ಬೆಂಗಳೂರು: ನಾಳೆ ನಡೆಯಲಿರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಲಿಂಗಾಯತ ಸಮುದಾಯದ ಕೋಟಾದಡಿ ಹಂಚಿಕೆಯಾಗುವ ಸಚಿವ ಸ್ಥಾನಗಳಲ್ಲಿ ಹೆಚ್ಚಿನ ಆಧ್ಯತೆಯನ್ನು ಪಂಚಮಸಾಲಿ ಸಮುದಾಯಕ್ಕೆ ನೀಡಬೇಕು ಎಂದು ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯಂಜಯ ಸ್ವಾಮೀಜಿ ಒತ್ತಾಯಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ನಿಂದ 16, ಜೆಡಿಎಸ್ ನಿಂದ 4 , ಒಟ್ಟು 20 ಲಿಂಗಾಯತ ಶಾಸಕರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಇವರಲ್ಲಿ ನಮ್ಮ ಸಮುದಾಯದ ಶಿವಾನಂದ ಪಾಟೀಲ್, ಎಂ.ವೈ ಪಾಟೀಲ್, ಗಣೇಶ್ ಹುಕ್ಕೇರಿ, ಲಕ್ಷ್ಮೀ ಹೆಬ್ಬಾಳ್ಕರ್ ಹಾಗು ಮಹೇಶ್ ಕುಮಠಳ್ಳಿ ಕಾಂಗ್ರೆಸ್ ನಿಂದ ಹಾಗು ಎಂ.ಸಿ ಮನಗುಳಿ ಜೆಡಿಎಸ್ ನಿಂದ ಆಯ್ಕೆಯಾಗಿದ್ದು, ಸಂಪುಟ ವಿಸ್ತರಣೆಯಲ್ಲಿ ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು, ಲಿಂಗಾಯತ ಕೋಟಾದಲ್ಲಿ ನೀಡುವ ಸಚಿವ ಸ್ಥಾನಗಳಲ್ಲಿ ಬಹು ಸಂಖ್ಯಾತ ಪಂಚಮಸಾಲಿ ಸಮುದಾಯಕ್ಕೆ ಆಧ್ಯತೆ ನೀಡಬೇಕು ಎಂದರು.
ಈಗಾಗಲೇ ಪರಮೇಶ್ವರ್ ಹಾಗು ದೇವೇಗೌಡರ ಜೊತೆ ಈ ಸಂಬಂಧ ಮಾತುಕತೆ ನಡೆಸಿದ್ದು ಅವರು ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ. ನಮ್ಮ ಸಮುದಾಯಕ್ಕೆ ಆಧ್ಯತೆ ನೀಡಲಿದ್ದಾರೆ ಎನ್ನುವ ವಿಶ್ವಾಸವಿದೆ,ಈ ಹಿಂದೆಯೂ ಯಡಿಯೂರಪ್ಪ ಸರ್ಕಾರ,ಧರಂ ಸಿಂಗ್ ಸತ್ಕಾರ,ಕುಮಾರಸ್ವಾಮಿ ಸರ್ಕಾರ, ಜೆ.ಹೆಚ್.ಪಟೇಲ್ ಸರ್ಕಾರ,ಸಿದ್ದರಾಮಯ್ಯ ಸರ್ಕಾರದಲ್ಲಿಯೂ ನಮ್ಮ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದರು.ಅದರಂತೆ ಈ ಬಾರಿಯೂ ನೀಡುವ ವಿಶ್ವಾಸವಿದೆ ಎಂದರು.
ಮಠಾಧೀಶರು ರಾಜಕಾರಣ ಮಾಡಬಾರದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರಲ್ಲಿ ತಪ್ಪೇನಿಲ್ಲ,ಮಠಾಧೀಶರು ರಾಜಕಾರಣ ಮಾಡಬಾರದು,ಆದರೆ ಸಚಿವ ಸ್ಥಾನ ನೀಡಿ ಎಂದು ನಾವು ರಾಜಕೀಯ ಮಾಡುತ್ತಿಲ್ಲ, ಸಮುದಾಯದ ಗುರುಗಳಾಗಿ ಸಮುದಾಯದ ಏಳಿಗೆಗೆ ಸಚುವ ಸ್ಥಾನ ನೀಡಿ ಎಂದು ಸಲಹೆ ನೀಡುತ್ತಿದ್ದೇವೆ,ಇದರಿಂದ ಆ ಪಕ್ಷಗಳಿಗೂ ಲಾಭವಾಗಲಿದೆ ಎಂದರು.









