ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಖಾಯಂ?

0
19

ನವದೆಹಲಿ:ದೇಶವನ್ನೇ ಬೆಚ್ಚಿಬೀಳಿಸಿದ್ದ ನಿರ್ಭಯಾ ಗ್ಯಾಂಗ್ ರೇಪ್ ಮತ್ತು ಹತ್ಯೆ ಪ್ರಕರಣ ಸಂಬಂಧ ಮೂವರು ಅಪರಾಧಿಗಳು ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿ ಗಲ್ಲುಶಿಕ್ಷೆಯನ್ನು ಖಾಯಂಗೊಳಿಸಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.

ಗಲ್ಲುಶಿಕ್ಷೆ ಆದೇಶ ಪುನರ್ ಪರಿಶೀಲನೆ ನಡೆಸುವಂತೆ ಅಪರಾಧಿಗಳಾದ ಮುಕೇಶ್,ಪವನ್ ಗುಪ್ತಾ ಹಾಗೂ ವಿನಯ್ ಶರ್ಮಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ನಡೆಯಿತು.

ಅಪರಾಧಿಗಳ ಮನವಿಯನ್ನು ಪುರಸ್ಕರಿಸಲು ನಿರಾಕರಿಸಿದ ನ್ಯಾಯಪೀಠ ಅಪರಾಧಿಗಳ ಅರ್ಜಿಯನ್ನು ವಜಾಗೊಳಿಸಿ,2017ರ ಮೇ 5ರಂದು ಸುಪ್ರೀಂಕೋರ್ಟ್ ನೀಡಿದ್ದ ಗಲ್ಲುಶಿಕ್ಷೆ ತೀರ್ಪನ್ನು ಎತ್ತಿಹಿಡಿಯಿತು.

ಪ್ರಕರಣವೇನು?

2012ರ ಡಿಸೆಂಬರ್ 16ರ ರಾತ್ರಿ ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ ನಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿ, ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಸಾವು-ಬದುಕಿನ ನಡುವೆ ಹೋರಾಟ ನಡೆಸಿ 2012ರ ಡಿಸೆಂಬರ್ 29ರಂದು ಸಿಂಗಾಪುರ್ ಆಸ್ಪತ್ರೆಯಲ್ಲಿ ನಿರ್ಭಯಾ ಇಹಲೋಕ ತ್ಯಜಿಸಿದ್ದಳು.

ಪ್ರಕರಣದ ಮುಖ್ಯ ಆರೋಪಿ ರಾಮ್ ಸಿಂಗ್ 2013ರಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿಯೇ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ.ಮತ್ತೊಬ್ಬನನ್ನು ಬಾಲಾಪರಾಧಿ ಎಂದು ಕೋರ್ಟ್ ಘೋಷಿಸಿ, ಮೂರು ವರ್ಷ ಶಿಕ್ಷೆ ವಿಧಿಸಿತ್ತು. ನಾಲ್ವರು ಅಪರಾಧಿಗಳಿಗೆ 2013ರ ಸೆಪ್ಟೆಂಬರ್ 13ರಂದು ದೆಹಲಿಯ ತ್ವರಿತ ವಿಚಾರಣಾ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.ದೆಹಲಿ ಹೈಕೋರ್ಟ್ ಕೂಡಾ ನಾಲ್ವರ ಗಲ್ಲುಶಿಕ್ಷೆಯನ್ನು ಖಾಯಂಗೊಳಿಸಿ ತೀರ್ಪನ್ನು ಎತ್ತಿಹಿಡಿದಿತ್ತು. ಕಳೆದ ವರ್ಷ ಮೇ 5ರಂದು ಸುಪ್ರೀಂಕೋರ್ಟ್ ಕೂಡಾ ದೆಹಲಿ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿತ್ತು. ಏತನ್ಮಧ್ಯೆ ಮೂವರು ಅಪರಾಧಿಗಳು ಮರಣದಂಡನೆ ಶಿಕ್ಷೆ ಕುರಿತು ಪುನರ್ ಪರಿಶೀಲನೆ ನಡೆಸಬೇಕೆಂದು ಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು.ಈ ಅರ್ಜಿಯನ್ನೂ ಈಗ ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು ಗಲ್ಲು ಶಿಕ್ಷೆ ಬಹುತೇಕ ಖಾಯಂ ಆದಂತಾಗಿದೆ.

- Call for authors -

LEAVE A REPLY

Please enter your comment!
Please enter your name here