ಶನಿ ಮಹರಾಜರು ತುಳಿದರೆ ಪಾತಾಳಕ್ಕೆ ಇಳಿಯುತ್ತೇವೆ, ಕೈ ಹಿಡಿದು ಎತ್ತಿದರೆ ಆಕಾಶಕ್ಕೆ ಏರುತ್ತೇವೆ: ಡಿಕೆಶಿ

0
3

ಬೆಂಗಳೂರು: ‘ಶನಿ ಮಹರಾಜರು ತುಳಿದರೆ ಪಾತಾಳಕ್ಕೆ ಹೋಗ್ತೇವೆ, ಕೈ ಹಿಡಿದರೆ ಆಕಾಶದೆತ್ತರಕ್ಕೆ ಏರುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮಾರ್ಮಿಕವಾಗಿ ಹೇಳಿದ್ದಾರೆ.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧ ಬೆಂಗಳೂರಿನ ಮತ್ತೀಕೆರೆಯಲ್ಲಿ ಪೂರ್ವಭಾವಿ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು ಹೇಳಿದ್ದಿಷ್ಟು:

”ಇಂದು ಆರ್.ಆರ್.ನಗರದ ನೊಂದು, ಬೆಂದ ಜನ ಇಲ್ಲಿ ಸೇರಿದ್ದೀರಿ. ನನ್ನದು, ನನ್ನ ಸೋದರಿ ಕುಸುಮಾ ಇಬ್ಬರದ್ದೂ ಮೊದಲನೆ ಸಭೆ. ವಿಘ್ನ ನಿವಾರಕ ವಿನಾಯಕ ನಮಗಿಬ್ಬರಿಗೂ ವಿಜಯ ಕೊಡಲಿ ಅಂತ ಪ್ರಾರ್ಥಿಸುತ್ತೇನೆ.”

“ಪಕ್ಷದ ಕಾರ್ಯಕರ್ತರಿಗೆ ಆರ್.ಆರ್. ನಗರದಲ್ಲಿ ಸಾಕಷ್ಟು ತೊಂದರೆ ಆಗ್ತಿದೆ. ಇಂದಿಗೆ ಅವೆಲ್ಲವೂ ಮುಕ್ತಾಯವಾಗಲಿದೆ. ಇನ್ನು ಮುಂದೆ ಇಲ್ಲಿನ ಸಮಸ್ಯೆಗಳನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ.”

“ನಮ್ಮ ಕಾರ್ಯಕರ್ತರ ಮೇಲೆ ಎಫ್.ಐ.ಆರ್. ಆಗಿರುವ ಮಾಹಿತಿ ಕೊಡಿ. ನಾಳೆ ಸಂಜೆಯೊಳಗೆ ಎಫ್.ಐ.ಆರ್ ಮಾಡಿರುವ ಆಫಿಸರ್ ನ ಸಸ್ಪೆಂಡ್ ಮಾಡಿಸ್ತೇನೆ. ನನಗೆ ಕನಕಪುರ ಕ್ಷೇತ್ರ ಎಷ್ಟು ಮುಖ್ಯವೋ, ಆರ್..ಆರ್. ನಗರವೂ ಅಷ್ಟೇ ಮುಖ್ಯ. ಅಧಿಕಾರಿಗಳೇ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿ. ಇಲ್ಲದೆ ಹೋದರೆ ಮುಂದೆ ನಿಮ್ಮ ಭವಿಷ್ಯಕ್ಕೆ ಮುಳುವಾಗತ್ತೆ. ನಿಮ್ಮನ್ನು ಇಲ್ಲಿಂದ ಎತ್ತಂಗಡಿ ಮಾಡಿಸ್ತೇನೆ.”

“ಇದು ರೆಕಾರ್ಡ್ ಆಗಲಿ ಅಂತ ಈ ಮಾತು ಹೇಳ್ತಿದ್ದೇನೆ. ಕಾರ್ಯಕರ್ತರ ವಿರುದ್ಧ ಹಾಕಿರುವ ಕೇಸ್ ಗಳಲ್ಲಿ ವಾದ ಮಾಡಲು ಲಾಯರ್ ನೇಮಿಸ್ತೇನೆ. ಇನ್ನು ಹತ್ತು ದಿನ ಇಲ್ಲೇ ಕೂತಿರ್ತೇನೆ. ನಂಗೆ ಬೇರೆ ಏನೂ ಕೆಲಸ ಇಲ್ಲ. ಕುಸುಮಾ ಅವರು ಸಮಾಜ ಸೇವೆಗೆ ಅಂತ ನಿಂತಿದ್ದಾರೆ. ಅವರನ್ನು ಗೆಲ್ಲಿಸಿಕೊಡಬೇಕು.”

“ಈ ಎಲೆಕ್ಷನ್ ನಿಂದ ಸಿಎಂ ಯಡಿಯೂರಪ್ಪ ಅವರು ಅಧಿಕಾರದಿಂದ ಕೆಳಗೆ ಇಳಿಯೋದಿಲ್ಲ. ಈ ಚುನಾವಣೆಯಿಂದ ಮೋದಿ ಅವರಿಗೇನೂ ಸಮಸ್ಯೆಯೂ ಇಲ್ಲ. ಆದರೆ ಈ ಚುನಾವಣೆ ಇಲ್ಲಿನ ಜನರು ಹಾಗೂ ಕಾರ್ಯಕರ್ತರು ಅನುಭವಿಸುತ್ತಿರುವ ಕಿರುಕುಳಕ್ಕೆ ಪರಿಹಾರ ನೀಡಬೇಕಿದೆ.”

“ಈ ಹಿಂದೆ ಇಲ್ಲಿ ಮುನಿರತ್ನ ಅವರು ತಾನು ಗೆದ್ದಿದ್ದೇ ಡಿ.ಕೆ. ಶಿವಕುಮಾರ್ ಅವರಿಂದ, ಸುರೇಶಣ್ಣನಿಂದ ಅಂತಿದ್ದರು. ರಾಜೀನಾಮೆ ಕೊಟ್ಟ ಮೇಲೆ ಏನೇನೂ ಹೇಳಿಕೊಂಡು ಬರುತ್ತಿದ್ದಾರೆ? ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರ ಮೇಲಿನ ಅವರ ದೌರ್ಜನ್ಯಕ್ಕೆ ಅಂತ್ಯ ಹಾಡಬೇಕಿದೆ.”

ಸೇವೆಗೆ ಜನರ ಆಶೀರ್ವಾದ ಬೇಕು: ಕುಸುಮಾ

ಕುಸುಮಾ ಅವರು ಈ ಸಭೆಯಲ್ಲಿ ತಮ್ಮನ್ನು ಕುಸುಮಾ ಹನುಮಂತರಾಯಪ್ಪ ಅಂತಲೇ ಪರಿಚಯಿಸಿಕೊಂಡಿದ್ದು, ”ತಾನು ನೊಂದ ಮಹಿಳೆ. ಪ್ರೊಫೆಸರ್ ಆಗಿ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದೆ. ಮಕ್ಕಳು, ಮಹಿಳೆಯರು, ವೃದ್ಧರ ಸಹಾಯ ಮಾಡುತ್ತಿದ್ದೆ. ಇನ್ಮುಂದೆ ಮಹತ್ತರ ಘಟ್ಟ ಶುರುವಾಗ್ತಿದೆ. ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದೇನೆ. ಆರ್.ಆರ್. ನಗರ ಕ್ಷೇತ್ರದ ಜನರ ಸಂಕಷ್ಟ ನನಗೆ ಗೊತ್ತಿದೆ. ಅವರ ಪರವಾಗಿ ಕೆಲಸ ಮಾಡಲು, ಅವರ ಸೇವೆ ಸಲ್ಲಿಸಲು ನಿಮ್ಮೆಲ್ಲರ ಆಶೀರ್ವಾದ ನನಗೆ ಬೇಕು. ನೀವು ಖಂಡಿತಾ ಆಶೀರ್ವಾದ ಮಾಡುತ್ತೀರಿ ಎಂಬ ನಂಬಿಕೆ, ವಿಶ್ವಾಸ ನನಗಿದೆ” ಎಂದರು.

- Call for authors -

LEAVE A REPLY

Please enter your comment!
Please enter your name here