ಬೀದರ್:ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ಕೊಳಚೆಗುಂಡಿಯಲ್ಲಿ ಪಾತ್ರೆಯನ್ನು ಬೋರಲು ಹಾಕಿ, ಅನಿಲ ಸಂಗ್ರಹಿಸಿ, ಗ್ಯಾಸ್ ಸ್ಟೌ ಹತ್ತಿಸಿ, ಪಕೋಡ ಮಾಡಿ, ವ್ಯಾಪಾರ ಮಾಡುವಂತೆ ಸಲಹೆ ನೀಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಬೀದರ್ ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನರೇಂದ್ರ ಮೋದಿವಯರು ರೈತರಿಗೆ ನಾವು ಗರಿಷ್ಠ ಬೆಂಬಲ ಬೆಲೆ ನೀಡುವುದಿಲ್ಲ, ಬೆಳೆ ವಿಮೆ ನೀಡುವುದಿಲ್ಲ, ನಿಮ್ಮ ಹೊಲ-ಗದ್ದೆಗಳಲ್ಲಿ ಗುಂಡಿ ತೋಡಿ, ಅಲ್ಲಿ ತ್ಯಾಜ್ಯ ತುಂಬಿ, ಅನಿಲ ಸಂಗ್ರಹಿಸಿ, ಅವುಗಳಿಂದ ನಿಮ್ಮ ಪಂಪ್ ಸೆಟ್ ಗಳನ್ನು ಓಡಿಸಿ, ನೀರು ಹರಿಸಿಕೊಳ್ಳಿ! ಎಂದು ಸಲಹೆ ನೀಡುತ್ತಾರೆ ಎಂದು ವ್ಯಂಗ್ಯವಾಡಿದ್ರು.
ಈ ಹಿಂದಿನ ಯುಪಿಎ ಸರ್ಕಾರವು ರಾಫೆಲ್ ಯುದ್ದ ವಿಮಾನಗಳನ್ನು ಕರ್ನಾಟಕದ ಹೆಚ್ ಎ ಎಲ್ ನಲ್ಲಿ ನಿರ್ಮಿಸಲು ನಿರ್ಧರಿಸಿತ್ತು. ಆದರೆ ಬಿಜೆಪಿ ಆ ಅವಕಾಶವನ್ನು ಕಸಿದುಕೊಂಡಿತು. ಹೀಗಾಗಿ ಕರ್ನಾಟಕದ ಯುವಕರು ನಿರುದ್ಯೋಗಿಗಳಾಗಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದ್ರು.
ಈ ಹಿಂದಿನ ಯುಪಿಎ ಸರ್ಕಾರವು ಫ್ರಾನ್ಸ್ ನಿಂದ ಪ್ರತಿ ರಾಫೆಲ್ ಯುದ್ದ ವಿಮಾನವನ್ನು ರೂ. 565 ಕೋಟಿಗಳಿಗೆ ಕೊಳ್ಳುವ ಇಂಗಿತ ವ್ಯಕ್ತ ಪಡಿಸಿತ್ತು. ಆದರೆ, ಮೋದಿಯವರ ಸರ್ಕಾರ ಈ ರೂ. 1,600ಕ್ಕೆ ಕೋಟಿಗಳಿಗೆ ಕೊಳ್ಳಲು ಹೊರಟಿದೆ.ಇಷ್ಟೊಂದು ಮೊತ್ತದ ವ್ಯತ್ಯಾಸ ಹಗರಣಕ್ಕೆ ಸಾಕ್ಷಿಯಲ್ಲದೆ ಇನ್ನೇನು ಎಂದ್ರು.
ಭೇಟಿ ಪಡಾವೋ… ಭೇಟಿ ಬಚಾವೋ ಎನ್ನುತ್ತಾರೆ ಮೋದಿಯವರು. ಆದರೆ ಯಾರಿಂದ ಹೆಣ್ಣುಮಕ್ಕಳನ್ನು ರಕ್ಷಿಸಬೇಕು. ಉತ್ತರ ಪ್ರದೇಶ ಮತ್ತು ದೇಶದ ಇತರೆಡೆಗಳಲ್ಲಿ ಬಿಜೆಪಿ ಶಾಸಕರು/ಮುಖಂಡರಿಂದಲೇ ಅತ್ಯಾಚಾರಗಳಾಗುತ್ತಿವೆ ಎಂದು ಮೋದಿ ಸರಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ರು.









