ಬೆಂಗಳೂರು: ನಗರದ ಕೋನಪ್ಪನ ಅಗ್ರಹಾರದಲ್ಲಿ ಮೆಟ್ರೋ ನಿಲ್ದಾಣ ಹಾಗೂ ಹಳಿಗಳ ನಿರ್ಮಾಣಕ್ಕೆ 200 ಕೋಟಿ ರೂ.ಗಳ ಕೊಡುಗೆಯನ್ನು ಇನ್ಫೋಸಿಸ್ ಪ್ರತಿಷ್ಠಾನ ನೀಡುತ್ತಿದ್ದು, ಈ ಬಗ್ಗೆ ಮೆಟ್ರೋ ಹಾಗೂ ಇನ್ಫೋಸಿಸ್ ಫೌಂಡೇಷನ್ ಮಧ್ಯೆ ಒಪ್ಪಂದವನ್ನು ಜುಲೈ 19 ರಂದು ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾ ಮೂರ್ತಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಚರ್ಚಿಸಿದರು.
ಭೇಟಿ ಬಳಿಕ ಮಾತನಾಡಿದ ಸಿಎಂ ಕುಮಾರಸ್ವಾಮಿ, ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ ಸಾರ್ವಜನಿಕರಿಗೆ ಉಪಯುಕ್ತವಾಗುವ ಹಲವಾರು ಕಾರ್ಯಗಳಾಗಿವೆ. ಇದೀಗ, ಮೆಟ್ರೋ ನಿಲ್ದಾಣ ಮತ್ತು ಹಳಿಗಳ ನಿರ್ಮಾಣಕ್ಕೆ 200 ಕೋಟಿಗಳನ್ನು ವ್ಯಯಿಸಲು ಇನ್ಫೋಸಿಸ್ ಫೌಂಡೇಶನ್ ತೀರ್ಮಾನಿಸಿದೆ ಎಂದು ಹೇಳಿದರು.
ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ದೊಡ್ಡ ಮಟ್ಟದ ಕೊಡುಗೆ ನೀಡಿದ್ದಾರಲ್ಲದೆ, ಶಿಕ್ಷಣ ಕ್ಷೇತ್ರಕ್ಕೂ ಮಹತ್ವದ ಕೊಡುಗೆ ನೀಡಿದ್ದಾರೆ. ಈ ರೀತಿಯ ಕಾರ್ಯಕ್ರಮಗಳ ಮೂಲಕ ರಾಜ್ಯದ ಅಭಿವೃದ್ಧಿಗೆ ಕಾರಣೀಭೂತರಾಗಿದ್ದಾರೆ. ಅನೇಕ ಕಾರ್ಪೊರೇಟ್ ಸಂಸ್ಥೆಗಳಿಗೆ ಡಾ. ಸುಧಾಮೂರ್ತಿ ಸ್ಫೂರ್ತಿಯಾಗಿದ್ದಾರೆ ಹಾಗೂ ಮಾರ್ಗದರ್ಶಕರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಇನ್ಫೋಸಿಸ್ ಅಧ್ಯಕ್ಷೆ ಡಾ.ಸುಧಾ ಮೂರ್ತಿ ಮಾತನಾಡಿ,
ಮೆಟ್ರೋ ನಿಲ್ದಾಣ ಹಾಗೂ ಹಳಿಗಳ ನಿರ್ಮಾಣ ಪೂರ್ಣಗೊಂಡ ನಂತರ 30 ವರ್ಷಗಳವರೆಗೆ ಅದರ ನಿರ್ವಹಣೆಯನ್ನು ಇನ್ಫೋಸಿಸ್ ಪ್ರತಿಷ್ಠಾನದ ಮೂಲಕ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಆಡದೆ ಮಾಡುವವನು ರೂಢಿಯೊಳಗೆ ಉತ್ತಮನು ಎಂಬ ಬಸವಣ್ಣನವರ ವಚನದಂತೆ ದುಡಿದ ಹಣವನ್ನು ಜನರಿಗಾಗಿ ವೆಚ್ಚ ಮಾಡುವುದರಲ್ಲಿರುವ ಸಂತೋಷ ಬೇರೆ ಯಾವುದರಲ್ಲೂ ಇಲ್ಲ ಎಂದರು.









