ಪಾಕಿಸ್ತಾನ ಧ್ವಜಾರೋಹಣ ಪ್ರಕರಣ: ಗೌರಿ ಹತ್ಯೆ ಆರೋಪಿ ವಾಗ್ಮೋರೆ ಖುಲಾಸೆ

0
207

ವಿಜಯಪುರ: ಸಿಂಧಗಿಯಲ್ಲಿ ಪಾಕಿಸ್ತಾನ ಧ್ವಜಾರೋಹಣ ಮಾಡಿದ ಆರೋಪದಲ್ಲಿ ಗೌರಿ ಲಂಕೇಶ್​ ಹತ್ಯೆ ಪ್ರಕರಣದ ಪರಶುರಾಮ ವಾಗ್ಮೋರೆ ಸೇರಿದಂತೆ 6 ಜನರನ್ನು ಖುಲಾಸೆ ಮಾಡಿ ವಿಜಯಪುರ 1ನೇ ಹೆಚ್ಚುವರಿ ನ್ಯಾಯಾಲಯ ಆದೇಶ ನೀಡಿದೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪರುಶರಾಮ ವಾಗ್ಮೋರೆ 2012 ರಲ್ಲಿ ಸಿಂಧಗಿ ಪಟ್ಟಣದ ತಹಸೀಲ್ದಾರ್‌ ಕಚೇರಿ ಮೇಲೆ ಪಾಕಿಸ್ತಾನ ಧ್ವಜ ಹಾರಿಸಿ ಕೋಮು ಗಲಭೆ ಸೃಷ್ಟಿಸಿದ್ದ ಆರೋಪ ಕೇಳಿ ಬಂದಿತ್ತು. ಈತನನ್ನು ಬಂಧಿಸಿದ್ದ ಸಿಂಧಗಿ ಪೊಲೀಸರು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯಕ್ಕೆ ಜಾರ್ಜ್‌ಶೀಟ್‌ ಸಲ್ಲಿಕೆಯಾಗಿತ್ತು. ಇಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ತೀರ್ಪು ನೀಡಿರುವ ವಿಜಯಪುರ 1ನೇ ಹೆಚ್ಚುವರಿ ನ್ಯಾಯಾಲಯ ಪಾಕ್ ಧ್ವಜ ಹಾರಿಸಿದ್ದ ಪ್ರಕರಣದಿಂದ ಪರುಶರಾಮ ವಾಗ್ಮೋರೆ ಸೇರಿದಂತೆ ಆರು ಮಂದಿಯನ್ನು ಆರೋಪಮುಕ್ತಗೊಳಿಸಿದೆ.

2012ರ ಜನವರಿ 1ರಂದು ಸಿಂಧಗಿಯ ತಹಶೀಲ್ದಾರ್​ ಕಚೇರಿ ಮೇಲೆ ಪರಶುರಾಮ್​ ವಾಗ್ಮೋರೆ, ಅನಿಲ ಸೋಲಂಕರ, ಮಲ್ಲನಗೌಡ ಪಾಟೀಲ, ರೋಹಿತ ನಾವಿ, ಸುನಿಲ ಅಗಸರ, ಅರುಣ ಪಾಕ್​ ಧ್ವಜ ಹಾರಿಸಿದ್ದರು. ಪ್ರಕರಣದಲ್ಲಿ ಪರಶುರಾಮ ವಾಗ್ಮೋರೆ 5ನೇ ಆರೋಪಿಯಾಗಿದ್ದ. ಪ್ರಕರಣವನ್ನು ವಿಚಾರಣೆ ನಡೆಸಿದ ಜಿಲ್ಲಾ ಒಂದನೇ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಗೀತಾ ಕೆ. ಬಿ, ಪ್ರಕರಣದ ತನಿಖೆಯಲ್ಲಿ ತಾಂತ್ರಿಕ ದೋಷ ಹಿನ್ನೆಲೆ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ನೀಡಿದ್ದಾರೆ.

ಈ ಪ್ರಕರಣದ 5ನೇ ಆರೋಪಿಯಾಗಿರುವ ಹಿಂದೂಪರ ಸಂಘಟನೆ ಕಾರ್ಯಕರ್ತನಾಗಿರುವ ಪರಶುರಾಮ್ ವಾಗ್ಮೋರೆ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್​ ಹತ್ಯೆಯ ಪ್ರಮುಖ ಆರೋಪಿಯಾಗಿದ್ದಾನೆ. ಈಗಾಗಲೇ ಈತನನ್ನು ಎಸ್.ಐಟಿ ವಶಕ್ಕೆ ಪಡೆದಿದ್ದು, ತನಿಖೆ ನಡೆಯುತ್ತಿದೆ.

- Call for authors -

LEAVE A REPLY

Please enter your comment!
Please enter your name here