊಳ್ಳುತ್ತಿದ್ದ ಉತ್ಪನ್ನಗಳಿಗಿಂತ ಉತ್ತಮ ಗುಣಮಟ್ಟದವು, ಮತ್ತೂ ಅವುಗಳಿಗಿಂತ ಮುಂದುವರೆದ ತಂತ್ರಜ್ಞಾನವನ್ನು ಹೊಂದಿವೆ. ಕರ್ನಾಟಕ ಮಾತ್ರವಲ್ಲದೆ, ಭಾರತ ನಡೆಸುತ್ತಿರುವ ಕೋವಿಡ್ ವಿರುದ್ಧದ ಹೋರಾಟಕ್ಕೆ ಇದರಿಂದ ದೊಡ್ಡ ಬಲ ಬಂದಂತೆ ಆಗಿದೆ. ಇದಕ್ಕಾಗಿ ನಾನು ಸಂಬಂಧಪಟ್ಟ ಎಲ್ಲರನ್ನೂ ಅಭಿನಂದಿಸುತ್ತೇನೆ ಎಂದು ಡಿಸಿಎಂ ಹೇಳಿದರು.
ಐಟಿ-ಬಿಟಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಮಣರೆಡ್ಡಿ, ಬೆಂಗಳೂರು ಬಯೊ ಇನ್ನೊವೇಷನ್‌ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಡಾ.ಜಿತೇಂದ್ರ ಕುಮಾರ್‌, ಉಪ ಮುಖ್ಯಮಂತ್ರಿಯವರ ಕಾರ್ಯದರ್ಶಿ ಪಿ.ಪ್ರದೀಪ್‌ ಮತ್ತಿತರರು ಇದ್ದರು.

6 ಉತ್ಪನ್ನಗಳ ಮಾಹಿತಿ ಇಲ್ಲಿದೆ:

1. ಶೀಲೆಡೆಕ್ಸ್ 24:
ಕೋವಿಡ್ 19 ಅನ್ನು ಪರಿಣಾಮಕಾರಿಯಾಗಿ ನಿರ್ಮೂಲನೆ ಮಾಡುವ ಸಾಧನವಿದು. ‌ಇದು ಮೈಕ್ರೋವೇವ್ ಬಾಕ್ಸ್ ರೀತಿಯಲ್ಲಿ ವಿವಿಧ ಗಾತ್ರಗಳಲ್ಲಿ ಇರುತ್ತದೆ. (ಒಂದು ಫ್ರಿಜ್ ಗಾತ್ರದಲ್ಲೂ ಇದೆ) ಇದರಲ್ಲಿ ಅಲ್ಟ್ರಾವೈಲೇಟ್ ರೇಸ್ ಇರುತ್ತದೆ, ಈ ರೇಸ್ ಬಿದ್ದಾಗ ವೈರಸ್ ಕೇವಲ 15 ಸೆಕೆಂಡುಗಳಲ್ಲಿ ಸಾಯುತ್ತದೆ. ನಮಗೆ ಯಾವುದೇ ವಸ್ತುವಿನ (ಉದಾ: ಪರ್ಸ್‌, ಮೊಬೈಲ್‌, ಪೆನ್ನು) ಮೇಲೆ ವೃರಸ್ ಇದೆ ಅಂತ ಅನುಮಾನವಿದ್ದರೆ ಈ ಬಾಕ್ಸ್ ನಲ್ಲಿ ಆ ವಸ್ತುವನ್ನು ಹಾಕಿದರೆ ಸಾಕು. ಇದನ್ನು ಕಚೇರಿಗಳು, ಮನೆಗಳು, ವಿಮಾನ ನಿಲ್ದಾಣ, ರೈಲು ನಿಲ್ದಾಣ ಮುಂತಾದೆಡೆ ಪ್ರವೇಶ ದ್ವಾರದಲ್ಲಿ ಇಟ್ಟು ಬಳಸಬಹುದು. ಅಲ್ಲಿ ಇಡುವುದರಿಂದ ಅಲ್ಲಿಂದ ಒಳಹೋಗುವ ಹೊರಬರುವ ಲಗ್ಗೇಜ್, ವಸ್ತುಗಳು ಮುಂತಾದವುಗಳ ಮೇಲಿರುವ ವೈರಸ್ ಅನ್ನು ನಾಶ ಮಾಡಬಹುದು. ಈ ಉತ್ಪನ್ನವನ್ನು ಬಯೋ ಫೀ ಕಂಪನಿಯ ರವಿಕುಮಾರ್ ಅವರು ಸಂಶೋಧಿಸಿ ತಯಾರಿಸಿದ್ದಾರೆ.

2. ಫ್ಲೋರೋಸೆನ್ಸ್ ಪ್ರೋಬ್ಸ್:
ಇದು ಕೋವಿಡ್ ಕಿಟ್ ನಲ್ಲಿ ಇರಬಹುದಾದ ಪ್ರಮುಖ ಅಂಗ. ಇದು ಇಲ್ಲದಿದ್ದರೆ ವೈರಸ್ ಅನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಫ್ಲೋರೋಸೆನ್ಸ್ ಪ್ರೋಬ್ಸ್ ಅನ್ನು ಬಳಸಲಾಗುತ್ತದೆ. ಭಾರತದಲ್ಲಿ ಕೋವಿಡ್ ಕಿಟ್ ತಯಾರಿಸುವ ಕಂಪನಿಗಳಿಗೆ ಈ ಸಂಶೋಧನೆ ವರದಾನವಾಗಿದೆ. ಇದು ಹೊರಬಂದ ಕಾರಣ ಕಿಟ್ ತಯಾರಿಸುವುದು ಸುಲಭವಾಗಲಿದೆ. ಇದನ್ನು ವಿಎನ್ ಐಆರ್ ಸಂಸ್ಥೆಯ ಡಾ. ಗೋವಿಂದರಾಜು ಮತ್ತು ಡಾ. ಮೆಹರ್ ಪ್ರಕಾಶ್ ಅಭಿವೃದ್ಧಿಪಡಿಸಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಈ ಉತ್ಪನ್ನವೂ ಬಹಳ ದುಬಾರಿ ಮತ್ತು ಅಷ್ಟೇ ಸೂಕ್ಷ್ಮವೂ ಹೌದು. ಇದನ್ನು ವಿವಿಧ ದೇಶಗಳಿಂದ, ಮುಖ್ಯವಾಗಿ ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ನಮ್ಮಲ್ಲಿ ತಯಾರಿಸಿರುವ ಈ ಉತ್ಪನ್ನವೂ ಅತ್ಯಂತ ಉತ್ತಮ ಗುಣಮಟ್ಟವನ್ನು ಹೊಂದಿದೆ.
.
3. ಭ್ರೂಣ ನಿಗಾ ಯಂತ್ರ (ಫೀಟೆಲ್ ಮಾನಿಟರಿಂಗ್ ಡಿವೈಸ್):
ಕೋವಿಡ್ ಇದ್ದಾಗ ಗರ್ಭಿಣಿಯರು ನೇರವಾಗಿ ವೈದ್ಯರನ್ನು ಭೇಟಿಯಾಗಲು ಸಾಧ್ಯವಿಲ್ಲ. ಪಟ್ಟಿಯಾಕಾರಾದ ಈ ಉಪಕರಣದ ಮೂಲಕ ಭ್ರೂಣದ ಹೃದಯ ಬಡಿತವನ್ನೂ ವೈದ್ಯರು ತಿಳಿಯಬಹುದು. ಗರ್ಭಿಣಿ ಮಹಿಳೆ ಈ ಉಪಕರಣವನ್ನು ತಮ್ಮ ಹೊಟ್ಟೆ ಮೇಲಿಟ್ಟುಕೊಂಡರೆ ವೈದ್ಯರಿಗೆ ಎಲ್ಲ ಮಾಹಿತಿಯೂ ತಿಳಿಯುತ್ತದೆ. ಗರ್ಭಣಿಯರು ಮನೆಯಲ್ಲಿದ್ದೇ ಚಿಕಿತ್ಸೆ ಪಡೆಯಬಹುದು. ವರ್ಚುವಲ್ ಮೂಲಕವೇ ಚಿಕಿತ್ಸೆ ನೀಡಬಹುದು. ಈ ಯಂತ್ರವನ್ನು ʼದಕ್ಷ್’ ಎಂದು ಕರೆಯಲಾಗುತ್ತದೆ. ಜೆನಿತ್ರೀ ಕಂಪನಿಯ ಡಾ. ಅರುಣ್ ಅಗರವಾಲ್ ಇದನ್ನು ಸಂಶೋಧಿಸಿ ಅಭಿವೃದ್ಧಿಪಡಿಸಿದ್ದಾರೆ.

4. ವಿಟಿಎಂ (ವೈರಲ್ ಟ್ರಾನ್ಸ್ ಪೋರ್ಟ್ ಮೀಡಿಯಾ):
’ಡೇಕೊಂತೋ’ ಎಂಬ ಹೆಸರಿನ ಈ ಉತ್ಪನ್ನವನ್ನು ಡಿನೋವೋ ಬಯೋಲ್ಯಾಬ್ಸ್ ನ ಐಬಿಎಬಿಯ ಮಂಜುನಾಥ್ ಹಾಗೂ ದಿನೇಶ್ ಅವರು ಸಂಶೋಧಿಸಿ ತಯಾರಿಸಿದ್ದಾರೆ. ಇದು ಸದ್ಯದ ಸ್ಥಿತಿಯಲ್ಲಿ ಅತ್ಯಂತ ಮಹತ್ವದ ಸಂಶೋಧನೆಯಾಗಿದೆ. ಸೋಂಕಿತರಿಂದ ಗಂಟಲು ದ್ರವ ಮತ್ತಿತರೆ ಸ್ಯಾಂಪಲ್‌ ಗಳನ್ನು ಪಡೆದು ಟಿಸ್ಟಿಂಗ್ ಲ್ಯಾಬಿಗೆ ಕಳಿಸುವ ಪ್ರಕ್ರಿಯೆಯಲ್ಲಿ ಈ ಉಪಕರಣ ಅತ್ಯಗತ್ಯವಾಗಿ ಬೇಕಿತ್ತು. ಏಕೆಂದರೆ, ಇದು ಜೀವಂತ ವೈರಸ್ ಅನ್ನು ಸಾಗಿಸುತ್ತದೆ. ಜೀವಂತ ವೈರಸ್ ಅನ್ನು ಒಂದು ಕಡೆಯಿಂದ ಇನ್ನೊಂದಡೆಗೆ ಸಾಗಿಸುವುದು ಅತ್ಯಂತ ಸವಾಲಿನದ್ದು, ಅಪಾಯಕಾರಿ ಕೂಡ. ಈ ಉಪಕರಣವನ್ನು ವಿದೇಶಗಳಿಂದ ದುಬಾರಿ ಬೆಲೆ ತೆತ್ತು ಆಮದು ಮಾಡಿಕೊಳ್ಳಬೇಕಾಗಿತ್ತು.

5.ಕೋವ್-ಆಸ್ತ್ರ:
ಈ ಸಂಶೋಧನೆ ಬಹಳ ವಿಶೇಷವಾಗಿದೆ. ಇದುವರೆಗೂ ನಾವು ಗಂಟಲು ದ್ರವ ಮತ್ತಿತರ ಮಾದರಿಗಳನ್ನು ಪಡೆದು ಕೋವಿಡ್ ಪತ್ತೆ ಮಾಡುತ್ತಿದ್ದೆವು. ಈಗ ಕೋವ್ – ಅಸ್ತ್ರದ ಮೂಲಕ ಕೇವಲ ರೋಗಿಯ ಎದೆಯ ಭಾಗದ ಎಕ್ಸ್ ರೇ ತೆಗೆದು ವೈರಸ್ ಇದೆಯೇ ಇಲ್ಲವೇ ಎಂಬುದನ್ನು ಪತ್ತೆ ಮಾಡಬಹುದಾಗಿದೆ. ಸುಮಾರು 4 ರಿಂದ 5 ಸಾವಿರ ರೂಪಾಯಿ ವೆಚ್ಚವನ್ನು ಕಡಿಮೆ ಮಾಡಿ ಕೇವಲ 150ರಿಂದ 200 ರೂಪಾಯಿ ಎಕ್ಸ್ ರೇ ಯಿಂದ ಸೋಂಕನ್ನು ಪತ್ತೆ ಮಾಡಬಹುದು. ಇದಕ್ಕಾಗಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತದೆ. ಈ ಮೂಲಕ ವ್ಯಕ್ತಿಗೆ ಕೋವಿಡ್ ಪಾಸಿಟೀವ್ ಇದೆಯೇ ಇಲ್ಲವೇ ಎಂಬುದನ್ನು ಸುಲಭ, ಸರಳವಾಗಿ ತಿಳಿಯಬಹುದು. ಇದನ್ನು ಅಯಿಂದ್ರ ಕಂಪನಿಯ ಆದರ್ಶ್ ನಟರಾಜನ್ ಅವರು ಇದನ್ನು ಸಂಶೋಧಿಸಿ ಅಭಿವೃದ್ಧಿಪಡಿಸಿದ್ದಾರೆ.

6. ಆಂಟಿ ಮೈಕ್ರೋಬಿಯಲ್ ಫೇಸ್ ವಾಶ್:
ಮುಖದ ಮೇಲೆ ಕೂರುವ ಕೋವಿಡ್ ವೈರಸ್ ಜತೆಗೆ ಬೇರೆ ಯಾವುದೇ ವೈರಾಣುವನ್ನು ಸೆಕೆಂಡುಗಳಲ್ಲಿ ನಾಶ ಮಾಡುವ ಫೇಸ್ ವಾಶ್ ಇದಾಗಿದೆ. ಇದನ್ನು ಗಿಡಮೂಲಿಕೆಗಳಿಂದ ತಯಾರಿಸಲಾಗಿದೆ. ಕೋವಿಡ್ ನಂತಹ ಸೂಕ್ಷ್ಮ ಸಂದರ್ಭಗಳಲ್ಲಿ ಇದು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದನ್ನು ಆಟ್ರಿಮ್ಡ್ ಕಂಪನಿಯ ಡಾ. ಲತಾ ಡ್ಯಾಮಲ್ ಅವರು ಸಂಶೋಧಿಸಿ ಅಭಿವೃದ್ಧಿಪಡಿಸಿದ್ದಾರೆ.

ಸಾವಿರಾರು ಕೋಟಿ ಅವ್ಯವಹಾರ ಪ್ರಕರಣ ತನಿಖೆಗೆ ಹೆದರಿ ಆತ್ಮಹತ್ಯೆಗೆ ಶರಣಾದ್ರಾ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಸಿಇಓ..?

ಬೆಂಗಳೂರು: ಠೇವಣಿದಾರರಿಗೆ ಕೋಟಿ ಕೋಟಿ ವಂಚಿಸಿದ್ದ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಸಿಇಓ ವಾಸುದೇವ್ ಮಯ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೇಲ್ನೋಟಕ್ಕೆ ತನಿಖೆಗೆ ಹೆದರಿ ಆತ್ನಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಬಸವನಗುಡಿಯ ಶ್ರೀ ಗುರು ರಾಘವೇ‌ದ್ರ ಕೋ ಆಪರೇಟಿವ್​ ಸಹಕಾರ ಬ್ಯಾಂಕಿನಲ್ಲಿ ಸಾವಿರಾರು ಕೋಟಿ ರೂ ಅವ್ಯವಹಾರ ನಡೆದಿದ್ದು, ಅವ್ಯಹಾರ ಪ್ರಕರಣದ ತನಿಖೆಯ ಹೊಣೆಯನ್ನ ಎಸಿಬಿಯಿಂದ ಸಿಐಡಿಗೆ ವಹಿಸಲಾಗಿದೆ.

ಬ್ಯಾಂಕಿನಲ್ಲಿ ಕೋಟ್ಯಂತರ ರೂಪಾಯಿ ಅವ್ಯಹಾರ ನಡೆದಿರುವ ಬಗ್ಗೆ ಇತ್ತೀಚೆಗೆ ಎಸಿಬಿ ಅಧಿಕಾರಿಗಳ ತಂಡ ದಾಳಿ ‌ನಡೆಸಿತ್ತು. ಹಾಗೆ ಪ್ರಕರಣದ ತನಿಖೆಯನ್ನ ಸಿಐಡಿ‌ ನಡೆಸೋದು ಒಳ್ಳೆಯದು ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತ್ತು. ಪ್ರಕರಣದ ಜವಾಬ್ದಾರಿಯನ್ನ ಸಿಐಡಿ ತೆಗೆದುಕೊಂಡು ತನಿಖೆ ನಡೆಸುತಿತ್ತು. ಬ್ಯಾಂಕ್ ವಿರುದ್ಧ ಆರೋಪ ಕೇಳಿ ಬಂದಾಗ ಎಸಿಬಿ‌ ಪಿಎಂಎಲ್ ಅಡಿ ಪ್ರಕರಣ ದಾಖಲಾಗಿತ್ತು.

ಬಸವನಗುಡಿ ಶಾಖೆಯ ಹಿಂದಿನ ಅಧ್ಯಕ್ಷ ರಾಮಕೃಷ್ಣ, ಸಿಇಒ ವಾಸುದೇವ ಮಯ್ಯ ಅವರ ಮನೆಗಳು ಸೇರಿದಂತೆ ಐದು ಕಡೆ ಎಸಿಬಿ ದಾಳಿ ನಡೆಸಿತ್ತು. ಬ್ಯಾಂಕಿನಲ್ಲಿ ಅಗತ್ಯ ಭದ್ರತೆ ಕೈಗೊಳ್ಳದೇ 27 ಮಂದಿಗೆ 921ಕೋಟಿ ಸಾಲ ನೀಡಿರುವ ಮಾಹಿತಿ ಆರ್ ಬಿ ಐ ಮತ್ತು ಎಸಿಬಿ ತನಿಖೆಯಿಂದ ಬಯಲಾಗಿತ್ತು.‌ ಬ್ಯಾಂಕ್​​ಗೆ ಸಂಬಂಧ ಪಟ್ಟ ಅಧಿಕಾರಿ‌ಗಳ‌ ಮನೆಯಲ್ಲಿ ಅಕ್ರಮ ಆಸ್ತಿ ಕೂಡ ಪತ್ತೆಯಾಗಿತ್ತು . ಸದ್ಯ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪರಿಶೀಲನೆ ನಡೆಯುತ್ತಿದೆ.

ಕೋವಿಡ್ ಕೇರ್‌ ಕೇಂದ್ರಗಳಲ್ಲಿ 20 ಸಾವಿರ ಬೆಡ್ ಮತ್ತು ಐಸಿಯು:ಡಿಸಿಎಂ ಅಶ್ವತ್ಥನಾರಾಯಣ್

ಬೆಂಗಳೂರು: ಕೋವಿಡ್- 19 ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲಿಯೇ ಎದುರಾಗುವ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿರುವ ರಾಜ್ಯ ಸರಕಾರ, ನಗರದ ಕೋವಿಡ್‌ ಕೇರ್‌ ಕೇಂದ್ರಗಳಲ್ಲಿನ ಬೆಡ್‌ಗಳ ಪ್ರಮಾಣವನ್ನು 20 ಸಾವಿರದವರೆಗೂ ಹೆಚ್ಚಿಸಲು ನಿರ್ಧರಿಸಿದೆ.

ಬೆಂಗಳೂರಿನಲ್ಲಿ ಸೋಮವಾರ ಉನ್ನತ ಮಟ್ಟದ ಸಭೆ ನಡೆಸಿದ ಕೋವಿಡ್‌ ಕೇರ್‌ ಕೇಂದ್ರಗಳ (ಸಿಸಿಸಿ) ಉಸ್ತುವಾರಿಯೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಈಗಾಗಲೇ ನಮ್ಮಲ್ಲಿ 1250 ಬೆಡ್ ಗಳು ಲಭ್ಯ ಇವೆ. ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರವನ್ನು ಜಗತ್ತಿನಲ್ಲಿಯೇ ಅತಿದೊಡ್ಡ ಕೋವಿಡ್ ಕೇಂದ್ರವನ್ನಾಗಿ ಸಿದ್ಧಪಡಿಸಲಾಗಿದೆ. ಇಲ್ಲಿ ೩-೪ ದಿನಗಳಲ್ಲಿ 10,100 ಬೆಡ್‌ಗಳು ಸಿಗಲಿವೆ. ವಾರದಲ್ಲಿ ಒಟ್ಟಾರೆ 20 ಸಾವಿರ ಬೆಡ್ ಲಭ್ಯವಾಗಲಿವೆ. ಇನ್ನೂ ಅಗತ್ಯಬಿದ್ದರೆ ತಿಂಗಳಾಂತ್ಯದ ವೇಳೆಗೆ ಬೆಡ್‌ಗಳ ಸಂಖ್ಯೆಯನ್ನು ೩೦ ಸಾವಿರಕ್ಕೆ ಹೆಚ್ಚಿಸುವ ಉದ್ದೇಶ ಇದೆʼ ಎಂದು ತಿಳಿಸಿದರು.

ಕಂದಾಯ ಸಚಿವ ಆರ್. ಅಶೋಕ್ ಸೇರಿದಂತೆ ನಗರದ ಕೆಲವು ಶಾಸಕರು, ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ಡಿಸಿಎಂ, ಕೋವಿಡ್ ಕೇರ್ ಕೇಂದ್ರಗಳಲ್ಲಿ ತಲಾ ಹತ್ತು ಬೆಡ್‌ಗಳ ತುರ್ತು ನಿಗಾ ಘಟಕಗಳನ್ನು ಸ್ಥಾಪಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸದ್ಯಕ್ಕೆ ನಮ್ಮಲ್ಲಿರುವ ಬೆಡ್ ಗಳಲ್ಲಿ 2,250 ಬೆಡ್ ಗಳು ಬಳಕೆಯಾಗುತ್ತಿವೆ. ಕೆಲ ರೋಗಿಗಳು ಗುಣಮುಖರಾಗಿ ಮನೆಗೆ ಹೋಗುತ್ತಿರುವುದರಿಂದ ಬೆಡ್ ಗಳು ಖಾಲಿ ಕೂಡ ಆಗುತ್ತಿವೆ. ಅಲ್ಲದೆ, ಮನೆಯಲ್ಲೇ ಚಿಕಿತ್ಸೆ ಪಡೆಯುವ ವ್ಯವಸ್ಥೆ ಜಾರಿ ಮಾಡಲಾಗಿದೆ. ಅಪಾರ್ಟ್‌ಮೆಂಟ್‌ ಗಳಲ್ಲಿ ಇರುವ ಕ್ಲಬ್ ಹೌಸ್‌ಗಳನ್ನು ಬಳಕೆ ಮಾಡಿಕೊಂಡು ಅಲ್ಲಿಯೂ ನಮಗೆ ಕೋವಿಡ್‌ ಕೇರ್‌ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶ ಇದೆ. ಇದಕ್ಕೆ ಅಪಾರ್ಟ್‌ಮೆಂಟ್‌ಗಳ ಸಂಘಗಳ ಪ್ರತಿನಿಧಿಗಳು ಒಪ್ಪಿದ್ದಾರೆ ಎಂದು ಅವರು ತಿಳಿಸಿದರು.

ಸದ್ಯಕ್ಕೆ ಬೆಂಗಳೂರಿನಲ್ಲಿ ನಾಲ್ಕು ಕೋವಿಡ್ ಕೇರ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಆ ಪೈಕಿ ಜಿಕೆವಿಕೆಯಲ್ಲಿ 770, ಹಜ್ ಭವನದಲ್ಲಿ 432, ರವಿಶಂಕರ್ ಗುರೂಜಿ ಆಶ್ರಮದಲ್ಲಿ 176, ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ 64 ಬೆಡ್ ಗಳು ಸಿದ್ಧ ಇವೆ. ಜಿಕೆವಿಕೆ ಕ್ಯಾಂಪಸ್ಸಿನಲ್ಲಿರುವ ತೋಟಗಾರಿಕೆ ವಿಭಾಗದಲ್ಲಿ 450 ಬೆಡ್ ಗಳಿಗೆ ಹೆಚ್ಚುವರಿಯಾಗಿ ವ್ಯವಸ್ಥೆ ಮಾಡಲಾಗಿದೆ. ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ 250 ಬೆಡ್ ಗಳು ಈಗಾಗಲೇ ರೆಡಿ ಇವೆ, ಜತೆಗೆ ಬೆಂಗಳೂರು ವಿವಿಯ ಬಾಲಕಿಯರ ಹಾಸ್ಟೆಲ್ಲಿನಲ್ಲಿ 200 ಬೆಡ್ ವ್ಯವಸ್ಥೆ ಮಾಡಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು.

ಇಂದಿನಿಂದ ಸಮರ್ಥ ಭಾರತ ಸ್ವಯಂ ಸೇವಕರು:
ಕೋವಿಡ್ ಕೇರ್ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ನರ್ಸ್ ಗಳು ಮತ್ತಿತರೆ ಸಿಬ್ಬಂದಿಗೆ ನೆರವಾಗಲು ಮಂಗಳವಾರದಿಂದಲೇ ಸಮರ್ಥ ಭಾರತ ಸಂಘಟನೆಯ ಸ್ವಯಂ ಸೇವಕರು ಲಭ್ಯವಾಗಲಿದ್ದಾರೆ. ಮೊದಲಿಗೆ ಇವರು ಜಿಕೆವಿಕೆಯ ಕೇಂದ್ರದಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಅಲ್ಲಿ ಅಗತ್ಯವಾಗಿ ಮಾಡಬೇಕಿರುವ ವೈದ್ಯಕೀಯೇತರ ಎಲ್ಲ ಕೆಲಸಗಳನ್ನು ಈ ಸ್ವಯಂ ಸೇವಕರು ಮಾಡಲಿದ್ದಾರೆ. ಇವರ ಜತೆಗೆ ಪ್ರತಿ ಕೇಂದ್ರಕ್ಕೂ ಒಬ್ಬೊಬ್ಬ ವ್ಯವಸ್ಥಾಪಕರನ್ನು ನಿಯೋಜಿಸಲಾಗುವುದು ಹಾಗೂ ಎಲ್ಲ ಕಡೆ ಕೋವಿಡ್ ಮಾರ್ಷಲ್ ಗಳನ್ನು ನೇಮಿಸಲಾಗುತ್ತಿದೆ. ಹೌಸ್ ಕೀಪಿಂಗ್ ಸಿಬ್ಬಂದಿಯೂ ಇರುತ್ತಾರೆ. ಎರಡು ಆಂಬುಲೆನ್ಸ್ ಗಳನ್ನು ಸದಾ ಕೇಂದ್ರಗಳಲ್ಲಿ ಇರುವಂತೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ವಿವರಿಸಿದರು.

ಗುಣಮಟ್ಟದ ಆಹಾರ:
ಕೋವಿಡ್ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ಸಿಬ್ಬಂದಿ ಹಾಗೂ ರೋಗಿಗಳಿಗೆ ಉತ್ತಮ ಗುಣಮಟ್ಟದ ಆಹಾರವನ್ನು ಪೂರೈಕೆ ಮಾಡಲಾಗುತ್ತಿದೆ. ಹಜ್ ಭವನದಲ್ಲಿ ಸಮಸ್ಯೆಯಾಗಿತ್ತು. ಅದನ್ನು ಸರಿಪಡಿಸಲಾಗಿದೆ. ಈ ಕ್ಷಣದಿಂದ ಎಲ್ಲೆಡೆಗೂ ಉತ್ತಮ ಆಹಾರವನ್ನು ಪೂರೈಕೆ ಮಾಡುವುದರ ಜತೆಗೆ ವೈದ್ಯಕೀಯ ಸಿಬ್ಬಂದಿಗೆ ಹಣ್ಣು ನೀಡುವ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಡಿಸಿಎಂ ಹೇಳಿದರು. ಕೋವಿಡ್‌ ಕೇಂದ್ರಗಳಿಗೆ ಆಹಾರ ಸರಬರಾಜು ಮಾಡುತ್ತಿರುವ ಇಸ್ಕಾನ್ ಸಂಸ್ಥೆಯ ಪ್ರತಿನಿಧಿಗಳು ಕೂಡ ಈ ಸಭೆಯಲ್ಲಿ ಹಾಜರಿದ್ದರು. ಗುಣಮಟ್ಟದ ಜತೆಗೆ ಕೊಡುತ್ತಿರುವ ಆಹಾರದ ಪ್ರಮಾಣವನ್ನು ಹೆಚ್ಚು ಮಾಡಬೇಕೆಂದೂ ಡಿಸಿಎಂ ಅವರಿಗೆ ಸೂಚಿಸಿದರು.

ಶಾಸಕರಾದ ರವಿ ಸುಬ್ರಹ್ಮಣ್ಯ, ವೈ.ಎ.ನಾರಾಯಣಸ್ವಾಮಿ, ಲೆಹರ್‌ಸಿಂಗ್‌, ಕೋವಿಡ್ ಕೇರ್ ಕೇಂದ್ರಗಳ ಉಸ್ತುವಾರಿ ಅಧಿಕಾರಿ ರಾಜೇಂದ್ರ ಕುಮಾರ್ ಕಟಾರಿಯಾ, ಬಿಬಿಎಂಪಿ ಜಂಟಿ ಆಯುಕ್ತ ಸರ್ಫೋಜ್‌ ಖಾನ್, ಆರ್‌ಎಸ್‌ಎಸ್‌ನ ದಕ್ಷಿಣ ಕ್ಷೇತ್ರೀಯ ಕಾರ್ಯವಾಹ ತಿಪ್ಪೇಸ್ವಾಮಿ, ಸಮರ್ಥ ಭಾರತ ಸಂಸ್ಥೆಯ ಶ್ರೀಧರ ಸೇರಿದಂತೆ ಇತರರು ಸಭೆಯಲ್ಲಿ ಹಾಜರಿದ್ದರು.

ಆರೋಗ್ಯ ಇಲಾಖೆ ನಿದೇಶಕರಿಗೆ ಕ್ಲಾಸ್:
ಕೋವಿಡ್ ಕೇರ್ ಕೇಂದ್ರಗಳಲ್ಲಿ ಐಸಿಯು ವ್ಯವಸ್ಥೆ ಮಾಡುವುದು ಕಷ್ಟ ಎಂದ ಆರೋಗ್ಯ ಇಲಾಖೆ ನಿರ್ದೇಶಕ ಓಂಪ್ರಕಾಶ್ ಪಾಟೀಲ ಅವರಿಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತರಾಟೆಗೆ ತೆಗೆದುಕೊಂಡ ಪ್ರಸಂಗ ಸಭೆಯಲ್ಲಿ ನಡೆಯಿತು.

ನಗರದಲ್ಲಿ ಈಗಾಗಲೇ ಕಾರ್ಯಾಚರಿಸುತ್ತಿರುವ ಕೋವಿಡ್ ಕೇಂದ್ರಗಳಲ್ಲಿ ಮತ್ತು ಹೊಸದಾಗಿ ತೆರೆಯುವ ಕೇಂದ್ರಗಳಲ್ಲಿ ತುರ್ತು ಚಿಕಿತ್ಸಾ ಘಟಕಗಳನ್ನು ತೆರೆಯುವುದು ಕಷ್ಟ. ಬೇಕಾದರೆ ಅಂತಹ ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಬಹುದು ಎಂದಾಗ ಉಪ ಮುಖ್ಯಮಂತ್ರಿ ಸಿಟ್ಟಾದರು. ಹಾಲಿ ಆಸ್ಪತ್ರೆಗೆ ಸ್ಥಳಾಂತರಿಸುವುದು ವಿಳಂಬವಾದಾಗ ರೋಗಿಗಳಿಗೆ ಅನಾನುಕೂಲ ಆಗಬಾರದು ಎನ್ನುವ ಕಾರಣಕ್ಕೆ ಐಸಿಯು ವ್ಯವಸ್ಥೆ ಕೋವಿಡ್ ಕೇಂದ್ರಗಳಲ್ಲಿಯೂ ಇರಲಿ ಎಂದು ಹೇಳುತ್ತಿರುವುದು. ಇದಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು. ನಿಮ್ಮಿಂದ ಮಾಡಲಾಗದಿದ್ದರೆ ಬೇರೆಯವರಿಂದ ಮಾಡಿಸುತ್ತೇವೆ. ಪ್ರತಿ ಕೇಂದ್ರದಲ್ಲಿಯೂ ಕೊನೆಪಕ್ಷ 10 ಐಸಿಯುಗಳನ್ನಾದರೂ ಮಾಡಲೇಬೇಕು ಎಂದು ತಾಕೀತು ಮಾಡಿದರು. ಇದಕ್ಕೆ ಶಾಸಕ ವೈ.ಎ. ನಾರಾಯಣಸ್ವಾಮಿ ಮುಂತಾದವರು ದನಿಗೂಡಿಸಿದರು.

ಮಂಡ್ಯ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಕಾಯಕಲ್ಪ 28 ಹಳ್ಳಿಗಳಿಗೆ ಕುಡಿಯುವ ನೀರು, 5 ಕೆರೆ ತುಂಬಿಸುವ ಯೋಜನೆಗೆ ಚಾಲನೆ

ಮಂಡ್ಯ: ಜಿಲ್ಲೆಯಲ್ಲಿ ಜಾರಿ ಹಂತದಲ್ಲಿರುವ 15 ನೀರಾವರಿ ಕಾಮಗಾರಿಗಳನ್ನು ಆದಷ್ಟು ಶೀಘ್ರಗತಿಯಲ್ಲಿ ಮುಗಿಸುವುದರ ಜತೆಗೆ, ವಿಶ್ವೇಶ್ವರಯ್ಯ ನಾಲೆಯ ದುರಸ್ಥಿ ಕಾರ್ಯವನ್ನೂ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಪ್ರಕಟಿಸಿದರು.

ಸೋಮವಾರ ತಾಲ್ಲೂಕಿನ ಕೊತ್ತತ್ತಿ ಹೋಬಳಿಯ 28 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಹಾಗೂ 5 ಕೆರೆಗಳಿಗೆ ನೀರು ತುಂಬಿಸುವ 18.5 ಕೋಟಿ ರೂಪಾಯಿ ವಚ್ಚದ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಇವೆಲ್ಲ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುವುದು, ಅಗತ್ಯವಾದ ಸಂಪನ್ಮೂಲವನ್ನು ಒದಗಿಸಲಾಗುವುದು ಎಂದರು.

ಕುಡಿಯುವ ನೀರು ಒದಗಿಸುವುದು ಅತ್ಯಂತ ಅಗತ್ಯ. ಅದು ಅತ್ಯಗತ್ಯವಾದ ಮೂಲ ಸೌಕರ್ಯವೂ ಹೌದು. ಇದನ್ನು ಸರಿಯಾಗಿ ಮಾಡದಿರುವುದು ಅನ್ಯಾಯವೇ ಸರಿ. ವ್ಯವಸಾಯಕ್ಕೆ ಮತ್ತು ಗೃಹ ಬಳಕೆಗೆ ನೀರು ಸಿಗುವಂತೆ ಮಾಡುವುದು ಪ್ರತಿ ಸರಕಾರದ ಕರ್ತವ್ಯ. ಇದನ್ನು ಯಡಿಯೂರಪ್ಪ ಅವರ ಸರಕಾರ ಅರ್ಥ ಮಾಡಿಕೊಂಡಿದೆ ಎಂದು ಡಿಸಿಎಂ ಹೇಳಿದರು.

ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರಕಾರ ಬದ್ಧವಾಗಿದೆ. ಅದರಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚು ಒತ್ತು ಕೊಟ್ಟು ಕೃಷಿ ಮತ್ತು ಕುಡಿಯುವ ನೀರಿನ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುತ್ತಿದೆ. ಜಿಲ್ಲೆಗಾಗಿ ನಾನೂ ಸಹ ಸಚಿವ ಡಾ. ಕೆ.ಸಿ. ನಾರಾಯಣ ಗೌಡರಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮನಸ್ಸು ತುಂಬಿ ಬಂದಿದೆ:
ಈ ಯೋಜನೆಯನ್ನು ಜನರಿಗೆ ಸಮರ್ಪಿಸುತ್ತಿರುವುದು ಬಹಳ ಸಂತೋಷ ಉಂಟು ಮಾಡಿದೆ. ಕೆರೆಗಳಿಗೆ ನೀರು ತುಂಬಿಸುವ ಮೂಲಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ. ಎಲ್ಲೆಡೆ ಹಸಿರು ಮೂಡಿ ಜನ ಜಾನುವಾರುಗಳಿಗೆ ಅನುಕೂಲವಾಗುತ್ತದೆ. ಹೀಗಾಗಿ ಈ ಯೋಜನೆ ಅತ್ಯಂತ ಉಪಯುಕ್ತ. ಲೋಕಪಾವನಿ ನದಿಯಿಂದ ಎಲೆಚಾಕನಹಳ್ಳಿ, ರಾಗಿಮುದ್ದನಹಳ್ಳಿ, ಕಾಳೇನಹಳ್ಳಿ, ಉರಮಾಕಲಸರಗೆರೆ, ಜಕ್ಕನಹಳ್ಳಿ, ಅಲಗೋಡು ಕೆರೆಗಳಿಗೆ ಇವತ್ತು ನೀರು ತುಂಬಿಸುವ ಮಹತ್ಕಾರ್ಯಕ್ಕೆ ಚಾಲನೆ ನೀಡಿದ್ದು ಪುಣ್ಯದ ಕಾರ್ಯವೆಂದೇ ಭಾವಿಸಿದ್ದೇನೆ. ಮನಸ್ಸು ತುಂಬಿ ಬಂದಿದೆ ಎಂದು ಡಿಸಿಎಂ ಹೇಳಿದರು.

ಈ ಭಾಗಕ್ಕೆ ನೀರು ಬರಬೇಕು. ಕೆರೆಗಳು ತುಂಬಬೇಕು ಎಂಬುದು ಬಹುದಿನಗಳ ಕನಸಾಗಿತ್ತು. ಅನೇಕ ಶಾಸಕರು ಬಂದರು, ಹೋದರೂ ಈ ಯೋಜನೆ ಸಾಕಾರವಾಗಿರಲಿಲ್ಲ. 2008-13ರ ಅವಧಿಯಲ್ಲಿ ಬಿಜೆಪಿ ಸರಕಾರವೇ ಈ ಯೋಜನೆಗೆ ಮಂಜೂರಾತಿ ನೀಡಿತ್ತು. ಅಂದಿನ ಜಲ ಸಂಪನ್ಮೂಲ ಖಾತೆ ಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿ ಅವರು ಇದಕ್ಕೆ ಒಪ್ಪಿಗೆ ನೀಡಿದ್ದರು. 2011ರಲ್ಲೆ ಈ ಯೋಜನೆಗಾಗಿ ಮನವಿ ಕೊಟ್ಟು ಛಲಬಿಡದ ವಿಕ್ರಮನಂತೆ ಇಲ್ಲಿಗೆ ನೀರು ಬರಲು ಕಾರಣರಾದ ಎಲೆಚಾಕನಹಳ್ಳಿ ಬಸವರಾಜು ಮತ್ತವರ ಶ್ರೀಮತಿಯವರನ್ನು ನಾನು ಮನಸಾರೆ ಅಭಿನಂಧಿಸುತ್ತೇನೆ. ನಿಮ್ಮೆಲ್ಲರ ಪಾಲಿಗೆ ಬಸವರಾಜು ಭಗೀರಥರೇ ಆಗಿದ್ದಾರೆಂದು ಡಿಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಜೆಪಿ ಸರಕಾರ ಬಂದ ಮೇಲೆ ಜಿಲ್ಲೆಯಲ್ಲಿ ನಡೆಯುತ್ತಿರುವ ಮೊದಲ ಅಭಿವೃದ್ಧಿ ಕಾರ್ಯಕ್ರಮ ಇದಾಗಿದೆ. ಇನ್ನು ಮುಂದೆ ಇಂಥ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಜಿಲ್ಲೆಯ ಅಭಿವೃದ್ಧಿ ಪರ್ವ ಆರಂಭವಾಗಿದೆ ಎಂದ ಡಿಸಿಎಂ, ಹಿಂದಿನ ಜಿಲ್ಲಾಧಿಕಾರಿ ಮಂಜುಶ್ರೀ ಅವರು ಬಹ ಶ್ರಮ ವಹಿಸಿ ಭೂಸ್ವಾಧೀನ ಮತ್ತಿತರೆ ಕೆಲಸಗಳನ್ನು ಮಾಡಿದ್ದಾರೆ. ಅವರನ್ನು ನಾವಿಲ್ಲಿ ಸ್ಮರಿಸಲೇಬೇಕು ಎಂದು ಅವರು ನುಡಿದರು.

ಕೋವಿಡ್- ಜಿಲ್ಲೆಯಲ್ಲಿ ಸಮಸ್ಯೆ ಇಲ್ಲ;
ಕೋವಿಡ್ ಸೋಂಕಿನ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಎಲ್ಲ ವ್ಯವಸ್ಥೆಗಳನ್ನು ಸರಕಾರ ಜಿಲ್ಲೆಯಲ್ಲಿ ಮಾಡಿದೆ. ಅಗತ್ಯ ಬೆಡ್ ಗಳು ಲಭ್ಯವಿದ್ದು, ಸೂಕ್ತ ಔಷದೋಪಚಾರವೂ ಸಿಗುತ್ತಿದೆ. ಪರೀಕ್ಷಾ ಕೇಂದ್ರಗಳು, ವೈದ್ಯರು, ನರ್ಸ್ ಗಳು ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ಜನರು ಯಾರೂ ಆತಂಕಗೊಳ್ಳಬೇಕಾಗಿಲ್ಲ,. ಕಡ್ಡಾಯವಾಗಿ ಮಾಸ್ಕ್ ಧರಿಸಿದರೆ ಈ ಸೋಂಕನ್ನು ಹತ್ತಿರಕ್ಕೆ ಬರದಂತೆ ತಡೆಯಬಹುದು ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸಿ. ನಾರಾಯಣಗೌಡ, ಶಾಸಕ ರವೀಂದ್ರ ಶ್ರೀಕಂಠಯ್ಯ, ವಿಧಾನ ಪರಿಷತ್ ಸದಸ್ಯರದ ಶ್ರೀಕಂಠೇಗೌಡ ಮತ್ತು ಅಪ್ಪಾಜಿ ಗೌಡ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯೆ ರಾಮಲಿಂಗಯ್ಯ, ತೂಬಿನಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷ ಅಶೋಕ ಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ಸಿದ್ದು ಆರೋಪ ಸತ್ಯಕ್ಕೆ ದೂರ:
ಕೋವಿಡ್ ನಿರ್ವಹಣೆ ಮತ್ತು ಖರೀದಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಹಾಗೂ ಜನರನ್ನು ದಿಕ್ಕು ತಪ್ಪಿಸುವ ರೀತಿಯಲ್ಲಿದೆ ಎಂದು ಡಿಸಿಎಂ ತರಾಟೆಗೆ ತೆಗೆದುಕೊಂಡರು.

ಈ ಕಾರ್ಯಕ್ರಮದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅವರಿಗೆ ಲೆಕ್ಕಕೇಳುವ ಹಕ್ಕಿದೆ. ಕೇಳಲಿ. ನಾವು ಪ್ರತಿ ಪೈಸೆಗೂ ಲೆಕ್ಕ ಕೊಡುತ್ತೇವೆ. ಸದನದಲ್ಲಿ ಕೂಡ ಮಾಹಿತಿ ನೀಡಲು ಸರಕಾರ ಸಿದ್ಧವಿದೆ. ಮೊದಲೇ ಜನರು ಕಷ್ಟದಲ್ಲಿದ್ದಾರೆ. ವೈರಸ್ ಕಾಟದಿಂದ ಬಸವಳಿದಿದ್ದಾರೆ. ಇಂತಹ ಸಮಯದಲ್ಲಿ ಅವರು ಎತ್ತಿರುವ ಪ್ರಶ್ನೆ ಸಮಂಜಸವಲ್ಲ. ಚುನಾವಣೆ ಇನ್ನೂ ದೂರವಿದೆ. ಈಗಲೇ ಅವರಿಗೆ ಆತುರವೇಕೋ ನನಗೆ ಅರ್ಥವಾಗುತ್ತಿಲ್ಲ ಎಂದು ಉಪ ಮುಖ್ಯಮಂತ್ರಿ ಅವರು ಸಿದ್ದು ಅವರ ಕಾಲೆಳೆದರು.

ಉಳಿದಂತೆ ರಾಜ್ಯದಲ್ಲಿ ಕೋವಿಡ್ ನಿರ್ವಹಣೆ ಉತ್ತಮವಾಗಿದೆ. ಎಲ್ಲಿಯೂ ಬೆಡ್ ಗಳು, ಔಷಧಿ, ವೈದ್ಯರು, ನರ್ಸ್ಗಳ ಸಮಸ್ಯೆಯಾಗಿಲ್ಲ. ಅಗತ್ಯವಾದಷ್ಟು ಆಂಬುಲೆನ್ಸ್ ಗಳು ಕೂಡ ನಮ್ಮಲ್ಲಿವೆ. ಪೂರಕ ಸಿಬ್ಬಂದಿ ಕೊತೆಯೂ ಇಲ್ಲ. ಒಂದು ಕ್ಷಣವೂ ಮೈಮರೆಯದೇ ಕೆಲಸ ಮಾಡುತ್ತಿದ್ದೇವೆ. ಇತ್ತೀಚೆಗೆ ಪಾಸಿಟೀವ್ ಪ್ರಕರಣಗಳು ಹೆಚ್ಚುತ್ತಿವೆ. ಯಾವುದೇ ಪರಿಸ್ಥಿತಿ ಬಂದರೂ ಎದುರಿಸಲು ಸರಕಾರ ಸಜ್ಜಾಗಿದೆ ಎಂದು ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರ ನೀಡಿದರು.