ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಯ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್ ಬೆಂಗಳೂರು ಮಹಾನಗರ ಮತ್ತು ಬೆಂಗಳೂರು ಉತ್ತರ ಮತ್ತು ದಕ್ಷಿಣ ಶೈಕ್ಷಣಿಕ ಜಿಲ್ಲೆಗಳ ಕಡೇ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದರು.
ಮಂಗಳವಾರ ಸಚಿವರು ವಿಕಾಸಸೌಧದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ, ಬಿಬಿಪಿಂಪಿ ಉಪ ಆಯುಕ್ತರು, ಎಡಿಜಿಪಿ, ನಗರ ವ್ಯಾಪ್ತಿಯ ಡಿಸಿಪಿಗಳು, ಡಿಡಿಪಿಐಗಳು, ಬಿಇಒಗಳು ಸಭೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಬೆಂಗಳೂರು ಮಹಾನಗರ ವ್ಯಾಪ್ತಿಯ ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸರು ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಆರೋಗ್ಯ ಇಲಾಖೆ, ಸಾರಿಗೆ, ಮತ್ತು ಬಿಬಿಎಂಪಿ ಶಿಕ್ಷಣ ಇಲಾಖೆ ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸುರೇಶ್ಕುಮಾರ್ ಮಾರ್ಗದರ್ಶನ ನೀಡಿದರು.
ಆರೋಗ್ಯಕರ ವಾತಾವರಣ, ಮಕ್ಕಳ ಸುರಕ್ಷೆ, ಆರೋಗ್ಯ ತಪಾಸಣೆ, ಬಸ್ ಸೌಲಭ್ಯ ಸೇರಿದಂತೆ ಪರೀಕ್ಷೆ ನಡೆಸುವ ಕುರಿತು ಎಲ್ಲ ಇಲಾಖೆಗಳ ಸಮನ್ವಯದಲ್ಲಿ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ವಿಶೇಷವಾಗಿ ಮಕ್ಕಳ ಸುರಕ್ಷತೆಗೆ ಈ ಪರೀಕ್ಷೆಯಲ್ಲಿ ಪ್ರಥಮ ಆಧ್ಯತೆಯನ್ನು ನೀಡಲು ಕಾಲಕಾಲಕ್ಕೆ ಸೂಚನೆಗಳನ್ನು ನೀಡಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳನ್ನು ಸೊಂಕು ನಿವಾರಕ ದ್ರಾವಣದಿಂದ ಪ್ರತಿ ಪರೀಕ್ಷೆಯ ಮುನ್ನ ಹಾಗೂ ನಂತರದ ಅವಧಿಗಳಲ್ಲಿ ಸ್ಯಾನಿಟೈಸ್ ಮಾಡುವುದು ಪ್ರತಿ ವಿದ್ಯಾರ್ಥಿಯ ಆರೋಗ್ಯ ತಪಾಸಣೆ ಮಾಸ್ಕ ವಿತರಣೆಗೆ ಕ್ರಮ ವಹಿಸುವುದು, ಕಂಟೈನ್ಮೆಂಟ್ ವಲಯದಿಂದ ಬರುತ್ತಿರುವ ವಿದ್ಯಾರ್ಥಿಗಳಿಗೆ ಎನ್.95 ಮಾಸ್ಕ ವಿತರಿಸುವುದು, ಅನಾರೋಗ್ಯಕರ ವಿದ್ಯಾರ್ಥಿಗಳಿಗೆ ಹಾಗೂ ಕಂಟೈನ್ಮೆಂಟ್ ವಲಯದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡುವುದು ಸ್ವಯಂ ಸೇವಕರು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಲು ತರಬೇತಿಯನ್ನು ನೀಡುವುದು, ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ಐಪಿಸಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವುದು ಸೇರಿದಂತೆ ಎಲ್ಲಾ ಅಧಿಕಾರಿಗಳು ಸಮರ್ಪಣ ಮನೋಭಾವದಿಂದ ಪರೀಕ್ಷಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಸಚಿವರು ನಿರ್ದೇಶಿಸಿದರು. ಯಾವುದೇ ಹಂತದಲ್ಲಿ ಪರೀಕ್ಷೆ ಕುರಿತು ಒಂದೇ ಒಂದ ಅಪಸ್ವರ ಬಾರದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದ ಸಚಿವರು. ಪರೀಕ್ಷೆಯಲ್ಲಿ ಯಾವುದೇ ಒಂದೇ ಒಂದು ಅಪಸ್ವರ ಬಂದರೆ ಆಯಾ ವ್ಯಾಪ್ತಿಯ ಡಿಡಿಪಿಐ ಮತ್ತು ಬಿಇಒಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಕ್ಕಳು ತಮ್ಮ ಪೋಷಕರ ವಾಹನದಲ್ಲಿ ಬರುವವರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಕೇಂದ್ರದ ಹೊರಗೆ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಕ್ರಮ ವಹಿಸುವುದು ಹಾಗೆಯೇ ವಾಹನ ಪಾರ್ಕಿಂಗ್ ಕುರಿತಂತೆ ಹೆಚ್ಚಿನ ಗಮನ ಹರಿಸುವಂತೆ ಸಚಿವರು ಎಡಿಜಿಪಿಗೆ ಸಲಹೆ ನೀಡಿದರು. ಬುಧವಾರ ಅಣುಕು ಪರೀಕ್ಷಾ ಕೇಂದ್ರಗಳನ್ನು ನಡೆಸುವುದರಿಂದ ನಾಳೆಯಿಂದಲೇ ಪೊಲೀಸರು ಬೆಳಗ್ಗೆ 7 ಗಂಟೆಗೆ ಹಾಜರಿರುವವಂತೆ ಸೂಚನೆ ನೀಡಬೇಕೆಂದರು ಸುರೇಶ್ ಕುಮಾರ್ ಹೇಳಿದರು.
ಈಗಾಗಲೇ ಬೆಂಗಳೂರಿನ ಬಹುತೇಕ ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಜೇಷನ್ ಮುಗಿದಿದ್ದು, ನಾಳೆ ಬೆಳಗ್ಗೆ ಪುನಃ ಎಲ್ಲ ಕೇಂದ್ರಗಳ ಸ್ಯಾನಿಟೈಸೇಷನ್ ಮುಗಿಯಲಿದೆ. ಬುಧವಾರ ಪರೀಕ್ಷಾ ಕೇಂದ್ರಗಳ ಅಣುಕು ಪ್ರದರ್ಶನ ನಡೆಯಲಿದ್ದು, ಆ ನಂತರ ಗುರುವಾರದ ಪರೀಕ್ಷಾ ಸಿದ್ಧತೆಗಾಗಿ ಕೇಂದ್ರಗಳ ಸ್ಯಾನಿಟೈಜೇಷನ್ ಪೂರ್ಣಗೊಳಿಸಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ಮಂಜುನಾಥ್ ತಿಳಿಸಿದರು.
ವಿಶೇಷವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಪಾರ್ಕಿಂಗ್ ನಿರ್ವಹಣೆ ಮತ್ತು ಪರೀಕ್ಷಾ ಪಾವಿತ್ರ್ಯ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಹೆಚ್ಚಿನ ಗಮನ ಹರಿಸಲು ನಮ್ಮ ಪೊಲೀಸ್ ಸಿಬ್ಬಂದಿಗೆ ಈ ಸಂಜೆಯೇ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಲಾಗುವುದು ಎಂದು ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ ಎಡಿಜಿಪಿ ಮುರುಗನ್ ತಿಳಿಸಿದರು.
ಜಿಲ್ಲಾಧಿಕಾರಿ ಎಂ. ಶಿವಮೂರ್ತಿ ಮಾತನಾಡಿ, ಕಂಟೈನ್ಮೆಂಟ್ ವ್ಯಾಪ್ತಿಯಿಂದ ಬರುವ ಮಕ್ಕಳಿಗೆ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸೇಷನ್ ಮಾಡಲಾಗಿದೆ. ಯಾವುದೇ ಸಂದರ್ಭದಲ್ಲಿ ನಮ್ಮ ಸಹಾಯದ ಅವಶ್ಯಕತೆ ಬಿದ್ದರೆ ತಮ್ಮನ್ನು ಸಂಪರ್ಕಿಸಬೇಕೆಂದು ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ತಮ್ಮತಮ್ಮ ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ಸಿದ್ಧತೆಗಳನ್ನು ವಿವರಿಸಿದ ಬಿಇಒಗಳು ತಮ್ಮ ಅಗತ್ಯಗಳನ್ನು ಸಭೆಯ ಗಮನಕ್ಕೆ ತಂದು ಪರಿಹರಿಸಿಕೊಂಡರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜಿ.ಜಗದೀಶ್, ಎಸಿಪಿ ಶ್ರೀಮತಿ ಆಶ್ವಿನಿ, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ನಿರ್ದೇಶಕಿ ವಿ. ಸುಮಂಗಲ, ಬೆಂಗಳೂರು ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.









