ಎರಡನೇ ದಿನದ ಪರೀಕ್ಷೆ ಯಶಸ್ವಿ: ಸಚಿವ ಸುರೇಶ್ ಕುಮಾರ್

0
3

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಈ ಸಾಲಿನ ಎರಡನೇ ದಿನದ ಜೆಟಿಎಸ್ ಮತ್ತು ಅರ್ಥಶಾಸ್ತ್ರ ವಿಷಯದ ಪರೀಕ್ಷೆಗಳು ಶುಕ್ರವಾರ, ರಾಜ್ಯದ 94 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದು, 510 ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಎರಡನೇ ದಿನದ ಈ ಪರೀಕ್ಷೆಗಳಿಗೆ 528 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದು, 18 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎರಡನೇ ದಿನದ ಈ ಪರೀಕ್ಷೆ ಯಾವುದೇ ಸಮಸ್ಯೆಯಿಲ್ಲದೇ ಅಚ್ಚುಕಟ್ಟಾಗಿ ನಡೆದು ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೆಚ್ಚಿನ ನಿಗಾ ವಹಿಸಲಾಗಿತ್ತು. ಈ ದಿನ ಕಂಟೈನ್ಮೆಂಟ್ ವಲಯಕ್ಕೆ ಸೇರಿದ ಯಾವುದೇ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿಲ್ಲ. 438 ಮಂದಿ ಶಾಲಾ ವಿದ್ಯಾರ್ಥಿಗಳು ಮತ್ತು 83 ಮಂದಿ ಖಾಸಗಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆಂದು ಅವರು ತಿಳಿಸಿದ್ದಾರೆ. ಮೂವರು ವಲಸೆ ವಿದ್ಯಾರ್ಥಿಗಳಾಗಿದ್ದು, ಮೂವರೂ ಇಂದಿನ ಪರೀಕ್ಷೆಗೆ ಹಾಜರಾಗಿದ್ದರು.

ಶಿವಮೊಗ್ಗ ಜಿಲ್ಲೆಯಿಂದ ಹೆಚ್ಚಿನ ಅಭ್ಯರ್ಥಿಗಳು ಅಂದರೆ 70 ಅಭ್ಯರ್ಥಿಗಳು ಹಾಜರಾಗಿದ್ದರು. ಕಲಬುರ್ಗಿ-49, ಮಂಗಳೂರು-40, ರಾಮನಗರ-33, ಬೆಂಗಳೂರು ಉತ್ತರ-24, ಬೆಂಗಳೂರು ದಕ್ಷಿಣ ಜಿಲ್ಲೆ-26, ಚಿಕ್ಕೋಡಿ- 46, ಧಾರವಾಡ-50, ಬಳ್ಳಾರಿ-47 ಅಭ್ಯರ್ಥಿಗಳು ಹಾಜರಾಗಿದ್ದರು ಎಂದು ಸಚಿವರು ವಿವರಿಸಿದ್ದಾರೆ.

ಈ ಪರೀಕ್ಷೆಗಳಿಗೆ ಕಳೆದ ವರ್ಷ 7 ಅಭ್ಯರ್ಥಿಗಳು ಗೈರು ಹಾಜರಾಗಿದ್ದರು. ರಾಜಧಾನಿಯಲ್ಲಿ 18 ಪರೀಕ್ಷಾ ಕೇಂದ್ರಗಳು. ಮೈಸೂರು ಮತ್ತು ಮಂಗಳೂರಿನಲ್ಲಿ ತಲಾ 6, ಶಿವಮೊಗ್ಗದಲ್ಲಿ 7 ಪರೀಕ್ಷಾ ಕೇಂದ್ರಗಳಿದ್ದವು ಎಂದು ಸಚಿವರು ವಿವರಿಸಿದ್ದಾರೆ. ಯಾವುದೇ ಕೇಂದ್ರದಲ್ಲೂ ಪರೀಕ್ಷಾ ಅವ್ಯವಹಾರ ನಡೆದಿಲ್ಲ. ರಾಜ್ಯದ ವಿವಿಧೆಡೆಯ ಪರೀಕ್ಷಾ ಕೇಂದ್ರಗಳಲ್ಲಿ ನಿನ್ನೆ ಕೈಗೊಳ್ಳಲಾದಂತೆ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಶನಿವಾರ ಗಣಿತ ಪರೀಕ್ಷೆ ನಡೆಯಲಿದ್ದು, ನಿನ್ನೆಯಂತೆಯೇ ಪರೀಕ್ಷಾ ಕೇಂದ್ರಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಸಾಮಾಜಿಕ ಅಂತರ ಪಾಲಿಸುವ ಮೂಲಕ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಡೆಯುತ್ತಿರುವ ಪರೀಕ್ಷೆಯ ಯಶಸ್ಸಿಗೆ ಪೋಷಕರು ಹೆಚ್ಚಿನ ಸಹಕಾರ ನೀಡಬೇಕೆಂದು ಎಂದು ಸುರೇಶ್ ಕುಮಾರ್ ಕೋರಿದ್ದಾರೆ.

- Call for authors -

LEAVE A REPLY

Please enter your comment!
Please enter your name here