ಸಹಜ ಕೃಷಿ ಉತ್ತೇಜನಕ್ಕೆ 1000 ಕೋಟಿ ರೂ.ಗಳ ವಿಶೇಷ ಅನುದಾನ ನೀಡುವಂತೆ ಕೇಂದ್ರಕ್ಕೆ ಮನವಿ!

0
14

ನವದೆಹಲಿ: ರಾಜ್ಯದಲ್ಲಿರುವ ಸುಮಾರು 70 ಲಕ್ಷ ಹೆಕ್ಟೇರ್ ಒಣ ಭೂಮಿಯಲ್ಲಿ ಕೃಷಿ ಕೈಗೊಂಡಿರುವ, 60 ಲಕ್ಷ ರೈತರ ಜೀವನ ಮಟ್ಟವನ್ನು ಸುಧಾರಿಸಲು ಈ ಭೂಮಿಯಲ್ಲಿ ಕೈಗೊಳ್ಳುವ ಸಹಜ ಕೃಷಿಯ ಉತ್ತೇಜನಕ್ಕಾಗಿ 1000 ಕೋಟಿ ರೂ.ಗಳ ವಿಶೇಷ ಅನುದಾನವನ್ನು ನೀಡುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಕೇಂದ್ರ ಕೃಷಿ ಸಚಿವರಾದ ರಾಧಾ ಮೋಹನ್ ಸಿಂಗ್ ರನ್ನು ಮನವಿ ಮಾಡಿದರು.

ಮುಂಬರುವ ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ರಾಜ್ಯದ ಸಂಸದರು ಮತ್ತು ರಾಜ್ಯಸಭಾ ಸದಸ್ಯರೊಂದಿಗೆ ಮಾಹಿತಿ ಹಂಚಿಕೊಳ್ಳಲು ದೆಹಲಿಗೆ ಭೇಟಿ ನೀಡಿರುವ ಮುಖ್ಯಮಂತ್ರಿಗಳು ಇಂದು ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ, ರಾಜಸ್ಥಾನದ ನಂತರ ರಾಜ್ಯದಲ್ಲಿ ಅತೀ ಹೆಚ್ಚು ಪ್ರದೇಶದಲ್ಲಿ ಒಣಭೂಮಿ ಕೃಷಿ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಹಜ ಕೃಷಿಯನ್ನು ಸರ್ಕಾರವು ಉತ್ತೇಜಿಸುತ್ತಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಸರ್ಕಾರ ಸಹಜ ಕೃಷಿಗೆ ಶೇ. 90ರಷ್ಟು ಪ್ರೋತ್ಸಾಹಧನ ನೀಡುವ ಉದ್ದೇಶ ಹೊಂದಿದೆ. ಇದಕ್ಕಾಗಿ ಅಗತ್ಯವಿರುವ 1000 ಕೋಟಿ ರೂ.ಗಳ ವಿಶೇಷ ಅನುದಾನವನ್ನು ನೀಡುವಂತೆ ಸಚಿವರಲ್ಲಿ ಮನವಿ ಮಾಡಿದರು.

ಮುಖ್ಯಮಂತ್ರಿಗಳ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಕೃಷಿ ಸಚಿವರು ಕೇಂದ್ರ ಸರ್ಕಾರ ಕೂಡ ಸಾವಯವ ಕೃಷಿಯನ್ನು ಉತ್ತೇಜಿಸುತ್ತಿದೆ. ಸಹಜ ಕೃಷಿಯನ್ನು ಸಹ ಬೆಂಬಲಿಸುತ್ತಿದೆ. ಹೀಗಾಗಿ, ಅಗತ್ಯವಿರುವ ಅನುದಾನವನ್ನು ಒದಗಿಸುವ ಬಗ್ಗೆ ಚಿಂತಿಸಲಾಗುವುದು ಎಂದಿದ್ದಾರೆ.

ರಾಜ್ಯದಲ್ಲಿ ಕಳೆದ 8 ವರ್ಷಗಳಲ್ಲಿ ಸತತವಾಗಿ 6 ವರ್ಷಗಳಿಂದ ಬರಗಾಲವಿದ್ದು, ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ತಮ್ಮ ನೇತೃತ್ವದ ಸರ್ಕಾರ 2022ರ ವೇಳೆಗೆ ಕೃಷಿ ಆದಾಯವನ್ನು ದ್ವಿಗುಣಗೊಳಿಸುವ ಗುರಿಯನ್ನು ಹಾಕಿಕೊಂಡಿದೆ. ಅಲ್ಲದೆ, ದೇಶದಲ್ಲಿ ವಿವಿಧ ರಾಜ್ಯಗಳ 24 ಜಿಲ್ಲೆಗಳನ್ನು ಬರಪೀಡಿತ ಜಿಲ್ಲೆಗಳು ಎಂದು ಘೋಷಿಸಲಾಗಿದೆ. ಈ ಪೈಕಿ 16 ಜಿಲ್ಲೆಗಳು ಕರ್ನಾಟಕದಲ್ಲಿವೆ. ಇದಕ್ಕಾಗಿ ರಾಜ್ಯದ ರೈತರ ಹಿತವನ್ನು ಕಾಪಾಡಲು ಅನುವಾಗುವಂತೆ ತಮಗೆ ಸಹಕಾರ ನೀಡುವಂತೆ ಕೃಷಿ ಸಚಿವರಲ್ಲಿ ಮುಖ್ಯ ಮನವಿ ಮಾಡಿದರು.

ರಾಜ್ಯದ ವಿವಿಧ ಬ್ಯಾಂಕುಗಳಿಂದ ಸುಮಾರು 48 ಲಕ್ಷ ರೈತರು ಒಟ್ಟಾರೆಯಾಗಿ 53 ಸಾವಿರ ಕೋಟಿ ಸಾಲವನ್ನು ಪಡೆದುಕೊಂಡಿದ್ದಾರೆ. ಈ ಪೈಕಿ ಶೇ.48ರಷ್ಟು ಅಂದರೆ 23 ಲಕ್ಷದಷ್ಟು ರೈತರು ಸಹಕಾರಿ ಬ್ಯಾಂಕುಗಳಿಂದ 12000 ಕೋಟಿ ರೂ.ಗಳ ಸಾಲವನ್ನು ಪಡೆದುಕೊಂಡಿದ್ದಾರೆ. ಒಟ್ಟು ಸಾಲದ ಪ್ರಮಾಣದ ಪೈಕಿ ಇದು ಶೇ 20.75 ರಷ್ಟಾಗುತ್ತದೆ. ಜಿಲ್ಲಾ ಸಹಕಾರಿ ಬ್ಯಾಂಕುಗಳಲ್ಲಿರುವ ಸಂಪನ್ಮೂಲದ ಕೊರತೆಯಿಂದ ರೈತರಿಗೆ ಹೆಚ್ಚಿನ ಪ್ರಮಾಣದ ಸಾಲ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ನಬಾರ್ಡ್ ಬ್ಯಾಂಕುಗಳು ನೀಡುವ ಆರ್ಥಿಕ ಸಹಾಯದ ಪ್ರಮಾಣವನ್ನು ಶೇ. 40 ರಿಂದ 75ಕ್ಕೆ ಏರಿಕೆ ಮಾಡಬೇಕು. ಇದರಿಂದ ಸಣ್ಣ ಮತ್ತು ಅತೀ ಸಣ್ಣ ಹಿಡುವಳಿದಾರರಿಗೆ ಅಗತ್ಯವಿರುವ ಸಾಲವನ್ನು ಸಮಯಕ್ಕೆ ಸರಿಯಾಗಿ ನೀಡಲು ಸಹಾಯಕವಾಗುತ್ತದೆ ಎಂದು ಮುಖ್ಯ ಮಂತ್ರಿಯವರು ಮಾಡಿದ ಮನವಿಗೆ ತಕ್ಷಣವೇ ಸ್ಪಂದಿಸಿದ ಕೇಂದ್ರ ಕೃಷಿ ಸಚಿವರಾದ ರಾಧಾ ಮೋಹನ್ ಸಿಂಗ್ ಅವರು ಈ ಪ್ರಮಾಣದನ್ನು ಶೇ. 60ಕ್ಕೆ ಏರಿಕೆ ಮಾಡಿಕೊಡುವುದಾಗಿ ತಿಳಿಸಿದರು.

ಮುಖ್ಯಮಂತ್ರಿಗಳೊಂದಿಗೆ ಲೋಕೋಪಯೋಗಿ ಸಚಿವರಾದ ಹೆಚ್. ಡಿ. ರೇವಣ್ಣ, ಕೃಷಿ ಸಚಿವರಾದ ಶಿವಶಂಕರ ರೆಡ್ಡಿ, ಸಹಕಾರ ಸಚಿವರಾದ ಬಂಡೆಪ್ಪ ಕಾಶೇಂಪೂರ ಅವರುಗಳು ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

- Call for authors -

LEAVE A REPLY

Please enter your comment!
Please enter your name here