ನವದೆಹಲಿ: ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಇಂದು ಅವಿಶ್ವಾಸ ಕಲಾಪ ಆರಂಭವಾಗಿದೆ. ವಿರೋಧ ಪಕ್ಷಗಳು ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ತೀವ್ರ ವಾಗ್ಸಮರ ನಡೆದಿದೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಎನ್‌ಡಿಎ ಸರ್ಕಾರದ ಹಲವು ವಿಚಾರಗಳನ್ನು ಪ್ರಸ್ತಾವಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದರು. ನಂತರ ಮೋದಿಯವರನ್ನು ಕಲಾಪದಲ್ಲೇ ಆಲಂಗಿಸಿದರು, ಬಳಿಕ ಕಣ್ಣು ಹೊಡೆದು ಎಲ್ಲರ ಅಚ್ಚರಿಗೆ ಕಾರಣರಾದರು.
ಪ್ರಧಾನಿ ಮೋದಿ ಚೌಕಿದಾರ್ ಅಲ್ಲ, ಭ್ರಷ್ಟಾಚಾರದಲ್ಲಿ ಭಾಗಿದಾರ ಎಂದು ಹೇಳಿದ ರಾಹುಲ್ ಗಾಂಧಿ ಪ್ರಧಾನಿ ಮೋದಿಗೆ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯವಿಲ್ಲ ಎಂದು ಹೇಳಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ನಗುತ್ತಾ ಕುಳಿತಿದ್ದರು.
ರಾಹುಲ್ ಗಾಂಧಿ ಸಂಸತ್‌ನಲ್ಲಿ ಪ್ರಧಾನ ಮಂತ್ರಿಗಳ ವಿರುದ್ಧ ಆರೋಪಗಳ ಸುರಿಮಳೆ ಮಾಡಿದ್ದಾರೆ.
* ರಾಫೆಲ್ ಯುದ್ದ ವಿಮಾನ ಖರೀದಿ ವಿಚಾರದಲ್ಲಿ ನಾನು ಫ್ರಾನ್ಸ್ ಅಧ್ಯಕ್ಷರೊಂದಿಗೆ ನಾನು ಮಾತನಾಡಿದ್ದೇನೆ. ಅವರು ಭಾರತದೊಂದಿಗೆ ಯಾವುದೇ ಒಪ್ಪಂದ ನಡೆದಿಲ್ಲ ಎಂದು ಹೇಳಿದ್ದಾರೆ. ಮೋದಿ ತಮ್ಮ ಆಪ್ತರ ಜೇಬು ತುಂಬುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
* 45 ಸಾವಿರ ಕೋಟಿ ಭ್ರಷ್ಟಾಚಾರ ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ನಡೆದಿದೆ.
* ಅಚ್ಚೇದಿನ್ ಸರ್ಕಾರ್ ಅಲ್ಲ ಇದು ಸೂಟ್ ಬೂಟ್ ಸರ್ಕಾರ.
* ಅಮಿತ್ ಷಾ ಪುತ್ರನ ಕಂಪನಿ ಆದಾಯ ಸಾವಿರ ಪಟ್ಟು ಹೆಚ್ಚಾಗಿದೆ.
* ಪ್ರಧಾನಿ ಯಾವುದೇ ಅಜೆಂಡಾ ಇಲ್ಲದೆ ಚೀನಾ ಪ್ರವಾಸ ಮಾಡಿದರು. ಅಲ್ಲಿ ಡೋಕ್ಲಾಂ ವಿಚಾರ ಕುರಿತು ಚಕಾರವೆತ್ತಿಲ್ಲ.
* ಎಲ್ಲರ ಖಾತೆಗಳಿಗೆ 15 ಲಕ್ಷ ಹಾಕುತ್ತೇನೆ ಅಂದು ಮೋಸ ಮಾಡಿದರು.
* 4 ಕೋಟಿ ಯುವಕರಿಗೆ ಉದ್ಯೋಗ ಕೊಡುವುದಾಗಿ ವಂಚಿಸಿದರು. ಕೆಲವು ಕಡೆ ಹೋಗಿ ಪಕೋಡಾ ಮಾರಿ ಎನ್ನುತ್ತಾರೆ.
* ಪ್ರಧಾನಿ 15 ರಿಂದ 20 ಶ್ರೀಮಂತರ ಸಾಲ ಮನ್ನಾ ಮಾಡಿದ್ದಾರೆ. ಆದರೆ ರೈತರ ಕೂಗು ಅವರಿಗೆ ಕೇಳಿಸುತ್ತಿಲ್ಲ.
* ಅಮಿತ್ ಶಾ ಮತ್ತು ಮೋದಿಗೆ ಅಧಿಕಾರ ಇಲ್ಲದಿದ್ದರೆ ಆಗುವುದಿಲ್ಲ. ನಾವು ವಿಪಕ್ಷಗಳೆಲ್ಲಾ ಒಂದಾಗಿ ಪ್ರಧಾನಿಯನ್ನು ಸೋಲಿಸಲು ಹೊರಟಿದ್ದೇವೆ.
* ನಾನು ನಿಮಗೆ ಪಪ್ಪು ಆಗಿರಬಹುದು. ಆದರೆ ಕಾಂಗ್ರೆಸ್ ಪಕ್ಷ ದೇಶಕ್ಕೆ ಬಹಳಷ್ಟು ಕೊಡುಗೆಗಳನ್ನು ನೀಡಿದೆ.
* ನನ್ನಲ್ಲಿರುವ ಆಕ್ರೋಶ ಭಾವನೆಗಳು ಬಿಜೆಪಿ ಸದಸ್ಯರಲ್ಲೂ ಇದೆ. ನಾನು ಎಲ್ಲರನ್ನೂ ಕಾಂಗ್ರೆಸಿಗರನ್ನಾಗಿಯೂ ಬದಲಾಯಿಸುತ್ತೇನೆ.









