ನವದೆಹಲಿ: ರಾಜ್ಯ ಕಾಂಗ್ರೆಸ್ಸಿನ ಬಂಡಾಯ ದೆಹಲಿಗೆ ಶಿಫ್ಟ್ ಆಗಿದ್ದು, ಇಂದು ರಾಹುಲ್ ಗಾಂಧಿ ಜೊತೆ ರಾಜ್ಯ ಕಾಂಗ್ರೆಸ್ ನಾಯಕರು ಸಭೆ ನಡೆಸಲಿದ್ದಾರೆ. ಜಾರಕಿಹೊಳಿ ಸಹೋದರರ ಸಮಸ್ಯೆಗಳು, ಅಪರೇಷನ್ ಕಮಲದ ಭೀತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ.
ಇಂದು ಸಂಜೆ 4ಗಂಟೆ ರಾಹುಲ್ಗಾಂಧಿ ನಿವಾಸದಲ್ಲಿ ನಡೆಯುವ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿಸಿಎಂ ಪರಮೇಶ್ವರ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಭಾಗವಹಿಸುತ್ತಿದ್ದಾರೆ.
ರಾಜ್ಯ ಕಾಂಗ್ರೆಸ್ ನಲ್ಲಿ ಉಂಟಾಗಿರುವ ಬಂಡಾಯ, ಆಪರೇಷನ್ ಕಮಲದ ಬಗ್ಗೆ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ. ಇದಲ್ಲದೆ, ಜಾರಕಿಹೊಳಿ ಸಹೋದರರ ಸಮಸ್ಯೆಗೂ ರಾಹುಲ್ ಗಾಂಧಿ ಇಂದು ಪರಿಹಾರ ಒದಗಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಚಿವ ಸಂಪುಟ ಸರ್ಜರಿ ಪರಿಹಾರವೋ, ಸಮಸ್ಯೆಯೋ ಎಂಬ ಬಗ್ಗೆಯೂ ಇಂದು ಚರ್ಚೆಯಾಗಲಿದ್ದು, ಸಂಪುಟ ವಿಸ್ತರಣೆ ಬಳಿಕ ಅವಕಾಶ ವಂಚಿತರು ಬಂಡೇಳುವ ಸಾಧ್ಯತೆ, ಬಂಡಾಯ ಶಮನಕ್ಕೆ ಮಾಡಬೇಕಾದ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಯಲಿದೆ.
ನಿಗಮ ಮಂಡಳಿಗಳ ನೇಮಕ, ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಡಿ.ಕೆ. ಶಿವಕುಮಾರ್ ಮೇಲೆ ಇಡಿ ದೂರು ದಾಖಲಾಗಿರುವ ಕುರಿತು ಡಿಕೆಶಿ ಬಂಧನವಾದರೆ ಏನು ಮಾಡಬೇಕೆಂಬ ಬಗ್ಗೆಯೂ ಚರ್ಚೆ ನಡೆಯಲಿದೆ.









