ಬೆಂಗಳೂರು: 20 ವರ್ಷದ ಹಳೆಯ ಸಬ್ ಹರ್ಬನ್ ರೈಲ್ವೆ ಯೋಜನೆಗೆ ಕೊನೆಗೂ ಮುಕ್ತಿ ಸಿಗುವ ಲಕ್ಷಣ ಗೋಚರವಾಗಿದ್ದು, ರೈಲ್ವೆ ಯೋಜನೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ಸ್ವತಃ ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಸಿಎಂ ಕುಮಾರಸ್ವಾಮಿ ಇಂದು ಸಭೆ ನಡೆಸಿದರು.
ಸಬರ್ಬನ್ ರೈಲ್ವೆ ಯೋಜನೆಗೆ ಇದ್ದ ಎಲ್ಲಾ ಅಡತಡೆಗಳು ಇಂದಿನ ಸಭೆಯಲ್ಲಿ ಬಹುತೇಕ ನಿವಾರಣೆ ಆಗಿದ್ದು, 19 ನಿಬಂಧನೆಗಳನ್ನು ಹಾಕಿದ್ದ ರಾಜ್ಯ ಸರ್ಕಾರ ಕೂಡಾ ನಿಬಂಧನೆಗಳನ್ನು ವಾಪಸ್ ಪಡೆಯಲು ನಿರ್ಧಾರ ಮಾಡಿದೆ. ಸ್ವತಃ ಸಿಎಂ ಕುಮಾರಸ್ವಾಮಿ ನಿಬಂಧನೆಗಳನ್ನು ವಾಪಸ್ ಪಡೆಯಲು ಒಪ್ಪಿದ್ದು, ಯೋಜನೆಗಾಗಿ ಕೇಂದ್ರ ಸರ್ಕಾರ 6 ಸಾವಿರ ಕೋಟಿ ಮೊತ್ತದ ಭೂಮಿಯನ್ನ ಕೇವಲ ಒಂದು ರೂಪಾಯಿಗೆ ನೀಡಲು ಒಪ್ಪಿಕೊಂಡಿದೆ.
ಸಭೆ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿ ಸಿಎಂ ಕುಮಾರಸ್ವಾಮಿ ಹಾಗೂ ಕೇಂದ್ರ ಸಚಿವ ಪಿಯೂಶ್ ಗೋಯಲ್ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಒಟ್ಟಾಗಿ ಕೆಲಸ ಮಾಡಿದ್ರೆ ಆದಷ್ಟು ಬೇಗ ಕೆಲಸವೂ ಮುಗಿಯುತ್ತೆ ಎಂದು ಪಿಯೂಶ್ ಘೋಯಲ್ ತಿಳಿಸಿದರು. ಸುಮಾರು 23 ಸಾವಿರ ಕೋಟಿ ಮೊತ್ತದ ಯೋಜನೆ ಇದಾಗಿದ್ದು, 160 ಕಿಲೋ ಮೀಟರ್ ರೈಲ್ವೆ ಮಾರ್ಗ ಇರಲಿದೆ. ಮೆಟ್ರೋ, ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೈ ಕ್ಲಾಸ್ ಯೋಜನೆ ಇದಾಗಿದ್ದು, ರಾಜ್ಯ ಸರ್ಕಾರ ಸಹಕಾರ ಕೊಟ್ರೆ ಆದಷ್ಟು ಬೇಗ ಯೋಜನೆ ಪ್ರಾರಂಭ ಮಾಡ್ತೀವಿ ಎಂದರು.
ಸಿಎಂ ಕುಮಾರಸ್ವಾಮಿ ಮಾತನಾಡಿ ಯೋಜನೆ ಬಗ್ಗೆ ಕೆಲವೊಂದು ಅನುಮಾನಗಳು ಇತ್ತು. ಇಂದಿನ ಸಭೆಯಲ್ಲಿ ಎಲ್ಲಾ ಅನುಮಾನಗಳು ಕ್ಲಿಯರ್ ಆಗಿದ್ದು, ಯೋಜನೆ ಪ್ರಾರಂಭ ಬಹುತೇಕ ಅಂತಿಮವಾಗಿದೆ. ಅಲ್ಲದೆ ಪ್ರಧಾನಿಗಳು ದಿನಾಂಕ ನಿಗಧಿ ಮಾಡಿದ್ರೆ ಆದಷ್ಟು ಬೇಗ ಸಬ್ ಹರ್ಬನ್ ರೈಲ್ವೆ ಯೋಜನೆಗೆ ಶಂಕುಸ್ಥಾಪನೆ ಮಾಡೋದಾಗಿ ತಿಳಿಸಿದ್ರು.









